ನಮ್ಮ ಆಯ್ಕೆಗಳ ಮೂಲಕ ಸಂವಿಧಾನವನ್ನು, ಅದರ ಮುಂಗಾಣ್ಕೆಯನ್ನು ಹಾಳುಗೆಡವಿದ್ದೇವೆ

Indians today are governed by 2 different ideologies. Their political ideal set in the preamble of the Constitution affirms a life of liberty, equality and fraternity. Their social ideal, embodied in their religion denies them……I like the religion that teaches liberty, equality anf fraternity.

-B. R. Ambedkar

ನವೆಂಬರ್‌ 26ಕ್ಕೆ ಸಂವಿಧಾನ ತನ್ನ 75 ವರ್ಷಗಳನ್ನು ಪೂರೈಸಿದೆ. ಅಮೃತ ಮಹೋತ್ಸವದ ವರ್ಷಾಚರಣೆ ಸಂಭ್ರಮ ತರಬೇಕಿತ್ತು. ಆದರೆ, ಪರಿಸ್ಥಿತಿ ಆಶಾದಾಯಕವಾಗಿಲ್ಲ. ಸಂವಿಧಾನದ ನಿರಚನ ನಿರಂತರವಾಗಿ ಮುಂದುವರಿದಿದೆ. ತರಬೇಕಿತ್ತು. ಆದರೆ, ಪರಿಸ್ಥಿತಿ ಆಶಾದಾಯಕವಾಗಿಲ್ಲ.ಸಂವಿಧಾನ ರಚನೆಯಲ್ಲಿ ಪಾಲ್ಗೊಂಡಿದ್ದ ಧೀಮಂತರ ಆಶಯಗಳು ಸಾಕಷ್ಟು ಮುಕ್ಕಾಗಿವೆ. ಇದರಲ್ಲಿ ಜನರ ಮತ್ತು ಅವರು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಪಾಲು ಇದೆ. ಇದೇ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್‌ನೀಡಿದ ತೀರ್ಪೊಂದು ಆಶಾಭಾವನೆ ಮೂಡಿಸಿದೆ.

ಸಂಕಷ್ಟದ ಸಮಯದಲ್ಲಿ ಸೃಷ್ಟಿ: ಸಂವಿಧಾನ ಒಂದು ಒಡಂಬಡಿಕೆ; ಅದು ಸಂಕಷ್ಟದ ಸಮಯದಲ್ಲಿ ರಚನೆಯಾದ ದಾಖಲೆ. ದೇಶ ವಿಭಾಗವೆಂಬ ಕರಾಳ ಅಧ್ಯಾಯದಲ್ಲಿ ಲಕ್ಷಾಂತರ ಜನ ನೆಲೆ-ಜೀವ ಕಳೆದುಕೊಂಡರು. 1947-51ರ ಅವಧಿಯಲ್ಲಿ ಅಂದಾಜು 15-18 ದಶಲಕ್ಷ ಮಂದಿ ಪಂಜಾಬಿನ ಗಡಿ ದಾಟಿದರು ಮತ್ತು 2.3-3.2 ದಶಲಕ್ಷ ಮಂದಿ ಹತ್ಯೆಗೀಡಾದರು. ಕೋಮು ದಳ್ಳುರಿ ಜಾತಿ-ಧರ್ಮ ಎನ್ನದೆ ಬಲಿ ತೆಗೆದುಕೊಂಡಿತು. ಇದರಿಂದ, 1946ರಲ್ಲಿ 415 ದಶಲಕ್ಷ ಇದ್ದ ಜನಸಂಖ್ಯೆ ದೇಶ ವಿಭಜನೆ ಬಳಿಕ 346 ದಶಲಕ್ಷಕ್ಕೆ ಕುಸಿಯಿತು. ದೇಶ ಸ್ವಾತಂತ್ರ್ಯ ಗಳಿಸಿದಾಗ, ಅಂದಾಜು ಶೇ.80-90ರಷ್ಟು ಮಂದಿ ಬಡತನದಲ್ಲಿದ್ದರು; ಸಾಕ್ಷರತೆ ಶೇ.16 ಮತ್ತು ಮಹಿಳಾ ಸಾಕ್ಷರತೆ ಶೇ.7 ಇದ್ದಿತ್ತು; 1000ದಲ್ಲಿ 218 ನವಜಾತ ಶಿಶುಗಳು ಸಾವಿಗೀಡಾಗುತ್ತಿದ್ದವು. 1947ರಲ್ಲಿ 75 ದಶಲಕ್ಷ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಜೀವಿತಾವಧಿ ಕೇವಲ 32 ವರ್ಷ ಇತ್ತು.

ಸಂವಿಧಾನದ ರಚನಾಕಾರರು ವಿಸ್ತೃತ, ಪ್ರಜಾಸತ್ತಾತ್ಮಕವಾದ ಮತ್ತು ಕೊಡು-ಕೊಳು ಮೂಲಕ ದೇಶಕ್ಕೆ ಬುನಾದಿಯಾಗಬಲ್ಲ ಸಂವಿಧಾನವನ್ನು ನೀಡಿದರು. ಸಂವಿಧಾನವು 2 ಅಂಶಗಳಿಂದಾಗಿ ವಿಶಿಷ್ಟ;  ಮೊದಲಿಗೆ, ಸ್ವತಂತ್ರ ಸಂಗ್ರಾಮದ ಚೈತನ್ಯಶೀಲತೆಯನ್ನು ಅದು ಒಳಗೊಂಡಿದೆ. ಪ್ರಸ್ತಾವನೆ ಸೇರಿದಂತೆ ಸಂವಿಧಾನದ ಸಕಲ ವಿಧಿಗಳು ಸಂವಿಧಾನಕರ್ತೃಗಳ ಮುನ್ನೋಟಕ್ಕೆ ಸಾಕ್ಷಿಯಾಗಿವೆ. 2ನೆಯದಾಗಿ, ವಯಸ್ಕರಿಗೆ ಮತ ಚಲಾವಣೆ ಹಕ್ಕು ನೀಡುವ ಮೂಲಕ ದೇಶದ ಎಲ್ಲ ನಾಗರಿಕರು ಪ್ರಜಾಪ್ರಭುತ್ವದ ಭಾಗಿದಾರರಾಗಲು ಅವಕಾಶ ಮಾಡಿಕೊಡಲಾಗಿದೆ. ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದ ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್‌ಅವರು ʻಜನಸಾಮಾನ್ಯರಲ್ಲಿ ಅಪಾರ ನಂಬಿಕೆ ಹಾಗೂ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ನಂಬಿಕೆ ಇರಿಸಿಕೊಂಡು, ವಯಸ್ಕರಿಗೆ ಮತದಾನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ವಯಸ್ಕರ ಮತದಾನದಿಂದ ರಚನೆಯಾದ ಸರ್ಕಾರವು ತಿಳಿವಳಿಕೆ ಮೂಡಿಸಲಿದೆ; ಜನಕಲ್ಯಾಣ, ಜೀವನ ಮಟ್ಟ ಸುಧಾರಣೆ, ಮೂಲಸೌಲಭ್ಯ ಮತ್ತು ಗೌರವಯುತ ಜೀವನ ನೀಡಲಿದೆ ಎಂದು ನಂಬಿದ್ದೇವೆ,ʼ ಎಂದು ಹೇಳಿದ್ದರು. ಈ ಆಶಯಗಳೆಲ್ಲ ಸಂಪೂರ್ಣವಾಗಿ ಈಡೇರಿಲ್ಲ.

ಕರಾಳ ಅಧ್ಯಾಯ ಮತ್ತು ಪದಗಳಿಗೆ ಆಕ್ಷೇಪಣೆ: ಐದನೇ ಲೋಕಸಭೆ ಚುನಾವಣೆ(1971)ಯಲ್ಲಿ ಇಂದಿರಾಗಾಂಧಿ ಅವರ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಸಂಯುಕ್ತ ಸಮಾಜವಾದಿ ಪಕ್ಷ(ಎಸ್‌ಎಸ್‌ಪಿ)ದ ಅಭ್ಯರ್ಥಿ ರಾಜನಾರಾಯಣ್‌ಅಲಹಾಬಾದ್‌ಹೈಕೋರ್ಟಿನಲ್ಲಿ ದಾವೆ ಹೂಡಿದರು. ವಿಚಾರಣೆ ನಡೆಸಿದ ನ್ಯಾ. ಜಗಮೋಹನ್‌ಲಾಲ್‌ಅವರ ಏಕ ಸದಸ್ಯ ಪೀಠವು ಇಂದಿರಾ ಅವರ ಆಯ್ಕೆಯನ್ನು ರದ್ದುಗೊಳಿಸಿ, ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿತು. ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ಬದಲು ಜೂನ್‌12, 1975ರಂದು ತುರ್ತು ಪರಿಸ್ಥಿತಿ ಹೇರಿದರು. ಪ್ರತಿಪಕ್ಷದ ನಾಯಕರನ್ನು ಸೆರೆಗೆ ತಳ್ಳಿದರು. ಸಂವಿಧಾನದ 39ನೇ ತಿದ್ದುಪಡಿ ಮೂಲಕ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಹಾಗೂ ಲೋಕಸಭೆ ಸ್ಪೀಕರ್‌ಆಯ್ಕೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದು ಹೇಳಲಾಯಿತು. ಇದರಿಂದ ಅಲಹಾಬಾದ್‌ಹೈಕೋರ್ಟ್‌ತೀರ್ಪು ವಜಾಗೊಂಡಿತು. ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಸಂವಿಧಾನ ಕೊಡಮಾಡಿದ ಹಕ್ಕುಗಳನ್ನು ಹತ್ತಿಕ್ಕಲಾಯಿತು; ಪ್ರತಿಭಟಿಸಿದವರನ್ನು ದಮನಿಸಲಾಯಿತು. ʻಇಂದಿರಾ ಎಂದರೆ ಇಂಡಿಯಾ; ಇಂಡಿಯಾ ಎಂದರೆ ಇಂಡಿಯಾʼ ಎಂದು ಹೊಗಳು ಭಟರು ಘೋಷಣೆ ಹಾಕಿದರು. ಆನಂತರ 42ನೇ ತಿದ್ದುಪಡಿ ಮೂಲಕ ಪ್ರಸ್ತಾವನೆಯಲ್ಲಿನ ʻಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯʼ ಎಂಬುದನ್ನು ʻಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯʼ ಎಂದು ಬದಲಿಸಲಾಯಿತು. ಸೆಪ್ಟೆಂಬರ್‌1,1976 ರಂದು ಲೋಕಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರು 94 ಸಂಸದರು ಮಾತ್ರ. ಉಳಿದವರು ಸೆರೆಮನೆಯಲ್ಲಿದ್ದರು.

ಡಿಸೆಂಬರ್‌13, 1946ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಜವಾಹರಲಾಲ್‌ನೆಹರೂ ಅವರು ಸಂವಿಧಾನದ ಆಶಯಗಳನ್ನು ಮಂಡಿಸಿದರು. ವಿಸ್ತೃತ ಚರ್ಚೆ ಬಳಿಕ ಪ್ರಸ್ತಾವನೆ ಸಿದ್ಧವಾಯಿತು. ನವೆಂಬರ್‌26,1949 ರಂದು ಸಂವಿಧಾನದ ಕರಡು ಅಂಗೀಕರಿಸಿದಾಗ, ಅಗತ್ಯ ಬಿದ್ದಲ್ಲಿ ಪ್ರಸ್ತಾವನೆಯಲ್ಲಿ ಈ ಪದಗಳನ್ನು ಸೇರಿಸಬಹುದು ಎಂಬ ಸಲಹೆ ಕೇಳಿಬಂದಿತು. ಖ್ಯಾತ ಸಂವಿಧಾನ ತಜ್ಞ ಹೋರ್‌ಮರ್ಸ್ಜಿ ಮನೆಕ್ಜಿ ಸೀರ್ವಾಯಿ ʼಇವು ವ್ಯಾಖ್ಯಾನರಹಿತ, ಅಸ್ಪಷ್ಟ ಪದಗಳುʼ ಎಂದು ಖಂಡಿಸಿದರು. ಪ್ರತಿಯಾಗಿ ಸಂವಿಧಾನ ರಚನಾ ಸಭೆಯ ಸದಸ್ಯ ಕೆ.ಟಿ.ಷಾ (ನವೆಂಬರ್‌15, 1948 ರಂದು), ʻಭಾರತವು ರಾಜ್ಯಗಳ ಜಾತ್ಯತೀತ, ಸಮಾಜವಾದಿ ಒಕ್ಕೂಟʼ ಎಂದು 1ನೇ ವಿಧಿಯ 1ನೇ ಉಪವಿಧಿಯಲ್ಲಿ ಸೇರ್ಪಡೆಗೊಳಿಸಿಬೇಕು ಎಂದು ಒತ್ತಾಯಿಸಿದ್ದರು. ಆದರೆ, ಈ ಪ್ರಸ್ತಾವನೆಗೆ ಬೆಂಬಲ ಸಿಕ್ಕಿರಲಿಲ್ಲ.

ಆದರೆ, ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಈ ಪದಗಳು ಮೊದಲಿನಿಂದಲೂ ಅಪಥ್ಯ. 2015ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಪ್ರಕಟಿಸಿದ ಜಾಹೀರಾತಿನಲ್ಲಿ ಈ ಪದಗಳು ಕಣ್ಮರೆಯಾಗಿದ್ದವು. ಜನರಿಂದ ಆಕ್ರೋಶ ವ್ಯಕ್ತವಾದಾಗ, ʻಸಂವಿಧಾನ ಅಂಗೀಕಾರಗೊಂಡಾಗ ಇದ್ದ ಪ್ರಸ್ತಾವನೆಯ ಚಿತ್ರವನ್ನೇ ಬಳಸಿದ್ದೇವೆʼ ಎಂದು ಕೇಂದ್ರ ಸಚಿವರೊಬ್ಬರು ಸಮಜಾಯಿಷಿ ನೀಡಿದರು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ನೆಹರೂ ಹೆಸರು ಎಳೆದು ತಂದು, ʻನೆಹರೂ ಅವರಿಗೆ ಜಾತ್ಯತೀತತೆಯ ಪರಿಕಲ್ಪನೆ ಬಗ್ಗೆ ಗೊತ್ತಿರಲಿಲ್ಲವೇ? ಈಗ ಈ ಕುರಿತು ಚರ್ಚೆಯಾದರೆ ಏನು ಕಷ್ಟ?ʼ ಎಂದು ಪ್ರಶ್ನಿಸಿದರು. 2020ರಲ್ಲಿ ಬಲರಾಮ್‌ಸಿಂಗ್‌, ಕರುಣೇಶ್‌ಕುಮಾರ್‌ಶುಕ್ಲಾ ಮತ್ತು ಪ್ರವೇಶ್‌ಕುಮಾರ್‌ಎಂಬುವರು ಸುಪ್ರೀ ಕೋರ್ಟಿನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ʻಪ್ರಸ್ತಾವನೆ ಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದ ತೆಗೆದುಹಾಕಬೇಕುʼ ಎಂದು ಕೋರಿದ್ದರು. ಅರ್ಜಿಯಲ್ಲಿ ಕೇಂದ್ರ ಚುನಾವಣೆ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಿದ್ದರು. ʻರಾಜಕೀಯ ಪಕ್ಷವನ್ನು ನೋಂದಣಿ ಮಾಡಬೇಕೆಂದರೆ ಅವು ಸಮಾಜವಾದಿ ಹಾಗೂ ಜಾತ್ಯತೀತ ತತ್ವಗಳನ್ನು ಕಡ್ಡಾಯವಾಗಿ ಅನುಸರಿಸಬೇಕುʼ ಎಂಬ ಶರತ್ತನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಅದೇ ವರ್ಷ ಸಂಸದರೊಬ್ಬರು ಪ್ರಸ್ತಾವನೆಯಿಂದ ಸಮಾಜವಾದಿ ಪದವನ್ನು ತೆಗೆದುಹಾಕಬೇಕು ಎಂದು ಖಾಸಗಿ ಅರ್ಜಿ ಮಂಡಿಸಿದ್ದರು. ನೂತನ ಸಂಸತ್‌ಭವನದಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಯ ಪ್ರಸ್ತಾವನೆಯಲ್ಲಿ ಜಾತ್ಯತೀತ ಹಾಗೂ ಸಮಾಜವಾದಿ ಪದಗಳು ನಾಪತ್ತೆಯಾಗಿದ್ದವು. ಇಂಥ ಎಲ್ಲ ಪ್ರಯತ್ನಗಳ ಹಿಂದೆ ಯಾರು ಮತ್ತು ಯಾವ ಸಂಘಟನೆ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಇನ್ನೊಂದು ಅರ್ಜಿ: ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ ಸಿಂಗ್‌ಅವರು ಸಂವಿಧಾನದ ಪ್ರಸ್ತಾವನೆಗೆ ʻಜಾತ್ಯತೀತʼ, ʻಸಮಗ್ರತೆʼ ಹಾಗೂ ʻಸಮಾಜವಾದಿʼ ಪದಗಳ ಸೇರ್ಪಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದರು. ʻಸಂವಿಧಾನ ರಚನಾ ಸಭೆಯು ʻಜಾತ್ಯತೀತʼ ಪದವನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟಿದೆ. ʻಸಮಾಜವಾದಿʼ ಪದವು ಚುನಾಯಿತ ಸರ್ಕಾರದ ಆರ್ಥಿಕ ನೀತಿಯ ಆಯ್ಕೆಯನ್ನು ನಿರ್ಬಂಧಿಸುತ್ತದೆʼ ಎಂದು ಅರ್ಜಿ ದಾರರು ಹೇಳಿದ್ದರು. ಸುಪ್ರೀಂ ಕೋರ್ಟ್‌ಅರ್ಜಿಯ ವಿಚಾರಣೆ ವೇಳೆ, ʻತುರ್ತು ಪರಿಸ್ಥಿತಿ ವೇಳೆಯಲ್ಲಿ ಸಂಸತ್ತು ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ಅನೂರ್ಜಿತ ಎನ್ನಲು ಆಗುವುದಿಲ್ಲ. ಜಾತ್ಯತೀತತೆ ಎನ್ನುವುದು ಸಂವಿಧಾನದ ಮೂಲಭೂತ ಚೌಕಟ್ಟಿನ ಭಾಗ ಎಂದು ಸುಪ್ರೀಂ ಕೋರ್ಟ್‌1994 ರಲ್ಲಿ ಎಸ್.ಆರ್.‌ ಬೊಮ್ಮಾಯಿ ಪ್ರಕರಣದಲ್ಲಿ ಹೇಳಿದೆ,ʼ ಎಂದು ನ್ಯಾ. ಖನ್ನಾ ಹೇಳಿದ್ದರು ಎಂದು ಹೇಳಿತು. ನವೆಂಬರ್‌25ರಂದು ಅರ್ಜಿಯನ್ನು ವಜಾಗೊಳಿಸಿ, ʻಸಂಸತ್ತಿಗೆ ಸಂವಿಧಾನದ 368ನೇ ವಿಧಿಯನ್ವಯ ತಿದ್ದುಪಡಿ ಮಾಡುವ ಅಧಿಕಾರ ಇದೆ. ಅರ್ಜಿಗೆ ಸಂಬಂಧಿಸಿದಂತೆ ಚರ್ಚೆ ಹಾಗೂ ತೀರ್ಪು ಅಗತ್ಯವಿಲ್ಲ. ತಿದ್ದುಪಡಿಯನ್ನು ಇಷ್ಟು ವರ್ಷಗಳ ಬಳಿಕ ಅನೂರ್ಜಿತ ಗೊಳಿಸಲು ಆಗುವುದಿಲ್ಲʼ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ಖನ್ನಾ ಹಾಗೂ ನ್ಯಾ. ಸಂಜಯ್‌ಕುಮಾರ್‌ಅವರ ಪೀಠ ಹೇಳಿತು.

ʼಜಾತ್ಯತೀತ ಪದವು ನಿಖರವಲ್ಲದ್ದು ಎಂದು 1949ರಲ್ಲಿ ಪರಿಗಣಿಸಲಾಗಿತ್ತು; ಅದು ಧರ್ಮದ ವಿರುದ್ಧ ಪದ ಎಂದು ಕೆಲವರು ವ್ಯಾಖ್ಯಾನಿಸಿದ್ದರು. ಆದರೆ, ದೇಶವು ಕಾಲಾಂತರದಲ್ಲಿ ಜಾತ್ಯತೀತತೆಗೆ ತನ್ನದೇ ಆದ ವ್ಯಾಖ್ಯಾನವೊಂದನ್ನು ರೂಪಿಸಿಕೊಂಡಿದೆ. ದೇಶ ಯಾವುದೇ ಧರ್ಮವನ್ನು ಬೆಂಬಲಿಸುವುದಿಲ್ಲ ಇಲ್ಲವೇ ನಂಬಿಕೆಯ ಆಚರಣೆಯನ್ನು ವಿರೋಧಿಸುವುದಿಲ್ಲ. ಸಂವಿಧಾನದ ವಿಧಿಗಳಾದ 14,15 ಮತ್ತು 16 ಇದನ್ನು ಪ್ರತಿಪಾದಿಸಿವೆ. ಧಾರ್ಮಿಕ ಆಚರಣೆಗಳು ದೇಶದ ಪ್ರಗತಿ ಮತ್ತು ಸಮಾನತೆಯ ಹಕ್ಕುಗಳಿಗೆ ಅಡ್ಡಿ ಬಂದರೆ, ಸರ್ಕಾರ ಮಧ್ಯ ಪ್ರವೇಶಿಬಹುದು. ʻಸಮಾಜವಾದʼ ಎಂಬ ಪದವು ಚುನಾಯಿತ ಸರ್ಕಾರದ ಆರ್ಥಿಕ ನೀತಿಯನ್ನು ನಿರ್ಬಂಧಿಸುತ್ತದೆ ಎಂಬ ವ್ಯಾಖ್ಯಾನ ಸರಿಯಲ್ಲ. ಅದು ಆರ್ಥಿಕ ಪ್ರಗತಿ ಹಾಗೂ ಸಾಮಾಜಿಕ ಉನ್ನತಿಯ ಗುರಿಯನ್ನು ಪ್ರತಿಬಿಂಬಿಸುತ್ತದೆ. ಅದು ಖಾಸಗಿ ಉದ್ಯಮ ಹಾಗೂ ವ್ಯಾಪಾರದ ಹಕ್ಕನ್ನು ನಿರ್ಬಂಧಿಸುವುದಿಲ್ಲʼ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪು ಕೋಮುವಾದಿಗಳ ನಿದ್ರೆ ಕೆಡಿಸಲಿದೆ.

ಸಂವಿಧಾನ ಮತ್ತು ಆಡಳಿತ: ಡಾ. ಬಿ.ಆರ್‌. ಅಂಬೇಡ್ಕರ್‌ಅವರು ಸಂವಿಧಾನ ರಚನಾ ಸಭೆಯ ಕೊನೆಯ ಭಾಷಣದಲ್ಲಿ ʼಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಆಚರಿಸುವವರು ಕೆಡುಕರಾಗಿದ್ದರೆ ಕೇಡುಂಟು ಮಾಡಲಿದೆ. ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ, ಆಡಳಿತಗಾರರು ಉತ್ತಮರಾಗಿದ್ದರೆ, ಒಳಿತು ಮಾಡಲಿದೆ,ʼ ಎಂದು ಹೇಳಿದ್ದರು. ಸಂವಿಧಾನ ನಮ್ಮನ್ನು 75 ವರ್ಷ ಸಲಹಿದೆ. ಆದರೆ, ನಾವು ಅದನ್ನು ಕಾಯ್ದುಕೊಂಡೆವೇ? ಇಲ್ಲ. ಹಾಗಾದರೆ, ಉಳಿವಿಗೆ ಏನು ಮಾಡ ಬೇಕು. ಮೊದಲಿಗೆ, ತಮ್ಮ ಸಂವಿಧಾನಾತ್ಮಕ ಕರ್ತವ್ಯವನ್ನು ಪೂರೈಸಲು ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಶಕ್ತಿ ತುಂಬಬೇಕು. ಇದು ನಿರಂತರ ನಡೆಯಬೇಕಾದ ಕೆಲಸ. ಎರಡನೆಯದಾಗಿ, ನಾಗರಿಕ ಶಿಕ್ಷಣದ ಮೂಲಕ ಜನರಲ್ಲಿ ಸಂವಿಧಾನದ ಮುಂಗಾಣ್ಕೆ ಬಗ್ಗೆ ಅರಿವು ಮೂಡಿಸಬೇಕು. ಮೂರನೆಯದಾಗಿ, ಸ್ವತಂತ್ರ ನ್ಯಾಯಾಂಗ ಹಾಗೂ ಸಂಸ್ಥೆಗಳ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಗೌರವ ಮೂಡಿಸುವ ಸಂಸ್ಕೃತಿಯನ್ನು ಬೆಳೆಸಬೇಕು. ಆದರೆ, ಸರ್ಕಾರಗಳು ಸ್ವಾಯತ್ತ ಸಂಸ್ಥೆ ಗಳಾದ ಚುನಾವಣೆ ಆಯೋಗ, ಕೇಂದ್ರ ವಿಚಕ್ಷಣ ಆಯೋಗ(ಸಿವಿಸಿ), ಯೋಜನಾ ಆಯೋಗ(ನೀತಿ ಆಯೋಗ) ಇತ್ಯಾದಿಯನ್ನು ಪಂಜರದ ಗಿಳಿ ಆಗಿಸಿವೆ. ಲೇಖಕ ಗ್ರಾನ್ವಿಲ್‌ಆಸ್ಟಿನ್‌ತಮ್ಮ ʻದ ಇಂಡಿಯನ್‌ಕಾನ್ಸ್ಟಿಟ್ಯೂಷನ್-ಕಾರ್ನ ರ್‌ಸ್ಟೋನ್‌ಆಫ್‌ಎ ನೇಷನ್‌ʼ ನ ಮುನ್ನುಡಿಯಲ್ಲಿ, ʼಇತ್ತೀಚೆಗೆ ಸಂವಿಧಾನ ಹಾಗೂ ಅದರ ಕರ್ತೃಗಳನ್ನು ಅಗೌರವಿಸುವ ಪ್ರವೃತ್ತಿ ಫ್ಯಾಷನ್‌ಆಗಿದೆ. 1959ರ ಬಳಿಕ ದೇಶದಲ್ಲಿ ಆದ ಬದಲಾವಣೆಗಳಿಂದ ನಿರಾಶರಾಗಿರುವ ಕೆಲವರು, ಸಂವಿಧಾನ ಕೆಲಸ ಮಾಡದೆ ಇರುವುದರಿಂದ ಅದನ್ನು ಬದಲಿಸಬೇಕು ಎಂದು ಹೇಳುತ್ತಿದ್ದಾರೆ. ನನ್ನ ಪ್ರಕಾರ, ಇಂಥ ಆಲೋಚನೆಗಳು ದಾರಿ ತಪ್ಪಿಸುವಂಥವು. ಸಂವಿಧಾನಗಳು ʻಕೆಲಸʼ ನಿರ್ವಹಿಸುವುದಿಲ್ಲ: ಅವು ನಿಶ್ಚಲ; ನಾಗರಿಕರು ಹಾಗೂ ಜನಪ್ರತಿನಿಧಿಗಳು ಅದು ʻಕೆಲಸʼ ಮಾಡುವಂತೆ ಮಾಡಬೇಕುʼ ಎಂದಿದ್ದಾರೆ.

ʻನಾವು ಬಂದಿರುವುದೇ ಸಂವಿಧಾನ ಬದಲಿಸಲುʼ ಎಂದ ಸಂಸದನಿಂದ ಹಿಡಿದು, ʻಒಂದು ಸಮುದಾಯದವರಿಗೆ ಮತದಾನದ ಹಕ್ಕು ಇರಬಾರದುʼ ಎಂದವರು ಸೇರಿದಂತೆ ಇಂಥವರ ಸಂತತಿ ದೊಡ್ಡದಿದೆ. ಇಂಥ ವಿಷಮ ಕಾಲದಲ್ಲಿ ಸಂವಿಧಾನದ ಅಮೃತ ಮಹೋತ್ಸವ ಬಂದಿದೆ. ಸಂವಿಧಾನ ನಮ್ಮನ್ನು ನಿರಾಶೆಗೊಳಿಸಿಲ್ಲ; ಆದರೆ, ನಾವು ನಮ್ಮ ಆಯ್ಕೆಗಳ ಮೂಲಕ ಸಂವಿಧಾನವನ್ನು, ಅದು ಕನಸಿದ್ದ ಮುಂಗಾಣ್ಕೆಯನ್ನು ಹಾಳುಗೆಡವಿದ್ದೇವೆ.

-ಮಾಧವ ಐತಾಳ್

Journalist,Translator,avid bibliophile

Leave a Reply

Your email address will not be published. Required fields are marked *

Back To Top