ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ ವೈಕಂ ಪುರಸ್ಕಾರವು ದೇವನೂರು ಮಹದೇವ ಅವರಿಗೆ ಸಂದಿದೆ.
ವೈಕಂ ಚಳವಳಿ ಎಂದರೆ?: ಟ್ರಾವಂಕೂರ್ ರಾಜ್ಯದ ವೈಕಂನ ಮಹಾದೇವ ದೇವಳದ ಅಕ್ಕಪಕ್ಕದ ರಸ್ತೆಯಲ್ಲಿ ಹಿಂದುಳಿದ ಸಮುದಾಯಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಟ್ರಾವಂಕೂರಿನ ರಾಜ ಕರ್ಮಠ. ಕಾಂಗ್ರೆಸ್ ಮುಖಂಡ ಟಿ.ಕೆ.ಮಾಧವ ನ್, ಡಿಸೆಂಬರ್ 1917ರಲ್ಲಿ ದೇಶಾಭಿಮಾನಿ ಪತ್ರಿಕೆಯ ಸಂಪಾದಕೀಯದಲ್ಲಿ ಕೆಳ ಜಾತಿಗಳಿಗೆ ದೇವಾಲಯ ಪ್ರವೇಶ ಪ್ರಶ್ನೆಯನ್ನು ಎತ್ತಿದರು. ವೈಕಂ ದೇವಾಲಯದ ಸುತ್ತಮುತ್ತಲಿನ ರಸ್ತೆ ಬಳಕೆಗೆ ಮುಖಂಡರಾದ ಕೆ.ಕೇಳಪ್ಪ ನ್, ಕೆ.ಪಿ. ಕೇಶವ ಮೆನನ್, ಜಾರ್ಜ್‌ಜೋಸೆಫ್ ಮುಂತಾದವರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. 1917-1920ರ ಅವಧಿಯಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ(ಎಸ್‌ಎನ್‌ಡಿಪಿ ಯೋಗಂ) ಮತ್ತು ಟ್ರಾವಂಕೂರ್ ಶಾಸನಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಿತು. 1920ರಲ್ಲಿ ಸಭೆ ಸೇರಿದ 5000ಕ್ಕೂ ಅಧಿಕ ಈಳವರು, ದೇವಾಲಯ ಪ್ರವೇಶ ಹಕ್ಕಿಗೆ ಒತ್ತಾಯಿಸಿದರು. ನವೆಂಬರ್ 1920ರಲ್ಲಿ ಟಿ.ಕೆ.ಮಾಧವನ್, ವೈಕಂ ದೇವಳದ ಸುತ್ತಲಿನ ರಸ್ತೆಯಲ್ಲಿ ಅಳವಡಿಸಿದ್ದ ಸೂಚನಾಪತ್ರವನ್ನು ದಾಟಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವನ್ನು ಉಲ್ಲಂಘಿಸಿರುವುದಾಗಿ ಬಹಿರಂಗವಾಗಿ ಘೋಷಿಸಿದರು. ಆನಂತರ ಅವರು ನಡೆಸಿದ ಸರಣಿ ಸಭೆಗಳಿಗೆ ಹಿಂದುಗಳು ತೀವ್ರವಾಗಿ ಪ್ರತಿಕ್ರಿಯಿಸಿದರು. ಸೆಪ್ಟೆಂಬರ್1921ರಲ್ಲಿ ಗಾಂಧಿ ಅವರನ್ನು ಭೇಟಿಯಾದ ಮಾಧವನ್, ಕೇರಳದಲ್ಲಿ ಈಳವರ ಸ್ಥಿತಿಗತಿಯನ್ನು ವಿವರಿಸಿದರು. ʻYou must enter temples and court imprisonment if law interferesʼ ಎಂದ ಗಾಂಧಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು. 1923ರಲ್ಲಿ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಟಿ.ಕೆ. ಮಾಧವನ್ ಮಂಡಿಸಿದ ʼಅಸ್ಪೃಶ್ಯತೆ ನಿವಾರಣೆʼ ನಿಲುವಳಿಯನ್ನು ಸಭೆ ಅಂಗೀಕರಿಸಿತು. ಜನವರಿ 1924ರಲ್ಲಿ ಕೆ.ಕೇಳಪ್ಪನ್ ಕಾಂಗ್ರೆಸ್ ಸಮಿತಿಯೊಳಗೆ ಅಸ್ಪೃಶ್ಯತೆ ವಿರೋಧಿ ಸಮಿತಿಯನ್ನು ರಚಿಸಿದರು. ಮಾರ್ಚ್ 30, 1924ರಲ್ಲಿ ಒಬ್ಬ ಮೆನನ್, ಒಬ್ಬರು ಅಸ್ಪೃಶ್ಯ ಹಾಗೂ ಈಳವ ಸಮುದಾಯದ ಒಬ್ಬರ ನೇತೃತ್ವದಲ್ಲಿ ಸಾವಿರಾರು ಮಂದಿ ವೈಕಂ ದೇವಳದ ಪಕ್ಕದ ರಸ್ತೆಯಲ್ಲಿ ಸಂಚರಿಸಲು ಪ್ರಯತ್ನಿಸಿ, ಟ್ರಾವಂಕೂರ್ ಪೊಲೀಸರಿಂದ ಬಂಧಿಸಲ್ಪಟ್ಟರು. ಏಪ್ರಿಲ್ 10 ರಂದು ಇನ್ನಷ್ಟು ಮಂದಿ ಸೆರೆಯಾದರು.
ಪೆರಿಯಾರ್ ಪ್ರವೇಶ: ಮುಖಂಡರ ಬಂಧನದ ಬಳಿಕ ಚಳವಳಿ ಕುಂಟಲಾರಂಭಿಸಿತು. ಕಾಂಗ್ರೆಸ್ ಪೆರಿಯಾರ್ ಅವರ ನೆರವು ಕೇಳಿತು. ರಾಜಾಜಿ(ಚಕ್ರವರ್ತಿ ರಾಜಗೋಪಾಲಾಚಾರಿ) ಹಾಗೂ ಪೆರಿಯಾರ್ ವೈಕಂಗೆ ಆಗಮಿಸಿ, ಚಳವಳಿಯಲ್ಲಿ ಪಾಲ್ಗೊಂಡರು. ಜಾತಿ ವಿರುದ್ಧ ಖಚಿತ ನಿಲುವು ಹಾಗೂ ಜನರನ್ನು ಸೇರಿಸಬಲ್ಲ ಛಾತಿಯಿದ್ದವರು ಎಂದು ಪೆರಿಯಾರ್ ಖ್ಯಾತರಾಗಿದ್ದರು. ಮೇ 21, 1924ರಲ್ಲಿ ಅವರನ್ನು ಬಂಧಿಸಲಾಯಿತು. ಯಾವುದೇ ಶಿಕ್ಷೆಗೆ ಸಿದ್ಧ ಎಂದು ಮ್ಯಾಜಿಸ್ಟ್ರೇಟ್‌ಗೆ ಸವಾಲು ಎಸೆದ ಅವರಿಗೆ ಮೇ 22ರಂದು ಒಂದು ತಿಂಗಳು ಸೆರೆವಾಸ ವಿಧಿಸಲಾಯಿತು. ಅರುಕುಟ್ಟಿ ಸೆರೆಮನೆಯಲ್ಲಿ ಒಂದು ತಿಂಗಳು ಕಳೆದ ಅವರು ಸ್ವಂತ ಊರು ಈರೋಡಿಗೆ ಹೋಗುವ ಬದಲು, ವೈಕಂಗೆ ಮರಳಿದರು. ಜುಲೈ 18ರಂದು ಮತ್ತೊಮ್ಮೆ ಬಂಧಿಸಲ್ಪಟ್ಟು, ತಿರುವನಂತಪುರ ಕೇಂದ್ರ ಸೆರೆಮನೆಯಲ್ಲಿ 4 ತಿಂಗಳು ಕಳೆದರು. ಆಗಸ್ಟ್ 1924ರಲ್ಲಿ ಟ್ರಾವಂಕೂರಿನ ದೊರೆ ಮೂಲಂ ತಿರುನಾಳ್ ಮೃತಪಟ್ಟರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಶಾಸನಸಭೆಯಲ್ಲಿ ಮಂಡನೆಯಾದ ʻಈಳವರು ದೇವಾಲಯದ ಸನಿಹದ ರಸ್ತೆಯಲ್ಲಿ ಸಂಚರಿಸಬಹುದುʼ ಎಂಬ ನಿಲುವಳಿ ಒಂದು ಮತದಿಂದ ಸೋಲು ಕಂಡಿತು. ʼಕಾರ್ಯಕರ್ತರು ಮಳೆಯಲ್ಲಿ ನೆನೆಯುತ್ತ ತಡೆಗಟ್ಟುಗಳ ಹಿಂದೆ ನಿಲ್ಲುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಅವರು ತಡೆಗಟ್ಟುಗಳನ್ನು ಏರಬೇಕು. ನಿಷೇಧಿಸಿದ ರಸ್ತೆಯಲ್ಲಿ ನಡೆಯುವುದು ಮಾತ್ರವಲ್ಲ; ದೇವಾಲಯಗಳನ್ನು ಪ್ರವೇಶಿಸಬೇಕು… ಯಾರೂ ಅಸ್ಪೃಶ್ಯತೆಯ ಆಚರಣೆ ಮಾಡದಂಥ ಪರಿಸ್ಥಿತಿಯನ್ನು ಸೃಷ್ಟಿಸಬೇಕುʼ ಎಂದು ಪೆರಿಯಾರ್ ಜೂನ್ 1924ರಲ್ಲಿ ಹೇಳಿದರು.
ಗಾಂಧಿ ಮಾರ್ಚ್ 1925ರಲ್ಲಿ ವೈಕಂಗೆ ಭೇಟಿ ನೀಡಿದರು. ಪ್ರತಿಭಟನೆಕಾರರು, ನಂಬೂದರಿ ಬ್ರಾಹ್ಮಣರು ಹಾಗೂ ಟ್ರಾವಂಕೂರಿನ ರಾಣಿ ಜೊತೆ ಮಾತುಕತೆ ನಡೆಸಿದರು. ಟ್ರಾವಂಕೂರ್ ಸರ್ಕಾರ ನಿರ್ಮಿಸಿದ ಹೊಸ ರಸ್ತೆಗಳು ಕೂಡ ದೇವಳದಿಂದ ದೂರ ಇದ್ದವು. ಗಾಂಧಿ ಮಧ್ಯಪ್ರವೇಶದಿಂದ ರೀಜೆಂಟ್ ಆಗಿದ್ದ ಸೇತುಲಕ್ಷ್ಮಿಬಾಯಿ ಅವರು ಬಂಧಿತರನ್ನು ಬಿಡುಗಡೆಗೊಳಿಸಿದರು; ದೇವಳದ ಪಶ್ಚಿಮ, ದಕ್ಷಿಣ ಹಾಗೂ ಉತ್ತರ ರಸ್ತೆಗಳನ್ನು ಮುಕ್ತಗೊಳಿಸಿದರು. ಆದರೆ, ಪೂರ್ವ ದಿಕ್ಕಿನ ರಸ್ತೆ ಮೇಲಿನ ನಿರ್ಬಂಧ ಮುಂದುವರಿಯಿತು. ಇದನ್ನು ಪೆರಿಯಾರ್ ಖಂಡಿಸಿದರು. ಟ್ರಾವಂಕೂರಿನ ರಾಜ ಚಿತ್ರ ತಿರುನಾಳ್ ಬಲರಾಮ ವರ್ಮಾ ನವೆಂಬರ್ 14, 1936ರಂದು ಟ್ರಾವಂಕೂರ್ ದೇವಾಲಯ ಪ್ರವೇಶ ಘೋಷಣೆ ಪ್ರಕಟಿಸಿದ್ದರಿಂದ, ಚಳವಳಿ ಭಾಗಶಃ ಯಶಸ್ವಿಯಾಯಿತು. ʻಹೌದು. ನಾವು ದೇವಾಲಯ ಪ್ರವೇಶಕ್ಕಾಗಿ ಹೋರಾಡಿದೆವು. ದಲಿತರು-ಹಿಂದುಳಿದ ವರ್ಗಗಳಿಗೆ ದೇವಾಲಯ ಪ್ರವೇಶಾವಕಾಶದಿಂದ ಅರ್ಧ ವಿಜಯ ಸಿಕ್ಕಿದೆಯಷ್ಟೇ. ಆರ್ಥಿಕ ಸ್ವಾತಂತ್ರ್ಯ ದಿಂದ ಗೆಲುವು ಸಂಪೂರ್ಣವಾಗಲಿದೆʼ ಎಂದು ಪೆರಿಯಾರ್ ಹೇಳಿದರು. 1938ರಲ್ಲಿ ಮಲಬಾರ್ ದೇವಳ ಪ್ರವೇಶ ಮಸೂದೆ ಜಾರಿಗೊಂಡಿತು. ಮಾರ್ಚ್ 30, 1924ರಿಂದ ಆರಂಭಗೊಂಡ ಚಳವಳಿಯು ನವೆಂಬರ್ 23, 1925ರವರೆಗೆ ನಡೆಯಿತು.
ಮದುರೈ ಮೀನಾಕ್ಷಿ ಸುಂದರೇಶ್ವರ ದೇವಾಲಯ ಮತ್ತು ತಂಜಾವೂರಿನ ಬೃಹದೇಶ್ವರ ದೇವಾಲಯಕ್ಕೆ 1939ರಲ್ಲಿ ಹಿಂದುಳಿದ ವರ್ಗಗಳಿಗೆ ಪ್ರವೇಶಾವಕಾಶ ನೀಡಲಾಯಿತು. ಮದ್ರಾಸ್ ದೇವಳ ಪ್ರವೇಶ ಅಧಿಕಾರ ಕಾಯಿದೆ 1947, ಮದ್ರಾಸ್ ಪ್ರೆಸಿಡೆನ್ಸಿಯ ಎಲ್ಲ ದೇವಾಲಯಗಳಿಗೆ ಪ್ರವೇಶ-ಪೂಜೆಯ ಅವಕಾಶ ನೀಡಿತು. ಮುಂದಿನ ದಶಕದಲ್ಲಿ ದೇಶದ ಹಲವೆಡೆ ಆಂದೋಲನಗಳು ತಲೆಯೆತ್ತಿದವು. ದಲಿತರಿಗೆ ಪ್ರವೇಶ ನಿರಾಕರಿಸಿದ್ದ ಅಂಬಾದೇವಿ ದೇವಳ ಹಾಗೂ ಕಾಲಾದೇವಿ ಮಂದಿರ ಪ್ರವೇಶ ಚಳವಳಿಯನ್ನು ಅಂಬೇಡ್ಕರ್ ಅವರು ಮುನ್ನಡೆಸಿದರು.
ಅಂಬೇಡ್ಕರ್ ಕೊಡುಗೆ: ಟ್ರಾವಂಕೂರು ರಾಜ್ಯದಲ್ಲಿ ಹಿಂದುಳಿದ ಜಾತಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ದಾರಿ ಮಾಡಿಕೊಟ್ಟ ವೈಕಂ ಸತ್ಯಾಗ್ರಹವು ಭವಿಷ್ಯದಲ್ಲಿ ಇಂಥ ಹಲವು ಸಾಮೂಹಿಕ ಆಂದೋಲನಗಳಿಗೆ ದಾರಿ ಮಾಡಿ ಕೊಟ್ಟು, ರಾಜಕೀಯ ಮುಖಂಡರಿಗೆ ಧಾರ್ಮಿಕ ಸುಧಾರಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು. ತಮಿಳುನಾಡಿನಲ್ಲಿ ಪೆರಿಯಾರ್ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ಹಿಂದು ಧರ್ಮದ ಸುಧಾರಣೆಗೆ ದಾರಿ ಮಾಡಿಕೊಟ್ಟವು. ಡಾ. ಬಿ.ಆರ್. ಅಂಬೇಡ್ಕರ್ ಅವರು ಡಿಸೆಂಬರ್ 7, 1948ರಂದು ನಡೆದ ಚರ್ಚೆ ವೇಳೆ ಉಲ್ಲೇಖಿಸಿದ ʻಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅನುಗುಣವಾಗಿʼ ಎಂಬ ವಾಕ್ಯವು ಧರ್ಮಕ್ಕೆ ಸಂಬಂಧಿಸಿದ ವಿಷಯದಲ್ಲಿ ಅಗತ್ಯವಿರುವಾಗ ಮಧ್ಯಪ್ರವೇಶಕ್ಕೆ ರಾಜ್ಯಕ್ಕೆ ಅವಕಾಶ ಮಾಡಿಕೊಟ್ಟಿತು. ಜೊತೆಗೆ, ಸಮಾನತೆ ಮತ್ತು ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆ ಉದ್ಭವಿಸಿದಾಗ, ನ್ಯಾಯಾಲಯ ಮಧ್ಯಸ್ಥಿಕೆ ವಹಿಸಲು ಅವಕಾಶ ಮಾಡಿಕೊಟ್ಟಿತು.
ದೇವಾಲಯಗಳು ನಿರ್ದಿಷ್ಟವಾಗಿ ಹೇಳಬೇಕೆಂದರೆ, ಧರ್ಮಕ್ಕೆ ಸಂಬಂಧಿಸಿದ ವಿಷಯವನ್ನು ಸರ್ಕಾರ ನಿರ್ವಹಿಸಬಹುದೇ ಎಂಬುದು ಪ್ರಶ್ನೆ. ಕೆಲವರ ಪ್ರಕಾರ, ಇದರಿಂದ ಸರ್ಕಾರ ತನ್ನ ಜಾತ್ಯತೀತ ಗುಣಲಕ್ಷಣವನ್ನು ಕಳೆದು ಕೊಳ್ಳುತ್ತದೆ. ಆದರೆ, ಇದೊಂದು ಕುತರ್ಕ. ರಾಜ್ಯದ ಮಧ್ಯಸ್ಥಿಕೆಯು ಸಮಾನತೆಯನ್ನು ಸಾಧಿಸಲು ಮತ್ತು ಸಾರ್ವಜನಿಕ ಸ್ಥಳಗಳಾದ ದೇವಾಲಯಗಳಿಗೆ ಪ್ರವೇಶಾವಕಾಶವನ್ನು ಖಾತ್ರಿಗೊಳಿಸಲು ಅಗತ್ಯ. 1927ರ ಮದ್ರಾಸ್ ಹಿಂದು ರಿಲಿಜಿಯಸ್ ಎಂಡೋಮೆಂಟ್ ಕಾಯಿದೆಯಿಂದ ಹಿಡಿದು ಇತ್ತೀಚಿನ ತಮಿಳುನಾಡು ರಿಲಿಜಿಯಸ್ ಆಂಡ್ ಚಾರಿಟಬಲ್ ಎಂಡೋಮೆಂಟ್ಸ್ ಆಕ್ಟ್ 1959ರ ದೀರ್ಘ ಚರಿತ್ರೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಗೆ ಅನುಗುಣವಾಗಿ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಶಾಸನಸಭೆ ಪ್ರಯತ್ನಿಸಿದೆ.
ಆಯುಕ್ತರು, ಹಿಂದು ರಿಲಿಜಿಯಸ್ ಎಂಡೋಮೆಂಟ್ಸ್, ಮದ್ರಾಸ್ ವಿ/ಎಸ್ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯಾರ್, ಶ್ರೀ ಶಿರೂರು ಮಠ 1954(ಶಿರೂರು ಮಠ ಪ್ರಕರಣ)ದಲ್ಲಿ ರಾಜ್ಯಗಳು ದೇವಾಲಯಗಳ ಜಾತ್ಯತೀತ ವ್ಯವ ಹಾರಗಳನ್ನು ನಿರ್ವಹಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತು. ತಮಿಳುನಾಡಿನಲ್ಲಿ ಆಡಳಿತ ನಡೆಸಿದ ಸರ್ಕಾರಗಳು 1970ರ ಬಳಿಕ ಹಿಂದುಳಿದ ವರ್ಗದವರನ್ನು ಅರ್ಚಕರನ್ನಾಗಿ ನೇಮಿಸಲು ನೆರವಾಗುವ ಕಾನೂನು ಗಳನ್ನು ಜಾರಿಗೊಳಿಸಿದವು. ಇದು ಧಾರ್ಮಿಕ ವಿಷಯಗಳಲ್ಲಿ ಅನಗತ್ಯ ಮೂಗು ತೂರಿಸುವಿಕೆ ಎಂದು ಕೆಲವರು ಆಕ್ಷೇಪಿಸಿದರು. ಇಂಥ ಪ್ರಕರಣಗಳಲ್ಲಿ ದೇವಾಲಯಗಳಲ್ಲಿ ಜಾತ್ಯತೀತ ವಿಷಯಗಳನ್ನು ನಿರ್ವಹಿಸುವ ರಾಜ್ಯದ ಹಕ್ಕನ್ನು ನ್ಯಾಯಾಲಯಗಳು ಎತ್ತಿ ಹಿಡಿದಿವೆ. ಕೆಲವು ವರ್ಷಗಳಿಂದ ಕೇರಳ-ತಮಿಳುನಾಡು ಸರ್ಕಾರಗಳು ತರಬೇತಿ ಪಡೆದ ಬ್ರಾಹ್ಮಣೇತರ ಜಾತಿಗಳ ಸಾವಿರಾರು ಅರ್ಚಕರು, ಒಧುವಾರ್‌ಗಳು ಹಾಗೂ ಭಟ್ಟಾಚಾರ್ಯರನ್ನು ನೇಮಿಸಿವೆ. ಇದಕ್ಕೆ ಪ್ರತಿರೋಧವೂ ವ್ಯಕ್ತವಾಗಿದೆ. ಈ ಸುಧಾರಣೆಗಳು ಧಾರ್ಮಿಕ ನಂಬಿಕೆಗಳು ಹಾಗೂ ಸಾಮಾಜಿಕ ಶ್ರೇಣೀಕರಣಕ್ಕೆ ಸವಾಲೆಸೆದಿವೆ.
ಕೇರಳ-ತಮಿಳುನಾಡು ಸರ್ಕಾರದಿಂದ ಗೌರವ: ವೈಕಂ ಚಳವಳಿಯು ಸ್ಥಿತ್ಯಂತರದ ಮೈಲುಗಲ್ಲಾಯಿತು. ಚಳವಳಿಯ ನೂರನೇ ವರ್ಷದ ಆಚರಣೆಯು ಪೆರಿಯಾರ್‌ಗೆ ಸಲ್ಲಿಸುವ ಗೌರವ ಮಾತ್ರವಲ್ಲ; ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಸಲ್ಲಿಸುವ ಗೌರವವೂ ಹೌದು. ಈ ಚಳವಳಿಯ ಹೆಜ್ಜೆ ಗುರುತುಗಳು ದಕ್ಷಿಣ ಭಾರತದ ರಾಜಕೀಯದ ಮೇಲೆ ಶಾಶ್ವತ ಪ್ರಭಾವ ಬೀರಿವೆ. ಪೆರಿಯಾರ್ ಜನ್ಮದಿನವಾದ ಸೆಪ್ಟೆಂಬರ್ 17ನ್ನು ತಮಿಳುನಾಡು ಸರ್ಕಾರ ಸಾಮಾಜಿಕ ನ್ಯಾಯದ ದಿನ ಎಂದು ಆಚರಿಸು ತ್ತದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವರ್ಷವಿಡೀ ಪೆರಿಯಾರ್ ಶತಮಾನೋತ್ಸವವನ್ನು ಆಚರಿಸುವುದಾಗಿ ಮಾರ್ಚ್ 2023ರಲ್ಲಿ ವಿಧಾನಸಭೆಯಲ್ಲಿ ಘೋಷಿಸಿದ್ದರು. ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಒಟ್ಟಾಗಿ ಪೆರಿಯಾರ್ ಅವರನ್ನು ಗೌರವಿಸಲು ಮುಂದಾದವು. ವೈಕಂನಲ್ಲಿ ನಿರ್ಮಾಣಗೊಂಡ ಪೆರಿಯಾರ್ ಸ್ಮಾರಕ ಹಾಗೂ ಪೆರಿಯಾರ್ ಗ್ರಂಥಾಲಯವನ್ನು ಸಿಎಂ ಸ್ಟಾಲಿನ್ ಇತ್ತೀಚೆಗೆ ಉದ್ಘಾಟಿಸಿದರು.
ವೈಕಂ ಸತ್ಯಾಗ್ರಹಕ್ಕೆ 100, ಸಂವಿಧಾನಕ್ಕೆ 75 ವರ್ಷ ಆಗಿರುವ ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕೊಡಮಾಡುವ ಮೊದಲ ವೈಕಂ ಪ್ರಶಸ್ತಿ ದೇವನೂರು ಮಹಾದೇವ ಅವರಿಗೆ ಸಂದಿದೆ. ಒಡಲಾಳ(1978), ಕುಸುಮಬಾಲೆ (1988), ಆರ್‌ಎಸ್‌ಎಸ್-ಆಳ ಮತ್ತು ಅಗಲ(2022ರಲ್ಲಿ ಪ್ರಕಟಗೊಂಡ 72 ಪುಟದ ಹೊತ್ತಗೆ; ಇಂಗ್ಲಿಷ್ ಅನುವಾದ RSS: The long and the short of it. ಅನುವಾದಕ-ಎಸ್.ಆರ್. ರಾಮಕೃಷ್ಣ) ಕೃತಿಗಳಲ್ಲದೆ, ಪ್ರಭುತ್ವದ ದಮನ ಪ್ರವೃತ್ತಿ ವಿರುದ್ಧ ನಿರಂತರವಾಗಿ ಧ್ವನಿಯೆತ್ತುತ್ತಿರುವ ದೇಮ ಅವರಿಗೆ ಪ್ರಶಸ್ತಿ ನೀಡುವ ಮೂಲಕ ತಮಿಳುನಾಡು ಸರ್ಕಾರ ತನ್ನನ್ನೇ ಗೌರವಿಸಿಕೊಂಡಿದೆ. ಇದು ಕನ್ನಡಿಗರು ಸಂಭ್ರಮಿಸಬೇಕಾದ ಸಂಗತಿ.