ಕೇಂದ್ರ ಸರ್ಕಾರ ಪ್ರಕಟಿಸಿರುವ ಎರಡನೇ ಸುತ್ತಿನ ಆರ್ಥಿಕ ಉತ್ತೇಜನ ಕೊಡುಗೆಯು ಗ್ರಾಹಕ ಬಳಕೆ ವಸ್ತುಗಳು ಮತ್ತು ಸೇವೆಗಳ ಬೇಡಿಕೆಯನ್ನು ಅಲ್ಪಾವಧಿಯಲ್ಲಿ ಹೆಚ್ಚಿಸಲಿದೆಯಾದರೂ, ಈ ಕೊಡುಗೆಯು ಆರ್ಥಿಕ ಬೆಳವಣಿಗೆಗೆ ಅತ್ಯಲ್ಪ ಪ್ರಮಾಣದ ಬೆಂಬಲ ನೀಡಲಿದೆ ಎಂದು ಮೂಡೀಸ್ ಇನ್‌ವೆಸ್ಟರ್ಸ್ ಸರ್ವೀಸ್ ಅಭಿಪ್ರಾಯಪಟ್ಟಿದೆ. ಗ್ರಾಹಕ ಬಳಕೆಯ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಕ್ಟೋಬರ್ 12ರಂದು ಹಲವು ಕ್ರಮಗಳನ್ನು ಘೋಷಿಸಿದೆ. ಕೇಂದ್ರ ಸರ್ಕಾರದ ನೌಕರರಿಗೆ ಪ್ರವಾಸ ಭತ್ಯೆ (ಎಲ್‌ಟಿಸಿ) ಬದಲಿಗೆ ನಗದು ವೋಚರ್ ಮತ್ತು ಹಬ್ಬಕ್ಕೆ ಮುಂಗಡವಾಗಿ ನಗದು ಹಾಗೂ ರಾಜ್ಯಗಳಿಗೆ ಬಡ್ಡಿರಹಿತವಾಗಿ ₹ 12 ಸಾವಿರ ಕೋಟಿ ಸಾಲ ನೀಡುವುದು ಈ ಘೋಷಣೆಗಳಲ್ಲಿ ಮುಖ್ಯವಾದವು. ಕೊರೊನಾ ವೈರಸ್ ಮಾಡಿರುವ ಹಾನಿಯಿಂದ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುವಂತೆ ಮಾಡಲು ಕೇಂದ್ರ ಸರ್ಕಾರವು ಒಟ್ಟಾರೆಯಾಗಿ ಎರಡು ಹಂತಗಳ ಉತ್ತೇಜನ ಕೊಡುಗೆ ಪ್ರಕಟಿಸಿದೆ. ಈ ಮೂಲಕ ಸರ್ಕಾರವು ಮಾಡಲಿರುವ ನೇರವಾದ ವೆಚ್ಚವು ಒಟ್ಟಾರೆ ಜಿಡಿಪಿಯ ಶೇಕಡ 1.2 ರಷ್ಟಾಗಲಿದೆ. ಇದು ಅತಿ ಕಡಿಮೆ ಪ್ರಮಾಣದ್ದಾಗಿದೆ ಎಂದು ಮೂಡೀಸ್ ಹೇಳಿದೆ. ಈ ವರ್ಷ ಸರ್ಕಾರದ ಸಾಲದ ಹೊರೆಯು ಜಿಡಿಪಿಯ ಶೇ 90 ರಷ್ಟಾಗಲಿದೆ ಎಂದು ಅದು ಹೇಳಿದೆ. ಹಿಂದಿನ ವರ್ಷ ಸಾಲವು ಜಿಡಿಪಿಯ ಶೇ 72ರಷ್ಟಿತ್ತು. ವಿತ್ತೀಯ ಕೊರತೆಯು ಹೆಚ್ಚಾಗುತ್ತಿರುವುದರಿಂದಲೇ ಸರ್ಕಾರಕ್ಕೆ ಹೆಚ್ಚಿನ ಸಾಲದ ಹೊರೆ ಉಂಟಾಗುತ್ತಿದೆ ಎಂದಿದೆ.