ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆ

ಡಾ.ಹರೀಶ್ ಎಂ ಜಿ

ಮೂವತ್ತು ವರುಷಗಳ ಹಿಂದೆ ಹೆಸರು ಜಾತಿ ಸೂಚಕವಾಗಿತ್ತು. ಒಬ್ಬ ವ್ಯಕ್ತಿಗಿಟ್ಟ ಬೀರ, ಕರಿಯ, ನಾಗ, ಕಾಳ, ಓಬಳ, ಕೆಂಚ, ಹೆಸರುಗಳೇ ಅವರ ಜಾತಿಯನ್ನ ಸೂಚಿಸಿಬಿಡುತ್ತಿತ್ತು. ವ್ಯಕ್ತಿ ಧರಿಸುತ್ತಿದ್ದ ಉಡುಗೆ ತೊಡುಗೆಗಳು ವರ್ಗಗಳ ಸೂಚಕವಾಗಿದ್ದವು. ಉದಾರೀಕರಣ, ಜಾಗತಿಕಾರಣ ಹಾಗು ನಗರೀಕರಣದ ಪ್ರಭಾವದಿಂದ ಈಗಿನ ಪೀಳಿಗೆಯ ಹುಡುಗ/ಹುಡುಗಿಯರಿಗೆ ಪೋಷಕರು ಈ ರೀತಿಯ ಹೆಸರುಗಳನ್ನ ಇಡುತ್ತಿಲ್ಲ. ಹಗಲು ರಾತ್ರಿ ಗೂಗಲ್ ಮಾಡಿ ಅತಿ ಯುನೀಕ್ ಆದ ಹೆಸರನ್ನೇ ಇಡುತ್ತಿದ್ದಾರೆ. ಇಂದು ನನಗೆ ಜಾತಿ ಮತ್ತು ವರ್ಗದ ಪ್ರಮುಖ ಸೂಚಕವಾಗಿ ಕಾಣೋದು ಇಂಗ್ಲಿಷ್ ಭಾಷೆ.

ಬೆಂಗಳೂರಿನಂತಹ ಮಹಾನಗರದ ಹುಡುಗ/ಹುಡುಗಿಯರಿಗೆ ಇಂಗ್ಲೀಷ್ ತಮ್ಮ ಮಾತೃಭಾಷೆಯಷ್ಟೇ ಸಲಿಸಾಗಿ ಒಲಿದರೆ. ಗ್ರಾಮೀಣ ಹಾಗು ಸಣ್ಣ ನಗರಗಳ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಬ್ಬಿಣದ ಕಡಲೆ. ಮಹಾನಗರದ ವಿದ್ಯಾರ್ಥಿಗಳ ಮೊದಲನೆ ಪೀಳಿಗೆಯ ಶಿಕ್ಷಣಾರ್ಥಿಗಳಲ್ಲ, ಪೋಷಕರು ಮತ್ತು ಸಹಪಾಠಿಗಳು ಇಂಗ್ಲೀಷನ್ನೆ ಬಳಸುವುದರಿಂದ ಇಂಗ್ಲೀಷ್ ಕಲಿಕೆ ಅವರಿಗೆ ಅಷ್ಟು ಕಷ್ಟವಾಗದು. ನಾನು ನಗರ ಜೈನ್ ಕಾಲೇಜಿನಲ್ಲಿ ಪಾಠ ಮಾಡುವಾಗ ನನ್ನ ಪಾಠ ಉತ್ಸಾಹದಿಂದ ಕೇಳಿದ ವಿದ್ಯಾರ್ಥಿಗಳು ವಿರಳ. ಪ್ರತಿ ತರಗತಿಯಲ್ಲೂ ಸಾಮಾನ್ಯ ಜ್ಞಾನ, ನಾನು ನೋಡಿದ ಹೊಸ ಚಲನಚಿತ್ರ, ಅವರ ವಿದ್ಯಾಭ್ಯಾಸ-career ಆಯ್ಕೆಗಳ ಕುರಿತು ಮಾತನಾಡಿದ್ದೆ ಹೆಚ್ಚು. ಇಲ್ಲಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೇಲ್ಜಾತಿ/ ಮೇಲ್ವರ್ಗದಿಂದ ಬಂದವರಾಗಿದ್ದು, ಶಾಲೆಗಳಲ್ಲಿ ICSE/CBSE ಸಿಲಬಸ್ ಓದಿದವರಾಗಿರುತ್ತಿದ್ದರು. ಇಂಗ್ಲೀಷ್ ಪ್ರಾಧ್ಯಾಪಕ ಇವರಿಗೆ ಒಬ್ಬ ಸಾಮಾನ್ಯ ಮನುಷ್ಯನಷ್ಟೇ.

ಕಳೆದ ಹನ್ನೆರಡು ವರ್ಷಗಳಿಂದ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಾಠ ಮಾಡುವಾಗ ಆದ ಅನುಭವವೇ ಬೇರೆಯದಾಗಿದೆ. ಇಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರನ್ನು ಎರಡು ಎಕ್ಸ್ಟ್ರೀಮ್ಗಳಲ್ಲಿ ನೋಡುತ್ತಾರೆ. ಇಲ್ಲಿ ಆಂಗ್ಲ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ತೇರ್ಗಡೆವೊಂದುವ ತಂತ್ರ ಹೇಳಿಕೊಟ್ಟರೆ ಆತ ಉದ್ದರಿಸುವ ದೇವರಾಗಿರುತ್ತಾನೆ ಅಥವಾ ಆತ ಏನಾದರು ಭಾಷೆ ಕಲಿಕೆ ಆದ್ಯತೆ ಕೊಟ್ಟು ಶಾರ್ಟ್ ಕಟ್ಗಳನ್ನ, ತೇರ್ಗಡೆವೊಂದುವ ಮಾರ್ಗಗಳನ್ನ ಹೇಳಿಕೊಡದಿದ್ದರೆ ಭಯೋತ್ಪಾದಕನಾಗುತ್ತಾನೆ, ವಿನಾಶಕಾರಿಯಗುತ್ತಾನೆ. ಆಂಗ್ಲ ಭಾಷಾ ಪ್ರಾಧ್ಯಾಪಕನಾಗಿ ನನ್ನ ಹದಿನೆಂಟು ವರ್ಷಗಳ ಅನುಭವದಲ್ಲಿ ಈ ಎರಡೂ ಬಿರುದುಗಳನ್ನು ಪಡೆದುಕೊಂಡಿದ್ದೇನೆ. ಐಚ್ಚಿಕ ಆಂಗ್ಲ ಭಾಷೆ ಆಯ್ಕೆ ಮಾಡಿಕೊಂಡ ಹತ್ತಾರು ವಿದ್ಯಾರ್ಥಿಗಳು ಒಳ್ಳೆಯ ಸರ್ಕಾರಿ ಕೆಲಸಗಳನ್ನ ಪಡೆದರೆ, ಸೆಕೆಂಡ್ ಲ್ಯಾಂಗ್ವೇಜ್ ಆಗಿ ಆಂಗ್ಲ ಭಾಷೆಯನ್ನ ಅರಗಿಸಿಕೊಳ್ಳಲಾಗದೆ ಪದವಿಧರರೂ ಆಗದೆ ಹಾಗೆ ಉಳಿದುಕೊಂಡವರ ಸಂಖ್ಯೆ ಸಾವಿರಾರು.

ನಮ್ಮ ತರಗತಿಗಳಿಗೆ ವಿದ್ಯಾಭ್ಯಾಸಕ್ಕೆಂದು ಬರುವ ಸಾಕಷ್ಟು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಅಕ್ಷರವೂ ಬಾರದು. ಪರಿಶ್ರಮ, ಶ್ರದ್ದೆಯ ಕೊರತೆಯಿಂದ ನಾಪಾಸಗುವವರ ಸಂಖ್ಯೆ 20%ರಷ್ಟಿದ್ದರೆ, 30% ಪ್ರಾಧ್ಯಾಪಕರ ಅಸಮರ್ಥತೆಯಿಂದ ಫೇಲ್ ಆಗುತ್ತಾರೆ. ಇನ್ನುಳಿದ %50 ವಿದ್ಯಾರ್ಥಿಗಳು ನಮ್ಮ ಸರ್ಕಾರಗಳು ಅನುಸರಿಸುತ್ತಿರುವ ಶಿಕ್ಷಣ ನೀತಿಯಿಂದ ಅನ್ಯಾಯಕ್ಕೊಳಗಾಗಿದ್ದರೆ. ಮಹಾನಗರದ ಉಳ್ಳವರ ಮಕ್ಕಳಿಗೆ ಶಿಶುವಿಹಾರದಿಂದಲೇ ಇಂಗ್ಲೀಷ್ ಮತ್ತು ಕಂಪ್ಯೂಟರ್ ಕಲಿಕೆ ಆರಂಭವಾದರೆ, ನಮ್ಮ ಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲೀಷ್ ಅಕ್ಷರಗಳ ಪರಿಚಯವಾಗುವುದು ಆರನೆಯ ತರಗತಿಯಲ್ಲಿ. ಮಹಾನಗರ್ಗಳ ಸುಸಜ್ಜಿತ ಖಾಸಗಿ ಶಾಲೆಗಳಲ್ಲಿ ಭೋದಕರು ಪ್ರತಿ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟು ಓದಿಸಿದರೆ, ಸರ್ಕಾರಿ ಶಾಲೆಯ ಟೀಚರ್ಗಳಿಗೆ ನಾನಾ ಕಿರಿಕಿರಿಗಳು ಭೋದನೆಯನ್ನೇ ಮರೆತು ಬಿಡುವಷ್ಟು ಜವಾಬ್ದಾರಿಗಳು. ಮಧ್ಯಾಹ್ನದ ಊಟ ತರಕಾರಿ, ಹಾಲು, ಮಾತ್ರೆಗಳು, ಬಟ್ಟೆ ಶೂಗಳ ಖರೀದಿ ಮತ್ತು ಅವುಗಳ ರಸೀದಿ, ಲೆಕ್ಕ ಬರೆಯುವುದರಲ್ಲಿ ಅವರು ಸದಾ ನಿರತ. ಪ್ರತಿದಿನ ನೂರೆಂಟು ಮೀಟಿಂಗ್ಗಳ ಕಾಟ ಬೇರೆ. ಇದರ ಜೊತೆಗೆ ಜನಗಣತಿ, ಚುನಾವಣ ಕರ್ತವ್ಯ, ಹಾಗು ಕರೋನ ಸೋಂಕಿತರ ಮಾಹಿತಿ ಕಲೆಹಾಕುವ ಜವಾಬ್ದಾರಿ ಬೇರೆ.

(ಲೇಡಿ ಟೀಚರ್ಗಳಿಗಂತೂ ನೂರೆಂಟು ಸಮಸ್ಯೆಗಳು. ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಶುಚಿಯಾದ ಶೌಚಾಲಯಗಳಿಲ್ಲ. ನೂರಾರು ಟೀಚರ್ ನಾನಾ ರೀತಿಯ ಸೋಂಕಿಗೆ ತುತ್ತಾಗಿ ಹೇಳತೀರದ ಯಾತನೆಯನ್ನ ಅನುಭವಿಸಿದ್ದಾರೆ. PERIODS ಇರುವಾಗಲಂತೂ ಅವರ ಕಷ್ಟಗಳು ತೀರ ಅಸಹನೀಯವಾದುದು. ಬಹಳಶ್ಟು ಹೆಡ್ ಮಾಸ್ಟರ್ಗಳು, ದಿನಕ್ಕೊಂದು draconian ಕಾನೂನುಗಳನ್ನ ಹೊರಡಿಸುವ ಕಮಿಷನರ್ಗಳು ಹೆಣ್ಣುಮಕ್ಕಳ ಇಂತಹ ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ಷ್ಮವನ್ನೇನು ಬೆಳಸಿಕೊಂಡಿಲ್ಲ.- ನನ್ನ ಮಡದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ ಹಳ್ಳಿಗೆ ಪೋಸ್ಟಿಂಗ್ ಅದಾಗ ಆಕೆ ಶೌಚಾಲಯದ ದುಸ್ತಿತಿ ನೋಡಿ ದಿನ ಪೂರ್ತಿ ನೀರು ಕುಡಿಯದೆ ಇದ್ದದ್ದು, ಆಕೆ ಗರ್ಭಿಣಿಯಾದಾಗ ಶೌಚಾಲಯ ಬಳಸಲಾಗದೆ ಅತೀವ ನೋವನ್ನ ಅನುಭವಿಸಿದ್ದು, ಗರ್ಭಿಣಿಯಾಗಿದ್ದರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ)

ಶಾಲೆಯಲ್ಲಿ ಎಲ್ಲ ಅಡೆತಡೆಗಳನ್ನ ಮೀರಿ ಕಾಲೇಜಿಗೆ ಕಾಲಿಟ್ಟರೆ ಅಲ್ಲಿನ ಬಹಳಷ್ಟು ಪ್ರಾಧ್ಯಾಪಕರಿಂದ ಅವರಿಗೆ ಸಿಗೋದು ನೆರವು, ಆತ್ಮ ಸ್ಥೈರ್ಯವಲ್ಲ ಬದಲಾಗಿ ಸಿಗೋದು ಅವಮಾನ, ನಿಂದನೆ ಮತ್ತು ಹಿಯಾಳಿಕೆಗಳಷ್ಟೇ. ಹೀಗೆ ಹೇಗೋ ಕಷ್ಪಪಟ್ಟು ಇಂಗ್ಲೀಷ್ ಪಾಸಾಗಿ ಪದವಿಧರರಾಗುವ ವಿದ್ಯಾರ್ಥಿಗಳಿಗೆ ಮತ್ತೊಂದು ಅಗ್ನಿ ಪರೀಕ್ಷೆ ಕಾದಿರುತ್ತದೆ. ಯಾವುದೇ ಸರ್ಕಾರಿ/ಖಾಸಗಿ ಕೆಲ್ಸಕ್ಕೆ ಸೇರಬೇಕಾದರೆ ಅಲ್ಲಿಯೂ ಕೂಡ ಇಂಗ್ಲೀಷ್ ಭಾಷೆಯ ಜ್ಞಾನ ಅವಶ್ಯಕ. ಸಿ ಮತ್ತು ಡಿ ದರ್ಜೆಯ ಸರ್ಕಾರಿ ಕೆಲಸಕ್ಕೂ ಆಂಗ್ಲ COMPREHENSION PASSAGE, INFERENTIAL ಪ್ರಶ್ನೆಗಳು, OBJECTIVE ಟೈಪ್ ಪ್ರೆಶ್ನೆಗಳು, ಪ್ರಬಂಧಗಳು, ಅನುವಾದಗಳ ಸುರಿಮಳೆ . ಅದಾವುದನ್ನು ಉತ್ತರಿಸಲಾಗದೆ ಹತಾಶರಾಗುವ ವಿದ್ಯಾರ್ಥಿಗಳ ಸಂಖ್ಯೆ ಅಗಣಿತ. (ಇನ್ನೊಂದೆಡೆ ಆಂಗ್ಲ ಎಂ.ಎ ಮಾಡಿಯೂ ಒಂದು ಸರಿಯಾದ ವಾಕ್ಯ ರಚಿಸಲಾಗದ ವ್ಯಕ್ತಿಗಳು ಕೂಡ ಅವೈಜ್ಞಾನಿಕ NET/SLET/TET ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಶಿಕ್ಷರಾಗಿಬಿಡುತ್ತಾರೆ.) ಇದೊಂದು ವಿಷ ವರ್ತುಲ.

ಆಂಗ್ಲ ಭಾಷೆಯೆಂಬುದು ಇಂದು ಒಂದು ಸಂವಹನ ಮಾಧ್ಯಮವಾಗಿ ಉಳಿದಿಲ್ಲ. ಸೋಶಿಯಲ್ ಮೊಬಿಲೈಜೆಶನ್ ಮತ್ತು ಸಬಲೀಕರಣಕ್ಕೆ ಅಗತ್ಯವಾಗಿ ಬೇಕಾದ ಸಾಧನವಾಗಿದೆ. ಕನ್ನಡ ನಮ್ಮ ಮಾತೃ ಭಾಷೆ, ಅದಕ್ಕೆ ಆದ್ಯತೆ ಕೊಡಬೇಕು ನಿಜ, ಆದರೆ ಬದಲಾದ ಜಾಗತಿಕ ಸನ್ನಿವೇಶಗಳಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ನಾವು ಮಾತನಾಡುವ, ವ್ಯವಹರಿಸುವ ಭಾಷೆ ಕನ್ನಡವಾದರೂ ಜೊತೆಗೆ ಇಂಗ್ಲಿಷ್ ಕಲಿಕೆಯನ್ನು ಒಂದನೇ ತರಗತಿಯಿಂದಲಾದರು ಶುರುಮಾಡಬೇಕಾಗಿದೆ.

ಇದರ ಜೊತೆಗೆ ಪ್ರತಿ ಹಳ್ಳಿಗೂ ಸುಸಜ್ಜಿತ ಶಾಲೆಗಳನ್ನ ಕೊಡದೆ ಪ್ರತಿ ಜಿಲ್ಲೆಗೂ ಒಂದು ನವೋದಯ ಶಾಲೆ ಸೃಷ್ಟಿಸಿ ಹಳ್ಳಿಯ ಮಕ್ಕಳಲ್ಲೂ ಒಂದು ಎಲೈಟ್ ವರ್ಗ ಕ್ರಿಯೇಟ್ ಮಾಡಿದ್ದೇಕೆ? ಶಿಕ್ಷಣ inclusive ಆಗದೆ EXCLUSIVE ಆಗಿದ್ದೇಕೆ? ನಮ್ಮ ಹಳ್ಳಿಗಾಡಿನ ಮಕ್ಕಳು ಇವತ್ತಿನ NEET/IIT JEE ಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಲ್ಲರೆ? ದೇಶವ್ಯಾಪಿ ಸಮಾನ ಶಿಕ್ಷಣವಿಲ್ಲದಿರುವಾಗ ದೇಶವ್ಯಾಪಿ ಸಮಾನ ಪರೀಕ್ಷೆಗಳೇಕೆ? ಈ ಎಲ್ಲ ಪ್ರಶ್ನೆಗಳನ್ನು ನಾವುಗಳು ಸುಶಿಕ್ಷಿತರು ಸರ್ಕಾರಗಳಿಗೆ ಕೇಳಬೇಕಿದೆ. ನಾವು ಚುನಾಯಿತ ಅಭ್ಯರ್ಥಿಗಳು NEET ಪರೀಕ್ಷೆಯ ವಿರುದ್ದ ದನಿಯೆತ್ತಲಿಲ್ಲವೇಕೆ? ಜನರು ಬೀದಿಗಿಳಿದು ಪ್ರತಿಭಟಿಸಲಿಲ್ಲವೇಕೆಂಬ ಜಟಿಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಿದೆ.

ಇದರ ನಡುವೆ ಲಾಕ್ಡೌನ್ ಪರಿಣಾಮದಿಂದ ಸಣ್ಣ ವ್ಯಾಪಾರಿಗಳ, ಕೂಲಿಕಾರ್ಮಿಕರ, ರೈತರ ಜೀವನ ನೆಲಕಚ್ಚಿದರೆ, ನಮ್ಮ ಹಳ್ಳಿಯ ಪುಟ್ಟ ಮಕ್ಕಳ ಈ ಶೈಕ್ಷಣಿಕ ವರುಷ ಕರೋನಗೆ ಬಲಿಯಾಗಿ ಹೋಗಿದೆ, ಧನಿಕರ ಮಕ್ಕಳು BYJUS, ಗೂಗಲ್ ಕ್ಲಾಸ್ ರೂಮ್ ಬಳಸಿಕೊಂಡು ಕಲಿಕೆ ಮುಂದುವರೆಸಿದ್ದಾರೆ. ಧನಿಕರು ಇನ್ನುಷ್ಟು ಧನಿಕರಾಗುತ್ತಲೇ ಇದ್ದಾರೆ. ಇದಲ್ಲವೇ ತಣ್ಣನೆಯ ಕ್ರೌರ್ಯಕ್ಕೆ ಪರ್ಫೆಕ್ಟ್ ಉದಾಹರಣೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top