ಐಟಿ ಕಾಯಿದೆಗೆ ಮತ್ತೊಂದು ತಿದ್ದುಪಡಿ: ಹಳ್ಳ ಹಿಡಿದ ಅಭಿವ್ಯಕ್ತಿ ಸ್ವಾತಂತ್ರ್ಯ

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ)ವು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಹಾಗೂ ಡಿಜಿಟಲ್‌ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021ಕ್ಕೆ ಮತ್ತೊಂದು ತಿದ್ದುಪಡಿ ತರಲು ಕರಡು ಪ್ರಸ್ತಾಪವನ್ನು ಪ್ರಕಟಿಸಿದೆ. ಒಂದು ವೇಳೆ ಅಂಗೀಕೃತಗೊಂಡರೆ, ವಾಕ್‌ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಇನ್ನಷ್ಟು ಬಿಗಿ ಯಾಗಲಿದೆ. ಶಾಸಕಾಂಗದ ಸಮ್ಮತಿ ಇಲ್ಲದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಜನರ ಮೂಲಭೂತ ಹಕ್ಕುಗಳನ್ನು ಕಸಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಐಟಿ ಕಾಯಿದೆಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸುಪ್ರೀಂ ಕೋರ್ಟ್ ಆನ್‌ಲೈನ್ ಗೋಪ್ಯತೆ ಮತ್ತು ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ನ್ಯಾಯಾಲಯ ಈ ಅರ್ಜಿಗಳನ್ನು ಕ್ರೋಡೀಕರಿಸಿದ್ದು, ಮೊದಲಿಗೆ ಡಿಜಿಟಲ್ ಮೀಡಿಯಾ ಮತ್ತು ಆನಂತರ ಮಧ್ಯವರ್ತಿ ಮಾರ್ಗಸೂಚಿಗಳ ಕುರಿತು ವಿಚಾರಣೆ ನಡೆಯಲಿದೆ. ಸರ್ಕಾರ ನ್ಯಾಯಾಲಯದ ತೀರ್ಪಿಗೆ ಕಾಯುವ ಬದಲು ಕಾಯಿದೆಗೆ ತರಾತುರಿಯಿಂದ ಇನ್ನೊಂದು ತಿದ್ದುಪಡಿ ತರಲು ಮುಂದಾಗಿದೆ.

ನಾಲ್ಕನೇ ತಿದ್ದುಪಡಿ: ಐಟಿ ಕಾಯಿದೆಗೆ 2021ರ ನಂತರ ನಾಲ್ಕು ತಿದ್ದುಪಡಿ ತರಲಾಗಿದೆ. ಅಕ್ಟೋಬರ್‌ 2022ರ ತಿದ್ದುಪಡಿ ಮೂಲಕ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸೃಷ್ಟಿಸ ಲಾಯಿತು. ಸಾಮಾಜಿಕ ವೇದಿಕೆಗಳ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಮನವಿಗಳ ಪರಿಶೀಲನೆಗೆ ಅಧಿಕಾರಿಗಳ ಮಂಡಳಿ ರಚನೆ ಹಾಗೂ ನಿಯಮ 3ಕ್ಕೆ ತಿದ್ದುಪಡಿ ಮಾಡಿ, ʻಮಧ್ಯ ವರ್ತಿ ವೇದಿಕೆಗಳು ಅನುಸರಣೆಯನ್ನು ಖಾತ್ರಿಗೊಳಿಸಬೇಕುʼ ಮತ್ತು ನಿಷೇಧಿತ ವಿಷಯಗಳನ್ನು ತೆಗೆದುಹಾಕಲು ʻತಾರ್ಕಿಕ ಪ್ರಯತ್ನʼ ನಡೆಸಬೇಕು ಎಂದು ಹೇಳಲಾಯಿತು. ವಿಷಯ ವೊಂದನ್ನು ತೆಗೆದುಹಾಕಲು ನೀಡಿದ್ದ ಕಾಲಾವಧಿಯನ್ನು 72 ಗಂಟೆಗೆ ಕಡಿಮೆ ಮಾಡಲಾಯಿತು. ಇದರಿಂದ ವೇದಿಕೆಗಳು ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ, ತ್ವರಿತವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ತೆಗೆದುಹಾಕುವಂತೆ ಆಯಿತು. ಏನು ಪ್ರಕಟಿಸಬಹುದು/ಬಾರದು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕೇಂದ್ರಕ್ಕೆ ನೀಡಿತು. ಜನರ ಮಾತುಗಳು ಅಂಕುಶಕ್ಕೆ ಸಿಲುಕಿದವು.

ಏಪ್ರಿಲ್‌ 2023ರ ತಿದ್ದುಪಡಿ ಇನ್ನೊಂದು ಹೆಜ್ಜೆ ಮುಂದೆ ಹೋಯಿತು. ಆನ್‌ಲೈನ್‌ ಆಟ ಕುರಿತ ನಿಯಮಗಳೊಟ್ಟಿಗೆ, ನಿಯಮ 3(1)(ಬಿ) ಅಡಿ ನಿಜಾಂಶ ಪತ್ತೆ ಅಧಿಕಾರವನ್ನು ನೀಡಿ ತು. ಸಚಿವಾಲಯದ ಸತ್ಯಾಂಶ ಪರಿಶೀಲನೆ ಘಟಕವು ನಕಲಿ, ಸುಳ್ಳು ಇಲ್ಲವೇ ಹಾದಿ ತಪ್ಪಿಸುತ್ತದೆ ಎಂದು ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತಡೆಯಲು ವೇದಿಕೆಗಳು ತಾರ್ಕಿಕ ಪ್ರಯತ್ನ ಮಾಡಬೇಕು ಎಂದು ವಿಧಿಸಿತು. ಸೆಪ್ಟೆಂಬರ್‌ 2024ರಲ್ಲಿ ಬಾಂಬೆ ಹೈಕೋರ್ಟ್‌, ಈ ತಿದ್ದುಪಡಿ ಅಸಾಂವಿಧಾನಿಕ ಎಂದು ಹೇಳಿ ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮಾರ್ಚ್‌ 2026ರಲ್ಲಿ ನಿರಾಕರಿಸಿತು.

ಅಕ್ಟೋಬರ್‌ 2025ರ ತಿದ್ದುಪಡಿಯು ಸಹಯೋಗ್‌ ಪೋರ್ಟಲ್‌ನ್ನು ವಿಧ್ಯುಕ್ತಗೊಳಿಸಿತು; ಈ ಪೋರ್ಟಲ್‌ ಪೊಲೀಸ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ವಿಷಯವೊಂದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ರೂಪಿಸಿದ ಏಕೀಕೃತ ಆನ್‌ಲೈನ್‌ ವೇದಿಕೆ. ನಿಯಮ 3(1)(ಡಿ) ಪ್ರಕಾರ, ನ್ಯಾಯಾಂಗದ ಆದೇಶ ಅಥವಾ ಜಂಟಿ ಕಾರ್ಯದರ್ಶಿ ಇಲ್ಲವೇ ಅದ ಕ್ಕಿಂತ ಮೇಲ್ಮಟ್ಟದ ಅಧಿಕಾರಿ(ಪೊಲೀಸ್‌ ಆಗಿದ್ದರೆ ಡಿಐಜಿ) ಹೇಳಿದಲ್ಲಿ ವಿಷಯ ತೆಗೆದುಹಾಕಬೇಕು; ಆನಂತರ ಕಾರ್ಯದರ್ಶಿ ಹಂತದ ಅಧಿಕಾರಿಯಿಂದ ವೇದಿಕೆಯ ಮಾಸಿಕ ಪರಿ ಶೀಲನೆ ನಡೆಸಬೇಕು. ಸೂಕ್ತವಲ್ಲ ಎಂದು ಪರಿಗಣಿಸಿದ ವಿಷಯವನ್ನು 36 ಗಂಟೆಗಳೊಳಗೆ ತೆಗೆದುಹಾಕಬೇಕು. ಈ ತಿದ್ದುಪಡಿಯು ಕೇಂದ್ರೀಕೃತ, ಪೋರ್ಟಲ್‌ ಆಧರಿತ ಸೆನ್ಸಾರ್‌ ಶಿಪ್‌ಗೆ ದಾರಿ ಮಾಡಿಕೊಟ್ಟಿದೆ. ವಿಷಯ ತೆಗೆಯಲು ಸೆಕ್ಷನ್‌ 69 ಹೇಳುವ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ ಮತ್ತು 2009ರ ಬ್ಲಾಕಿಂಗ್‌ ನಿಯಮಗಳು ಪಾಲನೆಯಾಗುತ್ತಿಲ್ಲ; ವಿಷಯದ ಮೂಲಲೇಖಕ ಇಲ್ಲವೇ ಬಳಕೆದಾರರಿಗೆ ನೋಟಿಸ್‌ ನೀಡುವುದಿಲ್ಲ ಮತ್ತು ಅಹವಾಲು ಆಲಿಸುವುದಿಲ್ಲ.

ಮಾರ್ಚ್‌ 30, 2026ರ ತಿದ್ದುಪಡಿ ಕರಡು ಗಾವುದ ದೂರ ಮುಂದೆ ಹೋಗಿದೆ. ಡಿಜಿಟಲ್‌ ಸೇವೆ ಒದಗಿಸುವ ವೇದಿಕೆಗಳು/ಮಧ್ಯವರ್ತಿಗಳಿಗೆ ಸ್ಪಷ್ಟೀಕರಣ, ಸಲಹೆ, ನಿರ್ದೇಶನ ಮತ್ತು ಇನ್ನಿತರ ಆದೇಶ ನೀಡಲು ಎಂಇಐಟಿವೈಗೆ ಅಧಿಕಾರ ನೀಡಲಿದೆ. ಐಟಿ ಕಾಯಿದೆಯ ಸೆಕ್ಷನ್‌ 79ರಡಿ ಲಭ್ಯವಿರುವ ನಿರ್ದಿಷ್ಟ ಹೊಣೆಗಾರಿಕೆಯಿಂದ ರಕ್ಷಣೆ ನೀಡುವ ʻಸೇಫ್‌ ಹಾರ್ಬರ್‌ʼ ಸವಲತ್ತು ಉಳಿಸಿಕೊಳ್ಳಲು ವೇದಿಕೆಗಳು ಸಚಿವಾಲಯದ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯ ಆಗಲಿದೆ. ಈಮೊದಲು, ಸೇಫ್‌ ಹಾರ್ಬರ್‌ ಸವಲತ್ತಿಗೆ ಸರ್ಕಾರದ ನಿರ್ಬಂಧ ಗಳು ಅನ್ವಯಿಸುತ್ತಿರಲಿಲ್ಲ; ತಿದ್ದುಪಡಿ ಮೂಲಕ ವೇದಿಕೆಗಳು ಪ್ರಕಟಿಸುವ ವಿಷಯಗಳಿಗೆ ಅವುಗಳನ್ನೇ ಸಂಪೂರ್ಣ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆದಿದೆ. ಇದರಿಂದಾಗಿ ವೇದಿಕೆ ಗಳು ಸರ್ಕಾರದ ದೃಷ್ಟಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಹೆಚ್ಚು ಎಚ್ಚರಿಕೆಯಿಂದ ವರ್ತಿಸಲು ತೊಡಗುತ್ತವೆ. ಎರಡನೆಯದಾಗಿ, ಪ್ರಸ್ತಾವದಲ್ಲಿ ಮೇಲ್ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿ ಸುವ ಅಂಶವೊಂದು ಇದೆ-ಅಂತರ್‌ ವಿಭಾಗೀಯ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಮಧ್ಯವರ್ತಿಗಳು/ಬಳಕೆದಾರರು ಸೃಷ್ಟಿಸುವ ವಿಷಯಗಳ ಪರಿಶೀಲನೆ ನಡೆಸುವ ಅಧಿಕಾರ ಕೊಡು ವುದು. ಇದರಿಂದ ಆನ್‌ಲೈನ್‌ ಸಂವಹನ ಕಠಿಣ ಪರಿಶೀಲನೆಗೆ ಸಿಲುಕಲಿದೆ. ಡಿಜಿಟಲ್‌ ಸುದ್ದಿ ವೇದಿಕೆಗಳಲ್ಲದೆ, ಬಾಹ್ಯ ಮೂಲಗಳ ಸುದ್ದಿಯನ್ನು ಹಂಚಿಕೊಳ್ಳುವ ಬಳಕೆದಾರರು-ಇನ್‌ಫ್ಲುಯನ್ಸರ್‌ಗಳನ್ನು ಬಾಧ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯಿದೆ.

ಜೊತೆಗೆ, ನಿಯಮ 3(1)(ಡಿ) ಅಡಿ ವಿಷಯವನ್ನು ತೆಗೆದುಹಾಕಬೇಕಿರುವ ಅವಧಿಯನ್ನು 30ರಿಂದ 3 ಗಂಟೆಗೆ, ಕುಂದುಕೊರತೆ ಪರಿಹಾರ ಅವಧಿಯನ್ನು 15ರಿಂದ 7 ದಿನಕ್ಕೆ, ಸೂಕ್ಷ್ಮ/ ಅನ್ಯೋನ್ಯ ವಿಷಯಗಳನ್ನು ತೆಗೆದುಹಾಕಬೇಕಿರುವ ಅವಧಿಯನ್ನು 24ರಿಂದ 2 ಗಂಟೆಗೆ ಹಾಗೂ ಇನ್ನಿತರ ವಿಷಯಗಳಿಗೆ 72 ರಿಂದ 36 ಗಂಟೆಗೆ ಕಡಿಮೆಮಾಡಿದೆ. ಹೊಸ ಪರಿಶೀಲನೆ ವ್ಯವಸ್ಥೆ ʼಸಿಂಥೆಟಿಕಲಿ ಜನರೇಟೆಡ್‌ ಇನ್ಫರ್ಮೇಷನ್(ಕೃತಕವಾಗಿ ಸೃಷ್ಟಿಸಿದ ಮಾಹಿತಿ)ʼ ಯನ್ನು ಪರಿಚಯಿಸಿದೆ- ಇಂಥ ವಿಷಯವನ್ನು ಸೃಷ್ಟಿಸುವ ಇಲ್ಲವೇ ವಿತರಿಸುವ ವೇದಿಕೆಗಳು ತಾರ್ಕಿಕ ಹಾಗೂ ಸೂಕ್ತವಾದ ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು; ಮಧ್ಯವರ್ತಿಗಳು ಪ್ರಕಟಣೆಗೆ ಮುನ್ನ ಬಳಕೆದಾರರಿಂದ ಹೇಳಿಕೆ, ವಿಷಯದ ತಾಂತ್ರಿಕ ಪರಿಶೀಲನೆ ಹಾಗೂ ಅದು ಸಿಂಥೆಟಿಕ್‌ ವಿಷಯ ಎಂದು ಖಾತ್ರಿಪಡಿಸಿಕೊಳ್ಳಬೇಕು; ಇಲ್ಲವಾದಲ್ಲಿ ನಿರ್ಲಕ್ಷ್ಯ ಧೋರಣೆ ಎಂದು ಪರಿಗಣಿಸಲಾಗುತ್ತದೆ ಎಂದಿದೆ. ಸಿಂಥೆಟಿಕ್‌ ಕಂಟೆಂಟ್‌ ಎಂದರೇನು? ಅದರ ವಿವರಣೆ ಏನು? ಇದರಿಂದಾಗಿ ವೇದಿಕೆಗಳು ಸಮಸ್ಯಾತ್ಮಕ ಎನ್ನಬಹುದಾದ ವಿಷಯಗಳ ಪ್ರಕಟಣೆಯನ್ನೇ ಸ್ಥಗಿತಗೊಳಿಸುತ್ತವೆ. ವಿಷಯವೊಂದರ ವಸ್ತುನಿಷ್ಠತೆ, ಅಧಿಕೃತತೆಯನ್ನು ಪರಿ ಶೀಲಿಸಲು ಕಾಲಾವಕಾಶ ಅಗತ್ಯವಿದೆ. ಕಾಲಾವಧಿಯನ್ನು ಕಡಿತಗೊಳಿಸಿರುವುದರಿಂದ, ಪರಿಶೀಲನೆ ಅಸಾಧ್ಯವಾಗುತ್ತದೆ ಮತ್ತು ವಿಷಯವನ್ನು ತೆಗೆದುಹಾಕಲಾಗಿದೆ ಎಂಬುದೇ ಬಳಕೆ ದಾರನಿಗೆ ತಿಳಿಯುವುದಿಲ್ಲ. ಈ ತಿದ್ದುಪಡಿಯು ವಿಷಯ ತೆಗೆದುಹಾಕುವಿಕೆಯನ್ನು ದಾಟಿ, ಪ್ರಕಟಣೆಗೆ ಮುನ್ನ ಸೆನ್ಸಾರ್‌ ವ್ಯವಸ್ಥೆ ಆಗಲಿದೆ ಹಾಗೂ ವೇದಿಕೆಗಳ ನಿರಂತರ ಸರ್ವೇಕ್ಷಣೆ ನಡೆಯಲಿದೆ. ಮುಖ್ಯವಾಹಿನಿ ಮಾಧ್ಯಮಗಳು ಸರ್ಕಾರಗಳ ಕೈಗೊಂಬೆಯಾಗಿರುವ ಸನ್ನಿವೇಶದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಜನರಿಗೆ ಇರುವ ಏಕೈಕ ಮಾರ್ಗವಾದ ಸಾಮಾಜಿಕ ಮಾಧ್ಯಮಗಳ ಬಾಗಿಲು ಮುಚ್ಚಿಹೋಗುತ್ತದೆ.

ಸಂಘರ್ಷದ ಇನ್ನೊಂದು ಆಯಾಮ: ತಿದ್ದುಪಡಿ ಪ್ರಸ್ತಾವವು ರಾಜ್ಯದಿಂದ ಡಿಜಿಟಲ್‌ ಕ್ಷೇತ್ರದ ಕೈವಶ-ನಿಯಂತ್ರಣ ಪ್ರಯತ್ನ ಮತ್ತು ಮುಕ್ತ ಅಭಿವ್ಯಕ್ತಿ ನಡುವಿನ ದೀರ್ಘಕಾಲೀನ ಸಂಘ ರ್ಷದ ಇನ್ನೊಂದು ಆಯಾಮವನ್ನು ತೆರೆದಿಡುತ್ತವೆ. ಈಮೊದಲು ಅಂತರ್‌ ಇಲಾಖಾ ಸಮಿತಿ(ಐಡಿಸಿ)ಯು ಪ್ರಕಟಿತ ವಿಷಯಗಳ ಪರಿಶೀಲನೆಗೆ ಸೀಮಿತವಾಗಿತ್ತು; ಈಗ ಅದು ವೇದಿಕೆ ಯಲ್ಲಿ ಬಳಕೆದಾರರು ಸೃಷ್ಟಿಸುವ ವಿಷಯವನ್ನೂ ಪರಿಶೀಲಿಸಬಹುದು ಮತ್ತು ಸಚಿವಾಲಯ ತನಗಿಷ್ಟ ಬಂದ ಯಾವುದೇ ವಿಷಯವನ್ನು ಐಡಿಸಿಗೆ ಪರಿಶೀಲನೆಗೆ ಕಳಿಸಬಹುದು. ಕರಡಿನ ಭಾಷೆ ಅಸ್ಪಷ್ಟವಾಗಿದೆ; ವಿಷಯದ ಪರಿಶೀಲನೆ ನಡೆಸಬೇಕೆಂದು ಯಾರೂ ದೂರು ನೀಡಬೇಕಿಲ್ಲ, ನೀತಿಸಂಹಿತೆಯ ಉಲ್ಲಂಘನೆ ಆಗಿದೆ ಎಂದು ಸಾಬೀತುಪಡಿಸಬೇಕಿಲ್ಲ ಮತ್ತು ದೂರ ನ್ನು ಐಡಿಸಿಗೆ ಕಳಿಸುವ ಮುನ್ನ ಸಂತ್ರಸ್ಥರ ಅಹವಾಲು ಆಲಿಸಲಾಗುತ್ತದೆ ಎಂಬ ಖಾತ್ರಿಯಿಲ್ಲ. ಇದರಿಂದ ಇಡೀ ಪರಿಶೀಲನೆ ವ್ಯವಸ್ಥೆ ಕೇಂದ್ರೀಕೃತ ಹಾಗೂ ಅಧಿಕಾರಶಾಹಿ ನಿಯಂತ್ರಣ ದಲ್ಲಿರುವ ಪ್ರಕ್ರಿಯೆ ಆಗಲಿದೆ. ಯುಟ್ಯೂಬ್‌, ಇನ್‌ಸ್ಟಾಗ್ರಾಂ ಮತ್ತು ಎಕ್ಸ್‌ನಂಥ ವೇದಿಕೆಗಳು ನಿಯಮಗಳನ್ನು ಅನುಸರಿಸದಿದ್ದರೆ, ಸೇಫ್‌ ಹಾರ್ಬರ್‌ ಸವಲತ್ತಿನ ಮೇಲೆ ಪರಿಣಾಮ ಆಗ ಲಿದೆ. ಎಕ್ಸ್‌ನ ಕಮ್ಯುನಿಟಿ ನೋಟ್ಸ್(ಸಮುದಾಯದ ಟಿಪ್ಪಣಿಗಳು) ಸುದ್ದಿ, ರಾಜಕೀಯ ಅಥವಾ ಸಾರ್ವಜನಿಕ ನೀತಿಗೆ ಸಂಬಂಧಿಸಿದ್ದರೆ, ಅವುಗಳನ್ನು ಪರಿಶೀಲಿಸಬಹುದು‌. ಆದರೆ, ಈ ಟಿಪ್ಪಣಿಗಳನ್ನು ಒಬ್ಬ ವ್ಯಕ್ತಿ ಬದಲು ಬಹುಬಳಕೆದಾರರು ರೂಪಿಸಿರುತ್ತಾರೆ. ಅಂಥ ಸನ್ನಿವೇಶದಲ್ಲಿ ಯಾರ ಮೇಲೆ ಹೊಣೆಗಾರಿಕೆ ಹೊರಿಸಲಾಗುತ್ತದೆ? ಇಡೀ ಸಮುದಾಯದ ಮೇಲೆ?
ಅಂತರ ಇಲಾಖೆ ಸಮಿತಿ ಸ್ವೀಕರಿಸಿದ ಕುಂದುಕೊರತೆಗಳಲ್ಲಿ ಸ್ವತಂತ್ರ ಸುದ್ದಿ ಸೃಷ್ಟಿಕರ್ತರು ತಪ್ಪಿತಸ್ಥರೆಂದು ಕಂಡುಬಂದರೆ, ಅವರನ್ನು ನಿರ್ಬಂಧಿಸಲು ಸರ್ಕಾರ ಆದೇಶ ಹೊರಡಿಸ ಬಹುದು. ಸರ್ಕಾರದ ಸೂಚನೆ, ನಿರ್ದೇಶನ ಹಾಗೂ ಮಾರ್ಗದರ್ಶಿ ಸೂತ್ರಗಳ ಅನುಸರಣೆ ಮಾಡಬೇಕೆಂಬ ಶರತ್ತಿನಿಂದ ವಿಷಯಗಳನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚುತ್ತದೆ.

ರಾಣಾ ಅಯೂಬ್ ಪ್ರಕರಣವನ್ನು ನೋಡೋಣ: ಅಯೂಬ್‌ ಅವರ ಹಳೆಯ ಪೋಸ್ಟ್‌ಗಳನ್ನು ತೆಗೆದುಹಾಕಲು ಎಕ್ಸ್‌ ವಿಫಲವಾದರೆ, ಸೇಫ್‌ ಹಾರ್ಬರ್‌ ರಕ್ಷಣೆ ಕಳೆದುಕೊಳ್ಳಲಿದೆ ಎಂದು ಸರ್ಕಾರ ಮತ್ತು ಪೊಲೀಸರು ದಿಲ್ಲಿ ಹೈಕೋರ್ಟ್‌ಗೆ ಏಪ್ರಿಲ್‌ 10,2026ರಂದು ಹೇಳಿದ್ದಾರೆ. 2013-2017ರ ಅವಧಿಯಲ್ಲಿ ಅಯೂಬ್‌ ಅವರು ಹಿಂದೂ ದೇವತೆಗಳು ಮತ್ತು ಸಾವರ್ಕರ್ ಬಗ್ಗೆ ಮಾಡಿದ ಆರು ಪೋಸ್ಟ್‌ಗಳನ್ನು ತೆಗೆದುಹಾಕಬೇಕು. ಇವು ಕೋಮುಸೌಹಾರ್ದಕ್ಕೆ ಭಂಗ ತರಬಹುದು ಎಂದು ಅಮಿತಾ ಸಚ್‌ದೇವ ಎಂಬ ವಕೀಲರು ಜನವರಿ 2025ರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ. ಪುರುಷೇಂದ್ರ ಕುಮಾರ್ ಕೌರವ್ ಅವರು ಅಯೂಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ʻಎಕ್ಸ್‌ನಲ್ಲಿನ ತಮ್ಮ ಪೋಸ್ಟ್‌ ಗಳು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಇದು ನನ್ನನ್ನು ಬೆದರಿಸುವ ಮತ್ತು ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನʼ ಎಂದು ಅಯೂಬ್‌ ಪ್ರತಿಕ್ರಿಯಿಸಿದ್ದಾರೆ. ವಿಷಯವನ್ನು ಅಪ್‌ಲೋಡ್ ಮಾಡಿದ ಅಯೂಬ್‌ ಅವರಿಗೆ ತೆಗೆದುಹಾಕುವಂತೆ ನಿರ್ದೇಶನ ನೀಡಬೇಕು ಎಂದು ಎಕ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಜನವರಿ-ಜೂನ್‌ 2025ರಲ್ಲಿ ಎಕ್ಸ್‌ಗೆ 29,118 ಟ್ವೀಟ್‌ಗಳನ್ನು ತೆಗೆದುಹಾಕಬೇಕೆಂದು ಆದೇಶಿಸಲಾಗಿದ್ದು, ಇದರಲ್ಲಿ ಎಷ್ಟನ್ನು ಜಂಟಿಕಾರ್ಯದರ್ಶಿ ಪರಿಶೀಲಿಸಿದ್ದಾರೆ? ಪರಿಶೀಲನೆ ಪ್ರಕ್ರಿಯೆ ಆಂತರಿಕವಾದದ್ದು; ಆರಂಭಿಕ ಆದೇಶ ನೀಡಿದವರೇ ಪರಿಶೀಲನೆ ಮಾಡುವ ಸಾಧ್ಯತೆಯೂ ಇರುತ್ತದೆ. ಆಗ ದೂರು ನೀಡಿದವರಿಗೆ ಹೇಗೆ ನ್ಯಾಯ ಸಿಗುತ್ತದೆ? ಶ್ರೇಯಾ ಸಿಂಘಾಲ್‌ ವಿ/ಎಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೆಕ್ಷನ್‌ 69ನ್ನು ತೆಗೆದುಹಾಕದೆ ಇರಲು ಕಾರಣಗಳಿದ್ದವು. ಆದರೆ, ಹಾಲಿ ತಿದ್ದುಪಡಿ ಸಾಂವಿಧಾನಿಕ ಹಕ್ಕುಗಳನ್ನೇ ಘರ್ಷಣೆ ಎಂದು ಪರಿಗಣಿಸುತ್ತವೆ ಹಾಗೂ ಸೇಫ್‌ ಹಾರ್ಬರ್‌ ನೆಪದಲ್ಲಿ ಸೆನ್ಸಾರ್‌ಶಿಪ್‌ ನಡೆಸುತ್ತದೆ.

ಸ್ವತಂತ್ರ ವ್ಯಾಖ್ಯಾನಕಾರರಿಗೆ ಅಂಕುಶ: ಮಾರ್ಚ್‌ 30, 2026ರ ತಿದ್ದುಪಡಿಯು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಾಖ್ಯಾನ/ವಿಮರ್ಶೆ ಮಾಡುವವರನ್ನು ಅಂಕೆಯಲ್ಲಿಡಲು ಬಳಕೆಯಾಗಲಿದೆ. ಮುಖ್ಯವಾಹಿನಿ ಮಾಧ್ಯಮ ಉದ್ಯಮಿ-ರಾಜಕಾರಣಿಗಳ ಜೇಬಿನಲ್ಲಿರುವುದರಿಂದ, ಸ್ವತಂತ್ರ ವ್ಯಾಖ್ಯಾನಕಾರರು ಮತ್ತು ಪರ್ಯಾಯ ಮಾಧ್ಯಮಗಳು ಹೆಚ್ಚಿವೆ. ದೇಶಿ-ವಿದೇಶಿ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ಇವುಗಳ ನಿಯಂತ್ರಣ ಪ್ರಯತ್ನ ನಡೆದಿದೆ. ತಿದ್ದುಪಡಿಯು ಮೂಲ ಕಾಯಿದೆಯ ವ್ಯಾಪ್ತಿಯನ್ನು ಮೀರಿರುವುದಲ್ಲದೆ, ಮಧ್ಯವರ್ತಿ ವೇದಿಕೆಗಳ ಮರುವಿನ್ಯಾಸಕ್ಕೆ ಒತ್ತಡ ಹೇರುತ್ತದೆ. ಉದಾಹರಣೆಗೆ, ಕಮ್ಯುನಿಟಿ ನೋಟ್ಸ್ ಮತ್ತು ಬಳಕೆದಾರರಿಂದ ಸತ್ಯಾಂಶ ಪರಿಶೀಲನೆಗೆ ವೇದಿಕೆಗಳನ್ನು ಉತ್ತರದಾಯಿಯಾಗಿ ಮಾಡಿ ದರೆ, ಅವು ಆ ವೈಶಿಷ್ಟ್ಯಗಳನ್ನೇ ತೆಗೆದುಹಾಕುತ್ತವೆ. ತಿದ್ದುಪಡಿ ಪ್ರಸ್ತಾವ ದೇಶದ ಸೆನ್ಸಾರ್‌ಶಿಪ್‌ ವಸ್ತ್ರದ ಇನ್ನೊಂದು ಪದರ; ಬಳಕೆದಾರರೊಬ್ಬರ ಪೋಸ್ಟ್‌ ಇಲ್ಲವೇ ಇಡೀ ಖಾತೆಯನ್ನೇ ತೆಗೆದುಹಾಕಿದರೂ, ತೆಗೆದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಮತ್ತು ಕಾನೂನಿನಡಿ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಇದಕ್ಕೆ ಐಟಿ ಕಾಯಿದೆ 2000ರ 2 ಅಂಶಗಳು ಕಾರಣ: ಬ್ಲಾಕ್‌ ಮಾಡಲು ಅವಕಾಶ ನೀಡುವ ಸೆಕ್ಷನ್‌ 69ಎ ಮತ್ತು ವೇದಿಕೆಗಳಿಗೆ ಬಳಕೆದಾರರ ಪೋಸ್ಟ್‌ಗಳಿಂದ ರಕ್ಷಣೆ ನೀಡುವ ಸೇಫ್‌ ಹಾರ್ಬರ್‌ ಖಾತ್ರಿ. ಶ್ರೇಯಾ ಸಿಂಘಾಲ್‌ ವಿ/ಎಸ್‌ ಭಾರತ ಸರ್ಕಾರ ಪ್ರಕರಣ(ಮಾರ್ಚ್‌ 24, 2015)ದಲ್ಲಿ ಎಂಇಐಟಿವೈ ಉಲ್ಲೇಖಿಸಿದ್ದ ಸುರಕ್ಷಾ ಕ್ರಮಗಳನ್ನು ಆಧರಿಸಿ, ಇವೆರಡನ್ನೂ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಆದರೆ, ಕಳೆದ 10 ವರ್ಷದಲ್ಲಿ ಇಲಾಖೆ ತಿದ್ದುಪಡಿಗಳ ಮೂಲಕ ಕಾಯಿದೆಯನ್ನು ದುರ್ಬಲಗೊಳಿಸಿದೆ; ಸೆಕ್ಷನ್‌ 69ಎ ಅಡಿ ಬ್ಲಾಕಿಂಗ್‌ ಆದೇಶಗಳನ್ನು ಅತಿ ಶೀಘ್ರವಾಗಿ, ಅತ್ಯಂತ ಹೆಚ್ಚು ಪ್ರಕರಣ ಗಳಲ್ಲಿ ನೀಡಲಾಗಿದೆ. ಏಕೆ ಆದೇಶ ನೀಡಲಾಗಿದೆ ಎಂದು ತಿಳಿಸುವುದಿಲ್ಲ ಹಾಗೂ ಆದೇಶದ ನಕಲನ್ನು ಗ್ರಾಹಕರಿಗೆ ನೀಡುವುದಿಲ್ಲ. ಏನು ತಪ್ಪಾಗಿದೆ ಎನ್ನುವುದನ್ನೇ ವಿವರಿಸದೆ ವಿಚಾರ ಣೆಗೆ ದಿಲ್ಲಿಗೆ ಕರೆಸಲಾಗುತ್ತದೆ. ಸೆಕ್ಷನ್‌ 79ನ್ನು ಇನ್ನಷ್ಟು ತಿರುಚಲಾಗಿದೆ.

ಸಾಮಾಜಿಕ ವೇದಿಕೆಗಳು(ಯುಟ್ಯೂಬ್‌, ಇನ್ಸ್ಟಾಗ್ರಾಂ, ಸ್ನ್ಯಾಪ್‌ಚಾಟ್‌, ಫೇಸ್‌ಬುಕ್‌, ಎಕ್ಸ್‌, ಲಿಂಕ್ಡ್‌ಇನ್‌ ಇತ್ಯಾದಿ) ವಾಣಿಜ್ಯಿಕ ಉದ್ದೇಶವುಳ್ಳವು. ಇವು 103 ಕೋಟಿ ಅಂತರ್ಜಾಲ ಬಳಕೆದಾರರು ಹಾಗೂ 106 ಕೋಟಿ ಮೊಬೈಲ್‌ ಗ್ರಾಹಕರಿರುವ ದೇಶದ ಸರ್ಕಾರವನ್ನು ಎದುರುಹಾಕಿಕೊಳ್ಳುತ್ತವೆ ಮತ್ತು ಜನರ ಹಕ್ಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತವೆ ಎಂದುಕೊಳ್ಳು ವುದು ಭ್ರಮೆ. ಇಲ್ಲಿ ಅಂದಾಜು 500 ದಶಲಕ್ಷ ಯುಟ್ಯೂಬ್‌, 481 ದಶಲಕ್ಷ ಇನ್ಸ್ಟಾಗ್ರಾಂ, 213 ದಶಲಕ್ಷ ಸ್ನ್ಯಾಪ್‌ಚಾಟ್‌, 403 ದಶಲಕ್ಷ ಫೇಸ್‌ಬುಕ್‌, 22 ದಶಲಕ್ಷ ಎಕ್ಸ್‌ ಹಾಗೂ 120 ದಶಲಕ್ಷ ಲಿಂಕ್ಡ್‌ ಇನ್‌ ಬಳಕೆದಾರರು ಇದ್ದಾರೆ(ಮಾಹಿತಿ:datareportal). ಇವರಲ್ಲಿ ಹೆಚ್ಚಿನವರು ಜೆನ್‌ ಝಿಗೆ ಸೇರಿದವರು ಮತ್ತು ಆರ್ಥಿಕತೆಯನ್ನು ಮುನ್ನಡೆಸುವವರು. ಇಂಥ ಪರಿಸ್ಥಿತಿಯಲ್ಲಿ ಬಳಕೆದಾರರ ಜಾಗೃತಿಯಿಂದಷ್ಟೇ ಸರ್ಕಾರವನ್ನು ಮಣಿಸಬಹುದು.

ಸುಳ್ಳು ಮಾಹಿತಿಗೆ ತಡೆ: ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿ, ವದಂತಿ ಮತ್ತು ದ್ವೇಷದ ವಿಷಯಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿವೆ ಎನ್ನುವುದು ನಿಜ. ಇದನ್ನು ನಿಯಂತ್ರಿಸಬೇಕು; ತಪ್ಪು ಮಾಹಿತಿಗೆ ತಡೆ, ನಿರ್ಬಂಧ ಹೇರಬೇಕು ಎನ್ನುವುದು ಸಮರ್ಥನೀಯ. ʻಸುರಕ್ಷಿತ, ವಿಶ್ವಾಸಾರ್ಹ ಹಾಗೂ ಉತ್ತರದಾಯಿತ್ವ ಇರುವ ಅಂತರ್ಜಾಲ ಸೇವೆ ವ್ಯವಸ್ಥೆಯನ್ನು ಖಾತ್ರಿಗೊಳಿಸುವುದು ನನ್ನ ಕರ್ತವ್ಯʼ ಎಂದು ಸರ್ಕಾರ ಹೇಳುತ್ತದೆ; ಆದರೆ, ತಿದ್ದುಪಡಿ ವೇದಿಕೆಗಳಲ್ಲಿ ಜನರ ಧ್ವನಿಯನ್ನು ಉಡುಗಿಸಲಿದೆ; ಮುಕ್ತ ಅಭಿವ್ಯಕ್ತಿಗೆ ಧಕ್ಕೆ ತರುತ್ತದೆ ಮತ್ತು ಅಧಿಕ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಿದೆ. ಸರ್ಕಾರ ತನಗೆ ತಾನೇ ಪರಮಾಧಿಕಾರ ಕೊಟ್ಟುಕೊಂಡಿದೆ ಮತ್ತು ಏಕಪಕ್ಷೀಯವಾಗಿ ಕಾಯಿದೆಗೆ ಒಪ್ಪಿಗೆ ಪಡೆಯಲು ಮುಂದಾಗಿದೆ! ಕಾನೂನಿನ ಸಮರ್ಪಕ ಅನುಷ್ಠಾನ, ವೇದಿಕೆಗಳ ಉತ್ತರದಾಯಿತ್ವ ಹೆಚ್ಚಳ ಮತ್ತು ಡಿಜಿಟಲ್‌ ಸಾಕ್ಷರತೆ ಹೆಚ್ಚಳದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆದರೆ, ಇದು ಸರ್ಕಾರಕ್ಕೆ ಅಪಥ್ಯ.

ಈ ಎಲ್ಲ ತಿದ್ದುಪಡಿಗಳ ಲಕ್ಷ್ಯ ಒಂದೇ: ಸರ್ಕಾರದ ಹಿಡಿತ ಬಲಪಡಿಸುವುದು. ಜನರು ಏನು ಹೇಳುತ್ತಾರೆ, ನೋಡುತ್ತಾರೆ, ಕೇಳುತ್ತಾರೆ ಮತ್ತು ಆನ್‌ಲೈನ್‌ನಲ್ಲಿ ಏನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಅಧಿಕಾರವನ್ನು ಕಾರ್ಯಾಂಗದಲ್ಲಿ ಕೇಂದ್ರೀಕರಿಸಲಾಗಿದೆ; ಇದರಿಂದ ಅಧಿಕಾರವು ನ್ಯಾಯಾಲಯಗಳಿಂದ ಕಾರ್ಯಾಂಗಕ್ಕೆ ವರ್ಗಾವಣೆಯಾಗಿದೆ. ಉತ್ತರದಾಯಿ ತ್ವವಿಲ್ಲದ ಅಧಿಕಾರ ಕಾಲಕ್ರಮೇಣ ಎಲ್ಲರ ಮೇಲೆ ಪ್ರಯೋಗಿಸಲ್ಪಡುತ್ತದೆ. ಸರ್ವಾಧಿಕಾರಗಳು ಒಂದೇ ದಿನದಲ್ಲಿ ಉದ್ಭವಿಸುವುದಿಲ್ಲ; ಭಯದ ಸೃಷ್ಟಿ ಮತ್ತು ನಿಯಂತ್ರಣದ ಮೂಲಕ ಕಾಲಕ್ರಮೇಣ ರೂಪಗೊಳ್ಳುತ್ತವೆ. ಆದರೆ, 16 ವರ್ಷ ಆಡಳಿತ ನಡೆಸಿದ್ದ ಹಂಗರಿಯ ಅಧ್ಯಕ್ಷ ವಿಕ್ಟರ್‌ ಒರ್ಬನ್‌ಗೆ ಜನ ಚುನಾವಣೆಯಲ್ಲಿ ಸೋಲುಣಿಸಿದರು ಎಂಬುದನ್ನು ಮರೆಯಬಾರದು.

 

Journalist,Translator,avid bibliophile

Leave a Reply

Your email address will not be published. Required fields are marked *

Back To Top