ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ನ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಔಷಧ ಮಹಾನಿಯಂತ್ರಕರು ಅನುಮತಿ ನೀಡಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೋವಿಡ್ ವಿಷಯ ಪರಿಣತ ಸಮಿತಿಯ ಶಿಫಾರಸಿನಂತೆ ಲಸಿಕೆ ಬಳಕೆಗೆ ಅನುಮತಿ ನೀಡಲು ಡಿಸಿಜಿಐ ನಿರ್ಧರಿಸಿದೆ. ಕೋವಿಶೀಲ್ಡನ್ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸಿವೆ. ಕೋವಿಶೀಲ್ಡನ್ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ತಿಳಿಸಿದ್ದರು. ಲಸಿಕೆಗೆ ಅನುಮೋದನೆ ನೀಡಿದ್ದನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ. ಕೋವಿಡ್ ವಿರುದ್ಧದ ಹೋರಾಟವನ್ನು ತೀವ್ರ ಮತ್ತು ಬಲಗೊಳಿಸಲು ನೆರವಾಗಲಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಕೋವಿಶೀಲ್ಡ್ ಸುರಕ್ಷಿತ ಮತ್ತು ಪರಿಣಾಮಕಾರಿ. ಕೆಲವೇ ವಾರಗಳಲ್ಲಿ ಲಸಿಕೆ ಪೂರೈಸಲು ತಮ್ಮ ಸಂಸ್ಥೆ ಸಜ್ಜಾಗಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆದಾರ್ ಪೂನಾವಾಲಾ ಹೇಳಿದ್ದಾರೆ. ಸೀರಂ ಇಂಡಿಯಾ ಲಸಿಕೆ ತಯಾರಿಕೆಯಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿದ್ದು, ಲಸಿಕೆಯ ನಾಲ್ಕರಿಂದ ಐದು ಕೋಟಿ ಡೋಸ್ಗಳನ್ನು ಸಂಸ್ಥೆ ಸಂಗ್ರಹಿಸಿ ಇರಿಸಿಕೊಂಡಿದೆ. ಮಾರ್ಚ್ನಿಂದ ಪ್ರತಿ ತಿಂಗಳು 10 ಕೋಟಿ ಡೋಸ್ ತಯಾರಿಕೆ ಸಾಧ್ಯವಾಗುವಂತೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗುವುದು. ಜೂನ್ ಹೊತ್ತಿಗೆ 30 ಕೋಟಿ ಡೋಸ್ ಲಸಿಕೆ ಸಿದ್ಧವಾಗಲಿದೆ ಎಂದು ಪೂನಾವಾಲಾ ಕಳೆದ ತಿಂಗಳು ಹೇಳಿದ್ದರು.
ಇದೇ ಹೊತ್ತಿನಲ್ಲಿ ಝೈಡಸ್ ಕ್ಯಾಡಿಲಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪರೀಕ್ಷೆಗೆ ಔಷಧ ಮಹಾನಿಯಂತ್ರಕರು ಅನುಮತಿ ನೀಡಿದ್ದಾರೆ. ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಬಯೊಫಾರ್ಮಾ ಮಿಷನ್ ಬೆಂಬಲದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ಒಂದು ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಮೂರನೇ ಹಂತದಲ್ಲಿ 26 ಸಾವಿರ ಭಾರತೀಯ ಸ್ವಯಂಸೇವಕರಿಗೆ ಲಸಿಕೆ ನೀಡಿ ಪ್ರಯೋಗ ನಡೆಸಲು ಅನುಮತಿ ಕೊಡಲಾಗಿದೆ.
Courtesyg: Google (photo)