ರಾಜ್ಯದ ಜೈವಿಕ ಆರ್ಥಿಕತೆ: ೩.೭ ಲಕ್ಷ ಕೋಟಿ ರೂ. ಗುರಿ

ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜೈವಿಕ ಆರ್ಥಿಕತೆ(ಬಯೋ ಎಕಾನಮಿ) ಕ್ಷೇತ್ರದ ಕೊಡುಗೆಯನ್ನು ೫,೦೦೦ ಕೋಟಿ ಡಾಲರ್‌ಗಳಿಗೆ(೩.೭ ಲಕ್ಷ ಕೋಟಿ ರೂ.) ಹೆಚ್ಚಿಸಲು ಲಸಿಕೆ, ಕೃಷಿ ತಾಂತ್ರಿಕತೆ, ಜೈವಿಕ-ತಯಾರಿಕೆ ಹಾಗೂ ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಲಾಗುವುದು ಎಂದು ಐಟಿ–ಬಿಟಿ ಸಚಿವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕರ್ನಾಟಕ ಜೈವಿಕ ಆರ್ಥಿಕತೆ ವರದಿ-೨೦೨೦ ಅನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು, ವರದಿಯು ೭ ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ ಎಂದರು.  ಕೃಷಿ, ಪಶುಸಂಗೋಪನೆ, ಪೌಷ್ಟಿಕತೆ, ಲಸಿಕೆ, ಆರೋಗ್ಯ ಸೇವೆ, ಜೈವಿಕ ಇಂಧನ, ಸಾಗರ ಜೀವನೋಪಾಯ ಕ್ಷೇತ್ರಗಳಲ್ಲಿ ಆಗುವ ಜೈವಿಕ ತಂತ್ರಜ್ಞಾನದ ಬೆಳವಣಿಗೆಗಳು ಜನಸಾಮಾನ್ಯರ ಬದುಕನ್ನು ಸುಧಾರಿಸಲಿವೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ೩೫ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು ಹಾಗೂ ಅತ್ಯಾಧುನಿಕ ಬಯೋ-ಇನ್ ಕ್ಯುಬೇಟರ್‌ಗಳು ಇವೆ. ಸರ್ಕಾರದ ಅನುದಾನದ ನೆರವಿನಿಂದ ೧೫೦ಕ್ಕೂ ಹೆಚ್ಚು ನವೋದ್ಯಮಗಳು ಕೆಲಸ ಮಾಡುತ್ತಿವೆ. ಜೈವಿಕ ತಂತ್ರಜ್ಞಾನದ ನೆರವಿನಿಂದ ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುವಂತೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿರುವ ಜೀವ ಸೈನ್ಸಸ್ ಸೇರಿದಂತೆ ಹಲವು ಕಂಪನಿಗಳು ಬಯೋ-ವೆಂಚರ್ ಅನುದಾನದೊಂದಿಗೆ ಮುನ್ನಡೆದಿದ್ದು, ಇವೆಲ್ಲವೂ ೫೦೦೦ ಕೋಟಿ ಡಾಲರ್ ಆರ್ಥಿಕ ಕೊಡುಗೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದರು. ಚರ್ಮ ಸೇರಿದಂತೆ ದೇಹದ ಯಾವುದೇ ಅಂಗವನ್ನು ಪ್ರಯೋಗಾಲಯದಲ್ಲಿ ಬೆಳೆಸಬಹುದಾದ ಮಟ್ಟಕ್ಕೆ ಜೈವಿಕ ತಂತ್ರಜ್ಞಾನ ಬೆಳೆದಿದೆ. ಜೀನ್ ಎಡಿಟಿಂಗ್‌ನಿಂದ ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳನ್ನುನಿವಾರಿಸಬಹುದು ಎಂಬ ಆಶಾಭಾವ ಮೂಡಿದೆ. ಭವಿಷ್ಯದಲ್ಲಿ ಈ ಕ್ಷೇತ್ರದ ಸಂಶೋಧನೆಗಳು ಬದುಕಿನ ಗುಣಮಟ್ಟದ ಮೇಲೆ ಅಗಾಧ ಪರಿಣಾಮ ಬೀರಲಿವೆ ಎಂದರು. ರಾಜ್ಯ ಸರ್ಕಾರವು ಜೈವಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ಮನಗಂಡಿದೆ. ಹೀಗಾಗಿ, ೨೦ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜೈವಿಕ-ಉದ್ಯಮ ಸಮುಚ್ಚಯದ (ಬಯೋ-ಇಂಡಸ್ಟ್ರಿ ಕ್ಲಸ್ಟರ್) ನಿರ್ಮಾಣ ಆರಂಭಗೊಂಡಿದೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ೭೦೦೦ ಕೋಟಿ ರೂ. ವೆಚ್ಚದಲ್ಲಿ ೮೦ ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿ ಈ ಸಮುಚ್ಚಯ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ಮಂಡಳಿ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಹೊಸ ತಲೆಮಾರಿನ ಲಸಿಕೆಗಳು, ನೆಕ್ಸ್ಟ್ ಜೆನ್ ಆಂಟಿಬಯಾಟಿಕ್ಸ್, ಪರಿಸರ ಸ್ನೇಹಿ ನೆಕ್ಸ್ಟ್ ಜೆನ್ಬ್ಯಾಟರಿಗಳು, ಎನ್‌ಜೈಮ್ ತಾಂತ್ರಿಕತೆಗಳು, ಜೈವಿಕ ಇಂಧನಗಳು ಮುಂಬರುವ ದಿನಗಳಲ್ಲಿ ಜಾದೂ ಮಾಡಲಿವೆ ಎಂದು ಅಭಿಪ್ರಾಯಪಟ್ಟರು. ಮಾಲಿನ್ಯದಿಂದಾಗಿ ನಮ್ಮ ಜಲಮೂಲಗಳು ಮಲಿನವಾಗುತ್ತಿವೆ. ಎನ್‌ಜೈಮ್ ಟೆಕ್ನಾಲಜಿ (ಕಿಣ್ವ ತಾಂತ್ರಿಕತೆ) ಒಳಗೊಂಡ ಜೈವಿಕ ತಂತ್ರಜ್ಞಾನದ ನೆರವಿನಿಂದ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು. ಕೇಂದ್ರ ಸರ್ಕಾರವು ನಮ್ಮ ಜಲಮೂಲಗಳನ್ನು ಈ ತಂತ್ರಜ್ಞಾನ ಬಳಸಿ ಸ್ವಚ್ಛಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ಕುಲಾಂತರಿ ಬೆಳೆಗಳನ್ನು ಪ್ರಯೋಗಾರ್ಥವಾಗಿ ಬೆಳೆಯಲು ಅನುಮತಿ ನೀಡಿ ಅವುಗಳ ಸಾಧಕ-ಬಾಧಕ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು ಎಂದರು.

ಶಿಫಾರಸುಗಳು:-ಲಸಿಕಾ ವಲಯ ಸ್ಥಾಪನೆ, ಜೈವಿಕ-ತಯಾರಿಕಾ(ಬಯೋ ಮ್ಯಾನುಫ್ಯಾಕ್ಚರಿಂಗ್) ವಲಯ ನಿರ್ಮಾಣ, ಸಾಗರ ಸಂಬಂಧಿ ಜೈವಿಕ ತಂತ್ರಜ್ಞಾನದಲ್ಲಿ ಮೌಲ್ಯವರ್ಧನೆಗೆ ಆದ್ಯತೆ, ಪ್ರಮುಖ ಡಯಾಗ್ನಾಸ್ಟಿಕ್ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗಾಗಿ ಬಯೋ-ಮೆಡಿಕಲ್ ಕ್ಲಸ್ಟರ್, ಲಭ್ಯ ಜೈವಿಕ ತ್ಯಾಜ್ಯ ಬಳಸಿಕೊಳ್ಳಲು ಅನುಕೂಲವಾಗುವಂತೆ ಬಯೋ-ರಿಫೈನರೀಸ್ ಕ್ಲಸ್ಟರ್ ಸ್ಥಾಪನೆ, ಹಾಸನ, ಧಾರವಾಡ ಮತ್ತು ಬೆಳಗಾವಿಯಲ್ಲಿ ಮೌಲ್ಯವರ್ಧಿತ ಕೃಷಿ ಪದ್ಧತಿ ಅಳವಡಿಕೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top