ತೂಗುಯ್ಯಾಲೆಯಲ್ಲಿರುವ ಆಪ್‌ ಮತ್ತು ಕೇಜ್ರಿವಾಲ್‌ ಭವಿಷ್ಯ

2021-22ರ ದೆಹಲಿ ಮದ್ಯ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನಿಶ್‌ ಸಿಸೋಡಿಯಾ ಸೇರಿದಂತೆ 23 ಮಂದಿಗೆ ನ್ಯಾಯಾಲಯ ಉಪಶಮನ ನೀಡಿದೆ. 100 ಕೋಟಿ ಲಂಚ ಪಡೆಯಲಾಗಿದೆ ಎಂಬುದು ಊಹಾತ್ಮಕ ಮತ್ತು ಅದಕ್ಕೆ ಪುರಾವೆ ನೀಡುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ಇದೇ ಹೊತ್ತಿನಲ್ಲಿ 7 ಸಂಸದರು ಆಮ್‌ ಆದ್ಮಿ ಪಕ್ಷವನ್ನು ತೊರೆದು, ಬಿಜೆಪಿ ಸೇರಿದ್ದಾರೆ. 2027ರಲ್ಲಿ ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆ ಗೆ ಬಿಜೆಪಿ ಹತಾರಗಳನ್ನು ಸಜ್ಜುಗೊಳಿಸಲು ಆರಂಭಿಸಿದೆ.

ದೆಹಲಿ ವಿಧಾನಸಭೆ ಚುನಾವಣೆ ವೇಳೆ ಮಫ್ಲರ್‌ ಧರಿಸಿ, ಕೆಮ್ಮುತ್ತ, ಭ್ರಷ್ಟಾಚಾರ ತೊಲಗಿಸುತ್ತೇನೆಂದು ಪೊರಕೆ ಹಿಡಿದು ರಂಗ ಪ್ರವೇಶಿಸಿದ ಅರವಿಂದ್‌ ಕೇಜ್ರಿವಾಲ್‌, ಅಣ್ಣಾ ಹಜಾರೆ ನೇತೃತ್ವದ ಇಂಡಿಯಾ ಎಗೇನ್ಸ್ಟ್‌ ಕರ ಪ್ಷನ್‌ ಆಂದೋಲನದ ಶಿಶು. ಈ ಆಂದೋಲನದ ಹಿಂದೆ ಇದ್ದವರು ಯಾರು, ಅವರ ಸೈದ್ಧಾಂತಿಕ ನಿಲುವು ಏನಿತ್ತು ಎನ್ನುವುದು ಈಗ ಬಹಿರಂಗಗೊಂಡಿದೆ. ಪ್ರಶಾಂತ್‌ ಮತ್ತು ಶಾಂತಿಭೂಷಣ್, ಯೋಗೇಂದ್ರ ಯಾದವ್‌, ಮೇಧಾ ಪಾಟ್ಕರ್‌ ಮತ್ತಿತರರು ಕೆಲಕಾಲದಲ್ಲೇ ಆಂದೋಲನದಿಂದ ಹೊರಗೆ ಬಂದರು. ಆಪ್ ರಂಗ ಪ್ರವೇಶ ಮಾಡಿದ ಹೊತ್ತಿನಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಭ್ರಷ್ಟಾಚಾರ ಹಾಗೂ ಆಡಳಿತದ ನಿಷ್ಕ್ರಿಯತೆಯಿಂದ ರಾಜ ಕೀಯ ನಿರ್ವಾತವೊಂದು ಸೃಷ್ಟಿಯಾಗಿತ್ತು. ಅಮೆರಿಕದಲ್ಲಿ ʻಆಕ್ಯುಪೈ ವಾಲ್‌ಸ್ಟ್ರೀಟ್‌ʼ ಪ್ರತಿಭಟನೆ ಆರಂಭವಾಗಿತ್ತು; ಟ್ಯುನಿಶಿಯಾದಲ್ಲಿ ಬೀದಿ ಬದಿ ವ್ಯಾಪಾರಿ ಮೊಹಮ್ಮದ್‌ ಬುವಾಜಿಜಿ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿ ಕೊಂಡಿದ್ದರಿಂದ, 23 ವರ್ಷ ಆಡಳಿತ ನಡೆಸಿದ್ದ ಸರ್ವಾಧಿಕಾರಿ ಜಿನ್‌ ಎಲ್‌ ಅಬಿದಿನ್ ಬೆನ್‌‌ ಅಲಿ ವಿರುದ್ಧ ಜನರು ಬಂಡೆದ್ದರು. ʻಜಾಸ್ಮಿನ್‌ ರೆವಲ್ಯೂಷನ್‌ʼ ಎಂದು ಹೆಸರಾದ ಈ ನಾಗರಿಕ ಪ್ರತಿರೋಧದಲ್ಲಿ ಸರ್ವಾಧಿಕಾರಿ ಪದಚ್ಯುತಗೊಂಡರು. ಇಟಲಿಯಲ್ಲಿ ಹಾಸ್ಯ ಕಲಾವಿದ ಬೆಪ್ಪೆ ಗ್ರಿಲ್ಲೋ ಆರಂಭಿಸಿದ ಫೈವ್‌ ಸ್ಟಾರ್‌ ಮೂವ್‌ಮೆಂಟ್‌, 2013ರ ಚುನಾವಣೆಯಲ್ಲಿ ಶೇ.25ರಷ್ಟು ಮತ ಗಳಿಸಿತು. ಸ್ಪೇನ್‌ನಲ್ಲಿ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕ ಆರಂಭಿಸಿದ ಪೊಡೆಮಾಸ್(ಸ್ಪ್ಯಾನಿಷ್‌ನಲ್ಲಿ ವಿ ಕ್ಯಾನ್), ಚುನಾವಣೆಯಲ್ಲಿ ಶೇ.21ರಷ್ಟು ಮತ ಗಳಿಸಿತು. ಇವೆಲ್ಲವೂ ಜನರನ್ನು ಸ್ಪರ್ಶಿಸದ ಆಡಳಿತ, ಆರ್ಥಿಕ ಅಸಮಾನತೆ ಹೆಚ್ಚಳ ಮತ್ತು ಭ್ರಷ್ಟಾಚಾರದ ವಿರುದ್ಧದ ಪ್ರತಿಕ್ರಿಯೆ ಗಳಾಗಿದ್ದವು.

ಲೋಕಪಾಲ ಮಸೂದೆಗೆ ಆಗ್ರಹಿಸಿ, 5 ಏಪ್ರಿಲ್‌ 2011ರಂದು ಭ್ರಷ್ಟಾಚಾರ ವಿರೋಧ ಆಂದೋಲನ ಆರಂಭಗೊಂಡಿತು. ಡಿಸೆಂಬರ್‌ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದ ಆಪ್, ಕಾಂಗ್ರೆ ಸ್‌ನ ಬಾಹ್ಯ ಬೆಂಬಲದಿಂದ ಸರ್ಕಾರ ರಚನೆ ಮಾಡಿತು(ಡಿಸೆಂಬರ್‌ 28,‌ 2013). ಆದರೆ, ಲೋಕಪಾಲ ಮಸೂದೆಯನ್ನು ಕಾಂಗ್ರೆಸ್-ಬಿಜೆಪಿ ಬೆಂಬಲಿಸಲಿಲ್ಲ ಎಂದು ಆರೋಪಿಸಿ, ಕೇಜ್ರಿವಾಲ್‌ ಫೆಬ್ರವರಿ 14, 2014ರಂದು ರಾಜೀನಾಮೆ ನೀಡಿದರು. 2014ರ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಸ್ಪರ್ಧಿಸಿದ ಆಪ್, ಪಂಜಾಬಿನಲ್ಲಿ 4 ಹಾಗೂ ದಿಲ್ಲಿಯಲ್ಲಿ 1 ಸ್ಥಾನ ಗಳಿಸಿತು. 2015ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 67 ಕ್ಷೇತ್ರಗಳಲ್ಲಿ ಜಯ ಗಳಿಸಿ (ಒಟ್ಟು ಸ್ಥಾನ 70), ಸರ್ಕಾರ ರಚನೆಮಾಡಿತು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಹಾಗೂ ದಿಲ್ಲಿಯಲ್ಲಿ 15 ವರ್ಷ ಆಡಳಿತ ನಡೆಸಿದ್ದ ಶೀಲಾ ದೀಕ್ಷಿತ್‌ ನೇತೃತ್ವದ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ದಿಲ್ಲಿಯಲ್ಲಿ ಆಪ್‌ ಹಾಗೂ ದೇಶದೆಲ್ಲೆಡೆ ಬಿಜೆಪಿಗೆ ದಕ್ಕಿತು. ಎರಡೂ ಕಡೆ ಕಳೆದುಕೊಂಡಿದ್ದು ಕಾಂಗ್ರೆಸ್.‌ 2019ರ ಲೋಕಸಭೆ ಚುನಾವಣೆಯಲ್ಲಿ ಬೇರೆಯದೇ ಫಲಿತಾಂಶ ಬಂತು-ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು; ದೆಹಲಿಯ ಏಳು ಸ್ಥಾನಗಳೂ ಬಿಜೆಪಿ ಪಾಲಾದವು. ಆದರೆ, 2020ರ ವಿಧಾನಸಭೆ ಚುನಾವಣೆಯಲ್ಲಿ 62 ಸ್ಥಾನ ಗಳಿಸಿ, ಮತ್ತೆ ಅಧಿಕಾರಕ್ಕೆ ಬಂದಿತು. 2020ರಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ 92 ಸ್ಥಾನ (ಒಟ್ಟು ಸ್ಥಾನ 117)ಗಳಿಸಿ, ಸರ್ಕಾರ ರಚನೆ ಮಾಡಿತು. ಏಪ್ರಿಲ್‌ 2023ರಲ್ಲಿ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಲಭ್ಯವಾಯಿತು. ಇಂಡಿಯ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿ, 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತು. ಫಲಿತಾಂಶ ಆಶಾದಾಯಕವಾಗಿರಲಿಲ್ಲ; ಪಂಜಾಬಿನಲ್ಲಿ 3 ಹಾಗೂ ದೆಹಲಿಯಲ್ಲಿ ಶೂನ್ಯ ಸಾಧನೆ. ಬಳಿಕ, 2025ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ, ಸೋಲುಂಡಿತು.

ದೆಹಲಿ ಮದ್ಯ ಹಗರಣ: ಮದ್ಯ ಹಗರಣ ಆಪ್ ಎದುರಿಸಿದ ಬಹು ದೊಡ್ಡ ಸವಾಲು. ಸಿಬಿಐ ತಮ್ಮನ್ನು ಬಂಧಿಸಿದ ಬಳಿಕ ಕೇಜ್ರಿವಾಲ್‌, ಅತಿಶಿ ಅವರನ್ನು ತಾತ್ಕಾಲಿಕ ಸಿಎಂ ಆಗಿ ನೇಮಿಸಿದರು. ಕೇಜ್ರಿವಾಲ್‌ ಅವರ ನಿವಾಸದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂಬ ಸ್ವಾತಿ ಮಲಿವಾಲ್‌ ಆರೋಪ ರಾಡಿ ಎಬ್ಬಿಸಿತು. 2025ರ ಚುನಾವಣೆಯಲ್ಲಿ ಪಕ್ಷ ಹಾಗೂ ವೈಯಕ್ತಿಕ ಸೋಲಿನ ಬಳಿಕ ಕಣ್ಮರೆಯಾದ ಕೇಜ್ರಿವಾಲ್‌, ಮದ್ಯ ಹಗರಣದಲ್ಲಿ ನ್ಯಾಯಾ ಲಯ ಬಿಡುಗಡೆಗೊಳಿಸಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆಪ್‌ ಮತ್ತು ಕೇಜ್ರಿವಾಲ್‌ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದರ ಮಧ್ಯೆ ರಾಘವ್‌ ಚಡ್ಡಾ ಮತ್ತಿತರರ ರಾಜೀನಾಮೆ ಪಕ್ಷವನ್ನು ಇಕ್ಕಟ್ಟಿಗೆ ಸಿಲು ಕಿಸಿದೆ.

ಆಪ್‌ಗೆ ಬಹುಆಯಾಮದ ಸವಾಲುಗಳಿವೆ; ಲೋಕಸಭೆಯಲ್ಲಿ 3(ಗುರ್ಮೀತ್‌ಸಿಂಗ್‌ ಮೀತ್‌ ಹೇಯರ್‌, ಮಲ್ವಿಂದರ್‌ ಸಿಂಗ್‌ ಕಾಂಗ್‌, ಡಾ.ರಾಜ್‌ಕುಮಾರ್‌ ಛಬ್ಬೇವಾಲ್) ಹಾಗೂ ರಾಜ್ಯಸಭೆಯಲ್ಲಿ ಮೂವರು(ಸಂಜಯ್‌ ಸಿಂಗ್‌, ಸಂತ್‌ ಬಲ್ಬೀರ್‌ ಸಿಂಗ್‌, ಎನ್.ಡಿ.ಗುಪ್ತಾ) ಸದಸ್ಯರಿದ್ದಾರೆ. ಪಂಜಾಬಿನಲ್ಲಿ 92, ದಿಲ್ಲಿ 22, ಗುಜರಾತ್‌ 5, ಗೋವಾ 2 ಹಾಗೂ ಜಮ್ಮು-ಕಾಶ್ಮೀರದಲ್ಲಿ ಒಬ್ಬ ಶಾಸಕ ಇದ್ದಾರೆ. ಪಂಜಾಬಿನಲ್ಲಿ 2027ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳುವುದು, ದಿಲ್ಲಿಯಲ್ಲಿ ಕಳೆದುಕೊಂಡ ನೆಲೆಯನ್ನು ಮರುಗಳಿಕೆ ಹಾಗೂ ಗುಜರಾತ್‌ ಮತ್ತು ಗೋವಾದಲ್ಲಿ ಬೇರೂರಬೇಕಿದೆ. ಫೆಬ್ರವರಿ 2025ರ ವಿಧಾನಸಭೆ ಚುನಾವಣೆಯಲ್ಲಿ ಆಪ್‌ನ ಉಚಿತ ವಿದ್ಯುತ್‌, ಶಿಕ್ಷಣ, ನೀರು ಹಾಗೂ ಮಹಿಳೆಯರಿಗೆ ಬಸ್‌ ಪ್ರಯಾಣ ಸೂತ್ರವನ್ನು ಜನ ತಿರಸ್ಕರಿಸಿದರು. ದಿಲ್ಲಿಯ ಜನ ಅವರ ಸಂಘರ್ಷ ಶೈಲಿಯ ರಾಜ‌ಕೀಯಕ್ಕೆ ಮತ್ತೆ ಮಣೆ ಹಾಕುವರೇ? ಬಿಜೆಪಿಯ ಅಗಾಧ ಮಾನವ-ಆರ್ಥಿಕ ಸಂಪನ್ಮೂಲ ಹಾಗೂ ಆಡಳಿತ ಯಂತ್ರದ ದುರುಪಯೋಗವನ್ನು ಆಪ್‌ ಹೇಗೆ ಎದುರಿಸುತ್ತದೆ? ಕೇಜ್ರಿವಾಲ್‌ ಅಧಿಕೃತ ನಿವಾಸದ ದುರಸ್ತಿ-ಮರುವಿನ್ಯಾಸಕ್ಕೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಿದ್ದರು; ಬಿಜೆಪಿ ಆ ಮನೆಯನ್ನು ʻಶೀಶ್‌ ಮಹಲ್‌ʼ ಎಂದು ಹೀಗಳೆದಿತ್ತು. ವಿಐಪಿ ಉಪಚಾರವನ್ನು ವಿರೋಧಿಸುತ್ತಿದ್ದ ವ್ಯಕ್ತಿಯಿಂದ ಜನ ಇದನ್ನು ನಿರೀಕ್ಷಿಸಿರಲಿಲ್ಲ. ಆಪ್‌ ವ್ಯಕ್ತಿ ಕೇಂದ್ರಿತ ಪಕ್ಷ. ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲ. ಕೇಜ್ರಿವಾಲ್‌ ಪಕ್ಷದ ಏಕೈಕ ಮುಖ; ಎರಡನೇ ಹಂತದ ನಾಯಕರು ಇಲ್ಲ. ಅವರ ಪ್ರಾಮಾಣಿಕತೆ ಹಾಗೂ ಸರಳತೆ ಕೂಡ ಪ್ರಶ್ನಾರ್ಹ. ಬೇರೆ ರಾಜಕಾರಣಿಗಳಿಗಿಂತ ಭಿನ್ನರಲ್ಲ ಎಂಬ ಅಭಿಪ್ರಾಯವಿದೆ. ಕೇಜ್ರಿವಾಲ್‌ ಸಿಎಎ ಪ್ರತಿಭಟನೆ ವೇಳೆ ಶಹೀನ್‌ಭಾಗ್‌ಗೆ ಭೇಟಿ ಕೂಡ ನೀಡಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ವಿವಾದಗ್ರಸ್ತ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದೆ ನುಣುಚಿಕೊಳ್ಳಲು ಸಾಧ್ಯವಿಲ್ಲ; ಸಿದ್ಧಾಂತವಿಲ್ಲದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕಾದ ಸವಾಲು ಇದೆ.

ದಿಲ್ಲಿಯಲ್ಲಿ ಮತ್ತೆ ಆಪ್‌ ಸಾಧ್ಯವೇ?: ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 1 ವರ್ಷ ಆಗಿದೆ. ʻತ್ರಿವಳಿ ಎಂಜಿನ್‌ʼನಿಂದ ದಿಲ್ಲಿಯನ್ನು ಜಾಗತಿಕ ಗುಣಮಟ್ಟದ ನಗರವನ್ನಾಗಿ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಮುನಾ ನದಿ ಶುಚೀಕರಣ ಆಗಿಲ್ಲ; ವಾಯುಮಾಲಿನ್ಯಕ್ಕೆ ಪರಿಹಾರ ಸಿಕ್ಕಿಲ್ಲ. ಆಪ್‌ ದಿಲ್ಲಿಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿತು ಎಂದು ಬಿಜೆಪಿ ದೂರುತ್ತಿದೆ; ಆದರೆ, ಕೇಜ್ರಿವಾಲ್‌ ಅವರಿಗೆ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಕೇಂದ್ರ ಸರ್ಕಾರ ಕೆಲಸ ಮಾಡಲು ಬಿಡಲಿಲ್ಲ ಎನ್ನುವುದು ವಾಸ್ತವ. ಕೇಂದ್ರ ಸರ್ಕಾರವು ಹಾಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನೆರವಾಗಲು ಮಾಜಿ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಅವರನ್ನು ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಿಸಿದೆ. 2020-24ರ ಅವಧಿಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಸಂಧು, ಮಾರ್ಚ್‌ 19, 2024ರಲ್ಲಿ ಬಿಜೆಪಿ ಸೇರಿದರು; 2024ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬಿನ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಬಿಜೆಪಿ ಹೆಸರು ಬದಲಿಸುವ ಛಾಳಿ ಮುಂದುವರಿಸಿದ್ದು, ಆಪ್‌ನ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರೋಗ್ಯ ಮಂದಿರ ಎಂದು ಹಾಗೂ ವಿಶೇಷ ಶಿಕ್ಷಣ ಶಾಲೆಗಳನ್ನು ಸಿಎಂಶ್ರೀ ಶಾಲೆ ಎಂದು ಬದಲಿಸಿದೆ. ಒಂದುವೇಳೆ ಬಿಜೆಪಿ ಜನರ ನಿರೀಕ್ಷೆಗಳನ್ನು ಪೂರೈಸಿದರೆ, ಆಪ್‌ ದಿಲ್ಲಿಯಲ್ಲಿ ನೆಲೆ ಕಳೆದುಕೊಳ್ಳಲಿದೆ. ಬಿಜೆಪಿ ಸರ್ಕಾರದ ವೈಫಲ್ಯದಲ್ಲಿ ಆಪ್‌ ಭವಿಷ್ಯ ಅಡಗಿದೆ.

ಛಡ್ಡಾ ಬಿಜೆಪಿ ಸೇರ್ಪಡೆ: ರಾಜ್ಯಸಭೆಯಲ್ಲಿ ಆಪ್‌ ನಾಯಕರಾಗಿದ್ದ ರಾಘವ್‌ ಚಡ್ಡಾ, ಪಂಜಾಬಿನಿಂದ ಆಯ್ಕೆಯಾದವರು. ಛಡ್ಡಾ, ಸಂದೀಪ್‌ ಪಾಠಕ್‌, ಅಶೋಕ್‌ ಮಿತ್ತಲ್‌, ಹರ್ಭಜನ್‌ ಸಿಂಗ್‌, ರಾಜಿಂದರ್‌ ಗುಪ್ತಾ, ವಿಕ್ರಂ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಅವರನ್ನು ಒಳಗೊಂಡ ʻಆಜಾದ್‌ ಸಮೂಹʼ, ಈಗ ಬಿಜೆಪಿಯಲ್ಲಿ ವಿಲೀನವಾಗಿದೆ. ಸಭಾಪತಿ ಸಿ.ಪಿ.ರಾಧಾಕೃಷ್ಣನ್‌ ವಿಲೀನಕ್ಕೆ ಒಪ್ಪಿಗೆ ನೀಡಿದ್ದಾರೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ 149(ಬಿಜೆಪಿ 113) ಹಾಗೂ ಇಂಡಿಯ ಒಕ್ಕೂಟದ 75 ಸದಸ್ಯರಿದ್ದಾರೆ. 2/3(163) ಬಲ ಸಾಧಿಸಲು ಎನ್‌ಡಿಎಗೆ 14 ಸ್ಥಾನಗಳ ಕೊರತೆಯಿದೆ. ಜೂನ್‌ ಮತ್ತು ಜುಲೈನಲ್ಲಿ ಐದು ಸ್ಥಾನ ತೆರವಾಗ ಲಿದೆ. ಛಡ್ಡಾ ಪದತ್ಯಾಗದ ಬಳಿಕ ನೇಮಕಗೊಂಡ ಅಶೋಕ್‌ ಮಿತ್ತಲ್‌, ಪಂಜಾಬಿನ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಉಪಕುಲಪತಿ. ಜಾರಿ ನಿರ್ದೇಶನಾಲಯ(ಇಡಿ)ದ ದಾಳಿ ನಡೆದ 10 ದಿನಗಳ ನಂತರ ಮಿತ್ತಲ್‌ ಬಿಜೆಪಿ ಸೇರಿದರು! ಛಡ್ಡಾ ಮತ್ತಿತರರ ಸೇರ್ಪಡೆಯಿಂದ ದಿಲ್ಲಿಯ ಚರಂಡಿಗಳಿಂದ ಇನ್ನಷ್ಟು ಹೊಸಲು ಯಮುನಾ ನದಿಗೆ ಸೇರಿದಂತೆ ಆಗಿದೆಯಷ್ಟೇ. ಆದರೆ, ಭಗವಂತ್‌ ಮಾನ್‌ ಸರ್ಕಾರದ ಮೇಲೆ ತೂಗುಕತ್ತಿ ನೇತಾಡಲಾರಂಭಿಸಿದೆ; 2027ರ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ರಿಹರ್ಸಲ್‌ ಆರಂಭಿಸಿದೆ.

ಸಂಸದರ ಬಿಜೆಪಿ ವಿಲೀನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಆಪ್‌ ಹೇಳಿಕೊಂಡಿದೆ. ಸಂವಿಧಾನದ 52ನೇ ತಿದ್ದುಪಡಿ ಕಾಯಿದೆ 1985ರ ಪಕ್ಷಾಂತರ ನಿಷೇಧ ಮಸೂದೆ ಅನ್ವಯ, ಆಯ್ಕೆಯಾದ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ ಇಲ್ಲವೇ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದರೆ ಅಥವಾ ಚುನಾವಣೆಯಿಂದ ದೂರ ಉಳಿದರೆ, ಅನರ್ಹರಾಗುತ್ತಾರೆ. 10ನೇ ಶೆಡ್ಯೂಲಿನ ಖಂಡ 2 ನೀಡುವ ವಿನಾಯಿತಿಗಳೆಂದರೆ, 1/3ರಷ್ಟು ಸದಸ್ಯರು ಒಟ್ಟಿಗೆ ಪಕ್ಷಾಂತರ ಮಾಡಿದರೆ, ಅನರ್ಹರಾಗುವುದಿಲ್ಲ. ಇದು ದುರುಪಯೋಗಕ್ಕೆ ಕಾರಣವಾಗುತ್ತಿದ್ದುದರಿಂದ, 2003ರಲ್ಲಿ ಸಂವಿಧಾನದ 91ನೇ ತಿದ್ದುಪಡಿ ಮೂಲಕ ತೆಗೆದುಹಾಕಲಾಯಿತು. ರಾಜೇಂದ್ರ ಸಿಂಗ್‌ ರಾಣಾ ವಿ/ಎಸ್‌ ಸ್ವಾಮಿ ಪ್ರಸಾದ್‌ ಮೌರ್ಯ(2007) ಪ್ರಕರಣದಲ್ಲಿ ಬಹುಜನ ಸಮಾಜ ಪಕ್ಷದ 37 ಶಾಸಕರು ತಮ್ಮನ್ನು ʻಪಕ್ಷದಿಂದ ಹೋಳಾದವರುʼ ಎಂದು ಗುರುತಿಸಬೇಕೆಂದು ಕೋರಿದ್ದರು. ವಿನಾಯಿತಿ ಅನ್ವಯಿಸಬೇಕೆಂದರೆ, ಶಾಸಕಾಂಗ ಪಕ್ಷದೊಟ್ಟಿಗೆ ಮೂಲ ರಾಜಕೀಯ ಪಕ್ಷವೂ ಹೋಳಾಗಬೇಕು ಎಂದು ನ್ಯಾಯಾಲಯ ಹೇಳಿತ್ತು. 2019ರಲ್ಲಿ ಗೋವಾದಲ್ಲಿ ಕಾಂಗ್ರೆಸ್ಸಿನ 15 ಶಾಸಕರಲ್ಲಿ 10 ಮಂದಿ ಬಿಜೆಪಿ ಸೇರಿದ್ದರು. ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಬೇಕೆಂಬ ಮನವಿಯನ್ನು ಸಭಾಪತಿ ತಳ್ಳಿಹಾಕಿದ್ದರು. ಫೆಬ್ರವರಿ 24, 2022ರಂದು ಬಾಂಬೆ ಹೈಕೋರ್ಟ್‌, ಸ್ಪೀಕರ್‌ ಆದೇಶವನ್ನು ಎತ್ತಿಹಿಡಿದಿತ್ತು. ತೀರ್ಪು ಪ್ರಶ್ನಿಸಿ, ಕಾಂಗ್ರೆಸ್‌ ಮುಖಂಡ ಗಿರೀಶ್‌ ಚೋಡನ್ಕರ್‌ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಸುಭಾಷ್‌ ದೇಸಾಯಿ ವಿ/ಎಸ್‌ ಮುಖ್ಯ ಕಾರ್ಯದರ್ಶಿ, ಮಹಾರಾಷ್ಟ್ರ ಸರ್ಕಾರ ಪ್ರಕರಣ(2023)ದಲ್ಲಿ ಸಂವಿಧಾನ ಪೀಠ, 10ನೇ ಶೆಡ್ಯೂಲ್‌ ಅಡಿ ʻಮೂಲ ರಾಜಕೀಯ ಪಕ್ಷʼ ಮತ್ತು ʻಶಾಸಕಾಂಗ ಪಕ್ಷʼ ಎರಡೂ ʼಪ್ರತ್ಯೇಕ ಎಂದು ಗುರುತಿಸಬಹುದಾದ ಪರಿಕಲ್ಪನೆಗಳುʼ ಎಂದು ಹೇಳಿತ್ತು. ಆಪ್‌ ನ್ಯಾಯಾಲಯದ ಮೊರೆ ಹೋದರೂ, ಆದೇಶ ಹೇಗೆ ಮತ್ತು ಯಾವಾಗ ಬರುತ್ತದೆ ಎಂಬ ಖಾತ್ರಿಯಿಲ್ಲ. ಅಷ್ಟರಲ್ಲಿ ಬಿಜೆಪಿ ತನ್ನ ಆಟ ಮುಗಿಸಿರುತ್ತದೆ. ಮೇಲೆ ಉಲ್ಲೇಖಿಸಿದ ಗೋವಾ ಹಾಗೂ ಮಹಾರಾಷ್ಟ್ರದ ಪಕ್ಷಾಂತರ ಪ್ರಕರಣಗಳು ಇದಕ್ಕೆ ನಿದರ್ಶನ. ಛಡ್ಡಾ ಗುಂಪು ಬಿಜೆಪಿಯಲ್ಲಿ ವಿಲೀನವಾಗಿದೆ ಎಂದು ಸಭಾಪತಿ ಹೇಳಿ ರುವುದರಿಂದ, ಆಪ್‌ಗೆ ಹೆಚ್ಚು ಆಯ್ಕೆ ಉಳಿದಿಲ್ಲ.

ಗುಜರಾತ್‌ನಲ್ಲಿ ಆಪ್:‌ ಬಿಜೆಪಿ ಸ್ಥಳೀಯ ಚುನಾವಣೆಗಳನ್ನು ಅತ್ಯಂತ ಮುಖ್ಯ ಎಂದು ಪರಿಗಣಿಸುತ್ತದೆ. 1987ರಲ್ಲಿ ರಾಜ್‌ಕೋಟ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಜಯ ಗಳಿಸಿದ ಪಕ್ಷ, 1995ರಲ್ಲಿ ರಾಜ್ಯದಲ್ಲಿ ಸರ್ಕಾರ ರಚಿಸಿತು. ಇದರ ಹಿಂದೆ ಆರ್‌ಎಸ್‌ಎಸ್‌ ಬೆಂಬಲ, ಹಿಂದುತ್ವ ರಾಜಕಾರಣ ಹಾಗೂ ಧಾರ್ಮಿಕ ಯಾತ್ರೆಗಳ ರಾಜಕೀಯ ಕೆಲಸ ಮಾಡಿತ್ತು. ಚುನಾವಣೆ ಆಯೋಗ ಏಪ್ರಿಲ್‌ 1,2026ರಂದು ನಗರ ಪಾಲಿಕೆ, ಮುನ್ಸಿಪಾಲಿಟಿ, ಜಿಲ್ಲೆ/ತಾಲೂಕು ಪಂಚಾಯಿತಿಗಳ 9,992 ಸ್ಥಾನಗಳಿಗೆ ಚುನಾವಣೆ ಘೋಷಿಸಿತು. ಹಿಂದಿನ ದಿನ ಪ್ರಧಾನಿ ಹಲವು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಭ್ಯರ್ಥಿಗಳು 700ಕ್ಕೂ ಅಧಿಕ ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾದರು ಮತ್ತು ಪಕ್ಷ 15 ನಗರಸಭೆ, 78 ಮುನ್ಸಿಪಾಲಿಟಿ, 33 ಜಿಲ್ಲಾ ಪಂಚಾಯಿತಿ ಹಾಗೂ 220 ತಾಲೂಕು ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿತು. ಆಪ್‌ನ 5,445 ಅಭ್ಯರ್ಥಿಗಳು ಕಣದಲ್ಲಿದ್ದರು; 2021ರಲ್ಲಿ ಸೂರತ್‌ ಮುನ್ಸಿಪಲ್‌ ಕಾರ್ಪೊರೇಷನ್‌ನಲ್ಲಿ 27 ಸ್ಥಾನ ಗಳಿಸಿದ್ದ ಆಪ್‌ ಬಲ ಈಗ 4ಕ್ಕೆ ಕುಸಿದಿದೆ. ಕಾಂಗ್ರೆಸ್‌ ಕೆಲವು ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಕ್ರಮೇಣ ನೇಪಥ್ಯಕ್ಕೆ ಸರಿ ಯುತ್ತಿದೆ. 2017ರಲ್ಲಿ ಶೇ.42ರಷ್ಟು ಮತ ಗಳಿಸಿ, 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌, ಆಪ್‌ ಪ್ರವೇಶದ ಬಳಿಕ 2022ರಲ್ಲಿ 17 ಸ್ಥಾನಕ್ಕೆ ಸೀಮಿತವಾಯಿತು; ಮತಗಳಿಕೆ ಶೇ.27ಕ್ಕೆ ಕುಸಿಯಿತು. ಆಪ್‌ ಶೇ.13 ಮತ ಹಾಗೂ 5 ಸ್ಥಾನ ಗಳಿಸಿತು. ಕಾಂಗ್ರೆಸ್‌ನ ಮತಗಳು ಛಿದ್ರವಾಗಿದ್ದರಿಂದ, ಬಿಜೆಪಿ ಅಭೂತಪೂರ್ವ ಜಯ ಸಾಧಿಸಿತು(156 ಸ್ಥಾನ). ಅಂಕಿಅಂಶಗಳ ಪ್ರಕಾರ, ಆಪ್‌ ಕನಿಷ್ಠ 35ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ನೆರವಾ ಯಿತು. ಕಾಂಗ್ರೆಸ್ಸಿನ ಮಾಧವ ಸಿನ್ಹ ಸೋಲಂಕಿ 4 ಬಾರಿ ಮುಖ್ಯಮಂತ್ರಿ ಆಗಿದ್ದರು. 1985ರಲ್ಲಿ ಖಾಮ್ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಸಂಯೋಜನೆ ಮೂಲಕ ಕಾಂಗ್ರೆಸ್‌ 149 ಸ್ಥಾನ ಗಳಿಸಿತ್ತು. ಛಬ್ಬಿಲ್‌ ದಾಸ್‌ ಮೆಹ್ತಾ ಪಕ್ಷದ ಕೊನೆಯ ಮುಖ್ಯಮಂತ್ರಿ. ಮಾರ್ಚ್‌ 1995ರಲ್ಲಿ ಬಿಜೆಪಿ ಆಡಳಿತ ಆರಂಭ; ಅಕ್ಟೋಬರ್‌ 7, 2001ರಿಂದ ಮೇ 22, 2014ರವರೆಗೆ ಮೋದಿ ಯುಗ. ಕಳೆದ 30 ವರ್ಷದಿಂದ ಬಿಜೆಪಿ ಆಡಳಿತದಲ್ಲಿದೆ. ಅದರ ಪ್ರಾಬಲ್ಯವನ್ನು ಮುರಿಯುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಪಾಠ ಕಲಿಯುವುದಿಲ್ಲ: ಇದರಿಂದ ಆಪ್‌ ಮತ್ತು ಕಾಂಗ್ರೆಸ್‌ ಏನಾದರೂ ಕಲಿಯುತ್ತವೆಯೇ? ಕೇಜ್ರಿವಾಲ್‌ ಮದ್ಯ ಪ್ರಕರಣದಲ್ಲಿ ಬಿಡುಗಡೆಯಾದ ಬಳಿಕ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ʼಇದು ಪಂಜಾಬ್‌ ಮತ್ತು ಗುಜ ರಾತಿನಲ್ಲಿ ಕಾಂಗ್ರೆಸ್‌ನ್ನು ದುರ್ಬಲಗೊಳಿಸಲು ನಡೆಸಿರುವ ಪ್ರಯತ್ನ; ಬಿಜೆಪಿ ವಿರೋಧಿ ಮತಗಳನ್ನು ಆಪ್‌ ಒಡೆಯಲಿದೆ,ʼ ಎಂದು ಹೇಳಿದ್ದರು. ಇದು ನಿಜ ಕೂಡ. ಆಪ್‌ ಬಿಜೆಪಿಯ ಬಿ ಟೀಮ್‌ ಎಂದು ಕಾಂಗ್ರೆಸ್‌ ಹಿಂದಿ ನಿಂದಲೂ ಹೇಳುತ್ತಿದೆ ಮತ್ತು ಆಪ್‌ ವರ್ತನೆ ಅದಕ್ಕೆ ಅನುಗುಣವಾಗಿ ಇದೆ. ಇಂಡಿಯ ಮೈತ್ರಿಕೂಟದ ಬಹುತೇಕ ಪಕ್ಷಗಳು ರಾಜ್ಯ ಮಟ್ಟದಲ್ಲಿ ಪರಸ್ಪರ ಎದುರಾಳಿಗಳು ಮತ್ತು ಇವು ಕಾಂಗ್ರೆಸ್‌ನ ಮತಬುಟ್ಟಿಗೆ ಕೈ ಹಾಕುತ್ತವೆ. ಕಾಂಗ್ರೆಸ್‌ ಸಂಘಟನೆ ಕೊರತೆ, ಸೋಮಾರಿತನ ಹಾಗೂ ಸೈದ್ಧಾಂತಿಕ ಬದ್ಧತೆ ಇಲ್ಲದ ಮುಖಂಡರಿಂದ ಬಸವಳಿದಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ತೊಲಗಿಸಬೇಕು ಎಂದು ಜನ ಕಾಂಗ್ರೆಸ್‌ ಆಯ್ಕೆ ಮಾಡಿದರು. ಆದರೆ, ಭಿನ್ನಮತದಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ. ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸೂಚನೆ ಇದ್ದು, ಆಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಆರಂಭವಾಗಿದೆ. ದುರ್ಬಲ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ತೆಗೆದು ಕೊಳ್ಳಲು ಹಿಂಜರಿಯುತ್ತಿರುವುದರಿಂದ, ಪಕ್ಷದಲ್ಲಿ ಭಿನ್ನಮತ ತಾಂಡವವಾಡುತ್ತಿದೆ.

ಕೇಜ್ರಿವಾಲ್ ಅವರಿಗೆ ದೆಹಲಿಯ ಜನ 2 ಬಾರಿ ಅಧಿಕಾರ ನೀಡಿದ್ದರು. ಆದರೆ, ಅವರು ಭಿನ್ನ ರಾಜಕಾರಣಿಯೇನಲ್ಲ. ಛಡ್ಡಾ ಜನನಾಯಕ ಅಲ್ಲ; ಅವರ ಪಕ್ಷಾಂತರದಿಂದ ಹೆಚ್ಚೇನೂ ಪರಿಣಾಮ ಆಗುವುದಿಲ್ಲ. 2024ರಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ 4 ಅಭ್ಯರ್ಥಿಗಳಲ್ಲಿ ಒಬ್ಬರು ಬೇರೆ ಪಕ್ಷದಿಂದ ಬಂದವರಾಗಿದ್ದರು. ಇವರೆಲ್ಲರೂ ಏಕೆ ಮತ್ತು ಹೇಗೆ ಬಂದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ʻಒಂದು ದೇಶ, ಒಂದು ಪಕ್ಷʼ ವ್ಯವಸ್ಥೆಗೆ ಅಗತ್ಯ ವಿರುವ ಎಲ್ಲವನ್ನೂ ಮಾಡುತ್ತಿದ್ದು, ನಿರಂಕುಶ ಪ್ರಜಾಪ್ರಭುತ್ವಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದೆ. ಪ್ರತಿಪಕ್ಷಗಳು ʻಜಾಸ್ಮಿನ್‌ ರೆವಲ್ಯೂಷನ್‌ʼ, ʻಅರಬ್‌ ಸ್ಪ್ರಿಂಗ್‌ʼಗೆ ಕಾಯುವ ಬದಲು ಒಟ್ಟಾಗಿ ಸೂಕ್ತ ಕಾರ್ಯತಂತ್ರ ರೂಪಿಸಿ ಕಣಕ್ಕೆ ಇಳಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯನ್ನು ಮಣಿಸುವುದು ಸಾಧ್ಯವಿಲ್ಲ.

Journalist,Translator,avid bibliophile

Leave a Reply

Your email address will not be published. Required fields are marked *

Back To Top