ಶಾಂತಾರಾಮ ನಾಯಕ, ಹಿಚಕಡ
ಹಸಿರು ಸಿರಿಯ ಕಣಜ ಅಚವೆಯ ಸುಂದರ ಪರಿಸರದ ರಸ ರೋಮಾಂಚನಗೊಳಿಸುವ ವಿಭೂತಿ ಜಲಪಾತದ ಧುಮ್ಮಿಕ್ಕುವ ಬೆಳ್ನೊರೆಯ ಜಲಧಾರೆಯ ನಡುವಿಂದ ಕವಿ ಫಾಲ್ಗುಣ ಗೌಡರ ಕಾವ್ಯಧಾರೆ ಹರಿದು ಬಂದು ಓದುಗರ ಮನ ತಣಿಸಿದೆ. ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಡಿನ ಹೆಮ್ಮೆಯ ಕವಿ ಪ್ರಿಯ ಜಯಂತ ಕಾಯ್ಕಿಣಿಯವರು ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನಕ್ಕೆ ಮನ್ನುಡಿಯ ಕಿರೀಟ ತೊಡಿಸಿ ‘ಬಿಡುಗಡೆ ಮಾಡಿ ತುಂಬಾ ಪ್ರೀತಿ ಅಭಿಮಾನದಿಂದ ಮುನ್ನುಡಿಯ ಶಿಫಾರಸು ನೀಡಿರುವರು. ಅದು ಒಂದು ಮೋಹಕ ಕವಿತೆಯಾಗಿರುವುದು ಓದುಗರ ಉಮೇದಿನಲ್ಲಿದ್ದಾರೆ. ಜಯಂತ ಕಾಯ್ಕಿಣಿಯವರ ಮನದಾಳದ ಪ್ರಶಂಸೆಗೆ ನಿಜಕ್ಕೂ ಕವಿ ಫಾಲ್ಗುಣ ಗೌಡರು ನೂರಕ್ಕೆ ನೂರು ಅರ್ಹರು. ಕವಿ ಫಾಲ್ಗುಣ ಗೌಡರು ಅಚವೆಯ ಬೆಟ್ಟದಲ್ಲಿ ಬಣ್ಣ ಬಣ್ಣದ ಕವಿತೆಗಳ ಹೂಗಳನ್ನು ಅರಳಿಸಿ ಸುಗಂಧ ಹರಡಿಸಿದ್ದಾರೆ.
ತಾವು ಬದುಕಿ ಬಾಳುತ್ತಿರುವ ಪರಿಸರದ ಸುತ್ತ ಸಂಭವಿಸಿದ ಹಾಗು ಸಂಭವಿಸುತ್ತಿರುವ ಘಟನೆ ಸಂಗತಿಗಳಿಗೆ ನೋವು ನಲಿವುಗಳಿಗೆ ಸುಂದರ ಅಭಿವ್ಯಕ್ತಿಯ ಧ್ವನಿಯಾಗಿ ಅವರ ಕಾವ್ಯ ಮೂಡಿ ಬಂದಿದೆ. ಅವರ ಕವಿತೆಗಳಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾಳಜಿ ಇದೆ ಅಪಾರವಾದ ಪರಿಸರ ಪ್ರೀತಿಯಿದೆ. ಈ ಕವಿಯ ಲೇಖನ ಊರಿದ್ದಲ್ಲಿ ಕಾವ್ಯ ಸೆಲೆ ಪುಟಿಯುತ್ತದೆ. ನಿಶ್ಯಬ್ದದಲ್ಲೂ ಶಬ್ದ ಉಂಟು ಮಾಡುತ್ತದೆ. ಅವರ ಬತ್ತಳಿಕೆ ಎಂದೂ ಬರಿದಾಗದು. ತನ್ನ ಸಾಮಾಜಿಕ ಪರಿಸರದ ಹಾಗೂ ಹಾಲಕ್ಕಿಗಳ ಪರಂಪರಾಗತ ಗ್ರಾಮೀಣ ಬದುಕಿನ ಸೊಗಡಿನ ನಿರಂತರತೆಯನ್ನು ಬಹು ಮಾರ್ಮಿಕವಾಗಿ ತಮ್ಮ ಕವಿತೆಗಳಲ್ಲಿ ಜೀವಂತಗೊಳಿಸಿರುವರು. ಪ್ರತಿಯೊಂದು ಅನುಭವವು ಕವಿತೆಯ ಸುಂದರ ಸಾಲುಗಳಾಗಿ ಆಕರ್ಷಿಸಿ ಖುಷಿ ನೀಡುವುದು.
ಹಾಲಕ್ಕಿಗಳ ಬದುಕಿನ ನಡೆ-ನುಡಿಗಳನ್ನು ಪರಿಚಯಿಸುವ ‘ಹೊಸ್ತಿನ ಹಗಲು’ ಕವನ ಅವರ ದೈನಂದಿನ ಬದುಕಿನ ಹೂರಣವನ್ನು ಚಿತ್ರಿಸುತ್ತದೆ. ಹಾಲಕ್ಕಿಗಳ ವರ್ಣಮಯ ಬದುಕಿನ ಸರಳತೆಯ ಸೊಗಸು ಹುಬೇ ಹುಬೇ ಕವನದಲ್ಲಿ ಮೂಡಿ ಬಂದಿದೆ.
ಸುಗ್ಗಿಯ ಕಾಲದ ಸಂಭ್ರಮದ ನೆನಪುಗಳನ್ನು ಮಾಡುತ್ತ :
“ಕರಿಯಕ್ಕಿಯ ಹಂಚಲು ಕೂಡಿಡೋ ಮನಸು
ಹಬ್ಬದಿ ಬಡವರ ಹಸಿವನು ನೀಗಿಸೋ
ಮುಗ್ಧ ಒಕ್ಕಲ ಒಳ್ಳೆಯ ಕನಸು”
ತಾವೇ ಬಡವರಾದರೂ ತಮಗಿಂತ ಬಡವರ ಹೊಟ್ಟೆಯ ಹಸಿವನ್ನು ತಣಿಸುವ ಎಂಥ ಮಾನವೀಯ ಸಂಸ್ಕಾರ ನಮ್ಮ ಹಾಲಕ್ಕಿಯವರದು!
‘ಹೂ ಬೆಳಗು’ ಬಹು ಸುಂದರವಾದ ಕವಿತೆ, ಪ್ರಕೃತಿ ಸಹಜವಾಗಿ ರಾತ್ರಿ ಕಳೆದು ಬೆಳಗನ್ನು ಸ್ವಾಗತಿಸುವ ವಿವಿಧ ಹೂಗಳ ಅರಳುವಿಕೆಯ ಸೊಬಗು ಕಣ್ಮನ ತುಂಬುತ್ತದೆ.
“ಎಲೆಗಳ ಮೇಲೆ ಕುಳಿತಿಹ ಚಿಟ್ಟೆ
ಪ್ರತಿ ಗಿಡ ತೊಟ್ಟಿದೆ ಹೂವಿನ ಬಟ್ಟೆ”
ಆಹಾ! ಎಂಥಹ ಅದ್ಭುತ ಕಲ್ಪನೆ”
ಕಾವ್ಯ ರಸಿಕರು ನಿತ್ಯವೂ ಮೆಲಕು ಹಾಬೇಕಾದ ಹತ್ತು ಹಲವು ರಮಣೀಯ ಸಾಲುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸ ಬಯಸುತ್ತೇನೆ.
“ಹಾಡುಗಳೇ ಹಾದಿ ತೋರುವ ಲಾಟೀನು ಬೆಳಕು
ಹಾದಿ ತೋರುವ ಜಾಡು ಬಿಂಜು ಮುಳ್ಳು” (ಬಡಗೇರಿ)
“ಸಸಿ ನೆಡುವ ಹಳೇ ಹೆಂಗಸರ ಹಾಡು ಕೇಳುತ್ತ
ಶೇಂಗಾ ಹೊಳ್ಳಿಸುತ್ತಿರುವ ಮೋಡಿಗಳು”
“ಅದ್ದುತಲೇ ಮಾಬಗಿಯಿಂದ ಬಾಡಿಗೆ ಬೈಕಿನಲ್ಲಿ
ಬಂದ ಮುಳ್ಳು ಹಂದಿಗಳು” (ಮಳೆ ಹೊಳವಾಗುವುದಿಲ್ಲ)
“ರಸ್ತೆಯ ಅಗಲೀಕರಣದ ರೂಲ್ಸು
ಹೂವಿನ ಚೌಕದ ಚಹರೆಸಿ ಆ್ಯಸಿಡ್ ಎರಚಿದಂತಿದೆ” (ಹೂವಿನ ಚೌಕ)
“ಅರಳಿದ ಹೂ ದಳಗಳಲ್ಲಿನ ಸ್ನಿಗ್ಧ
ಬಿಂದು ಹೊಳೆದಂತೆ ಹೆಣ್ಣ ನತ್ತು” (ಅಭಿವ್ಯಕ್ತಿ)
“ನಿರಸನ ಅಂತ್ಯವಾಗಿದೆ
ಹೆಣ್ಣಿನ ರಸ ನೀಡಲು ಮೋಡಗಳು ಧರೆಗಿಳಿದಿವೆ” (ಜುಮುರುಮಳೆ)
“ನಕ್ಷತ್ರಗಳು ಸಣ್ಣ ಬ್ಯಾಟರಿ ಹಿಡಿದು ತೋರುತ್ತಿದ್ದವು
ದಾರಿ ಗುರುತಿಸದ ನನ್ನ ಭಾರವಾದ ಹೆಜ್ಜೆಗಳಿಗೆ” (ಕ್ಲಪ್ತ)
“ಬೆಳ್ಳಕ್ಕಿ ಹೂ ಮುಡಿದ ಬೈತಖೋಲಿನ ಮರ ನಿಂತು ನೋಡುತ್ತದೆ” (ಕಾರವಾರದ ದಂಡೆಯೆಂದರೆ)
“ಒಳಗೆ ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನು
ದಂಡೆಗೆಸೆದ ಕಡಲಿನ ಶುಭ್ರ ಸ್ವಚ್ಛ ಮನಸು” (ಕನ್ನಡ ಎಂದರೆ))
“ಸAಜೆ ಸೂರ್ಯ ಸೊಬಗು ಹೆಣ್ಣ ಹಣೆ ಸಿಂಧೂರ
ಬೆಳ್ಳಕ್ಕಿ ಸಾಲುಗಳು ಎಂಥದೋ ಲಯದಲ್ಲಿ ಹಾರುತಿಹ ಶೈಲಿಯೇ ಹಾಡಾಗಿದೆ” (ಸಂಜೆ ಸಾಲು)
ಈ ಬಗೆಯಾಗಿ ಸುಂದರ ಕವಿತೆಗಳ ಸರದಾರರಾದ ನಮ್ಮ ಪ್ರಿಯ ಕವಿ ಫಾಲ್ಗುಣ ಗೌಡರ ಕಾವ್ಯ ಬೃಂದಾವನದ ಕಾರಂಜಿಯಲ್ಲಿ ಮಿಂದು ಪುಳಕಗೊಂಡಿದ್ದೇವೆ. ಫಾಲ್ಗುಣ ಗೌಡರ ಭಾವತೋಟದಲ್ಲಿ ಅರಳಿದ ಕವಿತೆಯ ಹೂಗಳ ಮಕರಂದವನ್ನು ಮಂದ ಮಾರುತ ಒಯ್ದು ಅಚವೆಯ ವಿಭೂತಿ ಜಲಪಾತದ ಪರಿಸರದಲ್ಲಿ ಹರಡುತ್ತಲಿದೆ.
ಧ್ವನಿ ಪೂರ್ಣವಾದ ಅಪರೂಪದ ವ್ಯಕ್ತಿ ಚಿತ್ರಗಳನ್ನು ಕಟೆದು ನಿಲ್ಲಿಸುವಲ್ಲಿ ಇವರು ಎತ್ತಿದ ಕೈ. ಔಚಿತ್ಯಪೂರ್ಣ ಉಪಮೆ ರೂಪಕಗಳಿಂದ ತುಂಬಿ ತುಳುಕುವ ಸ್ವಂತಿಕೆಯಿAದ ವಿಜೃಂಭಿಸುವ ‘ಬಿಂಜೆಮುಳ್ಳು’ ಕವನ ಸಂಗ್ರಹ ಕವಿ ಫಾಲ್ಗುಣ ಗೌಡರ ಧೀಮಂತ ಪ್ರತಿಭೆಗೆ ಸಾಕ್ಷಿಯಾಗಿದೆ. ಫಾಲ್ಗುಣ ಗೌಡರ ಕವಿತೆಗಳ ಕಾಮನ ಬಿಲ್ಲು ರಸ ರೋಮಾಂಚನಗೊಳಿಸುತ್ತದೆ.
ನಮ್ಮ ತಾಲೂಕಿನ ಜಿಲ್ಲೆಯ ನಾಡಿನ ಹೆಮ್ಮೆಯ ಕವಿ ಜಗದ ಕವಿಯೂ ಆಗಲಿ. ಪ್ರಿಯ ಜಯಂತ ಕಾಯ್ಕಿಣಿಯವರು ಹೇಳಿದಂತೆ ಅವರ ರಾಶಿ ಕವಿತೆಗಳ ಇಮಾನ ನೆಲದ ಮೇಲೂ ಓಡಾಡಲಿ ಎಂಬುದು ನಮ್ಮ ಬೇಡಿಕೆ.
———
ಶಾಂತಾರಾಮ ನಾಯಕ ಹಿಚಕಡ
ಶಾಂತಾರಾಮ ನಾಯಕ ಉತ್ತರ ಕನ್ನಡದ ಅಂಕೋಲೆಯ ಹಿರಿಯ ತಲೆಮಾರಿನ ಕವಿ. ಅಂಕೋಲಾ ತಾಲೂಕಿನ ಹಿಚ್ಕಡದವರು. ಕಥೆ, ಕವಿತೆ, ಸ್ವಾತಂತ್ರ್ಯ ಪ್ರಬಂಧ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರೆದವರು. ಸ್ವಾತಂತ್ರ್ಯ ಹೋರಾಟದ ಹೊರಳು ನೋಟ (ಚರಿತ್ರೆ), ಮಂಡಕ್ಕಿ ತಿಂದ ಗಂಗೆ (ಕಥೆ), ನೆನಪಿನ ಹಾಲಡ್ಗಿ (ಆತ್ಮಕಥನಾತ್ಮಕ ಬರಹಗಳು), ಭಾವತೋರಣ ಸೇರಿದಂತೆ ಸುಮಾರು ಇಪ್ಪತ್ತೆಂಟು ಕೃತಿಗಳನ್ನು ಬರೆದಿದ್ದಾರೆ. ತೇಜಸ್ವಿ, ಲಂಕೇಶ್, ಜಿ.ಎಚ್.ನಾಯಕ,ಆಲನಹಳ್ಳಿ ಕೃಷ್ಣ ಮುಂತಾದವರ ಜೊತೆ ಒಡನಾಡಿದವರು.