ನೋಟವೊಂದೆ ಸಾಕು

ಮಾಧವಿ ಭಂಡಾರಿ ಕೆರೆಕೋಣ

ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ ಕಣ್ಮುಚ್ಚಿ ಸಮತೋಲನಕ್ಕೆ ಬಂದೆ. ಕಣ್ಣು ತೆರೆಯುತ್ತಿದ್ದಂತೆ ಮತ್ತೆ ಅದೇ ಓದು.

ಶಬ್ದವನ್ನು ದೃಶ್ಯವಾಗಿಸಿಕೊಂಡು ಓದುವುದು ನನ್ನ ರೂಢಿ. ಪುಸ್ತಕವನ್ನು ಬೆರಳಲ್ಲಿ ಮಡಚಿ ಹಿಡಿದು ಹಿಂದಕ್ಕೆ ಆನಿಸಿದೆ. ಬೇಟೆಗೆ ಬಂದ ಚಿತ್ರಾಂಗದ ಭೇಟಿಯಾದ ಅಪರಿಚಿತ ಪಾರ್ಥನೆಂದರಿತಾಗ ಗಂಡುಡುಗೆಯಲ್ಲೂ ಹೆಣ್ತನ ಅರಳಿ ನಿಂತಾಗ ಅವನ ನೆನಪಲ್ಲೆ ಕರಗಿ ಹೋಗುವ ಮೇಣದ ಗೊಂಬೆ ಚಿತ್ರಾಂಗದಾ. ಕಾಡು …. ಬೇಟೆ……ಚಿತ್ರಾಂಗದ….. ಅರ್ಜುನ …. ಹೀಗೆ ದೃಶ್ಯದೃಶ್ಯಾವಳಿಗಳು ಎದೆಯಲ್ಲಿ ಬಿಚ್ಚಿಕೊಂಡಂತೆ ಮುಂದೇನು? ಕಣ್ತೆರೆದೆ. ಎದುರಿಗೆ ಒಬ್ಬ ವ್ಯಕ್ತಿ. ಬಹುಶಃ ಪೇಪರ್ ಇಟ್ಟು ತನ್ನ ಸ್ಥಳ ಕಾಯ್ದಿರಿಸಿಕೊಂಡ ವ್ಯಕ್ತಿಯಿರಬಹುದು. ಇಡಿಯಾಗಿ ಪೇಪರ್ ಬಿಚ್ಚಿ ಓದುತ್ತಿದ್ದನಾದ್ದರಿಂದ ಅದು ಅವನ ಮುಖವನ್ನು ಪೂರ್ಣ ಮರೆಮಾಡಿತ್ತು. ಕಣ್ಣಾಡಿಸಿದೆ. ಬಾಷೆ ಗೊತ್ತಾಗಲಿಲ್ಲ. ಹೀಗೊಮ್ಮೆ ದೃಷ್ಠಿ ಕೆಳಕ್ಕೆ ಹಾಯಿಸಿದೆ. ಚಂದ ಪಾಲಿಶ್ ಮಾಡಿದ ಬ್ರೌನ್ ಬಣ್ಣದ ಶೂಸ್, ನಸು ಕೆನೆ ಬಣ್ಣದ ಸಡಿಲವಾದ ಪ್ಯಾಂಟ್, ಸೊಂಟದ ಪಕ್ಕ ತುಸು ಇಣುಕಿದ ಬೂದುನೀಲ ಬಣ್ಣದ ಬೆಲ್ಟ್ ನೋಡುತ್ತ ಇನ್ನು ಆತನ ಶರ್ಟ ಹೇಗಿರಬಹುದೆಂಬ ಕುತೂಹಲಿಯಾಗಿ ಕತ್ತು ವಾಲಿಸಿದೆ. ಏಕೋ ತನ್ನ ಕಡೆಗಿನ ಲಕ್ಷ್ಯ ಕಡಿಮೆಯಾಯಿತೆನ್ನುವಂತೆ ನನ್ನ ಪುಸ್ತಕ ಕೆಳಗೆ ಬಿತ್ತು. ಆ ಸದ್ದಿಗೆ ಓದುತ್ತಿದ್ದ ಪೇಪರ್ ಸರಿಸಿ ನೇರ ನೋಡಿದ. ಈಗ ಪಕ್ಕಾ ಮಹಾಭಾರತದ ಚಿತ್ರಾಂಗದೆಯ ಸ್ಥಿತಿ ನನ್ನದು.

ಕಣ್ಣು ಕಣ್ಣು ಕಲೆತ ಆ ಕ್ಷಣ! ಕಂಡಾಕ್ಷಣ ಎದ್ದು ಕಾಣುವ ನೀಳ ನಾಸಿಕ ಹೊಳೆವ ಕಣ್ಣುಗಳು, ಕಣ್ಣನ್ನು ಭದ್ರವಾಗಿ ರಕ್ಷಿಸುತ್ತೇನೆನ್ನುವ ದಪ್ಪ ದಪ್ಪ ಹುಬ್ಬು, ಅಗಲ ಹಣೆ, ತೀಡಿದ ಕ್ರಾಪು, ಚಿಗುರು ಮೀಸೆಯಲ್ಲದ ತುಸು ದಪ್ಪ ಮೀಸೆ, ಕಪ್ಪು ವರ್ಣದ ಗೆರೆ ದಾಟಿದ ತುಸು ಶ್ವೇತವರ್ಣವೇ ಅನ್ನಬಹುದಾದ ಬಣ್ಣ, ವರ್ತುಲವಲ್ಲದ ತುಸು ನೀಳ ಕಾಂತಿಯುಕ್ತ ಮುಖ, ಕಡುನೀಲಿ ಬಣ್ಣದ ಶರ್ಟ ಅವನ ಅಂದಕ್ಕೆ ಇನ್ನೊಂದಿಷ್ಟು ಮೆರಗು ನೀಡಿತ್ತು. ಕಣ್ಣು ಕೀಳದಾದೆ, ಕೀಳಲೇ ಬೇಕಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಳಗೆ ಬಿದ್ದ ಪುಸ್ತಕದ ಕಡೆ ದೃಷ್ಟಿ ಹೊರಳಿಸಿದೆ. ತಟಕ್ಕನೆ ಪುಸ್ತಕ ಹೆಕ್ಕಿ ಕೈ ಮುಂದೆ ನೀಡಿದ. ಕಣ್ಣಲ್ಲೆ ಕೃತಜ್ಞತೆ ಸೂಸಿದೆ. ಸುಮ್ಮನೆ ಆ ಪುಸ್ತಕ ಸವರಿದರೆ ಅವನ ಬೆರಳ ಸ್ಪರ್ಶದ ಆಹ್ಲಾದಕರ ಘಮಲು. ಮತ್ತೆ ಪುಸ್ತಕ ಹಿಡಿದೆ, ಮತ್ತೆ ಮತ್ತೆ ಹೊರಕ್ಕೆ ನೋಡಿದೆ. ಹೊರಗೆ ನೋಡುವಾಗಲೆಲ್ಲ ದೃಷ್ಟಿ ಅವನ ಸಂಧಿಸಿತು. ಅಥವಾ ಅವನ ನೋಡಲೆಂದೇ ನಾನು ಹೊರಕ್ಕೆ ನೋಡುತ್ತಿದ್ದೆನೆ? ಈ ವರೆಗೂ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದ ನನ್ನ ಕಣ್ಣು ಈಗ ಪುರುಷನನ್ನು ಕುಡಿಯುತ್ತಿತ್ತು.

ನ್ಯೂಸ್ ಪೇಪರ್ ಓದಿ ಮುಗಿಯಿತೇನೋ, ಮಡಚಿಟ್ಟ. ಮತ್ತೆ ಚಾಯ್ ವಾಲಾ ಪ್ರತ್ಯಕ್ಷ. ನಮ್ಮ ತಂಡದಲ್ಲಿದ್ದ ಕಾರ್ಮಿಕ ಸಂಘಟನೆಗಳ ಸಂಘಟಕಿ, ಕಲ್ಲನ್ನೂ ಮಾತನಾಡಿಸುವ ಗಂಗಾ ತಾನೂ ಚಹ ಹೀರುತ್ತ ಅವನನ್ನು ಮಾತಿಗೆಳೆದಳು. ಗಂಭೀರವಾಗಿ ಕುಳಿತಂತೆ ಗಂಭೀರವಾಗೇ ಮಾತನಾಡಿದ. ಅವರಿಬ್ಬರ ಸಂಭಾಷಣೆಯು ಹಿಂದಿಯಲ್ಲಿ ಸಾಗಿತ್ತು. ತಾನು ಕೇರಳದಿಂದ ಬಂದಿರುವುದಾಗಿಯೂ ಭೋಪಾಲದಲ್ಲಿ ವೃತ್ತಿ ಮಾಡುತ್ತಿರುವುದಾಗಿಯೂ ಹೇಳಿದನು. ಭೋಪಾಲ್ ಅಂದಾಗಲೆಲ್ಲ ಅನಿಲ ದುರಂತವೇ ನಮಗೆ ನೆನಪಾಗುವುದು. ಆ ಕುರಿತು ಮಾತು ಸಾಗಿತು. ನಾನು ಮೂಕವಾಗಿ ಎಲ್ಲವನ್ನು ಆಲಿಸುತ್ತಿದ್ದೆ. ಮಾತಿನ ಮಧ್ಯೆ ನನ್ನೆಡೆ ಒಂದು ದೃಷ್ಠಿ ಬೀರುತ್ತಿದ್ದ ಆತ. ಆಗೆಲ್ಲ ಬೇಕಂತಲೇ ನಾನು ಕಣ್ಣು ಪಕ್ಕಕ್ಕೆ ಹೊರಳಿಸುವ ನಾಟಕವಾಡುತ್ತಿದ್ದೆ, ಇನ್ನೊಂದಿಷ್ಟು ಅವನ ಗಮನ ಸೆಳೆಯಲು. ಮಾತು ಕಾರ್ಮಿಕ ಸಂಘಟನೆಯ ವಿಷಯಕ್ಕೆ ಬಂತು. ‘ಸಂಘಟನೆಯ ಸಂಪರ್ಕದಲ್ಲಿದ್ದೀರಾ, ಹಾಗಿದ್ದರೆ ಒಮ್ಮೆ ಕರ್ನಾಟಕಕ್ಕೂ ಬನ್ನಿ, ಕೇರಳಕ್ಕೆ ಹೋಗುವಾಗಲೂ ಬರುವಾಗಲೂ ನಮ್ಮ ಕಾರವಾರ ದಾಟಿಯೇ ಹೋಗಬೇಕಲ್ಲ’ ಗಂಗಾ ಎಂದಾಗ ಫಕ್ಕನೆ ನಕ್ಕ. ಆಹಾ, ಹೊಳೆವ ಅವನ ಸಾಲು ಸಾಲು ದಂತಕಾಂತಿಗೆ ನಾನು ಫಿದಾ ಆದೆ. ಯು ಆರ್ ಸೋ ಸ್ಮಾರ್ಟ ಎಂದು ಮೆಸೇಜ್ ಮಾಡೋಣವೆಂದು ಮೊಬೈಲ್‍ನಲ್ಲಿ ಟೈಪ್ ಮಾಡಿ ‘ಸೆಂಡ್’ ಒಪ್ಶನ್ ಗೆ ಹೋದರೆ ತಲೆಯೇ, ಅವನ ಸೆಲ್ ನಂ ನನ್ನಲ್ಲಿ ಎಲ್ಲಿದೆ? ಯಾರದೋ ಫೋನ್ ಬಂತು ಅವನಿಗೆ. ಆ ಮಳಯಾಳಿ ಸಂಭಾಷಣೆ ಅರ್ಥವಾಗಲಿಲ್ಲ, ಆಸಕ್ತಿಯೂ ಇರಲಿಲ್ಲವೆನ್ನಿ. ಈಗ ನನ್ನ ಆಸಕ್ತಿಯ ಕೇಂದ್ರ ಬಿಂದು ಮಧ್ಯವಯಸ್ಕ ಆ ಪುರುಷ ಮಾತ್ರ. ಅದು ಆ ಕ್ಷಣದ ಕಣ್ಣ ಮುಂದಿನ ಸತ್ಯ.

ಅವನೂ ಬ್ಯಾಗಿನಲ್ಲಿ ತಡಕಾಡಿ ಒಂದು ಪುಸ್ತಕ ತೆಗೆದ. ಉಲ್ಟಾ ಇಟ್ಟ ಪುಸ್ತಕದ ಹಿಂಬದಿಯ ಹೆಣ್ಣಿನ ಚಿತ್ರ ನೋಡಿ ಯಾವುದೋ ಮಳಿಯಾಳಿ ಕುಟ್ಟಿ ಇರಬಹುದೆಂದುಕೊಂಡೆ. ಅರೆ! ನಿಜ, ಅವನು ಸೀದಾ ಪುಸ್ತಕ ಹಿಡಿದರೆ ನಮ್ಮ ಮಾಧವಿ ಕುಟ್ಟಿ, ಪ್ರಿಯ ಲೇಖಕಿ. ಸಾಹಿತ್ಯ ಪ್ರಿಯನೆಂದಾಗ ಇನ್ನೂ ಹತ್ತಿರವಾದ ನನ್ನ ಹೃದಯಕ್ಕೆ. ಅಷ್ಟರಲ್ಲಿ ಗೆಳತಿ ಸಿರಿ “ಮಾಧವಿ” ಎಂದು ಕೂಗಿದಳು. ಅವನ ಕಿವಿ ನೆಟ್ಟಗಾಯಿತು. ಅವಳು ಕೇಳಿದ ನೀರಬಾಟಲ್ ಕೊಟ್ಟು ತಿರುಗಿದರೆ ನನ್ನನ್ನೊಮ್ಮೆ ಪುಸ್ತಕದ ಹಿಂಬದಿಯ ಮಾಧವಿ ಕುಟ್ಟಿಯನೊಮ್ಮೆ ನೋಡಿದ. ಸ್ವಲ್ಪ ತುಟಿಯರಳಿಸಿ ನಕ್ಕರೂ ಅವನ ಕಣ್ಣು ತುಂಬ ನಕ್ಕಿತು. ಆ ಕ್ಷಣ ಅವನ ದಪ್ಪನೆಯ ನಸುಗೆಂಪು ತುಟಿಯನ್ನು ಚುಂಬಿಸಬೇಕೆನಿಸಿದ್ದು ಸುಳ್ಳಲ್ಲ.

ಪುಸ್ತಕದ ತುದಿ ಮಡಚಿಟ್ಟು ಎಲ್ಲಿಗೋ ಎದ್ದು ನಡೆದ. ಹೀಗೆ ಆಗಾಗ ಎದ್ದು ಹೋಗುವುದು ಯಾಕೆಂದು ತಿಳಿಯಲಿಲ್ಲ. ಸಿಗರೇಟು ಕುಡಿಯಲೇ? ಛೇ, ಇರಲಿಕ್ಕಿಲ್ಲವೆನಿಸಿತು. ಇಲ್ಲದಲ್ಲಿ ಅವನ ತುಟಿಗೆ ಹೇಗೆ ಕೆಂಬಣ್ಣವುಳಿಯಲು ಸಾಧ್ಯ? ಮರಳಿ ಬಂದಾಗ ವಾಸನೆಯು ಬಡಿಯುತ್ತಿರಲಿಲ್ಲ. ಅವನೆಷ್ಟು ನನ್ನನ್ನು ಆವರಿಸಿಕೊಂಡಿದ್ದನೆಂದರೆ ಬಹುಶಃ ಅದು ಹೌದಾದರೂ “ನಿನ್ನ ಬೆರಳುಗಳಲ್ಲಿ ಒತ್ತಿ ಹಿಡಿದ ಸಿಗರೇಟೆ ನಾನಾಗಬಾರದ್ತಿತ್ತೆ ಪ್ರಿಯಾ?’’ ಎಂದು ಕವನಿಸುತ್ತಿದ್ದೆನೋ ಏನೋ! ಅಂತೂ ಅವನ ಖಾಲಿ ಜಾಗ ನನ್ನೆದೆಯನ್ನೇ ಬರಿದು ಮಾಡುವುದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಕಣ್ಣು ಪುಸ್ತಕದತ್ತ ಹರಿಯದೆ ಬಾಗಿಲತ್ತಲೇ ಹರಿಯುತ್ತಿತ್ತು. ಬಂದಾಗ ನಿಧಿ ಸಿಕ್ಕಿದಷ್ಟೇ ಸಂತೋಷ. ನಿಜ ಹೇಳಬೇಕೆಂದರೆ ಅವನು ಎದುರಿಗಿರುವಷ್ಟೂ ಹೊತ್ತು ನನ್ನ ಕಣ್ಣು ಪುಸ್ತಕದಲ್ಲಿ ನೆಡಲೇ ಇಲ್ಲ. ಓದಿದ್ದು ಅವನನ್ನಷ್ಟೇ. ಸುಮ್ಮನೆ ಪುಟ ತಿರುವಿ ಓದುವಂತೆ ನಟಿಸಿದೆ. ಅವನೂ ಗಂಟೆಗಟ್ಟಲೆ ಪುಟವನ್ನೇ ತಿರುವಲಿಲ್ಲ. ಅಂದರೆ ಅವನ ಸ್ಥಿತಿಯೂ ಅದೇ ಆಗಿರಬಹುದೆ? ಎದೆಯಲ್ಲಿ ಜುಳು ಜುಳು ನದಿಯೊಂದು ಹರಿದಂತೆ! ನಾನು ಯಾವ ಉದ್ದೇಶಕ್ಕಾಶೀ ರೈಲು ಪ್ರಯಾಣ ಕೈಗೊಂಡಿದ್ದೇನೆ ಎಂಬುದೆಲ್ಲ ಮರೆತೇ ಹೋದಂತಿತ್ತು. ಕಣ್ಣು ಮುಚ್ಚಿ ಕೂತಲ್ಲೇ ಆ ಕ್ಷಣ ಮನಸ್ಸು ಹಿಂದಕ್ಕೋಡಿತ್ತು.

ಸಾಮಾನ್ಯವಾಗಿ ಹಿರಿಯರು ಕಿರಿಯರನ್ನು ದೂಷಿಸುವಾಗ ಬಳಸುವ ‘ಹಳ್ಳಿ ಬಿಟ್ಟು ದಿಲ್ಲಿ ಸೇರಿ ಕೆಟ್ಟರು’ ಎನ್ನುವ ಮಾತು ಕೇಳಿ ಕೇಳಿಯೋ ಅಥವಾ ಇತಿಹಾಸದ ಪುಟಗಳಲ್ಲಿ ರಂಜಿತವಾದ ರಾಜದರ್ಬಾರಿಗೋ ಈಗಲೂ ಅತಿರಂಜಿತವಾದ ರಾಜಕೀಯ ಚದುರಂಗದಾಟ ಕೇಂದ್ರಬಿಂದುವಾದುದಕ್ಕೋ ನನಗೆ ಒಮ್ಮೆ ದಿಲ್ಲಿ ನೋಡುವ ಆಸೆ ಮನಸ್ಸಿನಲ್ಲೇ ಮೊಳೆತಿತ್ತು. ತ್ರಿವರ್ಣಧ್ವಜ ಮೆರೆವ ಕೆಂಪುಕೋಟೆ, ಗಗನಚುಂಬಿ ಕುತುಬ್‍ಮಿನಾರ್, ಗಾಂಧಿ ನೆನಪಿನ ರಾಜ್‍ಘಾಟ್, ಅದ್ದೂರಿ ರಾಷ್ಟ್ರಪತಿ ಭವನ್, ಅಂದದ ಅಕ್ಷರಧಾಮ್, ಶ್ವೇತ ಶಿಲೆಯ ತಾಜ್ ಮಹಲ್ ಹೀಗೆ ಅಲ್ಲಲ್ಲಿ ಓದಿದ ಕೇಳಿದ ಶಬ್ದಚಿತ್ರಗಳೆಲ್ಲ ಮನದಲ್ಲಿ ಗೂಡು ಕಟ್ಟಿದ್ದವು. ಎಷ್ಟೇ ಕನಸಿದರೂ ಕಾಲ ಕೂಡಿ ಬಂದಿರಲೇ ಇಲ್ಲ.

2001 ನೇ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಗೆ ಹೋಗುವ ಸಂದರ್ಭ ಒದಗಿ ಬಂತು. ಎನ್. ಎಸ್. ಡಿ ಯಲ್ಲಿ ನಡೆಯುವ ‘ಜಸ್ನೆ ಬಚ್‍ಪನ್’ ಮಕ್ಕಳ ನಾಟಕೋತ್ಸವಕ್ಕೆ ನಮ್ಮ ಮಕ್ಕಳ ನಾಟಕವೊಂದಕ್ಕೆ ಭಾಗವಹಿಸುವ ಅವಕಾಶ ದೊರೆಯಿತು. ಕೆಲವು ಫ್ರೌಢಶಾಲೆಯ ಮಕ್ಕಳು ಅಭಿನಯಿಸಿದ ‘ಮಕ್ಕಳ ರವೀಂದ್ರ’ ರವೀಂದ್ರನಾಥ ಠ್ಯಾಗೋರರ ಕಥೆಗಳನ್ನಾದರಿಸಿದ ನಾಟಕ. ಅದರ ನಿರ್ದೇಶನ ನನ್ನ ಗೆಳತಿ ಡಾ. ಸಿರಿ. ಶಿಕ್ಷಕಿಯೂ ಸಾಹಿತಿಯೂ ನಟಿಯೂ ನಿರ್ದೇಶಕಿಯೂ ಆಗಿರುವ ಅವಳು ಒಂದು ರೀತಿಯಲ್ಲಿ ಮುಟ್ಟಿದ್ದೆಲ್ಲವೂ ಬಂಗಾರವೆನ್ನುವ ಹಾಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅವಳ ನಿರ್ದೇಶನದ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಅವಳ ನಾಟಕವೆಂದರೆ ಸಾಹಿತ್ಯ, ಸಂಗೀತ, ನೃತ್ಯ, ಭಾವಗಳ ಒಂದು ಸುಂದರ ಕೊಲಾಜ್, ಅದ್ಭುತ ದರ್ಶನ. ಅವಳ ಎಲ್ಲ ರಂಗ ಚಟುವಟಿಕೆಗಳಲ್ಲಿ ಖುಷಿಯಿಂದ ಪಾಲ್ಗೊಳ್ಳುವ ನನ್ನಲ್ಲಿ ರಂಗಾಸಕ್ತಿ ಚಿಗುರೊಡೆದಿದ್ದೇ ಅವಳಿಂದ. ಹೀಗಾಗಿ ನಟರು, ನಿರ್ದೇಶಕರು, ಸಹಾಯಕರು ಎನ್ನತ್ತ ಭಾಗವಹಿಸುವ ಇಪ್ಪತೈದು ಜನರ ತಂಡದಲ್ಲಿ ನಾನೂ ಒಬ್ಬ ವಸ್ತ್ರವಿನ್ಯಾಸಕಿಯಾಗಿ ಹೊರಟಿದ್ದೆ. ಎಲ್ಲರಿಗೂ ಸಂಭ್ರಮವೋ ಸಂಭ್ರಮ.

ಕೇರಳದಿಂದ ಹೊರಡುವ ಮಂಗಳಾ ಎಕ್ಸಪ್ರೆಸ್‍ಗೆ ಹೋಗುವುದೆಂದು ಟ್ರೇನ್‍ಬುಕ್ ಮಾಡಲಾಯಿತು. ನಾವು ನಮಗೆ ಹತ್ತಿರದ ಸ್ಟೇಷನ್ ಕಾರವಾರದಲ್ಲಿ ಟ್ರೇನ್ ಏರಬೇಕು. ದೆಹಲಿಯ ಚಳಿಗಾಲವೆಂದು ಹೆದರಿದ ನಾವೆಲ್ಲ ಬೆಚ್ಚಗಿರಲು ಏನೆಲ್ಲ ಬೇಕೋ ಅದನ್ನೆಲ್ಲ ಕಟ್ಟಿಕೊಂಡಿದ್ದರಿಂದ ಎಲ್ಲರ ಕೈಯಲ್ಲೂ ಎತ್ತಿಡಲಾರದ ಎರಡೆರಡು ಬ್ಯಾಗುಗಳು. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಟ್ರೇನು ಕಾರವಾರವನ್ನು ತಲುಪಬೇಕಿತ್ತು. ಅಂದು ಯಾಕೋ ತಡವಾಯಿತು. ಶಿರಸಿಯಿಂದ ಹತ್ತು ಗಂಟೆಗೇ ಕಾರವಾರ ಸೇರಿದ ನಮಗೆ ರಾತ್ರಿಯ ಚಳಿ ಬೇರೆ, ನಿದ್ದೆಯ ತೂಕಡಿಕೆ ಬೇರೆ, ರೈಲಿನ ಮುಖ ಕಂಡರೆ ಸಾಕೆಂದು ಕಾಯುತ್ತಿದ್ದೆವು. ಪರಸ್ಪರ ಹೇಳಿಕೊಳ್ಳದಿದ್ದರೂ ಬೇಗ ದೆಹಲಿ ತಲುಪುವ ಅವಸರ ಎಲ್ಲರ ಮನದಲ್ಲಿ ತುಂಬಿತ್ತು. ಸ್ಟೇಶನ್‍ನಲ್ಲಿ ಯಾವ ಅನೌನ್ಸಮೆಂಟ್ ಆದರೂ ನಮ್ಮ ಕಿವಿಯೆಲ್ಲ ಆ ಕಡೆಗೇ ಓಡುತ್ತಿತ್ತು. ಕೆಲವರ ಆಕಳಿಕೆ ಕೆಲವರ ತೂಕಡಿಕೆಯ ಮಧ್ಯೆ ಒಂದು ಗಂಟೆ ತಡವಾಗಿ ರೈಲಿನ ಆಗಮನವಾಯಿತು.

ರೈಲು ಮಾರ್ಗವನ್ನು ಬಹಳ ತಡವಾಗಿ ಕಂಡ ಉತ್ತರಕನ್ನಡ ಜಿಲ್ಲೆಯ ಜನಕ್ಕೆ ಅಷ್ಟು ಉದ್ದದ ರೈಲು ಹಾವಿನಂತೆ ಚಲಿಸುವುದೇ ಒಂದು ಆಶ್ಚರ್ಯ. ಚಿಕ್ಕ ಮಕ್ಕಳೇಕೆ ದೊಡ್ಡವರೂ ಅದರ ಗಡಗಡ ಸದ್ದಿಗೆ ಬೆಕ್ಕಸ ಬೆರಗಾಗಿ ನೋಡುತ್ತಾರೆ. ಇನ್ನು ಟ್ರೇನ್ ಹತ್ತುವುದೆಂದರೆ ಅದೊಂದು ಭಯಾನಕ ಸಂಗತಿ. ನಿಂತಂತೆ ಚಲಿಸಿ ಬಿಡುವ, ಯಾವ ಬೋಗಿ, ಎಲ್ಲಿ ಹತ್ತುವುದು, ಎಲ್ಲಿ ಇಳಿಯುವುದು ಎನ್ನುವುದು ತ್ರಾಸದಾಯಕ. ಹೀಗಾಗಿ ಈಗಲೂ ಆ ತಾಪತ್ರಯವೇ ಬೇಡವೆಂದು ಆ ಕೆಂಪು ಬಸ್ಸನ್ನೇ ನಂಬಿದವರು ಬಹಳ ಜನ. ಆ ರೈಲಿನ ವೇಗಕ್ಕೆ ನಮ್ಮ ಮನೋವೇಗ ಹೊಂದಿಕೊಳ್ಳದ ಕಾರಣ ನಮ್ಮಂತವರನ್ನೂ ಸೇರಿಸಿ ಜಿಲ್ಲೆಯ ಜನಕ್ಕೆ ಈ ರೈಲು ಇನ್ನೂ ಪೂರ್ಣ ತೆರೆದುಕೊಂಡಿಲ್ಲ.

ನಮ್ಮ ತಂಡದಲ್ಲಿ ಮೂರು ನಾಲ್ಕು ಜನ ರೈಲು ಪ್ರಯಾಣ ಪರಿಚಿತ ಜನರಿದ್ದುದರಿಂದ ಅವರೇ ನಮ್ಮ ಶ್ರೀರಕ್ಷೆ ಎಂದು ತಿಳಿದು ಅವರ ಬೆನ್ನು ಬಿಡದೆ ತಿರುಗುತ್ತಿದ್ದೆವು. ರೈಲು ಕಂಡಿದ್ದೇ ತಡ ಎಲ್ಲಿ ಬಿಟ್ಟು ಹೋಗಿ ಬಿಟ್ಟರೆ ಎಂಬ ಭಯದಿಂದ ಕುರಿಮಂದೆಯ ಹಾಗೆ ಮೊದಲು ಕಾಲಿಟ್ಟವರ ಜೊತೆಗೆ ಇಡೀ ತಂಡ ಟ್ರೇನನ್ನು ಆವರಿಸಿಕೊಂಡಿತು. ಎಣಿಸಿ ಎಲ್ಲರೂ ಬಂದಿರುವುದನ್ನು ಕಾತರಿ ಪಡಿಸಿಕೊಂಡು ನಮ್ಮ ನಮ್ಮ ಸೀಟಿನಲ್ಲಿ ಆಸೀನರಾದೆವು. ಕಿಟಕಿ ಬಾಗಿಲು ಫ್ಯಾನು ಲೈಟುಗಳನ್ನೆಲ್ಲ ನೋಡಿ ತಟ್ಟಿಮುಟ್ಟಿ ಮುದಗೊಂಡೆವು. ಕಣ್ಣು ನಿದ್ದೆಗೆಳೆಸುತ್ತಿತ್ತು.

ನಮ್ಮದು ಸ್ಲೀಪಿಂಗ್ ಕೋಚ್ ಆಗಿದ್ದರಿಂದ ನಮ್ಮ ನಮ್ಮ ಬ್ಯಾಗುಗಳನ್ನೆಲ್ಲ ಲೋವರ್ ಬರ್ತ್‍ನ ಕೆಳಗೆ ಸೇರಿಸಿದೆವು. ಬಂದ ಎಲ್ಲ ಮಕ್ಕಳು ಮರಿಗಳನ್ನೆಲ್ಲ ಅವರವರ ಸ್ಥಾನ ಸೇರಿಸಿ ಮಲಗುವಾಗ ನನಗೆ ಸಿಕ್ಕಿದ್ದು ಅಪ್ಪರ್ ಬರ್ತ್. ಚಪ್ಪಲಿ ಕೆಳಗೆ ಬಿಟ್ಟು ಭಯದೊಂದಿಗೆ ಕಷ್ಟಪಟ್ಟು ವ್ಯಾನಿಟಿ ಬ್ಯಾಗ್ ಹಾಗೂ ಹಾಸು ಹೊದಿಕೆಯೊಂದಿಗೆ ಮೇಲೇರಿದೆ. ಹತ್ತುವಾಗ ಇದ್ದ ಭಯ ಮೇಲೇರಿದ ಮೇಲಿರಲಿಲ್ಲ. ಎಲ್ಲರೂ ಸುಖ ನಿದ್ದೆಯಲ್ಲಿ ಮುಳುಗಿದ್ದರಿಂದ ಅಕ್ಕ ಪಕ್ಕದಲ್ಲಿ ಯಾರು ಏನೆಂಬುದೂ ಅರಿವಾಗಲಿಲ್ಲ. ಎದುರಿನ ಬರ್ತ್‍ನಲ್ಲಿ ಯಾರೋ ಆ ಕಡೆ ಮಗ್ಗುಲಾಗಿ ಮಲಗಿರುವುದು ಮಾತ್ರ ಕಂಡುಬಂತು. ಮಧ್ಯರಾತ್ರಿ ಎಂದೋ ಮೀರಿ ಕೈಗಡಿಯಾರ 2:30 ನ್ನು ತೋರಿಸಿತು. ಮಲಗಿದ ತಕ್ಷಣ ನಿದ್ದೆ ಹತ್ತದ ನನಗೆ ನಿದ್ದೆ ಬಂದಿದ್ದು ಮೂರು ಮೂರು ಕಾಲಿಗೋ ಇರಬಹುದು.

ಎಚ್ಚರವಾದಾಗ ಸೂರ್ಯನ ಎಳೆಕಿರಣ ಸುಡುಕಿರಣದೆಡೆಗೆ ಸಾಗಿತ್ತು. ಹೊಡೆದೆಬ್ಬಿಸುವ ಅಲಾರಾಂ ಕಾಟ, ಏಳುವ ಕಾಲೇಜಿನ ಅವಸರ ಯಾವುದೂ ಇಲ್ಲದ ಕಾರಣ ಎದ್ದದ್ದು ತುಂಬ ತಡವಾಗಿತ್ತು. ಗಡಬಡಿಸಿ ಎದ್ದು ನೋಡಿದೆ ಸುಮಾರು ಒಂಭತ್ತು ಮುಕ್ಕಾಲು. ಎದುರಿನ ಅಪ್ಪರ್ ಬರ್ತಗಳ ಹುಕ್ಕನ್ನು ಕಳಚಿ ಲೋವರ್ ಬರ್ತ್‍ನಲ್ಲಿ ಕುಳಿತಿದ್ದರು. ಕೆಲವರು ಟಾಯ್ಲೆಟ್ ಓಡಾಟದಲ್ಲಿ ಬ್ಯೂಸಿಯಾದರೆ, ಇನ್ನೂ ಕೆಲವರು ಕಾಫಿ ತಿಂಡಿಗಳಲ್ಲಿ ಮಗ್ನರಾಗಿದ್ದರು, ಇನ್ನೂ ಕೆಲವರು ನ್ಯೂಸ್ ಪೇಪರ್‍ಗಳಲ್ಲಿ ತಲೆ ಹುದುಗಿಸಿದ್ದರು. ನಾನು ಬ್ಯಾಗಿನ ಜಿಪ್ ಎಳೆದು ಬ್ರಶ್‍ಗೆ ಟೂತ್‍ಪೇಸ್ಟ್ ಹಚ್ಚಿ ಬ್ರಶ್ ಮಾಡಲು ಮುಂದಾದೆ. ಬ್ರಶ್ ಮಾಡಿ ಟಾಯ್ಲೆಟ್‍ಗೆ ಕಾಲಿಟ್ಟರೆ ಸದಾ ಸ್ವಚ್ಛತೆಯನ್ನು ಪಠಿಸುವ ನನಗೆ ಥೂ ಗಲೀಜೆನಿಸಿತು. ಆದರೂ ಜಲಬಾಧೆ ಮಲಬಾಧೆ ತೀರಿಸಿಕೊಳ್ಳುವ ಅನಿವಾರ್ಯತೆಗೆ ಮೂಗು ಮುಚ್ಚಿ ಕುಳಿತೆ. ಒಮ್ಮೊಮ್ಮೆ ರೈಲು ಗಡ ಗಡ ಅಂದಾಗಲೆಲ್ಲ ಮುಗ್ಗರಿಸಿದಂತೆ ಭಯವಾಗಿ ಕೈಗೆ ಸಿಕ್ಕಿದ್ದನ್ನೆಲ್ಲ ಹಿಡಿದು ಕೊನೆಗೆ ಎರಡೂ ಕೈ ಬಿಡಬೇಕಾದಾಗ ಇನ್ನೂ ಭಯವಾಗಿ ಹೇಗೆ ಹೇಗೋ ಮುಗಿಸಿ ಹೊರಕ್ಕೆ ಬಂದು ಬಚಾವಾದೆ. ಅಲ್ಲಿ ನಿಂತ ಜನರ ಮಧ್ಯೆಯೇ ಫೇಸ್‍ವಾಶ್ ಹಚ್ಚಿ ಮುಖ ತೊಳೆದು ಬಂದು ಕುಳಿತು ತಿಳಿಗುಲಾಬಿ ಟರ್ಕಿ ಟಾವೆಲ್‍ನಿಂದ ಮುಖವರಸಿ ಕುಳಿತೆ. ಡಬ್ಬ ತೆಗೆದು ಮೊದಲ ದಿನಕ್ಕಿರಲೆಂದು ತಂದ ಚಪಾತಿಗೆ ಒಣಕೊಬ್ಬರಿ ಚಟ್ನಿಪುಡಿಯನ್ನು ಸೇರಿಸಿ ತಿಂದು ಮುಗಿಸುವಷ್ಟರಲ್ಲಿ “ಚಾಯ್ ಚಾಯ್” ಎಂದು ಕೂಗುತ್ತಾ ಬಂದ ಚಾಯ್ ವಾಲಾನಿಂದ ಒಂದು ಕಪ್ ಚಹಕೊಂಡು ಹೀರಿ ನಿರಾಳನಾದೆ.

ಪ್ರಯಾಣಿಸುವಾಗಲೆಲ್ಲ ಕಿಟಕಿಯ ಪಕ್ಕದ ಸೀಟೆಂದರೆ ತುಂಬ ಪ್ರಿಯ ನನಗೆ. ಮೂಲೆಯಲ್ಲಿ ಭದ್ರವಾಗಿ ನಿದ್ರಿಸಬಹುದೆಂಬ ಕಾರಣಕ್ಕಲ್ಲ, ಬಸ್ಸಿನ ಬಹುತೇಕ ಮಂದಿ ನಿದ್ದೆಗೆ ವಶರಾಗಿ ಆ ಕಡೆ ಈ ಕಡೆ ತೂಕಡಿಸಿ ಬೀಳುತ್ತಿರುವಾಗ ನಾನು ಮಾತ್ರ ಎವೆ ಮುಚ್ಚದೆ ಕಿಟಕಿಯಾಚೆ ಕಣ್ಣು ನೆಟ್ಟಿರುತ್ತೇನೆ. ಆ ಹಸಿರು ಹುಲ್ಲು, ಚಿನ್ನದ ಚಿಗುರು, ದೈತ್ಯಮರ, ಅಪರೂಪದ ಕಾಡು ಹೂಗಳು, ಅಂಕುಡೊಂಕಾಗಿ ಸಾಗುವ ರಸ್ತೆ, ಅಲ್ಲಲ್ಲಿ ನೊರೆ ಚೆಲ್ಲುವ ಜಲಕನ್ನಿಕೆಯರನ್ನು ಕಣ್ತುಂಬಿ ಕೊಳ್ಳುವುದೇ ಪರಮಾನಂದದ ಕ್ಷಣ. ಮಲೆನಾಡಿನ ಗಗನಚುಂಬಿ ಬೆಟ್ಟಗಳು, ಬಯಲು ನಾಡಿನ ಕ್ಷಿತಿಜಕ್ಕೂ ಹರವಿದ ಬಯಲು ಇವೆರಡೂ ನನಗೆ ಸಮಾನ ಪ್ರಿಯವೇ. ಜೇನು ಹಲ್ಲೆಯೊಂದು ನೇರ ಎದೆಗೆ ಬಿದ್ದಂತೆ. ಇಲ್ಲಿಯೂ ಖುಷಿಯೆಂದರೆ ಕಿಟಕಿಯ ಸಾಂಗತ್ಯ ನನಗೆ ಸಿಕ್ಕಿದ್ದು.

ದಾರಿ ಖರ್ಚಿಗೆಂದು ಕೆಲವು ಪುಸ್ತಕಗಳನ್ನು ಇಟ್ಟುಕೊಂಡಿದ್ದೆ. ಕೈಗೆ ಸಿಕ್ಕಿದ್ದು ಕುವೆಂಪುರವರ ಚಿತ್ರಾಂಗದಾ ಖಂಡಕಾವ್ಯ. ಡಿಗ್ರಿಯಲ್ಲಿ ಪಠ್ಯವಾಗಿ ಓದಿ ಮರೆತ ಪುಸ್ತಕ. ಕೆಲವು ತಿಂಗಳುಗಳ ಹಿಂದಷ್ಟೇ ಸಿರಿಯ ನಿರ್ದೇಶನದಲ್ಲೇ ನಾವು ಆರೇಳು ಸಾಹಿತ್ಯ ಸಂಗಾತಿಗಳು ಸೇರಿ ಠ್ಯಾಗೂರರ ‘ಚಿತ್ರಾ’ ನಾಟಕವನ್ನು ಶಿರಸಿಯಲ್ಲಿ ಅಭಿನಯಿಸಿದ್ದೆವು. ಮರವೆಯಾದ ಕುವೆಂಪು ಚಿತ್ರಾಳನ್ನು ಇದರೊಂದಿಗೆ ತೂಗಿ ಅಳೆವ ಮನಸ್ಸಾಗಿ ಕೈಗೆತ್ತಿಕೊಂಡೆ. ಎಡಗೈ ಬೆರಳುಗಳಲ್ಲಿ ಪುಸ್ತಕವಿದ್ದರೂ ಮನಸ್ಸು ಮಾತ್ರ ನಮ್ಮ ವಿರುದ್ಧ ಓಡುವ ಪ್ರಕೃತಿಯಲ್ಲಿ ನೆಟ್ಟಿತ್ತು. ಕಣ್ಣಿನ ಕ್ಯಾಮರಾ ಎಲ್ಲವನ್ನೂ ಸೆರೆಹಿಡಿಯುತ್ತಿತ್ತು. ಆಗಾಗ ಮೊಬೈಲ್ ಕೂಡ. ಆ ಕ್ಷಣವೇ ಮನಸ್ಸು ಹಳಿ ತಪ್ಪಿ ಎದುರಿನ ಈ ಮಾಯಾ ವ್ಯಕ್ತಿಯ ಕಣ್ಣುಗಳಲ್ಲಿ ಹೀಗೆ ಸಿಕ್ಕಿ ಬಿದ್ದದ್ದು. ಈ ಆತ್ಮಸಾಂಗತ್ಯಕ್ಕೆ ಯಾವ ಹೆಸರು ಕೊಡಲಿ?

**

ಮಧ್ಯಾಹ್ನ ಊಟದ ಶಾಸ್ತ್ರವೂ ಮುಗಿಯಿತು. ಟಾಯ್ಲೆಟ್‍ಗೆ ಹೋಗಿ ಬಂದಾಗ ನನ್ನ ಸೀಟಿನಲ್ಲಿ ಸಿರಿ ಪವಡಿಸಿದ್ದಳು. ಮನಸ್ಸು ಚೀರಿದರೂ ಅವನದೇ ಬರ್ತನಲ್ಲಿ ಸಿಕ್ಕ ಜಾಗ ಅವನ ಸಾಮಿಪ್ಯಕ್ಕೆ ಕೊಂಡೊಯ್ಯಬಹುದೇನೋ ಎಂಬ ಕನಸು ಗೂಡು ಕಟ್ಟಿತು. ಆತ ಬಂದಾಗಲೆಲ್ಲ ನಾನು ನನ್ನ ಬಲಗಡೆಯ ಪಕ್ಕಕ್ಕೆ ಸೀಟು ನೀಡುತ್ತ ಎಡ ಪಕ್ಕಕ್ಕೆ ಸರಿದೆ. ಇನ್ನೇನು ಒಂದೇ ಸೀಟಿನ ಅಂತರ, ಇನ್ನೊಬ್ಬರು ಬಂದರೆ ಅವನ ಮೈಸ್ಪರ್ಶ. ಮೈಯೆಲ್ಲ ಪುಳಕಿಸಿತು. ಭಾವತೀವ್ರತೆಯಿಂದ ಕಣ್ಣು ಅರೆಮುಚ್ಚಿತು. ದೇವರೇ, ಯಾರಾದರೂ ಬರಲಿ ಎಂದು ಮೊದಲ ಸಾರಿ ಬೇಡಿಕೊಂಡೆ. ಭಕ್ತಳ ಪ್ರಾರ್ಥನೆಗೆ ದೇವರು ಕಿವುಡಾಗಲಿಲ್ಲ. ಒಬ್ಬರನ್ನು ಕಳುಹಿಸಿಯೂ ಬಿಟ್ಟ. ಬಂದವರು ನೇರ ಬಂದು ನನ್ನ ಅವನ ಮಧ್ಯೆಯೇ ಕುಳಿತುಬಿಟ್ಟರು. ಅಯ್ಯೋ! ನನ್ನ ಆಗಿನ ಹತಾಶೆಯನ್ನು ನಿಮಗೆ ತಿಳಿಸಲು ನನ್ನಲ್ಲಿ ಪದಗಳಿಲ್ಲ. ಅವರು ನಮ್ಮ ತಂಡದವರೇ ಆದ ಮೇಕಪ್ ಮ್ಯಾನ್ ನಾಗೇಶ. ಬರುವಾಗ ಹೆಂಡತಿ ದಾರಿಖರ್ಚಿಗೆಂದು ಮಾಡಿಕೊಟ್ಟ ಪೊಪ್ಪಾಯಿ ಹಲ್ವಾ ನೀಡಿದರು. ಕೇಸರಿ ಕೇಸರಿಯಾದ ಹಲ್ವಾ ಬಾಯಲ್ಲಿ ನೀರೂರಿಸಿದರೂ ಒಳಗೊಳಗಿನ ಮುನಿಸಿನಿಂದ ತಿನ್ನಬೇಕೆನಿಸಲಿಲ್ಲ. ಹಲ್ವಾಕ್ಕೆ ಇದೇ ಸಮಯವೇ ಆಗಬೇಕಿತ್ತೇ ಎಂದು ಶಪಿಸಿದೆ. ನಾಗೇಶ್ ಎಲ್ಲರಿಗೂ ಕೊಟ್ಟಂತೆ ಅವನ ಮುಂದೂ ಹಲ್ವಾ ಬಾಕ್ಸ ಹಿಡಿದಾಗ ಮನುಷ್ಯ ಸಹಜ ಸ್ವಭಾವದಿಂದ ಸಂಕೋಚಪಟ್ಟನು. ಮತ್ತೆ ನನ್ನ ನೋಡಿದ ಅಪ್ಪಣೆಗೋ ಎನ್ನುವಂತೆ. ನಾನೂ ‘ತಕೋ’ ಎನ್ನುವಂತೆ ಕಣ್ಣಲ್ಲೆ ಸಮ್ಮತಿಸಿದೆ. ತೆಗೆದುಕೊಳ್ಳಲು ಕೈ ನೀಡಿದ ಅವನ ಕೈ ಬೆರಳ ಹಸಿರು ಉಂಗುರ ನನ್ನನ್ನೇ ನೋಡಿ ನಕ್ಕಂತಾಯಿತು. ಆ ಬೆರಳುಗಳಲ್ಲಿ ನನ್ನ ಬೆರಳುಗಳ ಸೇರಿಸಬೇಕೆಂದೆನಿಸಿತು. ಆಗ ಹಲ್ವಾ ಸಕ್ಕರೆಗಿಂತ ಸಿಹಿಯೆನಿಸಿತು.

ಚಿಗುರೊಡೆವ ಪ್ರೀತಿಯ ಅರಿವಿಲ್ಲದೆ ರೈಲು ಮಾತ್ರ ಮುಂದೆ ಮುಂದೆ ತನ್ನದೆ ಗತಿಯಲ್ಲಿ ಓಡುತ್ತಿತ್ತು. ನಾನು ಮಾತ್ರ ಗಡಿಯಾರ ಓಡದಿರಲಿ ಎಂದುಕೊಂಡೆ. ಯಾವ ಸೀಮೆಯೋ ಕಾಣೆ. ಕಿಟಕಿಯಾಚೆ ಉದ್ದಕ್ಕೂ ಚಪ್ಪರಕ್ಕೆ ಹಬ್ಬಿಸಿದ ಬಳ್ಳಿಗಳು, ಮೇಲೆಲ್ಲ ತಿಳಿನೀಲ ಬಣ್ಣದ ವಾಯರಿನ ಬಲೆಯ ಹೊದಿಕೆ. ನೋಡಿಯೇ ನೋಡಿದೆ, ಉತ್ತರ ಸಿಗಲೇ ಇಲ್ಲ. ನಾನು ಅವನ ಕಡೆ ನೋಡಿದೆನೇ ನೆನಪಿಲ್ಲ. “ಗ್ರೇಪ್ ದಾಟ್ ಈಸ್ ಗ್ರೇಪ್” ಧ್ವನಿ ಮೊಳಗಿತು. ಈಗ ಪಕ್ಕನೆ ಅವನನ್ನು ನೋಡಿದ್ದು ನಿಜ. ನನ್ನ ಮನದಿಂಗಿತವನ್ನು ಮುಖಭಾವದಿಂದಲೇ ಅಳೆದನೆ? ಮನದಲ್ಲಿ ಶರಧಿಯುಕ್ಕಿತು. ಚಕಿತನಾಗಿ ನೋಡಿದೆ. ಅರೆಬರೆ ಬಿಚ್ಚಿದ ಶರ್ಟಿನೊಳಗಿಂದ ತೋರಿದ ಗುಂಗುರ ಕೂದಲನ್ನು ಹಗೂರ ಮುತ್ತಿಕ್ಕಬೇಕೆನಿಸಿತು.

ಬೆರಳು ಬೊಬೈಲ್ ಮೇಲೆ ಚಲಿಸಿತು. “ಸಚ್ ಎ ಜೆಂಟಲ್” ಎಂದು ಪರದೆಯ ಮೇಲೆ ಮೂಡಿತು. ಛೆ ಎಂದು ಕಣ್ಮುಚ್ಚಿದೆ. ಸೆಲ್ ನಂಬರ್ ಗೊತ್ತಿಲ್ಲವೆಂದು ಗೊತ್ತಿದ್ದರೂ ಮತ್ತೆ ಮತ್ತೆ ಬೆರಳು ಮನಸ್ಸನ್ನು ಚಿತ್ರಿಸುತ್ತದೆ. ಕರೆಂಟ್ ಇಲ್ಲವೆಂದು ತಿಳಿದೂ ಮತ್ತೆ ಮತ್ತೆ ಸ್ವಿಚ್ಚನ್ನು ಒತ್ತುವ ಬೆರಳುಗಳಂತೆ. ಕೇಳಿಬಿಡಲೆ? ನಿಟ್ಟುಸಿರು ಬಿಟ್ಟೆ.

ಗಳಿಗೆಗೊಮ್ಮೆ ತಾಸಿಗೊಮ್ಮೆ ಏನೇನೋ ಮಾರಾಟಕ್ಕೆ ತರುವ ಹುಡುಗರು. ಹರಳಿನ ಇಯರಿಂಗ್ಸ ಹಾಗೂ ಸರಗಳ ಪೊತ್ತೆ ಹುಡುಗನ ಕೈಯಲ್ಲಿ ನೋಡಿದಾಗ ಮನಸ್ಸು ನಿಲ್ಲಲಿಲ್ಲ. ನನಗೆ ಮಣಿಸರಗಳೆಂದರೆ ಯಾವಾಗಲೂ ಇಷ್ಟ. ಅದನ್ನು ನೋಡಿದಾಗ ಕೊರಳ ಬಂಗಾರದ ಚೈನನ್ನೂ ಎಸೆದು ಬಿಡಬೇಕೆನ್ನುವಷ್ಟು ಪ್ರೀತಿ. ಕೆಂಪು, ಕಪ್ಪು ಮಿಶ್ರಿತವಾದ ದಪ್ಪ ಮಣಿಯ ಸರಕ್ಕೆ ಅಗಲವಾದ ಮೆಟಲ್ ಪದಕವೊಂದು ಜೋಲುತ್ತಿತ್ತು. ಕೈಯಲ್ಲಿ ಹಿಡಿದು ಪದಕ ಸವರುತ್ತ ಎದುರು ನೋಡಿದೆ. ಅರಳಿದ ಕಣ್ಣುಗಳೊಂದಿಗೆ ತುಟಿಯಲ್ಲಿ ಮೂಡಿದ ಕಿರುನಗೆ ಸಮ್ಮತಿ ಸೂಚಿಸಿತು. ನೂರಾಹತ್ತು ರೂಪಾಯಿ ಕೊಟ್ಟು ಕೊಂಡುಕೊಂಡು ಕೊರಳಿಗೆ ಧರಿಸಿದೆ. ಪದಕವನ್ನೇ ದಿಟ್ಟಿಸುತ್ತಿದ್ದ ಅವನ ಕಂಗಳು ಪದಕವನ್ನೇ ದಿಟ್ಟಿಸುತ್ತಿದ್ದವೇ ಅಥವಾ ಪದಕ ಪವಡಿಸಿದ ಮೆದು ಜಾಗವನ್ನೇ? ಎಲ್ಲೆ ನೋಡಲಿ ಮಿಂಚುವ ಅವನ ಕಂಗಳ ಹೂವಂತೆ ಮುದ್ದಿಸಬೇಕೆನಿಸಿತು.

ಚಂಬಲ್ ಕಣಿವೆ ಎಂದರು, ಪೂಲನ್‍ದೇವಿ ಎಂದರು, ಇನ್ನು ಏನೊ….ಏನೇನೋ, ನನಗೆ ಮಾತ್ರ ಎದೆಯ ಕಣಿವೆಯಲ್ಲಿ ಇಳಿವ ಬೆವರ ಪರಿಮಳ ಬಿಟ್ಟು ಬೇರಾವುದೂ ತಲೆಯಲ್ಲಿ ಇಳಿಯಲೇ ಇಲ್ಲ. ಅಪರೂಪಕ್ಕೆ ಕಾಫಿ ಕುಡಿವ ನಾನು ಥರ್ಮಸ್ ಹಿಡಿದು ಬಂದ ಹುಡುಗನಲ್ಲಿ ‘ಕಾಫಿ’ ಎಂದೆ. ಅವನೂ ‘ಏಕ್ ಕಫ್’ ಎಂದ. ಕಾಫಿ ಹೀರುತ್ತಲೇ ಹಣಕ್ಕಾಗಿ ಪರ್ಸ ಹುಡುಕುತ್ತಿರುವಾಗ ಅವನು ಐವತ್ತರ ನೋಟವನ್ನು ನೀಡಿ ‘ದೋ ಕಪ್’ ಎಂದ. ಚಿಲ್ಲರೆ ಆತ ತೆಗೆದು ಕೊಂಡರೆ ನಾನು ಬ್ಯಾಗಿನ ಜಿಪ್ ಎಳೆದೆ. ಅವನ ತುಟಿ ಸ್ಪರ್ಶಿಸಿದ ಎಂಜಲು ಲೋಟವನ್ನು ಕಸಿದುಕೊಂಡು ಚಪ್ಪರಿಸಿ ಬಿಡಲೆ ಎನಿಸಿದರೂ ಇರುವುದು ನಾವಿಬ್ಬರೇ ಆಗಿರಲಿಲ್ಲ.

ಭಾನು ಪಡುವಣ ಬಾನಿನಲ್ಲಿ ಇಳಿಯುತ್ತ ಸಾಗಿದ. ಸುತ್ತೆಲ್ಲ ಕತ್ತಲಾವರಿಸಿದರೂ ಎದೆಯೊಳಗೆ ಹತ್ತಿಕೊಂಡ ಅನಾಮಿಕ ಹಣತೆಯೊಂದು ನಮ್ಮಿಬ್ಬರನ್ನು ಬೆಳಗುತ್ತಿತ್ತು. ರಾತ್ರಿಯ ಊಟಕ್ಕೆ ಚಪಾತಿ ಆಲೂ ಪಲ್ಯ ತೆಗೆದು ಕೊಂಡೆ, ಅವನೂ ಅದನ್ನೇ, ಕೈ ತೊಳೆದು ಬರಲು ಎದ್ದರೆ ಎದುರು ಕಿಟಕಿಯಿಂದ ಬೀಸುವ ಗಾಳಿ ನನ್ನ ವಲ್ಲಿಯನ್ನು ಹಿಂದಕ್ಕೆ ಹಾರಿಸಿತು. ಮೆಲ್ಲನೆ ಜಗ್ಗಿದಂತೆನಿಸಿ ತಟ್ಟನೆ ತಿರುಗಿದರೆ ಅವನ ಮುಖದ ತುಂಬ ಮೆತ್ತಿದ ಸೆರಗನ್ನು ಹಿಡಿದು ಪರಿಮಳದ ಆಘ್ರಾಣಿಸುವ ಭಾವ ಕಣ್ಮುಚ್ಚಿದ ಅವನ ಮುಖದಲ್ಲಿ. ಆತ ನನ್ನನ್ನು ಅಪ್ಪಿ ಹಿಡಿದಂತೆನೆಸಿತು. ಹೊಟ್ಟೆಗಿಳಿಯದ ಚಪಾತಿ ಮುದ್ದೆಯಾಗಿ ಕೈಯೊಳಗಿತ್ತು.

ಇಂದು ಅಪ್ಪರ್ ಬರ್ತ್‍ನ್ನು ಸಲೀಸಾಗಿ ಏರಿದೆ, ಆತನೂ. ನಾನು ಕೂದಲಿನ ಕ್ಲಿಪ್ ತೆಗೆದು ಕೂದಲೊಳಗೊಮ್ಮೆ ಕೈಯಾಡಿಸಿ ಹೊದಿಕೆ ಸರಿಪಡಿಸಿಕೊಳ್ಳುತ್ತಿರುವಾಗ ಆತ ಬೆಳ್ಳಿಯಂಚಿರುವ ಕಪ್ಪನೆಯ ಶಾಲೊಂದನ್ನು ಸೊಂಟದವರೆಗೆ ಎಳೆದು ಮಲಗಿದ. ಫ್ಯಾನಿನ ಗಾಳಿಗೆ ಅಂಗಾತ ಮಲಗಿದ ಆತನ ಮಿಂಚುವ ಕೂದಲು ಹಾರುತ್ತ ಈವರೆಗೂ ಮುಚ್ಚಿದ್ದ ಹಣೆಯ ಮೇಲ್ಗಡೆ ಬಲ ಮೂಲೆಯಲ್ಲಿರುವ ಕಪ್ಪು ಮಚ್ಚೆಯೊಂದನ್ನು ತೋರಿಸಿತು. ಅವನ ಕಪ್ಪನೆಯ ಕೂದಲುಗಳಲ್ಲಿ ಬೆರಳಾಡಿಸುತ್ತ ಮಚ್ಚೆಯನ್ನು ಮೃದು ಬೆರಳುಗಳಿಂದ ಸವರಬೇಕೆನಿಸಿತು. ಆತ ಕಣ್ಣು ಮುಚ್ಚಿದ್ದರೂ ಒಳಗೊಳಗೆ ಅತ್ತಿಂದಿತ್ತ ಚಲಿಸುವ ಕಣ್ಣುಗಳು ಆತ ನಿದ್ದೆಗಾಗಿ ಕಷ್ಟಪಡುತ್ತಿರುವುದನ್ನು ಸ್ಪಷ್ಟಪಡಿಸಿತು. ಮಿಟುಗುಡುವ ರೆಪ್ಪೆಯನ್ನು ಜೋಡುತುಟಿಗಳಿಂದ ಸವರಿ ಜೋಗುಳ ಹಾಡ ಬೇಕೆನಿಸಿತು. ಹರವಾದ ಎದೆಯ ಮೇಲೆ ಮೆಲ್ಲನೆ ಮುಖ ಹುದುಗಿಸುವಾಸೆ. ಅವನಿಗೂ ನನ್ನ ಏರಿಳಿವ ಎದೆಕಣಿವೆಯಲ್ಲಿ ಮುಖ ಹುದುಗಿಸಬೇಕೆನ್ನಿಸುತ್ತಿರಬಹುದೇ? ಅದರುವ ನನ್ನ ಅಧರಗಳಿಗೆ ತುಟಿಮುದ್ರೆ ಒತ್ತಬೇಕೆನಿಸುತ್ತಿರಬಹುದೆ? ಅರ್ಧ ನಿಮೀಲಿತವಾದ ನನ್ನ ಕಣ್ಣುಗಳನ್ನು ಮೆರಗು ಮೀಸೆಯಿಂದ ಸವರ ಬೇಕೆನಿಸುತ್ತಿರಬಹುದೆ? ಎಂದುಕೊಳ್ಳುತ್ತಿರುವಾಗಲೇ ‘ಸತ್ಯ’ ಎನ್ನುವಂತೆ ನನ್ನೆಡೆಗೆ ಮಗ್ಗುಲಾದ. ಅದೇ ತದೇಕ ಚಿತ್ತ. ಅವನ ನಿಡಿದಾದ ತೋಳ್ಗಳ ಬೆಚ್ಚನೆಯ ಬಿಸಿಯ ಕನಸಲ್ಲಿ ಬೀಸುವ ಚಳಿಗಾಳಿಯೂ ಮೈಕೊರೆಯಲಿಲ್ಲ. ಈ ಶೀಲ, ಸನಾತನ ಸಂಸ್ಕøತಿಯ ಬೇಲಿಯ ಬಂಧನ ನಮ್ಮಿಬ್ಬರನ್ನೂ ತಡೆಯದಿದ್ದರೆ ಖಂಡಿತವಾಗಿಯೂ ಆ ಪುರುಷನ ಗಾಢಾಲಿಂಗನದಲ್ಲಿ ಈ ಪ್ರಕೃತಿ ಮಿಂದೇಳುತ್ತಿದ್ದಳು. ಕಣ್ಣು ಮುಚ್ಚುವ ಒಡೆಯುವ ಕಣ್ಣು ಮುಚ್ಚಾಲೆಯಾಟದಲ್ಲಿ ಅರೆನಿದ್ದೆ ಕನಸುಗಳ ನಡುವೆ ಯಾವಾಗ ನಿದ್ದೆಗೆ ಜಾರಿದೆನೊ ತಿಳಿಯೆ.

ಕತ್ತಲಿನ್ನೂ ಹರಿಯದ ಬೆಳಕು ಹೊರಬರಲು ಮಿಸುಕಾಡುತ್ತಿರುವ ಸಮಯ. ಯಾರೋ ಹೊಡೆದೆಬ್ಬಿಸಿದಂತೆ ಥಟ್ಟನೆ ಎಚ್ಚರವಾಯಿತು. ಕಣ್ಣು ಬಿಟ್ಟವಳೆ ನೇರ ನೋಡಿದ್ದು ಎದುರಿರುವ ಬರ್ತ್. ಅವನ ನೋಟದಿಂದ ಸ್ವಲ್ಪವೂ ದೂರಸರಿಯಲಾರೆ ಎನ್ನುವ ಹಾಗೆ ಮಲುಗಿದ ಮಗ್ಗುಲಲ್ಲೆ ಬೆಳಗು ಕಂಡಿದ್ದೆ. ಎದೆ ಧಸಕ್ಕೆಂದಿತು. ನಾನು ಕಂಡುದೆಲ್ಲ ಕನಸೋ ಎನ್ನುವಂತೆ ಬರ್ತ್ ಖಾಲಿಯಾಗಿತ್ತು. ಎಲ್ಲೋ ಕೆಳಗೆ ಹೋಗಿರಬಹುದೇನೋ ಎಂದು ಕಾದೆ. ಬೆಳಕು ಹರಿದರೂ ಆತನ ಸುಳಿವಿಲ್ಲ. ತಲೆಯಡಿಯಲ್ಲಿ ಹಾಕಿಕೊಂಡ ನ್ಯೂಸ್ ಪೇಪರ್ ನಿನ್ನೆಯ ಪೇಪರ್‍ಗೆ ಇಂದೇನು ಬೆಲೆ ಎನ್ನುವಂತೆ ಮುದುಡಿ ಮುದ್ದೆಯಾಗಿ ಬಿದ್ದಿತ್ತು. ಚಿತ್ರಾಂಗದಾ ಗಾಢ ನಿದ್ದೆಯಲ್ಲಿರುವಾಗ ಮೆಲ್ಲನೆ ತೋಳಿಂದ ಜಾರಿ ಕಾಣದಾ ದಾರಿ ತುಳಿದು ಬಿಟ್ಟಿದ್ದ ಪಾರ್ಥ. ಚಿತ್ರಾ ಕನಲಿದಳು ಕನವರಿಸಿದಳು ಕೂಗಿದಳು ಅಲೆದಾಡಿದಳು. ಪಾರ್ಥ ಎಲ್ಲಿ? ಎಲ್ಲಿ ನನ್ನ ಪಾರ್ಥ?

ಮಧ್ಯರಾತ್ರಿಯ ಯಾವುದೋ ಒಂದು ಗಳಿಗೆಯಲ್ಲಿ ಅವನು ಎದ್ದು ನಡೆದಿದ್ದ. ಹೋಗುವಾಗ ನನ್ನ ಗುಲಾಬಿ ತುಟಿ ಅವನ ಹಿಡಿದು ನಿಲ್ಲಿಸಲಿಲ್ಲವೆ? ಬಣ್ಣ ಹಚ್ಚಿದ ಸುಳಿ ಬೆರಳು ಎದೆಯ ಮೀಂಟಲಿಲ್ಲವೆ? ತೂರುವ ಮುಂಗುರುಳು ಕಾಡಲಿಲ್ಲವೆ? ಬೆಳ್ಳಿ ಕಾಲ್ಗೆಜ್ಜೆ ಕಾಲನ್ನು ಕಟ್ಟಲಿಲ್ಲವೆ? ಸನಿಹದ ಭದ್ರತೆಯಲ್ಲಿ ಭಯದ ಕುರುಹಿಲ್ಲದೆ ಮೈಮರೆತು ಮಲಗಿದ ಸ್ನಿಗ್ಧ ಮುಖ ದಾರಿಗಡ್ಡವಾಗಲಿಲ್ಲವೆ? ಮುಚ್ಚಿದ ನೀಳ ಕಣ್ಣುರೆಪ್ಪೆಯ ಒಡಲಲ್ಲಿ ಬದುಕಾಗಿ ಬಚ್ಚಿಟ್ಟ ‘ಆತ’ ಕಾಣಲಿಲ್ಲವೆ? ಅಥವಾ ಚಳಿಯಲ್ಲಿ ಮುದುಡಿ ಮಲಗಿದ ನನ್ನ ಹೊದಿಕೆ ಮೆಲ್ಲನೆ ಸರಿಸಿ ಬರಿದಾದ ಹಣೆಗೆ ಹೂಮುತ್ತಿನ ತಿಲಕವಿಟ್ಟು ಎದ್ದು ನಡೆದನೆ? ಇಲ್ಲ, ಸಾಧ್ಯವಿಲ್ಲ, ನನ್ನ ಅವನ ನಡುವೆ ಮಾರು ಅಂತರ. ಇಲ್ಲದಲ್ಲಿ ಕಣ್ಣ ನೋಟಕ್ಕೆ ಕುಣಿವ ನಾವು ಮನಸ್ಸಿನ ತಾಳಕ್ಕೆ ಹೆಜ್ಜೆ ಹಾಕಿ ಉರುಳುರುಳಿ ಎಂದೂ ಬಿಡಿಸಲಾರದ ತೋಳ ಬಂಧನದಿ ಸೆರೆಯಾಗಿ ಬಿಡುತ್ತಿದ್ದೆವೇನೊ. ಚಿನ್ನದ ಕೋಳದಲ್ಲಿ ಬಿಗಿದರೂ ಮುತ್ತಿನ ಬಲೆಯಲ್ಲಿ ಬಂಧಿಸಿದರೂ ಕೊನೆಗೂ ಗೆಲ್ಲುವುದು ಪ್ರಕೃತಿಯೆ ಅಲ್ಲವೆ?

ಅವನ ಅನುಪಸ್ಥಿತಿಯಲ್ಲಿ ಮನ ಚೀರಿತು. ನನ್ನನ್ನು ದೂಷಿಸಿತು. ಚಿಕ್ಕದೊಂದು ಕಾಗದದ ಚೂರಿನಲ್ಲಿ ‘ಸೆಲ್ ನಂಬರ್ ಪ್ಲೀಸ್’ ಎಂದು ರವಾನಿಸಿದ್ದರೆ ಈ ಕಷ್ಟ ಏಕೆ ಬರುತ್ತಿತ್ತು? ಅಥವಾ ತನ್ನ ಕಣ್ಣಿಂದಲೇ ನನ್ನ ಮನದಾಳ ಬಗೆವ ಅವನಿಗೆ ಆತನ ದೂರವನ್ನು ನಾ ಸಹಿಸಲಾರೆನೆಂಬ ಸತ್ಯ ಹೃದಯಕ್ಕೆ ವೇದ್ಯವಾಗದೆ ಇರದು. ಎಲ್ಲಾದರೂ ಸಣ್ಣದೊಂದು ಸ್ಲಿಪ್ ಇರಬಹುದೇ? ಸುತ್ತೆಲ್ಲ ಹುಡುಕಿದೆ, ಬ್ಯಾಗನ್ನು ಇಣುಕಿದೆ ಕೊನೆಗೆ ತಲೆದಿಂಬನ್ನು ಎತ್ತಿದರೆ ಒಂದು ಅಚ್ಚ ಬಿಳಿ ಕಾಗದದ ತುಣುಕು ಜೀವ ಉಕ್ಕುಕ್ಕಿ ಬಂದಿತು. “ಯುವರ್ಸ್ ಅರವಿಂದ…” ಎಷ್ಟೇ ಕಷ್ಟ ಪಟ್ಟರೂ ಓದಲಾಗಲಿಲ್ಲ. ದಾಹವಾದಾಗ ಕುಡಿಯಲೆಂದು ತಲೆಯ ಹತ್ತಿರವಿಟ್ಟುಕೊಂಡ ನೀರಬಾಟಲ್ ಅಡ್ಡಲಾಗಿ ಚೆಲ್ಲಿದ ನೀರಿನಲ್ಲಿ ಮುಂದಿನ ಸಂಖ್ಯೆಗಳೆಲ್ಲಿ ಅಳಿಸಿ ಹೋಗಿದ್ದವು.

ಮುಂದೆ ನಡೆದದ್ದೆಲ್ಲ ನೆಪ ಮಾತ್ರವಷ್ಟೆ. ಅವನ ಕಡೆಗಣ್ಣ ನೋಟದ ವಿನಃ ದೆಹಲಿಯಲ್ಲಿ ಇನ್ನೇನೂ ಕಾಣಲಿಲ್ಲ. ಏಕಾಂತ ಸುಡುವ ಏಕಾಂತವಾಯಿತು. ಅವನಿಲ್ಲದ ಬದುಕು ಶೂನ್ಯ ಸೃಷ್ಠಿಸಿತು. ಒಂದಿಷ್ಟು ಕವನಕ್ಕೆ ಕಾರಣವಾಯಿತು. ಈಗಲೂ ಚಲಿಸುವ ರೈಲಿನ ಸೈರನ್ ಕೂಗಿದಾಗಲೆಲ್ಲ ಮನಸ್ಸು ಓಡಿ ಬಿಡುತ್ತದೆ. ಕಿಟಕಿಯನ್ನೆ ಹುಡುಕಾಡುತ್ತದೆ. ಚಕ್ಕನೆ ಕಣ್ಣು ಕೂಡಬಹುದೆ? ಇನ್ನೂ ಎಷ್ಟು ದಿನ ಕಾಡುವೆ ಹುಡುಗಾ? ನಿನ್ನ ನೋಟವೊಂದೆ ಸಾಕು, ಬದುಕಿನ ಅನುದಿನದ ಅಂತರಗಂಗೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top