ಇವಿ ಆಂದೋಲನ: ಗ್ರಾಹಕ ಜಾಗೃತಿ, ಕಾರ್ಯನೀತಿ ಬೆಂಬಲ ಅಗತ್ಯ

ದೆಹಲಿ ಸರ್ಕಾರ ಏಪ್ರಿಲ್‌ 2026ರಲ್ಲಿ ಪರಿಷ್ಕೃತ ಇವಿ(ವಿದ್ಯುತ್‌ ವಾಹನ) ಕಾರ್ಯನೀತಿಯ ಕರಡು ಪ್ರಕಟಿಸಿತು. ಅದರ ಪ್ರಕಾರ, ಜನವರಿ 1,2027ರಿಂದ ಅಂತರ್ದಹನ ಎಂಜಿನ್‌(ಐಸಿಇ)ನ ಮೂರು ಚಕ್ರದ ವಾಹನಗಳು ಹಾಗೂ ಏಪ್ರಿಲ್‌ 1,2028ರಿಂದ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ. ಜೊತೆಗೆ, 2030ರೊಳಗೆ ಶಾಲಾ ವಾಹನಗಳು, ಕ್ಯಾಬ್‌ಗಳು, ವಿತರಣೆ ಸೇ ವೆಗಳು ಹಾಗು ಸರ್ಕಾರಿ ವಾಹನಗಳು ಶೇ.30ರಷ್ಟು ವಿದ್ಯುದೀಕರಣ ಆಗಬೇಕಿದೆ. 2020ರ ಇವಿ ಕಾರ್ಯನೀತಿ ಜಾರಿ ಬಳಿಕ ರಾಜಧಾನಿಯಲ್ಲಿ ಇವಿಗಳ ಸಂಖ್ಯೆ ಶೇ.14 ಆಗಿದೆ(2025ರಲ್ಲಿ). ನೋಂದಣಿ ಯಾದ ಒಟ್ಟು ವಾಹನಗಳಲ್ಲಿ ದ್ವಿಚಕ್ರ ವಾಹನಗಳ ಪಾಲು ಶೇ.67! ಆದ್ದರಿಂದ, ಭವಿಷ್ಯದಲ್ಲಿ ದೆಹಲಿಯ ಗಾಳಿ ಶುದ್ಧ ಆಗಬೇಕೆಂದರೆ, ದ್ವಿಚಕ್ರ ವಾಹನಗಳ ಸ್ಥಿತ್ಯಂತರ ಅನಿವಾರ್ಯ.

ಆದರೆ, ಸಮಸ್ಯೆ ಇರುವುದು-ನಿಗದಿತ ಅವಧಿಯೊಳಗೆ ಅಗತ್ಯವಿರುವಷ್ಟು ಇವಿಗಳನ್ನು ಉದ್ಯಮ ಉತ್ಪಾದಿಸಬಲ್ಲದೇ? ಸಾಧ್ಯವಿಲ್ಲ ಎಂದು ಐಎಎಂಎಸ್(ಭಾರತೀಯ ಆಟೊಮೊಬೈಲ್‌ ಮ್ಯಾನ್ಯುಫ್ಯಾಕ್ಚರ ರ್ಸ್‌ ಸೊಸೈಟಿ) ಹೇಳಿದೆ. ಅದು ನೀಡುವ ಕಾರಣವೆಂದರೆ, ಇವಿ ಸ್ಥಿತ್ಯಂತರಕ್ಕೆ ಜನ ಸಿದ್ಧರಾಗಿಲ್ಲ; ಅಂತರ್ದಹನ ಎಂಜಿನ್‌ ವಾಹನಗಳಿಗೆ ಹೋಲಿಸಿದರೆ, ಇವಿ ದುಬಾರಿ. ಇದರಿಂದ ಇವಿ ಉದ್ಯಮವು ಐಸಿಇ ವಾಹನಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಎರಡನೆಯದಾಗಿ, ಸಾರ್ವಜನಿಕ/ಖಾಸಗಿ ಚಾರ್ಜಿಂಗ್ ಮೂಲಸೌಲಭ್ಯ ಈಗಷ್ಟೇ ನಿರ್ಮಾಣವಾಗುತ್ತಿದೆ. ಇವಿ ವಾಹನಗಳ ಬ್ರೇಕ್‌ಡೌನ್‌, ಚಾರ್ಜಿಂಗ್‌ ಸಾಧನಗಳ ಕಳವು ಮತ್ತು ವಿದ್ಯುತ್‌ ಕೊರತೆಯಿಂದ ಸೇವೆ ವಿತರಣೆ ಸಮರ್ಪಕವಾಗಿಲ್ಲ. ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳು ಚಾರ್ಜಿಂಗ್‌ ಮೂಲಸೌಲಭ್ಯ ಅಳವಡಿಸಿಕೊಳ್ಳಲು ಹಿಂಜರಿಯುತ್ತಿವೆ. ಮೂರನೆಯದಾಗಿ, ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ನಾಲ್ಕನೆಯದಾಗಿ, ವಿದ್ಯುತ್‌ ಲಘು ವಾಣಿಜ್ಯಿಕ ವಾಹನ(ಇ ಎಲ್‌ಎಂವಿ)ಗಳಿಗೆ ಹಣಕಾಸು ನೆರವು ಅಲಭ್ಯತೆ, ಮಾರಾಟಾನಂತರ ಸೇವೆಯಲ್ಲಿ ಕೊರತೆ ಮತ್ತು ವಾಹನಗಳ ಮರು ಮಾರಾಟ ಬೆಲೆ ಕಡಿಮೆ ಇದೆ. ಬಹು ದೊಡ್ಡ ಸಮಸ್ಯೆಯೆಂದರೆ, ಬ್ಯಾಟರಿ ತಂತ್ರಜ್ಞಾನ ಚೀನಾದಲ್ಲಿ ಕೇಂದ್ರೀಕೃತವಾಗಿದೆ.

2015ರಲ್ಲಿ ಬ್ಯೂರೋ ಆಫ್‌ ಎನರ್ಜಿ(ಬಿಇಇ) ಪ್ರಯಾಣಿಕರ ಕಾರುಗಳಿಗೆ ಕಾರ್ಪೊರೇಟ್‌ ಅವರೇಜ್‌ ಫ್ಯೂಯಲ್‌ ಎಫಿಷಿಯನ್ಸಿ(ಸಿಎಎಫ್‌ಇ) ನಿಯಮ ಜಾರಿಗೊಳಿಸಿದ್ದರಿಂದ, ಕಾರ್‌ ಉತ್ಪಾದಕರು ಇಂಧನ ಕ್ಷಮತೆಯನ್ನು ಹೆಚ್ಚಿಸಿದರು. ದೆಹಲಿಯ 2020ರ ಹಾಗೂ 2026ರ ಇವಿ ಕಾರ್ಯನೀತಿಗಳ ಉದ್ದೇಶ ವಾಯುವಿನ ಗುಣಮಟ್ಟ ಹೆಚ್ಚಳ; ಚಳಿಗಾಲದ ವಾಯುಮಾಲಿನ್ಯಕ್ಕೆ ವಾಹನಗಳ ಪಾಲು ನಗಣ್ಯವಲ್ಲ. ಹೊಸ ನೀತಿಯಿಂದ ಐಸಿಇ ವಾಹನಗಳನ್ನು ಆಧರಿಸಿರುವ ಮಾರಾಟಾನಂತರ ಸೇವಾಜಾಲ ಹಾಗೂ ಬಿಡಿಭಾಗಗಳ ಮಾರಾಟಗಾರರಿಗೆ ಸಂಕಷ್ಟ ಎದುರಾಗುತ್ತದೆ. ಇವರಲ್ಲಿ ಹೆಚ್ಚಿನವರು ಸಣ್ಣ ವ್ಯಾಪಾರಿಗಳು; ಇವರಿಗೆ ಮುಂದಿನ 2 ವರ್ಷದೊಳಗೆ ಸ್ಥಿತ್ಯಂತರಕ್ಕೆ ತರಬೇತಿ ನೀಡಬೇಕಾಗುತ್ತದೆ. ಮರುಕೌಶಲ ಕಾರ್ಯಕ್ರಮ, ಸಣ್ಣ ಕಾರ್ಯಾಗಾರಗಳಿಗೆ ಸುಲಭ ಸಾಲ ಹಾಗೂ ಇವಿ ಸ್ಥಿತ್ಯಂತರಕ್ಕೆ ಸಾಧನಗಳ ಉನ್ನತೀಕರಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಇದನ್ನು ನಿರ್ವಹಿಸಬಹುದು.

ವಿದ್ಯುತ್‌ ಸಮಸ್ಯೆ: ಎಲ್ಲ ವಾಹನಗಳು ವಿದ್ಯುದೀಕರಣಗೊಂಡರೆ, ವಿದ್ಯುತ್‌ ಗ್ರಿಡ್‌ಗಳ ಮೇಲೆ ಒತ್ತಡ ಹೆಚ್ಚುತ್ತದೆ. ಇದಕ್ಕಾಗಿ ಸ್ಥಳೀಯ ವಿತರಣೆ ವ್ಯವಸ್ಥೆಯನ್ನು ಸಬಲಗೊಳಿಸಬೇಕಾಗುತ್ತದೆ. ಮುಖ್ಯವಾಗಿ, ಟ್ರಾನ್ಸ್‌ಫಾರ್ಮರ್‌ಗಳು, ವಿತರಣೆ ಫೀಡರ್‌ಗಳು ಇತ್ಯಾದಿ. ಗೃಹ ಬಳಕೆ ಸಂಪರ್ಕಗಳ ಹೆಚ್ಚಳ, ಕೃಷಿಗೆ ಬಳಕೆ, ಹವಾಮಾನ ಬದಲಾವಣೆಯಿಂದ ಉಷ್ಣ ಅಲೆಗಳ ಹೆಚ್ಚಳ, ಹವಾ ನಿಯಂತ್ರಕಗಳು/ ಇವಿ/ ಇಂಡಕ್ಷನ್‌ ಸ್ಟವ್‌ಗಳ ಬಳಕೆ ಹೆಚ್ಚಳದಿಂದ ವಿದ್ಯುತ್‌ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಏಪ್ರಿಲ್‌ 25, 2026ರಂದು ವಿದ್ಯುತ್‌ ಬೇಡಿಕೆ 256 ಗಿಗಾ ವ್ಯಾಟ್(ಗಿಗಾ ವ್ಯಾಟ್‌= 1 ಶತಕೋಟಿ ವ್ಯಾಟ್‌ ಅಥವಾ 1‌,000 ಮೆಗಾವ್ಯಾಟ್)ನಿಂದ ಮೇ 21ಕ್ಕೆ 270 ಗಿಗಾವ್ಯಾಟ್‌ಗೆ ಹೆಚ್ಚಳಗೊಂಡಿತು. ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರ(ಸಿಇಎ) ಪ್ರಕಾರ, 2035-36ಕ್ಕೆ ದೇಶಿ ಬೇಡಿಕೆ 459 ಗಿಗಾವ್ಯಾಟ್‌ ಆಗಲಿದೆ. ಸಂಪನ್ಮೂ ಲ ಕೊರತೆಯಿಂದ ರಾಜ್ಯ ವಿತರಣೆ ಕಂಪನಿ(ಡಿಸ್ಕಾಂ)ಗಳ ತಾಂತ್ರಿಕ ಉನ್ನತೀಕರಣ ಹಿಂದೆ ಉಳಿದಿದೆ. ಇದರಿಂದ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಪ್ರಸರಣ ಮತ್ತು ವಿತರಣೆ(ಟಿ ಆಂಡ್‌ ಡಿ) ನಷ್ಟ ಸುಮಾರು ಶೇ. 20 ರಿಂದ ಶೇ.21.4 ಇದೆ; ಇದು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚು. ನಷ್ಟದ ಬಹುಪಾಲು ವಿತರಣೆಯಲ್ಲಿ ಸಂಭವಿಸುತ್ತದೆ.

ಉತ್ಪಾದನೆ ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಪೂರೈಸಬಹುದು. ಆದರೆ, ವಿದ್ಯುತ್‌ ಬೇಡಿಕೆ ದಿನವಿಡೀ ಇರುವುದಿಲ್ಲ; ಬೆಳಗ್ಗೆ ಮತ್ತು ಸಂಜೆ ಮಾತ್ರ ಬೇಡಿಕೆ ಹೆಚ್ಚು ಇರುತ್ತದೆ. ಹೀಗಾಗಿ, ಉಷ್ಣ ಸ್ಥಾವರ ಇಲ್ಲವೇ ಜಲವಿದ್ಯುತ್‌ ಯೋಜನೆ ನಿರ್ಮಾಣದ ಮೂಲಕ ಬೇಡಿಕೆಯನ್ನು ಪೂರೈಸುವುದು ಸಮರ್ಪಕ ಆರ್ಥಿಕ-ತಾಂತ್ರಿಕ ಪರಿಹಾರ ಆಗುವುದಿಲ್ಲ. ಏಕೆಂದರೆ, ಬೇಡಿಕೆ ಕಡಿಮೆ ಇರುವಾಗ(ಅಂದರೆ, ಮಧ್ಯಾಹ್ನ/ರಾತ್ರಿ) ಸ್ಥಾವರಗಳು ಉತ್ಪಾದನೆ ಸ್ಥಗಿತಗೊಳಿಸಿ, ನಿಷ್ಕ್ರಿಯವಾಗಿರುತ್ತವೆ. ಹಗಲು ಸೌರ ಶಕ್ತಿ ಲಭ್ಯವಾಗುವುದರಿಂದ, ಬೇಡಿಕೆಯನ್ನು ಪೂರೈಸಬಹುದು. ಇಲ್ಲಿ ಕೂಡ ಸಮಸ್ಯೆಯಿದೆ; ಸೌರಶಕ್ತಿ ಉತ್ಪಾದನೆ ಎಲ್ಲ ಸಮಯ/ತಿಂಗಳು ಒಂದೇ ರೀತಿ ಇರುವುದಿಲ್ಲ. ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚುವರಿ ಸೌರ ವಿದ್ಯುತ್‌ನ್ನು ಬ್ಯಾಟರಿಗಳಲ್ಲಿ ಶೇಖರಿಸಿ ಇಲ್ಲವೇ ಜಲವಿದ್ಯುತ್‌ ಸ್ಥಾವರಗಳಲ್ಲಿ ನೀರು ಮೇಲೆತ್ತಿ ಶೇಖರಿಸಿ, ಸಂಜೆ ವೇಳೆ ಟರ್ಬೈನ್‌ ಮೂಲಕ ಹರಿಸಿ ವಿದ್ಯುತ್‌ ಉತ್ಪಾದಿಸಿ, ಬಳಸಬಹುದು. ಬ್ಯಾಟರಿಗಳು ಮತ್ತು ಜಲಾಶಯಗಳ ನಿರ್ಮಾಣ ದುಬಾರಿ. ಇಂಥ ಸನ್ನಿವೇಶದಲ್ಲಿ ಬೇಡಿಕೆ ಹೊಂದಾಣಿಕೆ(ಡಿಎಫ್‌, ಡಿಮ್ಯಾಂಡ್‌ ಫ್ಲೆಕ್ಸಿಬಿಲಿಟಿ) ಅಂದರೆ, ಬೇಡಿಕೆ ಹೆಚ್ಚು ಇರುವಾಗ ವಿದ್ಯುತ್‌ ಬಳಸದಂತೆ ಜಾಗೃತಿ ಮೂಡಿಸುವ ಮೂಲಕ ನಿರ್ವಹಿಸಬಹುದು. ಹವಾ ನಿಯಂತ್ರಕಕ್ಕೆ ಥರ್ಮೋ ಸ್ಟಾಟ್‌ ಅಳವಡಿಕೆ, ವಿದ್ಯುತ್‌ ಬೇಡಿಕೆ ಕಡಿಮೆ ಇರುವಾಗ ಇವಿಗಳನ್ನು ಚಾರ್ಜ್‌ ಮಾಡುವುದು, ವಿದ್ಯುತ್‌ ಬೇಡಿಕೆ ಹೆಚ್ಚು ಇರುವಾಗ ವಾಷಿಂಗ್‌ ಮಶೀನ್/‌ನೀರಿನ ಹೀಟರ್‌ ಬಳಸದೆ ಇರುವುದು ಇತ್ಯಾದಿ ಮೂಲಕ ಬೇಡಿಕೆಯನ್ನು ನಿರ್ವಹಿಸಬಹುದು. ಗ್ರಿಡ್‌ ಪರಿಸ್ಥಿತಿಗೆ ಅನುಗುಣವಾಗಿ ವಿದ್ಯುತ್‌ ಬಳಕೆಯನ್ನು ನಿಯಂತ್ರಿಸುವ ವೇದಿಕೆಗಳು/ಸೇವೆ ಪೂರೈಸುವವವರು(ಅಗ್ರಿಗೇಟರ್‌ಗಳು) ಇದನ್ನು ಮಾಡಬಹುದು. ಹಲವು ದೇಶಗಳಲ್ಲಿ ಈ ಮಾದರಿಯನ್ನು ಆಧರಿಸಿ, ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ/ಬಳಕೆ ಕಡಿತ ಹಾಗೂ ವಿತರಣೆ-ಪೂರೈಕೆ ವ್ಯವಸ್ಥೆಯ ಸ್ಥಿರೀಕರಣ ಮಾಡಲಾಗಿದೆ. ಅಮೆರಿಕದ ohmconnect(www.ohmconnect.com) ಮತ್ತು ಇಂಗ್ಲೆಂಡಿನ octopusenergy(octopus.energy) ಇದಕ್ಕೆ ಉದಾಹರಣೆ. ಪ್ರತಿದಿನ ಗ್ರಾಹಕರಿಗೆ ದಿನದ ಸಮಯ(ಟೈಮ್‌ ಆಫ್‌ ದ ಡೇ) ಇಲ್ಲವೇ ಬಳಕೆ ಸಮಯ(ಟೈಮ್‌ ಆಫ್‌ ಯೂಸ್)‌ ಆಧರಿಸಿ ಶುಲ್ಕ ವಿಧಿಸುವುದರಿಂದ, ವಿದ್ಯುತ್‌ ಬಿಲ್‌ ಕಡಿಮೆ ಆಗುತ್ತದೆ. ನಮ್ಮಲ್ಲೂ ಇಂಥ ಪ್ರಯತ್ನ ನಡೆದಿದೆ; ಗ್ರೇಟರ್‌ ಮುಂಬೈ ಮುನ್ಸಿ ಪಲ್‌ ಕಾರ್ಪೊರೇಷನ್‌ ಜೊತೆ ಟಾಟಾ ಪವರ್‌ನ ವಿತರಣ ಸಂಸ್ಥೆಯು ಬಾಂಡುಪ್‌ನಲ್ಲಿ ಹಾಗೂ ಬಾಂಬೆ ಸಬರ್ಬನ್‌ ಎಲೆಕ್ಟ್ರಿಕ್‌ ಸಪ್ಲೈ(ಬಿಎಸ್‌ ಇಎಸ್)ಯ ಯಮುನಾ ಪವರ್‌ ಲಿಮಿಟೆಡ್‌ ದೆಹಲಿಯಲ್ಲಿ ಯಾಂತ್ರೀಕೃತ ಬೇಡಿಕೆ ಹೊಂದಾಣಿಕೆ ಕಾರ್ಯಕ್ರಮವನ್ನು ಆರಂಭಿಸಿವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಗ್ರಾಹಕರ ಮನೆಗಳಲ್ಲಿ ವಿದ್ಯುತ್‌ ಬೇಡಿಕೆ ಶೇ.17-20ರಷ್ಟು ಕಡಿಮೆಯಾಗಿದೆ. ಆದರೆ, ವಿದ್ಯುತ್‌ ವಿತರಣೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವುದನ್ನು ಸಾರ್ವಜನಿಕರು ವಿರೋಧಿಸುತ್ತಿದ್ದಾರೆ. ಹೀಗಾಗಿ, ಈ ವ್ಯವಸ್ಥೆಯ ಅಳವಡಿಕೆ ಕಷ್ಟಕರ.

ರೆಟ್ರೋಫಿಟ್ಟಿಂಗ್ ಪರಿಹಾರ: ಹಳೆಯ ಪೆಟ್ರೋಲ್-‌ಡೀಸೆಲ್‌ ವಾಹನಗಳಿಗೆ ಇವಿ ವ್ಯವಸ್ಥೆ ಅಳವಡಿಕೆಯಿಂದ ಇಂಧನ ಬಳಕೆ ಹಾಗೂ ಮಾಲಿನ್ಯ ಎರಡೂ ಕಡಿಮೆಯಾಗಲಿದೆ. ದಕ್ಷಿಣ ಏಷ್ಯಾ ಯುದ್ಧದ ಪಾಠವೆಂದರೆ, ಆಮದಾದ ಪಳೆಯುಳಿಕೆ ಇಂಧನದ ಅವಲಂಬನೆಯಿಂದ ದೇಶದ ಇಂಧನ ಸುರಕ್ಷತೆ ಹಾಗೂ ಆರ್ಥಿಕ ಪರಿಸ್ಥಿತಿಗೆ ಧಕ್ಕೆ ಉಂಟಾಗಲಿದೆ. 2025-26ರಲ್ಲಿ ಮಾರಾಟವಾದ ಹೊಸ ವಾಹನಗಳಲ್ಲಿ ಇವಿ ಪಾಲು ಶೇ.8.5. ಆದರೆ, ದೇಶಾದ್ಯಂತ ಡೀಸೆಲ್-ಪೆಟ್ರೋಲ್‌ ಬಳಸುವ 38.1 ಕೋಟಿ ವಾಹನಗಳು ರಸ್ತೆಯಲ್ಲಿ ಇವೆ. ಈ ವಾಹನಗಳ ಎಂಜಿನ್‌, ಹೊಗೆ ಹೊರತಳ್ಳುವ ವ್ಯವಸ್ಥೆ ಇತ್ಯಾದಿ ಯನ್ನು ವಿದ್ಯುತ್‌ ಬ್ಯಾಟರಿ, ಮೋಟರ್‌ ಹಾಗೂ ನಿಯಂತ್ರಣ ವ್ಯವಸ್ಥೆಯಿಂದ ಬದಲಿಸಬಹುದು(ರೆಟ್ರೋಫಿಟ್ಟಿಂಗ್).‌ ನೇಪಾಳದಲ್ಲಿ ಇದು ಚಾಲ್ತಿಯಲ್ಲಿದೆ. ಹಳೆಯ ವಾಹನಗಳ ಇಂಧನ ಕ್ಷಮತೆ ಕಡಿಮೆ ಯಾಗುವುದರಿಂದ ಇಂಧನ ವೆಚ್ಚ ಹೆಚ್ಚಳವಲ್ಲದೆ, ಪದೇಪದೇ ದುರಸ್ತಿಗೆ ಹಣ ತೆರಬೇಕಾಗುತ್ತದೆ. ಕೈಕೊಡುವ ವಯಸ್ಸಾದ ಎಂಜಿನ್‌ ಬದಲಿಸಿ, ಇವಿ ವ್ಯವಸ್ಥೆ ಅಳವಡಿಸಬಹುದು. ಫೇಮ್(ಫಾಸ್ಟರ್‌ ಅಡಾ ಪ್ಟೇಷನ್‌ ಆಂಡ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಆಫ್‌ ಹೈಬ್ರಿಡ್‌ ಆಂಡ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌) ಕಾರ್ಯಕ್ರಮದಲ್ಲಿ ರೆಟ್ರೋಫಿಟ್ಟಿಂಗ್‌ ಕೂಡ ಇತ್ತು; ಕ್ರಮೇಣ ನಿರ್ಲಕ್ಷಿಸಲ್ಪಟ್ಟಿತು. ರೆಟ್ರೋಫಿಟ್ಟಿಂಗ್‌ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಿದೆ; ಇಲ್ಲವಾದಲ್ಲಿ ಕಳಪೆ ದರ್ಜೆಯ ಕಿಟ್‌ಗಳು ಮಾರುಕಟ್ಟೆಯಲ್ಲಿ ತುಂಬಿಕೊಳ್ಳುತ್ತವೆ. ಜೊತೆಗೆ, ಹಣಕಾಸು ಸಂಸ್ಥೆಗಳು ರೆಟ್ರೋಫಿಟ್‌ ವಾಹನಗಳನ್ನು ಆರ್ಥಿಕ ನೆರವು ನೀಡ ಬಹುದಾದ ಮೌಲ್ಯವುಳ್ಳ ಆಸ್ತಿ ಎಂದು ಪರಿಗಣಿಸಬೇಕು; ರೆಟ್ರೋಫಿಟ್‌ ಕಿಟ್‌ಗಳಿಗೆ ಜಿಎಸ್‌ಟಿ ವಿನಾಯಿತಿಯಲ್ಲದೆ, ರೆಟ್ರೋಫಿಟ್ಟಿಂಗ್‌ ಕುರಿತ ದತ್ತಾಂಶವನ್ನು ಸಾರ್ವಜನಿಕಗೊಳಿಸಬೇಕು; ಪ್ರಧಾನಮಂತ್ರಿ ಇ-ಡ್ರೈವ್‌ ಯೋಜನೆಯಡಿ ಶೂನ್ಯ ಹೊಗೆಯುಗುಳುವ ಟ್ರಕ್‌ಗಳಿಗೆ ನೀಡುತ್ತಿರುವ ಬೆಂಬಲವನ್ನು ರೆಟ್ರೋಫಿಟ್‌ ಆದ ವಾಹನಗಳಿಗೂ ನೀಡಬೇಕು. ಇದರಿಂದ ಇ ವಾಹನಗಳ ಸಂಖ್ಯೆ ಹೆಚ್ಚಲಿದೆ; ಹಳೆಯದಾದರೂ ಬಳಸುವ ಸ್ಥಿತಿಯಲ್ಲಿರುವ ವಾಹನಗಳನ್ನು ಗುಜರಿಗೆ ಹಾಕುವುದರಿಂದ, ತ್ಯಾಜ್ಯ ವಿಸರ್ಜನೆ ವೆಚ್ಚ ಹೆಚ್ಚುತ್ತದೆ.

ರಾಜ್ಯದ ಕತೆ: ಕರ್ನಾಟಕದಲ್ಲಿ 2017ರಲ್ಲಿ ಇವಿ ಕಾರ್ಯನೀತಿಯನ್ನು ಪ್ರಕಟಿಸಲಾಯಿತು. ರಾಜ್ಯದಲ್ಲಿರುವ 3.52 ಕೋಟಿ ವಾಹನಗಳಲ್ಲಿ ಬೆಂಗಳೂರಿನ ಪಾಲು 1.2 ಕೋಟಿ ದ್ವಿಚಕ್ರ/ಕಾರ್‌(ಮೇ 2026ರ ಮಾಹಿತಿ). ಇದರಲ್ಲಿ 3.19 ಲಕ್ಷ ಇವಿ(ಕಾರು, ದ್ವಿಚಕ್ರ ಹಾಗೂ ವಾಣಿಜ್ಯ)ಗಳಿದ್ದು, ರಾಜ್ಯ ಇವಿ ಅನುಗೊಳಿಸುವಿಕೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಇವಿ ದ್ವಿಚಕ್ರ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲಾಗುತ್ತಿದ್ದು, ಜೀವಿತಾವಧಿ ತೆರಿಗೆ ವಿಧಿಸಲಾಗುತ್ತಿದೆ. ಪ್ರತಿಯಾಗಿ, ದಿಲ್ಲಿಯ ಹೊಸ ಕಾರ್ಯನೀತಿಯು 2.25 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಕ್ಕೆ ಕಿಲೋವ್ಯಾಟ್‌ ಒಂದಕ್ಕೆ 10,000 ರೂ.(ಗರಿಷ್ಠ 30,000 ರೂ.) ಸಬ್ಸಿಡಿ ನೀಡುತ್ತದೆ. ಇವಿ ಚಾರ್ಜಿಂಗ್‌ ವಿಭಾಗದಲ್ಲೂ ರಾಜ್ಯ ಮುಂದೆ ಇದೆ. ಭಾರಿ ಉದ್ಯಮಗಳ ಸಚಿವಾಲಯವು ರಾಜ್ಯಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ, ದೇಶದಲ್ಲಿ 52,178 ಇವಿ ಚಾರ್ಜಿಂಗ್‌ ಕೇಂದ್ರಗಳಿವೆ. 6,805 ಚಾರ್ಜಿಂಗ್‌ ಕೇಂದ್ರಗಳಿರುವ ಕರ್ನಾಟಕ 2ನೆಯ ಹಾಗೂ 6,985 ಚಾರ್ಜಿಂಗ್‌ ಕೇಂದ್ರಗಳಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಪಿಎಂ ಇಡ್ರೈವ್‌ (ಪಿಎಂ ಎಲೆ ಕ್ಟ್ರಿಕ್‌ ಡ್ರೈವ್‌ ರೆವಲ್ಯೂಷನ್‌ ಇನ್‌ ಇನ್ನೊವೇಟಿವ್‌ ವೆಹಿಕಲ್‌ ಎನ್‌ಹ್ಯಾನ್ಸ್‌ಮೆಂಟ್) ಯೋಜನೆ ಪ್ರಕಾರ, ಕೇಂದ್ರ ಸಚಿವಾಲಯಗಳು, ಸಾರ್ವಜನಿಕ ಕ್ಷೇತ್ರದ ಉದ್ಯಮಗಳು, ರಾಜ್ಯ-ಕೇಂದ್ರಾಡಳಿತ ಪ್ರದೇ ಶದ ಸರ್ಕಾರಗಳು ಮತ್ತು ಅವುಗಳ ಸಾರ್ವಜನಿಕ ಉದ್ಯಮಗಳು ಇವಿ ಚಾರ್ಜಿಂಗ್‌ ಕೇಂದ್ರ ಆರಂಭಿಸಬಹುದು. ಆದರೆ, ನಮ್ಮದು ವಿದ್ಯುತ್‌ ಕೊರತೆ ಇರುವ ರಾಜ್ಯ. 37,022 ಮೆಗಾವ್ಯಾಟ್‌ ಉತ್ಪಾದನೆ ಸಾಮರ್ಥ್ಯವಿದ್ದು, ಇದರಲ್ಲಿ ಜಲ 3,798 ಮೆವ್ಯಾ, ಸೌರ 10,594, ಪವನ 7,641, ಉಷ್ಣ ಸ್ಥಾವರ 5,020 ಹಾಗೂ ಕೋಜನರೇಷನ್‌ನಿಂದ 1,731 ಮೆಗಾವ್ಯಾಟ್‌ ವಿದ್ಯುತ್‌ ಬರುತ್ತಿದೆ(ಮಾರ್ಚ್‌ 31, 2026). ಸೌರ, ಪವನ ಇತ್ಯಾದಿ ಹಸಿರು ಮೂಲಗಳು ರಾಜ್ಯದ ಬೆನ್ನೆಲುಬು ಆಗಿವೆ(ಮಾಹಿತಿ: energy.karnataka.gov.in). ಹವಾಮಾನ ವೈಪರೀತ್ಯದಿಂದ ಋತುಮಾನ ಅಸ್ತವ್ಯಸ್ಥ ಆಗಿರುವುದರಿಂ ದ, ವಿದ್ಯುತ್‌ ಬೇಡಿಕೆಯಲ್ಲಿ ಭಾರಿ ಬದಲಾವಣೆ ಆಗುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಹಸಿರು ಶಕ್ತಿ ಮೂಲಗಳು ಆಧಾರ ಆಗಲಿವೆ.

ಕೇಂದ್ರ ಸರ್ಕಾರವು ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆಯಡಿ ಚಾವಣಿ ಸೌರ ಘಟಕ ಹಾಗೂ ಪಿಎಂ ಕುಸುಮ್‌ ಅಡಿ ಸೌರ ಕೃಷಿ ಪಂಪ್‌ಸೆಟ್‌ ಅಳವಡಿಕೆಗೆ ಸಬ್ಸಿಡಿ ನೀಡುತ್ತದೆ. ಈ ಯೋಜನೆಗಳಡಿ ದೇಶಾದ್ಯಂತ 48 ದಶಲಕ್ಷ ಚಾವಣಿ ಸೌರ ಘಟಕ ಹಾಗೂ 23 ಲಕ್ಷ ಸೌರ ಕೃಷಿ ಪಂಪ್‌ ಅಳವಡಿಸಲಾಗಿದೆ. ರಾಜ್ಯದಲ್ಲಿ ಕ್ರಮವಾಗಿ 23,900 ಮತ್ತು 60,000(ಜುಲೈ 2016). ಬೆಂಗಳೂರಿನಲ್ಲಿ 4 ಲಕ್ಷ ಚಾವಣಿ ಸೌರ ಘಟಕಗಳಿದ್ದು, ಅಂದಾಜು 3.2 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿವೆ(ಮಾಹಿತಿ; ಡೌನ್‌ ಟು ಅರ್ಥ್‌,www.cseindia.org). ಅಂದಾಜು 50 ಲಕ್ಷ ಮನೆಗಳಿರುವ ಬೆಂಗಳೂರಿನಲ್ಲಿ ಇದು ಬಹಳ ಕಡಿಮೆ. ಜಾಗತಿಕ ಅಧ್ಯಯನಗಳ ಪ್ರಕಾರ, ಶೇ. 40ರಷ್ಟು ಕುಟುಂಬಗಳು ಸ್ವಂತ ಹಾಗೂ ಉಳಿದವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಸ್ವಂತ ಮನೆಯಲ್ಲಿ ವಾಸಿಸು ವವರು ಸೌರ ವ್ಯವಸ್ಥೆ (ಹೀಟರ್‌ ಮತ್ತು ವಿದ್ಯುತ್‌ ಘಟಕ) ಅಳವಡಿಸಿಕೊಂಡರೆ, ವಿದ್ಯುತ್‌ ಬೇಡಿಕೆ ಕಡಿಮೆಯಾಗುತ್ತದೆ. ಸೌರ ಘಟಕಗಳಿಗೆ ಸಬ್ಸಿಡಿ ಹಾಗೂ ಕಂತಿನಲ್ಲಿ ಹಣ ಪಾವತಿ ಸೌಲಭ್ಯ ಇದೆ. ಆದರೆ, ಗ್ರಾಹಕರು ಈ ಸಂಬಂಧ ಉತ್ಸಾಹವನ್ನೇ ತೋರಿಸುತ್ತಿಲ್ಲ.

ಅವಧಿ ಮುಗಿದ ಬ್ಯಾಟರಿಗಳ ಸಮಸ್ಯೆ: ಇವಿಗಳು ಪಳೆಯುಳಿಕೆ ಇಂಧನ ಆಮದು ಕಡಿತಗೊಳಿಸಲು ಪರ್ಯಾಯ ಮಾರ್ಗ. ಹಾಗೆಂದ ತಕ್ಷಣ ಅವು ಪರಿಪೂರ್ಣವಲ್ಲ. ಸೌರ ಫಲಕಗಳಲ್ಲಿ ಗಾಜು, ಸಿಲಿಕಾನ್ ಮತ್ತು ಅಲ್ಯುಮಿನಿಯಂನಂಥ ಮರುಬಳಕೆ ವಸ್ತುಗಳ ಜೊತೆಗೆ, ಸೀಸ ಮತ್ತು ಕ್ಯಾಡ್ಮಿಯಂನಂತಹ ಅಪಾಯಕಾರಿ ಭಾರ ಲೋಹಗಳು ಇರುತ್ತವೆ. ಅದೇ ರೀತಿ ಬ್ಯಾಟರಿಗಳಲ್ಲಿ ಲಿಥಿಯಂ, ಕೋಬಾಲ್ಟ್‌, ಮ್ಯಾಂಗನೀಸ್‌, ನಿಕ್ಕಲ್‌, ಅಲ್ಯುಮಿನಿಯಂ, ಕಬ್ಬಿಣ ಮತ್ತು ರಂಜಕ ಇರುತ್ತದೆ. ಬ್ಯಾಟರಿಗಳ ರಾಸಾಯನಿಕ ಸಂಯೋಜನೆ ವಿಭಿನ್ನವಾಗಿರುತ್ತದೆ; ವಿನ್ಯಾಸದಲ್ಲಿನ ಸಂಕೀರ್ಣತೆ ಮತ್ತು ಎಲ್ಲ ವಿಧದ ಬ್ಯಾಟರಿಗಳನ್ನು ಒಂದೆಡೆ ಸಂಸ್ಕರಿಸಬಲ್ಲ ಮೂಲಸೌಕರ್ಯದ ಕೊರತೆಯಿದೆ. ಭೂಭರ್ತಿ ಜಾಗದಲ್ಲಿ ಶೇಖರಿಸಿದ ಬ್ಯಾಟರಿಗಳು ಕಾಲಕ್ರಮೇಣ ಕರಗಿ, ಭಾರ ಲೋಹಗಳನ್ನು ಮಣ್ಣು ಮತ್ತು ಅಂತರ್ಜಲಕ್ಕೆ ತುಂಬುತ್ತವೆ. ಹಾನಿಗೊಳಗಾದ ಇಲ್ಲವೇ ಎಸೆದ ಲಿಥಿಯಂ ಅಯಾನ್ ಬ್ಯಾಟರಿಗಳು ಸ್ವಯಂ ಹೊತ್ತಿಕೊಂಡು, ವಿಷಯುಕ್ತ ಹೊಗೆ ಹೊಮ್ಮಿಸಬಹುದು. ವಿವಿಧ ರಸಾಯನಿಕಗಳು, ಭಾರ ವಾದ ಪ್ಲಾಸ್ಟಿಕ್‌ ಹೊರಕವಚ ಮತ್ತು ಕೈಗಾರಿಕಾ ಅಂಟು ಒಳಗೊಂಡ ಇವಿ ಪ್ಯಾಕ್‌ಗಳನ್ನು ಮಾನವಶಕ್ತಿ ಬಳಸಿ ಕಳಚಲು ಹೆಚ್ಚು ಕಾಲ ಬೇಕಾಗುತ್ತದೆ, ಅಪಾಯಕರ ಮತ್ತು ದುಬಾರಿ. ಕೆಲವೊಮ್ಮೆ ಮರು ಬಳಕೆ ವಸ್ತುಗಳಿಗಿಂತ ಹೊಸ ವಸ್ತು ಅಗ್ಗವಾಗಿರುತ್ತದೆ; ಇದರಿಂದ ಕಂಪನಿಗಳು ಮರುಬಳಕೆಗೆ ಆಸಕ್ತಿ ವಹಿಸುವುದಿಲ್ಲ. ಲೋಹಗಳ ಅಸುರಕ್ಷಿತ ಗಣಿಗಾರಿಕೆಯಿಂದ ಗಣಿಗಳ ಸಮೀಪ ಇರುವವರು ಮತ್ತು ಭೂಮಿ ಮಲಿನಗೊಳ್ಳುತ್ತದೆ. ಇದಕ್ಕೆಲ್ಲ ತಾಂತ್ರಿಕ ಪರಿಹಾರ ಇದೆ. ಹಳೆ ಬ್ಯಾಟರಿಗಳನ್ನು ಸೌರ ವಿದ್ಯುತ್‌ ಸಂಗ್ರಹಿಸಲು ಮತ್ತು ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮರುಬಳಕೆ ಮಾಡಬಹುದು. ಜಡ ದ್ರವ ಗಳಲ್ಲಿ ಕರಗಿಸುವಿಕೆ (ಹೈಡ್ರೋಮೆಟಲರ್ಜಿ) ಮತ್ತು ಯಾಂತ್ರಿಕ ಛಿದ್ರಗೊಳಿಸುವಿಕೆ ಮೂಲಕ ಬ್ಯಾಟರಿಗಳಲ್ಲಿರುವ ಲಿಥಿಯಂ, ಕೋಬಾಲ್ಟ್ ಮತ್ತು ನಿಕ್ಕಲ್‌ನಲ್ಲಿ ಶೇ.95ರಷ್ಟು ಭಾಗದ ಮರುಗಳಿಕೆ ಸಾಧ್ಯವಿದೆ. ಆದರೆ, ಇವೆಲ್ಲಕ್ಕೂ ಅಧಿಕ ವಿದ್ಯುತ್ ಮತ್ತು ದುಬಾರಿ ತಂತ್ರಜ್ಞಾನ ಬೇಕಾಗುತ್ತದೆ.

ದಿಲ್ಲಿಯ ಇವಿ ಆಂದೋಲನ ಯಶಸ್ಸಾಗಲು ಗ್ರಾಹಕ ಜಾಗೃತಿ ಹಾಗೂ ಸರ್ಕಾರದ ಕಾರ್ಯನೀತಿಯ ಬೆಂಬಲ ಅಗತ್ಯ. ಇಲ್ಲವಾದಲ್ಲಿ ಸಾರ್ವಜನಿಕರು ತೆತ್ತ ತೆರಿಗೆ ಹಣ ಇಂಧನ ಪೂರೈಸುವ ಯಜಮಾನರ ಜೇಬು ಸೇರುತ್ತದೆ ಹಾಗೂ ಜನರು ಮಾಲಿನ್ಯದ ಹೊರೆ ಹೊರಬೇಕಾಗುತ್ತದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top