ದೇವನಹಳ್ಳಿ: ಬಡತನದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಡಾಕ್ಟರೇಟ್ ಪಡೆದಿರುವ ಷಫಿ ಅಹಮದ್, ದೇವನಹಳ್ಳಿಯ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ ಎಂದು ನಿವೃತ್ತ ಶಿಕ್ಷಕ ಶ್ರೀರಾಮಯ್ಯ ಹೇಳಿದರು. ಪಟ್ಟಣದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಷಫಿ ಅಹಮದ್ ಪ್ರಾಥಮಿಕ ಹಂತದ ಶಿಕ್ಷಣದ ವೇಳೆ ನನ್ನ ಶಿಷ್ಯನಾಗಿದ್ದ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಗುರುವನ್ನು ಮೀರಿಸಿದ ಶಿಷ್ಯನ ಸಾಧನೆ ನೋಡಿ ಹೃದಯ ತುಂಬಿ ಬಂದಿದೆ. ಷಫಿ ಅಹಮದ್ ಅವರ “ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು: ಒಂದು ವಿವರಣಾತ್ಮಕ ಅಧ್ಯಯನ’ ಪ್ರೌಢ ಪ್ರಬಂಧಕ್ಕೆ ನೂರನೇ ಘಟಿಕೋತ್ಸವದ ವೇಳೆ ಅ.೧೮ ರಂದು ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ., ಪದವಿ ಪ್ರಧಾನ ಮಾಡಿ ಗೌರವಿಸಿದೆ ಎಂದರು. ಷಫಿ ಅಹಮದ್ ಮಾತನಾಡಿ, ನಾನು ಹುಟ್ಟಿ ಬೆಳೆದು ವಾಸವಿರುವುದು ದೇವನಹಳ್ಳಿಯಲ್ಲೇ. ಇತಿಹಾಸದ ಮೆಲೆ ಆಸಕ್ತಿ ಇರುವುದರಿಂದ ತಾಲೂಕಿನ ಬಗ್ಗೆ ಅಧ್ಯಯನ ಮಾಡಿದೆ. ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ, ಕುಟುಂಬದವರು, ಮಾಧ್ಯಮದವರು ಮತ್ತು ಕನ್ನಡ ಸಾಹಿತ್ಯ ಪರಿಷತ್ ನ ಸ್ನೇಹಿತರು ಬೆನ್ನೆಲುಬಾಗಿ ನಿಂತರು. ಪ್ರಧಾನಮಂತ್ರಿ ಉದ್ಘಾಟಿಸಿದ ನೂರನೇ ಘಟಿಕೋತ್ಸವದಲ್ಲಿ ೬೫೪ ಜನರಿಗೆ ಪಿಎಚ್.ಡಿ., ಪದವಿ ಲಭಿಸಿದ್ದು ಅದರಲ್ಲಿ ನಾನೂ ಸಹ ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು. ದೇವನಹಳ್ಳಿ ಹಾಗೂ ಆವತಿಯ ಪಾಳಯಗಾರರು, ತಾಲೂಕಿನ ಮನಗೊಂಡನಹಳ್ಳಿಯಲ್ಲಿ ಹೂತಿದ್ದ ಶಿಲಾಯುಗದ ಮಹಿಳೆಯ ತಲೆ ಕೆಳಗೆ ಸಿಂಬೆಯAತಹ ವಸ್ತು ಇದ್ದದ್ದು, ಬೊಮ್ಮವಾರದ ಐದೂವರೆ ಅಡಿ ಎತ್ತರದ ಸುಂದರೇಶ್ವರ ಶಿವಲಿಂಗದ ಇತಿಹಾಸ, ಹರಿಹರ ಸಂಗಮ ಕ್ಷೇತ್ರ ವಿಜಯಪುರ, ದೇವನಹಳ್ಳಿ ವೇಣುಗೋಪಾಲಸ್ವಾಮಿ, ಗಂಗವಾರದ ತಬ್ಬುಲಿಂಗೇಶ್ವರ, ನಲ್ಲೂರಿನ ಜೀವವೈವಿಧ್ಯ ಹುಣಸೆ ತೋಪು, ದೇವನಹಳ್ಳಿಯ ಕೋಟೆ, ಹೈದರಾಲಿ ಆಳ್ವಿಕೆ, ಟಿಪ್ಪು ಜನನ, ದೇವನಹಳ್ಳಿಯ ಚಕ್ಕೋತ ಮುಂತಾದ ಪ್ರಮುಖ ಅಂಶಗಳ ಬಗ್ಗೆ ಪ್ರಬಂಧದಲ್ಲಿ ದಾಖಲಿಸಿದ್ದೇನೆ ಎಂದರು.ನಿವೃತ್ತ ಮುಖ್ಯ ಶಿಕ್ಷಕ ಇ.ಸಿ. ಚನ್ನಬಸವರಾಜು, ಟೌನ್ ಕಸಾಪ ಅಧ್ಯಕ್ಷ ಎಸ್.ರಮೇಶಕುಮಾರ್ ಪಾಲ್ಗೊಂಡಿದ್ದರು. ಚಿತ್ರಸುದ್ದಿ: ಪಿಎಚ್.ಡಿ. ಬಗ್ಗೆ ವಿವರಿಸುತ್ತಿರುವ ಷಫಿ ಅಹಮದ್