ಅನ್ನದ ಬಟ್ಟಲಿಗೆ ಕೈ ಹಾಕುವ ಇ20

ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಾಹನಗಳಲ್ಲಿ ಶೇ.100ರಷ್ಟು ಎಥನಾಲ್‌ ಬಳಕೆಗೆ ಅನುಮತಿ ನೀಡುವುದಾಗಿ ಜೂನ್‌ 13, 2026ರಂದು ಘೋಷಿಸಿದರು; ಆನಂತರ, ಎಥನಾಲ್‌ನ್ನು ಜೈವಿಕ ಇಂಧನ, ಐಸೋಬ್ಯುಟನಾಲ್‌ ಆಗಿ ಪರಿವರ್ತಿಸಿ, ಡೀಸೆಲ್‌ ಜೊತೆಗೆ ಮಿಶ್ರಗೊಳಿಸುವ ಯೋಜನೆ ಚಾಲ್ತಿಯಲ್ಲಿದೆ ಎಂದು ಜುಲೈನಲ್ಲಿ ಹೇಳಿದರು. ಜೂನ್‌ 2, 2026ರಂದು ಸಚಿವ ಹರ್ದೀಪ್‌ ಸಿಂಗ್‌ ಪುರಿ ದಿಲ್ಲಿಯಲ್ಲಿ ಇ85 ಇಂಧನ ಬಳಕೆಗೆ ಚಾಲನೆ ನೀಡಿದರು. ಅಷ್ಟಲ್ಲದೆ, ಎಥನಾಲ್‌ ಎಲ್‌ಪಿಜಿ ಮತ್ತು ಪಿಎನ್‌ಜಿಗೆ ಪರ್ಯಾಯವಾಗಿ ಅಡುಗೆ ಮನೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎಥನಾಲ್‌ ಮಿಶ್ರಿತ ಪೆಟ್ರೋಲ್‌(ಇಬಿಪಿ) ಕಾರ್ಯಕ್ರಮಕ್ಕೆ ಎಥನಾಲ್‌ ರಫ್ತು ಮಾಡಿ ಕೊಳ್ಳಬೇಕೆಂದು ಅಮೆರಿಕ ಒತ್ತಡ ಹೇರುತ್ತಿದೆ; ಮೋದಿ ಅಮೆರಿಕದ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ ದೂರಿದೆ. ಎಥನಾಲ್‌ ಪರಿಸರಸ್ನೇಹಿಯೇ? ಆಹಾರ ಬೆಳೆಗಳನ್ನು ಇಂಧನ ಬೆಳೆಗಳು ಸ್ಥಳಾಂತರಿಸಿದರೆ, ದೇಶದ ಆಹಾರ ಸುಭದ್ರತೆಗೆ ಧಕ್ಕೆ ಆಗುವುದಿಲ್ಲವೇ?

ಜೈವಿಕ ಇಂಧನ ಕುರಿತ ರಾಷ್ಟ್ರೀಯ ಕಾರ್ಯನೀತಿಗೆ ಅನುಗುಣವಾಗಿ ಕಚ್ಚಾ ಇಂಧನದ ಆಮದು ಕಡಿತ ಹಾಗೂ ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದ ಇಬಿಪಿ ಆರಂಭಿಸಲಾಯಿತು. ಪೆಟ್ರೋಲಿನಲ್ಲಿ ಶೇ.20 ಎಥನಾಲ್‌ ಮಿಶ್ರಗೊಳಿಸುವ ಗುರಿಯನ್ನು 2025ರಲ್ಲಿ ಸಾಧಿಸಲಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲ ಸಚಿವಾಲಯದ ಪ್ರಕಾರ, ಎಥನಾಲ್‌ ಮಿಶ್ರಗೊಳಿಸುವಿಕೆಯಿಂದ 1.91 ಲಕ್ಷ ಕೋಟಿ ಡಾಲರ್‌ ವಿದೇಶಿ ವಿನಿಮಯ ಉಳಿತಾಯ ಮತ್ತು 30.2 ದಶಲಕ್ಷ ಟನ್‌ ಕಚ್ಚಾ ತೈಲದ ಆಮದು ಕಡಿಮೆಯಾಗಿದೆ. ಇರಲಿ; ಮುಖ್ಯ ಪ್ರಶ್ನೆ ಏನೆಂದರೆ, ಆಹಾರ ಬೆಳೆಗಳ ಬದಲು ಇಂಧನ ಬೆಳೆ ಬೆಳೆಯುವುದರಿಂದ ಆಗುವ ವಿಪರಿಣಾಮಗಳೇನು?

ಮೊದಲ ಪೀಳಿಗೆ ಇಥನಾಲ್:‌ ದೇಶದಲ್ಲಿ ಈಗ ಬಳಕೆಯಲ್ಲಿರುವುದು ಆಹಾರ ಬೆಳೆಗಳಿಂದ ಉತ್ಪಾದಿಸುವ ಮೊದಲನೇ ಪೀಳಿಗೆ(ಜಿ1) ಎಥನಾಲ್. 2018ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ಕಾರ್ಯನೀತಿಯನ್ನು ಪರಿಚಯಿ ಸಿದಾಗ, ಎಥನಾಲ್‌ ಉತ್ಪಾದನೆಗೆ ಬಳಕೆ ಆಗುತ್ತಿದ್ದುದು ಕಬ್ಬು; ಸಕ್ಕರೆ ಕಾರ್ಖಾನೆಗಳು ಪೂರೈಸುತ್ತಿದ್ದ ಮೊಲಾಸಸ್‌, ಕಬ್ಬಿನ ರಸ ಹಾಗೂ ಸಾಂದ್ರೀಕೃತ ರಸ. ಕಾಲಕ್ರಮೇಣ ಈ ಮೂಲದಿಂದ ತೈಲ ಮಾರುಕಟ್ಟೆ ಕಂಪನಿ(ಒ ಎಂಸಿ)ಗಳಿಗೆ ಪೂರೈಕೆಯಾಗುತ್ತಿದ್ದ ಎಥೆನಾಲ್‌ ಪ್ರಮಾಣ ಕುಸಿದಿದೆ. 3-4 ವರ್ಷಕ್ಕೊಮ್ಮೆ ಕಾಡುವ ಬರದಿಂದ ಕಬ್ಬಿನ ಇಳುವರಿ ಕುಸಿಯುತ್ತದೆ; ಕಬ್ಬಿನಲ್ಲಿರುವ ಸುಕ್ರೋಸ್‌ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಎಥನಾಲ್‌ ಉತ್ಪಾದನೆಗೆ ಆಹಾರ ಧಾನ್ಯಗಳ ಅವಲಂಬನೆ ಹೆಚ್ಚಿದೆ. ಭಾರತೀಯ ಆಹಾರ ನಿಗಮ(ಎಫ್‌ಎಸ್‌ಐ) ಸಂಗ್ರಹಿಸುವ ಇಲ್ಲವೇ ಸರ್ಕಾರ ಹರಾಜಿನ ಮೂಲಕ ಖರೀದಿಸುವ ಅಕ್ಕಿ/ನುಚ್ಚು ಬಳಕೆಯಾಗುತ್ತಿದೆ. ರೇಷನ್‌ ಅಂಗಡಿ ಗಳಿಗೆ ವಿತರಣೆಯಾಗಿ ಉಳಿಯುವ ಎಲ್ಲ ಅಕ್ಕಿ ಎಥನಾಲ್‌ ಉತ್ಪಾದನೆಗೆ ಹೋಗುತ್ತಿದೆ. ಕೇಂದ್ರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲದೆ, ರಾಜ್ಯ ಸರ್ಕಾರಗಳು ಬೋನಸ್‌ ನೀಡುತ್ತವೆ. ಅಕ್ಕಿ ಆಧರಿತ ಎಥನಾಲ್‌ ಕಾರ್ಖಾನೆಗಳ ಸ್ಥಾಪನೆಯಿಂದ ಅಕ್ಕಿ ಖರೀದಿ ಖಾತ್ರಿಯಾಗಿದೆ. ಇದರಿಂದ ಹಿಂಗಾರು ಋತುವಿನಲ್ಲೂ ಭತ್ತ ಬೆಳೆಯುವ ಪರಿಪಾಟ ಹೆಚ್ಚಿದೆ. ಗೋದಾಮುಗಳಲ್ಲಿ ಸಂಗ್ರಹವಾಗಿದ್ದ ಭತ್ತದ ಪ್ರಮಾಣ ಹೆಚ್ಚು ಇದ್ದು ದರಿಂದ, ಸರ್ಕಾರ ಮೇ 2026ರಲ್ಲಿ ಎಥನಾಲ್‌ ಉತ್ಪಾದನೆಗೆ ಮೀಸಲು ಪ್ರಮಾಣವನ್ನು 5.2 ದಶಲಕ್ಷ ಟನ್‌ನಿಂದ 7.2 ದಶಲಕ್ಷ ಟನ್‌ಗೆ ಹೆಚ್ಚಿಸಿತು(ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾ ಲಯ). ಕೋವಿಡ್‌ ಸಮಯದಲ್ಲಿ ಯಥೇಚ್ಛವಾಗಿ ಉತ್ಪಾದಿಸಲ್ಪಟ್ಟ ಎಥನಾಲ್‌ಗೆ ಆನಂತರ ಬೇಡಿಕೆ ಕುಸಿಯಿತು. ಉದ್ಯಮಿಗಳ ಒತ್ತಡದಿಂದ ಪೆಟ್ರೋಲ್‌ ಜೊತೆ ಮಿಶ್ರಗೊಳಿಸಲು ಸರ್ಕಾರ ಮುಂದಾಯಿತು ಎನ್ನುವ ದೂರು ಇದೆ.

2021-22ರ ಬಳಿಕ ಮುಂಗಾರು ಬೆಳೆಯಾದ ಜೋಳ ಮುಖ್ಯ ಕಚ್ಚಾ ವಸ್ತುವಾಗಿ ಬದಲಾಗಿದೆ. ಇದರಿಂದ ಜೋಳದ ಕೃಷಿ ಕ್ಷೇತ್ರ 2022-23ರಲ್ಲಿ 10.74 ದಶಲಕ್ಷ ಹೆಕ್ಟೇರಿನಿಂದ 2025-26ಕ್ಕೆ 14.41 ದಶಲಕ್ಷ ಹೆಕ್ಟೇರಿಗೆ ಹೆಚ್ಚಿದೆ( ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಡಿಎಎಫ್‌ಡಬ್ಲ್ಯು ಮಾಹಿತಿ). ಇದರಲ್ಲಿ ಮಧ್ಯಪ್ರದೇಶದ ಪಾಲು ದೊಡ್ಡದು; ಪ್ರತಿಯಾಗಿ, ಆಹಾರ ಬೆಳೆಗಳಾದ ಸೋಯಾ ಅವರೆ ಮತ್ತು ಬೇಳೆ ಕಾಳು ಕೃಷಿ ಕ್ಷೇತ್ರ ಕಡಿಮೆ ಯಾಗಿದೆ. ಸೋಯಾ ಕೃಷಿಗೆ ಕೀಟ ಬಾಧೆ, ಶಿಲೀಂಧ್ರ ರೋಗಗಳು ಮತ್ತು ಅಕಾಲಿಕ ಮಳೆಯಿಂದ ನಷ್ಟದ ಸಾಧ್ಯತೆ ಹೆಚ್ಚು. ಎಥನಾಲ್‌ ಉದ್ಯಮ ಹಾಗೂ ಪಶುಆಹಾರ ಉತ್ಪಾದಕರಿಗೆ ಜೋಳ ಅಗತ್ಯವಿದೆ; ಇದರಿಂದ ರೈತರ ಉತ್ಪನ್ನಕ್ಕೆ ಮಾರು ಕಟ್ಟೆ ಹಾಗೂ ಬೆಲೆ ಖಾತ್ರಿ ಇದೆ. ಸರ್ಕಾರ ಇಬಿಪಿ ಕಾರ್ಯಕ್ರಮದಡಿ ಸಾರ್ವಜನಿಕ ಕ್ಷೇತ್ರದ ತೈಲೋತ್ಪಾದನೆ ಕಂಪನಿಗಳಿಗೆ ಪೂರೈಸುವ ಎಥನಾಲ್‌ಗೆ ಬೆಲೆ ನಿಗದಿಗೊಳಿಸುತ್ತದೆ. ಜೋಳದಿಂದ ಉತ್ಪಾದಿಸುವ ಎಥನಾಲ್‌ಗೆ ಲೀಟರಿಗೆ 66.07 ರೂ. ನಿಗದಿಪಡಿಸಿದ್ದು, ತೈಲೋತ್ಪಾದನೆ ಕಂಪನಿಗಳು ಹೆಚ್ಚುವರಿ 5.79 ರೂ. ನೀಡಲಿವೆ. ಜೋಳದಿಂದ ಉತ್ಪಾದನೆಯಾಗುವ ಎಥನಾಲ್‌ಗೆ ಅಕ್ಕಿ ಇಲ್ಲವೇ ಕಬ್ಬಿನಿಂದ ಉತ್ಪತ್ತಿ ಯಾಗುವ ಎಥನಾಲಿಗಿಂತ ಹೆಚ್ಚು ಬೆಲೆ ದೊರೆಯುತ್ತದೆ.

ಇದರಿಂದ ಜೋಳದ ಬೆಳೆ ಪ್ರದೇಶ ಹೆಚ್ಚುತ್ತಿದೆ; ಕರ್ನಾಟಕದಲ್ಲಿ ನೆಲಗಡಲೆ ಮತ್ತು ರಾಗಿ, ಮಹಾರಾಷ್ಟ್ರದಲ್ಲಿ ನೆಲಗಡಲೆ, ಹೆಸರು, ಬಟಾಣಿ ಮತ್ತು ಹತ್ತಿ, ಮಧ್ಯಪ್ರದೇಶದಲ್ಲಿ ಬಟಾಣಿ, ಉದ್ದು ಮತ್ತು ಹೆಸರು ಹಾಗೂ ಬಿಹಾರ ದಲ್ಲಿ ಸೂರ್ಯಕಾಂತಿ ಕೃಷಿ ಕ್ಷೇತ್ರ ಕಡಿಮೆಯಾಗಿದೆ(ಮೂಲ: Arcus Policy Research, https://arcuspolicyresearch.com). 2025-26ರ ಆರ್ಥಿಕ ಸಮೀಕ್ಷೆ ಪ್ರಕಾರ, 2022 ಮತ್ತು 2025ರಲ್ಲಿ ಬೇಳೆ ಕಾಳು ಗಳ ಎಕರೆವಾರು ಕೃಷಿ ಪ್ರದೇಶ ಹಾಗೂ ಇಳುವರಿ ಎರಡೂ ಕಡಿಮೆ ಆಗಿದೆ. ಜೊತೆಗೆ, ಬೇಳೆಕಾಳು ಆಮದು ದುಪ್ಪಟ್ಟಾಗಿದ್ದು, 2021ರಲ್ಲಿ 3.1 ದಶಲಕ್ಷ ಟನ್‌ ನಿಂದ 7.74 ದಶಲಕ್ಷ ಟನ್‌ಗೆ ಹೆಚ್ಚಿದೆ. ಇದರಿಂದ ಆಮದು ಕಡಿತ ಹಾಗೂ ಪೋಷಕಾಂಶ ಸುರಕ್ಷತೆಯನ್ನು ಉತ್ತಮಗೊಳಿಸುವಿಕೆಯನ್ನು ಗುರಿಯಾಗುಳ್ಳ ಬೇಳೆಕಾಳುಗಳ ಆತ್ಮ ನಿರ್ಭರತೆ ಮಿಷನ್‌ ಮೇಲೆ ಪರಿಣಾಮ ಉಂಟಾಗಿದೆ. ಎಥನಾಲ್‌ ಮಿಶ್ರಣ ಕಾರ್ಯಕ್ರಮವು ಬೆಳೆ ಆಯ್ಕೆ ಯನ್ನು ಬದಲಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಆತಂಕ ವ್ಯಕ್ತಪಡಿಸಿದೆ.

ಎಥನಾಲ್‌ ಪರಿಸರಸ್ನೇಹಿಯಲ್ಲ: ಎಥನಾಲ್‌ನ್ನು ಪರಿಸರಸ್ನೇಹಿ ಎಂದು ಮುಂದೊತ್ತಲಾಗುತ್ತಿದೆ. ಆದರೆ, ಇದು ಅರ್ಧಸತ್ಯ. ಇಂಧನ ಬೆಳೆಗಳ ಪರಿಸರ ವೆಚ್ಚ ಅಧಿಕ ಇದೆ. ಅವು ಭೂಮಿ ಹಾಗೂ ಜಲಸಂಪನ್ಮೂಲದ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಭತ್ತ ಹಾಗೂ ಕಬ್ಬು ಬೆಳೆಗೆ ಅತಿ ಹೆಚ್ಚು ನೀರು ಅಗತ್ಯ. ಜೋಳದಿಂದ ಒಂದು ಲೀಟರ್‌ ಎಥನಾಲ್‌ ಉತ್ಪಾದಿಸಲು 3,764 ಲೀಟರ್,‌ ಕಬ್ಬಿನಿಂದ 3,837 ಲೀಟರ್‌ ಹಾಗೂ ಭತ್ತದಿಂದ 9,854 ಲೀಟರ್‌ ನೀರು ಬೇಕಾಗುತ್ತದೆ(ಮಾಹಿತಿ-ಅರ್ಕಸ್‌ ಪಾಲಿಸಿ ರಿಸರ್ಚ್‌). ಜೋಳ ಮುಂಗಾರು ಬೆಳೆ ಮತ್ತು ಹೆಚ್ಚು ನೀರು ಅಗತ್ಯವಿಲ್ಲ. ಹೀಗಾಗಿ, ನೀರಿನ ಕೊರತೆ ಇರುವ ಪಂಜಾಬ್/ಹರ್ಯಾಣದಲ್ಲಿ ಪರ್ಯಾಯ ಬೆಳೆಯಾಗಿ ಜೋಳವನ್ನು ಉತ್ತೇಜಿಸಲಾಯಿತು. ಪಂಜಾಬಿನ ರೈತರು ವಸಂತ ಋತು(ಮಾರ್ಚ್-ಜೂನ್)ವಿನಲ್ಲೂ ಜೋಳ ಬೆಳೆಯಲಾರಂಭಿಸಿದರು. ಶುಷ್ಕ ವಾತಾವರಣದಿಂದ ಭತ್ತಕ್ಕಿಂತ ಹೆಚ್ಚು ನೀರು ಕೊಡಬೇಕಾಯಿತು. ಮುಂಗಾರು ಮತ್ತು ಹಿಂಗಾರು ಎರಡರಲ್ಲೂ ಒಂದೇ ಬೆಳೆ ಬೆಳೆಯುತ್ತಿರುವುದರಿಂದ, ಮಣ್ಣಿನ ಆರೋಗ್ಯ ಕುಸಿತ, ಕೀಟ ಭಾದೆ ಹೆಚ್ಚಳ, ಅಂತರ್ಜಲ ಮರುದುಂಬುವಿಕೆಗೆ ತಡೆ ಮತ್ತು ಬೆಳೆ ವೈವಿಧ್ಯೀಕರಣದಿಂದ ಕೃಷಿ ವ್ಯವಸ್ಥೆಯಲ್ಲಿ ಆಗುವ ಪುನಶ್ಚೇತನ ಪ್ರವೃತ್ತಿ ಕುಸಿಯಿತು. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯದಂತೆ ಮಾಡಲು ಕೇಂದ್ರ.-ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿದ್ದ ಬೆಳೆ ವೈವಿಧ್ಯೀಕರಣ ಯೋಜನೆಗಳು ಎಥನಾಲ್‌ ಮಿಶ್ರಣ ಕಾರ್ಯಕ್ರಮದಿಂದಾಗಿ ಹಳ್ಳ ಹಿಡಿದವು.

ಪಳೆಯುಳಿಕೆ ಇಂಧನ(ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ) ಗಳಿಗೆ ಹೋಲಿಸಿದರೆ, ಎಥನಾಲ್‌ ಕಡಿಮೆ ಹಸಿರುಮನೆ ಪರಿಣಾಮ ಉಂಟುಮಾಡುವ ಅನಿಲಗಳನ್ನು ಹೊರಚೆಲ್ಲುತ್ತದೆ ಎಂಬ ವಾದವು ಭೂಮಿ ಬಳಕೆಯಲ್ಲಿನ ಬದಲಾವಣೆ, ಬೆಳೆ ವೈವಿಧ್ಯಕ್ಕೆ ಧಕ್ಕೆ ಹಾಗೂ ಕಾಡು/ಹುಲ್ಲುಗಾವಲುಗಳನ್ನು ಹೊಲವಾಗಿ ಬದಲಿಸುವುದರಿಂದ ಆಗುವ ಪರಿಸರ ಹಾನಿಯನ್ನು ಪರಿಗಣಿಸಿಲ್ಲ ಎಂದು ಜಾಗತಿಕ ಅಧ್ಯಯನಗಳು ಹೇಳುತ್ತವೆ. ವರ್ಲ್ಡ್‌ ರಿಸೋರ್ಸ್‌ ಇನ್ಸ್ಟಿಟ್ಯೂಟ್‌ನ ಟಿಮ್‌ ಸರ್ಚಿಂಗರ್‌, 2000ರಲ್ಲೇ ಎಥನಾಲ್‌ ಉತ್ಪಾದನೆಗೆ ಸಂಬಂಧಿಸಿದಂತೆ ಆತಂಕ ಹೊರಹಾಕಿದ್ದರು. ಅಮೆರಿಕದಲ್ಲಿ ಆಗಷ್ಟೇ ಎಥನಾಲ್‌ ಬಳಕೆ ವಿಸ್ತರಿಸುತ್ತಿತ್ತು. ಅವರ ಪ್ರಕಾರ, ಭೂಮಿ ಬಳಕೆಯ ಬದಲಾವಣೆಯ ವಿಪರಿಣಾಮವನ್ನು ಪರಿಗಣಿಸಿದರೆ, ಪೆಟ್ರೋಲಿಗೆ ಹೋಲಿಸಿದರೆ ಜೋಳ ಆಧರಿತ ಎಥನಾಲ್‌ ದುಪ್ಪಟ್ಟು ಇಂಗಾಲ ಹೊರಚೆಲ್ಲುತ್ತದೆ.

ಇದಕ್ಕೆ ಪರಿಹಾರ ಇಲ್ಲವೇ? ಇದೆ. 2ನೇ ಪೀಳಿಗೆ(2ಜಿ) ಅಥವಾ ಕೃಷಿ ತ್ಯಾಜ್ಯಗಳಾದ ಹುಲ್ಲು, ದಿಂಡು ಮತ್ತು ಕಟಾವಿನ ಬಳಿಕ ಉಳಿಯುವ ಕೂಳೆ ಮತ್ತಿತರ ಜೈವಿಕ ತ್ಯಾಜ್ಯದಿಂದ ಉತ್ಪಾದಿಸುವ ಸೆಲ್ಯುಲೋಸ್‌ ಮೂಲದ ಎಥನಾಲ್. 2019ರಲ್ಲಿ ಆರಂಭಗೊಂಡ ಪಿಎಂ ಜಿಐ-ವಿಎಎನ್(ಪ್ರಧಾನಮಂತ್ರಿ ಜೈವಿಕ್‌ ಇಂಧನ್‌-ವಾತಾವರಣ್‌ ಅನುಕೂಲ್‌ ಫಸಲ್‌ ಅವಶೇಷ್‌ ನಿವಾರಣ್)‌ ಕಾರ್ಯಕ್ರಮದಡಿ 2ನೇ ಪೀಳಿಗೆಯ ಎಥನಾಲ್‌ ಘಟಕ ಗಳನ್ನು ಸ್ಥಾಪಿಸಲು ಸಾರ್ವಜನಿಕ/ಖಾಸಗಿ ಕಂಪನಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು. ಕಾರ್ಯಕ್ರಮಕ್ಕೆ 2018-19ರಲ್ಲಿ 1969.5 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಹರ್ಯಾಣದ ಪಾಣಿಪತ್‌ನಲ್ಲಿ ದಿನಕ್ಕೆ 100 ಕಿಲೋಲೀಟರ್‌(ಕೆಎಲ್‌ಪಿಡಿ) 2ಜಿ ಎಥನಾಲ್‌ ಉತ್ಪಾದಿಸುವ ಘಟಕವನ್ನು ಆಗಸ್ಟ್‌ 2022ರಲ್ಲಿ ಸ್ಥಾಪಿಸಲಾಯಿತು; ಘಟಕ ಶೇ.62ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಧನ ರಾಜ್ಯ ಸಚಿವ ಸುರೇಶ್‌ ಗೋಪಿ ಫೆಬ್ರವರಿ 2026ರಲ್ಲಿ ಲೋಕಸಭೆಯಲ್ಲಿ ಹೇಳಿದರು. ಒಡಿಷಾದ ಬರ್ಗಡದಲ್ಲಿ 100 ಕೆಎಲ್‌ಪಿಡಿ ಸಾಮರ್ಥ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಘಟಕ ಹಾಗೂ ಅಸ್ಸಾಮಿನ ನುಮಾಲಿಗಢದಲ್ಲಿ ಅಸ್ಸಾಂ ಬಯೋ ಎಥನಾಲ್‌ ಕಂಪನಿಯ ಬಿದಿರು ಆಧರಿತ 185 ಕೆಎಲ್‌ಪಿಡಿ ಸಾಮರ್ಥ್ಯದ ಘಟಕ ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲಕ್ಕೂ ಕಚ್ಚಾ ವಸ್ತುವಿನ ಕೊರತೆಯಿದೆ.

ಸಮಸ್ಯೆ ಏನೆಂದರೆ, 2ಜಿ ಎಥನಾಲ್‌ ಉತ್ಪಾದನೆ ಹೆಚ್ಚು ಸಂಕೀರ್ಣವಾದುದು. ಕೃಷಿ ತ್ಯಾಜ್ಯದಲ್ಲಿರುವ ಲಿಗ್ನಿನ್‌ ಸೆಲ್ಯುಲೋಸ್‌ ಸುಲಭವಾಗಿ ಛಿದ್ರವಾಗುವುದಿಲ್ಲ. ಹೀಗಾಗಿ, ಅದನ್ನು ಕೊಳೆಸಿ ಸಂಸ್ಕರಿಸಬೇಕು. ಇದರಿಂದ ಉತ್ಪಾ ದನೆ ವೆಚ್ಚ ಹೆಚ್ಚಲಿದ್ದು, 2ಜಿ ಎಥನಾಲ್‌ ಬೆಲೆ ಲೀಟರಿಗೆ 120 ರೂ. ಆಗಲಿದೆ. ಜೊತೆಗೆ, ಕೃಷಿ ತ್ಯಾಜ್ಯವನ್ನು ವಿಳಂಬಿಸದೆ ಬಳಸಬೇಕು; ಇಲ್ಲದಿದ್ದರೆ, ಗುಣಮಟ್ಟ ಕಡಿಮೆಯಾಗುತ್ತದೆ; ಹುಲ್ಲಿನಲ್ಲಿ ತೇವಾಂಶ ಬದಲಾಗುತ್ತದೆ, ಸಿಲಿಕಾ ಪ್ರಮಾಣ ಹೆಚ್ಚುತ್ತದೆ. ಇದರಿಂದ ಸಂಸ್ಕರಣೆ ಕ್ಲಿಷ್ಟವಾಗುತ್ತದೆ. ಆದರೆ, ಕಾಳುಗಳಿಗೆ ಈ ಸಮಸ್ಯೆ ಇಲ್ಲ; ಚೆನ್ನಾಗಿ ಒಣಗಿಸಿದರೆ ದೀರ್ಘಕಾಲ ಶೇಖರಿಸಿ ಇಡಬಹುದು.

ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ(ಐಇಎ) ಪ್ರಕಾರ, 2ಜಿ ಎಥನಾಲ್‌ ಉತ್ಪಾದನೆ ಯಶಸ್ವಿಯಾಗಿಲ್ಲ; ಬ್ರೆಜಿಲ್‌, ಜರ್ಮನಿ ಹಾಗೂ ಅಮೆರಿಕ 2ಜಿ ಎಥನಾಲ್‌ ಉತ್ಪಾದನೆ ತಂತ್ರಜ್ಞಾನ ಹೊಂದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿಲ್ಲ. ತಾಂತ್ರಿಕ ಸಂಕೀರ್ಣತೆ, ಕಚ್ಚಾ ವಸ್ತು ಕೊರತೆ, ಅಧಿಕ ಉತ್ಪಾದನೆ ವೆಚ್ಚ, ಕಾರ್ಯನೀತಿ ಬೆಂಬಲದ ಕೊರತೆ ಮತ್ತು ಜಿ1 ಎಥನಾಲ್‌ ಕಡಿಮೆ ದರದಲ್ಲಿ ಲಭ್ಯತೆ ಇದಕ್ಕೆ ಕಾರಣ ಎಂದು ಐಇಎ ಬಯೋಎನರ್ಜಿ ಟಾಸ್ಕ್‌ 39 ಗುಂಪು ಹೇಳಿತ್ತು(https;/task39.ieabioenergy.com. 2022ರ ವರದಿ). ಆದರೆ, ಬ್ರೆಜಿಲ್‌ ಪೂರೈಕೆ ಸರಪಳಿಯನ್ನು ಸಮಗ್ರ-ಸಮರ್ಪಕಗೊಳಿಸಿಕೊಂಡಿದೆ; ಸಕ್ಕರೆ ಮತ್ತು ಎಥನಾಲ್‌ ಉದ್ಯಮಗಳನ್ನು ಸೆಲ್ಯುಲೋಸ್‌ ಆಧರಿತ ಎಥನಾಲ್‌ ಜೊತೆಗೆ ಸಮಗ್ರಗೊಳಿಸಿದೆ. ಅಮೆರಿಕ ವಿಶ್ವದ ಅತಿ ದೊಡ್ಡ ಉತ್ಪಾದಕನಾಗಿದ್ದು, ಜೋಳದಿಂದ ವಾರ್ಷಿಕ 6.49 ಶತಕೋಟಿ ಗ್ಯಾಲನ್‌(ಗ್ಯಾಲನ್‌= 3.78 ಲೀಟರ್‌) ಎಥನಾಲ್‌ ಉತ್ಪಾದಿಸುತ್ತಿದೆ. ಅಯೋವಾ, ನೆಬ್ರಾಸ್ಕಾ ಮತ್ತು ಇಲಿನಾಯ್ಸ್ ಅತ್ಯಧಿಕ ಪ್ರಮಾಣದಲ್ಲಿ ಎಥನಾಲ್‌ ಉತ್ಪಾದಿಸುತ್ತವೆ. ಭಾರತಕ್ಕೆ ಕೈಗಾರಿಕೆ ಬಳಕೆಯ ಎಥನಾಲ್‌ ರಫ್ತು ಮಾಡುತ್ತಿದೆ. ʻಎಥನಾಲ್‌ ಮಿಶ್ರಣ ಕಾರ್ಯಕ್ರಮಕ್ಕೆ ರಫ್ತು ಮಾಡಿಕೊಳ್ಳಬೇಕೆಂದು ಅಮೆರಿಕ ಒತ್ತಡ ಹೇರುತ್ತಿದೆ; ಮೋದಿ ಅಮೆರಿಕದ ಒತ್ತಡಕ್ಕೆ ಮಣಿದಿದ್ದಾರೆʼ ಎಂದು ಆಮ್‌ ಆದ್ಮಿ ಪಕ್ಷ ದೂರಿದೆ. ಆರೋಪದಲ್ಲಿ ಹುರುಳಿದೆ.

ಲಾಭದಾಯಕ ಉದ್ಯಮ: ದೇಶದಲ್ಲಿ ಸಕ್ಕರೆ ಮತ್ತು ಜೈವಿಕ ಇಂಧನ ಉತ್ಪಾದಿಸುವ ಕಂಪನಿಗಳು ಎಥನಾಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ; ಬಲರಾಮ್‌ಪುರ ಚಿನ್ನಿ ಮಿಲ್ಸ್, ಬಜಾಜ್ ಹಿಂದೂಸ್ತಾನ್ ಶುಗರ್, ತ್ರಿವೇಣಿ ಇಂಜಿನಿಯರಿಂಗ್ ಆಂಡ್‌ ಇಂಡಸ್ಟ್ರೀಸ್, ಮುರುಗೇಶ್‌ ನಿರಾಣಿ ಅವರ ರೇಣುಕಾ ಶುಗರ್ಸ್ ಮತ್ತು ಇಐಡಿ ಪ್ಯಾರಿ (ಇಂಡಿಯಾ). ತೈಲ ಮಾರುಕಟ್ಟೆ ಕಂಪನಿಗಳಿಗೆ ಎಥನಾಲ್ ಪೂರೈಸುವ ಈ ಕಂಪನಿಗಳಿಗೆ ಹಣದ ಹೊಳೆ ಹರಿಯುತ್ತಿದೆ. ಉದಾಹರಣೆಗೆ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಪುತ್ರ ನಿಖಿಲ್‌ ಗಡ್ಕರಿ ಅವರ ಸಿಯಾನ್‌ ಆಗ್ರೋ, ಒಂದು ವರ್ಷದಲ್ಲಿ ಶೇ.300 ಹುಟ್ಟುವಳಿ ದಾಖಲಿಸಿದೆ!

ಈವರೆಗೆ ಎಥನಾಲ್‌ ಬಳಕೆಯಿಂದ ಯಾವುದೇ ಹಾನಿಯಿಲ್ಲ ಎನ್ನುತ್ತಿದ್ದ ಸಚಿವ ಗಡ್ಕರಿ, ಈಗ ಪ್ಲಾಸ್ಟಿಕ್‌ ಭಾಗಗಳ ಸವಕಳಿ ಹಾಗೂ ಮೈಲೇಜ್‌ ಕುಸಿತವನ್ನು ಒಪ್ಪಿಕೊಂಡಿದ್ದಾರೆ. ಏತನ್ಮಧ್ಯೆ ಮಧ್ಯಪ್ರದೇಶದ ರೇವಾ ಬಿಜೆಪಿ ಸಂಸದ ಜನಾರ್ದನ ಮಿಶ್ರಾ, ʻಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?ʼ ಎಂದು ಕೇಳಿದ್ದಾರೆ! ಎಥನಾಲ್‌ ಮಿಶ್ರಿತ ಪೆಟ್ರೋಲಿನ ಕ್ಯಾಲರಿಫಿಕ್‌ ಮೌಲ್ಯ(ಸಿವಿ,ಕ್ಯಾಲರಿ ಮೌಲ್ಯ) ಕಡಿಮೆಯಿದ್ದು, ಮೈಲೇಜ್‌ ಕಡಿಮೆ ಕೊಡುತ್ತಿರು ವುದರಿಂದ ಬೆಲೆ ಕಡಿಮೆ ಇರಬೇಕು; ಆದರೆ, ಬೆಲೆ ಬದಲಾಗಿಲ್ಲ. ಶೇ.20 ಎಥನಾಲ್‌ ಇಷ್ಟೆಲ್ಲ ಪ್ರಶ್ನೆಗೆ ಕಾರಣ ಆಗಿರುವಾಗ, ಶೇ.85 ಎಥನಾಲ್‌ ಬಳಕೆಯನ್ನು ಉತ್ತೇಜಿಸುತ್ತಿರುವ ಸರ್ಕಾರ ಸಮರ್ಪಕ ಸಮರ್ಥನೆ ಕೊಡಬೇಕು. ಪಳೆಯುಳಿಕೆ ಇಂಧನಗಳು ವಿನಾಶಕಾರಿ. ನಿಜ. ಆದರೆ, ಅದಕ್ಕೆ ಪರ್ಯಾಯಗಳು ಪರಿಸರಸ್ನೇಹಿ ಆಗಿರಬೇಕು. ಜೊತೆಗೆ, ಬ್ರೆಜಿಲ್‌ನಲ್ಲಿ ಇರುವಂತೆ ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಇರಬೇಕು; ಎಥನಾಲ್‌ರಹಿತ ಪೆಟ್ರೋಲ್‌ ಕೇಳಿದವರಿಗೆ ಅದು ಲಭ್ಯವಾಗಬೇಕು.

ಪ್ರಜಾಪ್ರಭುತ್ವ ಚೈತನ್ಯಶೀಲವಾಗಿ ಇರಬೇಕೆಂದರೆ ಸದಾ ಪ್ರಶ್ನಿಸುತ್ತಿರಬೇಕು. ಮತ್ತು, ಸರ್ಕಾರವನ್ನು ಉತ್ತರದಾಯಿ ಆಗಿಸಬೇಕು. ಈವರೆಗೆ, ಇಂಧನ ಮಿಶ್ರಣ ಕುರಿತ ಜನರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿಲ್ಲ. ಕಾರ್ಯನೀತಿ ಯನ್ನು ಮೇಲಿನಿಂದ ಹೇರುತ್ತಿದೆ. ಇದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಜನರು ರಸ್ತೆಗಿಳಿದಲ್ಲಿ ತಲೆದಂಡ ಆಗುತ್ತದೆ. ಜಿರಲೆಗಳ ಪ್ರತಿಭಟನೆಯ ಫಲಿತ ಕಣ್ಣ ಮುಂದಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top