2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು.
ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. ಸಾಮಾನ್ಯವಾಗಿ 2 ಇಲ್ಲವೇ ಮೂವರು ಮಾತ್ರ ಅಗ್ರ ಸ್ಥಾನ ಗಳಿಸುತ್ತಾರೆ. ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡುವ ಕೆರಿಯರ್360 ಜಾಲತಾಣದ ಮುಖ್ಯಸ್ಥ ಮಹೇಶ್ವರ್‌ಪೇರಿ ಪ್ರಕಾರ, ಈ ವರ್ಷ ಅತ್ಯುತ್ತಮ ವೈದ್ಯ ಕಾಲೇಜುಗಳಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಲಿದೆ. ಇದರಿಂದ ಅಷ್ಟೇ ಸಂಖ್ಯೆಯ ಅರ್ಹ ವಿದ್ಯಾರ್ಥಿಗಳು ಉತ್ತಮ ಕಾಲೇಜುಗಳಿಗೆ ಪ್ರವೇಶದಿಂದ ವಂಚಿತರಾಗುತ್ತಾರೆ.
ʻಪರೀಕ್ಷೆ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ಇದಕ್ಕೆ ಉತ್ತರ ಬೇಕಿದೆʼ ಎಂದು ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು. ದೇಶದೆಲ್ಲೆಡೆ ವಿದ್ಯಾರ್ಥಿಗಳು-ಪ್ರತಿ ಪಕ್ಷಗಳು ಪ್ರತಿಭಟಿಸಿ ರಸ್ತೆಗೆ ಇಳಿದವು. ಶಿಕ್ಷಣ ಸಚಿವ ಯಾವುದೇ ಹಗರಣ ನಡೆದಿಲ್ಲ ಎಂದು ಕೊನೆ ಕ್ಷಣದವರೆಗೂ ವಾದಿಸುತ್ತಿದ್ದರು. ಕೊನೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ)ಯ ಮಹಾ ನಿರ್ದೇಶಕ ಸುಬೋಧ್ ಕುಮಾರ್ ಅವರನ್ನು ವಜಾಗೊಳಿಸಿದ ಸರ್ಕಾರ, ಕೃಪಾಂಕಗಳನ್ನು ರದ್ದುಗೊಳಿಸಿತು ಮತ್ತು ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡುವುದಾಗಿ ಹೇಳಿತು. ಜೂನ್ 23ರಂದು ಚಂಡೀಗಢ ಮತ್ತು 4 ರಾಜ್ಯಗಳಲ್ಲಿ ನಡೆದ ಮರುಪರೀಕ್ಷೆಯಲ್ಲಿ 813 ಮಂದಿ ಮಾತ್ರ ಪಾಲ್ಗೊಂಡಿದ್ದರು. ಪರೀಕ್ಷೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಶಿಫಾರಸು ನೀಡಲು ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ 6 ಸದಸ್ಯರ ಸಮಿತಿಯನ್ನು ರಚಿಸಿತು; ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು.
ಆಮೂಲಕ ಇಡೀ ಪ್ರಕರಣಕ್ಕೆ ತಿಲಾಂಜಲಿ ನೀಡಿತು.
2016ರಲ್ಲಿ ನ್ಯಾಯಾಲಯದ ತೀರ್ಪಿನ ಅನ್ವಯ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡಲು ಈ ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ಹೇರಲಾಯಿತು. ಆರಂಭದಿಂದಲೇ ಬಾಲಗ್ರಹ ಪೀಡಿತ ವಾಗಿರುವ ನೀಟ್, ಪ್ರತಿ ವರ್ಷ ಒಂದಲ್ಲ ಒಂದು ಹಗರಣಕ್ಕೆ ಸಿಲುಕುತ್ತದೆ. ಸದ್ಯಕ್ಕೆ ದೇಶದಲ್ಲಿ 706 ಮೆಡಿಕಲ್ ಕಾಲೇಜುಗಳಿದ್ದು, ಲಭ್ಯ ವೈದ್ಯ ಸೀಟು ಅಂದಾಜು 1,09,145. ಈ ವರ್ಷ 24,06,079 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರರ್ಥ-ಒಬ್ಬರಿಗೆ ಸೀಟು ಸಿಕ್ಕಿದರೆ, ಉಳಿದ 23 ಮಂದಿ ಹೊರಗೆ ಉಳಿಯುತ್ತಾರೆ. ಇವರಲ್ಲಿ ಹೆಚ್ಚಿನವರು ಮುಂದಿನ ವರ್ಷ ಮತ್ತೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಇವರೊಟ್ಟಿಗೆ ತಮಗೆ ಬೇಕಿದ್ದ ಕಾಲೇಜಿನಲ್ಲಿ ಸೀಟು ಸಿಗದೆ ಮತ್ತೆ ಪರೀಕ್ಷೆ ತೆಗೆದುಕೊಳ್ಳುವವರು ಹಾಗೂ ಹೊಸದಾಗಿ ಪಿಯುಸಿ ಮುಗಿಸಿ ಪರೀಕ್ಷೆ ತೆಗೆದುಕೊಂಡವರು ಸೇರಿಕೊಳ್ಳುತ್ತಾರೆ. ಇದರಿಂದ ಅಸಮಾನ ಸ್ಪರ್ಧೆ ಏರ್ಪಡುತ್ತದೆ ಮತ್ತು ವರ್ಷದಿಂದ ವರ್ಷಕ್ಕೆ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ರಾಜ್ಯದ 20 ಸರ್ಕಾರಿ ಮತ್ತು 31 ಖಾಸಗಿ ಕಾಲೇಜಿನಲ್ಲಿ ಲಭ್ಯವಿರುವುದು 10,995 ಸೀಟು. ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ 7,411 ಮತ್ತು ಕೇಂದ್ರ ಸರ್ಕಾರದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ(ಎಂಸಿಸಿ) ಮೂಲಕ 1,934 ಸೀಟು ಹಂಚಿಕೆಯಾಗುತ್ತದೆ. ಈ 1934 ಸೀಟುಗಳಲ್ಲಿ ಸರ್ಕಾರಿ ಕೋಟಾದ ಉಚಿತ ಸೀಟು ಶೇ.15 ಮತ್ತು ಡೀಮ್ಡ್ ವಿವಿಗಳ ಶೇ.100ರಷ್ಟು ಸೀಟುಗಳು ಸೇರಿವೆ. ಅನಿವಾಸಿ ಮತ್ತು 2,310 ಖಾಸಗಿ ಸೀಟುಗಳು ಕೋಟಿ ಬೆಲೆ ಬಾಳುತ್ತವೆ. 4,172 ಮೆರಿಟ್ ಸೀಟುಗಳಿಗೆ ವಾರ್ಷಿಕ 60,000 ರೂ. ನಿಂದ 1.5 ಲಕ್ಷ ರೂ ಶುಲ್ಕವಿದೆ. ಎಂಸಿಸಿ ಕೌನ್ಸೆಲಿಂಗ್‌ಗೆ ಹಾಜರಾಗಲು 2 ಲಕ್ಷ ರೂ. ಠೇವಣಿ ನೀಡಬೇಕಾಗುತ್ತದೆ. ಇಲ್ಲಿಗೆ ಹೋಗುವವರಿಗೆ ಕೊಪ್ಪರಿಗೆ ಹಣ ಬೇಕಾಗುತ್ತದೆ. ಸರ್ಕಾರದ ಕಾಲೇಜುಗಳನ್ನು ಹೊರತುಪಡಿಸಿ, ಉಳಿದವು ಧನಾಢ್ಯ ರಾಜಕಾರಣಿಗಳಿಗೆ ಸೇರಿದಂಥವು. ವೈದ್ಯ ಕಾಲೇಜು-ಆಸ್ಪತ್ರೆ ಆರಂಭಿಸಲು ಭಾರತೀಯ ವೈದ್ಯ ಮಂಡಳಿಯ ಅನುಮತಿ, ಮೂಲಸೌಕರ್ಯ(ಪ್ರಯೋಗಾಲಯ, ಕಟ್ಟಡ ಇತ್ಯಾದಿ) ಮತ್ತು ಶಿಕ್ಷಕರ ನೇಮಕಕ್ಕೆ ಅಂದಾಜು 350-500 ಕೋಟಿ ರೂ. ಬೇಕಾಗುತ್ತದೆ.
ಕೋಚಿಂಗ್ ಕೇಂದ್ರಗಳ ಹಾವಳಿ: ದೇಶದೆಲ್ಲೆಡೆ ಕೋಚಿಂಗ್ ಕೇಂದ್ರಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಅಲೆನ್, ಆಕಾಶ್-ಬೈಜೂಸ್, ಪರಿಕ್ರಮ ಇತ್ಯಾದಿ ವಾರ್ಷಿಕ 1-2 ಲಕ್ಷ ರೂ ಶುಲ್ಕ ವಿಧಿಸುತ್ತವೆ. ಬಹುತೇಕ ಖಾಸಗಿ ಪಿಯು ಕಾಲೇಜುಗಳು ನೀಟ್ ತರಬೇತಿಯನ್ನು ನೀಡುವ ಇಂಟಿಗ್ರೇಟೆಡ್ ಕೋರ್ಸ್ ಒಳಗೊಂಡಿವೆ. ನೀಟ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ತರಬೇತಿ ಬೇಕು(ಇದಕ್ಕೆ ಅಪವಾದ ಇರಬಹುದು. ಆದರೆ, ಅದು ವಿರಳಾತಿವಿರಳ). ಇದಕ್ಕೆ 1-2 ಲಕ್ಷ ರೂ. ಶುಲ್ಕ ತೆರಬೇಕು. ನೀಟ್ ತರಬೇತಿ ಕೇಂದ್ರಗಳು ಇರುವುದು ನಗರಗಳಲ್ಲಿ. ಸಣ್ಣ ಪಟ್ಟಣಗಳು/ಹಳ್ಳಿಗಳಲ್ಲಿರುವ ಬಡ/ಮಧ್ಯಮ ವರ್ಗದವರಿಗೆ ಇವು ಕೈಗೆಟಕುವುದಿಲ್ಲ.
2021ರ ಮಾಹಿತಿ ಪ್ರಕಾರ, ದೇಶದ ಶೇ.40 ರಷ್ಟು ಮಕ್ಕಳು ಒಂದಲ್ಲ ಒಂದು ಟ್ಯೂಷನ್ ತರಗತಿ ಸೇರುತ್ತಾರೆ. ಹೈಸ್ಕೂಲಿನ ಶೇ.83ರಷ್ಟು ಮಕ್ಕಳು ಖಾಸಗಿ ಪಾಠಕ್ಕೆ ಹೋಗುತ್ತಾರೆ. ದೇಶಿ ಕೋಚಿಂಗ್ ಉದ್ಯಮದ ಒಟ್ಟು ವಹಿವಾಟು 58,000 ಕೋಟಿ ರೂ. ಇದೆ. ಇದರಲ್ಲಿ ನೀಟ್ ತರಬೇತಿ ಪಾಲು 24,000 ಕೋಟಿ ರೂ., ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಕೋಚಿಂಗ್ ಕೇಂದ್ರಗಳು ಕರ್ನಾಟಕ ಟ್ಯುಟೋರಿಯಲ್ ಇನ್‌ಸ್ಟಿಟ್ಯೂಷನ್ಸ್ ರೂಲ್ಸ್ ಅನ್ವಯ ನೋದಾಯಿಸಿಕೊಳ್ಳಬೇಕು ಎಂದು ಹೇಳಿದ್ದರೂ, ನೋಂದಾಯಿಸಿಕೊಂಡಿ ರುವುದು 12 ಕೇಂದ್ರಗಳಷ್ಟೇ. ಉಳಿದ ನೂರಕ್ಕೂ ಅಧಿಕ ಕೇಂದ್ರಗಳು ತಲೆಕೆಡಿಸಿಕೊಳ್ಳದೆ ವಹಿವಾಟು ಮುಂದುವರಿಸಿವೆ!
ಅತ್ಯುತ್ತಮ ಮತ್ತು ತಮ್ಮ ಆಯ್ಕೆಯ ವೈದ್ಯ ಕಾಲೇಜಿಗೆ ಪ್ರವೇಶ ಪಡೆಯಲು ಧನಾಢ್ಯರ ಮಕ್ಕಳು ಮತ್ತೆ ಮತ್ತೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ(10 ರಲ್ಲಿ 7 ಸೀಟ್ ಭರ್ತಿಯಾಗುವುದು ಹೀಗೆ). ಇಂಥವರು ತರಬೇತಿ ಶುಲ್ಕವಲ್ಲದೆ, ಒಂದು ವರ್ಷ ಮನೆಯಲ್ಲಿ ವ್ಯಾಸಂಗ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಇಂಥವರ ಜೊತೆಗೆ ಕಡಿಮೆ ಆದಾಯದ ಕುಟುಂಬಗಳ ಮಕ್ಕಳು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ವೃತ್ತಿ ಶಿಕ್ಷಣಕ್ಕೆ ಅವಕಾಶ ಕಡಿಮೆ ಇರುವುದರಿಂದ, ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬೇಡಿಕೆ-ಪೂರೈಕೆಯಲ್ಲಿನ ಕೊರತೆಯನ್ನು ನಿವಾರಿಸುವಂತೆ ರೂಪಿಸಲಾಗುತ್ತದೆ. ತರಬೇತಿ ಪಡೆಯಲಾಗದ ಲಕ್ಷಾಂತರ ಮಕ್ಕಳು ಅವಕಾಶ ವಂಚಿತರಾಗುತ್ತಾರೆ.
ಸಿಇಟಿ ಪವಾಡ: 90ರ ದಶಕದಲ್ಲಿ ಖಾಸಗಿ ಎಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಪೈಪೋಟಿ ನಡೆಯಿತು. ಇದರೊಟ್ಟಿಗೆ ಕ್ಯಾಪಿಟೇಷನ್ ಶುಲ್ಕದ ಭರಾಟೆ ತೀವ್ರಗೊಂಡಿತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಆರಂಭಿಸಿದ, ದೇಶಕ್ಕೇ ಮಾದರಿಯಾದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಸಾಮಾಜಿಕ ನ್ಯಾಯದ ಆಶಯವುಳ್ಳ ಸುಧಾರಣೆ ಕ್ರಮವಾಗಿತ್ತು. ಖಾಸಗಿ ವೈದ್ಯ-ಎಂಜಿನಿಯರಿಂಗ್ ಕಾಲೇಜುಗಳ ಆಡಳಿತದಿಂದ ಸಿಇಟಿಗೆ ತೀವ್ರ ಪ್ರತಿರೋಧ ಬಂದಿತು. ಸಿಇಟಿಯಡಿ ಸೀಟು ನೀಡಲು ಪಿಯುಸಿ ಹಾಗೂ ಸಿಇಟಿಯ ಅಂಕವನ್ನು ಪರಿಗಣಿಸಲಾಗುತ್ತಿತ್ತು.
ನೀಟ್ ಸಿಬಿಎಸ್‌ಸಿ ಪಠ್ಯಕ್ರಮವನ್ನು ಆಧರಿಸಿರುವುದರಿಂದ, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿದ್ದ ಪಿಯು ಕಾಲೇಜುಗಳು ಕಡಿಮೆಯಾದವು. ಜತೆಗೆ, ಪ್ರಾಥಮಿಕ/ಪ್ರೌಢಶಾಲೆಗಳ ಸಂಖ್ಯೆ ಕೂಡ ಕಡಿಮೆಯಾಯಿತು. ಇದರಿಂದ ರಾಜ್ಯದ ಕಲಿಕಾ ವ್ಯವಸ್ಥೆ ದುರ್ಬಲಗೊಂಡಿತು.
ತಮಿಳುನಾಡು ಆರಂಭದಿಂದಲೂ ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿದೆ. ಈ ಕೇಂದ್ರೀಕೃತ ಪರೀಕ್ಷೆ ಅಶಿಕ್ಷಿತರು ಹಾಗೂ ಕೋಚಿಂಗ್ ಕೇಂದ್ರಗಳು ವಿಧಿಸುವ ದುಬಾರಿ ಶುಲ್ಕ ತೆರಲಾಗದವರಿಗೆ ಅನ್ಯಾಯ ಮಾಡುತ್ತದೆ. ತಮಿಳುನಾಡಿನಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ.6 ರಷ್ಟು ಜನರಿದ್ದು, ವೈದ್ಯರ ಪ್ರಮಾಣ ಶೇ.11ರಷ್ಟು ಇದೆ. ಮೆಡಿಕಲ್ ಕಾಲೇಜುಗಳಿಗೆ ಸರ್ಕಾರ ನೇರ ಅನುದಾನ ನೀಡುವುದು ಇದಕ್ಕೆ ಕಾರಣ. ಆದರೆ, ನೀಟ್ ಪರಿಚಯಿಸಿದ ಬಳಿಕ ತಮಿಳುನಾಡು ಶಿಕ್ಷಣ ಇಲಾಖೆಯ ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಕಾಲೇಜುಗಳಿಂದ ಪದವೀಧರರ ಪ್ರಮಾಣ ಶೇ.14ಕ್ಕೆ ಕುಸಿದಿದೆ. ತಮಿಳು ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ.
ನಮಗೆ ಬೇಕಿಲ್ಲ: ನವದೆಹಲಿ ಹೇರುವ ಈ ಪರೀಕ್ಷೆಯನ್ನು ರಾಜ್ಯಗಳು ಏಕೆ ಸಹಿಸಿಕೊಳ್ಳಬೇಕು? ಮೂಲಭೂತವಾಗಿ ನೀಟ್ ಒಂದು ರಾಜಕೀಯ ಯೋಜನೆ. ಖಾಸಗಿ ಇಲ್ಲವೇ ಕೇಂದ್ರದ ನಿಯಂತ್ರಣದಲ್ಲಿರುವ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು, ರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಾರೆ. ಅತಿ ಶ್ರೀಮಂತರು ಅಂತಾರಾಷ್ಟ್ರೀಯ ಬಕ್ಕಾಲಾರಿಯೇಟ್ ಕೋರ್ಸ್ ಆಯ್ದುಕೊಳ್ಳುತ್ತಾರೆ. ಬಡ ಮಕ್ಕಳು ರಾಜ್ಯ ಸರ್ಕಾರದ ಶಾಲೆಗಳಲ್ಲಿ ಓದುತ್ತಾರೆ. ಸ್ಥಳೀಯ ಭಾಷೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಬರೆದ ಪುಸ್ತಕಗಳನ್ನು ಬಳಸುತ್ತಾರೆ. 28 ರಾಜ್ಯಗಳ ಶಿಕ್ಷಣ ಮಂಡಳಿಗಳು ನೀಡುವ ಶಿಕ್ಷಣದಲ್ಲಿ ವ್ಯತ್ಯಾಸಗಳನ್ನು ಪರಿಗಣಿಸದೆ ಇರುವುದು ಸ್ಥಳೀಯ ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಪೋಷಕರು ಕ್ರಮೇಣ ರಾಜ್ಯ ಪಠ್ಯಕ್ರಮದಿಂದ ಹೊರಹೋಗಲು ಪ್ರಾರಂಭಿಸುತ್ತಾರೆ. ಶ್ರೀಮಂತರ ಮಕ್ಕಳು ಹೆಚ್ಚು ಅಂಕ ಪಡೆದು, ವೈದ್ಯಕೀಯ ಸೀಟು ಪಡೆಯಲಾರಂಭಿಸಿದರು. ನೀಟ್ ಪರೀಕ್ಷೆಯಲ್ಲಿ ನಗರದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂದಿನ 25 ವರ್ಷಗಳಲ್ಲಿ ಹಳ್ಳಿಗಾಡಿನ ಮಕ್ಕಳು ವೈದ್ಯರಾಗುವುದು ಸಾಧ್ಯವೇ ಇಲ್ಲದ ಸ್ಥಿತಿ ಸೃಷ್ಟಿಯಾಗುತ್ತದೆ. ಇದರಿಂದ ಹಳ್ಳಿಗಾಡಿನಲ್ಲಿ ವೈದ್ಯರ ಕೊರತೆ ಹೆಚ್ಚಲಿದೆ. ಕರ್ನಾಟಕಕ್ಕೆ ವಲಸೆ ಬಂದವರ ಮಕ್ಕಳು ಕೂಡ ರಾಜ್ಯದ ಕೋಟಾದಡಿ ಸೀಟು ಪಡೆಯಲಾರಂಭಿಸಿದರೆ, ಕನ್ನಡದ ಮಕ್ಕಳು ಅನಾಥರಾಗುತ್ತಾರೆ. ಶಿಕ್ಷಣ ಮಾತ್ರವಲ್ಲ, ಇಡೀ ವ್ಯವಸ್ಥೆ ಶ್ರೀಮಂತರ ಪರವಾಗಿದೆ. ವ್ಯವಸ್ಥೆ ಬಡವರಿಗೆ ಒಳ್ಳೆಯ ಶಿಕ್ಷಣ/ಪೌಷ್ಟಿಕ ಆಹಾರ ಸಿಗದಂತೆ ನೋಡಿಕೊಳ್ಳುತ್ತದೆ.
ವೈದ್ಯರ ಬೇಡಿಕೆಯನ್ನು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯಗಳಲ್ಲಿ ಯಾರು ನಿಯಂತ್ರಿಸಬೇಕು ಎಂಬುದು ಇಲ್ಲಿರುವ ಪ್ರಶ್ನೆ. ಆರ್ಥಿಕವಾಗಿ ಬಲವಾಗಿರುವ ತಮಿಳುನಾಡು, ಕೇರಳ ಮತ್ತು ಕರ್ನಾಟಕ ತಮ್ಮದೇ ಪಠ್ಯಕ್ರಮವನ್ನು ರೂಪಿಸಿಕೊಂಡಿದ್ದು, ಭಾಷಾ ಅಸ್ಮಿತೆಯ ಸುತ್ತ ಮುಸ್ಲಿಮರು-ಕ್ರಿಶ್ಚಿಯನ್ನರನ್ನು ಒಳಗೊಂಡು ತನ್ನ ರಾಜಕೀಯವನ್ನು ಸಂಘಟಿಸುತ್ತಿವೆ; ಉತ್ತರ ರಾಜ್ಯಗಳಿಂದ ಬರುವ ಹಿಂದುಪರ ಸಿದ್ಧಾಂತಕ್ಕೆ ಅಧಿಕೃತ ಪರ್ಯಾಯವನ್ನು ನೀಡುತ್ತವೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿತು: ಕೇರಳದಲ್ಲಿ ಸುರೇಶ್ ಗೋಪಿ ಅವರ ಮೂಲಕ ಖಾತೆ ತೆರೆಯಿತು: ಕರ್ನಾಟಕದಲ್ಲಿ ಅಧಿಕಾರ ಅನುಭವಿಸಿದೆ; ಆಂಧ್ರಪ್ರದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ ಮತ್ತು ತೆಲಂಗಾಣದಲ್ಲಿ ಬೇರೂರಿದೆ.
ಬಿಜೆಪಿ ಹೇಳುವ ʼಒಂದು ರಾಷ್ಟ್ರ, ಒಂದು ಪಠ್ಯಕ್ರಮʼ, ʻಒಂದು ದೇಶ ಒಂದು ವ್ಯವಸ್ಥೆʼ ಎನ್ನುವುದು ವಿನಾಶಕಾರಿ. ರಾಷ್ಟ್ರೀಯ ಪರೀಕ್ಷೆ ಎನ್ನುವುದು ರಾಜಕೀಯ ಸ್ವಾಯತ್ತೆಗೆ ಧಕ್ಕೆ ತರುತ್ತದೆ. ಒಕ್ಕೂಟ ತತ್ವದ ಬಲ ಕುಂದಿಸುವಿಕೆ ದಕ್ಷಿಣ ರಾಜ್ಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇರಳ ಇತ್ತೀಚೆಗೆ ಲಿಂಗ ತಟಸ್ಥ ಪಠ್ಯಪುಸ್ತಕಗಳನ್ನು ಪರಿಚಯಿಸಿದ್ದು, ಪಿತೃಪ್ರಧಾನತೆಗೆ ಸವಾಲು ಹಾಕಿದೆ. ಶಿಕ್ಷಣದ ಸಮಗ್ರ-ವೈವಿಧ್ಯೀಕರಣದ ಮೂಲಕ ಮನಸ್ಥಿತಿಯನ್ನು ಬದಲಿಸಬಹುದು. ಹಿಂದಿನ ಪೀಳಿಗೆಯ ಭಾರತೀಯರ ವಿಶ್ವಾತ್ಮಕ ದೃಷ್ಟಿಕೋನಕ್ಕೆ ಜಾತ್ಯತೀತ ಪ್ರಜಾಪ್ರಭುತ್ವವು ಪ್ರೋತ್ಸಾಹಿಸಿದ ಪಠ್ಯಪುಸ್ತಕಗಳು ಕಾರಣವಾಗಿದ್ದವು. ನೀಟ್‌ನಂಥ ಪ್ರವೇಶ ಪರೀಕ್ಷೆ ಮೂಲಕ ರಾಷ್ಟ್ರೀಯ ಪಠ್ಯಕ್ರಮವನ್ನು ಹೇರಿ, ರಾಜ್ಯ ಶಿಕ್ಷಣ ಮಂಡಳಿಗಳು ಕೆಳದರ್ಜೆಗಿಳಿಯುತ್ತಿವೆ. ಪ್ರಶ್ನೆಪತ್ರಿಕೆ ಸೋರಿಕೆ-ಅಕ್ರಮ-ಭ್ರಷ್ಟಾಚಾರ ಮಾತ್ರವಲ್ಲದೆ, ಈ ಕಾರಣದಿಂದ ನೀಟ್ ತೊಲಗಬೇಕಿದೆ.
ಪರಿಶಿಷ್ಟ 7ರ 32ನೇ ಅಂಶದಡಿ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಚಾಲನೆ ಮತ್ತು ರದ್ದು ಹಾಗೂ ಪ್ರವೇಶ ಪರೀಕ್ಷೆ-ಪದವಿ ನೀಡುವಿಕೆಯ ನಿಯಂತ್ರಣ ರಾಜ್ಯದ ಬಳಿಯಿದೆ. ಇದನ್ನು ಬಳಸಿಕೊಂಡು, ಸರ್ಕಾರಿ ಕಾಲೇಜುಗಳ ವೈದ್ಯ ಸೀಟನ್ನು ನೀಟ್‌ನಿಂದ ಹೊರಗಿಡಬೇಕಿದೆ. ಸರ್ಕಾರ ಜಿಲ್ಲೆಗೊಂದು ವೈದ್ಯ ಕಾಲೇಜು ಆರಂಭಿಸಿ, ಮೂಲಸೌಲಭ್ಯ ಕಲ್ಪಿಸಬೇಕು. ದೇಶಾದ್ಯಂತ ವಾರ್ಷಿಕ 5 ಲಕ್ಷ ಎಂಬಿಬಿಎಸ್ ಸೀಟು ಲಭ್ಯವಾಗುವಂತೆ ಮಾಡಿದರೆ, 140+ ಕೋಟಿ ಜನಸಂಖ್ಯೆಗೆ ಉತ್ತಮ ಅರೋಗ್ಯ ಸೇವೆ ಕಲ್ಪಿಸಬಹುದು. ಆಗ ಎಸ್.ಅನಿತಾ ಅವರ ಆತ್ಮಕ್ಕೆ ಶಾಂತಿ ಸಿಗಬಹುದೇನೋ?