ರಾಜ್ಯಪಾಲರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ಮಸೂದೆ 2024 ಅನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದು, ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ವಿವಿ ಕುಲಪತಿಯಾಗಿ ಬದಲಿಸುವ ಈ ಪ್ರಯತ್ನ ವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲ ವಿವಿಗಳಿಗೂ ಮುಖ್ಯಮಂತ್ರಿಯೇ ಕುಲಪತಿ ಆಗಬೇಕೆಂಬುದು ಸರ್ಕಾರದ ಆಶಯ.
ಫೆ.19ರಂದು ಬೆಂಗಳೂರಿನಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಸಚಿವರ ಸಮಾ ವೇಶದಲ್ಲಿ ಯುಜಿಸಿ(ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) ಕರಡು ನಿಯಮ ಗಳು 2025ನ್ನು ಆರು ರಾಜ್ಯ(ಕರ್ನಾಟಕ, ಹಿಮಾಚಲ ಪ್ರದೇಶ, ಜಾರ್ಖಂಡ್, ತಮಿಳುನಾಡು, ತೆಲಂಗಾಣ ಮತ್ತು ಕೇರಳ)ಗಳು ವಿರೋಧಿಸಿವೆ. ಯುಜಿಸಿಯ ಕುಲಪತಿಗಳ ನೇಮಕ-ಆಯ್ಕೆಗೆ ನಿಯಮ 2010ಕ್ಕೆ ತಿದ್ದುಪಡಿ ತರಲು ಮುಂದಾ ಗಿದೆ. ಪ್ರಸ್ತಾವಿತ ಕರಡಿನ ಪ್ರಕಾರ, ರಾಜ್ಯಪಾಲರು ಆಯ್ಕೆ ಮಾಡಿದ ವ್ಯಕ್ತಿ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ; ಬೇರೆ ರಾಜ್ಯದವರಿಗೂ ಅವಕಾಶ ಮುಕ್ತಗೊಳಿಸಲಾಗಿದೆ.
ಯುಜಿಸಿ ಸ್ಥಾಪನೆ ಉದ್ದೇಶ: ಯುಜಿಸಿಯನ್ನು ಸ್ಥಾಪಿಸಿದ್ದು ವಿವಿಗಳಿಗೆ ಅನುದಾನ ನೀಡಲು ಮತ್ತು ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳ ಲು. ಆಯೋಗವು ಸಂಶೋಧನೆ, ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಂಸ್ಥಿಕ ಮೂಲ ಸೌಲಭ್ಯ ನಿರ್ಮಾಣಕ್ಕೆ ಅನುದಾನ ನೀಡುವ ಮೂಲಕ ದೇಶದ ಶೈಕ್ಷಣಿಕ ಭೂಪಟ ವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಇತ್ತೀಚೆಗೆ ತನ್ನ ದಾರಿ ಬದಲಿಸಿಕೊಂಡು, ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ(ಎಚ್ಇಎಫ್‌ಎ)ಹಾಗೂ ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ್(ಆರ್‌ಯುಎಸ್‌ಎ,ರುಸಾ) ಮೂಲಕ ನಿಯಂತ್ರಣ ಶಕ್ತಿಯನ್ನು ವಿಸ್ತರಿಸಿಕೊಂಡಿತು. ಇದು ಸಾಂವಿಧಾನಿಕ ಕರ್ತವ್ಯ, ಆರ್ಥಿಕ ತಾರ್ಕಿಕತೆ ಹಾಗೂ ಸಾಂಸ್ಥಿಕ ಸ್ವಾಯತ್ತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಂಸತ್ತು ಯುಜಿಸಿ ಕಾಯಿದೆ 1956ನ್ನು ʻವಿವಿಗಳಲ್ಲಿ ಗುಣಮಟ್ಟದ ನಿರ್ಧರಿಸುವಿಕೆ ಮತ್ತು ಸಹಯೋಗ ಸಾಧಿಸಲುʼ ಅಂಗೀಕರಿಸಿತು. ವಿವಿಗಳಲ್ಲಿ ಶಿಕ್ಷಣ ಸಂಬಂಧಿ ಕ್ರಮಗಳ ಉತ್ತೇಜನಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡುವುದು ಅದರ ಕೆಲಸ. ಇದಕ್ಕಾಗಿ ಕಾಯಿದೆಯ ವಿಧಿ 26, ಅಗತ್ಯ ಅಧಿಕಾರ ನೀಡುತ್ತದೆ. ಆದರೆ, ಈ ನಿಯಂತ್ರಣಗಳು ಕಾಯಿದೆಗೆ ಅನುಗುಣವಾಗಿರಬೇಕು ಎಂದು ಹೇಳುತ್ತದೆ. ವಿಸಿ ನೇಮಕ-ಆಯ್ಕೆ ಬಗ್ಗೆ ಕಾನೂನು ಏನೂ ಹೇಳುವುದಿಲ್ಲ. ವಿಸಿಗಳ ಆಯ್ಕೆ, ಅರ್ಹತೆ ಮತ್ತು ನೇಮಕಗಳು ಕಾಯಿದೆಗೆ ಅನುಗುಣವಾಗಿರಬೇಕು ಎಂದಿದೆ. ಕಾಯಿದೆಯ ಪ್ರಮುಖ ಉದ್ದೇಶ- ಶಿಕ್ಷಣದ ಸಂಯೋಜನೆ ಮತ್ತು ಉತ್ತೇಜನ. ಯಾವಾಗ ಶಾಸನಾತ್ಮಕ ಸಂಸ್ಥೆಯೊಂದು ಮೂಲ ಕಾಯಿದೆಯಲ್ಲಿ ಇಲ್ಲದ ಕ್ಷೇತ್ರವೊಂದರ ನಿಯಂತ್ರಣಕ್ಕೆ ಮುಂದಾಗುತ್ತದೋ ಆಗ ಸಮಸ್ಯೆ ಸೃಷ್ಟಿಯಾಗುತ್ತದೆ.
ಎನ್‌ಡಿಎ-2 ಮುಂದೊತ್ತಿದ ನೂತನ ಶೈಕ್ಷಣಿಕ ಕಾರ್ಯನೀತಿ 2021(ಎನ್‌ಇಪಿ) ಯನ್ನು ಕರ್ನಾಟಕ ಹಾಗೂ ಬಿಜೆಪಿ ಆಡಳಿತವಿದ್ದ ರಾಜ್ಯಗಳು ಅಳವಡಿಸಿಕೊಂಡವು. ಈ ಕಾರ್ಯನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನಕ್ಕೆ ಎರಡು ಮಾರ್ಗ ದರ್ಶಿ ಸೂತ್ರಗಳನ್ನು ಒಳಗೊಂಡಿದೆ. ಮೊದಲಿಗೆ, ಮೂಲಭೂತ ಸಾಂಸ್ಥಿಕ ಮಾಹಿತಿ ಹಾಗೂ ಸಂಸ್ಥೆಯು ಅಕಡೆಮಿಕ್‌ಬ್ಯಾಂಕ್‌ಆಫ್‌ಕ್ರೆಡಿಟ್(ಎಬಿಸಿ)ಗೆ ನೋಂದಣಿ ಯಾಗಿದೆಯೇ? ಸಮಸ್ಯೆ ಏನೆಂದರೆ, ಹಲವು ರಾಜ್ಯಗಳ ಸ್ವಾಯತ್ತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಎನ್‌ಇಪಿಯನ್ನೇ ಅನುಷ್ಠಾನಗೊಳಿಸಿಲ್ಲ. ಎರಡನೆ ಯದಾಗಿ, 49 ಸೂಚ್ಯಂಕಗಳನ್ನು ಆಧರಿಸಿ ವಿವಿ, ಸ್ವಾಯತ್ತ ಕಾಲೇಜು ಹಾಗೂ ಸಂಯೋಜಿತ ಕಾಲೇಜುಗಳ ಮೌಲ್ಯಮಾಪನ ಮಾಡುವಿಕೆ. ಈ ಎಲ್ಲ ಸೂಚ್ಯಂಕಗಳು ಸಂಯೋಜಿತ ಮತ್ತು ಸ್ವಾಯತ್ತ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆ ಗೆ, ಶೇ.75ರಷ್ಟು ಪೂರ್ಣಾವಧಿ ಶಿಕ್ಷಕರು ಇರಬೇಕು ಎಂಬ ಮಾನದಂಡ. ಇದು ವಾಸ್ತವಕ್ಕೆ ವಿರುದ್ಧವಾದುದು. ಏಕೆಂದರೆ, ರಾಜ್ಯದ ಬಹುತೇಕ ವಿವಿಗಳಲ್ಲಿ ಶೇ.50 ರಷ್ಟೂ ಪೂರ್ಣಾವಧಿ ಶಿಕ್ಷಕರು ಇಲ್ಲ. 32 ಸರ್ಕಾರಿ ವಿವಿಗಳಲ್ಲಿ ಮಂಜೂರಾದ 4,709 ಹುದ್ದೆಗಳಲ್ಲಿ 1,986 ಮಂದಿ ಮಾತ್ರ ಪೂರ್ಣಾವಧಿ ಶಿಕ್ಷಕರು. ಉಳಿದವ ರನ್ನು ತಾತ್ಕಾಲಿಕ ಬೋಧಕರಿಂದ ಭರ್ತಿ ಮಾಡಲಾಗಿದೆ. ಬೆಂಗಳೂರು ವಿವಿಯಲ್ಲಿ 234 ಹಾಗೂ ಬೆಂಗಳೂರು ನಗರ ವಿವಿಯಲ್ಲಿ 150 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇನ್ನು, ಸ್ವಾಯತ್ತ ಕಾಲೇಜುಗಳಲ್ಲಿ ಆಡಳಿತ ಮಂಡಳಿಗಳು ಶಿಕ್ಷಕರನ್ನು ನೇಮಿಸುತ್ತವೆ. ಈ ಕಾಲೇಜುಗಳಲ್ಲಿ ಕೆಲಸ ತೊರೆಯುವವರ ಪ್ರಮಾಣ ಹೆಚ್ಚು. ಪರವಾಗಿಲ್ಲ ಎನ್ನುವ ಶೈಕ್ಷಣಿಕ ವ್ಯವಸ್ಥೆ ಇರುವ ಕರ್ನಾಟಕದಲ್ಲೇ ಪರಿಸ್ಥಿತಿ ಹೀಗಿರುವಾಗ, ಬಿಹಾರ, ಉತ್ತರ ಪ್ರದೇಶದಂಥ ರಾಜ್ಯಗಳ ಪರಿಸ್ಥಿತಿ ಹೇಗಿರಬಹುದು?
ಸಮಸ್ಯಾತ್ಮಕ ಶಿಫಾರಸುಗಳು: ಈಮೊದಲು ಕುಲಪತಿಗಳ ಹುದ್ದೆಗೆ ಹೆಸರುಗಳನ್ನು ಸೂಚಿಸಲು ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸುತ್ತಿತ್ತು. ಸಮಿತಿಯ ಶಿಫಾರಸು ಆಧರಿಸಿ, ಸರ್ಕಾರ ಹೆಸರು ಅಂತಿಮಗೊಳಿಸಿ, ರಾಜ್ಯಪಾಲರಿಗೆ ಸಲ್ಲಿಸುತ್ತಿತ್ತು. ರಾಜ್ಯಪಾಲರು ನೇಮಕ ಆದೇಶ ಹೊರಡಿಸುತ್ತಿದ್ದರು. ಕನಿಷ್ಠ 10 ವರ್ಷ ಅನುಭವ ಇರುವ ಪ್ರಾಧ್ಯಾಪಕರನ್ನು ಕುಲಪತಿ ಆಗಿ ನೇಮಿಸಲಾಗುತ್ತಿತ್ತು. ಆದರೆ, ನೂತನ ಪ್ರಸ್ತಾವನೆಯಲ್ಲಿ ಉದ್ಯಮ, ಸಾರ್ವಜನಿಕ ಆಡಳಿತ ಹಾಗು ಸಾರ್ವಜನಿಕ ಕಾರ್ಯನೀತಿ ಕ್ಷೇತ್ರದಲ್ಲಿ 10 ವರ್ಷ ಅನುಭವ ಇರುವವರನ್ನು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಗ್ರಾಮೀಣ ಹಾಗೂ ಸಣ್ಣ ನಗರಗಳಲ್ಲಿ ಇಂಥವರ ಲಭ್ಯತೆ ಕಡಿಮೆ; ಮತ್ತು ಅವರು ಹೆಚ್ಚು ವೇತನ ಕೇಳ ಬಹುದು. ಇಂಥ ನೇಮಕದಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ಖಾಸಗಿ ವಿವಿ ಗಳಿಗೆ ಇಂಬು ದೊರೆಯುತ್ತದೆ.
- * ತಿದ್ದುಪಡಿ ಕರಡು ಎಲ್ಲ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಕಡ್ಡಾಯ ಎನ್ನುತ್ತದೆ. ರಾಜ್ಯಗಳು ತಮ್ಮ ಆಯ್ಕೆಯ ಪದವಿ ಕೋರ್ಸ್‌ಗಳನ್ನು ಕಲಿಸುತ್ತಿರುತ್ತವೆ; ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಕೆಲವು ಕಾಲೇಜುಗಳಲ್ಲಿ ಕಲಾ ವಿಭಾಗವನ್ನೇ ಮುಚ್ಚಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಕನಿಷ್ಠ 3,000 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳ ಬೇಕು. ಇಲ್ಲವಾದಲ್ಲಿ, ಯುಜಿಸಿ ನೆರವು ಸ್ಥಗಿತಗೊಳ್ಳುತ್ತದೆ. ಇದೊಂದು ಅವಾಸ್ತವಿಕ ಶಿಫಾರಸು. ಏಕೆಂದರೆ, ದೇಶದ 2/3ರಷ್ಟು ಕಾಲೇಜುಗಳಲ್ಲಿ 500ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಮತ್ತು ಸ್ವಾಯತ್ತ ವಿವಿಗಳು 4 ವರ್ಷಗಳ ಪದವಿ ಕೋರ್ಸ್ ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಆದರೆ, ಹೆಚ್ಚಿನ ಸಂಯೋಜಿತ ಕಾಲೇಜುಗಳು 4 ವರ್ಷಗಳ ಕೋರ್ಸ್ ಅಳವಡಿಸಿಕೊಂಡಿಲ್ಲ. ಇದರರ್ಥ- ಅವು 3 ವರ್ಷದ ಕೋರ್ಸ್‌ಗಳನ್ನು ಮುಂದುವರಿಸಬಹುದು ಎಂದೇ?
- * ದೇಶದಲ್ಲಿ ಚಾಲ್ತಿಯಲ್ಲಿರುವುದು 3+2 ವರ್ಷ ಅವಧಿಯ ಉನ್ನತ ಶಿಕ್ಷಣ ವ್ಯವಸ್ಥೆ; ಅತಿ ಕಡಿಮೆ ಸಂಖ್ಯೆಯ ಶಿಕ್ಷಣ ಸಂಸ್ಥೆ-ವಿವಿಗಳು ಸಂಶೋಧನೆಗೆ ಅವಕಾಶ ಹೊಂದಿ ವೆ. ದೇಶಾದ್ಯಂತದ 1,222 ಸ್ವಾಯತ್ತ ಕಾಲೇಜುಗಳಲ್ಲಿ ಶೇ.75ಕ್ಕೂ ಹೆಚ್ಚಿನವು 4 ವರ್ಷಗಳ ಪದವಿಗೆ ಅಗತ್ಯ ಮೂಲಸೌಲಭ್ಯ ಹೊಂದಿಲ್ಲ. 4 ವರ್ಷಗಳ ಪದವಿಯು ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೇರುತ್ತದೆ; ಅದರಲ್ಲೂ ಕಡಿಮೆ ಹಾಗೂ ಮಧ್ಯಮ ಆದಾಯದ ಕುಟುಂಬಗಳ ಮೇಲೆ. ವಿದೇಶಗಳಲ್ಲಿ 4 ವರ್ಷಗಳ ಪದವಿ ಅಗತ್ಯವಿರುವುದರಿಂದ, ಅಂಥ ವಿದ್ಯಾರ್ಥಿಗಳಿಗೆ ಮಾತ್ರ ಇದು ಉಪಯುಕ್ತ.
- * 2024ರ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ(ಐಶೆ, ಎಐಎಸ್‌ಎಚ್‌ಇ) ವರದಿ ಪ್ರಕಾರ, ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ 46,000 ಮಂದಿ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಅಂದರೆ, ಒಂದು ಸಂಸ್ಥೆಯಲ್ಲಿ ಒಬ್ಬರಿಗಿಂತ ಕಡಿಮೆ! ಯುಜಿಸಿ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಿದ ಕಾಲೇಜುಗಳಿಗೆ ಅಂಕ ನೀಡುತ್ತದೆ. ಇದ ರಿಂದ ಹೆಚ್ಚಿನ ಸಂಸ್ಥೆಗಳು ನಷ್ಟಕ್ಕೀಡಾಗುತ್ತವೆ. ವಿವಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ) ಕಡ್ಡಾಯಗೊಳಿಸುವಿಕೆಯು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತೆಯನ್ನು ಹಾಳುಗೆಡವುತ್ತದೆ; ಅವುಗಳ ಪ್ರವೇಶ ಪ್ರಕ್ರಿಯೆ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ.
- * ವಿದ್ಯಾರ್ಥಿಗಳ ಕಾರ್ಯಭಾರ ಹೆಚ್ಚುತ್ತದೆ. ವಾರಕ್ಕೆ 36 ಗಂಟೆಗಳಲ್ಲಿ ಮುಖ್ಯ ವಿಷಯಗಳು, ಸಂಯೋಜಿತ ವಿಷಯಗಳು, ಭಾಷೆ, ಮುಕ್ತ ವಿಷಯಗಳು(ಎಲೆ ಕ್ಟಿವ್‌ಗಳು), ದೈಹಿಕ ದಾರ್ಢ್ಯ, ಆಟೋಟ, ಯೋಗ, ಕಟ್ಟು ಜಾಣ್ಮೆ, ಡಿಜಿಟಲ್ ಸಾಕ್ಷರತೆ, ಮಾನಸಿಕ-ಭಾವನಾತ್ಮಕ ಆರೋಗ್ಯ, ಸಾಮಾಜಿಕ ಜವಾಬ್ದಾರಿ ನಿರ್ವ ಹಣೆ, ಜೀವನ ಕೌಶಲಗಳು……………ಇತ್ಯಾದಿ ಎಲ್ಲವನ್ನೂ ಕಲಿಯಬೇಕಾಗು ತ್ತದೆ; ಇದರಿಂದ, ವಿಶೇಷ ಪರಿಣತಿ ಇರುವ ವಿಷಯ ತಜ್ಞರು ಇಲ್ಲವಾಗುತ್ತಾರೆ.
ನ್ಯಾಯಾಲಯದ ತೀರ್ಪುಗಳಿಗೆ ವಿರುದ್ಧ: ತಿದ್ದುಪಡಿ ಪ್ರಸ್ತಾಪವು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿಲ್ಲ. ಕಲ್ಯಾಣಿ ಮಥಿವಣನ್‌ವಿ/ಎಸ್‌ಕೆ.ವಿ.ಜಯ ರಾಜ್‌ಪ್ರಕರಣದಲ್ಲಿ ಸುಪ್ರೀಂ ಕೋರ್ಟ್,ʼಯುಜಿಸಿ ಕನಿಷ್ಠ ಶೈಕ್ಷಣಿಕ ಗುಣಮಟ್ಟ ಗಳನ್ನು ನಿಗದಿಪಡಿಸಬಹುದೇ ಹೊರತು, ನೇಮಕದಲ್ಲಿ ರಾಜ್ಯದ ಕಾನೂನುಗಳನ್ನು ಬದಿಗೊತ್ತುವಂತಿಲ್ಲʼ ಎಂದು ಹೇಳಿತ್ತು. ಅದೇ ರೀತಿ, ಗುಜರಾತ್‌ಸರ್ಕಾರ ವಿ/ಎಸ್‌ಕೃಷ್ಣ ರಂಗನಾಥ ಮುಧೋಳ್ಕರ್ ಪ್ರಕರಣದಲ್ಲಿ,ʼಯುಜಿಸಿ ಕೆಲಸ ಶೈಕ್ಷಣಿಕ ಗುಣ ಮಟ್ಟ ನಿಯಂತ್ರಣ ಮತ್ತು ಸಂಯೋಜನೆ; ಆಡಳಿತಾತ್ಮಕ ಕಾರ್ಯನೀತಿಗಳನ್ನು ನಿರ್ದೇಶಿಸುವುದಲ್ಲʼ ಎಂದು ಹೇಳಿತ್ತು. ಅದೇ ರೀತಿ, ಟಿ.ಎಂ. ಪೈ ಫೌಂಡೇಷನ್‌ವಿ/ಎಸ್‌ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಕೂಡ ʼಯುಜಿಸಿ ಶೈಕ್ಷಣಿಕ ಮಾನದಂಡ ಗಳನ್ನು ನಿಗದಿಪಡಿಸಬಹುದು. ಆದರೆ, ರಾಜ್ಯದಿಂದ ಹಣಕಾಸು ನೆರವು ಪಡೆಯುವ ಸಂಸ್ಥೆಗಳ ನಿರ್ವಹಣೆ-ರಚನೆಯನ್ನು ನಿರ್ದೇಶಿಸುವಂತಿಲ್ಲʼ ಎಂದು ಹೇಳಿತ್ತು. ಆದ ರೆ, ಕರಡು ಪ್ರಸ್ತಾವ ಇದಕ್ಕೆ ತದ್ವಿರುದ್ಧವಾಗಿದ್ದು, ರಾಜ್ಯ ಶಾಸನಸಭೆಗಳ ಪಾತ್ರವನ್ನು ಕುಗ್ಗಿಸುತ್ತದೆ; ಆದ್ದರಿಂದ, ಸಾಂವಿಧಾನಿಕ ಹಾಗೂ ಪ್ರಾಯೋಗಿಕ ಸೂಕ್ತತೆಯ ಪ್ರಶ್ನೆಗಳನ್ನು ಎತ್ತುತ್ತದೆ. ಹಣಕಾಸು ನೆರವು ನೀಡುವವರು ನಿಯಂತ್ರಣ ಅಧಿಕಾರ ಹೊಂದಿರಬೇಕಾದ್ದು ಸಹಜ ನ್ಯಾಯ. ರಾಜ್ಯಪಾಲ ನಿಯಂತ್ರಿತ ವ್ಯವಸ್ಥೆಯಿಂದ ವಿವಿಗಳ ಅಧಿಕಾರ ಕೇಂದ್ರ ದ ಹಿಡಿತಕ್ಕೆ ಸಿಗುತ್ತದೆ; ಹಣಕಾಸು ಹೊರೆ ರಾಜ್ಯಗಳ ಮೇಲೆ ಬೀಳುತ್ತದೆ.
ಒಳಗೊಳ್ಳುವಿಕೆ ಮತ್ತು ಸಮತೆಗೆ ಧಕ್ಕೆ: ರಾಜ್ಯದ ವಿವಿಗಳು ಸ್ಥಳೀಯ ಶೈಕ್ಷಣಿಕ ಅಗತ್ಯ ಮತ್ತು ಸರ್ಕಾರದ ನೀತಿ ಬಗ್ಗೆ ಅರಿವು ಇರುವವರನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಜ್ಯ ನಿರ್ದಿಷ್ಟ ಸಂಶೋಧನೆ, ಅನ್ವೇಷಣೆ ಹಾಗೂ ಶೈಕ್ಷಣಿಕ ಆದ್ಯತೆಗಳನ್ನು ಖಾತ್ರಿಗೊಳಿಸಲು ಸ್ಥಳೀಯ ಆಡಳಿತ ಅಗತ್ಯ. ಪ್ರತಿಯೊಂದು ರಾಜ್ಯವೂ ವಿಶಿಷ್ಟ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪಾರಿಸರಿಕ ಸವಾಲು ಗಳನ್ನು ಎದುರಿಸುತ್ತಿದೆ. ರಾಜ್ಯದ ಸ್ವಾಯತ್ತೆಯನ್ನು ಕುಗ್ಗಿಸುವ ಆಡಳಿತ ವ್ಯವಸ್ಥೆಯಡಿ ವಿವಿಗಳು ಸ್ಥಳೀಯ ಅಗತ್ಯಗಳಿಂದ ಸಂಪರ್ಕ ಕಡಿದುಕೊಳ್ಳುತ್ತವೆ. ಇದರಿಂದ ಪ್ರಾದೇಶಕ ಅಭಿವೃದ್ಧಿ, ಕಾರ್ಯನೀತಿ ರೂಪಿಸುವಿಕೆ ಮತ್ತು ಉದ್ಯಮದೊಂದಿಗೆ ಸಹಯೋಗ ಕೂಡ ಪರಿಣಾಮಕಾರಿಯಾಗುವುದಿಲ್ಲ. ʻಎಲ್ಲರಿಗೂ ಒಂದೇ ಅಳತೆಯ ಕುಲಾವಿʼ ನೀತಿಯಡಿ ವಿವಿಗಳನ್ನು ನಿರ್ವಹಿಸಲು ಸಾಧ್ಯವಿಲ್ಲ; ನೀತಿ ರಾಜ್ಯನಿರ್ದಿಷ್ಟ ವಾಗಿರಬೇಕು; ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸಬೇಕು. ರಾಜ್ಯಗಳ ಹಿಡಿತ ತಪ್ಪಿದರೆ ಸಮತೆಯ ಚೌಕಟ್ಟುಗಳು ದುರ್ಬಲವಾಗಲಿವೆ: ಕೆಳ ವರ್ಗಗಳ ಪ್ರಾತಿನಿಧ್ಯ ಕುಗ್ಗುತ್ತದೆ. ಪ್ರಾದೇಶಿಕ ವಾಸ್ತವಗಳಿಂದ ಹೊರತಾದ ಕೇಂದ್ರೀಕೃತ ಮಾದರಿಯು ಸಾಮಾಜಿಕ ನ್ಯಾಯದ ಬದಲು ಅಧಿಕಾರಶಾಹಿಯನ್ನು ಬಲಗೊಳಿಸುತ್ತದೆ.
ಯುಜಿಸಿ 2018ರಲ್ಲೇ ಕಾಲೇಜುಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿದೆ. ಹೀಗಾ ಗಿ, ಅದರ ಪಾತ್ರ ಮತ್ತು ಪ್ರಾಮುಖ್ಯತೆ ಎರಡೂ ನಶಿಸಿದೆ. ಸಂಶೋಧನೆ ಅಭಿವೃದ್ಧಿ, ಶೈಕ್ಷಣಿಕ ಸುಧಾರಣೆ ಮತ್ತು ಜಾಗತಿಕ ಶೈಕ್ಷಣಿಕ ಸಹಯೋಗಕ್ಕೆ ಗಮನ ನೀಡುವ ಬದಲು ಹಿಡಿತ ಬಲಗೊಳಿಸಲು ಪ್ರಯತ್ನಿಸುತ್ತಿದೆ. ಇದರಿಂದ ದೇಶದ ತಕ್ಷಣದ ಆದ್ಯತೆಗಳಾದ ಸಂಶೋಧನೆಗೆ ಹಣಕಾಸು, ಅಂತಾರಾಷ್ಟ್ರೀಯ ಶ್ರೇಯಾಂಕ ಹೆಚ್ಚಳ ಮತ್ತಿತರ ಕರ್ತವ್ಯಗಳು ಹಿಂದೆ ಸರಿದಿವೆ. ಯುಜಿಸಿ ಪ್ರಸ್ತುತವಾಗಿರಬೇಕೆಂದರೆ ಅದು ಶೈಕ್ಷಣಿಕ ಔನ್ನತ್ಯಕ್ಕೆ ಆದ್ಯತೆ ನೀಡಬೇಕೇ ಹೊರತು ಆಡಳಿತಾತ್ಮಕ ನಿಯಂತ್ರಣಗಳಿ ಗಲ್ಲ.
ರಾಜ್ಯಗಳ ವಿವಿಗಳು ದುರ್ಬಲ/ಬದಿಗೊತ್ತಲ್ಪಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವಲ್ಲಿ ಚಾರಿತ್ರಿಕವಾಗಿ ಪ್ರಮುಖ ಪಾತ್ರ ವಹಿಸಿವೆ. ಅವುಗಳ ಸ್ವಾಯತ್ತೆಗೆ ಧಕ್ಕೆಯಾದಲ್ಲಿ, ಸಮಾನ ಶಿಕ್ಷಣ ಕಾರ್ಯನೀತಿಯಿಂದ ಈವರೆಗೆ ಆದ ಪ್ರಗತಿಗೆ ಹಿನ್ನಡೆ ಆಗಲಿದೆ. ಹಿಂದುಳಿದವರಿಗೆ ಅವಕಾಶಗಳು ಕುಗ್ಗಲಿವೆ; ಸಂವಿಧಾನ ಹೇಳುವ ಸಾಮಾಜಿಕ ಚಲನಶೀಲತೆ ಮತ್ತು ಸಮಾನ ಪ್ರವೇಶಾವಕಾಶದ ಬದ್ಧತೆ ತೆಳು ವಾಗುತ್ತದೆ.
ರಾಜ್ಯದ ಕೆಲಸ: ಎಲ್ಲ ವಿವಿಗಳು ಸಂಬಂಧಿಸಿದ ಶಾಸಕಾಂಗ ರೂಪಿಸಿದ ಕಾನೂನಿನಡಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ವಿಸಿ ಆಯ್ಕೆ/ನೇಮಕ ರಾಜ್ಯದ ಕೆಲಸವೇ ಹೊರತು, ಯುಜಿಸಿಯದ್ದಲ್ಲ. ವಿಸಿ ಆಯ್ಕೆಗೂ ವಿವಿಗಳ ಗುಣಮಟ್ಟ ಅಥವಾ ಶೈಕ್ಷಣಿಕ ಉತ್ತೇಜನ ಅಥವಾ ಸಂಯೋಜನೆಗೂ ಯಾವುದೇ ಸಂಬಂಧವಿಲ್ಲ. ಸುರೇಶ್‌ಪಾಟೀಲ್ ಖೇಡೆ ವಿ/ಎಸ್‌ಮಹಾರಾಷ್ಟ್ರದ ವಿವಿಧ ವಿವಿಗಳ ವಿಸಿಗಳು ಮತ್ತು ಇತರರು ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್(2011) ʼವಿಸಿ ನೇಮಕ ವಿಧಾನ ಮತ್ತು ವಿದ್ಯಾರ್ಹತೆಗಳು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾವು ಭಾವಿಸುವುದಿಲ್ಲʼ ಎಂದು ಹೇಳಿತ್ತು. ಯುಜಿಸಿ ಕಾಯಿದೆಯ ವಿಧಿ 26, ಆಯ್ಕೆ-ನೇಮಕಕ್ಕೆ ಸಂಬಂಧಿಸಿದಂತೆ ಯುಜಿಸಿಗೆ ಯಾವುದೇ ಅಧಿಕಾರ ನೀಡು ವುದಿಲ್ಲ. ವಿಧಾನಸಭೆ ರೂಪಿಸಿದ ಕಾಯಿದೆಯೊಂದನ್ನು ಯುಜಿಸಿ ನಿಯಮಗಳು ಬದಿಗೊತ್ತಬಹುದೇ? ಇಲ್ಲ. ಬಾಂಬೆ ಹೈಕೋರ್ಟ್ ಮೇಲೆ ಉಲ್ಲೇಖಿಸಿದ ಪ್ರಕರಣದಲ್ಲಿ, ʻಯುಜಿಸಿಯ 7.3.0 ನಿಯಮವು ವಿಧಾನಸಭೆಯ ನಿರುಪಾದಿಕ ಶಾಸನವೊಂದನ್ನು ಬದಿಗೊತ್ತುವಂತಿಲ್ಲʼ ಎಂದು ಹೇಳಿದೆ.
ಸೂಕ್ತ ನಿರ್ಣಯ: ಬೆಂಗಳೂರು ಸಮಾವೇಶದಲ್ಲಿ ಕುಲಪತಿ ನೇಮಕದಲ್ಲಿ ರಾಜ್ಯ ಸರ್ಕಾರದ ಪಾತ್ರ ಪ್ರಮುಖವಾಗಿರಬೇಕು; ಆಯ್ಕೆ ಸಮಿತಿ ರಚನೆ ಅಧಿಕಾರ ರಾಜ್ಯ ಗಳಲ್ಲೇ ಇರಬಕು; ಶಿಕ್ಷಣ ತಜ್ಞರನ್ನು ಮಾತ್ರ ಕುಲಪತಿಯಾಗಿ ನೇಮಿಸಬೇಕು; ಶಿಕ್ಷಕರ ಕ್ಷಮತೆ ಮೌಲ್ಯಮಾಪನ ಮತ್ತು ಶೈಕ್ಷಣಿಕ ಸೂಚಕ(ಎಪಿಐ) ವ್ಯವಸ್ಥೆ ರದ್ದುಗೊಳಿಸ ಬೇಕು; ಸಹಾಯಕ ಪ್ರಾಧ್ಯಾಪಕರ ನೇಮಕ ಉಪನಿಯಮಗಳನ್ನು ಮರುಪರಿಶೀಲಿಸ ಬೇಕು; ಯುಜಿಸಿ ಮಾರ್ಗಸೂಚಿಗೆ ಹೊರತಾದ ಕ್ರಮಗಳು ಪ್ರಜಾಸತ್ತಾತ್ಮಕ ವಾಗಿರಬೇಕು; ಖಾಸಗಿ ವಿವಿಗಳನ್ನು ಉತ್ತೇಜಿಸುವ ಪ್ರವೃತ್ತಿ ತೊರೆಯಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಇವು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ.
ಸಮಸ್ಯೆಯೇನೆಂದರೆ, ಪ್ರತಿಪಕ್ಷ ದುರ್ಬಲವಾಗಿದೆ; ದಕ್ಷಿಣದ ರಾಜ್ಯಗಳು ಮಾತ್ರ ಇಂಥ ಸರ್ವಾಧಿಕಾರಿ ಕಾಯಿದೆಗಳನ್ನು ವಿರೋಧಿಸುತ್ತಿವೆ. ವಿವಿಗಳ ಕುಲಪತಿ ಗಳು/ಪ್ರಾಧ್ಯಾಪಕರು ಈ ಬಗ್ಗೆ ಧ್ವನಿ ಎತ್ತುವುದಿಲ್ಲ; ಅವರ ಧ್ವನಿ ಉಡುಗಿ ಸಲಾಗಿದೆ ಇಲ್ಲವೇ ಸೈದ್ಧಾಂತಿಕ ಕಾರಣಗಳಿಂದ ಅಥವಾ ಸ್ವಹಿತಾಸಕ್ತಿ ರಕ್ಷಣೆಗೆ ಸುಮ್ಮನಿರುತ್ತಾರೆ. ವಿವಿಗಳು ರಾಜಕೀಕರಣಗೊಂಡಿದ್ದು, ಪಠ್ಯಕ್ರಮ ಆಡಳಿತ ಪಕ್ಷದ ರಾಜಕೀಯ ಸಿದ್ಧಾಂತಕ್ಕೆ ಪೂರಕವಾಗಿ ಬದಲಾಗಿದೆ. ಚುನಾ ವಣೆ ಆಯೋಗಕ್ಕೆ ಮಧ್ಯರಾತ್ರಿ ಆಯುಕ್ತರು ಆಯ್ಕೆಯಾಗುವ ದೇಶದಲ್ಲಿ ವಿವಿಗಳಿಗೆ ಸ್ವಾಯತ್ತೆ ಬಯಸುವುದು ಹಗಲುಕನಸೇ ಸರಿ. ಆದರೆ, ಇದನ್ನೆಲ್ಲ ಪ್ರಶ್ನಿಸಲೇಬೇಕಿದೆ.
.