ಜಿಎಸ್‍ಟಿ ವ್ಯವಸ್ಥೆ: ವಿಶ್ವಾಸಾರ್ಹತೆಗೆ ಧಕ್ಕೆ

43ನೇ ಜಿಎಸ್‍ಟಿ ಮಂಡಳಿ ಸಭೆ ಮುಗಿದಿದೆ. ಕರ್ನಾಟಕ ಸರ್ಕಾರ ತನಗೆ ಬರಬೇಕಿರುವ 11,000 ಕೋಟಿ ರೂ.ಗಳನ್ನು ಕೊಡಬೇಕೆಂದು “ಮನವಿ’ ಸಲ್ಲಿಸಿದೆ! ತಮಿಳುನಾಡು ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ “ಜಿಎಸ್‍ಟಿ ಸಮಿತಿ ಒಂದು ರಬ್ಬರ್ ಸ್ಟ್ಯಾಂಪ್’ ಎಂದು ಖಂಡಿಸಿದ್ದಾರೆ. ಜಿಎಸ್‍ಟಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಅದು ಕೇಂದ್ರದ ಭಿಕ್ಷೆಯಲ್ಲ. ರಾಜ್ಯಗಳಿಗೆ ಪಾಲು ಸಲ್ಲಿಸಲು ಕೇಂದ್ರ ಅಂದಾಜು 1.58 ಲಕ್ಷ ಕೋಟಿ ರೂ. ಸಾಲ ಎತ್ತಬೇಕಿದೆ. ಜಿಎಸ್‍ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದ ರೀತಿ ಹಾಗೂ ಆ ವ್ಯವಸ್ಥೆಯೇ ದೋಷಪೂರಿತ/ಅವೈಜ್ಞಾನಿಕವಾಗಿತ್ತು. ಜಿಎಸ್‍ಟಿ ವ್ಯವಸ್ಥೆ ತನ್ನಷ್ಟಕ್ಕೆ ತಾನೇ ಕುಸಿಯುತ್ತದೆ ಎನ್ನುವುದು ಅರ್ಥಕ್ಷೇತ್ರದ ಪರಿಣತರ ಅನಿಸಿಕೆ.

ದೇಶದ 31 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿ 16 ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿವೆ. ಬಿಜೆಪಿ ಆಡಳಿತವಿರುವ ಸರ್ಕಾರಗಳು ಜಿಎಸ್‍ಟಿ ಒಪ್ಪಬಹುದಾದರೂ, ಉಳಿದ ರಾಜ್ಯಗಳು ತಮ್ಮದೇ ಅಭಿಪ್ರಾಯ ಹೊಂದಿವೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳು ಈ ವ್ಯವಸ್ಥೆ ಬಗ್ಗೆ ಹಾಗೂ ತಮ್ಮ ಪಾಲು ಸಂದಾಯವಾಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸಭೆಯಲ್ಲಿ ಕೋವಿಡ್ ಲಸಿಕೆ ಹಾಗೂ ಸಂಬಂಧಿಸಿದ ಇನ್ನಿತರ ಪೂರೈಕೆಗಳ ಮೇಲಿನ ಜಿಎಸ್‍ಟಿ ಕಡಿತಗೊಳಿಸಲು ಸಮಿತಿ ಸಮ್ಮತಿಸಿಲ್ಲ. ಆದರೆ, ರಾಜ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹೊರಗಿನಿಂದ ಬರುತ್ತಿರುವ ಸರಕು-ಸಾಧನಗಳಿಗೆ ಜಿಎಸ್‍ಟಿ ವಿನಾಯಿತಿ ನೀಡಲು ಸಮ್ಮತಿಸಿದೆ. ವಿನಾಯಿತಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಕಪ್ಪು ಶಿಲೀಂಧ್ರ ಸಮಸ್ಯೆಗೆ ಪರಿಹಾರವಾದ ಆಂಫೋಟೆರಿನ್-ಬಿ ಗೆ ಆಮದು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ವೈಯಕ್ತಿಕ ಬಳಕೆಗೆ ತರಿಸಿಕೊಳ್ಳುವ ಆಮ್ಲಜನಕ ಕಾನ್ಸಂಟ್ರೇಟರ್‍ಗಳ ಮೇಲಿನ 12% ಜಿಎಸ್‍ಟಿಯನ್ನು ರದ್ದುಗೊಳಿಸಬೇಕೆಂದು ದಿಲ್ಲಿ ಹೈಕೋರ್ಟ್ ಹೇಳಿತ್ತು.

ಹೆಚ್ಚಿನ ರಾಜ್ಯಗಳು ಯೋಜನೆ-ಯೋಜನೇತರ ವೆಚ್ಚ ಭರಿಸಲು ಜಿಎಸ್‍ಟಿ ಪಾಲನ್ನು ಆಧರಿಸಿದ್ದು, ಅದು ಒಟ್ಟು ಆದಾಯದ ಅರ್ಧದಷ್ಟು ಇದೆ. ಕೋವಿಡ್ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ಕುಸಿದಿದ್ದು, ರಾಜ್ಯಗಳು ಹಣದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಜಿಎಸ್‍ಟಿ ಮಂಡಳಿ ಸಭೆ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದರೂ, ಆರು ತಿಂಗಳಿನಿಂದ ನಡೆದಿರಲಿಲ್ಲ. ಬಿಜೆಪಿಯೇತರ 14 ರಾಜ್ಯಗಳ ಒತ್ತಾಯದ ಹಿನ್ನೆಲೆಯಲ್ಲಿ ಸಭೆ ನಡೆಯಿತಾದರೂ, ಬಿಜೆಪಿ ಆಡಳಿತವಿರುವ 17 ರಾಜ್ಯಗಳ ಸದಸ್ಯರು ಸಭೆ ಅಗತ್ಯವಿಲ್ಲ ಎಂದಿದ್ದರು.

ತೆರಿಗೆ ಆದಾಯದ ಹಂಚಿಕೆಯು ಒಂದು ರಾಜಕೀಯ ನಿರ್ಧಾರವೂ ಹೌದು. ಜಿಎಸ್‍ಟಿ ಸಹಕಾರ ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ವಿರುದ್ಧವಾಗಿರುವಂಥದ್ದು ಹಾಗೂ ಜಿಎಸ್‍ಟಿ ಮಂಡಳಿ ಜಡ ಆರ್ಥಿಕ ಮಂಡಳಿಯಲ್ಲ. ಬದಲಿಗೆ, ರಾಜ್ಯ ಹಾಗೂ ಒಕ್ಕೂಟ ಸರ್ಕಾರದ ನಡುವಿನ ನಂಬಿಕೆ-ವಿಶ್ವಾಸಾರ್ಹತೆಯ ಸೂಚಕ. ಮಂಡಳಿಯಲ್ಲಿರುವ 17 ಬಿಜೆಪಿ ಹಾಗೂ 14 ಬಿಜೆಪಿಯೇತರ ಸದಸ್ಯರು, ಅಂದಾಜು ತಲಾ ಅರ್ಧ ದೇಶವನ್ನು ಪ್ರತಿನಿಧಿಸುತ್ತಾರೆ. ಆದರೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ-ತೆಲಂಗಾಣ ಸೇರಿದಂತೆ ಬಿಜೆಪಿಯೇತರ ರಾಜ್ಯಗಳು ಜಿಎಸ್‍ಟಿ ರೂಪದಲ್ಲಿ ಸಂಗ್ರಹವಾಗುತ್ತಿರುವ ಮೊತ್ತದಲ್ಲಿ ಶೇ.60 ಪಾಲು ನೀಡುತ್ತಿದ್ದು, ಒಟ್ಟು ಜಿಡಿಪಿಯಲ್ಲಿ ಶೇ.63 ರಷ್ಟು ಪಾಳು ಸಲ್ಲಿಸುತ್ತಿವೆ. ಮುಂದಿನ ವರ್ಷ(2022) ಏಳು ರಾಜ್ಯಗಳಲ್ಲಿ ಚುನಾವಣೆ ನಡೆಯ ಬೇಕಿದ್ದು, ಬಳಿಕ ಈ ಅಂಕಿಸಂಖ್ಯೆ ಬದಲಾಗುವ ಸಾಧ್ಯತೆಯಿದೆ. ಜಿಎಸ್‍ಟಿ ಮಂಡಳಿ ಚುನಾವಣೆ ಹಾಗೂ ವೈರ ರಾಜಕೀಯದ ಆಡುಂಬೊಲ. ಈ ಹಿನ್ನೆಲೆಯಲ್ಲಿ ಜಿಎಸ್‍ಟಿ ಮಂಡಳಿ ಕಾಲಕ್ರಮೇಣ ಬೆರ್ಚಪ್ಪನಂತೆ ಆಗುವುದು ಖಚಿತ.

15ನೇ ವಿತ್ತ ಆಯೋಗದ ವರದಿ ಪ್ರಕಾರ, ನೀಡಿದ್ದ ಭರವಸೆಗಳನ್ನು ಪೂರೈಸುವಲ್ಲಿ ಜಿಎಸ್‍ಟಿ ದಯನೀಯವಾಗಿ ವಿಫಲವಾಗಿದೆ. ಟೆಕ್ನೋಕ್ರ್ಯಾಟ್‍ಗಳು ರೂಪಿಸಿದ್ದ ಈ ವ್ಯವಸ್ಥೆಯನ್ನು ಆರ್ಥಿಕ ಕ್ಷಮತೆ ಹೆಚ್ಚಳ, ತೆರಿಗೆ ವ್ಯವಸ್ಥೆ ಯ ಹಾಗೂ ಸಂಗ್ರಹದ ಸುಧಾರಣೆ, ಜಿಡಿಪಿ ಬೆಳವಣಿಗೆಗೆ ಚೈತನ್ಯ ತುಂಬುವಿಕೆ ಹಾಗೂ ಆರ್ಥಿಕತೆಯನ್ನು ಇನ್ನಷ್ಟು ಔಪಚಾರಿಕಗೊಳಿಸುವ ದಿವ್ಯೌಷಧಿ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಅನುಷ್ಠಾನಗೊಂಡ ಮೂರು ವರ್ಷದ ಬಳಿಕ ಈ ಯಾವ ವಿಭಾಗದಲ್ಲೂ ಯಶ ಕಂಡಿಲ್ಲ. ಅರ್ಥಶಾಸ್ತ್ರಜ್ಞರು-ವ್ಯಾಖ್ಯಾನಕಾರರ ಪ್ರಕಾರ, ಅಧಿಕ ತೆರಿಗೆ ಸ್ಲ್ಯಾಬ್‍ಗಳು, ಬಹು ತೆರಿಗೆ ವಿನ್ಯಾಸ, ತೆರಿಗೆ ಪಾವತಿಸುವಲ್ಲಿ ಸಂಕೀರ್ಣತೆ ಇದಕ್ಕೆ ಕಾರಣ. ಆರಂಭದಲ್ಲಿದ್ದ ಈ ಸಮಸ್ಯೆಗಳು ಮೂರು ವರ್ಷದ ಬಳಿಕವೂ ರಿಪೇರಿಯಾಗಿಲ್ಲ. ಜಿಎಸ್‍ಟಿ ದರದ ತಾರ್ಕಿಕ ಬದಲಾವಣೆ ಹಾಗೂ ಪಾವತಿ ವ್ಯವಸ್ಥೆಯ ಸರಳೀಕರಣ ಸ್ವಲ್ಪ ಮಟ್ಟಿಗೆ ಆಗಿದ್ದರೂ, ಕೇಂದ್ರ ಹಾಗೂ ರಾಜ್ಯಗಳ ನಡುವಿನ ವಿಶ್ವಾಸ ನಷ್ಟವಾಗಿದೆ. ಇದನ್ನು ಸರಿಪಡಿಸುವ ಮನಸ್ಸು ಒಕ್ಕೂಟ ಸರ್ಕಾರಕ್ಕಿಲ್ಲ.

ಜಿಎಸ್‍ಟಿಯಿಂದ ರಾಜ್ಯಗಳ ಆರ್ಥಿಕ ಸ್ವಾಯತ್ತೆಗೆ ರಿಪೇರಿ ಮಾಡಲು ಸಾಧ್ಯವಿಲ್ಲದ ಹೊಡೆತ ಬಿದ್ದಿದೆ. ಆದರೆ, ನೀಡಿದ್ದ ವಾಗ್ದಾನಗಳು ಹುಸಿಯಾಗಿವೆ. ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿರುವ ರಾಜ್ಯಗಳಿಗೆ ಜಿಎಸ್‍ಟಿ ವ್ಯವಸ್ಥೆ ನೀಡಬೇಕಿದ್ದ ಪಾಲು ನೀಡಿಲ್ಲ. ಬದಲಾಗಿ, ಸಾಲ ಎತ್ತಲು ರಾಜ್ಯಗಳಿಗೆ ಸೂಚಿಸಲಾಗಿದೆ. ರಾಜ್ಯಗಳಿಗೆ ಪ್ರತಿ ವರ್ಷ ತೆರಿಗೆ ಆದಾಯದಲ್ಲಿ ಶೇ.14ರಷ್ಟು ಪಾಲು ಖಾತ್ರಿಗೊಳಿಸಿರುವುದರಿಂದ ಅವು ಉಸಿರಾಡುತ್ತಿವೆ. ಆದರೆ, ಈ ಆದಾಯ ಖಾತ್ರಿ 2022ಕ್ಕೆ ಅಂತ್ಯಗೊಳ್ಳಲಿದೆ. ಆನಂತರ ರಾಜ್ಯಗಳ ಪಾಡೇನು? ಬಳಿಕ ಜಿಎಸ್‍ಟಿ ವ್ಯವಸ್ಥೆಗೆಯ ಆಧಾರವೇ ಕುಸಿದು ಕಳಚಿ ಬೀಳುವ ಸಾಧ್ಯತೆಯಿದೆ.

ತೆರಿಗೆ ವಿಧಿಸುವ ಅಧಿಕಾರ ಇಲ್ಲದೆ ಇರುವಾಗ ಹಾಗೂ ಜಿಎಸ್‍ಟಿಯಲ್ಲಿ ಪಾಲು ಸಿಗುವುದು ಅನಿಶ್ಚಿತವಾಗಿರುವ ಸನ್ನಿವೇಶದಲ್ಲಿ ರಾಜ್ಯಗಳು ಏನು ಮಾಡಬೇಕು? ರಾಜ್ಯಗಳ ಸಲಹೆ ಕೇಳದೆ ಲಾಕ್‍ಡೌನ್ ಘೋಷಿಸುವ ಹಾಗೂ ತೆರಿಗೆ ವಿಧಿಸುವ ಹಕ್ಕನ್ನೇ ಕಳೆದುಕೊಂಡಿರುವ ರಾಜ್ಯಗಳಿಗೆ ಇರಬಹುದಾದ ಮಾರ್ಗವಾದರೂ ಏನು? ಜಿಎಸ್‍ಟಿ ವ್ಯವಸ್ಥೆಯನ್ನು ಹಾಡಿ ಹೊಗಳುವವರು ದೇಶದ ವಿಶಿಷ್ಟ ರಾಜಕೀಯ-ಆರ್ಥಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲುು ವಿಫಲರಾಗಿದ್ದಾರೆ. ಸಂಶಯ ಹಾಗೂ ಹಗೆತನ ಸುಳಿದಾಡುತ್ತಿರುವ ಪರಿಸ್ಥಿತಿಯಲ್ಲಿ ನಾನಾ ರಾಜಕೀಯ ಪಕ್ಷಗಳು ಒಂದೇ ಒಂದು ತೆರಿಗೆ ವ್ಯವಸ್ಥೆಗೆ ಒಳಪಡುವುದು ಕ್ಲಿಷ್ಟ. ನಂಬಿಕೆಯನ್ನು ಆಧರಿಸಿದ ಈ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬೇಕಿದ್ದರೆ, ಕೇಂದ್ರ ತೆರಿಗೆ ಆದಾಯವನ್ನು ಹಂಚುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದಕ್ಷಿಣದ ರಾಜ್ಯಗಳ ಆದಾಯದಿಂದ ಉತ್ತರದ ರಾಜ್ಯಗಳನ್ನು ಸಾಕುವ ಈ ವ್ಯವಸ್ಥೆ ಅನ್ಯಾಯದ್ದು, ಅಸಂಬದ್ಧ ಹಾಗೂ ಅಸಂಗತ. ಕೇಂದ್ರ ರಾಜ್ಯಗಳಿಗೆ ಅವುಗಳ ತೆರಿಗೆ ಸಂಗ್ರಹಕ್ಕೆ ಅನುಗುಣವಾಗಿ ಪಾಲು ಹಂಚಲು ಮುಂದಾಗಬೇಕಿದೆ ಮತ್ತು ಪಾಲನ್ನು ಖಾತ್ರಿಪಡಿಸಬೇಕಿದೆ. ಆದರೆ, ಅಂಥ ಮನಸ್ಥಿತಿ ಕಂಡುಬರುತ್ತಿಲ್ಲ.

****

 

Journalist,Translator,avid bibliophile

Leave a Reply

Your email address will not be published. Required fields are marked *

Back To Top