ದೇಶಿ ಕೃಷಿ ಮೇಲೆ ಎಲ್‌ ನಿನೋ ʻಗಾಡ್ಜಿಲ್ಲಾ’ ಆಘಾತ

ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮುಂಗಾರು ಹಿನ್ನಡೆ ಅನುಭವಿಸಿದೆ. 2026ರಲ್ಲಿ ಮುಂಗಾರು ವಾಡಿಕೆಗಿಂತ ದುರ್ಬಲ ಆಗಲಿದೆ ಎಂದು ಈ ಹಿಂದೆಯೇ ಸೂಚನೆ ಇತ್ತು. ರಾಷ್ಟ್ರ ಮಟ್ಟದಲ್ಲಿ ಶೇ.43 ಹಾಗೂ ರಾಜ್ಯದಲ್ಲಿ ಸರಾಸರಿ ಶೇ.37 ರಷ್ಟು ಮಳೆ ಕೊರತೆ ಆಗಿದೆ; ದಕ್ಷಿಣ ಒಳನಾಡಿನ 3, ಉತ್ತರ ಒಳನಾಡಿನ 5, ಮಲೆನಾಡಿನ 4 ಮತ್ತು ಕರಾವಳಿಯ 3 ಸೇರಿದಂತೆ 15 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದೆ; ಬೀದರ್‌ ಗರಿಷ್ಠ(ಶೇ.67) ಮತ್ತು ಮೈಸೂರು ಕನಿಷ್ಠ(ಶೇ.42). ತುಂಗಭದ್ರಾ ಸೇರಿದಂತೆ ಜಲಾಶಯಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಮಲೆನಾಡು ಹಾಗೂ ಕರಾವಳಿಯಲ್ಲಿ ಆತಂಕ ಸೃಷ್ಟಿಯಾಗಿದೆ. ದೇಶಿ ಕೃಷಿಯನ್ನು ಹವಾಮಾನ ಸನ್ನದ್ಧಗೊಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸುವುದು ನಮ್ಮ ಚಾಳಿ ಆಗಿಬಿಟ್ಟಿದೆ.

ರಾಜ್ಯದಲ್ಲಿ ಒಟ್ಟು 84.1 ಲಕ್ಷ ಹೆಕ್ಟೇರ್‌ ನಲ್ಲಿ ಬಿತ್ತನೆ ಆಗಬೇಕಿತ್ತು; ಆದರೆ, ಶೇ.30ರಷ್ಟು ಮಾತ್ರ ಬಿತ್ತನೆಯಾಗಿದೆ. ಮೇ ಕೊನೆ ವಾರ ಮತ್ತು ಜೂನ್‌ ಆರಂಭದಲ್ಲಿ ಬಿತ್ತನೆಯಾದ ಅಲ್ಪಾವಧಿ ಬೆಳೆಗಳು ಮಳೆ ಯಾಗದಿದ್ದಲ್ಲಿ ಒಣಗಲಿವೆ. ಕೇರಳಕ್ಕೆ ಪ್ರತಿವರ್ಷ ಜೂನ್ 1 ರಂದು ಆಗಮಿಸುತ್ತಿದ್ದ ನೈಋತ್ಯ ಮಾನ್ಸೂನ್, ಈ ವರ್ಷ ಜೂನ್ 4 ರಂದು ಆಗಮಿಸಿತು. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಧಿಕಾರಿಗಳು ನಾಲ್ಕು ದಿನಗಳ ವಿಳಂಬ ಗಮನಾರ್ಹವಲ್ಲ ಎಂದು ಹೇಳಿದ್ದರು. ಆದರೆ, ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂಬ ಮುನ್ಸೂಚನೆ ಕೊಟ್ಟಿದ್ದರು. ವಾಯವ್ಯ ಭಾರತ ಹೊರತುಪಡಿಸಿ ಎಲ್ಲ ಪ್ರದೇಶಗಳಲ್ಲಿ ಮಳೆ ಕೊರತೆ ಇದೆ; ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕೊರತೆ ಶೇ.43,ಮಧ್ಯ ಭಾರತದಲ್ಲಿ ಶೇ.63 ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಶೇ.14 ಇದೆ.ಇದರೊಟ್ಟಿಗೆ ಜಲಾಶಯಗಳು ಬರಿದಾಗುವೆ. ಮಳೆ ಮೋಡಗಳು ಮಹಾರಾಷ್ಟ್ರ,ಕೊಂಕಣ ಕರಾವಳಿ ಮತ್ತು ಮಧ್ಯ ಭಾರತದ ಬಯಲು ಪ್ರದೇಶಗಳಿಗೆ ಆಗಮಿಸುವುದು ಸುಮಾರು ಒಂದು ವಾರ ತಡವಾಗಿದೆ.ಇದಕ್ಕೆ ಪೆಸಿಫಿಕ್ ಮಹಾಸಾಗರದಿಂದ ಏರುವ ಮೋಡಗಳನ್ನು ನಿಗ್ರಹಿಸುವ ಬೆಚ್ಚಗಿನ ಗಾಳಿ, ಎಲ್‌ ನಿನೊ ಇದಕ್ಕೆ ಕಾರಣ ಎನ್ನಲಾಗಿದೆ. ದೇಶದ ಒಂಬತ್ತು ಅಥವಾ ಹತ್ತು ರಾಜ್ಯಗಳು ಈ ವರ್ಷ ಅಧಿಕ ಎಲ್ ನಿನೊ ಪರಿಣಾಮ ಅನುಭವಿಸುವ ನಿರೀಕ್ಷೆಯಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 111 ಜಿಲ್ಲೆಗಳಲ್ಲಿ ತೀವ್ರ ಬೆಳೆ ಹಾನಿ ಆಗಿದೆ ಎಂದು ಜೂನ್ 23,2026ರಂದು ಹೇಳಿದ್ದಾರೆ; ʻವೈಜ್ಞಾನಿಕ ವಿಧಾನಗಳು,ಸೂಕ್ತ ತಳಿಗಳ ಆಯ್ಕೆ,ಅಂತರ ಬೆಳೆ,ಮುಚ್ಚಿಗೆ ಮತ್ತು ತೇವಾಂಶ ಸಂರಕ್ಷಣೆಯಂತಹ ಕ್ರಮಗಳನ್ನು ಉತ್ತೇಜಿಸಲು ಒತ್ತು ನೀಡಬೇಕು. ಇದರಿಂದ ಉತ್ಪಾದಕತೆ ಮತ್ತು ರೈತರ ಆದಾಯ ಎರಡನ್ನೂ ಹೆಚ್ಚಿಸಬಹುದುʼ ಎಂದು ಚೌಹಾಣ್‌,ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಭಾರತೀಯ ಹವಾಮಾನ ಇಲಾಖೆ ಏಪ್ರಿಲ್‌ 2026ರಲ್ಲಿ ಮುಂಗಾರು ಕೊರತೆ ಬಗ್ಗೆ ಎಚ್ಚರಿಸಿತ್ತು. ಏಪ್ರಿಲ್‌ನಲ್ಲಿ ಶೇ. 8ರಷ್ಟು ಕೊರತೆ ಆಗಲಿದೆ ಎಂದಿತ್ತು. ಮೇ ಅಂತ್ಯದಲ್ಲಿ ʻ2015ರ ನಂತರದ ಅತ್ಯಂತ ನಿರಾಶಾವಾದಿ ಮುಂಗಾರುʼ ಎಂದು ಹೇಳಿತು. ಆದರೆ, ಹವಾಮಾನ ಮುನ್ಸೂಚನೆಗಳು ಕೆಲವೊಮ್ಮೆ ಸುಳ್ಳಾದ ಉದಾಹರಣೆಗಳಿವೆ; ಕೊರತೆ ಇರಲಿದೆ ಎಂದಿದ್ದ 2015ರಲ್ಲಿ ಶೇ.14ರಷ್ಟು ಹೆಚ್ಚುವರಿ ಮಳೆ ಬಿದ್ದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ; ಮನುಷ್ಯರ ಚಟುವಟಿಕೆಗಳಿಂದ ಜಾಗತಿಕ ತಾಪಮಾನ ಹೆಚ್ಚಿದೆ. ಅಮೆರಿಕದ ರಾ ಷ್ಟ್ರೀಯ ಸಾಗರ ಹಾಗೂ ಹವಾಮಾನ ಇಲಾಖೆ(ಎನ್‌ಒಒಎಎ)ಪ್ರಕಾರ,ಚಳಿಗಾಲದ ವೇಳೆಗೆ ಎಲ್‌ ನಿನೊ ಶೇ.63ರಷ್ಟು ʻಬಹಳ ಪ್ರಬಲʼ ಆಗುವ ಸಾಧ್ಯತೆಯಿದೆ. ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಎಲ್ ನಿನೊ ಜೂನ್ ಮತ್ತು ಆಗಸ್ಟ್ ನಡುವೆ ಶೇ.80 ಇರಲಿದೆ ಮತ್ತು ನವೆಂಬರ್‌ವರೆಗೆ ಮುಂದುವರಿಯಲಿದೆ ಎಂದು ಹೇಳಿತ್ತು.ಆದ್ದರಿಂದ, ʻಸೂಪರ್ ಎಲ್‌ ನಿನೊ’ ದಿಂದ ‘ಗಾಡ್ಜಿಲ್ಲಾ’ ಎಂಬ ಅಡ್ಡಹೆಸರು ಪಡೆದುಕೊಂಡಿದೆ.

ಎಲ್ ನಿನೋ ಎಂದರೆ?:ಎಲ್‌ ನಿನೋ ಸದರ್ನ್‌ ಆಸಿಲ್ಲೇಷನ್(ಇಎನ್‌ಎಸ್‌ಒ) ದಲ್ಲಿ 3 ಹಂತ: ಎಲ್ ನಿನೋ ಎನ್ನುವುದು ಮಧ್ಯ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಸಾಗರದ ಮೇಲ್ಮೈ ನೀರು ಮತ್ತು ಗಾಳಿಯ ತಾಪಮಾನದಲ್ಲಿ ಆಗುವ ಬದಲಾವಣೆ. ಇದೊಂದು ನೈಸರ್ಗಿಕ ಹವಾಮಾನ ಪ್ರಕ್ರಿಯೆ. ಇದರಿಂದ ಬಿಸಿ ನೀರು ಕೇಂದ್ರ ಹಾಗೂ ಪೂರ್ವ ಪೆಸಿಫಿಕ್‌ ಸಾಗರದಲ್ಲಿ ಸೇರುತ್ತದೆ; ಗಾಳಿಯ ಚಲನೆ ಬದಲಾಗಿ, ಅಮೆರಿಕದಲ್ಲಿ ಆರ್ದ್ರತೆ ಮತ್ತು ಆಸ್ಟ್ರೇಲಿಯ/ ಆಗ್ನೇಯ ಏಷ್ಯಾದಲ್ಲಿ ಬರ ಕಾಡುತ್ತದೆ. ಲಾ ನಿನಾದಲ್ಲಿ ಬಿಸಿ ನೀರು ಇಂಡೋನೇಷ್ಯಾ ಕಡೆ ತಳ್ಳಲ್ಪಟ್ಟು, ದಕ್ಷಿಣ ಅಮೆರಿಕದ ಕರಾವಳಿಗೆ ತಂಪಾದ, ಪೋಷಕಾಂಶಭರಿತ ನೀರು ಸೇರಿಕೊಳ್ಳುತ್ತದೆ. ಇದರಿಂದ ಆಸ್ಟ್ರೇಲಿಯದಲ್ಲಿ ಆರ್ದ್ರ ವಾತಾವರಣ ಹಾಗೂ ದಕ್ಷಿಣ ಅಮೆರಿಕದಲ್ಲಿ ಶುಷ್ಕ ವಾತಾವರಣ ಉಂಟಾಗುತ್ತದೆ. ಮೂರನೆಯ ಹಂತವಾದ ಇಎನ್‌ಎಸ್‌ಒ ತಟಸ್ಥ ಗಾಳಿಯ ಚಲನೆ ಮತ್ತು ತಾಪಮಾನ ದೀರ್ಘಕಾಲೀನ ಅಂದಾಜು ಮಟ್ಟದಲ್ಲಿ ಇರುವ ಸ್ಥಿತ್ಯಂತರ ಹಂತ. ಸಮುದ್ರಗಳ ತಾಪಮಾನ ಮತ್ತು ಗಾಳಿ ಯಲ್ಲಿನ ಬದಲಾವಣೆಗಳು ಜಾಗತಿಕ ಹವಾಮಾನವನ್ನು ಬದಲಿಸುತ್ತವೆ; ತೀವ್ರ ಶಾಖದ ಅಲೆಗಳು, ಭಾರೀ ಮಳೆ ಮತ್ತು ಪ್ರಪಂಚದಾದ್ಯಂತ ಬರಕ್ಕೆ ಕಾರಣವಾಗುತ್ತವೆ. ಎಲ್ ನಿನೋ ವನ್ನು ಮಧ್ಯ ಪೆಸಿಫಿಕ್‌ನ ವಿಶಾಲವಾದ ಆಯತಾಕಾರದ ವಲಯದಲ್ಲಿ ತಾಪಮಾನದ ಮಟ್ಟವನ್ನು ಪರಿಶೀಲಿಸುವ ಮೂಲಕ ಅಳೆಯಲಾಗುತ್ತದೆ. ಸಂಶೋಧಕರ ಪ್ರಕಾರ, ಈ ಹಿಂದಿನ ತೀವ್ರ ಎಲ್‌ ನಿನೋಗಳು ಚರಿತ್ರೆಯ ಹಾದಿಯನ್ನು ಬದಲಿಸಿವೆ; ಭಾರಿ ಬರಕ್ಕೆ ಕಾರಣವಾಗಿವೆ, ಶಾಖದ ಅಲೆಗಳನ್ನು ಹುಟ್ಟುಹಾಕಿವೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತೀವ್ರಗೊಳಿಸಿವೆ.ಪ್ರಾಚೀನ ಈಜಿಪ್ಟ್‌ನ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಅಥವಾ 1,000 ವರ್ಷ ಹಿಂದೆ ಪೆರುವಿನ ಮೋಚೆ ನಾಗರಿಕತೆಯ ಅವನತಿಯಲ್ಲಿ ಎಲ್ ನಿನೋದ ಬೆರಳಚ್ಚುಗಳನ್ನು ನೋಡಬಹುದು. 1876-1878ರಲ್ಲಿ ಎಲ್ ನಿನೋ ಪ್ರೇರಿತ ಕ್ಷಾಮದಿಂದ ಉಷ್ಣ ವಲಯದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ತೀವ್ರ ಶುಷ್ಕ ಪರಿಸ್ಥಿತಿ ಸೃಷ್ಟಿಯಾಯಿತು. ಮಳೆಯನ್ನು ಆಧರಿಸಿರುವ ಏಷ್ಯಾದ ದೇಶಗಳು ತೀವ್ರ ಹಾನಿ ಅನುಭವಿಸಿದವು ಮತ್ತು ಕಳೆದ 800 ವರ್ಷದಲ್ಲಿ 2ನೇ ಅತ್ಯಂತ ದೀರ್ಘ ಬರಗಾಲವನ್ನು ಎದುರಿಸಿದವು. 50 ದಶಲಕ್ಷ ಜನ ಮೃತಪಟ್ಟರು ಹಾಗೂ ಅಸಮಾನತೆಯನ್ನು ಗಟ್ಟಿಗೊಳಿಸಿತು. ಸಂಶೋಧನಾ ಪ್ರಬಂಧವೊಂದು ಹೇಳಿದಂತೆ,ಆಗಿನಿಂದ ‘ಪ್ರಥಮ ಜಗತ್ತು’ ಮತ್ತು ‘ಮೂರನೇ ಜಗತ್ತು’ಎಂಬ ಭೇದ ಹುಟ್ಟಿಕೊಂಡಿತು. ಸಾಮಾನ್ಯವಾಗಿ ಎಲ್ ನಿನೋ ಅಮೆರಿಕದ ಕೆಲವು ಭಾಗಗಳಲ್ಲಿ ಆರ್ದ್ರ ಪರಿಸ್ಥಿತಿ ಸೃಷ್ಟಿಸಿದರೆ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ,ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶುಷ್ಕತೆಯನ್ನು ಹೆಚ್ಚಿಸುತ್ತದೆ.ಪ್ರಸ್ತುತ ಎಲ್ ನಿನೋ ಆರಂಭಿಕ ಹಂತದಲ್ಲಿದೆ; ಒಂದುವೇಳೆ ಮುನ್ಸೂಚನೆಗಳು ನಿಜವಾದರೆ, ಪ್ರಪಂಚ ದಾದ್ಯಂತ ಭಾರಿ ಹೊಡೆತ ನೀಡಲಿದೆ.ಅಮೆರಿಕದ ರಾಷ್ಟ್ರೀಯ ಸಾಗರ ಹಾಗೂ ಹವಾಮಾನ ಆಡಳಿತ(ಎನ್‌ ಒಎಎ), ಎಲ್‌ ನಿನೋ ಮೇ-ಜುಲೈ ಅವಧಿಯಲ್ಲಿ ಶೇ.82ರಷ್ಟು ಇರಲಿದೆ; ಉತ್ತರ ಗೋಳಾರ್ಧದಲ್ಲಿ 2026-27ರ ಚಳಿಗಾಲದವರೆಗೂ ಮುಂದುವರಿಯಲಿದೆ ಎಂದು ಹೇಳಿದೆ. ಇದು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ.

ಎಲ್‌ ನಿನೋದಿಂದ ಜಾಗತಿಕ ತಾಪಮಾನ ಹೆಚ್ಚಳ, ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆ ಹಾಗೂ ಇನ್ನು ಕೆಲವೆಡೆ ಭಾರೀ ಮಳೆ ಹಾಗೂ ವಿಪರೀತ ಹವಾಮಾನ ವ್ಯತ್ಯಯದ ಸಾಧ್ಯತೆ ಇದೆ. ಅದರ ಪರಿಣಾಮಗಳು ಪೆಸಿಫಿಕ್‌ನ ಉಷ್ಣಾಂಶ ಹೆಚ್ಚಳ, ವಾತಾವರಣದ ಪರಿಸ್ಥಿತಿ ಮತ್ತು ಸ್ವಾಭಾವಿಕ ಹವಾಮಾನದ ಧಾರಣಾ ಶಕ್ತಿಯನ್ನು ಆಧರಿಸಿರುತ್ತದೆ. 1876 ರ ಪ್ರಬಲ ಎಲ್ ನಿನೊ ಸಂದರ್ಭದಲ್ಲಿ ಇಂಡಿಯಾ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿತ್ತು. ಇತಿಹಾಸಕಾರ ಮೈಕ್ ಡೇವಿಸ್ ತಮ್ಮ 2001ರ ಪುಸ್ತಕ ʻಲೇಟ್ ವಿಕ್ಟೋರಿಯನ್ ಹಾಲೋಕಾಸ್ಟ್ಸ್ʼ ನಲ್ಲಿ ʻಭಾರತೀಯರು ಹಸಿವಿನಿಂದ ಬಳಲುತ್ತಿದ್ದರೂ, ದೇಶದಿಂದ ಬೃಹತ್ ಪ್ರಮಾಣದ ಧಾನ್ಯ ರಫ್ತು ಆಗಿತ್ತು. ಬ್ರಿಟಿಷ್‌ ಸಾಮ್ರಾಜ್ಯಶಾಹಿ ತನ್ನ ಹಿತಾಸಕ್ತಿಗೆ ಆದ್ಯತೆ ನೀಡಿತು. ಲಂಡನ್‌ ನವರು ಭಾರತದ ರೊಟ್ಟಿಯನ್ನು ತಿನ್ನುತ್ತಿದ್ದರು,ʼ ಎಂದು ಬರೆದಿದ್ದಾರೆ. ಮುಂಗಾರು ಏಕೆ ವಿಫಲವಾಯಿತು ಎಂಬುದು ಗೊತ್ತಿರಲಿಲ್ಲ.ಈ ಕುರಿತ ಸ್ಪಷ್ಟ ಚಿತ್ರಣ ದೊರೆತಿದ್ದು 1960ರ ದಶಕದಲ್ಲಿ; ಲಾಸ್ ಏಂಜಲೀಸ್‌ ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ಹವಾಮಾನಶಾಸ್ತ್ರಜ್ಞ ಜೇಕಬ್ ಜರ್ಕ್ನೆಸ್,ಪೆಸಿಫಿಕ್‌ ಸಾಗರ ಮತ್ತು ವಾತಾವರಣದ ನಡುವಿನ ಪ್ರತಿಕ್ರಿಯೆಯ ಜಾಗತಿಕ ಪರಿಣಾಮಗಳನ್ನು ಒಟ್ಟುಗೂಡಿಸಿದಾಗ ಚಿತ್ರಣವೊಂದು ಹೊರಹೊಮ್ಮಿತು.ಶತಮಾನಗಳ ಹಿಂದೆ ಪೆರು ವಿಯನ್ನರು ಕ್ರಿಸ್‌ಮಸ್‌ ಸಮಯದಲ್ಲಿ ಉಷ್ಣ ವಲಯದ ಮೀನುಗಳು ಕರಾವಳಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವುದನ್ನು ಗಮನಿಸಿದ್ದರು; ಈ ವಿದ್ಯಮಾನವನ್ನು ಸ್ಪ್ಯಾನಿಷ್‌ನಲ್ಲಿ ʻಎಲ್ ನಿನೋʼ ಅಥವಾ ʻದಿ ಕ್ರೈಸ್ಟ್ ಚೈಲ್ಡ್ʼ ಎಂದು ಹೆಸರಿಸಿದ್ದರು. ಪೆರುವಿಯನ್ನರು ಗುರುತಿಸಿದ ಪೆಸಿಫಿಕ್ ತಾಪಮಾನ ಹೆಚ್ಚಳವು ವಾಸ್ತವವಾಗಿ ಪ್ರಪಂಚದಾದ್ಯಂತದ ಹವಾಮಾನದ ಮಾದರಿಗಳನ್ನು ಬದಲಿಸುತ್ತಿದೆ ಎಂದು ಜರ್ಕ್ನೆಸ್ ಪತ್ತೆ ಹಚ್ಚಿದರು.

ಅನ್ವೇಷಣೆ ಪ್ರಯತ್ನಗಳು: ವಿಜ್ಞಾನಿಗಳು 1980ರ ಹೊತ್ತಿಗೆ ಪೆಸಿಫಿಕ್ ಸಾಗರದಲ್ಲಿ ತೇಲುಬುರುಡೆಗಳನ್ನು ಬಿಟ್ಟು ತಾಪಮಾನ ಅಳೆಯುವ ಪ್ರಯತ್ನ ನಡೆಸಿದರು. ಮರದ ಉಂಗುರದ ಮಾದರಿಗಳು,ಹವಳದ ಬಂಡೆಗಳು ಮತ್ತು ನಾವಿಕರ ಲಾಗ್‌ ಬುಕ್‌ಗಳನ್ನು ಅಧ್ಯಯನ ಮಾಡಿ, ಎಲ್‌ ನಿನೋ ಸಂಭವನೀಯತೆಯ ಟೈಮ್‌ಲೈನ್ ರಚಿಸಿದರು. ಆದರೆ, ಇತಿಹಾಸದಲ್ಲಿ ಎಲ್ ನಿನೊ ಘಟನೆಗಳ ಪಾತ್ರದ ಬಗ್ಗೆ ಸುಳಿವು ಪತ್ತೆ ಹಚ್ಚಲು ಖಚಿತ ದಾಖಲೆಗಳು ಇರಲಿಲ್ಲ. 1700 ರ ದಶಕದ ಉತ್ತರಾರ್ಧದಲ್ಲಿ ಎಲ್ ನಿನೊದಿಂದ ಆದ ಬೆಳೆ ವೈಫಲ್ಯ ಫ್ರೆಂಚ್ ಕ್ರಾಂತಿಗೆ ಕಾರಣವಾಗಿತ್ತು ಮತ್ತು 1876ರ ಎಲ್ ನಿನೊ,ಭಾರತವನ್ನು ತೀವ್ರವಾಗಿ ಬಾಧಿಸಿತ್ತು ಎಂಬುದು ಬೆಳಕಿಗೆ ಬಂದಿತು.ಈ ಕುರಿತು ಅಧ್ಯಯನ ನಡೆಸಿರುವ ಸಮುದ್ರಶಾಸ್ತ್ರಜ್ಞ ಬೋಯಿನ್ ಹುವಾಂಗ್,ʼ ಹತ್ತೊಂಬತ್ತನೇ ಶತಮಾನದ ಸಮುದ್ರದ ಮೇಲ್ಮೈ ತಾಪಮಾನದ ದತ್ತಾಂಶದೊಂದಿಗೆ ಕೆಲಸ ಮಾಡುವುದೆಂದರೆ, ಹಲವು ಕಾಣೆಯಾದ ತುಣುಕುಗಳನ್ನು ಬಳಸಿ ಒಗಟನ್ನು ಜೋಡಿಸಿದಂತೆʼ ಎಂದು ಹೇಳುತ್ತಾರೆ.

ಎಲ್‌ ನಿನೋದ ಸಾಮರ್ಥ್ಯವನ್ನು ಒಷಿಯಾನಿಕ್‌ ನಿನೋ ಇಂಡೆಕ್ಸ್(ಒಎನ್‌ಐ) ನಿಂದ ಅಳೆಯಲಾಗುತ್ತದೆ. ಇದು ಸಾಗರ ಮತ್ತು ಭೂಮಿಯ ಮೇಲ್ಮೈ ಉಷ್ಣಾಂಶದಲ್ಲಿನ ವ್ಯತ್ಯಯಗಳ ಜಾಡು ಹಿಡಿಯುತ್ತದೆ. ಒಎನ್‌ಐ 0.5 ಡಿಗ್ರಿ ಸೆಲ್ಸಿಯಸ್‌ ದಾಟಿದರೆ, ಅದು ಎಲ್‌ ನಿನೋ: 0.5-1 ಡಿಗ್ರಿ ಸೆ. ಇದ್ದರೆ ಮಧ್ಯಮ, 1.5 ಡಿಗ್ರಿ ಸೆ. ದಾಟಿದರೆ ಪ್ರಬಲ ಮತ್ತು 2.0 ಡಿಗ್ರಿ ಸೆ. ದಾಟಿದರೆ ಅತಿ ಪ್ರ್ರಬಲ.1982-83, 1997-98 ಹಾಗೂ 2015-16ರಲ್ಲಿ 2.0 ಡಿಗ್ರಿ ಸೆ.ದಾಟಿದ್ದರಿಂದ, ʻಸೂಪರ್‌ ಎಲ್‌ ನಿನೋʼ ಎಂದು ಕರೆಯಲಾಗಿತ್ತು. 2023-24ರ ಎಲ್‌ ನಿನೋದಲ್ಲಿ ಹಸಿರುಮನೆ ಅನಿಲ(ಜಿಎಚ್‌ಜಿ)ಗಳಿಂದಾದ ತಾಪಮಾನ ಹೆಚ್ಚಳದಿಂದ, 2024 ಅತ್ಯಂತ ಬಿಸಿ ವರ್ಷ ಎಂದು ದಾಖಲೆ ಬರೆದಿತ್ತು. ಕಳೆದ 50 ವರ್ಷಗಳ ಅತಿ ದೊಡ್ಡ ಎಲ್ ನಿನೋಗಳಲ್ಲಿ(1982, 1997 ಮತ್ತು 2015) ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಇತ್ತು. ಇದರಿಂದ ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ಬಿತ್ತು. 1876-78 ಸೇರಿದಂತೆ ಉಳಿದ ಎಲ್‌ ನಿನೋ ಹಾಗೂ 2026ರಕ್ಕೆ ಇರುವ ವ್ಯತ್ಯಾಸವೆಂದರೆ, ಈಗ ಮಿತಿಮೀರಿದ ಮಾನವರ ಹಸ್ತಕ್ಷೇಪದಿಂದ ವಾತಾವರಣ ಮತ್ತು ಸಾಗರದ ತಾಪಮಾನ ಹೆಚ್ಚಿದೆ. ಯುರೋಪಿಯನ್‌ ಯೂನಿಯನ್‌ ನ ಕೊಪರ್ನಿಕಸ್‌ ಕ್ಲೈಮೇಟ್‌ ಚೇಂಜ್‌ ಸೆಂಟರ್‌ ಪ್ರಕಾರ, ಕೈಗಾರಿಕೋತ್ತರ ಅವಧಿ 1850-1900ಕ್ಕೆ ಹೋಲಿಸಿದರೆ, ಭೂಮಿಯ ತಾಪಮಾನ ಈಗ 1.4 ಡಿಗ್ರಿ ಸೆ.ನಷ್ಟು ಹೆಚ್ಚಿದೆ. ಇದು ಎಲ್‌ ನಿನೋ ವಿಪರಿಣಾಮವನ್ನು ತೀವ್ರಗೊಳಿಸುತ್ತದೆ. ಅಂದರೆ, 2026 ಅಥವಾ 2027ರ ಎಲ್‌ ನಿನೋ ಜಾಗತಿಕ ತಾಪಮಾನದ ಹೆಚ್ಚಳದ ದಾಖಲೆ ಬರೆಯಲಿದೆ. ವಾತಾವರಣ ಮಾದರಿಗಳ ಪ್ರಕಾರ, 2026ರ ಎಲ್‌ನಿನೋ 1876-78ರ ಎಲ್‌ ನಿನೋದ ತೀವ್ರತೆಯನ್ನು ದಾಟಲಿದೆ. ಜರ್ನಲ್‌ ಆಫ್‌ ಕ್ಲೈಮೇಟ್‌ ನಲ್ಲಿ ಡಿಸೆಂಬರ್‌ 2018ರಲ್ಲಿ ಪ್ರಕಟವಾದ ಅಧ್ಯಯನವು 1876-78ರ ಕ್ಷಾಮಕ್ಕೆ ಕಾರಣಗಳನ್ನು ಪರಿಶೀಲಿಸಿತು; 1876-78ರ ಎಲ್‌ ನಿನೋ, ಹಿಂದು ಮಹಾಸಾಗರದ ದ್ವಿಧ್ರುವ(dipole) ಮತ್ತು ಉತ್ತರ ಅಟ್ಲಾಂಟಿಕ್‌ ನ ತಾಪಮಾನ ಪರಿಸ್ಥಿತಿಯಿಂದ ಮಳೆಯ ವಿಧಾನ ಬದಲಾಗಿದ್ದು ಕ್ಷಾಮಕ್ಕೆ ಕಾರಣ.

ಪ್ರಬಲ ಎಲ್‌ ನಿನೋದಿಂದ ಜಾಗತಿಕ ತಾಪಮಾನ ತಾತ್ಕಾಲಿಕವಾಗಿಯಾದರೂ 1.5 ಡಿಗ್ರಿ ಸೆ. ದಾಟುವ ಸಾಧ್ಯತೆ ಇದೆ. ಇದರಿಂದ ಪ್ರವಾಹ, ಬರ ಹಾಗೂ ಕಾಡ್ಗಿಚ್ಚು ಹೆಚ್ಚಲಿದೆ. ತಕ್ಷಣದ ಹಾಗೂ ಊಹಿಸಲಾಗದ ವಾತಾವರಣ ಬದಲಾವಣೆಗೆ ಕಾರಣ ಆಗಲಿದೆ. ಈಗಾಗಲೇ ಬಿಸಿಯಾಗಿರುವ ಆರ್ಕ್‌ಟಿಕ್‌ ಇನ್ನಷ್ಟು ಬಿಸಿಯಾಗಲಿದೆ. ಇದು ನಮ್ಮ ಬದುಕಿನ ಶೈಲಿ ಮತ್ತು ಆದ್ಯತೆಗಳು ಬದಲಾಗಬೇಕು ಎಂಬುದರ ಸೂಚನೆ.

ಬದಲಾಗುತ್ತಿರುವ ಎಲ್‌ ನಿನೋ: ಸಾಗರ ಮತ್ತು ವಾತಾವರಣದ ತಾಪಮಾನ ಹೆಚ್ಚಳದಿಂದ ಎಲ್‌ ನಿನೋ ಕೂಡ ಬದಲಾಗುತ್ತಿದೆ. ಐಪಿಸಿಸಿ(ಇಂಟರ್‌ ಗವರ್ನಮೆಂಟಲ್ ಪ್ಯಾನೆಲ್‌ ಆನ್‌ ಕ್ಲೈಮೇಟ್‌ ಚೇಂಜ್)ನ 2019ರ ವಿಶೇಷ ವರದಿ ಪ್ರಕಾರ, ಎಲ್‌ ನಿನೋ ಮತ್ತು ಲಾ ನಿನಾ ಇನ್ನಷ್ಟು ತೀವ್ರವಾಗುತ್ತವೆ ಹಾಗೂ ಅವುಗಳ ಸಂಭವನೀಯತೆ ಕೂಡ ಹೆಚ್ಚುತ್ತದೆ. ಎಲ್‌ ನಿನೋ ಸದರ್ನ್‌ ಆಸಿಲೇಷನ್(ಇಎನ್‌ಎಸ್‌ಒ; ಪೆಸಿಫಿಕ್‌ ಸಾಗರದಲ್ಲಿ 2ರಿಂದ 7 ವರ್ಷಕ್ಕೊಮ್ಮೆ ಸಂಭವಿಸಬಹುದಾದ‌ ಸ್ವಾಭಾವಿಕ ಹವಾಮಾನ ವ್ಯತ್ಯಯ; ಇದು ಜಾಗತಿಕ ತಾಪಮಾನ ಮತ್ತು ವಾತಾವರಣದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ) ನಿಂದ ಮಳೆ ಅನಿಶ್ಚಿತತೆ ಹಾಗೂ ತೀವ್ರ ಮಳೆ ಹೆಚ್ಚಲಿದೆ. ಐಪಿಸಿಸಿಯ ಆರನೇ ವರದಿ (ಎಆರ್‌ 6) ಹೇಳಿದಂತೆ, ಎಲ್‌ ನಿನೋ ಮತ್ತು ಲಾ ನಿನಾದಿಂದ ಮಳೆಯ ಅನಿಶ್ಚಿತತೆ ಹೆಚ್ಚಲಿದೆ. ಈಗ ಸಾಗರ ಮಾಪಕಗಳು ಮತ್ತು ಮುನ್ಸೂಚನೆ ವ್ಯವಸ್ಥೆ ಮೂಲಕ ಎಲ್ ನಿನೋದ ಜಾಡು ಹಿಡಿಯಲಾಗುತ್ತಿದೆ.

ಧಾನ್ಯದ ಕಾಪು ದಾಸ್ತಾನು ಹೊಂದಿರುವುದರಿಂದ, ಮೊದಲಿನಂತೆ ಭಾರಿ ಪ್ರಮಾಣದ ಕ್ಷಾಮದ ಸಾಧ್ಯತೆ ಕಡಿಮೆ. ಒಂದು ವರ್ಷ ಮುಂಗಾರು ವಿಫಲವಾದರೆ, ಕ್ಷಾಮ ಬರುವುದಿಲ್ಲ. ಆದರೆ, ಕಡಿಮೆ ಮಳೆಯಾದರೆ ಜನರು ಉಳಿತಾಯವನ್ನು ಬರಿದು ಮಾಡುತ್ತಾರೆ; ಖರ್ಚು ಕಡಿಮೆ ಮಾಡುತ್ತಾರೆ.ಇದರಿಂದ ವ್ಯಾಪಾರ-ವಹಿವಾಟು ಧಕ್ಕೆಗೊಳಗಾಗುತ್ತದೆ. ಬರಗಾಲದಲ್ಲಿ ಶಾಲೆ ಬಿಡುವವರ ಪ್ರಮಾಣ ಹೆಚ್ಚುತ್ತದೆ.ಇದೆಲ್ಲವೂ ದೇಶದ ಆರ್ಥಿಕ ಬೆಳವಣಿಗೆ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಎಲ್ ನಿನೋದ ಅನಿಶ್ಚಿತತೆಗಳು ಜಾಗತಿಕ ಆರ್ಥಿಕ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿಸುತ್ತವೆ. ಹೊರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದ ಜಗತ್ತಿನೆಲ್ಲೆಡೆ ರಸಗೊಬ್ಬರದ ಕೊರತೆಯುಂಟಾಗಿದೆ. ಉಕ್ರೇನ್ ವಿ/ಎಸ್‌ ರಷ್ಯಾ ಮತ್ತು ಇಸ್ರೇಲ್‌ ವಿ/ಎಸ್‌ ಇರಾನ್‌ ಯುದ್ಧದಿಂದ ಇಂಧನ ಬೆಲೆ ಹೆಚ್ಚಳಗೊಂಡು, ದೇಶಗಳ ಆಯವ್ಯಯ ಅಸ್ತವ್ಯಸ್ತವಾಗಿದೆ;ಅಮೆರಿಕ ಮತ್ತು ಇತರ ರಾಷ್ಟ್ರಗಳಿಂದ ವಿದೇಶಿ ನೆರವಿನ ಕಡಿತದಿಂದ ಬಡ ದೇಶಗಳ ಆರ್ಥಿಕತೆ ದುರ್ಬಲಗೊಂಡಿದೆ.ಬ್ರಿಟನ್ ಮೂಲದ ಥಿಂಕ್ ಟ್ಯಾಂಕ್, ಸ್ಟ್ರಾಟೆಜಿಕ್ ಕ್ಲೈಮೇಟ್ ರಿಸ್ಕ್ ಇನಿಶಿಯೇಟಿವ್ ಪ್ರಕಾರ,ʻಬಡತನ,ಅಪೌಷ್ಟಿಕತೆ,ಸಂಘರ್ಷ,ಸಾಲದ ಹೊರೆ ಮತ್ತು ಅದರಿಂದ ಆಗುವ ಎಲ್ಲ ಪರಿಣಾಮಗಳು ಹೆಚ್ಚಲಿವೆ,ʼ. ಲಭ್ಯ ಮುನ್ಸೂಚನೆ ಪ್ರಕಾರ, ತಾಪಮಾನ 3 ಡಿಗ್ರಿ ಸೆಲ್ಸಿಯಸ್ ದಾಟಬಹುದು. 1876ರ ಎಲ್ ನಿನೋ ಕೂಡ ಇಷ್ಟು ಹೆಚ್ಚಳ ದಾಖಲಿಸಿರಲಿಲ್ಲ.ಎಲ್ ನಿನೋ ಘಟನೆಗಳು ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ಉತ್ತುಂಗಕ್ಕೇರುತ್ತವೆ ಮತ್ತು ನಂತರದ ತಿಂಗಳುಗಳಲ್ಲಿ ತಾಪಮಾನವನ್ನು ಹೆಚ್ಚಿಸುತ್ತವೆ. ಇದರಿಂದ 2027 ಅತ್ಯಂತ ಬಿಸಿ ವರ್ಷ ಆಗಬಹುದು ಎಂದು ಅನೇಕ ವಿಜ್ಞಾನಿಗಳು ಊಹಿಸುತ್ತಾರೆ.

ಪರಿಸರ ವಿವೇಕ-ವಿವೇಚನೆ ಅಗತ್ಯ: ಭೂಮಿ ಬಿಸಿಯಾಗುವಲ್ಲಿ ಮನುಷ್ಯರ ಚಟುವಟಿಕೆಗೆ ಸಿಂಹಪಾಲು. ವಿವೇಚನೆ ಇಲ್ಲದ ಅಭಿವೃದ್ಧಿ ಯೋಜನೆಗಳು, ವಾಹನಗಳ ಅತಿ ಬಳಕೆ, ಕೈಗಾರಿಕೆ ಮಾಲಿನ್ಯ ಇತ್ಯಾದಿಯಿಂದ ಭೂಮಿ ಗಾರೆದ್ದು ಹೋಗಿದೆ; ಪಶ್ಚಿಮ ಘಟ್ಟದಲ್ಲಿ ಹೆದ್ದಾರಿ, ರೈಲುಮಾರ್ಗ, ಗಣಿಗಾರಿಕೆ, ಸುರಂಗ ಮಾರ್ಗ, ಅಣುಸ್ಥಾವರ, ಅಣೆಕಟ್ಟು, ನದಿ ತಿರುವು ಇತ್ಯಾದಿ ಯೋಜನೆಗಳನ್ನು ಸರಣಿಯೋಪಾದಿಯಲ್ಲಿ ಯೋಜಿಸಲಾಗಿದೆ. ಇದರಿಂದ ಮಲೆನಾಡು-ಪಶ್ಚಿಮ ಘಟ್ಟ ದಣಿದಿದೆ. ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ) ಮತ್ತು ಜಾಗತಿಕ ಹವಾಮಾನ ವಿಶ್ಲೇಷಣೆ ಪ್ರಕಾರ, ಕರ್ನಾಟಕ ಮತ್ತು ಕೇರಳದಲ್ಲಿನ ಪಶ್ಚಿಮ ಘಟ್ಟದ 6 ಪ್ರಮುಖ ಅರಣ್ಯ ವಲಯಗಳು ʻತೀವ್ರ ಹವಾಮಾನ ಬದಲಾವಣೆ ಹಾಟ್‌ಸ್ಪಾಟ್‌ಗಳುʼ; ಇಲ್ಲಿ ಸರಾಸರಿ ತಾಪಮಾನ 1.5 ಡಿಗ್ರಿ ಸೆ. ಗಿಂತ ಏರಿಕೆಯಾಗಿದೆ ಮತ್ತು ಮಳೆಯ ವಿನ್ಯಾಸದಲ್ಲಿ ಶೇ. 20ಕ್ಕಿಂತ ಅಧಿಕ ಏರುಪೇರಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಸಂಭವಿಸುತ್ತಿರುವ ಭೂಕುಸಿತ ಮತ್ತು ಪ್ರಾಕೃತಿಕ ವಿಕೋಪಗಳಿಗೆ ತಾಪಮಾನ ಏರಿಕೆ ಕಾರಣ. ತಾಪಮಾನ ಹೆಚ್ಚಳದಿಂದ ಪಶ್ಚಿಮ ಘಟ್ಟಗಳ ಮೇಲೆ ಅತಿ ಹೆಚ್ಚು ತೇವಾಂಶ ಶೇಖರವಾಗುತ್ತಿದ್ದು, ಅಲ್ಪಾವಧಿಯಲ್ಲಿ ಅಧಿಕ ಮಳೆ ಸುರಿಯುವ ಅಪಾಯ ಶೇ.11 ರಷ್ಟು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ಕಳೆದ 10 ವರ್ಷಗಳಲ್ಲಿ ಪಶ್ಚಿಮ ಘಟ್ಟ ಅಂದಾಜು 58 ಚದರ ಕಿಮೀ ದಟ್ಟ ಅರಣ್ಯ ಹೊದಿಕೆಯನ್ನು ಕಳೆದುಕೊಂಡಿದೆ. ಇದನ್ನು ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಮೂಲಕ ಸರಿದೂಗಿಸಲು ಆಗುವುದಿಲ್ಲ. ತಾಪಮಾನ ಹೆಚ್ಚಳದಿಂದ ಪಶ್ಚಿಮ ಘಟ್ಟಗಳ ದಕ್ಷಿಣ ಮತ್ತು ಮಧ್ಯ ಭಾಗ (ಕರ್ನಾಟಕ-ಕೇರಳ ಗಡಿ)ದಿಂದ ಅಪರೂಪದ ಸ್ಥಳೀಯ ಸಸ್ಯಗಳು ಮತ್ತು ಪಕ್ಷಿ ಸಂಕುಲ ಉತ್ತರಾಭಿಮುಖವಾಗಿ ಅಂದರೆ ಉತ್ತರ ಕನ್ನಡ ಮತ್ತು ಗೋವಾ ಭಾಗದ ತಂಪಾದ ಎತ್ತರದ ಪ್ರದೇಶಗಳ ಕಡೆಗೆ ವಲಸೆ ಹೋಗಲು ಪ್ರಾರಂಭಿಸಿವೆ.

ಭಸ್ಮಾಸುರ ಪ್ರವೃತ್ತಿ ಬಿಡದಿದ್ದರೆ, ಭೂಮಿ, ಕೃಷಿ, ಕೃಷಿಕರ ಬದುಕು ಎಲ್ಲವೂ ನಾಶವಾಗುತ್ತದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top