ಮಹಾಶ್ವೇತಾದೇವಿ, ಹೋರಾಟ ಮತ್ತು ಪ್ರಶಸ್ತಿಗಳಿಗೆ ಪರದಾಟ

ಇದು ಮಹಾಶ್ವೇತಾ ದೇವಿ ಅವರ ಶತಮಾನೋತ್ಸವ ವರ್ಷ(14 ಜನವರಿ 1926- 28 ಜುಲೈ 2016). 100 ಕ್ಕೂ ಅಧಿಕ ಕಾದಂಬರಿ ಮತ್ತು 20 ಕ್ಕೂ ಹೆಚ್ಚು ಸಣ್ಣ ಕಥೆಗಳ ಸಂಕಲನವನ್ನು ಬರೆದಿ ರುವ ಅವರ ಬದುಕು ಮುಖ್ಯವಾಗು ವುದು ಆದಿವಾಸಿಗಳ ಕುರಿತ ಕಾಳಜಿ-ಹೋರಾಟಗಳಿಂದ ಹಾಗೂ ಪ್ರಶಸ್ತಿಗಳ ಹಿಂದೆ ಓಡುವ ಇಂದಿನ ಯುಗಮಾನದಲ್ಲಿ ಆ ಬಗೆಗಿನ ದಿವ್ಯ ನಿರ್ಲಕ್ಷ್ಯದಿಂದ. ಪ್ರಶಸ್ತಿಗಿಂತ ಸೈದ್ಧಾಂತಿಕ ಮೌಲ್ಯಗಳು ಮುಖ್ಯ ಎಂಬ ದೃಢ ನಿಶ್ಚಯದಿಂದ ರಾಜ್ಯ ಸರ್ಕಾರ ಪ್ರಾಯೋಜಿತ ಸಾಹಿತ್ಯ ಪ್ರಶಸ್ತಿಗಳನ್ನು ಅವರು ತಿರಸ್ಕರಿಸಿದರು.

ಬ್ರಿಟಿಷ್ ಇಂಡಿಯಾದ ದಕ್ಕಾ (ಈಗ ಢಾಕಾ, ಬಾಂಗ್ಲಾದೇಶ)ದ ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರ ತಂದೆ ಮನೀಶ್ ಘಟಕ್, ಕವಿ ಮತ್ತು ಕಾದಂಬರಿಕಾರ. ಮನೀಶ್‌ ಅವರ ಸಹೋದರ ಖ್ಯಾತ ಚಿತ್ರ ನಿರ್ಮಾಪಕ ಋತ್ವಿಕ್ ಘಟಕ್. ಮಹಾಶ್ವೇತಾ ಅವರ ತಾಯಿ ಧರಿತ್ರಿ ದೇವಿ ಲೇಖಕಿ ಮತ್ತು ಸಮಾಜಸೇವಕಿ. ಪ್ರಖ್ಯಾತ ಶಿಲ್ಪಿ ಶಂಖೋ ಚೌಧರಿ ಮತ್ತು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ (ಇಪಿಡಬ್ಲ್ಯು) ಯ ಸಂಸ್ಥಾಪಕ ಸಂಪಾದಕ ಸಚಿನ್ ಚೌಧರಿ ಅವರ ಸಹೋದರರು. ಶಾಂತಿನಿಕೇತನ, ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿ ದ್ಯಾನಿಲಯದಲ್ಲಿ ವ್ಯಾಸಂಗದ ಬಳಿಕ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರ ಮೊದಲ ಕಾದಂಬರಿ ಝಾನ್ಸಿ ರಾಣಿಯ ಜೀವನ ಚರಿತ್ರೆ ಯನ್ನು ಆಧರಿಸಿದ ʻಝಾನ್ಸಿರ್ ರಾಣಿ(1956)ʼ. ಹಜಾರ್ ಚೌರಾಸಿಕಿ ಮಾ, ರುಡಾಲಿ ಮತ್ತು ಅರಣ್ಯರ್ ಅಧಿಕಾರ್ ಸೇರಿದಂತೆ 100 ಕ್ಕೂ ಹೆಚ್ಚು ಕಾದಂಬರಿ ಮತ್ತು 20 ಕ್ಕೂ ಹೆಚ್ಚು ಕಥಾ ಸಂಕಲನ ಗಳನ್ನು ಬಂಗಾಳಿಯಲ್ಲಿ ರಚಿಸಿದ್ದಾರೆ. ಅವು ಇಂಗ್ಲಿಷ್‌, ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಯಾರದೀ ಕಾಡು-ಸುಜ್ಞಾನಮೂರ್ತಿ, ಕಾಡಿನ ದಾವೇದಾರ-ಜಿ.ಕುಮಾರಪ್ಪ ಹಾಗೂ ಎಚ್.ಎಸ್. ಶ್ರೀಮತಿ ಅವರು ಹಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯ ಕೃತಿಗಳಲ್ಲದೆ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಬುಡಕಟ್ಟು ಸಮುದಾಯಗಳ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಮಾಡಿದ ಹೋರಾಟದಿಂದ ಹಾಗೂ ತನ್ನನ್ನು ಉಪೇಕ್ಷಿಸಿದ ಸರ್ಕಾರದಿಂದ ಯಾವುದೇ ಪ್ರಶಸ್ತಿ ಸ್ವೀಕರಿಸದೆ ಮುಖಭಂಗ ಮಾಡಿದ್ದರಿಂದ ಅವರು ನಮಗೆ ಮುಖ್ಯವಾಗುತ್ತಾರೆ.

ಪುರಸ್ಕಾರ ಮತ್ತು ಪಕ್ಷಪಾತ: ಬಂಗಾಳದ ಮೂರು ಪ್ರತಿಷ್ಟಿತ ಪುರಸ್ಕಾರಗಳೆಂದರೆ, ಆನಂದ, ರವೀಂದ್ರ ಮತ್ತು ಬಂಕಿಮ್ ಪುರಸ್ಕಾರ. 1950ರಲ್ಲಿ ಆರಂಭಗೊಂಡ ರವೀಂದ್ರ ಪುರಸ್ಕಾರ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯಕ ಗೌರವ. ಈ ಪುರಸ್ಕಾರದ ವಿಜೇತರು ಬಿಭೂತಿಭೂಷಣ ಬಂದ್ಯೋಪಾಧ್ಯಾಯ (ಅವರ ಪಥೇರ್ ಪಾಂಚಾಲಿ ಕೃತಿಯನ್ನು ಸತ್ಯಜಿತ್ ರೇ ಅವರು ಅದೇ ಹೆಸರಿನ ಸಿನೆಮಾ ಮಾಡಿದರು), ತಾರಾಶಂಕರ್ ಬಂದ್ಯೋಪಾಧ್ಯಾಯ ಮತ್ತು ಆಶಾಪೂರ್ಣ ದೇವಿ. 1975 ರಲ್ಲಿ ಪ್ರಾರಂಭವಾದ ಬಂಕಿಮ್ ಪುರಸ್ಕಾರ ಪಡೆದವರು- ಸುನೀಲ್ ಗಂಗೋಪಾ ಧ್ಯಾಯ, ಶಂಕರ್ ಮತ್ತು ಮಹಾಶ್ವೇತಾ ಅವರ ಮಗ ನಬರುನ್ ಭಟ್ಟಾಚಾರ‍್ಯ (1997ರಲ್ಲಿ; ಹರ್ಬರ್ಟ್‌ ಕಾದಂಬರಿಗೆ). 1958ರಲ್ಲಿ ಆರಂಭವಾದ ಆನಂದ ಪುರಸ್ಕಾರವನ್ನು ಆನಂದ ಬಜಾರ್ ಪತ್ರಿಕಾ ಬಳಗ ನೀಡುತ್ತದೆ. ವಿಜೇತರಲ್ಲಿ ಸುನಿಲ್ ಗಂಗೋಪಾಧ್ಯಾಯ, ಬುದ್ಧದೇವ ಬೋಸ್, ಶಿರ್ಶೇಂದು ಮುಖೋಪಾಧ್ಯಾಯ ಮತ್ತು ಪತ್ರಕರ್ತ ಗೌರ್ ಕಿಶೋರ್ ಘೋಷ್(ಇವರು ಮಹಾಶ್ವೇ ತಾ ಅವರಿಗಿಂತ ಮೊದಲು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಿದರು). ಮಗ ಹಾಗೂ ಸಮಕಾಲೀನರಿಗೆ ಸಿಕ್ಕ ಪ್ರಶಸ್ತಿಗಳು ಮಹಾಶ್ವೇತಾ ಅವರಿಂದ ದೂರವೇ ಉಳಿದವು.

ಮಹಾಶ್ವೇತಾ ಅವರ ಕೃತಿಗಳ ಸಂಪಾದಕ ಅಜಯ್‌ ಗುಪ್ತಾ(ಈ ಕೃತಿಗಳನ್ನು ಆನಂದ್ ಪಬ್ಲಿಷರ್ಸ್, ಪತ್ರಭಾರತಿ ಮತ್ತು ಪಶ್ಚಿಮ ಬಂಗಾಳದ ಮೂರು ದೊಡ್ಡ ಪ್ರಕಾಶನಗಳಲ್ಲಿ ಒಂದಾದ ಡೇಸ್ ಪಬ್ಲಿಷಿಂಗ್ ಪ್ರಕಟಿಸಿದೆ), ʻಅವರಿಗೆ ಬಂಗಾಳ ಮತ್ತು ಬಂಗಾಳಿಯ ಯಾವುದೇ ಪ್ರಮುಖ ಪ್ರಶಸ್ತಿ ಸಿಗಲಿಲ್ಲ. ರಾಜ್ಯದ ಸಾಹಿತ್ಯ ಸಂಸ್ಥೆಗಳು ಇಲ್ಲವೇ ರಾಜ್ಯ ಸರ್ಕಾರ ಅವರ ಕೃತಿಗಳನ್ನು ಸಂಭ್ರಮಿ ಸಲಿಲ್ಲʼ ಎಂದು ಹೇಳುತ್ತಾರೆ. ಈ ಉದಾಸೀನಕ್ಕೆ ಕಾರಣವೇನು? 1956ರಲ್ಲಿ ಆರಂಭಗೊಂಡ ಅವರ ಸಾಹಿತ್ಯ ಪಯಣ ಮರಣದೊಂದಿಗೆ ಮುಕ್ತಾಯವಾಗಲಿಲ್ಲ; ಆನಂತರವೂ ಅವರ ಬರಹಗಳು ಪ್ರಕಟವಾಗುತ್ತಲೇ ಇವೆ. ಅವರಿಗೆ 1979ರಲ್ಲಿ ಸಾಹಿತ್ಯ ಅಕಾಡೆಮಿ(ಅರಣ್ಯರ್ ಅಧಿಕಾರ್) ಮತ್ತು‌ 1997ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. ಟ್ಯಾಗೋರ್, ಬಿಭೂತಿಭೂಷಣ ಬಂದ್ಯೋಪಾಧ್ಯಾ ಯ, ತಾರಾಶಂಕರ ಬಂದ್ಯೋಪಾಧ್ಯಾಯ, ಆಶಾಪೂರ್ಣ ದೇವಿ, ಸುನೀಲ್ ಗಂಗೋಪಾಧ್ಯಾಯ ಅವರಂತೆ ಮಹಾಶ್ವೇತಾ ಕೂಡ 20ನೇ ಶತಮಾನದ ಶ್ರೇಷ್ಠ ಬಂಗಾಳಿ ಲೇಖಕರಲ್ಲಿ ಒಬ್ಬರು. ಆದರೆ, ಅವರನ್ನು ಶತಮಾನದ ಅತ್ಯುತ್ತಮ ಎನ್ನಲು ಮೂರು ಕಾರಣಗಳಿವೆ- ಒಂದು ಜ್ಞಾನಪೀಠ ಪ್ರಶಸ್ತಿ; ಈ ಅತ್ಯುನ್ನತ ಪುರಸ್ಕಾರ ಪಡೆದ 6 ಬಂಗಾಲಿ ಲೇಖಕರಲ್ಲಿ ಅವರು ಒಬ್ಬರು. ಎರಡ ನೆಯದು-ಕಾವ್ಯ ಹೊರತುಪಡಿಸಿ ಎಲ್ಲ ಪ್ರಕಾರಗಳಲ್ಲೂ ಕೃತಿ ರಚನೆ. ಮೂರನೆಯದು, ಅವರ ಶೈಲಿ. ಸಾಹಿತ್ಯವನ್ನು ಶಿಷ್ಟ ಭಾಷೆ, ಭದ್ರಲೋಕದಿಂದ ಕೊಳೆಗೇರಿ, ಬೀದಿ, ಹೊಲ, ಗದ್ದೆ, ಕಾರ್ಖಾನೆಗೆ ತಂದರು; ಜನಸಾಮಾನ್ಯರ ವಿಶಿಷ್ಟ ಭಾಷೆ, ನುಡಿಗಟ್ಟುಗಳು ಮತ್ತು ಮಾತುಗಳನ್ನು ಅಕ್ಷರಕ್ಕೆ ಇಳಿಸಿದರು. ಮೈಕಲ್ ಮಧುಸೂದನ್ ದತ್, ರವೀಂದ್ರನಾಥ ಟ್ಯಾಗೋರ್ ನಂತರದ ಪ್ರಮುಖ ಶೈಲೀಕೃತ ಬರಹಗಾರ್ತಿ ಅವರು. ಇದರಿಂದ ಪುರುಷ ಲೇಖಕರು ಮತ್ತು ಭದ್ರಲೋಕದ ಭಂಟರು ಮುನಿದರು; ಪ್ರಶಸ್ತಿಗಳು ದೂರವಾದವು.

ಪ್ರಶಸ್ತಿ-ಪುರಸ್ಕಾರಗಳು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯಪ್ರೇರಿತ. ಲೇಖಕನ ಬರವಣಿಗೆಯ ಗುಣಮಟ್ಟವೊಂದೇ ಪ್ರಶಸ್ತಿಗೆ ಮಾನದಂಡ ಆಗಿರುವುದಿಲ್ಲ; ರಾಜಕೀಯ ಅಧಿಕಾರ-ಸಿದ್ಧಾಂತಕ್ಕೆ ಹೊಂದಿಕೆಯಾಗುವವರಿಗೆ ಪ್ರಶಸ್ತಿ- ಪುರಸ್ಕಾರ ಸಿಗುವುದು ಅಸಹಜವೇನಲ್ಲ. ಮಹಾಶ್ವೇತಾ ಅವರ ಬರಹಗಳಲ್ಲಿನ ರಾಜಕೀಯ ನಿಲುವುಗಳು ಹಾಗೂ ಸಾಮಾಜಿಕ ಕ್ರಿಯಾಶೀಲತೆ ಕೆಲವರಿಗೆ ಪಥ್ಯ ವಾಗಲಿಲ್ಲ. ಅವರು ಭದ್ರಲೋಕಕ್ಕೆ ಸೇರಿದ್ದರೂ, ಅವರದು ವಿಭಿನ್ನ ಬರವಣಿಗೆ; 1973-74ರಲ್ಲಿ ಪ್ರಕಟಿಸಿದ ʻಹಜಾರ್ ಚೌರಾಸಿಕಿ ಮಾʼ ಅವರ ಹೆಗ್ಗುರುತು ಮತ್ತು ನಕ್ಸಲ್‌ ಚಳವಳಿಯ ಸ್ಮರಣೀ ಯ ಕೃತಿಗಳಲ್ಲಿ ಒಂದು. 1956ರಿಂದಲೇ ಬರವಣಿಗೆಯಲ್ಲಿ ತೊಡಗಿದ್ದರೂ, ʻಹಜಾರ್…‌ʼ ಬಳಿಕ ಮುಖ್ಯ ಲೇಖಕಿಯಾಗಿ ಹೊರಹೊಮ್ಮಿದರು.

ನಂತರದ ಕಾದಂಬರಿ, ʻಅರಣ್ಯರ್ ಅಧಿಕಾರ್ (ಅವರ ಅರಣ್ಯದ ಹಕ್ಕು)ʼ ಬುಡಕಟ್ಟು ಸಮುದಾಯಗಳ ಅರಣ್ಯದ ಹಕ್ಕುಗಳು ಮತ್ತು ಬ್ರಿಟಿಷ್ ವಸಾಹತುಶಾಹಿ ನಡುವಿನ ಸಂಘರ್ಷವನ್ನು ಅನಾ ವರಣಗೊಳಿಸುತ್ತದೆ. ನಮ್ಮ ಮಕ್ಕಳು ಶಾಲೆಯಲ್ಲಿ ಓದುವ ಇತಿಹಾಸದಲ್ಲಿ ಮುಖ್ಯವಾಹಿನಿಯ ವಿಶೇಷ ವ್ಯಕ್ತಿಗಳು ಕೇಂದ್ರವಾಗಿರುತ್ತಾರೆ. ಆದರೆ, ಮಹಾಶ್ವೇತಾ ಅವರ ಕೃತಿಗಳು ಆದಿವಾಸಿ ಗಳನ್ನು ಕೇಂದ್ರವಾಗಿಟ್ಟುಕೊಂಡು, ಸರ್ಕಾರಗಳ ನೀತಿಯನ್ನು ಕಟುವಾಗಿ ಟೀಕಿಸಿದವು. ಅಧಿಕಾರಶಾಹಿಯು ಬುಡಕಟ್ಟು ಜನರ ಮೇಲೆ ನಿರ್ಬಂಧಗಳನ್ನು ಹೇರುತ್ತದೆ; ಅವರನ್ನು ಶೋಷಿಸುವ ಊಳಿಗಮಾನ್ಯ ವ್ಯವಸ್ಥೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ. ʻಪರಿಭಾವಿತ ಕ್ರಿಮಿನಲ್ ಬುಡಕಟ್ಟುಗಳ ವಿಷಯದಲ್ಲಿ ರಾಜ್ಯ ನನಗೆ ಬಹಳ ನಿರಾಶೆಯುಂಟು ಮಾಡಿದೆʼ ಎಂದು ಅವರು ʻಬರ್ತಿಕಾʼ ನಿಯತಕಾಲಿಕದ ಸಂಪಾದಕೀಯದಲ್ಲಿ ಬರೆದಿದ್ದರು. ಪಶ್ಚಿಮ ಬಂಗಾಳ ಸರ್ಕಾರ ತನ್ನನ್ನು ಪ್ರಗತಿಪರ ಎಂದು ಘೋಷಿಸಿಕೊಳ್ಳುವುದನ್ನು ಟೀಕಿಸಿದ್ದರು. ಆಶ್ಚರ್ಯಕರ ವಿಷಯವೆಂದರೆ, ಬರ್ತಿಕಾಗೆ ಎಡರಂಗದ ಸರ್ಕಾರ ಜಾಹೀರಾತು ನೀಡುತ್ತಿತ್ತು; ಜಾಹೀರಾತು ನೀಡುತ್ತಿದ್ದ 57 ಜಾಹೀರಾತುದಾರರಲ್ಲಿ 26 ಸರ್ಕಾರದ ಇಲಾಖೆಗಳಾಗಿದ್ದವು.

ಭೂ ಸ್ವಾಧೀನದ ವಿರುದ್ಧ ಹೋರಾಟ: ಪಶ್ಚಿಮ ಬಂಗಾಳ ಸರ್ಕಾರದ ಕೈಗಾರಿಕಾ ನೀತಿ ವಿರುದ್ಧದ ಚಳವಳಿಯನ್ನು ಅವರು ಮುನ್ನಡೆಸಿದರು. ಸರ್ಕಾರ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು, ಅದನ್ನು ಕೈಗಾರಿಕೆಗಳಿಗೆ ಕಡಿಮೆ ಬೆಲೆಗೆ ಮಾರುತ್ತಿತ್ತು. ಸಿಂಗೂರ್‌ ಮತ್ತು ನಂದಿಗ್ರಾಮದಲ್ಲಿ ನಡೆದ ಆಂದೋಲನ ಯಶಸ್ವಿಯಾಯಿತು. 2011 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರು; ಈ ಚುನಾವಣೆಯಲ್ಲಿ 1977 ರಿಂದ 2011ರವರೆಗೆ ಆಡಳಿತ ನಡೆಸಿದ ಸಿಪಿಐ(ಎಂ)ನ 34 ವರ್ಷಗಳ ಸುದೀರ್ಘ ಆಳ್ವಿಕೆ ಕೊನೆಗೊಂಡಿತು. ಪರಿಭಾವಿತ(ಡಿನೋಟಿಫೈಡ್) ಕ್ರಿಮಿನಲ್ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಲು ಸಂಘಟನೆಯನ್ನು ಕಟ್ಟಿದ ಖ್ಯಾತ ಭಾಷಾ ವಿದ್ವಾಂಸ ಗಣೇಶ್ ದೇವಿ, ಮಹಾಶ್ವೇತಾ ಅವರ ನಿಕಟವರ್ತಿ. ʻಬಂಗಾಳದ ಸಾಹಿತಿಗಳು ಅವರನ್ನು ಗೌರವಿಸುತ್ತಿರಲಿಲ್ಲ; ಚಾರಿತ್ರ್ಯ ಹರಣದ ಛಾಯೆ ಇತ್ತು. ಆದರೆ, ಜೀವನದ ಕೊನೆಯ ವರ್ಷಗಳಲ್ಲಿ ಅತ್ಯಂತ ಗೌರವದಿಂದ ನಡೆಸಿಕೊಂಡರುʼ ಎಂದು ದೇವಿ ಹೇಳುತ್ತಾರೆ. ಮಹಾಶ್ವೇತಾ ಅವರ ಕೃತಿ ʻಹಜಾರ್‌ ಚೌರಾಸಿಕಿ ಮಾ(ಮದರ್‌ ಆಫ್‌ 1084)ʼ ಅನುವಾದಕ ಸಮೀಕ್‌ ಬಂದ್ಯೋಪಾಧ್ಯಾಯ,ʼ ಆಸಕ್ತಿದಾಯಕ ಸಂಗತಿಯೆಂದರೆ, ಅವರು ಬೆಂಬಲಿಸಿದ ತೃಣಮೂಲ ಕಾಂಗ್ರೆಸ್ ಕೂಡ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಿಲ್ಲ,ʼ ಎನ್ನುತ್ತಾರೆ. ಅವರನ್ನು ಬಂಗಾಳ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಿಸಲಾ ಯಿತು; ಆದರೆ, ತನ್ನ ಆಯ್ಕೆಗಳನ್ನು ತಿರಸ್ಕರಿಸಲಾಗಿದೆ ಎಂದು 2012ರಲ್ಲಿ ರಾಜೀನಾಮೆ ನೀಡಿದರು.

ನಿಲುವು ಬದಲು: ಎಡರಂಗ 2007-08ರಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಮಹಾಶ್ವೇತಾ ಅವರ ಮನವೊಲಿಕೆಗೆ ಮುಂದಾಗಿತ್ತು. ಆದರೆ, ʻಹಲವು ವರ್ಷಗಳ ಹಿಂದೆ ನನ್ನ ಮಗ ಸ್ವೀಕ ರಿಸಿದ ಪ್ರಶಸ್ತಿಯನ್ನು ಅವನಿಗಿಂತ ಮುಂಚೆಯೇ ಲೇಖಕಿಯಾದ ತಾನು ಸ್ವೀಕರಿಸಲು ಸಾಧ್ಯವಿಲ್ಲʼ ಎಂದು ನಿರಾಕರಿಸಿದರು. ಪ್ರಶಸ್ತಿ ಸ್ವೀಕರಿಸುವಂತೆ ಮತ್ತೊಮ್ಮೆ ಒತ್ತಾಯ ಬಂದಾಗ, ಬುಡಕಟ್ಟು ಜನರ ಪ್ರತಿರೋಧದ ಶೌರ್ಯೀಕರಣವು ಬ್ರಿಟಿಷ್ ವಿರೋಧಿ ಹೋರಾ ಟಕ್ಕೆ ಕಾರ‍್ಮಿಕ ಚಳವಳಿ ನೀಡಿದ ಕೊಡುಗೆಯನ್ನು ಕಸಿದಿದೆ ಎಂದು ಬಾಂಗ್ಲಾ ಅಕಾಡೆಮಿ ಕಾರ್ಯದರ್ಶಿ ʻಅರಣ್ಯರ್ ಅಧಿಕಾರ್ʼ ನ್ನು ಟೀಕಿಸಿದ್ದರು ಎಂದು ಪ್ರಶಸ್ತಿಯನ್ನು ನಿರಾಕರಿಸಿದರು. ಆನಂದ ಪುರಸ್ಕಾರ ಬಾರದೆ ಇರಲು ಬೇರೆಯದೇ ಕಾರಣ ಇರಬಹುದು: ವೃತ್ತಿಜೀವನದ ಆರಂಭದಲ್ಲಿ ಮಹಾಶ್ವೇತಾ ಅವರು ಸುಮಿತ್ರಾದೇವಿ ಎಂಬ ಗುಪ್ತನಾಮದಿಂದ ಬರೆಯುತ್ತಿದ್ದರು. ಅವರ ಕಥೆಗಳು ಆನಂದ ಬಜಾರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು; ಪ್ರತಿ ಕಥೆಗೆ 25 ರೂ. ಗೌರವಧನ ನೀಡಲಾಗುತ್ತಿತ್ತು. ಆದರೆ, ಒಮ್ಮೆ 20 ರೂ. ಕಳುಹಿಸಿದ್ದರಿಂದ ಸ್ವೀಕರಿಸಲು ನಿರಾಕರಿಸಿದರು; ಈ ಸಂಬಂಧ ಸಂಪಾದಕ ಅಶೋಕ್ ಸರ್ಕಾರ್ ಜೊತೆಗೆ ಜಗಳ ನಡೆದಿತ್ತು. ಅವರ ಮೊದಲ ಪುಸ್ತಕ ʻದಿ ಕ್ವೀನ್ ಆಫ್ ಝಾನ್ಸಿʼ ಆನಂದ ಬಜಾರ್ ಸಮೂಹದ ನಿಯತಕಾಲಿಕೆ ʻದೇಶ್‌ʼ ನಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಆನಂತರವೂ ಅವರ ಕಥೆಗಳು ದೇಶ್‌ನಲ್ಲಿ ಪ್ರಕಟಗೊಂಡವು. ಆದರೆ, ಎಬಿಪಿ ಬಳಗ ನೀಡುವ ಆನಂದ ಪುರಸ್ಕಾರ ಅವರಿಗೆ ಬರಲಿಲ್ಲ. ಜೀವನದ ಕಡೆಯ ಎರಡು ದಶಕಗಳಲ್ಲಿ ತಮಗೆ ದೊಡ್ಡ ಪುರಸ್ಕಾರಗಳನ್ನು ನೀಡಲು ಸಾಲುಗಟ್ಟಿ ನಿಂತಿದ್ದಾರೆ ಎಂಬುದು ಅವರಿಗೆ ಗೊತ್ತಿತ್ತು. ಆದರೆ, ಅವರು ಒಪ್ಪಿಕೊಳ್ಳಲಿಲ್ಲ; ʻಒಂದು ಸಹಿ ಹಾಕಲು ನಾಗರಿಕರನ್ನು ಕಂಬ ಸುತ್ತಿಸುವವರು ಪಾಠ ಕಲಿಯಲಿʼ ಎಂದು ಆಟವಾಡಿಸಿದರು. ಅವರೊಂದು ಒಂಟಿ ಸಲಗ.

ಇಂದಿಗೂ ಪ್ರಶಸ್ತಿ-ಪುರಸ್ಕಾರಗಳ ಪ್ರಹಸನ ಮುಂದುವರಿದಿದೆ; ಗ್ರಾಮ ಪಂಚಾಯಿತಿ ಮಟ್ಟದ ಸಂಸ್ಥೆಯೊಂದು ರಾಜ್ಯ ಪ್ರಶಸ್ತಿ ನೀಡುತ್ತದೆ; ಜಿಲ್ಲಾ ಮಟ್ಟದ ಸಂಸ್ಥೆ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಸಂಸ್ಥೆ ಜಾಗತಿಕ ಪುರಸ್ಕಾರ ನೀಡುತ್ತದೆ. ಇದಕ್ಕೆ ಸೂಕ್ತ ಶುಲ್ಕ ಕಸಿಯಲಾಗುತ್ತದೆ; ವಿಶ್ವವಿದ್ಯಾನಿಲಯಗಳು ಸುಲಿಗೆಕೋರರಿಗೂ ಗೌರವ ಡಾಕ್ಟೊರೆಟ್‌ ನೀಡುತ್ತವೆ; ವೇದಿಕೆ ಯಾವುದೇ ಇರಲಿ, ಕಾವ್ಯ ವಾಚನ/ಪುರಸ್ಕಾರ ಸ್ವೀಕಾರ ನಡೆಯುತ್ತದೆ; ತಾವು ಮಧ್ಯ ಪಂಥೀಯರು ಎಂದುಕೊಳ್ಳುತ್ತ ಹಾರ-ಶಾಲಿಗೆ ತಲೆಯೊಡ್ಡುತ್ತಾರೆ. ಇಂಥವರ ಮಧ್ಯೆ ಮಹಾಶ್ವೇತಾ ದೇವಿಯಂಥವರು ಕಾರ್ಮುಗಿಲಿನಲ್ಲಿ ಹಡಗುಗಳಿಗೆ ದಾರಿ ತೋರಿಸುವ ದೀಪಸ್ತಂಭದಂತೆ ಕಂಗೊಳಿಸುತ್ತಾರೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top