ಹವಾಮಾನ ಬದಲಾವಣೆ ಎಂಬ ತೂಗು ಕತ್ತಿ  ಪ್ಯಾರಿಸ್ ಒಪ್ಪಂದಕ್ಕೆ ಐದರ ಹರೆಯ

-ಮಾಧವ ಐತಾಳ್

ಜಗತ್ತಿನ 196 ದೇಶಗಳು ಐತಿಹಾಸಿಕ ಎನ್ನಬಹುದಾದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ, ಐದು ವರ್ಷ ಸಂದಿದೆ. ಈ ದೇಶಗಳು ಜಾಗತಿಕ ತಾಪಮಾನ ಹೆಚ್ಚಳ 2100ರೊಳಗೆ 2 ಡಿಗ್ರಿ ಸೆಲ್ಸಿಯಸ್ ದಾಟದಂತೆ ನೋಡಿಕೊಳ್ಳಲು ಸಮ್ಮತಿಸಿದವು ಹಾಗೂ ಉಷ್ಣತೆ ಹೆಚ್ಚಳವನ್ನು ಕೈಗಾರಿಕಾ ಕ್ರಾಂತಿಯ ಮೊದಲಿಗಿಂತ 1.5ಡಿಗ್ರಿ ಸೆಲ್ಸಿಯಸ್ ಒಳಗೆ ಇರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡವು. ಪ್ಯಾರಿಸ್ ಒಪ್ಪಂದ ಒಂದೆರಡು ದಿನದಲ್ಲಿ ಆಗಿದ್ದಲ್ಲ. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಜಗತ್ತಿನಲ್ಲಿ 196 ದೇಶಗಳು 2016ರ ಡಿಸೆಂಬರ್ 12ರಂದು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ಸಣ್ಣ ಸಂಗತಿ ಯಲ್ಲ. ಒಪ್ಪಂದಕ್ಕೆ ಮುನ್ನ ಎರಡು ವಾರಗಳ ಕಾಲ ಚೌಕಾಸಿ, ಕೊಡುಕೊಳು ನಡೆದಿದೆ. ಇಂಥ ಒಂದು ಒಪ್ಪಂದಕ್ಕಾಗಿ ಜಗತ್ತು ದಶಕಗಳ ಕಾಲ ಕಾಯ್ದಿತ್ತು.

1992ರಲ್ಲಿ ಕರ‍್ಯಾಚರಣೆ ಆರಂಭಿಸಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟು ಒಪ್ಪಂದ(ಯುಎನ್‌ಎಫ್‌ಸಿಸಿಸಿ), 1997ರ ಕ್ಯೋಟೋ ಒಪ್ಪಂದದ ವೈಫಲ್ಯದಿಂದ ಹಲವು ಪಾಠಗಳನ್ನು ಕಲಿತಿತ್ತು. ಕೊಳೆ ಗಾಳಿ ವಾತಾವರಣಕ್ಕೆ ತುಂಬುವಿಕೆ ತಡೆಯಲು ೨೦೧೨ರಲ್ಲಿ ನಡೆದ ಪ್ರಯತ್ನ ಹಲವು ಕಾರಣಗಳಿಂದ ಸೋಲು ಕಂಡಿತ್ತು. ಆದರೆ, ಅಮೆರಿಕ ಒಪ್ಪಂದವನ್ನು ಅಂಗೀಕರಿಸದೆ ಇದ್ದುದು ಹಾಗೂ ಕೆನಡ 2011ರಲ್ಲಿ ಒಪ್ಪಂದದಿಂದ ಹೊರಹೋಗಿದ್ದು ಪ್ರಮುಖ ಕಾರಣ. ಸಮಸ್ಯೆ ಬಗೆಹರಿಸಲಾಗದಷ್ಟು ಕ್ಲಿಷ್ಟ ವಾಗಲು ಕಾರಣವೆಂದರೆ, ದೇಶಗಳು ಶಾಸನಬದ್ಧವಾಗಿ ಕಡಿತಗೊಳಿಸಬೇಕಿದ್ದ ಕೊಳೆ ಗಾಳಿ ಪ್ರಮಾಣ. ಆರ್ಥಿಕ ಚಕ್ರವನ್ನು ಮುಂದೊತ್ತುವ ವಾಹನಗಳ ಸಂಚಾರ, ಸರಕು ಸಾಗಣೆ, ಉಷ್ಣಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತಿತರ ಎಲ್ಲ ಚಟುವಟಿಕೆಗಳು ವಾತಾವರಣಕ್ಕೆ ಇಂಗಾಲವನ್ನು ತುಂಬುತ್ತವೆ. ಇಂಥ ಚಟುವಟಿಕೆಗಳನ್ನು ನಿಲ್ಲಿಸುವುದು ದೇಶಗಳಿಗೆ ಸಮ್ಮತವಲ್ಲ: ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭೀತಿ ಹಾಗೂ ಜನರಿಗೆ ಉತ್ತರಿಸಬೇಕಾದ ಇಕ್ಕಟ್ಟು ಸರ್ಕಾರಗಳ ಎದುರು ಇದ್ದಿತ್ತು. ಬಹುತೇಕ ದೇಶಗಳಲ್ಲಿ ಮೋಟರ್ ವಾಹನ ಉದ್ಯಮ ಅತ್ಯಂತ ಪ್ರಬಲವಾಗಿದ್ದು, ವಾಹನಗಳ ಉತ್ಪಾದನೆ ಹಾಗೂ ಬಳಕೆ ಮೇಲೆ ನಿರ್ಬಂಧ ಹೇರುವುದನ್ನು ಪ್ರತಿರೋಧಿಸುತ್ತವೆ. ಅವುಗಳನ್ನು ಎದುರು ಹಾಕಿಕೊಳ್ಳುವುದು ಸುಲಭವಲ್ಲ. ಎಲ್ಲ ದೇಶಗಳೂ

ತಮ್ಮದೇ ಆದ ಗುರಿ(ನ್ಯಾಷನಲಿ ಡಿರ‍್ಮಿನ್ಡ್ ಕಾಂಟ್ರಿಬ್ಯೂಷನ್ಸ್,ಎನ್‌ಡಿಸಿ) ವಿಧಿಸಿಕೊಂಡು ಕೊಳೆ ಗಾಳಿ ಕಡಿತ ಮಾಡಿಕೊಳ್ಳಬೇಕಿತ್ತು. ಶ್ರೀಮಂತ-ಕೈಗಾರೀಕೃತ ದೇಶಗಳು ಕೊಳೆ ಗಾಳಿ ಚೆಲ್ಲುವಿಕೆ ಕಡಿತ ಅಥವಾ ಬಡ ರಾಷ್ಟçಗಳು ಕಡಿಮೆ ಮಾಡಿಕೊಳ್ಳಬೇಕಿತ್ತು. ದೇಶಗಳು ಪ್ರತಿ ವರ್ಷ ಹೊಸ ಎನ್‌ಡಿಸಿ ಸಲ್ಲಿಸಬೇಕಿತ್ತು. ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಪ್ಯಾರಿಸ್ ಹೊರ ನಡೆದರೂ, ಒಪ್ಪಂದ ಕುಸಿದು ಬೀಳಲಿಲ್ಲ. ಹಾಲಿ ಅಧ್ಯಕ್ಷ ಜೋ ಬೈಡೆನ್ ತಾವು ಒಪ್ಪಂದಕ್ಕೆ ಮತ್ತೆ ಸೇರುವುದಾಗಿ ಹೇಳಿದ್ದಾರೆ. ಇಂಗ್ಲೆಂಡ್ 2030ರೊಳಗೆ ಕೊಳೆ ಗಾಳಿಯನ್ನು ಶೇ.೬೮ರಷ್ಟು ಕಡಿತಗೊಳಿಸುವುದಾಗಿ(1990ರ ಮಟ್ಟಕ್ಕೆ ಹೋಲಿಸಿದರೆ) ಇತ್ತೀಚೆಗೆ ಹೇಳಿದೆ. ನನ್ನ ದೇಶದಲ್ಲಿ ಕೊಳೆ ಗಾಳಿ ಪ್ರಮಾಣ ೨೦೩೦ಕ್ಕೆ ಗರಿಷ್ಠ ಮಟ್ಟ ತಲುಪಲಿದ್ದು, ೨೦೬೦ಕ್ಕೆ ಶೂನ್ಯ ಮಟ್ಟಕ್ಕೆ ಕುಸಿಯಲಿದೆ ಎಂದು ಚೀನಾ ಹೇಳಿಕೊಂಡಿದೆ. ಜಿ-೨೦ ದೇಶಗಳ ಇತ್ತೀಚಿನ ವರದಿ ಪ್ರಕಾರ, ಭಾರತ ಒಪ್ಪಂದಕ್ಕೆ “ನ್ಯಾಯಬದ್ಧ ಪಾಲು’ ಸಲ್ಲಿಸುತ್ತಿದೆ.

ಆದರೆ, 2020ರ ಅಂತ್ಯದಲ್ಲಿ ನಿಂತು ನೋಡಿದರೆ, ಮಾಡಬೇಕಾದ್ದು ಬಹಳಷ್ಟು ಇದೆ. ಜಾಗತಿಕ ವಾತಾವರಣ ಸಂರಕ್ಷಣೆಯಲ್ಲಿ ಮುಂದಿನ ದಶಕ ತಿರುವಿಗೆ ಕಾರಣವಾಗಲಿದೆ. ಕೋವಿಡ್ ಪಿಡುಗು ಹಾಗೂ ಲಾಕ್‌ಡೌನ್ ನಡುವೆಯೂ, ಕೊಳೆ ಗಾಳಿ ತುಂಬುವಿಕೆ ಹೆಚ್ಚುತ್ತಿದೆ. ಭಾರತ ಸೇರಿದಂತೆ ಜಿ-60 ದೇಶಗಳು ಕೋವಿಡ್‌ನಿಂದಾದ ಆರ್ಥಿಕ ನಷ್ಟವನ್ನು ಭರಿಸಲು ಕಲ್ಲಿದ್ದಲು ಆಧರಿತ ಅರ್ಥವ್ಯವಸ್ಥೆಯನ್ನು ಇನ್ನಷ್ಟು ವೇಗವಾಗಿ ಮುಂದೊತ್ತುತ್ತಿವೆ. ವಿಶ್ವ ಪವನಶಾಸ್ತç ಸಂಸ್ಥೆ ಪ್ರಕಾರ, ಮುಂದಿನ ಐದು ವರ್ಷದಲ್ಲಿ ಉಷ್ಣತೆ ಹೆಚ್ಚಳ ೧.೫ ಡಿಗ್ರಿ ಸೆಲ್ಸಿಯಸ್ ದಾಟಲಿದೆ. ಇದನ್ನೆಲ್ಲ ನೋಡಿದರೆ, ನಮಗೆ ಹೆಚ್ಚು ಕಾಲಾವಕಾಶ ಇಲ್ಲ. ಪ್ಯಾರಿಸ್ ಒಪ್ಪಂದ ವಿಧಿಸಿದ ಹವಾಮಾನ ಗುರಿಗಳನ್ನು ಸಾಧಿಸಲು ನಾವು ಮಾಡುತ್ತಿರುವುದು ಸಾಕೇ? ಭಾರತ ಕಡಿಮೆ ಇಂಗಾಲ ಬಳಕೆ ಮಾರ್ಗವನ್ನು ಹೇಗೆ ಜಾರಿಗೊಳಿಸಬಲ್ಲುದು? ಇದಕ್ಕೆ ಉತ್ತರ ಸರಳವಾಗಿದೆ. ದೇಶ ಅನುಸರಿಸುತ್ತಿರುವ ದ್ವಂದ್ವ ನೀತಿ ಫಲ ನೀಡುವುದಿಲ್ಲ. ಅಂದರೆ, ಒಂದೆಡೆ ಪುನರ್‌ಬಳಕೆ ಇಂಧನ ಬಳಕೆಯನ್ನು ಪ್ರೋತ್ಸಾಹಿಸುತ್ತಲೇ, ಹೆಚ್ಚು ಗಂಧಕ ಹಾಗೂ ಕಡಿಮೆ ಕ್ಯಲೊರಿಫಿಕ್ ಮೌಲ್ಯ(ಸಿವಿ) ಇರುವ ಕಲ್ಲಿದ್ದಿಲಿನ ಉತ್ತೇಜನ ನೀಡುವುದು ಕಡಿಮೆ ಇಂಗಾಲ ಬಳಕೆ ಕರ‍್ಯತಂತ್ರಕ್ಕೆ ತದ್ವಿರುದ್ಧವಾಗಿರುತ್ತದೆ. ವಿದ್ಯುತ್ ನಾಗರಿಕತೆಯ ಚಾಲಕ ಶಕ್ತಿ. ಭಾರತೀಯರ ತಲಾವಾರು ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಿದ್ದು, ಜೀವನಶೈಲಿಯಲ್ಲಿ ಸುಧಾರಣೆಗೆ ಹೆಚ್ಚು ವಿದ್ಯುತ್ ಬೇಕಾ ಗಲಿದೆ ಎನ್ನುವುದು ನಿಜ. ಆದರೆ, ಜನರ ಜೀವನಮಟ್ಟದ ಹೆಚ್ಚಳದ ಜೊತೆಗೆ ಪರಿಸರ ಸಂರಕ್ಷಣೆ ಹೇಗೆ ಎನ್ನುವುದು ಭಾರಿ ಸವಾಲು.

ಪುನರ್‌ಬಳಕೆ ಇಂಧನದ ವೆಚ್ಚ ದಿನೇದಿನೇ ಕಡಿಮೆಯಾಗುತ್ತಿದೆ. ಆದರೆ, ಈ ಪರಿಸರಸ್ನೇಹಿ ವಿದ್ಯುತ್‌ನ ಉತ್ಪಾದನೆಗೆ ಅನುಗುಣವಾಗಿ ಗ್ರಿಡ್ ಸಾಮರ್ಥ್ಯ ಹೆಚ್ಚಳಗೊಂಡಿದೆಯೇ? ಇಲ್ಲ. ಗೃಹ ಹಾಗೂ ಕೈಗಾರಿಕೆ ಘಟಕಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಯಾ ಗುತ್ತಿದ್ದರೂ, ಗ್ರಾಹಕರಿಗೆ ಸಬ್ಸಿಡಿ ಶೀಘ್ರ ಪಾವತಿಯಾಗುತ್ತಿಲ್ಲ ಮತ್ತು ವಿದ್ಯುತ್ ವಿತರಣೆ ಸಂಸ್ಥೆ(ಬೆಸ್ಕಾ ಮತ್ತಿತರ)ಗಳಿಂದ ಪ್ರತಿಕ್ರಿಯೆ ಸಕಾರಾತ್ಮಕವಾಗಿಲ್ಲ. ಅಪಾರ್ಟ್ಮೆಂಟ್ ಸಂಕಿರ್ಣಗಳಲ್ಲಿ ಸೌರ ವ್ಯವಸ್ಥೆ ಅಳವಡಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಮಹದೇವಪುರದ ಟ್ರೈಫೆಕ್ಟಾ ಸ್ಟಾರ್‌ಲೈಟ್ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ೮೩ ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕ ಅಳವಡಿಸಲಾಗಿದೆ. ಇದರಿಂದ ಮಾಸಿಕ 80,000 ರೂ ಉಳಿತಾಯವಾಗಲಿದೆ ಎನ್ನುತ್ತಾರೆ ಅಪಾರ್ಟ್ಮೆಂಟ್ ವಾಸಿಗಳು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ,2018)ದ ನಿಯಮ ನೆಟ್ ಮೀಟರಿಂಗ್‌ಗೆ ಅವಕಾಶ ನೀಡಿದ್ದು, ಇದು ಗ್ರಾಹಕರಿಗೆ ಲಾಭದಾಯಕವಾಗಲಿದೆ(ಉತ್ಪಾದಿಸಿದ ವಿದ್ಯುತ್ ಬಳಸಿಕೊಂಡು, ಹೆಚ್ಚುವರಿ ವಿದ್ಯುತ್ ಗ್ರಿಡ್‌ಗೆ ಪೂರೈಸುವುದು.ಒಂದು ವೇಳೆ ಉತ್ಪಾದನೆಯಲ್ಲಿ ಕೊರತೆಯಾದಲ್ಲಿ ಗ್ರಿಡ್‌ನಿಂದ ವಿದ್ಯುತ್ ತೆಗೆದುಕೊಳ್ಳುವುದು).

 

ಇನ್ನೊಂದು ದ್ವಂದ್ವವೆAದರೆ, ಪಳೆಯುಳಿಕೆ ಇಂಧನ ಬಳಸುವ ದ್ವಿಚಕ್ರ/ತ್ರಿಚಕ್ರ ವಾಹನಗಳ ಹೆಚ್ಚಳ. ಬೆಂಗಳೂರು ಮಾತ್ರವಲ್ಲದೆ ಎಲ್ಲೆಡೆ ವೈಯಕ್ತಿಕ ಬಳಕೆ ವಾಹನಗಳು ಹೆಚ್ಚುತ್ತಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಥವಾಗಿಲ್ಲದೆ ಇರುವುದು ಹಾಗೂ ಕೆಲವೊಮ್ಮೆ ವೈಯಕ್ತಿಕ ವಾಹನ ಬಳಸಬೇಕಾದ ಅನಿವಾರ್ಯತೆಯಿಂದ ಸ್ವಂತ ಬೈಕ್/ಕಾರ್ ಬಳಕೆ ಹೆಚ್ಚಳಗೊಂಡಿದೆ. ಪ್ರಯಾಣ-ಸರಕು ಸಾಗಣೆಗೆ ರೈಲು ಅತ್ಯುತ್ತಮ ಮಾಧ್ಯಮವಾದರೂ, ರಸ್ತೆ ಮೂಲಕ ಪ್ರಯಾಣ/ಸಾಗಣೆಯೇ ಹೆಚ್ಚು. ರೈಲು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಬಲಗೊಳಿಸಿದರೆ, ವೈಯಕ್ತಿಕ ವಾಹನಗಳ ಬಳಕೆ ಕಡಿಮೆಗೊಳ್ಳಲಿದೆ. ಇದರಿಂದ ಶೇ.20ರಷ್ಟು ಕೊಳೆಗಾಳಿ ಕಡಿತಗೊಳಿಸಬಹುದು. ಕೊಳೆ ಗಾಳಿ ತುಂಬುವಿಕೆ ಪರಿಣಾಮವಾದ ವಾತಾವರಣದ ಉಷ್ಣತೆ ಹೆಚ್ಚಳದ ವಿಪರಿಣಾಮ ಸ್ಪಷ್ಟವಾಗಿ ಗೋಚರವಾಗುತ್ತಿದೆ. ತೀವ್ರ ಚಳಿ/ಬಿಸಿಲು, ಇಡೀ ಮಳೆಗಾಲದ ಮಳೆ ಒಂದೇ ತಿಂಗಳಲ್ಲಿ ಸುರಿಯುವುದು, ಪ್ರವಾಹ, ಬಿರುಗಾಳಿ, ಚಂಡಮಾರುತ-ಉಷ್ಣ ಪ್ರವಾಹದ ಹೆಚ್ಚಳದಿಂದ ಜನರು, ಸಸ್ಯರಾಶಿ ಹಾಗೂ ಕೃಷಿ ಮೇಲೆ ವಿಪರಿಣಾಮ ಉಂಟಾಗಿದೆ. ಈ ಸಂಬಂಧ ಅಲ್ಪಸ್ವಲ್ಪ ಜಾಗೃತಿಯೂ ಮೂಡಿದೆ. ಆದರೆ, ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿದರೆ, ಜನರಲ್ಲಿ ಅರಿವಿನ ಕೊರತೆ ಸಾಕಷ್ಟು ಇದೆ. ಪ್ರಾಕೃತಿಕ ಅವಘಡಗಳ ಮುನ್ಸೂಚನೆ ವ್ಯವಸ್ಥೆ ದುರ್ಬಲವಾಗಿದೆ. ಸರ್ಕಾರಗಳು ಮುಂದಿನ ಚುನಾವಣೆಯ ಫಸಲಿನ ಕುರಿತು ಆಲೋಚನೆ ಮಾಡುತ್ತವೆಯೇ ಹೊರತು, ದೀರ್ಘಕಾಲೀನ ಯೋಜನೆಗಳನ್ನಲ್ಲ.

ಪ್ಯಾರಿಸ್ ಒಪ್ಪಂದದ ಪ್ರಮುಖ ಶಿಲ್ಪಿಗಳಲ್ಲೊಬ್ಬರಾದ ಕ್ರಿಶ್ಚಿಯಾನಾ ಫಿಗರೆಸ್ ಪ್ರಕಾರ, ದೇಶಗಳು ವಾತಾವರಣಕ್ಕೆ ಎಷ್ಟು ಕೊಳೆ ಗಾಳಿ ತುಂಬುತ್ತಿವೆ ಎನ್ನುವುದನ್ನು ಉಪಗ್ರಹ ಮೇಲುಸ್ತುವಾರಿ ಸೇರಿದಂತೆ, ಉನ್ನತ ತಂತ್ರಜ್ಞಾನ ಬಳಸಿ ಲೆಕ್ಕಿಸಲಾಗುತ್ತಿದೆ. ಇದರಿಂದ ದೇಶಗಳು ತಮ್ಮ ಇಂಗಾಲ ಕಡಿತ ಗುರಿಯನ್ನು ಸಾಧಿಸಿವೆಯೇ ಎನ್ನುವುದನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಕ್ಷಮತೆ ಹೆಚ್ಚಿದೆ ಹಾಗೂ ವಿದ್ಯುತ್ ವಾಹನ(ಇವಿ)ಗಳು ಹೆಚ್ಚುತ್ತಿವೆ. ಹೆಚ್ಚು ಪ್ರಮಾಣದಲ್ಲಿ ವಿದ್ಯುತ್/ಇಂಧನ ಬಳಸುವ ಉಕ್ಕು, ಹಡಗು ಮೂಲಕ ಸಾಗಣೆ, ಸಿಮೆಂಟ್, ರಸಾಯನಿಕಗಳ ಉತ್ಪಾದನೆ ಕ್ಷೇತ್ರದಲ್ಲೂ ಸುಧಾರಣೆಗಳು ಆಗಿವೆ. ಯುಎನ್‌ಸಿಒಪಿ(ವಿಶ್ವಸಂಸ್ಥೆಯ ಪಕ್ಷಗಳ ಸಮಾವೇಶ) ೨೬ನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೆ ಹಾಕಿದ್ದು, ಹವಾಮಾನ ಬದಲಾವಣೆ ಶೃಂಗ ಮುಂದಿನ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿದೆ. ಶೃಂಗದಲ್ಲಿ ದೇಶಗಳು ತಾವು ಮಾಡಬಹುದಾದ ಇಂಗಾಲ ಕಡಿತ ಕುರಿತು ಮಾಹಿತಿ ನೀಡಬೇಕಿದೆ ಹಾಗೂ ಇಂಗಾಲ ಕಡಿತಕ್ಕೆ ನೆರವಾಗುವ ತಂತ್ರಜ್ಞಾನಕ್ಕೆ ಶ್ರೀಮಂತ ದೇಶಗಳು ಅನುದಾನ ನೀಡಬೇಕು ಎನ್ನುವ ಬಡ ದೇಶಗಳ ಬೇಡಿಕೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ಯಾರಿಸ್ ಒಪ್ಪಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಳದ ಅಪಾಯ ಹಾಗೂ ಅದನ್ನು ಕಡಿತಗೊಳಿಸಲು ಇರುವ ಅವಕಾಶಗಳನ್ನು ತೆರೆದಿಟ್ಟಿತು. ಈ ಒಪ್ಪಂದ ಅನಾವರಣಗೊಳಿಸಿದ ಅವಕಾಶವನ್ನು ಜಗತ್ತು ಬಳಸಿಕೊಂಡಿತೇ ಇಲ್ಲವೇ ಎನ್ನುವುದು ಮುಂದಿನ ದಶಕದಲ್ಲಿ ಗೊತ್ತಾಗಲಿದೆ. ಇದು ಮನುಕುಲದ ಭವಿಷ್ಯವನ್ನು ನಿರ್ಧರಿಸುತ್ತದೆ.

 

Journalist,Translator,avid bibliophile

Leave a Reply

Your email address will not be published. Required fields are marked *

Back To Top