ಉಮೇಶ ನಾಯ್ಕರ ಕವಿತೆಗಳು: ನಿಷ್ಕಳಂಕ ಜಗಳದಲ್ಲಿನ ನಿಶ್ಚಯ

ವೆಂಕಟ್ರಮಣ ಗೌಡ

‘ಕತ್ತಲ ಧ್ಯಾನಿಸಿದ ನಂತರ’ ಉಮೇಶ ನಾಯ್ಕ ಅವರ ಎರಡನೇ ಕವನ ಸಂಕಲನ (ಪ್ರಕಟಣೆ ವರ್ಷ: 2021). ಇದಕ್ಕೂ 9 ವರ್ಷಗಳ ಕೆಳಗೆ ಅವರ ಮೊದಲ ಸಂಕಲನ ‘ಪೂರ್ಣ ಸತ್ಯವಲ್ಲ ರಸ್ತೆಗಳು’ (2012) ಪ್ರಕಟವಾಗಿತ್ತು. ಮೊದಲನೆಯದರಲ್ಲಿ 40 ಮತ್ತು ಎರಡನೆಯ ಸಂಕಲದಲ್ಲಿ 45 ಕವಿತೆಗಳಿವೆ. ‘ಲೆಕ್ಕಕ್ಕೆ ಅಷ್ಟಾಗಿವೆ’ ಎಂದು ತಮ್ಮನ್ನು ತಾವೇ ಅಣಕಿಸಿಕೊಂಡು ನಕ್ಕುಬಿಡುವ ಜಾಯಮಾನ ಅವರದು. ಹೊಸ ಸಂಕಲನದ ನೆಪದಲ್ಲಿ ಅವರ ಒಟ್ಟಾರೆ ಕವಿತೆಗಳ ಬಗ್ಗೆ ಬರೆಯುವುದು ಇಲ್ಲಿ ನನ್ನ ಉದ್ದೇಶ.

ನನ್ನ ಮತ್ತು ಉಮೇಶ ನಾಯ್ಕರ ಒಡನಾಟ ಕಾಲೇಜು ದಿನಗಳಿಂದ ಶುರುವಾದದ್ದು. ಸಾಹಿತ್ಯಕ ಆಸಕ್ತಿ ನಮ್ಮನ್ನು ಬೆಸೆದ ಸಂಗತಿಯಾಗಿತ್ತು. ಒಳ್ಳೆಯ ಗಾಯಕರಾಗಿರುವ ಅವರಿಗೆ ಸಾಹಿತ್ಯ ಮನಸ್ಸಿಗೆ ಮುಟ್ಟುವಲ್ಲಿನ ಒಂದು ಅವರ್ಣನೀಯ ಅನುಭವಕ್ಕೆ ಒಪ್ಪಿಸಿಕೊಳ್ಳುವ ಶ್ರದ್ಧೆಯಿತ್ತು. ಹಾಗೆಯೇ ಕವಿಯೆಂದು ಪೋಸು ಕೊಡುವವರ ಬಗೆಗೆ ಇದ್ದ ಅಸಾಧಾರಣ ಅಸಹನೆಯ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಭೇದವಿರಲಿಲ್ಲ. ಕಾಲೇಜಿನ ದಿನಗಳೆಂದರೆ ಸ್ವೀಕೃತಿ ಮತ್ತು ತಿರಸ್ಕಾರಗಳೆರಡೂ ಎಳಸಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾರೆನಾದರೂ, ನಾವಿಬ್ಬರೂ ಯಾವ ಕೆಲವು ವಿಚಾರಗಳ ಕುರಿತು ತಿರಸ್ಕಾರದ ದೃಷ್ಟಿ ಹೊಂದಿದ್ದೆವೊ ಅದು ಇಂದಿಗೂ ಹಾಗೆಯೇ ಇದೆ. ಅಷ್ಟರ ಮಟ್ಟಿಗೆ, ಕವಿಯ ಪೋಷಾಕಿನಲ್ಲಿ ಪೋಸು ಕೊಡುವವರಿಂದ ಒಂದು ಅಂತರ ಕಾಯ್ದುಕೊಂಡೇ ಬಂದವರು ನಾವಿಬ್ಬರೂ. ಹಲವರ ಅಸಮಾಧಾನ ಮತ್ತು ಅವಕೃಪೆಗೂ ನಮ್ಮನ್ನು ತುತ್ತಾಗಿಸಿದ ‘ಮಾನಸಿಕ ದೂರ’ ಇದು. ಗಿಲೀಟಿನ ನಗು ರೂಢಿಯಿಲ್ಲದ ನಮಗೆ, ಇನ್ನೊಬ್ಬರ ಹುಳುಕುಗಳ ಬಗ್ಗೆ ಹೇಳಲೂ ನಮ್ಮ ಹುಳುಕುಗಳ ಬಗ್ಗೆ ಯಾರಾದರೂ ಎತ್ತಿ ಹೇಳಿದರೆ ಒಪ್ಪಿಕೊಳ್ಳಲೂ ಹಿಂಜರಿಕೆ ಆಗಲೂ ಇರಲಿಲ್ಲ; ಈಗಲೂ ಇಲ್ಲ. ‘ರೋಮ್ಯಾಂಟಿಕ್’ ಅಲ್ಲದ ಈ ಗುಣ, ಕವಿಯೆಂಬ ಭಾರ ಹೊತ್ತುಕೊಂಡು ಬಲು ಭಾರವಾಗಿ ಓಡಾಡುವವರನ್ನು ಗೇಲಿ ಮಾಡುವುದರ ಜೊತೆಜೊತೆಗೇ ನಮ್ಮನ್ನೂ ನಾವೇ ಕೆಣಕಿಕೊಳ್ಳುತ್ತ ಹಾಯಾಗಿರುವುದಕ್ಕೂ ನೆರವಾಗಿದೆ. ಬರೆಯುವುದನ್ನು, ನಿರುಮ್ಮಳವಾಗಿ ಬದುಕುವುದಕ್ಕಿಂತ ದೊಡ್ಡದೆಂದು ಭ್ರಮಿಸಿ ಒದ್ದಾಡುವವರ ಬಗೆಗೆ ರೇಜಿಗೆಯುಳ್ಳವರಾಗಿರುವ ನಮ್ಮಿಬ್ಬರ ಬಗ್ಗೆ ಇಷ್ಟಾದರೂ ‘ಆತ್ಮಪ್ರಶಂಸೆ’ಯ ಮಾತುಗಳನ್ನು ಹೇಳಿಕೊಳ್ಳುವುದು, ಉಮೇಶ ನಾಯ್ಕರ ಕವಿತೆಗಳ ಬಗ್ಗೆ ಕೆಲವು ಮಾತುಗಳಿಗೂ ಮುಂಚೆ ಅನಿವಾರ್ಯವೆನ್ನಿಸಿತು, ಅಪೇಕ್ಷೆಯಿಲ್ಲದಿದ್ದರೂ ಸಂಕಟವಾದರೂ.

ನನಗೆ ಗೊತ್ತಿರುವಂತೆ ಉಮೇಶ ನಾಯ್ಕರು ಅತಿ ಸಂಕೋಚದಿಂದಾಗಿಯೇ ಬಹಳಷ್ಟು ಕಾಲ ಬರೆಯದೇ ಉಳಿದವರು. ಕವಿಗಳೆಂದು ಅಹಂಕಾರದ ರಾಜಕಾರಣ ಮಾಡುತ್ತಿದ್ದವರ ಮೇಲಿನ ಸಿಟ್ಟಿನಿಂದಲೂ ಮತ್ತಷ್ಟು ಕಾಲವನ್ನು ಬರೆಯದೇ ತಳ್ಳಿದವರು. ಮೊದಲ ಸಂಕಲನಕ್ಕೆ ಬರೆದುಕೊಂಡ ಮಾತುಗಳಲ್ಲಿ ಅವರ ಧೋರಣೆ ನಿಚ್ಚಳವಿದೆ: “ಕವಿತೆ ನನಗೆ ನಿರಾಳವಾಗುವ ಒಂದು ಮಾಧ್ಯಮವಷ್ಟೆ. ಬರೆಯುತ್ತಿರುವುದರಿಂದ ಏನೋ ಘಟಿಸಲಿದೆ ಎಂಬ ಭ್ರಮೆ ನನಗಿಲ್ಲ. ನಾನು ಬರೆಯುವುದು ‘ನನ್ನನ್ನು’ ತೊಳೆದುಕೊಳ್ಳುವುದಕ್ಕೆ… ಅಂತಿಮವಾಗಿ ಸಮಾಜದಲ್ಲಿ ನಾನು ಬದುಕುವ ರೀತಿಯೇ ನನಗೆ ಮುಖ್ಯ ಅನ್ನಿಸುತ್ತದೆ.”

*

“ಗಾಂಧಿ ಜಯಂತಿ ಎಂದರೆ
ಗಾಂಧಿ ಕಿವಿಗೆ ಹೂವನಿಡುವ
ಹಾಡು ಭಜನೆ ಭಾಷಣ”
-ಎಂದು ಮೊದಲ ಸಂಕಲನದಲ್ಲಿ ಬರೆಯುತ್ತಾರೆ ಉಮೇಶ.

ಈ ವ್ಯಂಗ್ಯವು ಕವಿತೆಯುದ್ದಕ್ಕೂ ಸಾಗಿ, ಕೊನೆಯಲ್ಲಿ ಕಟು ವಾಸ್ತವದ ಚಿತ್ರವನ್ನು ಕಟ್ಟಿದ್ದಾರೆ:

“ಗಾಂಧಿ ಜಯಂತಿ ಎಂದರೆ
ಗೋಡ್ಸೆ ಬರೆವ ಪುಸ್ತಕ
ಮಾರಾಟ ಮರು ಓದು
ಸಂತೆಯಲಿ ನಾಟಕ”

ಆದರ್ಶವಾದುದರ ವಿರೋಧಿ ಧ್ವನಿಯೊಂದು ಪ್ರಬಲವಾಗುತ್ತ, ಆದರ್ಶವಾದುದನ್ನು ಸಂತೆಯಲ್ಲಿ ತಂದಿಟ್ಟು ಲಾಭ ದೋಚಿಕೊಳ್ಳುತ್ತಿರುವ ಕರಾಳ ಹೊತ್ತಿನಲ್ಲಿ ಬದುಕುತ್ತಿರುವ ನಮ್ಮೆದುರು ಇರುವುದು ಮುಗಿಯದ ಆತಂಕ ಮಾತ್ರ.

‘ನಮಗೆ ನೋವಿಲ್ಲ’ ಎಂಬ ಕವಿತೆಯಲ್ಲಿಯೂ ಇರಿಯುವಂಥ ವ್ಯಂಗ್ಯವಿದೆ. ಬಲಿಪಶುಗಳಾಗುವವರ ಅತ್ಯಂತ ಅಸಹಾಯಕತೆಯು ವ್ಯವಸ್ಥೆಯ ರಾಕ್ಷಸೀ ರೂಪವನ್ನೇ ತೋರಿಸುತ್ತಿದೆ:

“ಅವರು ಬಲೆ ಬೀಸಿದರು
ನಾವು ಮೀನುಗಳು ಸಿಕ್ಕಿಬಿದ್ದೆವು
ದುಃಖವಿಲ್ಲ; ಅವರ ಹಸಿವು ಹಿಂಗಲಿ”

‘ಪೂರ್ಣ ಸತ್ಯವಲ್ಲ ರಸ್ತೆಗಳು’ ಎಂಬ ಹೆಸರೇ ಸೂಚಿಸುವಂತೆ ಈ ಸಂಕಲನದ ಹೆಚ್ಚಿನ ಕವಿತೆಗಳು ಕಠೋರ ವಾಸ್ತವಕ್ಕೆ ಕನ್ನಡಿ ಹಿಡಿದಿವೆ.

“ಖುಷಿಗೆ ಸಿಡಿವ ಪಟಾಕಿ
ನೂರು ಕಾಲದ ಹಳೆಯ ಕಥೆ
ಸುಳ್ಳು ಹೇಳುವ ಹಗಲು”
-ಎನ್ನುವಲ್ಲಿರುವುದು ಇಂಥದೇ ತೀವ್ರ ವಿಷಾದ. ನಮ್ಮ ಸಂಭ್ರಮವೇನಿದ್ದರೂ ಯಾವುದೋ ಕಾಲದ ಗುಂಗಿನದ್ದು. ನಮ್ಮ ದೀಪಾವಳಿಯೇನಿದ್ದರೂ ‘ಹಳೆಯ ಕಥೆಯ ಹೊತ್ತು’ ಬರುತ್ತದೆ ಅಷ್ಟೆ. ನಿಗಿ ನಿಗಿ ವಾಸ್ತವವೇನೆಂದರೆ,

“ವರ್ಷಕ್ಕೊಮ್ಮೆ ಉರಿವ ದೀಪ
ಉಳಿದ ಹಗಲು ಕತ್ತಲು”

ಇಲ್ಲಿನ ಇನ್ನೊಂದು ಕವಿತೆಯಲ್ಲಿ,

“ಒಂದೇ ಬಿಂದುವಿನಲಿ ಜನಿಸಿ
ಎಷ್ಟು ಭಯಾನಕ ಚಿತ್ರ ಬಿಡಿಸಿವೆ ರೇಖೆಗಳು”
-ಎಂದು ಆತಂಕಗಳ್ಳುವ ಕವಿ, ‘ಎಲ್ಲ ಸಾವುಗಳೆದ್ದು ನುಡಿಯಲಿ ಸತ್ಯ’ ಎಂದು ಹಂಬಲಿಸುತ್ತಾನೆ. ಸತ್ಯದ ಸದ್ದಡಗಿಸಲಾಗಿರುವ ವರ್ತಮಾನವು ಇತಿಹಾಸದ ಒಡಲಿನಲ್ಲಿ ಅಡಗಿರುವ ಸತ್ಯವನ್ನು ಹುಡುಕಿಕೊಳ್ಳಬೇಕಾಗಿದೆ. ಆದರೆ ಅದು ಅಷ್ಟು ಸುಲಭವೆ ಎಂಬ ಪ್ರಶ್ನೆ ಕೂಡ, ನಾವು ಸಿಕ್ಕಿಹಾಕಿಕೊಂಡಿರುವ ನಾವೇ ಕಟ್ಟಿದ ವರ್ತುಳದೊಳಗೇ ಇದೆ.

ಬರೆದುದರ ಗುಂಗಿನಲ್ಲಿ ಮೈಮರೆಯದೆ ಬರೆಯಬೇಕಾದುದರ ಇಂಗಿತಕ್ಕೆ ಅನುವಾಗುವ, ಬರೆಯುವುದರ ಆಚೆಗೂ ಇರುವ ಬದುಕಿನ ಹೆಚ್ಚುಗಾರಿಕೆಯ ಬಗ್ಗೆ ಎಚ್ಚರವಿರುವ ಗುಣದಿಂದಾಗಿ ಉಮೇಶ ನಾಯ್ಕರ ಕವಿತೆಗಳು ತಮ್ಮಷ್ಟಕ್ಕೆ ತಾವೇ ಹೃದಯವಂತವೆನ್ನಿಸುತ್ತವೆ. ಅವರ ನೆನಪುಗಳಲ್ಲಿ ಢಾಳಾಗಿರುವುದು ಬಗೆಬಗೆಯ ಕಷ್ಟಗಳ ಪೈಪೋಟಿ. ಮೀರುವ ಹಂಬಲ ಮತ್ತು ಮೀರಲಾರೆನೆಂಬ ಬೇಗುದಿಯ ನಡುವೆ ಬಂಧಿಯಾದವನ ಉದ್ವೇಗದಿಂದ ಪ್ರತಿಕ್ರಿಯಿಸುವ ಈ ಕಾಲದ ಅಥವಾ ಎಲ್ಲ ಕಾಲದ ವಾಸ್ತವವೊಂದು ಉಮೇಶ ಅವರಲ್ಲೂ ಪ್ರಶ್ನೆಯಂತೆ, ಪಶ್ಚಾತ್ತಾಪದಂತೆ, ಬಿಡುಗಡೆ ಕರುಣಿಸದ ದುಗುಡದಂತೆ ಇದೆ. ನಾವು ಬದುಕುವ ಬಗೆಯು ಸುತ್ತಲಿನವರನ್ನು ವಿಲಕ್ಷಣ ನಿರ್ಲಿಪ್ತತೆಯಲ್ಲಿ ನೋಡುತ್ತ ಸುಖಿಸುವುದರ ಕುರಿತ ಸಂಕಟ ಅವರನ್ನು ಬಾಧಿಸುತ್ತಲೇ ಇರುವ ಕವಿತೆಯಾಗಿದೆ. ತಲ್ಲಣದ ಭಾರ ಹೊತ್ತ ಮನಸ್ಸೊಂದು ಈ ಕವಿತೆಗಳನ್ನು ನುಡಿದಿದೆ. ಇದೆಲ್ಲವೂ ಕೆಲವೊಮ್ಮೆ ಸೂಕ್ಷ್ಮವಾಗಿ, ಕೆಲವೊಮ್ಮೆ ವ್ಯಗ್ರತೆಯ ಅದದೇ ರೂಪದಲ್ಲಿ ಈ ಕವಿತೆಗಳಲ್ಲಿ ವ್ಯಕ್ತವಾಗಿದೆ.

*

‘ಮತ್ತೆ ಬಂತು ದೀಪಾವಳಿ’ ಎಂದು ಕತ್ತಲ ಕಥೆಯನ್ನು ಮೊದಲ ಕವನ ಸಂಕಲದಲ್ಲಿ ಹೇಳಿದ ಉಮೇಶ ನಾಯ್ಕರ ಎರಡನೇ ಸಂಕಲನ ‘ಕತ್ತಲ ಧ್ಯಾನಿಸಿದ ನಂತರ’. ಆ ಹೆಸರಿನ ಕವಿತೆಯಲ್ಲಿ ಬರುವ ಈ ಸಾಲುಗಳನ್ನು ಗಮನಿಸಬೇಕು:

“ಹನಿಸುವ ಮೋಡಗಳ ಕುರಿತು
ತಕರಾರು
ಈ ಊರಲಿ ಕಲ್ಲಿನೇಟು
ಫಲ ಬಿಡುವ ಮರಕೆ”

ಈ ಸಂಕಲನದ ಕವಿತೆಗಳಲ್ಲಿ ನನಗೆ ಉಮೇಶ ನಾಯ್ಕರು ಊರನ್ನು, ಅದು ಬದಲಾಗುತ್ತಿರುವುದನ್ನು – ಆದರೆ ಬೇಡದ ಬಗೆಯಲ್ಲಿ ಬದಲಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತ ನೋಯುವುದು ಕಾಣಿಸುತ್ತದೆ. ‘ಬರೆಯಲೇನಿದೆ?’ ಎಂಬ ಕವಿತೆಯಲ್ಲಿ ಅವರು ಕಾಣುವ ಊರು ಅವರೊಳಗಿನ ನೋವನ್ನು ಸ್ಪಷ್ಟವಾಗಿ ಹೇಳುತ್ತಿದೆ:

“ಬರೆಯಬೇಕೆಂದಿದ್ದೆ
ಧ್ವನಿ ಇರುವವರ
ಮರ್ಯಾದಸ್ಥ ನಗರದ
ಕರ್ಫ್ಯೂ ಸಡಿಲಾದ ರಸ್ತೆಯ ಚಿತ್ರ”

ಈ ಕವಿತೆಯ ಕಡೆಯ ಸಾಲುಗಳು:

“ಚಿಲಕ ಹಾಕಿದೆ ಅಗಸೆ ಬಾಗಿಲು
ಕೊಳೆತು ನಾರುತ್ತಿದೆ ಊರು
ಹೇಗೆ ಬರೆಯಲಿ ಸುಂದರ ಸಾಲು?”

ಊರು ದುರವಸ್ಥೆಯಲ್ಲಿರುವಾಗ ಕವಿಯನ್ನು ಅದು ತಾಕದೇ ಇರಲಾರದು. ಆದರೆ ಅದನ್ನು ತಾಕಿಸಿಕೊಳ್ಳದಂತೆ ಬದುಕುವ ‘ಕವಿ’ಗಳೂ ಊರೊಳಗೇ ಇದ್ದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆವ ಹಾಗಿಲ್ಲ.

“ದನಿಯಿಲ್ಲದ ಅವರ ಕುರಿತು
ಹೃದಯವಿಲ್ಲದ ಇವರು
ಬರೆಯುತ್ತಾರೆ ಕತೆ-ಕವಿತೆ”
-ಎಂಬ ಸಾಲುಗಳು ಅಬಲರ ಬಗ್ಗೆ ತಾವು ಹೇಳಿದ್ದೇ ಸತ್ಯ ಎಂದು ಬಿಂಬಿಸುವ ಪ್ರಭುತ್ವದ ಬಗ್ಗೆ ಹೇಳುತ್ತಲೇ, ಕವಿಗಳ ಹೆಸರಿನಲ್ಲಿ ಪ್ರಭುತ್ವದ ಮುಖವಾಣಿಯಾಗುವವರು ಇರುವುದರ ಸುಳಿವನ್ನೂ ಕೊಡುತ್ತದೆ. ಅದರೊಂದಿಗೆ ಸಾಂಸ್ಕೃತಿಕ ರಾಜಕಾರಣದ ಅಪಾಯವನ್ನು ಇದು ಕಾಣಿಸುತ್ತದೆ.

“ಮಲ್ಲಿಗೆ ಹೊತ್ತು ತರುವ
ಖಾಸೀಮನೇಕೆ ತೊರೆದ
ಈ ದಾರಿಯ?” (‘ಸಮಯ ಬಂದಿದೆ’ ಕವಿತೆ)

“ಮುಚ್ಚಿದ ಬಾಗಿಲು
ಸುಟ್ಟ ಹೃದಯಗಳು” (‘ಅದು ಇದಲ್ಲ’ ಕವಿತೆ)

-ಹೀಗೆ ತಲ್ಲಣಗಳನ್ನು ದಾಖಲಿಸುತ್ತ ಹೋಗುವ ಕವಿತೆಗಳು ಈ ಸಂಕಲನದಲ್ಲಿವೆ. ವಿಚಿತ್ರ ನಿರ್ವಾತವೊಂದು, ಕ್ಷೋಭೆಯೊಂದು ಸುಡುತ್ತಿರುವ ಸಮಯದ ತಳಮಳವನ್ನು ಹಿಡಿದಿಟ್ಟಿರುವ ಉಮೇಶರ ಕವಿತೆಗಳು ಮತ್ತೆ ಮತ್ತೆ ಪುರಾಣದ, ಚರಿತ್ರೆಯ ಸಿಕ್ಕುಗಳಲ್ಲಿನ ಸತ್ಯಕ್ಕೆ ಮುಖಾಮುಖಿಯಾಗಬಯಸುತ್ತವೆ. ಆಳುವವರನ್ನು ಅವರು ಹಬ್ಬಿಸಿರುವ ಭ್ರಮೆ ಮತ್ತು ಎಬ್ಬಿಸಿರುವ ಗೋಡೆಯ ಬಗೆಗಿನ ಎಚ್ಚರದಲ್ಲಿ ಪ್ರಶ್ನಿಸುತ್ತವೆ. ‘ರೇಖೆಗಳನ್ನು ರಂಗೋಲಿಯೆಂದು ನಂಬಿರುವ’ ಅಮಾಯಕತೆಯ ಕುರಿತ ಸಂಕಟ ಇಲ್ಲಿನ ಯಾವುದೋ ಒಂದು ಕವಿತೆಯ ಸಾಲಿನಲ್ಲಿ ಮಾತ್ರ ಬರುವ ಭಾಸವಲ್ಲ.

“ದಾಟಲಾಗದ ಗೆರೆಯ ನಡುವೆ
ಸಿಗಬಹುದು ಜಲಬಿಂದು”
-ಎಂಬ ಭರವಸೆ ಇಂಥ ಅಗ್ನಿಪರೀಕ್ಷೆಗಳನ್ನು ದಾಟಿಕೊಂಡ ನಂತರದ ಭಾವವೇ ಆಗಿದೆ. ಯಾಕೆಂದರೆ,

“ದಾಟುವುದೆಂದರೆ,
ಅಮಲಿನಲಿ ನಡೆವ ಜನಜಾತ್ರೆಯಲ್ಲ
ಬೇಲಿಯೊಳಗಿನ ಕಟ್ಟುಕಥೆಯಲ್ಲ
ತೆರೆದ ಒಳಗಿನ ಬಾಗಿಲು
ಎಚ್ಚರದ ಬೆಳಕು”
-ಎಂಬ ಅರಿವು ಎಲ್ಲ ಕಾಠಿಣ್ಯದ ನಂತರವೂ ಉಳಿವ ಮಿಡಿತ.

“ಹಕ್ಕಿಯ ಆ ಹಾಡಿನ ಕಂಪು
ಕಾಸೀಮನಿಗೋ ಗೋವಿಂದನಿಗೋ
ಕೇಳಲೆಂದೇ ಗೆರೆಯೆಳೆಯುವಿರೇನು?”
-ಎಂದು ಕೇಳಬಲ್ಲ ಅದು, ಅಮಲಿನ ದಾರಿಯನ್ನು ಬೆತ್ತಲಾಗಿಸುವ ನಿಶ್ಚಯದಲ್ಲಿನ ಪ್ರವಹಿಸುವಿಕೆ.

*

ನಮಗೆಲ್ಲರಿಗೂ ಕವಿತೆ ಬೆರಗು ಮಾತ್ರವಲ್ಲ, ಬೆಡಗೂ ಹೌದು. ಕವಿತೆಯೆಂಬುದು ಮುಗಿಯದ ಹುಡುಕಾಟ. ಒಂದರ್ಥದಲ್ಲಿ ಅದು ನಮ್ಮೆಲ್ಲರ ತಳಮಳ ಮತ್ತು ಒಳಗಿನ ತಾಕಲಾಟಗಳ ಧ್ವನಿ. ನಮ್ಮೊಳಗಿನ ಯಾವುದನ್ನೂ ಇಡಿಯಾಗಿ ಹೇಳಲಾರೆವು. ನಿಖರವಾಗಿ ಹೇಳುತ್ತೇವೆ ಎಂತಲೂ ಇಲ್ಲ. ಹಾಗಂತ ಹೇಳದೇ ಇರುವುದೂ ಆಗದು. ಕವಿತೆಯೂ ಹೀಗೆಯೇ. ಕೈಗೆ ಸಿಕ್ಕುವುದಿಲ್ಲ. ಹಿಡಿದೆವು ಎಂದು ನಾವು ಅಂದುಕೊಂಡಿರುತ್ತೇವೆ. ಸತ್ಯವೆಂಬುದು ಎಲ್ಲೋ ಇವೆರಡರ ನಡುವೆ ಮಿಡಿಯುತ್ತಿರುತ್ತದೆ. ಆ ಮಿಡಿತದಲ್ಲಿರುತ್ತದೆ ಕವಿತೆಯ ಕಂಪನ. ಬರೆಯುವ ತುಡಿತಕ್ಕೆ, ಬರೆಯದೇ ಉಳಿದದ್ದು ಮತ್ತು ಬರೆಯಲೇ ಆಗದ್ದರ ಮುಖಾಮುಖಿ ಮತ್ತೆ ಮತ್ತೆ ಆಗಬಹುದಾದರೆ ಅದು ಈ ಕಾರಣದಿಂದಲೇ. ಇದೊಂದು ನಿಷ್ಕಳಂಕ ಜಗಳ.

ಇಂಥ ನಿಷ್ಕಳಂಕ ಜಗಳದಲ್ಲಿ, ಹಲವಾರು ಕಥನಗಳನ್ನು ಕೂಡಿಸುವ ಕಾಳಜಿಯವಾಗಿವೆ ಉಮೇಶ ನಾಯ್ಕರ ಕವಿತೆಗಳು. ಅಲ್ಲಿ ನಿಲುಕದ ನೋವುಗಳ ಕಥೆಯಿದೆ; ಎದುರಿಗಿರುವವನನ್ನು ತೀರಾ ಕುಬ್ಜ ಎಂದು ಬಿಂಬಿಸುವ ನಿಗಿ ನಿಗಿ ಸಂಚಿನಿಂದಲೇ ಇರಿಯುತ್ತಿರುವ ಬೇರೆಯೇ ಮುಖಗಳ ಕಥೆಯೂ ಇದೆ. ಎಲ್ಲವನ್ನೂ ತಣ್ಣಗೆ ನೋಡುತ್ತ, ಅವೆಲ್ಲದರ ಚಹರೆಗಳನ್ನು, ಬಣ್ಣಗಳನ್ನು, ವೈರುದ್ಧ್ಯಗಳನ್ನು, ಚಿಂತೆಗಳನ್ನು, ಸೋಗುಗಳನ್ನು ವಿಮರ್ಶಿಸುವ ವ್ಯವಧಾನ ಉಮೇಶ ನಾಯ್ಕರದು. ರೂಪಕಗಳ ಜಾಡಿನಲ್ಲಿ ಅವರದು ಪಳಗಿದ ನಡಿಗೆ. ಅಹಂಕಾರ, ಭ್ರಮೆ ಎರಡೂ ಇಲ್ಲದ ಶುದ್ಧತೆ ಮತ್ತು ಶಕ್ತಿಯಿಂದ ಪಕ್ಕಾದ ಪ್ರಾಮಾಣಿಕತೆ –ಇವು ಉಮೇಶ ನಾಯ್ಕರ ಕವಿತೆಗಳ ಗುಣವಾಗಿ, ಮುಂದೆ ಈ ಕವಿ ಬರೆಯಬಹುದಾದದ್ದರ ಕುರಿತು ಸಾಂದ್ರವಾದ ನಿರೀಕ್ಷೆಯನ್ನು ಕಾಯುತ್ತವೆ.

ಬರವಣಿಗೆಯನ್ನು ಬದುಕುವಷ್ಟೇ ತೀವ್ರತೆಯಿಂದ, ಮೋಹದಿಂದ ಒಳಗೊಳ್ಳಬಲ್ಲವರಾದ ಉಮೇಶ ನಾಯ್ಕರು ಬರೆಯುವುದಕ್ಕೆ ಮತ್ತಷ್ಟು ತೆರೆದುಕೊಳ್ಳಬೇಕು, ಮತ್ತಷ್ಟು ನಿಚ್ಚಳ ನೋಟದ ಧ್ಯಾನದಲ್ಲಿ ಬರೆಯಬೇಕು ಎಂಬುದೇ ಗೆಳೆಯನಾಗಿ ನನಗಿರುವ ಆಸೆ. ಯಾಕೆಂದರೆ, ಯಾವುದಕ್ಕೂ ಉತ್ತರವನ್ನು ಕಂಡುಕೊಳ್ಳುವ ಪ್ರಯಾಣಕ್ಕೆ ತಂತಾನೇ ಒಂದು ಸಾಮೂಹಿಕವೆಂಬಂಥ ಗುಣ ಬರಬೇಕಿರುವ ಇವತ್ತಿನ ಪ್ರಮೇಯದಲ್ಲಿ ಸಾಂಸ್ಕೃತಿಕವಾದ ನಮ್ಮ ಪಾಲ್ಗೊಳ್ಳುವಿಕೆ ಜವಾಬ್ದಾರಿಯ ಸ್ವರೂಪವನ್ನು ಧರಿಸಿಕೊಳ್ಳಬೇಕಾಗಿದೆ. ಅಂಥ ಸನ್ನಿವೇಶದಲ್ಲಿ, ಆಳದಲ್ಲಿ ಪ್ರಾಮಾಣಿಕವಾಗಿರುವ ಉಮೇಶರಂಥವರ ಹಾಜರಾತಿಯ ಜರೂರಿನ ಬಗ್ಗೆ ನನ್ನದು ನಿರೀಕ್ಷೆ ಮಾತ್ರವಲ್ಲ, ಒತ್ತಾಯವೂ ಹೌದು. ಈ ಭಾವನೆಯೊಂದಿಗೇ, ಉಮೇಶ ನಾಯ್ಕರು ಮತ್ತೆ ಬರೆಯುವ ಕವಿತೆಗಳಿಗಾಗಿ ಕಾಯುವೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top