ವಸ್ತೆಗುನೆ ಹೋಯಾ, ಕೈಸಿ ಸರ್ಕಾರ್‌ ಹೈ ಯೆ ಮತ್ತು ಸಾಂಸ್ಥಿಕ ವೈಫಲ್ಯ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಬಳಸಿದ ʻಜಿರಳೆಗಳುʼ ಎಂಬ ಪದದಿಂದ ಜಂತರ್‌ಮಂತರ್‌ನಲ್ಲಿ ಆರಂಭಗೊಂಡ ಆಂದೋಲನವು ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆಯಿಂದ ಒಂದು ಹಂತ ತಲುಪಿದೆ. ಪ್ರತಿಭಟನೆ ವೇಳೆ ಪ್ರಧಾನಿಯನ್ನು ಟೀಕಿಸಿದ ಬಾಲಕಿ ರುಚಿಕಾ ಸಿಂಗ್‌ಳನ್ನು ಬೆದರಿಸಿ ತಪ್ಪೊಪ್ಪಿಗೆ ಪಡೆದಿರುವುದಲ್ಲದೆ, ರಾಜೀನಾಮೆ ಬಳಿಕ ಸದನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಹಾರ ಹಾಕಿ ಸಂಭ್ರಮಿಸಲಾಗಿದೆ. ಪ್ರತಿಭಟನೆಗೆ ಕಾರಣವಾದ ಶಿಕ್ಷಣದ ವ್ಯಾಪಾರೀಕರಣ, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯಾವುದೇ ಪ್ರಾಯೋಗಿಕ ಕಾರ್ಯನೀತಿ ರೂಪಿಸಿಲ್ಲ; ಸುಳ್ಳು ಹಾಗೂ ಘೋಷಣೆಗಳ ಮೂಲಕ ಬರಿದೇ ಹುಯಿಲೆಬ್ಬಿಸುತ್ತಿದೆ. ಬೆಳಕಿನ ಕಿರಣವೊಂದು ಕಾಣಿಸಿದಂತೆ ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಭದ್ರಕೋಟೆಯಲ್ಲಿ ಸೋಲುಂಡಿದೆ.

ಮೇ 15, 2026ರಂದು ಮು.ನ್ಯಾ. ಸೂರ್ಯಕಾಂತ್‌ ಅವರು ಸಾಮಾಜಿಕ ಮಾಧ್ಯಮ ಹಾಗೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯುವಜನರನ್ನು ಜಿರಲೆಗಳು ಎಂದು ಹಂಗಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ, ಬಾಸ್ಟನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಜೀತ್‌ ದೀಪ್ಕೆ ಆರಂಭಿಸಿದ ಆನ್‌ಲೈನ್‌ ವೇದಿಕೆಗೆ 5 ದಿನಗಳೊಳಗೆ ಹತ್ತು ಲಕ್ಷ ಮಂದಿ ಹಾಗೂ ಇನ್ಸ್ಟಾಗ್ರಾಂನಲ್ಲಿ 22 ದಶಲಕ್ಷ ಮಂದಿ ಬೆಂಬಲ ಸೂಚಿಸಿದರು. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕೆಂದು ಜೂನ್‌ 6ರಂದು ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ಆರಂಭವಾಯಿತು. ಇದರಲ್ಲಿ ದೀಪ್ಕೆ ಅವರಿಗೆ ಕೈ ಜೋಡಿಸಿದವರು ಸೌರ ವ್‌ ದಾಸ್‌ ಮತ್ತು ಅಶುತೋಷ್‌ ರಂಕಾ. ಬಳಿಕ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ನಿರಶನ ಆರಂಭಿಸಿದರು.‌ ಜುಲೈ 18ರಂದು ಸೋನಂ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಯಿತು; ಜುಲೈ 24ರಂದು ಕೇಂದ್ರ ಸಚಿವ ರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಅವರ ಉಪಸ್ಥಿತಿಯಲ್ಲಿ ನಿರಶನ ಅಂತ್ಯಗೊಳಿಸಿ, ನಿರಾಶೆಗೆ ದೂಡಿದರು. ಆದರೆ, ಪ್ರತಿಭಟನೆ ನಿಲ್ಲಲಿಲ್ಲ. ಸೋನಂ ಬಂಧನದ ಬಳಿಕ ಎಸ್‌ಎಫ್‌ಐ ರಾಷ್ಟ್ರೀಯ ಜಂಟಿ ಕಾರ್ಯ ದರ್ಶಿ ಐಶೆ ಘೋಷ್ ಉಪವಾಸ ಮುಂದುವರಿಸಿದರು.‌ ಆರಂಭದಿಂದಲೇ ನಿರಶನ ಮಾಡಿದ ಇನ್ನೊಬ್ಬರು- ಐಸಾ(ಅಖಿಲ ಭಾರತ ವಿದಾರ್ಥಿ ಸಂಘಟನೆ, ಎಐಎಸ್‌ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ. 36 ದಿನ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಈ ಐವರೂ ದೇಶದ ವಿವಿಧ ಭಾಗದಿಂದ ಬಂದ, ಬೇರೆಬೇರೆ ರಾಜಕೀಯ, ಸಾಮಾಜಿಕ ಹಿನ್ನೆಲೆಯವರು; ಉನ್ನತ ಶಿಕ್ಷಣ ಪಡೆದವರು. ಇದು ಆಶಾದಾಯಕ ಅಂಶ.

ಹೋರಾಟದ ಸಂಗಾತಿಗಳು: ಮಹಾರಾಷ್ಟ್ರದ ಔರಂಗಾಬಾದ್(ಈಗ ಛತ್ರಪತಿ ಸಂಭಾಜಿನಗರ)ನ ದಲಿತ ಕುಟುಂಬಕ್ಕೆ ಸೇರಿದ ದೀಪ್ಕೆ, ಪುಣೆಯ ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠದಲ್ಲಿ ಪತ್ರಿಕೋದ್ಯಮ ಅಧ್ಯಯನದ ಬಳಿಕ 2023ರಲ್ಲಿ ಸಾರ್ವಜನಿಕ ಸಂಪರ್ಕದಲ್ಲಿ ಸ್ನಾತಕೋತ್ತರ ಪದವಿಗೆ ಬಾಸ್ಟನ್‌ ವಿಶ್ವವಿದ್ಯಾನಿಲಯ ಸೇರಿದರು. 2020-23ರಲ್ಲಿ ಆಮ್‌ ಆದ್ಮಿ ಪಕ್ಷದ ಹಿರಿಯ ಮುಖಂಡ ಮನೀಷ್‌ ಸಿಸೋಡಿಯಾ ಜೊತೆಗೆ ಕೆಲಸ ಮಾಡಿದ್ದರು. ಜುಲೈ 18ರಂದು ಅವರ ಮೇಲೆ ಮಸಿ ಎರಚಿದಾಗ, ʻನೀಲಿ ನನ್ನ ಬಣ್ಣ. ಜೈ ಭೀಮ್‌ʼ ಎಂದು ಘೋಷಣೆ ಮಾಡಿದ್ದರು. ಜೈಪುರದಲ್ಲಿ ಜನಿಸಿದ ಅಶುತೋಷ್‌ ರಂಕಾ, ಕಾನ್ಪುರ ಐಐಟಿಯ ಮೆಟೀರಿಯಲ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ಪದವೀದರ. ಅಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಆಗಿದ್ದರು. 2019-2020ರಲ್ಲಿ ಆಪ್‌ ನಾಯಕಿ ಅತಿಶಿ ಅವರೊಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸಾರ್ವ ಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮೆಕಿನ್ಸ್‌ಕಿ ಮತ್ತು ಲಸಿಕೆ ಅಲಯನ್ಸ್‌ ʻಗವಿʼ ಯಲ್ಲಿ ಕೆಲಸ ಮಾಡಿದ್ದರು. ಫೆಬ್ರವರಿ 2025ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಜಸ್ಥಾನದ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು, 2025ರ ಚುನಾವಣೆ ಬಳಿಕ ಜೈಪುರ ಸಮೀಪದ 100 ಎಕರೆ ಕಾಡಿನ ರಕ್ಷಣೆಗೆ ಆಂದೋಲನ ಹಮ್ಮಿಕೊಂಡಿದ್ದರು. ಅವರು ಕಾಕ್ರೋಚ್‌ ಜನತಾ ಪಕ್ಷದ ಕಾರ್ಯತಂತ್ರಜ್ಞ. ತ್ರಿವಳಿಯಲ್ಲಿ ಕಿರಿಯ ಸೌರಭ್‌ ದಾಸ್‌; ಆಂದೋಲನದ ಸಾರ್ವಜನಿಕ ಮುಖ. ಪುದುಚೆರಿಯಲ್ಲಿ ಜನನ ಮತ್ತು ನೊಯ್ಡಾದ ಎಮಿಟಿ ವಿವಿಯಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವ ಹನ ಅಧ್ಯಯನ(2019). ಅವರು ಕ್ಯಾರವಾನ್‌ ಮಾಸಿಕದಲ್ಲಿ ಬರೆದಿದ್ದ ಮಾಜಿ ಮು.ನ್ಯಾ. ವೈ.ವಿ. ಚಂದ್ರಚೂಡ್‌ ಅವರ ವಿಸ್ತೃತ ವ್ಯಕ್ತಿಚಿತ್ರ ಶ್ಲಾಘನೆಗೆ ಪಾತ್ರವಾಗಿತ್ತು. ಫ್ರಂಟ್‌ಲೈನ್‌ ಮತ್ತಿತರ ಪ್ರಕಟಣೆಗಳಲ್ಲೂ ಬರೆದಿದ್ದಾರೆ. ಸಮಕಾಲೀನ ಭಾರತದಲ್ಲಿ ನ್ಯಾಯಾಂಗದ ಪಾತ್ರವನ್ನು ಚಿತ್ರಿಸುವ ʻಕಾಂಪ್ಲಿಸಿಟ್‌ ಸೈಲೆನ್ಸ್;‌ ದ ಕೋರ್ಟ್‌ ರೋಲ್‌ ಇನ್‌ ಇಂಡಿಯಾಸ್‌ ಕ್ವೈಟ್‌ ಸಫರಿಂಗ್‌ʼ ಹೊತ್ತಗೆ ಪ್ರಕಟವಾಗಬೇಕಿದೆ. ದಿಲ್ಲಿ ಮಾಜಿ ಮುಖ್ಯಮಂತ್ರಿ ಕೇಜ್ರಿ ವಾಲ್‌ ಅವರ ಸಮೀಪವರ್ತಿ. ಈ ಮೂವರೂ ಆಪ್‌ ಜೊತೆ ಸಂಪರ್ಕ ಹೊಂದಿದ್ದರು ಮತ್ತು ಅವರು ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇನ್ನಿಬ್ಬರು ಕಮ್ಯುನಿಸ್ಟ್‌ ಸಿದ್ಧಾಂತಿಗಳು. ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಜನಿಸಿದ ಐಶೆ ಘೋಷ್‌, ಜವಹರಲಾಲ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ. ಪ್ರಸ್ತುತ ಉಜ್ಬೆಕಿಸ್ತಾನದಲ್ಲಿ ಪಿಎಚ್‌.ಡಿ., ಅಧ್ಯಯನ ಮಾಡುತ್ತಿದ್ದಾರೆ. 2019ರಲ್ಲಿ ಸಿಎಎ(ನಾಗರಿಕತ್ವ ತಿದ್ದುಪದಿ ಕಾಯಿದೆ) ಹಾಗೂ ಎನ್‌ಆರ್‌ಸಿ(ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಿ) ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಆಗ ಪೊಲೀಸರು ಜೆಎನ್‌ಯು ಹಾಗೂ ಜಮಿ ಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಮೇಲೆ ವ್ಯಾಪಕ ಹಿಂಸಾಚಾರ ನಡೆಸಿದ್ದರು. ಜನವರಿ 5, 2020ರಲ್ಲಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಮುಸುಕುದಾರಿಗಳು ಐಶೆ ಅವರ ಮೇಲೆ ಕಬ್ಬಿಣದ ಸರ ಳು, ದೊಣ್ಣೆ ಮತ್ತು ಆಸಿಡ್‌ ದಾಳಿ ನಡೆಸಿದ್ದರು. ಹಣೆಯಿಂದ ರಕ್ತ ಸುರಿಯುತ್ತಿದ್ದ ಅವರ ಫೋಟೋ ವೈರಲ್‌ ಆಗಿತ್ತು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಜಮುರಿಯಾ ಕ್ಷೇತ್ರದಿಂದ ಸಿಪಿಐ (ಎಂ)‌ನಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ವಾಂಗ್ಚುಕ್‌ ಅವರ ಜೊತೆಗೆ 23 ದಿನ ನಿರಶನ ಮಾಡಿದ್ದರು. ದೆಹಲಿ ಪೊಲೀಸರು 2021ರ ಪ್ರಕರಣವೊಂದರಲ್ಲಿ ಬಂಧಿಸಲು ಮುಂದಾಗಿದ್ದರು(ಜುಲೈ 29); ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್‌ ರದ್ದುಗೊಳಿಸಿತು. ಇನ್ನೊಬ್ಬ ನಾಯಕಿ-ನೇಹಾ ಬೋರಾ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ(ಐಸಾ)ಯ ರಾಷ್ಟ್ರೀಯ ಅಧ್ಯಕ್ಷೆ. ಉತ್ತರಾಖಂಡದ ಖತೀಮಾದಲ್ಲಿ ಜನನ. ಸೇನಾ ಹಿನ್ನೆಲೆಯ ಕುಟುಂಬ. ದಿಲ್ಲಿ ವಿವಿಯಿಂದ ಪದವಿ, ಅಂಬೇಡ್ಕರ್‌ ವಿವಿಯಿಂದ ಸ್ನಾತಕೋತ್ತರ ಪದವಿ ಬಳಿಕ ಜೆಎನ್‌ಯುನ ಕಲೆ ಹಾಗೂ ಸೌಂದರ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ., ಅಧ್ಯಯನ ಮಾಡುತ್ತಿದ್ದಾರೆ.

ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ: ಜಿರಳೆಗಳ ಆಂದೋಲನಕ್ಕೆ ದೀರ್ಘಕಾಲದಿಂದ ಹತ್ತಿಕ್ಕಿದ್ದ ಆಕ್ರೋಶ ಕಾರಣ; ಅದು ಸ್ಪೋಟಿಸಲು ಕಾರಣವೊಂದು ಬೇಕಿತ್ತು. ಸರ್ಕಾರಗಳ ಯುವಜನ ವಿರೋಧಿ ಕಾರ್ಯನೀತಿ, ಶಿಕ್ಷಣದ ವ್ಯಾಪಾರೀಕರಣ ಮತ್ತು ನಿರುದ್ಯೋಗ ಮೇಳೈಸಿವೆ. ʻವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿʼ ಎಂಬುದು ಆಶ್ವಾಸನೆಯಾಗಿಯೇ ಉಳಿದಿದೆ. ಕೇಂದ್ರ-ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಆಗುತ್ತಿಲ್ಲ; ಸಾರ್ವ ಜನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಕಡಿಮೆ ಆಗಿರುವುದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಇದರೊಟ್ಟಿಗೆ ಕಟ್ಟು ಜಾಣ್ಮೆ(ಎಐ)ಯ ಹೊಡೆತ ಬೇರೆ. ದೇಶದಲ್ಲಿ 15-29 ವಯೋಮಾನದ 370-380 ದಶಲಕ್ಷ ಯುವ ಜನರಿದ್ದು, ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಶೇ.27. ಇವರಲ್ಲಿ 141 ದಶಲಕ್ಷ ಕಾರ್ಮಿಕರು ಹಾಗೂ 127 ದಶಲಕ್ಷ ಮಂದಿ ಉದ್ಯೋಗಿಗಳು; ಕೇವಲ 15 ಲಕ್ಷ ಮಂದಿ(8ರಲ್ಲಿ ಒಬ್ಬರು) ಮಾತ್ರ ನಿಯತ ವೇತನದ ಸಾಮಾಜಿಕ ಭದ್ರತೆ ಇರುವ ಉದ್ಯೋಗ ಹೊಂದಿದ್ದಾರೆ. ದೇಶದೆಲ್ಲೆಡೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ; ಶಾಸಗಿ ಶಾಲೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಶಿಕ್ಷಣ ದುಬಾರಿಯಾಗಿದೆ. ಶಾಲೆ ಸೇರುವವರಲ್ಲಿ ಶೇ.39 ಮಂದಿ ಪಿಯು ಹಾಗೂ ಶೇ.50 ಕ್ಕಿಂತ ಅಧಿಕ ಮಂದಿ ಎಸ್‌ಎಸ್‌ಎಲ್‌ಸಿಗೆ ವಿದ್ಯಾಭ್ಯಾಸ ಅಂತ್ಯಗೊಳಿಸುತ್ತಾರೆ. ಇವರಲ್ಲಿ ಹೆಚ್ಚಿನವರು ಅನೌಪಚಾರಿಕ ಕ್ಷೇತ್ರದಲ್ಲಿ ಕಡಿಮೆ ಸಂಬಳದ ಗುತ್ತಿಗೆ ಆಧಾರದ ಕೆಲಸ ಮಾಡುತ್ತಾರೆ ಇಲ್ಲವೇ ಖಾತ್ರಿಯಿಲ್ಲದ ಸ್ವಉದ್ಯೋಗ ಅಥವಾ ಕುಟುಂಬದ ವ್ಯವಹಾರದಲ್ಲಿ ಕೈಜೋಡಿಸುತ್ತಾರೆ. ಪದವಿ ಹಾಗೂ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಲ್ಲಿ ನಿರುದ್ಯೋಗ ಪ್ರಮಾಣ ಶೇ.22.7 ಇದೆ; ನೂರು ಮಂದಿ ಪದವೀದರರಲ್ಲಿ ಕೇವಲ 17 ಮಂದಿಗೆ ಮಾತ್ರ ಕೆಲಸ ಸಿಗುತ್ತದೆ(ಆಧಾರ: MoSPI ಮತ್ತು UNICEF India). ಇಷ್ಟಲ್ಲದೆ, ಪ್ರತಿವರ್ಷ 7-8 ಲಕ್ಷ ಯುವಜನರು ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಶೇ.82 ರಷ್ಟು ಕಾರ್ಮಿಕರು ಅನೌಪಚಾ ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 2030ರಲ್ಲಿ ವಲಸೆ ಪ್ರಮಾಣ ಶೇ.40 ಆಗಲಿದ್ದು, ಇದಕ್ಕೆ ಮುಖ್ಯ ಕಾರಣ ನಿರುದ್ಯೋಗ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಐಎಲ್‌ಒ ಮತ್ತು ಮಾನವಾಭಿವೃದ್ಧಿ ಇನ್‌ಸ್ಟಿಟ್ಯೂ ಟ್‌ನ ಇಂಡಿಯಾ ಎಂಪ್ಲಾಯ್ಮೆಂಟ್‌ ರಿಪೋರ್ಟ್‌ 2024 ಹೇಳುತ್ತದೆ.

ಖಾಸಗಿ ಶಿಕ್ಷಣ, ನಿರುದ್ಯೋಗ ಮತ್ತು ಬಡತನ ಪರಸ್ಪರ ಹೆಣೆದುಕೊಂಡಿವೆ. ಇದೊಂದು ರಾಚನಿಕ ಸಮಸ್ಯೆ. ದೇಶದ ಆರ್ಥಿಕತೆ ಬೆಳೆಯುತ್ತಿದ್ದರೂ, ಅರ್ಥಪೂರ್ಣ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. 2010ರ ಬಳಿಕ ಆರ್ಥಿಕ ಬೆಳವಣಿಗೆ ಆದರೂ, ಉದ್ಯೋಗಗಳು ಸೃಷ್ಟಿಯಾಗಲಿಲ್ಲ. 2019ರಲ್ಲಿ ಕೋವಿಡ್‌ ಹೊಡೆತದ ಬಳಿಕ ಯುವಜನರು ಕೃಷಿ ಕ್ಷೇತ್ರಕ್ಕೆ ಮರಳಿದರು. ಆನಂತರ ಇವರೆಲ್ಲರೂ ಹೆಚ್ಚು ವೇತನ ನೀಡುವ ಸೇವಾ/ ಉದ್ಯ ಮ ಕ್ಷೇತ್ರಕ್ಕೆ ಮರಳಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಸಾರ್ವಜನಿಕ ಬಂಡವಾಳದಿಂದ ಮೂಲಸೌಲಭ್ಯ ಸೃಷ್ಟಿಯಾಗಿದ್ದು, ಗುತ್ತಿಗೆದಾರರು ಪ್ರಬಲರಾದರು. ಆದರೆ, ಜನರಿಗೆ ಅಗತ್ಯವಾದ ಆರೋಗ್ಯ-ಶಿಕ್ಷಣ ಕ್ಷೇತ್ರಕ್ಕೆ ಹಣ ಹರಿ ಯಲಿಲ್ಲ. ಒಟ್ಟು ದೇಶಿ ಉತ್ಪಾದನೆ(ಜಿಡಿಪಿ) ಯಲ್ಲಿ ಶಿಕ್ಷಣಕ್ಕೆ ಶೇ.2.7(ರಾಷ್ಟ್ರೀಯ ಗುರಿ ಶೇ.6) ಹಾಗೂ ಆರೋಗ್ಯ ಕ್ಷೇತ್ರಕ್ಕೆ ಶೇ.1.9(ರಾಷ್ಟ್ರೀಯ ಆರೋಗ್ಯ ಕಾರ್ಯನೀತಿ ಪ್ರಕಾರ ಶೇ.2.5 ಇರಬೇಕು) ವೆಚ್ಚವಾಗುತ್ತಿದೆ. ಇದು ಏನೇನೂ ಸಾಲದು. ಆದ್ಯತೆ ಯಾವುದು ಎನ್ನುವ ವಿವೇಚನೆ ಇಲ್ಲದೆ ಇರುವುದು ಇದಕ್ಕೆ ಕಾರಣ. ಇದೆಲ್ಲದರಿಂದ ನಿರುದ್ಯೋಗ, ಬಡತನ ಹಾಗೂ ಆರ್ಥಿಕ ಅಸಮಾನತೆ ಹೆಚ್ಚಿತು; ಯುವಜನರು ಹಾನಿಗೀಡಾದರು.

ಆತ್ಮಹತ್ಯೆ ಹೆಚ್ಚಳ: ನೀಟ್‌ ಮತ್ತಿತರ ಪರೀಕ್ಷೆಗಳಲ್ಲಿನ ಅಕ್ರಮದ ವಿಪರಿಣಾಮ ವಿದ್ಯಾರ್ಥಿಗಳ ಮೇಲೆ ಆಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ)ದ ಎಡಿಎಸ್‌ಐ(ಆಕ್ಸಿಡೆಂಟಲ್‌ ಡೆತ್ಸ್‌ ಆಂಡ್‌ ಸುಯಿಸೈಡ್ಸ್‌ ಇನ್‌ ಇಂಡಿಯಾ) ವರದಿ ಪ್ರಕಾರ, 2014ರಲ್ಲಿ 8,068 ಇದ್ದ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ 2024ರಲ್ಲಿ 14,488ಕ್ಕೆ ಹೆಚ್ಚಿದೆ(ಶೇ.80 ಹೆಚ್ಚಳ). ಸಂಸತ್ತಿನಲ್ಲಿ ಶಿಕ್ಷಣ ಸಚಿವ ನೀಡಿದ ಉತ್ತರದ ಪ್ರಕಾರ, ಶೈಕ್ಷಣಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟ ಆತ್ಮಹತ್ಯೆಗೆ ಕಾರಣ. ಇದಕ್ಕೆ ಎಡಿಎಸ್‌ಐ ಸೇರ್ಪಡೆಗೊಳಿಸಿದ ಹೊಸ ವರ್ಗ- ʻಪರೀಕ್ಷೆಯಲ್ಲಿ ವೈಫಲ್ಯʼ. ಮಕ್ಕಳ ಮೇಲೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲೇಬೇಕು ಎಂಬ ಒತ್ತಡವಿದೆ. ಶೇ.21ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗದ್ದರಿಂದ, ಸಾವಿಗೆ ಒಡ್ಡಿಕೊಂಡರು; ವಾರ್ಷಿಕ 20,000ಕ್ಕೂ ಅಧಿಕ(2021 ಹೊರತುಪಡಿಸಿ). 2014-24ರ ಅವಧಿಯಲ್ಲಿ 25,000 ಕ್ಕೂ ಅಧಿಕ ಮಂದಿ ಸಾವಿಗೆ ಶರಣಾದರು. ಇವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇ.55 ಮತ್ತು 18-30 ವಯಸ್ಸಿನವರು ಶೇ.42.

ಆರ್ಥಿಕ ಅಸಮಾನತೆ ಅತ್ಯಂತ ತೀವ್ರವಾಗಿದೆ; ವಾರ್ಷಿಕ ಆದಾಯ 100 ಕೋಟಿ ರೂ. ದಾಟಿರುವವರ ಸಂಖ್ಯೆ 576 ಎಂದು ಹಣಕಾಸು ರಾಜ್ಯ ಸಚಿವ ಪಂಕಜ್‌ ಚೌಧರಿ ಆಗಸ್ಟ್‌ 2026ರಲ್ಲಿ ಸಂಸತ್ತಿನಲ್ಲಿ ಹೇಳಿದ್ದಾರೆ. 2021-22ರಲ್ಲಿ ಇಂಥವರ ಸಂಖ್ಯೆ 142 ಇತ್ತು. ಬಹುಸಂಖ್ಯಾತರ ಬವಣೆ ನಡುವೆಯೂ ಅಂಬಾನಿ ಆದಾಯ ಶೇ.542, ಅದಾನಿ ಆದಾಯ ಶೇ.1535, ಬಿಜೆಪಿ ಆದಾಯ 2014ರಲ್ಲಿ 970 ಕೋಟಿ ರೂ.ನಿಂದ 6,080 ಕೋಟಿ ರೂ.ಗೆ ಹೆಚ್ಚಿದೆ. ಜತೆಗೆ, ದೇಶದ ಸಾಲ ಶೇ.391 ರಷ್ಟು ಹೆಚ್ಚಳಗೊಂಡಿದೆ. ಹಸಿವಿನ ಸೂಚ್ಯಂಕ(ಹಂಗರ್ ಇಂಡೆಕ್ಸ್)‌ 2014ರಲ್ಲಿ 55ರಿಂದ 2025ರಲ್ಲಿ 102ಕ್ಕೆ ಕುಸಿದಿದೆ. ಕಳೆದ 5 ವರ್ಷದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು 3.57 ಲಕ್ಷ ಕೋಟಿ ರೂ. ಸಾಲ ರೈಟ್‌ ಆಫ್‌ ಮಾಡಿವೆ(ಇದರಲ್ಲಿ 1.65 ಲಕ್ಷ ಕೋಟಿ ರೂ. ವಸೂಲಾಗಿದೆ); ಸಾಲ ತೀರಿಸಲು ಮನಸ್ಸಿಲ್ಲದ 15,930 ಮಂದಿ 2.5 ಲಕ್ಷ ಕೋಟಿ ರೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

ಸುರಂಗದ ಕೊನೆಯಲ್ಲಿ ಬಿಸಿಲು ಕೋಲಿನಂತೆ ಬಿಹಾರದ ಬಂಕೀಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದ್ದು, ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಜಯ ಗಳಿಸಿದ್ದಾರೆ. ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ಮತ್ತು ಅವರ ತಂದೆ ನವೀನ್‌ ಕಿಶೋರ್‌ ಸಿನ್ಹಾ 1995 ರಿಂದ ಆಯ್ಕೆಯಾಗುತ್ತಿದ್ದ ಕ್ಷೇತ್ರ. ದೀಪ್ಕೆ ವಿದೇಶದಲ್ಲಿ ಅಧ್ಯಯನ ನಡೆಸಲು ಮಾಡಿದ ವೆಚ್ಚದ ವಿವರ ಕುರಿತು ಕೇಳಿ ಆರ್‌ಟಿಐ ಅರ್ಜಿ ಸಲ್ಲಿಕೆಯಾಗಿದೆ; ಇದಕ್ಕೆ ಪ್ರತಿಕ್ರಿಯಿಸಿರುವ ದೀಪ್ಕೆ, ಪ್ರಧಾನಿಯ ಪದವಿ ಪ್ರಮಾಣಪತ್ರ ಕೇಳಿದ್ದಾರೆ! ಜಿರಳೆಗಳ ಹೊಡೆತಕ್ಕೆ ಬಿಜೆಪಿ ಕಂಗಾಲಾಗಿದೆ. ಸಿಜೆಪಿ ರಾಜಕೀಯ ಪಕ್ಷ ಆಗುವುದಿಲ್ಲ. ದೇಶದಲ್ಲಿ ಜನಾಂದೋಲನ ಅಗತ್ಯವಿದೆ ಎಂದು ದೀಪ್ಕೆ ಹೇಳಿದ್ದಾರೆ. ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದು ಗೊತ್ತಿಲ್ಲ; ಆದರೆ, ತಮ್ಮ ಪೋಷಕರ ತಪ್ಪು ಆಯ್ಕೆಯಿಂದ ಸಂತ್ರಸ್ತರಾಗಿರುವ ಯುವಜನರು ರಸ್ತೆಗಿಳಿದು ಪ್ರಶ್ನೆ ಕೇಳಲಾರಂಭಿಸಿದ್ದಾರೆ ಮತ್ತು ಕೋಮುದ್ವೇಷವನ್ನು ತಳ್ಳಿಹಾಕಿದ್ದಾರೆ. ಇದು ಮುಖ್ಯ. ಜಂತರ್‌ಮಂತರ್‌ ಪ್ರತಿಭಟನೆಯ ವಿಶೇಷವೇನೆಂದರೆ, ದೇಶದ ಎಲ್ಲ ಕಡೆಯ, ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು; ಯಾವುದೇ ಸಮುದಾಯವನ್ನು ಧರ್ಮದ ಹಿನ್ನೆಲೆಯಲ್ಲಿ ಹೀಗಳೆಯುವ ದ್ವೇಷ ಕಥನಗಳು ಅಲ್ಲಿ ಕಂಡುಬರಲಿಲ್ಲ. ಜಾತಿ, ಧರ್ಮ ಮತ್ತು ಪ್ರಾಂತ್ಯ ಮುಖ್ಯವಾಗಲಿಲ್ಲ. ಸಿಜೆಪಿಯೊಟ್ಟಿಗೆ ವಿವಿಧ ರಾಜಕೀಯ ನಿಲುವು ಹೊಂದಿರುವ ಹಲವು ವಿದ್ಯಾರ್ಥಿ ಸಂಘಟನೆಗಳು ಕೈ ಜೋಡಿಸಿದವು. ಜನಾಂದೋಲನಗಳ ಮೂಲಕ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕಿದೆ; ಅನ್ಯಾಯದ ವಿರುದ್ಧ ಮಾತನ್ನಾಡುತ್ತಲೇ ಇರಬೇಕಾಗುತ್ತದೆ. ಅಧಿಕಾರಶಾಹಿಯನ್ನು ಪ್ರಶ್ನಿಸಿ, ಬಂಧಿತರಾದ ಉಮರ್‌ ಖಾಲೀದ್‌ ಮತ್ತು ಶರ್ಜೀಲ್‌ ಇಮಾಮ್‌ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಜಾತಿ ತಾರತಮ್ಯಕ್ಕೆ ಬಲಿಯಾದ ರೋಹಿತ್‌ ವೇಮುಲ, ಪಾಯಲ್‌ ತಡ್ವಿ, ನೀಟ್‌ ವಿರೋಧಿಸಿ ಸುಪ್ರೀಂ ಕೋರ್ಟ್‌ ಕದ ತಟ್ಟಿ ವಿಫಲಳಾಗಿ ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿವ ಎಸ್‌. ಅನಿತಾ ಇವರೆಲ್ಲರ ಸಾವು ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ. ಪ್ರತಿಭಟನೆ, ಪ್ರತಿರೋಧ, ಆಂದೋಲನಗಳು ತಕ್ಷಣ ಫಲ ನೀಡದೆ ಇರಬಹುದು; ಆದರೆ, ದೀರ್ಘ ಕಾಲದಲ್ಲಿ ವ್ಯರ್ಥವಾಗುವುದಿಲ್ಲ ಎಂದು ಚರಿತ್ರೆ ಹೇಳುತ್ತದೆ.

(ವಸ್ತೆಗುನೆ ಹೋಯಾ ಪದಕ್ಕೆ ನಿರ್ದಿಷ್ಟ ಅರ್ಥವಿಲ್ಲ. ಅದು ಒಂದು ಮೀಮ್;‌ ಹುರಿದುಂಬಿಸಲು ಬಳಸುವ ಪದ. 2015ರಲ್ಲಿ ಅಮೆರಿಕದಲ್ಲಿ ವಿಡಿಯೋ ಒಂದರಲ್ಲಿ ʻcan i get a hoya?ʼ ಪದ ಬಳಕೆ ಯಾಗಿದೆ. ಇದಕ್ಕೆ ಅಲ್ಲಿ ನೆರೆದವರು ʻoh yeahʼ ಎಂದು ಪ್ರತಿಕ್ರಿಯಿಸುತ್ತಾರೆ. ಸೈನಿಕರು ಕೂಡ ಈ ವಾಕ್ಯ ಬಳಸುತ್ತಾರೆ.)

Journalist,Translator,avid bibliophile

Leave a Reply

Your email address will not be published. Required fields are marked *

Back To Top