ಪಂಜಾಬಿನ ರೈತರ ದೆಹಲಿ ಚಲೋ ಪ್ರತಿಭಟನೆ ಮೆರವಣಿಗೆಯನ್ನು ನಿರ್ಬಂಧಿಸಲು ಮುಂದಾಗಿರುವ ಹರಿಯಾಣ ಸರ್ಕಾರ, ಪಂಜಾಬ್-ಹರಿಯಾಣ ಗಡಿಯಲ್ಲಿನ ಹೆದ್ದಾರಿಗಳನ್ನು ಬಂದ್ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ದಿಲ್ಲಿ ಚಲೋ ಹಮ್ಮಿಕೊಂಡಿದ್ದಾರೆ. ಪಂಜಾಬ್‌ನ ವಿವಿಧ ಭಾಗಗಳಿಂದ ಹೊರಟು ಗುರುವಾರ ದೆಹಲಿಯನ್ನು ತಲುಪಿ, ಗುರುವಾರ ಮತ್ತು ಶುಕ್ರವಾರ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿ, ರಾಷ್ಟ್ರೀಯ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿವೆ. ದೇಶದ ೫೦೦ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ 2 ಲಕ್ಷ ರೈತರು ಸೇರಬಹುದು ಎಂದು ಅಂದಾಜಿಸಲಾಗಿದೆ. ಹರಿಯಾಣದ ಹಿಸಾರ್, ಕುರುಕ್ಷೇತ್ರ ಮತ್ತು ಅಂಬಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ. ಹಲವು ರೈತ ಮುಖಂಡರನ್ನು ಬಂಧಿಸಲಾಗಿದೆ. ರೈತರ ಮೆರವಣಿಗೆ ಹರಿಯಾಣವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮಂಗಳವಾರವೇ ಹೇಳಿದ್ದರು. ಪ್ರತಿಭಟನೆಯನ್ನು ತಡೆಯಲು ಬ್ಯಾರಿಕೇಡ್, ಹೆದ್ದಾರಿಗೆ ಅಡ್ಡವಾಗಿ ಬಂಡೆಗಲ್ಲುಗಳನ್ನು ಇರಿಸಲಾಗಿದೆ. ಆದರೆ, ಹೆದ್ದಾರಿ ಬಂದ್ ಮಾಡಿಲ್ಲ. ನ.೨೬-೨೭ರಂದು ಮಾತ್ರ ಹೆದ್ದಾರಿ ಬಂದ್ ಮಾಡುವಂತೆ ಆದೇಶ ಬಂದಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.
ಹರಿಯಾಣದ ರೈತರು ಮತ್ತು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸರು ಪಂಜಾಬಿನ ರೈತರನ್ನು ತಡೆಯಬಹುದು. ಆದರೆ, ಹರಿಯಾಣದ ರೈತರನ್ನು ಹೇಗೆ ತಡೆಯುತ್ತಾರೆ? ಎಂದು ಪಂಜಾಬಿನ ರೈತರು ಪ್ರಶ್ನಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ, ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವುದು ಹರಿಯಾಣ ಪೊಲೀಸರ ಪ್ರತಿಕ್ರಿಯೆ. ಪ್ರತಿಭಟನೆ ನಡೆಸುವುದು ಖಂಡಿತ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಹರಿಯಾಣದ ರೈತರು ಹೇಳಿದ್ದಾರೆ. ಹರಿಯಾಣದಿಂದ ದೆಹಲಿಗೆ ಹೋಗುವ ಹೆದ್ದಾರಿಗಳನ್ನು ಬಂದ್ ಮಾಡಿದರೆ, ಬೇರೆಡೆಯಿಂದ ದೆಹಲಿಗೆ ಹೋಗುವ ಎಲ್ಲ ಹೆದ್ದಾರಿಗಳನ್ನು ನಾವು ಬಂದ್ ಮಾಡುತ್ತೇವೆ. ಬೇರೆ ದಾರಿ ಮೂಲಕ ಹರಿಯಾಣ ಹಾಗೂ ದೆಹಲಿಯನ್ನು ಪ್ರವೇಶಿಸುತ್ತೇವೆ ಎಂದು ಪಂಜಾಬ್ ರೈತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲು ಅನುಮತಿ ಕೋರಿ ರೈತ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ. ಕೋವಿಡ್ ಇರುವುದರಿಂದ ಪ್ರತಿಭಟನೆ ನಡೆಸಲು ಅನುಮತಿ ನೀಡುವುದಿಲ್ಲ. ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
Courtesyg: Google (photo)