ಪಂಜಾಬಿನ ಹಳೆಯ ಗಾಯಗಳನ್ನು ತೆರೆದ ʻಸಟ್ಲಜ್‌ʼ

ಜುಲೈ 5,2026ರಂದು ಜೀ5 ತನ್ನ ಒಟಿಟಿ ವೇದಿಕೆಯಿಂದ ʻಸಟ್ಲಜ್‌ʼ ಚಲನಚಿತ್ರವನ್ನು ತೆಗೆದುಹಾಕಿತು. ಸರ್ಕಾರ ಹೇಳಿದ್ದರಿಂದ ತೆಗೆಯಲಾಗಿದೆ ಎಂದು ಚಿತ್ರನಿರ್ಮಾಪಕರು ಹೇಳಿದರು. ಕೆಲವೊಮ್ಮೆ ಚಲನಚಿತ್ರಗಳು ಸುದ್ದಿಯಾಗುವುದಿಲ್ಲ; ಬದಲಾಗಿ, ಅವುಗಳ ಹಿಂದಿನ ರಾಜಕೀಯ, ಜನರ ಪೂರ್ವಗ್ರಹಗಳು ಮತ್ತು ಸಮಾಜದಲ್ಲಿನ ಗಾಯಗಳನ್ನು ಕೆದಕುವ ಮೂಲಕ ಸುದ್ದಿಯಾಗುತ್ತವೆ. ಸಿದ್ಧಾಂತ/ಹಿಂಸೆ/ನಾಯಕನನ್ನು ವೈಭವೀಕರಿಸುವ ಸಾವಿರಾರು ಸಿನೆಮಾಗಳು ಬಂದಿವೆ; ಮುಂದೆಯೂ ಬರಲಿವೆ. ಆದರೆ, ʻಸಟ್ಲಜ್‌ʼನಂಥ ಚಿತ್ರಗಳು ಸಾಮಾಜಿಕ/ರಾಜಕೀಯ ಕಾರಣದಿಂದಾಗಿ ಮುಖ್ಯವಾಗುತ್ತವೆ.

ಸಟ್ಲಜ್‌ ಪ್ರದರ್ಶನ ಜುಲೈ 3ರಿಂದ ಆರಂಭಗೊಂಡಿತು. ಹನಿ ಟ್ರೆಹಾನ್ ನಿರ್ದೇಶನ, ಆರ್‌ಎಸ್‌ವಿಪಿ ಮೂವೀಸ್ ಮತ್ತು ಮ್ಯಾಕ್‌ಗಫಿನ್ ಪಿಕ್ಚರ್ಸ್ ಮೂಲಕ ರೋನಿ ಶ್ರೂವಾಲಾ, ಅಭಿಷೇಕ್ ಚೌಬೆ ಮತ್ತು ಟ್ರೆಹಾನ್ ಜಂಟಿಯಾಗಿ ನಿರ್ಮಿಸಿರುವ ಸಟ್ಲಜ್‌, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿರುದ್ಧ ಆಂದೋಲನ ನಡೆಸಿದ್ದ ಶಿರೋಮಣಿ ಅಕಾಲಿ ದಳದ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ಜಸ್ವಂತ್‌ ಸಿಂಗ್‌ ಖಾಲ್ರಾ ಅವರ ಅಪಹರಣ ಮತ್ತು ಹತ್ಯೆ ಕುರಿತ ಸಿನೆಮಾ. ದಲ್ಜಿತ್‌ ದೊಸಾಂಜ್‌ ನಾಯಕ. ಮೊದಲಿನ ಹೆಸರು-ʻಪಂಜಾಬ್‌ 95ʼ. ಸಿಬಿಎಫ್‌ಸಿ(ಸೆನ್ಸಾರ್‌ ಮಂಡಳಿ) ಸಿನೆಮಾಕ್ಕೆ ಮೊದಲು 21 ಮತ್ತು ಮರುಪರಿಶೀಲನೆ ಬಳಿಕ 120 ಹೆಚ್ಚುವರಿ ಕಟಾವಿಗೆ ಸೂಚಿಸಿತು. ಹೆಸರು ಬದಲಿಸಬೇಕು ಎಂದು ಹೇಳಿತು! ಆದರೆ, ಸಿನಿಮಾಟೋಗ್ರಫಿ ಕಾಯಿದೆ ಪ್ರಕಾರ, ಸಿಬಿಎಫ್‌ಸಿ ಕೆಲಸ ಪ್ರಮಾಣಪತ್ರ ನೀಡುವುದು; ಚಲನಚಿತ್ರಗಳನ್ನು ಯು,ಯುಎ ಇಲ್ಲವೇ ಎ ಎಂದು ವರ್ಗೀಕರಿಸುವುದು. ಸೆನ್ಸಾರ್‌ ಅದರ ಕೆಲಸವಲ್ಲ. 3 ವರ್ಷಗಳ ಹೋರಾಟದ ಬಳಿಕ ಜಯ ಸಿಕ್ಕಿತು ಎಂದು ಟ್ರೆಹಾನ್‌ ಮತ್ತು ತಂಡ ಅಂದುಕೊಳ್ಳುತ್ತಿರುವಾಗಲೇ ಪ್ರದರ್ಶನ ಆರಂಭಗೊಂಡ 48 ಗಂಟೆಯೊಳಗೆ ಸಿನೆಮಾ ತೆರೆಯಿಂದ ಮರೆಯಾಯಿತು. ಸರ್ಕಾರ ಸಿನೆಮಾ ನಿರ್ಬಂಧಿಸಲು ರಾಷ್ಟ್ರೀಯ ಸುರಕ್ಷತೆ ನೆಪದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಬಳಸಿತು. ಆನಂತರ, ಪರಿಣತರ ಸಮಿತಿ ನಿಷೇಧವನ್ನು ಎತ್ತಿಹಿಡಿಯಿತು. ಎಲ್ಲೆಡೆ ನಕಲು ಪ್ರತಿಗಳು ಹಂಚಿಕೆಯಾದವು; ಗುರುದ್ವಾರಗಳು ಹಾಗೂ ಗ್ರಾಮಗಳ ಸಮುದಾಯ ಭವನದಲ್ಲಿ ಪ್ರದರ್ಶನ ಗೊಂಡು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನರನ್ನು ತಲುಪಿತು. ನ್ಯಾಯಾಂಗದ ಪರಿಶೀಲನೆ ಇಲ್ಲದೆ ನಿರ್ಬಂಧಿಸಿದ್ದು ಸಮಾಜದ ವಿವಿಧ ವರ್ಗಗಳ ಸಿಟ್ಟಿಗೆ ಕಾರಣವಾಯಿತು. ಚಿತ್ರದ ಮರುಬಿಡುಗಡೆಗೆ ಆಗ್ರಹಿಸಿ, ಜುಲೈ 9ರಂದು ಪಂಜಾಬ್-ಹರ್ಯಾಣ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಯಿತು.

ಒಟಿಟಿ ಚಾನೆಲ್‌ಗಳ ಬ್ಲಾಕಿಂಗ್: ಆನ್‌ಲೈನ್‌ ಸ್ಟ್ರೀಮಿಂಗ್‌ ವೇದಿಕೆಗಳಲ್ಲಿ ನೇರವಾಗಿ ಬಿಡುಗಡೆಯಾಗುವ ವಿಷಯಗಳಿಗೆ ಕೋರಿಯೋಗ್ರಾಫ್‌ ಕಾಯಿದೆ 1952ರ ಅನ್ವಯ ಪ್ರಮಾಣಪತ್ರ ಅಗತ್ಯವಿಲ್ಲ. ಒಟಿಟಿ ವೇದಿಕೆ(ಓವರ್‌ ದ ಟಾಪ್)ಗಳನ್ನು ಐಟಿ(ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೈತಿಕ ಸಂಹಿತೆ) ಕಾನೂ‌ನು 2021 ರಡಿ ನಿಯಂತ್ರಿಸಲಾಗುತ್ತದೆ; ಐಟಿ ಕಾಯಿದೆ 2000ರ ಸೆಕ್ಷನ್‌ 69ಎ ಅನ್ವಯ ದೇಶದ ಏಕತೆ ಮತ್ತು ಸಾರ್ವಭೌಮತ್ವ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ವಿಷಯಗಳು ಸುಲಭಗ್ರಾಹ್ಯ ಅಪರಾಧ ಆಗಲಿವೆ. ಸುಪ್ರೀಂ ಕೋರ್ಟ್‌ ಶ್ರೇಯಾ ಸಿಂಘಾಲ್‌ ವಿ/ಎಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸೆಕ್ಷನ್‌ 69 ಎ ಅನ್ನು ಎತ್ತಿ ಹಿಡಿದಿದ್ದು, ಶಾಸನಬದ್ಧ ಚೌಕಟ್ಟೊಂದನ್ನು ಸ್ಥಾಪಿಸಿದೆ. ಅದರ ಪ್ರಕಾರ, ಇಂಥ ನಿರ್ಬಂಧ ಶಾಸನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕು; ವಿಷಯ ಕಾಯಿದೆಯನ್ನು ಹೇಗೆ ಉಲ್ಲಂಘಿಸುತ್ತದೆ ಎಂಬ ವಿವರಣೆ, ಪ್ರಕಾಶಕರ ಅಹವಾಲು ಕೇಳಿಕೆಗೆ ಅವಕಾಶ ಮತ್ತು ಇದಕ್ಕಾಗಿ ನೇಮಿಸಿದ ಸಮಿತಿಯಿಂದ ಪುನರಾವಲೋಕನ ನಡೆಸಬೇಕಾಗುತ್ತದೆ. ಆದರೆ, ವಾಸ್ತವದಲ್ಲಿ ಇದ್ಯಾವುದೂ ನಡೆಯುವುದಿಲ್ಲ. ಸೆನ್ಸಾರ್‌ ಮಂಡಳಿ ಸಿನೆಮಾಗಳನ್ನು ರಾಜಕೀಯ ಮಸೂರದಿಂದ ಪರಿಶೀಲಿಸುತ್ತದೆ; ಈ ಪರಿಶೀಲನೆಯು ಆಳುವ ಪಕ್ಷದ ಸಿದ್ಧಾಂತ-ನೀತಿಯನ್ನು ಆಧರಿಸಿರುತ್ತದೆ. ಹೀಗಾಗಿ, ಆಡಳಿತ ಪಕ್ಷದ ಸೈದ್ದಾಂತಿಕ ನಿಲುವನ್ನು ಬಿಂಬಿಸುವ ಚಿತ್ರಗಳಿಗೆ ರಾಜಾಶ್ರಯ ದೊರೆಯುತ್ತದೆ; ತೆರಿಗೆರಹಿತದ ಸೌಲಭ್ಯವೂ ಲಭಿಸುತ್ತದೆ. ಮೆಲು ದನಿ, ಭಿನ್ನ ಧ್ವನಿಯ, ಕಲಾತ್ಮಕ ಚಿತ್ರಗಳು ಕತ್ತರಿ ಪ್ರಯೋಗಕ್ಕೆ ಸಿಲುಕುತ್ತವೆ.

ʻಆಪರೇಷನ್ ಬ್ಲೂ ಸ್ಟಾರ್’ ಗಾಯ: ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ ಜೂನ್ 1984ರಲ್ಲಿ ನಡೆದ ʻಆಪರೇಷನ್ ಬ್ಲೂ ಸ್ಟಾರ್’, ಪಂಜಾಬಿನ ಮಾನಸಿಕತೆ ಮೇಲೆ ಮಾಡಿದ ಗಾಯ ಇಂದಿಗೂ ಗುಣವಾಗಿಲ್ಲ. ಅಮೃತ ಸರದ ಸ್ವರ್ಣ ಮಂದಿರದಲ್ಲಿ ತಳವೂರಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಸಶಸ್ತ್ರ ಸಿಖ್ ಪ್ರತ್ಯೇಕತಾವಾದಿಗಳನ್ನು ಹೊರಹಾಕಲು ಜೂನ್ 1 ರಿಂದ 10 ರವರೆಗೆ ಕಾರ್ಯಾಚರಣೆ ನಡೆಯಿತು; ಭಿಂದ್ರನ್‌ವಾಲೆ, 80ಕ್ಕೂ ಹೆಚ್ಚು ಸೈನಿಕರು, ನೂರಾರು ಉಗ್ರಗಾಮಿಗಳು ಮತ್ತು ಯಾತ್ರಿಗಳು ಮೃತಪಟ್ಟರು. ಸಿಖ್ ಧರ್ಮದ ಅತ್ಯುನ್ನತ ಅಧಿಕಾರ ಕೇಂದ್ರಗಳಲ್ಲಿ ಒಂದಾದ ‌ʻಅಖಾಲ್ ತಖ್ತ್’ಗೆ ಹಾನಿಯಾಯಿತು. ಆದರೆ, ಪ್ರತ್ಯೇಕತಾವಾದ ಕೊನೆಯಾಗಲಿಲ್ಲ. ಉಗ್ರಗಾಮಿಗಳು ಹಿಂದುಗಳು ಹಾಗೂ ಸಿಕ್ಖ್‌ ಉದಾರವಾದಿಗಳ ಹತ್ಯೆಗೈದರು. ಅಧಿಕೃತ ದಾಖಲೆಗಳ ಪ್ರಕಾರ, 11,000ಕ್ಕೂ ಅಧಿಕ ನಾಗರಿಕರು ಹಾಗೂ 1700 ಪೊಲೀಸ್‌ ಸಿಬ್ಬಂದಿ ಗುಂಡಿಗೆ ಬಲಿಯಾದರು. ಪ್ರತಿಯಾಗಿ, ರಾಜ್ಯ ಪ್ರಾಯೋಜಿತ ಹಿಂಸಾಚಾರ ದಲ್ಲಿ ಅಕ್ರಮ ಬಂಧನ/ಹತ್ಯೆ ನಡೆಯಿತು. ರಾಜ್ಯದಲ್ಲಿ ಉಗ್ರವಾದಿಗಳ ವಿರುದ್ಧ ಹೋರಾಟವನ್ನು ಮುನ್ನಡೆಸಿದವರು ಡಿಜಿಪಿ ಕೆ.ಪಿ.ಎಸ್.‌ಗಿಲ್‌; 1988 ರಿಂದ 1990 ಮತ್ತು 1991ರಿಂದ ನಿವೃತ್ತರಾದ 1995 ರವರೆಗೆ ಗಿಲ್‌ ಮುಖ್ಯಸ್ಥರಾಗಿದ್ದರು.

ಖಾಲ್ರಾ ಪ್ರತ್ಯೇತಕಾವಾದವನ್ನು ಬೆಂಬಲಿಸಿದವರಲ್ಲ; ಆದರೆ, ಆಪರೇಷನ್‌ ಬ್ಲೂಸ್ಟಾರ್‌ ನಂತರ ನಡೆದ ಅಪಹರಣ ಹಾಗೂ ಅಕ್ರಮ ಶವದಹನಗಳ ಬಗ್ಗೆ ಆತಂಕಿತರಾಗಿದ್ದರು. ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಆಗಿದೆ ಮತ್ತು ಸಾವಿರಾರು ನಿರಪರಾಧಿಗಳನ್ನು ಕೊಲ್ಲಲಾಗಿದೆ ಎಂದು ದೂರಿದ್ದರು. ಇಂಥ 25,000 ಪ್ರಕರಣಗಳನ್ನು ಪತ್ತೆ ಹಚ್ಚಿದರು. ಇದರಿಂದ ಪಂಜಾಬ್‌ ಪೊಲೀಸರ ಕೆಂಗಣ್ಣಿಗೆ ಗುರಿಯಾದರು. ಅವರು ಸಂಗ್ರಹಿಸಿದ ಸಾಕ್ಷ್ಯಗಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸುಪ್ರೀಂ ಕೋರ್ಟಿನಲ್ಲೂ ಪರಿಗಣಿಸಲ್ಪಟ್ಟವು. ಸುತ್ತಮುತ್ತ ಹಿಂಸೆ ವ್ಯಾಪಿಸಿದ್ದರೂ, ಛಲ ಬಿಡದೆ ಕಾಲದ ಕರೆಗೆ ಓಗೊಟ್ಟರು. ಸೆಪ್ಟೆಂಬರ್‌ 1995ರಲ್ಲಿ ಅವರನ್ನು ಅಪಹರಿಸಿ, ಹತ್ಯೆ ಮಾಡಲಾಯಿತು. ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು. ಅವರು ಅಮೃತಸರದಲ್ಲಿ ಅಜ್ಞಾತ ಶವಗಳ ದಹನ ಕುರಿತ ಟಿಪ್ಪಣಿ ಮತ್ತಿತರ ದಾಖಲೆಗಳು ತನಿಖೆಯಲ್ಲಿ ನೆರವಾದವು. 2011ರಲ್ಲಿ ಕೆಳ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌, ಐವರು ಪೊಲೀಸರಿಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿತು. ತೀರ್ಪಿನಲ್ಲಿ ಪೊಲೀಸರ ಅತಿರೇಕಗಳು ಮತ್ತು ನ್ಯಾಯದ ಬುಡಮೇಲುಗೊಳಿಸುವ ಪ್ರವೃತ್ತಿಯನ್ನು ಖಂಡಿಸಿತು. ತೀರ್ಪು ಖಾಲ್ರಾ ಅವರ ನಿಲುವನ್ನು ಸಮರ್ಥಿಸಿತು ಮತ್ತು ಪಂಜಾಬಿನ ಜನರ ಆಕ್ರೋಶಕ್ಕೆ ಸ್ವಲ್ಪಮಟ್ಟಿಗೆ ತಂಪೆರೆಯಿತು.

ಶರತ್ತುಗಳ ಉಲ್ಲಂಘನೆ: ಚಲನಚಿತ್ರ-ಧಾರವಾಹಿ/ಸಾಕ್ಷ್ಯಚಿತ್ರವೊಂದನ್ನು ಒಟಿಟಿಯಿಂದ ʻತೆಗೆದುಹಾಕಲುʼ ಕಾರಣವೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕೇ? ಅಶ್ಲೀಲ ಮತ್ತು ಘನತೆಗೆ ಕುಂದು ತರುವ ವಿಷಯ ಪ್ರಸಾರ ಮಾಡಿದ 25 ಒಟಿಟಿ ವೇದಿಕೆ (ಉದಾಹರಣೆಗೆ, MoodXVIP, Koyal PlayPro, Digi Movieplex, Feel, Jugnu ಇತ್ಯಾದಿ)ಗಳು ಹಾಗೂ ಹಲವಾರು ವೆಬ್ ಸರಣಿಗಳನ್ನು 2026ರಲ್ಲಿ ನಿರ್ಬಂಧಿಸಲಾಗಿದೆ. ಸರ್ಕಾರ ಬ್ಲಾಕಿಂಗ್‌ ಆದೇಶಗಳನ್ನು ಬಹಿರಂಗಪಡಿಸದೆ ಇರಲು 16ನೇ ನಿಯಮದಲ್ಲಿರುವ ಗೋಪ್ಯತೆ ರಕ್ಷಣೆ ಅಂಶವನ್ನು ಬಳಸಿಕೊಂಡಿದೆ. ಇದು ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿಧಿಸಿದ ಶರತ್ತುಗಳನ್ನು ಉಲ್ಲಂಘಿಸುತ್ತದೆ. ಇದರಿಂದಾಗಿ ಕೆ.ಎಸ್.‌ ಪುಟ್ಟಸ್ವಾಮಿ ವಿ/ಎಸ್‌ ಭಾರತ ಸರ್ಕಾರ(2017) ಮತ್ತು ಅನುರಾಧಾ ಭಾಸಿನ್‌ ವಿ/ಎಸ್‌ ಭಾರತ ಸರ್ಕಾರ (2020) ಪ್ರಕರಣಗಳಲ್ಲಿ ಹೇಳಿದ ʻಸಪ್ರಮಾಣತೆ(ಪ್ರಪೋರ್ಷನಾಲಿಟಿ)ʼಯ ಪ್ರಶ್ನೆಯನ್ನು ಅವಲೋಕಿಸಲು ನ್ಯಾಯಾಲಯ ಗಳಿಗೆ ಸಾಧ್ಯವಾಗುವುದಿಲ್ಲ ಮತ್ತು ನಿರ್ಮಾಪಕರು ನಿರ್ಬಂಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಆಗುವುದಿಲ್ಲ. ಬ್ಲಾಕಿಂಗ್‌ ಆದೇಶಗಳು ವಿಧಿ 19(1)(ಎ) ಮತ್ತು 19(1)(ಬಿ) ಕೊಡಮಾಡಿದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ಯಾವುದೇ ವೃತ್ತಿ, ವ್ಯಾಪಾರ ಇಲ್ಲವೇ ವಹಿವಾಟು ನಡೆಸುವ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಇದನ್ನು ವಿಧಿ 226ರಡಿ ಪ್ರಶ್ನಿಸಬಹುದು. ಆದರೆ, ಇದಕ್ಕೆ ಅಪಾರ ಹಣ-ಶ್ರಮ, ಸಮಯ ಖರ್ಚಾಗುತ್ತದೆ. ನಿರಂಕುಶಾಧಿಕಾರವನ್ನು ಎದುರು ಹಾಕಿಕೊಳ್ಳುವ ಛಾತಿಯಿಲ್ಲದ ನಿರ್ಮಾಪಕರು ನಿರ್ಬಂಧ ಆದೇಶಕ್ಕೆ ಮಣಿಯುತ್ತಾರೆ.

ಇಂದಿಗೂ ಉಳಿದ ಪ್ರಶ್ನೆಗಳು: ಪಂಜಾಬಿನಲ್ಲಿ 2027ರಲ್ಲಿ ಚುನಾವಣೆ ನಡೆಯಲಿದೆ. ಸಟ್ಲಜ್‌ ಮತ್ತು ಅದರ ಬಿಡುಗಡೆಯ ಹಿಂದಿನ ರಾಜಕೀಯ ಗಾಯಕ್ಕೆ ಮುಲಾಮು ಹಚ್ಚುವ ಬದಲು ಹಳೆಯ ಗಾಯವನ್ನು ಕೆರೆದಂತೆ ಆಗಿದೆ. ಖಾಲ್ರಾ ಎತ್ತಿದ್ದ ಪ್ರಶ್ನೆಗಳು ಇಂದಿಗೂ ಜೀವಂತವಾಗಿವೆ; ಪಂಜಾಬ್‌ನ್ನು ಬದಿಗೊತ್ತಲಾಗಿದೆ, ಪಂಜಾ ಗಳಿಗೆ ಅನ್ಯಾಯವಾಗಿದೆ ಮತ್ತು ಇದೆಲ್ಲವನ್ನೂ ಬೇಕೆಂದೇ ಮಾಡಲಾಗಿದೆ ಎಂಬ ಭಾವನೆ ಜನರಲ್ಲಿದೆ. ರಾಜ್ಯದ ವಾಸ್ತವ ಸಮಸ್ಯೆಗಳಾದ ನಿರು ಗ, ಮಾದಕವಸ್ತು ಬಳಕೆ, ಭೂಮಿಯ ಫಲವತ್ತತೆ ಕುಸಿತ-ಚೌಳು ಹಿಡಿಯುವಿಕೆ ಮತ್ತು ಕೃಷಿ ಸಂಕಷ್ಟಗಳನ್ನು ಭೂತಕಾಲದ ಸಂಘರ್ಷವೊಂದು ಮಸುಕು ಮಾಡಬಾರದು. ಆಪರೇಷನ್ ಬ್ಲೂ ಸ್ಟಾರ್ ಬಳಿಕ ನಡೆದ ಅಪಹರಣ-ಹತ್ಯೆಗಳು ಪಂಜಾಬಿನ ಸಾವಿರಾರು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ಸಿನಿಮಾಕ್ಕೆ ಒಟಿಟಿಯಲ್ಲಿ ನಿರ್ಬಂಧ ಹಾಗೂ ಚಿತ್ರಮಂದಿರದಲ್ಲಿ ಬಿಡುಗಡೆಗೆ ಅವಕಾಶ ನೀಡದೆ ಸರ್ಕಾರ ಜನತೆಗೆ ದ್ರೋಹ ಬಗೆದಿದೆ. ಆದರೆ, ಎನ್‌ಡಿಎ ಸರ್ಕಾರವನ್ನು ಹೊಗಳುವ ಪ್ರೊಪಗಾಂಡಾ ಸಿನಿಮಾಗಳು ಹಿಂದಿ ಮತ್ತಿತರ ಭಾಷೆಯಲ್ಲಿ ಸರಣಿಯೋಪಾದಿಯಲ್ಲಿ ಬಂದಿವೆ. ಉದಾಹರಣೆಗೆ, ʻದ ಕೇರಳ ಸ್ಟೋರಿ 1 ಮತ್ತು 2ʼ ರಲ್ಲಿ ಕೇರಳದ ವಿರುದ್ಧ ಅಪಪ್ರಚಾರ ಮತ್ತು ದ್ವೇಷ ಭಾಷಣಗಳಿದ್ದವು. ಹೀಗಿ ದ್ದರೂ, ಚಿತ್ರಕ್ಕೆ ಸೆನ್ಸಾರ್‌ ಕತ್ತರಿ ಬೀಳಲಿಲ್ಲ. ಪ್ರತಿಯಾಗಿ, ಬಿಜೆಪಿ ಸರ್ಕಾರ ಇರುವ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಯಿತು. ʻದ ಕಾಶ್ಮೀರ್‌ ಫೈಲ್ಸ್‌ʼ, ʻದ ಬೆಂಗಾಳ್‌ ಫೈಲ್ಸ್‌ʼ ಈ ಸಾಲಿಗೆ ಸೇರಿದ ಇನ್ನೆರಡು ಚಿತ್ರಗಳು. ʻದುರಂ ಧರ್‌ʼ ಚಿತ್ರವನ್ನು ಆಡಳಿತ ಪಕ್ಷ ಸಂಭ್ರಮಿಸಿತು. ಆದರೆ, ಸಿಬಿಎಫ್‌ಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲ್ಪಟ್ಟ, ಪೊಲೀಸ್ ಹಿಂಸೆ, ಜಾತಿ ತಾರತಮ್ಯ ಮತ್ತು ಸ್ತ್ರೀ‌ ದ್ವೇಷ ಮನಸ್ಥಿತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ʻಸಂತೋಷ್‌ʼ ಸಿನಿಮಾಕ್ಕೆ ಅನುಮತಿ ನಿರಾಕರಿಸಿತು. ಮೋಹನ್‌ಲಾಲ್‌ ನಾಯಕನಾಗಿ ನಟಿಸಿದ್ದ ಎಲ್‌ 2 ಎಂಪುರಾನ್‌ ಕೂಡ ಕಿಡಿ ಹೊತ್ತಿಸಿತು. 2002 ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದ 15 ನಿಮಿಷಗಳ ದೃಶ್ಯದಿಂದ ಚಿತ್ರ ಆರಂಭಗೊಳ್ಳುತ್ತದೆ. ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ ಚಿತ್ರ ಮಾರ್ಚ್‌ 27, 2025ರಂದು ಬಿಡುಗಡೆಯಾಯಿತು. ಚಿತ್ರದ ನಿರ್ಮಾಪಕಿ ಸುಪ್ರಿಯಾ ಮೆನನ್(ಪೃಥ್ವಿರಾಜ್‌ ಅವರ ಪತ್ನಿ) ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಗೋಪಾಲಕೃಷ್ಣನ್‌, ʻನಗರ ನಕ್ಸಲ್ʼ‌ ಎಂದು ದೂಷಿಸಿದರು. ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ ಚಿತ್ರದ ವಿರುದ್ಧ ಮೂರು ಲೇಖನ ಪ್ರಕಟಿಸಿತು. ಮೋಹನ್‌ಲಾಲ್‌ ಒತ್ತಡಕ್ಕೆ ಸಿಲುಕಿ ಕ್ಷಮೆ ಕೋರಿದರು; 2.08 ನಿಮಿಷ ಕಾಲಾವಧಿಯ 20 ದೃಶ್ಯಗಳನ್ನು ಸ್ವಯಂ ಸೆನ್ಸಾರ್‌ ಮಾಡಲಾಯಿತು. ಪೃಥ್ವಿರಾಜ್‌ ಅವರಿಗೆ ನೋಟಿಸ್‌ ನೀಡಲಾಯಿತು; ವಿದೇಶಿ ವಿನಿಮಯ ಕಾಯಿದೆ(ಫೆಮಾ) ಉಲ್ಲಂಘನೆ ಮಾಡಿದ್ದಾರೆ ಎಂದು ಚಿತ್ರದ ಇನ್ನೊಬ್ಬ ನಿರ್ಮಾಪಕ ಗೋಕುಲಂ ಗೋಪಾಲನ್‌ ಅವರ ಚಿಟ್‌ಫಂಡ್‌ ಕಂಪನಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿತು! ಇಂಥ ಹಲವು ಉದಾಹರಣೆಗಳಿವೆ.

ವೀಕ್ಷಕರಿಗೆ ಚಿತ್ರವೊಂದನ್ನು ಒಪ್ಪುವ/ತಿರಸ್ಕರಿಸುವ ಹಕ್ಕು ಇದೆ. ಆದರೆ, ತನಗೆ ಪಥ್ಯವಾಗದ ನರೇಟಿವ್‌ಗಳನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವುದರ ಮೇಲೆ ಪ್ರಜಾಪ್ರಭುತ್ವದ ಪ್ರಬುದ್ಧತೆ ನಿಂತಿದೆ. ದೇಶದಲ್ಲಿ ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಉಸಿರು ಕಟ್ಟಿಸಲಾಗಿದೆ. ಸಿನೆಮಾ, ಚರಿತ್ರೆ ಮತ್ತು ಕಲೆ-ಸಾಹಿತ್ಯವನ್ನು ರಾಜಕೀಯ ಪ್ರಾಬಲ್ಯ ಸಾಧಿಸಲು ಮತ್ತು ಸಮುದಾಯಗಳನ್ನು ʻಅನ್ಯʼವಾಗಿಸಲು ಬಳಸುವುದು ಹೆಚ್ಚಿದೆ. ಸೃಜನಶೀಲ ಕೃತಿಯೊಂದು ಸರ್ಕಾರದ ನಿಲುವಿಗೆ ಅನುಗುಣವಾಗಿಲ್ಲದಿದ್ದರೆ, ಸೃಷ್ಟಿಕರ್ತರು ಅದನ್ನು ತಾವೇ ಸ್ವಯಂ ಸೆನ್ಸಾರ್‌ ಮಾಡುವಂತೆ ಒತ್ತಡ ಹೇರಲಾಗುತ್ತದೆ; ಇಲ್ಲವಾದರೆ, ಅಧಿಕಾರಸ್ಥರ ಆಕ್ರೋಶ ಎದುರಿಸಬೇಕಾಗುತ್ತದೆ. ಸೆನ್ಸಾರ್‌ ಕತ್ತರಿ ಮತ್ತು ನಿಷೇಧ ಆಳುವ ಪಕ್ಷದ ವಿರುದ್ಧ ಇರುವ ಚಿತ್ರಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದರೆ ತಪ್ಪಾಗಲಾರದು. ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಪೊಲೀಸರು ಮಕ್ಕಳನ್ನು ಹಣಿದರೂ, ಸೆಲೆಬ್ರಿಟಿಗಳು ಉಸಿರೆತ್ತದೆ ಇರಲು ಮುಖ್ಯ ಕಾರಣ- ಸರ್ಕಾರವನ್ನು ಎದುರು ಹಾಕಿಕೊಂಡರೆ ತೊಂದರೆಯಾಗಲಿದೆ ಎಂಬ ಭೀತಿ; ಆಮೀರ್‌ ಖಾನ್‌ ʻಥ್ರೀ ಈಡಿಯಟ್ಸ್‌ʼ ಗೆ ಸೋನಂ ವಾಂಗ್ಚುಕ್‌ ಪ್ರೇರಣೆ ಎಂಬುದನ್ನೇ ನಿರಾಕರಿಸಿದರು. ಅಕ್ಷಯ್‌ ಕುಮಾರ್‌, ಅನುಪಮ್‌ ಖೇರ್‌, ಸುನೀಲ್‌ ಶೆಟ್ಟಿ ಮತ್ತಿತರ ಹಣ-ಪ್ರಸಿದ್ಧಿ ಗಳಿಕೆಯನ್ನೇ ಬದುಕಾಗಿಸಿಕೊಂಡ ʻಸ್ಟ್ಯಾಂಡ್‌ ಅಪ್‌ʼ ವಿದೂಷಕರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ, ಸ್ವಾತಂತ್ರ್ಯ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ , ಸೃಜನಶೀಲತೆಗೆ ಕಡಿವಾಣ, ಮಾನವ ಹಕ್ಕುಗಳ ರಕ್ಷಣೆ, ಸೆನ್ಸಾರ್‌ಶಿಪ್‌ ಹಾಗೂ ರಾಜ್ಯ ಪ್ರಾಯೋಜಿತ ಸಂಕಥನಗಳಿಗೆ ಸಂಬಂಧಿಸಿದಂತೆ ʻಸಟ್ಲಜ್‌ʼ ಎತ್ತುವ ಪ್ರಶ್ನೆಗಳು ಬಹಳ ಮುಖ್ಯವಾದವು; ಅವನ್ನು ತಳ್ಳಿ ಹಾಕಬಾರದು. ಸೆನ್ಸಾರ್‌ಶಿಪ್‌, ಅಭಿವ್ಯಕ್ತಿ ಹತ್ತಿಕ್ಕುವಿಕೆ ಹಾಗೂ ರಾಜ್ಯ ರೂಪಿಸುವ ತನ್ನ ಮೂಗಿನ ನೇರದ ಚಾರಿತ್ರಿಕ ಸಂಕಥನಗಳನ್ನು ಜನ ತಿರಸ್ಕರಿಸಬೇಕಿದೆ.
………………………………….

Journalist,Translator,avid bibliophile

Leave a Reply

Your email address will not be published. Required fields are marked *

Back To Top