ʻಹಲ್ಲು ಬಹಳ ದೊಡ್ಡ ಇದೆʼ ಎಂಬ ಕಾರಣಕ್ಕೆ ಕ್ಯಾಮೆರಾ ಎದುರು ಅವಕಾಶ ಸಿಗದ ಯುವಕನೊಬ್ಬ 70 ವರ್ಷ ಕಾಲ ವನ್ಯಜೀವಿಗಳ ಕುರಿತು ನಿರಂತರವಾಗಿ ಕಾರ್ಯಕ್ರಮ ನೀಡುತ್ತ ಅರಿವು ಮೂಡಿ ಸಿದ್ದು ಒಂದು ಸೋಜಿಗ. ಅವರೇ ಸರ್ ಡೇವಿಡ್ ಅಟೆನ್‌ಬರೋ. ಸಾರ್ಥಕ ನೂರು ವರ್ಷ ಪೂರೈಸಿರುವ ಅವರು ಕಳೆದ 70 ವರ್ಷದಿಂದ ಬ್ರಿಟನ್ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆಯ ಜನರನ್ನು ವನ್ಯಜೀವಿ ಪ್ರಪಂಚಕ್ಕೆ ಪರಿಚಯಿಸಿದ ಶ್ರೇಷ್ಠ ಪ್ರಸಾರಕರಲ್ಲಿ ಒಬ್ಬರು.
ತಂದೆ ಫ್ರೆಡೆರಿಕ್ ಅಟೆನ್‌ಬರೋ, ಲೀಸೆಸ್ಟರ್ ಯೂನಿವರ್ಸಿಟಿ ಕಾಲೇಜಿನ ಪ್ರಾಚಾರ್ಯ. ತಾಯಿ ಮೇರಿ. ಮೇ 6,1926ರಂದು ಜನನ. ಕೇಂಬ್ರಿಜ್‌ನಲ್ಲಿ ಭೂಗರ್ಭಶಾಸ್ತ್ರ ಹಾಗೂ ಭೂವಿಜ್ಞಾನ ಅಧ್ಯಯನ ಮಾಡಿ, ಸ್ವಾಭಾವಿಕ ವಿಜ್ಞಾನ ದಲ್ಲಿ ಪದವಿ ಪಡೆದ ಅಟೆನ್‌ಬರೋ, 1952ರಲ್ಲಿ ಬಿಬಿಸಿ ಸೇರಿದರು. ಆಗ ಅವರಿಗೆ 26 ವರ್ಷ. ಅವರ ಬಾಸ್ ಲಿಯೊನಾರ್ಡ್ ಮಿಯಾಲ್, ʻಹಲ್ಲು ಬಹಳ ದೊಡ್ಡ ಇದೆʼ ಎಂದು ಕಾರ್ಯಕ್ರಮ ಪ್ರಸ್ತು ತಿಗೆ ಅವಕಾಶ ನೀಡಲಿಲ್ಲ. ಆದರೆ, ಬಿಬಿಸಿಯ ಇನ್ನೊಬ್ಬ ಪ್ರಸಾರಕ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾದಾಗ, ಅವರ ಜಾಗವನ್ನು ಅಟೆನ್‌ಬರೋ ತುಂಬಬೇಕಾಗಿ ಬಂತು. ಅಲ್ಲಿಗೆ ಹೊಸ ಇತಿಹಾಸ ವೊಂದು ಆರಂಭಗೊಂಡಿತು. ಮಡಗಾಸ್ಕರ್‌ನಲ್ಲಿ ಕೋಲಾಕಾಂತ್ ಮೀನಿನ ಸೆರೆ ಹಿಡಿಯುವಿಕೆ ಅವರ ಮೊದಲ ಕಾರ್ಯಕ್ರಮ. ಆನಂತರ ʼಝೂ ಕ್ವೆಸ್ಟ್ʼ ಸರಣಿಯ ಮೊದಲ ಎಪಿಸೋಡ್ ಬಿಬಿಸಿ ಟೆಲಿ ವಿಷನ್ ಸರ್ವೀಸ್(ಈಗ ಬಿಬಿಸಿ 1)ರಲ್ಲಿ ಡಿಸೆಂಬರ್ 21, 1954ರಲ್ಲಿ ಪ್ರಸಾರಗೊಂಡಿತು; 1954ರಿಂದ 1963ರವರೆಗೆ 7 ಆವೃತ್ತಿಗಳಲ್ಲಿ 42 ಎಪಿಸೋಡ್ ಪ್ರಸಾರಗೊಂಡು, ದಕ್ಷಿಣ ಆಫ್ರಿಕಾ, ಗಯಾನಾ ಮತ್ತಿತರ ದೇಶಗಳ ಅಪರೂಪದ ವನ್ಯಜೀವಿಗಳನ್ನು ಪರಿಚಯಿಸಿ, ಪಥದರ್ಶಕ ಎಂಬ ಖ್ಯಾತಿ ಗಳಿಸಿತು. ಈ ಸಾಹಸದಲ್ಲಿ ಲಂಡನ್ ಮೃಗಾಲಯದ ಸಿಬ್ಬಂದಿ ಜತೆಗೂಡಿ ದ್ದರು. ರುವಾಂಡದಲ್ಲಿ ಚಿತ್ರೀಕರಿಸಿದ 12ನೇ ಎಪಿಸೋಡ್ ʻಲೈಫ್ ಆನ್ ದ ಟ್ರೀʼ, ಗೊರಿಲ್ಲಾಗಳು ರಕ್ತಪಿಪಾಸುಗಳು ಎಂಬ ಮಿಥ್ಯೆಯನ್ನು ಛಿದ್ರಗೊಳಿಸಿತು. ಆನಂತರ ಸಂದರ್ಶನವೊಂದರಲ್ಲಿ, ʻಪರ್ವತ ಗೊರಿಲ್ಲಾಗಳ ಮುಖಾಮುಖಿ ನನ್ನ ಜೀವನದ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದುʼ ಎಂದು ಬಣ್ಣಿಸಿದ್ದರು. ಈ ಸಾಕ್ಷ್ಯಚಿತ್ರಗಳ ಹೀರೋ ಚಾರ್ಲ್ಸ್ ಲೇಗಸ್ ಮತ್ಯಾರೋ ಅಲ್ಲ; ಸ್ವತಃ ಅಟೆನ್‌ಬರೋ. 1965ರಲ್ಲಿ ಬಿಬಿಸಿ2ಕ್ಕೆ ನಿಯಂತ್ರಕ(ಸಂಪಾದಕೀಯ ಕಾರ್ಯನಿರ್ವಾಹಕ)ನಾಗಿ ಬಡ್ತಿ ಪಡೆದರು. ಬಿಬಿಸಿ 1967ರಲ್ಲಿ ಕಪ್ಪು-ಬಿಳುಪಿನಿಂದ ಬಣ್ಣಕ್ಕೆ ಬದಲಾಯಿತು. 1979ರಲ್ಲಿ ʻಲೈಫ್ ಆನ್ ಅರ್ಥ್: ಎ ನ್ಯಾಚುರಲ್ ಹಿಸ್ಟರಿʼ, ಆನಂತರ ಪ್ಲಾನೆಟ್ ಅರ್ಥ್ 2 ಮತ್ತು 3, ಬ್ಲೂ ಪ್ಲಾನೆಟ್ ಮತ್ತು ಅವರ್ ಪ್ಲಾನೆಟ್ ಪ್ರಸಾರಗೊಂಡವು. ಪರಿಸರದ ವಿಷಯವನ್ನು ಸಂಶೋಧನೆ, ಅಧ್ಯಯನದೊಂದಿಗೆ ಸೇರ್ಪಡಿಸಿ, ತಂತ್ರಜ್ಞಾನದೊಟ್ಟಿಗೆ ಮೇಳೈಸಿ ಸಿನಿಮೀಕೃತವಾಗಿ ಕತೆ ಹೇಳುವಿಕೆ ಅವರ ವಿಶಿಷ್ಟತೆಯಾಗಿತ್ತು. 1972ರಲ್ಲಿ ವೃತ್ತಿ ತೊರೆದು, ವನ್ಯ ಕ್ಷೇತ್ರಕ್ಕೆ ಮರಳಿದರು. ʻಲೈಫ್ ಆನ್ ಅರ್ಥ್ʼ ಗೊರಿಲ್ಲಾಗಳ ಹೀನಾಯ ಸ್ಥಿತಿಯನ್ನು ಜಗತ್ತಿಗೆ ಪರಿಚಯಿಸಿತು. ಆಗ ಅವು ನಿರ್ವಂಶದ ಸ್ಥಿತಿ ತಲುಪಿ, ಕೇವಲ 250 ಮಾತ್ರ ಇದ್ದವು. ರುವಾಂಡದ ಗೊರಿಲ್ಲಾ ಕುಟುಂಬದೊಡನೆ ಅವರ ಮುಖಾಮುಖಿ ಜಗತ್ತಿನ ಗಮನ ಸೆಳೆದು, ಸಾರ್ವಜನಿಕರು ಅವುಗಳ ನೆರವಿಗೆ ಧಾವಿಸಿದರು; ಅಪಾರ ಮೊತ್ತ ಸಂಗ್ರಹವಾಯಿತು. 2018ರಲ್ಲಿ ಗಣತಿ ನಡೆಸಿದಾಗ, ಗೊರಿಲ್ಲಾಗಳ ಸಂಖ್ಯೆ 1,000 ದಾಟಿತ್ತು!
ವೀಕ್ಷಕರ ಗಮನವನ್ನು ಸೆಳೆಯುವಂತೆ, ವಿವೇಕವನ್ನು ಎಚ್ಚರಿಸುವಂತೆ ಕತೆಯನ್ನು ವಿಶದಪಡಿಸುವ ಸಾಮರ್ಥ್ಯ ಹೊಂದಿದ್ದ ಅವರು, ಎಲ್ಲ ಜೀವಿಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವಂತೆ ಮಾಡಬಲ್ಲವ ರಾಗಿದ್ದರು. ಭಾರಿ ಕಶೇ ರುಕಗಳಾದ ಹುಲಿ, ಸಿಂಹ, ಆನೆಗಳಲ್ಲದೆ ಎಲ್ಲ ಪ್ರಭೇದಗಳು ಹಾಗೂ ಆರ್ಕ್‌ಟಿಕ್, ಅಂಟಾರ್ಕ್‌ಟಿಕ, ಹಿಮಾಲಯ, ಆಲ್ಫ್ಸ್ ಪರ್ವತ ಎಲ್ಲವೂ ಅವರ ಆಸಕ್ತಿಯನ್ನು ಸೆಳೆದಿದ್ದವು. ʻಲೈಫ್ ಆನ್ ಅರ್ಥ್ʼ ಸರಣಿ ಅಗಾಧ ಪ್ರಭಾವ ಬೀರಿತು; ಅಭೂತಪೂರ್ವ ಪ್ರತಿಕ್ರಿಯೆ ಬಂದಿತು. ಈ ಸರಣಿಯ ಮೊದಲ ಎಪಿಸೋಡ್ ʻದ ಇನ್‌ಫೈನೆಟ್ ವೆರೈಟಿʼ ಮತ್ತು ಕೊನೆಯದು ʼದ ಕಂಪಲ್ಸಿವ್ ಕಮ್ಯುನಿಕೇಟರ್ʼ. ನ್ಯೂಗಿನಿಯಲ್ಲಿನ ಅಸಂಖ್ಯಾತ ಹಕ್ಕಿಗಳನ್ನು ಪರಿಚಯಿಸುವ ʻಅಟೆನ್‌ಬರೋ ಇನ್ ಪ್ಯಾರಡೈಸ್ʼ(1996) ಮತ್ತು ಮಿಲಿಯಗಟ್ಟಲೆ ವರ್ಷಗಳ ಹಿಂದೆ ರಾಳದಲ್ಲಿ ಸಿಕ್ಕಿಕೊಂಡಿದ್ದ ಕೀಟಗಳ ಡಿಎನ್‌ಎ ಸಾರವನ್ನು ತೆಗೆಯುವ ಸಾಧ್ಯತೆಯನ್ನು ಪರಿಶೀಲಿಸುವ ʻದ ಅಂಬರ್ ಟೈಮ್ ಮಷಿನ್ʼ(2004) ಆನಂತರ ಬಂದವು. ಈ ಆಲೋಚನೆಯನ್ನು ಸ್ಟೀವನ್ ಸ್ಪೀಲ್‌ಬರ್ಗ್ ತಮ್ಮ ಸಿನೆಮಾ ʼಜುರಾ ಸಿಕ್ ಪಾರ್ಕ್ʼ ನಲ್ಲಿ ಜನಪ್ರಿಯಗೊಳಿಸಿದ್ದರು. ಈ ಸಿನೆಮಾದಲ್ಲಿ ಅಟೆನ್‌ಬರೋ ಅವರ ಹಿರಿಯಣ್ಣ ರಿಚರ್ಡ್ ಪಾತ್ರ ವಹಿಸಿದ್ದರು. ಬಿಬಿಸಿ2ಕ್ಕೆ ನಿರ್ಮಿಸಿಕೊಟ್ಟ ʻಮಾಂಟಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್ʼ (1969) ಒಂದು ಕಾಮಿಡಿ ಶೋ. ಇತ್ತೀಚಿನ ಸಾಕ್ಷ್ಯಚಿತ್ರ ಓಷನ್(2025), ಸಾಗರದಾಳದ ಜಗತ್ತು ಮತ್ತು ನಮ್ಮ ದೈನಂದಿನ ಬದುಕಿನ ಶೈಲಿ ಹೇಗೆ ಸಾಗರ ಹಾಗೂ ಸಾಗರ ಜೀವಿಗಳನ್ನು ಪ್ರಭಾವಿಸುತ್ತದೆ ಎಂಬುದನ್ನು ತೋರಿಸುತ್ತದೆ. ಅವರ ಕೆಲಸಗಳು ರೈಟ್ಸ್ ಆಫ್ ನೇಚರ್ ಮೂವ್‌ಮೆಂಟ್(ಅಂದರೆ, ಪ್ರಕೃತಿಯ ಹಕ್ಕುಗಳ ಆಂದೋಲನ; ಮರ, ನದಿ ಮತ್ತು ಪರ್ವತಗಳು ಅಸ್ತಿತ್ವ, ಅಭಿವೃದ್ಧಿ ಮತ್ತು ಪುನರುತ್ಪಾದನೆಯ ಹಕ್ಕು ಹೊಂದಿರುವ ಜೀವಿಗಳು; ಪ್ರಕೃತಿಯನ್ನು ಕೇವಲ ಆಸ್ತಿಯಾಗಿ ಪರಿಗಣಿಸದೆ, ಪರಿಸರ ವ್ಯವಸ್ಥೆಗಳಿಗೆ ಶಾಸನಾತ್ಮಕ ಸ್ಥಾನಮಾನ ನೀಡಬೇಕು ಎಂದು ಪ್ರತಿಪಾದಿಸುವ ಚಳವಳಿ)ಗೆ ಸ್ಪೂರ್ತಿ ನೀಡಿದೆ.
ಲೈಫ್ ಆನ್ ಅರ್ಥ್, ದ ಲಿವಿಂಗ್ ಪ್ಲಾನೆಟ್ ಮತ್ತು ದ ಲೈಫ್ ಆಫ್ ಮ್ಯಾಮಲ್ಸ್., ಫ್ರೋಜನ್ ಪ್ಲಾನೆಟ್, ಪ್ಲಾನೆಟ್ ಅರ್ಥ್ 3, ಅಡ್ವೆಂಚರ್ಸ್ ಆಫ್ ಎ ಯಂಗ್ ನ್ಯಾಚುರಲಿಸ್ಟ್, ದ ಲೈಫ್ ಆಫ್ ಬರ್ಡ್ಸ್, ಎ ಲೈಫ್ ಆನ್ ಅವರ್ ಪ್ಲಾನೆಟ್, ವೈಲ್ಡ್ ಪ್ಲಾನೆಟ್, ಓಷನ್: ಅರ್ಥ್ಸ್ ಲಾಸ್ಟ್ ವೈಲ್ಡರ್‌ನೆಸ್, ಲಿವಿಂಗ್ ಪ್ಲಾನೆಟ್-ದ ವೆಬ್ ಆಫ್ ಲೈಫ್ ಆನ್ ಅರ್ಥ್, ಅಮೇಜಿಂಗ್ ಫ್ಯಾಕ್ಟ್ಸ್, ದ ಲೈಫ್ ಟ್ರಯಾಲಜಿ: ದ ಗ್ರೇಟೆಸ್ಟ್ ಸ್ಟೋರೀಸ್ ಎವರ್ ಟೋಲ್ಡ್, ಲೈಫ್ ಆನ್ ಏರ್ ಸೇರಿದಂತೆ 100ಕ್ಕೂ ಅಧಿಕ ಸಾಕ್ಷ್ಯಚಿತ್ರಗಳು ಹಾಗೂ ಲೈಫ್ ಟ್ರಯಾಲಜಿ, ಲೈಫ್ ಸ್ಟೋರೀಸ್ ಸೀರಿಸ್ 2 ಮತ್ತಿತರ 24 ಪುಸ್ತಕ ರಚಿಸಿದ್ದಾರೆ. ಅವರ ಎಲ್ಲ ಕೃತಿಗಳು ಭರವಸೆ ಮತ್ತು ಆಶಾವಾದದಲ್ಲಿ ಕೊನೆಗೊಳ್ಳುತ್ತವೆ. ದುರಂತವೆಂದರೆ, ಭೂಮಿ ನಾಶವಾಗುತ್ತಿರುವ ವೇಗ ಪರಿಗಣಿಸಿದರೆ, ಅದಷ್ಟೇ ಸಾಲುವುದಿಲ್ಲ ಎನ್ನುವುದು ವಾಸ್ತವ.
ಕಾರ್ಯನೀತಿಯಲ್ಲಿ ಬದಲಾವಣೆ: ಹವಾಮಾನ ಬದಲಾವಣೆ ಮತ್ತು ಜನಸಂಖ್ಯೆ ಹೆಚ್ಚಳದ ನಡುವೆ ಸಂಬಂಧವಿದೆ ಎನ್ನುವುದು ಅವರ ಮೊದಲಿನ ಅಭಿಪ್ರಾಯವಾಗಿತ್ತು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ; ವಾಸ್ತವ ಏನೆಂದರೆ, ಅತಿ ಶ್ರೀಮಂತರು ಹೆಚ್ಚು ಮಾಲಿನ್ಯ ಸೃಷ್ಟಿಸುತ್ತಾರೆ. ಅವರ ಆರಂಭಿಕ ಸಾಕ್ಷ್ಯಚಿತ್ರಗಳು ಅರಣ್ಯಗಳು ಸಮೃದ್ಧವಾಗಿವೆ; ಸ್ವಾಭಾವಿಕ ಜಗತ್ತು ಸಮಸ್ಯೆರಹಿತವಾಗಿದೆ ಎಂಬ ಅಭಿಪ್ರಾಯ ಮೂಡಿಸುತ್ತಿದ್ದವು; ಜೈವಿಕ ವೈವಿಧ್ಯ ನಾಶ ಹಾಗೂ ಹವಾಮಾನ ಬದಲಾವಣೆ ಕುರಿತ ವೈಜ್ಞಾನಿಕ ಪುರಾವೆ ಹೆಚ್ಚಿದಂತೆ, ತಮ್ಮ ನರೇಟಿವ್ ಬದಲಿಸಿ, ಮನುಷ್ಯರ ಹಸ್ತಕ್ಷೇಪ, ವಾಸಸ್ಥಳಗಳ ನಾಶ ಮತ್ತು ನಿರ್ವಂಶದ ಭೀತಿ ಕುರಿತು ಬೆಳಕು ಚೆಲ್ಲಲು ಆರಂಭಿಸಿದರು. 2004ರ ಬಳಿಕ ಅವರು ಪೂರ್ಣಾವಧಿ ಸಂರಕ್ಷಣಾ ವಕಾಲತುದಾರರಾಗಿ ಬದಲಾದರು; ಬೆಲ್ಜಿಯಂನ ಲೀಗ್ ವಿಶ್ವವಿದ್ಯಾ ನಿಲಯದಲ್ಲಿ ಕೇಳಿದ ಭಾಷಣ ಇದಕ್ಕೆ ಕಾರಣ. ಕ್ಲೈಮೇಟ್ ಚೇಂಜ್; ದ ಫ್ಯಾಕ್ಟ್ಸ್(2019) ಮತ್ತು ದ ಫರ್ಫೆಕ್ಟ್ ಪ್ಲಾನೆಟ್(2021) ಇದಕ್ಕೆ ಉದಾಹರಣೆ. ಎ ಲೈಫ್ ಆನ್ ಅವರ್ ಪ್ಲಾನೆಟ್ (2020) ಸ್ವಾಭಾವಿಕ ಪರಿಸರದಲ್ಲಿ ಬದಲಾವಣೆ ಮತ್ತು ಭೂಗೃಹದ ಭವಿಷ್ಯದ ಬಗ್ಗೆ ಹೇಳುತ್ತದೆ. ಪರಿಸರ ವ್ಯವಸ್ಥೆಯ ಸಂರಕ್ಷಣೆಯಲ್ಲಿ ಮೂಲವಾಸಿಗಳ ಬಹುಮುಖ್ಯ ಪಾತ್ರವನ್ನು ಕಡೆಗಣಿಸುತ್ತಾರೆ ಎಂದು ಅವ ರನ್ನು ಟೀಕಿಸಲಾಗಿದೆ.
ʻಓಷನ್ ವಿಥ್ ಡೇವಿಡ್ ಆಟೆನ್‌ಬರೋʼ ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಗರ ಶೃಂಗಸಭೆಗೆ ಮುನ್ನ ಬಿಡುಗಡೆಯಾಗಿ, ಜಾಗತಿಕ ಸಾಗರ ಒಪ್ಪಂದಕ್ಕೆ ಕಾರಣವಾಯಿತು. ಅಂಟಾರ್ಕ್‌ಟಿಕಾದ ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿ ಕಿಂಗ್ ಪೆಂಗ್ವಿನ್‌ನ ಆರಂಭಿಕ ದಿನಗಳ ಕುರಿತ ಅವರ ಸಾಕ್ಷ್ಯಚಿತ್ರವನ್ನು ಅಮೆರಿಕದಲ್ಲಿ ಮಾರ್ಗದರ್ಶಿ ಕೈಪಿಡಿ ಎಂದು ಪರಿಗಣಿಸಲ್ಪಟ್ಟಿದೆ. ಸೂಕ್ಷ್ಮ ಪ್ಲಾಸ್ಟಿಕ್ ಮತ್ತು ಏಕ ಬಳಕೆ ಪ್ಲಾಸ್ಟಿಕ್‌ಗಳು ಸಾಗರ ಪರಿಸರದ ಮೇಲೆ ಮಾಡುವ ವಿಪರಿಣಾಮ ಕುರಿತು ವಿವರಿಸುವ ʻಬ್ಲೂ ಪ್ಲಾನೆಟ್ 2ʼ(2017) ಪ್ರಸಾರದ ಬಳಿಕ ಇಂಗ್ಲೆಂಡಿನಲ್ಲಿ 2020ರಲ್ಲಿ ಪ್ಲಾಸ್ಟಿಕ್ ಕೊಳವೆ, ಸ್ಟರರ್ ಹಾಗೂ ಹತ್ತಿಯ ಅತಿ ಸಣ್ಣ ಉಂಡೆಗಳನ್ನು ನಿಷೇಧಿಸಲಾಯಿತು; 2042ರೊಳಗೆ ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಬ್ಲೂ ಪ್ಲಾನೆಟ್ ಪ್ರಸಾರದ ಬಳಿಕ ಗ್ರಾಹಕರ ಪ್ರತಿನಿತ್ಯದ ಖರೀದಿ ರೀತಿಗಳು ಬದಲಾದವು ಎಂದು ಮಾರುಕಟ್ಟೆ ಸಮೀಕ್ಷೆಗಳು ದಾಖಲಿಸಿವೆ.
ಅವರ ಸರಣಿ-ಸಾಕ್ಷ್ಯಚಿತ್ರಗಳು ಕೋಟಿಗಟ್ಟಲೆ ಜನರಲ್ಲಿ ಅರಿವು ಮೂಡಿಸಿವೆ ಮತ್ತು ಭೂಗ್ರಹದ ಸೌಂದರ್ಯ ಹಾಗೂ ಜೀವವೈವಿಧ್ಯವನ್ನು ಸಾಟಿ ಯಿಲ್ಲದಂತೆ ದಾಖಲಿಸಿವೆ. ಇದೆಲ್ಲ ಒಂದು ಜೀವಮಾನದಲ್ಲಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಅವರು, ʼಎಲ್ಲವನ್ನೂ ನಾನೇ ಚಿತ್ರಿಸುವುದಿಲ್ಲ ಇಲ್ಲವೇ ನಿರ್ಮಿಸುವುದಿಲ್ಲ; ಪರದೆಯಲ್ಲಿ ಬರುವ ನನ್ನ ಚಿತ್ರದ ಹಿಂದೆ ಅಸಂಖ್ಯ ಅತಿ ಕುಶಲ ಹಾಗೂ ಶ್ರದ್ಧಾವಂತ ಸಿನೆಮಾಟೋಗ್ರಾಫರ್‌ಗಳು ಇದ್ದಾರೆ; ಅವರು ಪ್ರಕೃತಿಯ ಒಂದಕ್ಕೊಂದು ಹೆಣೆದುಕೊಂಡಿರುವ ಸೂಕ್ಷ್ಮಾತಿಸೂಕ್ಷ್ಮವಿಸ್ಮಯವನ್ನು ಸೆರೆಹಿಡಿಯಲು ತಿಂಗಳುಗಟ್ಟಲೆ ಶ್ರಮಿಸುತ್ತಾರೆ. ಜೊತೆಗೆ, ಸಂಶೋಧಕರು, ಲೇಖಕರು ಹಾಗೂ ನಿರ್ಮಾಪಕರ ದೊಡ್ಡ ತಂಡವೇ ಇದೆʼ ಎಂದು ಹೇಳಿದ್ದರು.
ಜಗತ್ತು ಅಂದಿನಂತೆ ಇಲ್ಲ: 1926ರಲ್ಲಿ ಜಗತ್ತಿನ ಜನಸಂಖ್ಯೆ 2 ಶತಕೋಟಿ ಇತ್ತು; ಈ 8 ಶತಕೋಟಿಗೆ ಹೆಚ್ಚಳಗೊಂಡಿದೆ. ಆಗ ಭೂಖಂಡದ ಅರ್ಧ ಭಾಗದಲ್ಲಿ ಕಾಡು ಇದ್ದಿತ್ತು; ಈಗ 1/3ಕ್ಕೆ ಕುಸಿದಿದೆ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ 300 ಪಿಪಿಎಂ(ದಶಲಕ್ಷದಲ್ಲಿ ಒಂದು ಭಾಗ) ಇದ್ದದ್ದು ಈಗ 425 ಪಿಪಿಎಂಗೆ ಹೆಚ್ಚಳಗೊಂಡಿದೆ. ಇದರಿಂದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ದಾಳಿ ನಡೆದಿದೆ. ಇದನ್ನೆಲ್ಲ ʻಎ ಲೈಫ್ ಆನ್ ಅವರ್ ಪ್ಲಾನೆಟ್; ಮೈ ವಿಟ್ನೆಸ್ ಸ್ಟೇಟ್ಮೆಂಟ್ ಆಂಡ್ ಎ ವಿಷನ್ ಫಾರ್ ದ ಫ್ಯೂಚರ್ʼ(2020) ವಿವರಿಸುತ್ತದೆ; ಇದು ಎಲ್ಲರೂ ನೋಡಲೇಬೇಕಾದ ಸಾಕ್ಷ್ಯಚಿತ್ರ. ಆದರೆ, ನಾವೆಲ್ಲರೂ ಕಾಳಜಿ ಬೆಳೆಸಿಕೊಳ್ಳದೆ, ಭೂಮಿಯ ನಾಶವನ್ನು ಮೌನವಾಗಿ ನೋಡುತ್ತ ಕುಳಿತರೆ, ಇಂಥ ಅರಿವಿನಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಿಗೆ ಭೂಮಿಯ ಗಾಯ ಗಳನ್ನು ಮಾಯಿಸುವ ಕೆಲಸ ಆಗಬೇಕಿದೆ. ಕಿರುಬ, ಗೂಬೆ ಮತ್ತಿತರ ಪ್ರಾಣಿಗಳು ಬೇಟೆ ಆಡಲು, ಬೇಟೆಗಾರ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಮತ್ತು ತಮ್ಮ ಸಮುದಾಯವನ್ನು ಹುಡುಕಲು ಕೂಗು ಗಳನ್ನು ಬಳಸುತ್ತವೆ ಎಂಬುದನ್ನು ವಿವರಿಸುವ ʻಸೀಕ್ರೆಟ್ ವರ್ಲ್ಡ್ ಆಫ್ ಸೌಂಡ್ ವಿತ್ ಡೇವಿಡ್ ಅಟೆನ್‌ಬರೋʼ, ಇಂಗ್ಲೆಂಡಿನಲ್ಲಿ ಫೆಬ್ರವರಿ 2026ರಲ್ಲಿ 3 ಎಪಿಸೋಡ್ ಪ್ರಸಾರ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 7, 2026ರಿಂದ ಲಭ್ಯವಿರಲಿದೆ. ʻನಾವು ಬಿಡಿಯಾಗಿ ಕೆಲಸ ಮಾಡುತ್ತಿರುವಾಗ, ಭೂಗೃಹವನ್ನು ಅಸ್ಥಿರಗೊಳಿಸುತ್ತೇವೆ; ಆದರೆ, ಒಟ್ಟಿಗೆ ಕೆಲಸ ಮಾಡಿದರೆ, ಭೂಮಿಯನ್ನು ಸಂರಕ್ಷಿಸುವಷ್ಟು ಬಲಶಾಲಿ ಆಗುತ್ತೇವೆʼ ಎಂದು ಅವರು ಒಮ್ಮೆ ಹೇಳಿದ್ದರು.
ಅಟೆನ್‌ಬರೋ ಅವರನ್ನು ಜನ ಗೌರವಿಸಿದ್ದಾರೆ; ಬ್ರಿಟನ್ ಅವರಿಗೆ ಎರಡು ಬಾರಿ ನೈಟ್‌ಹುಡ್ ನೀಡಿ ಗೌರವಿಸಿದೆ. ಸಮುದ್ರ ಸರೀಸೃಪವೊಂದಕ್ಕೆ ಹೆಸರು(ಅಟೆನ್‌ಬರೋಸಾರಸ್ ಕೋನಿಬಿಯರಿ) ಸೇರಿದಂತೆ 50ಕ್ಕೂ ಅಧಿಕ ಪ್ರಭೇಧಗಳಿಗೆ ಅವರ ಹೆಸರು ಇರಿಸಲಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ಇತರೆಡೆ ಜನ್ಮದಿನದ ಪ್ರಯುಕ್ತ ಪಾದಯಾತ್ರೆ, ಸಾಕ್ಷ್ಯಚಿತ್ರ-ಸಿನೆಮಾ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ನಡೆದಿದೆ. ಮೇ 8ರಂದು ಲಂಡನ್ನಿನ ಟ್ರಫಾಲ್ಗರ್ ಚೌಕ ದಲ್ಲಿ ಅಟೆನ್‌ಬರೋ ಅವರಂತೆ ಹಾಗೂ ಪ್ರಾಣಿಗಳಂತೆ ವೇಷ ಧರಿಸಿದ ಅಭಿಮಾನಿಗಳು ಹಾಡು ಹಾಡಿ ಸಂಭ್ರಮಿಸಿದ್ದರು. ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಅವರ ಬದುಕು-ವೃತ್ತಿ ಕುರಿತ 90 ನಿಮಿಷ ಅವಧಿಯ ʻ100 ಇಯರ್ಸ್ ಆನ್ ಪ್ಲಾನೆಟ್ ಅರ್ಥ್ʼ ಪ್ರದರ್ಶನ ನಡೆಯಿತು. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಜೂನ್ 2025ರಿಂದ ಭೂಮಿಯ ಚರಿತ್ರೆ ಹಾಗೂ ಮನುಷ್ಯರ ಹಸ್ತಕ್ಷೇಪದ ಪರಿಣಾಮ ಕುರಿತ 50 ನಿಮಿಷ ಕಾಲಾವಧಿಯ ʻಅವರ್ ಸ್ಟೋರಿ ವಿಥ್ ಡೇವಿಡ್ ಅಟೆನ್‌ಬರೋʼ ಪ್ರದರ್ಶಿಸುತ್ತಿದೆ; ಪ್ರದರ್ಶನ ಆಗಸ್ಟ್ 2026 ರವರೆಗೆ ಚಾಲೂ ಇರಲಿದೆ.
ಅದು ಸರಿ: ಅವರಿಂದ ನಾವು ಏನು ಕಲಿತೆವು?: ಏನೂ ಇಲ್ಲ. ನಿಕೋಬಾರ್ ದ್ವೀಪದಲ್ಲಿ 81,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್ (ಐಸಿಟಿಟಿ) ಯೋಜನೆ ಇದಕ್ಕೊಂದು ನಿದರ್ಶನ. ಒಂದು ಲಕ್ಷಕ್ಕೂ ಅಧಿಕ ಮರಗಳ ಹನನ, ಕೇವಲ 237 ಜನಸಂಖ್ಯೆಯ ಶೋಂಪೆನ್ ಮತ್ತು 1094 ಮಂದಿ ನಿಕೋಬಾರಿ ಮೂಲವಾಸಿ ಸಮುದಾಯ ಗಳ ಮೂಲೋತ್ಪಾಟನೆ ಮಾಡುವ ಈ ಯೋಜನೆಯನ್ನು ರಾಷ್ಟ್ರೀಯ ಸುರಕ್ಷತೆ ಹೆಸರಿನಲ್ಲಿ ಮುಂದೊತ್ತಲಾಗುತ್ತಿದೆ. ಕಲ್ಕತ್ತಾ ಹೈಕೋರ್ಟ್, ʻರಾಷ್ಟ್ರೀಯ ಪ್ರಾಮುಖ್ಯತೆ’ ಹೆಸರಿನಲ್ಲಿ ನ್ಯಾಯಾಂಗ ಪರಿಶೀಲ ನೆಯಿಂದ ವಿನಾಯಿತಿ ನೀಡಲು ಆಗುವುದಿಲ್ಲ ಎಂದು ಇತ್ತೀಚೆಗೆ ಹೇಳಿದೆ. ಫೆಬ್ರವರಿ 2026 ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ) ಯೋಜನೆಗೆ ಅನುಮತಿ ನೀಡಿದೆ. ಆದರೆ, ಎನ್‌ಜಿ ಟಿ ನೇಮಿಸಿದ್ದ ಉನ್ನತಾಧಿಕಾರ ಸಮಿತಿ(ಎಚ್‌ಪಿಸಿ)ಯ ವರದಿಯನ್ನು ಕೇಂದ್ರ ಸರ್ಕಾರ ಈವರೆಗೆ ಸಾರ್ವಜನಿಕಗೊಳಿಸಿಲ್ಲ. ವಾರ್ಷಿಕ 5 ದಶಲಕ್ಷ ಟನ್ ಎತ್ತುವಳಿ ಸಾಮರ್ಥ್ಯ ಮೀರಿದ ಬಂದರು ಯೋಜನೆಗಳಿಗೆ ವಿಸ್ತೃತ ಪರಿಸರ ಅಧ್ಯಯನದ ಬಳಿಕ ಅನುಮತಿ ನೀಡಬೇಕು ಎಂಬ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಸೂಚನೆ ಹಾಗೂ ಸಮುದ್ರ ಕೊರೆತಕ್ಕೆ ಒಳಗಾಗುವ ಕರಾವಳಿ ತೀರದಲ್ಲಿ ನಿರ್ಮಿಸುವ ಯೋಜನೆಗಳ ಸಮಗ್ರ ಪರಿಸರ ಮೌಲ್ಯಮಾಪನ ಆಗಬೇಕು ಎನ್ನುವ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯನ್ನು ನಿರ್ಲಕ್ಷಿಸಲಾಗಿದೆ. 2021ರ ಇಸ್ರೋ ಉಪಗ್ರಹ ಮಾಹಿತಿ ಪ್ರಕಾರ, ಗಲಾತಿಯ ಕೊಲ್ಲಿ ಈಗಾಗಲೇ ಸವಕಳಿಗೆ ಈಡಾಗಿದೆ. ಯೋಜನೆಯನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿ ಹಣೆಪಟ್ಟಿ ಕಟ್ಟಲಾಗುತ್ತದೆ. ಉದ್ಯಮಿಯೊಬ್ಬನ ಉದ್ಧಾರಕ್ಕೆ ಕಟಿಬದ್ಧವಾಗಿರುವ ಈ ಸರ್ಕಾ ರಕ್ಕೆ ಇಂಥ ಯೋಜನೆ ಕೂಡದು ಎಂದು ಹೇಳುವವರು ಯಾರು? ಪ್ರಾತಃಸ್ಮರಣೀಯ ಮಾಧವ ಗಾಡ್ಗೀಳ್ ಹಿಂದೊಮ್ಮೆ ಹೇಳಿದ್ದರು, ʼನಮ್ಮದು ಗುತ್ತಿಗೆದಾರರಿಂದ, ಗುತ್ತಿಗೆಗಾರರಿಗಾಗಿ ಮತ್ತು ಗುತ್ತಿಗೆ ಗಾರರಿಗೋಸ್ಕರ ಇರುವ ಪ್ರಜಾಪ್ರಭುತ್ವʼ!
ಸಹಸ್ರ ಚಂದ್ರ ದರ್ಶನ ಮಾಡಿರುವ ಡೇವಿಡ್ ಅಟೆನ್‌ಬರೋ, ಇನ್ನಷ್ಟು ಕಾಲ ನಮ್ಮಲ್ಲಿ ಅರಿವು ಮೂಡಿಸುತ್ತ ಇರಲಿ ಎಂದು ಆಶಿಸೋಣ.

