ಭ್ರಷ್ಟಾಚಾರದ ಅನಿರ್ವಾಯತೆ-ಶಿವ್‌ ವಿಶ್ವನಾಥನ್‌ ಅನುವಾದ:ಶಶಿಧರ ಡೋಂಗ್ರೆ

ಭ್ರಷ್ಟಾಚಾರದ ಅನಿವಾರ್ಯತೆ
ಮೂಲ: ಶಿವ್ ವಿಶ್ವನಾಥನ್
ಅನುವಾದ: ಶಶಿಧರ ಡೋಂಗ್ರೆ

ಭ್ರಷ್ಟಾಚಾರದ ಬಗೆಗಿನ ನನ್ನ ನಿಲುವು ವೆಬರ್ ನಂತರದಲ್ಲಿ ಚಾಲ್ತಿಯಲ್ಲಿರುವ `ಆಧುನಿಕತೆ ಎಂದರೆ ಭ್ರಷ್ಟಾಚಾರವಿಲ್ಲದಿರುವುದು’ ಎಂಬ ಕಲ್ಪನೆಗೆ ಸವಾಲು ಎಸೆಯುವಂಥದ್ದು. ಆಧುನಿಕತೆಯ ಬಗೆಗಿನ ಪಾಶ್ಚಿಮಾತ್ಯ ಸಿದ್ಧಾಂತದ ಪ್ರಕಾರ, ಆಧುನಿಕ ಮತ್ತು ಹಿಂದಿನ ಕಾಲಗಳು ಒಂದಕ್ಕೆ ಇನ್ನೊಂದು ಹೆಣೆದುಕೊಂಡಿರದೆ, ಪ್ರತ್ಯೇಕವಾಗಿರುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಹೊಸತು ಮತ್ತು ಹಳೆಯದೆರಡೂ ಒಟ್ಟಿಗೆ ಇದ್ದು ಒಂದಕ್ಕೊAದು ಬೆಸೆದುಕೊಂಡಿರುತ್ತದೆ ಮತ್ತು ಭ್ರಷ್ಟಾಚಾರವೆಂಬುದು ಈ ಹೆಣಿಗೆಯ ಒಂದು ಸೂಚಿಯಾಗಿದೆ. ಪಶ್ಚಿಮ ಕೂಡ ಸಂಪೂರ್ಣವಾಗಿ ಆಧುನಿಕವಾಗಿಲ್ಲ ಎಂದು ಫ್ರೆಂಚ್ ಸಮಾಜಶಾಸ್ತçಜ್ಞ ಬ್ರೂನೊ ಲಾಟೂರ್ ಹೇಳಿದ್ದಾರೆ. ಭ್ರಷ್ಟಾಚಾರ ನಡೆಯುವ ಆ ಗಳಿಗೆಯಲ್ಲಿ ಇದು ಸಂಪೂರ್ಣ ಸತ್ಯವಾಗಿರಲಿದೆ. ಆಧುನಿಕತೆಯನ್ನು ಪ್ರತಿನಿಧಿಸು ವ ರೂಪಕಗಳು ಭ್ರಷ್ಟಾಚಾರವನ್ನು ವಿರೋಧಿಸುವ ಬದಲು, ಆ ರೂಪಕಗಳ ಚರ್ಯೆಯೇ ಬದಲಾಗಿ ಬಿಡುತ್ತದೆ. ಭ್ರಷ್ಟಾಚಾರ ಎನ್ನುವುದು – ಬೌದ್ಧಿಕತೆಯ ಸಾಕಾರ ರೂಪ, ಎರಡು ಭಾಷೆ ಗಳನ್ನು ಒಟ್ಟೊಟ್ಟಿಗೇ ಬಳಸುವ ಕಸುಬುದಾರಿಕೆ, ಅನುವಾದದ ಕ್ರಿಯೆ, ಹಳೆಯ ಮತ್ತು ಹೊಸದರ ನಡುವೆ ಅಥವಾ ಶಕ್ತಿ ಕೇಂದ್ರಗಳು ಮತ್ತು ಅದರ ಗ್ರಾಹಕರ ನಡುವೆ ಮಧ್ಯಸ್ತಿಕೆ ವಹಿಸಬಲ್ಲ ದಲ್ಲಾಳಿ.
ಭ್ರಷ್ಟಾಚಾರದ ಮೂಲಕ ಆಧುನಿಕತೆಯನ್ನು ವರ್ಣಿಸಲು ಹೊಸ ಪದ ಸಮೂಹವೇ ಬೇಕಾಗುತ್ತದೆ. ಕುಟುಂಬ, ಸಾರ್ವಜನಿಕ ಮತ್ತು ದೇಶವನ್ನು ಪ್ರತ್ಯೇಕವಾಗಿ ನೋಡುವ ವೆಬರ್ ಸಿದ್ಧಾಂತ ಇಲ್ಲಿ ಸಲ್ಲುವುದಿಲ್ಲ. ಭ್ರಷ್ಟಾಚಾರವು ರಾಜ್ಯವನ್ನು ಹಾಲು ನೀಡುವ ಭಾರಿ ಹಸುವಾಗಿ ಪರಿವರ್ತಿಸುವ ಮೂಲಕ, ಕುಟುಂಬಕ್ಕೂ ವಿಸ್ತರಿಸುತ್ತದೆ. ಫಿಲಿಪೀನ್ಸ್ನ ಮಾರ್ಕೋಸ್, ಈಜಿಪ್ಟಿನ ಮುಬಾರಕ್ ಸೇರಿದಂತೆ, ಪ್ರತಾಪ್ ಸಿಂಗ್ ಕೈರಾನ್ ಅಥವಾ ರಾಜೀವ್ ಗಾಂಧಿ ಅಥವಾ ಯಡಿಯೂರಪ್ಪ ಇವರೆಲ್ಲರದೂ ಇದೇ ಕಥೆ. ಇವರೆಲ್ಲರಿಗೂ ಭ್ರಷ್ಟಾಚಾರ ಎನ್ನುವುದು ದೇಶವೆನ್ನುವ ಹಣ್ಣಿನಿಂದ ತಮಗೆ ಬೇಕೆಂದಾಗ, ತಮ್ಮ ಕುಟುಂಬಕ್ಕೆ ಬೇಕಾಗುವಷ್ಟು ರಸ ತೆಗೆಯುವ ಒಂದು ಸೌಲಭ್ಯ.
ಭ್ರಷ್ಟಾಚಾರ ಕೆಟ್ಟದು ಮತ್ತು ಒಂದು ಸಮೂಹಕ್ಕೆ ಅಂಟಿಕೊAಡಿರುವ ಕಾಯಿಲೆ ಎಂದು ಆಧುನಿಕತೆ ಅದನ್ನು ಗುರಿಯಾಗಿಸಿಕೊಂಡಿದೆ. ವೆಬರ್ ಅವರ ಪ್ರಕಾರ, ಭ್ರಷ್ಟಾಚಾರವಿರುವ ಸಮಾಜವು ತನ್ನ ಸಾಧನೆಗಳಿಗಿಂತ, ಸಾಧನೆಯನ್ನು ಸಾಧ್ಯವಾಗಿಸಿದ ದಾರಿಗಳಿಗೆ ಹೆಚ್ಚು ಬೆಲೆ ಕೊಡುತ್ತದೆ. ಅದು ಪಿತೃಪ್ರಧಾನವಾಗಿದ್ದು, ಜಮೀನ್ದಾರಿ ನಡವಳಿಕೆಯನ್ನು ತನ್ನೊಳಗೆ ಇರಿಸಿಕೊಂಡು, ಭ್ರಷ್ಟಾ ಚಾರವನ್ನು ಇನ್ನೊಂದು ಬಗೆಯ ತೆರಿಗೆ ಎಂದು ಭಾವಿಸುತ್ತದೆ.
ಸುಧಾರಣೆಯ ಸಮಯದಲ್ಲಿ ಭ್ರಷ್ಟಾಚಾರವು ತನ್ನ ನಿಜ ಸ್ವರೂಪವನ್ನು ತೋರಿಸುತ್ತದೆ. ಪಾಶ್ಚಿಮಾತ್ಯ ಚಿಂತನೆಯು ಭ್ರಷ್ಟಾಚಾರವನ್ನು ಒಂದು ವೈರಸ್, ಜೀವಕ್ಕೆ ಅಂಟಿಕೊAಡಿರುವ ರೋಗ ಅಥವಾ ಒಂದು ಸಾಂಕ್ರಾಮಿಕ ಕಾಯಿಲೆಯೆಂದು ಬಣ್ಣಿಸಿ, ಅದನ್ನು ಬೌದ್ಧಿಕವಾಗಿ ಎದುರಿಸಬೇಕೆಂದು ಹೇಳುತ್ತದೆ. ಇದು ದೇಹಕ್ಕೆ ತಗುಲಿದ ರೋಗವು ಸಮಾಜವನ್ನೂ, ರಾಜ್ಯ ವ್ಯವಸ್ಥೆಯನ್ನೂ ಮುಟ್ಟುತ್ತದೆ ಎಂಬ ಕ್ರಿಶ್ಚಿಯನ್ ಸಿದ್ಧಾಂತದ ಮುಂದುವರಿದ ತಾತ್ವಿಕತೆಯಿಂದ ಹುಟ್ಟಿದೆ. ಈ ನಿಟ್ಟಿನಿಂದ ನೋಡಿದಾಗ, ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೂ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೂ ಒಂದೇ ಛಾಯೆ ಇರುವುದು ಕಂಡುಬರುತ್ತದೆ. ವಿಶ್ವ ಬ್ಯಾಂಕ್ ಮತ್ತು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್‌ನAಥ ಸಂಸ್ಥೆಗಳ ಪ್ರಣಾಳಿಕೆಗಳಲ್ಲಿ ಈ ರಣಭೇರಿ ಧ್ವನಿಸುವುದನ್ನು ನೋಡಬಹುದು.

ಆದರೆ, ಭಾರತದ ರಾಜ್ಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹರಡುವ ರೀತಿ ಬೇರೆಯೇ ಆಗಿದೆ ಎನ್ನುವುದು ನನ್ನ ವಾದ. ಭ್ರಷ್ಟಾಚಾರವು ಮೂರು ತರಹದ ಸೇವೆಗಳನ್ನು ನೀಡುತ್ತದೆ. ಮೊದಲನೆಯ ದಾಗಿ, ಹೊಸ ಜಗತ್ತಿನಲ್ಲಿ ವೇಗವಾಗಿ ಹರಡುತ್ತಿದೆ ಎನ್ನಲಾದ ಜ್ಞಾನಮೂಲದ ಅರ್ಥವ್ಯವಸ್ಥೆಯ ಮೊದಲ ಬೇರುಗಳು ಇಲ್ಲಿವೆ. ವ್ಯವಸ್ಥೆಯೊಳಗೆ ಪ್ರವೇಶ ನೀಡುವ ಅಥವಾ ಅದನ್ನು ಅನುಭವಿಸುವುದಕ್ಕೆ ಪರವಾನಗಿ ಕೊಡುವ, ಜೀವ ಕೊಡುವ ಅಥವಾ ಜೀವ ತೆಗೆಯುವ ಶಕ್ತಿ ಭ್ರಷ್ಟಾಚಾರಕ್ಕಿದೆ. ಎರಡನೆಯದಾಗಿ, ಅದು ಒಂದು ವಿಧದ ಧಾರ್ಮಿಕ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ದಲ್ಲಾಳಿ ಮತ್ತು ಕಾರಕೂನ ಇಬ್ಬರೂ ಸೇರಿ, ವ್ಯವಸ್ಥೆಯ ಪೌರೋಹಿತ್ಯ ವಹಿಸುತ್ತಾರೆ. ಮೂರನೆಯದಾಗಿ, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ದಲ್ಲಾಳಿಯು ಆಡಳಿತ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಅರ್ಥೈಸುವ, ಸರಳಗೊಳಿಸುವ ಕೆಲಸ ಮಾಡುತ್ತಾನೆ. ಕಾನೂನುಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಜಮೀನ್ದಾರೀ ಪದ್ಧತಿಯನ್ನು ಇನ್ನೊಂದು ರೀತಿಯಲ್ಲಿ ಮುನ್ನೆಲೆಗೆ ತರುತ್ತಾನೆ. ಭ್ರಷ್ಟಾಚಾರವೆನ್ನುವುದು ಶಕ್ತಿಯನ್ನು ತನ್ನೊಳಗೆ ಆವಿರ್ಭವಿಸಿಕೊಂಡು, ವ್ಯವಸ್ಥೆ ಭಾರಿ ಶಕ್ತಿಯುತ ಎನ್ನುವ ಭ್ರಮೆಯನ್ನು ಸೃಷ್ಟಿಸುತ್ತದೆ. ಇದು ದಲ್ಲಾಳಿಗಳ ಸಾಮರ್ಥ್ಯವನ್ನು ಅವಲಂಬಿ ಸಿರುತ್ತದೆ. ನಿಮಗೆ ಯಾರು ಗೊತ್ತಿದ್ದಾರೆ ಎನ್ನುವುದರ ಮೇಲೆ ವ್ಯವಸ್ಥೆಯ ಒಳಗೆ ಹೇಗೆ ಹೋಗಬಹುದು ಎಂಬುದು ನಿರ್ಧಾರವಾಗುತ್ತದೆ. ಪಂಜಾಬಿ ಮತ್ತು ಇಂಗ್ಲಿಷ್ ಬೆರಕೆಯ ವಾಕ್ಯ “ಕೊಯೀ ಅಪ್ರೋಚ್ ಹೇ, ಕೊಯಿ ಕಾಂಟ್ಯಾಕ್ಟ್ ಹೇ?’ ಪ್ರವೇಶದ ಕಟ್ಟಳೆಗಳನ್ನೂ, ಅದರ ಟೆಕ್ನಿಕ್‌ಗಳನ್ನೂ ಒಟ್ಟಿಗೆ ಧ್ವನಿಸುತ್ತದೆ. ಇದರಿಂದ ಶಕ್ತಿ ಕೇಂದ್ರಗಳು ಅಮೂರ್ತವಾಗಿರುವ ಬದಲು ಮೂರ್ತವಾಗುತ್ತಾ ಹೋಗಿ, ಹತ್ತಿರ ಬರುವಂತಾಗುತ್ತದೆ.

ಶಕ್ತಿ ಕೇಂದ್ರಗಳ ಸುತ್ತ ಇದ್ದು ಅವುಗಳನ್ನು ನಿಯಂತ್ರಿಸುವ ಪಿಎ (ಪರ್ಸನಲ್ ಅಸಿಸ್ಟೆಂಟ್) ಭಾರತದ ಜಾನಪದದಲ್ಲಿ ಒಂದು ದೊಡ್ಡ ಪದವಿ. ಅವನು ವ್ಯವಸ್ಥೆಯಲ್ಲಿನ ತರ್ಕವನ್ನು ಸಾಂದ್ರವಾಗಿ ತಿಳಿಸುವ ಕೆಲಸ ಮಾಡುತ್ತಾನೆ. ಇದರ ಹಿಂದಿನ ತಾತ್ವಿಕತೆ ಸರಳ. ಒಬ್ಬ ಕಂಪೌAಡರ್‌ನಿAದ ಕೆಲಸ ಆಗುವುದಾದರೆ, ಡಾಕ್ಟರ್ ಏಕಾದರೂ ಕಾಣಬೇಕು? ಇವರೆಲ್ಲರನ್ನೂ ಒಳಗೊಂಡ ಕಾರ್ಯಜಾಲವು ವ್ಯವಸ್ಥೆಯ ಜ್ಞಾನವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಒಪ್ಪಿಕೊಂಡಾಗ, ವ್ಯವಸ್ಥೆ ಕುರಿತ ನಮ್ಮ ಭಾವನೆ ಬದಲಾಗುತ್ತದೆ.

ಇದನ್ನೇ ಭಾರತೀಯರು “ಸಾಮಾನ್ಯ ಜ್ಞಾನ’ ಎಂದು ಕರೆಯುತ್ತಾರೆ. ಭ್ರಷ್ಟಾಚಾರವು ಅಧಿಕಾರಶಾಹಿಯ ಕುರುಹುಗಳನ್ನು ಸಾಮಾನ್ಯ ಜನತೆ ಕೂಡ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ಔಪಚಾರಿಕವೂ, ಸಂಕೀರ್ಣವೂ ಆದ ವ್ಯವಸ್ಥೆಯ ವಿಧಿವಿಧಾನಗಳು ಸಾಮಾನ್ಯರಿಗೂ ಅರ್ಥವಾಗುವಂತೆ ಮಾಡುತ್ತದೆ. ಇದು ಒಂದು ಸಬ್‌ಆಲ್ಟçನ್ ಪ್ರಶ್ನೆಯನ್ನು ಎತ್ತುತ್ತದೆ: ವ್ಯವಸ್ಥೆಯೊಂದನ್ನು ಬುಡಮೇಲು ಮಾಡಲು ಸಾಧ್ಯವಿರುವಾಗ ಕ್ರಾಂತಿ ಏಕೆ ಬೇಕು?ಅದನ್ನು ಬೇರು ಸಮೇತ ಕಿತ್ತು ಎಸೆಯುವ ಬದಲು, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಕೆತ್ತಿ ನಮ್ಮ ಕೆಲಸ ಮಾಡಿಕೊಂಡರಾಯಿತು.

ಆದ್ದರಿAದ, ಭ್ರಷ್ಟಾಚಾರವು ತನ್ನ ಗ್ರಾಹಕರಿಗೆ ಸೇವೆಯೊಂದನ್ನು, ಕೆಲವೊಮ್ಮೆ ಜೀವ ಉಳಿಸುವಂಥದ್ದನ್ನು ಕೊಡುತ್ತದೆ. ಅದನ್ನು ಕಿತ್ತೊಗೆಯುವುದರಿಂದ ಇಂತಹ ಸೇವೆಗಳು ಜನಸಾಮಾನ್ಯರಿಗೆ ಸಿಗುವುದು ಕಷ್ಟವಾಗುತ್ತದೆ. ಭ್ರಷ್ಟಾಚಾರವೆನ್ನುವುದು ಒಂದು ಕರ‍್ಯಜಾಲ ಮತ್ತು ಅದು ವ್ಯವಸ್ಥೆಯ ತದ್ರೂಪಿಯಂತೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಯಾವುದೇ ಸುಧಾರಣೆ ಯಶಸ್ವಿಯಾಗಲು ಸಾಧ್ಯ. ಯಾವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿವಾರಿಸಲು ಯತ್ನಿಸಲಾಗುತ್ತಿದೆಯೋ, ಅಲ್ಲಿ ಅದು ನೀಡುವ ಸೇವೆಯು ಬೇರೆ ರೀತಿಯಲ್ಲಿ ಜನ ಸಾಮಾನ್ಯರಿಗೆ ಸಿಗುವಂತಾಗಬೇಕು ಇಲ್ಲವೇ ಅಂತಹ ಸೇವೆಯ ಅಗತ್ಯವೇ ಇಲ್ಲವಾಗಬೇಕು. ಭ್ರಷ್ಟಾಚಾರದ ಅಗತ್ಯವೇ ಇಲ್ಲದಂತೆ ಮಾಡುವುದು ಸುಧಾರಕರ ಗುರಿಯಾಗಬೇಕು. ಈಗಿನ ಸುಧಾರಣೆ ಪ್ರಕ್ರಿಯೆಗಳು ತಮ್ಮ ಸೀಮಿತ ಗುರಿಯನ್ನು ಮೀರಿ ಗರಿಗೆದರಿ ಹಾರಬೇಕಿದೆ.

ಎಲ್ಲ ವ್ಯವಸ್ಥೆಗಳೂ ತಮ್ಮದೇ ಆದ ಭ್ರಷ್ಟಾಚಾರವನ್ನು ಕರೆದೊಯ್ಯುತ್ತವೆ. ತದ್ರೂಪಿಯನ್ನು ಸೃಷ್ಟಿಸಿಕೊಳ್ಳುವುದು ಎಲ್ಲ ವ್ಯವಸ್ಥೆಗಳ ಸಹಜ ಸ್ಥಿತಿಯಾಗಿದ್ದು, ಇದರಿಂದ ವ್ಯವಸ್ಥೆಯಿಂದ ಸಿಗುವುದ ಕ್ಕಿಂತ ಹೆಚ್ಚು ಗಳಿಕೆ ಸಾಧ್ಯವಾಗುತ್ತದೆ. ಪ್ರತಿಯೊಂದು ಸುಧಾರಣೆಯನ್ನು ಬಳಸಿಕೊಂಡು ಸಾಗಲು ಭ್ರಷ್ಟಾಚಾರವು ಹತ್ಯಾರಗಳನ್ನು ಸಿದ್ಧಮಾಡಿಕೊಳ್ಳುತ್ತದೆ. ಭ್ರಷ್ಟಾಚಾರದ ತಡೆಗೆ ಮಾಡುವ ಸುಧಾರಣೆಯೇ ಇನ್ನೊಂದು ರೀತಿಯ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವುದು ಸುಧಾರಣೆಯ ಅಣಕ ಮಾಡಿದಂತೆ. ಪ್ರತಿಯೊಂದು ಹೊಸ ಕಾನೂನು ಹಾಲಿ ಇರುವ ಕಾನೂನುಗಳ ಬೆಂಕಿಗೆ ತುಪ್ಪ ಸುರಿದಂತೆ. ಇನ್ನೊಂದು ವಿಶ್ವವನ್ನು ಪಳಗಿಸಿ, ಅದರಲ್ಲಿ ನಮ್ಮ ಇರುವನ್ನು ಸ್ಥಾಪಿಸಿದಂತೆ ಮತ್ತು ಆ ವಿಶ್ವವನ್ನೂ ಭ್ರಷ್ಟಗೊಳಿಸಿದಂತೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುವುದಾದರೂ, ಕಾಲ ಕಳೆದಂತೆ ಹೊಸ ಕಾನೂನಿನ ವಿಶ್ವವನ್ನೂ ಪಳಗಿಸಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ.

ಈಗ ಭ್ರಷ್ಟಾಚಾರದ ಕ್ರಿಯಾತ್ಮಕತೆಯನ್ನು ಸನಿಹದಿಂದ ಪರಿಶೀಲಿಸೋಣ. ವರ್ಗೀಕರಣ ವಿಧಾನಗಳು ಮತ್ತು ನಿಯಮಗಳನ್ನು ಆಧರಿಸಿದ ಹಾಗೂ ವ್ಯವಸ್ಥೆಯ ಕಟ್ಟಳೆ-ನಿಯಮಗಳನ್ನು ಬಾಗಿ ಸಬಲ್ಲ ಜ್ಞಾನಪದ್ಧತಿ ಇದು. ಕಚೇರಿಯ ಕಾರಿಡಾರ್‌ಗಳಲ್ಲಿ ದೇವರನ್ನು ಆವಾಹಿಸಿಕೊಳ್ಳುವ ಅಥವಾ ಕಾನೂನು ಹೊತ್ತಗೆಯ ಪರಿಚ್ಛೇದವನ್ನು ಬೇಕಾದಂತೆ ಬಾಗಿಸಿಕೊಳ್ಳುವ ಅಧಿಕಾರವಿದು. ವರ್ಗೀಕರಣದ ಕುರಿತು ಮೊದಲು ಚಿಂತಿಸೋಣ. ಇದು ಎರಡು ರೀತಿ ಕೆಲಸ ಮಾಡುತ್ತದೆ. ಇದು ಒಳಗೊಳ್ಳುತ್ತದೆ ಹಾಗೂ ಹೊರತಾಗಿಸುತ್ತದೆ ಕೂಡ. ಆದರೆ, ಗಾಳಿ ಕೂಡ ಹೊರಗೆ ಹೋಗದು, ತುಂಬ ಭದ್ರವಾಗಿದೆ ಎಂದು ಹೊರಗಿನಿಂದ ತೋರುವ ಪೆಟ್ಟಿಗೆಯಿಂದಲೂ ಸೋರಿಕೆ ಆಗುವಂತೆ ನೋಡಿಕೊಳ್ಳುವುದು ಭ್ರಷ್ಟಾಚಾರದ ವೈಶಿಷ್ಟ್ಯ.ಈ ಖಚಿತತೆಯನ್ನು ತನ್ನ ಕೆಲಸ ವಾಗುವ ಮಟ್ಟಿಗೆ ಸಡಿಲಗೊಳಿಸುವುದು ಭ್ರಷ್ಟಾಚಾರದ ಒಂದು ಮುಖ.

ವರ್ಗೀಕರಣವನ್ನು ನಿಯಮಗಳ ಮೂಲಕ ಹೇರಲಾಗುತ್ತದೆ. ನಿಯಮ ಮತ್ತು ವರ್ಗೀಕರಣ, ವರ್ಗಗಳು ಹಾಗೂ ಪದ್ಧತಿಗಳ ನಡುವೆ ಆಡಳಿತ ನಿರ್ವಹಣೆ ಪ್ರವೇಶಿಸುತ್ತದೆ. ವರ್ಗೀಕರಣದ ಬೆನ್ನ ಹಿಂದೆಯೇ ಭ್ರಷ್ಟಾಚಾರದ ಬೇರುಗಳಿವೆ ಎನ್ನುವುದನ್ನು ಒಬ್ಬ ಗುಮಾಸ್ತ ಮಾತ್ರ ಗುರುತಿಸಿರುತ್ತಾನೆ. ಔಪಚಾರಿಕ ಮತ್ತು ಅನೌಪಚಾರಿಕತೆ ಬೇರೆಯಾದ ಸಂದರ್ಭದಲ್ಲೇ, “ಎಲ್ಲರೂ ಸಮಾನರು; ಆದರೆ, ಕೆಲವರು ಹೆಚ್ಚು ಸಮಾನರು” ಎನ್ನುವ ಆರ್ವೆಲ್ ನುಡಿ ನಿಜವಾಗುತ್ತ ಹೋಗುತ್ತದೆ. ಅನೌಪಚಾರಿಕ ಮತ್ತು ಔಪಚಾರಿಕತೆ ನಡುವಿನ ಅಂತರವನ್ನು ಕಡಿಮೆ ಮಾಡಲು ಇರುವ ಜಾರುಬಂಡೆಯೇ ಭ್ರಷ್ಟಾಚಾರ.

ಗುಳೆ ಬಂದ ವ್ಯಕ್ತಿಯೊಬ್ಬ ಜಾಡಮಾಲಿ ಇಲ್ಲವೇ ಬೀದಿ ವ್ಯಾಪಾರಿಯಾಗಿ ಅನೌಪಚಾರಿಕ ಅರ್ಥ ವ್ಯವಸ್ಥೆಗೆ ಸೇರಲು ನಾಲ್ಕು ಮಾರ್ಗಗಳಿವೆ. ಅವನ ಇರವನ್ನೇ ನ್ಯಾಯಯುತ ಎಂದು ಪರಿ ಗಣಿಸದ ವ್ಯವಸ್ಥೆಯನ್ನು ಎದುರಿಸಿ, ಔಪಚಾರಿಕವಾಗಿ ನ್ಯಾಯ ದೊರಕಿಸಿಕೊಳ್ಳಲು ಹೋರಾಡಿ ತನ್ನ ಹಕ್ಕುಗಳನ್ನು ಗಳಿಸಿಕೊಳ್ಳುವುದು. ಹೇಗೋ ಬದುಕಿ, ಸಮಾಜದ ಉನ್ನತ ಸ್ಥಾನಕ್ಕೆ ಹೋಗುವುದು. ದಿನಕ್ಕೊಂದು ಕೂಳು ಕಾಣದೆ ಹಸಿವೆ ಯಿಂದ ಸಾಯುವುದು ಅಥವಾ ವ್ಯವಸ್ಥೆಯಲ್ಲಿನ ಸಂದುಗಳಲ್ಲಿ ಜೀವನವನ್ನು ಪೊರೆಯುತ್ತ, ವ್ಯವಸ್ಥೆಯನ್ನೂ ಪೊರೆಯುವುದು. ಅವನಿಗೆ ಸಿಗುವ ಒಂದೇ ಸೌಲಭ್ಯವೆಂದರೆ ತಾತ್ಕಾಲಿಕವಾದ, ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದಾದ “ನಾಗರಿಕ ಸ್ಥಾನ”. ನೀವು ಎಲ್ಲಾದರೂ ಕೊಳಚೆ ಪ್ರದೇಶದ ನಿವಾರಣೆ ಕಾರ್ಯಾಚರಣೆಯನ್ನೋ, ಬೀದಿ ವ್ಯಾಪಾರಿಗಳನ್ನು ಎಬ್ಬಿಸುವ ಕೆಲಸ ನೋಡುತ್ತಿದ್ದೀರೆಂದರೆ, ಅದರ‍್ಥ, ವ್ಯವಸ್ಥೆಯ ಆಡಳಿತ ನಡೆಸುವವರ ಅಥವಾ ಕ್ಲರ್ಕ್ಗಳ ಗುಂಪಿಗೆ ಹಸಿವೆ ಹೆಚ್ಚಾಗಿದೆ ಎಂದೇ ಅರ್ಥ. “ಮುನಿಸಿಪಾಲಿಟಿಯವರು ಬಂದರು’ ಎಂಬ ವಾಕ್ಯದಲ್ಲಿ ಇದಿಷ್ಟೂ ಅಡಗಿದೆ. ಅರ್ಥವ್ಯವಸ್ಥೆಯ “ಪಿರಮಿಡ್‌ನ ತಳದಲ್ಲಿ ಸಂಪತ್ತಿದೆ’ ಎಂಬ ರಹಸ್ಯವನ್ನು ಪರಿಣತರು ಹೇಳುವ ಬಹಳ ಕಾಲದ ಮೊದಲೇ ಕ್ಲರ್ಕ್ ಮತ್ತು ಪೊಲೀಸರು ಕಂಡುಕೊAಡಿದ್ದರು.

ಭ್ರಷ್ಟಾಚಾರವೆನ್ನುವುದು ಸುಧಾರಣಾವಾದಿಯಲ್ಲ. ವ್ಯವಸ್ಥೆಯಲ್ಲಿನ ನ್ಯೂನತೆಗಳಿಗೆ ಪರಿಹಾರಗಳನ್ನು ಕೊಡುತ್ತ, ಸುಧಾರಣೆಯನ್ನು ತರುವ ಪ್ರಯತ್ನಗಳಿಗೆ ತಡೆಯೊಡ್ಡುತ್ತದೆ. ಆದರೆ, ಅದು ಕೆಲಸ ಮಾಡುತ್ತದೆ ಮತ್ತು ವ್ಯವಸ್ಥೆಯೊಡನೆ ಕೆಲಸ ಮಾಡುತ್ತದೆ ಮತ್ತ ಕೆಲವರು ತಮಗೆ ಕೆಲಸ ಮಾಡಲು ಇರುವುದು ಅದೊಂದೇ ದಾರಿ ಎಂದು ಭಾವಿಸಬಹುದು. ಭ್ರಷ್ಟಾಚಾರದಲ್ಲಿ ಒಂದು ರಾಜಕೀಯ ಅರ್ಥವ್ಯವಸ್ಥೆಯಿದೆ. ಆಧುನಿಕ ವ್ಯವಸ್ಥೆಯಲ್ಲಿ ಆದಾಯದಲ್ಲಿ ಜೀವನಾಧಾರ ಮತ್ತು ಹೆಚ್ಚುವರಿ ಎಂಬ ಎರಡು ವಿಭಾಗಗಳನ್ನು ಮಾಡಿಕೊಳ್ಳಬಹುದೆಂದು ಅರ್ಥಶಾಸ್ತçಜ್ಞರು ಮತ್ತು ಮಾನವಶಾಸ್ತçಜ್ಞರು ಹೇಳುತ್ತಾರೆ. ಜೀವನಾಧಾರ ದಿಂದಲೂ ಹೆಕ್ಕಿ, ಹೆರೆದು ತೆಗೆಯುವ ಶಕ್ತಿ ಭ್ರಷ್ಟಾಚಾರಕ್ಕಿದೆ. ಬೀದಿ ವ್ಯಾಪಾರಿ, ವಲಸೆಗಾರ, ಭಿಕ್ಷುಕ ಮತ್ತು ಮನೆಗೆಲಸದವಳು ವಾಸಿಸುವ ಸ್ಲಮ್ ಮತ್ತು ಬೀದಿಯ ಬದಿಯಲ್ಲಿನ ಸ್ಥಳ ಇತ್ಯಾದಿಗೆ ಒಂದು ದರ ಜಾರಿಯಲ್ಲಿರುತ್ತದೆ. ಪೊಲೀಸ್ ಪೇದೆ ಯಿಂದ ಹಿಡಿದು ಗೂಂಡಾತನಕ, ರಾಜಕೀಯ ಪುಢಾರಿಗೆ, ದಲ್ಲಾಳಿಗೆ ಮತ್ತು ಸಮಾಜ ಕಾರ್ಯಕರ್ತನಿಗಿರುವ ಸರಪಳಿಯು ಕಾರ್ಖಾನೆಯ ಉತ್ಪಾದನೆಯ ಸರಪಳಿಯಷ್ಟೇ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದು ಒಬ್ಬ ವಲಸೆಗಾರನಿಗೆ ಪಟ್ಟಣಕ್ಕೆ ಬರಲÄ ಸಿಗುವ ಪರ್ಮಿಟ್. ಇದನ್ನೇ ನಾವು `ಗುಳೆ’ ಎನ್ನುತ್ತೇವೆ.
—————-
ಔಪಚಾರಿಕ ಮತ್ತು ಅನೌಪಚಾರಿಕ ಅರ್ಥವ್ಯವಸ್ಥೆಗಳ ನಡುವೆ ಹೊಯ್ದಾಡುವ ಭ್ರಷ್ಟಾಚಾರ, ಬರಹ ಮತ್ತು ಮಾತಿನ ಪ್ರಪಂಚಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತದೆ.ಸೇತುವೆ ಕಟ್ಟುತ್ತದೆ. ಗುಡ್ಡಗಾಡು ಪ್ರದೇಶದಿಂದ ಅಥವಾ ಕೃಷಿ ಕಾರ್ಮಿಕರು ಓದು ಬರಹ ಕಲಿಯದೇ ಇರಬಹುದು. ಅವರು ಪಟ್ಟಣದ ವ್ಯವಸ್ಥೆಗೆ ಬಂದಾಗ ಇಂತಹ ಸೇತುವೆಯೊಂದು ಬೇಕು. ಇಲ್ಲದಿದ್ದರೆ ಅವರು ಅದಕ್ಕೆ ತೆರಬೇಕಾದ ಬೆಲೆ ಜೀವನ್ಮರಣದ್ದು. ಲೇಖಕಿ ಮಹಾಶ್ವೇತಾದೇವಿಯವರು ಜೀತದಾಳುಗಳ ಬಗ್ಗೆ ಬರೆದ ಪ್ರಬಂಧಗಳು ಇದನ್ನು ಎತ್ತಿ ತೋರಿಸುತ್ತವೆ. ಬುಡಕಟ್ಟು ಜನಾಂಗದವನೊಬ್ಬನಿಗೆ ಅವನ ಮಾತೇ ಅವನ ಕರಾರು ಪತ್ರ. ಆದರೆ ಅವನು ಪಟ್ಟಣಕ್ಕೆ ಬರುತ್ತಿದ್ದ ಹಾಗೆ, ಕಡ ತೆಗೆದುಕೊಳ್ಳುತ್ತಾನೆ. ಆ ಕೆಲವು ರೂಪಾಯಿಗಳಿಗೆ ಯಾವುದೋ ಪತ್ರಕ್ಕೆ ಸಹಿ ಹಾಕುತ್ತಾನೆ ಮತ್ತು ತಾನು ಮತ್ತು ತನ್ನ ಕುಟುಂಬದ ಜೀತಕ್ಕೆ ನಾಂದಿ ಹಾಡುತ್ತಾನೆ. ಅವನ ಯಜಮಾನ ಕೊಟ್ಟ ಸ್ವಲ್ಪ ಹಣಕ್ಕೆ ಸಾವಿರ ಪಟ್ಟು ಬೆಲೆಯಾಗಿ ಅವನು ಜೀವನ ಪೂರ್ತಿ ಕೆಲಸ ಮಾಡುತ್ತಾನೆ.

ಭ್ರಷ್ಟಾಚಾರವೆನ್ನುವುದನ್ನು ವ್ಯವಸ್ಥೆಯ ಭಾಷೆಗೆ ಪರ್ಯಾಯವಾಗಿರುವ ಒಂದು ಉಪಭಾಷೆ ಅಥವಾ ಉಪಭಾಷೆಗಳ ಗುಂಪು ಎಂದು ಭಾವಿಸಬೇಕಾಗುತ್ತದೆ. ಆಧುನಿಕತೆ ಮತ್ತು ಅದನ್ನು ನಿರ್ವಹಿಸುವ ಆಡಳಿತ ಯಂತ್ರದ ಭಾಷೆ ಮುಖ್ಯಭಾಷೆಯಾಗಿರುತ್ತದೆ. ಇದಕ್ಕೆ ಸಂವಾದಿಯಾಗಿ ಸಾಮಾನ್ಯರಿಗೂ ಅರ್ಥವಾಗುವ ಭಾಷಾವೈಶಿಷ್ಟ÷್ಯವನ್ನು ಭ್ರಷ್ಟಾಚಾರ ಹೊಂದಿರುತ್ತದೆ. ಆಡಳಿತದ ಭಾಷೆ, ಆತ್ಮೀಯವಾಗಿಲ್ಲದೆ, ಎಲ್ಲರನ್ನೂ ಒಂದೇ ಅಳತೆಯಿಂದ ತೂಗುವಂತಿದ್ದರೆ, ಭ್ರಷ್ಟಾಚಾರದ ಭಾಷೆ, ಅದರ ವೆಚ್ಚ ಅಧಿಕವಾಗಿದ್ದರೂ, ತಮ್ಮದೇ ಎನಿಸಿ ಆಪ್ತತೆಯನ್ನು ಮೂಡಿಸುತ್ತದೆ. ಸಮಾಜ ವಿಜ್ಞಾನಿಗಳಿಗೆ ಇದು ಮೊದಲಿನಿಂದಲೂ ತಿಳಿದ ವಿಷಯವೇ ಆಗಿದ್ದರೂ, ಇದನ್ನು ಆಧುನಿಕತೆಯ ಮೆಟ್ಟಿಲನ್ನು ಏರುವಾಗ ಬರುವ ಒಂದು ತೊಡಕೆಂದೇ ಭಾವಿಸಿದ್ದಾರೆ. ಒಬ್ಬ ದಲ್ಲಾಳಿಯು ಆಧುನಿಕತೆಯನ್ನು ಬೆಂಬಲಿಸುತ್ತಾ ಹೇಗೆ ಮಾಫಿಯಾ ತರಹದ ವೇಷ ಹಾಕಿಕೊಳ್ಳುತ್ತಾನೆಂಬುದನ್ನು ಆಂಟನ್ ಬೆಕ್ ಅವರು ವಿವರಿಸಿದ್ದಾರೆ. ಹಾಗೆ ಮಾಡುತ್ತಲೇ ವ್ಯವಸ್ಥೆಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಒಬ್ಬ ವಲಸೆ ಬಂದವನಿAದ ವ್ಯವಸ್ಥೆ ಕೇಳುವ ಆಧಾರ ಪತ್ರ ಮತು ಇತರ ದಸ್ತಾವೇಜುಗಳ ಬೇಡಿಕೆಯನ್ನು ಕಂಡು ಹೆದರಿದ ಆ ವ್ಯಕ್ತಿಗೆ, ಮೊದಲು ಸಾಂತ್ವನ ನೀಡುವ, ನಂತರ ವ್ಯವಸ್ಥೆಯ ಭಾಗವಾಗಿಯೇ ಹೋಗುವ ರಾಜಕೀಯ ಧುರೀಣನನ್ನು ರಾಬರ್ಟ್ ಮಾರ್ಟಿನ್ ತಮ್ಮ ಪ್ರಬಂಧವೊAದರಲ್ಲಿ ಅನನ್ಯವಾಗಿ ಚಿತ್ರಿಸಿದ್ದಾರೆ. ಈ ವ್ಯವಸ್ಥೆಯನ್ನು ಮೀರಲು ಬಳಸುವ ತಂತ್ರಗಳು ‘ಸೃಜನಾತ್ಮಕ ಹತ್ಯಾರಗಳು ‘ ಎಂದು ಈ ಇಬ್ಬರೂ ವಿದ್ವಾಂಸರೂ ಅಭಿಪ್ರಾಯಪಟ್ಟಿದ್ದಾರೆ. ವೆಬರ್ ಪ್ರಣೀತ ಸಿದ್ಧಾಂತದ ಮೂಲ ಸ್ರೋತವಾಗಿರುವ ಆಡಳಿತದ ವಿಜ್ಞಾನಕ್ಕೆ, ‘ಪರಿಸರದ ಜ್ಞಾನ’ ಅಥವಾ ‘ಬೀದಿ ಜ್ಞಾನ’ ಸವಾಲು ಹಾಕುತ್ತದೆಂದು ನಾನು ಭಾವಿಸುತ್ತೇನೆ. ಈ ರೀತಿಯ ಸಂಕರ ಮಾದರಿಗಳು ನಮಗೆ ಭಾರತ, ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿ ಕಾಣಸಿಗುತ್ತವೆ.

ಭ್ರಷ್ಟಾಚಾರವನ್ನು ನಾವು ಅರ್ಥಶಾಸ್ತçದ ಬಗೆಗಿನ ಜ್ಞಾನಶಾಖೆಯ ಒಂದು ಮುಖ್ಯ ಅಂಗ ಎಂದು ಭಾವಿಸಿದ್ದೇ ಆದರೆ, ಅದನ್ನು ಬೇರು ಸಹಿತ ತೆಗೆಯುವ ಎಲ್ಲ ಸುಧಾರಣೆಗಳ ಬಗೆಗಿನ ಅಜ್ಞಾನ, ಭ್ರಷ್ಟಾಚಾರವನ್ನು ನಮ್ಮ ಕಣ್ಣ ಮುಂದೆ ಇಡದೆ, ಭೂಗತವಾಗುವಂತೆ ಮಾಡುತ್ತದೆ. ಭ್ರಷ್ಟಾಚಾರವನ್ನು ಕಿತ್ತೊಗೆಸೆಯುವ ಪ್ರಣಾಳಿಕೆಯುಳ್ಳ ಸುಧಾರಣೆಯೊಂದು – ಭ್ರಷ್ಟಾಚಾರದ ಭಾಷಾ ವೈಶಿಷ್ಟ÷್ಯ,, ಅದರ ಭಾವನಾತ್ಮಕ ಪದರಗಳು, ಅದರ ಸಂಪ್ರದಾಯಗಳು ಮತ್ತು ಆಚರಣೆಗಳು ಮತ್ತು ಅದರ ಸೇವೆಗಳ ತಿರುಳು – ಇವಷ್ಟನ್ನೂ ಎದುರುಗೊಳ್ಳಬೇಕಾಗುತ್ತದೆ ಮತ್ತು ಪ್ರತಿಯೊಂದಕ್ಕೂ ಸಮಂಜಸವಾದ ಉತ್ತರಗಳನ್ನು ಕೊಡಬೇಕಾಗುತ್ತದೆ. ಅದು ಒಂದು ಮೆಷೀನನ ಒಳಭಾಗಗಳನ್ನೆಲ್ಲ ತೆಗೆದು ರಿಪೇರಿ ಮಾಡಿದಂತೆ ಅಥವಾ ರಹಸ್ಯವನ್ನು ಬಿಡಿಸ ಹೊರಟಂತೆ. ಭ್ರಷ್ಟಾಚಾರಕ್ಕೆ ತಾಳುವ ಶಕ್ತಿ ಎಷ್ಟಿಯೆಂದರೆ, ಸುಧಾರಣೆಯ ಕೆಲವು ಅಂಶಗಳನ್ನೂ ತನ್ನಲ್ಲೇ ಅಂತರ್ಗತ ಮಾಡಿಕೊಂಡು ಬಿಡುತ್ತದೆ. ಭ್ರಷ್ಟಾಚಾರವೆಂಬ ಕಾಂಪೋಸ್ಟ್ ಗೊಬ್ಬರದ ಇನ್ನೊಂದು ಪದರವಾಗಿ ಸುಧಾರಣೆಯೂ ಕಂಡು ಬರುವ ಸಾಧ್ಯತೆಗಳೇ ಹೆಚ್ಚು.

ಭ್ರಷ್ಟಾಚಾರವು, ಅಳಿಯದೇ ಬದುಕುಳಿಯಲು ಸಹಾಯ ಮಾಡುವ ಸಾಧನಗಳಲ್ಲಿ ಒಂದು ಮಾದರಿ ಎಂದು ಪರಿಗಣಿಸಬಹುದು. ಅದೇ ರೀತಿ, ಅದು ಸೃಜನಶೀಲತೆಯ ಒಂದು ಮಾದರಿ ಎಂದೂ ಪರಿಗಣಿಸಬಹುದು. ಅದು ವ್ಯವಸ್ಥೆಯ ಜೊತೆ ಹೊಂದಿಕೊಳ್ಳುತ್ತದೆ, ಅದನ್ನು ನೆಕ್ಕಿ, ಅದರ ಸಾರವನ್ನು ಹೀರುತ್ತದೆ, ಬದಲೂ ಮಾಡುತ್ತದೆ ಮತ್ತು ಈಗ ಜಾರಿಯಲ್ಲಿರುವ ಜಾಡನ್ನು ಬಿಟ್ಟು ಬೇರೆಯದೇ ಜಾಡನ್ನು ಹಿಡಿಯುವ ಹಾಗೆ ಮಾಡುತ್ತದೆ. ಆಹಾರಕ್ಕಾಗಿ ಅಲೆಯುವ ಅರ್ಥವ್ಯವಸ್ಥೆಯ ಕುರುಹುಗಳಾದ – ಯಾವುದೇ ದಾರಿ ಕಾಣದಿದ್ದಾಗ, ಬುದ್ಧಿಮತ್ತೆಯಿಂದ ಮತ್ತು ತಂತ್ರಗಾರಿಕೆಯಿಚಿದ, ದಾರಿ ಹುಡುಕುವುದು, ಇದ್ದ ವ್ಯವಸ್ಥೆಯನ್ನು ಸುಧಾರಿಸುವುದು – ಇಂಥವುಗಳನ್ನು ಭ್ರಷ್ಟಾಚಾರದ ಕುರುಹುಗಳನ್ನಾಗಿಯೂ ಕಾಣಬಹುದು. ಭಾರತೀಯರು, ಆಮೂಲಾಗ್ರ ಬದಲಾವಣೆಗಿಂತ, ಸಣ್ಣ ಸಣ್ಣ ಬದಲಾವಣೆ ಮಾಡುವುದರಲ್ಲಿ, ಪರ್ಯಾಯ ಸಂಕರ ವ್ಯವಸ್ಥೆಗಳನು ರೂಪಿಸುವಲ್ಲಿ ಮತ್ತು ಸಾಧಾರಣವಾಗಿ ಗೋಚರವಾಗದ ಸ್ಥಿತಿಯಲ್ಲೂ, ಸಂಪರ್ಕ ಕೊಂಡಿಗಳನ್ನು ಹುಡುಕುವುದರಲ್ಲಿ ನಿಷ್ಣಾತರು. ಇಂಥ ಮಾನಸಿಕ ಸ್ಥಿತಿಗೆ ಭ್ರಷ್ಟಾಚಾರ ಹೊಂದಿಕೊಳ್ಳುತ್ತದೆ. ಒಂದು ಚೌಕವನ್ನು ವೃತ್ತ ಎಂದು ಸಾಧಿಸಿ ತೋರಿಸು ಎಂಬ ಪ್ರಶ್ನೆ ಬಂದಲ್ಲಿ ಇವೆರಡೂ ಒಂದರ ಪ್ರತಿಬಿಂಬ ಎಂದು ತರ್ಕಬದ್ಧವಾಗಿ ತೋರಿಸಬಲ್ಲ. ಇಲ್ಲಿ, ಆಧುನಿಕ ಮತ್ತು ಹಳೆಯದರ ನಡುವಿನ ಯುದ್ಧದಲ್ಲಿ, ಯಾರೂ ಗೆಲ್ಲದೆ ಎಲ್ಲರೂ ಸೋಲನ್ನೇ ಅನುಭವಿಸುವ ಯುದ್ಧವಾಗದೇ, ಒಂದರ ಸಂಗಡ ಇನ್ನೊಂದು ಆಟವಾಡುತ್ತಾ ತಮ್ಮ ತಮ್ಮ ವ್ಯಾಕರಣಗಳ ಕೊಡುಕೊಳ್ಳುವಿಕೆಯನ್ನು ನಿರಂತರ ಮಾಡುತ್ತಿರುತ್ತವೆ. ಆದ್ದರಿಂದಲೇ ಭ್ರಷ್ಟಾಚಾರದ ವ್ಯಾಕರಣಕ್ಕೂ ‘ಜುಗಾಡ್’ನ ವ್ಯಾಕರಣಕ್ಕೂ ತುಂಬ ಹತ್ತಿರದ ಸಂಬAಧವಿದೆ ಎಂದು ತೋರುತ್ತದೆ. ಅವೆರಡೂ ತಮ್ಮ ಪರಿಸರವನ್ನು ‘ಉಪಯೋಗಿಸಬೇಕಾದ ವಸು’್ತ ಎಂದು ಪರಿಗಣಿಸಿ ಅದನ್ನು ತಮಗೆ ಬೇಕಾದ ಬಂಧದಲ್ಲಿ ಇರಿಸುವ ಪ್ರಯತ್ನವನ್ನು ಮಾಡುತ್ತವೆ.

ಭ್ರಷ್ಟಾಚಾರವು ಕೆಲವರನ್ನು ಮಾತ್ರ ಒಳಗೊಂಡಿರುತ್ತದಾದರೂ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಸೋದರ ಅಥವಾ ಜಾತಿ ಸಂಬAಧಗಳ ಸರಮಾಲೆಯಂತೆ ಅದು ತನ್ನ ಬಲೆಯನ್ನು ಎಲ್ಲೆಲ್ಲೂ ಹರಡುತ್ತದೆ. ಬಿಹಾರ್ ರಾಜ್ಯದ ಮಾಜಿ ಮುಖ್ಯಮಂತ್ರಿ ಲಲ್ಲೂ ಯಾದವ್ ಅವರ ‘ಮೇವು ಹಗರಣ’ ವನ್ನು ತನಿಖೆ ಮಾಡಿದ ಸಿಬಿಐ ಅಧಿಕಾರಿಗಳ ಪ್ರಕಾರ, ಸಮಾಜದ ಎಲ್ಲ ಮೂಲೆಗಳನ್ನೂ ಆ ಭ್ರಷ್ಟಾಚಾರ ತಟ್ಟಿತ್ತಂತೆ. ಒಂದು ರೀತಿಯಲ್ಲಿ ಇಡೀ ಸಮಾಜವೇ ಭ್ರಷ್ಟಾಚಾರದಲ್ಲಿ ತೊಡಗಿರುವ ರೀತಿ. ಈ ರೀತಿ ಆದಾಗ ಯಾರೊಬ್ಬರನ್ನು ಬೆರಳು ತೋರಿಸಿ ನೀನು ಅಪರಾಧಿ ಎಂದು ಆಪಾದಿಸಲಾಗುವುದಿಲ್ಲ. ಜೇನು ನೊಣದ ಗೂಡನ್ನು ತೋರಿಸಿ ಯಾವುದೋ ಒಂದು ಜೇನು ಮಕರಂದವನ್ನು ಅಪಹರಿಸಿದೆ ಎಂದ ಹಾಗೆ. ಎಲ್ಲ ಹಗರಣದ ರೀತಿಯೇ, ಈ ಮೇವು ಹಗರಣದಲ್ಲೂ, ಒಂದು ದೊಡ್ಡ ಸರಪಳಿಯನ್ನೇ ಕಾಣಬಹುದಿತ್ತು. ಇಡೀ ಸಮಾಜದಲ್ಲಿ ಭ್ರಷ್ಟಾಚಾರವೆಂಬ ‘ಶ್ರಮ’, ಅದನ್ನು ಎಲ್ಲ ಮಜಲುಗಳಲ್ಲೂ ಹರಡಿ ಎಲ್ಲರೂ ಅದರಲ್ಲಿ ಭಾಗಿಗಳಾಗಿ ಮಾಡಿರುವುದರಿಂದ, ಯಾರನ್ನು ತಾನೇ ‘ನೀನೇ ಇದರ ಮೂಲ ಕರ್ತೃ’ ಎಂದು ಹೇಳುವುದು?

ಭ್ರಷ್ಟಾಚಾರ ಎಲ್ಲವನ್ನೂ ಸಾಮಾನ್ಯೀಕರಿಸಿಬಿಡುತ್ತದೆ ಮತ್ತು ತುಚ್ಚೀಕರಿಸಿಬಿಡುತ್ತದೆ. ಪ್ರಕೃತಿ ವಿಕೋಪ ಅಥವಾ ಭಯೋತ್ಪಾದನೆಯ ಸ್ಥಿತಿಯಲ್ಲೂ ಅದು ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿದಾಗ ಈ ಸಿದ್ಧಾಂತ ಸತ್ಯಕ್ಕೆ ಎಷ್ಟು ಹತ್ತಿರವೆಂಬುದು ವೇದ್ಯವಾಗುತ್ತದೆ. ಕ್ರಾಂತಿಯಿAದ ಮತ್ತು ರಕ್ತ ಚೆಲ್ಲಿದಾಗ ಮಾತ್ರ ಸಮಾಜದ ಹಿತವಾಗುತ್ತದೆ ಎಂಬ ಸಿದ್ದಾಂತವನ್ನು ಗಳಿಗೆ ಗಳಿಗೆಗೂ ಜಪಿಸುವಾತ, ಅಮಾಯಕ ಜನರಿಂದ ತೆರಿಗೆ ದೋಚುವಾಗ, ಭಯೋತ್ಪಾದನೆಯೆಂಬುದು ದಿನನಿತ್ಯದ ನೈಮಿತ್ತಿಕ ಎಂಬುದು ಜನಸಾಮಾನ್ಯರ ತಿಳಿವಳಿಕೆಗೆ ಬರುತ್ತದೆ. ಉತ್ತರಪೂರ್ವ ಭಾರತದ ಕೆಲವು ಗುಂಪುಗಳು ಮತ್ತು ಶ್ರೀಲಂಕಾದ ಎಲ್.ಟಿ.ಟಿ.ಇ. – ಇದೇ ತರಹದ ತಂತ್ರಗಳನ್ನು ಬಳಸುತ್ತಿದ್ದವು. ಭೋಪಾಲಿನ ಅನಿಲ ದುರಂತವಾಗಲೀ, ಒರಿಸ್ಸಾದ ಸೈಕ್ಲೋನ್ ಹಾನಿಯಾಗಲೀ – ಅವುಗಳ ಪುನರ್ವಸತಿಗೆ ಕೊಡಲಾದ ನೆರವು ಮತ್ತು ಪರಿಹಾರಗಳೂ ಭ್ರಷ್ಟಾಚಾರದ ಹೊಸ ಮಾರುಕಟ್ಟೆಗಳಾಗಿ ಬಹಳ ಬೇಗ ಪರಿವರ್ತಿತವಾಗುತ್ತವೆ.

ಒಂದು ವ್ಯವಸ್ಥೆಯ ಸಾಮರ್ಥ್ಯವನ್ನು ಭ್ರಷ್ಟಾಚಾರವು ಹೇಗೆ ನಿಯುಕ್ತಗೊಳಿಸುತ್ತದೆ ಎಂಬುದನ್ನು ಅರ್ವಿಂಗ್ ಗಾಫ್‌ಮನ್ ನಂಥ ಮೇಧಾವಿ ಮತ್ತು ಶಕ್ತಿಶಾಲೀ ಸಮಾಜ ಶಾಸ್ತçಜ್ಞ ವಿವರಿಸಿಯಾರು. ನಮ್ಮ ದೈನಂದಿನ ಜೀವನದಲ್ಲಿ ಭ್ರಷ್ಟಚಾರದ ಹೆಣಿಗೆಯನ್ನು ನಾವು ಯಾವ ರೀತಿಯನ್ನು ನೋಡಬಹುದು? ಆಡಳಿತ ಶಾಹಿಯ ಯಾವುದೇ ಮೂಲೆಗೆ ಹೋಗಿ ನೋಡಿದಲ್ಲಿ, ನಾಲ್ಕು ತರಹದ ಪಾತ್ರಗಳ ನಾಟಕವನ್ನು ನೋಡಬಹುದು. ಒಬ್ಬ ದಲ್ಲಾಳಿ, ಒಬ್ಬ ಕ್ಲರ್ಕ್, ಬೀಟಿನಲ್ಲಿರುವ ಪೊಲೀಸ್ ಮತ್ತು ಮೇಲಧಿಕಾರಿಯ ಆಪ್ತ ಸಹಾಯಕ (ಪಿಎ). ಇವರೆಲ್ಲರೂ ಶಕ್ತಿ ಕೇಂದ್ರದ ಕ್ರಮಾಗತ ಅಧಿಕಾರ ವ್ಯವಸ್ಥೆ ಯಲ್ಲಿ ಕೆಳಗಿನ ಸ್ತರದಲ್ಲಿರುವವರ ಹಾಗೆ ತೋರಬಹುದು. ಆದರೆ, ಭ್ರಷ್ಟಾಚಾರದ ಅರ್ಥವ್ಯವಸ್ಥೆಯಲ್ಲಿ ಈ ಪಾತ್ರಗಳ ಶಕ್ತಿ ಮತ್ತು ನಟನೆ, ಬದುಕು ಮತ್ತು ಸಾವನ್ನು ನಿರ್ಧರಿಸುವಂಥಾದ್ದು. ಹೊಟ್ಟೆ ದಪ್ಪಗಾಗಿರುವ, ಮಾಸಲು ಯೂನಿಫಾರ್ಮ್ ತೊಟ್ಟ ಪೋಲೀಸ್ ಪೇದೆಯನ್ನು ಗಮನಿಸಿ. ಆತ ತಮ್ಮ ಸುತ್ತಲಿನ ಜಗತ್ತನ್ನು -ಇದು ತನ್ನದೇ ಸಾಮ್ರಾಜ್ಯ – ಎನ್ನುವ ಹಾಗೆ ವರ್ತಿಸುತ್ತಾನೆ. ಸಣ್ಣ ಮಕ್ಕಳು ತಮಗೆ ಸಿಗುವುದೆಲ್ಲ ತಮ್ಮದೇ ಎಂದುಕೊಳ್ಳುವ ಹಾಗೇ ಅವನೂ ವರ್ತಿಸುತ್ತಾನೆ. ಅವನ ಹತ್ತಿರವಿರುವ ದೊಣ್ಣೆ ಒಂದು ಸಂಕೇತ ಮಾತ್ರ. ಅವನ ಸಾಮ್ರಾಜ್ಯದಲ್ಲಿ ಅವನು ತನಗೆ ಬೇಕಾದ ಹಾಗೆ ವ್ಯವಹರಿಸಬಲ್ಲ. ಅವನು ಅನುಮತಿ ನೀಡುತ್ತಾನೆ; ಅವನು ಕಡೆಗಣಿಸುತ್ತಾನೆ; ನಿಂದಿಸುತ್ತಾನೆ; ಗರ್ಜಿಸುತ್ತಾನೆ ಮತ್ತು ಅವನ ಎಲ್ಲಾ ಸಂಜ್ಞೆಗಳಿಗೂ ಒಂದೊAದು ದರವಿರುತ್ತದೆ. ಅವನ ಭಯೋತ್ಪಾದನೆಯನ್ನು ಎಲ್ಲರೂ ದೂರದಲ್ಲಿ ನಿಂತು ಭಯ ಮಿಶ್ರಿತ ಗೌರವದಿಂದ ವೀಕ್ಷಿತುತ್ತಾರೆ. ಅವನ ಕುಡಿಗಣ್ಣಿನ ಸಂಜ್ಞೆ ಒಂದು ಸಾವಿರ ಸಾಧ್ಯತೆಗಳನ್ನು ಸೃಷ್ಟಿಸಬಹುದು ಅಥವಾ ಎಲ್ಲ ಸಾಧ್ಯತೆಗಳನ್ನೂ ಇಲ್ಲವಾಗಿಸಬಹುದು.

ದಲ್ಲಾಳಿ ಶಕ್ತಿ ಕೇಂದ್ರದ ದಾರಿ ತೋರುಗ. ಯಾರಿಗೆ ಏನು ಗೊತ್ತು ಎಂಬುದು ಅವನಿಗೆ ತಿಳಿದಿದೆ. ಭ್ರಷ್ಟಾಚಾರ ಮಾರುಕಟ್ಟೆಯ ಮೊದಲ ದರಪಟ್ಟಿಯನ್ನು ಇವನೇ ಸಿದ್ಧಪಡಿಸುವುದು. ಇವನು ಎಲ್ಲಿಂದೆಲ್ಲಿಗೂ ಸಂಬAಧವೇರ್ಪಡಿಸಬಲ್ಲ. ಈ ದಲ್ಲಾಳಿ ಈಗಿನ ಮಾರುಕಟ್ಟೆಯ ಪರಿಭಾಷೆಗಳಾದ ‘ಸಾರ್ವಜನಿಕ ಸಂಪರ್ಕಾಧಿಕಾರಿ’ ಮತ್ತು ‘ಲಾಬಿ’ ಮಾಡುವವರ ಪೂರ್ವಸೂರಿ. ಅವನು ಮೇಲಧಿಕಾರಿಯನ್ನು ಓಲೈಸಲು ಎಷ್ಟು ದೂರವನ್ನಾದರೂ ಕ್ರಮಿಸಬಲ್ಲ. ಹಿಂದಿ (ಅಥವಾ ಬೇರೆ ಯಾವುದೇ ಪ್ರಾಂತೀಯ ಭಾಷೆ) ಮತ್ತು ಇಂಗ್ಲಿಷಿನ ಸಂಕರವನ್ನು ಅವನು ಅಳುಕಿಲ್ಲದೇ ಮಾಡಬಲ್ಲ. ಆಡಳಿತಶಾಹಿಯ ಕಾನೂನು ಕಟ್ಟಳೆಗಳ ಮುಖ್ಯ ಪುರೋಹಿತ ಇವನೇ ಮತ್ತು ಅದರ ಚಾಪೆಯ ಕೆಳಗೆ ನುಸುಳುವುದು ಅವನಿಗೆ ಕರಗತ. ಯಾವ ಕಾನೂನಿನಲ್ಲಿ ಎಷ್ಟು ದೂರದವರೆಗೆ ಹೋಗಬಹುದು ಮತ್ತೆ ಅದರ ಪರಿಧಿಯನ್ನು ನಿರ್ಧರಿಸುವವನೂ ಇವನೇ. ಆಡಳಿತಶಾಹಿಯ ಕಗ್ಗಂಟನ್ನು ಬಿಡಿಸಿ, ದೂರದಲ್ಲಿರುವವರಿಗೆ ಅದು ಸುಲಿದ ಬಾಳೆ ಹಣ್ಣಿನಂತೆ ರೀತಿ ಕಾಣುವ ಹಾಗೆ ಮಾಡುವವನು ಇವನು.

ಆಡಳಿತಶಾಹಿಯ ಪರ್ವತವನ್ನು ಯಾರೂ ಹೆಚ್ಚು ಹತ್ತದಂತೆ ಜಾಗರೂಕತೆಯಿಂದ ನೋಡಿಕೊಳ್ಳುವವನು ಕ್ಲರ್ಕ್. ಸಮಯವನ್ನು ನಿರ್ಧರಿಸುವವನು ಇವನು. ಯಾವ ಮೀಟಿಂಗ್ ಎಷ್ಟು ಹೊತ್ತಿಗೆ ಆಗಬೇಕು, ಕೊಡುವ ಆಶ್ವಾಸನೆಗಳ ಪ್ರಮಾಣ ಎಷ್ಟಿರಬೇಕು, ಎಷ್ಟು ಹೊತ್ತು ಕಾಯಿಸಿದರೆ ಒಳ್ಳೆಯದು, ಎಷ್ಟು ಹೊತ್ತು ಕಾದರೆ ‘ಅಸಾಧ್ಯ’ ವನ್ನು ‘ಸಾಧ್ಯ’ ವಾಗಿಸಬಹುದು ಮತ್ತು ಎಷ್ಟು ಖರ್ಚಾಗಬಹುದು ಇತ್ಯಾದಿಗಳೆಲ್ಲ ಇವನ ಆಣತಿಯಿಂದಲೇ ನಡೆಯುತ್ತದೆ. ಸಮಯದ ತರ್ಕವನ್ನು ನಿಯಂತ್ರಿಸುವ ಕ್ಲರ್ಕ್ ಆಡಳಿತಶಾಹಿಯಲ್ಲಿ ಇರುವ ಬೇರೆ ಬೇರೆ ‘ಸಮಯ’ ಗಳ ವ್ಯಾಖ್ಯೆಯನ್ನು ಕೊಡಬಲ್ಲ. ಸಮಯ ಎಂದರೆ ಹಣ – ಎಂಬುದನ್ನು ಚೆನ್ನಾಗಿ ಅರಿತಿರುವ ಈತ ಹಣ ಹೆಚ್ಚಿದಂತೆ ಸಮಯವನ್ನು ಎಷ್ಟು ಕಡಿಮೆ ಮಾಡಬಹುದು ಎಂಬುದರ ಖಚಿತ ಮಾಹಿತಿ ಉಳ್ಳವ.

ಕೊನೆಯದಾಗಿ, ತಾನು ಶಕ್ತಿ ಕೇಂದ್ರವಾಗಿಲ್ಲದೆಯೂ, ಅದರ ‘ಪ್ರವೇಶ’ ವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ ಇರುವ ಆಪ್ತ ಸಹಾಯಕ ಅಥವಾ ಪಿಎ. ಈ ಪಿಎ, ಸಫಾರಿ ಸೂಟಿನಲ್ಲಿ ಮಿಂಚುತ್ತಾ ಶಕ್ತಿ ಕೇಂದ್ರದ ಮುನ್ನೆಲೆಯಲ್ಲಿ ನಿಂತು ಎಲ್ಲವನ್ನೂ ನಿಯಂತ್ರಿಸುತ್ತಾನೆ. ರಾಜಕೀಯ ಧುರೀಣನ ಬಲಗೈ ಬಂಟನೆAಬ ಪದವಿಯಿದ್ದ ಒಬ್ಬ ಗೂಂಡಾ ತಾನೇ ಗೌರವಯುತವಾದ ರಾಜಕೀಯ ವ್ಯಕ್ತಿಯಾಗುವ ಸಂದರ್ಭದಲ್ಲಿ, ಅವನಿಗೆ ಆ ಗೌರವ ದೊರಕಿಸುವವನು , ಮಾಜಿ ಗೂಂಡಾ ನಿಯಮಿಸಿದ ಈ ಪಿಎ ಎಂಬ ವ್ಯಕ್ತಿ. ಇಂತಹ ಪಿಎ ತನ್ನ ನಾಯಕನನ್ನು ಯಾರು ಭೇಟಿ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿರ್ಧರಿಸುವವನು. ಮೊದಲಲ್ಲಿ ಬರಿಯ ಬಾಗಿಲ ಪ್ರವೇಶವನ್ನು ನಿಯಂತ್ರಣ ಮಾಡುವ ಪಿಎ, ಕಾಲ ಕಳೆದಂತೆ ತನ್ನ ಯಜಮಾನನ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತಾನೆ. ನಿಧಾನವಾಗಿ ತನ್ನ ಯಜಮಾನನ ನಂಬಿಕೆ ಮತ್ತು ನೆಟ್‌ವರ್ಕ್ ಬೆಳೆಸುತ್ತಾ ಹೋಗುತ್ತಾನೆ. ಕೊನೆಗೆ ಅವನು ತನ್ನ ಯಜಮಾನನ ತದ್ರೂಪಿ ಎನ್ನುವಷ್ಟರ ಮಟ್ಟಿಗೆ. ಕೆಲವೊಮ್ಮೆ ಯಜಮಾನನ ಸಮಯ ಮತ್ತು ಅವನು ಆಡುವ ಮಾತು ಮತ್ತು ಕ್ರಿಯೆಗಳೆಲ್ಲವೂ ಆಪ್ತ ಸಹಾಯಕನ ಮೇಲೆ ಅವಲಂಬಿತವಾಗುತ್ತದೆ. ಪಿಎ ತನ್ನ ಯಜಮಾನನ ದಿನಚರಿಯನ್ನು ನಿರ್ಧರಿಸುವವನು. ಯಾರನ್ನು ಭೇಟಿ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನಿರ್ಧರಿಸುವವನೂ ಇವನೇ. ತನ್ನ ಯಜಮಾನ ಒಂದು ಅಪೂರ್ವವಾದ ಸಂಪನ್ಮೂಲ. ಅದನ್ನು ವಿನಿಯೋಗಿಸುವುದರ ಮೇಲೆ ತನ್ನ ಪೂರ್ಣ ಹತೋಟಿ ಇರಬೇಕೆಂದು ಅವನು ಬಯಸುತ್ತಾನೆ. ಅವನ ಯಜಮಾನ ಶಕ್ತಿಯ ಜೊತೆ ಆಟವಾಡಿದರೆ, ಇವನ ಆಟ ಯಜಮಾನನ ಜೊತೆ.

ಈ ನಾಲ್ವರೂ ಶಕ್ತಿ ಕೇಂದ್ರವನ್ನು ತಮಗೆ ಸರಿಹೊಂದುವAತೆ ನಡೆಸುತ್ತಾರೆ ಮತ್ತು ತಮ್ಮದೇ ಆದ `ಕಟ್ಟಳೆ’ ಗಳನ್ನು ರಚಿಸುತ್ತಾರೆ. ಇವರಿಗೆ ಸಿಗುವ ಒಂದೊAದು ಅವಕಾಶದಲ್ಲೂ ಅದರಲ್ಲಿ ಸಿಗಬಹುದಾದ ಎಲ್ಲ ರಸವನ್ನು ಹೀರಿ ತೆಗೆಯುತ್ತಾರೆ.

ಭ್ರಷ್ಟಾಚಾರವು ಒಟ್ಟು ಅರ್ಥವ್ಯವಸ್ಥೆಯ ಭಾಗವಾಗಿದ್ದರೂ ಅದನ್ನು ಬರೇ ಮಾರುಕಟ್ಟೆಯ ಅರ್ಥಶಾಸ್ತçದ ಭಾಗವನ್ನಾಗಿ ಗುರುತಿಸಬಾರದು. ಕೊಡುಕೊಳ್ಳುವಿಕೆಯ ಒಂದು ಅಂಗವನ್ನಾಗಿ ನೋಡಿದಾಗ, ಅದನ್ನು ಬೇರೆ ಬೇರೆ ಅಂಗಗಳ ಕಲಸುಮೇಲೋಗರ ಎಂದು ಗುರುತಿಸಬೇಕು. ಅದು ಆತಿಥ್ಯ, ಉಡುಗೊರೆ, ಸೇವೆ ಮತ್ತು ಸುಲಿಗೆ ಮುಂತಾದ ಹಲವು ಆಯಾಮಗಳೆಲ್ಲ ಒಂದೇ ಬಾರಿಗೆ ವ್ಯಕ್ತವಾಗುವ ಸಂಕರ. ಬಹುಶಃ ಅದನ್ನು ನೇತ್ಯಾತ್ಮಕ ಉಡುಗೊರೆ ಎಂದು ಗ್ರಹಿಸಬಹುದೇನೋ. ಲಂಚ ಕೊಡುವುದು ಒಂದು ನೇತ್ಯಾತ್ಮಕ ಉಡುಗೊರೆ. ನಾವು ಪಡೆಯಬೇಕಾದ ಸೇವೆಯ ಹಕ್ಕು ನಮ್ಮದೇ ಆಗಿದ್ದರೂ (ಕೆಲವೊಂದು ಬಾರಿ ಮಾತ್ರ ನಾವು ಕೇಳುವ ಸೇವೆ ನಮ್ಮ ಹಕ್ಕಾಗಿರುವುದಿಲ್ಲ). ಅಂಥ ಸೇವೆಯನ್ನು ಪಡೆದ ನಂತರ ಕೊಟ್ಟವರಿಗೆ ಋಣಿಯಾಗಿರಬೇಕೆನಿಸುತ್ತದೆ. ನಮ್ಮ ಹಕ್ಕಾದ ಸೇವೆಯನ್ನು ಪಡೆಯುವುದಕ್ಕೂ ಉಡುಗೊರೆ ಕೊಡಬೇಕಾಗಿರುವುದೇ (ಅಥವಾ ಅಂಥ ನಿರೀಕ್ಷಣೆ ಸಮಾಜದಲ್ಲಿರುವುದರಿಂದ) ಇಲ್ಲಿ ಕಾಣುವ ವ್ಯಂಗ್ಯ.ನಮ್ಮ ಆಸೆ, ಹಕ್ಕು ಮತ್ತು ಅದನ್ನು ಪಡೆಯಲು ಇರುವ ಅಡಚಣೆಗಳು – ಇವೆಲ್ಲದರ ಮಧ್ಯೆ ಭ್ರಷ್ಟಾಚಾರ ನೇತ್ಯಾತ್ಮಕ ಉಡುಗೊರೆಯಾಗಿ ಪರಿವರ್ತಿತಗೊಳ್ಳುತ್ತದೆ. ನಮ್ಮ ಹಕ್ಕಿನ ಸೇವೆಗಳಿಗೆ ನಾವೇ ಬೆಲೆ ಕೊಟ್ಟು ಪಡೆಯಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಲ್ಲಿ – ಬಂದಳಿಕೆಯ ಭಾವ, ಪೋಷಕ ಭಾವ ಮತ್ತು ಉಡುಗೊರೆ – ಎಲ್ಲವೂ ಸೇರಿ `ಸೇವೆ’ಯ ಭಾಷೆಯೊಳಗೆ ಒಂದಾಗಿ ಸೇರಿ ಹೋಗುವುದನ್ನು ಗಮನಿಸಬಹುದು. ಆದ್ದರಿಂದಲೇ ಭ್ರಷ್ಟಾಚಾರ ಒಂದು ಸಂಕೀರ್ಣ ವಸ್ತುವಾಗಿರುವುದು. ಅದು ಸೇವೆಯೆಂಬ ಸಿದ್ಧಾಂತ, ಸೇವೆಯನ್ನು ನೀಡುವ ಕ್ರಿಯೆಯ ವ್ಯವಸ್ಥೆ, ಆತಿಥ್ಯದ ಒಂದು ಆಯಾಮ ಮತ್ತು ಸುಲಿಗೆಯ ಸಂಬAಧಿ – ಈ ನಾಲ್ಕೂ ಆಯಾಮಗಳನ್ನು ಒಟ್ಟೊಟ್ಟಿಗೇ ಪ್ರದರ್ಶಿಸುತ್ತಿರುತ್ತದೆ. ಈ ನಾಲ್ಕರ ಬಂಧವನ್ನು ಬಿಡಿಸದ ಹೊರತು, ಭ್ರಷ್ಟಾಚಾರವೆಂಬ ‘ಆಡಳಿತ ಯಂತ್ರದ ಕಲೆ’ ಯನ್ನು ಉಪಯೋಗಿಸುತ್ತಲೇ ಇರುತ್ತೇವೆ. ಈ ಬಂಧವನ್ನು ಬಿಡಿಸುವ ಮೊದಲು, ಭ್ರಷ್ಟಾಚಾರದಲ್ಲಿ ‘ಚಂಚಲ ಸ್ವಭಾವದ’ ಮತ್ತು ‘ಸ್ಥಿರತೆ’ ಯುಳ್ಳ ಅಂಗಗಳನ್ನು ನಾವು ಗುರುತಿಸಬೇಕಾಗುತ್ತದೆ.

ಭ್ರಷ್ಟಾಚಾರದ ಸಿದ್ಧಾಂತದ ಅಧ್ಯಯನ ನಡೆಸುತ್ತಿರುವವರು ಸುಧಾರಣೆಯ ಕಡೆಗೂ ಗಮನ ಹರಿಸಬೇಕು. `ಸುಧಾರಣೆ’ ಎನ್ನುವುದು ಆಡಳಿತ ಯಂತ್ರ ಬದಲಾವಣೆಯನ್ನು ತರಲು ಬಳಸುವ ಒಂದು ತಂತ್ರ ಮತ್ತು ಪರಿಭಾಷೆ. ಆ ಭಾಷೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಸುಧಾರಣೆಗೆ ನಾಲ್ಕು ಆಯಾಮಗಳಿರುತ್ತವೆ. ಮೊದಲನೆಯದು ಆತ್ಯಂತಿಕವಾಗಿ `ವ್ಯಕ್ತಿಮೂಲ’ ವಾದದ್ದು. ಭ್ರಷ್ಟಾಚಾರವನ್ನು, ಒಬ್ಬ ಸಂಸ್ಕಾರವAತ ವ್ಯಕ್ತಿಯ ಮೇಲಿರುವ ಕಳಂಕ ಎಂದು ಗುರುತಿಸಲಾಗುತ್ತದೆ. ಆದ್ದರಿಂದ ಚಾರಿತ್ರ÷್ಯ ನಿರ್ಮಾಣವನ್ನು ಇದಕ್ಕೆ ಉತ್ತರವಾಗಿ ಕಾಣುವುದುಂಟು. ಇದನ್ನು ಬಹುತೇಕ ಬಾರಿ `ವ್ಯಕ್ತಿತ್ವ ವಿಕಸನ’ ಎಂದೂ ಗುರುತಿಸುವುದುಂಟು. ಈ ಮಾದರಿಯ ಸುಧಾರಣೆಯಲ್ಲಿ, ಕೆಲವು ನಿರ್ದಿಷ್ಟ ಕಾರ್ಯಗಳನ್ನು ಗುರುತಿಸಿ ಅಳವಡಿಸಿಕೊಳ್ಳುವುದಕ್ಕೆ ಸೀಮಿತಗೊಳ್ಳುತ್ತದೆ. `ಸುಧಾರಣೆ’ ಎಂಬ ಪದಕ್ಕಿರುವ ಗಾಢತೆ ಮತ್ತು ಶಕ್ತಿ, ಈ ಗುರುತಿಸಿದ `ಕಾರ್ಯಸೂಚಿ’ ಗಳಿಗೆ ಇಲ್ಲದೇ ಹೋಗಬಹುದು.

ಇಲ್ಲಿ ಎರಡು ಅಂಶಗಳನ್ನು ಉಲ್ಲೇಖಿಸುವುದು ಸೂಕ್ತ. `ಒಳ್ಳೆಯ’ ಮನುಷ್ಯನಾಗುವುದು ಎಂದರೆ ಅವನು `ಸಮರ್ಥ ಹಾಗೂ ದಕ್ಷ’ನೂ ಆಗಬಹುದು ಎಂದು ತಿಳಿಯಬಾರದು. `ಭ್ರಷ್ಟಾಚಾರ’ ವೆಂಬ `ಪಾಪದ ಕೆಲಸ’ಕ್ಕೆ ಇರುವ ತರ್ಕಬದ್ಧತೆಯಾಗಲೇ, ವ್ಯಾಕರಣವಾಗಲಿ `ಒಳ್ಳೆಯ’ ಮನುಷ್ಯನಿಗೆ ತಿಳಿಯದೇ ಹೋಗಬಹುದು. `ಒಳ್ಳೆಯತನ’ ಎಷ್ಟೇ ಸುಂದರವಾದ ಅಭೀಪ್ಸೆ ಯಾದರೂ, ಸಾಮಾಜಿಕ ದೃಷ್ಟಿಯಿಂದ `ಕೆಲಸಕ್ಕೆ ಬಾರದ್ದೂ’ ಆಗಿಬಿಡಬಹುದು. ಭ್ರಷ್ಟಾಚಾರ ಒಂದು ವ್ಯವಸ್ಥೆಯಾಗಿ, ಸಮಾಜದ ಆಸೆಗಳ ಮತ್ತು ಅಗತ್ಯಗಳ ತರ್ಕವನ್ನು ತನ್ನಲ್ಲಿ ಅಂತರ್ಗತವಾಗಿಸಿರುವುದರಿAದ, ಬರೇ `ಒಳ್ಳೆಯತನ’ ಭ್ರಷ್ಟಾಚಾರವನ್ನು ದೂರ ಮಾಡುವುದಂತೂ ಕನಸೇ ಸರಿ. ಎರಡನೆಯದಾಗಿ, ಭ್ರಷ್ಟಾಚಾರವನ್ನು ಒಂದು ರಾಕ್ಷಸ ಪ್ರವೃತ್ತಿಯಾಗಿ ಚಿತ್ರಿಸಿದರೂ ಅದರಿಂದಾಗಿ ಆಗುವ ಲಾಭ ತುಂಬ ಕಡಿಮೆ. ಕಪ್ಪು ಹಣವನ್ನು ಮಾತ್ರ ಭ್ರಷ್ಟಾಚಾರವನ್ನಾಗಿ ತೋರಿಸುವುದು ಇಡೀ ವ್ಯವಸ್ಥೆಯ ಸಂಕೀರ್ಣತೆಯನ್ನು ಅರಿಯದೇ ಮಾತಾಡುವ ಭೋಳೇತನದಂತೆ ಕಾಣುತ್ತದೆ. ಕಪ್ಪುಹಣ ಎನ್ನುವುದು ಒಂದು ಸಂಕೇತ ಅಥವಾ ಸಂಜ್ಞೆ ಮಾತ್ರ. ಅದು ನಮ್ಮ ಆಡಳಿತಶಾಹಿಯಲ್ಲಿನ ಅವ್ಯವಸ್ಥೆಯನ್ನು ಮತ್ತು ಶಕ್ತಿಶಾಲಿ ಬಲಗಳ ಮುಖಾಮುಖಿಯ ಕಡೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಸಹಾಯ ಮಾಡೀತು. ಯಾವಾಗ ಸರ್ಕಾರ ವಿಧಿಸಿದ `ತೆರಿಗೆ ವ್ಯವಸ್ಥೆ’ ತನ್ನನ್ನು ಬಲಿಪಶುವನ್ನಾಗಿ ಮಾಡುತ್ತಿದೆ ಎಂಬ ಭಾವ ಒಂದು ದೇಶದ ಪ್ರಜೆಯಲ್ಲಿ ಹುಟ್ಟುತ್ತದೋ ಆಗಲೇ ಕಪ್ಪು ಹಣದ ವಾಂಛೆಯೂ ಹುಟ್ಟುತ್ತದೆ. ನೀವು ಒಂದು ಮನೆಯನ್ನು ಕೊಳ್ಳಲು ಅಥವಾ ಮಾರಲು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ಕಪ್ಪು ಹಣವಿಲ್ಲದೇ ಆ ಕೊಡುಕೊಳ್ಳುವಿಕೆಯನ್ನು ನಿಭಾಯಿಸುವುದು ಕಷ್ಟಸಾಧ್ಯ. ಎಷ್ಟು ಕಪ್ಪು ಇರಬೇಕು ಮತ್ತು ಎಷ್ಟು ಬಿಳಿ ಸಾಕು ಎಂಬ ಪ್ರಶ್ನೆಯಲ್ಲಿ, ಒಂದು ಸೂಕ್ಷ÷್ಮವಾದ ಅನುಪಾತವನ್ನು ಬಯಸುವ ಮತ್ತು ಸಹಿಸುವ ಎಷ್ಟೋ ಪ್ರಾಮಾಣಿಕ ಮಂದಿ ನಮ್ಮಲ್ಲಿದ್ದಾರೆ. ಆದರೆ ಕೊನೆಗೂ ಆ ‘ಕೊಡುಕೊಳ್ಳುವಿಕೆಗೆ’ ಬಣ್ಣಗಳ ಅನುಪಾತದ ಗುಪ್ತಲಿಪಿ ಇದ್ದೇ ಇರುತ್ತದೆ. ಬಾಬಾ ರಾಮದೇವ್ ಅಂಥವರಿಗೆ, ಬ್ಲಾಕ್ ಲೇಬಲ್ ಪಾನೀಯದಂತೆಯೇ ಬ್ಲಾಕ್ ಮನಿಯೂ ನಿಷಿದ್ಧ. ಕಪ್ಪು ಹಣ ಬೇಡವೆನ್ನುವವರನ್ನು ಬಿಳಿಯ ಹಣವೇ ಮುಂದೆAದಾದರೂ ಕಿತ್ತು ತಿಂದೀತು. ಕಾಕತಾಳಿಯವಾಗಿ ಜೀವನದಲ್ಲಿ ಯಶಸ್ವಿಯಾದವರು ಮತ್ತು ಆ ಯಶಸ್ಸಿನಿಂದ ಶ್ರೀಮಂತರಾದವರನ್ನು ‘ಕಪ್ಪು ಹಣ’ ವಂತರೆAದು ಗುರುತಿಸುವುದುಂಟು.

ಬಾಲಿವುಡ್ ಚಿತ್ರೋದ್ಯಮ ಕಪ್ಪುಹಣದ ಜೊತೆಗೆ ಆಟವಾಡುತ್ತಲೇ ಅದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಳ್ಳ ಸಾಗಣೆದಾರ ಮತ್ತು ರಾಜಕೀಯ ವ್ಯಕ್ತಿ ಕಪ್ಪುಹಣದ ವಾರಸುದಾರರಾಗಿದ್ದರು. ‘ರಾಬರ್ಟ್’ ಎಂದೋ ಅಥವಾ ಅಲ್ಪಸಂಖ್ಯಾತ ಗುಂಪಿನ ಅಂಥದೇ ಇನ್ನೊಂದು ಹೆಸರಿನ ಕಳ್ಳಸಾಗಣೆದಾರನನ್ನು ನಮ್ಮ ಹೀರೋ ಬಡಿದು ಪೊಲೀಸರಿಗೆ ಒಪ್ಪಿಸಬಹುದು. ಆದರೆ ಅವನು ವ್ಯವಸ್ಥೆಯನ್ನು ಬದಲಾಯಿಸಲಾರ. `ಕಪ್ಪು ಹಣ’ ಎಂಬುದು ಒಬ್ಬ ರಾಕ್ಷಸೀ ಪ್ರವೃತ್ತಿಯನ್ನು ಸಾಂಕೇತಿಸಬಹುದು. ಆದರೆ ಸಮಾಜಶಾಸ್ತçದಲ್ಲಿ ನಾವು ಕಾಣಬೇಕಾದ ಬೇರೆ ಬೇರೆ ವಿಷಯಗಳನ್ನು ಒಟ್ಟೊಟ್ಟಿಗೇ ನೋಡಬೇಕಾದ `ಬೆರಕೆ’ ಯನ್ನು ಆ ಪದದಲ್ಲಿ ಕಾಣಲಾರೆವು. ಬಾಲಿವುಡ್‌ನವರು ಕಪ್ಪುಹಣದ ಬಗ್ಗೆ ತೋರುವ ಸೂಕ್ಷ÷್ಮತೆ ಬಾಬಾ ರಾಮದೇವ್ ಅವರ ಅಭಿಯಾನಕ್ಕಿಲ್ಲ. ಅವರ ಪ್ರಕಾರ `ಕಪ್ಪು ಹಣ’ ವೆಂದರೆ, ನಮ್ಮದೇ ಆಗಬೇಕಾಗಿರುವ ಸಂಪತ್ತು ಹೊರದೇಶದಲ್ಲಿದೆ ಎನ್ನುವ ಸೀಮಿತಾರ್ಥ. ಅವರ ಪ್ರಕಾರ, ಅದು ಅನಗತ್ಯ `ದುಂದುವೆಚ್ಚ’ ವನ್ನೂ ಪ್ರತಿನಿಧಿಸುತ್ತದೆ. ಬಾಬಾ ರಾಮದೇವ್ ಅವರ ಸ್ವದೇಶೀ ಅಭಿಯಾನ, ಭ್ರಷ್ಟಾಚಾರದ ತರ್ಕವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅದು ವಿದೇಶೀ ಸಿದ್ಧಾಂತ/ವಸ್ತುಗಳ ಮೇಲೆ ಇರುವ ಒಂದು ಬಗೆಯ ವಿರೋಧವನ್ನೇ `ಭ್ರಷ್ಟಾಚಾರ ವಿರೋಧ’ ವೆಂದು ಬಗೆದಂತೆ ತೋರುತ್ತದೆ. ಭ್ರಷ್ಟಾಚಾರದ ಬಗ್ಗೆ ಸಮಾಜದಲ್ಲಿರುವ ಜುಗುಪ್ಸೆಯನ್ನು ಅದು ಈ ಅಭಿಯಾನದ ಎಣ್ಣೆಯಾಗಿ ಬಳಸುತ್ತದೆ. ಆದರೆ, ಭ್ರಷ್ಟಾಚಾರದ ಎಲ್ಲ ಮಗ್ಗುಲುಗಳ ವ್ಯವಸ್ಥಿತ ಅರಿವು ಅದಕ್ಕಿಲ್ಲ. `ಎರಡು ಸಂಸ್ಕöÈತಿಗಳ ನಡುವಿನ ಯುದ್ಧ’ ಎಂಬ ಘೋಷಣೆಗಳನ್ನು ಅದು ಏರು ದನಿಯಲ್ಲಿ ಮಾಡುತ್ತದೆ. ಆದರೆ ಭ್ರಷ್ಟಾಚಾರದ ನೈಮಿತ್ತಿಕ ಹರವು ಮತ್ತು ಸಾಮಾನ್ಯೀಕರಣದ ಅರಿವು ಅದಕ್ಕಿಲ್ಲ. ರಾಮದೇವ್ ಅವರು ಭ್ರಷ್ಟಾಚಾರದ ರಾಕ್ಷಸೀ ಮುಖವನ್ನು ತೋರುತ್ತಾ ಸುಧಾರಣೆಯ `ಚಮತ್ಕಾರೀ ಪ್ರದರ್ಶನ’ವನ್ನು ನಮ್ಮ ಮುಂದಿಡುತ್ತಾರೆ. ಆದರೆ ಅದಕ್ಕೆ ಬೇಕಾದ ಕಾನೂನಿನ ಸಮರವನ್ನಾಗಲೀ ಮತ್ತು ಧಾರ್ಮಿಕ ಅಭಿಯಾನವನ್ನಾಗಲೀ ನಿರಂತರವಾಗಿ ನಡೆಸುವ ಚೈತನ್ಯ ಈ ಅಭಿಯಾನಕ್ಕಿಲ್ಲ.

ಭ್ರಷ್ಟಾಚಾರದ ವಿರುದ್ಧದ ಇನ್ನೊಂದು ಬಗೆ ಅಣ್ಣಾ ಹಜಾರೆಯವರದ್ದು. ಅಣ್ಣಾ ಹಜಾರೆ ಎಂದರೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು. ಅವರು ಗಾಂಧೀವಾದಿ ಮತ್ತು ಸ್ವದೇಶಿಯಲ್ಲಿ ನಂಬಿಕೆಯಿಟ್ಟವರು. ಅವರು ಹಳ್ಳಿಯ ಉದ್ಧಾರಕ್ಕಾಗಿ, ಸರ್ಕಾರದ ಜೊತೆ ಸಣ್ಣ ಮಟ್ಟಿನ ಯುದ್ಧಗಳನ್ನು ಮಾಡಿ ಜಯಗಳಿಸಿದ್ದಾರೆ. ಕುಡಿತದ ವಿರೋಧದ ಪರವಾಗಿ ಅವರು ಮಾಡಿರುವ ಜನ ಜಾಗೃತಿ ಎಲ್ಲರಿಗೂ ತಿಳಿಸುವಂಥಾದ್ದು. ಇಷ್ಟೆಲ್ಲ ಇದ್ದರೂ, ಅವರು ಭಾಗವಹಿಸಿದ ಮತ್ತು ನಾಯಕತ್ವ ವಹಿಸಿದ ಕಾದಾಟಗಳ ಹರವು ಚಿಕ್ಕದು. ಈ `ಒಳ್ಳೆಯ’ ಮನುಷ್ಯ, ಒಂದೇ ಬಾರಿಗೆ ಆ ಹರಹನ್ನು ದೊಡ್ಡದು ಮಾಡಿ, ಭ್ರಷ್ಟಾಚಾರದ ವಿರುದ್ಧ `ರಾಷ್ಟಿಯ ನಾಯಕ’ ರಾಗುವುದಕ್ಕೆ ಹೊರಟಿದ್ದಾರೆ. ಅವರ ಸುತ್ತ ಮೂರು ತರಹದ ವ್ಯಕ್ತಿಗಳಿದ್ದಾರೆ – ಅಗ್ನಿವೇಶ್, ಬೇಡಿ ಮತ್ತು ಕೇಜ್ರಿವಾಲ್.

ಸ್ವಾಮಿ ಅಗ್ನಿವೇಶ್ ಅವರು ದಶಕಗಳಿಂದ ಮಾನವ ಹಕ್ಕುಗಳಿಗೆ ಹೋರಾಡಿದವರು ಮತ್ತು ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಅದರಲ್ಲೂ `ಜೀತ ಪದ್ಧತಿ’ ಯ ವಿರುದ್ದ ಅವರ ಹೋರಾಟ ಉಲ್ಲೇಖನೀಯ. ಕಿರಣ್ ಬೇಡಿ ಭಾರತದ ಮೊದಲ ಮಹಿಳಾ ಪೊಲೀಸ್ ಆಫೀಸರ್ ಮತ್ತು ಅವರ ಸೇವಾವಧಿಯಲ್ಲಿ ಒಬ್ಬ ಕಟ್ಟುನಿಟ್ಟಿನ ಮತ್ತು ನಿರ್ಭಯ ಆಫೀಸರ್ ಎಂದು ಹೆಸರು ಮಾಡಿದವರು. ಒಂದು ಕಾಲದಲ್ಲಿ ಅವರು ಟೆನಿಸ್ ಆಟವನ್ನು ರಾಷ್ಟೀಯ ಮಟ್ಟದಲ್ಲಿ ಆಡಿದ್ದೂ ಉಂಟು. ಇಂಥ ಹಿನ್ನೆಲೆಯಿಂದ ಬಂದ ಬೇಡಿಯವರಿಗೆ ಭ್ರಷ್ಟಾಚಾರವೆನ್ನುವುದು ಒಂದು `ಅಪರಾಧ’ವಾಗಿ ಕಾಣುತ್ತದೆ. ಆದರೆ ಯಾವಾಗಲೂ ಅದು ಅಪರಾಧವಾಗಬೇಕಿಲ್ಲ. ಇವೆರಡರ ಮಧ್ಯೆ ಸೂಕ್ಷ÷್ಮವಾದದ್ದೊಂದು ವ್ಯತ್ಯಾಸ ಇದೆ. ಅಕಸ್ಮಾತ್ ನಾವು ಇವೆರಡನ್ನೂ ಒಂದೇ ಎಂದು ತೀರ್ಮಾನಿಸಿ ಕಾನೂನಿಗೆ ಒಪ್ಪಿಸಿಬಿಟ್ಟರೆ, ಭಾರತದ ಹೆಚ್ಚಿನ ಪ್ರಜೆಗಳು ಜೈಲು ಸೇರಬೇಕಾದೀತು. ಭಾರತ ಇಂದು ಲಂಚ ತೆಗೆದುಕೊಳ್ಳುವವರ ಮತ್ತು ಕೊಡುವವರ ದೇಶವಾಗಿದೆ. ಕೇಜ್ರಿವಾಲ್ ಒಬ್ಬ ಮಾಜಿ ಆದಾಯ ತೆರಿಗೆ ಅಧಿಕಾರಿಯಾಗಿದ್ದವರು; ಅವರು ಎಲ್ಲ ವಹಿವಾಟಿನಲ್ಲಿ ಪಾರದರ್ಶಕತೆಯನ್ನು ಬಯಸುತ್ತಾರೆ.

ಸುಧಾರಕ, ಅಪರಾಧ ತಡೆಹಿಡಿಯಬೇಕೆಂದಿರುವವ ಮತ್ತು ಒಬ್ಬ ಒಳ್ಳೆಯ ಅಧಿಕಾರಿ – ಈ ಮೂವರು ಹಜಾರೆಯ ಸುತ್ತ ಇರುವ ಮೊದಲ ಪರಿಧಿಯಲ್ಲಿರುವವರು. ಎರಡನೆಯ ಪರಿಧಿಯಲ್ಲಿ, ಭ್ರಷ್ಟಾಚಾರ ನಿರ್ಮೂಲನೆಗೆ ಬೇಕಾದ `ಧಾರ್ಮಿಕ’ ಆಯಾಮವನ್ನು ಹಾಕಿಕೊಡುತ್ತದೆನ್ನುವ ಶ್ರೀ ಶ್ರೀ ರವಿಶಂಕರ್ ಅವರ `ಆರ್ಟ್ ಆಫ್ ಲಿವಿಂಗ್’ ಸಂಸ್ಥೆ, ಮೂರನೆಯ ಪರಿಧಿಯಲ್ಲಿ, ತನ್ನನ್ನು ತಾನು `ಸ್ವದೇಶಿ’ ಎಂದು ಗುರುತಿಸಿಕೊಳ್ಳುವ, ಆದರ್ಶ ಯುವಕ ಯುವತಿಯರು ಸೇರಿ `ಯಂಗಿಸ್ತಾನ್’ ಎಂದು ಕರೆಯಲ್ಪಡುವ ತಂಡ ಇದೆ. ಮಧ್ಯಮ ವರ್ಗದ ಭಾರತೀಯರು ಅನುಭವಿಸುತ್ತಿರುವ `ನೈತಿಕ ಅಧಃಪತನ’ ದ ಭಾವವನ್ನು ಹಜಾರೆ ಬಳಸಿಕೊಂಡಿದ್ದರೂ, ಲೋಕ್‌ಪಾಲ್ ಮಸೂದೆಯನ್ನು ಕಾನೂನಾಗಿ ಪರಿವರ್ತಿಸುವ ಅವರ ಯೋಚನೆ/ಯೋಜನೆಗಳೇನೂ ಆ ಗುಂಪಿನವರಲ್ಲಿ ವಿಶ್ವಾಸ ಮೂಡಿಸಲಿಲ್ಲ. ಸಾಮಾಜಿಕ ವಲಯದಲ್ಲಿ `ನೈತಿಕತೆ’ ಯನ್ನು ಮೂಡಿಸುವ ಅಭಿಯಾನವನ್ನು ಅವರು ಕೈಗೊಳ್ಳಬೇಕಾಗಿತ್ತು. ಅದನ್ನು ಬಿಟ್ಟು, ಅವರು ಕಾನೂನನ್ನು ಜಾರಿಗೊಳಿಸುವುದರ ಮೂಲಕ ಸುಧಾರಣೆಯನ್ನು ತರುವ ಆಶಯವನ್ನು ಮುಂದುವರಿಸಿದಾಗ, ಅವರ ನಡೆಗಳು, ರಾಜಕೀಯ ಚದುರಂಗದಾಟದಲ್ಲಿ ಸಿಕ್ಕಿ ಹಾಕಿಕೊಂಡವು. ಹೊರನೋಟಕ್ಕೆ ಮುತ್ಸದ್ದಿತನ ತೋರುವ ಮತ್ತು ತಮ್ಮ ನಿಲುವು ಪ್ರಾಯೋಗಿಕ ಮತ್ತು ವಾಸ್ತವಿಕ ಎಂದು ಬಿಂಬಿಸುವ ಕಾಂಗ್ರೆಸ್ ನಾಯಕರಿಂದಲೇ ಅವರು ಸೋಲನ್ನು ಅನುಭವಿಸುತ್ತಾರೆ. ಹಜಾರೆಯವರ ಮುಗ್ಧತೆಯನ್ನು `ಕಾನೂನು ವ್ಯವಸ್ಥೆಗೆ ಭಂಗ’ ಬರಬಹುದು ಎಂಬ ಕಾರಣ ಒಡ್ಡಿ, ಇವರ ಸುಧಾರಣೆಯ ಉಗಿಬಂಡಿ ಹಳಿ ತಪ್ಪುವಂತೆ ಮಾಡುತ್ತಾರೆ.

ಭ್ರಷ್ಟಾಚಾರದ ವಿರುದ್ಧ, ಮೂರನೆಯ ಪ್ರವೇಶ ಮಾಧ್ಯಮದ ವತಿಯಿಂದ ನಡೆಯುತ್ತಿರುವುದನ್ನು ಕಾಣಬಹುದು. ಭ್ರಷ್ಟಾಚಾರವನ್ನು `ಬಯಲಿ’ಗೆಳೆದರೆ ಸುಧಾರಣೆ ಆಗುತ್ತದೆ ಎಂದು ಕೆಲವು ಮಾಧ್ಯಮಗಳು ನಂಬಿದAತಿದೆ. ಅವರ ಉತ್ಸಾಹದ ಬಗ್ಗೆ ಎರಡು ಮಾತಿಲ್ಲವಾದರೂ ಅದು ಸ್ವಲ್ಪ ಸರಿಯಾದ ದಿಕ್ಕಿನಲ್ಲಿಲ್ಲ ಎಂದೆನಿಸುತ್ತದೆ. ಈ ರೀತಿ `ಬಯಲಿಗೆಳೆದಾಗ’ ಭ್ರಷ್ಟಾಚಾರದಲ್ಲಿ ತೊಡಗಿರುವ ಒಬ್ಬನನ್ನು ಅದರ ಬಲೆಯಿಂದ ತೆಗೆಯಬಹುದು. ಆದರೆ ಇದರಿಂದಲೇ ಇಡೀ ವ್ಯವಸ್ಥೆಯನ್ನು ಬದಲಾಯಿಸಿದ ಹಾಗಾಯಿತು ಎಂಬ ಮುಗ್ಧ ನಂಬಿಕೆ ಮಾಧ್ಯಮಕ್ಕಿದೆ. ಮಾಧ್ಯಮವು ಹಗರಣ ಮತ್ತು ಬಿಕ್ಕಟ್ಟು ಈ ಎರಡನ್ನೂ ಒಟ್ಟಿಗೇ ಬೆಸೆಯುತ್ತದೆ. ಕೆಲವೊಂದು ಬಾರಿ, ದೊಡ್ಡ ಹಗರಣಗಳಾದಾಗ, ಸರ್ಕಾರಗಳೇ ಉರುಳಬಹುದು. ಆದರೆ ಅದು ತಳಸ್ಪರ್ಷಿ ಯಾಗಿ ಬದಲಾವಣೆ ತಾರದೆ, ಒಂದು ದೊಡ್ಡ ಪ್ರದರ್ಶನವಾಗಿ ಉಳಿದುಬಿಡುವ ಸಾಧ್ಯತೆಯೇ ಹೆಚ್ಚು. ಹಗರಣಗಳು ಹೆಚ್ಚು ಹೆಚ್ಚು ಬಯಲಾದಂತೆ, ಜನಸಾಮಾನ್ಯರಲ್ಲಿ ಏನೋ ಆಗುತ್ತಿದೆ ಎಂಬ ಭಾವ ಉಂಟಾದರೂ, ಕೊನೆಗೆ ಅದು ಉದಾಸೀನತೆಯಲ್ಲಿ ಪರ್ಯವಸನಗೊಳ್ಳುತ್ತದೆ. ಹಗರಣಗಳ ಜೀವಚಕ್ರದಲ್ಲಿ ಕೆಲವು ಬಿಕ್ಕಟ್ಟುಗಳು ಸೃಷ್ಟಿಯಾಗುತ್ತವೆ ಎಂಬುದರ ಅರಿವು ಮಾಧ್ಯಮದವರಿಗೆ ಇರಬೇಕು. ಆದರೆ ಬಿಕ್ಕಟ್ಟನ್ನು ಬುಡ ಸಮೇತ ತೆಗೆಯಲು ಒಂದು ವ್ಯವಸ್ಥೆಯ ರಾಚನಿಕ ಮತ್ತು ಸಂಘಟನಾತ್ಮಕ ಬದಲಾವಣೆಯಿಂದ ಮಾತ್ರ ಸಾಧ್ಯ ಎಂಬುದರ ಅರಿವೂ ಇರಬೇಕು. ಅದಿಲ್ಲದಿದ್ದರೆ, `ಬಯಲು’ ಮಾಡುವ ಎಲ್ಲ ಪ್ರಹಸನಗಳು, ಸಣ್ಣ ಆಪರೇಶನ್ ಮಾಡಿದ ಹಾಗಾಗುತ್ತದೆ. ಅಷ್ಟೆ.

ಸುಧಾರಣೆಗಳಲ್ಲಿ ನಾಲ್ಕನೇ ಮಾದರಿ – ವಿಶ್ವ ಬ್ಯಾಂಕ್ ಮತ್ತು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ – ನಂತಹ ಸಂಸ್ಥೆಗಳು ಮುಂದಿಡುವ ಸುಧಾರಣಾ ಸಿದ್ಧಾಂತಗಳು ಮತ್ತು ತಂತ್ರಗಳು. ಇವನ್ನು `ಜ್ಞಾನೋದಯದ ವ್ಯಾಖ್ಯಾನಗಳು’ ಎಂದು ಕರೆಯಬಹುದು. ಈ ಸಂಸ್ಥೆಗಳು, ಸುಧಾರಣೆಗಳು ಎಲ್ಲರಿಗೂ ಕಾಣುವಂತಿರಬೇಕು ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿವೆ. ಪಾರದರ್ಶಕತೆಯ ಪರವಾಗಿ ಅವರು ತಮ್ಮ ವಾದವನ್ನು ಮುಂದಿಡುತ್ತಾರೆ ಮತ್ತು ಅವರ ಪ್ರಕಾರ ಭ್ರಷ್ಟಾಚಾರವೆನ್ನುವುದನ್ನು ಅಳೆದು, ತೂಗಿ ಒಂದು ಸಂಖ್ಯೆಯನ್ನಾಗಿ ಪರಿವರ್ತಿಸಬಹುದು ಮತ್ತು ಹಾಗೆ ಆದಾಗ ಅದನ್ನು `ಪರೀಕ್ಷೆ’ ಗೂ ಒಳಪಡಿಸಬಹುದು. ಪಾರದರ್ಶಕ ಲೆಕ್ಕ ಮತ್ತು ಅದರ `ಲೆಕ್ಕ ಪರಿಶೋಧನೆ’ ಭ್ರಷ್ಟಾಚಾರವನ್ನು ಕೊನೆಗೊಳಿಸಬಹುದು ಎನ್ನುವ ಸಿದ್ಧಾಂತ ಸಂಸ್ಥೆಗಳದ್ದು. `ಲೆಕ್ಕ ಪರಿಶೋಧನೆ’ ಅಂದರೆ ದೇಹದ ಉಷ್ಣಾಂಶ ನೋಡಿದಂತೆ. ಅದನ್ನು ಮಾತ್ರ ಗಮನಿಸಿ, ನಾವು `ಹೊಣೆಗಾರಿಕೆ’ ಯನ್ನು ಆರೋಪಿಸುವುದಕ್ಕೆ ಆಗುವುದಿಲ್ಲ. ಅವು ವಾತಾವರಣದಲ್ಲಿರುವ ಭ್ರಷ್ಟಾಚಾರದ ಒಂದು ಮಾಪನವಷ್ಟೇ ಹೊರತು, ಅದರ ಮೇಲೆ ನೇರ ಪರಿಣಾಮ ಬೀರುವುದಿಲ್ಲ.

ಈ ಮೇಲೆ ಕಾಣಿಸಿದ ಕೆಲವು ಊಹೆಗಳು ಮಾಹಿತಿ ಹಕ್ಕಿನ ಬಗ್ಗೆ ನಡೆದಿರುವ ಅಭಿಯಾನದಲ್ಲೂ ಇರುವುದನ್ನು ಕಾಣಬಹುದು.. ರಾಜಕೀಯ ನಡೆಗಳಲ್ಲಿರುವ ಗೌಪ್ಯತೆಗೆ ಅದು ಸವಾಲೆಸೆಯುತ್ತದೆ ಮತ್ತು ಯಾರು ಎಷ್ಟು ಖರ್ಚು ಮಾಡಿದರೆಂಬ ಲೆಕ್ಕವನ್ನು ನೀಡಬೇಕೆಂದು ಹೇಳುತ್ತದೆ. ಮಾಹಿತಿಯು ಪಾರದರ್ಶಕವಾಗಿದ್ದರೆ ಮತ್ತು ಎಲ್ಲರಿಗೂ ಸಿಗುವಂತಾದರೆ, ಭ್ರಷ್ಟಾಚಾರದ ಮೇಲೆ ತನ್ನಿಂದ ತಾನೇ ಹೆಚ್ಚು ಒತ್ತಡ ಬೀರುತ್ತದೆ ಎಂದು ನಂಬಲಾಗುತ್ತದೆ. ಶಕ್ತಿ ವಲಯದಲ್ಲಿಲದ ಬಡ ಮತ್ತು ಅಂಚಿನಲ್ಲಿರುವವರ ಮಾತೂ ಮುಖ್ಯವೆಂದು ಅದು ಪರಿಗಣಿಸುತ್ತದೆ. ಆದರೆ ಶಕ್ತಿ ಕೇಂದ್ರದಲ್ಲಿರುವವರಿಗೆ ಎಸೆಯಬೇಕಾದ ಸವಾಲಿಗೆ ಬೇಕಾದ ಹತಾರಗಳು (ಪಿಐಎಲ್‌ನಂಥವು) ತುಂಬ ಕಡಿಮೆ ಇವೆ. ಸರ್ಕಾರ ಎಲ್ಲಿಯವರೆಗೆ ಈ ಹತಾರಗಳ ಬಗ್ಗೆ ಸಹಿಷ್ಣತೆಯನ್ನು ಉಳಿಸಿಕೊಂಡಿರುತ್ತದೋ, ಅಲ್ಲಿಯವರೆಗೆ ಮಾಹಿತಿ ಹಕ್ಕಿನ ಅಭಿಯಾನಗಳು ಕತ್ತಲ ಕೋಣೆಯಲ್ಲೂ ಸಣ್ಣ ದೀಪ ಉರಿಯುತ್ತಿರುವ ಹಾಗೆ ನೋಡಿಕೊಳ್ಳುತ್ತಿವೆ.

ಮೇಲ್ಕಾಣಿಸಿದ ಐದೂ ಮಾದರಿಗಳೂ ಭ್ರಷ್ಟಾಚಾರವನ್ನು ಒಂದು ರೋಗ ಎಂದು ನಂಬಿ, ಶಕ್ತಿಯ ಬಯಕೆ ಅಥವಾ ದುರಾಸೆಯಿಂದ ಹುಟ್ಟಿದೆ ಎಂಬ ಸಿದ್ಧಾಂತವನ್ನು ಸ್ವೀಕರಿಸಿವೆ. ಆದರೆ ಭ್ರಷ್ಟಾಚಾರದ ತರ್ಕ ಅದಕ್ಕಿಂತ ಸಂಕೀರ್ಣವಾಗಿರುತ್ತದೆ. ವ್ಯವಸ್ಥೆಯ ತರ್ಕದಲ್ಲಿ ಭ್ರಷ್ಟಾಚಾರವೂ ಒಂದು ಅಂಗ ಎನ್ನುವುದನ್ನು ಈ ಸಿದ್ಧಾಂತಗಳು ಒಪ್ಪುವುದಿಲ್ಲ. ಒಂದು ಸಮಾಜಕ್ಕಿರುವ ಅದರದ್ದೇ ಅದ ವಿಶಿಷ್ಟ ಸಂಸ್ಕöÈತಿಯಲ್ಲಿ ಭ್ರಷ್ಟಾಚಾರವೂ ತೊಂದರೆಗಳನ್ನು ನಿವಾರಿಸುವ ಒಂದು ಮಾರ್ಗ; ಮತ್ತು ಅದು ಸಹಜ ಎಂದೂ ಆಗಿರಬಹುದಲ್ಲ? ಭ್ರಷ್ಟಾಚಾರ ಕೊಡಮಾಡುವ `ಸೇವೆ’ ಯನ್ನು ಯಾವ ರೀತಿ ಕೊಡಬಹುದು ಎಂಬುದನ್ನು ಈ ಐದೂ ಸುಧಾರಣೆಗಳೂ ಸಂಬೋಧಿಸುವುದಿಲ್ಲ. ನೈತಿಕತೆಯೂ ಪ್ರಾಯೋಗಿಕತೆಯೂ ಪರಸ್ಪರ ಮಾತನಾಡು ವುದಿಲ್ಲ. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಈ ಮೇಲೆ ಹೇಳಿದ ಸುಧಾರಣೆಗಳಿಗೂ ಮತ್ತು ಭ್ರಷ್ಟಾಚಾರದ ನಡುವೆಯೂ ಕೊಡುಕೊಳು ಸಂಬAಧವಿದೆ. ಕೆಲವೊಂದು ಬಾರಿ, ಇಂತಹ ಸುಧಾರಣೆಗಳು, ಗ್ರಾಹಕರಿಗೆ ಸಿಗುವ ಸೇವೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗಿ, ಅದಕ್ಕೆ ತೆರಬೇಕಾದ ದರ ಹೆಚ್ಚುತ್ತಾ ಹೋಗುವ ಪರಿಸ್ಥಿತಿಯನ್ನೂ ಉಂಟು ಮಾಡುತ್ತವೆ.

ಹಾಗಾದರೆ ನಮ್ಮ ಮುಂದೆ ಇರುವ ಪ್ರಶ್ನೆ ಇದು – ಭ್ರಷ್ಟಾಚಾರವೆನ್ನುವುದು ವ್ಯವಸ್ಥೆಯ ಒಂದು ಅಂಗ ಎನ್ನುವುದಾದರೆ, ಅರ್ಥವ್ಯವಸ್ಥೆಯನ್ನು ಹೇಗೆ ಕಾಣಬೇಕು? ಭಾರತದಲ್ಲಿ ಪ್ರತಿಶತ ೭೦ ರಷ್ಟು ವ್ಯವಹಾರಗಳು ಅನೌಪಚಾರಿಕವಾಗಿಯೇ ನಡೆಯುತ್ತವೆ. ಈ ಸಂಖ್ಯೆಗೆ ಅರ್ಥವ್ಯವಸ್ಥೆಯ ಇತರ ಮುಖಗಳಾದ ಕಳ್ಳ ಸಾಗಾಣಿಕೆ, ಹಾದರ, ಭಯೋತ್ಪಾದನೆ – ಮುಂತಾದ ಮುಖ್ಯ ವಾಹಿನಿಯಲ್ಲಿಲ್ಲದ ವ್ಯವಹಾರಗಳನ್ನು ಸೇರಿಸಬೇಕಾಗುತ್ತದೆ. ಇದರ ಮೇಲೆ ರಕ್ಷಣಾ ಸೇವೆಗಳ ಅರ್ಥವ್ಯವಸ್ಥೆಯನ್ನೂ ಕೂರಿಸಿ. ಇದರ ಎರಡೂ ಬದಿಗಳಲ್ಲಿ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಅಭಿವೃದ್ಧಿ ಕಾಮಗಾರಿಗಳು ಮತ್ತು ವಿಪತ್ಕಾಲದ ಖರ್ಚುಗಳನ್ನೂ ನಿಲ್ಲಿಸಿ. ಈಗ ಹೇಳಿ, ಈ ಇಡೀ ಅರ್ಥವ್ಯವಸ್ಥೆಯ ಯಾವ ಭಾಗದಲ್ಲಿ ಭ್ರಷ್ಟಾಚಾರದ ಸಿದ್ಧಾಂತಗಳು ಎಲ್ಲಿ ಸಲ್ಲುತ್ತವೆ ಎಂದು. `ಚಾರಿತ್ರ÷್ಯ ನಿರ್ಮಾಣ ಅಥವಾ ಲೆಕ್ಕ ಪರಿಶೋಧನೆಯ ಪಾರದರ್ಶಕತೆಗಳು’ ಇಂಥ ಭ್ರಷ್ಟಾಚಾರವನ್ನು ಬುಡ ಮೇಲು ಮಾಡುವಲ್ಲಿ ಅಸಮರ್ಥವಾಗುತ್ತವೆ ಎಂದು ವೇದ್ಯವಾಗುತ್ತದೆ.

ಇಂತಹ ಸ್ಥಿತಿಯನ್ನು ನಮ್ಮ ಕಣ್ಣ ಮುಂದೆ ಚಿತ್ರೀಕರಿಸಿಕೊಳ್ಳಲು ಸಾಧ್ಯ. ಸ್ವಲ್ಪ ಹಿಂದೆ ಹೋಗಿ ನೋಡಿದಾಗ, ನಮ್ಮ ದೇಶವನ್ನು ಅಭಿವೃದ್ಧಿ ಪಡಿಸಲು ಬಳಸಿದ ಮಾದರಿಗಳೇ ಭ್ರಷ್ಟಾಚಾರ ಇಷ್ಟು ಬೆಳೆಯಲು ಕಾರಣ ಎಂಬುದು ತಿಳಿಯುತ್ತದೆ. ಅಭಿವೃದ್ಧಿ ಮತ್ತು ಆಧುನಿಕತೆಯನ್ನು ತರುವಲ್ಲಿ ನಾವು ಕಟ್ಟಿದ ಸಂಸ್ಥೆಗಳು ಎಲ್ಲರನ್ನೂ ಒಳಗೊಳ್ಳದೆ ಕೆಲವರನ್ನು ಮಾತ್ರ ಒಳಗೊಂಡಿದ್ದು ಇದಕ್ಕೆ ಮೂಲ ಕಾರಣ. ನಾವು ಮಾಡಿದ ವರ್ಗೀಕರಣದ ಮಾದರಿಗಳೇ ನಾವು ಭ್ರಷ್ಟರಾಗುವುದಕ್ಕೆ ಕುಮ್ಮಕ್ಕು ಕೊಟ್ಟಿದೆ. ಸಮಾಜದ ಅಂಚಿನಲ್ಲಿರುವವರು, ಹೊರಗಿದ್ದವರು ಮತ್ತು ದುರಾಸೆ ಉಳ್ಳವರು – ಎಲ್ಲರೂ ಈ ವ್ಯವಸ್ಥೆಯಲ್ಲಿ ಉಸಿರಾಡುತ್ತಾರೆ. ಆದರೆ ಅದರ ತೆರಬೇಕಾದ ಬೆಲೆ ಮಾತ್ರ ತುಂಬ ಹೆಚ್ಚು. ರಾಮದೇವ್, ಹಜಾರೆ ಮತ್ತು ಅರುಣಾ ರಾಯ್ – ಇವರಲ್ಲಿ ಯಾರದೂ ತಪ್ಪಿಲ್ಲ. ಎಲ್ಲರೂ ಒಂದು ಸಮಸ್ಯೆಯ ಬೇರೆ ಬೇರೆ ಚಹರೆಗಳನ್ನು ನೋಡುತ್ತಿದ್ದು – ಅದು ನೈತಿಕತೆಯ ಸಮಸ್ಯೆ, ಇದು ಆಧುನಿಕತೆಯದು, ಇದು ಒಳಗೊಳ್ಳುವಿಕೆಯದು, ಇದು ನಾಗರಿಕತೆಯದು – ಎಂದು ಹಣೆಪಟ್ಟಿ ಬರೆಯುತ್ತಾ ಹೋಗಿದ್ದಾರೆ. ಮತ್ತು ಅವರಿಗೆ ಕಾಣುವ ಸತ್ಯಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ. ಅಭಿವೃದ್ಧಿ ಮತ್ತು ಆಧುನಿಕತೆ – ಇವೆರಡೂ ಒಟ್ಟಿಗೇ ಸಾಗಬೇಕಾದಾಗ ಭ್ರಷ್ಟಾಚಾರವೆಂಬ ತೀಕ್ಷ್ಣ ಆಮ್ಲವನ್ನು ಸೃಷ್ಟಿಸಿಯಾಗಿದೆ. ಅದು ವ್ಯವಸ್ಥೆಯನ್ನು ನಿಧಾನವಾಗಿ ಕೊರೆಯುತ್ತಿದ್ದರೂ, ಅದನ್ನು ಜೀವಂತವಾಗಿಯೂ ಇಟ್ಟಿದೆ. ಈ ದ್ವಿಮುಖತೆಯನ್ನು ನಾವು ಒಪ್ಪಿಕೊಳುತ್ತಿಲ್ಲ ಅಷ್ಟೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top