ಸಂಸತ್ತು ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ದೇಶದ ಕೆಲವೆಡೆ ಪ್ರತಿಭಟನೆ ವ್ಯಕ್ತವಾಗಿದೆ ಹಾಗೂ ವ್ಯವಸ್ಥೆ ಕಠೋರವಾಗಿ ದಮನಕ್ಕೆ ಮುಂದಾಗಿದೆ. 11 ವರ್ಷದ ಬಳಿಕ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʻಆರ್‌ಎಸ್‌ಎಸ್ ಆಲದ ಮರʼ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅತ್ಯಂತ ಉತ್ಸಾಹದಿಂದ ವಕ್ಫ್ ಕಾನೂನು ಜಾರಿಗೆ ಮುಂದಾಗಿವೆ. ಮಸೂದೆ ಕುರಿತು ಕೇರಳದ ಕಯಂಕುಲಂ ಮೂಲದ ದೆಹಲಿ ವಾಸಿ, ಕೇರಳ ಕ್ಲಬ್ ಅಧ್ಯಕ್ಷ ಎ.ಜೆ. ಫಿಲಿಪ್ ಎಂಬುವರು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ʻಇಂಡಿಯನ್ ಕರೆಂಟ್ಸ್ʼನಲ್ಲಿ ಪ್ರಕಟವಾಗಿರುವ ಪತ್ರದ ಸಾರಾಂಶ ಇಂತಿದೆ:
ಆತ್ಮೀಯ ಶ್ರೀ ಕಿರಣ್ ರಿಜಿಜು ಅವರೇ,
ಮೊದಲನೆಯದಾಗಿ, ವಕ್ಫ್ ಮಸೂದೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಅಭಿನಂದಿಸುತ್ತೇನೆ; ಈಗ ಕಾನೂನನ್ನು ʻಉಮೀದ್ʼ ಅಂದರೆ ಭರವಸೆ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ರೈತರ ಬೃಹತ್ ಪ್ರತಿಭಟನೆ ನಂತರ ಮೋದಿ ಸರ್ಕಾರ ರದ್ದುಗೊಳಿಸಿದ ಕೃಷಿ ಕಾಯ್ದೆಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ʻನಾನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಯಾವುದೇ ತಾರತಮ್ಯ ಎದುರಿಸಿಲ್ಲʼ ಎಂದು ನೀವು ಲೋಕಸಭೆಯಲ್ಲಿ ಹೇಳಿದಿರಿ. ಆದರೆ, ಅಂತಹ ತಾರತಮ್ಯ ನಡೆದಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಉಸ್ತುವಾರಿ ಸಚಿವರಾಗಿರುವ ನೀವು ವಿಶ್ವಾಸದಿಂದ ಹೇಳಬಲ್ಲಿರಾ?
ದೆಹಲಿ ಮತ್ತು ಇತರೆಡೆಗಳಲ್ಲಿ ಬೌದ್ಧರು ಶಾಂತಿ ಪಗೋಡಗಳನ್ನು ನಿರ್ಮಿಸಿದ್ದಾರೆ ಎಂದು ಬೌದ್ಧ ಧರ್ಮೀಯರಾದ ನಿಮಗೆ ಹೇಳಬೇಕಿಲ್ಲ. ಅವು ವಾಸ್ತುಶಿಲ್ಪದ ಅದ್ಭುತಗಳು; ಲಡಾಖ್‌ನ ಲೇಹ್, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ನೇಪಾಳದ ಕಠ್ಮಂಡುವಿನಂತಹ ಸ್ಥಳಗಳಿಗೆ ಭೇಟಿ ನೀಡಿದಾಗ, ನಾನು ಅವುಗಳನ್ನು ನೋಡದೆ ಇರುವುದಿಲ್ಲ. ʻಬೌದ್ಧರ ಅತ್ಯಂತ ಶ್ರೇಷ್ಠ ಯಾತ್ರಾ ಕೇಂದ್ರ ಸಿದ್ಧಾರ್ಥ ಗೌತಮ ಜನಿಸಿದ ನೇಪಾಳದ ಲುಂಬಿನಿ ಅಲ್ಲ; ಬದಲಾಗಿ, ಬೋಧಗಯಾದ ಮಹಾಬೋಧಿ ದೇವಾಲಯದ ಬೋಧಿ ವೃಕ್ಷ. ಅಲ್ಲಿ ಅವರಿಗೆ ಜ್ಞಾನೋದಯವಾಯಿತುʼ ಎಂದು ಹೇಳಿದರೆ, ಅದನ್ನು ನೀವು ಪ್ರಶ್ನಿಸುವುದಿಲ್ಲ ಎಂದುಕೊಳ್ಳುತ್ತೇನೆ.
ಎಂಭತ್ತರ ದಶಕದಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಭಾನುವಾರದ ನಿಯತಕಾಲಿಕೆಗೆ ಮಹಾಬೋಧಿ ದೇವಾಲಯದ ಕುರಿತು ಲೇಖನ ಬರೆದಿದ್ದೆ. ಲೇಖನದ ಪ್ರಮುಖ ಅಂಶವೆಂದರೆ, ದೇವಾಲಯದ ನಿಯಂತ್ರಣಕ್ಕಾಗಿ ಬೌದ್ಧರ ಹೋರಾಟ; ಅಲ್ಲಿ ಬ್ರಾಹ್ಮಣರು ಪೂಜೆ ಮಾಡುವುದನ್ನು ಮತ್ತು ದೇವಾಲಯದ ಆಡಳಿತ ವ್ಯವಹಾರಗಳನ್ನು ನಿಯಂತ್ರಿಸುವುದನ್ನು ಬೌದ್ಧರು ಇಷ್ಟಪಡುತ್ತಿರಲಿಲ್ಲ. ದೇವಾಲಯದ ನಿಯಂತ್ರಣಕ್ಕೆ ಹೋರಾಟ ಈಗಲೂ ಮುಂದುವರಿದಿದೆ. ಆದರೆ, ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟವಾಗುವುದಿಲ್ಲ. ಬೌದ್ಧ ಧರ್ಮೀಯರಾದ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ನೀವು ಮಹಾಬೋಧಿ ದೇವಾಲಯವನ್ನು ಬೌದ್ಧೇತರರ ಅನೈತಿಕ ನಿಯಂತ್ರಣದಿಂದ ಮುಕ್ತಗೊಳಿಸಿದರೆ, ರಾಷ್ಟ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತೀರಿ. ಆದರೆ, ಅದನ್ನು ಮಾಡುತ್ತಿಲ್ಲ. ಬದಲಿಗೆ, ವಕ್ಫ್ ಮಂಡಳಿಗಳ ಮೇಲೆ ಮುಸ್ಲಿಮೇತರರು ಹಿಡಿತ ಸಾಧಿಸಬೇಕೆಂದು ಬಯಸುತ್ತೀರಿ.
ತಿರುಪತಿ ದೇವಸ್ಥಾನದಲ್ಲಿ ಹಿಂದೂಯೇತರ ನೌಕರರನ್ನು ವಜಾಗೊಳಿಸುವ ಕಠಿಣ ನಿರ್ಧಾರವನ್ನು ಈ ಬೆಳಕಿನಲ್ಲಿ ನೀವು ನೋಡಬೇಕು. ತಿರುಪತಿ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು ಮತ್ತು ಹಿಂದೂಗಳು ಮಾತ್ರ ಅಲ್ಲಿ ಕೆಲಸ ಮಾಡಬಹುದು ಎಂಬುದು ವಾದ. ಕೆಲವು ಹಿಂದೂಯೇತರ ನೌಕರರನ್ನು ವಜಾಗೊಳಿಸಿರುವುದರ ವಿರುದ್ಧ ನೀವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾವಿಸುತ್ತೇನೆ. ನನ್ನ ರಾಜ್ಯ ಕೇರಳದ ಅತ್ಯಂತ ದೊಡ್ಡ ಹಿಂದೂ ಯಾತ್ರಾ ಕೇಂದ್ರ ಶಬರಿಮಲೆಯನ್ನು ದೇವಸ್ವಂ ಮಂಡಳಿ ನಿಯಂತ್ರಿಸುತ್ತದೆ. ಹಿಂದು ಶಾಸಕರು ಮಾತ್ರ ಮಂಡಳಿಯಲ್ಲಿ ಮತ ಚಲಾವಣೆ ಮಾಡಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನವನ್ನು ಟ್ರಸ್ಟ್ ನಡೆಸುತ್ತದೆ. ಲೆಫ್ಟಿನೆಂಟ್ ಗವರ್ನರ್ ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. ಒಂದುವೇಳೆ, ಹಿಂದೂ ಅಲ್ಲದವರು ರಾಜ್ಯಪಾಲರಾದರೆ ಟ್ರಸ್ಟ್‌ಗೆ ಹಿಂದುವೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕಾಗುತ್ತದೆ.
ಜನರಲ್ ಎಸ್.ಕೆ. ಸಿನ್ಹಾ ಗವರ್ನರ್ ಆಗಿದ್ದಾಗ, ಅಮರನಾಥ ಗುಹೆಯಲ್ಲಿ ಹಿಮಲಿಂಗ ರೂಪುಗೊಳ್ಳಲಿಲ್ಲ; ಹಿಮಲಿಂಗವನ್ನು ರಚಿಸಲು ದೂರದ ಜಮ್ಮುವಿನಿಂದ ಟನ್‌ಗಳಷ್ಟು ಹಿಮ ತರಿಸಲಾಯಿತು. ಛಾಯಾಗ್ರಾಹಕ ರೊಬ್ಬರು ತೆಗೆದ ಹಿಮಲಿಂಗದ ಚಿತ್ರಗಳಲ್ಲಿ ಕಾರ್ಮಿಕರ ಕೈ ಗುರುತುಗಳಿದ್ದವು. ಹೀಗಿದ್ದರೂ, ಸಿನ್ಹಾ ಬಚಾವಾದರು.
ಏಪ್ರಿಲ್ ಮೊದಲ ವಾರದಲ್ಲಿ 10,000 ಕೋಟಿ ರೂ. ಮೌಲ್ಯದ ರತನ್ ಟಾಟಾ ಅವರ ಉಯಿಲಿನ ವಿವರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಅವರ ಹೆಚ್ಚಿನ ಸಂಪತ್ತು ಸಾರ್ವಜನಿಕ ಟ್ರಸ್ಟ್‌ಗಳಿಗೆ ಹೋಗಿದೆ. ನನ್ನನ್ನು ಆಕರ್ಷಿಸಿದ್ದು-ಅವರ ನೆಚ್ಚಿನ ನಾಯಿ ಟಿಟೊ ಮತ್ತು ಇತರ ಸಾಕುಪ್ರಾಣಿಗಳಿಗೆ ಮೀಸಲಿಟ್ಟ 12 ಲಕ್ಷ ರೂ. ಮೊತ್ತ. ಈ ಸಾಕುಪ್ರಾಣಿಗಳಿಗೆ 3 ತಿಂಗಳಿಗೆ 30,000 ರೂ. ನೀಡಲಾಗಿದೆ. ತಮ್ಮ ಮರಣದ ನಂತರ ಟಿಟೊ ಅನ್ನು ಬಾಣಸಿಗ ರಾಜನ್ ಶಾ ನೋಡಿಕೊಳ್ಳುತ್ತಾರೆ ಎಂದು ಟಾಟಾ ಉಲ್ಲೇಖಿಸಿದ್ದಾರೆ. ವಿಲ್ ನಿರ್ವಹಿಸುವವರು ಇದನ್ನು ಖಚಿತಪಡಿಸಿಕೊಳ್ಳುತ್ತಾರೆ.
ಏಳನೇ ಶತಮಾನದಲ್ಲಿ ಉಮರ್ ಇಬ್ನ್ ಅಲ್ ಖಟ್ಟಾಬ್ ಅಥವಾ ಓಮರ್(ಆನಂತರ ಖಲೀಫ್ ಆದರು) ಖೈಬರ್ ತೀರದಲ್ಲಿ ಭೂಮಿಯನ್ನು ಹೊಂದಿದ್ದರು. ಭೂಮಿಯನ್ನು ಏನು ಮಾಡಬೇಕೆಂದು ಅವರು ಪ್ರವಾದಿ ಯನ್ನು ಕೇಳಿದಾಗ, ಅವರು ಅಲ್ಲಾಹುವಿಗೆ ನೀಡುವಂತೆ ಸೂಚಿಸಿದರು. ಭೂಮಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮಾತ್ರ ಬಳಸಬಹುದು ಮತ್ತು ಅದಕ್ಕೆ ಜವಾಬ್ದಾರರು ಮುತವಲ್ಲಿ. ಈ ಮಾಹಿತಿ ಮೂಲ ಮಾಧ್ಯಮಮ್ ದಿನಪತ್ರಿಕೆಯಲ್ಲಿ ಪ್ರಕಟವಾದ ವಕೀಲ ಟಿ. ಅಸಫ್ ಅಲಿ ಅವರ ಲೇಖನ. ಪ್ರವಾದಿ ಅವರ ವಿರುದ್ಧ ವಿಫಲ ಹೋರಾಟ ನಡೆಸಿದ ಯಹೂದಿಯೊಬ್ಬ ತನ್ನ ಎಲ್ಲ ಆಸ್ತಿಯನ್ನು ಇಂಥದ್ದೇ ಉದ್ದೇಶಕ್ಕಾಗಿ ಬಿಟ್ಟುಕೊಟ್ಟ. ವಕ್ಫ್ ನ್ನು ನಿಯಂತ್ರಿಸುವ ಎಲ್ಲಾ ನಿಯಮಗಳಿಗೆ ಇದುವೇ ಮೂಲ. ವಕ್ಫ್ ಆಸ್ತಿ ಗಳನ್ನು ಲಾಭಕ್ಕೆ ಮಾರಾಟ ಮಾಡುವಂತಿಲ್ಲ; ಅವನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮಾತ್ರ ಬಳಸಬಹುದು ಎಂಬುದನ್ನು ಇದು ಪುನರುಚ್ಚರಿಸುತ್ತದೆ. ಉಮೀದ್ ಪ್ರಕಾರ, ಕನಿಷ್ಠ ಐದು ವರ್ಷಗಳಿಂದ ಮುಸ್ಲಿಂ ಆಗಿರುವ ವ್ಯಕ್ತಿ ಮಾತ್ರ ತನ್ನ ಆಸ್ತಿಯನ್ನು ವಕ್ಫ್‌ಗೆ ನೀಡಬಹುದು. ನೀವು ಮಸೂದೆಯನ್ನು ಅಧ್ಯಯನ ಮಾಡಿರುವುದರಿಂದ, ವ್ಯಕ್ತಿ ಐದು ವರ್ಷ ಕಾಲ ಮುಸ್ಲಿಮನಾಗಿ ಉಳಿದಿದ್ದ ಅಥವಾ ಇಲ್ಲ ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ ಎಂದು ನಾನು ಪ್ರಶ್ನಿಸುತ್ತೇನೆ.
ವ್ಯಕ್ತಿಯೊಬ್ಬ ತನ್ನ ಪ್ರಾರ್ಥನೆಯನ್ನು ಅಲ್ಲಾಹುವಿಗೆ ಮಾತ್ರವೇ ಅರ್ಪಿಸಿದಾಗ ಮತ್ತು ಮುಹಮ್ಮದ್ ಅವರು ದೇವರ ಅಂತಿಮ ಪ್ರವಾದಿ ಮತ್ತು ಸಂದೇಶವಾಹಕ ಎಂದು ಪರಿಗಣಿಸಿದಾಗ, ಅವನು ಮುಸ್ಲಿಮನಾಗುತ್ತಾನೆ. ಅವನ ಧಾರ್ಮಿಕ ಆಚರಣೆಗಳೆಂದರೆ, ನಂಬಿಕೆಯ ಘೋಷಣೆ (ಶಹಾದಾ), ದೈನಂದಿನ ಪ್ರಾರ್ಥನೆಗಳು (ಸಲಾ), ದಾನ (ಜಕಾತ್), ರಂಜಾನ್ ತಿಂಗಳಲ್ಲಿ ಉಪವಾಸ(ಸಾಮ್) ಮತ್ತು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾ (ಹಜ್) ಯಾತ್ರೆ. ಯಾರು ಬೇಕಾದರೂ ಕ್ರಿಶ್ಚಿಯನ್ ಆಗಬಹುದು ಮತ್ತು ಆತ ಎಷ್ಟು ಕಾಲದಿಂದ ನಂಬಿಕೆ ಹೊಂದಿದ್ದಾನೆ ಎನ್ನುವುದು ಮುಖ್ಯವಾಗುವುದಿಲ್ಲ. ಅದರಿಂದಾಗಿಯೇ ಯೇಸುವನ್ನು ದೇವರ ಮಗನೆಂದು ನಂಬಿದ ಕಳ್ಳ, ಮೋಕ್ಷ ಪಡೆಯುತ್ತಾನೆ. ಅವನು ಮತಾಂತರಗೊಂಡ ಬಳಿಕ ಒಂದು ದಿನವೂ ಬದುಕಲಿಲ್ಲ. ಹೀಗಿರುವಾಗ, ಮುಸ್ಲಿಮನಾಗಲು ಐದು ವರ್ಷ ಕಾಲ ಧರ್ಮವನ್ನು ಪಾಲಿಸಬೇಕು ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತೀರಿ?
ಪ್ರಧಾನಿ ನರೇಂದ್ರ ಮೋದಿ ಅವರು ನಾಗಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಕಳೆದ ಭಾನುವಾರ ಭೇಟಿ ನೀಡಿದರು; ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ದೀಕ್ಷೆ ಪಡೆದ ದೀಕ್ಷಾ ಭೂಮಿಗೂ ಭೇಟಿ ನೀಡಿದರು. ಅಂಬೇಡ್ಕರ್ ದೀಕ್ಷೆಗೆ ನಾಗಪುರವನ್ನೇ ಏಕೆ ಆರಿಸಿಕೊಂಡರು ಎಂದರೆ, ನಾಗ ನದಿ ದಡದಲ್ಲಿ ವಾಸಿಸುತ್ತಿದ್ದ ನಾಗ ಜನಾಂಗದವರು, ಆಕ್ರಮಣಕಾರಿ ಆರ್ಯರ ವಿರುದ್ಧ ತೀವ್ರ ಹೋರಾಟ ನಡೆಸಿದರು. ಮತ್ತು, ನಿಮ್ಮ ರಾಜ್ಯ ಅರುಣಾಚಲ ಪ್ರದೇಶವೂ ಸೇರಿದಂತೆ ಬೌದ್ಧ ಧರ್ಮವನ್ನು ಪ್ರಚಾರ ಮಾಡಿದವರು ಅವರೇ.
ಬ್ರಿಟಿಷರು ದೆಹಲಿಯಲ್ಲಿ ವೈಸ್‌ರಾಯ್‌ಗೆ ಮನೆ ನಿರ್ಮಿಸಲು ಬಯಸಿದಾಗ, ಅವರು ಮಾದರಿಗಾಗಿ ದೇವಾಲಯಕ್ಕೆ ಹೋಗಲಿಲ್ಲ; ಬದಲಾಗಿ, ಬೌದ್ಧ ವಿಹಾರವನ್ನು ವೀಕ್ಷಿಸಿದರು. ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ರಾಷ್ಟ್ರಪತಿ ಭವನಕ್ಕೆ ತೆಗೆದುಕೊಂಡು ಹೋದಾಗ, ಭವನವು ದೇವಾಲಯವನ್ನು ಹೋಲುತ್ತದೆಯೇ ಅಥವಾ ಬೌದ್ಧ ವಿಹಾರವನ್ನು ಹೋಲುತ್ತದೆಯೇ ಎಂದು ಪರಿಶೀಲಿಸಿ.
ಸಂಸತ್ತು ವಕ್ಫ್ ಮಸೂದೆ ಕುರಿತು ಚರ್ಚೆ ನಡೆಸುತ್ತಿದ್ದ ದಿನದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾಕುಂಭ ನಡೆದ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ಅಧಿಕಾರಿಗಳು ಘೋಷಿಸಿದ್ದರು ಎಂದು ಹೇಳಿದರು. ಒಂದುವೇಳೆ ಅದು ನಿಜವಾಗಿದ್ದರೂ, ಗಂಗಾ ನದಿ ದಂಡೆಯಲ್ಲಿ ಬಿಸ್ಲೆರಿ ನೀರಿನ ಬಾಟಲಿ ಮಾರಾಟ ಮಾಡುವ ಪ್ರತಿಯೊಬ್ಬ ಮುಸ್ಲಿಮರನ್ನು ಓಡಿಸುವುದನ್ನು ಅದು ತಡೆಯುತ್ತದೆಯೇ? ಗೃಹ ಸಚಿವ ಅಮಿತ್ ಶಾ ಅವರು ವಕ್ಫ್ ಅಧಿಕಾರಿಗಳು ಸಂಸತ್ ಭವನವನ್ನೂ ವಕ್ಫ್ ಆಸ್ತಿ ಎಂದು ಘೋಷಿಸುವ ಸಾಧ್ಯತೆ ಇತ್ತು ಎಂದಿದ್ದಾರೆ. ನೀವು ಮತ್ತು ನಿಮ್ಮ ಪಕ್ಷ ಹೆದರಿಸುವ ಕಲೆಯನ್ನು ಪರಿಪೂರ್ಣಗೊಳಿಸಿಕೊಂಡಿದ್ದೀರಿ. 318 ವರ್ಷಗಳ ಹಿಂದೆ ಮೃತಪಟ್ಟ ಔರಂಗಜೇಬನನ್ನೂ ನೀವು ಬಿಡುವುದಿಲ್ಲ.
ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ಪ್ರತಿ ತಿಂಗಳು 70 ಲಕ್ಷ ರೂ. ವೆಚ್ಚದ ವಿದ್ಯುತ್ ಬಳಸುವ ಭಯಾನಕ ಮನೆ ಅಂಟಿಲಿಯಾ, ವಕ್ಫ್ ಭೂಮಿಯಲ್ಲಿ ಇದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಇದರಿಂದ ಅಂಬಾನಿ ಅವರಿಗೆ ಏನಾದರೂ ಸಮಸ್ಯೆ ಆಗಿದೆಯೇ? ಆದರೆ, ನೀವು ವಕ್ಫ್ ಮಂಡಳಿಗಳನ್ನು ಸುಪ್ರೀಂ ಕೋರ್ಟ್‌ಗಿಂತ ಹೆಚ್ಚು ಶಕ್ತಿಶಾಲಿ ಎಂಬಂತೆ ಚಿತ್ರಿಸಿದ್ದೀರಿ. ಇದನ್ನು ಸೈರೋ-ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಆರ್ಚ್‌ಬಿಷಪ್ ಆದ ಬಸೆಲಿಯೋಸ್ ಕ್ಲೀಮಿಸ್‌ನಂಥ ಕೆಲವರು ನಂಬಿದರು. ಅವರು ಸಮಸ್ಯೆಯನ್ನು 600 ಕುಟುಂಬಗಳಿರುವ ಮುನಂಬಂ ನಿವಾಸಿಗಳ ದೃಷ್ಟಿಕೋನದಿಂದ ನೋಡಿದರು; ಇವರಲ್ಲಿ ಹೆಚ್ಚಿನವರು ಕ್ಯಾಥೋಲಿಕ್ಕರು. ಅಂಬಾನಿಯನ್ನು ಅಂಟಿಲಿಯಾದಿಂದ ಹೊರಹಾಕಲು ಸಾಧ್ಯವಾಗದಿದ್ದರೆ, ಮುನಂಬಂ ನಿವಾಸಿಗಳನ್ನು ಹೊರಹಾಕುವುದು ಹೇಗೆ ಸಾಧ್ಯ?
ಮುಖ್ಯ ವಿಷಯವೇನೆಂದರೆ, ಮಸೂದೆಯ ಕರಡು ರಚನೆ ವೇಳೆ ಮುಸ್ಲಿಮರೊಂದಿಗೆ ಸಮಾಲೋಚಿಸಿಲ್ಲ. ಮಸೂದೆಯನ್ನು ಸಂಸದೀಯ ಸಮಿತಿ ಪರಿಶೀಲಿಸಿದೆ ಎಂದು ನೀವು ಉಲ್ಲೇಖಿಸಿದ್ದೀರಿ. ಸಮಿತಿಯಲ್ಲಿದ್ದ ವಿರೋಧ ಪಕ್ಷದ ಸದಸ್ಯರ ಒಂದೇ ಒಂದು ಸಲಹೆಯನ್ನಾದರೂ ಅಳವಡಿಸಲಾಗಿದೆಯೇ? ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಸಂಸದರ ಸಲಹೆಗಳನ್ನು ಪರಿಗಣಿಸಿದ್ದೀರಾ? ಈ ಮಸೂದೆಯು ಸರ್ಕಾರದಿಂದ, ಸರ್ಕಾರಕ್ಕಾಗಿ ಮತ್ತು ಸರ್ಕಾರಕ್ಕೋಸ್ಕರ ಮಾಡಿರುವಂಥದ್ದು. ಮುಸ್ಲಿಮೇತರರಿಗೆ ವಕ್ಫ್ ಸಂಬಂಧಿತ ವಿಷಯಗಳನ್ನು ನಿರ್ಧರಿಸಲು ಅವಕಾಶ ನೀಡುವುದರಿಂದ, ಮುಸ್ಲಿಮರು ವಕ್ಫ್ ಆಸ್ತಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳು ತ್ತಾರೆ. ವಕ್ಫ್ ಮಂಡಳಿಗಳು ಮದರಸಾಗಳು, ಅನಾಥಾಶ್ರಮಗಳು ಮತ್ತು ಆಸ್ಪತ್ರೆಗಳನ್ನು ನಡೆಸಲು ಅಗತ್ಯವಿರುವ ಆಸ್ತಿಗಳನ್ನು ಕಳೆದುಕೊಳ್ಳುತ್ತವೆ. ಮಸೂದೆಯ ಕಾರ್ಯಸೂಚಿ ಸ್ಪಷ್ಟವಾಗಿದೆ.
ಶ್ರೀ ಹರ್ಮಂದಿರ್ ಸಾಹಿಬ್ ಅಥವಾ ದರ್ಬಾರ್ ಸಾಹಿಬ್ (ಸುವರ್ಣ ದೇವಾಲಯ)ವನ್ನು ನಿಯಂತ್ರಿಸುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್‌ಜಿಪಿಸಿ) ಮಸೂದೆಯನ್ನು ವಿರೋಧಿಸಿರುವುದು ಆಶ್ಚರ್ಯ ವೇನಲ್ಲ; ಏಕೆಂದರೆ, ನಾಳೆ ಸರ್ಕಾರವು ಸಿಖ್ ಗುರುದ್ವಾರ ಕಾಯ್ದೆಯನ್ನು ತಮಗೆ ಬೇಕಿರುವಂತೆ ತಿದ್ದುಪಡಿ ಮಾಡಬಹುದು ಎಂದು ಎಸ್‌ಜಿಪಿಸಿಗೆ ತಿಳಿದಿದೆ. ಆದರೆ, ಕ್ಯಾಥೋಲಿಕ್ ಚರ್ಚ್ ನಾಯಕತ್ವವು ಮರಗಳನ್ನು ನೋಡುತ್ತ ಕಾಡನ್ನು ಮರೆಯಿತು! ಇದೇ ವಾದವನ್ನು ಬಳಸಿಕೊಂಡು ಸರ್ಕಾರ ಕ್ಯಾಥೋಲಿಕ್ ಮತ್ತು ಇತರ ಚರ್ಚ್‌ಗಳ ಸಾವಿರಾರು ಎಕರೆ ಭೂಮಿ ಮತ್ತು ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಸ್ವಾಧೀನಪಡಿಸಿ ಕೊಳ್ಳಬಹುದು. ವಾಸ್ತವವೆಂದರೆ, ಚರ್ಚ್‌ಗಳು ನಡೆಸುವ ಅನೇಕ ಶಾಲೆ-ಕಾಲೇಜುಗಳು ಬ್ರಿಟಿಷರು 100 ವರ್ಷ ಕಾಲ ಗುತ್ತಿಗೆಗೆ ನೀಡಿದ ಸರ್ಕಾರಿ ಭೂಮಿಯಲ್ಲಿವೆ. ನವ ದೆಹಲಿಯ ಸೇನಾ ಕಂಟೋನ್ಮೆಂಟ್‌ನಂಥ ಆಸ್ತಿ ಗಳನ್ನು ತೆರವುಗೊಳಿಸುವಂತೆ ಸರ್ಕಾರ ಈಗಾಗಲೇ ಚರ್ಚ್ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದೆ.
ಸಂಸತ್ತು ವಕ್ಫ್ ಮಸೂದೆಯನ್ನು ಚರ್ಚಿಸುತ್ತಿರುವಾಗ, ಕೆಲವು ವಿರೋಧ ಪಕ್ಷದ ಸದಸ್ಯರು ಜಬಲ್ಪುರದಲ್ಲಿ ಇಬ್ಬರು ಕ್ಯಾಥೋಲಿಕ್ ಪಾದ್ರಿಗಳ ಮೇಲಿನ ದಾಳಿ ಬಗ್ಗೆ ಸಂಸತ್ತಿನ ಗಮನ ಸೆಳೆದರು. ಅಲ್ಪಸಂಖ್ಯಾತ ವ್ಯವಹಾರಗಳ ಉಸ್ತುವಾರಿ ಸಚಿವರಾದ ನೀವು ಈ ಬಗ್ಗೆ ಬಾಯಿ ತೆರೆಯದಂತೆ ಯಾರು ತಡೆದರು? ಅದೇನೇ ಇದ್ದರೂ, ನೀವು ಸಾಚಾರ್ ಸಮಿತಿ ವರದಿಯನ್ನು ಉಲ್ಲೇಖಿಸಿದ್ದು ಕೇಳಿ ಸಂತೋಷವಾಯಿತು. ನನ್ನ ಮತ್ತು ದಿ ಟ್ರಿಬ್ಯೂನ್‌ನ ಕೆಲವು ಸಹೋದ್ಯೋಗಿಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೂಡಿದ ಪ್ರಕರಣದಲ್ಲಿ ನ್ಯಾ. ರಾಜೀಂದರ್ ಸಾಚಾರ್ ನಮ್ಮ ಪರವಾಗಿ ಹಾಜರಾಗಿದ್ದರು. ಆ ವರದಿಯನ್ನು ಓದಿದ್ದೀರಾ? ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಂದ ಆ ಸಮುದಾಯಗಳಿಗೆ ಪ್ರಯೋಜನ ಆಗಿದೆಯೇ ಎಂಬ ಮೇಲ್ವಿಚಾರಣೆ ಕಾರ್ಯವಿಧಾನ ರಚನೆ ಸೇರಿದಂತೆ ಸಾಚಾರ್ ಸಮಿತಿ ಅನೇಕ ಸಲಹೆಗಳನ್ನು ನೀಡಿದೆ.
ವಕ್ಫ್ ಆಸ್ತಿಗಳನ್ನು ವಾಣಿಜ್ಯ ಬಳಕೆಗೆ ತಂದರೆ, ಮುಸ್ಲಿಮರು ಬಹಳಷ್ಟು ಗಳಿಸುತ್ತಾರೆ ಎಂದು ನೀವು ಹೇಳುತ್ತೀರಿ. ಕ್ರೋನಿ ಬಂಡವಾಳಶಾಹಿಯಡಿ ನಡೆಯುತ್ತಿರುವುದು ಅದೇ. ಸರ್ಕಾರದ ಆಸ್ತಿಗಳನ್ನು ಅಂಬಾನಿ ಮತ್ತು ಅದಾನಿಯಂಥವರಿಗೆ ಹಸ್ತಾಂತರಿಸುತ್ತಿದ್ದು, ಇದರಿಂದ ಅವರು ವಿಶ್ವದ ಅತ್ಯಂತ ಶ್ರೀಮಂತರಾಗಿ, ಬಡವರು ಮತ್ತಷ್ಟು ಕೆಳಕ್ಕೆ ಹೋಗುತ್ತಿದ್ದಾರೆ. ನಿಜ, ವಕ್ಫ್ ಆಸ್ತಿಗಳನ್ನು ಅದಾನಿ-ಅಂಬಾನಿಗೆ ಹಸ್ತಾಂತರಿಸಿದರೆ, ಅವರು ಶತಕೋಟಿ ಗಳಿಸುತ್ತಾರೆ; ಮನೆ ಚಾವಣಿ ಮೇಲೆ ಈಜುಕೊಳ ನಿರ್ಮಿಸಿಕೊಳ್ಳುತ್ತಾರೆ; ಅದೇ ಹೊತ್ತಿನಲ್ಲಿ ಮುಂಬೈನ ಮಹಿಳೆಯರು ಕೊಡ ನೀರಿಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ.
ಮುಸ್ಲಿಮರ ಕಲ್ಯಾಣ ಬಿಜೆಪಿ ಸರ್ಕಾರದ ಪ್ರಮುಖ ಕಾಳಜಿ ಎಂಬ ನಿಮ್ಮ ಹೇಳಿಕೆ ಕೇಳಿ ನನಗೆ ನಗು ಬಂತು. ನಿಮ್ಮ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಈ ದೇಶದಲ್ಲಿ ಸುಮಾರು 200 ದಶಲಕ್ಷ ಮುಸ್ಲಿಮ ರಿದ್ದಾರೆ. ಆದರೆ, ಪ್ರಧಾನಿ ಅವರಿಗೆ ಸಮುದಾಯವನ್ನು ಪ್ರತಿನಿಧಿಸಲು ಒಬ್ಬನೇ ಒಬ್ಬ ಮುಸ್ಲಿಂ ಸಿಗುತ್ತಿಲ್ಲ ಎನ್ನುವುದು ನಂಬಲಾಗದ ಸಂಗತಿ. ಕೇಂದ್ರ ಸರ್ಕಾರ ಒತ್ತಟ್ಟಿಗಿರಲಿ; ಗುಜರಾತಿನಿಂದ ಮಣಿಪುರದವರೆಗೆ ಮತ್ತು ದೆಹಲಿಯಿಂದ ಉತ್ತರಾಖಂಡದವರೆಗೆ ಯಾವುದೇ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇದ್ದಲ್ಲಿ ಅವರ ಹೆಸರು ಹೇಳಿ ನೋಡೋಣ.
ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೊಳಿಸಿದರು. ಆದರೆ, ಆ ಕಾನೂನು ಜಾರಿಗೆ ಬಂದು ಐದು ವರ್ಷ ಆಗಿದ್ದರೂ, ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆ ಆಗಿದೆಯೇ? ಮುಸ್ಲಿಮರಿಗೆ ಸಹಾಯ ಮಾಡುವ ಬದಲು ಹಿಂದುತ್ವವಾದಿಗಳನ್ನು ಸಮಾಧಾನಪಡಿಸಲು ವಕ್ಫ್ ಕಾಯಿದೆಯನ್ನು ವಿನ್ಯಾಸಗೊಳಿಸಲಾಗಿದೆ. ದುರದೃಷ್ಟವಶಾತ್, ಈ ಮಸೂದೆಯು ಮುಸ್ಲಿಮರ ಸೀಮಿತ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಕವಿ ಜಾನ್ ಡನ್ ಮಾತು ಬಳಸಬಹುದಾದರೆ, ʻಗಂಟೆ ಬಾರಿಸುತ್ತಿರುವುದು ಮುಸ್ಲಿಮರಿಗೆ ಮಾತ್ರವಲ್ಲ; ತಮಗೂ ಸಹ ಎಂದು ಕ್ರಿಶ್ಚಿಯನ್ನರು ಅರಿತುಕೊಂಡರೆ ಒಳಿತುʼ.
…………………
ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟಗೊಂಡ ಲೇಖನದ ಪ್ರಕಾರ, ದೇಶದಲ್ಲಿ ಕ್ಯಾಥೋಲಿಕ್ ಚರ್ಚ್‌ಗಳು ವಕ್ಫ್‌ಗಿಂತ ಹೆಚ್ಚು ಆಸ್ತಿ ಹೊಂದಿವೆ; ಅಂದಾಜು, 17.29 ಕೋಟಿ ಎಕರೆ ಭೂಮಿ ಚರ್ಚ್‌ಗಳ ವಶದಲ್ಲಿದೆ. 2,457 ಆಸ್ಪತ್ರೆಗಳು, 240 ವೈದ್ಯಕೀಯ ಅಥವಾ ನರ್ಸಿಂಗ್ ಕಾಲೇಜು ಹಾಗೂ 11,000 ಶಾಲೆಗಳನ್ನು ನಡೆಸುತ್ತಿದ್ದು, ಮತಾಂತರವನ್ನು ಪ್ರಚೋದಿಸುತ್ತಿವೆ (https://organiser. org/account/ signin/page/ 3743/). ಆನಂತರ ಆರ್ಗನೈಸರ್ ಲೇಖನ ಹಿಂಪಡೆಯಿತು. ಬಳಿಕ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಗೊಂಡಿತು(https://www.newindianexpress.com/…/next-in-line). ಮಸೂದೆಯು ವಕ್ಫ್ ಕೌನ್ಸಿಲ್ ಹಾಗೂ ರಾಜ್ಯ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತದೆ. ಮಸೂದೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಎನ್ಡಿಎ ಸರ್ಕಾರದ ನಡೆನುಡಿಯಲ್ಲಿ ಮುಚ್ಚುಮರೆಯೇನೂ ಇಲ್ಲ. ಅದರ ಗುರಿ-ಅಲ್ಪಸಂಖ್ಯಾತ ಸಮುದಾಯ. ಪ್ರಧಾನಿ ಅವರ ನಾಗಪುರದ ಭೇಟಿ ಕೂಡ ಈ ಕಾರ್ಯತಂತ್ರದ ಮುಂದುವರಿದ ಭಾಗವಷ್ಟೆ. ರಿಜಿಜು, ಫಡಣವೀಸ್ ಇವರೆಲ್ಲರೂ ಆಡಿಸುವಾತನ ಗೊಂಬೆಗಳು. ʻಗಂಟೆ ನಮ್ಮೆಲ್ಲರಿಗೂ ಬಾರಿಸುತ್ತಿದೆʼ ಎಂಬುದು ಜನರಿಗೆ ಆದಷ್ಟು ಬೇಗ ಅರ್ಥವಾಗಬೇಕಿದೆ.