ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ

ಇಂದು ಬೆಳಗ್ಗೆ ಪತ್ರಿಕೆಯಲ್ಲಿ `ವಿಶ್ವಪರಿಸರ ದಿನ’ ಎಂದು ತಿಳಿದಾಗ ಬಾಳ್ವೆ ಮತ್ತು ಬಾಳುವೆಯ ವಿಧಾನಗಳೆರಡೂ ಬೇರೆಯಲ್ಲ ಎಂದು ಬದುಕುತ್ತಿರುವ, ನಾನು ಬಹುವಾಗಿ ಗೌರವಿಸುವ ಮೂವರ ಹೆಸರುಗಳು ಕಣ್ಣ ಮುಂದೆ ಸುಳಿದವು. ಮೇಲುಕೋಟೆಯ ಜನಪದ ಟ್ರಸ್ಟ್‌ನ ಸಂತೋಷ ಕೌಲಗಿ, ಎಂಬತ್ತು-ತೊಂಬತ್ತರ ದಶಕದಲ್ಲಿ ಉತ್ಸಾಹದಲ್ಲಿ, ರಾಜ್ಯದ ಆದ್ಯಂತ ಪರಿಸರದ ಕುರಿತು ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ ‘ಅಪ್ಪಿಕೋ’ ಪಾಂಡುರಂಗ ಹೆಗಡೆ ಮತ್ತು ಹಳೆಯ ಗೆಳೆಯ, ’ಗಿಡಬಾಲಕ’ ಎಲ್ಸಿ ನಾಗರಾಜ.

ಅಚ್ಚರಿ ಎನ್ನುವಂತೆ ಬೆಳಗ್ಗೆ ಸಂತೋಷ ಕೌಲಗಿಯವರು ಪುಟ್ಟ ಬರಹವನ್ನು ಕೆಲವು ಫೋಟೋಗಳನ್ನು ವಾಟ್ಸ್‌ಪ್‌ನಲ್ಲಿ ಹಂಚಿಕೊಂಡರು. ಅವರ ಬರಹ ಕೊನೆಯ ಭಾಗದಲ್ಲಿದೆ.

* ಜೀವಸಂಕುಲದ ಉಳಿವು ಎಂದರೆ ಸರಳ ಅರ್ಥವಿಷ್ಟೇ (ಇವೆಲ್ಲವನ್ನೂ ಒಂದು ಮಂಡಲ ಅಥವ ಚಕ್ರದಂತೆ ಊಹಿಸಿಕೊಳ್ಳಿ):

* ಸ್ವಸ್ಥ ಕುಟುಂಬ * ಸಾಮುದಾಯಿಕ ದರ್ಶನದ ಅಗತ್ಯವನ್ನು ಅರಿತ ಶಿಕ್ಷಣ * ಸಾರ್ವತ್ರಿಕ ಆರೋಗ್ಯ * ಸರ್ವರಿಗೂ ಸಾಮಾಜಿಕ ಸುರಕ್ಷೆ * ಕಲುಷಿತಗೊಳ್ಳದ ನೀರಿನ ಮೂಲಗಳು * ನೀರಿನ ಮೂಲಕ್ಕೆ ನೆಚ್ಚಿಕೊಂಡು ಬೆಳೆವ, ಪ್ರಾದೇಶಿಕ-ಸ್ಥಳೀಯ ಸಸ್ಯಲೋಕ * ಜೀವರೂಪಿಯಾಗಿ, ಅಜೀವರೂಪಿಯಾಗಿ ಇರುವ (ಇನ್‌ವಿಸಿಬಲ್‌ ಬೀಯಿಂಗ್‌) ಪಶು-ಪಕ್ಷಿ-ಕೀಟ, ಗಾಳಿ, ಗುಪ್ತಗಾಮಿನಿ, ಕಲ್ಲುಮಣ್ಣು-ಗುಡ್ಡಬೆಟ್ಟಗಳ ಲೋಕ. *

ಇವುಗಳಲ್ಲಿ ಒಂದು ವ್ಯತ್ಯಾಸವಾದರೂ ಇಂದು ನಾವಿರುವ ಸ್ಥಿತಿಯನ್ನು ತಲುಪಬಲ್ಲೆವು. ಇವನ್ನು ಮರಳಿ ಪಡೆಯಬೇಕಿರುವುದೇ ಇಂದಿನ ಮನುಷ್ಯಲೋಕದ ಎಡೆಬಿಡದೆ ಪ್ರಯತ್ನವಾಗಬೇಕು.

*ಮರಳಿ ಪಡೆಯಬೇಕಿರುವ ಜೀವಸಂಕುಲ ಲೋಕ

ವಂಗಾರಿ ಮಥಾಯಿ: Wangari Mathai

(೨೦೦೪ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸ್ವೀಕರಿಸಿದಾಗ ಆಡಿದ ಮಾತುಗಳು)

ಈ ಪ್ರಶಸ್ತಿಯು ನನಗೆ ಸಂದಿದ್ದರೂ, ಲೋಕದೆಲ್ಲೆಡೆ ಈ ಕೆಲಸದಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಈ ಪ್ರಶಸ್ತಿ ಪ್ರತಿನಿಧಿಸುತ್ತದೆ. ಅಂಥ ಜನ ಯಾವುದೇ ಬಗೆಯ ಅಂಗೀಕಾರ ಇಲ್ಲದಿದ್ದರೂ ಪರಿಸರ ಸಂರಕ್ಷಣೆಗಾಗಿ,, ಪ್ರಜಾಸತ್ತೆಯ ಸಂವರ್ಧನೆಗಾಗಿ, ಮಾನವಹಕ್ಕುಗಳನ್ನು ಕಾಪಾಡುತ್ತ ಗಂಡುಹೆಣ್ಣಿನ ನಡುವೆ ಸಮಾನತೆ ಸಾಧಿಸಲು ಮೌನವಾಗಿ ಕೆಲಸ ಮಾಡುವವರು. ಹೀಗೆ ಮಾಡುತ್ತ ಅವರೆಲ್ಲ ಶಾಂತಿಯ ಬೀಜವನ್ನು ನೆಡುತ್ತಾರೆ. ಇಂದು ಅವರು ಜಂಬ ಪಡುವ ದಿನ. ಯಾರೆಲ್ಲ ಈ ಪ್ರಶಸ್ತಿಯನ್ನು ಪ್ರತಿನಿಧಿಸುತ್ತಿರೋ ಅವರೆಲ್ಲ ನಿಮ್ಮ ಮಹಾಕಾರ್ಯದಲ್ಲಿ ಮುನ್ನಡೆ ಸಾಧಿಸಿ, ವಿಶ್ವ ನಮ್ಮ ಮೇಲಿಟ್ಟ ಎತ್ತರದ ನಿರೀಕ್ಷೆಯನ್ನು ಸಾಕಾರಗೊಳಿಸಿ.

ಈ ಪುರಸ್ಕಾರವು ನನ್ನ ಕುಟುಂಬ, ಪೋಷಕರು, ಸ್ನೇಹಿತರು ಮತ್ತು ಬೆಂಬಲಿಗರಿಗೆ ಸಂದ ಬಹುಮಾನ ಕೂಡ. ಇವರು ನಮಗೊಂದು ದರ್ಶನವನ್ನು, ಕೆಲವೊಮ್ಮೆ ಅನಾನುಕೂಲಕರ ಪರಿಸರದಲ್ಲಿ ಮಾಡಬೇಕಾದ ನಮ್ಮ ಕೆಲಸಕ್ಕೆ ಸುಸ್ಥಿರತೆಯನ್ನು ತಂದವರು. ತಮ್ಮ ದೇಶದಲ್ಲಿ ಪ್ರಜಾಸತ್ತೆ ಸಾಕಾರಗೊಂಡು, ಉಳಿಗಾಲದ ಪರಿಸರವನ್ನು ಕಾಣಬಹುದೆಂದು ಉಡದ ಪಟ್ಟಿನ ಭರವಸೆಯಲ್ಲಿರುವ ಕೆನ್ಯಾದ ಜನರಿಗೂ ನಾನು ಕೃತಜ್ಞಳಾಗಿರುವೆ. ಈ ಮಹಾ ಗೌರವವನ್ನು ಸ್ವೀಕರಿಸಲು ನಾನಿಂದು ಇಲ್ಲಿರುವೆ.  [. . .]

ಕೆನ್ಯಾದ ಹಳ್ಳಿಗಾಡಿನಲ್ಲಿ ಕಳೆದ ನನ್ನ ಬಾಲ್ಯದ ಅನುಭವ ಮತ್ತು ಗ್ರಹಿಕೆಗಳು ನಾನು ಕೈಗೊಂಡಿರುವ ಕೆಲಸವನ್ನು ಪ್ರೇರೇಪಿಸಿವೆ. ಕೆನ್ಯಾ, ಅಮೆರಿಕ ಮತ್ತು ಜರ್ಮನಿಗಳಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆಯುವ ಅವಕಾಶ ದೊರಕಿ, ಅವು ನನ್ನನ್ನು ಪ್ರೇರೇಪಿಸಿ, ಬೆಳೆಸಿದವು. ಬಾಲ್ಯದಲ್ಲಿ ವಾಣಿಜ್ಯ ತೋಟಗಳನ್ನಾಗಿ ಪರಿವರ್ತಿಸಲು ಕಾಡು ಸವರುವುದನ್ನು ನೋಡುತ್ತಲೇ ಬೆಳೆದೆ. ಕಾಡಿನ ನಾಶ, ಜೀವವೈವಿಧ್ಯವನ್ನು ಕದಡುತ್ತಿತ್ತು. ನೀರಿನ ಮೂಲಗಳು ಬತ್ತಿಸುತ್ತಿತ್ತು.

ನಾವು ೧೯೭೭ರಲ್ಲಿ ‘ಗ್ರೀನ್‌ಬೆಲ್ಟ್‌ ಆಂದೋಲನ’ ಆರಂಭಿಸಿದಾಗ ನಾನು ಬಹುತೇಕ ಹಳ್ಳಿಗಾಡಿನ ಹೆಂಗಸರ ಅತ್ಯಗತ್ಯಗಳಾದ ಉರುವಲು ಕಟ್ಟಿಗೆ, ತಿಳಿಯಾದ ಕುಡಿಯುವ ನೀರು, ಆಹಾರದ ಪೌಷ್ಟಿಕತೆ, ಆಸರೆ ಮತ್ತು ಸಂಪಾದನೆಯಂತಹ ವಿಷಯಗಳತ್ತ ಗಮನ ಕೊಡುತ್ತಿದ್ದೆ. ಆಫ್ರಿಕದುದ್ದಕ್ಕೂ ಮಹಿಳೆಯರೆ ಪ್ರಧಾನ ಪಾತ್ರಧಾರಿಗಳು. ಉಳುವಿಕೆ, ಕುಟುಂಬ ನಿರ್ವಹಣೆ ಅವರದ್ದೇ ಹೊಣೆ. ಕುಟುಂಬವನ್ನು ತಾವೇ ಸಲಹಬೇಕಾದ  ತಾಪತ್ರಯದಿಂದಾಗಿ ಪರಿಸರಕ್ಕೆ ಒದಗುವ ಹಾನಿ, ಸಂಪನ್ಮೂಲಗಳ ಕೊರತೆ ಮೊದಲಿಗೆ ಗಮನಕ್ಕೆ ಬರುವುದು ಹೆಂಗಸರಿಗೇ.

ತಮಗೆ ಹಿಂದಿನಂತೆ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಆಗುತ್ತಿಲ್ಲವೆಂದು ನಾವು ಕೆಲಸದಲ್ಲಿ ತೊಡಗಿಸಿಕೊಂಡ ಮಹಿಳೆಯರು ಹೇಳುತ್ತಿದ್ದರು. ಕುಟುಂಬದ ಪೋಷಣೆಗಾಗಿ ಬೆಳೆಯುತ್ತಿದ್ದ ದವಸ-ಧಾನ್ಯಗಳನ್ನು ಬಿಟ್ಟುಕೊಟ್ಟು, ವಾಣಿಜ್ಯ ಬೆಳೆಗಳಿಗಾಗಿ ಅವರ ನೆರೆಹೊರೆಯಲ್ಲಿದ್ದ ಪರಿಸರವನ್ನು ನಾಶ ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಸಣ್ಣ ಹಿಡುವಳಿದಾರರಾದ ಇವರ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸುತ್ತಿತ್ತು. ಕನಿಷ್ಠ ನ್ಯಾಯಬೆಲೆ ಕೂಡ ಸಿಗುತ್ತಿರಲಿಲ್ಲ. ನಮ್ಮ ಪರಿಸರವನ್ನು ನಾಶ ಮಾಡಿದರೆ ನಮ್ಮ ಮತ್ತು ಭವಿಷ್ಯದ ತಲೆಮಾರುಗಳ ಜೀವನದ ಗುಣಮಟ್ಟ ಕುಸಿದು ತಳ ಸೇರುವುದು ಎಂದು ನನಗರ್ಥವಾಗತೊಡಗಿತು. ಮಹಿಳೆಯರು ತಮ್ಮ ಜೀವನಾವಶ್ಯಕ ಅಗತ್ಯವನ್ನು ಗುರುತಿಸಿದ್ದರಿಂದ ಗಿಡಗಳನ್ನು ನೆಡುವುದು ಪ್ರಾರಂಭಿಕ ಹಂತವೆಂದು ಅರಿತುಕೊಂಡೆವು. ಒಂದು ಸೀಮಿತ ಕಾಲಾವಧಿಯಲ್ಲಿ ಯಶಸ್ಸನ್ನು ಪಡೆಯಬಹುದಾದ ಈ ಕೆಲಸವು ಸರಳವೂ, ಸಾಧಿಸಬಹುದಾದುದು ಆಗಿತ್ತು. ಇದೊಂದು ರೀತಿಯ ಸುಸ್ಥಿರತೆ ಒದಗಿಸಿ, ನಮ್ಮ ಬದ್ಧತೆಯನ್ನೂ ತೋರಲಿತ್ತು.

ಹೀಗಾಗಿ, ನಾವೆಲ್ಲ ಒಟ್ಟಾಗಿ ಸುಮಾರು ಮೂವತ್ತು ಲಕ್ಷ ಗಿಡಗಳನ್ನು ನೆಟ್ಟೆವು. ಇವು ಉರುವಲು, ಆಸರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒಂಚೂರು ಕಾಸು ಮತ್ತು ಕುಟುಂಬದ ಅಗತ್ಯ ಪೂರೈಸುತ್ತಿದ್ದವು. ಇದು ಉದ್ಯೋಗವನ್ನು ಹುಟ್ಟು ಹಾಕಿ, ಮಣ್ಣಿನ ಸಾರ ಮತ್ತು ನೀರಿನ ಮೂಲಗಳಿಗೆ ಕಸುವು ತುಂಬುತ್ತಿತ್ತು.  ಈ ಕೆಲಸ ಮಾಡುವ ಮೂಲಕ ಮಹಿಳೆಯರು ತಮ್ಮ ಕುಟುಂಬದ ಮೇಲೆ ಸ್ವಲ್ಪ ಹಿಡಿತವನ್ನು, ಅದರಲ್ಲೂ ಸಾಮಾಜಿಕ-ಹಣಕಾಸು ಹಿಡಿತವನ್ನು ಪಡೆದು ಕುಟುಂಬದಲ್ಲಿ ತಮ್ಮ ಸ್ಥಾನಕ್ಕೊಂದು ಘನತೆ ತರುತ್ತಿದ್ದರು.

ತಾವು ಬಡವರಾಗಿರುವುದರಿಂದ, ತಮ್ಮ ಬಳಿ ಹಣ, ಬುದ್ಧಿ, ಜಾಣ್ಮೆ ಇಲ್ಲದಿರುವುದರಿಂದ ತಾವು ಇಂಥ ಕೆಲಸ ಮಾಡಲಾರೆವೆಂದು ಜನಕ್ಕೆ ನಂಬಿಸಿರುವುದರಿಂದ ಆರಂಭದಲ್ಲಿ ಬಹಳ ಸಮಸ್ಯೆಯೇ ಎದುರಾಯಿತು. ಅಷ್ಟೇಕೆ, ತಮ್ಮ ಸಮಸ್ಯೆಗಳಿಗೆ ಪರಿಹಾರ ‘ಹೊರಗಿ’ನಿಂದ ಬರಬೇಕೆಂಬುದು ಅವರ ನಿರೀಕ್ಷೆಯಾಗಿತ್ತು. ತಮ್ಮ ಅಗತ್ಯವನ್ನು ಸಾಧಿಸಬೇಕಾದರೆ ಸುತ್ತಲಿನ ಪರಿಸರವು ಆರೋಗ್ಯಕರವಾಗಿರಬೇಕು, ಅದನ್ನು ಆರೈಕೆ ಮಾಡಬೇಕು ಎಂಬುದು ಈ ಮಹಿಳೆಯರಿಗೆ ಮನವರಿಕೆಯಾಗಿರಲಿಲ್ಲ. ಪರಿಸರ ನಾಶದಿಂದ ಸಂಪನ್ಮೂಲ ಕರಗಿ ಬಡತನ ಹೆಚ್ಚಾಗುವುದು, ಸಂಘರ್ಷಗಳು ಹುಟ್ಟುವವು ಎನ್ನುವ ಅರಿವೂ ಅವರಿಗಿರಲಿಲ್ಲ. ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ನ್ಯಾಯಸಮ್ಮತವಾಗಿಲ್ಲ ಎಂಬುದು ಅರಿವಿನಾಚೆಗಿತ್ತು.

ಸಮುದಾಯಗಳಲ್ಲಿ ಈ ಅರಿವನ್ನು ಮೂಡಿಸಲು ನಾವು ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸತೊಡಗಿದೆವು. ಇಲ್ಲಿ ಜನ ತಮ್ಮ ಸಮಸ್ಯೆ ಮತ್ತು ಅದರ ಕಾರಣ ಅರಿತು ಪರಿಹಾರ ಸಾಧ್ಯತೆಗಳನ್ನು ಯೋಚಿಸುವರು. ಬಳಿಕ ಪರಿಸರದಲ್ಲಿ ತಾವು ಕಂಡ ಸಮಸ್ಯೆಯನ್ನು ಗುರುತಿಸಿ ವೈಯಕ್ತಿಕ, ಸಾಮಾಜಿಕ ನೆಲೆಯಲ್ಲಿ ಮಾಡಬೇಕಾದ ಕೆಲಸವನ್ನು ಗುರುತಿಸುವರು. ಭ್ರಷ್ಟಾಚಾರ, ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸೆ, ಕುಟುಂಬಗಳ ವಿಘಟನೆ, ಸಮುದಾಯ ಮತ್ತು ಸಂಸ್ಕೃತಿಗಳ ಕಳಚುತ್ತಿರುವ ಕೊಂಡಿಗಳು ಹೀಗೆ ಅವರ ಕಣ್ಣೆದುರು ಸಮಸ್ಯೆಯ ಸರಮಾಲೆಯೇ ಬಿಚ್ಚಿಕೊಳ್ಳುವುದು. ಹರೆಯದ ಮಕ್ಕಳಲ್ಲಿನ ಮಾದಕ ವ್ಯಸನ, ಕಾಯಿಲೆ-ಕಸಾಲೆಗಳನ್ನು ಕೂಡ ಅವರು ಗುರುತಿಸುವರು. ಅಪೌಷ್ಟಿಕತೆ, ಮಲೆರಿಯ, ಎಚ್‌ಐವಿ/ಏಡ್ಸ್‌ಗಳ ಪರಿಣಾಮ ಅರಿಯುವರು.

ಮನುಷ್ಯನ ಅನೇಕ ಚಟುವಟಿಕೆಗಳು ಹೇಗೆ ಪರಿಸರ ಹಾಗೂ ಸಮಾಜಕ್ಕೆ ಹಾನಿಕಾರಕ ಎಂದು ತಿಳಿಯುವರು. ಜೀವಪರಿಸರಕ್ಕೆ ಧಕ್ಕೆ, ಹವಾಮಾನದ ಅಸ್ಥಿರತೆ, ನೀರಿನ ಮೂಲ ಬತ್ತುವಿಕೆ, ಮಣ್ಣಿನ ಸಾರ ಹಿಂಗಿ ಹೋಗುವಿಕೆ ಇತ್ಯಾದಿಗಳು ಬಡತನವನ್ನು ಹುಟ್ಟಿಸುತ್ತವೆ, ಎಂಬ ತಿಳಿವು ಬರುವುದು. ಈ ಸಮಸ್ಯೆಗಳ ಪರಿಹಾರಕ್ಕೆ ತಾವೂ ಭಾಗೀದಾರರು, ತಮ್ಮೊಳಗೆ ಅಂತಹ ಸಾಮರ್ಥ್ಯವಡಗಿದೆ. ಕೆಲಸ ಮಾಡಬೇಕಾದವರು ತಾವೇ. ಪರಿಸರದ ಪ್ರಾಥಮಿಕ ಉಸ್ತುವಾರಿ ನೋಡಿಕೊಳ್ಳುವವರೂ ತಾವೇ ಆಗಿದ್ದು, ಅದನ್ನು  ಉಳಿಸುವ ಹೊಣೆ ತಮ್ಮ ಮೇಲಿದೆ ಎಂದು ತಿಳಿದುಕೊಳ್ಳುವರು. ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡಬೇಕಾದರೆ, ತಮ್ಮ ತಮ್ಮ ನಡುವಿನ ಸಂಬಂಧ ಬೆಸೆಯಬೇಕು, ತಾವು ನಾಯಕತ್ವದ ಗುಣ ತೋರಿಸಬೇಕು, ತಮ್ಮಲ್ಲಿ ನ್ಯಾಯವಂತಿಕೆ, ನಂಬಿಕೆ, ವ್ಯಕ್ತಿತ್ವದಲ್ಲಿ ಪೂರ್ಣತೆ ಮೈಗೂಡಿಸಿಕೊಳ್ಳಬೇಕೆಂದು ಸಮುದಾಯಗಳು ಅರ್ಥ ಮಾಡಿಕೊಳ್ಳುವವು.

ಆರಂಭಿಕವಾಗಿ ಗ್ರೀನ್‌ ಬೆಲ್ಟ್‌ ಸಂಘಟನೆ ತಮ್ಮ ಚಟುವಟಿಕೆಯಲ್ಲಿ ಪ್ರಜಾಸತ್ತೆ ಮತ್ತು ಶಾಂತಿಯ ವಿಷಯಗಳನ್ನು ಸೇರಿಸಿಕೊಂಡಿರಲಿಲ್ಲ. ಆದರೆ, ಪ್ರಜಾಸತ್ತಾತ್ಮಕ ಅವಕಾಶವಿಲ್ಲದೆ ಪರಿಸರದ ನಿರ್ವಹಣೆ ಅಸಾಧ್ಯವೆಂದು ನಮಗೆ ಮನವರಿಕೆಯಾಯಿತು. ಹೀಗಾಗಿ, ಕೆನ್ಯಾದಲ್ಲಿ ಮರವು ಪ್ರಜಾಸತ್ತೆಯ ಹೋರಾಟಕ್ಕೆ ರೂಪಕವಾಯಿತು. ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ, ಪರಿಸರದ ಬೇಜವಾಬ್ದಾರಿ ನಿರ್ವಹಣೆಗಳನ್ನು ಪ್ರಶ್ನಿಸಲು ಜನ ಸಂಘಟಿತರಾಗತೊಡಗಿದರು. ನಾಗರಿಕ ಸಮಾಜದ ಪ್ರಜ್ಞೆಯಂತಿರುವ ಸೆರೆವಾಸಿಗಳನ್ನು ಬಿಡುಗಡೆಗೊಳಿಸುವಂತೆ ಬೇಡಿಕೆ ಮಂಡಿಸಲಾಯಿತು.

ಕಾಲಾಂತರದಲ್ಲಿ ‘ಮರ’ ಶಾಂತಿ ಹಾಗೂ ಬಿಕ್ಕಟ್ಟು ಪರಿಹಾರದ ಸಂಕೇತವಾಯಿತು. ಅದರಲ್ಲೂ, ಗ್ರೀನ್‌ ಬೆಲ್ಟ್‌, ಬುಡಕಟ್ಟು ತಗಾದೆಗಳನ್ನು ಶಾಂತಿ ಮತ್ತು ಸೌಹಾರ್ದತೆಯ ಮೂಲಕ ಪರಿಹರಿಸತೊಡಗಿದಾಗ ಕೆನ್ಯಾದುದ್ದಕ್ಕೂ ಮರವು ಪರಿಹಾರದ ಪ್ರತಿಮೆಯಾಯಿತು. ಉದಾಹರಣೆಗೆ, ಗಿಕುಯು ಸಮುದಾಯದ ಪಂಚಾಯಿತಿ ಹಿರಿಯ ತಗಾದೆಯಿರುವ ಪಕ್ಷಗಳ ಎರಡೂ ಕಡೆಗೆ ಥಿಗಿ ಗಿಡವನ್ನು ಇಟ್ಟರೆ, ಹೊಡೆದಾಟಗಳು ನಿಂತು ಸಂಧಾನವೇರ್ಪಡುವುದು. ಆಫ್ರಿಕದ ಎಷ್ಟೋ ಸಮುದಾಯಗಳಲ್ಲಿ ಇದು ಸಂಪ್ರದಾಯವಾಗಿದೆ.

ಇಂತಹ ನಂಬಿಕೆಯ ಆಚರಣೆಗಳು ಹಾಡಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಶಾಂತಿಯ ಸಂಸ್ಕೃತಿಯನ್ನು ಉತ್ತೇಜಿಸುವುದು. ಈ ಸದಾಶಯದ ಆಚರಣೆ ಕೈ ಬಿಟ್ಟಾಗ ಕಾಡು ಕಣ್ಮರೆಯಾಗುವುದು. ಈ ಕಾರಣವಾಗಿಯೇ, ಗ್ರೀನ್‌ ಬೆಲ್ಟ್‌ ಸ್ಥಳೀಯ ಬೀಜ ಮತ್ತು ಗಿಡಮೂಲಿಕೆಯನ್ನು ಕಾಪಿಡುವ ಸಾಂಸ್ಕೃತಿಕ ಜೀವಪರಿಸರವನ್ನು ಗೌರವಿಸುವುದು. [. . .]

ಈ ಕೆಲಸವನ್ನು ನಾವು ಆರಂಭಿಸಿ ಮೂರು ದಶಕಗಳಾದವು. ಪರಿಸರ ಮತ್ತು ಸಮಾಜವನ್ನು ಧ್ವಂಸಗೊಳಿಸುವ ಸಂಗತಿಗಳಿನ್ನೂ ನಡೆಯುತ್ತಲೇ ಇವೆ. ನಾವಿಂದು ನಮ್ಮ ಚಿಂತನೆಯ ವಿಧಾನವನ್ನು ಬದಲಿಸಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಇದು ಮನುಷ್ಯ ಜೀವಪರಿಸರಕ್ಕೊಡ್ಡುವ ಬೆದರಿಕೆಯನ್ನು ನಿಲ್ಲಿಸಬಲ್ಲುದು. ನಾವಿಂದು ಘಾಸಿಗೊಂಡ ಭೂಮಿಗೆ ತನ್ನ ಗಾಯಗಳನ್ನು ಮಾಗಿಸಿಕೊಳ್ಳಲು ಬಿಡಬೇಕಿದೆ. ಅದು ತನ್ನೆಲ್ಲ ಜೀವವೈವಿಧ್ಯತೆ, ಚೆಲುವು ಮತ್ತು ಅಚ್ಚರಿಗಳನ್ನು ಮರಳಿ ಗಳಿಸಲು ಅನುವು ಮಾಡಿಕೊಡಬೇಕಿದೆ.

ಸಮುದಾಯಗಳ ರಾಜಕೀಯ-ಸಾಮಾಜಿಕ-ಆರ್ಥಿಕ ಬದುಕಿನಲ್ಲಿ ಸಂಸ್ಕೃತಿಯೇ ಕೇಂದ್ರಬಿಂದು. ಆಫ್ರಿಕದ ಅಭಿವೃದ್ಧಿಯಲ್ಲಿ ಸಂಸ್ಕೃತಿಯೇ ಕಳಚಿದ ಕೊಂಡಿಯಾಗಿದೆ. ಸಂಸ್ಕೃತಿ ಚಲನಶೀಲ, ಕಾಲಾಂತರದಲ್ಲಿ ವಿಕಾಸಗೊಳ್ಳುವಂಥದ್ದು. ಹೆಣ್ಣಿನ ಜನನಾಂಗ ಛೇದದಂತಹ ಪ್ರತಿಗಾಮಿ ಆಚರಣೆಗಳನ್ನು ಬಿಟ್ಟುಕೊಟ್ಟು, ಸದಾಶಯದ ಆಚರಣೆಯನ್ನು ಉಳಿಸಿಕೊಳ್ಳಬೇಕಿದೆ. ಆಫ್ರಿಕನ್ನರು ತಮ್ಮ ಸಂಸ್ಕೃತಿಯ ಸಕಾರಾತ್ಮಕ ಅಂಶಗಳನ್ನು ಪುನಾಶೋಧಿಸಬೇಕಿದೆ. ಅವನ್ನು ಒಪ್ಪಿಕೊಂಡಾಗ ನಾವು ಅಸ್ಮಿತೆ, ಆತ್ಮವಿಶ್ವಾಸ ಮತ್ತು ತಲ್ಲೀನತೆಯನ್ನು ಪಡೆಯುವೆವು.

ಮಾತು ಮುಗಿಸುವ ಮೊದಲು ಬಾಲ್ಯದ ಇನ್ನೊಂದು ಅನುಭವವನ್ನು ಹೇಳುವೆ. ಮನೆಯ ಬಳಕೆಗೆಂದು ನೀರು ತರಲು ಹತ್ತಿರದ ತೊರೆಯೊಂದಕ್ಕೆ ನಾನು ಹೋಗುತ್ತಿದ್ದೆ. ಹರಿವ ತೊರೆಯಿಂದ ನೇರವಾಗಿ ಬೊಗಸೆಯಲ್ಲಿ ನೀರು ಕುಡಿಯುತ್ತಿದ್ದೆ. ಹೊಳೆಯ ಆಪುಹುಲ್ಲಿನ ಮರೆಯಲ್ಲಿರುತ್ತಿದ್ದ ಕಪ್ಪೆಗಳ ಮೊಟ್ಟೆಯನ್ನು ಮುತ್ತುಗಳೆಂದು ತಿಳಿದು ಬೊಗಸೆಯೊಡ್ಡುತ್ತಿದ್ದೆ. ಆದರೆ, ಪ್ರತಿ ಸಲ ಪುಟ್ಟ ಕೈಯಲ್ಲಿ ಚಾಚಿದಾಗಲೂ ಅವು ಜಾರಿ ಹೋಗುತ್ತಿದ್ದವು. ಆಮೇಲೆ, ನೂರಾರು ಕಿರುಕಪ್ಪೆಗಳು ಕಾಣಿಸಿಕೊಳ್ಳುತ್ತಿದ್ದವು. ಅವು ಮಿರಿಮಿಂಚುತ್ತ, ಕಪ್ಪುಮಣ್ಣಿನಿಂದ ತಿಳಿನೀರಿಗೆ ಹಾರುತ್ತಿದ್ದವು. ಈ ಲೋಕ ಪೋಷಕರು ನನಗೆ ನೀಡಿದ ಬಳುವಳಿಯಾಗಿತ್ತು.

ಇಂದು, ಐವತ್ತು ವರ್ಷಗಳ ಬಳಿಕ ಆ ಹೊಳೆ ಬತ್ತಿ ಹೋಗಿದೆ. ಹೆಂಗಸರು ಬಿಂದಿಗೆ ಕಲುಷಿತ ನೀರಿಗಾಗಿ ಬಹುದೂರ ನಡೆದು ಹೋಗುತ್ತಾರೆ. ಮಕ್ಕಳು ತಾವೇನನ್ನು ಕಳೆದುಕೊಂಡಿದ್ದೇವೆಂದು ಎಂದೂ ಅರಿಯಲಾರರು. ನಮ್ಮೆದುರಿನ ಸವಾಲೆಂದರೆ, ಮರಳಿ ಕಪ್ಪೆಗಳ ಲೋಕವನ್ನು ಸಂಪಾದಿಸುವುದು. ನಮ್ಮ ಮಕ್ಕಳಿಗೆ ಆ ಲೋಕದ ಚೆಲುವು ಮತ್ತು ಅಚ್ಚರಿಗಳನ್ನು ತಿಳಿಸಿಕೊಡುವುದು.

ಕೇಶವ್ ಮಾಳಗಿ

ಕೇಶವ್ ಮಾಳಗಿ

****

 

Journalist,Translator,avid bibliophile

Leave a Reply

Your email address will not be published. Required fields are marked *

Back To Top