ನೋರಾ

  • – ವಿಜಯಲಕ್ಷ್ಮೀ ದಾನರಡ್ಡಿ

 

“ನಿನ್ನಲ್ಲಿ ಶಕ್ತಿ ಇಲ್ಲ ಎಂದು ಹೇಳಲಿಲ್ಲ. ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದೆ. ಒಳ್ಳೆಯ ಬರಹಕ್ಕೆ ಹೆಚ್ಚು ಶ್ರಮ ಹಾಕಬೇಕು” ಇವೇ ಸಾಲುಗಳು ಹಗಲು-ರಾತ್ರಿಯೆನ್ನದೆ ನನ್ನನ್ನು ಕಾಡಿ ನಿದ್ರಾಹೀನಳನ್ನಾಗಿ ಮಾಡಿದ್ದವು.

ನಾನು ಮಾಡಿದ ಬರಹದ ಬಗ್ಗೆ ನನಗೇ ತೃಪ್ತಿ ಇಲ್ಲವೆಂದಾಗ ನನ್ನ ಗುರುಗಳಿಂದ ಅದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ!

ಯೋಚಿಸುತ್ತಲೇ ಮನಸ್ಸಿಲ್ಲದ ಮನಸ್ಸಿನಿಂದ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಊಟಕ್ಕೆ ಕುಳಿತೆನು. ನನ್ನ ಗುರುಗಳು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟು ನೀಡಿದ ಒಂದೇ ಒಂದು ಕೆಲಸವನ್ನೂ ನಾನು ಸರಿಯಾಗಿ ಮಾಡಲಿಲ್ಲವಲ್ಲ. ಅಂಥ ಗುರುಗಳ ಕೈಯಲ್ಲಿ ಓದಿ ಒಂದಷ್ಟು ಒಳ್ಳೆಯ ಬರವಣಿಗೆ ನನ್ನ ಕೈಯಿಂದ ಅರಳುತ್ತಿಲ್ಲವಲ್ಲ. ವಿದ್ಯೆ-ಬುದ್ಧಿ ಕಲಿಸಿ ಜೀವನ ರೂಪಿಸಿದ ಗುರುಗಳಿಗೆ ಇದೇ ಏನು ನಾನು ಕೊಡುವ ಗುರುದಕ್ಷಿಣೆ. ಇದೇ ಏನು ನಾನು ಸಲ್ಲಿಸುವ ಗೌರವ. ನನ್ನಿಂದ ಏನೂ ಸಾಧ್ಯವಿಲ್ಲ. ನನ್ನಲ್ಲಿ ಆ ಶಕ್ತಿ ಇಲ್ಲ. ಇದ್ದದ್ದೂ ಕುಗ್ಗುತ್ತಿದೆ. ಎಲ್ಲದರಲ್ಲೂ ಜಿಗುಪ್ಸೆ. ಇಂಥ ಅನೇಕ ವಿಚಾರಗಳು ಸಾಲುಗಟ್ಟಿ ಬಂದು ಕಣ್ಣಲ್ಲಿ ನೀರು ತುಂಬಿಸಿ ಎಷ್ಟೇ ತಡೆದರೂ ಕಣ್ಣೀರೆಲ್ಲ ಕಪಾಳ ಒದ್ದೆ ಮಾಡಿ ಜಾರಿ ತಟ್ಟೆಯಲ್ಲಿ ಬೀಳುತ್ತಿದ್ದವು. ಗಂಟಲು ಬಿಗಿದು ಒತ್ತರಿಸಿ ಬರುತ್ತಿದ್ದ ದುಃಖವನ್ನು ಬಹಳ ಪ್ರಯಾಸಪಟ್ಟುಕೊಂಡು ತಡೆದೆನು. ಆದರೆ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳನ್ನು ತಡೆಯಲಾಗಲಿಲ್ಲ.

ಅನ್ನ, ಇಷ್ಟಪಟ್ಟು ಮಾಡಿದ್ದ ಸೊಪ್ಪಿನ ಸಾರು ಗಂಟಲಲ್ಲಿ ಇಳಿಯಲಿಲ್ಲ. ತಟ್ಟೆಯಲ್ಲಿ ಅನ್ನವನ್ನು ಹಾಗೆಯೇ ಬಿಟ್ಟರೆ ಅಮ್ಮ, ಗಂಡ, ಮಕ್ಕಳು ಬೀಸುವ ಪ್ರಶ್ನೆಗಳ ಬಾಣದ ಸುರಿಮಳೆ ತಡೆದುಕೊಳ್ಳುವ ಚೈತನ್ಯವೂ ಇರಲಿಲ್ಲ. ಯಾವ ಸಂತಸವೂ ಇಲ್ಲದೆ ನಿರುತ್ಸಾಹಿಯಾಗಿಯೇ ಊಟ ಮುಗಿಸಿ ಕೈ ತೊಳೆದುಕೊಂಡು ಬಂದು ಟಿ.ವಿ. ಮುಂದೆ ಕುಳಿತೆನು. ದೇಶದಲ್ಲಿ ಲಾಕ್‍ಡೌನ್ ಆರಂಭವಾದಾಗಿನಿಂದ ರಾಮಾಯಣದ ವೀಕ್ಷಣೆ ದೈನಂದಿನ ಕಾರ್ಯಗಳಲ್ಲಿ ಒಂದಾಗಿತ್ತು. ಉತ್ತರ ರಾಮಾಯಣದಲ್ಲಿನ ಸೀತೆ ನನ್ನನ್ನು ಯಾವತ್ತೂ ಕಾಡುವ ಪಾತ್ರ. ಚಿಕ್ಕವಳಿದ್ದಾಗ ಸೀತೆಯನ್ನು ನೋಡಿದ್ದಕ್ಕೂ, ಅದೇ ಸೀತೆಯನ್ನು ಭೈರಪ್ಪನವರ “ಉತ್ತರಕಾಂಡ” ಓದಿದನಂತರ ನೋಡುತ್ತಿರುವುದಕ್ಕೂ ಬಹಳ ವ್ಯತ್ಯಾಸವೆನಿಸಿತು.  ದೈವೀ ಸ್ವರೂಪಳಾಗಿ ನಿಲ್ಲುವ ಸೀತೆಯನ್ನು ಭೈರಪ್ಪನವರು ಸಾಮಾನ್ಯ ಹೆಣ್ಣು ಮಗಳಂತೆ ಚಿತ್ರಿಸಿ, ಅವಳ ಮನಸ್ಸಿನಲ್ಲೂ ಏಳುವ ಹಲವಾರು ಪ್ರಶ್ನೆಗಳನ್ನು ಬಹಿರಂಗವಾಗಿ ಕೇಳುವಂತೆ ಬಿಂಬಿಸಿದ್ದು ಬಹಳ ಪ್ರಭಾವಿ ಎನ್ನಿಸಿತ್ತು. ತುಂಬಿದ ಸಭೆಯಲ್ಲಿ ನಿಂತು ಸೀತೆ ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕು. ಯಾರಿಂದಲೂ ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ ಮಾತ್ರ ಅವಳನ್ನು ಮತ್ತೆ ಅರಮನೆಗೆ ಸೇರಿಸಿಕೊಳ್ಳುತ್ತೇವೆಂದು ರಾಮನ ಹೇಳಿಕೆ. ತನ್ನೆಲ್ಲ ಸಹಜ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಮಹಾರಾಣಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡಬೇಕಿದ್ದ ಸೀತೆ ಪ್ರತಿ ಹೆಜ್ಜೆಯಲ್ಲಿ ಸಂಕಷ್ಟಗಳನ್ನು ಅನುಭವಿಸಿಕೊಂಡು ಬಂದಿದ್ದಳು. ಎಲ್ಲದಕ್ಕೂ ಒಂದು ಮಿತಿಯಿದೆ. ಮಿತಿ ಮೀರಿದರೆ ಅದೆಂಥ ಕಟ್ಟೆಯಿದ್ದರೂ ಒಡೆಯುತ್ತದೆ. ರಾಮನ ಕೀರ್ತಿಗೆ, ಗೌರವಕ್ಕೆ ತನ್ನಿಂದೇನು ಧಕ್ಕೆ ಆಗಬಾರದೆಂದು ಬಹಿರಂಗವಾಗಿ ಅವನೊಡ್ಡುವ ಪರೀಕ್ಷೆಗಳನ್ನು ಮರು-ಮಾತನಾಡದೆ ಸ್ವೀಕರಿಸಿಕೊಂಡು ಬಂದವಳಿಗೆ ಜೀವನದ ಬಗ್ಗೆ ಆಸೆಗಳೇನು ಉಳಿದಿರಲಿಲ್ಲ. ತನ್ನ ಮೇಲೆಸೆಯುವ ಪರೀಕ್ಷೆಗಳು ನಿಲ್ಲಬೇಕಾದರೆ ಅದಕ್ಕಿರುವ ಒಂದೇ ಪರಿಹಾರ ತನ್ನ ಸಾವು. ತಾನು ಎಲ್ಲಿಂದ ಬಂದೆನೋ ಮತ್ತಲ್ಲಿಗೇ ಹೋಗಬೇಕು. ಅದೇ ಎಲ್ಲದಕ್ಕೂ ಅಂತ್ಯ ಎಂಬ ನಿರ್ಧಾರದೊಂದಿಗೆ ಸಭೆಗೆ ಹಾಜರಾಗಿ ಭೂಮಾತೆಗೆ ತನ್ನನ್ನು ಕರೆದುಕೊಳ್ಳುವಂತೆ ಕಣ್ಣಾಲಿಗಳನ್ನು ತುಂಬಿಕೊಂಡು ಗರ್ಭದೊಳು ಹುದುಗಿಟ್ಟುಕೊಂಡಿದ್ದ ದುಃಖ, ನೋವನ್ನೆಲ್ಲ ಹೊರಚೆಲ್ಲಿ ನಿರಾಭಾವದಿಂದ ರಾಮನ ಕಡೆಗೆ ನೋಡಿಕೊಂಡೆ ದೀನಳಾಗಿ ಭೂಮಾತೆಗೆ ಬೇಡಿಕೊಳ್ಳುವಾಗ ಮೊದಲೇ ದುಃಖ ಬಿಗಿಹಿಡಿದುಕೊಂಡು ಕುಳಿತಿದ್ದ ನನಗೆ ಉಮ್ಮಳಿಸಿ ಬರುತ್ತಿದ್ದ ದು:ಖವನ್ನು ತಡೆಯಲಾಗಲಿಲ್ಲ. ಎಲ್ಲರೆದುರೂ ಕಣ್ಣೀರು ಹಾಕಿದರೆ ಹಾಸ್ಯಕ್ಕೆ ಗುರಿಯಾದೇನು ಎಂಬ ಪ್ರಜ್ಞೆ ನನ್ನನ್ನು ಅಲ್ಲಿಂದೆಬ್ಬಿಸಿ ಕೋಣೆಯೊಳಗೆ ನೂಕಿತು.

ರೂಮ್ ಒಳಗೆ ಹೋಗಿ ಬೆಡ್ ಮೇಲೆ ದೇಹ ಚೆಲ್ಲಿ ದಿಂಬಿನೊಳಗೆ ಮುಖ ಹೊಕ್ಕಸಿ ಬಿಕ್ಕಿ-ಬಿಕ್ಕಿ ಅತ್ತುಬಿಟ್ಟೆ. ಒಡಲೊಳಗಿನ ಬಾಧೆ ಕಣ್ಣೀರಾಗಿ ಹರಿದಾಗ ಮನಸ್ಸೆಷ್ಟೋ ಹಗುರವಾಯಿತು. ಭಾರವಾದ ಮನಸ್ಸು ಹಗುರಾಗಿದ್ದರಿಂದಲೊ ಏನೋ ದಣಿದ ದೇಹ ನಿದ್ದೆಗೆ ಜಾರಿತು. ಬರೋಬ್ಬರಿ ಒಂದೆರಡು ಗಂಟೆ ವಾಸ್ತವಿಕ ಬದುಕಿನ ಅರಿವಿಲ್ಲದಂತೆ ಸ್ವಪ್ನಗಳಿಗೂ ಜಾಗವಿಲ್ಲದಂತೆ ದೇಹ-ಮನಸ್ಸು ಎರಡೂ ನಿರಾಳವಾಗಿ ನಿದ್ದೆಗೈದವು. ರಾತ್ರಿ ಹನ್ನೆರಡು ಗಂಟೆ. ಸುಖ ನಿದ್ರೆಯಿಂದ ಎಚ್ಚರವಾದಾಗ ದೇಹ-ಮನಸ್ಸು ಎರಡೂ ಹಗುರವಾಗಿದ್ದವು. ನವ ಚೈತನ್ಯ ಬಂದಂತೆನಿಸಿತು.

‘ಪದಗಳೊಂದಿಗಿನ ಗುದ್ದಾಟ ಸಾಕಾಗಿದೆ. ಬರಹನನಗೆ ಒಲಿದಿಲ್ಲ. ಆ ಶಕ್ತಿನನ್ನಲಿಲ್ಲ. ನೀವು ವಹಿಸಿದ ಒಂದುಸಣ್ಣ ಕೆಲಸವನ್ನೂ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಇದಕ್ಕಾಗಿ ಕೇವಲ ನಾನು ನನ್ನನ್ನು ಶಪಿಒಸಿಕೊಳ್ಳಬಲ್ಲೆನೆ ಹೊರತು ಒಲಿಯದ ಬರಹವನ್ನು ಹೇಗೆ ಮಾಡಲಿ! ಕ್ಷಮೆ ಇರಲಿ ಗುರುಗಳೆ’ ಎಂದು ಮೆಸೇಜ್ ಟೈಪ್‍ಮಾಡಿ ಗುರುಗಳಿಗೆ ಕಳಿಸಿದೆನು. ಅಪ್ಪಿ ತಪ್ಪಿಯೂ ಬರೆಯುವ ಸಾಹಸ ಮಾಡಬಾರದು. ಸಾಹಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಬಾರದು ಮತ್ತು ಅದರಿಂದ ಒಳಒಳಗೇ ಮರಗುವುದು ಬೇಡವೆಂದೆ ನಿರ್ಧರಿಸಿದೆನು.

ಒಮ್ಮೆ ಅಂಟಿಕೊಂಡ ಚಟ ಬಿಟ್ಟೇನೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ಬಿಟ್ಟಷ್ಟು ಅದರ ಸೆಳೆತ ಹೆಚ್ಚಾಗುತ್ತದೆ ಎನ್ನುವ ಮಾತು ಸುಳ್ಳಲ್ಲ. ಸಣ್ಣದೊಂದು ಗಾಢ ನಿದ್ದೆಯ ನಂತರ ರಾತ್ರಿ ಹನ್ನೆರಡರ ಹೊತ್ತಿಗೆ ಎಚ್ಚರವಾಯಿತು. ತಕ್ಷಣ ಎದ್ದು ಮನಸ್ಸಿದ್ದಾಗ ಮನಸ್ಸಿಗೆ ಬಂದದ್ದನ್ನೆಲ್ಲ ಗೀಚಿ ಇಡುವ ಡೈರಿಯನ್ನು ಕಬರ್ಡ್‍ನಲ್ಲಿ ಇಟ್ಟು ಲಾಕ್ ಮಾಡಿದ್ದೆನು. ಅದನ್ನು ಮತ್ತೆ ತೆಗೆದುಕೊಂಡು ದಿವಾನ್ ಮೇಲೆ ಕುಳಿತು ಡೈರಿಯ ಒಂದೊಂದೇ ಪುಟವನ್ನು ತಿರುವಿ ಹಾಕಿದೆನು. ಅದರಲ್ಲಿ ನಾನು ಜೋಡಿಸಿಟ್ಟ ಅಕ್ಷರಗಳ ಮೇಲೆ ಕಣ್ಣಾಡಿಸುತ್ತಾ ಹೋದೆನು. ಮನಸ್ಸು ಮತ್ತಷ್ಟು ಚೈತನ್ಯಗೊಂಡಿತು. ತಲೆಯಲ್ಲೇನೋ ಹೊಸ ಕಥೆಯ ಎಳೆಯೊಂದು ಸುಳಿದಾಡಿದಂತಾಯಿತು. ಆ ಕ್ಷಣವೇ ತಡ ಮಾಡದೆ ಪೆನ್ನು ಹಿಡಿದು ಗೀಚತೊಡಗಿದೆನು:

“ಗಣಪು ಮನೆ ಬಿಟ್ಟುಹೋಗಿ ಒಂದು ವಾರ ಆತು. ಅವನ ಸುದ್ದೀನೆ ಇಲ್ಲೆ. ಈ ಕಾಡಲ್ಲಿನ ಹಣ್ಣು-ಹಂಪಲನ್ನಷ್ಟೆ ತಿಂದು ನಾಲಿಗೆ ಸತ್ತ ಹೋಗದೆ. ಈ ನಾಲ್ಕು ಜನ ಸಣ್ಣಮಕ್ಕಳನ್ನ ಕಟ್ಟಿಗೊಂಡು ಆ ದೊಡ್ಡ ಪಟ್ಟಣಕ್ಕೆ ಮೈಲು ದೂರ ನಡಕೊಂಡಿ ಈ ಪಾಟಿ ಕಾಡು ದಾಟಕೊಂಡು ಹೋಗಿ ಎಲ್ಲೆಲ್ಲಿ ಅಂತ ಹುಡುಕಲಿ” ಸಕ್ಕು ಗೊಣಗುತ್ತ ತಮ್ಮ ಹಟ್ಟಿಯ ಮುಂದಿನ ಕಟ್ಟೆಯ ಮೇಲೆ ಕುಳಿತು ಹನ್ನೊಂದು ತಿಂಗಳ ಕಾಪುಗೆ ಹಾಲುಣಿಸುತ್ತಿದ್ದಳು. ಹದಿನಾಲ್ಕು-ಹದಿನೈದು ವರ್ಷದ ನೋರಾ ತಾಯಿಯ ಪೇಚಾಟವನ್ನು ನೋಡಲಾಗದೆ  “ಆಯಿ ನಾ ಹೋಗಿ ಬರಲೇನು? ಹೆಂಗು ಎರಡು ಬಾಟಲಿ ಜೇನು ಅದೆ. ಅದನ್ನ ಮಾರಿಕೊಂಡು ಅಪ್ಪನ ಬಗ್ಗೆ ತಿಳಕೊಂಡು ಬರ್ತೆ.” ಹೇಳಿ ತಾಯಿಯ ಅಪ್ಪಣೆಗಾಗಿ ಕಾದಳು. ವಿಧಿಯಿಲ್ಲದೆ ಸಕ್ಕು ಮಗಳಿಗೆ “ನಿಂಗೆ ಒಬ್ಬಳಿಗೆ ಕಳಿಸಲು ಭಯಾನೆ. ಈ ಪಾಟಿ ಮಳೆ ಅದೆ. ಒಬ್ಬಳೆ ಕಾಡ ದಾಟಿ ಹೋಗೋದ ಕಷ್ಟಾನೆ” ಹೇಳಿದಳು. ನೋರಾ ಹಟ ಮಾಡಿ ತಾಯಿಯನ್ನು ಒಪ್ಪಿಸಿ ಹೊರಡಲು ಸಜ್ಜಾದಳು.

ಹೆಚ್ಚು ಕಡಿಮೆ ಹತ್ತು ಕಿಲೋ ಮೀಟರ್ ಕಾಡಿನಲ್ಲಿ ನಡೆದು ಮುಖ್ಯ ರಸ್ತೆ ಸೇರಬೇಕು. ಧೋ…. ಎಂದು ಸುರಿಯೋ ಮಳೆ, ತಲೆಗೆ ಗೋಣಿ ಚೀಲ ಹೊದ್ದು ಎರಡು ಲೀಟರ್‍ನ ಬಿಸ್‍ಲೆರಿ ನೀರಿನ ಬಾಟಲಿಯಲ್ಲಿ ತುಂಬಿದ್ದ ಜೇನನ್ನು ಕೈಚೀಲದಲ್ಲಿ ಹಾಕಿ ಬಗಲಿಗೆ ಸಿಕ್ಕಿಸಿಕೊಂಡು ಬರಿಗಾಲಿನಲ್ಲಿ ನಡೆಯತೊಡಗಿದಳು. ಎಲ್ಲೆಡೆಯೂ ಹಸಿರೋ-ಹಸಿರು. ಹಲಸಿನ ಮರದ ತುಂಬ ಕಾಯಿ ಜೋತು ಬಿದ್ದಿದ್ದವು, ಮಾವಿನ ಮರದ ಅಲ್ಲೊಂದು ಇಲ್ಲೊಂದು ಕಾಯಿಗಳು, ನೇರಳೆ ಹಣ್ಣು ಮಳೆ-ಗಾಳಿಗೆ ಹಸಿರು ಹುಲ್ಲಿನ ಮೇಲೆಲ್ಲ ಉದುರಿ ರಸವೆಲ್ಲ ಹೊರಗೆ ಚೆಲ್ಲಿತ್ತು. ಕಾಡು, ಅಲ್ಲಿನ ಹಸಿರು ನೆಲದ ಮೇಲೆ ನೇರಳೆ ಹಣ್ಣನ ರಸ ಚೆಲ್ಲಿ ಕಾಡು ನೆಲವೆಲ್ಲ ನೇರಳೆ ಬಣ್ಣದಿಂದ ಎರಕ ಹೊಯ್ದಂತೆ ಕಾಣುತ್ತಿತ್ತು.

ನೋರಾಗೆ ನೇರಳೆ ಹಣ್ಣುಗಳೆಂದರೆ ಬಹಳ ಪ್ರೀತಿ. ಅವಳು ನೆಲಕ್ಕೆ ಬಿದ್ದ ನೇರಳೆ ಹಣ್ಣುಗಳನ್ನೇ ನೋಡುತ್ತಾ ನಿಂತಳು. ನೆಲಕ್ಕೆ ಬಿದ್ದ ಕೆಲವು ಹಣ್ಣುಗಳು ಬಾಯಿ ಬಿಡದೆ ರಸವನ್ನೆಲ್ಲ ತನ್ನ ಒಡಲೊಳಗೇ ಇಟ್ಟುಕೊಂಡು ನೆಲದ ಮೇಲೆ ಚಳಿಗೆ ಬೆಚ್ಚಗೆ ಮಲಗಿದ್ದವು. ಅವುಗಳನ್ನು ನೋಡಿ ನೋರಾಳ ಬಾಯೊಳಗೆ ನೀರಾಡಿತು. ಕೆಲವು ಹಣ್ಣುಗಳಾದರು ತಿನ್ನಲಿಕ್ಕೆ ಸಿಕ್ಕವಲ್ಲ ಎಂದು ಖುಷಿಯಿಂದ ಕುಣಿದಾಡಿದಳು. ದೂರದಿಂದ ಬರುತ್ತಿದ್ದ ಮಾಬು ಅವಳನ್ನು ಕಂಡು ಅವಳ ಕಡೆ ರಭಸವಾಗಿ ಹೆಜ್ಜೆ ಹಾಕಿದನು. ಅವನಿಗೆ ನೋರಾ ಎಂದರೆ ಪಂಚಪ್ರಾಣ. ಆದರೆ ಅವಳಿಗೆ ಅವನನ್ನು ಕಂಡರೆ ಮೈಯಲ್ಲಿ ಬೆಂಕಿ ಆಡುತ್ತಿತ್ತು. ಹತ್ತಿರ ಬಂದು “ನೋರಾ, ಒಬ್ಬಳೆ ಎಲ್ಲಿಗೆ ಹೋಗತಿದ್ದೆ? ಈ ಪಾಟಿ ಮಳೆ ಸುರಿತಾ ಐತೆ. ಏನಾರು ಬೇಕಿತ್ತಾ? ಹೇಳು, ನಾ ತಕ್ಕೊಡ್ತೆ” ಮಾಬು ತಲೆಯ ಮೇಲೆ ಹೊದ್ದ ಕಂಬಳಿಯನ್ನು ಸರಿ ಮಾಡಿಕೊಳ್ಳುತ್ತಲೆ ನೋರಾಳನ್ನು ಕಣ್ಣಲ್ಲೆ ತಿಂದುಹಾಕುವಂತೆ ನೋಡುತ್ತ ಕೇಳಿದನು. ಮಾಬುನ ಧ್ವನಿಯನ್ನು ಕೇಳಿದರಂತೂ ನೋರಾಳಿಗೆ ಪಿತ್ತ ನೆತ್ತಿಗೇರುತ್ತಿತ್ತು. ಅವನನ್ನು ಸೀಳಿ ಹಾಕುವಂತೆ ಕೆಂಗಣ್ಣಿನಿಂದ ಗುರಾಯಿಸಿದಳು. ಒಬ್ಬಳೆ ಸಿಕ್ಕಿದ್ದಾಳ ಕೇಳಿಯೇ ಬಿಡೋಣವೆಂದು ಮಾಬು ನೋರಾಳಿಗೆ ಮತ್ತಷ್ಟು ಹತ್ತಿರ ಹೋಗಿ “ನೋರಾ, ನೀ ನನ್ನ ಲಗ್ನ ಆಗೆ. ನಿನ್ನ ರಾಣಿ ತರ ನೋಡಕೋತೆ” ಹೇಳುತ್ತಲೆ ಇದ್ದನು ನೋರಾ ಮಾತ್ರ ಅವನ ಯಾವ ಮಾತಿಗೂ ಕಿವಿ ಕೊಡದೆ ನೆಲಕ್ಕುರುಳಿದ ನೇರಳೆ ಹಣ್ಣುಗಳನ್ನು ಆಯ್ದುಕೊಂಡು ಚೀಲದಲ್ಲಿ ಹಾಕಿಕೊಂಡು ಹೊರಟಳು.

ಮಾಬುಗೆ ನೋರಾಳ ಆ ವರ್ತನೆಯಿಂದ ಬೇಸರವಾದರೂ ಅದು ಕ್ಷಣಿಕವಾಗಿತ್ತು. ಅವನಿಗೆ ಅವಳು ತೋರುವ ಅಸಡ್ಡೆ ಇದೇ ಮೊದಲಲ್ಲ. ಈ ಮೊದಲು ನೋರಾ ಒಬ್ಬಳೆ ಸಿಕ್ಕಿದಾಗಲೆಲ್ಲ ಇದೇ ಪ್ರಶ್ನೆಯನ್ನು ಅವಳ ಮುಂದಿಡುತ್ತಿದ್ದನು. ಮೊದಲೆಲ್ಲಾ ನೋರಾ ಅವನಿಗೆ ಖಾರವಾಗಿಯೇ ಉತ್ತರಿಸುತ್ತಿದ್ದಳು. ಒಮ್ಮೆಯಂತೂ ಅವನಿಗೆ “ಲೇ ಮಾಬು ಒಂದ ಸರ್ತಿನಾರು ನಿನ್ನ ಮುಖ ಕನ್ನಡಿಯೊಳಗೆ ನೋಡಕೊಂಡಿಯೇನೊ! ಎಂಥ ಕೆಟ್ಟ ಮುಸಡಿ ನಿಂದು. ಒಳ್ಳೆ ಗೋರಿಲಾ ಇದ್ದಂಗ ಇದ್ದಿಯಾ. ನಿನ್ನ ಹಲ್ಲ ನೋಡೋ ಆನೆಯ ಕೋರೆ ಹಲ್ಲ ತರ ಕಾಣತವೆ. ಅದೆಂತ ಧ್ಯೆರ್ಯ ನಿಂಗೆ ನನ್ನ ಹತ್ರ ಬಂದು ನಂಗೆ ಲಗ್ನ ಆಗ್ತೆ ಅಂತ ಹೇಳತಿಯಲ್ಲಾ. ಇನ್ನೊಂದ ಸಾರ್ತಿ ಹಿಂಗೆಲ್ಲ ಹೇಳಿದ್ರೆ ನಿನ್ನ ಹಲ್ಲು ಕಿತ್ತು ಕೈಲಿಕ್ಕತೀನಿ ನೋಡ್ತಿರು” ಮುಖಕ್ಕೆ ಹೊಡಿಯೊ ಹಾಗೆ ಹೇಳಿದ್ದಳು. ಮತ್ತೊಮ್ಮೆಯಂತೂ ಅವನನ್ನು ಅಟ್ಟಾಡಿಸಿಕೊಂಡು ಅವನ ಹಲ್ಲು ಕಿತ್ತೇ ಬೆಡುವೆ ಎಂದು ಹೋಗಿದ್ದಳು ಅಕ್ಕ-ಪಕ್ಕದ ಹಟ್ಟಿಯವರೆಲ್ಲ ಬಂದು ತಡೆದಿದ್ದರು.

ದಾರಿಯುದ್ದಕ್ಕೂ ನೇರಳೆ ಹಣ್ಣು ತಿಂದು ಬೀಜವನ್ನು ಬಾಯಿಯಿಂದ ತೆಗೆದು ತೂರಿ ಮೇಲಕ್ಕೆಸೆದು ಕೈಯಿಂದ ಆಕಾಶದ ಕಡೆ ಹೊಡೆಯುತ್ತ ಒಂದು ರೀತಿಯಲ್ಲಿ ಒಬ್ಬಳೆ ಚಂಡಿನಾಟ ಆಡುತ್ತಾ ಹೊರಟಳು. ಕಾಡಿನ ಮಧ್ಯೆ ಅಲ್ಲಲ್ಲಿ ಬಂಡೆಕಲ್ಲಿನ ಮೇಲೆ ಪಾಚಿಗಟ್ಟಿದ್ದರಿಂದ ವಿಪರೀತ ಜಾರಿಕೆಯಾಗಿತ್ತು. ಆಟದಲ್ಲಿ ಮಗ್ನಳಾಗಿ ಮುಂದೆ ಸಾಗುತ್ತಿದ್ದ ನೋರಾ ಪಾಚಿಗಟ್ಟಿದ ಬಂಡೆಕಲ್ಲನ್ನು ಗಮನಿಸಲೇ ಇಲ್ಲ. ಮೇಲಕ್ಕೆ ಹೋಗಿ ಕೆಳಗೆ ಬರುತ್ತಿದ್ದ ನೇರಳೆ ಹಣ್ಣಿನ ಬೀಜವನ್ನು ಅಂಗೈ ಮುಂದು ಮಾಡಿ ಹೊಡೆಯಲು ಹೋಗಿ ತುಸು ಮುಂದೆ ಓಡಿ ಬಲಗಾಲನ್ನು ಪಾಚಿಗಟ್ಟಿದ ಬಂಡೆ ಕಲ್ಲಿನ ಮೇಲೆ ಇಟ್ಟಳು. ಜರ್ರನೆ ಜಾರಿ ಹಿಂದಡಿಯಾಗಿ ಬಿದ್ದಳು. ಜಾರು ನೆಲ ಅವಳ ದೇಹವನ್ನು ಮೈಲು ದೂರ ತಳ್ಳಿತು. ಕಾಡು ನೆಲ ಹಸಿರಿನಿಂದ ಕೂಡಿತ್ತು. ಮಳೆಗಾಲವಾದ್ದರಿಂದ ನೆಲದ ಮೇಲೆ ಹುಲ್ಲು ಬೆಳೆದು ಹಸಿರು ಹಾಸಿಗೆ ಹಾಸಿದಂತೆ ಕಾಣುತ್ತಿತ್ತು. ಇಂಥ ಹುಲ್ಲಿನ ಹಾಸಿಗೆಯ ಮೇಲೆ ಬಿದ್ದಿದ್ದರಿಂದ ಬೆನ್ನಿಗೇನೂ ಗಾಯ ಆಗಲಿಲ್ಲ. ಅಕ್ಕ-ಪಕ್ಕದ ಗಿಡಕ್ಕೆ ಕೈ-ಕಾಲು ತೆರೆದವು. ಕೈ-ಕಾಲಿನ ಚರ್ಮ ಕಿತ್ತು, ಗಾಯಗೊಂಡು ರಕ್ತ ಸೋರತೊಡಿಗಿತು. ತಲೆಯ ಮೇಲಿನ ಗೋಣಿ ಚೀಲ ಕೆಳಗೆ ಬಿದ್ದದ್ದರಿಂದ ಮಳೆಗೆ ಮೈಯಲ್ಲಾ ಒದ್ದೆಯಾಗಿ ಧರಿಸಿದ ಬಟ್ಟೆ ಮೈಗೆ ಅಂಟಿಗೊಂಡಿತು. ಸಾವರಿಸಿಕೊಂಡು ಎದ್ದು ಚರ್ಮ ಕಿತ್ತು ರಕ್ತ ಸೋರುತ್ತಿದ್ದ ಮೊಣಕೈಯನ್ನು ತಿರುವು ಮಾಡಿಕೊಂಡು ನೋಡಿ ಕಣ್ಣಾಲಿಗಳನ್ನು ತುಂಬಿಕೊಂಡು ‘ಉಫ್-ಉಫ್’ ಎಂದು ಊದಿಕೊಂಡು ಉರಿಯುವ ಗಾಯಕ್ಕೆ ತಣ್ಣನೆಯ ಗಾಳಿ ಬೀಸಿಕೊಂಡಳು. ಮಳೆ ಸುರಿಯುತ್ತಲೇ ಇತ್ತು. ಹೆಚ್ಚು ಹೊತ್ತು ಅಲ್ಲೇ ನಿಲ್ಲುವುದು ಬೇಡವೆಂದು ನಿಧಾನವಾಗಿ ಹೆಜ್ಜೆ ಇಟ್ಟುಕೊಂಡು ದಿಬ್ಬ ಏರಿನಾಲ್ಕೈದುಮೈಲು ದೂರ ಬಂದಿದ್ದಳೇನೊ ಮೈಯಲ್ಲೇನೋ ಹಗುರವೆನಿಸಿತು. ಬಗಲಿಗೆ ಹಾಕಿಕೊಂಡ ಚೀಲ, ಅದರಲ್ಲಿನ ಜೇನಿನ ಬಾಟಲಿ, ನೇರಳೆ ಹಣ್ಣು ನೆನಪಾಗಿ ‘ಕಷ್ಟಪಟ್ಟು ಏರಿದ್ದ ದಿಬ್ಬವನ್ನುಮತ್ತೆ ಇಳಿದು ಹೋಗಬೇಕಲ್ಲ’ನೆನೆದು ದುಃಖ ಇಮ್ಮಡಿಯಾಯಿತು. ಅನಿವಾರ್ಯವಾಗಿತ್ತು, ಅವಳಿಗೆ ಹೋಗದೆ ಬೇರೆ ದಾರಿ ಇರಲಿಲ್ಲ.  ಆಸರೆಗೊಂದು ಅಲ್ಲೇ ಇದ್ದ ಬಿದಿರನ ಕೋಲನ್ನು ಮುರಿದುಕೊಂಡು ಕೈಯಲ್ಲಿ ಹಿಡಿದು ದಿಬ್ಬ ಇಳಿದು ಹೋದಳು. ಅವಳು ಬಿದ್ದ ಜಾಗದಲ್ಲೇ ಅವಳ ಚೀಲ ಬಿದ್ದಿತ್ತು. ಖುಷಿಯಿಂದ ಚೀಲವನ್ನು ಎತ್ತಿಕೊಂಡು ಜೇನಿನ ಬಾಟಲಿಯನ್ನು ಪರಿಶೀಲಿಸಿದಳು. ಪುಣ್ಯಕ್ಕೆ ಜೇನಿನ ಬಾಟಲಿಗೇನೂ ಆಗಿರಲಿಲ್ಲ. ನೇರಳೆ ಹಣ್ಣುಗಳು ಮಾತ್ರ ಅಪ್ಪಚ್ಚಿಯಾಗಿದ್ದವು. ರಸ ತುಂಬಿದ ಹಣ್ಣುಗಳು ಬಾಯಿ ಬಿಟ್ಟು ಚೀಲವೆಲ್ಲ ನೇರಳೆ ಹಣ್ಣಿನ ರಸದಿಂದ ತುಂಬಿತ್ತು. ಅಷ್ಟೆಲ್ಲ ಇಷ್ಟಪಟ್ಟು ನೋಡಿ ಮಾಡಿ ಒಳ್ಳೆಯ ಹಣ್ಣನ್ನು ಆರಿಸಿ ತುಂಬಿಕೊಂಡಿದ್ದಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ‘ಯಾವ ಗಳಿಗೆಯಲ್ಲಿ ಮನೆ ಬಿಟ್ಟೆನೊ!’ ಗೊಣಗಿಕೊಂಡೆ ಕೈಚೀಲ ಬಗಲಿಗೆ ಹಾಕಿಕೊಂಡು ಕೋಲಿನ ಆಸರೆಯಲ್ಲಿ ದಿಬ್ಬ ಏರತೊಡಗಿದಳು. ಬಹಳ ಹೊತ್ತು ಅಲ್ಲೇ ನಿಂತಿದ್ದರಿಂದ ಉಂಬಳ ಅವಳ ಕಾಲು, ತೊಡೆ, ಹೊಟ್ಟೆಯಲ್ಲೆಲ್ಲ ಹೊಕ್ಕು ರಕ್ತ ಹೀರತೊಡಗಿದ್ದವು. ಉಂಬಳ ಮೈ ಏರುವುದು, ಅವುಗಳನ್ನು ಸುಣ್ಣ ಒತ್ತಿ ಕಿತ್ತುಬಿಸಾಡುವುದು ಕಾಡಿನ ಮಕ್ಕಳಿಗೆ ಹೊಸದೇನಲ್ಲ. ಲಂಗಕ್ಕೆ ಕ್ಕಿಸಿಕೊಂಡ ಸುಣ್ಣದ ಚೀಲದಲ್ಲಿ ಸುಣ್ಣದ ಡಬ್ಬವನ್ನು ಖಾಯಂ ಆಗಿ ಇಟ್ಟುಕೊಳ್ಳುವುದು ಅವರಿಗೆ ರೂಢಿ. “ನನ್ನ ಕರ್ಮ! ಸುಣ್ಣದ ಡಬ್ಬ ಕಾಲಿ ಆಗಿರೋದನ್ನ ನೋಡಿಕೊಂಡು ಬರಲೇ ಇಲ್ಲ. ಹೆಕ್ಕಿ ತೆಗೆದರೂ ಒಂದು ಚೂರು ಸುಣ್ಣ ಇಲ್ಲ. ಈ ಉಂಬಳಗಳೋ ನನ್ನ ರಕ್ತ ಹೀರೋದನ್ನ ನನ್ನ ಪ್ರಾಣ ಇರೋವರೆಗೂ ಬಿಡದಂತೆ ಕಾಣೋಲ್ಲ” ಎಂದು ಚಿಂತಿಸುತ್ತಿರುವಾಗಲೆ ಅವಳ ದೃಷ್ಟಿ ಅವಳ ಬೆರಳುಗಳ ಮೇಲೆ ಹರಿಯಿತು.

“ಪುಣ್ಯಕ್ಕೆನನ್ನ ಉಗುರು ಉದ್ದ ಅವೆ. ಚಿಮಟಗಿ ಹಂಗೆ! ಆಯಿ ಈ ಉಗುರುಗಳನ್ನ ನೋಡಿ ಒಂದು ದಿನ ‘ರಾಕ್ಷಸರ ತರ ಉಗುರು ಬಿಟ್ಟಕೊಂಡಿಯಲ್ಲೆ ತಕ್ಕೊಳ್ಳಕ್ಕೆ ಏನ್ ರೋಗ ನಿಂಗೆ’ ಎಂದು ಬೈದದ್ದು, ಅದಕ್ಕೆ ನಾನು ‘ಆಯಿ ಇದು ಫ್ಯಾಷನ್. ಸಿನಿಮಾದಲ್ಲಿ ಹುಡುಗೀರು ಹಿಂಗೇ ಬಿಟ್ಟಕೊಂಡಿರತಾರೆ’ ಎಂದು ಉತ್ತರಿಸಿದ್ದೆ. ಆಗ ಆಯಿ ಹಟ್ಟಿಯ ಮುಂದನ ಕಟ್ಟೆಯ ಮೇಲೆ ಬೀಡಿ ಸೇದಿಕೊಂಡು ಕೂತಿದ್ದ ಅಪ್ಪನ ಮುಖಕ್ಕೆ ತಿವಿದು ‘ಅದ್ಯಾವ ಘಳಿಗೆ ಮಗಳನ್ನ ಪಟ್ಟಣಕ್ಕೆ ಕರಕೊಂಡು ಹೋಗಿ ಪಿಚ್ಚರ್ ತೋರಸಿದ್ಯೊ! ಅದನ್ನ ನೋಡಿ ಬಂದಾಗಿನಿಂದ ಇವಳ ವೈಯಾರ ನೋಡಾಕವಲ್ದು. ಕೆಲಸ ಬಿಟ್ಟು ಇಪ್ಪತ್ನಾಲ್ಕ ಗಂಟೆ ಬರೀ ಕನ್ನಡಿ ಮುಂದೆ ನಿಂತು ವಯ್ಯಾರ ಮಾಡಿದ್ದೆ ಮಾಡಿದ್ದು. ಅದೆಷ್ಟ ಸಲ ಮುಖ ಹೊರಳಾಡಿಸಿಕೊಂಡು ನೋಡಕೋತಾಳೊ! ಅವಳ ಬೆರಳ ಉಗುರಂತೂ ತೇಟ ರಾಕ್ಷಸಿ ತರ ಬಿಟ್ಟಕೊಂಡವ್ಳೆ’ ಚೀಮಾರಿ ಹಾಕಿದ್ದಳು” ಎಲ್ಲವನ್ನು ನೆನೆದು ಉರಿ, ನೋವಿನಲ್ಲೂ ಮುಖದ ಮೇಲೆ ಮಂದಹಾಸ ಮೂಡಿ “ಆಯಿ ನೋಡು! ನಾ ಇಷ್ಟುದ್ದ ಉಗುರ ಬಿಟ್ಟಿದ್ದು ಎಷ್ಟ ಚಲೊ ಆತು” ಎಂದು ಒಬ್ಬೊಬ್ಬಳೆ ಮಾತನಾಡಿಕೊಂಡು ತನ್ನ ಚೂಪಾದ ಉಗುರುಗಳಿಂದ ಚರ್ಮಕ್ಕೆ ಬಿಗಿದಪ್ಪದ ಉಂಬಳಗಳನ್ನು ಒಂದೊಂದಾಗಿಯೇ ಕಿತ್ತೆಸೆದು ನಿಧಾನವಾಗಿ ಚಲಿಸತೊಡಗಿದಳು. ಸಮಯದ ಪರಿಮಿತಿ ಇಲ್ಲದ ಕಾಡುಜನರವರು. ಎಷ್ಟೆಷ್ಟೊತ್ತಿಗೊ ಕಾಡು, ಮನೆ, ಪಟ್ಟಣ ಎಂದು ಓಡಾಡುತ್ತಲೆ ಇರುತ್ತಾರೆ. ಒಬ್ಬೊಬ್ಬರೆ ಓಡಾಡಿ ರೂಢಿ ಇರುತ್ತೆ. ಆದರೂ ಸಕ್ಕು ಮಗಳಿಗೆ ‘ಬಿರ-ಬಿರನೆ ಹೋಗಿ ಬಂದು ಬಿಡು. ಮೊದಲೆ ಮಳೆಗಾಲ. ಬೇಗ ಕತ್ತಲಾಗುತ್ತೆ’ ಎಂದು ಹೇಳಿ ಕಳಿಸಿದ್ದಳು. ತಾಯಿಯ ಮಾತು ನೆನೆದು ನೋರಾಳ ಕಾಲುಗಳಿಗೆ ಬಲ ಬಂದು ವೇಗವಾಗಿ ಹೆಜ್ಜೆ ಹಾಕಿದಳು.

‘ಹುಯ್ಯೊ, ಹುಯ್ಯೊ ಮಳೆರಾಯ…..’ ಹಾಡಿನ ಒಂದೇ ಸಾಲು ಪಟ್ಟಣ ಸೇರುವವರೆಗೂ ಅವಳ ಬಾಯಲ್ಲಿ ಗುಣಗುಟ್ಟುತ್ತಿತ್ತು. ಮಂಚಿಕೇರಿ ಹಾಗೂ ಯಲ್ಲಾಪೂರ ನಡುವೆ ಬೇಡ್ತಿ ನದಿ ತುಂಬಿ ಹರಿಯುತ್ತಿತ್ತು. ಬೇಡ್ತಿ ನದಿಯ ಬ್ರಿಡ್ಜ್ ಮೇಲೆ ನಿಂತು ತುಂಬಿ ರಭಸವಾಗಿ ಹರಿಯುತ್ತಿದ್ದ ನದಿಯನ್ನು ಕಣ್ಣು ಪಿಳುಕಿಸದಂತೆ ನೋಡುತ್ತ ನಿಂತಳು. ಅದೇನೊ! ನೋರಾಳಿಗೆ ಮೊದಲಿಂದಲು ತುಂಬಿ ಹರಿಯುವ ನದಿ, ಹಳ್ಳ, ಕೊಳ್ಳ, ಕಾಡು, ಬೆಟ್ಟ ಎಂದರೆ ಎಲ್ಲಿಲ್ಲದ ಪ್ರೀತಿ. ನೋಡುತ್ತ ನಿಂತರೆ ಅದೆಷ್ಟು ಹೊತ್ತು ಬೇಕಾದರೂ ಹಾಗೆಯೇ ನಿಂತು ಬಿಡುತ್ತಾಳೆ. ಮಳೆ ನಿರಂತರವಾಗಿ ಸುರಿಯುತ್ತಿದುದರಿಂದ ವರ್ಷದುದ್ದಕ್ಕೂ ನದಿಯ ದಂಡೆಯ ಮೇಲೆ ಹರಡಿಕೊಂಡ ಕಸ, ಕಡ್ಡಿ, ಪ್ಲ್ಯಾಸ್ಟಿಕ್ ಚೀಲ, ಸಾರಾಯಿ ಬಾಟಲಿಗಳು ರಭಸವಾಗಿ ಹರಿಯುವ ನೀರಿನ ಗುಂಟ ಹರಿದುಹೋಗಿ ನದಿಯ ದಡ ಮತ್ತೆ ಪರಿಶುದ್ಧವಾಗಿ, ಸ್ವಚ್ಚಂದವಾಗಿ ಕಾಣುತ್ತಿತ್ತು.

ನೋರಾಳಿಗೆ ನದಿಯ ಶುದ್ಧ ನೀರಿನಲ್ಲಿ ಇಣುಕಿ ಈಜಾಡುವ ಬಣ್ಣ-ಬಣ್ಣದ ಮೀನುಗಳನ್ನು ನೋಡುವುದರಲ್ಲಿ ಎನ್ನಿಲ್ಲದ ಗೆಲುವು. ಅವಳು ನೀರಿನ ಆಳಕ್ಕೆ ಅದೆಷ್ಟು ತೀಕ್ಷಣವಾಗಿ ನೋಡುತ್ತಿದ್ದಳೆಂದರೆ ತಾನು ನದಿಯ ಆಳದಲ್ಲಿ ಕಂಡ ಮೀನು, ಏಡಿ, ಕಪ್ಪೆ ಅವುಗಳ ಬಣ್ಣ, ಗಾತ್ರ, ಕಣ್ಣು, ಬಾಲ, ಚರ್ಮ ಹೀಗೆ ಎಲ್ಲವನ್ನು ಎಳೆ-ಎಳೆಯಾಗಿ ವಿವರಿಸಿ ಹೇಳುತ್ತಿದ್ದಳು. ಯಾವ ಸಂಶೋಧಕನೂ ನೋರಾಳಷ್ಟು ಪರಿಣಾಮಕಾರಿಯಾಗಿ ವರ್ಣಿಸಲಾರ.

ಮೈಮರೆತು ನೋರಾ ಹಾಗೆಯೇ ನಿಂತಿದ್ದಳು. ಅವಳ ಕಣ್ಣುಗಳು ನದಿಯ ಆಳಕ್ಕೆ ಇಳಿದು ಅಲ್ಲಿ ಈಜಾಡುತ್ತಿದ್ದ ಮೀನುಗಳನ್ನು ಬೆನ್ನು ಹತ್ತಿ ಅವೂ ಈಜುತ್ತಿದ್ದವು. ಉಮ್ಮಚಗಿಯಿಂದ ಬರುತ್ತಿದ್ದ ಲಾರಿಯೊಂದು ಬ್ರಿಡ್ಜ್ ಹತ್ತಿರ ಬರುತ್ತಿದ್ದಂತೆ ನೋರಾಳನ್ನು ಕಂಡು ಡ್ರೈವರ್ ಜೋರಾಗಿ ಹಾರ್ನ್ ಹಾಕಿದನು. ನೋರಾ ಬಹಳ ಮಗ್ನಳಾಗಿ ತನ್ನ ಇರುವಿಕೆಯನ್ನೆ ಮರೆತಿದ್ದಳು. ‘ಸುರಿಯೊ ಮಳೆ, ಈ ಹುಡುಗಿ ಹೀಗೆ ರಸ್ತೆ ಅಡ್ಡಗಟ್ಟಿ ನಿಂತಿದ್ದಾಳಲ್ಲ, ಮಾಡುವೆ ಇವಳಿಗೆ!’ ಎಂದವನೆ ಡ್ರೈವರ್ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ತನ್ನ ಸೀಟಿನಿಂದ ಚಂಗನೆ ಜಿಗಿದು ಹಲ್ಲು ಮಸೆಯುತ್ತ, ಕಣ್ಣಲ್ಲಿ ಬೆಂಕಿ ಕಾರುತ್ತ ನೋರಾಳ ಕಡೆ ರಭಸವಾಗಿ ಹೆಜ್ಜೆ ಹಾಕಿ ಬಂದನು. ಅವಳ ಎಡಗೈ ರಟ್ಟೆಯನ್ನು ತನ್ನ ಬಲಗೈಯಿಂದ ಜೋರಾಗಿ ಎಳೆದು ಬ್ರಿಡ್ಜ್​ನಿಂದ ಹೊರಗೆ ತಂದು ನಿಲ್ಲಿಸಿ “ಏ ಹುಡುಗಿ ಕಪಾಳಕ್ಕೆ ಎರಡು ಬಿಟ್ಟಾ ಅಂದ್ರೆ ನಿನ್ನ ಹಲ್ಲುಗಳೆಲ್ಲ ಬೇಡ್ತಿ ಪಾಲಾಗತವೆ. ಮನೇಲಿ ಹೇಳಿ ಬಂದಿದಿಯಾ ತಾನೆ. ಈ ಬ್ರಿಡ್ಜ್ ಏನು ನಿಮ್ಮ ಅಪ್ಪ ಕಟ್ಟಿಸಿದ್ದಾ! ಹೀಗೆ ಬ್ರಿಡ್ಜ್ ಮಧ್ಯದಲ್ಲಿ ರಾಣಿ ತರ ನಿಂತುಕೊಂಡು ಮೈಮರೆತು, ಹಲ್ಲು ಗಿಂಜಿಕೊಂಡು ನಿಂತಿದ್ದಿಯಲ್ಲಾ. ನಾನಾಗಿದ್ದಕ್ಕೆ ಬಚಾವ್! ಬೇರೆ ಯಾರಾದ್ರು ಆಗಿದ್ದಿದ್ರೆ ನಿನ್ನ ಮೇಲೆ ಇಷ್ಟೊತ್ತಿಗೆ ಗಾಡಿ ಹಾಯಿಸಿಕೊಂಡು ಹೋಗಿರೋರು. ನಿಮ್ಮ ಅಪ್ಪ-ಅಮ್ಮಂಗೆ ಹುಡುಕಿದ್ರು ನಿನ್ನ ಒಂದೇ ಒಂದು ತುಂಡು ಎಲಬೂ ಸಿಗತಿರಲಿಲ್ಲ” ಒಂದೇ ಉಸಿರಿನಲ್ಲಿ ಹೇಳುವುದನ್ನು ಕೇಳಿಸಿಕೊಂಡು ಸಾಕಾದ ನೋರಾ ಅವನ ಮಾತಿನ ಮಧ್ಯೆದಲ್ಲೆ ಬಾಯಿ ಹಾಕಿ “ಏ ಸಾಕ್ ಸುಮ್ಮನಿರಣ್ಣ. ಹಂಗೆ ನನ್ನ ಮೇಲೆ ಗಾಡಿ ಹಾಯಿಸಿಕೊಂಡು ಹೋಗೋಕೆ ನಾನೇನು ಬಿಟ್ಟಿ ಬಿದ್ದಿವ್ನೇನು! ಇಷ್ಟು ದೊಡ್ಡ ಬ್ರಿಡ್ಜ್ ಅದೆ. ಆ ಕಡೆ ಹಾದು ನೀ ಹೋದ್ರೆ ನಿಂದೆಂತ ಗಂಟ ಹೋಗತಿತ್ತು. ನಾ ನಿಂತಲ್ಲಿಂದಲೆ ಹೋಗಬೇಕಂತ ನಿಂಗೆತ ಹಠ! ಹೌದು ಇದು ನಮ್ಮ ನದಿ, ನಮ್ಮ ಕಾಡು, ನಮ್ಮ ಊರು, ನೀನಿಗಾ ನಮ್ಮ ಏರಿಯಾದಲ್ಲಿ ಓಡಾಡತಿದ್ದಿಯಾ. ನೀನು ಸ್ವಲ್ಪ ಆ ಕಡೆ ಈ ಕಡೆ ನೋಡಕೋಂಡು ಗಾಡಿ ಓಡಿಸಬೇಕು, ತಿಳಿತಾ ಅಣ್ಣ! ಇಲ್ಲ ಅಂದ್ರೆ ಈ ಬ್ರಿಡ್ಜ್ ಮೇಲೆ ಇನ್ನೊಂದಪ ನಿಮ್ಮ ಗಾಡಿ ನಮ್ಮ ಏರಿಯಾದ ಮೇಲೆ ಓಡಾಡೋದು ಬಹಳ ಕಷ್ಟ ಆಗುತ್ತೆ. ಇದನ್ನ ಸ್ವಲ್ಪ ಜಪ್ತೀಲಿ ಮಡಕ್ಕೊ.” ಅವನಿಗೇ ಉಲ್ಟಾ ಆವಾಜ್ ಹಾಕಿ ಅವನ ಕೈಯಿಂದ ತನ್ನ ರಟ್ಟೆಯನ್ನು ಬಿಡಿಸಿಕೊಂಡು ಓಡತೊಡಗಿದಳು. ಅವಳದು ಜಿಂಕೆಯ ಓಟ, ದೈತ್ಯಾಕಾರದ ದೇಹಧಾರಿ ಡ್ರೈವರ್‍ಗೆ ಅವಳನ್ನು ಹಿಂಬಾಲಿಸಿ ಹೋಗುವುದು ಅಸಾಧ್ಯದ ಮಾತಾಯಿತು.

ನೋರಾ ಬ್ರಿಡ್ಜ್​ನಿಂದ ಓಡಲು ಪ್ರಾರಂಭಿಸಿದವಳು ಮಂಚಿಕೇರಿಗೆ ತಲುಪುವ ಅರ್ಧ ದಾರಿಯನ್ನು ಕ್ರಮಿಸಿದಳು. ಡ್ರೈವರ್‍ನಿಂದ ತಪ್ಪಿಸಿಕೊಳ್ಳಬೇಕೆಂಬ ಏಕಮೇವ ಉದ್ದೇಶ ಅವಳಿಗೆ ತನ್ನ ಕಾಲಿಗೆ ಆದ ಗಾಯವನ್ನೆಲ್ಲ ಮರೆಸಿತ್ತು. ಅರ್ಧ ದಾರಿ ಸವೆದ ಮೇಲೆ ತಿರುಗಿ ನೋಡಿ “ಅಬ್ಬಾ! ದಡಿಯ ಹಿಂದೆ ಬರಲಿಲ್ಲ ಪುಣ್ಯ!” ಹೇಳಿಕೊಂಡು ರಸ್ತೆ ಬದಿಗೆ ಇದ್ದ ಕರಿಕಲ್ಲ ಮೇಲೆ ಕುಳಿತು ಸ್ವಲ್ಪ ಹೊತ್ತು ಸುಧಾರಿಸಿಕೊಂಡಳು. ‘ಬಿರ್ರನೆ ಬಾ ಮಗಾ. ಮಳೆಗಾಲದಲ್ಲಿ ಬೇಗ ಕತ್ತಲಾಗ್ತು’ ಸಕ್ಕು ನೋರಾಳ ಕಿವಿಯ ಹತ್ತಿರ ಬಂದು ಉಸುರಿದಂತಾಯಿತು. ಕತ್ತಲ ಕಾಡು, ಅದರ ಭೀಕರತೆಯನ್ನು ನೆನೆದು ಆದಷ್ಟು ಬೇಗ ಮಂಚಿಕೇರಿ ತಲುಪಿ ಅಪ್ಪನ ಬಗ್ಗೆ ವಿಚಾರಿಸಿಕೊಂಡು, ಜೇನು ಮಾರಿಕೊಂಡು ಮನೆಯ ಹಾದಿ ಹಿಡಿಯಬೇಕು ಎಂದವಳೆ ಎದ್ದು ಪ್ರಯಾಣ ಮುಂದುವರೆಸಿದಳು.

ಕಾಡು ಕುವರಿಯಾದರೂ ನೋರಳಿಗೆ ಕತ್ತಲು, ಅದರಲ್ಲೂ ಕತ್ತಲ ಕಾಡು ಉಂಟುಮಾಡುವ ಭೀತಿಯನ್ನು ಬೇರಾವ ಸಂಗತಿಗಳೂ ಉಂಟುಮಾಡುತ್ತಿರಲಿಲ್ಲ. ಅವಳು ಹುಟ್ಟಿನಿಂದಲೂ ಕತ್ತಲ ಬಗ್ಗೆ ಪುಕ್ಕಲುತನ ಹೊಂದಿರಲಿಲ್ಲ. ಹುಟ್ಟಿ ಐದು ವರ್ಷದ ಮಗುವಿದ್ದಾಗಿನ ತನಕ ನೋರಾ ಯಾರಿಗೂ, ಯಾವುದಕ್ಕೂ ಭಯ ಪಟ್ಟುಕೊಂಡ ಸಂಗತಿಗಳೇ ಇರಲಿಲ್ಲ. ಕತ್ತಲಲ್ಲೂ ಯಾವ ಮುಲಾಜಿಲ್ಲದೆ ತಿರುಗುತ್ತಿದ್ದಳು ಅದನ್ನು ಕಂಡು ಸಕ್ಕು “ಹಿಂದಿನ ಜನ್ಮದಲ್ಲಿ ನೀನೇನು ಮೋಹಿನಿ ಆಗಿದ್ದೇನೆ” ಎಂದು ಮಗಳನ್ನು ಬರಸೆಳೆದು ಅಪ್ಪಿ, ಮುದ್ದಿಸುತ್ತಾ ಅವಳ ಧೈರ್ಯವನ್ನು ಕಂಡು ಸಂಭ್ರಮಿಸುತ್ತಿದ್ದಳು.

ನೋರಾಳಿಗೆ ಆಗ ಆರು ವರ್ಷ. ಅವಳು ತನ್ನ ಅಪ್ಪನ ಜೊತೆ ಮಂಚಿಕೇರಿಗೆ ಹೋಗಿದ್ದಳು. ಮರಳಿ ಬರುವಾಗ ಅಮಾವಾಸ್ಯೆ ಕತ್ತಲು. ಅಪ್ಪನ ಬಳಿಯ ಸಣ್ಣದೊಂದು ಟಾರ್ಚ್ ಬೆಳಕಿನಲ್ಲಿ ಅಪ್ಪ ಮಗಳು ಕಾಡು ಪ್ರವೇಶಿಸಿದರು. ಯಾರೋ ಅಟ್ಟಿಸಿಕೊಂಡು ಬಂದಂತೆ, ಕಿವಿಯ ಹತ್ತಿರ ಬಂದು ಕಿಟಾರನೆ ಕಿರಿಚಿದಂತೆ ಭಾಸವಾಗಿ ನೋರಾಳ ಅಪ್ಪ ಕಾಡಿನಲ್ಲಿ ಮೂರ್ಛೆ ಹೋಗಿ ಬಿದ್ದನು. ನೋರಾ “ಅಪ್ಪಾ! ಅಪ್ಪಾ! ಏಳಪ್ಪಾ…ಹೋಪೇನಾ ಏಳಪ್ಪಾ!!” ಎಂದು ಅಪ್ಪನ ಎದೆ ತಟ್ಟಿ ಎಚ್ಚರಿಸುವ ಪ್ರಯತ್ನ ಮಾಡಿದಳು. ಅವಳ ಕಣ್ಣುಗಳು ನೀರು ತುಂಬಿ ಮಂಜು-ಮಂಜಾದವು. ಕೆಳಗೆ ಬಿದ್ದ ಟಾರ್ಚ್ ಉರಿಯುವುದನ್ನು ನಿಲ್ಲಿಸಿತು. ಎಲ್ಲೆಡೆಯೂ ಕತ್ತಲು. ಮೂರ್ಛೆ ಹೋದ ಅಪ್ಪ ಎಚ್ಚರವಾಗಲೇ ಇಲ್ಲ. ಜೋರಾಗಿ ಅಳುತ್ತಲೆ ಅಪ್ಪನ ಎದೆಗವುಚಿಕೊಂಡು ಮಲಗಿ ಸುತ್ತಲಿನ ಕಾಡಿನ ಮೌನ ಭಾಷೆಗೆ ಕಿವಿಯಾದಳು ನೋರಾ. ಅಲ್ಲಿಯವರೆಗೂ ಕಾಡು ಅವಳ ಪಾಲಿಗೆ ಪಕ್ಷಿಗಳ ಕಲರವ, ಬಣ್ಣ ಬಣ್ಣದ ಚಿಟ್ಟೆ, ಹೂವು, ಹಣ್ಣು, ಹಂಪಲು, ಬಳ್ಳಿಗಳಿಂದ ಕೂಡಿ ಸ್ವರ್ಗವೇ ಆಗಿತ್ತು. ಆ ರಾತ್ರಿ ಅದೇ ಸ್ವರ್ಗ ನರಕವಾದಂತೆನಿಸಿತು. ಪಕ್ಷಿಗಳ ಇಂಪಾದ ಧ್ವನಿಯ ಜಾಗದಲ್ಲಿ ಅವಳ ಕಿವಿಗೆ ಕರ್ಕಶ ಧ್ವನಿ, ದೈತ್ಯಕಾರವೊಂದು ಹತ್ತಿರ ಬರುತ್ತಿರುವ ಕಾಲ್ನಡಿಗೆಯ ಸದ್ದು, ಸುಯ್ ಎಂದು ಬೀಸುವ ಸುಂಟರಗಾಳಿ ಅವಳ ಕಿವಿಗೆ ಬಿದ್ದು ಭಯ ಎಂದರೇನು ಎನ್ನುವುದನ್ನೇ ಅರಿಯದ ನೋರಾಳ ಎದೆಯೊಳಗೆ ಭಯ ಹಾಸುಹೊಕ್ಕಾಗುವಂತೆ ಮಾಡಿತು. ಅಂದಿನಿಂದ ನೋರಾಳಿಗೆ ಕಾಡು ಹಗಲಿನಲ್ಲಿ ಸುಂದರವಾಗಿ, ರಮಣೀಯವಾಗಿ ಕಂಡರೆ, ರಾತ್ರಿ ಅದೇ ಕಾಡು ಕ್ರೂರವಾಗಿ, ಭಯಾನಕವಾಗಿ ಕಾಣತೊಡಗಿತು. ಭಯದಿಂದ ನಲುಗಿದ ಕೂಸು ನೋರಾ ಅಪ್ಪನ ಎದೆಯ ಮೇಲೆ ಹಾಗೆಯೇ ಮಲಗಿ ನಿದ್ದೆಗೆ ಜಾರಿದಳು. ಬೆಳಗಿನ ಸೂರ್ಯನ ಕಿರಣಗಳು ಮೈಮೇಲೆ ಬಿದ್ದಾಗಲೆ ಅಪ್ಪ-ಮಗಳಿಗೆ ಎಚ್ಚರವಾದದ್ದು. ಇಬ್ಬರೂ ಹಟ್ಟಿಯ ಒಳಗೆ ಕಾಲಿಡುತ್ತಿದ್ದಂತೆ ಸಕ್ಕು ಅವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡಳು.

ಬಾಲ್ಯದ ಭಯಾನಕ ಅನುಭವ ಮತ್ತೆ ಕಣ್ಣೆದುರು ನಿಂತಾಗ ನೋರಾ ಮಂಚಿಕೇರಿಯ ಕಡೆಗೆ ಮತ್ತೂ ಜೋರಾಗಿ ಓಡತೊಡಗಿದಳು. ಬಸ್ಟ್ಯಾಂಡ್ ಹತ್ತಿರಕ್ಕೆ ಒಂದೆಡೆ ತರಕಾರಿ ಮಾರುಕಟ್ಟೆ, ಮತ್ತೊಂದೆಡೆ ಮೀನು ಮಾರುಕಟ್ಟೆ. ಓಡಿ ಬರುತ್ತಿದ್ದ ನೋರಾಳನ್ನು ತಡೆದು ಸೀನ್ಯಾ “ನೋರಾ ಎಂತಾತೆ? ಹಿಂಗ್ಯಾಕೆ ಓಡೋಡಿ ಬರ್ತಿದ್ದೆ” ನೋರಾಳ ತಂದೆಯ ಸ್ನೇಹಿತ ಕೇಳಿದನು. “ಸೀನ್ಯಾ ಕಾಕಾ ಎಂತಿಲ್ಲೆ. ಬೆಳಕಿರೋವಾಗ್ಲೆ ಮನೆ ಸೇರಬೇಕಲ್ದ ಅದ್ಕೆ ಈ ಪಾಟಿ ಓಡಿ ಬಂದೆ. ಯಾರಗಾರು ಜೇನ ಬೇಕಿದ್ರೆ ಹೇಳ ನಾ ಇದನ್ನ ಮಾರಕೊಂಡು ಹೋಗ್ತೆ. ವಾರದ ಮೇಲಾತು ಅಪ್ಪ ಮನೆ ಕಡಿ ಕಾಲ ಹಾಕಿಲ್ಲೆ. ಮನೇಲಿ ಎಂಥದು ಇಲ್ಲೆ. ಸೀನ್ಯಾ ಕಾಕ ಅಪ್ಪ ಎಲ್ಲಿದ್ದ ಅಂತ ನಿಂಗೆಂತಾದ್ರು ಗೊತ್ತಾ?” ನೋರಾ ವಿಚಾರಿಸಿದಳು. ನೋರಾಳ ಮಾತು ಕೇಳಿ ಆಶ್ಚರ್ಯಗೊಂಡ ಸೀನ್ಯಾ “ಎಂತ ಹೇಳ್ದೆ! ನಿನ್ನ ಅಪ್ಪ ಮನೇಲಿ ಇಲ್ದ! ಒಂದು ವಾರದ ಕೆಳಗೆ ನಾನು, ಅವನು, ಚೋಟ್ಯಾ, ಬೀರ ಮತ್ತೆ ಕಾಳ್ಯಾ ಎಲ್ಲ ಸೇರಕೊಂಡು ಮಾರ್ಕೆಟ್‍ನಲ್ಲಿ ಮನೆಗೆ ಬೇಕಾದ ಸಾಮಾನ ಎಲ್ಲ ತಕ್ಕೊಂಡು ಬರ್ತಿದ್ವಿ. ದಾರಿಲ್ಲಿ ಸಾರಾಯಿ ಅಂಗಡಿ ನೋಡಿ ಸ್ವಲ್ಪ ಹಾಕ್ಕೊಂಡು ಹೋಗುವ ಅಂತ ಒಳಗ ಹೋದ್ವಿ. ನಿಮ್ಮ ಅಪ್ಪನೋ ಬಾಟಲಿ ಎತ್ತಿದೋನು ಕೆಳಗೆ ಇಳಸಕ್ಕೆ ತಯಾರಿಲ್ಲೆ ಮರಾಯತಿ. ಗಟಾ-ಗಟಾ ಅಂತ ಇಳಸ್ತಾ. ನಾವೆಲ್ಲ ಒಂದು ಬಾಟಲಿಗೆ ಮುಗಸಿದ್ರೆ, ನಿಮ್ಮ ಅಪ್ಪ ಮೂರು ಬಾಟಲಿ ಎತ್ತಿದ. ಅವನ ದೇಹ ಕುಣಿತಾ ಇತ್ತು ನೋಡು. ಇನ್ನೂ ಬೇಕು ಅಂತಲೇ ಕೂತಿದ್ದ. ನಾವೇ ಒತ್ತಾಯ ಮಾಡಿ ಎಳಕೊಂಡು ಬಂದ್ವಿ. ಕಾಡಿನಲ್ಲಿ ಅರ್ಧ ದಾರಿ ನಡದಿದ್ವೆ. ನಿಮ್ಮ ಅಪ್ಪನಿಗೆ ಮುಂದೆ ಹೆಜ್ಜೆ ಇಡಾಕೆ ಆಗ್ಲೇ ಇಲ್ಲೆ. ಇನ್ನೂ ಮಬ್ಬು ಬೆಳಕಿತ್ತು. ಅವಂಗೆ ಆಗ್ಲಿಲ್ಲ ಅಂದ್ರೆ ಆಗ್ಲೇ ಇಲ್ಲ. ದಪ್ಪಂತ ಕಾಡಿನಲ್ಲಿ ನೆಲಕ್ಕೆ ಕೂತೆ ಬಿಟ್ಟ. ನಾವು ನಾಲ್ಕೂ ಜನರು ಅವನ ರಟ್ಟೆ ಹಿಡದು ಏಳದ್ರು ಮಿಸಕಲಿಲ್ಲ. “ನೀವ್ ಮುಂದೆ ಹೋಗ್ರೋ. ಇನ್ನೂ ಬೆಳಕ್ ಅಲ್ದಾ. ನಾ ನಿಧಾನಕ್ಕೆ ಬರ್ತೆ. ನೀವೆಂತ ಚಿಂತೆ ಮಡಡಿ. ಹೊರಡ್ರೊ.” ಅಂತ ಹೇಳಿದ. ನಾವೆಲ್ಲ ಬೆಳಕಿತ್ತಲ್ಲ ಹೆಂಗೂ ಬರ್ತಾ ಅಂತ ಮನೆ ಕಡೆ ಹೋದ್ವಿ. ಕಾಡಲ್ಲಿ ಅರ್ಧ ದಾರಿ ನಡಕೊಂಡು ಬಂದು ಕೂತಿದ್ದ ನಿಮ್ಮ ಅಪ್ಪ ಇನ್ನೂವರೆಗೂ ಮನೆಗೆ ಬರಲಿಲ್ಲ ಅಂದ್ರೆ ಎಂತ ಇದು!” ಆ ದಿನ ನಡೆದ ಘಟನೆಯನ್ನು ವಿಸ್ತಾರವಾಗಿ ಹೇಳಿದನು. ಈ ಕಥೆ ಕೇಳಿ ನೋರಾ ಬೆವೆತು ಹೋದಳು. ಬಿಕ್ಕಳಿಸಿ ಅತ್ತಳು. ಕೈಯಲ್ಲಿ ಹಿಡಿದ ಜೇನು ಬಾಟಲಿ ಜಾರಿ ಚೂಪಾದ ಕಲ್ಲಿನ ಮೇಲೆ ಬಿದ್ದು, ಸೀಳಿ ಜೇನು ಹರಿದು ಹೊರ ಬಂದು ನೆಲದ ಪಾಲಾಯಿತು. ಬಿಕ್ಕಳಿಸುತ್ತಲೆ ನೋರಾ “ಸೀನ್ಯಾ ಅಪ್ಪಂಗೆ ಕತ್ತಲ ಅಂದ್ರೆ ಬಾಳಾ ಹೆದರಿಕೆ. ಅವ ಕತ್ತಲಲ್ಲಿ ಕಾಡು ಹೊಕ್ಕಾ ಅಂದ್ರೆ ಮೂರ್ಛೆ ಹೋಗಿ ಬೀಳ್ತಾ! ಹಂಗೇನಾದ್ರು ಬಿದ್ದು ಹಾಳಾದ್ದು ಯಾವುದಾದ್ರು ಪ್ರಾಣಿ ನುಂಗಿ ಹಕ್ತೇನೊ! ನಾ ಎಂತ ಮಾಡ್ಲಿ ಈಗ. ನಾ ಆಯಿಗೆ ಹೇಳಿದ್ದೆ ಅಪ್ಪನ ಕರಕೊಂಡು ಬರ್ತೆ. ಜೇನು ಮಾರಿ ಮನೆಗೆ ಸಾಮಾನ ತರ್ತೆ ಅಂತ. ಬಾಟಲಿ ಒಡೆದು ಜೇನು ನೆಲದ ಪಾಲಾತು. ಈಗ ಅಪ್ಪನಿಗೆ ಎಂತ ಆತು ಅಂತಲೇ ಸರೀಗೆ ತಿಳೀತಿಲ್ಲೆ.” ತನ್ನ ಇರುವಿಕೆಯನ್ನೇ ಮರೆತು ಮಾರ್ಕೆಟ್ ಮಧ್ಯದಲ್ಲೇ ಹೊರಳಾಡಿ ಬಿಕ್ಕಳಿಸಿ ಅಳತೊಡಗಿದಳು. ಸೇರಿದ ಜನ ಅವಳ ಸಂಕಟ ನೋಡಿ ಮನದಲ್ಲಿ ಮರುಗಿದರು.

ತರಕಾರಿ ತರಲು ಮಾರ್ಕೆಟ್‍ಗೆ ಬಂದಿದ್ದ ದತ್ತಣ್ಣ ಮಾಸ್ತರ್ ಮಂಚಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಟೀಚರ್. ನೋರಾಳ ಸಂಕಟ, ದುಃಖ ಅವರ ಕಿವಿಗೆ ಬಿತ್ತು. ತಿರುಗಿ ನೋಡಿದರೆ ನೋರಾ ನೆಲದ ಮೇಲೆ ಹೊರಳಾಡಿ ಬಿಕ್ಕಳಿಸಿ ರೋದಿಸುತ್ತಿದ್ದಳು. ನೆರೆದ ಜನ ಅವಳ ಸಂಕಟ ನೋಡಿ ಮನದಲ್ಲಿ ಮರುಗಿದರು. ತರಕಾರಿ ಚೀಲವನ್ನು ಅಲ್ಲಿಯೇ ಬಿಟ್ಟು ದತ್ತಣ್ಣ ಮಾಸ್ತರ್ ನೋರಾಳ ಹತ್ತಿರ ಹೋಗಿ, ಅವಳೆಡೆ ಬಾಗಿ ಅವಳನ್ನು ಮೇಲಕ್ಕೆ ಎಬ್ಬಿಸಿ “ಏಳ ಮಗಾ. ಏನಾಯ್ತು? ಯಾಕ ಅಳತಿದ್ದಿಯಾ? ಹಣ ಏನಾದ್ರು ಕಳಕೊಂಡೆಯಾ? ಯಾರ ಜೊತೆ ಬಂದಿದಿಯಾ? ಎಲ್ಲಿ ನಿನ್ನ ಮನೆ?” ಎಂದು ಪ್ರಶ್ನೆಗಳ ಸುರಿಮಳೆಗೈದರು. ದುಃಖದಲ್ಲಿ ಮುಳುಗಿಹೋದ ನೋರಾಳಿಗೆ ಅವರ ಯಾವ ಪ್ರಶ್ನೆಗಳಿಗೂ ಉತ್ತರಿಸುವ ವ್ಯವಧಾನ ಇರಲಿಲ್ಲ. ಅವಳ ಪಕ್ಕದಲ್ಲೇ ನಿಂತಿದ್ದ ಸೀನ್ಯಾ “ದುಡ್ಡು-ಗಿಡ್ಡು ಎಂತ ಕಳದಿಲ್ಲೆ ಬುದ್ದಿ. ಅವಳ ಅಪ್ಪ ಒಂದ ವಾರದಿಂದ ಮನೆ ಕಡೆ ಹೋಗಿಲ್ಲೆ. ಪಾಪದ ಕೂಸು ಅಪ್ಪನ್ನ ಹುಡಕೊಂಡು ಇಲ್ಲಿಗಂಟ ಬಂದದೆ” ಎಲ್ಲವನ್ನು ವಿವರಿಸಿ ಹೇಳಿದನು. ಸಂಪೂರ್ಣ ವಿಷಯ ತಿಳಿದ ಮೇಲೆ ದತ್ತಣ್ಣ ಮಾಸ್ತರ್ ಸೀನ್ಯಾನನ್ನು ಉದ್ದೇಶಿಸಿ “ಇವಳ ಅಪ್ಪ ಕಾಡಲ್ಲೇ ಕಳೆದು ಹೋಗಿರುವುದು ಸತ್ಯವಾದ್ರೆ ಫಾರೆಸ್ಟ್ ಡಿಪಾರ್ಟಮೆಂಟ್‍ಗೆ ವಿಷಯ ತಿಳಿಸಿದರೆ ಅವರು ಅವಳ ತಂದೆಯನ್ನು ಹುಡುಕಿಕೊಡುವಲ್ಲಿ ಸಹಾಯ ಮಾಡುತ್ತಾರೆ.” ಎಂದು ಹೇಳಿ ಫಾರೆಸ್ಟ್ ಡಿಪಾಟ್ಮೆರ್ಂಟ್‍ನಲ್ಲಿ ಸುಪರಿಟೆಂಡೆಟ್ ಆಗಿ ಕೆಲಸ ಮಾಡುತ್ತಿದ್ದ ಅವರ ಶಿಷ್ಯ ರಮೇಶ್ ನಾಯಕ್‍ಗೆ ಕರೆ ಮಾಡಿ ವಿಷಯ ತಿಳಿಸಿದರು. ನೋರಾಳಿಗೆ ಧೈರ್ಯ ತುಂಬುವ ಕೆಲವು ಮಾತುಗಳನ್ನು ಹೇಳಿ ಸೀನ್ಯಾನ ಕಡೆ ಹೊರಳಿ “ನೀನು ಇವಳನ್ನು ಕರೆದುಕೊಂಡು ಫಾರೆಸ್ಟ್ ಆಫೀಸಿಗೆ ಹೋಗು ಅಲ್ಲಿ ರಮೇಶ್ ನಾಯಕ್ ಅನ್ನುವವರನ್ನು ಭೇಟಿ ಆಗು. ಅವರು ನಿಮಗೆ ಎಲ್ಲ ರೀತಿಯಿಂದ ಸಹಾಯ ಮಾಡುತ್ತಾರೆ. ನಾನು ಈಗಾಗಲೇ ಅವರ ಜೊತೆ ಮಾತನಾಡಿದ್ದೇನೆ. ನೀವೇನೂ ಹೆದರಬೇಡಿ. ಎಲ್ಲ ಒಳ್ಳೆಯದೇ ಆಗುತ್ತದೆ” ಎಂದು ಹೇಳಿ ಅವರನ್ನು ಕಳಿಸಿಕೊಟ್ಟರು. ದತ್ತಣ್ಣ ಮಾಸ್ತರ್ ಹೇಳಿದಂತೆ ಸೀನ್ಯಾ ನೋರಾಳನ್ನು ಕರೆದುಕೊಂಡು ಫಾರೆಸ್ಟ್ ಆಫೀಸಿಗೆ ಹೋದನು.

ರಮೇಶ್ ನಾಯಕ್ ಮೊದಲಿನಿಂದಲೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದನು. ಆ ಕಾರಣಕ್ಕಾಗಿಯೇ ಅವನು ಹತ್ತು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದರಲ್ಲೂ ದತ್ತಣ್ಣ ಮಾಸ್ತರ್ ಎಂದರೆ ರಮೇಶ್ ನಾಯಕ್‍ಗೆ ಎಲ್ಲಿಲ್ಲದ ಗೌರವ. ಅವರು ಹೇಳಿದ ಯಾವ ಕೆಲಸವಾದರೂ ಪ್ರಮಾಣಿಕತೆಯಿಂದ ಮಾಡುತ್ತಿದ್ದನು.

ಸೀನ್ಯಾ ಮತ್ತು ನೋರಾ ಫಾರೆಸ್ಟ್ ಆಫೀಸ್‍ನ ಒಳಗೆ ಹೋಗಿ ರಮೇಶ್ ನಾಯಕ್ ಅವರ ಟೇಬಲ್ ಎದುರುಗಡೆ ನಿಂತರು. ಅವರನ್ನು ನೋಡಿದ ಕೂಡಲೆ ರಮೇಶ್ ನಾಯಕ್‍ಗೆ ಅವರು ದತ್ತಣ್ಣ ಮಾಸ್ತರ್ ಕಳಿಸಿದವರೆಂದು ತಿಳಿಯಿತು. ಅವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ತಿಳಿಸಿ ಇಬ್ಬರಿಗೂ ಚಹ, ಬಿಸ್ಕತ್ ತರಿಸಿಕೊಟ್ಟರು. ಅತ್ತು-ಅತ್ತು ನೋರಾಳ ಕಣ್ಣುಗಳು ತ್ರಾಣ ಕಳೆದುಕೊಂಡು ಬತ್ತಿಹೋಗಿದ್ದವು ಅಷ್ಟಿದ್ದರೂ ನೋರಾ ನೀರು ಕುಡಿಯಲು ಸಹ ತಯಾರಿರಲಿಲ್ಲ. ಅವಳ ಹಠ ಕಂಡು ರಮೇಶ್ ನಾಯಕ್ ಅವಳನ್ನು ಸ್ವಲ್ಪ ಗದರಿಸಿ,  ಒತ್ತಾಯ ಮಾಡಿ ಬಿಸ್ಕತ್ ಮತ್ತು ಚಹ ಕೊಟ್ಟರು. ಅವರ ಒತ್ತಾಯಕ್ಕೆ ಮಣಿದು ನೋರಾ ಚಹ ಕುಡಿದಳು. ಸೀನ್ಯಾ ಒಂದು ವಾರದ ಹಿಂದೆ ಏನು ನಡೆಯಿತು ಎನ್ನುವುದನ್ನು ವಿವರವಾಗಿ ತಿಳಿಸಿದನು. ಅವನು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡು ಟೈಪಿಸ್ಟ್​ಗೆ ಈ ವಿಷಯವನ್ನು ಟೈಪ್ ಮಾಡಿ ಅದರ ಪ್ರತಿಯನ್ನು ಕೊಡಲು ತಿಳಿಸಿದರು. ಹತ್ತು ನಿಮಿಷದಲ್ಲಿ ರೋಹಿಣಿ ಟೈಪ್ ಮಾಡಿದ ಪ್ರತಿಯನ್ನು ತಂದು ರಮೇಶ್ ನಾಯಕ್ ಅವರಿಗೆ ನೀಡಿದಳು. ಅದನ್ನು ವಿವರವಾಗಿ ಓದಿ ಅದಕ್ಕೆ ನೋರಾಳ ಹೆಬ್ಬೆರಳಿನ ಸಹಿ ಹಾಕಿಸಿಕೊಂಡು ಅವರಿಬ್ಬರನ್ನು ಕರೆದುಕೊಂಡು ರಾಜು ದೀಕ್ಷಿತ್ ಅಲ್ಲಿಯ ಅರಣ್ಯಾಧಿಕಾರಿಯ ಬಳಿ ಕರೆದುಕೊಂಡು ಹೋದರು. ಸೀನ್ಯಾ ಹೇಳಿದ ವಿಷಯವನ್ನು ರಮೇಶ್ ನಾಯಕ್ ರಾಜು ದೀಕ್ಷಿತ್ ಅವರಿಗೆ ವಿವರಿಸಿ ಹೇಳಿದರು.

ರಾಜು ದೀಕ್ಷಿತ್ ಬಹಳ ದಕ್ಷ, ಪ್ರಾಮಾಣಿಕ ಅಧಿಕಾರಿ. ಈ ಮೊದಲು ಅವರು ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಚಿಕೇರಿಗೆ ವರ್ಗಾವಣೆಗೊಂಡು ಆರು ತಿಂಗಳಾಗಿತ್ತು. ನೋರಾಳ ಕಥೆಯನ್ನು ಕೇಳಿ ಮರುಕಪಟ್ಟರು. ಈ ಕಾಡುಜನ, ಅವರ ಪಾಡು ನೋಡಿ ನೊಂದುಕೊಂಡರು. ನೋರಾಳ ಕಥೆ ಕೇಳಿ ಅವರಿಗೆ ತಮ್ಮ ತಂದೆಯನ್ನು ಕಳೆದುಕೊಂಡಾಗ ಆದ ದುಃಖದ ಅನುಭವವಾಯಿತು. ತಮ್ಮೆಲ್ಲ ಎಮೋಷನ್​ನ್ನು ಹತ್ತಿಕ್ಕಿಕೊಂಡು ನೋರಾಳಿಗೆ “ನೋಡಮ್ಮ, ನಿಮ್ಮ ತಂದೆ ಒಂದು ವೇಳೆ ಕಾಡಿನಲ್ಲೇ ಕಾಣೆಯಾಗಿದ್ದಾರೆ ಖಂಡಿತ ಸಿಗುತ್ತಾರೆ. ಅವರನ್ನು ಪತ್ತೆ ಹಚ್ಚಿಕೊಡುವುದು ನಮ್ಮ ಕರ್ತವ್ಯವಾಗಿದೆ. ನೀನು ಭಯ ಪಡಬೇಡ. ದೇವರಿದ್ದಾನೆ. ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಮ್ಮ ತಂದೆಗೆ ಏನೂ ಆಗುವುದಿಲ್ಲ.” ಎಂದು ಸಮಾಧಾನದ ಮಾತುಗಳನ್ನು ಹೇಳಿ ಕಳಿಸಿದರು.

ನೋರಾ, ಸೀನ್ಯಾ ಕೊಠಡಿಯಿಂದ ಹೊರಬಂದವರೆ ರಮೇಶ್ ನಾಯಕ್ ಅವರ ಕಾಲಿಗೆ ಬಿದ್ದು “ಬುದ್ದಿ, ನಮ್ಮ ಪಾಲಿಗೆ ನೀವೇ ದೇವರು. ಹೆಂಗನ್ನ ಮಾಡಿ ನಮ್ಮ ಗಣಪುನ ಹುಡುಕಿಕೊಡಿ. ನಿಮ್ಮ ಹೆಸರು ಹೇಳಿಕೊಂಡು ದೀಪ ಹಚ್ಚತೇವೆ ಬುದ್ದಿ” ಎಂದು ಗೋಳಾಡಿದರು. ಅವರನ್ನು ಎಬ್ಬಿಸಿ “ಇದೆಂಥ ಮಾಡ್ತಿದ್ದೀರಿ. ಅದು ನಮ್ಮ ಡ್ಯೂಟಿ. ನಾವು ಮಾಡ್ತೇವೆ. ನೀವು ಚಿಂತೆ ಮಾಡಬೇಡಿ ಆಯ್ತಾ. ಎಲ್ಲಾ ಒಳ್ಳೆದಾಗ್ತದೆ. ಸೀನ್ಯಾ ನೀನು ಈ ಮಗೂನ ಹುಷಾರಿಂದ ಕರಕೊಂಡು ಮನೆಗೆ ಹೋಗು. ಇನ್ನು ತಡ ಮಾಡಬೇಡಿ, ಹೊರಡಿ ಕತ್ತಲಾಗೋ ಹೊತ್ತು.” ಎಂದು ಧೈರ್ಯ ಹೇಳಿ ಕಳಿಸಿದರು.

ಸೀನ್ಯಾ ನೋರಾಳನ್ನು ಕರೆದುಕೊಂಡು ಕಾಡು ಪ್ರವೇಶಿಸಿದಾಗ ಮಬ್ಬು ಕತ್ತಲು. ಮುಂದೆ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಅವರನ್ನು ಕತ್ತಲು ಹಿಂಬಾಲಿಸುತ್ತಿತ್ತು. ಪೂರ್ತಿ ಕತ್ತಲು ಅಸಹನೀಯ ಎಂದವಳೆ ನೋರಾ “ಸೀನ್ಯಾ ಕಾಕಾ ಬೇಗ-ಬೇಗ ನಡಿ ಕತ್ತಲಾಗ್ತು, ಆಮೇಲೆ ಕಷ್ಟ” ಎಂದವಳೆ ಬಿರುಸಿನ ಹೆಜ್ಜೆ ಇಡತೊಡಗಿದಳು. ಸೀನ್ಯಾ ಅವಳನ್ನು ಹಿಂಬಾಲಿಸಿದನು. ಕತ್ತಲೂ ಅಷ್ಟೆ ವೇಗವಾಗಿ ಅವರನ್ನು ಬೆನ್ನು ಹತ್ತಿತು. ಕತ್ತಲು ಪೂರ್ತಿಯಾಗಿ ಕವಿಯುವ ಮುನ್ನ ನೋರಾ ಮನೆ ಸೇರಿದಳು. ಸೀನ್ಯಾ ಸಕ್ಕುಗೆ “ಸಕ್ಕು ಗಣಪು ಎಲ್ಲಿ ಹೋದ ಅನ್ನೊದೇ ತಿಳಿತಿಲ್ಲೆ. ನೀ ಚಿಂತಿ ಮಾಡಬೇಡ. ನಿಂಗೆ ನಾ ಇದ್ದೆ” ಹೇಳಿ ತನ್ನ ಮನೆಯ ಕಡೆ ಹೊರಟನು. ಸಕ್ಕುಗೆ ಸೀನ್ಯಾ ಮಾತನಾಡುವ ಧಾಟಿಯೇ ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ಅವಳು ಅವನೊಂದಿಗೆ ಹೆಚ್ಚು ಮಾತಿಗೆ ಇಳಿಯುತ್ತಿರಲಿಲ್ಲ. ಸೀನ್ಯಾ ಹೋರಟು ಹೋದ ಮೇಲೆ ನೋರಾ ತಾಯಿಗೆ ನಡೆದದ್ದನ್ನು ವಿವರಿಸಿ ಹೇಳಿದಳು.

ಮಾರನೆಯ ದಿನ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಬಂದು ನೋರಾಳ ತಾಯಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಗಣಪುನ ಹಾಡಿಯವರನ್ನೆಲ್ಲ ವಿಚಾರಿಸಿದರು. ಈ ಎಲ್ಲ ತನಿಖೆ ಮುಗಿದ ಮೇಲೆ ಅರಣ್ಯದ ಒಳಗೆ ಹೊಕ್ಕು ಶೋಧ ಕಾರ್ಯವನ್ನು ನಡೆಸಿದರು. ದಟ್ಟವಾದ ಅರಣ್ಯ, ಸುರಿಯೋ ಮಳೆ, ಉಂಬಳಗಳ ಕಾಟ ಬೇರೆ. ಎಷ್ಟೇ ತಯಾರಿಯಲ್ಲಿ ಬಂದರೂ ಉಂಬಳಗಳು ಅವರ ಚರ್ಮಕ್ಕೆ ಅಂಟಿಕೊಂಡು ರಕ್ತ ಹೀರದೆ ಬಿಡುತ್ತಿರಲಿಲ್ಲ. ಇನ್ನು ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲೂ ಇಡೀ ಅರಣ್ಯವನ್ನು ಜಾಲಾಡಿದರೂ ಗಣಪುನ ಸುಳಿವು ಸಿಕ್ಕಲಿಲ್ಲ. ಒಂದು ವೇಳೆ ಕಾಡು ಪ್ರಾಣಿ ಅವನನ್ನು ತಿಂದು ಹಾಕಿದ್ದರೂ ಅದರ ಗುರುತು ಸಿಕ್ಕೇ ಸಿಗುತ್ತಿತ್ತು. ಎಲ್ಲೂ ಅಂಥ ಸುಳಿವು ಕಾಣಿಸಿಕೊಳ್ಳಲಿಲ್ಲ. ಒಂದು ವಾರ ನಿರಂತರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ತಮ್ಮ ಅಧಿಕಾರಿಗಳಿಗೆ “ಗಣಪು ಕಾಡಿನಲ್ಲಿ ಕಾಣೆಯಾದ ಬಗ್ಗೆಯಾಗಲಿ ಅಥವಾ ಅವನನ್ನು ಕಾಡು ಪ್ರಾಣಿ ತಿಂದುಹಾಕಿದ ಬಗ್ಗೆಯಾಗಲಿ ಯಾವುದೇ ಸುಳಿವೂ ಇಲ್ಲ” ಎಂಬ ವರದಿಯನ್ನು ಸಲ್ಲಿಸಿದರು. ಇದೇ ಮಾಹಿತಿಯನ್ನು ಸಕ್ಕುಗೂ ತಿಳಿಸಿದರು. “ಇಲ್ಲೂ ಇಲ್ಲೆ. ಅಲ್ಲೂ ಇಲ್ಲೆ. ಬದುಕಿದ್ದಾನೋ ಅಥವಾ ಇಲ್ಲವೊ ಎಂಬೊ ಬಗ್ಗೆಯೂ ಯಾವ ಸುಳಿ ಇಲ್ಲೆ ಎಂದಾದರೆ ಏನರ್ಥ ದೇವರೆ’ ಎಂದು ಸಕ್ಕು ನೋರಾಳನ್ನು ಗಟ್ಟಿಯಾಗಿ ತಬ್ಬಿಕೊಂಡು ರೋದಿಸಿದಳು. ನೋರಾ ತಾಯಿಯನ್ನು ಮಗಳನ್ನು ಸಮಾಧಾನ ಮಾಡುವಂತೆ ಮಾಡಿದಳು.

ರಮೇಶ ನಾಯಕ್ ಸಕ್ಕುಗೆ “ಗಣಪು ಕಾಣೆಯಾಗಿದ್ದಾನೆಂದು ಪೊಲೀಸ್ ಸ್ಟೇಷನ್‍ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬನ್ನಿ. ಅವರು ಎಲ್ಲ ಕಡೆ ವಿಚಾರಿಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯುತ್ತಾರೆ” ಎಂದು ಸಲಹೆ ನೀಡಿದರು. ಸಕ್ಕು ಅವರು ಹೇಳಿದಂತೆ ಮಾಡಲು ತಯಾರಾದಳು. ಒಟ್ಟಿನಲ್ಲಿ ತನ್ನ ಗಂಡ ಮರಳಿ ಮನೆಗೆ ಬಂದರೆ ಸಾಕು ಎನ್ನುವಂತಾಗಿತ್ತು ಅವಳ ಮನಸ್ಥಿತಿ. ನೋರಾಳಿಗೂ ಅಷ್ಟೆ ತಂದೆ ಎಂದರೆ ಪ್ರಾಣ, ತಾಯಿಗಿಂತ ತಂದೆಯ ಜೊತೆ ಅವಳು ಹೆಚ್ಚು ಒಡನಾಟವನ್ನು ಹೊಂದಿದ್ದಳು.

ರಮೇಶ್ ನಾಯಕ್ ಸಕ್ಕು ಮತ್ತು ನೋರಾಳನ್ನು ಕರೆದುಕೊಂಡು ಪೊಲೀಸ್ ಸ್ಟೇಷನ್‍ಗೆ ಹೋಗಿ ನಡೆದ ಘಟನೆಯನ್ನು ವಿವರವಾಗಿ ಹೇಳಿ ಗಣಪುನನ್ನು ಹುಡುಕಿಕೊಡುವಂತೆ ಕಂಪ್ಲೇಟ್ ಕೊಟ್ಟರು. ಮಧುಕರ ನಾಯಕ್ ಆ ಠಾಣೆಯ ಎಸ್‍ಪಿ, ರಮೇಶ ನಾಯಕ್ ಅವರ ಸ್ವಂತ ತಮ್ಮನೇ ಆಗಿದ್ದರಿಂದ ಅವರು ಗಣಪುನ ಕೇಸ್‍ನ್ನು ಬಹಳ ಗಂಭೀರವಾಗಿ ಪರಿಗಣಿಸಿ ಅದೇ ದಿನವೇ ಗೌಪ್ಯ ಕಾರ್ಯಾಚರಣೆಯಲ್ಲಿ ತೊಡಗಿದರು. ಗಣಪು ಮಂಚಿಕೇರಿಯಲ್ಲಿ ಹೆಚ್ಚಾಗಿ ಹೋಗುತ್ತಿದ್ದ ಅಂಗಡಿ-ಮುಂಗಟ್ಟುಗಳಿಗೆ ಹೋಗಿ ವಿಚಾರಿಸಿದರು. ಗಣಪುನ ಹಾಡಿಯವರನ್ನು, ಸುತ್ತ-ಮುತ್ತಲಿನ ಹಾಡಿಯವರನ್ನೆಲ್ಲ ಸ್ಟೇಷನ್‍ಗೆ ಕರೆಸಿ ವಿಚಾರಣೆ ನಡೆಸಿದರು. ಮಂಚಿಕೇರಿಯ ಗಲ್ಲಿ-ಗಲ್ಲಿಗೂ ಹೋಗಿ ವಿಚಾರಿಸಿದರು. ಎಲ್ಲ ಕಡೆಯೂ ವಿಚಾರಿಸಿದಾಗ ಹದಿನೈದು ದಿನಗಳ ನಂತರ ಅವರಿಗೆ ಸಿಕ್ಕ ಮಾಹಿತಿಯ ಪ್ರಕಾರ ಗಣಪುನ ಹಾಡಿಯ ಹುಡುಗ ಮಾಬು ಪೋಲಿಸರು ಅವರ ಹಾಡಿಗೆ ಬಂದು ಹೋದ ಮಾರನೆಯ ದಿನದಿಂದ ನಾಪತೆಯಾಗಿದ್ದನು. ಆ ದಿನವೇ ಅವನು ಯಾಕೆ ನಾಪತ್ತೆಯಾದನು? ಅವನಿಗೂ ಗಣಪು ನಾಪತ್ತೆಯಾಗಿರುವುದಕ್ಕೂ ಏನಾದರು ಸಂಬಂಧ ಇರಬಹುದಾ? ಎಂದು ಊಹಿಸಿದ ಪೋಲಿಸರು ಮಾಬೂನ ಶೋಧದಲ್ಲಿ ನಿರತರಾದರು. ಅವರಿಗೆ ಸಿಕ್ಕ ಮಾಹಿತಿಯ ಪ್ರಕಾರ ಮಾಬು ಹುಬ್ವಳಿಯ ಮಾರ್ಕೆಟ್‍ನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆಂಬ ಮಾಹಿತಿ ದೊರೆಯಿತು. ಸತ್ಯಾಂಶವನ್ನು ತಿಳಿಯಲು ಮಂಚಿಕೇರಿಯ ಪೋಲಿಸರು ಸ್ವತ: ಹುಬ್ಬಳಿಗೆ ಹೋಗಿ ಅಲ್ಲಿನ ಮಾರ್ಕೆಟ್‍ನ ಗಲ್ಲಿಗಲ್ಲಿಯನ್ನು ಜಾಲಾಡಿದರು. ದೂರದಿಂದ  ಪೋಲಿಸರನ್ನು ನೋಡುತ್ತಿದ್ದಂತೆ ಮಾಬು ಓಡಿತೊಡಗಿದನು. ಅವನನ್ನು ಬೆನ್ನು ಹತ್ತಿ ಪೋಲಿಸರು ಕೊನೆಗೂ ಅವನನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆತಂದರು. ಕಾಡು ಮನುಷ್ಯ ಮಾಬು ಎದ್ವತದ್ವ ಓಡುವವ. ಅವನನ್ನು ಬೆನ್ನು ಹತ್ತಿ ಓಡಿದ ಪೋಲಿಸರ ಬಟ್ಟೆಗಳಲ್ಲ ಒದ್ದೆಯಾಗಿದ್ದವು. ಅವರು ಅಷ್ಟು ಬೆವರಿಳಿಸುವಂತೆ ಮಾಡಿದ ಮಾಬೂನ ಮೇಲೆ ಅವರಿಗೆ ಎಲ್ಲಿಲ್ಲದ ಸಿಟ್ಟಿತ್ತು. ಅವನ ಮುಖ, ಮೊಣಕಾಲು, ಬೆನ್ನು, ಕೈ ಎನ್ನದೆ ಸಿಕ್ಕಸಿಕ್ಕ ಜಾಗದಲ್ಲಿ ಲಾಠಿಯಿಂದ ಬಾಸುಂಡೆ ಬರುವ ಹಾಗೆ ಬಾರಿಸಿದರು.

ತಮ್ಮನ್ನು ನೋಡಿ ತಪ್ಪಿಸಿಕೊಳ್ಳಲು ಓಡುತ್ತಿದ್ದ ಮಾಬೂನೇ ಗಣಪುಗೆ ಏನಾದರು ಮಾಡಿರಬೇಕೆಂದು ನಿಶ್ಚಯಿಸಿ “ಹೇಳೋ ಮಗನೆ ಗಣಪುನ ಕೊಂದು ಎಲ್ಲಿ ಅಡಗಿಸಿಟ್ಟಿದ್ದಿಯಾ? ಚೋಟುದ್ದ ಇಲ್ಲ ಕೊಲೆ ಮಾಡತಿಯೇನೊ ಮಗನೆ?” ಹೇಳಿದವರೆ ಲಾಠಿ ಪ್ರಹಾರ ಮಾಡಿದರು. ಎಷ್ಟೇ ಹೊಡೆತ ಬಿದ್ದರೂ ಬಾಯಿ ಬಿಡದ ಮಾಬೂನ ಮೈಯೆಲ್ಲ ರಕ್ತವಾಗಿ ಬೊಬ್ಬೆಗಳೆಲ್ಲ ಎದ್ದಾದ ಮೇಲೆ ತಾನು ಇನ್ನೂ ಸುಮ್ಮನಿದ್ದರೆ ಅವರು ತನ್ನನ್ನು ಕೊಂದೇ ಬಿಡುವರೆಂದುಕೊಂಡು “ಸರ್…. ಹೊಡೆಬೇಡಿ ಸರ್. ನಾ ಎಂತ ಮಾಡಿಲ್ಲೆ. ಬೇರ್ಯಾರೊ ಮಾಡಿದ ತಪ್ಪಿಗೆ ನಂಗ್ಯಾಕೆ ಶಿಕ್ಷೆ ಕೊಡ್ತೀರಿ. ನಮ್ಮ ಆಯಿ ಮೇಲೆ ಆಣೆ ಮಾಡಿ ಹೇಳ್ತೆ ನಾನೇನು ಮಾಡಿಲ್ಲೆ. ನನ್ನ ಬಿಟ್ಟ ಬಿಡಿ ಸರ್” ಗೋಗರೆದನು. ಅವನು ಹಾಗೆ ಹೇಳುತ್ತಿದ್ದಂತೆ ಪೋಲಿಸರಿಗೆ ‘ತಮಗೆ ತಿಳಿಯದ ಏನೋ ಒಂದು ಸಂಗತಿ ಮಾಬೂಗೆ ಗೊತ್ತಿದೆ’ ಎಂದು ಅನ್ನಿಸಿತು. ಪೋಲಿಸರಲ್ಲಿ ಒಬ್ಬನು ಮಾಬೂನ ಬಳಿ ಹೋಗಿ ಸಮಾಧಾನದಿಂದ “ನೀನು ಮಾಡದ ತಪ್ಪಿಗೆ ಯಾಕೆ ಶಿಕ್ಷೆ ಅನುಭವಿಸುತ್ತಿಯಾ. ನಿನಗೆ ಗಣಪುನ ಕುರಿತು ಏನೋ ಗೊತ್ತಿದೆ. ಯಾವ ಮುಚ್ಚು ಮರೆ ಇಲ್ಲದೆ ಹೇಳು. ನಿನಗೆ ನಾವು ಏನೂ ಮಾಡುವುದಿಲ್ಲ. ಹೇದರದೆ ಎಲ್ಲವನ್ನೂ ಹೇಳು. ನೀನು ಹೇಳುತ್ತಿದ್ದಂತೆ ನಿನ್ನನ್ನು ಬಿಟ್ಟು ಮನೆಗೆ ಕಳಿಸುವ ಜವಾಬ್ಧಾರಿ ನಂದು” ಎಂದು ಹೇಳಿದನು. ಅವನ ಮಾತು ಕೇಳಿಯೂ ಕೇಳಿಸದಂತೆ ತಲೆ ತಗ್ಗಿಸಿಕೊಂಡು ನಿಂತಿದ್ದ ಕಾಪೂನ ಕಪಾಳಕ್ಕೆ ಎರಡು ಬಾರಿಸಿದ ಇನ್ನೋರ್ವ ಪೇದೆ  “ಮಗನೆ ಏನು ಆಟ ಆಡತಿದ್ದಿಯಾ? ನೆಟ್ಟಗೆ ಇರೋ ಸತ್ಯ ಹೇಳಿದ್ರೆ ಬದಕ್ಕೋತಿಯಾ ಇಲ್ಲ ಅಂದ್ರೆ ನೀನೇ ಗಣಪೂನನ್ನು ಕೊಂದಿದ್ದಿಯಾ ಎಂದು ನಿನ್ನ ಮೇಲೆ ಕೇಸ್ ಫಿಟ್ ಮಾಡಿ ಸಾಯೋವರೆಗೂ ಜೈಲಿನ ಕಂಬಿ ಎನ್ನಿಸೋತರ ಮಾಡಬಿಡ್ತೇವೆ” ಎಂದು ಗದರಿದರು. ಅವರ ಮಾತಿಗೆ ಮಾಬೂ ನಲುಗಿ ಹೋದನು. ಅವರು ತನ್ನನ್ನು ಬಿಡುವಂತೆ ಕಾಣುವುದಿಲ್ಲವೆಂದುಕೊಂಡು “ಸರ್ ಗಣಪು ನಗೆ ಮಾವ ಆಗಬೇಕು. ನಾನು ನೋರಾಳನ್ನ ಮದುವೆ ಆಗೋ ಹುಡುಗ. ನಾನೆಂತಕೆ ನನ್ನ ಮಾವನ್ನ ಕೊಂದ ಹಾಕ್ಲಿ. ನಾನು ಗಣಪು ಮಾವನ ಗೆಳೆಯರ ತರ ಅಲ್ಲೆ. ಅವಕ್ಕೆ ನಿಯತ್ತೆಂಬುದೆ ಇಲ್ಲೆ” ಮೈಮರೆತು ಎಲ್ಲವನ್ನು ಹೇಳುತ್ತಿದ್ದವನು ಎಚ್ಚರವಾದಂತೆ “ಹಾ! ನಂಗೆ ಎಂತಾನು ಗೊತ್ತಿಲ್ಲೆ. ಅವ ಎಲ್ಲಿ ಹೋದ ಅಂತ ನಂಗೆಂತ ಗೊತ್ತು.” ಅವನ ಈ ತಡವರಿಕೆಯ ಮಾತುಗಳನ್ನು ಕೇಳಿ ಅವರ ಅನುಮಾನ ಇನ್ನೂ ದೃಢವಾಯಿತು. “ಏ ಮಗನೆ ಏನು ಅಂತ ಪೂರ್ತಿ ಹೇಳತೀಯೋ ಇಲ್ಲ ಇಲೇ ಹೂತ ಹಾಕ್ಲಾ!” ಎಂದು ಅವನ ದೇಹದ ಮೇಲೆ ಲಾಠಿಯನ್ನು ಬೀಸಿದರು. “ಅಯ್ಯೋ ಸಾಯಿಸಬೇಡ್ರಿ ಸರ್. ಹೇಳ್ತೆ. ನಾ ಎಲ್ಲ ಹೇಳ್ತೆ” ಎಂದವನೆ ನಲುಗಿ, ಕುಸಿದು ಕೆಳಗೆ ಬಿದ್ದನು. ದೇಹವನ್ನು ಮುದುಡಿಕೊಂಡು “ಆ ದಿನ ಗಣಪು ಮಾವ, ಸೀನ್ಯಾ ಮಾವ, ಚೋಟ್ಯಾ, ಬೀರ ಮತ್ತೆ ಕಾಳ್ಯಾ ಅವರೆಲ್ಲ ಸಂತೆ ಮಾಡಿಕೊಂಡು ಬರ್ತಾ ಚೆನ್ನಾಗಿ ಸಾರಾಯಿ ಕುಡಿದು ಕಾಡು ಹೊಕ್ಕರು. ಅರ್ಧ ದಾರಿಗೆ ಬಂದಿದ್ದರು ಅದೇನು ಮಾತಾತೋ ಗೊತ್ತಿಲ್ಲೆ ಸೀನ್ಯಾ ಮಾವ, ಚೋಟ್ಯಾ, ಬೀರ ಮತ್ತೆ ಕಾಳ್ಯಾ ಅವರೆಲ್ಲ ಗಣಪು ಮಾವನನ್ನು ಎಳೆದಾಡಿ ನೆಲಕ್ಕೆ ತಳ್ಳಿ ತಮ್ಮ ಕಾಲುಗಳಿಂದ ಅವನ ಎದೆಗೆ ಒದ್ದರು. ಗಣಪು ಮಾವನ ಉಸಿರು ನಿಲ್ಲುವವರೆಗೂ ಬಿಡಲಿಲ್ಲ” ಎಂದು ಹೇಳುವಾಗ ಮಾಬೂನ ಮುಖ ಬೆವತಿತ್ತು. “ಮುಂದೇನಾತು. ಇದೆಲ್ಲ ನಿಂಗೆ ಹೇಗೆ ಗೊತ್ತಾಯಿತು. ನೀನೆಲ್ಲಿದ್ದೆ ಆವಾಗ?” ಎಂದು ಕೇಳಿದರು. “ನಾನು ಮಾವಿನ ಮರ ಏರಿ ಮಾವಿನ ಹಣ್ಣನ್ನು ಕಿತ್ತಕೋತಾಯಿದ್ದೆ. ನನ್ನ ನೋರಾಗೆ ಮಾವು ಎಂದರೆ ಬಲು ಪ್ರೀತಿ ಅದಕ್ಕೆ ಅವಳಿಗೆ ಕೊಡುವ ಅಂತ ಕಿತ್ತಕೋತಾಯಿದ್ದೆ. ನಂಗೆ ಅವು ಎಂತ ಮಾಡತಿದ್ವು ಗೊತ್ತಾಗತಿತ್ತು. ಆದರೆ ಅವು ನನ್ನನ್ನ ನೋಡಿರಲಿಲ್ಲೆ. ನಾನು ಅವು ಗಣಪು ಮಾವನನ್ನ ಚಚ್ಚಿ ಸಾಯಿಸೋದನ್ನ ನೋಡ್ತ್ಲೇ ಇದ್ದೆ. ಗಣಪೂ ಮಾವ ಒದ್ದಾಡ್ತ ಬಿದ್ದಿದ್ದನ್ನ ನೋಡಕಾಗ್ಲಿಲ್ಲೇ. ನಾನು ಕೆಳಗೆ ಹಾರಿ ಅವನ್ನ ಕಾಪಾಡಬೇಕು ಅನಕೊಂಡೆ ಆದ್ರೆ ಧೈರ್ಯ ಸಾಲಲಿಲ್ಲೆ. ಅವು ನಾಲ್ಕು ಜನ, ನಾನು ಒಬ್ಬನೆ ಎಂತ ಮಾಡ್ಲು ಆಗತು ಅಂತ ಇಳಿಲಿಲ್ಲೆ. ಮಾವನ್ನ ಸಾಯಿಸಿ ಅವರು ಅವನ ದೇಹವನ್ನ ಎಳಕೊಂಡು ತಕ್ಕೊಂಡು ಹೋದ್ರು. ಆ ಮೇಲೆ ಅದನ್ನ ಎಂತ ಮಾಡಿದ್ರು ಅಂತ ನಂಗೆ ದೇವರಾಣೆಗೂ ನಂಗೆ ಗೊತ್ತಿಲ್ಲೆ” ಎಂದು ಆ ದಿನ ತಾನು ಕಂಡ ಸತ್ಯವನ್ನು ವಿವರಿಸಿ ಹೇಳಿದನು.

ಸೀನ್ಯಾ ಮತ್ತು ಅವನ ಗೆಳೆಯರನ್ನು ವಿಚಾರಿಸಿದಾಗ ಅವರು ಹೇಳಿದ್ದ ಕಥೆಯೇ ಬೇರೆ. ಇನ್ನು ಕಾಪೂ ಹೇಳುತ್ತಿರುವ ಕಥೆಯೇ ಬೇರೆ. ಇದರಲ್ಲಿ ಸತ್ಯ ಕಥೆ ಯಾವುದು ಎಂಬುದನ್ನು ತಿಳಿಯಬೇಕಾದರೆ ಸೀನ್ಯಾ ಮತ್ತು ಅವನ ಗೆಳೆಯರನ್ನು ಮತ್ತೆ ಕರೆಸಿ ಚೆನ್ನಾಗಿ ಬಾರಿಸಿ ವಿಚಾರಿಸಬೇಕು ಎಂದು ನಿರ್ಧರಿಸಿದರು. ಆ ಕ್ಷಣವೇ ಅವರುಗಳ ಹಾಡಿ ಹೊಕ್ಕು ಸ್ಟೇಷನ್ನಿಗೆ ಎಳೆದು ತಂದರು. ಕೊಡಬಾರದ ಹಿಂಸೆ ನೀಡಿದಾಗ ಸೀನ್ಯಾ “ಹೌದ್ರಿ ಸಾಹೇಬ್ರ ನಾನೇ ಗಣಪುನ ಕೊಂದದ್ದು. ನಂಗೆ ಅವನ್ನ ಕಂಡ್ರೆ ಮೊದಲಿಂದ್ಲು ಸಿಟ್ಟಿತ್ತು. ಅವ ನಾ ಮದುವೆ ಆಗಬೇಕಿದ್ದ ಹುಡುಗೀಗೆ ಮದುವೆ ಆಗಿದ್ದ. ಅದು ಹೋಗ್ಲಿ ಬಿಡು ಅಂತ ಬಿಟ್ಟಿದ್ದೆ. ಈಗ ಅವನ ಮಗಳನ್ನ ನನ್ನ ಮಗನಿಗೆ ಕೊಟ್ಟು ಮದುವೆ ಮಾಡು ಅಂದಿದ್ದಕ್ಕೆ ‘ಆಗಲ್ಲೆ’ ಎಂದು ಕಡ್ಡಿ ತುಂಡು ಮಾಡಿದಂಗೆ ಹೇಳ್ದ. ಅವಂಗೆ ಎಂತ ಸೊಕ್ಕು ಅಂತೀರಿ. ಅವನ ಆ ಸೊಕ್ಕು ಮುರಿಯೋದು ಅವ ಸತ್ತಾಗಲೆ ಎಂದುಕೊಂಡಿದ್ದೆ. ಆವೊತ್ತು ಸಂತೆ ಮುಗಿಸಿ ಬರಬೇಕಾದರೆ ಮೊದಲೆ ಎಲ್ಲ ಅನಕೊಂಡೆ ಹೋಗಿದ್ವಿ. ಬರೋವಾಗ ಅವಂಗೆ ಒತ್ತಾಯ ಮಾಡಿ ಚೆನ್ನಾಗಿ ಸರಾಯಿ ಕುಡಿಸಿದ್ದು ನಾವೇ ಆಗಿತ್ತು. ಕಾಡಿನ ಮಧ್ಯೆ ಬರೋವಾಗ ಅವನನ್ನ ನೆಲಕ್ಕೆ ಉರುಳಿಸಿ ಅವನ ಎದೆಗೆ ಚೆನ್ನಾಗಿ ಒದ್ದು ಸಾಯಿಸಿದೆವು. ಯಾರಿಗೂ ಗೊತ್ತಾಗಬಾರದೆಂದು ಅವನ ದೇಹವನ್ನ ನನ್ನ ಹಟ್ಟಿಯೊಳಗೆ ತಕ್ಕಂಡು ಹೋಗಿ ಒಲೆಯನ್ನು ಬಗೆದು ಅದರ ಕೆಳಗೆ ಹೂತು ಹಾಕಿದೆವು. ಆಮೇಲೆ ಆ ಒಲೆಗಳನ್ನು ಹಾಗೆ ಸರಿಮಾಡಿ ಹುಗುದು ಹಾಕಿದೆವು. ಅವನ ದೇಹ ಮಣ್ಣು ಸೇರಿದ ಮೇಲೆ ನಂಗೆ ಹಗುರಾತು.” ಎಂದು ಜೋರಾಗಿ ರೋದಿಸತೊಡಗಿದನು. ಅವನ ಮಾತುಗಳನ್ನು ಖಾತ್ರಿ ಪಡಿಸಿಕೊಳ್ಳಲು ಮರುದಿನ ಪೋಲಿಸ್ ಪಡೆ ಸೀನ್ಯಾನ ಹಾಡಿ ಹೊಕ್ಕು ಅವನ ಅಡುಗೆ ಮನೆಯ ಒಲೆಯನ್ನು ಬಗೆದು ನೋಡಿದರೆ ಗಣಪುನ ದೇಹ ಕೊಳೆತು ಮಣ್ಣಲ್ಲಿ ಒಂದಾಗಿ ಹೋಗಿತ್ತು.

ಬೆಳಗಾಗುವವರೆಗೂ ಈ ಕಥೆಯನ್ನು ಬರೆದು ಮುಗಿಸಿದಾಗ ನನಗೆ ಗೊತ್ತಿಲ್ಲದಂತೆ ಸಕ್ಕು, ನೋರಾಳ ಭವಿಷ್ಯವನ್ನು ನೆನೆದು, ಅವರಿಗಾಗಿರಬಹುದಾದ ಸಂಕಟವನ್ನು ನೆನೆದು ಕಣ್ಣಾಲಿಗಳು ಒದ್ದೆಯಾಗಿದ್ದವು. ಅಷ್ಟೊತ್ತಿಗೆ ನನ್ನ ಅಮ್ಮ ಎದ್ದು ತನ್ನ ರೂಮ್‍ನ ಬಾಗಿಲು ತೆಗೆದು ನೋಡಿದಳು. ಹತ್ತಿರ ಬಂದವಳೆ ಏನಾಯ್ತು ಕೇಳಿದಳು. ನಾನು ಏನೂ ಇಲ ಎನ್ನುವಂತೆ ಕತ್ತು ಅಲ್ಲಾಡಿಸಿದೆನು. ರಾತ್ರಿಯೆಲ್ಲ ಮಲಗೇ ಇಲ್ಲವೇನು ಎಂದು ಗೊಣಗುತ್ತ ಮುಖ ತೊಳೆಯಲು ಬಾತ್‍ರೂಮ್ ಪ್ರವೇಶಿಸಿದಳು. ನಾನು ಹೀಗೆ ರಾತ್ರಿಯೆಲ್ಲ ಎಚ್ಚರವಿದ್ದು ಬರೆಯುತ್ತ ಕೂರುವುದನ್ನು ನೋಡಿ ಮನೆಯವರಿಗೆಲ್ಲ ರೂಢಿಯಾಗಿತ್ತು.

—–

ವಿಜಯಲಕ್ಷ್ಮೀ ದಾನರಡ್ಡಿ

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸರ್ಕಾರ್ಇ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ. ಕಥೆ, ಕವನ, ಕಾದಂಬರಿ ಬರೆಯುವುದು, ಶಾಲಾ ಮಕ್ಕಳಿಗೆ ಪ್ರೇರಕ ಉಪನ್ಯಾಸ ನೀಡುವುದು ಹವ್ಯಾಸ. ಹಲವಾರು ಕಥೆ, ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಕಟಿತ ಕೃತಿಗಳು: ಅರಿವು ( ಕಾದಂಬರಿ), ವಿಷ್ಣುವಿನ ನಾಮ (ಖುಷ್ವಂತ್ ಸಿಂಗ್ ಅವರ ಕೃತಿಯ ಅನುವಾದ),

Journalist,Translator,avid bibliophile

Leave a Reply

Your email address will not be published. Required fields are marked *

Back To Top