ಮೋಹಕತೆಯಾಚೆಗಿನ ಕವಿತೆಗೆ ಕೈಚಾಚಿದ ಧ್ಯಾನ

ವೆಂಕಟ್ರಮಣ ಗೌಡ

“ಈ ಚಿಟ್ಟೆ ಕಾಡಿದ ಹಾಗೆ” ಸುಚಿತ್ರಾ ಹೆಗಡೆ ಅವರ ಕವಿತೆಗಳ ಮೊದಲ ಸಂಕಲನ. ಅದೇ ಹೆಸರಿನ ಕವಿತೆಯ ಪ್ರಸ್ತಾಪದೊಂದಿಗೆ ಈ ಪುಸ್ತಕದ ಕುರಿತು ಕೆಲವು ಮಾತುಗಳನ್ನು ಹೇಳಲು ನನಗೆ ಇಷ್ಟ.

ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ’ ಕನ್ನಡ ಕಾವ್ಯವನ್ನು ಎಂದೆಂದೂ ಆವರಿಸಿಕೊಂಡೇ ಇರುವ ದಿವ್ಯ. ‘ಪಾತರಗಿತ್ತಿ ಪಕ್ಕ ನೋಡಿದ್ಯೇನ ಅಕ್ಕ’ ಎಂದು ಶುರುವಾಗುವ ಅದು, ‘ಗಾಳಿ ಕೆನೀಲೇನ ಮಾಡಿದ್ದಾರ ತಾನ’ ಎಂದು ವಿಸ್ತರಿಸಿಕೊಳ್ಳುತ್ತ, ಕೊನೆಗೆ ‘ಇನ್ನು ಎಲ್ಲಿಗೋಟ? ನಂದನದ ತೋಟ!’ ಎಂದು ಅನೂಹ್ಯವಾದುದರ, ಅತೀತವಾದುದರ ಕಡೆಗೆ ಬೆರಳು ತೋರುವ ಬಗೆಯೇ ಬೆರಗನುಳಿಸುವಂಥದ್ದು.

‘ಬಾನೂ ಬನವೂ ತಿರೆಯೂ ಗಿರಿಯೂ
ಎಲ್ಲವು ಚಿಟ್ಟೆಯ ಸಲುವಾಗಿ,
ಯಾರೊ ರಚಿಸಿದ ರಂಗದ ತೆರದಲಿ

ಮೆರೆದವು ಕಣ್ಣಿಗೆ ಚೆಲುವಾಗಿ!’ ಎಂದು ಕುವೆಂಪು ಅವರು, ಲೋಕದ ಎಲ್ಲವನ್ನೂ ನೋಡುವ ಬಗೆಯನ್ನೇ ಬದಲಿಸಿಬಿಡುವುದೆಂದು ಚಿಟ್ಟೆಯ ಸೊಗಸನ್ನು ಬಣ್ಣಿಸಿದ್ದಾರೆ.

ಸುಚಿತ್ರಾ ಹೆಗಡೆಯವರು ತಮ್ಮ ಕವಿತೆಯಲ್ಲಿ ಚಿಟ್ಟೆಯ ಸೌಂದರ್ಯದ ಕುರಿತ ನಿರಾಕರಣೆಯ ಭಾವದೊಂದಿಗೆ, ಪ್ರಕೃತಿಯ ವಿನ್ಯಾಸದಲ್ಲಿಯೇ ಇರುವ ಪ್ರಾಣದ ಪ್ರಶ್ನೆ ಮತ್ತು ಉದರ ನಿಮಿತ್ತದ ಪ್ರಶ್ನೆಯೆರಡನ್ನೂ ಮುಖಾಮುಖಿಯಾಗಿಸುತ್ತಾರೆ. ಈ ಮೂಲಕ ಅವರು ಬದುಕಿನ ಹೊತ್ತಿನಲ್ಲಿ ಪ್ರಸ್ತುತವಾಗುವ ಪ್ರಶ್ನೆಯೊಂದನ್ನು ಎತ್ತುತ್ತಾರೆ.

ಸೌಂದರ್ಯದ ನಿರಾಕರಣೆ ಎಂದೆ. ‘ಇದು ಕವನವಲ್ಲ’ ಎನ್ನುವಲ್ಲಿಂದಲೇ ಈ ನಿರಾಕರಣೆಯ ಭಾವ ಮೊದಲಾಗುತ್ತದೆ. ಪ್ರಾಣವನ್ನು ಉಳಿಸಿಕೊಳ್ಳಲು ಪಡುವ ಪಾಡನ್ನು ಮೋಸವೆಂದು ವ್ಯಂಗ್ಯವಾಡುವ ಲೋಕ, ಹೊಟ್ಟೆ ತುಂಬಿಸಿಕೊಳ್ಳಲು ಆಡುವ ನಾಟಕಕ್ಕೆ ಮಾತ್ರ ಮರುಮಾತಿಲ್ಲದೆ ಮರುಳಾಗುತ್ತದೆ, ಮೋಹಕವೆನ್ನುತ್ತದೆ. ಲೋಕದ ಈ ರೀತಿಯ ಬಗೆಗಿನ ಅಸಹನೆ ಮತ್ತು ಆಕ್ಷೇಪದಿಂದ ಹುಟ್ಟಿದ ನಿರಾಕರಣೆ ಇದು. ಹಾಗಾಗಿಯೇ,

‘ಈ ಚಿಟ್ಟೆ ಕಾಡಿದ ಹಾಗೆ
ನನ್ನನ್ನು ಇನ್ನಾವುದೂ ಕಾಡಿಲ್ಲ’

-ಎನ್ನುವಲ್ಲಿ ಇರುವುದು ತೀವ್ರ ವಿಷಾದ. ನೆಲದಿಂದ ನಂದನದ ತೋಟದವರೆಗೂ ಕರೆದೊಯ್ಯಬಲ್ಲ, ಸೌಂದರ್ಯದ ನಿರೂಪಣೆಯಾಗಬಲ್ಲ ಚಿಟ್ಟೆಯು ವಿಷಾದದ ಮೂಲವೂ ಆಗಿದೆಯೆಂದು ನೋಡುವಲ್ಲಿನದು ಒಪ್ಪಿತವಾದುದನ್ನು ಮುರಿದು ಪ್ರತಿಪಾದಿಸುವ ದಿಟ್ಟತನ. ಅಂತಿಮವಾಗಿ ಈ ಕವಿತೆ ಸಾಮಾಜಿಕ ನ್ಯಾಯವನ್ನು ಒತ್ತಾಯಿಸುವುದು ಹೀಗೆ:

‘ಸರಿಸು ಪಾತರಗಿತ್ತಿಯ ಪಕ್ಕ
ಕೊಡಿಸು ಊಸರವಳ್ಳಿಯ ಹಕ್ಕ’

ತೀರಾ ಭಾವುಕವಾದ ಸೆಳೆತದಿಂದ ಬಿಡಿಸಿಕೊಂಡ ಧೋರಣೆಯು ಇಲ್ಲಿನ ಹೆಣಿಗೆಯಲ್ಲಿದೆ ಎಂಬುದಕ್ಕೆ ಚಿಟ್ಟೆ ಕವಿತೆ ಮಾತ್ರವಲ್ಲದೆ ಇನ್ನೂ ಕೆಲವನ್ನು ಹೆಸರಿಸಬಹುದು. ‘ಕಣ್ಣುಗಳೆಂದೂ ಕನಸುಗಳಿಗೆ ಸಾಕ್ಷಿಯಲ್ಲ’, ‘ತಿಳಿಗಪ್ಪು ಬಳಿದ ಗಾಜಿನ ಕಿಟಕಿ’ ಅಂಥ ರಚನೆಗಳು. ಕನಸಿನ ಮತ್ತು ಭ್ರಮೆಯ ಮಾಯೆಯಿಂದ ಬಿಡಿಸಿಕೊಂಡು ವಾಸ್ತವಕ್ಕೆ ಎಚ್ಚರಾಗುವಲ್ಲಿನ ಧನ್ಯತೆಯನ್ನು ಇವು ಹಿಡಿದಿಡುತ್ತವೆ. ‘ಕಿಟಕಿಯಾಚೆಗಿದೆ ಬೇರೆಯದೇ ನಾಡು’ ಎಂಬ ತಿಳಿವಿನಲ್ಲಿ ಸಂಚಯವಾಗುವ ಶಕ್ತಿ ಸಣ್ಣದಾಗಿರುವುದಿಲ್ಲ.

ಹೆಣ್ಣು ಗಂಡಿನ ಮಧ್ಯದ ಸಂಘರ್ಷವನ್ನು ಹೇಳುವ ನಮ್ಮೆದುರಿನ ಬಹು ಮುಖ್ಯ ಕಥನ ಅಹಲ್ಯೆಯದ್ದು. ಸುಚಿತ್ರಾ ಹೆಗಡೆಯವರ ಕವಿತೆಗಳಲ್ಲಿ ಈ ಸಂಘರ್ಷ ಪರಂಪರೆಯ ಕುರಿತ ಧ್ಯಾನವು ಒಂದೆಡೆ ಲಿಂಗ ತಾರತಮ್ಯದ ಎದುರಿನ ಅಸಮ್ಮತಿಯಾಗಿಯೂ ಇನ್ನೊಂದೆಡೆ ಹೆಣ್ಣು ಮಾತ್ರ ಒಳಗೊಳ್ಳಬಲ್ಲ ಜಗತ್ತೊಂದರ ಅನನ್ಯತೆಯಾಗಿಯೂ ವ್ಯಕ್ತಗೊಂಡಿದೆ. ‘ಪತಿತ ಪಾವನದಾಟ ಸಾಕು’ ಕಲ್ಲಾಗಿಸಿದವರ ವಿರುದ್ಧದ ಸಿಟ್ಟು ಮಾತ್ರವಲ್ಲ; ಪ್ರಾಣವಾಯುವಿಗಿಂತ ಮಿಗಿಲಾಗಿ ಚಲನೆಯ ಜರೂರನ್ನು ಕಂಡುಕೊಂಡ ನೆಲೆ; ಅಷ್ಟು ಮಾತ್ರವಲ್ಲ, ಯಾರೋ ಬರೆದ ಹಣೆಬರಹದ ಹಂಗಿನಲ್ಲಿ ಬೀಳುವ ಹಳೆಯ ಕ್ರಮವನ್ನು ದಾಟಲೇಬೇಕಿದೆ ಎಂಬ ತೀವ್ರತೆಯೂ ಹೌದು. ಆದರೆ ಇದು, ಸಂಘರ್ಷವನ್ನು ಉಳಿಸುವ ಜಿದ್ದಿನ ನಡೆಯಾಗಕೂಡದೆಂಬ ದನಿಯನ್ನೂ ಸೇರಿಸಿಕೊಂಡಿರುವಂತಿದೆ.

‘ನಿನಗೇನು ಗೊತ್ತು ಹೃದಯ ಹೋಳಾಗುವ ನೋವು’ ಎಂಬ ವೇದನೆಯಲ್ಲೂ, ಸಮರಸವನ್ನು ನಂಬುವ ನೆಲೆಗೆ ಈ ಕವಯಿತ್ರಿ ಮತ್ತೆ ಮತ್ತೆ ತವಕಿಸುತ್ತಾರೆ.

‘ನಾನು ನಾನಾಗಿ ತೆರೆಯದೇ
ಸುರಿಯದೇ ಹರಿಯದೇ
ಕೊಡುವುದೇನು ಕೊಂಬುದೇನು’

‘ನಿನ್ನ ನೆನಪು ಸುತ್ತಿ ಸುಳಿಯುತ್ತದೆ’, ‘ಎರಡು ಧ್ರುವಗಳು ಸೇರಿದಾಗ’, ‘ನಾವು ನಾನಾದಾಗ’ ‘ನಿನ್ನಲಿದೆ ನನ್ನ ಉಸಿರು’ ಕವಿತೆಗಳಲ್ಲಿ ಮಾರ್ದವದ ಅನುನಯವಿದೆ. ಹೆಣ್ಣು-ಗಂಡು ಬೇರೆಬೇರೆಯಲ್ಲ ಎಂಬ ಭಾವದಲ್ಲೇ
ನಿರ್ಲಿಂಗ ಪಾರಮ್ಯದ ಸಾಧ್ಯತೆಯನ್ನು ಕಾಣುವ ಹಂಬಲವೂ ಇದೆ.

ಈ ಧಾಟಿಯ ಇನ್ನೂ ಒಂದು ಕವಿತೆ ‘ಉಳಿದುಹೋದ ಕ್ಷಣ’. ಬಲು ಚಂದದ ಕವಿತೆ ಇದು. ಪ್ರೇಮ ಪುಟಿವ ಮೊದಮೊದಲ ಘಳಿಗೆಗಳಲ್ಲೂ, ಅನಂತರದ ವಾಸ್ತವದಲ್ಲೂ; ಬಿಸಿ ಉಸಿರು ಮೈಯ ಗಂಧ ಹೃದಯ ಬಡಿತಗಳ ವಿನಿಮಯದಲ್ಲೂ, ಆ ನಡುವೆಯೂ ಹೇಳಲಾಗದೆ ಇರುವ ಪರಸ್ಪರರೊಳಗಿನ ರಹಸ್ಯವು ಒಳಗೊಳಗೇ ಧುಮುಗುಡುವಾಗಲೂ; ನಾಚಿಕೆ ಗೆದ್ದ ಕ್ಷಣದಲ್ಲೂ, ಹೃದಯ ಹಿಂಡಿದ ಕೊನೆಯ ಕ್ಷಣದಲ್ಲೂ ಇರುವುದು ಆ ಮೂವರೇ:’ನಾನು ನೀನು ಮತ್ತು ಚಂದ್ರಕಿರಣ’. ಪ್ರೇಮ ಅನುಗೊಳ್ಳುವಲ್ಲಿನ ಖುಷಿಯ ಪಾಲುದಾರರೂ ಅವರೇ; ಕಟು ವಾಸ್ತವವೇ ಆಖೈರಾದರೆ ಅದನ್ನು ಎದುರಿಸಬೇಕಾದವರೂ ಅವರೇ. ಎಲ್ಲ ಮುಗಿದುಹೋದಲ್ಲೂ ಬದುಕು ಉಳಿದಿರುತ್ತದೆ, ಅದು ದುಃಖದ ಭಾರವೇ ಆದರೂ.

ಯಾವುದೇ ಕವನ ಸಂಕಲವನ್ನು ಓದುವಾಗ ನಾನು ಅನುಸರಿಸುವ ರೂಢಿಯಂತೆ, ಈ ಸಂಕಲನವನ್ನು ಓದುವಾಗಲೂ ಇಲ್ಲಿನ ಹಲವು ಕವಿತೆಗಳನ್ನು ಕೂಡಿಸಿಕೊಂಡು ಓದಿದೆ. ಅಂಥ ಹಲವು ಕವಿತೆಗಳ ಒಡಲಾಳದಲ್ಲಿ ತಮ್ಮದೇ ಕವಿತೆಯ ಹುಡುಕಾಟಕ್ಕೆ ಸುಚಿತ್ರಾ ಅವರು ಕೈಚಾಚಿರುವಂತೆ ಕಂಡಿತು. ಬಹುಶಃ ಪ್ರತಿಯೊಬ್ಬ ಕವಿಯೂ ಇಂಥ ತವಕ ಮತ್ತು ತಳಮಳಕ್ಕೆ ಮತ್ತೆ ಮತ್ತೆ ಎದುರಾಗಲೇಬೇಕು. ಅದೊಂದು ಅನುಸಂಧಾನವೂ ಹೌದು, ಮುಗಿಯದ ಹುಡುಕಾಟವೂ ಹೌದು. ಹಲವು ರೂಪಗಳೊಳಗಿಟ್ಟು ತಮ್ಮ ಕವಿತೆ ಯಾವುದೆಂದು ನೋಡಬಯಸುವ ಕವಿತೆಯೊಂದಿದೆ ಇಲ್ಲಿ. ಜೋಗದಂತೆ, ಧ್ಯಾನಸ್ಥ ಶಿವನಂತೆ, ಮರೀಚಿಕೆಯಂತೆ, ಮಾಯಾಮೃಗದಂತೆ, ಕಡೆಗೆ ಕೈಕೇಯಿಯಂತೆ, ದಡದ ದಾರಿ ತಪ್ಪಿದ ಅಲೆಯಂತೆ, ಅಂತಿಮವಾಗಿ ಇಹದ ಕಡಲು ದಾಟಿಸುವ ಶೂನ್ಯನಾವೆಯಂತೆ ಕವಿತೆ ಅವರಿಗೆ ಕಾಣಿಸುತ್ತದೆ. ಆದರೆ ಕವಿತೆ ಎಂಥ ಮಾಯೆಯೆಂದರೆ ಇಂಥ ಎಲ್ಲ ಭಾಸಗಳಾಚೆಗೂ ಎಲ್ಲೋ ತಪ್ಪಿಸಿಕೊಂಡಿರಬಲ್ಲುದು ಅದು. ಆ ಮಾಯೆಯ ಹಿಂದೆ ಬೀಳುವ ಕವಿಗೆ ಬಿಡುಗಡೆಯಿಲ್ಲ.

ಬರೆವ ಗುಣವನ್ನು ದೃಢಪಡಿಸಬಲ್ಲಂಥ ಕವಿತೆಗಳ ಸಂಕಲನವನ್ನು ಕೊಟ್ಟಿರುವ ಸುಚಿತ್ರಾ ಹೆಗಡೆಯವರನ್ನು ಹಾರ್ದಿಕವಾಗಿ ಅಭಿನಂದಿಸುವೆ. ಅವರು ಮತ್ತೆ ಮತ್ತೆ ಕವಿತೆಯೆಂಬ ಮಾಯೆಯ ಬೆನ್ನು ಬೀಳುತ್ತಲೇ ಇರಲಿ, ಬಿಡುಗಡೆಯಿಲ್ಲದೆ ಬರೆವ ನಿರಂತರತೆಗೆ ಮಾರುಹೋಗಲಿ ಎಂದು ಆಶಿಸುವೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top