ಎಂ.ಜಿ ತಿಲೋತ್ತಮೆ, ಭಟ್ಕಳ
ಸೆರಗ ತುಂಬಾ ಕೊಯ್ದು
ತರುತ್ತಿದ್ದ ಹೂ
ಮಾಲೆಯಾಗಿಸಿ ಬಿಡುತ್ತಿದ್ದಳು
ಇಲ್ಲ ದಂಡೆಯಾಗುತ್ತಿದ್ದವು
ಅವಳ ಬೆರಳುಗಳಿಗಷ್ಟೇ
ಗೊತ್ತು ಎನ್ನುವಷ್ಟು ನಾಜೂಕು
ದಾರ ಮತ್ತು ಹೂಗಳ ನಡುವೆ
ಸಲೀಸಾಗಿ ದಂಡೆ ಮೂಡುತ್ತಿದ್ದವು
ತುಂಬಾ ಬಿಗಿದರೆ ನಲುಗುವುದೆಂಬ ಭಯ
ಸೂಕ್ಷ್ಮ ಹೆಣಿಗೆ
ಅಪ್ಪಟ ಕಲೆ
ಅವಳಿಗೆ ಮಾತ್ರ ಕರಗತ
ತೋಟದ ತುಂಬಾ
ರಂಗೇರುತ್ತಿದ್ದ
ಅಬ್ಭಲಿ ಮುತ್ತುಮಲ್ಲಿ ಸೇವಂತಿಗೆ
ನೀರು ಸೇದು ಹೋಯ್ದಾಗಲೆಲ್ಲಾ
ಗಿಡಗಳ ಉಸಿರಾಟ
ಅವಳಿಗೆ ಕೇಳಿಸುತ್ತಿತ್ತು
ದಂಡೆ ಹೂವು
ಅವಳ ಕೈ ಬಳೆ ಸದ್ದು
ಮೂಗುತಿಯ ಮಿನುಗು
ಒಳ ಒಳಗೆ ಅರೆ ಬೆಂದ ಕನಸು
ಬಿಸಿ ಉಸಿರಿನ ಗದ್ದಲ
ಎಲ್ಲವೂ ಆಲಿಸುತ್ತಿತ್ತು
ಮುಡಿಯಲ್ಲಿ ದಂಡೆ ಹೂ
ನಗುತ್ತಿತ್ತು
ಅವಳಂತೆ ಹಾಗೆ
ಜಗದಗಲದ ಕತ್ತಲು ಸರಿಸುವ
ಚಿಕ್ಕ ದೀಪದಂತೆ
ಮದುವೆ ಜಾತ್ರೆಯೆಂದರೆ
ಕಡ್ಡಾಯ ಹೂವಿಗೂ ಹಬ್ಬ
ಅಬ್ಬಲಿ ದುಂಡುಮಲ್ಲಿಗೆ
ಸೇರಿಸಿ ಕಟ್ಟುವ ಬಗೆ
ಜೊತೆಗೆ ಹಾಡಿನೊಳಗೆ
ನೂರೆಂಟು ಕಳವಳವನ್ನು
ಜಗುಲಿಗೂ ಬೀದಿಯ ಪಾದಕ್ಕೂ
ಎರಚುತ್ತಿದ್ದಳು
ದಂಡೆ ಹೂವೆಂದರೆ
ಅಬ್ಬೆಗೆ ನವಿರಾದ ಪ್ರೇಮ
ಬಿಡದ ಬೆಸುಗೆ
ಬೆಚ್ಚನೆಯ ಅನುಭೂತಿ ಸಾಕಷ್ಟು
ಈಗ ದಂಡೆ ಹೂವಿಗೆ
ಗಂಧವಿಲ್ಲ ಪರಿಮಳವಿಲ್ಲ
ಬಾಡದ ಪ್ಲ್ಯಾಸ್ಟಿಕ್ ದಳಗಳು
ದಾರಗಳ ನಡುವೆ ಭಾವಗಳು
ಮೂಡುವುದಂತೂ ಶೂನ್ಯ
ಈಗ ಅಬ್ಬೆ ಉಸಿರಾಡುವ
ದಂಡೆ ಹೂ ಹುಡುಕುತ್ತಿದ್ದಾಳೆ
ತನ್ನ ಕಥೆಗೆ ಜೊತೆಯಾಗಿದ್ದಕ್ಕೆ
ಕೃತಜ್ಞತೆ ತಿಳಿಸಲು
——
ಎಂ.ಜಿ ತಿಲೋತ್ತಮೆ, ಭಟ್ಕಳ
ಉತ್ತರ ಕನ್ನಡ ಜಿಲ್ಲೆಯವರು. ಬಿ.ಎ.,ಬಿ.ಎಡ್. ಪದವೀಧರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಒಲವು. ಪದವಿ ಓದಿನ ವೇಳೆಯಲ್ಲಿಯೇ ‘ನಾ ಅಬಲೆಯಲ್ಲ’ ಕವನಸಂಕಲನ ಪ್ರಕಟಣೆ. 2019ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಶರಣು ವಿಶ್ವ ವಚನ ಫೌಂಡೇಶನ್ ಮೈಸೂರು ಆಯೋಜಿಸಿದ್ದ, ದೇಶ ವಿದೇಶದಿಂದ ಕವಿಗೋಷ್ಠಿಯಲ್ಲಿ 113 ಸ್ಪರ್ಧಿಗಳು ಭಾಗವಹಿಸಿದ್ದ ಕವಿಗೋಷ್ಠಿ ಸ್ಪರ್ಧೆಯಲ್ಲಿ ಸನ್ಮಾನ. 2021ರಲ್ಲಿ ‘ನೀಲಿ ಬಯಲು’ ಕವನ ಸಂಕಲನ ಪ್ರಕಟಿತ.