ಮಳೆಗಾಲದ ಅಂತ್ಯಕ್ಕೆ ಮುನ್ನವೇ ಬೆಂಗಳೂರು ಕಾದ ಹಂಚಿನಂತೆ ಸುಡುತ್ತಿದ್ದು, ತಾಪಮಾನ 34 ಡಿಗ್ರಿ ದಾಟಿದೆ. ಋತುಮಾನಗಳ ನಡುವೆ ವ್ಯತ್ಯಾಸವೇ ಇಲ್ಲದಂತೆ ಆಗಿದ್ದು, ಚಳಿಗಾಲಕ್ಕೆ ಮೊದಲೇ ಬೇಸಿಗೆ ಆರಂಭವಾದಂತೆ ಭಾಸವಾಗುತ್ತಿದೆ. ಉತ್ತರ ಭಾರತದ ರಾಜ್ಯಗಳನ್ನು ಚಳಿಗಾಲದಲ್ಲಿ ಮುಚ್ಚುವ ಕಾವಳ, ಹೊಂಜು(ಹೊಗೆ+ಮಂಜು) ಶಾಲೆಗಳನ್ನು ಬಂದ್ ಮಾಡಿಸುತ್ತದೆ; ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳುತ್ತದೆ; ವಾಹನಗಳಿಗೆ ಸಮ-ಬೆಸ ದಿನಗಳ ಮೀಸಲು ಆರಂಭವಾಗುತ್ತದೆ. ಕೂಳೆ ದಹನ, ಪಳೆಯುಳಿಕೆ ಇಂಧನಗಳಿಂದ ಹೊರಬರುವ ಕೊಳೆ ಗಾಳಿ ಹಾಗೂ ಸೂಕ್ಷ್ಮಕಣಗಳಿಂದ ಪರಿಸ್ಥಿತಿ ಹದಗೆಡುತ್ತದೆ. ಇದು ಪ್ರತಿವರ್ಷದ ಕತೆ; ಮರುಕಳಿಸುತ್ತಲೇ ಇರುತ್ತದೆ. ತಾತ್ಕಾಲಿಕ ಕ್ರಮಗಳ ಮೂಲಕ ತೇಪೆ ಹಾಕುವ ಸರ್ಕಾರ, ಆನಂತರ ಮತ್ತೆ ನಿಷ್ಕ್ರಿಯವಾಗುತ್ತದೆ. ಇದರ ಜೊತೆಗೆ, ತೀವ್ರ ಬಿಸಿಲು ಮತ್ತು ಸೂರ್ಯನ ವಿಕಿರಣದಿಂದ ಕೆಳ ಹಂತದಲ್ಲಿ ಶೇಖರವಾಗುತ್ತಿರುವ ಓಜೋನ್ ನಿಂದ ಆರೋಗ್ಯ, ಕೃಷಿ-ಆಹಾರ ಸುಭದ್ರತೆಗೆ ಧಕ್ಕೆಯುಂಟಾಗುತ್ತಿದೆ.
ಓಜೋನ್ ಪದರ ಎಂದರೆ: ಮೇಲಿನ ವಾತಾವರಣದಲ್ಲಿರುವ ಓಜೋನ್ ಪದರವು ಭೂಮಿಗೆ ಹಾನಿಕರ ಅತಿನೇರಳೆ ಕಿರಣಗಳು ಬೀಳದಂತೆ ಕಾಯುತ್ತದೆ. ದೈನಂದಿನ ಚಟುವಟಿಕೆಗಳಿಂದ ಭೂಮಿ ಯಿಂದ 10 ಮೈಲು ದೂರದಲ್ಲಿರುವ ಓಜೋನ್ ಪದರಕ್ಕೆ ಮುಂದಿನ 100 ವರ್ಷ ಕಾಲ ಧಕ್ಕೆಯಾಗುತ್ತದೆ ಎಂದು 1970ರಲ್ಲಿ ರಸಾಯನಶಾಸ್ತ್ರಜ್ಞರಾದ ಮರಿಯೊ ಮೊಲಿನ ಮತ್ತು ಎಫ್. ಶೆರ್ವುಡ್ ರೋಲ್ಯಾಂಡ್ ಪತ್ತೆಹಚ್ಚಿದರು. ಜಗತ್ತಿನೆಲ್ಲೆಡೆ ಓಜೋನ್ ಬರಿದಾಗುತ್ತಿದೆ ಮತ್ತು ಕ್ಲೋರೀನ್ ರಸಾಯನಿಕಗಳು ಮುಖ್ಯವಾಗಿ, ಸಿಎಫ್‌ಸಿ(ಕ್ಲೋರೋಫ್ಲೋರೋ ಕಾರ್ಬನ್) ಇದಕ್ಕೆ ಕಾರಣ ಎಂದು ಅವರು ಹೇಳಿದರು. 1990ರಲ್ಲಿ ಲಂಡನ್‌ನಲ್ಲಿ ಸಭೆ ಸೇರಿದ 90 ದೇಶಗಳ ಕಾರ್ಯನೀತಿ ನಿರೂಪಕರು 2000ರೊಳಗೆ ಸಿಎಫ್‌ಸಿಯನ್ನು ಹಂತಹಂತವಾಗಿ ಸ್ಥಗಿತಗೊಳಿಸುವುದಾಗಿ ಒಪ್ಪಿ, ಒಪ್ಪಂದಕ್ಕೆ ಸಹಿ ಹಾಕಿ ದರು. ಆದರೆ, ಓಜೋನ್ ಬರಿದಾಗುವಿಕೆ ಹೆಚ್ಚುತ್ತಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿದ್ದರಿಂದ, ಸ್ಥಗಿತಗೊಳಿಸುವ ದಿನಾಂಕವನ್ನು 1996ಕ್ಕೆ ಬದಲಿಸಲಾಯಿತು. ಮೊಲಿನ-ರೋಲ್ಯಾಂಡ್ ಜೋ ಡಿಗೆ ನೊಬಲ್ ಪುರಸ್ಕಾರ ಪ್ರಾಪ್ತವಾಯಿತು ಮತ್ತು ಜಗತ್ತಿನೆಲ್ಲೆಡೆ ಪರಿಸರ ಕಾರ್ಯನೀತಿ ಬದಲಾಯಿತು. ಆದರೆ, ಈಗ ಕೆಳ ಹಂತದಲ್ಲಿ ಶೇಖರಗೊಳ್ಳುವ ಓಜೋನ್ ಜನರನ್ನು ಕಾಡಲಾರಂಭಿಸಿದೆ. ಈ ಓಜೋನ್ ಮಾಲಿನ್ಯಕ್ಕೆ ಕಾರಣವಾಗುವ, ಬಣ್ಣವಿಲ್ಲದ ಅದೃಶ್ಯ ಅನಿಲ; ಯಾವುದೇ ಕಪ್ಪು ಧೂಳಿನ ಜಾಡು ಬಿಡುವುದಿಲ್ಲ. ಬದಲಿಗೆ ರಸಾಯನಿಕ ಕ್ರಿಯೆಯನ್ನು ಪ್ರಚೋದಿಸಿ, ಸುತ್ತಲಿನ ಅನಿಲಗಳನ್ನು ಸೂಕ್ಷ್ಮ ಕಣಗಳಾಗಿ ಬದಲಿಸುತ್ತದೆ. ಇವು ಸೂರ್ಯನ ಕಿರಣಗಳನ್ನು ಚದುರಿಸಿ, ಹೊಂಜು ಸೃಷ್ಟಿಸುತ್ತವೆ.
ಪಿಎಂ 2.5 ಮತ್ತು ಪಿಎಂ 10 ಕಣ(ಪಾರ್ಟಿಕ್ಯುಲೇಟ್ ಮ್ಯಾಟರ್)ಗಳಂತೆ ಓಜೋನ್ ಮನುಷ್ಯರ ಚಟುವಟಿಕೆಗಳಿಂದ ನೇರವಾಗಿ ಉತ್ಪಾದನೆ ಆಗುವುದಿಲ್ಲ. ಬದಲಿಗೆ, ಅದೊಂದು ದ್ವಿತೀಯ ಹಂತದ ಮಲಿನ ವಸ್ತು. ವಾಹನ, ಕಾರ್ಖಾನೆ, ಡೀಸೆಲ್ ಜನರೇಟರ್ ಮತ್ತು ತ್ಯಾಜ್ಯದ ತೆರೆದ ದಹನದಿಂದ ಉತ್ಪತ್ತಿಯಾಗುವ ಪ್ರಾಥಮಿಕ ಮಾಲಿನ್ಯ ವಸ್ತುಗಳಾದ ಸಾರಜನಕದ ಆಕ್ಸೈಡ್‌ಗಳು, ಇಂಗಾಲದ ಮಾನಾಕ್ಸೈಡ್ ಮತ್ತು ಆವಿಯಾಗುವ ಸಾವಯವ ಸಂಯುಕ್ತ(ವಿಒಸಿ, ವೋಲಟೈಲ್ ಆರ್ಗ್ಯಾನಿಕ್ ಕಂಪೌಂಡ್‌ಗಳು)ಗಳು ಕೆಳ ವಾತಾವರಣದಲ್ಲಿ ಮಿಶ್ರಗೊಳ್ಳುತ್ತವೆ. ತೀವ್ರ ಶಾಖ ಮತ್ತು ಸೂರ್ಯನ ಉಜ್ವಲ ಅತಿನೇರಳೆ ಕಿರಣಗಳ ಬೆಳಕಿನಲ್ಲಿ ಸಂಯೋಗಗೊಂಡು, ಓಜೋನ್ ಉತ್ಪತ್ತಿಯಾಗುತ್ತದೆ. ತಾಪಮಾನ ಅತಿ ಹೆಚ್ಚು ಇದ್ದಾಗ, ಓಜೋನ್ ಉತ್ಪಾದಿಸುವ ರಸಾಯನಿಕ ಕ್ರಿಯೆಗಳ ವೇಗ ವರ್ಧಿಸು ತ್ತದೆ. ಉಷ್ಣದ ಅಲೆ ಇರುವಾಗ, ಓಜೋನ್ ಸೃಷ್ಟಿ ತೀವ್ರಗೊಂಡು ವಾಯುವಿನ ಗುಣಮಟ್ಟ ಕುಸಿಯುತ್ತದೆ(ಮೂಲ: ಅಮೆರಿಕದ ಹೆಲ್ತ್ ಎಫೆಕ್ಟ್ ಇನ್‌ಸ್ಟಿಟ್ಯೂಟ್‌ನ ಸ್ಟೇಟ್ ಆಫ್ ಗ್ಲೋಬಲ್ ಏರ್ ರಿಪೋರ್ಟ್). ಸಂಸ್ಥೆಯ 2025ರ ವರದಿ ಪ್ರಕಾರ, ಭಾರತ ಜಾಗತಿಕವಾಗಿ ಓಜೋನ್ ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಂಡಿರುವ 3ನೇ ದೇಶ. ಕ್ವತಾರ್ ಮತ್ತು ನೇಪಾಳ ಮೊದಲ 2 ಸ್ಥಾನದಲ್ಲಿವೆ.
ನೆಲ ಮಟ್ಟದ ಓಜೋನ್ ಹೆಚ್ಚಳ: 2021ರಿಂದ ಮೇ 2026ರವರೆಗಿನ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ದತ್ತಾಂಶದ ಪ್ರಕಾರ, ನೆಲ ಮಟ್ಟದ ಓಜೋನ್ ದೇಶದ ವಾಯುವಿನ ಗುಣಮಟ್ಟದ ಚಿತ್ರಣವನ್ನೇ ಬದಲಿಸುತ್ತಿದೆ. ಮಾರ್ಚ್ 1-ಮೇ 10, 2026ರ ದತ್ತಾಂಶದ ಪ್ರಕಾರ, ನಗರ ಪ್ರದೇಶದಲ್ಲಿ ಓಜೋನ್‌ಗೆ ಒಡ್ಡಿಕೊಳ್ಳುವಿಕೆ ವ್ಯಾಪಕವಾಗಿ ಹರಡಿದೆ. ದೇಶದ 25 ಪ್ರಮುಖ ನಗರಗಳಲ್ಲಿ 8 ಗಂಟೆ ಅವಧಿಯಲ್ಲಿ ಓಜೋನ್ ಪ್ರಮಾಣ ಸಿಪಿಸಿಬಿ ನಿಗದಿಪಡಿಸಿದ 100 ಮೈಕ್ರೋಗ್ರಾಂ/ಘನ ಮೀಟರ್(ಎಂಜಿ/ಕ್ಯೂಬಿಕ್ ಮೀಟರ್) ದಾಟಿತ್ತು. ಓಜೋನ್ ಮಾಲಿನ್ಯ ದೇಶದ ಸಾಂಪ್ರದಾಯಿಕ ಮಾಲಿನ್ಯ ಹಾಟ್‌ಸ್ಪಾಟ್ ಗಳಿಗೆ ಸೀಮಿತವಾಗಿಲ್ಲ. ಕಳೆದ ಬೇಸಿಗೆಯಲ್ಲಿ ಅತಿ ಹೆಚ್ಚು ಓಜೋನಿಗೆ ಒಡ್ಡಿಕೊಂಡ ನಗರಗಳು ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಇದ್ದವು; ಚಂಡೀಗಡ 173, ಜೈಪುರ 120, ದೆಹಲಿ 118, ಅಹಮದಾ ಬಾದ್ 115, ಭೋಪಾಲ್ 108 ಹಾಗೂ ಬೆಂಗಳೂರಿನಲ್ಲಿ 80 ಮೈಕ್ರೋಗ್ರಾಂ/ಘನ ಮೀಟರ್ ಓಜೋನ್ ಇತ್ತು. ಆಶ್ಚರ್ಯಕರ ಅಂಶವೆಂದರೆ, ಮಾದರಿ ನಗರ ಎಂದು ಹೆಸರಾದ ಚಂಡೀ ಗಡದಲ್ಲಿ ಓಜೋನ್ ಪ್ರಮಾಣ ದೆಹಲಿಗಿಂತ ಶೇ.32 ಹೆಚ್ಚು ಇತ್ತು. ಮುಂಬೈ, ಚೆನ್ನೈ ಮತ್ತಿತರ ಕರಾವಳಿ ತೀರದ ನಗರಗಳಲ್ಲಿ ಸಮುದ್ರದ ಗಾಳಿಯಿಂದ ಓಜೋನ್ ಸಾಂದ್ರತೆ ಕಡಿಮೆ ಇದ್ದು, ದೆಹಲಿ ಯ ಕೇಂದ್ರ, ದಕ್ಷಿಣ, ಪೂರ್ವ ದೆಹಲಿ ಹಾಗೂ ಗ್ರೇಟರ್ ನೋಯ್ಡಾದಲ್ಲಿ ಓಜೋನ್ ಸಾಂದ್ರತೆ ಹೆಚ್ಚು ಇತ್ತು.
2021-26ರ ದತ್ತಾಂಶದಿಂದ ಓಜೋನ್ ಮಾಲಿನ್ಯವು ಹಲವು ನಗರಗಳಲ್ಲಿ ವರ್ಷವಿಡೀ ಇರುವ ಸಮಸ್ಯೆ ಎನ್ನುವುದು ಬೆಳಕಿಗೆ ಬಂದಿತು. ದೆಹಲಿಯಲ್ಲಿ ಮುಂಗಾರುಪೂರ್ವ ಉಷ್ಣ ಅಲೆ ಅವಧಿ (ಏಪ್ರಿಲ್‌ನಿಂದ ಜೂನ್) ಮತ್ತು ಮುಂಗಾರೋತ್ತರ(ಅಕ್ಟೋಬರ್-ನವೆಂಬರ್) ಅವಧಿಯಲ್ಲೂ ರಾತ್ರಿ ವೇಳೆ ಓಜೋನ್ ಮಾಲಿನ್ಯ ಕಂಡುಬಂದಿದೆ. ಅದೇ ರೀತಿ ವರ್ಷವಿಡೀ ಉಷ್ಣ ವಾತಾವರಣವಿರುವ ಮುಂಬೈಯಲ್ಲಿ ಜನವರಿ-ಏಪ್ರಿಲ್ ಅವಧಿ ಮತ್ತು ನವೆಂಬರ್, ಡಿಸೆಂಬರಿನಲ್ಲಿ ಓಜೋನ್ ಮಾಲಿನ್ಯ ಮರುಕಳಿಸುತ್ತದೆ. ಚಂಡೀಗಡ, ಲಖ್ನೋ, ಪಟಣಾ ಮತ್ತು ಭೋಪಾಲಿನಲ್ಲಿ ಬೇಸಿಗೆಯಲ್ಲಿ ತೀವ್ರ ಓಜೋನ್ ಮಾಲಿನ್ಯವಿದ್ದು, ಉಷ್ಣ ವಾತಾವರಣವಿರುವ ಬೆಂಗಳೂರು ಮತ್ತು ಹೈದರಾಬಾದಿನಲ್ಲಿಯೂ ಓಜೋನ್ ಮಾಲಿನ್ಯ ಹೆಚ್ಚುತ್ತಿದೆ.
ಸೂರ್ಯ ಮುಳುಗಿದ ಬಳಿಕ ಸೌರ ವಿಕಿರಣ ನಿಲ್ಲುವುದರಿಂದ, ಆನಂತರ ಓಜೋನ್ ಮಾಲಿನ್ಯ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಸೂರ್ಯಾಸ್ತದ ಬಳಿಕ ಮೇಲ್ಪದರ ತಂಪಾಗಿ, ಮಲಿನ ಕಾರಕಗಳು ನೆಲದ ಸಮೀಪ ಸಂಗ್ರಹವಾಗುತ್ತವೆ; ವಾಹನಗಳಿಂದ ಹೊಮ್ಮುವ ಸಾರಜನಕದ ಆಕ್ಸೈಡ್, ಓಜೋನ್ ಛಿದ್ರಗೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ. ಜನರು ಇದರಿಂದ ರಾತ್ರಿ ವೇಳೆಯೂ ಓಜೋನಿಗೆ ಒಡ್ಡಿಕೊಂಡು, ಅದನ್ನೇ ಉಸಿರಾಡುತ್ತಾರೆ. ವರ್ಷವೊಂದರಲ್ಲಿ ಓಜೋನ್ ಪ್ರಮಾಣ ಸುರಕ್ಷಿತ ಮಿತಿಯನ್ನು ಮೀರಿದ ದಿನಗಳು ಹಾಗೂ ದಿನವೊಂದಕ್ಕೆ ಗಂಟೆವಾರು ಅವಧಿ ಕೂಡ ಹೆಚ್ಚು ತ್ತಿದೆ; ಕೆಲವೊಮ್ಮೆ ದಿನಕ್ಕೆ 17 ಗಂಟೆ ದಾಟಿರುವುದೂ ಇದೆ. ಕಳೆದ ಬೇಸಿಗೆಯಲ್ಲಿ ಶೂನ್ಯ ಓಜೋನ್ ಪ್ರಮಾಣ ದಾಖಲಿಸಿದ್ದ ಲಖ್ನೋ ಈ ವರ್ಷ 16.3 ಗಂಟೆ ಮತ್ತು ಜೈಪುರ 13.5 ಗಂಟೆ ದಾಖ ಲಿಸಿವೆ. ಬೆಂಗಳೂರು ಮತ್ತು ಮುಂಬೈ(ತಲಾ 15.9 ಗಂಟೆ) ಹಾಗೂ ಹೈದರಾಬಾದ್ 12.1 ಗಂಟೆ ವಿಕಿರಣಕ್ಕೆ ಒಡ್ಡಿಕೊಂಡಿದ್ದವು. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಓಜೋನ್‌ಗೆ ಒಡ್ಡಿಕೊಳ್ಳುವ ಪ್ರವೃತ್ತಿ ದಕ್ಷಿಣ ಭಾರತಕ್ಕೂ ವ್ಯಾಪಿಸುತ್ತಿರುವ ಸೂಚನೆ ಇದು.
ಆರೋಗ್ಯಕ್ಕೆ ಹಾನಿ: ಚಳಿಗಾಲದಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತದೆ ಎನ್ನುವುದು ವಾಸ್ತವ. ಈ ಋತುಮಾನದಲ್ಲಿ ಕುಳಿರ್ಗಾಳಿಯ ಹೆಚ್ಚಳ ಮತ್ತು ಗಾಳಿಯ ವೇಗ ಕಡಿಮೆ ಇರುವುದರಿಂದ, ಧೂಳಿನ ಕಣಗಳು ಸಾಂದ್ರಗೊಳ್ಳುತ್ತವೆ; ಬೇಸಿಗೆಯಲ್ಲಿ ಗಾಳಿ ವೇಗವಾಗಿ ಚಲಿಸುವುದರಿಂದ, ಮಾಲಿನ್ಯ ಕಣಗಳು ಚದುರಿಹೋಗುತ್ತವೆ. ಆದರೆ, ಓಜೋನ್ ಸಾಂದ್ರತೆ ಹೆಚ್ಚಳದಿಂದ ಪರಿಸ್ಥಿತಿ ಬದಲಾಗುತ್ತಿದೆ. ವಾ ಯು ಮಾಲಿನ್ಯ ಸಂಬಂಧಿತ ಸಾವುಗಳಿಗೆ ಸೂಕ್ಷ್ಮ ಕಣಗಳು ಪ್ರಮುಖ ಕಾರಣ: ಆದರೆ, ಈಗ ಓಜೋನ್ ಮುಖ್ಯ ಕಾರಣವಾಗಿ ಹೊಮ್ಮುತ್ತಿದೆ. ಓಜೋನ್ ಒಂದು ಪ್ರಬಲ, ಆಕ್ರಮಣಕಾರಿ ಉತ್ಕರ್ಷಕ. ವಾಯುನಾಳಗಳಲ್ಲಿ ಸೇರಿಕೊಂಡು ಸೋಂಕು ಮತ್ತು ಶ್ವಾಸಕೋಶದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಟ ಕಷ್ಟವಾಗುತ್ತದೆ. ಕೆಮ್ಮು, ಗಂಟಲು ಕೆರೆತ, ಎದೆ ಬಿಗಿತ, ದಮ್ಮು, ಶ್ವಾಸನಾಳದ ಜೀವಕೋಶಗಳಿಗೆ ಹಾನಿಯಿಂದ ಸೋಂಕು ಮತ್ತು ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗುತ್ತದೆ. ದೀರ್ಘಕಾಲೀನ ಒಡ್ಡಿಕೊಳ್ಳುವಿಕೆಯು ಸಿಒಪಿಡಿ(ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್) ಜೊತೆಗೆ ಸಂಬಂಧ ಹೊಂದಿದೆ ಎಂದು ಗೊತ್ತಾಗಿದೆ. ಆಸ್ತಮಾ ಮತ್ತು ಸಿಒಪಿಡಿಯಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯಲ್ಲಿ ಜೀವಕೋಶ ಹಾನಿ ಶೀಘ್ರಗೊಳ್ಳುತ್ತದೆ. 2023ರ ಅಂಕಿಅಂಶದ ಪ್ರಕಾರ, ದೀರ್ಘಕಾಲೀನ ಒಡ್ಡಿಕೊಳ್ಳುವಿಕೆಯಿಂದ ಜಗತ್ತಿನೆಲ್ಲೆಡೆ 4.7 ಲಕ್ಷ ಸಾವು ಸಂಭವಿಸಿದ್ದು, ಇದರಲ್ಲಿ ಅರ್ಧ ಭಾಗ ನಮ್ಮ ದೇಶದಲ್ಲಿ ಸಂಭವಿಸಿದೆ. ಧೂಳು ಮತ್ತು ಪರಾಗ ವೃತ್ತಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ. ಸ್ವಲ್ಪ ಕಾಲ ಓಜೋನ್‌ಗೆ ಒಡ್ಡಿಕೊಂಡ ಮಕ್ಕಳು ಹಾಗೂ ಉಸಿರಾಟದ ಸಮಸ್ಯೆ ಇರುವವರಲ್ಲಿ ಆಸ್ತಮಾ ಹೆಚ್ಚಳವನ್ನು ಜಾಗತಿಕ ಅಧ್ಯಯನಗಳು ಕಂಡು ಕೊಂಡಿವೆ.
ದೇಶದಲ್ಲಿ ಬೇಸಿಗೆಯಲ್ಲಿ ಓಜೋನ್ ಮಾಲಿನ್ಯ ಹೆಚ್ಚಳವು ಜಾಗತಿಕ ಪರಿಸ್ಥಿತಿಗೆ ಅನುಗುಣವಾಗಿದೆ. ಯುರೋಪಿನಲ್ಲಿ ಪ್ರತಿಯೊಂದು ಗರಿಷ್ಠ ತಾಪಮಾನ ಸನ್ನಿವೇಶವು ಓಜೋನ್ ಮಟ್ಟದ ಹೆಚ್ಚಳ ದೊಂದಿಗೆ ಬರುತ್ತದೆ ಎಂದು ದ ಕೊಪರ್ನಿಕಸ್ ಅಟ್ಮಾಸ್ಪಿಯರ್ ಮಾನಿಟರಿಂಗ್ ಸರ್ವೀಸ್ ಹೇಳಿದೆ. ತೀವ್ರ ತಾಪಮಾನ ಮತ್ತು ಓಜೋನ್ ಮಟ್ಟ ಹೆಚ್ಚಳಕ್ಕೆ ಸಂಬಂಧವಿದೆ ಎಂದು ಚೀನಾದ ಇತ್ತೀಚಿನ ಅಧ್ಯಯನ ಹೇಳುತ್ತದೆ. ತೀವ್ರ ತಾಪಮಾನ ಮತ್ತು ಓಜೋನ್ ಹೆಚ್ಚಳ ಒಟ್ಟಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ; ಮಕ್ಕಳು, ವಯಸ್ಕರು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಇದಕ್ಕೆ ತುತ್ತಾಗುತ್ತಿದ್ದಾರೆ.
ಓಜೋನ್ ಮಾಲಿನ್ಯವು ಆಹಾರ ಸುರಕ್ಷೆಗೂ ಕುತ್ತು ತರಲಿದೆ. ಸಸ್ಯಗಳು ಅನಿಲಗಳ ವಿನಿಮಯ ಹಾಗೂ ನೀರಿನ ಆವಿಯನ್ನು ಬಿಡುಗಡೆ ಮಾಡಲು ಬಳಸುವ ಪತ್ರರಂಧ್ರಗಳನ್ನು ಮುಚ್ಚುವ ಮೂಲಕ ಬೆಳವಣಿಗೆ ಕುಂಠಿತಗೊಳಿಸುತ್ತದೆ. ಸಸ್ಯಗಳ ಜೀವಕೋಶಗಳಿಗೆ ಧಕ್ಕೆಯುಂಟಾಗಿ, ದ್ಯುತಿಸಂಶ್ಲೇಷಣೆ ಕುಸಿಯುತ್ತದೆ. ಪಬ್‌ಮೆಡ್(pubmed.ncbi.nlm.nih.gov)ನಲ್ಲಿ ಪ್ರಕಟವಾದ 2026ರ ಅಧ್ಯಯನದ ಪ್ರಕಾರ, ಓಜೋನ್‌ಗೆ ಒಡ್ಡಿಕೊಳ್ಳುವುದರಿಂದ ದೇಶಿ ಗೋಧಿ ತಳಿಗಳ ಇಳುವರಿ ಕಡಿಮೆಯಾಗುತ್ತದೆ. 2023ರ ಪಿಎನ್‌ಎಎಸ್(ಅಮೆರಿಕದ ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, www.pnas.org) ಅಧ್ಯಯನದ ಪ್ರಕಾರ, ಗೋಧಿ ಇಳುವರಿ ಶೇ.14ರಿಂದ 17 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ, ನೆಲ ಮಟ್ಟದ ಓಜೋನ್ ವಾಯುವಿನ ಗುಣಮಟ್ಟದ ಸಮಸ್ಯೆ ಮಾತ್ರವಲ್ಲ; ಅದು ಕೃಷಿ ಮತ್ತು ಆಹಾರ ಸುರಕ್ಷತೆಯ ಸವಾಲು ಕೂಡ ಹೌದು.
ಇಂಗಾಲದ ಡೈಆಕ್ಸೈಡ್ ಹಲವು ಶತಮಾನಗಳಿಂದ ವಾತಾವರಣದಲ್ಲಿ ಶೇಖರವಾಗಿ, ಹವಾಮಾನ ಬದಲಾವಣೆಗೆ ಕಾರಣವಾಗಿದೆ. ಆದರೆ, ಇಂಗಾಲ, ಮೀಥೇನ್ ಮತ್ತು ಓಜೋನ್ ಸೂಪರ್ ಮಲಿನ ಕಾರಕಗಳ ಗುಂಪಿಗೆ ಸೇರುತ್ತವೆ. 200ಕ್ಕೂ ಹೆಚ್ಚು ಸರ್ಕಾರಗಳು ಹಾಗೂ ನಾಗರಿಕ ಸಮಾಜದ ಸಂಸ್ಥೆಗಳ ಸಹಭಾಗಿತ್ವದ ಕ್ಲೈಮೇಟ್ ಆಂಡ್ ಕ್ಲೀನ್ ಏರ್ ಕೊಯಲಿಷನ್(www.ccacoalition.org) ಪ್ರಕಾರ, ಈ ಸೂಪರ್ ಮಲಿನಕಾರಕಗಳು ಹವಾಮಾನ ಬಿಸಿಯಾಗುವಿಕೆಯ 2ನೇ ಅತಿ ದೊಡ್ಡ ಕಾರಣವಾಗಿದ್ದು, ಶೇ.45ರಷ್ಟು ಪಾಲು ನೀಡುತ್ತಿವೆ. ಐಪಿಸಿಸಿ(ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್) ನೆಲ ಮಟ್ಟದ ಓಜೋನ್‌ನ್ನು ʻಅಲ್ಪಾವಧಿಯ ಹವಾಮಾನ ಒತ್ತಡʼ ಎಂದು ವರ್ಗೀಕರಿಸುತ್ತದೆ. ಏಕೆಂದರೆ, ಅದು ಹಲವು ಗಂಟೆಗಳಿಂದ ಹಲವು ವಾರ ಕಾಲ ಇರಲಿದ್ದು, ಎಲ್ಲೆಡೆ ಸಮನಾಗಿ ಹಂಚಿಕೆಯಾಗುವುದಿಲ್ಲ. ಬದಲಾಗಿ ಉತ್ಪತ್ತಿಯಾದೆಡೆ ಭಾರಿ ಮೋಡದಂತೆ ಕೇಂದ್ರೀಕರಿಸಲ್ಪಟ್ಟಿರುತ್ತದೆ ಮತ್ತು ಆ ಪ್ರದೇಶದಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ದಪ್ಪಗಿನ ಹಾಗೂ ಅದೃಶ್ಯ ಓಜೋನ್ ಪದರವು ಭೂಮಿ ಹೊಮ್ಮಿಸುವ ಕಡುಗೆಂಪು ವಿಕಿರಣವನ್ನು ಹಿಡಿದಿಡುತ್ತದೆ. ಇದರಿಂದ ಕೆಳ ವಾತಾವರಣದಲ್ಲಿ ಶಾಖ ಸೆರೆಯಾಗಿ, ಉಷ್ಣ ಅಲೆಗಳನ್ನು ತೀವ್ರಗೊಳಿಸುತ್ತದೆ ಮತ್ತು ಇನ್ನಷ್ಟು ಓಜೋನ್ ಸೃಷ್ಟಿಗೆ ಅಗತ್ಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಉತ್ತರ ಭಾರತದ ಕೈಗಾರಿಕಾ ವಲಯದಲ್ಲಿ ಉತ್ಪಾದನೆಯಾದ ಓಜೋನ್, ಹಿಮಾಲಯ ಮತ್ತು ಟಿಬೆಟನ್ ಪ್ರಸ್ಥಭೂಮಿ ಯೆಡೆಗೆ ಚಲಿಸುತ್ತದೆ; ಹಿಮನದಿಗಳ ಕರಗುವಿಕೆಯನ್ನು ತೀವ್ರಗೊಳಿಸುತ್ತದೆ.
ಸಮಗ್ರ ನೀತಿ ಅಗತ್ಯ: ದಿಲ್ಲಿ ಮತ್ತು ಮುಂಬಯಿಯಂಥ ಅತಿ ಮಲಿನ ನಗರಗಳ ಗಾಳಿಯು ಸಾರಜನಕದ ಆಕ್ಸೈಡ್‌ಗಳಿಂದ ತುಂಬಿಹೋಗಿದೆ. ವಾಹನಗಳಿಂದ ಹೊಮ್ಮುವ ಸಾರಜನಕದ ಆಕ್ಸೈಡ್‌ಗಳ ಜೊತೆಗೆ ವಿಒಸಿ(ಬಣ್ಣ, ದ್ರಾವಕ ಮತ್ತು ಕೈಗಾರಿಕಾ ರಸಾಯನಿಕಗಳು)ಗಳಿಗೆ ನಿರ್ಬಂಧ ಹೇರದೆ ಇದ್ದಲ್ಲಿ ವಾತಾವರಣದಲ್ಲಿ ಓಜೋನ್ ಸಾಂದ್ರತೆ ಹೆಚ್ಚುತ್ತದೆ. ಸೂಕ್ಷ್ಮ ಕಣಗಳನ್ನು ಕಡಿಮೆಗೊಳಿಸುವ ಫಿಲ್ಟ ರ್‌ಗಳು ಓಜೋನ್‌ನ್ನು ತಡೆಯಲಾರವು. ಸರ್ಕಾರ ಕೊಳೆಗಾಳಿ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿದರೂ, ಓಜೋನ್ ಸೃಷ್ಟಿಗೆ ಕಾರಣವಾಗುವ ರಸಾಯನಿಕಗಳು ನೂರಾರು ಕಿಮೀ ದೂರದಿಂದ ರವಾನೆಯಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರ ವಾಯುಮಾಲಿನ್ಯವನ್ನು ಸ್ಥಳೀಯ ಸಮಸ್ಯೆ ಎಂದು ಪರಿಗಣಿಸದೆ, ಚಲನಶೀಲ ಹಾಗೂ ಗಡಿಗಳನ್ನು ಮೀರಿದ ಒಗಟು ಎಂದು ಪರಿಗಣಿಸ ಬೇಕಾಗುತ್ತದೆ.
ಶುದ್ಧ ವಾಯುಗೆ ಸಂಬಂಧಿಸಿದ ಜಾಗತಿಕ ಕಾರ್ಯನೀತಿಗಳು ಸೂಕ್ಷ್ಮ ಕಣಗಳು, ಧೂಳು, ಹೊಗೆ ಮತ್ತು ಸಲ್ಫೇಟ್‌ಗಳ ನಿವಾರಣೆಯನ್ನು ಗುರಿಯಾಗಿಸಿಕೊಂಡಿವೆ. ಪಳೆಯುಳಿಕೆ ಇಂಧನಗಳ ದಹನದಿಂದ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್ ಮತ್ತಿತರ ಹಸಿರುಮನೆ ಅನಿಲಗಳು ತಾಪಮಾನವನ್ನು ಹೆಚ್ಚಿಸಿವೆ; ಏರೋಸಾಲ್‌ಗಳು ದೊಡ್ಡ ಕನ್ನಡಿಯಂತೆ ಸೂರ್ಯನ ಕಿರಣಗಳನ್ನು ಮತ್ತೆ ಆಕಾಶಕ್ಕೆ ಚದು ರಿಸಿ, ಮೋಡಗಳನ್ನು ಇನ್ನಷ್ಟು ಉಜ್ವಲಗೊಳಿಸಿವೆ. ಸರಕು/ಪ್ರಯಾಣಿಕ ಸಾಗಣೆ ವಾಹನಗಳ ಇಂಧನ ಕ್ಷಮತೆ ಹೆಚ್ಚಳ ಮತ್ತು ತಂತ್ರಜ್ಞಾನದ ಉನ್ನತೀಕರಣದಿಂದ ಏರೋಸಾಲ್ ಬಳಕೆ ಕುಸಿದಿದೆ. ಇದ ರಿಂದ ಹಸಿರುಮನೆ ಅನಿಲಗಳು ಒಮ್ಮೆಲೇ ಹೊರನುಗ್ಗಿ ಜಾಗತಿಕ ತಾಪಮಾನ ಹೆಚ್ಚಳವಾಗಿದೆ.
ವಾಯು(ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ 1981ರ ಮಾನದಂಡಗಳ ಅನ್ವಯ 2020ರಲ್ಲಿ ಸ್ಥಾಪನೆಯಾದ 264 ಪರಾಮರ್ಶನ ಕೇಂದ್ರಗಳ ಸಂಖ್ಯೆ ಜೂನ್ 2026ರಲ್ಲಿ 595ಕ್ಕೆ ಹೆಚ್ಚಿದೆ. 20 20ರಲ್ಲಿ 222 ಕೇಂದ್ರಗಳು ಮಾತ್ರ ಓಜೋನ್ ದತ್ತಾಂಶ ಸಂಗ್ರಹಿಸುತ್ತಿದ್ದವು; ಈಗ 526 ಕೇಂದ್ರಗಳು ಈ ಮಾಹಿತಿ ಸಂಗ್ರಹಿಸುತ್ತಿವೆ. ಓಜೋನ್‌ನ್ನು ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯುಐ)ದಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ, ಈ ದತ್ತಾಂಶ/ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಲ್ಲ. ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ(ಎನ್‌ಸಿಎಪಿ)ವು 2026ರೊಳಗೆ ಸೂಕ್ಷ್ಮ ಕಣಗಳನ್ನು ಶೇ.40ರಷ್ಟು ಕಡಿಮೆಗೊಳಿಸುವ ಏಕೈಕ ಗುರಿ ಹೊಂದಿದೆ. ಪಿಎಂ 2.5 ಅತಿ ಹೆಚ್ಚು ಕಾಯಿಲೆಗಳಿಗೆ ಕಾರಣವಾಗಿದ್ದರೂ, ಇನ್ನಿತರ ಮಾಲಿನ್ಯಗಳಾದ ಸಾರಜನಕದ ಆಕ್ಸೈಡ್‌ಗಳು ಹಾಗೂ ಓಜೋನ್‌ನ್ನು ನಿರ್ಲಕ್ಷಿಸಬಾರದು. ಓಜೋನ್ ಸೃಷ್ಟಿಗೆ ಕಾರಣವಾಗುವ ವಾಹನಗಳ ಕೊಳೆಗಾಳಿ, ಕೈಗಾರಿಕಾ ಬಣ್ಣಗಳು, ಪ್ಲಾಸ್ಟಿಕ್‌ಗಳು ಮತ್ತು ದ್ರಾವಕಗಳನ್ನು ಗುರಿಯಾಗಿಸಿಕೊಳ್ಳಬೇಕು. ಎನ್‌ಸಿಎಪಿ ಉತ್ತರ ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪ್ರಾಂತೀಯ ಕಾರ್ಯಯೋಜನೆಯನ್ನು ರೂಪಿಸಲು ಮುಂದಾಗಿದೆ.
ಹಲವು ಉಪಕ್ರಮಗಳು: 2020ರಲ್ಲಿ ಅನುಷ್ಠಾನಗೊಂಡ ಭಾರತ್ ಹಂತ 6(ಬಿಎಸ್ 6) ರಿಂದ ಸಾರಜನಕದ ಆಕ್ಸೈಡ್ ಹೊರಚೆಲ್ಲುವಿಕೆ ಕಡಿಮೆಯಾಗಿದೆ. ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ, ಭಾರಿ ಪ್ರಮಾಣದ ವಾಣಿಜ್ಯ ವಾಹನಗಳಲ್ಲಿ ಶೇ.87 ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಶೇ.68ರಷ್ಟು ಸಾರಜನಕದ ಆಕ್ಸೈಡ್ ಪ್ರಮಾಣ ಕುಸಿದಿದೆ(ಬಿಎಸ್ 4 ವಾಹನಗಳಿಗೆ ಹೋಲಿಸಿದರೆ). ಪಿಎಂ ಇ ಡ್ರೈವ್(ಪ್ರಧಾನ ಮಂತ್ರಿ ಎಲೆಕ್ಟ್ರಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೊವೇಟಿವ್ ವೆಹಿಕಲ್ ಎನ್‌ಹ್ಯಾನ್ಸ್‌ಮೆಂಟ್) ಮತ್ತು ಪಿಎಂ ಇ ಬಸ್ ಸೇವೆ ಮೂಲಕ ನಗರದ ರಸ್ತೆಗಳಿಂದ ಅಂತರ್ದಹನ ಎಂಜಿನ್ ವಾಹನಗಳನ್ನು ತೆಗೆ ದುಹಾಕಲಾಗುತ್ತಿದೆ. ಇದರಿಂದ ಸಾರಜನಕದ ಆಕ್ಸೈಡ್‌ಗಳು ಹಾಗೂ ಜಲಜನಕ-ಇಂಗಾಲ ಸಂಯುಕ್ತಗಳ ಹೊರಚೆಲ್ಲುವಿಕೆ ಕಡಿಮೆಯಾಗಲಿದೆ. ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮತ್ತು ಪ್ರಮುಖ ನಗರಗಳ ಪೆಟ್ರೋಲ್ ಪಂಪ್‌ಗಳಲ್ಲಿ ʻಬಾಷ್ಪ ಮರುಗಳಿಕೆ ವ್ಯವಸ್ಥೆʼ ಅಳವಡಿಕೆಯನ್ನು ಸರ್ಕಾರ ಕಡ್ಡಾಯ ಮಾಡಿದೆ. ಈ ವ್ಯವಸ್ಥೆ ವಿಒಸಿ ಹಾಗೂ ಬೆಂಜೀನ್ ವಿಷಾನಿಲವನ್ನು ಹಿಡಿದಿಡುತ್ತದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಮನುಷ್ಯ ನಿರ್ಮಿತ ನಾರು, ಔಷಧೋದ್ಯಮ, ಬಣ್ಣ ಹಾಗೂ ಗೊಬ್ಬರ ಕಾರ್ಖಾನೆಗಳಲ್ಲಿ ಸಾರಜನಕದ ಆಕ್ಸೈಡ್‌ಗಳು ಮತ್ತು ವಿಒಸಿ ತಡೆಗೆ ಕಠಿಣ ಮಾನದಂಡಗಳನ್ನು ಪರಿಚಯಿಸಿದೆ.
ಅಂತರ್ದಹನ ಎಂಜಿನ್‌ನಲ್ಲಿ ಇಂಧನದ ಅಪೂರ್ಣ ದಹನದಿಂದ ಸೂಕ್ಷ್ಮ ಕಣಗಳು ಸೃಷ್ಟಿಯಾಗುತ್ತವೆ. ಇವನ್ನು ನಿವಾರಿಸಲು ಇಂಧನ ಹೆಚ್ಚು ಉಷ್ಣತೆಯಲ್ಲಿ ದಹಿಸುವಂತೆ ಎಂಜಿನ್‌ಗಳನ್ನು ಮರುವಿ ನ್ಯಾಸಗೊಳಿಸಲಾಯಿತು. ಇದರಿಂದ ಹೊಸ ಸಮಸ್ಯೆ ಸೃಷ್ಟಿಯಾಗಿ, ಸಾರಜನಕದ ಆಕ್ಸೈಡ್ ಉತ್ಪಾದನೆ ಹೆಚ್ಚಿದೆ. ಹೊರಚೆಲ್ಲುವ ಕೊಳವೆಯ ಫಿಲ್ಟರಿನಲ್ಲಿ ಸಂಗ್ರಹವಾಗುವ ಕಿಟ್ಟವನ್ನು ದಹಿಸಬೇಕಾಗುತ್ತದೆ. ವಾಹನಗಳು ಐಡ್ಲಿಂಗ್‌ನಲ್ಲಿ ಇದ್ದಾಗ, ಇಂಧನ ದಹನವಾಗದೆ ಸೂಕ್ಷ್ಮ ಕಣಗಳು ವಾತಾವರಣಕ್ಕೆ ಸೇರುತ್ತವೆ. ಇದರಿಂದ ʻಓಜೋನ್ ಬೋನುʼ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ, ಮುಂದಿನ ಹಂತದ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ, ಎನ್‌ಸಿಎಪಿ 2.0, ಹಲವು ಮಲಿನಕಾರಕಗಳ ನಿವಾರಣೆ ಗುರಿ ಇಟ್ಟುಕೊಳ್ಳಬೇಕಾಗುತ್ತದೆ. ದೇಶದಲ್ಲಿ ವಾಯುವಿನ ಗುಣಮಟ್ಟ ಕುಸಿತವು ಪ್ರಾಥಮಿಕ ಮಾಲಿನ್ಯ ಮೂಲ ಇಲ್ಲವೇ ಚಳಿಗಾಲಕ್ಕೆ ಸೀಮಿತವಾಗಿಲ್ಲ; ಪ್ರಾಂತೀಯ ಹವಾಮಾನ ಪರಿಸ್ಥಿತಿಯನ್ನೇ ಬದಲಿಸುತ್ತಿದ್ದು, ಸಂಕೀರ್ಣವಾದ ಮತ್ತು ವರ್ಷವಿಡೀ ಇರುವ ಅನುಷಂಗಿಕ ಮಾಲಿನ್ಯ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಇದನ್ನು ನಿರ್ವಹಿಸಲು ಸಾರ್ವಜನಿಕ ಕಾರ್ಯನೀತಿಯಲ್ಲಿ ಬಹು ದೊಡ್ಡ ಬದಲಾವಣೆ ಅಗತ್ಯವಿದೆ; ಸಮಗ್ರ, ವರ್ಷವಿಡೀ ಚಾಲ್ತಿಯಲ್ಲಿರುವ ಹಾಗೂ ಪ್ರಾದೇಶಿಕ ಸಂಕೀರ್ಣತೆಗೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕಿದೆ.
ಚಳಿಗಾಲಕ್ಕೆ ಸೀಮಿತವಾಗಿದ್ದ ಓಜೋನ್ ಪ್ರೇರಿತ ಅನಾರೋಗ್ಯಕರ ಕಾವಳ ಪರಿಸ್ಥಿತಿ ಬದಲಾಗಿದ್ದು, ಓಜೋನ್ ಮಾಲಿನ್ಯದಿಂದ ನಗರಗಳು ಬೇಸಿಗೆಯಲ್ಲಿ ಕುಲುಮೆಗಳಾಗುತ್ತಿವೆ. ನೆಲ ಮಟ್ಟದ ಓಜೋನ್ ನಿರ್ವಹಿಸಲು ಸಾಧ್ಯವಿಲ್ಲದ, ಬೇಕಾಬಿಟ್ಟಿ ಹವಾಮಾನ ಪ್ರಕ್ರಿಯೆಯಲ್ಲ. ಓಜೋನ್ ಕೇಂದ್ರಿತ ಕಾರ್ಯನೀತಿ, ಶುದ್ಧ/ಹಸಿರು ಇಂಧನ ಹಾಗೂ ಶೂನ್ಯ ಕೊಳೆಗಾಳಿ ಹೊರಸೂಸುವಿಕೆ ಆಧರಿತ ಸಾಗಣೆ ವ್ಯವಸ್ಥೆ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದು. ದೇಶದ ನಗರಗಳಲ್ಲಿ ಓಜೋನ್ ಸಮಸ್ಯೆ ಹಾಗೂ ನಿರ್ದಿಷ್ಟ ಋತುಮಾನದಲ್ಲಿ ಅದು ಹೇಗೆ ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬ ಬಗ್ಗೆ ಗಂಭೀರ ಅಧ್ಯಯನ ಅಗತ್ಯವಿದೆ.

