ನೀಟ್‌ ಅವ್ಯವಸ್ಥೆ: ನಿರ್ಲಕ್ಷ್ಯ, ಉತ್ತರದಾಯಿತ್ವವಿಲ್ಲದ ಆಡಳಿತದ ಫಲ

ಮೇ 3, 2026ರಂದು ನೀಟ್-ಯುಜಿಸಿ(ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತೆ ಪರೀಕ್ಷೆ) ಪರೀಕ್ಷೆ ನಡೆದ 9 ದಿನಗಳ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಿತು; ಸರ್ಕಾರ ಸಿಬಿಐ ತನಿಖೆಗೆ ಮುಂದಾಯಿತು. ವೈದ್ಯರ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ ಕದ ತಟ್ಟಿತು.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಒಂದು ವಿಷವೃತ್ತ. ರಾಜಕೀಯ ನಾಯಕರ ಖಾಸಗಿ ವೈದ್ಯ ಕಾಲೇಜುಗಳು, ಹಲವು ಸಾವಿರ ಕೋಟಿ ರೂ. ಮೌಲ್ಯದ ಕೋಚಿಂಗ್‌ ಉದ್ಯಮ ಮತ್ತು ವೈದ್ಯ ಪದವಿಯ ಸಾಮಾಜಿಕ ಪ್ರತಿಷ್ಠೆ ಇದರಲ್ಲಿ ಕೈ ಜೋಡಿಸಿವೆ. ಜೈಪುರದಲ್ಲಿ 2021ರಲ್ಲಿ, ಪಠಣಾ-ಹಜಾರಿಭಾಗ್‌ನಲ್ಲಿ 2024ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು; 67 ವಿದ್ಯಾರ್ಥಿಗಳು 720 ಅಂಕ ಗಳಿಸಿದ್ದು ಮತ್ತು ಆಯ್ದ ಕೇಂದ್ರಗಳಲ್ಲಿ ಕೃಪಾಂಕ(ಗ್ರೇಸ್)‌ ನೀಡಿದ್ದು ಸುಪ್ರೀಂ ಕೋರ್ಟ್‌ ತಲುಪಿತ್ತು. ಆದರೆ, ನ್ಯಾಯಾಲಯ ಫಲಿತಾಂಶವನ್ನು ಎತ್ತಿಹಿಡಿಯಿತು; ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿದ್ದರು. ಆದರೆ, 24 ಲಕ್ಷ ವಿದ್ಯಾರ್ಥಿಗಳಿಗೆ ಮಾನಸಿಕ ಕ್ಷೋಭೆ, ಭಾವನಾತ್ಮಕ ಒತ್ತಡ ಆಗಬಹುದು ಎಂಬ ಹಿನ್ನೆಲೆಯಲ್ಲಿ ಮರುಪರೀಕ್ಷೆಗೆ ಸಮ್ಮತಿಸಿರಲಿಲ್ಲ. ಈ ವರ್ಷ ಪುಣೆ ಮೂಲದ ವೃತ್ತಿ ಸಲಹೆಗಾರನಿಗೆ ಮುದ್ರಣಕ್ಕೆ ಹೋಗುವ ಮುನ್ನ ಪ್ರಶ್ನೆಪತ್ರಿಕೆ ಸಿಕ್ಕಿದೆ. ಏಪ್ರಿಲ್‌ 29ರೊಳಗೆ 500-600 ಪ್ರಶ್ನೆಗಳಿದ್ದ ಪಿಡಿಎಫ್‌ ಪ್ರತಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೆಯಾಗಿದೆ. ಇದರಲ್ಲಿದ್ದ 120 ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಇದ್ದವು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಸಿಬಿಐ ಎನ್‌ಟಿಎ ಪ್ಯಾನೆಲ್‌ ಸದಸ್ಯ ಸೇರಿದಂತೆ ಹಲವರನ್ನು ಬಂಧಿಸಿದೆ. ಜೂನ್‌ 21ಕ್ಕೆ ಮರು ಪರೀಕ್ಷೆ ನಿಗದಿ ಯಾಗಿದೆ. 2025ರಲ್ಲಿ ರಾಜಸ್ಥಾನದ ಜನ್ವಾರಾಮಗಢದ ಬಿವಾಲ್‌ ಕುಟುಂಬದ ನಾಲ್ವರು ನೀಟ್-ಯುಜಿಯಲ್ಲಿ ತೇರ್ಗಡೆಯಾಗಿದ್ದರು. ಇದೊಂದು ಪವಾಡ ಎಂದು ಹಾಡಿಹೊಗಳಲಾಗಿತ್ತು. ವಿಕಾಸ್‌ ಬಿವಾಲ್‌ 2026ರ ಸೋರಿಕೆ ಹಿಂದೆ ಇರುವ ಕಾರ್ಯಜಾಲದಿಂದಲೇ ಪ್ರಶ್ನೆಪತ್ರಿಕೆ ಖರೀದಿಸಿದ್ದ ಎನ್ನಲಾಗಿದೆ. ಈ ಪ್ರಕರಣವನ್ನೂ ಸಿಬಿಐ ತನಿಖೆ ನಡೆಸುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ನೀಟ್-ಯುಜಿ ದಂಧೆಯ ಒಂದು ಭಾಗ ಮಾತ್ರ.

ಕಠಿಣ ಪರೀಕ್ಷೆ: ಭಾರತೀಯ ವೈದ್ಯ ಮಂಡಳಿ(ಎಂಸಿಐ) 2010ರಲ್ಲಿ ಸಾಮಾನ್ಯ ವೈದ್ಯ ಪರೀಕ್ಷೆಯನ್ನು ಪ್ರಸ್ತಾಪಿಸಿತು. ಆದರೆ, ಅಪಾರದರ್ಶಕತೆ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಎಂಸಿಐ ರದ್ದುಗೊಂಡು, ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯಾಯಿತು. ನೀಟ್‌ ಮೊದಲ ಪರೀಕ್ಷೆ ನಡೆದದ್ದು 2013ರಲ್ಲಿ. ಹಲವು ರಾಜ್ಯಗಳು ಹಾಗೂ ಖಾಸಗಿ ವೈದ್ಯ ಕಾಲೇಜುಗಳು ಕಾನೂನು ಹೋರಾಟ ನಡೆಸಿ ದ್ದರಿಂದ, ಸುಪ್ರೀಂ ಕೋರ್ಟ್‌ ತಾತ್ಕಾಲಿಕವಾಗಿ ರದ್ದು ಗೊಳಿಸಿತು. ಆನಂತರ 2016ರಲ್ಲಿ ಪರೀಕ್ಷೆಯನ್ನು ಮರುಸ್ಥಾಪಿಸಿತು. ಸರ್ಕಾರಿ, ಖಾಸಗಿ, ಪರಿಭಾವಿತ ಮತ್ತು ಕೇಂದ್ರೀಯ ವೈದ್ಯ ಶಿಕ್ಷಣ ಸಂಸ್ಥೆಗಳ ಎಂಬಿಬಿಎಸ್‌ ಸೇರಿದಂತೆ 10 ವೈದ್ಯಕೀಯ ಕೋರ್ಸ್‌ಗಳಿಗೆ ಈ ಪರೀಕ್ಷೆ ಪ್ರವೇಶ ಕಲ್ಪಿಸಲಿದೆ. ಹೆಚ್ಚು ಸ್ಪರ್ಧೆ ಇರುವುದು ಎಂಬಿಬಿಎಸ್‌ಗೆ. ದೇಶಾದ್ಯಂತ 1.29 ಲಕ್ಷ ವೈದ್ಯ ಸೀಟುಗಳು ಲಭ್ಯವಿವೆ. ಪರೀಕ್ಷೆ 13 ಭಾಷೆಗಳಲ್ಲಿ ನಡೆಯಲಿದ್ದು, ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರಕ್ಕೆ ಸಂಬಂಧಿಸಿದ 180 ಕಡ್ಡಾಯ ಪ್ರಶ್ನೆಗಳಿರುತ್ತವೆ. ಸರಿ ಉತ್ತರಕ್ಕೆ +4 ಹಾಗೂ ತಪ್ಪು ಉತ್ತರಕ್ಕೆ -1 ಅಂಕ ಇರುತ್ತದೆ. ಉತ್ತಮ ಕಾಲೇಜಿನಲ್ಲಿ ಉಚಿತ ಸೀಟು ಸಿಗಬೇಕೆಂದರೆ, 650-720 ಅಂಕ ಗಳಿಸಬೇಕಾಗುತ್ತದೆ. ಈ ವರ್ಷ ದೇಶದ 551 ಹಾಗೂ ಹೊರದೇಶಗಳ 14 ನಗರಗಳ 5,432 ಪರೀಕ್ಷಾ ಕೇಂದ್ರ ಗಳಲ್ಲಿ 22.79 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‌ಜಿಒ)ಗೆ ಸಿಕ್ಕಿದ ಕೈಬರಹದ ʻಊಹೆ ಪ್ರಶ್ನೆಪತ್ರಿಕೆʼ ಯಲ್ಲಿ ಜೀವಶಾಸ್ತ್ರದ 90 ಹಾಗೂ ರಸಾ ಯನಶಾಸ್ತ್ರದ 30 ಪ್ರಶ್ನೆಗಳು ಯಥಾವತ್‌ ಇದ್ದವು. ಇದರಿಂದ ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್‌ ಸಿಂಗ್‌, ಪರೀಕ್ಷೆ ರದ್ದುಗೊಳಿಸಿದರು.

ಡಿಸೆಂಬರ್‌ 2025ರಲ್ಲಿ ಮಂಡನೆಯಾದ ಸಂಸದೀಯ ಸ್ಥಾಯಿ ಸಮಿತಿ ವರದಿ ಪ್ರಕಾರ, ಎನ್‌ಟಿಎ ನಡೆಸಿದ 14 ಪ್ರಮುಖ ಪರೀಕ್ಷೆಗಳಲ್ಲಿ 5 ಗಂಭೀರ ಸಮಸ್ಯೆ(ಪ್ರಶ್ನೆಪತ್ರಿಕೆ ಸೋರಿಕೆ, ಪ್ರಶ್ನೆಗಳಲ್ಲಿ ತಪ್ಪು ಗಳು, ಫಲಿತಾಂಶದಲ್ಲಿ ವಿಳಂಬ ಇತ್ಯಾದಿ) ಎದುರಿಸಿದ್ದವು. ಜೂನ್‌ 2024ರಲ್ಲಿ ಯುಜಿಸಿ-ಎನ್‌ಇಟಿ ಪರೀಕ್ಷೆ ನಡೆದ ಮಾರನೇ ದಿನವೇ ರದ್ದುಗೊಳಿಸಲಾಯಿತು. ಜನವರಿ 2025ರಲ್ಲಿ ಜೆಇಇ(ಮೇನ್ಸ್)‌ ಪ್ರಶ್ನೆಪತ್ರಿಕೆಯಲ್ಲಿನ 12 ಪ್ರಶ್ನೆಗಳನ್ನು ಕೈಬಿಡಲಾಗಿತ್ತು. ಮೇ 30, 2026ರಂದು ತಾಂತ್ರಿಕ ದೋಷದಿಂದ ಸಿಯುಇಟಿ-ಯುಜಿ ಪರೀಕ್ಷೆ ವಿಳಂಬವಾಗಿದೆ. ಹೀಗೆ ಈ ಸರಣಿ ಮುಂದುವರಿಯುತ್ತದೆ.

ಸಮಸ್ಯೆಯೇನು?: ಎನ್‌ಟಿಎ ಜಂಟಿ ಪ್ರವೇಶ ಪರೀಕ್ಷೆ(ಜೆಇಇ ಮೇನ್)‌, ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ), ಯುಜಿಸಿ-ಎನ್‌ಇಟಿ ಸೇರಿದಂತೆ ಹಲವು ಆಯ್ಕೆ-ಶಿಷ್ಯವೇತನ ಪರೀಕ್ಷೆಗಳನ್ನು ನಡೆಸುತ್ತದೆ. 2024ರಲ್ಲಿ ಲೋಕಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಎನ್‌ಟಿಎ 2016ರ ನಂತರ 240ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದು, 5.4 ಕೋಟಿ ಮಂದಿ ಪರೀಕ್ಷೆ ತೆಗೆದು ಕೊಂಡಿದ್ದರು. ಈ ಗಾತ್ರವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಮೊದಲಿಗೆ, ಪ್ರಶ್ನೆಪತ್ರಿಕೆಯ ಸುರಕ್ಷತೆ. ಲೇಖನಿ-ಕಾಗದ ಮಾದರಿಯಲ್ಲಿ ಪ್ರಶ್ನೆಪತ್ರಿಕೆಗಳ ಮುದ್ರಣ, ಸಂಗ್ರಹಣೆ ಮತ್ತು ದೇಶದೆಲ್ಲೆಡೆಯ ಪರೀಕ್ಷಾ ಕೇಂದ್ರಗಳಿಗೆ ರವಾನೆ ಆಗಬೇಕಿರುವುದರಿಂದ, ಸೋರಿಕೆ ಸಾಧ್ಯತೆಯಿರುತ್ತದೆ. ಪ್ರಾಧಿಕಾರವು ಪ್ರಶ್ನೆಪತ್ರಿಕೆಗಳ ಮುದ್ರಣ, ವಿತರಣೆ, ಪರೀಕ್ಷಾ ಕೇಂದ್ರಗಳ ನಿರ್ವಹಣೆ, ಬಯೋಮೆಟ್ರಿಕ್‌ ದೃಢೀಕರಣ ಮತ್ತು ಫಲಿತಾಂಶ ಪರಿಷ್ಕರಣೆಗೆ ಮಧ್ಯಸ್ತಗಾರರನ್ನು ಆಧರಿಸಿದೆ. ಇದರೊಟ್ಟಿಗೆ ಸಂಸ್ಥೆಗೆ ಸ್ಥಿರ ನಾಯಕತ್ವದ ಸಮಸ್ಯೆ ಇದೆ; 2024-26ರ ಅವಧಿಯಲ್ಲಿ ಎನ್‌ಟಿಎಗೆ ಮೂವರು ಮಹಾ ನಿರ್ದೇಶಕರು ಬಂದುಹೋಗಿದ್ದಾರೆ. ಇದರಿಂದ ಸಾಂಸ್ಥಿಕ ಸುಧಾರಣೆ ಮತ್ತು ಸ್ಥಿರತೆ ಸಾಧ್ಯವಾಗಿಲ್ಲ.

ಎರಡನೆಯದು-ಸಿಬ್ಬಂದಿ ಕೊರತೆ. ಪ್ರತಿವರ್ಷ 18 ರಾಷ್ಟ್ರೀಯ ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ ಇದೆ. ಡಿಸೆಂಬರ್‌ 2024ರಲ್ಲಿ ಎನ್‌ಟಿಎಯಲ್ಲಿ ಬೇರೆ ಇಲಾಖೆಗಳಿಂದ ಬಂದ 22 ಎರವಲು ಸಿಬ್ಬಂದಿ, 38 ಗುತ್ತಿಗೆ ಸಿಬ್ಬಂದಿ ಹಾಗೂ ಖಾಸಗಿ ಬಾಹ್ಯ ಏಜೆನ್ಸಿಗಳ 138 ಸಿಬ್ಬಂದಿ ಇದ್ದರು. 2026ರ ವರದಿ ಪ್ರಕಾರ, 2024ರಲ್ಲಿ ಸಾಂಸ್ಥಿಕ ಸುಧಾರಣೆ ಹಿನ್ನೆಲೆಯಲ್ಲಿ ಸೃಷ್ಟಿಸಿದ್ದ ಹುದ್ದೆ ಗಳಲ್ಲಿ ಶೇ.50ರಷ್ಟು ಖಾಲಿ ಇದೆ.

ಮೂರನೆಯದು ಕುಂದುಕೊರತೆ ನಿವಾರಣೆ ವ್ಯವಸ್ಥೆ. ಪರೀಕ್ಷೆಯ ಸುರಕ್ಷತೆ, ಮಧ್ಯಸ್ಥಗಾರರ ನಿರ್ವಹಣೆ, ದತ್ತಾಂಶ ಪ್ರೊಟೋಕಾಲ್‌ ಮತ್ತು ಕುಂದುಕೊರತೆ ನಿವಾರಣೆಯ ಮೌಲ್ಯಮಾಪನ ಆಗುತ್ತಿಲ್ಲ. ಇಂಥ ಮೌಲ್ಯಮಾಪನವನ್ನು ಸಿಎಜಿ(ಮಹಾಲೇಖಪಾಲರು) ಮತ್ತಿತರ ಸಂಸ್ಥೆಗಳು ಮಾಡುತ್ತವೆ. ಎನ್‌ಟಿಎ ಸೊಸೈಟಿಗಳ ನೋಂದಣಿ ಕಾಯಿದೆ 1860ರಡಿ ನೋಂದಣಿಯಾಗಿದೆ; ಅದು ಲೋಕಸೇವಾ ಆಯೋಗ(ಯುಪಿಎಸ್‌ಸಿ) ಇಲ್ಲವೇ ಸಿಬ್ಬಂದಿ ನೇಮಕ ಆಯೋಗ(ಎಸ್‌ಎಸ್‌ಸಿ) ದಂತೆ ಶಾಸನಾತ್ಮಕ ಸಂಸ್ಥೆಯಲ್ಲ. ಹೀಗಾಗಿ, ಸಂಸತ್ತಿಗೆ ಉತ್ತರದಾಯಿಯಲ್ಲ ಮತ್ತು ಸಂಸದೀಯ ಸಮಿತಿಗಳ ತನಿಖೆ ಯಿಂದ ರಕ್ಷಿಸಿಕೊಳ್ಳುತ್ತಿದೆ. ಯುಪಿಎಸ್‌ಸಿ ಕೆಲವೇ ಕೆಲವು ಪರೀಕ್ಷೆಗಳನ್ನು ತನ್ನದೇ ಸಾಂಸ್ಥಿಕ ಚೌಕಟ್ಟಿನಲ್ಲಿ ನಡೆಸುತ್ತದೆ. ಆದರೆ, ಎನ್‌ಟಿಎ ಹರವು ವಿಶಾಲವಾದುದು; ಅದು ಹಲವು ನಗರಗಳಲ್ಲಿ ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪಾಲ್ಗೊಳ್ಳುವ ಪರೀಕ್ಷೆಗಳನ್ನು ನಡೆಸುತ್ತದೆ. ಆದರೆ, ವ್ಯಾಪ್ತಿಗೆ ತಕ್ಕಂತೆ ಸಾಂಸ್ಥಿಕ ಮೂಲಸೌಕರ್ಯ ಬೆಳೆದಿಲ್ಲ. ಎನ್‌ಇಇಟಿ-ಯುಜಿ ಪರೀಕ್ಷೆಯನ್ನು ನಾಗರಿಕ ಸೇವೆಗಳ ಪರೀಕ್ಷೆಗೆ ಹೋಲಿಸಲು ಆಗುವುದಿಲ್ಲ. ನೀಟ್‌ನ ಪ್ರತಿಯೊಂದು ಅಂಕ ಹಲವು ಆಯಾಮಗಳನ್ನು ಒಳಗೊಂಡಿರುತ್ತದೆ; ಖಾಸಗಿ ಕೋಚಿಂಗ್‌ಗೆ ಮಾಡಿದ ವೆಚ್ಚ, ಯಾವ ಕಾಲೇಜಿನಲ್ಲಿ/ಎಲ್ಲಿ ಸೀಟ್‌ ಸಿಗುತ್ತದೆ ಎಂಬು ದನ್ನು ಹಾಗೂ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ; ಪೋಷಕರ ಪ್ರತಿಷ್ಠೆ, ವೈದ್ಯ ಶಿಕ್ಷಣದ ಸೆಳೆತ, ಹಲವು ಸಾವಿರ ಕೋಟಿ ರೂ. ಮೌಲ್ಯದ ಕೋಚಿಂಗ್‌ ಉದ್ಯಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಕಾರ್ಯಜಾಲಗಳು ಇದರಲ್ಲಿ ಇರಲಿವೆ. 2026ರಲ್ಲಿ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿ 15 ಲಕ್ಷ ರೂ.ಗೆ ಖರೀದಿಸಿ, ಆನಂತರ ಅದನ್ನು 10 ಲಕ್ಷ ರೂ.ಗೆ ಹಲವರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಇಂಥ ಸೋರಿಕೆ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ.5ರಿಂದ 10. ಇದು ಪ್ರಶ್ನೆಪತ್ರಿಕೆ ಸೋರಿಕೆ ಉದ್ಯಮ ಬೆಳೆಯಲು ಕಾರಣ. ಯುಪಿಎಸ್‌ಸಿಯಲ್ಲಿ ಕೂಡ ಕೋಚಿಂಗ್‌ ದಂಧೆಯ ಕರಾಳ ನೆರಳು ಇದೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಕಡಿಮೆ. ಜೊತೆಗೆ, ಅದು ಮೂರು ಹಂತಗಳ ಪರೀಕ್ಷೆ. ನೀಟ್‌ ವರ್ಷಕ್ಕೊಮ್ಮೆ ಒಂದೇ ದಿನ ನಡೆಯುವ ಪರೀಕ್ಷೆ.

ಕೆ. ರಾಧಾಕೃಷ್ಣನ್‌ ಸಮಿತಿ ಶಿಫಾರಸು: 2024ರ ಸೋರಿಕೆಗೆ ಜಾರ್ಖಂಡ-ಬಿಹಾರದ ಸಂಘಟಿತ ಕಾರ್ಯಜಾಲ ಕಾರಣವಾಗಿತ್ತು. ಎಚ್ಚೆತ್ತ ಶಿಕ್ಷಣ ಮಂತ್ರಾಲಯ ಇಸ್ರೋ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ನೇತೃತ್ವದ 7 ಸದಸ್ಯರ ಉನ್ನತಾಧಿಕಾರ ಸಮಿತಿಯನ್ನು ನೇಮಿಸಿತು ಮತ್ತು ಸಾರ್ವಜನಿಕ ಪರೀಕ್ಷೆಗಳು(ಅಕ್ರಮ ತಡೆ) ಕಾಯಿದೆ 2024 ಜಾರಿಗೊಳಿಸಿತು. ಖಾಸಗಿ ಕೇಂದ್ರಗಳು ಮತ್ತು ಹೊರಗಿನ ಏಜೆನ್ಸಿ ಗಳ ಮೇಲಿನ ಅತಿ ಅವಲಂಬನೆ, ಸಿಸಿ ಟಿವಿ ಸರ್ವೇಕ್ಷಣೆ ವ್ಯವಸ್ಥೆಯ ಲೋಪ, ಅಸುರಕ್ಷಿತ ಸಾಗಣೆ/ಸಂಗ್ರಹಣೆ/ರವಾನೆ ವ್ಯವಸ್ಥೆ ಮತ್ತು 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದೇ ದಿನ ಲೇಖನಿ-ಕಾಗದ ಪರೀಕ್ಷೆ ನಡೆಸುವಲ್ಲಿನ ದುರ್ಬಲ ಕೊಂಡಿಗಳನ್ನು ಗುರುತಿಸಿದ ಸಮಿತಿ 101 ಶಿಫಾರಸು ಮಾಡಿತು. ಅವೆಂದರೆ, ಎನ್‌ಟಿಎ ಸಾಮರ್ಥ್ಯ ವರ್ಧನೆ, ಸಿಸಿ ಟಿವಿ ಪ್ರೋಟೋಕಾಲ್‌ಗಳ ಬಲವರ್ಧನೆ, ಬಯೋಮೆಟ್ರಿಕ್‌ ಪರಿಶೀಲನೆ, ಪ್ರಶ್ನೆಪತ್ರಿಕೆಗಳ ಸುರಕ್ಷಿತ ಶೇಖರಣೆ-ಸಾಗಣೆ, ಡಿಜಿಟಲ್‌ ಪ್ರಶ್ನೆಪತ್ರಿಕೆ, ಕಂಪ್ಯೂಟರ್‌ ಆಧರಿತ ಹೈಬ್ರಿಡ್/ಆನ್‌ಲೈನ್‌ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಮೇಲಿನ ಒತ್ತಡ ನಿವಾ ರಣೆಗೆ 2 ಹಂತದ ಪರೀಕ್ಷೆ ನಡೆಸುವುದು, ಪ್ರಯತ್ನಗಳ ಸಂಖ್ಯೆಗೆ ಮಿತಿ ಹೇರುವಿಕೆ, ಸಮತೆಯನ್ನು ಕಾಯ್ದುಕೊಳ್ಳಲು ಎಸ್‌ಸಿ/ಎಸ್‌ಟಿ ಮತ್ತು ಬಿಪಿಎಲ್‌ ವಿದ್ಯಾರ್ಥಿಗಳಿಗೆ ಹೆಚ್ಚುವರಿ 2 ಅವಕಾಶ, ಕೋಚಿಂಗ್‌ ಕೇಂದ್ರಗಳ ನೋಂದಣಿ, ನಿಯಂತ್ರಣ ಹಾಗೂ ಶುಲ್ಕ ನಿಗದಿಪಡಿಸಬೇಕು ಎಂದು ಸಮಿತಿ ಹೇಳಿತು. ಈಗ ಎಷ್ಟು ಬಾರಿಯಾದರೂ ನೀಟ್‌ ಪರೀಕ್ಷೆ ತೆಗೆದುಕೊಳ್ಳಬಹುದು. ಇದರಿಂದ, ಪರೀಕ್ಷೆ ಬರೆಯುವವರಲ್ಲಿ ಅರ್ಧದಷ್ಟು ಮಂದಿ ರಿಪೀಟರ್ಸ್ ಇರುತ್ತಾರೆ. ಇಂಥವರ ಹತಾಶೆಯೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರ ಬಂಡವಾಳ. ಈ ಶಿಫಾರಸುಗಳು ಇಂದಿಗೂ ಅನುಷ್ಠಾನಗೊಂಡಿಲ್ಲ ಎನ್ನುವುದಕ್ಕೆ ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಒಂದು ನಿದರ್ಶನ. ಮುಂದಿನ ವರ್ಷದಿಂದ ಕಂಪ್ಯೂಟರ್‌ ಆಧರಿತ ಪರೀಕ್ಷೆ ಮಾಡಲಾಗುತ್ತದೆ ಎಂಬ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿಕೆ ಭರವಸೆ ಹುಟ್ಟಿಸುವುದಿಲ್ಲ.

ರಾಷ್ಟ್ರೀಯ ವೈದ್ಯ ಆಯೋಗದ ಕಾಯಿದೆ ಪ್ರಕಾರ, ಖಾಸಗಿ ವೈದ್ಯ ಕಾಲೇಜು ಮತ್ತು ಪರಿಭಾವಿತ ವೈದ್ಯ ವಿಶ್ವವಿದ್ಯಾನಿಲಯಗಳಲ್ಲಿ ಶುಲ್ಕ ನಿಯಂತ್ರಣ ಶೇ.50ರಷ್ಟು ಸೀಟುಗಳಿಗೆ ಅನ್ವಯಿಸುತ್ತದೆ; ಉಳಿದ ಸೀಟುಗಳಿಗೆ ಮನಸೋಇಚ್ಛೆ ಶುಲ್ಕ ವಸೂಲಿ ಮಾಡಲಾಗುತ್ತದೆ. ಕ್ಯಾಪಿಟೇಷನ್‌ ಶುಲ್ಕ ನಿಯಂತ್ರಣ ಕಾನೂನು ಇದ್ದರೂ, ಅನುಷ್ಠಾನ ದುರ್ಬಲವಾಗಿದೆ. ಸುಪ್ರೀಂ ಕೋರ್ಟ್‌ ನೀಟ್‌ ಕಡ್ಡಾಯಗೊಳಿಸಿ ದಾಗ, ಖಾಸಗಿ ಕಾಲೇಜ್‌ ಲಾಬಿ ಅರ್ಹತೆ ಗಳಿಸುವ ಅಂಕವನ್ನು ಅತಿ ಕಡಿಮೆಗೆ ಇಳಿಸಿದವು(720ರಲ್ಲಿ 120ರಿಂದ 140). ಇದರಿಂದ 130 ಅಂಕ ಗಳಿಸಿದ ಶ್ರೀಮಂತ ವಿದ್ಯಾರ್ಥಿಯೊಬ್ಬ ಸೀಟು ಖರೀದಿ ಸಬಹುದು; ಹಣ ತೆರಲಾಗದ ಬಡ/ಮಧ್ಯಮ ವರ್ಗ/ಹಳ್ಳಿಗಾಡಿನ ಮಕ್ಕಳು ವೈದ್ಯ ಶಿಕ್ಷಣದಿಂದ ವಂಚಿತರಾಗುತ್ತಾರೆ. 1,29,603 ಸೀಟಿಗೆ 20 ಲಕ್ಷಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆಯುವುದರಿಂದ, ಕಟ್‌ ಆಫ್‌ ಅಂಕವನ್ನು ಹೆಚ್ಚು ಇರಿಸಬೇಕಿತ್ತು. ಮಧ್ಯಮ ವರ್ಗ, ಹಿಂದುಳಿದ ವರ್ಗಗಳು ಮತ್ತು ಗ್ರಾಮೀಣ ಪ್ರದೇಶದವರಿಗೆ ನೀಟ್‌ ಒಂದು ಅಗ್ನಿಪರೀಕ್ಷೆ. ಗ್ರಾಮೀಣ ಬಡ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಕೋಚಿಂಗ್‌ ಹಾಗೂ ಸಂಪನ್ಮೂಲದ ಕೊರತೆಯಿಂದ, ಅವಕಾಶ ಕಡಿಮೆ ಆಗಲಿದೆ. ಪರೀಕ್ಷೆಗೆ ಮನರಂಜನೆ ಸೇರಿದಂತೆ ಎಲ್ಲವನ್ನೂ ತ್ಯಜಿಸಿ 1-2 ವರ್ಷ ಸಿದ್ಧತೆ ನಡೆಸುವ ಹಾಗೂ ಅಪಾರ ಹಣ ವೆಚ್ಚ ಮಾಡುವ ಲಕ್ಷಾಂತರ ಮಕ್ಕಳ ಮೇಲಿನ ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ.

ಏನು ಮಾಡಬಹುದು?: ಅಖಿಲ ಭಾರತ ಕೋಟಾ ಸೀಟುಗಳು, ದಿಲ್ಲಿಯ ಏಮ್ಸ್‌, ಜಿಪ್ಮರ್‌ ಇತ್ಯಾದಿ ವೈದ್ಯ ವಿದ್ಯಾಲಯಗಳು, ಪರಿಭಾವಿತ ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ವೈದ್ಯ ಕಾಲೇಜುಗಳ ಕೋಟಾ ಸೀಟುಗಳಿಗೆ ನೀಟ್‌ ಮುಂದುವರಿಸಬಹುದು. ರಾಜ್ಯ ಸರ್ಕಾರಗಳ ಸೀಟುಗಳನ್ನು ಆಯಾ ಸರ್ಕಾರಗಳೇ ಭರ್ತಿ ಮಾಡಬೇಕು. ರಾಷ್ಟ್ರೀಯ ವೈದ್ಯ ಆಯೋಗ ಕಾಯಿದೆಗೆ ತಿದ್ದುಪಡಿ ತಂದು, ರಾಜ್ಯಗಳಿಗೆ ಹೆಚ್ಚು ಸ್ವಾಯತ್ತೆ ನೀಡಬೇಕು. ನೀಟ್‌ನಿಂದ ಹೊರಹೋಗಿ, ತಮ್ಮದೇ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು; ಅವು +2 ಅಂಕವನ್ನು ಆಧರಿಸಿ ಇಲ್ಲವೇ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಸೀಟು ಹಂಚಿಕೆ ಮಾಡಬಹುದು. ಪರೀಕ್ಷೆ ಪ್ರಯತ್ನಗಳಿಗೆ ಮಿತಿ, ವಯೋಮಾನ ಮಿತಿ ಹಾಗೂ +2 ಪರೀಕ್ಷೆಯಲ್ಲಿ ವಿಜ್ಞಾನದಲ್ಲಿ ಶೇ.60 ಅಂಕ ತೆಗೆದಿರಬೇಕು ಎಂಬ ನಿಯಮ ಅಳವಡಿಸ ಬೇಕು. ಎಸ್ಸಿ/ಎಸ್‌ಟಿ, ಗ್ರಾಮೀಣ ಪ್ರದೇಶದ ದುರ್ಬಲ ವರ್ಗದವರಿಗೆ ವಿಶೇಷ ಮೀಸಲು, ಶಿಷ್ಯವೇತನ, ಕೃಪಾಂಕ(ಗ್ರೇಸ್)‌ ನೀಡುವಿಕೆ ಮತ್ತು ಉಚಿತ ಕೋಚಿಂಗ್‌ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಾಯಬಹುದು. ತಮಿಳುನಾಡಿನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಶೇ.7.5 ಮೀಸಲು ನೀಡುತ್ತಿದ್ದು, ಇದನ್ನು ದೇಶದೆಲ್ಲೆಡೆ ಅನ್ವಯಿಸಬೇಕು.

ʻಎನ್‌ಟಿಎಯನ್ನು ಶಾಸನಬದ್ಧ ಪ್ರಾಧಿಕಾರವಾಗಿ ಬದಲಿಸಬೇಕು; ಸಂಸತ್ತಿಗೆ ಉತ್ತರದಾಯಿ ಆಗಿಸಬೇಕು, ಸಿಎಜಿ ಮೇಲ್ವಿಚಾರಣೆ ಇರಬೇಕು ಮತ್ತು ಶಾಸನಬದ್ಧ ಕುಂದುಕೊರತೆ ನಿವಾರಣೆ ವ್ಯವಸ್ಥೆಯನ್ನು ಅಳವಡಿಸಬೇಕುʼ ಎಂದು ಸುಪ್ರೀಂ ಕೋರ್ಟಿಗೆ ಯುನೈಟೆಡ್‌ ಡಾಕ್ಟರ್ಸ್‌ ಫ್ರಂಟ್‌ ಅರ್ಜಿ ಸಲ್ಲಿಸಿದೆ. ಮೇ 29, 2026ರಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ಹೊಣೆಗಾರಿಕೆ ನಿಗದಿಪಡಿಸಿ ಎಂದು ಪ್ರಾಧಿಕಾರಕ್ಕೆ ಸೂಚಿಸಿದೆ. ಅಖಿಲ ಭಾರತ ವೈದ್ಯ ಸಂಘಟನೆ ಪ್ರತ್ಯೇಕ ಮನವಿ ಸಲ್ಲಿಸಿದ್ದು, ಮರುಪರೀಕ್ಷೆಯನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೋರಿದೆ. ಏತನ್ಮಧ್ಯೆ ಸಂಸದೀಯ ಸ್ಥಾಯಿ ಸಮಿತಿಯು ಪರೀಕ್ಷೆ ಅಕ್ರಮಗಳಲ್ಲಿ ತೊಡಗಿರುವ ಸಂಸ್ಥೆಗಳ ಕಪ್ಪು ಪಟ್ಟಿ ಸಿದ್ಧಗೊಳಿಸಬೇಕು ಮತ್ತು ಎನ್‌ಟಿಎ ಬಳಿ ಇರುವ 448 ಕೋಟಿ ರೂ.ಗಳನ್ನು ಸೈಬರ್‌ ಸುರಕ್ಷತೆ ಮತ್ತು ಮೂಲಸೌಲಭ್ಯ ಉನ್ನತೀಕರಣಕ್ಕೆ ಬಳಸಬೇಕು ಎಂದು ಶಿಫಾರಸು ಮಾಡಿದೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸ; ಆದರೆ, ಇದರಿಂದ ನೀಟ್‌ನ ಆರ್ಥಿಕ ಆಯಾಮ-ಅಕ್ರಮ ವಿನ್ಯಾಸ ಕಳಚಿ ಹೋಗುವುದಿಲ್ಲ. ಎನ್‌ಟಿಎ ವಿಸರ್ಜಿಸಿ ಸಂಸತ್ತಿನ ಕಾಯಿದೆಯಡಿ ಹೊಸ ಪರೀಕ್ಷಾ ಪ್ರಾಧಿಕಾರ ರಚಿಸಬೇಕು. ಇದರಿಂದ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಾಧಿಕಾರದ ಕಾರ್ಯನಿರ್ವಹಣೆಯು ಸಂಸತ್ತಿಗೆ ಉತ್ತರದಾಯಿ ಆಗಿರಲಿದೆ.

ಅನಿತಾ ಬಲಿದಾನ: ಈ ಪರೀಕ್ಷೆ ಗ್ರಾಮೀಣ/ಹಿಂದುಳಿದ ವರ್ಗಗಳಿಗೆ ಒಂದು ಶಾಪ ಎನ್ನುವುದಕ್ಕೆ ಷಣ್ಮುಗಂ ಅನಿತಾ ಪ್ರಕರಣ ಸಾಕ್ಷಿ. ತಮಿಳುನಾಡಿನ ಅರಿಯಲೂರ್‌ ಜಿಲ್ಲೆಯ ಕುಳುಮೂರ್‌ ಗ್ರಾಮದ ದಲಿತ ಕುಟುಂಬದ ಎಸ್.ಅನಿತಾ, +2 ಪರೀಕ್ಷೆಯಲ್ಲಿ 1,176(1,200), ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 100 ಅಂಕ ಗಳಿಸಿದ್ದಳು. ತಂದೆ ದಿನಗೂಲಿ ನೌಕರ. ಆಕೆಯನ್ನು ಸಾಕಿದ್ದು ಅಜ್ಜಿ. ವೈದ್ಯೆಯಾಗಬೇಕೆಂಬ ಹಂಬಲದಿಂದ ಮದ್ರಾಸ್‌ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ನ ಏರೋನಾಟಿಕಲ್‌ ಎಂಜಿನಿಯರಿಂಗ್‌ ಕೋರ್ಸ್‌ ಅವಕಾಶ ನಿರಾಕರಿಸಿದ್ದಳು. ಆದರೆ, ನೀಟ್‌ನಲ್ಲಿ ಆಕೆಗೆ ಬಂದಿದ್ದು 80 ಅಂಕ ಮಾತ್ರ. ʻನೀಟ್‌ ಗ್ರಾಮೀಣ ವಿದ್ಯಾರ್ಥಿಗಳ ವಿರುದ್ಧʼ ಎಂದು ಆಕೆ ಹಾಗೂ ಇನ್ನಿತರರು ಸುಪ್ರೀಂ ಕೋರ್ಟ್‌ ಕದ ತಟ್ಟಿದರು. ಒಂದು ವರ್ಷ ನೀಟ್‌ನಿಂದ ವಿನಾಯಿತಿ ನೀಡಬೇಕು ಎಂಬ ತಮಿಳುನಾಡು ಸರ್ಕಾರದ ಕೋರಿಕೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಲಿಲ್ಲ. ತೀರ್ಪು ಬಂದ 9 ದಿನಗಳ ಬಳಿಕ ಸೆಪ್ಟೆಂಬರ್‌ 1, 2017ರಂದು ಅನಿತಾ ನೇಣಿಗೆ ಕೊರಳೊಡ್ಡಿದಳು. ರಾಜ್ಯಾದ್ಯಂತ ಪ್ರತಿಭಟನೆ ಹೊತ್ತಿಕೊಂಡಿತು. ಪ್ರತಿಭಟನೆ ನಿಯಂತ್ರಿಸಬೇಕೆಂದು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು. ನಿರ್ದೇಶಕ ಪಾ.ರಂಜಿತ್‌ ಈ ಸಾವು ಕುರಿತು, ʼ10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಬಳಿಕವೂ ನೀಟ್‌ನಂಥ ಕ್ರೂರ ಹತಾರದ ಮೂಲಕ ಆಕೆಯ ಕನಸನ್ನು ಛಿದ್ರಗೊಳಿಸಲಾಯಿತು. ಪ್ರತಿಷ್ಠಿತ ಸಂಸ್ಥೆಗಳಿಗೆ ಹಿಂದುಳಿದವರ ಪ್ರವೇಶವನ್ನು ಹತ್ತಿಕ್ಕುವುದು ಮುಖ್ಯ ಉದ್ದೇಶʼ ಎಂದು ಪ್ರತಿ ಕ್ರಿಯಿ ಸಿದ್ದರು. ಹಾಲಿ ಮುಖ್ಯಮಂತ್ರಿ ವಿಜಯ್‌ ಕೂಡ ನೀಟ್‌ ವಿರುದ್ಧ ಇದ್ದಾರೆ. ಆದರೆ, ಕೇಂದ್ರ ʻಜಿರಳೆ ಭಾರತೀಯ ಪಾರ್ಟಿʼಯ ಎಕ್ಸ್‌ ಖಾತೆ ಬ್ಲಾಕ್‌ ಮಾಡುವುದರಲ್ಲಿ ಬಿಸಿಯಾಗಿದೆ!

ಸಿಬಿಐ ತನಿಖೆ ಮತ್ತು ಮರುಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಆದ ನಷ್ಟ ತುಂಬಲು ಸಾಧ್ಯವಿಲ್ಲ. ಶಿಕ್ಷಣ ಸಚಿವ ಮತ್ತು ಎನ್‌ಟಿಎ ಮುಖ್ಯಸ್ಥ ಈ ವೈಫಲ್ಯದ ಹೊಣೆ ಹೊರಬೇಕು; ಮನ್‌ಕಿಬಾತ್‌ನಲ್ಲಿ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂದು ಹೇಳಿಕೊಡುವ ಪ್ರಧಾನಿ, ಪ್ರಶ್ನೆಪತ್ರಿಕೆ ಸೋರಿಕೆಗೆ ಯಾರು ಹೊಣೆ ಎಂದು ವಿವರಿಸಬೇಕು. ನೀಟ್‌ ಒಕ್ಕೂಟ ತತ್ವಕ್ಕೆ ವಿರುದ್ಧವಾದುದು; ಅದು ರಾಜ್ಯಗಳ ಸ್ವಾಯತ್ತೆಯನ್ನು ಕಸಿಯುತ್ತದೆ. ವೈದ್ಯ ಶಿಕ್ಷಣ ಅತ್ಯಂತ ಲಾಭ ದಾಯಕ ದಂಧೆ. ಜನಪ್ರತಿನಿಧಿಗಳು ಪಕ್ಷಾತೀತವಾಗಿ ವೈದ್ಯ ಕಾಲೇಜು ಹೊಂದಿದ್ದಾರೆ. ವೈದ್ಯರಾಗಬೇಕೆಂಬ ವಿದ್ಯಾರ್ಥಿ-ಪೋಷಕರ ಆಶಯ ವನ್ನು ದುರುಪಯೋಗಪಡಿಸಿಕೊಳ್ಳುವ ವೈದ್ಯ ಕಾಲೇಜುಗಳು, ಕೋಚಿಂಗ್‌ ಕೇಂದ್ರಗಳು ಮತ್ತು ಮಧ್ಯಸ್ಥಗಾರರ ಕಾರ್ಯಜಾಲ ನಡೆಸುವ ನೀಟ್‌ ಹಗರಣದ ಬಲಿಪಶುಗಳು ಪ್ರತಿ ವರ್ಷ ಬದಲಾಗು ತ್ತಿರುತ್ತಾರೆ; ಆದರೆ, ಸೂತ್ರಧಾರಿಗಳು ಬದಲಾಗುವುದಿಲ್ಲ.

Journalist,Translator,avid bibliophile

Leave a Reply

Your email address will not be published. Required fields are marked *

Back To Top