ಕೊಳ್ಳೇಗಾಲ ಶರ್ಮ
ಮೊನ್ನೆ ಅಂದರೆ ಫೆಬ್ರವರಿ ೨೬ರಂದು ನಮ್ಮಲ್ಲಿ ಸಂಜೆ ಆರು ಗಂಟೆ ಆಗಿದ್ದಾಗ ಯುರೋಪಿನ ಇಪ್ಪತ್ತು ಸಾವಿರ ಮಂದಿ ಒಮ್ಮೆಲೇ ಒಂದು ನಾಟಕವನ್ನು ನೋಡಿದರು. ಇಪ್ಪತ್ತು ಸಾವಿರ ಮಂದಿ ಎಂದರೆ ಅಚ್ಚರಿ ಆಗಿರಬೇಕು. ನಮ್ಮೂರಲ್ಲಿ ನಾಟಕ ನೋಡಲು ಒಂದು ಇನ್ನೂರು ಜನ ಬಂದರೆ ಅದುವೇ ಹೌಸ್ ಫುಲ್. ಆದರೆ ಈ ನಾಟಕದ ವಿಶೇಷ ಅಷ್ಟೊಂದು ಜನ ಅದನ್ನು ನೋಡಿದರು ಅನ್ನುವುದಲ್ಲ. ಅದನ್ನು ಬರೆದದ್ದೇ ವಿಶೇಷ. ನಾಟಕವನ್ನು ಯಾವ ರನ್ನ ಪಂಪರಾಗಲಿ, ಶೇಕ್ಸ್ ಪಿಯರ್, ಕಾಳಿದಾಸನಾಗಲಿ ಬರೆಯಲಿಲ್ಲ. ಸುಮಾರು ಒಂದು ಸಾವಿರ ಪದಗಳ, ಹತ್ತು ಹದಿನೈದು ನಿಮಿಷಗಳ ಈ ನಾಟಕದ ಸೃಷ್ಟಿಕರ್ತ ಒಂದು ಕಂಪ್ಯೂಟರ್ ತಂತ್ರಾಂಶ. ಹೌದು. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲ್ಲಿಜೆನ್ಸ್ ಎನ್ನುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ನಾಟಕವನ್ನು ಬರೆಯಲಾಗಿತ್ತು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಏಐ ಎನ್ನುವುದು ಗಣಕ ಕ್ಷೇತ್ರದ ಅದ್ಭುತ ತಂತ್ರಜ್ಞಾನ. ಇದನ್ನು ನಾಳಿನ ಭವಿಷ್ಯ ಎಂದೂ ಹೇಳಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ ನಿರ್ದಿಷ್ಟ ಕೆಲಸವನ್ನು ಮಾಡುವ ಗಣಕ ನಿರ್ದೇಶಗಳು ಇರುತ್ತವೆ. ಅವು ತಾವು ಕಾರ್ಯ ನಿರ್ವಹಿಸುತ್ತದ್ದಂತೆಯೇ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಹಾಗೂ ನಿರ್ದೇಶಗಳನ್ನು ಸ್ವತಃ ಮಾರ್ಪಡಿಸಿಕೊಳ್ಳಲು ಕಲಿಯುತ್ತವೆ. ಹೀಗೆ ಇವು ಸಾಮಾನ್ಯ ಗಣಕ ತಂತ್ರಾಂಶಗಳು ಸಾಧಿಸದೇ ಇದ್ದದ್ದನ್ನು ಮಾಢಬಲ್ಲುವು.
ಇಂತಹ ತಂತ್ರಜ್ಞಾನದ ಒಂದು ಸರಳ ರೂಪ ನಮ್ಮ ಸ್ಮಾರ್ಟ್ ಫೋನುಗಳಲ್ಲಿ ಇವೆ ಎನ್ನಬಹುದು. ಸ್ಮಾರ್ಟ್ ಫೋನಿನಲ್ಲಿ ಏನಾದರೂ ಪಾಠವನ್ನು ಬರೆಯಲು ಕೀಲಿ ಒತ್ತಿದ ಕೂಡಲೇ ಅಲ್ಲಿ ಹಲವು ಪದಗಳನ್ನು ಫೋನು ಸೂಚಿಸುತ್ತದೆ. ನಿಮ್ಮ ಮನಸ್ಸನ್ನು ಅದು ಊಹಿಸಿತೋ ಎನ್ನುವ ಹಾಗೆ ತೋರಿದರೂ, ಇದು ಕೇವಲ ಒಂದು ತಂತ್ರಾಂಶದ ಕೆಲಸ. ನೀವು ಕೀಲಿ ಒತ್ತುತ್ತಿದ್ದ ಹಾಗೆಯೇ, ಅದರ ಸ್ಮರಣೆಯಲ್ಲಿ ಇರುವ ನಿಘಂಟಿನಲ್ಲಿ ಕೀಲಿಸಿದ ಅಕ್ಷರಗಳ ಸರಮಾಲೆ ಇರುವ ಪದಗಳನ್ನು ಹುಡುಕಿ ನಿಮ್ಮ ಮುಂದಿಡುತ್ತದೆ ಅಷ್ಟೆ. ಅದೇ ವೇಳೆ, ನಿಘಂಟಿನಲ್ಲಿ ಇಲ್ಲದ ಪದವನ್ನೇನಾದರೂ ನೀವು ಟಂಕಿಸಿದರೆ, ಅದನ್ನು ಅದು ತನ್ನ ಸ್ಮರಣೆಯಲ್ಲಿ ಉಳಿಸಿಕೊಂಡು, ಮುಂದೆ ಇನ್ನೊಮ್ಮೆ ನೀವು ಅದೇ ಅಕ್ಷರಗಳನ್ನು ಕೀಲಿಸಿದಾಗ ಟಕ್ಕನೆ ಅದೇ ಪದವನ್ನು ತೋರಿಸುತ್ತದೆ. ಇದಕ್ಕೆ ನೀವು ಶಹಭಾಸ್ ಏನೂ ಹೇಳದಿದ್ದರೂ, ಅದರ ನಂತರವೂ ಹಾಗೆಯೇ ಮುಂದುವರೆಸುತ್ತದೆ. ಅಂದರೆ ಅದು ನಿಮ್ಮ ಇಚ್ಛಾನಿಚ್ಛೆಯನ್ನು ಊಹಿಸಿ, ನಿಮಗೆ ಪ್ರಿಯವಾದ ಹೊಸ ಪದವನ್ನು ಕಲಿತಿದೆ ಎನ್ನಬಹುದು.
ಹೀಗೆ ತನ್ನ ನಿಘಂಟನ್ನು ತಾನೇ ತಿದ್ದಿಕೊಳ್ಳುವ ಸಾಮರ್ಥ್ಯ ಏಐನಲ್ಲಿ ಬಲು ಸರಳವಾದದ್ದು ಎನ್ನಬಹುದು. ಜಟಿಲತೆಯಲ್ಲಿ ಹಲವು ಸ್ತರಗಳಿರುವ ತಂತ್ರಜ್ಞಾನಗಳು ಏಐನಲ್ಲಿ ಇವೆ. ಇವುಗಳಲ್ಲಿ ಒಂದನ್ನು ಬಳಸಿಕೊಂಡು, ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವಂತಹ ತಂತ್ರಾಂಶಗಳನ್ನು ತಯಾರಿಸಬಹುದೇ ಎನ್ನುವ ಯೋಚನೆ ವಿಜ್ಞಾನಿಗಳದ್ದು. ಒಂದು ವಾಕ್ಯವನ್ನು ಬರೆದರೆ, ಒಂದು ಕಾವ್ಯವನ್ನೇ ರಚಿಸಿಬಿಡುತ್ತದೆ. ನಾಟಕವನ್ನು ಬರೆದು ಕೊಡುತ್ತದೆ. ಒಂದು ರೀತಿಯಲ್ಲಿ ಇದು ಯಂತ್ರ ಬರೆದ ನಾಟಕ.
ಜೆಕೋಸ್ಲೊವಾಕಿಯಾದ ಪ್ರಾಗ್ ನಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾನಿಲಯದ ಕೃತಕ ಬುದ್ಧಿಮತ್ತೆ, ಅರ್ಥಾತ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ತಂತ್ರಜ್ಞರು ಓಪನ್ ಏಐ ತಂತ್ರಾಂಶವನ್ನು ಬಳಸಿಕೊಂಡು ಇದನ್ನು ರಚಿಸಿದ್ದಾರೆ. ಓಪನ್ ಏಐ ಎನ್ನುವುದು ಸುಪ್ರಸಿದ್ಧ ಉದ್ಯಮಿ, ಇಲೆಕ್ಟ್ರಿಕ್ ಕಾರು ತಯಾರಕ ಎಲಾನ್ ಮಸ್ಕ್ ರವರ ಕಂಪೆನಿ ರಚಿಸಿದ ಒಂದು ತಂತ್ರಾಂಶಗಳ ನಿಧಿ. ಇದರಲ್ಲಿ ಏಐಯನ್ನು ಬಳಸುವ ಹಲವು ತಂತ್ರಾಂಶಗಳನ್ನು ಪರೀಕ್ಷೆಗೆ ಇಡಲಾಗಿದೆ. ಇವುಗಳನ್ನು ಇಂಟರ್ನೆಟ್ಟಿನಲ್ಲಿ ಯಾರು ಬೇಕಿದ್ದರೂ ಇದನ್ನು ಬಳಸಬಹುದು. ಫೇಸ್ ಬುಕ್ಕಿನಲ್ಲಿ ಕೆಲವು ಮಾಹಿತಿಯನ್ನೋ, ನಿಮ್ಮ ಚಿತ್ರವನ್ನೋ ಕೊಟ್ಟರೆ ಅದು ನೀವು ಬೇರೆ ಗ್ರಹದಲ್ಲಿ ಹುಟ್ಟಿದ್ದರೆ ಹೇಗೆ ಕಾಣುತ್ತಿದ್ದಿರಿ ಅಂತೇನೋ ಚಿತ್ರ ರೂಪಿಸುತ್ತದೆಯಲ್ಲ, ಹಾಗೆಯೇ ಈ ಓಪನ್ ಏಐಯಲ್ಲಿರುವ ಜಿಪಿಟಿ ಎರಡು ಎನ್ನುವ ತಂತ್ರಾಂಶಕ್ಕೆ ಕೆಲವು ವಾಕ್ಯಗಳನ್ನು ನೀಡಿದರೆ ಸಾಕು. ಅದು ತನ್ನಂತಾನೇ ಸಾವಿರ ಪದಗಳ ಪ್ರಬಂಧವನ್ನೋ, ಕಥೆಯನ್ನೋ ಬರೆಯಬಲ್ಲುದು. ಈ ಕಥೆ ನಮ್ಮ ಸೃಜನಶೀಲ ಸಾಹಿತಿಗಳು ಬರೆಯುವಷ್ಟು ರಾಗರಂಜಿತವಾಗಿಲ್ಲದಿದ್ದರೂ, ಕಥೆಯಾಗಿ ತೋರುತ್ತದೆ ಎನ್ನುವುದು ನಂಬಿಕೆ.
ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಹೀಗೆಯೇ ಓಪನ್ ಏಐ ಯನ್ನು ಬಳಸಿಕೊಂಡು ಒಂದು ನಾಟಕವನ್ನು ರಚಿಸಲಾಗಿತ್ತು. ನಾಟಕ ಬರೆಯಲು ಆರಂಬಿಸಲು, ತಂತ್ರಾಂಶಕ್ಕೆ ಇಬ್ಬರು ಪಾತ್ರಗಳು ಮಾತನಾಡುವಂತಹ ಎರಡು ವಾಕ್ಯಗಳ ಒಂದು ಸಂಭಾಷಣೆಯನ್ನು ನೀಡಲಾಗಿತ್ತು. ಆ ಕಥೆ ಹೀಗಿತ್ತು. ಮೊದಲ ಎರಡು ವಾಕ್ಯಗಳನ್ನು ತಂತ್ರಾಂಶಕ್ಕೆ ನೀಡಲಾಗಿತ್ತು.
ಒಬ್ಬ ಕೋಣೆಯನ್ನು ಪ್ರವೇಶಿಸುತ್ತಾನೆ.
ಸುತ್ತಲೂ ನೋಡಿ ಕಿಟಕಿಯಿಂದ ಇಣುಕುತ್ತಾನೆ. “ಇನ್ನೂ ಆರಂಭವಾಗಿಲ್ಲ” ಎನ್ನುತ್ತಾನೆ
ಆಗ ಅವಳು ಪ್ರವೇಶಿಸುತ್ತಾಳೆ: ಬಿಳೀ ದಿರಿಸು ಧರಿಸಿ, ಕೈಯಲ್ಲಿ ಒಂದು ಪುಸ್ತಕ ಹಿಡಿದಿದ್ದಾಳೆ
ಅವಳು: ನಾನೂ ಕಾಯುತ್ತಿದ್ದೇನೆ
ಅವನು: ಎಷ್ಟು ಹೊತ್ತಿನಿಂದ
ಅವಳು: ಸ್ವಲ್ಪ ಹೊತ್ತಾಯಿತು.
ಇದು ತಂತ್ರಜ್ಞರು ಬರೆದ ವಾಕ್ಯಗಳು. ಇದಾದ ನಂತರ ಏಐ ಉಳಿದೆಲ್ಲ ವಾಕ್ಯಗಳನ್ನೂ ಹೀಗೆ ಬರೆದಿತ್ತು.
ಅವನು: ಹೌದಾ. ಯಾತಕ್ಕಾಗಿ ಕಾಯುತ್ತಿದ್ದೇ?
ಅವಳು: ಅಂತ್ಯದ ಆರಂಭಕ್ಕಾಗಿ ಕಾಯುತ್ತಿದ್ದೆ.
ಅವನು: ಅಂತ್ಯವೇ ಇಲ್ಲವಲ್ಲ.
ಅವಳು: ಹಾಗಿದ್ದರೆ ನಾನು ಅನಂತಕ್ಕಾಗಿ ಕಾಯುವೆ.
ಹೀಗೆ ಈ ತಂತ್ರಾಂಶ ಹಿಂದಿನ ವಾಕ್ಯಗಳಲ್ಲಿದ್ದ ಪದಗಳನ್ನೇ ಆಚೀಚೆ ತಿರುಗಿಸಿ, ಹೊಸ ವಾಕ್ಯಗಳನ್ನಾಗಿ ಮಾಡಿತ್ತು. ಕಥೆ ವಿಚಿತ್ರ ನಾಟಕಗಳಂತೆ, ಮೇಲ್ನೋಟಕ್ಕೆ ಅರ್ಥವಿಲ್ಲದೆ ಬಡಬಡಾಯಿಸಿದಂತೆ ಇತ್ತು. ಇದು ಕೇವಲ ಪರೀಕ್ಷೆಯಾಗಿತ್ತಷ್ಟೆ. ಇದೀಗ ಜೆಕೋಸ್ಲೋವಾಕಿಯಾದ ವಿದೇಶೀ ಮಂತ್ರಾಲಯ ಈ ತಂತ್ರಜ್ಞಾನವನ್ನೇ ಉಪಯೋಗಿಸಿಕೊಂಡು, ಪೂರ್ಣಪ್ರಮಾಣದ ನಾಟಕವೊಂದನ್ನು ರಚಿಸಿ, ಜಾಗತಿಕ ಪ್ರದರ್ಶನವನ್ನು ನೀಡಿದೆ.
ಕಥೆಗೆ ಪ್ರೇರಣೆ, ನೂರು ವರ್ಷಗಳ ಹಿಂದೆ ಜಗತ್ತಿಗೆ ಯಂತ್ರಮಾನವರ ಕಲ್ಪನೆಯನ್ನು ಕೊಟ್ಟ ಜೆಕ್ ಲೇಖಕ ಎನ್ನಬಹುದು. ನೂರು ವರ್ಷಗಳ ಹಿಂದೆ ಕೇರಲ್ ಕ್ಯಾಪೆಕ್ ಎಂಬ ಜೆಕ್ ಲೇಖಕ ಬರೆದ ವೈಜ್ಞಾನಿಕ ಕಥೆಯಲ್ಲಿ ರೋಬಾಟು ಎನ್ನುವ ಪದವನ್ನೂ, ಪರಿಕಲ್ಪನೆಯನ್ನೂ ಮೂಡಿಸಿದ್ದ. ಇದಾಗಿ ನೂರು ವರ್ಷಗಳಲ್ಲಿ, ಈ ರೋಬಾಟುಗಳು ಜೀವ ತಳೆದಿವೆ. ಅಲ್ಲಲ್ಲ. ಸೃಷ್ಟಿಯಾಗಿವೆ. ಮಾನವರಿಂದಲೇ ಸೃಷ್ಟಿಯಾಗಿ, ಹಲವು ಕಡೆ ಮಾನವರ ಸ್ಥಾನವನ್ನು ಕಬಳಿಸುತ್ತಿವೆ. ಕೇವಲ ಯಾಂತ್ರಿಕ ಕೆಲಸಗಳಿಗಷ್ಟೆ ಇವು ಓಕೆ ಎನ್ನುವಲ್ಲಿಂದ ಈಗ ಮನುಷ್ಯನ ಬುದ್ಧಿಮತ್ತೆಗೂ ಸವಾಲು ಹಾಕುವ ಹಲವು ಕೆಲಸಗಳಲ್ಲಿ ಯಂತ್ರಗಳನ್ನು, ವಿಶೇಷವಾಗಿ ಗಣಕ ಯಂತ್ರಗಳನ್ನು, ಉಪಯೋಗಿಸುತ್ತಿದ್ದೇವೆ. ೧೯೨೧ರಲ್ಲಿ ಪ್ರಪ್ರಥಮವಾಗಿ ಬಳಕೆಯಾದ ರೋಬಾಟು ಪದದ ಶತಮಾನೋತ್ಸವದ ನೆನಪಿನಲ್ಲಿ ಈ ನಾಟಕವನ್ನು ರಚಿಸಲಾಗಿದೆ.
ನಾಟಕದ ಹೆಸರು, ಏಐ: ರೋಬಾಟು ನಾಟಕ ರಚಿಸಿದಾಗ. ಎಂಥಾ ಅನ್ವರ್ಥ ನಾಮ ಅಲ್ಲವೇ? ಇದನ್ನು ಇವರು ರೂಪಿಸಿದ್ದು ಹೀಗೆ. ಮೊದಲಿಗೆ ಕೆಲವು ವಾಕ್ಯಗಳನ್ನು ಬರೆದು ಓಪನ್ ಏಐ ತಂತ್ರಾಂಶಕ್ಕೆ ನೀಡಿದರು. ಅದು ಕೂಡಲೇ ಇಂಟರ್ ನೆಟ್ಟಿನಲ್ಲಿ ಇದ್ದ ಮಾಹಿತಿಯನ್ನೆಲ್ಲ ಜಾಲಾಡಿ, ಒಂದಿಷ್ಟು ಸಂಭಾಷಣೆಯನ್ನು ಬರೆಯಿತು. ಅದನ್ನು ಪರಿಶೀಲಿಸಿ, ತಿದ್ದಿ, ಮತ್ತೆ ತಂತ್ರಾಂಶಕ್ಕೆ ನೀಡಿದರು. ಹೀಗೆ ಐದಾರು ಅಂಕಗಳನ್ನು ರಚಿಸಿದರು. ನಾಟಕವನ್ನು ಪೂರ್ತಿಗೊಳಿಸಿದರು. ಇದರಲ್ಲಿ ತಂತ್ರಜ್ಞರ ಕಲ್ಪನೆಯಾಗಲಿ, ಕಥೆಯಾಗಲಿ, ನಿರ್ದೇಶವಾಗಲಿ ಏನೂ ಇರಲಿಲ್ಲ. ಏಐ ಬರೆದ ಜಾಳು, ಜಾಳಾದ ನಾಟಕವನ್ನು ಅದುವೇ ಮತ್ತೆ ಪರಿಷ್ಕರಿಸುವಂತೆ ಮಾಡಿದ್ದರು ಅಷ್ಟೆ.
ಈ ನಾಟಕವನ್ನು ಫೆಬ್ರವರಿ ಇಪ್ಪತ್ತಾರರಂದು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಇದು ವಿಶೇಷ. ಆದರೆ ಈ ನಾಟಕ ಇನ್ನೂ ಹಲವು ಪ್ರಶ್ನೆಗಳನ್ನು ಮುಂದೀಡುತ್ತದೆ. ಈ ಹಿಂದೆ ಏಐ ಬಳಸಿ, ಒಂದು ವೈಜ್ಞಾನಿಕ ಪಠ್ಯ ಪುಸ್ತಕವನ್ನು ರಚಿಸಲಾಗಿತ್ತು. ಆದರೆ ಅದು ಮನುಷ್ಯರ ಸಮಾಜದ ವಿಮರ್ಶೆಯಾಗಿರಲಿಲ್ಲ. ಈಗ ಈ ರೀತಿಯ ನಾಟಕ, ಕಥೆಗಳು ಇಂಟರ್ನೆಟ್ಟಿನಲ್ಲಿ ಸಿಗುವ ಮಾಹಿತಿಯನ್ನು ಬಳಸಿಕೊಂಡು ಸಿದ್ಧವಾಗುವುದರಿಂದ, ಇಂಟರ್ ನೆಟ್ಟಿನಲ್ಲಿ ಯಾವುದು ಹೇಚ್ಚೋ ಅದನ್ನೇ ಹೆಚ್ಚೆಚ್ಚು ಬಿಂಬಿಸಲು ಆರಂಭಿಸಬಹುದು. ಇಲ್ಲಿ ಆಗಿದ್ದೂ ಹಾಗೆಯೇ. ಈ ನಾಟಕದಲ್ಲಿ, ಬೇಕೋ ಬೇಡವೋ, ಪ್ರಚೋದನಕಾರಿ ಮಾತುಗಳು ಮತ್ತು ದೃಶ್ಯಗಳು ಅಲ್ಲಲ್ಲಿ ಹೆಚ್ಚಿದ್ದುವಂತೆ. ಅದನ್ನೆಲ್ಲ ತಂತ್ರಜ್ಞರು ತಿದ್ದಬೇಕಾಯಿತು.
ಜೊತೆಗೆ ಇದನ್ನು ಅಭಿನಯಿಸುವುದೂ ಕಷ್ಟ. ಏಕೆಂದರೆ ಹೇಳಿ ಕೇಳಿ ಈ ಯಂತ್ರಕ್ಕೆ ಭಾವನೆಗಳು ಗೊತ್ತಿಲ್ಲ. ನಾಟಕದ ಅಥವಾ ರಂಗಮಂಚದ ನಿಯಮಗಳು, ಸಂಸ್ಕೃತಿಯ ಅರಿವಿರುವುದಿಲ್ಲ. ಹೀಗಾಗಿ ಇದು ಬರೆದ ನಾಟಕವೇನು, ಅದರ ಭಾವವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಕಲಾವಿದರಿಗೆ ಕಷ್ಟವಾಯಿತು ಎನ್ನುತ್ತಾರೆ ಈ ನಾಟಕದ ರಚನೆಯಲ್ಲಿ ಕೈಗೂಡಿಸಿದ್ದ ಜೆಕ್ ನಾಟಕಕಾರ ಡೇವಿಡ್ ಕೋಸ್ತಾಕ್. ನಾಟಕ ನೋಡುವಂತಿತ್ತೋ, ಇಲ್ಲವೋ. ಇಂತಹ ಪ್ರಯತ್ನಗಳಿಂದ ಏನಿಲ್ಲದಿದ್ದರೂ ಇನ್ನು ಮುಂದೆ ಸೃಜನಶೀಲ ಸಾಹಿತ್ಯ ಎನ್ನುವುದರ ವ್ಯಾಖ್ಯಾನ ಬಹುಶಃ ಇನ್ನಷ್ಟು ಮೊನಚಾಗಬಹುದು.