ಯುಜಿಸಿ, ಸುಪ್ರೀಂ ಮತ್ತು ಸಮಾನತೆಯ ಅವಸಾನ

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಹೊಸ ನಿಯಮಗಳನ್ನು ವಿರೋಧಿಸಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲ್ಜಾತಿಗಳು- ಸಾಮಾನ್ಯ ವರ್ಗದ ವಿದ್ಯಾರ್ಥಿ ಗಳು ಪ್ರತಿಭಟನೆ ಆರಂಭಿಸಿದ್ದರು. ಬಿಜೆಪಿಯ ರಾಜಕೀಯ ಶಿಲ್ಪದ ಬುನಾದಿಯಾದ ಯುವಜನರಲ್ಲಿ ಜಾತಿ ಆಧರಿತ ಧ್ರುವೀಕರಣವು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆ ಇತ್ತು. ಆದರೆ, ಸುಪ್ರೀಂ ತೀರ್ಪಿನಿಂದ 2026ರಲ್ಲಿ ನಡೆಯ ಲಿರುವ ಮತ್ತು 2027ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿದ್ದ ಕಂಟಕವೊಂದು ನಿವಾರಣೆ ಆಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಕುರಿತ ಯುಜಿಸಿಯ 2012ರ ನಿಯಮಗಳನ್ನು ಪ್ರಶ್ನಿಸಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ಮತ್ತು ಪಾಯಲ್ ತಡ್ವಿ ಅವರ ತಾಯಿ ಅಬೀದಾ ಸಲೀಂ ತಡ್ವಿ ಅವರು 2019 ರಲ್ಲಿ ಅರ್ಜಿ ಸಲ್ಲಿಸಿ, ಈ ನಿಯಮಗಳು ಸಮಾನತೆಯನ್ನು ಉತ್ತೇಜಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದರು. ತಾರತಮ್ಯ ನಿವಾರಿಸಲು ಹೊಸ ಸೂತ್ರ ರೂಪಿಸ ಬೇಕೆಂದು ಸುಪ್ರೀಂ ಆದೇಶಿಸಿತ್ತು. ನಿಯಮಗಳನ್ನು ಮರುಪರಿಶೀಲಿಸಲು ಪ್ರೊ.ಶೈಲೇಶ್‌ ಎನ್.ಜಲಾ ನೇತೃತ್ವದ ಪರಿಣತ ಸಮಿತಿಯನ್ನು ರಚಿಸಿರುವುದಾಗಿ ಯುಜಿಸಿ ವಿಚಾರಣೆ ವೇಳೆ ಹೇಳಿತ್ತು. ಯುಜಿಸಿ ಸೆಪ್ಟೆಂಬರ್‌ 2025ರಲ್ಲಿ ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ನೂತನ ನಿಯಮಗಳನ್ನು ರೂಪಿಸಿತು. 7 ವರ್ಷ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‌ ಜನವರಿ 13, 2026ರಂದು ಹೊಸ ನಿಯಮಗಳನ್ನು ಪ್ರಕಟಿಸಿತು. ತಕ್ಷಣ ಪ್ರತಿಭಟನೆ ಆರಂಭವಾಯಿತು. ಪ್ರತಿಭಟನೆಯ 16ನೇ ದಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾ. ಉಜ್ಜಲ್ ಭುಯಾನ್‌ ನೇತೃತ್ವದ ಪೀಠ ಆದೇಶಕ್ಕೆ ತಡೆ ನೀಡಿತು ಮತ್ತು 2012 ನಿಯಮಗಳು ಚಾಲ್ತಿಯಲ್ಲಿರಲಿವೆ ಎಂದು ಹೇಳಿತು. ಸುಪ್ರೀಂ ಆದೇಶವನ್ನು ಎಸ್ಸಿ/ಎಸ್ಟಿ/ಒಬಿಸಿ ವಿದ್ಯಾರ್ಥಿಗಳ ಸಂಘಟನೆ, ಜೆಎನ್‌ಯು ವಿದ್ಯಾರ್ಥಿಗಳ ಸಂಘ (ಜೆಎನ್‌ಯುಎಸ್‌ಯು), ಪ್ರಕಾಶ್‌ ಅಂಬೇಡ್ಕರ್(ವಂಚಿತ್‌ ಬಹುಜನ್‌ ಅಘಾಡಿ), ಸಂಸದ ಜಾನ್‌ ಬ್ರಿಟ್ಟಾಸ್(ಸಿಪಿಐಎಂ), ಸ್ಟಾಲಿನ್(ಡಿಎಂಕೆ) ಮತ್ತು ಸಂಸದ ಮನೋಜ್‌ ಕುಮಾರ್‌ ಝಾ(ಆರ್‌ಜೆಡಿ) ವಿರೋಧಿಸಿದರು. ತಮಾಷೆ ಎಂದರೆ, ಮಾಯಾವತಿ(ಬಿಎಸ್‌ಪಿ), ಅಖಿಲೇಶ್‌ ಯಾದವ್(ಎಸ್ಪಿ), ಕಲ್ಯಾಣ್‌ ಬ್ಯಾನರ್ಜಿ(ಟಿಎಂಸಿ), ಸಂಸದೆ ಪ್ರಿಯಾಂಕ ಚತುರ್ವೇದಿ(ಶಿವಸೇನೆ-ಯುಬಿಟಿ), ಪ್ರಮೋದ್‌ ತಿವಾರಿ(ಕಾಂಗ್ರೆಸ್)‌ ಸ್ವಾಗತಿಸಿದರು!

2012 ಮತ್ತು 2026ರ ನಿಯಮ: 2006ರಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೀಸಲು ಪರಿಚಯಿಸಿದ ನಂತರ, ಕ್ಯಾಂಪಸ್‌ಗಳಲ್ಲಿ ಒಬಿಸಿ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಯುಜಿಸಿ 2012ರಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆಯನ್ನು ಪ್ರೋತ್ಸಾಹಿಸಲು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಸಂಸ್ಥೆಗಳ ಕ್ಯಾಂಪಸ್‌ನಲ್ಲಿ 25 ವಿಧದ ತಾರತಮ್ಯಗಳನ್ನು ಗುರುತಿಸಿತ್ತು. ಸೂತ್ರದಲ್ಲಿ ತಾರತಮ್ಯ ಎಂಬುದನ್ನು ವಿಸ್ತೃತ ಅರ್ಥದಲ್ಲಿ ಬಳಸಿತ್ತು- ಜಾತಿ, ಧರ್ಮ, ಭಾಷೆ, ಲಿಂಗ, ಜನಾಂಗ, ವೈಕಲ್ಯ ಮತ್ತು ನಂಬಿಕೆಯನ್ನು ಆಧರಿಸಿ ಅವಕಾಶಗಳನ್ನು ತಪ್ಪಿಸುವುದು. ಇವುಗಳನ್ನು ಆಧರಿಸಿ ಶಿಕ್ಷಣಕ್ಕೆ ಪ್ರವೇಶಾವಕಾಶ ನಿರಾಕರಣೆ, ಘನತೆಗೆ ವಿರುದ್ಧವಾದ ಅಮಾನವೀಯ ಶರತ್ತು ವಿಧಿಸುವುದು ಇತ್ಯಾದಿ ತಾರತಮ್ಯ ಎಂದು ಹೇಳಿತ್ತು. ಈ ನಿಯಮಗಳಡಿ ಸಮಾನಾವಕಾಶ ಕೋಶಗಳು, ಎಸ್ಸಿ/ಎಸ್ಟಿ ಕೋಶಗಳು ಹಾಗೂ ತಾರತಮ್ಯ ವಿರೋಧಿ ಅಧಿಕಾರಿಯನ್ನು ನೇಮಿಸಲು ಅವಕಾಶವಿತ್ತು.

2026ರ ನೂತನ ನಿಯಮಗಳ ವ್ಯಾಪ್ತಿ ವಿಸ್ತಾರವಾಗಿತ್ತು; ನಿಯಮ 3(ಸಿ) ಪ್ರಕಾರ, ʻಜಾತಿ ಆಧರಿತ ತಾರತಮ್ಯʼ ಎಂದರೆ, ʻಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಸದಸ್ಯರ ಮೇಲಿನ ಜಾತಿ ಇಲ್ಲವೇ ಬುಡಕಟ್ಟು ಆಧರಿತ ತಾರತಮ್ಯʼ. ತಾರತಮ್ಯ ಎಂದರೆ ʼಧರ್ಮ, ಜನಾಂಗ, ಲಿಂಗ, ಜನ್ಮಸ್ಥಳ, ಜಾತಿ, ಅಂಗವೈಕಲ್ಯ ಅಥವಾ ಇವುಗಳಲ್ಲಿ ಯಾವುದೇ ಒಂದನ್ನು ಆಧರಿಸಿದ ವ್ಯಕ್ತ ಹಾಗೂ ಅವ್ಯಕ್ತವಾದ ಅನ್ಯಾಯದ, ವ್ಯತ್ಯಾಸದ ಇಲ್ಲವೇ ತಾರತಮ್ಯದ ಅಥವಾ ಅಂಥ ಯಾವುದೇ ವರ್ತನೆʼ. ಪರಿಶಿಷ್ಟ ಜಾತಿ-ಪಂಗಡ, ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದ ವರ್ಗ, ಆರ್ಥಿಕ ದುರ್ಬಲ ವರ್ಗ ಮತ್ತು ವಿಶೇಷಚೇತನರು ಉನ್ನತ ಶಿಕ್ಷಣ ಪಡೆಯಲು ಉತ್ತೇಜಿಸುವುದು ಉದ್ದೇಶ. ಇದರಡಿ ಉನ್ನತ ಶಿಕ್ಷಣ ಸಂಸ್ಥೆಗಳು,
ಎ) ತಾರತಮ್ಯವನ್ನು ಪರಿಹರಿಸಲು ಸಮಾನಾವಕಾಶ ಕೇಂದ್ರ (ಇಒಸಿ), ಸಮಾನಾವಕಾಶ ಸಮಿತಿ ಮತ್ತು ದಳಗಳನ್ನು ರಚಿಸಬೇಕು.
ವಿಶ್ವವಿದ್ಯಾನಿಲಯ, ಕಾಲೇಜು ಮತ್ತು ಪರಿಭಾವಿತ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ. ಸಮಾನಾವಕಾಶ ಕೇಂದ್ರವು ಅನನುಕೂಲಕರ ಗುಂಪುಗಳಿಗೆ ನೀತಿಗಳನ್ನು ಜಾರಿಗೊಳಿಸುತ್ತದೆ, ಜಿಲ್ಲಾ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು ಅಗತ್ಯವಿದ್ದಾಗ ಕಾನೂನು ನೆರವು ಒದಗಿಸುತ್ತದೆ. ಈ ಕೇಂದ್ರದಲ್ಲಿ ಐವರು ಅಧ್ಯಾಪಕ ಸದಸ್ಯರು ಇರಬೇಕು. ಸಂಸ್ಥೆಯ ಮುಖ್ಯಸ್ಥರ ನೇತೃತ್ವದ ಸಮಾನಾವಕಾಶ ಸಮಿತಿಯಲ್ಲಿ ಹತ್ತು ಸದಸ್ಯರು ಇರಲಿದ್ದು, ಇವರಲ್ಲಿ ಅರ್ಧದಷ್ಟು ಮೀಸಲು ವರ್ಗ(ಎಸ್ಸಿ, ಎಸ್ಟಿ, ಒಬಿಸಿ, ವೈಕಲ್ಯ ಇರುವವರು ಮತ್ತು ಮಹಿಳೆಯರು)ಕ್ಕೆ ಸೇರಿದವರು ಇರುತ್ತಾರೆ. ದೂರು ನೀಡಿದ 24 ಗಂಟೆಗಳ ಒಳಗೆ ಸಭೆ ಸೇರಿ, 15 ದಿನಗಳೊಳಗೆ ವರದಿ ನೀಡಿ, 7 ದಿನಗಳಲ್ಲಿ ಕ್ರಮ ಕೈಗೊಳ್ಳುತ್ತಾರೆ. ಸಮಾನಾವಕಾಶ ದಳಗಳು ಕ್ಯಾಂಪಸ್‌ಗಳ ಮೇಲ್ವಿಚಾರಣೆ ಮಾಡುತ್ತವೆ; ತಾರತಮ್ಯವನ್ನು ತಡೆಗಟ್ಟುತ್ತವೆ ಮತ್ತು ದೂರುಗಳಿಗೆ ಪ್ರತಿಕ್ರಿಯಿ ಸುತ್ತವೆ.
ಬಿ) ಶಿಕ್ಷಣ ಸಂಸ್ಥೆಗಳು 24 ಗಂಟೆಗಳ ʻಸಹಾಯವಾಣಿ’ ಹಾಗೂ ಸಮಾನಾವಕಾಶ ರಾಯಭಾರಿಗಳನ್ನು ನೇಮಿಸಬೇಕು ಮತ್ತು
ಸಿ) ಯುಜಿಸಿಯು ನಿಯಮಗಳ ಅನುಸರಣೆಯ ಮೇಲ್ವಿಚಾರಣೆ ಮಾಡುತ್ತದೆ; ಅನುಸರಿಸದ ಸಂಸ್ಥೆಗಳು ಅನುದಾನ ಮತ್ತು ಅಧಿಕೃತತೆ(ಅಕ್ರಡಿಷನ್‌) ಕಳೆದುಕೊಳ್ಳುವ ಸಾಧ್ಯತೆಯಿದೆ.
ಈ ನಿಯಮಗಳು ಕ್ಯಾಂಪಸ್‌ಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಮೊದಲ ಪ್ರಗತಿಪರ ನಡೆಯಾಗಿದ್ದವು.

ವಿರೋಧಕ್ಕೆ ಕಾರಣ: ʻಜಾತಿ ಆಧರಿತ ತಾರತಮ್ಯʼದ ವ್ಯಾಖ್ಯಾನವು ʻಸಾಮಾನ್ಯ ವರ್ಗ'(ಸವರ್ಣ ಜಾತಿಗೆ ಸೇರಿದವರು) ಅಥವಾ ಮೇಲ್ಜಾತಿಗಳಿಗೆ ವಿರುದ್ಧವಾಗಿದೆ; ನಿಯಮಗಳು ಜಾತಿ ತಾರತಮ್ಯಕ್ಕೆ ಮೇಲ್ಜಾತಿ/ಸಾಮಾನ್ಯ ವರ್ಗಗಳೇ ಕಾರಣ ಎನ್ನುವಂತೆ ಬಿಂಬಿಸುತ್ತವೆ. ಇದರಿಂದ ಈ ಗುಂಪಿಗೆ ಕಿರುಕುಳ ಹೆಚ್ಚುತ್ತದೆ. ಸುಳ್ಳು ದೂರುಗಳಿಗೆ ಶಿಕ್ಷೆ ವಿಧಿಸದೆ ಇರುವುದು ಸರಿಯಲ್ಲ. ನಿಯಮಗಳು ಕ್ಯಾಂಪಸ್‌ನ್ನು ವಿಭಜಿಸುತ್ತದೆ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಖಳನಾಯಕರಂತೆ ಚಿತ್ರಿಸುತ್ತದೆ ಎಂದು ದೂರು. ಇಡಬ್ಲ್ಯುಎಸ್‌ ಲಾಭ ಪಡೆದವರನ್ನು ʻಸುಧಾಮ ಕೋಟಾವಾಲೆʼ ಎಂದು ಹಂಗಿಸುವುದು ಕೂಡ ತಾರತಮ್ಯ ಎನ್ನುವುದು ಪ್ರತಿಆರೋಪ.

ದೋಷಪೂರಿತ ತೀರ್ಪು: ನ್ಯಾಯಾಲಯ ನೀಡಿದ ಕಾರಣಗಳೆಂದರೆ, * ಜಾತಿ ಆಧರಿತ ಗುಂಪುಗಳು ಹೆಚ್ಚುತ್ತವೆ ಮತ್ತು ಬೇರೆ ಜಾತಿಗಳೊಟ್ಟಿಗೆ ಬೆರೆಯುವಿಕೆ ಕಡಿಮೆಯಾಗಲಿದೆ; ಇದರಿಂದ ವೈವಿಧ್ಯತೆ ಕುಸಿಯುತ್ತದೆ * ತಾರತಮ್ಯದ ದೂರು ನೀಡಿದಾತ ಕೋರಿದರೆ ಆತನ ಗುರುತು ಗೋಪ್ಯವಾಗಿ ಇಡಲಾಗುತ್ತದೆ ಎಂಬ ನಿಯಮದ ದುರುಪಯೋಗದ ಸಾಧ್ಯತೆ ಇದೆ. ಇದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾದುದು. * ಸಾಮಾನ್ಯ ವರ್ಗದವರು ಮಾತ್ರ ತಾರತಮ್ಯ ಮಾಡುತ್ತಾರೆ ಎನ್ನುವುದು ಸರಿಯಲ್ಲ.

ಸಮಾನತೆಗೆ ಸಂಬಂಧಿಸಿದಂತೆ 2 ಧಾರೆಗಳಿವೆ- ಔಪಚಾರಿಕ ಮತ್ತು ಕಾಯಂ. ಔಪಚಾರಿಕ ಸಮಾನತೆ ಎಂದರೆ ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಎಂಬ ಚಿಂತನೆ. ಇದು ಯುಟೋಪಿಯಾ; ವಾಸ್ತವದಲ್ಲಿ ಇರುವಂಥದ್ದಲ್ಲ. ಕಾಯಂ ಸಮಾನತೆಯ ಸಮರ್ಥಕರ ಪ್ರಕಾರ, ನಮ್ಮ ಸಮಾಜ ಎಂದೂ ಸಮಾನವಾಗಿರಲಿಲ್ಲ; ಆದ್ದರಿಂದ, ಕಾನೂನುಗಳು ಕೆಲವು ಗುಂಪು(ಮಹಿಳೆ, ಪರಿಶಿಷ್ಟ ಜಾತಿ/ ವರ್ಗಗಳು, ವೈಕಲ್ಯ ಇರುವವರು)ಗಳು ಶತಮಾನಗಳಿಂದ ಅನುಭವಿಸಿರುವ ಅನನುಕೂಲ ಹಾಗೂ ತಾರತಮ್ಯವನ್ನು ಪರಿಗಣಿಸಬೇಕು ಮತ್ತು ಅದನ್ನು ನಿವಾರಿಸುವಂತೆ ವ್ಯವಸ್ಥೆಯನ್ನು ವಿನ್ಯಾಸಗೊಳಿ ಸಬೇಕು. ʻಜಾತಿ ಆಧರಿತ ತಾರತಮ್ಯʼ ವನ್ನು ಚಾರಿತ್ರಿಕವಾಗಿ ಬದಿಗೊತ್ತಲ್ಪಟ್ಟ ಜಾತಿ-ಸಮುದಾಯಗಳ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ಜಾತಿ ಎನ್ನುವುದು ತಟಸ್ಥ ಸಾಮಾಜಿಕ ಗುರುತಲ್ಲ; ಆಳವಾಗಿ ಬೇರೂರಿರುವ ಶ್ರೇಣೀಕೃತ ವ್ಯವಸ್ಥೆ. ಭೌತಿಕ ಕಸಿದುಕೊಳ್ಳುವಿಕೆ, ಸಾಮಾಜಿಕ ಹೊರತಾಗಿಸುವಿಕೆ ಮತ್ತು ಸಾಂಸ್ಥಿಕ ಪಕ್ಷಪಾತಗಳಿಂದ ಅದನ್ನು ಕಾಯ್ದುಕೊಳ್ಳಲಾಗಿದೆ. ಜಾತಿ ಆಧರಿತ ತಾರತಮ್ಯವನ್ನು ಪ್ರಬಲರು-ದುರ್ಬಲರು ಇಬ್ಬರಿಗೂ ಅನ್ವಯವಾಗುವಂತೆ ಸೂತ್ರೀಕರಿಸುವುದರಿಂದ, ಜಾತಿ ಎನ್ನುವುದು ಆಧಿಪತ್ಯ ವ್ಯವಸ್ಥೆಯ ರಾಚನಿಕ ವಾಸ್ತವ ಎನ್ನುವುದನ್ನು ಕಡೆಗಣಿಸಿದಂತೆ ಆಗಲಿದೆ. ಇದರಿಂದ ಸಮಾನತೆಯ ಕಾನೂನುಗಳು ತಟಸ್ಥಗೊಳಿಸುವಿಕೆ-ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧನವಾಗುತ್ತದೆಯೇ ಹೊರತು ಅಸಮಾನತೆಯನ್ನು ತೊಡೆಯಲು ಬಳಕೆಯಾಗುವುದಿಲ್ಲ. ಆದ್ದರಿಂದ, ಸುಪ್ರೀಂ ಕೋರ್ಟ್‌ ತೀರ್ಪು ಕಳವಳಕಾರಿ; ಅದು ಯಾವ ಸಾಂಸ್ಥಿಕ ಅಸಮಾನತೆಯನ್ನು ನಿವಾರಿಸಬೇಕಿತ್ತೋ ಅದನ್ನೇ ಸಮರ್ಥಿಸುತ್ತಿದೆ.

ನ್ಯಾಯಾಲಯ ನಿಯಮ 3(ಸಿ)ಯನ್ನು ಪರಿಶಿಷ್ಟ ಜಾತಿ/ವರ್ಗ/ಒಬಿಸಿ ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಈ ದುರುಪಯೋಗದ ನೆಪವು ಶ್ರೇಣೀಕರಣ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸುವ ಕ್ರಮಗಳ ವಿರುದ್ಧ ಹಿಂದಿನಿಂದಲೂ ಬಳಸುತ್ತಿರುವ ಚಾರಿತ್ರಿಕ ತಂತ್ರ. ಒಂದುವೇಳೆ ದುರುಪಯೋಗ ಆದಲ್ಲಿ ಅದನ್ನು ಸಾಂಸ್ಥಿಕ ಅಡೆತಡೆಗಳಿಂದ ನಿಲ್ಲಿಸಬಹುದು ಹಾಗೂ ಸುಳ್ಳು ದೂರುದಾರರನ್ನು ಶಿಕ್ಷಿಸಬಹುದು. ನಿಯಮ ಹೇಳುವ ʻಬೇರ್ಪಡಿಸುವಿಕೆ/ಪ್ರತ್ಯೇಕಿಸುವಿಕೆʼ ಎಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಯ್ಕೆ ಇಲ್ಲವೇ ಹಂಚಿಕೆ ಗಳು ಪಾರದರ್ಶಕ, ನ್ಯಾಯಬದ್ಧ ಮತ್ತು ತಾರತಮ್ಯರಹಿತವಾಗಿರಬೇಕು ಎಂದು. ನ್ಯಾಯಾಲಯ ಸಮಾನತೆಯನ್ನು ಉತ್ತೇಜಿಸುವ ಸುಧಾರಣೆ ಕ್ರಮಗಳನ್ನು ತಟಸ್ಥಗೊಳಿಸುವ ಮೂಲಕ ಅಸ್ಮಿತೆಯನ್ನು ಆಧರಿಸಿದ ಹೊರತಾಗಿಸುವಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಸಾಂಸ್ಥಿಕ ನಿರ್ಲಕ್ಷ್ಯವನ್ನು ತಡೆಯಲು ವಿಫಲವಾಗಿದೆ.

2019ರಲ್ಲಿ ಶೇ.10 ಇಡಬ್ಲ್ಯುಎಸ್‌(ಆರ್ಥಿಕವಾಗಿ ದುರ್ಬಲ ವರ್ಗ) ಮೀಸಲು ನೀಡಲಾಯಿತು. ಇದನ್ನು ಮೇಲ್ಜಾತಿಗಳು ಪ್ರತಿಭಟಿಸಲಿಲ್ಲ. 2016ರಲ್ಲಿ ರೋಹಿತ್‌ ವೇಮುಲ ಮರಣದ ಬಳಿಕ ಮೀಸಲು ಮತ್ತು ಮೀಸಲುರಹಿತರ ನಡುವಿನ ಕಂದರ ಹೆಚ್ಚಿತು. ಅಂಬೇಡ್ಕರ್‌ ಪೆರಿಯಾರ್‌ ಫುಲೆ ವಿದ್ಯಾರ್ಥಿಗಳ ಸರ್ಕಲ್‌ನಂಥ ಸಮುದಾಯಗಳು ತಲೆಯೆತ್ತಿದವು. ದಿಲ್ಲಿ ಐಐಟಿಯಲ್ಲಿ 2019-2020ರಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.11 ರಷ್ಟು ವಿದ್ಯಾರ್ಥಿಗಳು ಪ್ರಾಧ್ಯಾಪಕರು-ಆಡಳಿತ ವರ್ಗದವರು ಜಾತಿನಿಂದನೆ ಮಾಡಿರುವುದಾಗಿ ಹೇಳಿದ್ದರು. ಯುಜಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ದೇಶದ 50,000 ಶೈಕ್ಷಣಿಕ ಸಂಸ್ಥೆಗಳಲ್ಲಿ 3,522 ಮಾತ್ರ ಯುಜಿಸಿ ಕರೆಗೆ ಪ್ರತಿಕ್ರಿಯಿಸಿದ್ದವು. ಇದರಲ್ಲಿ 3,067 ಸಂಸ್ಥೆಗಳು ಸಮಾನಾವಕಾಶ ಕೋಶಗಳನ್ನು ಹಾಗೂ 3,273 ಎಸ್‌ಸಿ/ಎಸ್‌ಟಿ ಕೋಶಗಳನ್ನು ರಚಿಸಿ ದ್ದವು. ಇದರರ್ಥವೇನೆಂದರೆ, ಶೈಕ್ಷಣಿಕ ಸಂಸ್ಥೆಗಳು ಸಮಾನತೆ ಬಗ್ಗೆ ಕುರುಡಾಗಿವೆ ಮತ್ತು ಆಡಳಿತ ಪಕ್ಷದ ಕೈಗೊಂಬೆ ಆಗಿರುವ ಯುಜಿಸಿ, ತನ್ನ ಘನತೆ ಕಳೆದುಕೊಂಡಿದೆ.

ವೇಮುಲ ಮತ್ತು ಪಾಯಲ್‌ ಬಲಿದಾನ: ಜನವರಿ 17, 2016 ರಂದು ಹೈದರಾಬಾದ್ ವಿಶ್ವವಿದ್ಯಾನಿಲಯದ ಪಿಎಚ್‌.ಡಿ., ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡರು; ʻನನ್ನ ಹುಟ್ಟು ಮಾರಣಾಂತಿಕ ಅಪಘಾತʼ ಎಂಬ ಟಿಪ್ಪಣಿ ಬಿಟ್ಟುಹೋದರು. ವಿಪರ್ಯಾಸವೆಂದರೆ, ವಿಶ್ವವಿದ್ಯಾನಿಲಯ ಮತ್ತು ಕೇಂದ್ರ ಸರ್ಕಾರ ಈ ಸಾವಿನ ಕಾರಣಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಆತ ದಲಿತನಲ್ಲ ಎಂದು ಹೇಳಿದವು. ಎಬಿವಿಪಿ(ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್) ದೂರು ಆಧರಿಸಿ, ರೋಹಿತ್‌ ಸೇರಿದಂತೆ ಇತರ ನಾಲ್ವರ ಅಮಾನತು ಮತ್ತು ರೋಹಿತ್‌ ಶಿಷ್ಯವೇತನ 25,000 ರೂ. ತಡೆ ಹಿಡಿಯಲಾಗಿತ್ತು. ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ, ವಿಶ್ವವಿದ್ಯಾನಿಲಯದ ಆಡಳಿತ ಸೇರಿದಂತೆ ಎಲ್ಲರೂ ಈ ಪ್ರಹಸನದಲ್ಲಿ ಪಾಲ್ಗೊಂಡಿದ್ದರು. ವೇಮುಲ ಆತ್ಮಹತ್ಯೆಯು ಸಾಂಸ್ಥಿಕ ಹತ್ಯೆ. ಅದು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಕುರಿತು ಸಂವಾದ ಹುಟ್ಟುಹಾಕಿತು. ಮುಂಬಯಿಯ ಬಿ.ಎಲ್‌.ವೈ. ನಾಯರ್ ಆಸ್ಪತ್ರೆಯ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿ ಪಾಯಲ್ ತಡ್ವಿ(26), ಭಿಲ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆಸ್ಪತ್ರೆ ಹಾಗೂ ಟೋಪಿವಾಲಾ ರಾಷ್ಟ್ರೀಯ ವೈದ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ನಿರಂತರ ಅವಮಾನ ಮತ್ತು ಚಿತ್ರಹಿಂಸೆಯಿಂದ ಮೇ 22, 2019ರಂದು ಆತ್ಮಹತ್ಯೆ ಮಾಡಿಕೊಂಡರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಒಂದು ಇರಿಯುವ ವಾಸ್ತವ. 2023 ರಲ್ಲಿ ರಾಜ್ಯಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ, 2019-2023ರಲ್ಲಿ ಐಐಟಿ, ಎನ್‌ಐಟಿ, ಐಐಎಂ, ಐಐಎಸ್‌ಇಆರ್‌ ನಲ್ಲಿ ದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯಗಳ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಐಐಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 31 ವಿದ್ಯಾರ್ಥಿಗಳಲ್ಲಿ ಶೇ.54.8 (ಎಸ್‌ಸಿ 5, ಎಸ್‌ಟಿ 1, ಒಬಿಸಿ 9 ಮತ್ತು ಅಲ್ಪಸಂಖ್ಯಾತ 2), ಏಮ್ಸ್‌ನ 13 ಆತ್ಮಹತ್ಯೆಗಳಲ್ಲಿ 7(ಎಸ್‌ಟಿ 2, ಒಬಿಸಿ ನಾಲ್ಕು ಮತ್ತು ಒಬ್ಬ ಅಲ್ಪಸಂಖ್ಯಾತರು) ಮತ್ತು ಎನ್‌ಐಟಿಯ 22 ರಲ್ಲಿ 13(ಎಸ್‌ಸಿ 4, ಒಬಿಸಿ 8 ಮತ್ತು ಅಲ್ಪಸಂಖ್ಯಾತ ಸಮುದಾಯದ ಒಬ್ಬರು) ಇದ್ದರು.
2021ರಲ್ಲಿ ಲೋಕಸಭೆಯಲ್ಲಿ ನೀಡಿದ ಲಿಖಿತ ಪ್ರತಿಕ್ರಿಯೆ ಪ್ರಕಾರ, 2014-2021 ರ ಅವಧಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 68 ಮಂದಿ ಹಿಂದುಳಿದ ಸಮುದಾಯಗಳವರು(24 ಎಸ್‌ಸಿ, 3 ಎಸ್‌ಟಿ, 41 ಒಬಿಸಿ). ಯುಜಿಸಿಯು ಸಂಸದೀಯ ಸಮಿತಿ ಮತ್ತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ದತ್ತಾಂಶದ ಪ್ರಕಾರ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಜಾತಿ ಆಧರಿತ ತಾರತಮ್ಯದ ದೂರುಗಳು 2019-20 ರಿಂದ 2023-24 ಕ್ಕೆ ಶೇ.118.4 ರಷ್ಟು ಏರಿಕೆಯಾಗಿದೆ. ಯುಜಿಸಿ ಈ ಅವಧಿಯಲ್ಲಿ 704 ವಿಶ್ವವಿದ್ಯಾನಿಲಯಗಳು ಮತ್ತು 1,553 ಕಾಲೇಜುಗಳ ಸಮಾನಾವಕಾಶ ಕೋಶಗಳು ಮತ್ತು ಎಸ್ಸಿ/ಎಸ್‌ಟಿ ಕೋಶಗಳಿಂದ 1,160 ದೂರು ಸ್ವೀಕರಿಸಿದೆ. ಇಂಥ ಪರಿಸ್ಥಿತಿಯಲ್ಲಿ ಜಾತಿ ಎಲ್ಲಿದೆ ಎಂದು ಕೇಳುವವರಿಗೆ ಏನು ಹೇಳುವುದು?

ಮಂಡಲ-ಕಮಂಡಲ ರಾಜಕೀಯ: ದಿಲ್ಲಿಯ ದೇಶಬಂಧು ಕಾಲೇಜಿನ ವಿದ್ಯಾರ್ಥಿ ರಾಜೀವ್‌ ಗೋಸ್ವಾಮಿ ಮಂಡಲ್‌ ವರದಿಯನ್ನು ವಿರೋಧಿಸಿ, ಸೆಪ್ಟೆಂಬರ್‌ 19,1990ರಲ್ಲಿ ಬೆಂಕಿ ಹಚ್ಚಿಕೊಂಡಿದ್ದರು. ಆ ಬೆಂಕಿ ದೇಶವಿಡೀ ವ್ಯಾಪಿಸಿತು. ಮಂಡಲ-ಕಮಂಡಲ ವಿಚ್ಛೇದದಿಂದ ಉತ್ತರ, ಪಶ್ಚಿಮ ಮತ್ತು ಕೇಂದ್ರ ಭಾರತದಲ್ಲಿ ಮೇಲ್ವರ್ಗಗಳು ಬಿಜೆಪಿ ಕಡೆಗೆ ವಾಲಿದವು. ಕಳೆದ 2 ದಶಕಗಳಲ್ಲಿ ಬಿಜೆಪಿ ಹಿಂದು ಳಿದ ವರ್ಗಗಳು, ಪರಿಶಿಷ್ಟ ಜಾತಿ/ವರ್ಗಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ವಿಸ್ತೃತ ಮತ್ತು ಜಯ ತಂದುಕೊಡಬಲ್ಲ ಸಮುದಾಯಗಳನ್ನು ಮುಖಾಮುಖಿಯಾಗಿಸುವ ಯಾವುದೇ ಕಾರ್ಯವನ್ನು ಬಿಜೆಪಿ ಮಾಡುವುದಿಲ್ಲ. ಮೋದಿ ಸರ್ಕಾರ ಈ ಹಿಂದೆ ಕೂಡ ರಾಜಕೀಯ ಪರಿಣಾಮ ಬೀರಬಲ್ಲ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಟಸ್ಥವಾಗಿದೆ; ಉದಾಹರಣೆಗೆ, 2018ರ 102ನೇ ತಿದ್ದುಪಡಿ ಕಾಯಿದೆಯು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ)ಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಿತು; 338 ಬಿ ಹಾಗೂ 342 ಎ ವಿಧಿಗಳನ್ನು ಪರಿಚಯಿಸುವ ಮೂಲಕ ಕೇಂದ್ರೀ ಯ ಪಟ್ಟಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್‌ಇಬಿಸಿ)ಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಂದ ಕಿತ್ತುಕೊಂಡು, ರಾಷ್ಟ್ರಪತಿ ಅವರಿಗೆ ನೀಡಿತು. ರಾಜ್ಯಗಳಿಂದ ವ್ಯಾಪಕ ಪ್ರತಿರೋಧದ ಹಿನ್ನೆಲೆಯಲ್ಲಿ ಹಿಂಪಡೆಯಿತು. ʻಹಾವು ಸಾಯಬಾರದು; ಕೋಲು ಮುರಿಯಬಾರದುʼ ನೀತಿಯನ್ನು ಬಿಜೆಪಿ ಕರಗತ ಮಾಡಿಕೊಂಡಿದೆ.
ಮುಂಬರಲಿರುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ದಲಿತ/ಒಬಿಸಿ ವರ್ಗಗಳನ್ನು ಪುಸಲಾಯಿಸಲು ಸುಪ್ರೀಂ ಆದೇಶ ಅವಕಾಶ ಮಾಡಿಕೊಟ್ಟಿದೆ. ʼನಾವು ಮೀಸಲು ಕುರಿತು ಆದೇಶ ಹೊರಡಿಸಿ ದ್ದೆವು; ಆದರೆ, ಸುಪ್ರೀಂ ಕೋರ್ಟ್‌ ತಡೆಯಿತುʼ ಎಂದು ರಾಗ ಹಾಡಲಿದೆ. 2026ರ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾದ ಎಲ್ಲ ಅರ್ಜಿಗಳು ಮತ್ತು ಆದೇಶವನ್ನು ಪ್ರಶ್ನಿಸಿ ರಾಧಿಕಾ ವೇಮುಲ ಹಾಗೂ ಅಬೀದಾ ತಡ್ವಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಾರ್ಚ್‌ 2026ರಲ್ಲಿ ನಡೆಯಲಿದೆ. ಯುಜಿಸಿಯ ನಿಯಮಗಳು ಪ್ರಗತಿಪರವಾಗಿದ್ದವು. ಸಮಾನಾವಕಾಶ ಕುರಿತು ಸುಪ್ರೀಂ ಆದೇಶ ಏನಿರಲಿದೆ ಎಂಬು ದನ್ನು ಕಾಯ್ದು ನೋಡಬೇಕಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top