ಅಹಮದನ 407

ಅಂಜನಾ ಹೆಗಡೆ

ಸಾವಿತ್ರಕ್ಕ ಎರಡೇ ದೋಸೆ ತಿಂದು ಚಹಾವನ್ನೂ ಕುಡಿಯದೇ ಗಡಿಬಿಡಿಯಲ್ಲಿ ಬಚ್ಚಲುಮನೆಗೆ ಹೋಗಿ ಬಿಸಿನೀರಿನಲ್ಲಿ ಕೈ ತೊಳೆದು ಸೆರಗಿನಿಂದ ಒರೆಸಿಕೊಳ್ಳುತ್ತ ಜಗಲಿಗೆ ಓಡಿದಳು. ರಾಮಣ್ಣ ಎಡಗೈಯಲ್ಲಿ ತೊಗರು ತುಂಬಿದ ಚೊಂಬನ್ನು ಹಿಡಿದುಕೊಂಡು ಹಳೆಯ ಬ್ರಷ್ಶಿನಿಂದ ಅಡಿಕೆಚೀಲಗಳ ಮೇಲೆ ಸೊಸೈಟಿಯ ನಂಬರನ್ನೂ, ಪರಮಣ್ಣನ ಹೆಸರನ್ನೂ ಬರೆದು ಒಂದೊಂದೇ ಚೀಲವನ್ನು ಎಳೆದು ಪಕ್ಕಕ್ಕಿಡುತ್ತಿದ್ದ. ಪರಮಣ್ಣ ಮಾತ್ರ ಆರಾಮಾಗಿ ನಾಲ್ಕೈದು ದೋಸೆಗಳನ್ನು ಬೆಲ್ಲ-ತುಪ್ಪದಲ್ಲದ್ದಿ ತಿಂದು, ಒಂದು ಲೋಟ ಚಹಾ ಕುಡಿದು ಕವಳದ ಬಟ್ಟಲು ಹಿಡಿದು ಆರಾಮಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತಿದ್ದ. ಸುಬ್ಬಜ್ಜನ ಮನೆಯ ಬೆಕ್ಕು ತನ್ನ ಮೂತಿಯನ್ನು ಆಗಾಗ ಪರಮಣ್ಣನ ಕಾಲಿಗೆ ಉಜ್ಜುತ್ತ ಮೈಮುರಿಯುತ್ತ ಕುರ್ಚಿಯ ಸುತ್ತ ಸುತ್ತುತ್ತಿತ್ತು. ಪರಮಣ್ಣ ಕೊಂಚ ಬಗ್ಗಿ ಒಂದೇ ಕೈಯಿಂದ ಅದನ್ನು ಎತ್ತಿಕೊಂಡು “ಬಾರೋ ಟೋನಿ, ಕವಳ ಹಾಕುವ ಬಾ” ಎನ್ನುತ್ತ ಮಡಿಲಮೇಲೆ ಕೂರಿಸಿಕೊಂಡು ಎಲೆಗೆ ಸುಣ್ಣ ಹಚ್ಚತೊಡಗಿದ.

ಟೋನಿಯನ್ನು ಸುಬ್ಬಜ್ಜ ರಸ್ತೆಬದಿಯಿಂದ ಎತ್ತಿಕೊಂಡು ಬಂದಾಗ ಅದು ಇನ್ನೂ ಸರಿಯಾಗಿ ಕಣ್ಣೂ ಬಿಟ್ಟಿರಲಿಲ್ಲ. ಒಂದು ಮಧ್ಯಾಹ್ನ ಬಿಸಿಲಿನಲ್ಲಿ ಸುಬ್ಬಜ್ಜ ಸೊಸೈಟಿಗೆ ಹೋಗಿದ್ದವನು ಬಸ್ಸಿಳಿದು ಮನೆಗೆ ಬರುತ್ತಿರುವಾಗ ಶಾಲೆಕಟ್ಟೆಯ ಬದಿಯಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಕೊಸರಾಡುತ್ತಿದ್ದ ಟೋನಿಯನ್ನು ನೋಡಿದವನೇ ಮನೆಗೆ ಎತ್ತಿಕೊಂಡು ಬಂದಿದ್ದ. ಬೆಳ್ಳಗೆ ಮುದ್ದುಮುದ್ದಾಗಿದ್ದ ಮರಿಗೆ ಟೋನಿ ಎನ್ನುವ ಹೆಸರು ಹೊಂದುತ್ತಿಲ್ಲವೆಂದು ಎಲ್ಲರಿಗೂ ಅನ್ನಿಸಿದರೂ, ಸುಬ್ಬಜ್ಜನ ಒಂಟಿಜೀವನಕ್ಕೊಂದು ಜೊತೆ ಸಿಕ್ಕಿದ್ದಕ್ಕೆ ಎಲ್ಲರೂ ಸಂತೋಷಪಟ್ಟಿದ್ದರು. ನಾಯಿಯನ್ನು ದೂರದಲ್ಲಿ ಕಂಡರೂ ಕಲ್ಲು ಹೊಡೆದು ಓಡಿಸುತ್ತಿದ್ದ ಸುಬ್ಬಜ್ಜ ಬೆಕ್ಕಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯದ ಸಂಗತಿಯೂ ಆಗಿತ್ತು. ಇದ್ದೊಬ್ಬ ಮಗನನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ಸುಬ್ಬಜ್ಜ ಇನ್ನೇನು ದುಃಖ ಮರೆತು ಎಲ್ಲರೊಂದಿಗೆ ಮಾತನಾಡತೊಡಗಿದ್ದ ಎನ್ನುವಷ್ಟರಲ್ಲಿ ಹೆಂಡತಿಯನ್ನೂ ಕಳೆದುಕೊಳ್ಳಬೇಕಾಗಿ ಬಂತು. ಮಗ ಸತ್ತುಹೋದ ದುಃಖದಲ್ಲಿ ಮಾತನಾಡುವುದನ್ನೇ ಮರೆತಂತಿದ್ದ ಸುಬ್ಬಜ್ಜನ ಹೆಂಡತಿ ಇಡೀ ದಿನ ಕೊಟ್ಟಿಗೆಯ ಕೆಲಸ ಮಾಡುತ್ತಲೋ, ಏಲಕ್ಕಿ ಹಿಂಡುಗಳಿಗೆ ನೀರು ಹಾಕುತ್ತಲೋ, ಮೆಣಸಿನ ಬಳ್ಳಿಯನ್ನು ಕಟ್ಟುತ್ತಲೋ ಕೊಟ್ಟಿಗೆ-ತೋಟಗಳಲ್ಲಿಯೇ ಕಾಲ ಕಳೆಯಲಾರಂಭಿಸಿದ್ದಳು. ಹಾಗೇ ಒಂದು ದಿನ ಏಲಕ್ಕಿ ಗಿಡಕ್ಕೆ ನೀರು ಹಾಕಲೆಂದು ಹೊಂಡದ ಹತ್ತಿರ ಹೋದವಳು ಕಾಲುಜಾರಿ ಬಿದ್ದು ಹೆಣವಾಗಿದ್ದಳು. ಅವಳ ಶರೀರದೊಂದಿಗೆ ಅರ್ಧ ತುಂಬಿದ ನೀರಿನ ಕೊಡವೂ ತೇಲುತ್ತಿದ್ದ ಕಾರಣಕ್ಕೆ ಅದು ಆತ್ಮಹತ್ಯೆಯಲ್ಲ ಎನ್ನುವುದು ದೃಢವಾಗಿ ಸುಬ್ಬಜ್ಜ ಯಾವುದೋ ಒಂದು ವಿಚಿತ್ರವಾದ ಸಮಾಧಾನ ಹೊಂದಿದವನಂತೆ ತನ್ನ ಒಬ್ಬಂಟಿ ಜೀವನಕ್ಕೆ ಹೊಂದಿಕೊಂಡುಬಿಟ್ಟ. ಯಾರಾದರೂ ಕನಿಕರದ ಮಾತಾಡಿದರೆ, “ಹುಟ್ಟು-ಸಾವು ನಮ್ಮ ಕೈಯಲ್ಲಿರೋದಿಲ್ವಲ್ಲಾ ಮಾರಾಯ್ರೇ. ಇದ್ದಿದ್ರೆ ನಮ್ಮನ್ನ ಹಿಡಿಯೋಕೆ ಆಗ್ತಿತ್ತಾ!” ಎಂದು ಹೇಳಿ ಸುಮ್ಮನಾಗಿಬಿಡುತ್ತಿದ್ದ.

ಹೆಂಡತಿ ಸತ್ತಮೇಲೆ ಸುಬ್ಬಜ್ಜ ಕೊಟ್ಟಿಗೆಯಲ್ಲಿದ್ದ ದನಗಳನ್ನೆಲ್ಲ ಹುಟ್ಟಿದ ರೇಟಿಗೆ ಮಾರಿ ಕೊಟ್ಟಿಗೆಗೆ ಬೀಗ ಹಾಕಿಬಿಟ್ಟ. ಬೆಳಗ್ಗೆ ಎದ್ದವ ಪರಮಣ್ಣನ ಮನೆಯ ಕೊಟ್ಟಿಗೆಯಿಂದ ಅರ್ಧ ಬುಟ್ಟಿ ಸಗಣಿ ತಂದು ಗ್ಯಾಸ್ ಕಟ್ಟೆಯೊಳಗೆ ಸುರಿದು ನೀರು ಹಾಕಿ ಕರಡಿ ಗ್ಯಾಸ್ ಬಾವಿಗೆ ಬಿಟ್ಟವನೇ ಸಾವಿತ್ರಕ್ಕ ಕೊಟ್ಟ ಹಾಲಿನಿಂದ ಚಹಾ ಮಾಡಿಕೊಂಡು ಕುಡಿಯುತ್ತಿದ್ದ. ದಿನ ಬೆಳಗಾದರೆ ಅವಲಕ್ಕಿ, ಮಧ್ಯಾಹ್ನ ಮಾಡಿದ ಅನ್ನವನ್ನೇ ರಾತ್ರಿ ತಿನ್ನುತ್ತ ಕಾಲ ಕಳೆಯುತ್ತಿದ್ದ ಸುಬ್ಬಜ್ಜ ಬೆಕ್ಕು ಮನೆಗೆ ಬಂದಮೇಲೆ ದೋಸೆ ಮಾಡುವುದನ್ನು ರೂಢಿ ಮಾಡಿಕೊಂಡ. “ಇವತ್ತಿಂದ ಎರಡು ಸೇರು ಹಾಲು ಅಳೆದುಕೊಟ್ಬಿಡು” ಎಂದವ, ತಿಂಗಳಿಗೊಮ್ಮೆ ಸೊಸೈಟಿಗೆ ಹೋಗಿ ಹಣ ತಂದು ಸಾವಿತ್ರಕ್ಕನ ಕೈಗೆ ಸ್ವಲ್ಪ ಜಾಸ್ತಿ ಹಣವನ್ನೇ ಕೊಟ್ಟುಬಿಡುತ್ತಿದ್ದ. ಬೆಕ್ಕಿಗೆ ಮೂರೂ ಹೊತ್ತು ಹಾಲು ಹಾಕಿ, ಉಳಿದ ಹಾಲಿನಲ್ಲಿ ತಾನೂ ಎರಡು ಹೊತ್ತು ಚಹಾ ಮಾಡಿ ಕುಡಿದು ಜೋರುಜೋರಾಗಿ ಯಕ್ಷಗಾನದ ಪದಗಳನ್ನು ಹಾಡುತ್ತ ಟೋನಿಯನ್ನೇ ಬದುಕಿನ ಸರ್ವಸ್ವವನ್ನೂ ಮಾಡಿಕೊಂಡ. “ಸುಬ್ಬಜ್ಜನ ಮನೆಗೆ ಸರ್ಪದ ಶಾಪ. ಯಾವ ಹಾವು ನೋಡದೇ ಕೊಟ್ಟಿಗೆಗೆ ಬಂದ ಹಾವನ್ನೆಲ್ಲ ಬಡಿದು ಸಾಯಿಸಿದ್ದಕ್ಕೆ ಅವನಿಗೆ ಸರ್ಪದೋಷ ತಪ್ಪಿದ್ದಲ್ಲ. ಅವನ ಹೆಂಡತಿ ಬಿದ್ದ ಕೆರೆ ಪಕ್ಕದಲ್ಲೇ ನಾಗರಮನೆ ಇದ್ದಿದ್ದು ಮೊದಲು” ಎಂದೆಲ್ಲ ಊರಿನವರು ಆಡಿಕೊಳ್ಳುವಾಗ ಜಾಸ್ತಿ ತಲೆ ಕೆಡಿಸಿಕೊಳ್ಳದೇ ಶ್ರಾದ್ಧದ ಮನೆಗಳಲ್ಲಿ ಇಸ್ಪೀಟು ಆಡುತ್ತ, ಆಗೊಮ್ಮೆ ಈಗೊಮ್ಮೆ ಕನಸು ಬಿದ್ದಾಗ ಓಸಿ ಕಟ್ಟುತ್ತ ತನ್ನಷ್ಟಕ್ಕೆ ತಾನೇ ಟೋನಿಯೊಂದಿಗೆ ಹೊಸ ಬದುಕು ಕಟ್ಟಿಕೊಳ್ಳತೊಡಗಿದ. ಸುಬ್ಬಜ್ಜ ಇಸ್ಪೀಟು ಆಡಲು ಹೋದಾಗಲೆಲ್ಲ ಟೋನಿ ಸಾವಿತ್ರಕ್ಕ ಹಾಕಿದ ಹಾಲು ಕುಡಿದು, ಪರಮಣ್ಣನ ಮಂಚವನ್ನೇರಿ ಅವನ ಕಾಲಬುಡದಲ್ಲಿ ಮಲಗಿ ನಿದ್ರಿಸುತ್ತಿತ್ತು.

ಸುಬ್ಬಜ್ಜನ ಮಗ ಸೊಪ್ಪಿನ ಬೆಟ್ಟದಲ್ಲಿ ಹಾವು ಕಚ್ಚಿ ಸತ್ತುಬಿದ್ದಿದ್ದನ್ನು ಮೊದಲು ನೋಡಿದವನೇ ಪರಮಣ್ಣ. ಅವನ ಬಾಯಿಯಿಂದ ನೊರೆಯಂತಹ ಜೊಲ್ಲು ಹೊರಬಂದಿತ್ತೆಂದೂ, ಉಗುರುಗಳ ಸಂದುಗಳೆಲ್ಲ ನೀಲಿಬಣ್ಣಕ್ಕೆ ತಿರುಗಿದ್ದವೆಂದೂ ನಾಲ್ಕಾರು ವರ್ಷಗಳವರೆಗೆ ಮನೆಗೆ ಬಂದವರಿಗೆಲ್ಲ ಹೇಳುತ್ತ ಪರಮಣ್ಣ ಹೆಗಲಮೇಲಿನ ಟವೆಲ್ಲಿನಿಂದ ಕಣ್ಣೀರೊರೆಸಿಕೊಳ್ಳುತ್ತ ಎದ್ದುಹೋಗುತ್ತಿದ್ದ. ಮದುವೆಯಾಗಲೆಂದು ಒಂದೆರಡು ಕಡೆ ಹೆಣ್ಣನ್ನೂ ನೋಡಿದ್ದವನು ಸುಬ್ಬಜ್ಜನ ಹೆಂಡತಿಯೂ ಸತ್ತುಹೋದಮೇಲೆ ತಾನು ಮದುವೆಯನ್ನೇ ಆಗುವುದಿಲ್ಲವೆಂದು ತೀರ್ಮಾನ ಮಾಡಿಬಿಟ್ಟ. “ಸಂಸಾರ ಎಂದಮೇಲೆ ಸಾವು-ನೋವು ಎಲ್ಲ ಇದ್ದಿದ್ದೇ. ಹಾಗಂತ ಎಲ್ಲರೂ ಮದುವೆಯಾಗದೇ ಇರೋಕಾಗುತ್ತಾ?” ಎಂದು ಮನೆಯವರೆಲ್ಲ ಎಷ್ಟು ಹೇಳಿದರೂ ಕೇಳದೇ ಬಂದಿದ್ದ ಎಲ್ಲ ಜಾತಕಗಳನ್ನೂ ಖುದ್ದಾಗಿ ಪೋಸ್ಟ್ ಆಫೀಸಿಗೆ ಹೋಗಿ ವಾಪಸ್ ಕಳುಹಿಸಿಬಿಟ್ಟ. ಆಗಾಗ ಸುಬ್ಬಜ್ಜನೊಂದಿಗೆ ಯಕ್ಷಗಾನಕ್ಕೆ ಹೋಗುವುದನ್ನು ಬಿಟ್ಟರೆ ಮನೆಯಿಂದ ಹೊರಗೆ ಬೀಳುವುದನ್ನೇ ಕಡಿಮೆ ಮಾಡಿದ. ಮದುವೆ, ನಾಮಕರಣ, ಸಮಾರಾಧನೆ ಎಂದು ಸದಾಕಾಲ ಗೌಜು-ಗದ್ದಲಗಳಿಂದ ತುಂಬಿರುತ್ತಿದ್ದ ಮನೆ ನಿಧಾನವಾಗಿ ಮೌನವನ್ನು ತನ್ನದಾಗಿಸಿಕೊಳ್ಳುತ್ತಿರುವುದನ್ನು ನೋಡಿಯೂ ಸಾವಿತ್ರಕ್ಕ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಕೊಟ್ಟಿಗೆ, ಆಳುಕಾಳುಗಳು, ಊಟ-ತಿಂಡಿ ಎಲ್ಲವನ್ನೂ ಒಬ್ಬಳೇ ನಿಭಾಯಿಸುತ್ತ ಬೇಸರವಾದಾಗ ಹೂವಿನ ಗಿಡಗಳಿಗೆ ಗೊಬ್ಬರ ಹಾಕುತ್ತ ಕಾಲ ಕಳೆಯುತ್ತಿದ್ದಳು.

ಸಾವಿತ್ರಕ್ಕ-ರಾಮಣ್ಣ ಚೀಲಗಳ ಮೇಲೆ ಹೆಸರು ಬರೆದು ಮುಗಿಸುವುದಕ್ಕೂ ಅಹಮದನ 407 ಬರುವುದಕ್ಕೂ ಸರಿಹೋಯಿತು. ಪರಮಣ್ಣನ ಮಡಿಲಮೇಲೆ ಮಲಗಿ ನಿದ್ರಿಸುತ್ತಿದ್ದ ಟೋನಿ ಕಣ್ಣುತೆರೆದು ಬಾಲವನ್ನೊಮ್ಮೆ ಅಲ್ಲಾಡಿಸಿ ಜಿಗಿದು ಜಗಲಿಕಟ್ಟೆಯ ಮೇಲೆ ನಿಂತು ಮೈಮುರಿಯಲು ಶುರುಮಾಡಿತು. ಅಹಮದ ಕೊಟ್ಟಿಗೆಯ ಪಕ್ಕದ ಜಾಗದಲ್ಲೇ ಗಾಡಿಯನ್ನು ಕಷ್ಟಪಟ್ಟು ತಿರುಗಿಸಿ ರಿವರ್ಸ್ ಗೇರಿನಲ್ಲಿಯೇ ಅಂಗಳದವರೆಗೆ ತಂದು ನಿಲ್ಲಿಸಿದ. ಅವನು ಗಾಡಿ ನಿಲ್ಲಿಸುತ್ತಿದ್ದಂತೆಯೇ ದೊಡ್ಡಗಾತ್ರದ ತೆಂಗಿನಕಾಯಿಯೊಂದು ಒಣಗಿ ನೆಲಕ್ಕೆ ಬೀಳುವಂತೆ ಧೊಪ್ಪೆಂದು ಗಾಡಿಯಿಂದ ಜಿಗಿದ ಗಿಡ್ಡ ತನ್ನ ದೊಗಳೆ ಪೈಜಾಮವನ್ನು ಮೇಲಕ್ಕೇರಿಸುತ್ತ ಬಂದು ಟೋನಿಯನ್ನು ಎರಡೂ ಕೈಗಳಿಂದ ಮಗುವನ್ನೆತ್ತಿಕೊಳ್ಳುವಂತೆ ಎತ್ತಿಕೊಂಡು ಕಟ್ಟೆಯ ಮೇಲೆ ಕುಳಿತುಕೊಂಡ. ನಾಲ್ಕೂವರೆ ಅಡಿ ದೇಹದ ಗಿಡ್ಡನ ಮೈ-ಕೈಗಳಿಗೆ ಮುಖವನ್ನು ಉಜ್ಜುತ್ತ ಟೋನಿ ಅವನೊಂದಿಗೆ ಆಟವಾಡತೊಡಗಿತು. “ಈ ಸಲ ಆದ್ರೂ ಆ ಒಡ್ಡೆಗೆ ಚೂರು ಮಣ್ಣು ಹೊಯ್ಯಿಸಿ ಮಾರಾಯ್ರೇ. ಗಾಡಿ ಇಳಿಸೋ ಹೊತ್ತಿಗೆ ಸಾಕ್ ಸಾಕಾಗ್ತದೆ” ಎಂದು ಜೋರಾಗಿ ಮಾತನಾಡುತ್ತ ಇಳಿದುಬಂದ ಅಹಮದ ಗಿಡ್ಡನ ಪಕ್ಕ ಬಂದು ಕುಳಿತುಕೊಂಡ. ಆರಾಮಕುರ್ಚಿಯ ಮೇಲಿಂದ ಎದ್ದುಬಂದ ಪರಮಣ್ಣ ಅವರಿಬ್ಬರನ್ನೂ ನೋಡುತ್ತ “ಆರಡಿ ಗಣೇಶನ ಪಕ್ಕ ಒಂದು ಇಲಿ ಕೂರಿಸಿದಂತೆ ಕಾಣ್ತದೆ ನೋಡು. ನಿಮ್ಮಿಬ್ಬರನ್ನೂ ಒಟ್ಟಿಗೇ ನೋಡೋದೇ ಮಜಾ” ಎನ್ನುತ್ತ ಗಾಡಿಯ ಹತ್ತಿರ ಹೋಗಿ ನಿಂತುಕೊಂಡ.

407 ಸದ್ದು ಕೇಳಿಸುತ್ತಿದ್ದಂತೆ ಆಚಾರಿಮನೆಯಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲ ಬಂದು ಕಷ್ಟಪಟ್ಟು ಮೇಲೆ ಹತ್ತಿ ಗಾಡಿಯ ಒಳಗೆ ಕುಳಿತು ಆಟವಾಡತೊಡಗಿದರು. “ಈ ಗಾಡಿಗೆ ಹತ್ತು ವರ್ಷ ಆಯ್ತು ನೋಡು. ನಮ್ಮ ರಾಮಣ್ಣನ ಮದುವೆ ದಿಬ್ಬಣಕ್ಕೆ ಹೋದಾಗ ಇದು ಹೊಸ ಗಾಡಿ. ಇನ್ನೂ ಹಂಗೇ ಇದೆ. ಆವಾಗ ನೀಲಿಬಣ್ಣ ಇತ್ತು” ಎನ್ನುತ್ತ ಪರಮಣ್ಣ ಗಾಡಿಯ ಮೇಲಿದ್ದ ಧೂಳನ್ನು ಬೆರಳುಗಳಿಂದ ಒರೆಸತೊಡಗಿದ. ದಿಬ್ಬಣದ ಸುದ್ದಿ ಕಿವಿಗೆ ಬಿದ್ದಿದ್ದೇ ಸಾವಿತ್ರಕ್ಕ ಸೆರಗು ಸರಿಮಾಡಿಕೊಳ್ಳುತ್ತ ಹೊರಗೆ ಬಂದು “ಏನಿಲ್ಲ ಅಂದ್ರೂ ನಲವತ್ತು ಜನ ತುಂಬಿದ್ರು ನೋಡು ಆವತ್ತು ಗಾಡಿಯಲ್ಲಿ. ಫಳಫಳ ಹೊಳೀತಿತ್ತು ಗಾಡಿ. ಗಿಡ್ಡ ಆವಾಗ ಇನ್ನೂ ಸಣ್ಣ ಮಾಣಿ. ನಿನ್ನ ಮದ್ವೆ ಆಗಿರಲಿಲ್ಲ ಆವಾಗ ಅಲ್ವಾ? ಮರುವರ್ಷ ಇರ್ಬೇಕು ನಿನ್ನ ಮದ್ವೆ ಆಗಿದ್ದು. ಈಗ ಹೆಂಡತಿ-ಮಕ್ಕಳು ಎಲ್ಲ ಪ್ಯಾಟೆಲ್ಲೇ ಇರೋದಾ?” ಎನ್ನುತ್ತ ಅಹಮದನ ಹತ್ತಿರ ಮಾತನಾಡತೊಡಗಿದಳು. ಅಷ್ಟರಲ್ಲಿ ಮಜ್ಜಿಗೆ ತೆಗದುಕೊಂಡು ಹೋಗಲೆಂದು ಸ್ಟೀಲಿನ ಗಿಂಡಿಯೊಂದಿಗೆ ಅಲ್ಲಿಗೆ ಬಂದ ಆಚಾರಿಮನೆ ಗೌರಿ “ನಮ್ಮನೆ ಮಾಣಿ ನನ್ನ ಬಸಿರಲ್ಲಿ ಇದ್ದಾಗಲೂ ಇದರಲ್ಲೇ ಅಲ್ವಾ ಆಸ್ಪತ್ರೆಗೆ ಹೋಗಿದ್ದು! ಆವತ್ತು 407 ಇರಲಿಲ್ಲ ಅಂದ್ರೆ ನಾ ಆಸ್ಪತ್ರೆ ಕಂಡ ಹಂಗೇ ಆಗಿತ್ತು. ನಮ್ಮನೆಯವರಿಗೆ ಸುದ್ದಿ ಹೋಗಿ ಅವರು ಬರೋವರೆಗೂ ಬ್ರೆಡ್ಡು-ಗಿಡ್ಡು ಎಲ್ಲ ಗಿಡ್ಡನೇ ತಂದುಕೊಟ್ಟಿದ್ದು. ಈ ಸಲ ಮಳೆಗಾಲದೊಳಗೆ ಮನೆ ಒಂದು ರಿಪೇರಿ ಆಗ್ಬೇಕು. ಅದಕ್ಕೆ ಐಟಮ್ಸ್ ತಂದ್ ಹಾಕ್ಬಿಡು ಮಾರಾಯಾ. ಮುಂದಿನವಾರ ಅವರ ಹತ್ರ ದುಡ್ಡು ಕೊಟ್ಟು ಕಳಸ್ತೆ” ಎನ್ನುತ್ತ ಸಾವಿತ್ರಕ್ಕನ ಕೈಗೆ ಗಿಂಡಿಯನ್ನು ಕೊಟ್ಟಳು.

ಸಾವಿತ್ರಕ್ಕ ಒಳಗೆ ಹೋಗಿ ಗಿಂಡಿಯಲ್ಲಿ ಮಜ್ಜಿಗೆ ತುಂಬಿಸಿಕೊಂಡು ಬರುವಷ್ಟರಲ್ಲಿ ಗಿಡ್ಡ ಚೀಲಗಳನ್ನು ಗಾಡಿಗೆ ತುಂಬಿಸಲು ರೆಡಿಯಾಗುತ್ತಿದ್ದ. ದಡಬಡ ಸದ್ದುಮಾಡುತ್ತ ಕಬ್ಬಿಣದ ಕೊಕ್ಕೆಯನ್ನು ಸಡಿಲಿಸಿ ಗೇಟಿನಂಥ ಬಾಗಿಲನ್ನು ತೆಗೆದು, ಅವನ ಎರಡರಷ್ಟು ಉದ್ದದ ಮರದ ಹಲಗೆಯನ್ನು ಗಾಡಿಯಿಂದ ಎಳೆದು ಮೆಟ್ಟಿಲಿನಂತೆ ಮಾಡಿಕೊಂಡು ಹೆಗಲಮೇಲಿನ ಟವೆಲ್ಲನ್ನು ತೆಗೆದು ಕುತ್ತಿಗೆಗೆ ಕಟ್ಟಿಕೊಂಡು ಬೆನ್ನಿನ ಮೇಲೆ ಇಳಿಬಿಟ್ಟುಕೊಂಡು ನಿಂತಿದ್ದ. ಸಾವಿತ್ರಕ್ಕ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತ ಬಂದವಳೇ ಒಂದೊಂದೇ ಅಡಿಕೆಚೀಲಗಳನ್ನು ಎಳೆದುಕೊಟ್ಟಳು. ರಾಮಣ್ಣ ಅದನ್ನು ಗಿಡ್ಡನ ಬೆನ್ನಿಗೆ ಏರಿಸುತ್ತಿದ್ದಂತೆಯೇ ಗಿಡ್ಡ ತನ್ನ ದೇಹವನ್ನು ಮತ್ತಷ್ಟು ಬಾಗಿಸಿ ಮೂರಡಿಯಾಗಿಸಿಕೊಂಡು ಪಟಪಟನೆ ಮರದ ಹಲಗೆಯನ್ನು ಹತ್ತುತ್ತ ಚೀಲಗಳನ್ನು ಗಾಡಿಯೊಳಗೆ  ತುಂಬಿಸತೊಡಗಿದ. ಟೋನಿಯೂ ಗಿಡ್ಡನನ್ನು ಹಿಂಬಾಲಿಸಿ ಗಾಡಿಯನ್ನೇರಿ ಅಲ್ಲಿದ್ದ ಚೀಲಗಳನ್ನು ಪರಪರ ಸದ್ದುಮಾಡುತ್ತ ಉಗುರಿನಿಂದ ಕೆದರತೊಡಗಿತು. ಎಲ್ಲ ಚೀಲಗಳನ್ನು ಗಾಡಿಗೆ ಏರಿಸಿದವನೇ ಗಿಡ್ಡ ಟೋನಿಯನ್ನು ಎತ್ತಿ ಅಂಗಳಕ್ಕೆ ಬಿಟ್ಟು, ಡೋರನ್ನು ಎರಡೂ ಕೈಗಳಲ್ಲಿ ಮೇಲಕ್ಕೆ ಎತ್ತಿ ಹಿಡಿದುಕೊಂಡು ಕೊಕ್ಕೆಗಳನ್ನು ಬಿಗಿಮಾಡುವುದರಲ್ಲಿ ಮಗ್ನನಾದ. ಅಹಮದ ಗಾಡಿಯನ್ನು ಹತ್ತಿದ್ದೇ ಮಕ್ಕಳೆಲ್ಲ “ಹಾರ್ನ್ ಮಾಡು, ಹಾರ್ನ್ ಮಾಡು” ಎಂದು ಗಲಾಟೆ ಮಾಡತೊಡಗಿದರು. ಅಹಮದ ಗಾಡಿಯನ್ನು ಸ್ಟಾರ್ಟ್ ಮಾಡಿ ಎರಡು ಸಲ ಹಾರ್ನ್ ಮಾಡಿ ಅವರನ್ನೆಲ್ಲ ಒಬ್ಬೊಬ್ಬರನ್ನಾಗಿ ಗಾಡಿಯಿಂದ ಇಳಿಸತೊಡಗಿದ. “ಪೊಮ್ ಪೊಮ್ ಬುರ್ ಬುರ್” ಎಂದು ಬಾಯಿಯಿಂದ ಶಬ್ದ ಹೊರಡಿಸುತ್ತ, ಕೈಯಿಂದ ಸ್ಟೀರಿಂಗ್ ತಿರುಗಿಸುವಂತೆ ನಟಿಸುತ್ತ ಎಲ್ಲರೂ ಮತ್ತೆ ಆಚಾರಿಮನೆ ಕಡೆಗೆ ಓಡಿದರು. ಗಿಡ್ಡ ಗಾಡಿ ಹತ್ತುತ್ತಿದ್ದಂತೆಯೇ ಸಾವಿತ್ರಕ್ಕ ಹತ್ತಿರ ಹೋಗಿ “ಆದಷ್ಟು ಬೇಗ ಸೊಸೈಟಿಗೆ ಚೀಲ ಹಾಕ್ಬಿಡಿ. ಮತ್ತೆ ರೇಟು ಇಳಿದುಹೋದ್ರೆ ಕಷ್ಟ” ಎಂದು ಹೇಳಿದವಳೇ ಕಟ್ಟೆಯ ಮೇಲೆ ಬಂದು ನಿಂತುಕೊಂಡಳು. 407 ಹೊರಟುಹೋಗುತ್ತಿದ್ದಂತೆಯೇ ಮನೆ ಮತ್ತೆ ಎಂದಿನಂತೆ ಮಾತಿಲ್ಲದೆ ಭಣಗುಡತೊಡಗಿತು.

407 ಬಂದುಹೋದ ಇಡೀ ದಿನ ಸಾವಿತ್ರಕ್ಕನಿಗೆ ತನ್ನ ಮದುವೆಯ ದಿನ, ಮದುವೆಯ ನಂತರದ ಜೀವನದ ಘಟನೆಗಳೆಲ್ಲವೂ ಕಣ್ಣಮುಂದೆ ಹಾದುಹೋದಂತೆನ್ನಿಸುತ್ತಿದ್ದವು. ಅಹಮದನ ಪಕ್ಕ ಮೋತಿಮಲ್ಲಿಗೆಯ ಮಾಲೆ ಹಾಕಿಕೊಂಡು ಕುಳಿತಿದ್ದ ರಾಮಣ್ಣ ಗಾಡಿಯಿಂದ ಇಳಿದಿದ್ದನ್ನು ಅಣ್ಣನ ಮಕ್ಕಳು ನೋಡಿಕೊಂಡು ಓಡುತ್ತ ಬಂದು “ಅತ್ತೆ, ಮಾವ ಬಂದ. ದಿಬ್ಬಣ ಬಂತು” ಎಂದು ಹೇಳಿದ್ದು ನಿನ್ನೆ-ಮೊನ್ನೆ ನಡೆದಂತೆ ಭಾಸವಾಗುತ್ತಿತ್ತು. ತುಂಬಿದ ಮನೆಗೆ ತಾನು ಮದುವೆಯಾಗಿ ಬಂದಿದ್ದು, ನಾದಿನಿಯರ ಮದುವೆ, ಎಂಟು ಮೊಮ್ಮಕ್ಕಳ ಬಾಣಂತನವನ್ನು ಮುಗಿಸಿದ ಅತ್ತೆ ತೀರಿಕೊಂಡ ಒಂದೇ ವರ್ಷದಲ್ಲಿ ಮಾವನೂ ಕೊನೆಯುಸಿರೆಳೆದಿದ್ದು ಎಲ್ಲವೂ ನೆನಪಾಗಿ ಸುತ್ತಿಕೊಂಡಾಗ ನಿಟ್ಟುಸಿರನ್ನು ಹೊರತುಪಡಿಸಿ ಬೇರೇನೂ ಉಳಿಯುತ್ತಿರಲಿಲ್ಲ. ತನಗೆ ಹೆಣ್ಣುಮಗು ಹುಟ್ಟಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಾಗಲೆಲ್ಲ ಅತ್ತೆ, “ಸುಮ್ಮನಿರು. ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕಂತೆ. ಮನೆಯಲ್ಲಿ ಗಂಡು” ಎಂದು ಹೇಳಿ ಸಮಾಧಾನ ಮಾಡುತ್ತ ತಲೆಬಾಚಿ ಹೂವು ಮುಡಿಸುತ್ತಿದ್ದಳು. ನಾದಿನಿಯರು ಅತ್ತೆಯಂದಿರ ಬಗ್ಗೆ ದೂರು ಹೇಳುವಾಗಲೆಲ್ಲ ತಾಯಿಯಿಲ್ಲದ ಸಾವಿತ್ರಕ್ಕನಿಗೆ ಕೊಂಚವೂ ಬೇಸರಿಸದೇ ತನ್ನ ಬಾಣಂತನವನ್ನೂ ಮಾಡಿದ ಇಂಥ ಅತ್ತೆ ಬಂದಿಳಿದ 407 ಮೇಲೆ ವಿಚಿತ್ರವಾದ ಪ್ರೀತಿ ಉಂಟಾಗುತ್ತಿತ್ತು; ಎಲ್ಲ ನೋವುಗಳನ್ನೂ ಮರೆಯುವಂತೆ ಮಾಡಿದ ಮನೆಗೆ ತನ್ನನ್ನು ತಲುಪಿಸಿದ 407 ಬಂದು ಹೊರಟು ಹೋದಾಗಲೆಲ್ಲ ಜೋರು ಮಳೆಯೊಂದು ಬಂದು ನಿಂತುಹೋದಾಗಿನ ಖಾಲಿತನ ಆವರಿಸಿಕೊಳ್ಳುತ್ತಿತ್ತು.

ಆವತ್ತು ಸುಬ್ಬಜ್ಜ ಇಸ್ಪೀಟು ಆಡಲೆಂದು ಕೆಳಗಿನ ಕೇರಿಗೆ ಹೋದವನು ರಾತ್ರಿ ಅಲ್ಲಿಯೇ ಮಲಗಿದ್ದ. ಬೆಳಗ್ಗೆ ಮನೆಗೆ ಬಂದವನು ಟೋನಿಗೆ ಹಾಲು ಹಾಕಿ, ತಾನೂ ಒಂದು ಲೋಟ ಚಹಾ ಮಾಡಿ ಕುಡಿದು, ಸಾವಿತ್ರಕ್ಕನ ಹತ್ತಿರ ಮಧ್ಯಾಹ್ನಕ್ಕೆ ಗಂಜಿ ಮಾಡಲು ಹೇಳಿ ತಲೆನೋವೆಂದು ಮಲಗಿಬಿಟ್ಟಿದ್ದ. ಹುಣಸೆಬೈಲಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಸಪ್ತಾಹಕ್ಕೆ ಹೋಗಲು ಬೈಕು ಒರೆಸಿ ತಯಾರಾದ ಪರಮಣ್ಣ ಸುಬ್ಬಜ್ಜನನ್ನು ಕರೆಯಲು ಹೋದರೆ, ಜಗಲಿಯಲ್ಲಿ ಕಂಬಳಿ ಹಾಸಿ ಮಲಗಿದ್ದ ಸುಬ್ಬಜ್ಜನ ಮೈ ಜ್ವರದಿಂದ ನಡುಗುತ್ತಿತ್ತು. ಪರಮಣ್ಣನನ್ನು ನೋಡಿ ಎದ್ದು ಕುಳಿತ ಸುಬ್ಬಜ್ಜ “ಬಾ ಪರಮು, ನಿನ್ನ ಹತ್ರ ಮಾತಾಡೋದಿದೆ” ಎಂದ. ಪರಮಣ್ಣ ಎತ್ತಿಕಟ್ಟಿದ್ದ ಲುಂಗಿಯನ್ನು ಕೆಳಕ್ಕಿಳಿಸಿ ಸುಬ್ಬಜ್ಜನ ಪಕ್ಕ ಬಂದು ನೆಲದ ಮೇಲೆ ಕುಳಿತುಕೊಂಡ. ಸುಬ್ಬಜ್ಜ ಪರಮಣ್ಣನ ಕೈ ಹಿಡಿದುಕೊಂಡು “ಪರಮು, ನಮ್ಮನೆ ಮಾಣಿ ಬದುಕಿದ್ದಿದ್ರೆ ಈಗ ನಿನ್ನಷ್ಟೇ ವಯಸ್ಸಾಗಿರ್ತಿತ್ತು. ನಾನು ಹಾವು ಕೊಂದಿದ್ದಕ್ಕೆ ಅವ ಸಾಯಬೇಕಾಯ್ತು ನೋಡು. ಈಗ ಸತ್ತಮೇಲೆ ಕೊಳ್ಳಿ ಇಡೋದಕ್ಕೂ ಮಗ ಇಲ್ಲ. ಅದು ನಿನ್ನದೇ ಜವಾಬ್ದಾರಿ. ಕಾರ್ಯ ಎಲ್ಲ ಮುಗಿದಮೇಲೆ ಒಂದು ಸರ್ಪಸಂಸ್ಕಾರ ಮಾಡಿಸಿ ನೀನು ಮದುವೆ ಆಗು. ಜವಾಬ್ದಾರಿಯಿಂದ ದೂರ ಇರೋದ್ರಿಂದ ಮನುಷ್ಯ ಕರುಣೆ ಕಳ್ಕೋತಾನೆ. ತೋಟಕ್ಕೆ ಹೊಸಮಣ್ಣು ಹೊಯ್ದು ಬಾಳೆಗಿಡ ಹಾಕಿಸು. ಈಗ ನಾಲ್ಕು ಅಡಿಕೆಚೀಲ ಸೊಸೈಟಿಗೆ ಹಾಕೋದು ಬಾಕಿ ಇದೆ. ಅಹಮದನ ಹತ್ತಿರ ಬರೋಕೆ ಹೇಳು. ಹಂಗೇ ಆಸ್ಪತ್ರೆಗೆ ಹೋಗಿ ಬರೋಣ. ಈ ಜ್ವರ ಬಿಡೋ ತರ ಇಲ್ಲ” ಎಂದು ಹೇಳಿದವನೇ ಮತ್ತೆ ದಿಂಬಿಗೊರಗಿ ಕಣ್ಣು ಮುಚ್ಚಿದ.

ಪರಮಣ್ಣ ಬೈಕು ಹತ್ತಿ 407 ಹುಡುಕಿ ವಾಪಸ್ಸು ಬರುವಷ್ಟರಲ್ಲಿ ಸಾವಿತ್ರಕ್ಕ ಸುಬ್ಬಜ್ಜನ ಮನೆಯ ಅಡಿಕೆಚೀಲಗಳಿಗೆ ನಂಬರು ಬರೆದು ಕಾಯುತ್ತ ಕುಳಿತಿದ್ದಳು. ಸುಬ್ಬಜ್ಜ ಬಚ್ಚಲಿಗೆ ಹೋಗಿ ಕಷ್ಟಪಟ್ಟು ನಾಲ್ಕು ಚೊಂಬು ಬಿಸಿನೀರು ಹೊಯ್ದುಕೊಂಡು ಹೊಸ ಲುಂಗಿ ಉಟ್ಟು ತಯಾರಾಗಿದ್ದ. ಗಿಡ್ಡ ಗಡಿಬಿಡಿಯಲ್ಲಿ ಬಂದವನೇ ಅಡಿಕೆಚೀಲಗಳನ್ನು ತುಂಬಿ, ಸುಬ್ಬಜ್ಜನ ಕೈ ಹಿಡಿದು ಗಾಡಿಗೆ ಹತ್ತಿಸಿದ. ಸಾವಿತ್ರಕ್ಕ ಮಜ್ಜಿಗೆ ಗಿಂಡಿಯಲ್ಲಿ ಬಿಸಿನೀರು ತುಂಬಿ ಗಿಂಡಿಯನ್ನೂ, ಒಂದು ಲೋಟವನ್ನೂ ಪರಮಣ್ಣನ ಕೈಗೆ ಕೊಟ್ಟವಳು ಸುಬ್ಬಜ್ಜನ ಕೈ ಹಿಡಿದುಕೊಂಡು “ಬೇಗ ಬಂದುಬಿಡಿ. ಊಟಕ್ಕೆ ಗಂಜಿ ಮಾಡಿಡ್ತೇನೆ” ಎಂದಳು. 407 ಬಂದುನಿಂತ ಸದ್ದಿಗೆ ಓಡಿಬಂದ ಮಕ್ಕಳೆಡೆಗೆ ಕಷ್ಟಪಟ್ಟು ಕೈಬೀಸಿದ ಸುಬ್ಬಜ್ಜ ತಲೆಯನ್ನು ಸೀಟಿಗೊರಗಿಸಿ ಕಣ್ಣು ಮುಚ್ಚಿಕೊಂಡ. “ಸಾವಕಾಶ ಕರ್ಕೊಂಡು ಹೋಗಿ ಬರ್ತೆ. ನೀವೇನೂ ಹೆದರಬೇಡಿ” ಎಂದು ಹೇಳಿದವನೇ ಅಹಮದ ಗಾಡಿ ಸ್ಟಾರ್ಟ್ ಮಾಡಿದ. ಗಿಡ್ಡ ಚೀಲಗಳನ್ನು ತುಂಬಿಸುವಾಗ ಗಾಡಿ ಹತ್ತಿ ಕುಳಿತಿದ್ದ ಟೋನಿ ಚೀಲದ ರಾಶಿಯ ಮೇಲೆ ಕುಳಿತು ಗಾಡಿಯೊಂದಿಗೇ ಮರೆಯಾಗುತ್ತಿರುವುದನ್ನು ನೋಡಿದ ಸಾವಿತ್ರಕ್ಕ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಕಟ್ಟೆಯ ಮೇಲೆ ಕುಳಿತುಕೊಂಡಳು. ಸುಬ್ಬಜ್ಜನ ಮನೆಯ ಬಾಗಿಲು ತೆರೆದೇ ಇತ್ತು. ಬೆಳಗಿನ ಬಿಸಿಲು ಬಾಗಿಲನ್ನು ಹಾದು ಸುಬ್ಬಜ್ಜ ಮಲಗಿದ್ದ ಕಂಬಳಿಯ ಮೇಲೆ ಹರಡಿಕೊಂಡಿತ್ತು.

Journalist,Translator,avid bibliophile

Leave a Reply

Your email address will not be published. Required fields are marked *

Back To Top