ಕೆನ್-ಬೆಟ್ವಾ ಯೋಜನೆ ಮತ್ತು ಹನೂರಿನ ಹತ್ಯೆಗಳು

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಕಾರರು ನಿರಶನ ಅಂತ್ಯಗೊಳಿಸಿದ್ದಾರೆ. ಅತ್ಯಂತ ಪ್ರಗತಿಪರ ಕಾನೂನು ಎಂಬ ಶ್ಲಾಘನೆಗೊಳಗಾದ ಪರಿಶಿಷ್ಟ ವರ್ಗಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ 2006 ಅಥವಾ ಎಫ್‌ಆರ್‌ಎಯನ್ನು ನ್ಯಾಯಾಲಯಗಳು ಸಮರ್ಪಕವಾಗಿ ವ್ಯಾಖ್ಯಾನಿಸದೆ ಇರುವುದರಿಂದ ಅರಣ್ಯವಾಸಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅರಣ್ಯವಾಸಿಗಳು ಮತ್ತು ಕಾ ಡಂಚಿನಲ್ಲಿ ವಾಸಿಸುವ ಜನರ ಕುರಿತ ನಿರ್ಲಕ್ಷ್ಯದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೂವರು ಬಲಿಯಾಗಿದ್ದಾರೆ.

ಏನಿದು ನದಿ ಜೋಡಣೆ ಯೋಜನೆ?: ರಾಷ್ಟ್ರೀಯ ಮುನ್ನೋಟ ಯೋಜನೆ(ಎನ್‌ಪಿಪಿ)ಯಡಿ ಬರುವ ನದಿ ಜೋಡಣೆ ಯೋಜನೆ(ಎನ್‌ಆರ್‌ಎಲ್‌ಸಿ)ಯಲ್ಲಿ 30 ನದಿಗಳನ್ನು 3,000 ಜಲಾಶಯಗಳ ಮೂಲಕ ಜೋಡಿಸಲು ಉದ್ದೇಶಿಸಲಾಗಿದೆ. 1980ರಲ್ಲಿ ಕೇಂದ್ರ ನೀರಾವರಿ ಮಂತ್ರಾಲಯ ಮತ್ತು ಕೇಂದ್ರೀಯ ಜಲ ಆಯೋಗ ರೂಪಿಸಿದ ಯೋಜನೆ ಪ್ರಕಾರ, ಹೆಚ್ಚು ವರಿ ನೀರು ಲಭ್ಯವಿರುವ ನದಿಗಳಿಂದ ನೀರಿನ ಕೊರತೆ ಇರುವ ನದಿಗಳಿಗೆ ನೀರು ತುಂಬಿಸಲಾಗುತ್ತದೆ. ಎನ್‌ಪಿಪಿಯನ್ನು 2 ಭಾಗವಾಗಿ ವಿಂಗಡಿಸಿದ್ದು, ಹಿಮಾಲಯದ ನದಿಗಳನ್ನು ಜೋಡಿಸುವ 14 ಹಾಗೂ ದಕ್ಷಿಣ ಮತ್ತು ಕೇಂದ್ರೀಯ ಭಾಗದ 16 ನದಿಗಳ ಜೋಡಣೆ ಮಾಡಲಾಗುತ್ತದೆ. 15,000 ಕಿಮೀ ಹೊಸ ನಾಲೆ ಮೂಲಕ ವಾರ್ಷಿಕ 174 ಶತಕೋಟಿ ಘನ ಮೀಟರ್‌ ನೀರು ಸ್ಥಳಾಂತರ ಮಾಡುವ ಉದ್ದೇಶವಿದೆ. ರಾಜ್ಯದಲ್ಲಿ ಈ ಯೋಜನೆಯಡಿ ಬೇಡ್ತಿ-ವರದಾ, ನೇತ್ರಾವತಿ-ಎತ್ತಿನಹೊಳೆ ಮತ್ತು ಅಂತಾರಾಜ್ಯ ಗೋದಾವರಿ-ಕಾವೇರಿ ಸಂಪ ರ್ಕ ಯೋಜನೆಗಳು ಬರುತ್ತವೆ.

ಮಧ್ಯಪ್ರದೇಶದ ಕೆನ್‌ ನದಿಯನ್ನು ಉತ್ತರ ಪ್ರದೇಶದ ಬೆಟ್ವಾಕ್ಕೆ ಜೋಡಿಸುವ ಮೂಲಕ ಬುಂದೇಖಂಡಕ್ಕೆ ನೀರು ಪೂರೈಸುವ ಕೆನ್-ಬೆಟ್ವಾ ಈ ಸರಣಿಯ ಮೊದಲ ಯೋಜನೆ. 20 20-21ರಲ್ಲಿ ಅಂದಾಜು ವೆಚ್ಚ 44,605 ಕೋಟಿ ರೂ. ಪ್ರಧಾನಿ ಡಿಸೆಂಬರ್‌ 2024ರಲ್ಲಿ ಖಜುರಾಹೋದಲ್ಲಿ ಕೆನ್-ಬೆಟ್ವಾ ಹಾಗೂ ದೌಧನ್‌ ಜಲಾಶಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ದೌಧನ್‌ನಲ್ಲಿ ಅಣೆಕಟ್ಟು ನಿರ್ಮಿಸಿ, 221 ಕಿಮೀ ನಾಲೆಗಳ ಮೂಲಕ ಕೆನ್‌ ನದಿಯಿಂದ ಬೆಟ್ವಾಕ್ಕೆ ನೀರು ಹರಿಸಲಾಗುತ್ತದೆ. ಜೊತೆಗೆ, 103 ಮೆಗಾವ್ಯಾಟ್‌ ಜಲ ವಿದ್ಯುತ್‌ ಮತ್ತು 27 ಮೆಗಾವ್ಯಾಟ್‌ ಸೌರ ವಿದ್ಯುತ್‌ ಕೂಡ ಉತ್ಪಾದನೆ ಆಗಲಿದೆ. ಬುಂದೇಲ್‌ಖಂಡದ 12 ಜಿಲ್ಲೆಗಳ 4.4 ದಶಲಕ್ಷ ಹಾಗೂ ಉತ್ತರಪ್ರದೇಶದ 10 ಜಿಲ್ಲೆಗಳ 2 ದಶಲಕ್ಷ ಜನರಿಗೆ ನೀರು ಪೂರೈಕೆ ಆಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಪ್ರತಿಭಟನೆ ಏಕೆ?: ಯೋಜನೆಗೆ ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯ 14 ಗ್ರಾಮಗಳು ಸ್ಥಳಾಂತರವಾಗುತ್ತವೆ. ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳೆಂದರೆ, 12.5 ಲಕ್ಷ ರೂ. ಪುನರ್ವ ಸತಿ ಪ್ಯಾಕೇಜಿಗೆ ಇಡೀ ಕುಟುಂಬವನ್ನು ಒಂದು ಘಟಕ ಎಂದು ಪರಿಗಣಿಸದೆ, ಎಲ್ಲ ವಯಸ್ಕರನ್ನು ಒಂದು ಘಟಕ ಎಂದು ಪರಿಗಣಿಸಬೇಕು; ಕಟ್‌ ಆಫ್‌ ದಿನಾಂಕವನ್ನು ಫೆಬ್ರವರಿ 14,2024ರಿಂದ ಹಾಲಿ ದಿನಾಂಕಕ್ಕೆ ಪರಿಷ್ಕರಿಸಬೇಕು; ರಾಜ್ಯ ಸರ್ಕಾರದ ಮಝಗಾನ್‌ ಮತ್ತು ರಂಝ್‌ ನೀರಾವರಿ ಯೋಜನೆಯ ಸಂತ್ರಸ್ಥರಿಗೂ ಕೆನ್-ಬೆಟ್ವಾದಡಿ ನೀಡುತ್ತಿರುವ ಪ್ಯಾಕೇ ಜ್‌ ನೀಡಬೇಕು; ಈ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಿದ್ದು, ಗ್ರಾಮಸ್ಥರಲ್ಲದವರು ಹಾಗೂ ಬಹಳ ಹಿಂದೆ ಗ್ರಾಮವನ್ನು ತೊರೆದವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿ, ನಿಜವಾದ ಸಂತ್ರಸ್ಥರನ್ನು ಕೈಬಿಡಲಾಗಿದೆ. ಅಂದಾಜು 400 ಕೋಟಿ ರೂ ಭ್ರಷ್ಟಾಚಾರ ನಡೆದಿದೆ; ಯೋಜನೆಗೆ ಆದಿವಾಸಿ ಗ್ರಾಮಸಭೆಗಳಿಂದ ಪಡೆದ ಸಮ್ಮತಿಯಲ್ಲಿ ಕೂಡ ಲೋಪಗಳಿವೆ.

ಜುಲೈ 19ರಂದು ಛತ್ರಪುರ ಜಿಲ್ಲೆಯ ಕುಪಿ ಗ್ರಾಮದ ಬಳಿ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರನ್ನು ಹಾಗೂ 14 ದಿನದಿಂದ ನಿರಶನ ನಡೆಸುತ್ತಿದ್ದ ಜೈ ಕಿಸಾನ್‌ ಸಂಘಟನೆ ಮುಖ್ಯಸ್ಥ ಅಮಿತ್‌ ಭಟ್ನಾಗರ್‌ ಅವರನ್ನು ಪೊಲೀಸರು ಬಂಧಿಸಿದರು. ಪುನರ್ವಸತಿ ಉಪಕ್ರಮಗಳಿಂದ ಕೈಬಿಟ್ಟವರನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಸರ್ಕಾರ ಆಶ್ವಾಸನೆ ನೀಡಿದ ಬಳಿಕ ಭಟ್ನಾಗರ್‌ ಜುಲೈ 23ರಂದು ನಿರಶನ ಅಂತ್ಯಗೊಳಿಸಿದರು. ಸರ್ಕಾರ ಪ್ಯಾಕೇಜ್‌ಗೆ ಹೆಚ್ಚುವರಿ 300 ಕೋಟಿ ರೂ. ನೀಡಲು ಸಮ್ಮತಿಸಿದೆ. ಅರ್ಹ ಫಲಾನುಭವಿಗಳಿಗೆ ನೀಡುವ ಪರಿಹಾರವನ್ನು 5 ಲಕ್ಷದಿಂದ 21.5 ಲಕ್ಷ ರೂ.ಗೆ ಹೆಚ್ಚಿಸಿದೆ. ಆದರೆ, ಆದಿವಾಸಿಗಳು ಮತ್ತು ಪರಿಸರದ ಸಮಸ್ಯೆ ಇಷ್ಟಕ್ಕೆ ಮುಗಿಯುವುದೇ? ಇಲ್ಲ. ಯೋಜನೆಯ ಹೆಚ್ಚಿನ ಭಾಗ ಪನ್ನಾ ಹುಲಿ ಕಾಯ್ದಿಟ್ಟ ಕಾಡಿನಲ್ಲಿ ಬರುತ್ತದೆ. ಜಲಶಕ್ತಿ ಸಚಿವಾಲಯದ ಪ್ರಕಾರ, ದೌಧನ್‌ ಅಣೆಕಟ್ಟಿಗೆ 17,000 ಮರಗಳನ್ನು ಕಟಾವಿಗೆ ಗುರುತಿಸಲಾಗಿದೆ. ಕಾಯ್ದಿಟ್ಟ ಅರಣ್ಯದಲ್ಲಿ ಈಗಾಗಲೇ 12,000 ಮರ ಗಳನ್ನು ಕತ್ತರಿಸಲಾಗಿದೆ. 2009ರಲ್ಲಿ ಪನ್ನಾ ಕಾಯ್ದಿಟ್ಟ ಕಾಡಿನಲ್ಲಿ ಹುಲಿಗಳು ನಾಪತ್ತೆಯಾಗಿದ್ದು ಬೆಳಕಿಗೆ ಬಂದಿತು. ಅಣೆಕಟ್ಟಿನಿಂದ ಹುಲಿಗಳ ಮರುಪರಿಚಯಿಸುವಿಕೆ ಕಾರ್ಯಕ್ರಮಕ್ಕೆ ಧಕ್ಕೆ ಯಾಗಲಿದೆ; ನಿರ್ವಂಶದ ಭೀತಿಯಲ್ಲಿರುವ ಗಿಡುಗ, ಮಹಶೀರ್‌ ಮೀನು ಹಾಗೂ ಕೆನ್‌ ಮೊಸಳೆಧಾಮದ ಮೊಸಳೆಗಳಿಗೂ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಎರಡು ನದಿಗಳ ಜಲಚಕ್ರದ ದತ್ತಾಂಶ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರ ಸಾರ್ವಜನಿಕಗೊಳಿಸಿಲ್ಲ; ಗಂಗಾ ನದಿಪಾತ್ರ ಅಂತಾರಾಷ್ಟ್ರೀಯ ವಿಷಯವಾದ್ದರಿಂದ, ಸೂಕ್ಷ್ಮ ಎಂಬ ಕಾರಣ ನೀಡಿದೆ.

ಅರಣ್ಯ ಕಾಯಿದೆಯ ತಪ್ಪು ವ್ಯಾಖ್ಯಾನ: ಖನಿಜ-ಜಲಸಂಪನ್ಮೂಲವಿರುವ ಕಾಡುಗಳಲ್ಲಿ ನೆಲೆಸಿರುವ ಅರಣ್ಯವಾಸಿಗಳ ಬದುಕು ತೂಗುಯ್ಯಾಲೆಯಲ್ಲಿರುತ್ತದೆ. ಅರಣ್ಯ ಸಂಪನ್ಮೂಲದ ಮೇ ಲಿನ ಅವರ ಹಕ್ಕುಗಳನ್ನು ಖಾತ್ರಿಪಡಿಸಲು ಇರುವ ಕಾಯಿದೆಯನ್ನು ಅರ್ಥೈಸುವಲ್ಲಿ ನ್ಯಾಯಾಲಯಗಳು ವಿಫಲವಾಗಿವೆ. ಎಫ್‌ಆರ್‌ಎ ಅಡಿ ಆದಿವಾಸಿ ಸಮುದಾಯ ಇಲ್ಲವೇ ವ್ಯಕ್ತಿ ಯೊಬ್ಬರು ಅರಣ್ಯ ಹಕ್ಕುಗಳನ್ನು ಹೊಂದಬಹುದು. ಗ್ರಾಮಸಭೆ ಅರ್ಜಿಯನ್ನು ಉಪವಿಭಾಗ ಹಂತದ ಸಮಿತಿ(ಎಸ್‌ಡಿಎಲ್‌ಸಿ)ಗೆ ರವಾನಿಸುತ್ತದೆ. ಸಮಿತಿ ಅರ್ಜಿಯನ್ನು ಪರಿಶೀಲಿಸಿ ಅರಣ್ಯ ಹಕ್ಕುಗಳ ದಾಖಲೆ ಸಿದ್ಧಪಡಿಸಿ, ಜಿಲ್ಲಾ ಹಂತದ ಸಮಿತಿ(ಡಿಎಲ್‌ಸಿ)ಗೆ ಕಳಿಸುತ್ತದೆ. ಜಿಲ್ಲಾ ಹಂತದ ಸಮಿತಿಯ ನಿರ್ಧಾರ ಅಂತಿಮ ಮತ್ತು ಅದರ ಪಾಲನೆ ಕಡ್ಡಾಯ. ಆದರೆ, ಡಿಎಲ್‌ಸಿಗಳು ಮೂಲವಾಸಿಗಳ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ನಿರಾಕರಿಸುತ್ತಿವೆ. 2013ರಲ್ಲಿ ಲಖೀಂಪುರ ಖೇರಿಯ 20 ಗ್ರಾಮಗಳ 3,000 ಕುಟುಂಬಗಳು 20 ಸಾಮುದಾ ಯಿಕ ಅರ್ಜಿಗಳನ್ನು ಸಲ್ಲಿಸಿದವು. ಗ್ರಾಮಸಭೆ ಕಳಿಸಿದ ಅರ್ಜಿಗಳು ಎಸ್‌ಡಿಎಲ್‌ಸಿಯಲ್ಲಿ 6 ವರ್ಷ ಹಾಗೂ ಡಿಎಲ್‌ಸಿಯಲ್ಲಿ 3 ವರ್ಷ ಕೊಳೆತವು. ಡಿಎಲ್‌ಸಿ ದೀರ್ಘ ವಿಳಂಬದ ಬಳಿಕ ಸುಪ್ರೀಂಕೋರ್ಟಿನ ಮಧ್ಯಂತರ ಆದೇಶವನ್ನು ಉಲ್ಲೇಖಿಸಿ, ಮೇ 15,2021ರಲ್ಲಿ ಅರ್ಜಿಗಳನ್ನು ವಜಾಗೊಳಿಸಿತು. ಸಮುದಾಯದ ಸದಸ್ಯರು ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿ ದರು. ʻಕಾಯಿದೆಯ ಉದ್ದೇಶ ಮತ್ತು ವ್ಯಾಪ್ತಿಯನ್ನು ಪರಿಗಣಿಸದೆ, ಡಿಎಲ್‌ಸಿ ಅರಣ್ಯವಾಸಿಗಳ ಹಕ್ಕುಗಳನ್ನು ಹೇಗೆ ನಿರಾಕರಿಸಿತು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲʼ ಎಂದ ಅಲಹಾಬಾದ್‌ ಹೈಕೋರ್ಟಿನ ಲಖ್ನೋ ಪೀಠ ಏಪ್ರಿಲ್‌ 9, 2026ರಂದು ಡಿಎಲ್‌ಸಿ ನಿರ್ಧಾರವನ್ನು ವಜಾಗೊಳಿಸಿತು. ʻಅರ್ಜಿದಾರರು ಇಲ್ಲವೇ ಅವರ ಪ್ರತಿನಿಧಿಗಳ ಅಹವಾಲು ಆಲಿಸಿ, ಕಾನೂನಿನನ್ವಯ ಆದೇಶ ನೀಡಬೇಕುʼ ಎಂದು ಹೇಳಿತು. ಇದೇ ರೀತಿ 2021ರಲ್ಲಿ ಧುದ್ವಾ ಹುಲಿಕಾಡಿನಲ್ಲಿ ಥಾರು ಮೂಲವಾಸಿ ಸಮುದಾಯದ ಅರಣ್ಯ ಹಕ್ಕುಗಳನ್ನು ಜಿಲ್ಲಾ ಹಂತದ ಸಮಿತಿ ತಿರಸ್ಕರಿಸಿತ್ತು. ಇನ್ನೊಂದು ಪ್ರಕರಣದಲ್ಲಿ ಬಾಂಬೆ ಹೈಕೋರ್ಟಿನ ನಾಗಪುರ ಪೀಠವು ಮಹಾರಾಷ್ಟ್ರದ ಅಂಧಾರಿ-ತಡೋಬಾ ಹುಲಿ ಕಾಯ್ದಿಟ್ಟ ಅರಣ್ಯ ಮತ್ತು ಕಾಪು ಪ್ರದೇಶದಲ್ಲಿ ನೆಲೆಸಿದ್ದವರನ್ನು ಸ್ಥಳಾಂತರಿಸುವ ಕುರಿತ ಅರ್ಜಿ ವಿಚಾರಣೆ ವೇಳೆ ರೈತರೊಬ್ಬರ 4 ಎಕರೆ ಭೂಮಿ ಮೇಲಿನ ಹಕ್ಕನ್ನು ಅರಣ್ಯ ಇಲಾಖೆ ನಿರಾಕರಿಸಿದ್ದನ್ನು ಗಮನಿಸಿತ್ತು.

ಲಖ್ನೋ ಪೀಠದ ತೀರ್ಪು ಸಮಸ್ಯೆಯನ್ನು ಬಗೆಹರಿಸಲಿಲ್ಲ; ಬದಲಿಗೆ ಇನ್ನಷ್ಟು ಸಂಕೀರ್ಣಗೊಳಿಸಿದೆ. ನ್ಯಾಯಾಲಯ ಅರಣ್ಯ ಹಕ್ಕು ಕಾಯಿದೆಯನ್ನು ಉಲ್ಲಂಘಿಸಿದ ಡಿಎಲ್‌ಸಿಯನ್ನು ಉತ್ತರದಾಯಿ ಆಗಿಸಬೇಕಿತ್ತು. ಗ್ರಾಮಸಭೆಗಳು ಸೆಕ್ಷನ್‌ 8ರಡಿ ಡಿಎಲ್‌ಸಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸಮಿತಿ(ಎಸ್‌ಎಲ್‌ಸಿ)ಗೆ ದೂರು ನೀಡಬಹುದು ಮತ್ತು 60 ದಿನದೊ ಳಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ನ್ಯಾಯಾಲಯದ ಕದ ತಟ್ಟಲು ಅವಕಾಶವಿದೆ. ಗ್ರಾಮಸಭೆಗೆ ಹಾಗೆ ಮಾಡುವಂತೆ ಸೂಚಿಸಬೇಕಿತ್ತು. ಲಖ್ನೋ ಪೀಠದ ಆದೇಶದಿಂದ ಡಿಎಲ್‌ಸಿಗಳು ಕಾನೂನು ಕ್ರಮದ ಭಯವಿಲ್ಲದೆ ಗ್ರಾಮಸಭೆಗಳ ಅರ್ಜಿಗಳನ್ನು ವಜಾಗೊಳಿಸುವ ಸಾಧ್ಯತೆ ಹೆಚ್ಚಲಿದೆ.

ಎಫ್‌ಆರ್‌ಎ ಮುಂಚೂಣಿಯ ಕಾಯಿದೆ: ಹುಲಿ ಕಾಡು, ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿ ಅಭಯಾರಣ್ಯಗಳಲ್ಲಿ ವಾಸಿಸುವವರ ಅರಣ್ಯ ಹಕ್ಕುಗಳ ನಿರಾಕರಣೆ ಮಾಮೂಲಿ ಯಾಗಿಬಿಟ್ಟಿದೆ. ಅರಣ್ಯ ಇಲಾಖೆ ವಿರೋಧ, ಎಫ್‌ಆರ್‌ಎ ತಪ್ಪು ವ್ಯಾಖ್ಯಾನ ಇಲ್ಲವೇ ಎಫ್‌ಆರ್‌ಎಯನ್ನು ಬದಿಗೆ ಸರಿಸಲು ಬೇರೆ ಕಾಯಿದೆಗಳ ಬಳಕೆ ಇದಕ್ಕೆ ಕಾರಣ. ಅರಣ್ಯಗಳಿಗೆ ಸಂಬಂಧಿಸಿದಂತೆ ಎಫ್‌ಆರ್‌ಎ ಮುಂಚೂಣಿ ಕಾಯಿದೆ; ಅದರ ಎದುರು ಭಾರತೀಯ ಅರಣ್ಯ ಕಾಯಿದೆ 1927, ಅರಣ್ಯ (ಸಂರಕ್ಷಣೆ) ಕಾಯಿದೆ 1980 ಮತ್ತು ವನ್ಯಜೀವಿ(ಸಂರಕ್ಷಣೆ) ಕಾಯಿದೆ 1972ಕ್ಕೆ ಯಾವುದೇ ಮಾನ್ಯತೆಯಿಲ್ಲ. ಮದ್ರಾಸ್‌ ಹೈಕೋರ್ಟಿನ ಮದುರೆ ಪೀಠ 2026ರಲ್ಲಿ ಹುಲಿ ಅರಣ್ಯ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ರಾಸುಗಳ ಮೇಯಿಸುವಿಕೆಯನ್ನು ನಿಷೇಧಿಸಿದ್ದ ಮಾರ್ಚ್‌ 2022ರ ಆದೇಶವನ್ನು ಮರುಪರಿಶೀಲಿಸುವಾಗ, ತಮಿಳುನಾಡು ಅರಣ್ಯ ಕಾಯಿದೆ 1982ರ ಸೆಕ್ಷನ್‌ 57ರಡಿ ಮೇಯಿಸುವಿಕೆಗೆ ನಿಷೇಧ ಹೇರಲಾಗಿತ್ತು ಎಂಬುದನ್ನು ಗಮನಿಸಿತು. 2022ರ ತೀರ್ಪು ಅಸಮರ್ಪಕ; ಏಕೆಂದರೆ, ಎಫ್‌ಆರ್‌ಎ ಕೇಂದ್ರೀಯ ಶಾಸನವಾಗಿದ್ದು, ರಾಜ್ಯದ ಕಾನೂನನ್ನು ರದ್ದುಗೊಳಿಸುತ್ತದೆ ಹಾಗೂ ಎಫ್‌ಆರ್‌ಎ ಇತ್ತೀಚಿನ ಕಾಯಿದೆ; ಅದು ಬೇರೆಲ್ಲ ಕಾಯಿದೆಗಳನ್ನು ಅಮಾನ್ಯಗೊಳಿಸುತ್ತದೆ.

ಒಂದು ಲೋಪವೆಂದರೆ, ಎಫ್‌ಆರ್‌ಎ ಗ್ರಾಮಸಭೆಗೆ ಹೆಚ್ಚು ಅಧಿಕಾರ ನೀಡುವ ಬದಲು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಹೆಚ್ಚು ಅಧಿಕಾರ ನೀಡಿದೆ. ಗ್ರಾಮಸಭೆ ನಿರ್ಧಾರವನ್ನು ವಿಭಾಗ ಸಮಿತಿಯಲ್ಲಿ ಹಾಗೂ ವಿಭಾಗ ಸಮಿತಿ ನಿರ್ಣಯವನ್ನು ಜಿಲ್ಲಾ ಸಮಿತಿಯಲ್ಲಿ ಪ್ರಶ್ನಿಸಬಹುದು. ಆದರೆ, 90 ದಿನದೊಳಗೆ ಪ್ರಶ್ನಿಸಬೇಕು; ಪ್ರತಿಯಾಗಿ, ವಿಭಾಗ ಮತ್ತು ಜಿಲ್ಲಾ ಸಮಿತಿಗಳು ಅರ್ಜಿಯನ್ನು ಎಷ್ಟು ದಿನದೊಳಗೆ ಬಗೆಹರಿಸಬೇಕು ಎಂಬ ಶರತ್ತು ವಿಧಿಸಿಲ್ಲ. ಇದರಿಂದ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಅರ್ಜಿಗಳು ವಿಲೇವಾರಿಯಾಗದೆ ಉಳಿದು ಕೊಂಡಿವೆ. ಆದಿವಾಸಿ ವ್ಯವಹಾರಗಳ ಮಂತ್ರಾಲಯದ ಪ್ರಕಾರ, 2026ರಲ್ಲಿ 7 ಲಕ್ಷ ಅರ್ಜಿಗಳು ಬಾಕಿ ಉಳಿದುಕೊಂಡಿದ್ದವು. ಜಿಲ್ಲಾ ಸಮಿತಿ ನಿರ್ಧಾರವನ್ನು ಪ್ರಶ್ನಿಸಲು ಮೇಲ್ಮನವಿ ಪ್ರಾಧಿಕಾರವೊಂದು ಇಲ್ಲದೆ ಇರುವುದು ಇನ್ನೊಂದು ಕೊರತೆ. ಸಂತ್ರಸ್ಥರು ಹೈಕೋರ್ಟಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ದೂರ ಪ್ರದೇಶದ ವನವಾಸಿಯೊಬ್ಬರು ಹೈಕೋರ್ಟಿಗೆ ಅರ್ಜಿ ಸಲ್ಲಿ ಸುವುದು, ವಿಚಾರಣೆಗೆ ಅಲೆದಾಡುವುದು ಸಾಧ್ಯವಿದೆಯೇ? ಇದಕ್ಕೆ ಬೇಕಿರುವ ಹಣ ಎಲ್ಲಿಂದ ತರುತ್ತಾರೆ? ಇದನ್ನು ತಪ್ಪಿಸಲು ಅರಣ್ಯ ಹಕ್ಕುಗಳ ಮೇಲ್ಮನವಿ ನ್ಯಾಯಾಧಿಕರ ಣ(ಎಫ್‌ ಒಆರ್‌ಎಟಿ)ದ ರಚನೆ ಆಗಬೇಕಿದೆ. ಅದು ಜನರಿಗೆ ಸ್ವತಂತ್ರ/ನೇರ ವೇದಿಕೆ ಒದಗಿಸುತ್ತದೆ.

ವಿಳಂಬದಿಂದ ಕಂಟಕ: 2007ರಲ್ಲಿ ಎಫ್‌ಆರ್‌ಎ ಜಾರಿಯಾದ ಬಳಿಕ ಕಾಯಿದೆಯ ಶಾಸನಬದ್ಧತೆಯನ್ನು ಪ್ರಶ್ನಿಸಿ ಹಲವು ರಾಜ್ಯಗಳ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟಿನಲ್ಲಿ ನಿವೃ ತ್ತ ಅರಣ್ಯಾಧಿಕಾರಿಗಳು ಮತ್ತು ಸಂಸ್ಥೆಗಳು ಅನೇಕ ಪ್ರಕರಣಗಳನ್ನು ದಾಖಲಿಸಿದವು. ಜನವರಿ 2015ರಲ್ಲಿ ಈ ಎಲ್ಲ ಪ್ರಕರಣಗಳನ್ನು ಒಗ್ಗೂಡಿಸಿ, ಸುಪ್ರೀಂ ಕೋರ್ಟಿಗೆ ವರ್ಗಾಯಿಸ ಲಾಯಿತು; ವೈಲ್ಡ್‌ಲೈಫ್‌ ಫರ್ಸ್ಟ್‌ ಮತ್ತು ಇತರರು ವಿ/ಎಸ್‌ ಭಾರತ ಸರ್ಕಾರ ಮತ್ತು ಇತರರು ಪ್ರಕರಣದ ವಿಚಾರಣೆ ದಶಕದಿಂದ ನಡೆಯುತ್ತಿದೆ. ವಿಳಂಬದಿಂದ ಅರಣ್ಯ ಹಕ್ಕು ತಿರಸ್ಕರಿಸಲ್ಪಟ್ಟ 20 ಲಕ್ಷಕ್ಕೂ ಅಧಿಕ ಆದಿವಾಸಿಗಳು ನರಳುತ್ತಿದ್ದಾರೆ. ಆದಿವಾಸಿಗಳು ಶತಮಾನಗಳಿಂದ ಶೋಷಣೆಗೀಡಾಗಿದ್ದು, ಅರಣ್ಯ ಕಾಯಿದೆಯನ್ನು ಅಕ್ಷರಶಃ ಅನುಷ್ಠಾನಗೊಳಿಸುವ ಮೂಲಕ ಚಾರಿತ್ರಿಕ ಲೋಪವನ್ನು ಸರಿಪಡಿಸಬೇಕಿದೆ. ಎಫ್‌ಆರ್‌ಎಗೆ ಅನುಗುಣವಾಗಿಲ್ಲದ ಎಲ್ಲ ಕಾಯಿದೆ ಹಾಗೂ ನ್ಯಾಯಾಲಯದ ಆದೇಶಗಳನ್ನು ಅನೂರ್ಜಿತಗೊಳಿಸುವುದು, ವಿಚಾರಣೆ ಹಾಗೂ ಹೈಕೋರ್ಟ್‌ ನ್ಯಾಯಾಧೀಶರಿಗೆ ಎಫ್‌ಆರ್‌ಎ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕಾನೂನನ್ನು ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿ ಕೋನದಲ್ಲಿ ನೋಡುವ ಸಾಮರ್ಥ್ಯ ಬೆಳೆಸಬೇಕಿದೆ. ಜೊತೆಗೆ, ಎಫ್‌ಆರ್‌ಎ ಉಲ್ಲಂಘನೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಆಗಬೇಕಿದೆ.

ಅಭಿವೃದ್ಧಿ ಯೋಜನೆಗಳಿಂದ ಸ್ಥಳಾಂತರಗೊಂಡವರ ಪುನರ್ವಸತಿ ನಿರಾಶಾದಾಯಕವಾಗಿದೆ. 1985ರಲ್ಲಿ ಮೇಧಾ ಪಾಟ್ಕರ್‌ ಮತ್ತು ಬಾಬಾ ಆಮಟೆ ನೇತೃತ್ವದಲ್ಲಿ ಆರಂಭಗೊಂಡ ನರ್ಮದಾ ಬಚಾವೋ ಆಂದೋಲನದಿಂದ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣ ನಿಲ್ಲಲಿಲ್ಲ. ಯೋಜನೆಗೆ ಸರ್ಕಾರದ ಬೆಂಬಲವಿತ್ತು ಮತ್ತು ನ್ಯಾಯಾಲಯಗಳ ತೀರ್ಪು ಆಂದೋಲನಕ್ಕೆ ಪೂರಕವಾಗಿರಲಿಲ್ಲ. ಆದರೆ, ಆಂದೋಲನ ಪುನರ್ವಸತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಎತ್ತಿತು ಮತ್ತು ಜನರಲ್ಲಿ ಜಾಗೃತಿ ಮೂಡಿಸಿತು. ಸ್ವಾತಂತ್ರ್ಯಾನಂತರ ಅಭಿವೃದ್ಧಿ ಯೋಜನೆಗಳಿಂದ ಅಂದಾಜು 60-70 ದಶಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಶೇ.40ರಷ್ಟು ಆದಿವಾಸಿಗಳು. ಸ್ಥಳಾಂತರಗೊಂಡವರಲ್ಲಿ ಶೇ.25-30 ಮಂದಿಗೆ ಮಾತ್ರ ಸಮರ್ಪಕ ಪುನರ್ವಸತಿ ಲಭ್ಯವಾಗಿದೆ. ಉಳಿದವರು ಚೆಲ್ಲಾಡಿ ಹೋಗಿ, ನಗರಗಳ ಕೊಳೆಗೇರಿಗಳಲ್ಲಿ ನೆಲೆ ನಿಂತಿದ್ದಾರೆ. ಕೆನ್‌-ಬೆಟ್ವಾ ಯೋಜನೆಗೆ ಜಮೀನು ನೀಡಿದವರಿಗೆ ಸರ್ಕಾರ ಪರಿಹಾರ ಕೊಟ್ಟಿದೆ. ನಿಜ. ಆದರೆ, ಸ್ಥಳಾಂತರಗೊಳ್ಳುವ ಆದಿವಾಸಿಗಳು ಮತ್ತು ಬಿಡದಿಯಲ್ಲಿ ಟೌನ್‌ಶಿಪ್‌ಗೆ ಜಮೀನು ಕೊಡುವ ರೈತರು ಎಲ್ಲಿಗೆ ಹೋಗುತ್ತಾರೆ? ನಮಗೆ ವಿದ್ಯುತ್‌ ಬೇಕು; ನೀರು ಬೇಕು; ಇದಕ್ಕಾಗಿ ಅಣೆಕಟ್ಟು- ಜಲವಿದ್ಯುತ್‌ ಯೋಜನೆ ನಿರ್ಮಿಸಬೇಕು. ಆದರೆ, ದೇಶದ ಅಭಿವೃದ್ಧಿಗೆ ಅರಣ್ಯವಾಸಿಗಳು ಮತ್ತು ರೈತರೇ ಏಕೆ ತ್ಯಾಗ ಮಾಡಬೇಕು ಎನ್ನುವುದು ಉತ್ತರ ಸಿಗದ ಪ್ರಶ್ನೆ.

ಕೊನೆಗೆ………….ಕಾಡು ಮತ್ತು ಕಾಡಂಚಿನಲ್ಲಿ ನೆಲೆಸಿದವರ ಸಮಸ್ಯೆ ಒಂದೆರಡಲ್ಲ; ಕಾಡಂಚಿನ ಕೃಷಿಕರ ಬೆಳೆಗಳು ವನ್ಯಮೃಗಗಳ ಪಾಲಾಗುತ್ತವೆ. ಬೆಳೆ ನಾಶಕ್ಕೆ ಸರ್ಕಾರ ನೀಡುವ ಬಿಡಿಗಾಸು ಪರಿಹಾರ ತಕ್ಷಣ ಸಿಗುವುದಿಲ್ಲ ಇಲ್ಲವೇ ಸಿಗುವುದೇ ಇಲ್ಲ. ಅರಣ್ಯದ ಕಿರುಉತ್ಪನ್ನಗಳನ್ನು ಆಧರಿಸಿ ಬದುಕುವವರು ಒಂದು ಕಡೆ ವನ್ಯಜೀವಿಗಳಿಂದ ಮತ್ತು ಇನ್ನೊಂದು ಕಡೆ ಅರಣ್ಯ ಇಲಾಖೆಯಿಂದ ನಾನಾ ಕಾಟ ಎದುರಿಸುತ್ತಾರೆ. ಹನೂರಿನಲ್ಲಿ ಕಾಡಿಗೆ ತೆರಳಿದವರ ಮೇಲೆ ಗುಂಡು ಹಾರಿಸಿದವರು ಮತ್ತು ಹಾರಿಸಲು ಆದೇಶ ನೀಡಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದರಲ್ಲಿ ರಾಜಕೀಯ ತರುವವರ ಎದೆಯಲ್ಲಿ ಮಾನವೀಯತೆಯ ಪಸೆ ಆರಿಹೋಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.

Journalist,Translator,avid bibliophile

Leave a Reply

Your email address will not be published. Required fields are marked *

Back To Top