ಕರ್ನಾಟಕ ಸರ್ಕಾರ ಕಿರುಸಾಲ ಸಂಸ್ಥೆ(ಮೈಕ್ರೋ ಕ್ರೆಡಿಟ್ ಸಂಸ್ಥೆಗಳು,ಎಂಎಫ್‌ಐ) ಗಳಿಂದ ಸಾಲ ಪಡೆದಿರುವವರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈ ಕಂಪನಿಗಳು ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸ ಬೇಕು, ಬಲವಂತವಾಗಿ ಸಾಲ ವಸೂಲಿ ಕೂಡದು ಹಾಗೂ ನೋಂದಣಿರಹಿತ ಎಂಎಫ್‌ಐಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತಿಲ್ಲ ಎಂಬೆಲ್ಲ ಅಂಶ ಗಳನ್ನು ಕರಡು ಒಳಗೊಂಡಿದೆ. ಇದರಿಂದ ಈ ಕಂಪನಿಗಳಿಂದ ಕಿರುಕುಳ ಕಡಿಮೆಯಾಗುವುದೇ ಹಾಗೂ ಸಾಲಗಾರರ ಆತ್ಮಹತ್ಯೆಗಳು ನಿಲ್ಲುತ್ತವೆಯೇ?
ಬಾಂಗ್ಲಾದ ಡಾ.ಮೊಹಮ್ಮದ್‌ಯೂನುಸ್ ಅವರಿಂದ ಪ್ರೇರಿತವಾಗಿ 1990ರಲ್ಲಿ ದೇಶದಲ್ಲಿ ಎಂಎಫ್‌ಐಗಳು ಆರಂಭಗೊಂಡವು. ಎಂಎಫ್‌ಐಗಳಲ್ಲಿ ಸಣ್ಣ ಹಣ ಕಾಸು ಬ್ಯಾಂಕ್‌ಗಳು, ವಾಣಿಜ್ಯ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪ ನಿ(ಎನ್‌ಬಿಎಫ್‌ಸಿ) ಹಾಗೂ ಎನ್‌ಬಿಎಫ್‌ಸಿ-ಎಂಎಫ್‌ಐಗಳು ಇವೆ. ಈಗ ರಾಷ್ಟ್ರೀಯ ಬ್ಯಾಂಕುಗಳು ಕೂಡ ಕಿರು ಸಾಲ ನೀಡುತ್ತವೆ. 2005-06ರಲ್ಲಿ ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆ)ಗಳು ಈ ಕ್ಷೇತ್ರಕ್ಕೆ ರಂಗಪ್ರವೇಶ ಮಾಡಿ, ಭಾರಿ ಬಂಡವಾಳ ಹೂಡಿದ್ದರಿಂದ ಇಡೀ ವ್ಯವಸ್ಥೆ ಬದಲಾಯಿತು. ಡಿಸೆಂಬರ್ 2011ರಲ್ಲಿ ರಿಸರ್ವ್ ಬ್ಯಾಂಕ್, ಎನ್‌ಬಿಎಫ್‌ಸಿ-ಎಂಎಫ್‌ಐಗಳಿಗೆ ಅಡಿಪಾಯ ಹಾಕಿ, ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿತು. ಮಾರ್ಚ್ 2022ರಲ್ಲಿ ಮತ್ತೊಂದು ಮಾರ್ಗದರ್ಶಿ ಸೂತ್ರ ಬಿಡುಗಡೆಯಾಯಿತು. ಆನಂತರ ದೇಶ ಜಾಗತಿಕವಾಗಿ ಕಿರುಸಾಲ ನೀಡಿಕೆಯಲ್ಲಿ ಅಗ್ರ ಸ್ಥಾನ ಗಳಿಸಿತು.
2013-22ರ ಅವಧಿಯಲ್ಲಿ ರಾಜ್ಯದಲ್ಲಿ ಎಂಎಫ್‌ಐಗಳಿಂದ ಸಾಲ ಪಡೆದವರ ಸಂಖ್ಯೆ 4.2 ದಶಲಕ್ಷ ದಿಂದ 9.9 ದಶಲಕ್ಷಕ್ಕೆ ಹೆಚ್ಚಿತು(ಶೇ.132); ಸಾಲ ನೀಡಿಕೆ 2019ರಲ್ಲಿ 16,946 ಕೋಟಿ ರೂ.ನಿಂದ 2023-24ರಲ್ಲಿ 42,265 ಕೋಟಿ ರೂ.ಗೆ ಹೆಚ್ಚಳಗೊಂಡಿತು. ಮೈಕ್ರೋ ಫೈನಾನ್ಸ್‌ಇಂಡಸ್ಟ್ರಿ ನೆಟ್‌ವರ್ಕ್(ಎಂಎಫ್‌ಐಎನ್, https;//mfin india.org) ಮಾಹಿತಿ ಪ್ರಕಾರ, ರಾಜ್ಯದಲ್ಲಿ 50 ನೋಂದಾಯಿತ ಎಂಎಫ್‌ಐಗಳು 63 ಲಕ್ಷ ಗ್ರಾಹಕರನ್ನು ಹೊಂದಿವೆ. ತಾನು ರಿಸರ್ವ್‌ಬ್ಯಾಂಕಿನ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದೇನೆ. ದೂರುಗಳನ್ನು ಪರಿಶೀಲಿಸಲು ಮೂರು ಹಂತದ ವ್ಯವಸ್ಥೆಯನ್ನು ಹೊಂದಿದ್ದೇನೆ ಎಂದು ನೆಟ್ವರ್ಕ್‌ಹೇಳಿಕೊಂಡಿದೆ. ಇವು 1.09 ಕೋಟಿ ಖಾತೆಗಳಿಗೆ ನೀಡಿರುವ ಸಾಲ ಅಂದಾಜು 60,000 ಕೋಟಿ ರೂ. (ನವೆಂಬರ್ 30, 2024). ಇದು ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಿಗೆ ಮಾಡುವ ವಾರ್ಷಿಕ ವೆಚ್ಚಕ್ಕೆ ಸಮ. ದೇಶದಲ್ಲಿರುವ 194 ಎಂಎಫ್‌ಐಗಳಲ್ಲಿ 14.6 ಕೋಟಿ ಖಾತೆದಾರರಿದ್ದು, 8.1 ಕೋಟಿ ಮಂದಿ 4.08 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ.
ಸ್ವಸಹಾಯ ಸಂಘಗಳ ಸ್ಥಾನಪಲ್ಲಟ: ಈಮೊದಲು ಎನ್‌ಜಿಒಗಳು ನಡೆಸುತ್ತಿದ್ದ ಸ್ವಸಹಾಯ ಸಂಘ(ಎಸ್‌ಎಚ್‌ಜಿ)ಗಳು ದುಡಿಯುವ ಪುರುಷರು-ಮಹಿಳೆಯರಿಗೆ ಮಾತ್ರ ಸಾಲ ಕೊಡುತ್ತಿದ್ದವು. ಮೊದಲ ಆರು ತಿಂಗಳು ಉಳಿತಾಯ ಮಾಡಿದ ಮೊತ್ತವನ್ನು ಬಳಿಕ ಸಾಲವಾಗಿ ಪಡೆಯಬಹುದಿತ್ತು. ಒಂದು ವರ್ಷದ ಬಳಿಕವಷ್ಟೇ ಬ್ಯಾಂಕ್‌ಸಾಲ ದೊರೆಯುತ್ತಿತ್ತು. ಸಂಘದ ಪ್ರತಿಯೊಬ್ಬ ಸದಸ್ಯರೂ ಬ್ಯಾಂಕ್‌ಖಾತೆ ಹಾಗೂ ವೈಯಕ್ತಿಕ ಪಾಸ್‌ಬುಕ್ ಹೊಂದಿದ್ದು, ಅದರಲ್ಲಿ ಸಾಲ, ಉಳಿತಾಯ, ಕಟ್ಟಿದ ಬಡ್ಡಿ/ಕಂತು, ಸೇವಾಶುಲ್ಕದ ಮಾಹಿತಿ ಇರುತ್ತಿತ್ತು. ಎಲ್ಲ ವ್ಯವಹಾರ ಚೆಕ್‌ರೂಪದಲ್ಲಿ ನಡೆಯುತ್ತಿತ್ತು. ಸದಸ್ಯರು ಸಾಲ ಮರು ಪಾವತಿ ಬಳಿಕ ಸಂಘವನ್ನು ತೊರೆಯ ಬಹುದಿತ್ತು. ಸದಸ್ಯರ ವೃತ್ತಿ, ವಾರ್ಷಿಕ ಆದಾಯ ಆಧರಿಸಿ, ಬಳಕೆ ಸಾಲ, ಜೀವ ನೋದ್ಧಾರ ಸಾಲ ಮತ್ತು ಮನೆ ನಿರ್ವಹಣೆ ಸಾಲ ನೀಡಲಾಗುತ್ತಿತ್ತು. ಮೈರಾಡ ಈ ಸಂಘಗಳ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು, ಆರೋಗ್ಯ, ಶಿಕ್ಷಣ, ಜೀವನಾಧಾರ, ನಾಯಕತ್ವ, ಹಣ ನಿರ್ವಹಣೆ ಬಗ್ಗೆ ಪ್ರಾಥಮಿಕ ತರಬೇತಿ ನೀಡು ತ್ತಿತ್ತು. ಜೊತೆಗೆ, ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದ ಸ್ತ್ರೀ ಶಕ್ತಿ ಸಂಘಗಳು ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿ ಸುತ್ತಿದ್ದವು. ಈ ಸುಸ್ಥಿರ, ಸುಭದ್ರ ಹಣಕಾಸು ವ್ಯವಸ್ಥೆಯು ಯಾರಿಗೂ ಹೊರೆಯಾಗಿ ರಲಿಲ್ಲ. ಆದರೆ, ಒಕ್ಕೂಟ ಸರ್ಕಾರದ ತಲೆ ಮಾಸಿದ ನೀತಿಯಿಂದ ಎನ್‌ಜಿಒ ಗಳಿಗೆ ದೇಶಿ-ವಿದೇಶಿ ಅನುದಾನ ಕಡಿತಗೊಂಡು ಅವು ಕದ ಹಾಕಿದವು. ಇವುಗಳ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಜೀವನ ನಿರ್ವಹಣೆಗೆ ಎಂಎಫ್‌ಐಗಳನ್ನು ಸೇರಿದರು. ಎಸ್‌ಎಚ್‌ಜಿಗಳ ಪತನವನ್ನು ನಾಗರಿಕ ಸಮಾಜ ಮೂಕನಂತೆ ನೋಡಿತು.
ಕೇಳಿದ ಎಲ್ಲರಿಗೂ ಸಾಲ: ಎಂಎಫ್‌ಐಗಳು ನಿರುದ್ಯೋಗಿ ಪುರುಷರು-ಮಹಿಳೆಯ ರಿಗೂ ಸಾಲ ನೀಡಲಾರಂಭಿಸಿದವು. ಜೆಎಲ್‌ಜಿ(ಜಂಟಿ ಹೊಣೆಗಾರಿಕೆ ಗುಂಪು) ಗಳಿಗೆ ಯಾವುದೇ ಭದ್ರತೆ ಇಲ್ಲದೆ ತಕ್ಷಣ ಸಾಲ ನೀಡಲಾಗುತ್ತದೆ. ಆದರೆ, ಇಡೀ ಗುಂಪು ಸಾಲದ ಜವಾಬ್ದಾರಿ ಹೊರಬೇಕಾಗುತ್ತದೆ. ಹೀಗಾಗಿ, ಕೆಲವರು 2-3 ಜೆಎಲ್‌ಜಿ ಸೇರಿಕೊಂಡು ಎಲ್ಲ ಕಡೆಯೂ ಸಾಲ ಎತ್ತಿದರು. ಜೆಎಲ್‌ಜಿಗಳ ವಹಿವಾಟು ಅಪಾರದರ್ಶಕ; ಸದಸ್ಯರು ಬೇಕೆಂದಾಗ ಗುಂಪು ತೊರೆಯಲು ಸಾಧ್ಯವಿಲ್ಲ. ಎಲ್ಲ ವಹಿವಾಟು ನಗದು ರೂಪದಲ್ಲಿ ಇರುತ್ತದೆ ಇತ್ಯಾದಿ.
ಸಾಮಾನ್ಯವಾಗಿ, ಸಾಲ ಕೊಡಿಸಲು ಸ್ಥಳೀಯರನ್ನೇ ಏಜೆಂಟರಾಗಿ ನೇಮಿಸಿಕೊಳ್ಳ ಲಾಗುತ್ತದೆ. ಇವರಿಗೆ ಕಮಿಷನ್ ನೀಡಲಾಗುತ್ತದೆ. ಕಂತು ವಸೂಲಿಗೆ ಒರಟರನ್ನು ನೇಮಿಸಲಾಗುತ್ತದೆ. ಈ ಏಜೆಂಟರಿಗೆ ಪ್ರತಿ ತಿಂಗಳು ವಿತರಿಸಬೇಕಾದ ಸಾಲ/ಸಂಗ್ರ ಹಿಸಬೇಕಾದ ಕಂತುಗಳ ಗುರಿ ನೀಡಲಾಗುತ್ತದೆ; ಇವರು ಗುರಿ ಮುಟ್ಟಲು ಜನರನ್ನು ಪುಸಲಾಯಿಸಿ ಸಾಲ ನೀಡುತ್ತಾರೆ; ದಬ್ಬಾಳಿಕೆಯಿಂದ ಕಂತು ಸಂಗ್ರಹಿಸುತ್ತಾರೆ. ತುರ್ತು ಸಾಲ ಬೇಕಿದ್ದಾಗ, ಇವರಿಗೆ ಹೆಚ್ಚು ಕಮಿಷನ್ ಆಮಿಷ ಒಡ್ಡಲಾಗುತ್ತದೆ. ಸಾಲ ನೀಡುವಿಕೆ-ಕಂತು ಸಂಗ್ರಹಕ್ಕೆ ವಿಪರೀತ ಒತ್ತಡ ಮತ್ತು ಉದ್ಯೋಗ ಭದ್ರತೆ ಇಲ್ಲದೆ ಇರುವುದರಿಂದ, ಆದಷ್ಟು ಬೇಗ ಹಣ ಮಾಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡಿರುತ್ತಾರೆ. ಆಸ್ತಿ/ನಿವೇಶನದ ನಕಲು ದಾಖಲೆ ಸೃಷ್ಟಿಸಿ, 2-3 ಕಡೆ ವೈಯಕ್ತಿಕ ಸಾಲ ಪಡೆದವರೂ ಇದ್ದಾರೆ.
ಜೆಎಲ್‌ಜಿಗಳಿಗೆ ಹಣ ನಿರ್ವಹಣೆ ಬಗ್ಗೆ ಜಾಗೃತಿ ಹಾಗೂ ತರಬೇತಿ ನೀಡಿಲ್ಲ. ಇವು ಗ್ರಾಹಕರು ಬ್ಯಾಂಕ್‌ಗಳ ಜೊತೆಗೆ ನೇರವಾಗಿ ವ್ಯವಹರಿಸಲು ಬಿಡುವುದಿಲ್ಲ. ಕಂಪನಿಗಳು ಬ್ಯಾಂಕಿನಿಂದ ಹೆಚ್ಚು ಬಡ್ಡಿಗೆ ಹಣ ಪಡೆದು, ಜೆಎಲ್‌ಜಿಗಳಿಗೆ ಹಂಚುತ್ತವೆ. ದುಬಾರಿ ಬಡ್ಡಿಯಲ್ಲದೆ, ವಿವಿಧ ಶುಲ್ಕಗಳನ್ನು ವಿಧಿಸುತ್ತವೆ. ಒಂದು ಸಾಲ ತೀರುವ ಮುನ್ನವೇ ಮತ್ತೊಂದು ಸಾಲ ನೀಡಿ, ನಿರಂತರ ಸಾಲದ ಸುಳಿಯಲ್ಲಿ ಬೀಳುವಂತೆ ಮಾಡುತ್ತವೆ. ಇಂಥ ಸಾಲಗಳು ಅನಗತ್ಯ ವೆಚ್ಚ, ಕುಡಿತ-ಮೋಜಿಗೆ ದಾರಿ ಮಾಡಿಕೊಟ್ಟಿವೆ. ಕೂಲಿಗೆ ಹೋಗುವುದನ್ನು, ಹೈನುಗಾರಿಕೆ ಬಿಟ್ಟವರೂ ಇದ್ದಾರೆ. ಸಾಲವನ್ನು ಮೊಬೈಲ್- ಬೈಕ್‌ಇತ್ಯಾದಿ ಖರೀದಿಗೆ, ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹಳ್ಳಿಗಳಲ್ಲೂ ತಲೆಯೆತ್ತಿರುವ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ(?) ಗಳಿಗೆ ಮಕ್ಕಳನ್ನು ಸೇರಿಸಲು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಐಷಾ ರಾಮಿ ವಿವಾಹ/ ಸೀಮಂತ, ದೇವಾಲಯ ದರ್ಶನಕ್ಕೆ ವೆಚ್ಚವಾಗುತ್ತಿದೆ. ಇದರಿಂದ, ಆಟೊಮೊಬೈ ಲ್, ವಿದ್ಯುನ್ಮಾನ ಸರಕು ಉದ್ಯಮ, ಮನೆ ನಿರ್ಮಾಣ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ದುಡ್ಡು ಹರಿದಿದೆ. ಈ ಅನುತ್ಪಾದಕ ಸಾಲದಿಂದ ಗ್ರಾಮೀಣ ಆರ್ಥಿಕ ವ್ಯವಸ್ಥೆಯೇ ನಾಶವಾಗಿದೆ. ರಾಜ್ಯದ ಎಂಎಫ್‌ಐಗಳಲ್ಲಿ ಅಂದಾಜು 1 ಲಕ್ಷ ಉದ್ಯೋಗಿಗಳಿದ್ದಾರೆ( ಕಮಿಷನ್‌ಏಜೆಂಟರು ಸೇರಿದಂತೆ). ಇವರಿಗೆ ಕನಿಷ್ಠ ಭದ್ರತೆಯೂ ಇಲ್ಲ. ಇಲ್ಲಿ ಸಾಲ ತೆಗೆದುಕೊಳ್ಳುವವರು, ಕೊಡಿಸುವವರು ಹಾಗೂ ವಸೂಲು ಮಾಡುವವರು ಎಲ್ಲರೂ ಬಲಿಪಶುಗಳೇ.
ಆರ್‌ಬಿಐ ನಿಯಮಗಳಿವೆ. ಆದರೆ…. : ಆರ್‌ಬಿಐ ನಿಯಮಗಳು ಪುಸ್ತಕದಲ್ಲಿ ಬಹಳ ಕಠಿಣವಾಗಿವೆ. ʼಜಪ್ತಿಗೆ ಅವಕಾಶವಿಲ್ಲ. ಬಾಕಿ ವಸೂಲಿಗೆ ಮಾದರಿ ಕಾರ್ಯಾಚರಣೆ ಪ್ರಕ್ರಿಯೆ(ಎಸ್‌ಒಪಿ) ಅನುಸರಿಸಬೇಕು. ಅದನ್ನು ಸಾಲಗಾರರಿಗೆ ವಿವರಿಸಬೇಕು, ಬದಲಿಸಬಾರದು ಮತ್ತು ಉಲ್ಲಂಘಿಸಬಾರದು. ಸಾಲಿಗರ ಮನೆ ಮೇಲೆ ʻಅಡಮಾನʼ ಎಂದು ಬರೆಯಬಾರದು. ಚಿನ್ನಾಭರಣ ಸೇರಿದಂತೆ ಸ್ಥಿರಾಸ್ತಿ ಜಪ್ತಿ ಮಾಡುವಂತಿಲ್ಲ. ಸಾಲಗಾರರ ಮನೆಯವರು ಸಾಲಕ್ಕೆ ಬಾಧ್ಯರಲ್ಲ. ಸಾಲಕ್ಕೆ ವಿಮೆ ಮಾಡಿಸಬೇಕು. ಒಂದು ವೇಳೆ ಸಾಲಗಾರ ಮೃತಪಟ್ಟಲ್ಲಿ, ವಿಮೆಯಿಂದ ಸಾಲ ಪಾವತಿಸಿಕೊಳ್ಳಬೇಕು. ಅನಾರೋಗ್ಯ/ಅಪಘಾತ/ಕೆಲಸ ಕಳೆದುಕೊಂಡಲ್ಲಿ, ಕಂತು ಮುಂದೂಡಲು ಅವ ಕಾಶವಿದೆ. ಇದಕ್ಕೆ ತಗಲುವ ವೆಚ್ಚವನ್ನು ವಿಮೆಯಿಂದ ಹೊಂದಾಣಿಕೆ ಮಾಡಿಕೊಳ್ಳ ಬೇಕು. ವ್ಯಕ್ತಿ/ಕುಟುಂಬದ ವಾರ್ಷಿಕ ಆದಾಯದ ಶೇ.50ರಷ್ಟು ಮಾತ್ರ ಸಾಲ ನೀಡಬೇಕು. ಈಗಾಗಲೇ ಸಾಲ ಪಡೆದಿದ್ದು, ಅದು ವಾರ್ಷಿಕ ಆದಾಯದ ಶೇ.50ನ್ನು ಮೀರಿದ್ದರೆ, ಮತ್ತೆ ಸಾಲ ನೀಡುವಂತಿಲ್ಲ. ನೀಡಿದರೆ, ಅದು ಕಂಪನಿಯ ಲೋಪʼ ಎಂದು ಮಾರ್ಚ್ 2022ರಿಂದ ಜಾರಿಯಲ್ಲಿರುವ ಮಾರ್ಗಸೂಚಿ ಹೇಳುತ್ತದೆ. ಆದ ರೆ, ನಿಯಮಗಳು ಪುಸ್ತಕದಲ್ಲಿ ಮಾತ್ರ ಇದ್ದು, ಪಾಲನೆಯಾಗುತ್ತಿಲ್ಲ.
ಎಂಎಫ್‌ಐಗಳು ರಾಷ್ಟ್ರೀಯ ಬ್ಯಾಂಕುಗಳಿಂದ ವಾರ್ಷಿಕ ಸರಾಸರಿ 1 ಲಕ್ಷ ಕೋಟಿ ರೂ.ನಂತೆ 15 ಲಕ್ಷ ಕೋಟಿ ರೂ. ಸಾಲ ಪಡೆದಿವೆ. ಜೊತೆಗೆ, ಮ್ಯೂಚುಯಲ್ ಫಂಡ್‌ಗಳಿಂದಲೂ ಸಾಲ ಎತ್ತಿವೆ. ಗ್ರಾಮೀಣ ಜನರು ಪಡೆದ ಸಾಲದಲ್ಲಿ ಶೇ.2 ರಷ್ಟು ಮಾತ್ರ ಅನುತ್ಪಾದಕ ಸಾಲ(ಎನ್‌ಪಿಎ). ಹೀಗಿದ್ದರೂ, ಭದ್ರತೆಯಿಲ್ಲ ಎಂದು ಅವರಿಗೆ ಸಾಲ ನಿರಾಕರಿಸಲಾಗುತ್ತದೆ; ಇದರಿಂದ ಅವರು ಬಡ್ಡಿದಂಧೆಕೋರರ ಬಲೆಗೆ ಬೀಳುತ್ತಾರೆ. ಆದರೆ, 2023-24ರಲ್ಲಿ ಬ್ಯಾಂಕುಗಳು 1.62 ಲಕ್ಷ ಕೋಟಿ ರೂ. ಸಾಲವನ್ನು ರೈಟ್ ಆಫ್ ಮಾಡಿವೆ. ಇದಕ್ಕೆ ಯಾರನ್ನೂ ಉತ್ತರದಾಯಿ ಆಗುವು ದಿಲ್ಲ.
ತಾಲೂಕು ಮಟ್ಟದಲ್ಲೂ ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್‌ಬಿ ಎಫ್‌ಸಿ)ಗಳು ವ್ಯಾಪಿಸಿಬಿಟ್ಟಿವೆ. ಇವುಗಳಲ್ಲಿ ಅಕ್ರಮ ಸಂಸ್ಥೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇರ ಲಿಲ್ಲವೇ? ಸರ್ಕಾರ ಇವನ್ನು ನಿಯಂತ್ರಿಸಲಿಲ್ಲವೇಕೆ? ಸಾರ್ವಜನಿಕರ ನೆನಪು ಕ್ಷಣಿಕ ಎನ್ನುವುದು ಸಾರ್ವಕಾಲಿಕ ಸತ್ಯ. ಇದು ಸರ್ಕಾರ-ಆಡಳಿತ ವ್ಯವಸ್ಥೆಗೆ ಗೊತ್ತಿದೆ. ಹೀಗೆಂದೇ ಅವರು ನಿರ್ಲಕ್ಷಿಸುತ್ತಾರೆ.
ಪರಿಸ್ಥಿತಿ ಬದಲಾಗುವ ಸಾಧ್ಯತೆ ಕಡಿಮೆ: ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರ ಏನೇ ಬಡಾಯಿ ಕೊಚ್ಚಿಕೊಂಡರೂ, ಕೋವಿಡ್‌ನಂತರ ನಿರುದ್ಯೋಗ ಹೆಚ್ಚಿದೆ. ಮೂಲ ಸೌಲಭ್ಯ, ರಿಯಲ್‌ಎಸ್ಟೇಟ್ ವಲಯದಲ್ಲಿ ಹೆಚ್ಚು ಸಂಚಲನೆ ಇಲ್ಲ; ಖಾಸಗಿ ಕಂಪನಿ ಗಳ ಉದ್ಯೋಗಿಗಳ ವೇತನ ಹೆಚ್ಚಿಲ್ಲ. ಕೃಷಿ ಲಾಭದಾಯಕವಾಗಿಲ್ಲ. ಇಂಥ ಸನ್ನಿವೇಶ ದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಆಗದಿದ್ದರೆ, ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಆದರೆ, ಅಂಥ ಲಕ್ಷಣ ಕಾಣುತ್ತಿಲ್ಲ.
ಸ್ವಸಹಾಯ ಗುಂಪು(ಎಸ್‌ಎಚ್‌ಜಿ)ಗಳು ತೆರೆಮರೆಗೆ ಸರಿದಿರುವುದರಿಂದ, ಗ್ರಾಮೀ ಣ ಮಹಿಳೆಯರು ಹಣಕಾಸಿಗೆ ಎಂಎಫ್‌ಐಗಳನ್ನು ಆಧರಿಸಿದ್ದಾರೆ. ಪರ್ಯಾಯ ಹಣಕಾಸು ವ್ಯವಸ್ಥೆ ಮಾಡದೆ, ಎಂಎಫ್‌ಐಗಳನ್ನು ನಿಷೇಧಿಸಿದರೆ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕುತ್ತಾರೆ. ಜಿಎಲ್‌ಜಿಗಳು ವಿಧಿಸಬಹುದಾದ ಬಡ್ಡಿ ಪ್ರಮಾಣವನ್ನು ರಿಸರ್ವ್‌ಬ್ಯಾಂಕ್‌ನಿಗದಿ ಪಡಿಸಿಲ್ಲ. ಆದರೆ, ಬಡ್ಡಿ ಮೇಲೆ ನಿಗಾ ಇರಿಸುತ್ತೇನೆ ಎಂದು ಹೇಳಿಕೊಂಡಿದೆ. ಈ ಕಂಪನಿಗಳು ಶೇ.18ರಿಂದ ಶೇ.27ರಷ್ಟು ಬಡ್ಡಿ ವಿಧಿಸುತ್ತಿವೆ. ಆದ್ದರಿಂದ, ಆರ್‌ಬಿಐ- ಒಕ್ಕೂಟ ಸರ್ಕಾರ ಗರಿಷ್ಠ ಬಡ್ಡಿ ದರ ನಿಗದಿಪಡಿಸಬೇಕಿದೆ. ವ್ಯಕ್ತಿ-ಕುಟುಂಬಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್‌ಬಿಐ ಹೇಳಿದ್ದರೂ, 5-6 ಲಕ್ಷ ರೂ ಸಾಲ. ನೀಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಅಕ್ರಮ ಎಂಎಫ್‌ಐಗಳನ್ನು ನಿಷೇಧಿಸಬೇಕು ಇಲ್ಲವೇ ಜನಪರವಾಗಿಸಲು ಕ್ರಮ ತೆಗೆದುಕೊಳ್ಳಬೇಕು. ಎಂಎಫ್‌ಐ ಗಳ ವಹಿವಾಟು ಕುರಿತು ತನಿಖೆ ನಡೆಸುವುದಲ್ಲದೆ, ಸಾಲ ತೀರಿಸುವಿಕೆ ಅವಧಿ ಹೆಚ್ಚಳ/ಬಡ್ಡಿ ಕಡಿತ ಹಾಗೂ ಒಮ್ಮೆಲೇ ಸಾಲ ತೀರುವಳಿಗೆ ಅವಕಾಶ ನೀಡಬೇಕು. ಆಧಾರ್-ಕೆವೈಸಿ ಜೋಡಣೆಯಿಂದ ಒಬ್ಬರು ಒಮ್ಮೆ ಮಾತ್ರ ಸಾಲ ನೀಡುವುದನ್ನು ಖಾತ್ರಿಪಡಿಸಿಕೊಳ್ಳಬಹುದು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ರೈತರು-ಬಡವರಿಗೆ ಸ್ಪಂದಿಸುವಂತೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸಹಕಾರ ಕ್ಷೇತ್ರದ ಬ್ಯಾಂಕುಗಳು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಿಂದ ಏದುಸಿರು ಬಿಡುತ್ತಿವೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಿಂ ದ ಹೊರಗುಳಿದವರು ಹಾಗೂ ಈ ಬ್ಯಾಂಕುಗಳಿಂದ ಸಾಲ ಪಡೆಯಲು ಆಗದೆ ಇರುವವರು ಕಿರುಸಾಲದ ಮೊರೆ ಹೋಗುತ್ತಾರೆ. ಈ ವ್ಯವಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಶೇ.76 ಹಾಗೂ ನಗರ ಪ್ರದೇಶದಲ್ಲಿ ಶೇ.24ರಷ್ಟು ಸಾಲ ವಿತರಿಸಿದೆ. ತಾನು ಆರ್ಥಿಕ ಒಳಗೊಳ್ಳುವಿಕೆ, ಸ್ವಾವಲಂಬನೆ, ಸ್ಥಿರತೆ, ಉದ್ಯಮಶೀಲತೆ, ಆರ್ಥಿಕ ಸಾಕ್ಷರತೆಗೆ ದಾರಿ ಮಾಡಿಕೊಡುತ್ತೇನೆ ಎಂದು ಎಂಎಫ್‌ಐಗಳು ಹೇಳಿಕೊಂಡಿ ದ್ದರೂ, ಅವು ಶೋಷಕರಾಗಿ ಬದಲಾಗಿವೆ. ಪೂರಕವಾಗಿ, ಒಕ್ಕೂಟ ಸರ್ಕಾರವು ನಬಾರ್ಡ್‌ಗೆ ಅನುದಾನ ಕಡಿತಗೊಳಿಸಿದೆ. 2025-26ರ ಆಯವ್ಯಯದಲ್ಲಿ ನರೇಗಾ ಅನುದಾನ ಕೂಡ ಹೆಚ್ಚಿಲ್ಲ.
ಬ್ಯಾಂಕುಗಳೊಟ್ಟಿಗೆ ಜೋಡಣೆಯಾದ 144 ಲಕ್ಷ ಎಸ್‌ಎಚ್‌ಜಿಗಳಲ್ಲಿ 77 ಲಕ್ಷ ಸಂಖ್ಯೆಯವು ಬ್ಯಾಂಕುಗಳಿಂದ ಸಾಲ ಪಡೆಯುತ್ತಿವೆ. ಇವುಗಳ ಬಲವರ್ಧನೆ ಜೊತೆಗೆ ರಾಜಕೀಯ ಅಭಿಪ್ರಾಯಭೇದ ಹೊಂದಿರುವ ಸ್ವಯಂಸೇವಾ ಸಂಘಟನೆಗಳ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ತೆಗೆಯಬೇಕಿದೆ. ಜನರ ಹಣಕಾಸು ಮೂಲಗಳು ಬತ್ತಿಹೋಗಿರುವುದರಿಂದ, ಲೇವಾದೇವಿದಾರರು ಹಾಗೂ ಅಕ್ರಮ ಹಣಕಾಸು ವ್ಯವಸ್ಥೆ ತಲೆಯೆತ್ತಿದೆ. ಈ ಮೊದಲು ಲೇವಾದೇವಿದಾರ ರಿಂದ ಶೋಷಣೆಗೊಳಗಾಗುತ್ತಿದ್ದ ರೈತರು-ಬಡವರು, ಈಗ ಕಿರುಸಾಲ ಸಂಸ್ಥೆಗಳ ಕಪಿಮುಷ್ಟಿಗೆ ಸಿಲುಕಿಕೊಂಡಿದ್ದಾರೆ. ಆರ್‌ಬಿಐ ಮತ್ತು ಒಕ್ಕೂಟ ಸರ್ಕಾರ ಸಾವು- ಸಂಕಷ್ಟಗಳ ನೈತಿಕ ಜವಾಬ್ದಾರಿ ಹೊರಬೇಕಿದೆ.