ದೇಶದಲ್ಲಿ ಮಧುಮೇಹ ವ್ಯಾಪಕವಾಗಿ ಹೆಚ್ಚಿದ್ದು, ಆತಂಕ ಸೃಷ್ಟಿಸಿದೆ. ಇದರ ಜೊತೆಗೆ, ಚಿಕಿತ್ಸೆಯ ಅಲಭ್ಯತೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಎರಡು ಪ್ರತ್ಯೇಕ ಅಧ್ಯಯನ ವರದಿಗಳು ಇತ್ತೀಚೆಗೆ ಬಹಿರಂಗ ಪಡಿಸಿವೆ.
ಜಗತ್ತಿನೆಲ್ಲೆಡೆ ಮಧುಮೇಹ, ಮಧುಮೇಹ ಪೂರ್ವ ಸ್ಥಿತಿ ಹಾಗೂ ಬೊಜ್ಜು ಹೆಚ್ಚುತ್ತಿದೆ. ಲ್ಯಾನ್ಸೆಟ್ ನವೆಂಬರ್ 13ರಂದು ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿ 1990ರಲ್ಲಿ 200 ದಶಲಕ್ಷದಷ್ಟಿದ್ದ ಮಧುಮೇಹಿಗಳ ಸಂಖ್ಯೆ 2022ರಲ್ಲಿ 800 ದಶಲಕ್ಷಕ್ಕೆ ಹೆಚ್ಚಿದೆ. ಇವರಲ್ಲಿ ಭಾರತೀಯರು 212 ದಶಲಕ್ಷ ಹಾಗೂ ಚೀನೀಯರು 148 ದಶಲಕ್ಷ. 1990ಕ್ಕೆ ಹೋಲಿಸಿದರೆ, ಮಧುಮೇಹಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. ಆಗ ಶೇ. 21ರಷ್ಟು ಮಹಿಳೆಯರು ಹಾಗೂ ಶೇ.25ರಷ್ಟು ಪುರುಷರು ಚಿಕಿತ್ಸೆ ಪಡೆಯುತ್ತಿದ್ದರು. 2022ರಲ್ಲಿ ಅದು ಕ್ರಮವಾಗಿ ಶೇ.28 ಮತ್ತು ಶೇ.29ಕ್ಕೆ ಹೆಚ್ಚಿದೆ. ಇವರಲ್ಲಿ 30 ವರ್ಷ ಕೆಳಗಿನ 133 ದಶಲಕ್ಷ ಭಾರತೀಯರು ಹಾಗೂ 78 ದಶಲಕ್ಷ ಚೀನೀಯರಿಗೆ ಔಷಧೋಪಚಾರ ಸಿಗುತ್ತಿಲ್ಲ. ಲ್ಯಾನ್ಸೆಟ್ ಅಧ್ಯಯನವು ಹಿಮೋಗ್ಲೋಬಿನ್ಎ1ಸಿ(ಎಚ್ಬಿಎ1ಸಿ) ಪ್ರಮಾಣವನ್ನು ಬಳಸಿದೆ.
ಲ್ಯಾನ್ಸೆಟ್ ವರದಿಯು ಐಸಿಎಂಆರ್-ಇನ್ಡಯಾಬಿ 2008-2020ರ ಅವಧಿಯಲ್ಲಿ ನಡೆಸಿದ ದೀರ್ಘಕಾಲೀನ ಅಧ್ಯಯನವನ್ನು ಆಧರಿಸಿದೆ. ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಹೊರೆ ಕುರಿತು 5 ಹಂತಗಳಲ್ಲಿ ನಡೆದ ಈ ಅಧ್ಯಯನದಲ್ಲಿ ಪ್ರತಿ ಹಂತದಲ್ಲಿ 5 ರಾಜ್ಯಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ 1.24 ಲಕ್ಷ ಮಂದಿ ಪಾಲ್ಗೊಂಡಿದ್ದರು. ವರದಿ ಪ್ರಕಾರ, ಒಟ್ಟು ಜನಸಂಖ್ಯೆಯ ಅಂದಾಜು ಶೇ.11 ಮಂದಿ ಮಧುಮೇಹ ಹೊಂದಿದ್ದು, ಶೇ.15.3 ಮಂದಿ ಮಧುಮೇಹ ಪೂರ್ವ ಸ್ಥಿತಿಯಲ್ಲಿದ್ದಾರೆ. ಅಂದರೆ, ದೇಶದಲ್ಲಿ 101.3 ದಶಲಕ್ಷ ಮಧುಮೇಹಿಗಳು ಹಾಗೂ 136 ದಶಲಕ್ಷ ಮಧುಮೇಹಪೂರ್ವ ಸ್ಥಿತಿಯವರು ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಜಗತ್ತಿನಲ್ಲಿ 422 ದಶಲಕ್ಷ ಮಂದಿ ಮಧುಮೇಹಿಗಳಿದ್ದು, ಪ್ರತಿವರ್ಷ 1.5 ಲಕ್ಷ ಮಂದಿ ಸಂಬಂಧಿತ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ.
ಕಳೆದ ವರ್ಷ ಭಾರತೀಯ ಸಂಶೋಧಕರು ನಡೆಸಿದ ಸ್ವತಂತ್ರ ಮೌಲ್ಯಮಾಪನದ ಪ್ರಕಾರ, ದೇಶದಲ್ಲಿ ಮಧುಮೇಹದ ಸಂಭವನೀಯತೆ ಶೇ.13 ಇತ್ತು. ಈ ಅಧ್ಯಯನವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಆಧರಿಸಿದೆ.
ಹಲವು ಕಾರಣಗಳು: ಮಧುಮೇಹಕ್ಕೆ ಅನಾರೋಗ್ಯಕರ ಆಹಾರ, ಅಧಿಕ ಕ್ಯಾಲೊರಿ ಇರುವ ಕಾರ್ಬೋಹೈಡ್ರೇಟ್ ಸಮೃದ್ಧ ಹಾಗೂ ಪರ್ಯಾಪ್ತ ಕೊಬ್ಬು ಇರುವ ಆಹಾರ ಸೇವನೆ ಮತ್ತು ಸೋಂಬೇರಿ ಜೀವನಶೈಲಿ ಕಾರಣ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸಸ್ನಲ್ಲಿ ಇತ್ತೀಚೆಗೆ ಪ್ರಕಟಗೊಂಡ ಕ್ಲಿನಿಕಲ್ ಪರೀಕ್ಷಾರ್ಥ ಅಧ್ಯಯನವೊಂದು ಮಧುಮೇಹ ಹೆಚ್ಚಳಕ್ಕೆ ಅತ್ಯಧಿಕ ಸಂಸ್ಕರಿತ(ಅಲ್ಟ್ರಾ ರಿಫೈನ್ಡ್) ಆಹಾರ ಮತ್ತು ಫಾಸ್ಟ್ ಫುಡ್ ಕಾರಣ ಎಂದಿದೆ. ಅತ್ಯಧಿಕ ಸಂಸ್ಕರಿತ ಫಾಸ್ಟ್ ಫುಡ್ಗಳಲ್ಲಿ ಎಇಜಿ(ಅಡ್ವಾನ್ಸ್ಡ್ ಗ್ಲೈಕೇಷನ್ ಎಂಡ್ ಪ್ರಾಡಕ್ಟ್ಸ್)ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಗ್ಲೈಕೇಷನ್ ಎಂದರೆ ಸಕ್ಕರೆ ಕಣಗಳು ಪ್ರೋಟೀನ್ ಇಲ್ಲವೇ ಲಿಪಿಡ್ ಕಣದೊಂದಿಗೆ ಜೋಡಣೆಯಾಗುವ ಕಿಣ್ವರಹಿತ ರಾಸಾಯನಿಕ ಪ್ರಕ್ರಿಯೆ. ಆಹಾರವನ್ನು ಅಧಿಕ ತಾಪಮಾನದಲ್ಲಿ ಕರಿದಾಗ ಇಲ್ಲವೇ ಹುರಿದಾಗ, ಅದರಲ್ಲಿರುವ ಸಕ್ಕರೆಯು ಕೊಬ್ಬು ಇಲ್ಲವೇ ಪ್ರೋಟೀನ್ ಜೊತೆಗೆ ಸಂಯೋಜನೆಗೊಂಡು, ಎಜಿಇ ಸೃಷ್ಟಿಯಾಗುತ್ತದೆ. ಇದು ಮಧುಮೇಹಕ್ಕೆ ದಾರಿ ಮಾಡಿಕೊಡುವ ಉರಿಯೂತಕ್ಕೆ ಪ್ರಮುಖ ಕಾರಣ. ಕಡಿಮೆ ಎಇಜಿ ಇರುವ ಆಹಾರ ಪದಾರ್ಥಗಳಿಂದ ಇನ್ಸುಲಿನ್ ಸೂಕ್ಷ್ಮತೆಯಲ್ಲಿ ಸುಧಾರಣೆ ಹಾಗೂ ಉರಿಯೂತ ಮಟ್ಟ ಕಡಿಮೆಯಾಗಿದೆ. ಈ ಅಧ್ಯಯನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯು ಆರ್ಥಿಕ ನೆರವು ನೀಡಿತ್ತು.
ಪಾಶ್ಚಿಮಾತ್ಯ ದೇಶಗಳಲ್ಲಿ ಈಮೊದಲು ನಡೆದ ಅಧ್ಯಯನಗಳ ಪ್ರಕಾರ, ಕೊಬ್ಬು, ಸಕ್ಕರೆ, ಉಪ್ಪು ಮತ್ತು ಎಇಜಿ ಅಧಿಕ ಪ್ರಮಾಣದಲ್ಲಿರುವ ಸಂಸ್ಕರಿಸಿದ ಆಹಾರ ಸೇವನೆಯಿಂದ ದೀರ್ಘಕಾಲೀನ ಕಾಯಿಲೆಗಳು ಹೆಚ್ಚುತ್ತವೆ. ಕಡಿಮೆ ಎಇಜಿ ಇರುವ ಆಹಾರ ಪದಾರ್ಥಗಳೆಂದರೆ, ಹಣ್ಣು, ತರಕಾರಿ, ಇಡೀ ಕಾಳುಗಳು ಮತ್ತು ಕಡಿಮೆ ಕೊಬ್ಬಿನಂಶ ಇರುವ ಹಾಲು. ಇವುಗಳ ಸೇವನೆಯಿಂದ ದೇಹದಲ್ಲಿ ಉತ್ಕರ್ಷಣೆ ಒತ್ತಡ ಕಡಿಮೆಯಾಗುತ್ತದೆ. ಅಂದರೆ, ಮುಕ್ತ ಕಣಗಳು ಮತ್ತು ಉತ್ಕರ್ಷಣೆ ವಿರೋಧ ಕಣಗಳ ನಡುವಿನ ಅಸಮತೋಲನ ನಿವಾರಣೆಯಾಗಿ, ಉರಿಯೂತ ಹಾಗೂ ಜೀವಕೋಶಗಳ ಹಾನಿ ಕಡಿಮೆಯಾಗುತ್ತದೆ. ಮೇಲಿನ ಅಧ್ಯಯನದಲ್ಲಿ ಮಧುಮೇಹಿ ಗಳಲ್ಲದ ಅಧಿಕ ತೂಕ(ಬೊಜ್ಜು) ಹೊಂದಿದವರನ್ನು ಎರಡು ಗುಂಪಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿಗೆ ಕಡಿಮೆ ಎಇಜಿ ಹಾಗೂ ಇನ್ನೊಂದು ಗುಂಪಿಗೆ ಅಧಿಕ ಎಇಜಿ ಇರುವ ಆಹಾರವನ್ನು 12 ವಾರ ಕಾಲ ನೀಡಲಾಯಿತು. ಆನಂತರ ಪರಿಶೀಲಿಸಿದಾಗ, ಕಡಿಮೆ ಎಇಜಿ ಆಹಾರ ಸೇವಿಸಿದವರಲ್ಲಿ ಇನ್ಸುಲಿನ್ ಸೂಕ್ಷ್ಮತೆ ಗಮನಾರ್ಹವಾಗಿ ಹೆಚ್ಚಿತ್ತು. ಅಧ್ಯಯನ ನಡೆಸಿದ್ದ ಮದ್ರಾಸ್ ಡಯಾಬಿಟಿಕ್ ಫೌಂಡೇಷನ್ನಿನ ಅಧ್ಯಕ್ಷ ಡಾ. ವಿ. ಮೋಹನ್ ಅವರ ಪ್ರಕಾರ, ಪಿಷ್ಟರಹಿತ ಹಸಿರೆಲೆ ತರಕಾರಿಗಳು, ಹಣ್ಣು, ಹುರಿದ-ಕರಿದ ಬದಲು ಬೇಯಿಸಿದ ಆಹಾರ ಮತ್ತು ಬೇಕರಿ-ಸಿಹಿತಿನಿಸು ಸೇವನೆ ಕಡಿತಗೊಳಿಸುವ ಮೂಲಕ ಎಇಜಿ ಸೇವನೆ ಕಡಿಮೆ ಮಾಡ ಬಹುದು. ಇದರಿಂದ ಮಧುಮೇಹ-2ರ ಅಪಾಯ ಕಡಿಮೆಯಾಗಲಿದೆ.
ಇನ್ನೊಂದು ಅಂಶ-ಧೂಮಪಾನ. ನವೆಂಬರ್ 2023ರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಧೂಮಪಾನದಿಂದ ಮಧುಮೇಹದ ಸಾಧ್ಯತೆ ಶೇ.30-40ರಷ್ಟು ಹೆಚ್ಚುತ್ತದೆ. ಹೊಗೆಸೊಪ್ಪಿನಲ್ಲಿರುವ ನಿಕೋಟಿನ್, ಬೀಟಾ ಜೀವಕೋಶಗಳ ಕಾರ್ಯಚಟುವಟಿಕೆಯನ್ನು ಅಸಮತೋಲಗೊಳಿಸುವ ಮೂಲಕ ಇನ್ಸುಲಿನ್ ಮತ್ತು ಗ್ಲುಕೋಸ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಹೊಗೆಸೊಪ್ಪಿನ ಸಕಲ ರೂಪಗಳ ನಿರ್ಬಂಧದಿಂದ ಹೃದ್ರೋಗ ಕಡಿಮೆಯಾಗಲಿದೆ. ಗರ್ಭಿಣಿಯರಲ್ಲಿ ಮಧುಮೇಹ ನಿರ್ವಹಣೆಯಿಂದ ಭವಿಷ್ಯದಲ್ಲಿ ತಾಯಿ ಹಾಗೂ ಮಗು ಮಧುಮೇಹಿಗಳಾಗುವುದನ್ನು ತಡೆಯಬಹುದು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಅಪಾಯ ಕುರಿತ ಸಹಯೋಗ(ನಾನ್ ಕಮ್ಯುನಿಕಬಲ್ ಡಿಸೀಸ್ ರಿಸ್ಕ್ ಫ್ಯಾಕ್ಟರ್ ಕೊಲಾಬರೇಷನ್-ಎನ್ಸಿಡಿ ಆರ್ಎಫ್ಸಿ) ಅಧ್ಯಯನಕ್ಕೆ 150 ದೇಶಗಳ 18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ 14 ಕೋಟಿ ಜನರ ಮಾಹಿತಿಯನ್ನು ಸಂಶೋಧಕರು ಸಂಗ್ರಹಿಸಿದ್ದಾರೆ. ಇದು ಮಧುಮೇಹ ದರ ಮತ್ತು ಔಷಧೋಪಚಾರ ಕುರಿತ ಮೊದಲ ಜಾಗತಿಕ ವಿಶ್ಲೇಷಣೆ ಪ್ರಯತ್ನ. ಭಾರತ, ಚೀನಾ ಹೊರತುಪಡಿಸಿದರೆ, ಅಧಿಕ ಮಧುಮೇಹಿಗಳು ಇರುವ ದೇಶಗಳೆಂದರೆ ಪಾಕಿಸ್ತಾನ(3.6 ಕೋಟಿ), ಇಂಡೋನೇಷ್ಯಾ(2.5 ಕೋಟಿ) ಹಾಗೂ ಬ್ರೆಜಿಲ್( 2.2 ಕೋಟಿ).
ಚಿಕಿತ್ಸೆ ಅಲಭ್ಯತೆ: ಮಧುಮೇಹಿಗಳ ಹೆಚ್ಚಳದ ಜೊತೆಗೆ ಕಳವಳಕ್ಕೆ ಕಾರಣವಾಗಿರುವ ಇನ್ನೊಂದು ಅಂಶವೆಂದರೆ, ಚಿಕಿತ್ಸೆ ಪಡೆಯದೆ ಇರುವುದು. ಅತಿ ಹೆಚ್ಚು ಮಧುಮೇಹಿಗಳು ದೇಶದಲ್ಲಿದ್ದರೂ, 10ರಲ್ಲಿ ಮೂವರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಪತ್ತೆ ಮತ್ತು ರೋಗೋಪಚಾರದಲ್ಲಿ ಅಗಾಧ ಕಂದರವಿದೆ. ಜಗತ್ತಿನಾದ್ಯಂತ 44.5 ಕೋಟಿ ಮಧುಮೇಹಿಗಳು(30 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು) ಚಿಕಿತ್ಸೆ ಪಡೆಯುತ್ತಿಲ್ಲ; ಇವರಲ್ಲಿ ನಮ್ಮ ಪಾಲು ಶೇ.30.
ಮಧುಮೇಹದ ಸಂಭವನೀಯತೆಯಲ್ಲೂ ಆರ್ಥಿಕ ಅಸಮಾನತೆ ಇದೆ. ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ರೋಗದ ಸಾಧ್ಯತೆ ಹೆಚ್ಚು; ಆದರೆ, ಶ್ರೀಮಂತ ದೇಶಗಳಲ್ಲಿ ಔಷಧ-ರೋಗೋಪಚಾರದಲ್ಲಿ ಹೆಚ್ಚು ಸುಧಾರಣೆ ಆಗಿದೆ. ಮನುಷ್ಯರ ಜೀವಿತಾವಧಿ ಹೆಚ್ಚಳದಿಂದಾಗಿ, ಮಧುಮೇಹಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮೆಟ್ರೋಗಳಲ್ಲಿ ಮಧುಮೇಹಿಗಳು ಹೆಚ್ಚು ಎಂಬ ಅಭಿಪ್ರಾಯವಿದ್ದಿತ್ತು. ಆದರೆ, 2-3ನೇ ಹಂತದ ನಗರಗಳಲ್ಲೂ ಮಧುಮೇಹ ಹೆಚ್ಚುತ್ತಿದೆ. ನಗರ ಭಾರತದಲ್ಲಿ ಮಧುಮೇಹಪೂರ್ವ ಸ್ಥಿತಿ ಇರುವವರ ಪ್ರಮಾಣ ಶೇ. 16.4 ಇದ್ದು, ಗ್ರಾಮೀಣ ಪ್ರದೇಶದಲ್ಲಿ ಇದು ಶೇ. 8.9 ಇದೆ. ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳು ಅತ್ಯುತ್ತಮವಾಗಿರುವ ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಿದೆ. ಇದು ಅಭಿವೃದ್ಧಿಯ ವಿಪರಿಣಾಮ. ಈಶಾನ್ಯ ಭಾರತದ ರಾಜ್ಯಗಳಲ್ಲಿ ತ್ರಿಪುರ ಮತ್ತು ಸಿಕ್ಕಿಂನಲ್ಲಿ ಹೆಚ್ಚು ಮಧುಮೇಹಿಗಳಿದ್ದಾರೆ. ತ್ರಿಪುರದಲ್ಲಿ ಜನಾಂ ಗೀಯ ಸಂಯೋಜನೆ ವಿಭಿನ್ನವಾಗಿದ್ದು, ಬಾಂಗ್ಲಾ ದೇಶೀಯರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ, ಮಧುಮೇಹ ಕೂಡ ಹೆಚ್ಚು ಇದೆ.
ದಾರಿ ಯಾವುದು?: ಹೆಚ್ಚಿನವರು ಸಾಂಪ್ರದಾಯಿಕ ಜೀವನಶೈಲಿಯಿಂದ ಆಧುನಿಕತೆಗೆ ಮುಖ ಮಾಡಿದ್ದಾರೆ. ಈ ಬದಲಾವಣೆಯಿಂದಾಗಿ, ವೈವಿಧ್ಯ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಅತಿ ಸಂಸ್ಕರಿಸಿದ ಆಹಾರ, ಕುರುಕಲು ತಿಂಡಿ, ಪಿಷ್ಟ-ಕಾರ್ಬೋಹೈಡ್ರೇಟ್ ಅಂಶ ಹೆಚ್ಚು ಇರುವ ಆಹಾರಕ್ಕೆ ಆದ್ಯತೆ ಸಿಕ್ಕಿದೆ.
ಗ್ರಾಮೀಣ ಪ್ರದೇಶದಲ್ಲಿ ಮಧುಮೇಹದ ಕಾಟ ಕಡಿಮೆ ಇದ್ದು, ಅದು ಹೆಚ್ಚದಂತೆ ನೋಡಿಕೊಳ್ಳಬೇಕು. ಜೀವನಶೈಲಿಯನ್ನು ಬದಲಾವಣೆಯಿಂದ 136 ದಶಲಕ್ಷ ಮಧುಮೇಹ ಪೂರ್ವ ಸ್ಥಿತಿಯಲ್ಲಿರುವವರು ಮಧುಮೇಹಿ ಗಳಾಗುವುದನ್ನು ತಡೆಯಲು ಸಾಧ್ಯವಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಹೃದ್ರೋಗ, ಮೂತ್ರ ಜನಕಾಂಗದ ಸಮಸ್ಯೆ, ನ್ಯೂರೋಪಥಿ, ಅಂಧತ್ವ ಇಲ್ಲವೇ ಅಂಗಾಂಗ ನ್ಯೂನತೆಯ ಸಾಧ್ಯತೆ ಯಿದೆ. ನಿಯಮಿತ ರೋಗ ಪತ್ತೆ ಪರೀಕ್ಷೆಯಿಂದ ಹೊಸ ರೋಗಿಗಳನ್ನು ಗುರುತಿಸಿ, ಅವರನ್ನು ಚಿಕಿತ್ಸೆಗೆ ಒಳಪಡಿಸಬಹುದು. ಸೂಕ್ತ ಕಾರ್ಯನೀತಿಗಳಿಂದ ಎಲ್ಲರಿಗೂ ಆರೋಗ್ಯಕರ ಆಹಾರ ಕೈಗೆಟಕುವಂತೆ ಮಾಡುವುದು, ದೈಹಿಕ ಚಟುವಟಿಕೆಗೆ ಉತ್ತೇಜನ ಮತ್ತು ಅನಾರೋಗ್ಯಕರ ಆಹಾರಕ್ಕೆ ನಿರ್ಬಂಧ ಹೇರುವ ಮೂಲಕ ತೀವ್ರ ತೊಡಕುಗಳನ್ನು ತಡೆಯಬಹುದು. ಲೇಸ್, ಕುರ್ಕುರೆ ಇತ್ಯಾದಿ ಕುರುಕಲು ತಿನಿಸುಗಳು ವಿಷದಂತೆ ವ್ಯಾಪಿಸಿಬಿಟ್ಟಿದ್ದು, ಇದು ಲಾಭದಾಯಕ ಉದ್ಯಮ. ಇದರ ನಿಯಂತ್ರಣ ಕಷ್ಟಸಾಧ್ಯ.
ಪ್ರಶ್ನೆ ಏನೆಂದರೆ, ಸರ್ಕಾರಕ್ಕೆ ಮಧುಮೇಹದಿಂದ ಉದ್ಭವಿಸುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಇದೆಯೇ? ಮೂಲಸೌಲಭ್ಯ, ಆರ್ಥಿಕ-ಮಾನವ ಸಂಪನ್ಮೂಲ, ಪರಿಣತ ವೈದ್ಯರು-ಶುಶ್ರೂಷಕರು, ರೋಗ ಪತ್ತೆ ವ್ಯವಸ್ಥೆ ಮತ್ತು ತಂತ್ರಜ್ಞರು ಲಭ್ಯವಿದ್ದಾರೆಯೇ? ಇತ್ತೀಚಿನ ಗ್ರಾಮೀಣ ಆರೋಗ್ಯ ಅಂಕಿಅಂಶ ವರದಿ ಪ್ರಕಾರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.83.3 ರಷ್ಟು ಶಸ್ತ್ರಚಿಕಿತ್ಸಕರು, ಶೇ.74.2ರಷ್ಟು ಪ್ರಸೂತಿ-ಸ್ತ್ರೀರೋಗ ತಜ್ಞರು, ಶೇ. 81.9 ರಷ್ಟು ಫಿಸಿಷಿಯನ್ಗಳು ಮತ್ತು ಶೇ.80.5ರಷ್ಟು ಮಕ್ಕಳ ವೈದ್ಯರ ಕೊರತೆ ಇದೆ. ದೇಶದಲ್ಲಿ ಪ್ರತಿ 834 ಜನಸಂಖ್ಯೆಗೆ ಒಬ್ಬರು ವೈದ್ಯ ಇದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯಲ್ಲಿ ಶೇ.1.9 ರಷ್ಟು ಮಾತ್ರ ವೆಚ್ಚ ಮಾಡಲಾಗುತ್ತಿದೆ. ಉಚಿತ-ಗುಣಮಟ್ಟದ ಆರೋಗ್ಯ ಸೇವೆಯನ್ನು ಪೂರೈಸುವಲ್ಲಿ ವಿಫಲವಾಗಿರುವ ಸರ್ಕಾರಗಳು, ಜನರನ್ನು ಖಾಸಗಿ ಆಸ್ಪತ್ರೆಗಳ ತೆಕ್ಕೆಗೆ ತಳ್ಳಿವೆ. ಇದರಿಂದ ವೈದ್ಯ ಸೇವೆಗಳು ದುಬಾರಿಯಾಗಿವೆ. ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿಯ ಕೊರತೆಯಿದೆ. ಜೀವನಶೈಲಿ ಬದಲಾವಣೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಆಂದೋಲನ ಅಗತ್ಯವಿದೆ. ರೋಗ ಪತ್ತೆಗೆ ಶಿಬಿರಗಳನ್ನು ಹಮ್ಮಿಕೊಳ್ಳುವುದಲ್ಲದೆ, ರೋಗ ನಿಯಂತ್ರಣ ಮತ್ತು ಔಷಧೋಪಚಾರಕ್ಕೆ ಅಗತ್ಯ ವ್ಯವಸ್ಥೆಯನ್ನು ರೂಪಿಸಬೇಕಿದೆ.
ಇಂಥ ಸನ್ನಿವೇಶದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಸಮುಚ್ಚಯ(ಬಿಇಎಸ್ಟಿ)ದ ಪ್ರಯತ್ನ ಶ್ಲಾಘನೀಯ. ಬಿಇಎಸ್ಟಿ ತನ್ನ ಡಿಜಿಟಲ್ ಪೋಡಿಯಾಟ್ರಿ ಕ್ಲಿನಿಕ್(ಡಿ-ಪಿಒಸಿ)ಯನ್ನು ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಡಿಜಿಟಲ್ ಪೋಡಿಯಾಟ್ರಿಯಿಂದ ಮಧುಮೇಹಿಗಳ ಪಾದದ ಪರೀಕ್ಷೆ ಹಾಗೂ ಭವಿಷ್ಯದಲ್ಲಿ ಕಾಲಿನ ಸಮಸ್ಯೆ ಬರುವುದೇ ಎಂಬುದನ್ನು ಪತ್ತೆಹಚ್ಚಬಹುದು. ಶೇ.25ರಷ್ಟು ಮಧುಮೇಹಿಗಳಲ್ಲಿ ಕಾಲಿನಲ್ಲಿ ಹುಣ್ಣಿನ ಸಾಧ್ಯತೆಯಿದೆ. ಇವರಲ್ಲಿ ಶೇ.50 ಮಂದಿಯಲ್ಲಿ ಸೋಂಕು ಹಾಗೂ ಉಳಿದವರ ಕಾಲು ಕತ್ತರಿಸಬೇಕಾಗುತ್ತದೆ. ಆರಂಭದಲ್ಲೇ ಪತ್ತೆ ಹಚ್ಚಿದರೆ, ಕಾಲು ಉಳಿಸಬಹುದು. ಡಿಪಿಒಸಿ ಕಳೆದ 2 ವರ್ಷದಲ್ಲಿ 10,000ಕ್ಕೂ ಅಧಿಕ ಮಧುಮೇಹಿಗಳನ್ನು ತಪಾಸಣೆ ಮಾಡಿದೆ. ಪಿಎಚ್ಸಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ನೋಡಲ್ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಆರೋಗ್ಯ ಇಲಾಖೆ ಹಾಗೂ ಖಾಸಗಿ ಫೌಂಡೇಷನ್ಗಳೊಟ್ಟಿಗೆ ಮಾತುಕತೆ ನಡೆಸುತ್ತಿದೆ.
ಆದರೆ, ಸಮಸ್ಯೆಯ ಅಗಾಧತೆ ಪರಿಗಣಿಸಿದರೆ, ಇದು ಏನೇನೂ ಸಾಲದು.
-ಮಾಧವ ಐತಾಳ್