ಕೋವಿಡ್ ನಂತರ ನಡೆದ ಉದ್ಯೋಗ ನಷ್ಟ ಪರ್ವದಲ್ಲಿ ಕೆಲಸ ಕಳೆದುಕೊಂಡವರು ಹಳ್ಳಿಗೆ ವಾಪಸಾಗಿ, ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ನಿದರ್ಶನಗಳು ವರದಿಯಾಗಿವೆ. ದೇಶದಲ್ಲಿ ಶೇ.86ರಷ್ಟು ಸಣ್ಣ ಮತ್ತು ಅಂಚಿನ ಕೃಷಿಕರಿದ್ದು, ಇವರು 2 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಪ್ರತಿವರ್ಷ 8ರಿಂದ 15 ದಶಲಕ್ಷ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. 25 ವರ್ಷಕ್ಕಿಂತ ಕೆಳಗಿನ ಶೇ.40ರಷ್ಟು ಪದವೀದರರು ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರಿಗೆ ನೆರವಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ತಿರುಚಲಾಗಿದೆ. ಇಂಥ ಸನ್ನಿವೇಶದಲ್ಲಿ ʻಮರಳಿ ಕೃಷಿಗೆʼ ಸಂಭ್ರಮಿಸುವ ಸಂಗತಿಯೇ?
ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ(ಎನ್‌ಎಸ್‌ಒ) 2017ರಿಂದ ಪ್ರಕಟಿಸುತ್ತಿರುವ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ(ಪಿಎಫ್‌ಎಲ್‌ಎಸ್) ಪ್ರಕಾರ, 2017-18ರಲ್ಲಿ ಒಟ್ಟು ಉದ್ಯೋಗದಲ್ಲಿ ಕೃಷಿ ಕ್ಷೇತ್ರ ಶೇ.44.14 ಪಾಲು ಹೊಂದಿತ್ತು. 2018-19ರಲ್ಲಿ ಶೇ.42.49ಕ್ಕೆ ಕುಸಿದು, ಬಳಿಕ 2023-24ರಲ್ಲಿ ಶೇ.46ಕ್ಕೆ ಹೆಚ್ಚಿತು. 2019-2020 ಮತ್ತು 2023-24ರ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿಸಿದ ವೃತ್ತಿಗೆ ವಾಪಸಾದವರು/ಪ್ರವೇಶಿಸಿದವರ ಸಂಖ್ಯೆ 80 ದಶಲಕ್ಷ ಮುಟ್ಟಿತು. ಪಿಎಫ್‌ಎಲ್‌ಎಸ್ 2025 ವರದಿ ಪ್ರಕಾರ, ಒಟ್ಟು ಉದ್ಯೋಗದಲ್ಲಿ ಕೃಷಿ ಪಾಲು ಶೇ.43 ಇದೆ. ಆದರೆ, ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯೋಗಿಗಳ ಹೆಚ್ಚಳ ಆಶಾದಾಯಕವೇ? ಅಲ್ಲ.
2019ರ ಕೋವಿಡ್ ಅಲೆ ಬಳಿಕ ದೇಶದ ಉದ್ಯೋಗ ವಿನ್ಯಾಸ ಸ್ಥಿತ್ಯಂತರಗೊಂಡಿದೆ. ಸಾಂಪ್ರದಾಯಿಕ ಅರ್ಥಶಾಸ್ತ್ರದ ಪ್ರಕಾರ, ದೇಶ ಆರ್ಥಿಕವಾಗಿ ಅಭಿವೃದ್ಧಿಗೊಂಡಂತೆ ಕೃಷಿಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕಡಿಮೆ ಆಗಬೇಕು; ಸೇವಾ ಕ್ಷೇತ್ರ ಮತ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳುವವರು ಹೆಚ್ಚಬೇಕು. ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಈ ಪ್ರವೃತ್ತಿ ಕಂಡುಬಂದಿದೆ. ಆದರೆ, ನಮ್ಮಲ್ಲಿ ಪರಿಸ್ಥಿತಿ ತಿರುವುಮುರುವು ಆಗಿದೆ. ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ಇದು.
ಯುವಜನರು ಕೃಷಿಗೆ ವಾಪಸಾಗಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಘಟಿಸದ ಪ್ರಸಂಗ. ವಸಾಹತುಶಾಹಿ ಆಡಳಿತದಲ್ಲಿ ಸಾಂಪ್ರದಾಯಿಕ ಉದ್ಯಮಗಳ ಕುಸಿತದಿಂದ ಜನರು ಬದುಕಿ ಉಳಿಯಲು ಕೃಷಿಗೆ ಮರಳಿದ್ದರು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಮತ್ತು ಮಾನವ ಅಭಿವೃದ್ಧಿ ಸಂಸ್ಥೆ(ಐಎಚ್‌ಡಿ)ಯ ʻಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024ʼ ಈ ಪ್ರವೃತ್ತಿಯನ್ನು ರಾಚನಿಕ ಸ್ಥಿತ್ಯಂತರದ ಪರಾವರ್ತ ನ(ರಿವರ್ಸಲ್ ಆಫ್ ಸ್ಟ್ರಕ್ಚರಲ್ ಟ್ರಾನ್ಸ್‌ಫರ್ಮೇಷನ್) ಎಂದು ಹೇಳುತ್ತದೆ. ರಾಚನಿಕ ಸ್ಥಿತ್ಯಂತರದ ಸಮಯದಲ್ಲಿ ಸಂಪನ್ಮೂಲಗಳು(ಉದ್ಯೋಗ ಮತ್ತು ಬಂಡವಾಳ) ಕಡಿಮೆ ಉತ್ಪಾದಕ ಕ್ಷೇತ್ರಗಳಿಂದ ಹೆಚ್ಚು ಉತ್ಪಾದಕ ಕ್ಷೇತ್ರ (ಉತ್ಪಾದನೆ, ಕೈಗಾರಿಕೆ, ಸೇವಾಕ್ಷೇತ್ರ ಇತ್ಯಾದಿ)ಗಳೆಡೆಗೆ ಹರಿಯುತ್ತದೆ. ವರದಿ ಪ್ರಕಾರ, 2000-2019ರ ಅವಧಿಯಲ್ಲಿ ದೇಶ ನಿಧಾನಗತಿಯ ಮತ್ತು ಸ್ಥಿರವಾದ ರಾಚನಿಕ ಸ್ಥಿತ್ಯಂತರಕ್ಕೆ ಸಾಕ್ಷಿಯಾಯಿತು. ಇದರಿಂದ ಉದ್ಯೋಗ ದಲ್ಲಿ ಕೃಷಿ ಕ್ಷೇತ್ರದ ಪಾಲು ಕುಸಿತವಲ್ಲದೆ, ಕೃಷಿ ಕ್ಷೇತ್ರದಲ್ಲಿ ಯುವಜನರ ಪಾಲು ಶೇ.27ರಷ್ಟು ಕಡಿಮೆಯಾಯಿತು. ಜೊತೆಗೆ, ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ(ಜಿವಿಎ, ಗ್ರಾಸ್ ವ್ಯಾಲ್ಯೂ ಅಡಿಷನ್)ದಲ್ಲಿ ಕೃಷಿ ಕ್ಷೇತ್ರದ ಪಾಲು ಕಡಿಮೆಯಾಯಿತು. ಇದರಿಂದ ಹೆಚ್ಚು ವೇತನ ನೀಡುವ ಸೇವಾ ಕ್ಷೇತ್ರ ಮತ್ತು ನಿರ್ಮಾಣ ಮತ್ತಿತರ ಕೃಷಿಯೇತರ ಕ್ಷೇತ್ರಗಳು ಮುನ್ನೆಲೆಗೆ ಬಂದವು. ಸೇವಾಕ್ಷೇತ್ರ ಶೇ.14.2 ಮತ್ತು ಉದ್ಯಮ ಕ್ಷೇತ್ರ ಶೇ.12.8 ಬೆಳವಣಿಗೆ ಕಂಡಿತು. ಆದರೆ, 2019ರ ಬಳಿಕ ಪರಿಸ್ಥಿತಿ ಬದಲಾಗಿ ಯುವಜನರು ಕೃಷಿಗೆ ಮರಳಲಾರಂಭಿಸಿದರು. 2021ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಯುವಜನರ ಪಾಲು ಶೇ.27 ಇತ್ತು. ಶಿಕ್ಷಣ ಮತ್ತು ತರಬೇತಿ ಕೊರತೆಯಿಂದ ಜನ ಸಂಖ್ಯಾ ಲಾಭ (ಡೆಮಾಗ್ರಫಿಕ್ ಡಿವಿಡೆಂಡ್)ದಿಂದ ಲಭ್ಯವಾಗಬೇಕಿದ್ದ ಆರ್ಥಿಕ ಬೆಳವಣಿಗೆ ಕೈ ತಪ್ಪಿತು. 2019-2022ರ ಅವಧಿಯಲ್ಲಿ ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಸ್ಥಗಿತಗೊಂಡಿತು ಮತ್ತು ಕೃಷಿ ಕ್ಷೇತ್ರದಲ್ಲಿ ಯುವಜನರ ಸಂಖ್ಯೆ ಹೆಚ್ಚತೊಡಗಿತು. ಹೆಚ್ಚು ಉದ್ಯೋಗ ಸೃಷ್ಟಿಸುವ ವ್ಯಾಪಾರ, ಹೋಟೆಲ್/ರೆಸ್ಟುರಾಗಳು, ಸಾರ್ವಜನಿಕ ಆಡಳಿತ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಡಿಮೆಯಾಯಿತು. 2011-12 ಮತ್ತು 2023-24ರ ಅವಧಿಯಲ್ಲಿ ಕರ್ನಾಟಕ, ದೆಹಲಿ, ಕೇರಳ, ಒಡಿಷಾ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕುಸಿಯಿತು. ದೇಶದ ಅತ್ಯಂತ ಜನಭರಿತ ರಾಜ್ಯ ಉತ್ತರಪ್ರದೇಶ(ಜನಸಂಖ್ಯೆ 257 ದಶಲಕ್ಷ)ದಲ್ಲಿ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗ ಶೇ.12.8ರಿಂದ ಶೇ.8.5ಕ್ಕೆ ಕುಸಿದರೆ, ಕೃಷಿ ಕ್ಷೇತ್ರದಲ್ಲಿ ಶೇ.48.8ರಿಂದ ಶೇ.55.9ಕ್ಕೆ ಹೆಚ್ಚಿತು. ಕರ್ನಾಟಕದಲ್ಲಿ ಕೃಷಿ ಉದ್ಯೋಗ ಶೇ.8.1 ಹೆಚ್ಚಳ, ಬಿಹಾರದಲ್ಲಿ ಶೇ.9.1 ಮತ್ತು ದೇಶದಲ್ಲಿ ಅತಿ ಹೆಚ್ಚು ತಲಾದಾಯ ಹಾಗೂ 36 ದಶಲಕ್ಷ ಜನಸಂಖ್ಯೆ ಇರುವ ಕೇರಳದಲ್ಲಿ ಶೇ.7.1 ಹೆಚ್ಚಳ ಆಯಿತು.
ಕೋವಿಡ್ ಒಂದೇ ಕಾರಣವಲ್ಲ: ಇದಕ್ಕೆ ಕೋವಿಡ್ ಮಾತ್ರ ಕಾರಣವಲ್ಲ; 2016ರಲ್ಲಿ ನೋಟು ಅಮಾನ್ಯೀಕರಣದಿಂದ ಕಾರ್ಮಿಕ ಮಾರುಕಟ್ಟೆಯಲ್ಲಿ ಒತ್ತಡ ಆರಂಭವಾಯಿತು. 2017ರಲ್ಲಿ ಪರಿಚಯಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ಅನೌಪಚಾರಿಕ ಕ್ಷೇತ್ರದ ಮೇಲೆ ಒತ್ತಡ ಹೆಚ್ಚಿತು. ಕೋವಿಡ್ ಕೃಷಿ ಹೊರತುಪಡಿಸಿ, ಬೇರೆಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಯಿತು. ಕೋವಿಡ್ 2 ಅಲೆಗಳ ಬಳಿಕ ಆರ್ಥಿಕ ಚಟು ವಟಿಕೆ ಆರಂಭಗೊಂಡು, ನಗರ-ಹಳ್ಳಿಗಳು ತೆರೆದುಕೊಂಡರೂ ಕೃಷಿ ಮೇಲಿನ ಅವಲಂಬನೆ ಕಡಿಮೆಯಾಗಲಿಲ್ಲ. ಈ ಪ್ರವೃತ್ತಿ ಕೃಷಿ ಆರ್ಥಿಕತೆಯ ಪುನರುಜ್ಜೀವನವಲ್ಲ; ಬದಲಾಗಿ, ಕೃಷಿಯೇತರ ಕ್ಷೇತ್ರಗಳಲ್ಲಿ ಸ್ಥಿರ ಮತ್ತು ಉತ್ಪಾದಕ ಉದ್ಯೋಗಗಳನ್ನು ಸೃಷ್ಟಿಸುವಲ್ಲಿನ ವೈಫಲ್ಯದ ಸೂಚನೆ. ಹೆಚ್ಚು ಜನ ಕೃಷಿಯಲ್ಲಿ ತೊಡಗಿಸಿಕೊಂಡ ಮಾತ್ರಕ್ಕೆ ಕೃಷಿಕರ ಆದಾಯ ಹೆಚ್ಚಿದೆ ಎಂದು ಭಾವಿಸಬೇಕಿಲ್ಲ; ಇವರಲ್ಲಿ ಹೆಚ್ಚಿನವರು ಸ್ವಂತ ಜಮೀನಿನಲ್ಲಿ ಕೆಲಸ ಮಾಡುವ ವೇತನರಹಿತ ಕಾರ್ಮಿಕರು. ವೇತನ ನೀಡುವ ಉದ್ಯೋಗ ಲಭ್ಯವಿಲ್ಲದ್ದರಿಂದ, ಕುಟುಂಬದ ಎಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಲ್ಲದೆ, ಪುರುಷರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದ ರಿಂದ, ಈಹಿಂದೆ ವೇತನರಹಿತ ಗೃಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರು ಹೊಲ-ಗದ್ದೆ-ತೋಟದಲ್ಲೂ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಅವರ ಆದಾಯ ಹೆಚ್ಚುವುದಿಲ್ಲ; ಬದಲಿಗೆ ಕೆಲಸದ ಹೊರೆ ಹೆಚ್ಚು ತ್ತದೆ. ದೇಶದಲ್ಲಿ ತಾತ್ಕಾಲಿಕ ಇಲ್ಲವೇ ಋತುಮಾನ ಆಧರಿತ ಆಂತರಿಕ ವಲಸೆ 600 ದಶಲಕ್ಷ ಇದ್ದು, ಇದು ದೇಶದ ಜನಸಂಖ್ಯೆಯ ಶೇ.42.
2017-18 ಮತ್ತು 2023-24ರ ಪಿಎಲ್‌ಎಫ್‌ಎಸ್ ದತ್ತಾಂಶದ ಪ್ರಕಾರ, ಈ ಅವಧಿಯಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚಿನವರು ಕೃಷಿಯಲ್ಲಿ ಹಾಗೂ 1/5ರಷ್ಟು ಮಂದಿ ಸೇವೆ-ಉತ್ಪಾದನೆ ಕ್ಷೇತ್ರದಲ್ಲಿ ಪಾಲ್ಗೊಂಡರು. ಇ ದು ಕುಟುಂಬದ ಜೀವನಮಟ್ಟ ಹೆಚ್ಚಳಕ್ಕಾಗಿ ನಡೆದ ಪ್ರಕ್ರಿಯೆ. 2002-03, 2012-13 ಮತ್ತು 2018-19ರಲ್ಲಿ 18 ರಾಜ್ಯಗಳಲ್ಲಿ ನಡೆದ ಕೃಷಿ ಕುಟುಂಬಗಳ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆಯ ದತ್ತಾಂಶ ಆಧರಿಸಿ ಭಾರ ತೀಯ ಕೃಷಿ ಅನುಸಂಧಾನ ಪರಿಷತ್(ಐಸಿಎಆರ್)ನ ಸಂಶೋಧಕರು ನಡೆಸಿದ ವಿಶ್ಲೇಷಣೆ ಪ್ರಕಾರ, ಕೃಷಿ ಕುಟುಂಬಗಳು ಆದಾಯ ಕಡಿಮೆ ಇರುವುದರಿಂದ ತಮ್ಮ ಆದಾಯ ಮೂಲಗಳನ್ನು ವೈವಿಧ್ಯೀಕರಣಗೊಳಿಸಿಕೊಂಡಿ ವೆಯೇ ಹೊರತು ಸಂಪತ್ತಿನ ಸೃಷ್ಟಿಗಾಗಿಯಲ್ಲ; ಇದು ಸಂಕಷ್ಟದಿಂದ ಪಾರಾಗಲು ನಡೆದ ವೈವಿಧ್ಯೀಕರಣ. ಅಧಿಕ ಹಿಡುವಳಿ, ನೀರಾವರಿ ಸೌಲಭ್ಯ ಮತ್ತು ಉತ್ತಮ ಮೂಲಸೌಕರ್ಯಗಳು ಇಂಥ ವೈವಿಧ್ಯೀಕರಣವನ್ನು ಉತ್ತೇ ಜಿಸುತ್ತವೆ. ಅಂದರೆ, ಗ್ರಾಮೀಣ ಪ್ರದೇಶದಲ್ಲಿ ಜೀವನಾಧಾರವನ್ನು ಸುಸ್ಥಿರಗೊಳಿಸುವಲ್ಲಿ ಕೃಷಿಯೇತರ ಉದ್ಯೋಗ ಮುಖ್ಯ ಪಾತ್ರ ವಹಿಸುತ್ತದೆ. ಇದು ದೇಶದ ಅಭಿವೃದ್ಧಿ ಕಥನದ ದ್ವಂದ್ವಕ್ಕೆ ಹಿಡಿದ ಕನ್ನಡಿ; ಕೃಷಿ ಅತಿ ದೊಡ್ಡ ಉದ್ಯೋಗದಾತ ಆಗಿರಬಾರದು ಎಂದು ಸಾರ್ವಜನಿಕ ಕಾರ್ಯನೀತಿ ಹೇಳುತ್ತದೆ. ಆದರೆ, ಅಗತ್ಯವಿರುವಷ್ಟು ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ. ಒಟ್ಟು ರಾಷ್ಟ್ರೀಯ ಹೊರಸುರಿಯಲ್ಲಿ 1/5ರಷ್ಟನ್ನು ಸೃಷ್ಟಿಸುತ್ತಿ ರುವ ಕ್ಷೇತ್ರದಲ್ಲಿ ಶೇ.45ರಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ; ಒಟ್ಟು ದೇಶಿ ಉತ್ಪನ್ನ(ಜಿಡಿಪಿ)ಕ್ಕೆ ಕೃಷಿ ಕ್ಷೇತ್ರದ ಪಾಲು ಶೇ.16. ಕೇಂದ್ರ ಸರ್ಕಾರ 2016ರಲ್ಲಿ ರೈತರ ಆದಾಯವನ್ನು 2022ರೊಳಗೆ ದುಪ್ಪಟ್ಟು ಮಾಡುವುದಾಗಿ ಘೋಷಿಸಿತು. ಆದರೆ, ಆದಾಯ ದುಪ್ಪಟ್ಟು ಆಯಿತೇ? ಇಲ್ಲ. ರೈತರಿಗೆ ವಾರ್ಷಿಕ 6,000 ರೂ. ನೇರ ವರ್ಗಾವಣೆ (ಡಿಬಿಟಿ)ಯಂಥ ಕಾರ್ಯತಂತ್ರದಿಂದ ಜನರನ್ನು ಮರುಳು ಮಾಡಲು ಮುಂದಾಯಿತು.
ಆರ್ಥಿಕತೆಯ ವೈಫಲ್ಯ: 2019-20ರ ಬಳಿಕ 80 ದಶಲಕ್ಷ ಮಂದಿ ಕೃಷಿಗೆ ವಾಪಸಾಗಿದ್ದಾರೆ/ಸೇರ್ಪಡೆಯಾಗಿದ್ದಾರೆ ಎನ್ನುವುದು ಕೃಷಿ ಕ್ಷೇತ್ರದ ಯಶಸ್ಸು ಎಂದು ಭಾವಿಸಬಾರದು. ಕೃಷಿ ಕೋವಿಡ್ ಸಮಯದಲ್ಲಿ ಕೆಲಸ ಕಳೆದು ಕೊಂಡವರನ್ನು ಹಸಿವಿನಿಂದ ರಕ್ಷಿಸಿತು; ತನ್ನ ಸಾಮಾಜಿಕ ಕರ್ತವ್ಯವನ್ನು ನಿರ್ವಹಿಸಿತು. ಜನಸಂಖ್ಯೆ ಹೆಚ್ಚಿದಂತೆ ಕೃಷಿ ಭೂಮಿ ಹೆಚ್ಚುವುದಿಲ್ಲ; ಬದಲಿಗೆ, ಹಿಡುವಳಿ ಕಡಿಮೆಯಾಗುತ್ತದೆ ಮತ್ತು ಸಂಪನ್ಮೂಲವನ್ನು ಆಧರಿಸಿದವರ ಸಂಖ್ಯೆ ಹೆಚ್ಚಳದಿಂದ ಆದಾಯ ವಿಭಜನೆಯಾಗುತ್ತದೆ. ಲಭ್ಯ ಭೂಮಿಯಲ್ಲಿ ನೀರಾವರಿ ಸೌಲಭ್ಯ ಹಾಗೂ ಸಂಪನ್ಮೂಲಗಳ ಕ್ಷಮತೆಯ ಬಳಕೆಯಿಂದ ಉತ್ಪಾದಕತೆ ಹೆಚ್ಚಿಸಬೇಕಿದೆ. ಕಾರ್ಮಿಕರು ಸಹಜವಾಗಿ ಹೆಚ್ಚು ಆದಾಯದ ಕಡೆಗೆ ಚಲಿಸುತ್ತಾರೆ; ಅವರು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದಾರೆ ಎಂದರೆ ಉಳಿದ ಕ್ಷೇತ್ರಗಳು(ಸೇವೆ, ಉದ್ಯಮ, ತಯಾರಿಕೆ ಇತ್ಯಾದಿ) ವಿಫಲವಾಗಿವೆ ಎಂದಾಗಲಿದೆ. ಹೆಚ್ಚು ವೇತನದ ಉದ್ಯೋಗ ಮತ್ತು ಅವಕಾಶಗಳನ್ನು ತೊರೆದು, ಕೃಷಿಗೆ ಬರುವವರು ಅತಿ ಕಡಿಮೆ. ಅಂಥ ಕೆಲವು ಆದರ್ಶ ಮಾದರಿಗಳು ಇರಬಹುದು.
ಅತಿ ಹೆಚ್ಚು ಉದ್ಯೋಗಳನ್ನು ಸೃಷ್ಟಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ(ಎಂಎಸ್‌ಎಂಇ) ಉದ್ಯಮಗಳು ಈ ಪತನವನ್ನು ತಡೆಯಬಲ್ಲವು. ಆದರೆ, ಈ ಕ್ಷೇತ್ರ ಇತ್ತೀಚೆಗೆ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಇದರ ಪರಿಣಾಮ ನಗರಗಳಿಗೆ ಸೀಮಿತವಾಗಿಲ್ಲ; ಎಂಎಸ್‌ಎಂಇಗಳ ಉದ್ಯೋಗಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರು. ಇದರಿಂದ ಗ್ರಾಮಗಳಲ್ಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಉದ್ಯೋಗ ಕೊರತೆಯಿಂದ ವೇತ ನದ ಮೇಲೆ ಪರಿಣಾಮ ಸಹಜ. ಗ್ರಾಮೀಣ ವೇತನ ಹಲವು ವರ್ಷಗಳಿಂದ ಸ್ಥಗಿತವಾಗಿದೆ. ಇದಕ್ಕೆ ಬೇಡಿಕೆಯನ್ನು ಮೀರಿದ ಪೂರೈಕೆ ಕಾರಣ. ನಿರುದ್ಯೋಗ ದರ ಅಂದಾಜು ಶೇ.5.1ರಿಂದ ಶೇ.5.5 ಇದೆ(ಗ್ರಾಮೀಣ ನಿರು ದ್ಯೋಗ ದರ ಶೇ. 4.5 ಮತ್ತು ನಗರ ಪ್ರದೇಶದಲ್ಲಿ ಶೇ.6.6). 25 ವರ್ಷಕ್ಕಿಂತ ಕೆಳಗಿನ ಶೇ.40ರಷ್ಟು ಪದವೀದರರು ನಿರುದ್ಯೋಗಿಗಳು(ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ, 2026). ಪದವಿ ಮುಗಿಸಿದ ಒಂದು ವರ್ಷದೊಳಗೆ ಶೇ.7ರಷ್ಟು ಮಂದಿಗೆ ಮಾತ್ರ ಉದ್ಯೋಗ ಲಭ್ಯವಾಗುತ್ತದೆ. ಶಿಕ್ಷಣ, ಉದ್ಯೋಗ ಹಾಗೂ ತರಬೇತಿಯಿಲ್ಲದ ಯುವಜನರ ಸಂಖ್ಯೆ 9.2 ಕೋಟಿ.
ಖಾತ್ರಿ ಯೋಜನೆಗೆ ಧಕ್ಕೆ: ಇಷ್ಟು ಸಾಲದು ಎಂಬಂತೆ ಕೇಂದ್ರ ಸರ್ಕಾರ ವರ್ಷದಲ್ಲಿ 100 ದಿನ ಖಾತ್ರಿ ಉದ್ಯೋಗ ನೀಡುತ್ತಿದ್ದ, ಬರ ಮತ್ತಿತರ ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಗ್ರಾಮೀಣ-ನಗರ ಪ್ರದೇಶದ ಬಡವರಿಗೆ ನೆರವಾಗುತ್ತಿದ್ದ ಎಂ ನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಕಾರ್ಯಕ್ರಮದ ಉಸಿರು ಕಟ್ಟಿಸಲು ಮುಂದಾಗಿದೆ. ಹೆಸರನ್ನು ವಿಬಿ-ಜಿ ರಾಮ್ ಜಿ(ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಿಕ ಮಿಷನ್ ಗ್ರಾಮೀಣ) ಎಂದು ಬದಲಿಸಿ, ಜುಲೈ 1,2026ರಿಂದ ಜಾರಿಗೊಳಿಸಿದೆ. ವಾರ್ಷಿಕ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ; ದೈನಂದಿನ ಕೂಲಿ 382 ರೂ. ನಿಗದಿಪಡಿಸಲಾಗಿದೆ. ಆದರೆ, ಈ ಮೊದಲಿನ ಕೇಂದ್ರ-ರಾಜ್ಯಗಳ ಪಾಲು 90:10ನ್ನು 60:40ಕ್ಕೆ ಬದಲಿಸಲಾಗಿದೆ. ಇದರಿಂದ ರಾಜ್ಯಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದ್ದು, ಈಗಾಗಲೇ ಸಂಪನ್ಮೂಲಗಳ ಕೊರತೆಯಿಂದ ಬಳಸುತ್ತಿರುವ ರಾಜ್ಯ ಗಳು ನರೇಗಾ ಅನುಷ್ಠಾನಕ್ಕೆ ಉದಾಸೀನ ತೋರಿಸುವ ಸಾಧ್ಯತೆ ಇದೆ. ಕಾಲಕ್ರಮೇಣ ಈ ಕಾರ್ಯಕ್ರಮ ಇತಿಹಾಸದ ಪುಟ ಸೇರಿ, ಬಡವರ ಪಾಲಿನ ಇನ್ನೊಂದು ಯೋಜನೆ ಧರಾಶಾಯಿ ಆಗಬಹುದು.
ಕೃಷಿ ಒಂದು ಆದರ್ಶವಲ್ಲ; ಬದುಕಿನ ಮಾರ್ಗ. ಅದನ್ನು ಲಾಭದಾಯಕವಾಗಿಸಲು ಸಾಧ್ಯವಿರುವುದನ್ನೆಲ್ಲ ಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಉದ್ಯೋಗಗಳು ಕುಸಿದಿವೆ ಮತ್ತು ಗ್ರಾಮೀಣ/ನಗರ ಪ್ರದೇಶ ಗಳಲ್ಲಿ ತಾತ್ಕಾಲಿಕ/ಗುತ್ತಿಗೆ ಆಧಾರದ ಕೆಲಸದ ವೇತನದಲ್ಲಿ ಗಮನಾರ್ಹ ಹೆಚ್ಚಳ ಆಗಿಲ್ಲ. ನಿಶ್ಚಿತ ವೇತನ ಪಡೆಯುತ್ತಿರುವ ಕುಟುಂಬದ ಸದಸ್ಯರೊಬ್ಬರು ಬೆಂಬಲಿಸಿದರೆ, ಕೃಷಿ ಜೀವನಾಧಾರ ಆಗಲಿದೆ. ಕೃಷಿಯೊಟ್ಟಿಗೆ ಕೃಷಿಯೇತರ ಉಪಕಸುಬು/ವೃತ್ತಿಯಾದ ಹೈನುಗಾರಿಕೆ, ಕೋಳಿ/ಕುರಿ ಸಾಕಣೆ, ನಿರ್ಮಾಣ ಕಾಮಗಾರಿ, ಸಣ್ಣ ವ್ಯಾಪಾರ ಇತ್ಯಾದಿ ಮಾಡಬೇಕಾಗುತ್ತದೆ. ಕೃಷಿ ನಿಶ್ಚಿತವಿಲ್ಲದ ಆದಾಯ ಮೂಲ. ಕೃಷಿ ವೆಚ್ಚ ಹೆಚ್ಚಳದಿಂದ ಗ್ರಾಮೀಣ ಸಮುದಾಯ ಸಾಲದ ಸುಳಿಗೆ ಸಿಲುಕಿದೆ. ಸೂಕ್ಷ್ಮ ಸಾಲ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಸಾರ್ವಜನಿಕ/ಸಹಕಾರಿ/ ಖಾಸಗಿ ಬ್ಯಾಂಕ್ ಮತ್ತು ಲೇವಾದೇವಿದಾರರಿಂದ ಸಾಲ ಪಡೆಯುವಿಕೆ ಹೆಚ್ಚಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2024ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 10,546 ಮಂದಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಇದರಲ್ಲಿ ರೈತರ ಪಾಲು 4,633. ಮಹಾರಾಷ್ಟ್ರ ಮೊದಲ ಮತ್ತು ರಾಜ್ಯ 2ನೇ ಸ್ಥಾನ ದಲ್ಲಿದೆ.
ಕೃಷಿಯೇತರ ಉದ್ಯೋಗ ಸೃಷ್ಟಿ ಒಂದು ಸವಾಲು. ಇದಕ್ಕಾಗಿ ಉದ್ಯಮ ಅದರಲ್ಲೂ ಹೆಚ್ಚು ಕಾರ್ಮಿಕರ ಅಗತ್ಯವಿರುವ ಎಂಎಸ್‌ಎಂಇ ಕ್ಷೇತ್ರವನ್ನು ಬಲಪಡಿಸಬೇಕಿದೆ. ಹೆಚ್ಚು ಮಂದಿ ಕೃಷಿಯನ್ನು ಆಧರಿಸಿರುವುದು ಆರೋಗ್ಯಕರ ಆರ್ಥಿಕತೆಯ ಲಕ್ಷಣವಲ್ಲ. ದೇಶದ ಅರ್ಧಕ್ಕೂ ಹೆಚ್ಚು ಜನ ಆರ್ಥಿಕ ಸಂದಿಗ್ಧದಲ್ಲಿರುವಾಗ, ʻವಿಶ್ವ ಗುರುʼ, ʼ5 ಟ್ರಿಲ್ಲಿಯನ್ ಡಾಲರ್ ಆರ್ಥಿಕತೆʼ ಎಂದು ಬೊಗಳೆ ಬಿಡುವುದು ಅರ್ಥಹೀನ.

