ಕಾರಣವಿಲ್ಲದ ಭಯ ಭೀತಿಗಳು

ಆಂಟನ್ ಚೆಕಾವ್

ಅನು: ನಾಗರೇಖಾ ಗಾಂವಕರ

ಆಂಟನ್ ಚೆಕಾವ್

ಈ ಜಗದಲ್ಲಿ ಇಷ್ಟು ವರ್ಷಗಳ ಬದುಕಿನುದ್ದಕ್ಕೂ ನಾನು ಬರಿಯ ಮೂರು ಬಾರಿ ಮಾತ್ರ ಭಯಗೊಂಡಿದ್ದೆ.

ಮೊದಮೊದಲ ಭಯ ಹೇಗಿತ್ತೆಂದರೆ ಅದು ನನ್ನ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ಇಡೀ ದೇಹವನ್ನು ಥರಥರ ಕಂಪಿಸುವಂತೆ ಮಾಡಿತ್ತು. ಅದು ತೀರಾ ಕ್ಷುಲಕವಾದ ಭಯ. ಆದರೆ ಒಂದು ಬಗೆಯಲ್ಲಿ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡಲು ಏನೂ ಕೆಲಸವಿಲ್ಲದ್ದರಿಂದ ಪತ್ರಿಕೆ ತರೋಣವೆಂದು ನಾನು ನಿಲ್ದಾಣಕ್ಕೆ ಗಾಡಿ ಚಲಾಯಿಸಿದೆ. ಜುಲೈ ತಿಂಗಳ ಒಂದೇ ನಮೂನೆಯ ಸಂಜೆಗಳಂತೆ ಅಂದು ಕೂಡಾ ಶಾಂತವಾದ, ಬೆಚ್ಚಗಿನ, ಬಹುತೇಕ ವಿಷಯಾಸಕ್ತಿ ಉಂಟುಮಾಡುವ ಸಂಜೆಯಾಗಿತ್ತು. ಒಮ್ಮೆ ಈ ಸಂಜೆಗಳು ಹೀಗೆ ಶುರುವಾದರೆ ಬಿಡದಂತೆ ಒಂದು ವಾರ, ಹದಿನೈದು ದಿನಗಳು ಅಥವಾ ಇನ್ನೂ ದೀರ್ಘವಾಗಿರುತ್ತವೆ. ಆದರೆ ಇಂತಹ ಸಂಜೆಗಳು ಒಮ್ಮೆಲೆ ಸಡನ್ನಾಗಿ ಭಯಂಕರ ಚಂಡಮಾರುತಕ್ಕೋ ಅಥವಾ ಬಿಡದೇ ಸುರಿವ ಮಳೆಯಿಂದಲೋ ಬದಲಾಗುತ್ತವೆ. ಮತ್ತು ಎಲ್ಲದರಲ್ಲೂ ಹೊಸತನ ಮೂಡಿಸುತ್ತವೆ.

ಸೂರ್ಯ ಮುಳುಗಿ ಆಗಲೇ ಸ್ವಲ್ಪ ಹೊತ್ತಾಗಿತ್ತು. ಮುಸ್ಸಂಜೆಯ ಮಬ್ಬು ಬಣ್ಣ ನೆಲದ ತುಂಬೆಲ್ಲ ಬಿಡದೇ ಚೆಲ್ಲಿಬಿದ್ದಿತ್ತು. ಹುಲ್ಲು ಮತ್ತು ಹೂಗಳ ಮಧುರ ಉನ್ಮತ್ತಗೊಳಿಸುವ ಪರಿಮಳವು ಚಲನೆ ಇಲ್ಲದ ನಿಶ್ಚಲ ಗಾಳಿಯಲ್ಲಿ ಸೇರಿ ಭಾರವಾಗಿದ್ದವು.

ನಾನು ಗುಜರಿಯಾದ ಟ್ರಾಲಿಯನ್ನು ಓಡಿಸುತ್ತಿದ್ದೆ. ನನ್ನ ಬೆನ್ನ ಹಿಂದೆ ನಮ್ಮ ಮಾಲಿಯ ಮಗ ಪಾಷ್ಕಾ ಇದ್ದ. ಅಗತ್ಯ ಬಿದ್ದರೆ ಕುದುರೆ ನೋಡಿಕೊಳ್ಳಲು ಆದೀತೆಂದು ನಾನವನನ್ನು ಕರೆದುಕೊಂಡು ಬಂದಿದ್ದೆ. ಅವನು ಎಂಟು ವರ್ಷದ ಹುಡುಗ, ಓಟ್ಸ ಚೀಲದ ಮೇಲೆ ತಲೆಯಿಟ್ಟು, ಸಣ್ಣದಾಗಿ ಗೊರಕೆ ಹೊಡೆಯುತ್ತಿದ್ದ. ನಾವು ಸಾಗುತ್ತಿದ್ದ ರಸ್ತೆ ಬಹಳ ಇಕ್ಕಟ್ಟಾಗಿತ್ತು ಆದರೆ ಆಡಳಿತಗಾರನಂತೆ ನೇರವಾಗಿತ್ತು. ಎತ್ತರದ ದಪ್ಪ ರೈ (ಚಿಕ್ಕ ಗೋದಿ) ಧಾನ್ಯದ ಹುಲ್ಲಿನ ನಡುವೆ ಅಡಗಿ ಮೈ ಚೆಲ್ಲಿ ಮಲಗಿದ ದೊಡ್ಡ ಹಾವಿನಂತೆ ಬಿದ್ದಿತ್ತು. ಸೂರ್ಯಾಸ್ತದ ಹೊಂಬೆಳಕಿನ ನಂತರದ ಮಬ್ಬು ಬೆಳಕು ಹರಡಿತ್ತು: ಬೆಳಕಿನ ಗೆರೆಯೊಂದು ಕೆಲವೊಮ್ಮೆ ದೋಣಿಯಂತೆ ಮತ್ತೆ ಕೆಲವೊಮ್ಮೆ ಹಾಸಿಗೆಯಲ್ಲಿ ಸುತ್ತಿದ ಮನುಷ್ಯನಂತೆ ಕಾಣುವ ಸಣ್ಣಗಿನ ವಿಕಾರ ರೂಪದ ಮೋಡದ ನಡುವೆ ಹಾದುಹೋಗಿತ್ತು….

ನಾನು ಒಂದೂವರೆ ಅಥವಾ ಎರಡು ಮೈಲುಗಳಷ್ಟು ಟ್ರಾಲಿ ಓಡಿಸಿದ್ದಿರಬಹುದು. ಸಂಜೆಯ ಮಸುಕಾದ ಹೊಳಪಿನ ಹಿನ್ನೆಲೆಯಲ್ಲಿ ಅದಕ್ಕೆ ಎದುರಾಗಿ ಒಂದರ ಹಿಂದೆ ಒಂದರಂತೆ ಆಕರ್ಷಕವಾದ ಎತ್ತರದ ಪೋಪ್ಲರ್ ಮರಗಳು: ಅದರಾಚೆ ನದಿಯೊಂದು ಹೊಳೆಯುತ್ತಿತ್ತು. ಇದ್ದಕ್ಕಿದ್ದಂತೆ ಇದೇನೊ ಮಾಯೆಯೋ ಎಂಬಂತೆ ಒಂದು ಸುಂದರವಾದ ಚಿತ್ರ ನನ್ನ ಮುಂದೆ ಉದ್ದಕ್ಕೆ ಚಾಚಿಕೊಂಡಿತು. ಹಾಗಾಗಿ ನನ್ನ ಕುದುರೆಯನ್ನು ತಡೆದು ನಿಲ್ಲಿಸಬೇಕಾಯ್ತು. ಅಲ್ಲಿಂದ ಮುಂದೆ ನಾವು ಬಂದ ನೇರವಾದ ರಸ್ತೆ ಒಮ್ಮೆಲೆ ಕವಲಾಗಿದ್ದು, ಕೆಳಗೆ ಪೊದೆಗಳಿಂದ ತುಂಬಿದ ಇಳಿಜಾರಿನೆಡೆಗೆ ಸಾಗಿತ್ತು. ನಾವು ಬೆಟ್ಟವನ್ನೇರಿ ನಿಂತಿದ್ದೆವು. ನಿಂತ ಸ್ಥಳದ ಬುಡದಲ್ಲಿ ಒಂದು ಬೃಹದಾಕಾರದ ರಂಧ್ರವಿದ್ದು ಮುಸ್ಸಂಜೆಯ ಹೊಳೆಯುವ ಕಿರಣಗಳು ಅದರಲ್ಲಿ ತುಂಬಿದ್ದವು. ಅದಕ್ಕೆ ಅದ್ಭುತವಾದ ಆಕಾರವಿತ್ತು ಹಾಗೆ ವಿಶಾಲವೂ ಆಗಿತ್ತು. ಆ ರಂದ್ರದ ತಳಭಾಗದಲ್ಲಿ ವಿಶಾಲವಾದ ಬಯಲಿನಲ್ಲಿ ಪೋಪ್ಲಾರ್ ಮರಗಳು ಸುತ್ತುವರೆದಿದ್ದವು. ಮುಂದೆ ಹೊಳೆಯುವ ನದಿಯ ಪ್ರೀತಿಯ ಅಪ್ಪುಗೆ ನಡುವೆ ಹಳ್ಳಿಯೊಂದು ನೆಲೆಯಾಗಿತ್ತು. ಅದೀಗ ನಿದ್ರಿಸುತ್ತಿದೆ. ಆ ಹಳ್ಳಿಯ ಗುಡಿಸಲುಗಳು, ಗಂಟೆಗೋಪುರ ಹೊತ್ತ ಕ್ರೈಸ್ತ ಚರ್ಚು,ಅಲ್ಲಿಯ ಮರಗಳು, ಎಲ್ಲವೂ ಬೂದು ಬಣ್ಣದ ಮುಸ್ಸಂಜೆಯ ಬೆಳಕಿಗೆ ಹೊಳೆಯುತ್ತಿದ್ದವು.ಮತ್ತು ನದಿಯ ನಯವಾದ ಮೇಲ್ಭಾಗದಲ್ಲಿ ಗಾಢವಾಗಿ ಪ್ರತಿಫಲಿಸುತ್ತಿದ್ದವು.

ಅವನು ಬಿದ್ದುಗಿದ್ದು ಹೋದರೆ ಎಂಬ ಭಯದಿಂದ ನಾನು ಪಾಷ್ಕಾನನನ್ನು ಎಬ್ಬಿಸಿದೆ. ಹಾಗೇ ಬಹಳ ಎಚ್ಚರಿಕೆಯಿಂದ ಇಳಿಜಾರಿನ ದಾರಿಯಲ್ಲಿ ಸಾಗತೊಡಗಿದೆ. ‘ನಾವು ಲುಕೋವೋಗೆ ಬಂದು ಮುಟ್ಟಿದೆವಾ?‘ ಆಲಸ್ಯದಿಂದಲೇ ತಲೆ ಎತ್ತಿ ಕೇಳಿದ ಪಾಷ್ಕಾ. ‘ ಹೌದು. ಇಗೋ ಇದರ ಕಡಿವಾಣ ಸ್ವಲ್ಪ ಹಿಡಿದಿಕೋ’.
ನಾನು ಕುದುರೆಯನ್ನು ಬೆಟ್ಟದಿಂದ ಕೆಳಗಿಳಿಸಿ ಹಳ್ಳಿಯ ಕಡೆ ನೋಡಿದೆ. ಮೊದಲ ದೃಷ್ಟಿಗೆ ನನ್ನ ಗಮನವನ್ನು ಒಂದು ವಿಚಿತ್ರವಾದ ಸನ್ನಿವೇಶ ಸೆಳೆಯಿತು: ಗಂಟೆ ಗೋಪುರದ ಮೇಲ್ಭಾಗದಲ್ಲಿ ಗುಮ್ಮಟ ಮತ್ತು ಘಂಟೆಗಳ ನಡುವಿನ ಸಣ್ಣ ಕಿಂಡಿಯಲ್ಲಿ ಬೆಳಕೊಂದು ಮಿನುಗುತ್ತಿತ್ತು, ಆದರದು ಹೊಗೆಯಾಡುತ್ತಿರುವ ದೀಪದಂತೆ ಇತ್ತು. ಒಂದು ಕ್ಷಣ ಉರಿದರೆ ಇನ್ನೊಂದು ಕ್ಷಣ ನಂದಿಹೋಗುತ್ತಿತ್ತು. ಅದೆಲ್ಲಿಂದ ಮಿನುಗುತ್ತಿದೆ?

ಆದರದು ನನ್ನ ಗ್ರಹಿಕೆಗೆ ನಿಲುಕದ್ದಾಗಿತ್ತು. ಗಂಟೆ ಗೋಪುರದ ಮೇಲ್ಭಾಗದಲ್ಲಿ ಐಕಾನ್ಗಳಾಗಲಿ ಅಥವಾ ದೀಪಗಳಾಗಲಿ ಇರಲಿಲ್ಲವಾದ್ದರಿಂದ ಕಿಟಕಿಯಲ್ಲಿ ಹಾಗೇ ಉರಿಯಲು ಸಾಧ್ಯವಿರಲಿಲ್ಲ. ನನಗೆ ಗೊತ್ತಿರುವಂತೆ ಕಿರಣಗಳು, ಧೂಳುಮತ್ತು ಜೇಡನ ಬಲೆಯ ವಿನಃ ಮತ್ತೇನೂ ಇರಲಿಲ್ಲ, ಆ ಸಣ್ಣ ಗೋಪುರದ ಮೇಲೆ ಹತ್ತುವುದು ಕಷ್ಟಕರವಾಗಿತ್ತು. ಗಂಟೆ ಗೋಪುರದಿಂದ ಅಲ್ಲಿಗೆ ಹೋಗುವ ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

ನಿಜವೆಂದರೆ ಅದು ಹೊರಗಿನ ಬೆಳಕಿನ ಪ್ರತಿಫಲನವಾಗಿತ್ತೇನೋ. ಆದರೆ ನನ್ನ ಕಣ್ಣುಗಳ ಕೀಲಿಸಿ ನೋಡಿದರೂ ನನಗೆ ಹೊರಗಿನ ಅತಿ ವಿಶಾಲ ವಿಸ್ತಾರದಲ್ಲಿ ಒಂದೇ ಒಂದು ಬೆಳಕಿನ ಚುಕ್ಕಿ ಕೂಡಾ ಕಣ್ಣಿಗೆ ಬೀಳಲಿಲ್ಲ. ಚಂದ್ರನಂತೂ ಇರಲಿಲ್ಲ. ಮಬ್ಬಾದ ಮತ್ತೀಗ ತುಂಬಾ ಹೊಳೆದ ನಂತರ ಮಂದಾದ ಗೆರೆಗಳು ಪ್ರತಿಫಲಿಸಲು ಸಾಧ್ಯವಿರಲಿಲ್ಲ. ಕಾರಣವೇನೆಂದರೆ ಕಿಟಕಿಯು ಪಶ್ಚಿಮಕ್ಕೆ ತೆರೆದುಕೊಂಡಿರಲಿಲ್ಲ. ಬದಲಿಗೆ ಪೂರ್ವಕ್ಕಿತ್ತು. ಕುದುರೆ ಮೇಲೆ ಇಳಿಜಾರಿನ ದಾರಿಯಲ್ಲಿ ಸಾಗುತ್ತ ನನಗೆ ಇಂತಹುದೇ ಮತು ಇದೇ ರೀತಿಯ ಹಲವು ಸಂಗತಿಗಳು ತಲೆಯೊಳಗೆ ಸುತ್ತಲಾರಂಭಿಸಿದವು. ಸ್ವಲ್ಪ ಕೆಳಭಾಗಕ್ಕೆ ಬರುತ್ತಲೆ ನಾನು ರಸ್ತೆ ಬದಿಯಲ್ಲಿ ಕೂತು ಆ ಬೆಳಕಿನೆಡೆಗೆ ಪುನಃ ನೋಡಿದೆ. ಮೊದಲಿನಂತೆ ಅದು ಹೊಳೆಯುತ್ತಾ ಉರಿಯುತ್ತಿತ್ತು.

‘ವಿಚಿತ್ರ’ ಯೋಚಿಸಿದೆ. ಗೊಂದಲಗೊಂಡೆ. ಎಂಥಹಾ ವಿಚಿತ್ರ!

ಆಮೆಲೆ ಸ್ವಲ್ಪ ಸ್ವಲ್ಪವೇ ಗೊಂದಲದ ಮನಸ್ಥಿತಿಯಿಂದ ಮೊದಲಿನ ಸ್ಥಿತಿಗೆ ಬಂದೆ. ಮೊದಲಿಗೆ ಅಂದುಕೊಂಡೆ ಇದೊಂದು ಸಾಮಾನ್ಯ ವಿದ್ಯಮಾನವನ್ನು ವಿವರಿಸಲು ಆಗದಂತಹ ಗೊಂದಲ ಎಂದು; ಆದರೆ ಆನಂತರ ನಾನು ಇದ್ದಕ್ಕಿದ್ದ ಹಾಗೇ ಭಯದಿಂದ ಬೆಳಿಕಿನ ಕಡೆಯಿಂದ ಮುಖ ತಿರುವಿ, ಒಂದು ಕೈಯಿಂದ ಪಾಷ್ಕಾÀನನ್ನು ಹಿಡಿದುಕೊಂಡೆನೋ, ಆಗ ನಾನು ಭಯಗೃಸ್ತನಾಗಿದ್ದೆನೆಂದು ಅರಿವಾಯಿತು.

ನಾನು ಏಕಾಂಗಿತನ, ದುಃಖ ಮತ್ತು ಭಯ ಇವೆಲ್ಲವೂಗಳಿಂದಲೂ ಬಂಧಿಯಾಗಿದ್ದೆ. ಈ ಕತ್ತಲೆ ತುಂಬಿದ ದೊಡ್ಡ ರಂದ್ರಕ್ಕೆ ನನ್ನ ಇಚ್ಛೆಗೆ ವಿರುದ್ಧವಾಗಿ ಎಸೆಯಲ್ಪಟ್ಟಿದ್ದೆ. ಅಲ್ಲಿ ಕೆಂಪು ಕಣ್ಣೊಳಗಿಂದ ನನ್ನನ್ನೆ ನೋಡುತ್ತಿತ್ತು. ಗಂಟೆಗೋಪುರದೊಂದಿಗೆ ನಾನು ಏಕಾಂಗಿಯಾಗಿ ನಿಂತಿದ್ದೆ.

“ಪಾಷ್ಕಾ! ಭಯದಿಂದ ಕಣ್ಣುಗಳನ್ನು ಮುಚ್ಚಿ ಚೀರಿದೆ.

“ಏನು?”

“ಪಾಷ್ಕಾ, ಗಂಟೆಗೋಪುರದಲ್ಲಿ ಏನದು ಹೊಳೆಯುತಿದೆ?”

ಪಾಷ್ಕಾ ನನ್ನ ಭುಜದ ಮೇಲಿನಿಂದ ಗಂಟೆಗೋಪುರದೆಡೆಗೆ ನೋಡುತ್ತಾ ಆಕಳಿಸಿದ.

‘ಯಾರಿಗೆ ಗೊತ್ತು?’ ಈ ಹುಡುಗನೊಂದಿಗಿನ ಸ್ವಲ್ಪೇ ಮಾತು ಕೂಡಾ ನನಗೆ ಒಂದಿಷ್ಟು ಭರವಸೆ ನೀಡಿತು. ಆದರದು ತುಂಬಾ ಹೊತ್ತಿನವರೆಗಲ್ಲ. ನನ್ನ ತಳಮಳವನ್ನು ಗ್ರಹಿಸಿದ ಪಾಷ್ಕಾ ತನ್ನ ದೊಡ್ಡ ಕಣ್ಣುಗಳನ್ನು ಬೆಳಕಿನೆಡೆಗೆ ಹರಿಸಿದ ಮತ್ತು ಪುನಃ ನನ್ನ ಕಡೆ ನೋಡಿದ, ಮತ್ತೆ ಬೆಳಕಿನೆಡೆಗೆ..

“ನನಗೂ ಭಯವಾಗುತ್ತಿದೆ.” ಆತ ಉಸುರಿದ.

ಅದಾಗಲೇ ಭಯಗೊಂಡಿದ್ದ ನಾನು ಒಂದು ಕೈಯಿಂದ ಹುಡುಗನ ಗಟ್ಟಿಯಾಗಿ ಹಿಡಿದುಕೊಂಡು ಹತ್ತಿರಕ್ಕೆ ಎಳೆದುಕೊಂಡೆ. ಕುದುರೆಗೆ ಜೋರಾದ ಒಂದು ಏಟೂ ಕೊಟ್ಟೆ.

‘ಇದು ಮೂರ್ಖತನ!” ನನಗೆ ನಾನೇ ಹೇಳಿಕೊಂಡೆ. ಈ ವಿಚಿತ್ರ ವಿದ್ಯಮಾನ ಭಯಾನಕವಾಗಿತ್ತು. ಯಾಕೆಂದರೆ ನನಗದು ಅರ್ಥವಾಗಿರಲಿಲ್ಲ: ಯಾವುದು ನಮಗೆ ಅರ್ಥವಾಗದೋ ಅದು ನಿಗೂಢ ಕೂಡಾ”
ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸತೊಡಗಿದೆ. ಹಾಗಂತ ಕುದುರೆಗೆ ಬಾರಿಸುವುದನ್ನು ನಿಲ್ಲಿಸಲಿಲ್ಲ. ನಾವು ಪೋಷ್ಟಿಂಗ್ ಸ್ಟೇಷನ್ ತಲುಪಿದಾಗ ಉದ್ದೇಶಪೂರಕವಾಗಿಯೇ ಒಂದು ಗಂಟೆÉಗೂ ಅಧಿಕ ಅಲ್ಲಿಯ ಮೇಲ್ವಿಚಾರಕನೊಡನೆ ಹರಟಿದೆ. ಎರಡು ಮೂರು ಪತ್ರಿಕೆಗಳನ್ನು ಓದಿದೆ. ಆದರೆ ಆ ಚಡಪಡಿಕೆ ಮಾತ್ರ ನಿಲ್ಲಲಿಲ್ಲ. ಹಿಂತಿರುಗುವಾಗ ಆ ಬೆಳಕು ಕಾಣಲಿಲ್ಲ. ಬದಲಿಗೆ ಗುಡಿಸಲುಗಳ, ಪಾಪ್ಲರ ಮರಗಳ, ನಾನು ಸಾಗಬೇಕಿದ್ದ ಗುಡ್ಡದ ನೆರಳುಗಳು ನನಗೆ ಜೀವಂತವಾಗಿರುವಂತೆ ಕಂಡವು. ಆದರೆ ಆ ಬೆಳಕು ಅಲ್ಲೇಕಿತ್ತು ಎಂಬುದು ಇಂದಿಗೂ ನನಗೆ ಅರ್ಥವಾಗಿಲ್ಲ.

ನನ್ನ ಅನುಭವಕ್ಕೆ ಬಂದ ಎರಡನೆ ಭಯದ ಸಂದರ್ಭ ಕೂಡಾ ತುಂಬಾ ಕ್ಷುಲಕವಾಗಿತ್ತು. ನಾನು ಪ್ರಣಯ ಭೇಟಿ ನಂತರ ಮನೆಗೆ ವಾಪಸ್ಸಾಗುತ್ತಿದ್ದೆ. ಸುಮಾರು ರಾತ್ರಿ ಒಂದು ಗಂಟೆಯ ಸಮಯ. ಅರುಣೋದಯಕ್ಕೂ ಸ್ವಲ್ಪ ಮೊದಲು ಈ ಪ್ರಕೃತಿ ತನ್ನ ಸ್ವಸ್ಥ, ಸುಖ ನಿದ್ದೆಯಲ್ಲಿ ಮುಳುಗಿಹೋಗುವ ಸಮಯ. ಆದರೆ ಆ ದಿನ ಪ್ರಕೃತಿ ನಿದ್ರಿಸುತ್ತಿರಲಿಲ್ಲ, ರಾತ್ರಿ ನಿಶ್ಷಲವೆಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲದಂತಹ ಸಮಯ.
ಕಾರ್ನಕ್ರೇಕ್ ಹಕ್ಕಿಗಳು, ಕ್ಷಿಲ್ಗಳು, ನೈಂಟಿಗೇಲ್‍ಗಳು,ಮರಕುಟಿಕಗಳು, ಕೂಗುತ್ತಿದ್ದವು, ಚಿಟ್ಟೆಗಳು, ಮಿಡತೆಗಳು ಮೊರೆಯುತ್ತಿದ್ದವು. ಹಗುರವಾದ ಮಂಜು ಹಲ್ಲಿನ ಮೇಲೆ ಹರಡಿತ್ತು. ಆಕಾಶದುದ್ದಕ್ಕೂ ಮೋಡಗಳು ನೇರವಾಗಿ ಚಂದ್ರನಲ್ಲಿಗೆ ಹೊರಟಿದ್ದವು. ಪ್ರಕೃತಿ ಜಾಗೃತಳಾಗಿದ್ದಳು. ತನ್ನ ಜೀವನದ ಅನುಪಮವಾದ ಕ್ಷಣಗಳು ಕಳೆದುಹೋಗಬಹುದೆಂಬ ಭಯ ಅವಳದಾಗಿತ್ತು.

ಒಮ್ಮೆ ಸುತ್ತಲೂ ನೋಡಿದೆ: ನಾನು ಆಗಷ್ಟೇ ದಾಟಿ ಬಂದ ದಾರಿಯಲ್ಲಿ ನನ್ನಿಂದ ನೂರು ಹೆಜ್ಜೆಗಳ ದೂರದಲ್ಲಿ ಕಪ್ಪುಪೊದೆಯೊಂದಿತ್ತು. ಅಲ್ಲಿ ರೈಲೆ ಸಂಕ ಬಹಳ ಆಕರ್ಷಕ ಎನ್ನುವಂತೆ ವಕ್ರರೇಖೆಯಲ್ಲಿ ಬಲಕ್ಕೆ ತಿರುಗಿ, ಮರಗಳ ನಡುವೆ ಕಣ್ಮರೆಯಾದಂತಿತ್ತು. ನಾನು ಗೊಂದಲಕ್ಕೊಳಗಾಗಿ ಅಲ್ಲೇ ನಿಂತು ಸ್ವಲ್ಪ ಕಾದೆ. ಒಂದು ದೊಡ್ಡ ದೈತ್ಯಾಕಾರದ ದೇಹವೊಂದು ಆ ತಿರುವಿನಲ್ಲಿ ಕಾಣಿಸಿಕೊಂಡಿತು. ಜೋರಾದ ಸದ್ದಿನೊಂದಿಗೆ ನನ್ನತ್ತಲೇ ಬರತೊಡಗಿತು. ಹಕ್ಕಿಯಷ್ಟು ವೇಗವಾಗಿ ನನ್ನನ್ನು ದಾಟಿ ರೈಲ್ವೆ ಹಳಿಯ ಮೇಲೆ ಹಾದುಹೋಯಿತು ಅರ್ಧ ನಿಮಿಷವೂ ಕಳೆದಿರಲಿಲ್ಲ. ಆ ಮಸಕು ಮಬ್ಬು ಮಾಯವಾಯಿತು. ರಾತ್ರಿಯ ಸದ್ದಿನೊಳಗೆ ಗಡಗಡದ ಸದ್ದು ಕೂಡಾ ಕರಗಿಹೋಯಿತು.

ಅದು ಬಹಳ ಸಾದಾ ಸರಕುಗಳ ಟ್ರಕ್ಕಾಗಿತ್ತು, ಅಂತಹ ವಿಶೇಷವಾದದ್ದೇನು ಇರಲಿಲ್ಲ., ಆದರೆ ಎಂಜಿನ್ ಇಲ್ಲದೇ ಇರುವ ಅದರ ನೋಟ ಅದರಲ್ಲೂ ಈ ರಾತ್ರಯಲ್ಲಿ ಎಂಬುದೇ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಅದು ಎಲ್ಲಿಂದ ಬಂದಿರಬಹುದು? ಇಷ್ಟೊಂದು ವೇಗವಾಗಿ ಹಳಿಯ ಉದ್ದಕ್ಕೂ ಹಾರುವಂತೆ ಅದನ್ನು ಮಾಡಿದ್ದಾರು? ಅದು ಎಲ್ಲಿಂದ ಬಂತು? ಎಲ್ಲಿಗೆ ಹಾರುತ್ತಿದೆ?

ನಾನು ಮೂಢನಂಬಿಕೆ ಹೊಂದಿದವನೇ ಆಗಿದ್ದಿದ್ದರೆ, ದೆವ್ವಗಳ ಸಬ್ಬತ್‍ಗೆ ಪ್ರಯಾಣಿಸುತ್ತಿರುವ ಪಿಶಾಚಿಗಳ ಮಾಟಗಾತಿಯರ ಪಂಗಡವಾಗಿರಬಹುದೆಂದು ಅಂದುಕೊಂಡಿರುತ್ತಿದ್ದೆ. ಮತ್ತು ನನ್ನ ದಾರಿಯಲ್ಲಿ ನಾನು ಸುಮ್ಮನೇ ಹೊರಟುಹೋಗುತ್ತಿದ್ದೆ: ಆದರೆ ಈ ವಿದ್ಯಮಾನವು ನನಗೆ ಸಂಪೂರ್ಣವಾಗಿ ಅರ್ಥೈಸಲಾಗದಂತಹದ್ದಾಗಿತ್ತು. ನನ್ನ ಕಣ್ಣುಗಳನ್ನು ನಾನೇ ನಂಬಲಾರದವಳಾಗಿದ್ದೆ. ಜೇಡರ ಬಲೆಯಲ್ಲಿ ಬಿದ್ದ ಹುಳುವಿನಂತೆ ಗೊಂದಲದಲ್ಲಿ ಸಿಕ್ಕಿಕೊಂಡಿದ್ದೆ.

ಆ ವಿಶಾಲವಾದ ದೊಡ್ಡ ಬಯಲಿನಲ್ಲಿ ನಾನು ಏಕಾಂಗಿಯಾಗಿರುವುದು ನನಗೆ ಒಮ್ಮೆಲೆ ಅರಿವಿಗೆ ಬಂತು: ಆ ರಾತ್ರಿ ಹೇಗಿತ್ತೆಂದು ಈಗ ನೆನಪಿಸಿಕೊಂಡರೆ ತೀರಾ ಅನಾದರಣೀಯವಾಗಿತ್ತು. ನನ್ನ ಮುಖದೆಡೆಗೆ ಇಣುಕುತ್ತಿರುವಂತೆ, ನನ್ನ ಹೆಜ್ಜೆ ಗುರುತಿನ ಬೆನ್ನು ಹತ್ತಿದ್ದಂತೆ ಕಂಡಿತು.. ಎಲ್ಲ ಸದ್ದುಗಳು, ಹಕ್ಕಿಗಳ ಚೀರಾಟ, ಮರಗಳ ಮರ್ಮರ, ಎಲ್ಲವೂ ಅಶುಭವಾಗಿ ಗೋಚರಿಸಿದವು. ಮತ್ತು ನನ್ನ ಕಲ್ಪನೆಯನ್ನು ಎಚ್ಚರಿಸಲು ಇರುವಂತೆ ಕಂಡವು. ನಾನು ಒಬ್ಬ ಹುಚ್ಚನಂತೆ ಓಡಿದೆ., ನಾನೇನು ಮಾಡುತ್ತಿರುವೆ ಎಂಬುದನ್ನು ಅರಿಯದೇ ಓಡಿದೆ, ಇನ್ನಷ್ಟು ವೇಗವಾಗಿ, ಮತ್ತಷ್ಟು ವೇಗವಾಗಿ ಓಡಲು ಪ್ರಯತ್ನಿಸಿದೆ. ಆಗ ಒಮ್ಮೆಲೆ ನಾನು ಈ ಮೊದಲು ಹೆಚ್ಚು ಗಮನ ಕೊಡದ ಏನೋ ಸದ್ದನ್ನು ಕೇಳಿದೆ; ಅದು ಟೆಲಿಗ್ರಾಫ್ ತಂತಿಗಳ ಗೋಳಿನ ಸ್ವರವಾಗಿತ್ತು.

“ಇದು ಅತಿಯಾಯ್ತ” ನನ್ನ ಬಗ್ಗೆಯೇ ನಾಚಿಕೆ ಪಡುತ್ತಾ, ಹೇಳಿಕೊಂಡೆ. ಇದು ಹೇಡಿತನ! ಆದರೆ ಹೇಡಿತನವು ಜ್ಞಾನಕ್ಕಿಂತ ಬಲವಾಗಿತ್ತು. ಹಸಿರು ದೀಪದ ಹತ್ತಿರ ಬಂದಾಗಲೇ ನಾನು ನನ ಹೆಜ್ಜೆಗಳ ವೇಗ ಕಡಿಮೆ ಮಾಡಿದೆ, ಅಲ್ಲೊಂದು ಕಪ್ಪು ಬಣ್ಣದ ಸಿಗ್ನಲ್ ಬಾಕ್ಸನÀ್ನು ಕಂಡೆ. ಅದರ ಹತ್ತಿರವೇ ಸಂಕದ ಕಟ್ಟೆಯ ಮೇಲೆ ಮನುಷ್ಯನಂತಹ ಆಕೃತಿಯನ್ನು ಕಂಡೆ. ಬಹುಶಃ ಆತ ಸಿಗ್ನಲ್ ಮ್ಯಾನ್ ಇರಬಹುದು.
“ನಿನದನ್ನು ನೋಡಿದೆಯಾ?” ಉಸಿರುಗಟ್ಟಿ ಆತನ ಕೇಳಿದೆ.

‘ಯಾರನ್ನು? ಏನನ್ನು?”

“ಯಾಕೆ,ಈಗಷ್ಟೆ ಒಂದು ಟ್ರಕ್ ಓಡಿತಲ್ಲಾ.”

‘ನೋಡಿದೆ…” ಅನ್ಯಮನಸ್ಕನಾಗಿಯೇ ಆ ರೈತ ಹೇಳಿದ. “ಇದು ಗೂಡ್ಸ ರೈಲಿನಿಂದ ಕಳಚಿಕೊಂಡಿತು.ಹತ್ತೊಂಬತ್ತು ಮೈಲುಗಳಾಚೆ ಇಳಿಜಾರು ಬರುತ್ತದೆ….: ರೈಲು ಮೇಲಕ್ಕೆ ಹತ್ತುತ್ತಿತು. ಕೊನೆಯ ಬೋಗಿಯ ಜೋಡನೆ ಮುರಿದು ಬಿತ್ತು. ಹಾಗಾಗಿ ಇದು ರೈಲಿನಿಂದ ಕಳಚಿಕೊಂಡು ಹಿಮ್ಮುಖ ಓಡಿತು.ಈಗ ಅದನ್ನು ಯಾರೂ ಹಿಡಿಯಲಾಗದು.

ನಾನಂದುಕೊಂಡ ವಿಚಿತ್ರ ಸಂಗತಿ ಈಗ ಏನೆಂದು ಗೊತ್ತಾಗಿತ್ತು. ಅದರಲ್ಲಿಯ ಅದ್ಭುತ ಪಾತ್ರವು ಮರೆಯಾಗಿತ್ತು. ನನ್ನ ಭಯವು ಹೊರಟು ಹೋಗಿತ್ತು. ನಾನೀಗ ಮುಂದೆ ಹೋಗಲು ಯಾವ ಭಯವು ಇರಲಿಲ್ಲ.

ಮೂರನೇ ಬಾರಿ ಭಯ ನನ್ನ ಕಾಡಿದ್ದು ಯಾವಾಗೆಂದರೆ ಅದು ವಸಂತಕಾಲದ ಮುಂಜಾನೆ. ನಾನು ಸ್ಟಾಂಡ್ ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದೆ. ಅಂದು ಸಂಜೆಯಂತೆ ಮಬ್ಬು ಕವಿದಿತ್ತು. ಆಗಷ್ಟೇ ಬಿದ್ದ ಮಳೆಯಿಂದ ಕಾಡಿನ ದಾರಿ ಸಣ್ಣ ಸಣ್ಣ ಕೊಳಗಳಿಂದ ಆವೃತ್ತವಾಗಿತ್ತು. ಹೆಜ್ಜೆ ಇಟ್ಟರೆ ಒಂದು ಅಡಿಯಷ್ಟು ಭೂಮಿ ಒಳಜರಿಯುತ್ತಿತ್ತು. ಸೂರ್ಯಾಸ್ತದ ಕಡುಗೆಂಪು ಹೊಳಪು ಇಡೀ ಕಾಡನ್ನು ಆವರಿಸಿತ್ತು. ಬರ್ಚ ಮರದ ಬಿಳಿ ಕಾಂಡಗಳಿಗೆ ಚಿಗುರು ಎಲೆಗಳಿಗೆ ಬಣ್ಣ ಬಳಿದಿತ್ತು. ನಾನಂತೂ ಮುಂದೆ ಹೆಜ್ಜೆ ಇಡಲಾಗದಷ್ಟು ದಣಿದಿದ್ದೆ.

ಮನೆಯಿಂದ ನಾಲ್ಕು ಐದು ಮೈಲು ದೂರದಲ್ಲಿ ಕಾಡಿನ ದಾರಿಯ ಉದ್ದಕ್ಕೂ ನಡೆಯುತ್ತಿದ್ದೆ, ಏಕಾಏಕಿ ವಾಟರ್ ಸ್ಪೈನಿಯಲ್ ಜಾತಿಯ ದೊಡ್ಡ ಕಪ್ಪು ನಾಯಿಯೊಂದು ಎದುರಾಯಿತು. ಓಡುತ್ತಾ, ನನ್ನ ಕಡೆ ಬಹಳ ಆಪ್ತವಾಗಿ ನೋಡಿತು. ನೇರ ನನ್ನ ಮುಖವನ್ನೆ, ಹಾಗೇ ಓಡಿಹೋಯಿತು.

“ಚಂದದ ನಾಯಿ!” ‘ಯಾರದ್ದು ಇದು? ಅಂದುಕೊಂಡೆ.

ಸುತ್ತಲೂ ನೋಡಿದೆ. ನಾಯಿ ಹತ್ತು ಹೆಜ್ಜೆ ದೂರದಲ್ಲಿ ನನ್ನತ್ತಲೇ ದೃಷ್ಟಿ ನೆಟ್ಟು ನಿಂತಿತ್ತು. ಒಂದು ನಿಮಿಷ ಮೌನವಾಗಿಯೇ ಪರಸ್ಪರ ನಿಟ್ಟಿಸಿದೆವು, ಆನಂತರ ಆ ನಾಯಿ, ನನ್ನ ಕಾಳಜಿಯನ್ನು ಮೆಚ್ಚಿ ನನ್ನ ಹತ್ತಿರ ಬಂದು ಬಾಲ ಅಲ್ಲಾಡಿಸಿತು.

ನಾನು ಹೆಜ್ಜೆ ಮುಂದುವರೆಸಿದೆ. ನಾಯಿ ನನ್ನ ಹಿಂಬಾಲಿಸಿತು.

“ಇದ್ಯಾರ ನಾಯಿಯಾಗಿರಬಹುದು? ನನ್ನನ್ನೆ ಕೇಳಿಕೊಳ್ಳತೊಡಗಿದೆ., ‘ಎಲ್ಲಿಂದ ಬಂದಿದೆ?’

ನನಗೆ ಸುತ್ತಲಿನ ಇಪ್ಪತ್ತು ಮೂವತ್ತು ಮೈಲಿಗಳವರೆಗೆ ಆ ಹಳ್ಳಿಯ ಶ್ರೀಮಂತರೆಲ್ಲ ಗೊತ್ತು, ಅವರ ನಾಯಿಗಳು ಕೂಡಾ. ಅವರಲ್ಲಿ ಯಾರೊಬ್ಬರ ಬಳಿಯೂ ಈ ಸ್ಪೇನಿಯಲ್ ತಳಿಯ ನಾಯಿಗಳಿರಲಿಲ್ಲ. ಹಾಗಾದರೆ ಹೇಗೆ ಈ ನಾಯಿ ಮರದ ಬಡ್ಡೆ ಮಾತ್ರ ಸಾಗಿಸುವ ಈ ದಾರಿ ಹಿಡಿದು ಈ ಕಾಡಿನ ಒಳಗೆ ಹೇಗೆ ಬಂದಿತು,? ಇಲ್ಲಿಂದ ಹಾದು ಹೋಗುವಾಗ ಯಾರಾದರೂ ಬಿಟ್ಟುಹೋಗಿದ್ದಿರಬಹುದು, ಆದರೆ ಇಲ್ಲಿ ರಸ್ತೆಯುದ್ದಕ್ಕೂ ವಾಹನ ಚಲಾಯಿಸಲು ಯಾವ ರೀತಿಯಿಂದಲೂ ಯಾವ ಶ್ರೀಮಂತನಿಗೂ ಸಾಧ್ಯವಿರಲಿಲ್ಲ.
ಸ್ವಲ್ಪ ವಿಶ್ರಾಂತಿ ಪಡೆಯಲು ನಾನು ಸ್ಟಂಪ್ ಮೇಲೆ ಕುಳಿತು, ನನ್ನ ಜೊತೆಗಾರನನ್ನು ಹಾಗೇ ಪರೀಕ್ಷಿಸತೊಡಗಿದೆ. ಅದು ಕೂಡಾ ಕೂತಿತು, ತಲೆ ಮೇಲಕ್ಕೆತ್ತಿ ನನ್ನತ್ತಲೇ ಬಹಳ ಆಪ್ತವಾದ ನೋಟನೆಟ್ಟು ಕೂತಿತು. ಕಣ್ಣು ಮಿಟುಕಿಸದೇ ನನ್ನನ್ನೆ ದಿಟ್ಟಿಸಿತು. ಇದು ಜಡತ್ವದ ಪ್ರಭಾವವೋ, ಕಾಡಿನ ನೆರಳು ಮತ್ತು ಸದ್ದಿನ ಪ್ರಭಾವವೋ ಅಥವಾ ನನ್ನ ಬಳಲಿಕೆಯ ಪ್ರಭಾವವೋ ಏನೆಂದು ನನಗೆ ತಿಳಿದಿಲ್ಲ, ಆದರೆ ಒಮ್ಮೆಲೆ ನನ್ನ ಆ ನಾಯಿಯ ಸಹಜ ಕಣ್ಣುಗಳ ನಿರಂತರ ನೋಟದಿಂದ ಉದ್ವೇಗಗೊಂಡಂತೆ ಭಾಸವಾಯಿತು.ನನಗೆ ಫೌಸ್ಟ ಮತ್ತು ಆತನ ಬುಲ್ ಡಾಗ್ ನೆನಪಾದರು. ಸಾಮಾನ್ಯವಾಗಿ ಜನರು ಕೆಲವೊಮ್ಮೆ ಆಯಾಸಗೊಂಡಾಗ ಒಂದು ರೀತಿಯ ಭ್ರಮೆಗಳ ಹೊಂದಿರುತ್ತಾರೆ. ಇಷ್ಟು ಸಾಕಾಯ್ತು ನನಗೆ ಎದ್ದು ಲಗುಬಗೆಯಿಂದ, ಅಷ್ಟೇ ಗಡಿಬಿಡಿಯಲ್ಲಿ ನಡೆಯತೊಡಗಿದೆ. ನಾಯಿಯು ನನ್ನ ಹಿಂಬಾಲಿಸಿತು.

‘ಹೋಗಾಚೆ!’ ನಾನು ಕೂಗಿದೆ.

ನನ್ನ ದ್ವನಿ ಅದಕ್ಕೆ ಇಷ್ಟವಾಯಿತೆಂದು ಕಾಣುತ್ತದೆ. ಒಮ್ಮೆ ಜೋರಾಗಿ ನೆಗೆಯಿತು ಹಾಗೂ ನನ್ನ ಮುಂದೆಯೇ ಓಡಿತು.

“ದೂರ ಹೋಗು’” ನಾನು ಇನ್ನೊಮ್ಮೆ ಚೀರಿದೆ.

ನಾಗರೇಖಾ ಗಾಂವಕರ

ಈಗ ನಾಯಿ ಸುತ್ತಲೂ ನೋಡಿತು. ನನ್ನ ಆಪ್ತವಾಗಿ ದಿಟ್ಟಿಸಿತು. ಬಾಲವನ್ನೊಮ್ಮೆ ಮಜದಿಂದ ಅಲ್ಲಾಡಿಸಿತು. ನನ್ನ ಬೆದರಿಕೆಯ ದನಿ ಅದಕ್ಕೆ ಖುಷಿಕೊಟ್ಟಿರಬೇಕು. ನನಗೂ ಅದಕ್ಕೆ ತಟ್ಟಿ ಮಾತಾಡಿಸಬೇಕೆನ್ನಿತು. ಆದರೆ ಪೌಸ್ಟ್‍ನ ನಾಯಿಯನ್ನು ತಲೆಯೊಳಗಿಂದ ತೆಗೆದುಹಾಕಲು ನನ್ನಿಂದಾಗಿರಲಿಲ್ಲ. ಭೀತಿ ಹೆಚ್ಚುತ್ತಲೇ ಇತ್ತು. ಕತ್ತಲು ಆವರಿಸುತ್ತಿತ್ತು…. ಅದು ನನ್ನ ಗೊಂದಲಗಳಿಗೂ ಪೂರ್ಣವಿರಾಮ ನೀಡಿತು. ಪ್ರತಿಸಲವೂ ನಾಯಿ ನನ್ನೆಡೆಗೆ ಓಡಿ ಬಂದಾಗ, ತನ್ನ ಬಾಲದಿಂದ ಹೊಡೆದಾಗ ನಾನು ಹೇಡಿಯಂತೆ ಕಣ್ಣುಗಳನ್ನು ಮುಚ್ಚಿದೆ.ಗಂಟೆ ಗೋಪುರದ ಬೆಳಕು ಮತ್ತು ರೈಲ್ವೆ ಬೋಗಿ ಸಂದರ್ಭದಲ್ಲಿ ಆದಂತೆಯೇ ಈಗಲೂ ಆಯಿತು.ಅದನ್ನು ತಡೆಯಲಾಗಲಿಲ್ಲ. ಅಲ್ಲಿಂದ ಜಾಗ ಕಿತ್ತೆ.

ಮನೆಗೆ ಬರುತ್ತಲೇ ಸಂದರ್ಶಕನೊಬ್ಬ ದಾರಿ ಕಾಯುತ್ತಿದ್ದ. ಆತ ನನ್ನ ಹಳೆಯ ಸ್ನೇಹಿತ. ನನ್ನನ್ನು ಸ್ವಾಗತಿಸಿದ ನಂತರ ಆತ ದೂರು ಹೇಳತೊಡಗಿದ. ನನ್ನನ್ನು ಕಾಣಲು ಬರುವಾಗ ತನ್ನ ನಾಯಿ ಕಾಡಿನ ನಡುವೆ ತಪ್ಪಿಸಿಕೊಂಡಿತೆಂದು, ಅದ್ಭುತ ಬೆಲೆಬಾಳುವ ನಾಯಿ ಕಳೆದುಹೋಯಿತೆಂದು ಬೇಸರಿಸತೊಡಗಿದ.

Journalist,Translator,avid bibliophile

Leave a Reply

Your email address will not be published. Required fields are marked *

Back To Top