ಉದ್ಯಾನ ಕಾಯಿದೆ: ನಗರದ ನಾಶಕ್ಕೆ ಮುನ್ನುಡಿ

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೇ ಸರ್ಕಾರ ರಾಜ್ಯದ ಉದ್ಯಾನಗಳ ನಾಶಕ್ಕೆ ಮುನ್ನುಡಿ ಬರೆಯುವ ಕರ್ನಾಟಕ ಸರ್ಕಾರಿ ಉದ್ಯಾನ ಗಳ(ಸಂರಕ್ಷಣೆ) ಕಾಯಿದೆ 1975ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಜೊತೆಗೆ, ಬೆಂಗಳೂರು ಮೆಟ್ರೋಪಾಲಿಟನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (ತಿದ್ದುಪಡಿ) ಕಾಯಿದೆ 2026ರ ಮೂಲಕ ಅಧಿಕ ವೆಚ್ಚದ ಮೂಲಸೌಲಭ್ಯ ಯೋಜನೆಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ; ಮೂರು ಸುರಂಗ ಯೋಜನೆ, 9 ಫ್ಲೈಓವರ್‌ ಹಾಗೂ 2 ಎತ್ತರದ ಕಾರಿಡಾರ್‌ ಯೋಜನೆಗಳಿಗೆ ಈ ಕಾಯಿದೆಯಿಂದ ವಿನಾಯಿತಿ ದೊರೆಯಲಿದೆ.

1975ರ ಕಾಯಿದೆಯನ್ನು ಉದ್ಯಾನಗಳನ್ನು ರಕ್ಷಿಸಲು ರೂಪಿಸಲಾಗಿತ್ತು. ಈ ಕಾಯಿದೆಯ ಸೆಕ್ಷನ್‌ 4(2) ಉದ್ಯಾನಗಳ ಪರಭಾರೆಗೆ ಅವಕಾಶ ನೀಡುವುದಿಲ್ಲ. ತಿದ್ದುಪಡಿ ಕಾಯಿದೆ ಪ್ರಕಾರ, 240 ಎಕರೆ ವಿಸ್ತೀರ್ಣದ ಲಾಲ್‌ಬಾಗಿನ 12 ಎಕರೆ ಭೂಮಿಯನ್ನು ಸರ್ಕಾರ ಬಳಸಿಕೊಳ್ಳಲು ಅವಕಾಶವಿದೆ. ʻಭೂಮಿ ವರ್ಗಾವಣೆʼ ಯನ್ನು ಸರ್ಕಾರದ ಇಲಾಖೆಗಳಿಗೆ ಮಾತ್ರ ಅನ್ವಯಿಸಬಹುದು ಎಂಬ ಶರತ್ತು ಇದೆ; ಆದರೆ, ಅದು ಇಂಥ ಹಸ್ತಾಂತರದಿಂದ ಆಗುವ ಹಸಿರಿನ ನಷ್ಟವನ್ನು ಭರಿಸುವುದಿಲ್ಲ. 1975ರ ಕಾಯಿದೆಯನ್ನು 1976, 1982, 2003, 2010, 2011, 2013 ಹಾಗೂ 2024ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಎಲ್ಲ ತಿದ್ದುಪಡಿಗಳು ನಿರ್ದಿಷ್ಟ ಉದ್ದೇ ಶಕ್ಕಾಗಿ ಆದಂಥವು; 2013ರ ತಿದ್ದುಪಡಿಯನ್ನು ವಿಧಾನಸೌಧ/ವಿಕಾಸಸೌಧದ ನಿರ್ವಹಣೆ/ದುರಸ್ತಿ ಮತ್ತು 2024ರ ತಿದ್ದುಪಡಿಯನ್ನು ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಡ ಲಾಗಿತ್ತು. ಆದರೆ, 2026ರ ಕಾಯಿದೆಯು ಮೂಲಸೌಲಭ್ಯ ನಿರ್ಮಾಣಕ್ಕೆ ಶೇ.5ರಷ್ಟು ಉದ್ಯಾನಗಳ ಭೂಮಿಯನ್ನು ನೀಡುವ ಉದ್ದೇಶ ಹೊಂದಿದೆ; ಜೊತೆಗೆ, ಮುಂದೆ ಇನ್ನಷ್ಟು ಭೂಮಿಯ ಅಗತ್ಯ ಎದುರಾದಲ್ಲಿ ಕೊಡಲು ಕಾಯಿದೆಗೆ ಮತ್ತೊಂದು ತಿದ್ದುಪಡಿ ಮಾಡುವ ಅಗತ್ಯ ಇರುವುದಿಲ್ಲ. ಸರ್ಕಾರ ಈ ಹಿಂದೆ ಕೆರೆ ಹಾಗೂ ಮಳೆನೀರು ಕಾಲುವೆಗಳ ಸುತ್ತಲಿನ ಕಾಪು ಪ್ರದೇಶವನ್ನು ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ರಾಜಧಾನಿಯಲ್ಲಿ ಕೆರೆ-ಉದ್ಯಾನಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಇನ್ನೊಂದು ಕಾನೂನು ಹೊರಬಂದಿದೆ.

ಇಡೀ ರಾಜ್ಯಕ್ಕೆ ಅನ್ವಯ: ಕಾಯಿದೆಯು ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನಕ್ಕೆ ಸೀಮಿತವಾಗಿರದೆ, ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಉದ್ಯಾನ/ತೋಟಗಳ ಭೂಮಿಯನ್ನು ನಿರ್ದಿಷ್ಟ ಯೋಜನೆಗೆ ಮಾರಾಟ, ಗುತ್ತಿಗೆ, ದಾನ, ವಿನಿಮಯ ಅಥವಾ ಅಡಮಾನಕ್ಕೆ ಇಡುವ ಅವಕಾಶ ನೀಡುತ್ತದೆ. ಇಂಥ ಪ್ರಸ್ತಾವಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಣತರ ಸಮಿತಿ ಪರಿಶೀಲಿಸಬೇಕು ಎಂಬ ಶರತ್ತು ವಿಧಿಸ ಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಯೋಜನೆಗಳ ಹೆಸರಿನಲ್ಲಿ ಸರ್ಕಾರವೇ ಉದ್ಯಾನಗಳ ಅತಿಕ್ರಮಣ ನಡೆಸುವ ಸಾಧ್ಯತೆ ಇದೆ. ಕಬ್ಬನ್‌ ಉದ್ಯಾನ ಇದಕ್ಕೊಂದು ಜ್ವಲಂತ ನಿದರ್ಶನ. 300 ಎಕರೆ ಹರಡಿ ಕೊಂಡಿದ್ದ ಉದ್ಯಾನವೀಗ ರಾಜ್ಯಪಾಲರ ನಿವಾಸ, ಶಾಸಕರ ಭವನ, ವಾಹನ ನಿಲುಗಡೆ ಮತ್ತು ಇನ್ನಿತರ ಉದ್ದೇಶಕ್ಕೆ ಭೂಮಿ ನೀಡಿದ್ದರಿಂದ, 197 ಎಕರೆಗೆ ಕುಸಿದಿದೆ. ಲಾಲ್‌ಬಾಗಿನ 1,135 ಚದರ ಮೀಟರ್‌ ಜಾಗವನ್ನು ಮೆಟ್ರೋ ಮಾರ್ಗ ನಿರ್ಮಾಣಕ್ಕೆ ನೀಡಲಾಗಿತ್ತು.

ರಾಜ್ಯದಲ್ಲಿ 5,000 ಪಾರ್ಕ್‌ಗಳಿವೆ. ತೋಟಗಾರಿಕೆ ಇಲಾಖೆಯಡಿ 27 ಉದ್ಯಾನ/ಸಸ್ಯವಿಜ್ಞಾನ ಉದ್ಯಾನಗಳಿದ್ದು, 1,287 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ರಾಜ್ಯದಲ್ಲಿ 2011ರ ಬಳಿಕ 6 ಉದ್ಯಾನ ಗಳನ್ನು ಅಭಿವೃದ್ಧಿಗೊಳಿಸಲಾಗಿದೆ; ಡಾ.ಎಂ.ಎಚ್‌. ಮರೀಗೌಡ ಸಸ್ಯಸಂರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ(ಕೊರಟಗೆರೆ), ಲಿಂಗಾಂಬುಧಿ ಸಸ್ಯವಿಜ್ಞಾನ ಉದ್ಯಾನ(ಮೈಸೂರು), ತೆರೆಕಾನಹಳ್ಳಿ ಸಸ್ಯವಿಜ್ಞಾನ ಉದ್ಯಾನ(ಸಿರ್ಸಿ), ಅಟಲ್‌ ಬಿಹಾರಿ ವಾಜಪೇಯಿ ಸಸ್ಯವಿಜ್ಞಾನ ಉದ್ಯಾನ(ಕೋರಮಂಗಲ), ವಿಶ್ವೇಶ್ವರಯ್ಯ ಸಸ್ಯವಿಜ್ಞಾನ ಉದ್ಯಾನ(ಚಿಕ್ಕಬಳ್ಳಾಪುರ) ಮತ್ತು ಲಾಲ್‌ಬಾಗ್‌. ಇನ್ನಿತರ ಉದ್ಯಾನಗಳೆಂದರೆ, ರೋರಿಕ್‌ ಎಸ್ಟೇಟ್‌ ರೋಸ್‌ ಗಾರ್ಡನ್‌, ಪೂರ್ವ ಲಾಲ್‌ಬಾಗ್‌, ದೊಡ್ಡ ಆಲದ ಮರ, ಬೃಂದಾವನ ಉದ್ಯಾನ(ಮಂಡ್ಯ), ಕರ್ಜನ್‌ ಉದ್ಯಾನ(ಮೈಸೂರು), ನಂದಿ ಬೆಟ್ಟ(ಚಿಕ್ಕಬಳ್ಳಾಪುರ) ಮತ್ತು ರಾಜಾಸೀಟ್(ಮಡಿಕೇರಿ). ರಾಜಧಾನಿಯಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 2(ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್; 437 ಎಕರೆ)‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ 1,353(1,350 ಎಕರೆ) ಉದ್ಯಾನಗಳಿವೆ. ಮತ್ತಿಕೆರೆಯ ಜೆ.ಪಿ. ಉದ್ಯಾನ(85 ಎಕರೆ), ಸ್ವಾತಂತ್ರ್ಯ ಉದ್ಯಾನ(ಫ್ರೀಡಂ ಪಾರ್ಕ್) ಮತ್ತು ಬಸವನಗುಡಿಯ ಎಂ.ಎನ್‌.ಕೃಷ್ಣರಾವ್‌ ಉದ್ಯಾನಗಳು ತಲಾ 20 ಎಕರೆ ಇವೆ.‌ ಹೀಗಿ ದ್ದರೂ, 1970ರಲ್ಲಿ ಶೇ.70ರಷ್ಟಿದ್ದ ಹಸಿರು ಹೊದಿಕೆ ಶೇ.3ಕ್ಕೆ ಇಳಿದಿದೆ. ಸರ್ಕಾರ ಹಾಗೂ ಖಾಸಗಿ ವ್ಯಕ್ತಿ-ಸಂಸ್ಥೆಗಳಿಂದ ಗೋಮಾಳ, ಕೆರೆಕಟ್ಟೆ, ರಾಜಕಾಲುವೆ ಮತ್ತು ಸರ್ಕಾರಿ ಭೂಮಿ ಒತ್ತುವರಿ ಯಾಗಿದೆ. ಈಗ ಉದ್ಯಾನಗಳ ಸರದಿ. ಒಂದುವೇಳೆ ಉದ್ಯಾನಗಳ ಶೇ.5ರಷ್ಟು ಭೂಮಿ ಕಸಿದುಕೊಂಡರೆ, 70-100 ಎಕರೆ ಹಸಿರು ಪ್ರದೇಶ ಕಣ್ಮರೆಯಾಗುತ್ತದೆ.

ತೀವ್ರ ನಗರೀಕರಣ: ಮಾಗಡಿ ಒಂದನೇ ಕೆಂಪೇಗೌಡರು ಕಟ್ಟಿದ ಬೆಂಗಳೂರು ಪೇಟೆಯ ವಿಸ್ತೀರ್ಣ 2.24 ಚದರ ಕಿಮೀ ಇದ್ದಿತ್ತು; 1537ರಲ್ಲಿ. ನಾಲ್ಕು ದಿಕ್ಕುಗಳಲ್ಲಿ ಲಾಲ್‌ಬಾಗ್‌, ಕೆಂಪಾಂಬುಧಿ ಕೆರೆ, ಮೇಖ್ರಿ ವೃತ್ತ ಮತ್ತು ಅಲಸೂರು ಕೆರೆ ಇದ್ದವು. ಆದರೆ, ಈಗ ಬೆಂಗಳೂರು ನಗರ ಜಿಲ್ಲೆ ವಿಸ್ತೀರ್ಣ 2,196 ಚದರ ಕಿಮೀ(ಜನವರಿ ಹಾಗೂ ಏಪ್ರಿಲ್‌ 2007ರಲ್ಲಿ ಸೇರ್ಪಡೆಯಾದ 110 ಗ್ರಾಮಗಳು ಮತ್ತು ಆನೇಕಲ್‌ ಸೇರಿ). ದೇಶದ ಪ್ರಮುಖ ನಗರಗಳು ಸ್ಥಿತ್ಯಂತರಗೊಳ್ಳುತ್ತಿರುವ ವೇಗ ಗಾಬರಿ ಹುಟ್ಟಿಸುತ್ತದೆ. ರಾಜಧಾನಿಯಲ್ಲಿ ಸಾಲುಮರಗಳಿದ್ದ ರಸ್ತೆಗಳು, ಕೆರೆ-ಕಟ್ಟೆ, ಚೌಗುಪ್ರದೇಶ, ಉದ್ಯಾನಗಳು ಅಭಿವೃದ್ಧಿಗೆ ಬಲಿಯಾಗಿವೆ. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ 1973 ರಿಂದ 2013ರ ಅವಧಿಯಲ್ಲಿ ನಿರ್ಮಿತ ಪ್ರದೇಶ(ಬಿಲ್ಟ್‌ ಅಪ್‌ ಏರಿಯಾ)ದ ಪ್ರಮಾಣ ಶೇ.7.9ರಿಂದ ಶೇ.73.72ಕ್ಕೆ ಹೆಚ್ಚಿದೆ; ಪ್ರತಿಯಾಗಿ, ಹಸಿರು ತಾಣಗಳ ವಿಸ್ತೀರ್ಣ ಶೇ.68.27 ರಿಂದ ಶೇ.14.69ಕ್ಕೆ ಕುಸಿದಿದೆ. 1970ರಲ್ಲಿ ಶೇ.70 ರಿಂದ ಶೇ.78ರಷ್ಟಿದ್ದ ಮರಗಳಿಂದ ಆವರಿಸಲ್ಪಟ್ಟಿದ್ದ ಪ್ರದೇಶದ ಪ್ರಮಾಣ ಈಗ ಶೇ.3ಕ್ಕೆ ಕುಸಿದಿದೆ. ಇದರೊಟ್ಟಿಗೆ, ಜಲಮೂಲಗಳ ಪ್ರಮಾಣ ಶೇ.3.4 ರಿಂದ ಶೇ.0.65ಕ್ಕೆ ಇಳಿದಿದೆ. ಕೆರೆ ಕಟ್ಟೆ, ಉದ್ಯಾನ ಮತ್ತಿತರ ಸಾರ್ವಜನಿಕ ತಾಣಗಳು ರಸ್ತೆ, ಕಟ್ಟಡ, ವಾಣಿಜ್ಯಿಕ ಅಭಿವೃದ್ಧಿಯಿಂದ ಒತ್ತಡಕ್ಕೆ ಒಳಗಾಗಿವೆ. ಇದೆಲ್ಲದರ ಪರಿಣಾಮ ಎಂಬಂತೆ ಕಳೆದ ಕೆಲವು ವರ್ಷಗಳಿಂದ ಉಷ್ಣಾಂಶ ಹೆಚ್ಚಳ, ತೀವ್ರ ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಪ್ರವಾಹ ಹೆಚ್ಚಿ ದೆ. ʻಅರ್ಬ‌ನ್‌ ಕ್ಲೈಮೇಟ್ʼ(ScienceDirect.com; ಪ್ರಕಾಶಕರು https://www.elsevier.com) ನಲ್ಲಿ ಪ್ರಕಟಗೊಂಡ ಬೆಂಗಳೂರಿನ ನೆಲದ ಮೇಲ್ಮೈ ತಾಪಮಾನ ಕುರಿತ ಸಂಶೋಧನೆ ಪ್ರಕಾರ, ಶುಷ್ಕ ಹಾಗೂ ಆರ್ದ್ರ ವಾತಾವರಣದಲ್ಲೂ ಸಸ್ಯರಾಶಿಗಳು ತಾಪಮಾನವನ್ನು ನಿಯಂತ್ರಿಸುತ್ತವೆ. ಬೆಂಗಳೂರಿನ 262 ಹಸಿರುತಾಣಗಳಲ್ಲಿ ನಡೆದ ಅಧ್ಯಯನದಲ್ಲಿ ಈ ತಾಣಗಳು ಸುತ್ತಲಿಗಿಂತ 2.23 ಡಿಗ್ರಿ ಸೆ. ತಂಪಾಗಿದ್ದವು ಮತ್ತು ತಂಪುಗೊಳಿಸುವಿಕೆ ಪರಿಣಾಮವು 347 ಮೀಟರ್‌ವರೆಗೆ ವ್ಯಾಪಿ ಸಿತ್ತು. ಉದ್ಯಾನ ಎಂದರೆ ಬರಿ ಗಿಡ-ಮರ, ಜೂಟಾಟ-ರೀಲ್ಸ್‌ ಅಲ್ಲ; ಅವುಗಳಿಗೆ ಭಾವನಾತ್ಮಕ-ಮಾನಸಿಕ ಮೌಲ್ಯ ಇದೆ. ಹಸಿರಿಗೆ ಒಡ್ಡಿಕೊಳ್ಳುವುದರಿಂದ ಆತಂಕ, ಒತ್ತಡ, ಖಿನ್ನತೆ ಮತ್ತು ಲಕ್ಷ್ಯ ಹರಿಸುವಿಕೆ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ; ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ) ರೂಪಿಸಿರುವ ನೇಚರ್‌ ರಿಲೇಷನ್‌ಶಿಪ್‌ ಸೂಚ್ಯಂಕವು ಸ್ವಾಭಾವಿಕ ಜಗತ್ತಿನೊಡನೆ ಮನುಷ್ಯರ ಸಂಬಂಧ ಹೇಗಿದೆ ಎಂಬುದನ್ನು ಗಮನಿಸುವ ಮೂಲಕ ಮಾನವಾಭಿವೃದ್ಧಿಯನ್ನು ವಿಶಾಲಗೊಳಿಸುವ ಉದ್ದೇಶ ಹೊಂದಿದೆ.

ಭೂಮಿ ಪರಭಾರೆ ಹೆಚ್ಚಳ ಸಾಧ್ಯತೆ: 1991ರ ಬಳಿಕ ತೋಟಗಾರಿಕೆ ಇಲಾಖೆ 757.13 ಎಕರೆ ಜಾಗವನ್ನು ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ನೀಡಿದೆ; ಇದರಲ್ಲಿ ಬೆಂಗ ಳೂರಿನ 54.9 ಎಕರೆ (‌ಲಾಲ್ ಬಾಗ್‌, ಕಬ್ಬನ್‌ ಪಾರ್ಕ್‌, ಇಂದಿರಾಗಾಂಧಿ‌ ಸಂಗೀತ ಕಾರಂಜಿ, ವಿಧಾನಸೌಧದ ಉದ್ಯಾನ, ಹೈಕೋರ್ಟ್‌ ರಸ್ತೆ ವಿಸ್ತರಣೆ, ಮೆಟ್ರೋ ನಿಲ್ದಾಣ ಮತ್ತು ಮಹಾತ್ಮಾ ಗಾಂಧಿ ಪ್ರತಿಮೆ ಸ್ಥಾಪನೆ) ಸೇರಿದೆ. ಜಗದೀಶ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರವು ಕೋಲಾರ ಜಿಲ್ಲೆ ಹೊಗಳಗೆರೆಯ 148.2 ಎಕರೆ ಭೂಮಿಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಹಾಗೂ ಸಿದ್ದರಾಮಯ್ಯ ಅವರು ಸೆಪ್ಟೆಂಬರ್‌ 2024ರಲ್ಲಿ ಚಿಂತಾಮಣಿ ತಾಲೂಕಿನ ಸೊಣ್ಣಶೆಟ್ಟಿಹಳ್ಳಿ ತೋಟಗಾರಿಕೆ ಕೇಂದ್ರದ 4 ಎಕರೆ ಭೂಮಿಯನ್ನು ಕ್ರಿಕೆಟ್‌ ಅಂಕಣ ನಿರ್ಮಿಸಲು ಯುವಸಬಲೀಕರಣ ಹಾಗೂ ಕೃಷಿ ಇಲಾಖೆಗೆ ನೀಡಿದರು. ಹಿಂದೆ ಇಂಥ ಕೊಡುಗೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ ಎಂಬ ಭಯವಾದರೂ ಇತ್ತು. ಈಗ ಅಂಥ ಆತಂಕ ನಿವಾರಣೆಯಾಗಿದೆ. ಉದ್ಯಾನಗಳ(ಸಂರಕ್ಷಣೆ) ತಿದ್ದು ಪಡಿ ಮಸೂದೆ ಮತ್ತು ಬೆಂಗಳೂರು ಮೆಟ್ರೋಪಾಲಿಟನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (ತಿದ್ದುಪಡಿ) ಕಾಯಿದೆಗಳು ಸುರಂಗ ಯೋಜನೆಯೊಂದಿಗೆ ಸಂಬಂಧ ಹೊಂದಿವೆ. ಸುರಂಗ ಯೋಜನೆ ಗೆ ಲಾಲ್‌ಬಾಗಿನ 5 ಎಕರೆ ಹಾಗೂ ಪ್ರಸ್ತಾವಿತ ಹೆಬ್ಬಾಳ ಕಿರುಸುರಂಗ ಯೋಜನೆಗೆ ಹೆಬ್ಬಾಳ ಕೆರೆಯ 3.45 ಎಕರೆ ಭೂಮಿ ಅಗತ್ಯವಿದೆ. ಸುರಂಗ ರಸ್ತೆಯ ವಿಸ್ತೃತ ಯೋಜನಾ ವರದಿಯಲ್ಲಿ ಲಾಲ್‌ ಬಾಗ್‌ನಲ್ಲಿ ಪಾರ್ಕಿಂಗ್/ವಾಣಿಜ್ಯ ಸಂಕೀರ್ಣ ನಿರ್ಮಾಣದ ಉಲ್ಲೇಖವಿದೆ. ಇದು ನಿಜವಾದಲ್ಲಿ, ಲಾಲ್‌ಬಾಗ್‌ ಮಾಲ್‌ ಆಗುವ ಸಾಧ್ಯತೆ ಇದೆ. ಕಾಯಿದೆಯನ್ನು ಪ್ರಶ್ನಿಸಿದವರಿಗೆ ಮುಖ್ಯಮಂತ್ರಿ, ʻಲಾಲ್‌ ಬಾಗಿನ ಒಂದು ಮೂಲೆಯನ್ನು ಸುಮಾರು ಒಂದು ವರ್ಷ ಯಂತ್ರಗಳನ್ನು ನಿಲ್ಲಿಸಲು ಬಳಸಿಕೊಳ್ಳಲಾಗುತ್ತದೆ; ಹಿಂದಿನ ಸರ್ಕಾರಗಳು ಬಳಸಿಕೊಂಡ ಉದ್ಯಾನಗಳ ಪಟ್ಟಿ ಕೊಡಲೇ? ಸದಾಶಿವ ನಗರದ ನಮ್ಮ ಮನೆ ಸಮೀಪದ ಪಾರ್ಕ್‌ನ್ನು ಏನು ಮಾಡಿದ್ದಾರೆ ಎಂದು ಬಂದು ನೋಡಿ. ನಗರದಲ್ಲಿ 5,000 ಎಕರೆಯಲ್ಲಿ ಆರು ಮರ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತದೆʼ ಎಂದು ಸಮರ್ಥಿಸಿಕೊಂಡಿದ್ದಾರೆ! ʻಈ ಸಂಬಂಧ ಮತ್ತೊಮ್ಮೆ ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡಲಾಗುವುದುʼ ಎಂಬ ಆಶ್ವಾಸನೆ ನೀಡಿದ್ದಾರೆ. ಗೌತಮ್‌ ಅದಾನಿಯನ್ನು ಭೇಟಿಯಾಗಲೇ ನಿರಾಕರಿಸಿದ ಲೋಕಸಭೆ ಪ್ರತಿ ಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಪಕ್ಷದ ಮುಖ್ಯಮಂತ್ರಿಯೊಬ್ಬರಿಗೆ ಅದಾನಿ ಒಪ್ಪಿತವಾಗುವುದೇಕೆ?

ನಗರ ಉದ್ಯಾನ ಎಂಬ ಪರಿಕಲ್ಪನೆ: 19ನೇ ಶತಮಾನದಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿ ತ್ವರಿತ ಕೈಗಾರಿಕೀಕರಣದಿಂದ ಉಂಟಾದ ಜನದಟ್ಟಣೆ, ರೋಗ ಮತ್ತು ಮಾಲಿನ್ಯಕ್ಕೆ ಪ್ರತಿಕ್ರಿಯೆಯಾಗಿ ನಗರ ಉದ್ಯಾನದ ಪರಿಕಲ್ಪನೆ ಹುಟ್ಟಿಕೊಂಡಿತು. ರೋಮನ್ನರು ʻರಸ್ ಇನ್ ಉರ್ಬ್‌ (ಹಳ್ಳಿಗಳನ್ನು ನಗರದಲ್ಲಿ ಪಡಿಮೂಡಿಸುವುದು)ʼ ಕಲ್ಪನೆಯ ಪ್ರವರ್ತಕರು. 17ನೇ ಶತಮಾನದಲ್ಲಿ ಲಂಡನ್‌ ಮತ್ತಿತರ ನಗರಗಳಲ್ಲಿ ಲಿಂಕನ್ಸ್ ಇನ್‌ಫೀಲ್ಡ್‌ನಂಥ ಹಸಿರು ಚೌಕಗಳನ್ನು ರಚಿಸಲಾಯಿತು. ಲಿವರ್‌ಪೂಲ್‌ನ ಬಿರ್ಕೆನ್‌ಹೆಡ್ ಪಾರ್ಕ್ 1843ರಲ್ಲಿ ಸಾರ್ವಜನಿಕರ ಆರ್ಥಿಕ ನೆರವಿನಿಂದ ಆರಂಭಗೊಂಡ ಮೊದಲ ನಗರ ಉದ್ಯಾನ. ಫ್ರೆಡರಿಕ್ ಲಾ ಓಂಸ್ಟೆಡ್ ಮತ್ತು ಕ್ಯಾಲ್ವರ್ಟ್ ವಾಕ್ಸ್ 1858ರಲ್ಲಿ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್ ವಿನ್ಯಾಸಗೊಳಿಸಿದರು. ಬ್ರಿಟಿಷರು 1787ರಲ್ಲಿ ಕೋಲ್ಕತ್ತಾದ ಶಿವಪುರದಲ್ಲಿ ಭಾರತೀಯ ಸಸ್ಯಶಾಸ್ತ್ರ ತೋಟ ಸ್ಥಾಪಿಸಿದರು. ಮೊಗಲರ ಕೆಂಪು ಕೋಟೆ, ಕಾಶ್ಮೀರದ ಶಾಲಿಮಾರ್‌ ಉದ್ಯಾನ, ಲಖ್ನೋದ ಸಿಖಂದರ್‌, ದೆಹಲಿಯ ಕ್ವೀನ್ಸ್‌ ಗಾರ್ಡನ್‌, ಅಮೃತಸರದ ಕಂಪನಿ ಗಾರ್ಡನ್‌ ಮತ್ತು ಕಬ್ಬನ್‌ ಪಾರ್ಕ್(1870ರಲ್ಲಿ ಆರಂಭ) ನಂತರ ತಲೆಯೆತ್ತಿದವು.

ಅಭಿವೃದ್ಧಿ ಎಂದರೆ ರಸ್ತೆ, ಕಟ್ಟಡ ಸೇರಿದಂತೆ ಭಾರಿ ಮೂಲಸೌಕರ್ಯ ಯೋಜನೆಗಳು ಎಂಬ ಭಾವನೆ ಆಳವಾಗಿ ಬೇರೂರಿಬಿಟ್ಟಿದೆ. ಆದರೆ, ಇವು ಕಣ್ಣಿಗೆ ಕಾಣಿಸುವ ಮತ್ತು ಅಳೆಯಬಹುದಾದ ಮೂಲ ಸೌಲಭ್ಯ; ಕೆರೆ-ಕಟ್ಟೆಗಳು, ಚೌಗು ಪ್ರದೇಶಗಳು, ಉದ್ಯಾನ, ಮರಗಿಡ ಹಾಗೂ ಇನ್ನಿತರ ಸಾರ್ವಜನಿಕ ತಾಣಗಳು ಅದೃಶ್ಯವಾಗಿರುವಂಥವು. ಆದರೆ, ಮಹತ್ವದವು. ಇವು ಜಲವೃತ್ತ-ತಾಪಮಾನವನ್ನು ನಿಯಂತ್ರಿಸುತ್ತವೆ; ಜೈವಿಕ ವೈವಿಧ್ಯವನ್ನು ಪೊರೆಯುತ್ತವೆ ಮತ್ತು ಆರೋಗ್ಯಕರ ಜೀವನಕ್ಕೆ ಅಗತ್ಯವಿರುವಂಥದ್ದನ್ನು ನೀಡುತ್ತವೆ. ಉದ್ಯಾನ ಕಾಯಿದೆಯು ಲಾಲ್‌ಬಾಗ್‌ನ್ನು ಮೀರಿದ ಸಮಸ್ಯೆಯಾಗಿದ್ದು,
ಸಾರ್ವಜನಿಕರಿಗೆ ಮೀಸಲಾದ ಹಸಿರು ತಾಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಸರ್ಕಾರಕ್ಕೆ ಶಾಸನಸಮ್ಮತ ಅನುಮತಿ ನೀಡುತ್ತದೆ. ಮುಂದಿನ ಸರ್ಕಾರಗಳು ಉದ್ಯಾನಗಳನ್ನು ಲೇಔಟ್‌ ಆಗಿ ಮಾಡಬಹು ದು! ನಗರಗಳು ಜನ/ವಾಹನ ಸಂದಣಿಯಿಂದ ಬಳಲುತ್ತಿರುವಾಗ, ಉದ್ಯಾನ-ಕೆರೆಕಟ್ಟೆಗಳ ರಕ್ಷಣೆ ಇನ್ನಷ್ಟು ಮುಖ್ಯವಾಗುತ್ತದೆ. ಈಗ ಬೇಕಿರುವುದು ಪ್ರಕೃತಿ ಸಕಾರಾತ್ಮಕ ನಗರ ಯೋಜನೆ. ಉದ್ಯಾನಗಳು ಅಂತರ್ಜಲ ಮರುಪೂರಣ, ಜೀವವೈವಿಧ್ಯದ ಪೋಷಣೆಯಲ್ಲದೆ ಮನರಂಜನೆಗಳು; ಕಾಂಕ್ರಿಟೀಕರಣಗೊಂಡ ನಗರಗಳಿಗೆ ತಾಪಮಾನ ಮತ್ತು ಮಾಲಿನ್ಯದಿಂದ ಒಂದಿಷ್ಟು ರಕ್ಷಣೆ ನೀಡುತ್ತವೆ. ಹವಾಮಾನ ಬದಲಾವಣೆಯ ಜಗತ್ತಿನಲ್ಲಿ ಉದ್ಯಾನಗಳ ಸಂರಕ್ಷಣೆ ನಮ್ಮ ಆದ್ಯತೆ ಆಗಬೇಕು. ಉದ್ಯಾನಗಳ ಪರಭಾರೆಯಿಂದ ಆಗುವ ನಷ್ಟವನ್ನು ಮರುಅರಣ್ಯೀಕರಣದಿಂದ ತುಂಬಲು ಸಾಧ್ಯವಿಲ್ಲ.

ಬೆಂಗಳೂರು ಟರ್ಫ್‌ ಕ್ಲಬ್‌ ಗುತ್ತಿಗೆ ಅವಧಿ ಡಿಸೆಂಬರ್‌ 31, 2009ಕ್ಕೆ ಮುಗಿದಿದೆ; ಕುಣಿಗಲ್‌ಗೆ ಸ್ಥಳಾಂತರಿಸಲು ಮುಂದಾಗಿದೆ. ಅಂದಾಜು 83-85 ಎಕರೆ ವಿಸ್ತೀರ್ಣ ಹೊಂದಿರುವ ಈ ಜಾಗವನ್ನು ಉದ್ಯಾನಕ್ಕೆ ಮೀಸಲಿಡಬೇಕಿದೆ. ಬೆಂಗಳೂರನ್ನು ಚೈತನ್ಯಶೀಲ ಹಸಿರು ಮೆಟ್ರೋಪೊಲಿಸ್‌ ಆಗಿ ಬದಲಿಸಿದ ಸೇತುರಾಮ್‌ ಗೋಪಾಲ್‌ರಾವ್‌ ನೇಗಿನ್‌ಹಾಳ್‌(ಎಸ್‌.ಜಿ. ನೇಗಿನ್ಹಾಳ್)‌ 1982-1987ರ ಅವಧಿಯಲ್ಲಿ 1.5 ದಶಲಕ್ಷ ಸಸಿಗಳನ್ನು ನೆಟ್ಟರು. ಯುಗಾದಿಗೆ ಮುನ್ನ ಅರಳಿ ನಗರಕ್ಕೆ ಗುಲಾಬಿ ಬಣ್ಣದ ಶಾಲು ಹೊದೆಸುವ ತಬೂಬಿಯಾ ರೋಸಿಯಾವನ್ನು ಪರಿಚಯಿಸಿದರು. ಮನೆಮನೆಗೆ ತೆರಳಿ ರಸ್ತೆಗೆ ಯಾವ ಸಸಿ ಬೇಕು ಎಂದು ಕೇಳಿ ಅದನ್ನು ವಿತರಿಸಿದರು. ಬಂಡೀಪುರ ಸಂರಕ್ಷಿತ ಅರಣ್ಯವನ್ನು ಹುಲಿ ಕಾಡಾಗಿ ಪರಿವರ್ತಿಸುವಲ್ಲಿ ಹಾಗೂ ನಾಗರಹೊಳೆ ಕಾಡಿನಲ್ಲಿ ಅವರ ಹೆಜ್ಜೆ ಗುರುತು ಇದೆ. ನಮ್ಮ ಆಡಳಿತಗಾರರು ನೇಗಿನ್ಹಾಳ್‌ ಇಲ್ಲವೇ ಅ.ನ. ಯಲ್ಲಪ್ಪ ರೆಡ್ಡಿ ಅವರಂಥ ದಾರ್ಶನಿಕರು ಆಗಬೇಕು ಎಂದು ಆಶಿಸುವುದು ಪರಮ ಮೂರ್ಖತನ. ಉದ್ಯಾನಗಳು ಅಧಿಕಾರದಲ್ಲಿರುವವರಿಗೆ ರಿಯಲ್‌ ಎಸ್ಟೇಟ್‌ ಹುಲ್ಲುಗಾವಲಿನಂತೆ ಕಾಣಿಸುತ್ತವೆ ಎಂದರೆ ಉತ್ಪ್ರೇಕ್ಷೆ ಆಗುವುದಿಲ್ಲ. ಈ ಸಂಬಂಧ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ದಾವೆಗಳ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಬೇಕಿದೆ. ಈ ಎರಡೂ ಕಾಯಿದೆಗಳನ್ನು ಜನರು ಪ್ರಶ್ನಿಸಬೇಕು.

Journalist,Translator,avid bibliophile

Leave a Reply

Your email address will not be published. Required fields are marked *

Back To Top