ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ 2024 ರ PEN ಪಿಂಟರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಬಹುಮಾನದ ಮೊತ್ತವನ್ನು ಪ್ಯಾಲೇಸ್ಟಿನಿನ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ರಾಯ್ ಹೇಳಿದ್ದಾರೆ. ಬ್ರಿಟಿಷ್-ಈಜಿಪ್ಟಿಯನ್ ಬರಹಗಾರ ಮತ್ತು ಕಾರ್ಯಕರ್ತ ಅಲಾ ಅಬ್ದ್ ಎಲ್-ಫತಾ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಳ್ಳು ವುದಾಗಿ ಹೇಳಿದ ರಾಯ್, ಅಕ್ಟೋಬರ್ 10, 2024 ರ ಸಂಜೆ ಬ್ರಿಟಿಷ್ ಲೈಬ್ರರಿಯಲ್ಲಿ ಮಾಡಿದ ಸ್ವೀಕಾರ ಭಾಷಣದ ಆಯ್ದ ಭಾಗದ ಅನುವಾದ ಇಂತಿದೆ;
ಈ ಪ್ರಶಸ್ತಿಯನ್ನು ಲೇಖಕ ಅಲಾ ಅಬ್ದ್ ಎಲ್-ಫತಾ ಅವರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನೀವು ಸೆಪ್ಟೆಂಬರಿನಲ್ಲಿ ಬಿಡುಗಡೆ ಆಗಬೇಕಿದ್ದರೂ, ಈಜಿಪ್ಟ್ ಸರ್ಕಾರ ನಿಮ್ಮನ್ನು ಅಪಾಯಕಾರಿ ಎಂದು ನಿರ್ಧರಿಸಿತು. ಆದರೆ, ನೀವು ನಮ್ಮೊಂದಿಗೆ ಈ ಕೋಣೆಯಲ್ಲಿ ಇದ್ದೀರಿ. ʻನನ್ನ ಪದಗಳು ಶಕ್ತಿ ಕಳೆದುಕೊಂಡರೂ, ಅವು ನನ್ನಿಂದ ಸುರಿಯುತ್ತಲೇ ಇದ್ದವು. ಬೆರಳೆಣಿಕೆ ಜನ ಕೇಳುತ್ತಿದ್ದರೂ, ನನಗೆ ಧ್ವನಿ ಇತ್ತುʼ ಎಂದು ಬರೆದಿದ್ದಿರಿ. ಅಲಾ, ನಾವು ನಿಮ್ಮ ಮಾತು ಕೇಳುತ್ತಿದ್ದೇವೆ; ನಿಕಟವಾಗಿ.
ನಾನು ಭಾರತದ ಜೈಲಿನಲ್ಲಿರುವ ನನ್ನ ಸ್ನೇಹಿತರು ಮತ್ತು ಒಡನಾಡಿಗಳ ಬಗ್ಗೆ ಮಾತನಾಡುತ್ತಿದ್ದೇನೆ; ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ಖಾಲಿದ್ ಸೈಫಿ, ಶರ್ಜೀಲ್ ಇಮಾಮ್, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವುತ್. ಮೂರು ವರ್ಷದಿಂದ ಜೈಲಿನಲ್ಲಿರುವ ಸ್ನೇಹಿತ ಖುರ್ರಂ ಪರ್ವೇಜ್, ಇರ್ಫಾನ್ ಮೆಹ್ರಾಜ್ ಮತ್ತು ಕಾಶ್ಮೀರ ಹಾಗೂ ದೇಶಾದ್ಯಂತ ಸೆರೆವಾಸದಲ್ಲಿರುವ ಸಾವಿರಾರು ಜನರೊಂದಿಗೆ ನಾನು ಮಾತನಾಡುತ್ತೇನೆ.
PEN ಅಧ್ಯಕ್ಷೆ ರುತ್ ಬೋರ್ತ್‌ವಿಕ್ ನನಗೆ ಬರೆದ ಪತ್ರದಲ್ಲಿ, ʻನಮ್ಮ ಜೀವನ ಮತ್ತು ಸಮಾಜಗಳ ನೈಜ ಸತ್ಯವನ್ನು ಹಿಂಜರಿಯದೆ ವ್ಯಾಖ್ಯಾನಿಸಲು ಪ್ರಯತ್ನಿಸಿದ ಬರಹಗಾರರಿಗೆ ಪಿಂಟರ್ ಪ್ರಶಸ್ತಿ ನೀಡಲಾಗುತ್ತದೆʼ ಎಂದು ಹೇಳಿದ್ದರು. ʻಹಿಮ್ಮೆಟ್ಟದ, ಅಚಲ, ಉಗ್ರ ಬೌದ್ಧಿಕ ನಿರ್ಣಯ’ ಎನ್ನುವುದು ಹೆರಾಲ್ಡ್ ಪಿಂಟರ್ ಅವರ ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಉಲ್ಲೇಖಗೊಂಡಿದೆ. ʻಹಿಮ್ಮೆಟ್ಟುವಿಕೆʼ ಎಂಬ ಪದದ ಬಗ್ಗೆ ಸ್ವಲ್ಪ ವಿವರಿಸುತ್ತೇನೆ; 1980ರ ದಶಕದ ಉತ್ತರಾರ್ಧದಲ್ಲಿ ಲಂಡನ್ನಿನ ಅಮೆರಿಕ ರಾಯಭಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದೆ. ನಿಕರಾಗುವಾ ವಿರುದ್ಧ ಅಮೆರಿಕ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಬಲಪಂಥೀಯ ಕಾಂಟ್ರಾಗಳಿಗೆ ಹೆಚ್ಚು ಹಣ ನೀಡಬೇಕೇ ಎಂದು ಕಾಂಗ್ರೆಸ್ ನಿರ್ಧರಿಸಬೇಕಿತ್ತು. ನಿಕರಾಗುವಾ ಪರ ನಿಯೋಗದಲ್ಲಿದ್ದೆ. ಈ ನಿಯೋಗದ ಪ್ರಮುಖ ಸದಸ್ಯ ಫಾ.ಜಾನ್ ಮೆಟ್‌ಕಾಫ್. ಅಮೆರಿಕ ತಂಡದ ನಾಯಕ ರೇಮಂಡ್ ಸೀಟ್ಜ್ (ಆನಂತರ ರಾಯಭಾರಿ ಆದರು). ಫಾ.ಮೆಟ್‌ಕಾಫ್, ʻಸರ್, ನಾನು ನಿಕರಾಗುವಾದ ಉತ್ತರದಲ್ಲಿರುವ ಚರ್ಚಿನ ಉಸ್ತುವಾರಿ ವಹಿಸಿದ್ದೇನೆ. ಕಾಂಟ್ರಾ ದಳ ಚರ್ಚ್, ಶಾಲೆ, ಆರೋಗ್ಯ ಕೇಂದ್ರ, ಸಾಂಸ್ಕೃತಿಕ ಕೇಂದ್ರವನ್ನು ನಾಶಪಡಿಸಿದೆ: ದಾದಿಯರು ಮತ್ತು ಶಿಕ್ಷಕಿಯರ ಅತ್ಯಾಚಾರ ಮಾಡಿ, ವೈದ್ಯರನ್ನು ಕೊಂದಿದೆ. ಕಾಂಟ್ರಾಗಳಿಗೆ ಅಮೆರಿಕ ಸರ್ಕಾರ ಬೆಂಬಲ ಹಿಂಪಡೆಯಬೇಕು,ʼ ಎಂದು ಹೇಳಿದರು.
ರೇಮಂಡ್ ಸೀಟ್ಜ್ ರಾಜತಾಂತ್ರಿಕ ವಲಯದಲ್ಲಿ ಪ್ರಸಿದ್ಧರು. ಅವರು ಹೇಳಿದರು-ʻಫಾದರ್, ನಿಮಗೆ ಒಂದು ವಿಷಯ ಹೇಳುತ್ತೇನೆ; ಯುದ್ಧದಲ್ಲಿ ಮುಗ್ಧ ಜನರು ಯಾವಾಗಲೂ ನರಳುತ್ತಾರೆ.’ ಹೆಪ್ಪುಗಟ್ಟಿದ ಮೌನ. ನಾವು ಆತನನ್ನು ದಿಟ್ಟಿಸಿ ನೋಡಿದೆವು. ಆತ ಜಗ್ಗಲಿಲ್ಲ.
ಅಧ್ಯಕ್ಷ ರೊನಾಲ್ಡ್ ರೇಗನ್ ಕಾಂಟ್ರಾಗಳನ್ನು ʻನಮ್ಮ ಸಂಸ್ಥಾಪಕ ಪಿತೃಗಳ ನೈತಿಕ ಸಮಾನರುʼ ಎಂದು ಕರೆದಿದ್ದರು. ಇದು ಅವರ ಇಷ್ಟದ ನುಡಿಗಟ್ಟು. ಸಿಐಎ ಬೆಂಬಲಿತ ಅಘ್ಘನ್ನಿನ ಮುಜಾಹಿದ್ದೀನ್‌ಗಳನ್ನು ವಿವರಿಸಲು ಅವರು ಈ ಪದ ಬಳಸಿದ್ದರು. ಆನಂತರ ಮುಜಾಹಿದ್‌ಗಳು ತಾಲಿಬಾನ್ ಆಗಿ ಬದಲಾಗಿ, ಅಫ್ಘನಿಸ್ತಾನವನ್ನು ಆಳುತ್ತಿದ್ದಾರೆ. ಅಮೆರಿಕವು ವಿಯೆಟ್ನಾಂ ಯುದ್ಧದಲ್ಲಿ ʻಚಲಿಸುವ ಯಾವುದನ್ನಾದರೂ ಕೊಲ್ಲು’ ಎಂದು ತನ್ನ ಸೇನೆಗೆ ಆದೇಶ ನೀಡಿತ್ತು. ವಿಯೆಟ್ನಾಂ ಯುದ್ಧ ಕುರಿತ ಪೆಂಟಗನ್ ಪೇಪರ್ಸ್ ಮತ್ತು ಇತರ ದಾಖಲೆಗಳನ್ನು ಓದಿದರೆ, ನರಮೇಧವನ್ನು ಹೇಗೆ ಮಾಡಬೇಕೆಂಬ ಬಗ್ಗೆ ಹಲವು ಉತ್ಸಾಹಭರಿತ ಚರ್ಚೆ ನಡೆದಿರುವುದನ್ನು ನೋಡಬಹುದು: ಜನರನ್ನು ನೇರವಾಗಿ ಕೊಲ್ಲುವುದೇ ಅಥವಾ ನಿಧಾನವಾಗಿ ಹಸಿವಿನಿಂದ ಸಾಯಿಸುವುದು ಉತ್ತಮವೇ? ಅಮೆರಿಕನ್ನರು ತಮ್ಮ ಕಾರ್ಯನೀತಿಯನ್ನು ಆತ್ಯಂತಿಕ ಸ್ಥಿತಿಗೆ ಕೊಂಡೊಯ್ಯುತ್ತಾರೆ: ಅದೇ ನರಮೇಧ.
ಮತ್ತು, ನಾವು ಈಗ ಮತ್ತೊಂದು ನರಮೇಧಕ್ಕೆ ಸಾಕ್ಷಿಯಾಗಿದ್ದೇವೆ. ಗಾಜಾ ಮತ್ತು ಲೆಬನಾನಿನಲ್ಲಿ ಅಮೆರಿಕ ಹಾಗೂ ಇಸ್ರೇಲ್ ಪ್ರಾಯೋಜಿತ ನರಮೇಧದಲ್ಲಿ ಈವರೆಗೆ ಮೃತರ ಸಂಖ್ಯೆ 42,000; ಇದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಕಟ್ಟಡಗಳ ಅವಶೇಷಗಳಡಿ ಸತ್ತವರು ಮತ್ತು ಅನಾಮಧೇಯ ಶವಗಳು ಇದರಲ್ಲಿ ಸೇರಿಲ್ಲ. ಆಕ್ಸ್‌ಫ್ಯಾಮ್‌ನ ಇತ್ತೀಚಿನ ಅಧ್ಯಯನದ ಪ್ರಕಾರ, ಕಳೆದ ಇಪ್ಪತ್ತು ವರ್ಷಗಳಲ್ಲಿ ನಡೆದ ಯಾವುದೇ ಯುದ್ಧದಲ್ಲಿ ಸತ್ತವರಿಗಿಂತ ಹೆಚ್ಚು ಮಕ್ಕಳನ್ನು ಗಾಜಾದಲ್ಲಿ ಇಸ್ರೇಲ್ ಕೊಂದಿದೆ. ಕೋಟಿಗಟ್ಟಲೆ ಯಹೂದಿಗಳ ನರಮೇಧದ ಬಗೆಗಿನ ತಮ್ಮ ಆರಂಭಿಕ ಉದಾಸೀನತೆಯ ಪಾಪಭೀತಿಯನ್ನು ಕಳೆದುಕೊಳ್ಳಲು ಅಮೆರಿಕ ಮತ್ತು ಯುರೋಪ್, ಮತ್ತೊಂದು ನರಮೇಧಕ್ಕೆ ಬುನಾದಿ ಸಿದ್ಧಪಡಿಸಿದವು.
ಪ್ರತಿಯೊಂದು ಜನಾಂಗೀಯ ಹತ್ಯೆ ಮತ್ತು ನರಮೇಧವನ್ನು ಸಮರ್ಥಿಸಿಕೊಳ್ಳುವ ದೇಶಗಳಂತೆ ಇಸ್ರೇಲಿನ ಜಿಯೋನಿಸ್ಟ್‌ಗಳು ʻತಮ್ಮನ್ನು ಆಯ್ಕೆ ಮಾಡಿದ ಜನರುʼ ಎಂದು ನಂಬುತ್ತಾರೆ. ಪ್ಯಾಲೆಸ್ತೀನಿಯನ್ನರನ್ನು ಅವರ ನೆಲದಿಂದ ಓಡಿಸುವ ಮತ್ತು ಅವರನ್ನು ಕೊಲ್ಲುವ ಮೊದಲು ಅವರನ್ನು ಅಮಾನವೀಯಗೊಳಿಸುಲಾರಂಭಿಸಿದರು. ಇಸ್ರೇಲ್ ಪ್ರಧಾನಿ ಮೆನಾಚೆಮ್ ಬೆಗಿನ್ ಪ್ಯಾಲೆಸ್ತೀನಿಯನ್ನರನ್ನು ʻಎರಡು ಕಾಲಿನ ಮೃಗಗಳು’ ಎಂದು ಕರೆದರೆ,
ಇಟ್ಜಾಕ್ ರಾಬಿನ್ ʻಮಿಡತೆಗಳು’ ಎಂದರು; ಗೋಲ್ಡಾ ಮಿರ್ ʻಪ್ಯಾಲೆಸ್ತೀನಿಯನ್ನರು ಎಂಬುವರು ಎಂದೂ ಇರಲೇ ಇಲ್ಲ’ ಎಂದು ಹೇಳಿದರು. ಫ್ಯಾಸಿಸಂ ವಿರುದ್ಧ ಹೋರಾಡಿದರು ಎನ್ನಲಾದ ವಿನ್‌ಸ್ಟನ್ ಚರ್ಚಿಲ್, ʻಬಹಳ ಕಾಲದಿಂದ ಮಲಗಿದ್ದ ಮಾತ್ರಕ್ಕೆ ನಾಯಿಗೆ ಗೂಡಿನ ಮೇಲಿನ ಹಕ್ಕು ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಗೂಡಿನ ಮೇಲಿನ ಹಕ್ಕು ಇರುವುದು ಉನ್ನತ ಕುಲಕ್ಕೆ ಮಾತ್ರʼ ಎಂದು ಹೇಳಿದ್ದರು. ಈ ಎರಡು ಕಾಲಿನ ಮೃಗಗಳು, ಮಿಡತೆಗಳು, ನಾಯಿಗಳನ್ನು ಕೊಂದು, ಜನಾಂಗೀಯವಾಗಿ ಶುದ್ಧೀಕರಿಸಿದ ಮತ್ತು ಪ್ರಾಣಿಗಳಂತೆ ಒಂದೆಡೆ ಕೂಡಿ ಹಾಕಿದ ಬಳಿಕ ಹೊಸ ದೇಶ ಹುಟ್ಟಿಕೊಂಡಿತು. ಪರಮಾಣು ಸಜ್ಜಿತ ಇಸ್ರೇಲ್, ಅಮೆರಿಕ ಮತ್ತು ಯುರೋಪಿಗೆ ಮಧ್ಯಪ್ರಾಚ್ಯದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳಿಗೆ ಹೊರ ಠಾಣೆ ಮತ್ತು ರಾಜಮಾರ್ಗದಂತೆ ಕಾರ್ಯನಿರ್ವಹಿಸುತ್ತದೆ.
ಹೊಸ ರಾಜ್ಯ ಯಾವ ಅಪರಾಧ ಮಾಡಿದರೂ ಬೆಂಬಲ ನೀಡಲಾಯಿತು. ಇಸ್ರೇಲ್ ಶ್ರೀಮಂತರ ಮನೆಯ ಸಂರಕ್ಷಿತ ಮಗುವಿನಂತೆ ಬೆಳೆದಿದೆ. ಇದರಿಂದ, ಇಸ್ರೇಲಿನ ಸೈನಿಕರು ಸಭ್ಯತೆಯನ್ನು ಕಳೆದುಕೊಂಡಿರುವುದು ಆಶ್ಚರ್ಯಕರವೇನಲ್ಲ. ತಾವು ಕೊಂದ ಅಥವಾ ಸ್ಥಳಾಂತರಿಸಿದ ಮಹಿಳೆಯರ ಒಳಉಡುಪು ಧರಿಸಿರುವ ವಿಡಿಯೋ, ಸಾಯುತ್ತಿರುವ ಪ್ಯಾಲೆಸ್ತೀನಿಯನ್ನರು ಮತ್ತು ಗಾಯಗೊಂಡ ಮಕ್ಕಳನ್ನು ಅನುಕರಿಸುವ ವಿಡಿಯೋ ಅಥವಾ ಸಿಗರೇಟ್-ಮದ್ಯ ಸೇವಿಸುತ್ತಲೇ ಕಟ್ಟಡಗಳನ್ನು ಸ್ಫೋಟಿಸುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮವನ್ನು ಹಾಕುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಸ್ರೇಲ್ ಮಾಡುತ್ತಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?
ಉತ್ತರದ ದೇಶಗಳು, ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರಗಳು ಹಾಗೂ ಪಾಶ್ಚಿಮಾತ್ಯ ಮಾಧ್ಯಮಗಳ ಪ್ರಕಾರ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ, ಇಸ್ರೇಲಿಗರ ಹತ್ಯೆ ಮತ್ತು ಒತ್ತೆಯಾಳುಗಳನ್ನಾಗಿಸಿ ಕೊಂಡ ಬಳಿಕ ಇದು ಆರಂಭವಾಗಿದೆ. ಆದ್ದರಿಂದ, ಭಾಷಣದ ಈ ಭಾಗದಲ್ಲಿ ನನ್ನನ್ನು, ನನ್ನ ತಟಸ್ಥತೆಯನ್ನು, ನನ್ನ ಬೌದ್ಧಿಕ ನಿಲುವನ್ನು ರಕ್ಷಿಸಿಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ನಾಗರಿಕರ ಹತ್ಯೆ ಹಾಗೂ ಒತ್ತೆ ಸೆರೆಗೆ ನಾನು ಲೆಬನಾನಿನ ಹಮಾಸ್ ಗಳು, ಗಾಜಾದ ಇತರ ಉಗ್ರಗಾಮಿ ಗುಂಪುಗಳು ಮತ್ತು ಹಿಜ್ಬುಲ್ಲಾವನ್ನು ಖಂಡಿಸಬೇಕು; ಹಮಾಸ್ ದಾಳಿಯನ್ನು ಸಂಭ್ರಮಿಸಿದ ಗಾಜಾದ ಜನರನ್ನು ಖಂಡಿಸಬೇಕು ಎಂದು ನಿರೀಕ್ಷಿಸಲಾಗಿದೆ. ಆನಂತರ ಎಲ್ಲವೂ ಸುಲಭವಾಗುತ್ತದೆ, ಅಲ್ಲವೇ? ಆಹಾ, ಎಲ್ಲವೂ ಚೆನ್ನಾಗಿದೆ. ಎಲ್ಲರೂ ಭಯಾನಕರಾಗಿರುವುದರಿಂದ, ವ್ಯಕ್ತಿಯೊಬ್ಬ ಏನು ಮಾಡಬಹುದು? ಬದಲಿಗೆ ಶಾಪಿಂಗ್‌ಗೆ ಹೋಗೋಣ…
ʻನಾನು ಖಂಡಿಸುವ ಆಟವನ್ನು ಆಡಲು ನಿರಾಕರಿಸುತ್ತೇನೆ. ಸ್ಪಷ್ಟಪಡಿಸುವುದೇನೆಂದರೆ, ತುಳಿತಕ್ಕೊಳಗಾದ ಜನರಿಗೆ ದಬ್ಬಾಳಿಕೆಯನ್ನು ಹೇಗೆ ವಿರೋಧಿಸಬೇಕು ಅಥವಾ ಅವರ ಮಿತ್ರರು ಯಾರಾಗಿರಬೇಕು ಎಂದು ನಾನು ಹೇಳುವುದಿಲ್ಲ.
2023 ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುದ್ಧ ಸಂಪುಟವನ್ನು ಭೇಟಿಯಾಗಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ʻಜಿಯೋನಿಸ್ಟ್ ಆಗಲು ಯಹೂದಿ ಆಗಿರಲೇಬೇಕೆಂದು ನಾನು ಅಂದುಕೊಂಡಿಲ್ಲ ಮತ್ತು ನಾನೊಬ್ಬ ಜಿಯೋನಿಸ್ಟ್.ʼ
ಯುದ್ಧಾಪರಾಧಿ ಇಸ್ರೇಲಿಗೆ ಹಣ ಮತ್ತು ಶಸ್ತ್ರಾಸ್ತ್ರ ನೀಡುವ, ತಾನು ಯಹೂದಿಯಲ್ಲದ ಜಿಯೋನಿಸ್ಟ್ ಎಂದು ಕರೆದುಕೊಳ್ಳುವ ಜೋ ಬೈಡೆನ್ ಅವರಂತೆ ನಾನು ನನ್ನ ಬರವಣಿಗೆಗಿಂತ ಯಾವುದೇ ಕಿರಿದಾದ ರೀತಿಯಲ್ಲಿ ನನ್ನನ್ನು ಘೋಷಿಸಿಕೊಳ್ಳಲು ಅಥವಾ ವ್ಯಾಖ್ಯಾನಿಸಲು ಹೋಗುವುದಿಲ್ಲ. ನಾನು ಏನು ಬರೆಯುತ್ತೇನೆಯೋ ಅದು ನಾನು.
ನಾನೊಬ್ಬ ಲೇಖಕಿ. ಮುಸ್ಲಿಮೇತರಳು ಮತ್ತು ಮಹಿಳೆಯಾದ ನನಗೆ ಹಮಾಸ್, ಹಿಜ್ಬುಲ್ಲಾ, ಇರಾನಿನ ಆಡಳಿತದಲ್ಲಿ ಬಹಳ ಕಾಲ ಬದುಕುವುದು ತುಂಬ ಕಷ್ಟ; ಬಹುಶಃ ಅಸಾಧ್ಯ. ಆದರೆ, ವಿಷಯ ಅದಲ್ಲ. ಇತಿಹಾಸ ಮತ್ತು ಅದು ಅಸ್ತಿತ್ವಕ್ಕೆ ಬಂದ ಸಂದರ್ಭಗಳ ಬಗ್ಗೆ ನಮಗೆ ನಾವೇ ಶಿಕ್ಷಣ ಪಡೆಯಬೇಕಿದೆ. ವಿಷಯ ಏನೆಂದರೆ, ಉದಾರವಾದಿ, ಜಾತ್ಯತೀತ ಶಕ್ತಿಗಳು ನರಹಂತಕ ಯುದ್ಧ ಯಂತ್ರದ ವಿರುದ್ಧ ಹೋಗಬಹುದೇ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು. ಏಕೆಂದರೆ, ಪ್ರಪಂಚದ ಎಲ್ಲ ಶಕ್ತಿಗಳು ವಿರುದ್ಧ ಇರುವಾಗ, ಅವರು ದೇವರನ್ನು ಹೊರತುಪಡಿಸಿ ಬೇರೆ ಯಾರ ಕಡೆಗೆ ತಿರುಗಬೇಕು? ಹಿಜ್ಬುಲ್ಲಾ ಮತ್ತು ಇರಾನಿನ ಆಡಳಿತಗಳು ತಮ್ಮದೇ ದೇಶಗಳಲ್ಲಿ ವಿರೋಧ ಎದುರಿಸುತ್ತಿವೆ; ಇಸ್ರೇಲ್ ನಾಗರಿಕರ ಹತ್ಯೆ ಮತ್ತು ಅಕ್ಟೋಬರ್ 7 ರಂದು ಹಮಾಸ್‌ಗಳಿಂದ ಒತ್ತೆಯಾಳುಗಳನ್ನು ಬಿಡಿಸಿಕೊಂಡಿರುವುದು ಯುದ್ಧಾಪರಾಧ ಎಂದು ನನಗೆ ತಿಳಿದಿದೆ. ಆದರೆ, ಗಾಜಾ, ಪಶ್ಚಿಮ ದಂಡೆ ಮತ್ತು ಈಗ ಲೆಬನಾನಿನಲ್ಲಿ ಇಸ್ರೇಲ್ ಮತ್ತು ಅಮೆರಿಕ ಮಾಡುತ್ತಿರುವುದನ್ನು ಅದಕ್ಕೆ ಸಮೀಕರಿಸಬಾರದು. ಅಕ್ಟೋಬರ್ 7 ರ ಹಿಂಸಾಚಾರ ಸೇರಿದಂತೆ ಎಲ್ಲಾ ಹಿಂಸಾಚಾರದ ಮೂಲವೆಂದರೆ, ಇಸ್ರೇಲ್ ಪ್ಯಾಲೇಸ್ತೀನಿಯನ್ನರ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಮತ್ತು ಅವರನ್ನು ಅಧೀನಗೊಳಿಸಿರುವುದು. ಇತಿಹಾಸ 7 ಅಕ್ಟೋಬರ್ 2023 ರಂದು ಪ್ರಾರಂಭವಾಗಲಿಲ್ಲ.
ನಾನು ನಿಮ್ಮನ್ನು ಕೇಳುತ್ತೇನೆ; ಈ ಸಭಾಂಗಣದಲ್ಲಿ ಕುಳಿತಿರುವವರಲ್ಲಿ ಎಷ್ಟು ಮಂದಿ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ದಶಕಗಳಿಂದ ಪ್ಯಾಲೆಸ್ತೀನಿಯರು ಅನುಭವಿಸುತ್ತಿರುವ ಅವಮಾನವನ್ನು ಸ್ವಇಚ್ಛೆಯಿಂದ ಒಪ್ಪಿಕೊಳ್ಳುತ್ತಾರೆ? ಪ್ಯಾಲೆಸ್ತೀನಿಯನ್ನರು ಪ್ರಯತ್ನಿಸದ ಶಾಂತಿಯುತ ಮಾರ್ಗಗಳು ಇವೆಯೇ? ಮೊಣಕಾಲುಗಳಲ್ಲಿ ತೆವಳಿಕೊಂಡು ಮಣ್ಣು ತಿನ್ನುವುದನ್ನು ಹೊರತುಪಡಿಸಿ, ಅವರು ಎಲ್ಲ ರಾಜಿ ಮಾರ್ಗವನ್ನು ಒಪ್ಪಿಕೊಂಡಿದ್ದಾರೆ. ಇಸ್ರೇಲಿನದು ಆತ್ಮರಕ್ಷಣೆಯ ಯುದ್ಧವಲ್ಲ; ಆಕ್ರಮಣಕಾರಿ ಯುದ್ಧ. ಹೆಚ್ಚು ಪ್ರದೇಶವನ್ನು ಆಕ್ರಮಿಸಲು, ತನ್ನ ವರ್ಣಭೇದ ನೀತಿಯನ್ನು ಹೇರಲು ಹಾಗೂ ಪ್ಯಾಲೇಸ್ತೀನಿಯನ್ನರು ಮತ್ತು ಆ ಪ್ರದೇಶದ ನಿಯಂತ್ರಣ ಬಿಗಿಗೊಳಿಸಲು ನಡೆಸುತ್ತಿರುವ ಯುದ್ಧ.
ಇಸ್ರೇಲ್ ಅಕ್ಟೋಬರ್ 7, 2023 ರಿಂದ ಹತ್ತಾರು ಸಾವಿರ ಜನರನ್ನು ಕೊಂದಿರುವುದಲ್ಲದೆ, ಗಾಜಾದ ಹೆಚ್ಚಿನ ಜನಸಂಖ್ಯೆಯನ್ನು ಹಲವು ಬಾರಿ ಸ್ಥಳಾಂತರಿಸಿದೆ. ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ, ವೈದ್ಯರು, ವೈದ್ಯಕೀಯ ಸಹಾಯಕರು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಿದೆ. ಇಡೀ ಜನಸಂಖ್ಯೆ ಹಸಿವಿನಿಂದ ಬಳಲುತ್ತಿದೆ; ಅವರ ಇತಿಹಾಸವನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ಇದೆಲ್ಲವನ್ನೂ ನೈತಿಕವಾಗಿ ಮತ್ತು ಭೌತಿಕವಾಗಿ ಜಗತ್ತಿನ ಶ್ರೀಮಂತ, ಅತ್ಯಂತ ಶಕ್ತಿಶಾಲಿ ಸರ್ಕಾರಗಳು ಮತ್ತು ಅಲ್ಲಿನ ಮಾಧ್ಯಮಗಳು ಬೆಂಬಲಿಸುತ್ತಿವೆ(ಇದರಲ್ಲಿ ಇಸ್ರೇಲಿಗೆ ಶಸ್ತ್ರಾಸ್ತ್ರ ಪೂರೈಸುವ ಭಾರತವನ್ನೂ ಸೇರಿಸುತ್ತೇನೆ; ಜೊತೆಗೆ ಸಾವಿರಾರು ಕೆಲಸಗಾರರನ್ನು ಸೇರಿಸುತ್ತೇನೆ). ಈ ದೇಶಗಳು ಮತ್ತು ಇಸ್ರೇಲ್ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ. ಕಳೆದ ವರ್ಷವೊಂದರಲ್ಲೇ ಅಮೆರಿಕ 17.9 ಶತಕೋಟಿ ಡಾಲರ್‌ಗಳನ್ನು ಇಸ್ರೇಲಿಗೆ ನೀಡಿದೆ. ಆದ್ದರಿಂದ, ಅಮೆರಿಕದ ಎಡ ಪಂಥೀಯ ರಾಜಕಾರಣಿ ಅಲೆಕ್ಸಾಂಡ್ರಿಯಾ ಒಕಾಸಿಯೊ ಕೋರ್ಟೆಜ್ ಹೇಳಿದಂತೆ, ಅಮೆರಿಕ ʻಕದನ ವಿರಾಮಕ್ಕೆ ದಣಿವರಿಯದೆ ಕೆಲಸ ಮಾಡುತ್ತಿದೆʼ ಎಂಬ ಸುಳ್ಳನ್ನು ಎಲ್ಲರೂ ತ್ಯಜಿಸೋಣ. ನರಮೇಧಕ್ಕೆ ನೆರವಾಗುತ್ತಿರುವ ಪಕ್ಷವು ಸಂಧಾನಕಾರನಾಗಲು ಸಾಧ್ಯವಿಲ್ಲ.
ಜಗತ್ತಿನ ಎಲ್ಲ ಅಧಿಕಾರ ಮತ್ತು ಹಣ, ಶಸ್ತ್ರಾಸ್ತ್ರಗಳು ಮತ್ತು ಭೂಮಿಯ ಮೇಲಿನ ಪ್ರಚಾರಗಳಿಂದ ಪ್ಯಾಲೆಸ್ತೀನಿಗೆ ಆಗಿರುವ ಗಾಯವನ್ನು ಮರೆಮಾಚಲು ಸಾಧ್ಯವಿಲ್ಲ. ಈ ಗಾಯದ ಮೂಲಕ ಇಸ್ರೇಲ್ ಸೇರಿದಂತೆ ಇಡೀ ಜಗತ್ತಿನ ರಕ್ತ ಸ್ರಾವವಾಗುತ್ತಿದೆ.
ಇಸ್ರೇಲಿನಲ್ಲಿ ನರಮೇಧವನ್ನು ಬೆಂಬಲಿಸುತ್ತಿರುವ ಸರ್ಕಾರಗಳ ಹೆಚ್ಚಿನ ನಾಗರಿಕರು ಹಿಂಸೆಯನ್ನು ತಾವು ಒಪ್ಪುವುದಿಲ್ಲವೆಂದು ಹೇಳಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ತಮ್ಮನ್ನು ಬಳಸಿಕೊಳ್ಳುತ್ತಿರುವುದರಿಂದ ಬೇಸತ್ತಿರುವ, ಸುಳ್ಳಿನಿಂದ ರೋಸಿಹೋಗಿರುವ ಯುವ ಯಹೂದಿಗಳು ಸೇರಿದಂತೆ ಲಕ್ಷಾಂತರ ಜನರು ಪ್ಯಾಲೆಸ್ತೀನ್ ಪರ ಮೆರವಣಿಗೆ ನಡೆಸಿದ್ದಾರೆ. ಇಸ್ರೇಲ್ ಮತ್ತು ಜಿಯೋನಿಸಂ ವಿರುದ್ಧ ಪ್ರತಿಭಟಿಸಿದವರನ್ನು ಜರ್ಮನ್ ಪೊಲೀಸರು ಬಂಧಿಸುವುದನ್ನು ಮತ್ತು ಅವರೆಲ್ಲರೂ ಯಹೂದಿ ವಿರೋಧಿಗಳು ಎಂದು ಆರೋಪಿಸುವ ದಿನವನ್ನು ನೋಡುತ್ತೇವೆ ಎಂದು ಯಾರು ಊಹಿಸಿದ್ದರು? ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ನಿಷೇಧಿಸುವ ಮೂಲಕ ಅಮೆರಿಕ ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಯಾರು ಭಾವಿಸಿದ್ದರು? ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳ ನೈತಿಕ ನಿಲುವುಗಳು ಜಗತ್ತಿನ ಬೇರೆ ಭಾಗಗಳಲ್ಲಿ ನಗೆಪಾಟಲಿಗೆ ಈಡಾಗಿವೆ.
ಪ್ಯಾಲೆಸ್ತೀನ್ ಅಳಿಸಿಹೋಗಿರುವ ಮತ್ತು ಇಸ್ರೇಲ್ ನದಿಯಿಂದ ಸಮುದ್ರದವರೆಗೆ ವಿಸ್ತರಿಸಿರುವ ಮಧ್ಯಪ್ರಾಚ್ಯದ ನಕ್ಷೆಯನ್ನು ಬೆಂಜಮಿನ್ ನೆತನ್ಯಾಹು ಹಿಡಿದುಕೊಂಡರೆ, ಆತನನ್ನು ಯಹೂದಿ ತಾಯ್ನಾಡಿನ ಕನಸನ್ನು ನನಸಾಗಿಸಲು ಶ್ರಮಿಸಿದ ದಾರ್ಶನಿಕ ಎಂದು ಶ್ಲಾಘಿಸಲಾಗುತ್ತದೆ. ಆದರೆ, ಪ್ಯಾಲೆಸ್ತೀನಿಯನ್ನರು ಮತ್ತು ಅವರ ಬೆಂಬಲಿಗರು ಪ್ಯಾಲೆಸ್ತೀನ್ ʻನದಿಯಿಂದ ಸಮುದ್ರದವರೆಗೆ ಮುಕ್ತವಾಗಲಿದೆ’ ಎಂದು ಘೋಷಣೆ ಕೂಗಿದಾಗ, ಅವರು ಯಹೂದಿಗಳ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗುತ್ತದೆ.
ಅವರು ನಿಜವಾಗಿಯೂ ಅಂಥ ಕರೆ ಕೊಟ್ಟಿರುವರೇ? ಅಥವಾ, ಇದು ತನ್ನ ಕತ್ತಲೆಯನ್ನು ಇತರರಲ್ಲೂ ನೋಡುವ ರೋಗಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆಯೇ? ವೈವಿಧ್ಯವನ್ನು ಸಹಿಸದ ಕಲ್ಪನೆಯೊಂದು ದೇಶದಲ್ಲಿ ಇತರರು ಸಮಾನವಾಗಿ, ಸಮಾನ ಹಕ್ಕುಗಳೊಂದಿಗೆ ವಾಸಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ ವಸಾಹತುಶಾಹಿಯನ್ನು ಕಿತ್ತೊಗೆದ ಬೇರೆಲ್ಲ ದೇಶಗಳಂತೆ ಪ್ಯಾಲೆಸ್ತೀನಿಯನ್ನರು ಕೂಡ ಸ್ವತಂತ್ರರಾಗಲು ಬಯಸುತ್ತಾರೆ. ಈ ದೇಶಗಳು ವೈವಿಧ್ಯಮಯ; ಮತ್ತು ದೋಷಪೂರಿತ; ಆದರೆ, ಸ್ವತಂತ್ರವಾಗಿವೆ. ದಕ್ಷಿಣ ಆಫ್ರಿಕನ್ನರು ʻಅಮಂಡ್ಲಾ! ಜನರಿಗೆ ಅಧಿಕಾರʼ ಎಂಬ ಜನಪ್ರಿಯ ಘೋಷಣೆಯನ್ನು ಪಠಿಸುತ್ತಿರುವಾಗ, ಅವರು ಬಿಳಿಯರ ನರಮೇಧಕ್ಕೆ ಕರೆ ನೀಡುತ್ತಿದ್ದರೇ? ಇಲ್ಲ. ಪ್ಯಾಲೆಸ್ತೀನಿಯನ್ನರಂತೆಯೇ ವರ್ಣಭೇದ ನೀತಿಯನ್ನು ತೊಡೆದುಹಾಕಲು ಕರೆ ನೀಡಿದರು.
ಈಗ ಪ್ರಾರಂಭವಾಗಿರುವ ಯುದ್ಧವು ಭಯಾನಕವಾಗಿರಲಿದೆ. ಆದರೆ, ಅದು ಅಂತಿಮವಾಗಿ ಇಸ್ರೇಲಿನ ವರ್ಣಭೇದ ನೀತಿಯನ್ನು ಕೆಡವುತ್ತದೆ. ಇಡೀ ಪ್ರಪಂಚವು ಯಹೂದಿಗಳನ್ನು ಒಳಗೊಂಡಂತೆ ಎಲ್ಲರಿಗೂ ಸುರಕ್ಷಿತವಾಗಲಿದೆ ಮತ್ತು ಹೆಚ್ಚು ನ್ಯಾಯಯುತವಾಗಲಿದೆ. ನಮ್ಮ ಗಾಯಗೊಂಡ ಹೃದಯದಿಂದ ಬಾಣವನ್ನು ಎಳೆದಂತೆ ಆಗಲಿದೆ.
ಅಮೆರಿಕ ಸರ್ಕಾರವು ಇಸ್ರೇಲಿಗೆ ತನ್ನ ಬೆಂಬಲ ಹಿಂತೆಗೆದುಕೊಂಡರೆ, ಯುದ್ಧ ಈ ದಿನವೇ ನಿಲ್ಲಬಹುದು; ಈ ಕ್ಷಣವೇ ಹಗೆತನ ಕೊನೆಗೊಳ್ಳಬಹುದು; ಇಸ್ರೇಲಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬಹುದು, ಪ್ಯಾಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಬಹುದು. ಹಮಾಸ್ ಮತ್ತು ಇತರ ಪ್ಯಾಲೆಸ್ತೀನಿಯನ್ ಸಂಧಾನಕಾರರೊಂದಿಗಿನ ಮಾತುಕತೆ ನಡೆದು, ಲಕ್ಷಾಂತರ ಜನರ ನೋವನ್ನು ತಡೆಯಬಹುದು. ಆದರೆ, ಹೆಚ್ಚಿನವರು ಇದನ್ನು ಮುಗ್ಧ, ನಗು ತರುವ ಪ್ರತಿಪಾದನೆ ಎಂದು ಪರಿಗಣಿಸಿರುವುದು ದುಃಖಕರ.
ಮುಗಿಸುವ ಮುನ್ನ, ಅಲಾ ಅಬ್ದ್ ಎಲ್-ಫತಾ ನೀವಿನ್ನೂ ಸೋತಿಲ್ಲ. ಗೆಲುವು ಮತ್ತು ಸೋಲಿನ ಅರ್ಥ ಕುರಿತು ಅಂಥ ಸುಂದರ ಪದಗಳನ್ನು ನಾನು ಓದಿರುವುದು ವಿರಳ ಮತ್ತು ಕಣ್ಣಿನಲ್ಲಿರುವ ಹತಾಶೆಯನ್ನು ಪ್ರಾಮಾಣಿಕವಾಗಿ ನೋಡುವ ರಾಜಕೀಯ ಅವಶ್ಯಕತೆ. ಒಬ್ಬ ನಾಗರಿಕ ತನ್ನನ್ನು ರಾಜ್ಯದಿಂದ, ಜನರಲ್‌ಗಳಿಂದ ಮತ್ತು ಘೋಷಣೆಗಳಿಂದ ಅಷ್ಟೊಂದು ಘಂಟಾಘೋಷದಂಥ ಸ್ಪಷ್ಟತೆಯಿಂದ ಪ್ರತ್ಯೇಕಿಸಿಕೊಂಡಿರುವ ವಿರಳ ಬರವಣಿಗೆ ಅದು.
ಗಾಜಾ ಮತ್ತು ಈಗ ಲೆಬನಾನಿನಲ್ಲಿ ನಾವು ನೋಡುತ್ತಿರುವ ಭಯಾನಕತೆಯು ಶೀಘ್ರವಾಗಿ ಪ್ರಾದೇಶಿಕ ಯುದ್ಧವಾಗಿ ಬದಲಾದಂತೆ, ಅದರ ನಿಜವಾದ ನಾಯಕರು ಚೌಕಟ್ಟಿನ ಹೊರಗೆ ಉಳಿಯುತ್ತಾರೆ. ಆದರೆ, ಅವರು ಕದನ ಮುಂದುವರಿಸುತ್ತಾರೆ; ಏಕೆಂದರೆ, ಅವರಿಗೆ ತಿಳಿದಿದೆ; ಒಂದು ದಿನ
From the river to the sea
Palestine will be Free.
It will.
Keep your eye on your calendar. Not on your clock.
ತಮ್ಮ ವಿಮೋಚನೆಗಾಗಿ ಹೋರಾಡುವ ಜನರು ಸಮಯವನ್ನು ಅಳೆಯುತ್ತಾರೆಯೇ ಹೊರತು ಜನರಲ್‌ಗಳಲ್ಲ.
-ಮಾಧವ ಐತಾಳ್(ವಾರ್ತಾಭಾರತಿ,ಅಕ್ಟೋಬರ್ 18,2024)