ಸೂರ್ಯ ಸತ್ತೇ ಇವುಗಳ ಸಂತತಿ ಇಲ್ಲವಾಗಬೇಕು!

ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದು, ಇಲ್ಲದಿರಬಹುದು. ಕಾಲವೆ ಉತ್ತರಿಸಬೇಕು.

ಆದರೆ ನಮ್ಮ ಭೂಮಿಯೆ ಏಲಿಯನ್ ತರಹ ಕಾಣುವ ಜೀವಿಯೊಂದನ್ನು ವಿಕಾಸಗೊಳಿಸಿದೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಜೀವಿ  0.5 – 1.0 ಮಿ.ಮೀ. ಉದ್ದವಿದ್ದು ಆಳ ಸಾಗರದಿಂದ ಹಿಡಿದು ಮರುಭೂಮಿಯ ಮರಳು ದಿಬ್ಬಗಳವೆರೆಗೆ ಎಲ್ಲೆಡೆ ವಾಸಿಸಬಲ್ಲದು. ಪಾಚಿ ಬೆಳೆಯುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲೂ ಯಥೇಚ್ಛ ಕಂಡುಬರುತ್ತದೆ. ಅಂತರಿಕ್ಷದ ನಿರ್ವಾತದಲ್ಲೂ ಸಾಯದೆ ಇರಬಲ್ಲದು. -273 ಡಿಗ್ರಿ ಸೆಲ್ಸಿಯಸ್ ಶೈತ್ಯ(Absolute Zero)ದಿಂದ ಹಿಡಿದು 100 ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ವಾಸಿಸಬಲ್ಲದು. ಕ್ರಿಯಾಶೀಲ ಜ್ವಾಲಾಮುಖಿಗಳ ಬಳಿಯೂ ಇವು ಕಂಡು ಬಂದಿವೆ. ವಿಕಿರಣಗಳಿಂದಲೂ ಇವು ನಾಶವಾಗುವುದಿಲ್ಲ. ಆಹಾರ, ನೀರು ಇಲ್ಲದೆ 30 ವರ್ಷ (ದಿನ ಅಲ್ಲ) ಬದುಕಿರಬಲ್ಲದು! ಸಾಗರದ ಅತಿ ಆಳದಲ್ಲಿರುವ ಭೀಕರ ಒತ್ತಡಕ್ಕಿಂತ ಆರು ಪಟ್ಟು ಹೆಚ್ಚಿನ ಒತ್ತಡದ ಆಳನೀರಿನಲ್ಲಿ ವಾಸಿಸಬಲ್ಲುದು. ಈ ಒತ್ತಡದಲ್ಲಿ ಕೆಲವೇ ಸೆಕೆಂಡಿನಲ್ಲಿ ಮನುಷ್ಯನ ರಕ್ತನಾಳಗಳೆಲ್ಲ ಒಡೆದು ಸಾವು ಸಂಭವಿಸುತ್ತದೆ.

ಇವುಗಳಲ್ಲಿ 1300 ಪ್ರಭೇದಗಳಿವೆ.

6.5 ಕೋಟಿ ವರ್ಷಗಳ ಹಿಂದೆ ಉಲ್ಕೆಯೊಂದು ಅಪ್ಪಳಿಸಿ ಡೈನಾಸಾರ್ ಗಳನ್ನು ನಾಶಪಡಿಸಿತಲ್ಲ. ಅಂತಹ ಅಪ್ಪಳಿಕೆಯ ಸ್ಫೋಟವನ್ನೂ ಇದು ಎದುರಿಸಿ ಬದುಕಬಲ್ಲದು. ಭೂಮಿಯ ಮೇಲೆ ನಾಶಪಡಿಸಲೇ ಆಗದ ಜೀವ ಪ್ರಭೇದ ಇದರದು ಎನ್ನಲಾಗಿದೆ (the most indestructible animal on earth). ಸೂರ್ಯನ ಸಾವಷ್ಟೆ ಇದರ ಎಲ್ಲ ಪ್ರಭೇದಗಳನ್ನು ನಾಶಪಡಿಸಬೇಕು, ಅಂತಹ ಗಡಸು ಜೀವಿ. ಇವುಗಳನ್ನು ಟಾರ್ಡಿಗ್ರೇಡ್ ಗಳೆಂದು ಕರೆಯುತ್ತಾರೆ. ತಟ್ಟನೆ ಕರಡಿ ಆಕಾರವನ್ನು ನೆನಪಿಸುವುದರಿಂದ ನೀರ್ಕರಡಿ ಎನ್ನುತ್ತಾರೆ (ಮೊದಲು ಇವನ್ನು ನೀರಿನಲ್ಲಿ ಪತ್ತೆ ಮಾಡಿದ್ದರಿಂದ ಈ ಹೆಸರು).

ಈ ಸೂಕ್ಷ್ಮ ಜೀವಿಯ ಸಂಭೋಗದ ಅವಧಿ ಒಂದು ಗಂಟೆಗೂ ಮೀರಿದ್ದು. ಮೊಟ್ಟೆ ಮರಿಯಾಗಲು 40 ದಿನ ಬೇಕು. ಸುತ್ತಲ ಪರಿಸರ ಅನುಕೂಲಕರವಾಗಿರದಿದ್ದರೆ 90 ದಿನಗಳೂ ಆಗಬಹುದು.

NASA ಇವುಗಳನ್ನು ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ(International Space Station)ಕ್ಕೆ  ಸಧ್ಯದಲ್ಲೆ ಕಳುಹಿಸಿ ಪ್ರಯೋಗಕ್ಕೆ ಒಳಪಡಿಸಲಿದೆ. ಅವುಗಳ ವಿಶಿಷ್ಟ ವಂಶವಾಹಿಗಳನ್ನು ಅಧ್ಯಯನ ಮಾಡಿದರೆ ಮನುಷ್ಯರಿಗೂ ಗುರುತ್ವರಹಿತ ಮತ್ತು ಅತಿರೇಕದ ಸ್ಥಿತಿಗಳಲ್ಲಿ ಇನ್ನಷ್ಟು ತಂತ್ರಗಾರಿಕೆಯಿಂದ ಉಳಿಯುವ ಮಾರ್ಗಗಳನ್ನು ಕಂಡುಹಿಡಿಯಬಹುದಾಗಿದೆ.

ಅಂತರಿಕ್ಷದಿಂದ ಏಲಿಯನ್ ಗಳು ಬರುತ್ತವೊ ಇಲ್ಲವೊ. ಭೂಮಿಯಿಂದಲೆ ಒಂದು ‘ಏಲಿಯನ್’ ಅಂತರಿಕ್ಷಕ್ಕೆ ಪಯಣಿಸಲು ಸಜ್ಜಾಗಿದೆ.

ಮತ್ತೆ ನೆನಪಿರಲಿ, ಈ ಭೂಮಿಯಲ್ಲಿ ಮನುಷ್ಯ ಏನೇನೂ ಅಲ್ಲ.

ಕೆ.ಎಸ್.ರವಿಕುಮಾರ್
****
Journalist,Translator,avid bibliophile

Leave a Reply

Your email address will not be published. Required fields are marked *

Back To Top