ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಶಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕ ಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ.
ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್ಪಿಎ)ವು ಕಾಂಗ್ರೆಸ್ಗೆ 28 ವಿಧಾನಸಭೆ ಹಾಗೂ ಒಂದು ರಾಜ್ಯಸಭೆ ಸ್ಥಾನ ನೀಡಲು ಸಮ್ಮತಿಸಿದೆ. ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಜೋಡನ್ಕರ್ ಅವರ ʻಟಿವಿಕೆ ನಾಯಕ ವಿಜಯ್ಗೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಿದೆʼ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ, ಮಾತುಕತೆ ಸ್ಥಗಿತ ಗೊಳಿಸಿತ್ತು. ಮಧ್ಯಪ್ರವೇಶಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ, ಸಂಧಾನದ ಹೊಣೆಯನ್ನು ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ವಹಿಸಿದ್ದರು. ಕಾಂಗ್ರೆಸ್ಗೆ 2016ರಲ್ಲಿ 41 ಮತ್ತು 2021ರಲ್ಲಿ 25 ಸ್ಥಾನ ನೀಡಲಾಗಿತ್ತು. 234 ಸದಸ್ಯ ಬಲದ ಶಾಸನಸಭೆ; 16ನೇ ವಿಧಾನಸಭೆಯಲ್ಲಿ ಎಸ್ಪಿಎ 158(ಡಿಎಂಕೆ 133, ಕಾಂಗ್ರೆಸ್ 17, ವಿಸಿಕೆ 4, ಸಿಪಿಐ(ಎಂ) ಮತ್ತು ಸಿಪಿಐ ತಲಾ 2), ಪ್ರತಿಪಕ್ಷಗಳು 67(ಎಐಎಡಿಎಂಕೆ 60, ಬಿಜೆಪಿ 4, ಪಿಎಂಕೆ 3) ಮತ್ತು ಇಬ್ಬರು ಪಿಎಂಕೆ(ಆರ್) ಶಾಸಕರಿದ್ದು, 7 ಸ್ಥಾನಗಳು ಖಾಲಿ ಇವೆ.
ಪ್ರಗತಿಪರ ರಾಜ್ಯ: ತಮಿಳುನಾಡು ಅತ್ಯಂತ ಪ್ರಗತಿಪರ ರಾಜ್ಯ ಹಾಗೂ ದೇಶದ 2ನೇ ಅತಿ ದೊಡ್ಡ ಆರ್ಥಿಕತೆ. ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಪ್ರಾರಂಭಿಸಿದ ಶ್ರೇಯಸ್ಸು ಕೂಡ ರಾಜ್ಯಕ್ಕೆ ಸಲ್ಲುತ್ತದೆ (ಜುಲೈ 2017ರಲ್ಲಿ ಎಂ.ಜಿ.ರಾಮಚಂದ್ರನ್ ಆರಂಭಿಸಿದರು). ರಾಜ್ಯ ಮುಂದಿನ ಹಂತಕ್ಕೆ ಸ್ಥಿತ್ಯಂತರಗೊಳ್ಳಬೇಕೆಂದರೆ, ಸಂಶೋಧನೆ-ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆ ಹಾಗೂ ರಫ್ತಿನಲ್ಲಿ ವೈವಿಧ್ಯೀಕರಣ ಅಗತ್ಯವಿದೆ. ಇದು ಉತ್ತಮ ಆಡಳಿತ ಹಾಗೂ ಹಣಕಾಸು ಸ್ವಾಯತ್ತೆಯಿಂದ ಮಾತ್ರ ಸಾಧ್ಯ. ಕುಟುಂಬ ರಾಜಕಾರಣ, ಕ್ರೋನಿ ಬಂಡವಾಳ ಶಾಹಿ ಮತ್ತು ಉಚಿತ ಕೊಡುಗೆಗಳ ನಡುವೆಯೂ ಕೈಗಾರಿಕೀಕರಣ ಹಾಗೂ ಅಭಿವೃದ್ಧಿಯನ್ನು ಒಳಗೊಂಡ ಆಡಳಿತ ಮಾದರಿಯೊಂದು ಇದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎಸ್ಪಿಎ(ಡಿಎಂಕೆ, ಕಾಂಗ್ರೆಸ್, ವಿಸಿಕೆ ಮತ್ತು ಎಡ ಪಕ್ಷಗಳ ಮೈತ್ರಿ ಕೂಟ), ಎಲ್ಲ 39 ಸ್ಥಾನ ಗೆದ್ದಿತ್ತು. ಈ ಮೈತ್ರಿಕೂಟ ರಾಜ್ಯದಲ್ಲಿ ಮಾತ್ರವಲ್ಲ; ರಾಷ್ಟ್ರ ಮಟ್ಟದಲ್ಲೂ ಕೇಂದ್ರೀಕರಣ, ಹಿಂದುತ್ವ ಹಾಗೂ ಬಹುತ್ವವಾದವನ್ನು ಪ್ರೋತ್ಸಾಹಿಸುವ ಬಿಜೆಪಿ ವಿರೋಧಿ ಗುಂಪಿನ ಪ್ರಮುಖ ಕೊಂಡಿ. ಒಂದು ವೇಳೆ ಮೈತ್ರಿಗೆ ಒಪ್ಪಕೊಳ್ಳದೆ ಹೋಗಿದ್ದರೆ, ಹೆಚ್ಚು ನಷ್ಟ ಆಗುತ್ತಿದ್ದುದು ಕಾಂಗ್ರೆಸ್ಗೆ.
ರಾಜ್ಯದಲ್ಲಿ ದ್ರಾವಿಡ ಚಳವಳಿ, ವಿಚಾರವಾದಿ ಚಳವಳಿ, ಸ್ವಾಭಿಮಾನ ಚಳವಳಿ ಹಾಗೂ ಸಿನೆಮಾ/ಸಂಗೀತ ಹಾಗೂ ಜನಪ್ರಿಯ ಸಂಸ್ಕೃತಿಯಿಂದ ರೂಪುಗೊಂಡ ಜಾಗೃತ ಮತದಾರರು ಇದ್ದಾರೆ. ಉತ್ತರ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲಲು ಒಂದಿಷ್ಟು ಉಚಿತ ಕೊಡುಗೆಗಳು ಹಾಗೂ ಅಲ್ಪಸಂಖ್ಯಾತರ ದೂಷಣೆ ಸಾಕಾಗಬಹುದು; ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಒದಗಣೆ, ಶಿಕ್ಷಣ-ಆರೋಗ್ಯ ರಕ್ಷಣೆ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸಾಂಸ್ಥಿಕ ನೈತಿಕತೆ ಇಲ್ಲದಿದ್ದರೂ ಗೆಲ್ಲಬಹುದೇನೋ. ತಮಿಳುನಾಡು ಕೋಮುವಾದಿ ಸಂಕಥನಗಳನ್ನು ತಡೆದಿದೆ. ರಾಜ್ಯದಲ್ಲಿ ಅಧಿಕಾರ ಡಿಎಂಕೆ ಮತ್ತು ಎಐಎಡಿಂಕೆ ನಡುವೆ ಬದಲಾಗುತ್ತಿರುತ್ತದೆ. ಎಸ್ಪಿಎ ಮೈತ್ರಿ ಕೂಟಕ್ಕೆ ದಿವಂಗತ ವಿಜಯಕಾಂತ್ ಅವರ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಮತ್ತು ಒ.ಪನ್ನೀರ್ಸೆಲ್ವನ್ ಸೇರ್ಪಡೆಯಾಗಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್ಸೆಲ್ವನ್, ಸೈದ್ಧಾಂತಿಕ ಬದ್ಧತೆ ಇಲ್ಲದ ಮತ್ತು ಬಿಜೆಪಿಯನ್ನು ಆಧರಿಸಿದ್ದ ರಾಜಕಾರಣಿ. ಟಿವಿಕೆ ಮತ್ತು ಸೆನ್ತಮಿಳನ್ ಸೀಮನ್ ನೇತೃತ್ವದ ನಾಮ್ ತಮಿಳ್ ಕಚ್ಛಿ ಮತ ಸೆಳೆಯುವ ಸಾಧ್ಯತೆ ಇರುವಾಗ ಮತ್ತು ಗೆಲುವು ಮುಖ್ಯವಾಗಿರುವಾಗ, ಇಂಥ ಸೇರ್ಪಡೆ ಸರಿ ಎನ್ನಿಸಬಹುದು. ಆದರೆ, ಇದರಿಂದ ಮೈತ್ರಿಕೂಟ ತನ್ನ ಸೈದ್ಧಾಂತಿಕ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತದೆ.
ಟಿವಿಕೆ ಸಮಸ್ಯೆ: ಸಿ.ಎನ್.ಅಣ್ಣಾದುರೈ, ಎಂ.ಜಿ.ರಾಮಚಂದ್ರನ್, ಎಂ.ಕರುಣಾನಿಧಿ ಮತ್ತು ಜೆ.ಜಯಲಲಿತಾ ಸಿನೆಮಾದಿಂದ ರಾಜಕಾರಣಕ್ಕೆ ಬಂದವರು. ರಾಜಕೀಯ ಪ್ರವೇಶಕ್ಕೆ ಪ್ರಯತ್ನಿಸಿದ ರಜನಿಕಾಂತ್, ಕೊನೆಗೆ ಹಿಂಜರಿದರು. ಈ ಸಾಲಿಗೆ ಸೇರ್ಪಡೆ- ವಿಜಯ್. ಅಕ್ಟೋಬರ್ 2024ರಲ್ಲಿ ʻತಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುವ ಪಕ್ಷದೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಿದ್ದೇವೆʼ ಎಂದು ವಿಜಯ್ ಹೇಳಿದ್ದರು. ಡಿಎಂಕೆ ನೇತೃತ್ವದ ಎಸ್ಪಿಎ ಅನ್ನು ಮುರಿಯುವುದು ಅವರ ಉದ್ದೇಶವಾಗಿತ್ತು. ಫೆಬ್ರವರಿ 3, 2026ರಂದು ʻತಮ್ಮ ಹೇಳಿಕೆ ರಾಜಕೀಯ ಬಾಂಬ್. ಇದರಿಂದ ಡಿಎಂಕೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎಐಎಡಿಎಂಕೆ ಅಧಿಕಾರದಲ್ಲಿ ಪಾಲು ಕೇಳುತ್ತಿವೆʼ ಎಂದು ನುಡಿದಿದ್ದರು. ಇತ್ತೀಚೆಗೆ ತಂಜಾವೂರಿನಲ್ಲಿ ನಡೆದ ಸಭೆಯಲ್ಲಿ, ʻಸ್ಟಾಲಿನ್ ಅವರ 2ನೇ ಬಾರಿ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ. ಕರುಣಾನಿಧಿ ಅವರಿಗೂ ಇದು ಸಾಧ್ಯವಾಗಿಲ್ಲ. ಡಿಎಂಕೆ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದೆʼ ಎಂದು ನುಡಿದಿದ್ದರು. ವಿಜಯ್ಗೆ ಕಾಂಗ್ರೆಸ್ ಜೊತೆಗೆ ಮೈತ್ರಿ ಬೇಕಿತ್ತು. ಕಾಂಗ್ರೆಸ್ ರಾಜ್ಯದಲ್ಲಿ 1967ರಲ್ಲಿ ಅಧಿಕಾರ ಕಳೆದುಕೊಂಡಿದ್ದು, ಟಿವಿಕೆ ಜೊತೆಗೆ ಮೈತ್ರಿಯಿಂದ ಪಕ್ಷದ ಪುನರುಜ್ಜೀವನ ಸಾಧ್ಯ ಎಂದು ಕೆಲವು ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟಿದ್ದರು. ಎಐಎಡಿಎಂಕೆ ಮೈತ್ರಿಗೆ ಹಲವು ಬಾರಿ ಪ್ರಯತ್ನಿಸಿದರೂ, ವಿಜಯ್ ಸ್ಪಂದಿಸಿರಲಿಲ್ಲ. ಜನಸಂಪರ್ಕದ ಕೊರತೆ, 2ನೇ ಹಂತದ ನಾಯಕರು ಮತ್ತು ತಳ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ, ಕರೂರು ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವು ಹಾಗೂ ಸಿಬಿಐ ತನಿಖೆ, ಕೊನೆಯ ಚಿತ್ರ ಜನನಾಯಕನ್ ಎದುರಿಸುತ್ತಿರುವ ಕಾನೂನು ಸಮಸ್ಯೆಗಳು ಅವರಿಗೆ ಮುಳುವಾಗಿದೆ. ಎನ್ಡಿಎ ವಿಜಯ್ ಅವರ ಮೇಲೆ ಒತ್ತಡ ಹೇರಲು ಸಿಬಿಐ ತನಿಖೆ ಬಳಸಿಕೊಳ್ಳು ತ್ತಿದೆ ಎಂಬ ಆರೋಪವಿದೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಬಡವರು ಮತ್ತು ಬದಿಗೊತ್ತಲ್ಪಟ್ಟ ಸಮುದಾಯಕ್ಕೆ ಸೇರಿದವರು. ʻವಿಜಯ್ ಬೇಕೆಂದೇ ತಡವಾಗಿ ಬಂದರು; ನಿರೀಕ್ಷಿಸಿದ್ದ 10 ಸಾವಿರಕ್ಕೆ ಬದಲು 25 ಸಾವಿರ ಮಂದಿ ನೆರೆದರು; ನೀರು, ಊಟ ಇಲ್ಲದೆ ಕಾಯುತ್ತಿದ್ದವರನ್ನು ಉದ್ದೇಶಿಸಿ ಕೆಲವು ನಿಮಿಷ ಮಾತನ್ನಾಡಿ ಹೋದರುʼ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲಿಲ್ಲ; ದುರಂತದ ಜವಾಬ್ದಾರಿ ಹೊರುವ ಬದಲು ತಮ್ಮ ವಿರುದ್ಧ ʻಸಂಚುʼ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 2025ರಲ್ಲಿ ನೇಮಿಸಿದ್ದ ವಿಶೇಷ ತನಿಖಾ ತಂಡವು ಟಿವಿಕೆ ವಿರುದ್ಧ ನಿರ್ದಿಷ್ಟ ಆರೋಪ ಮಾಡಿದಾಗ, ಸುಪ್ರೀಂ ಕೋರ್ಟ್ ಮೊರೆಹೋದರು. ಜನವರಿ 2026ರಂದು ವಿಚಾರಣೆ ವೇಳೆ ʻಘಟನೆಗೆ ತಾವು ಕಾರಣರಲ್ಲʼ ಎಂದು ಹೇಳಿದರು. ಟಿವಿಕೆಗೆ ಯಾವುದೇ ಸಿದ್ಧಾಂತ ಇಲ್ಲ; ನಾಯಕ ನಟನೊಬ್ಬನ ಸುತ್ತ ಸಮೂಹಸನ್ನಿ ಸೃಷ್ಟಿಸಲಾಗಿದೆ. ಸಭೆಯಲ್ಲಿ ಪೆರಿಯಾರ್, ಅಂಬೇಡ್ಕರ್, ಕಾಮರಾಜ್ ಫೋಟೋ ತೋರಿಕೆಗೆ ಇರುತ್ತದಷ್ಟೇ.
ಸಣ್ಣ ಪಕ್ಷಗಳ ಸಮಸ್ಯೆ: 2021ರ ಚುನಾವಣೆಯಲ್ಲಿ ಕಮಲಹಾಸನ್ ನೇತೃತ್ವದ ಮಕ್ಕಳ್ ನೀತಿ ಮಯ್ಯಂ ಹಾಗೂ ಟಿ.ಟಿ.ವಿ. ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ತಲಾ ಶೇ.2.4 ಮತ ಗಳಿಸಿದ್ದವು. ಕಮಲಹಾಸನ್ ಈಗ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ. ಸೀಮನ್ ನೇತೃತ್ವದ ನಾಮ್ ತಮಿಳ್ ಕಚ್ಚಿ 2010ರಲ್ಲಿ ಸ್ಥಾಪನೆಯಾದ ತಮಿಳು ರಾಷ್ಟ್ರೀಯವಾದಿ ಪಕ್ಷ. ತಮಿಳರನ್ನು ಇತರ ಭಾಷಾ ಗುಂಪುಗಳ ವಿರುದ್ಧ ಎತ್ತಿಕಟ್ಟುತ್ತದೆ. ದ್ರಾವಿಡ ಚಳವಳಿ ʼಬೋಗಸ್ʼ ಎನ್ನುತ್ತದೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಶೇ.6.7 ಮತ ಗಳಿಸಿ, ಕೆಲವು ಕ್ಷೇತ್ರಗಳಲ್ಲಿ ಡಿಎಂಕೆ, ಎಐಎಡಿಎಂಕೆ ನಂತರದ ಸ್ಥಾನ ಪಡೆದಿತ್ತು. 2016ರಲ್ಲಿ ಶೇ.1 ಮತ್ತು 2021ರಲ್ಲಿ ಶೇ.6.7 ರಷ್ಟು ಮತಗಳಿಕೆ ಮಾಡಿತ್ತು. ಆದರೆ, ಯಾವುದೇ ಸ್ಥಾನ ಗೆಲ್ಲಲಿಲ್ಲ. ಶ್ರೀಲಂಕಾದಲ್ಲಿರುವ ತಮಿಳು ಭಾಷಿಕರ ಹಿತ ಕಾಯುತ್ತಿಲ್ಲ ಎಂದು ಸೀಮನ್, 2019ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ-ಡಿಎಂಕೆ ವಿರುದ್ಧ ಪ್ರಚಾರ ನಡೆಸಿದ್ದರು; ಈ ಚುನಾವಣೆ ಯಲ್ಲಿ ಶೇ.4 ಮತ ಗಳಿಸಿತು. ವಿಡುತಲೈ ಚಿರತೆಗಳ್ ಕಚ್ಛಿ(ವಿಸಿಕೆ)ಯ ತೋಳ್ ತಿರುಮಾವಲವನ್(ಚಿದಂಬರಂ ಲೋಕಸಭೆ ಕ್ಷೇತ್ರದಿಂದ ಆಯ್ಕೆ) ಅವರ ಸ್ಥಾನವನ್ನು ತುಂಬಲು ಸೀಮನ್ ಪ್ರಯತ್ನಿಸುತ್ತಿದ್ದಾರೆ. ಅವರು ದಕ್ಷಿಣ ತಮಿಳುನಾಡಿನ ಪ್ರಮುಖ ಒಬಿಸಿ ಗುಂಪು ನಾಡಾರ್ ಸಮುದಾಯಕ್ಕೆ ಸೇರಿದವರು.
ಅನುಯಾಯಿಗಳಿಂದ ಕ್ಯಾಪ್ಟನ್ ಎಂದು ಕರೆಸಿಕೊಳ್ಳುತ್ತಿದ್ದ ನಟ ಅಳಗರ್ಸ್ವಾಮಿ ವಿಜಯರಾಜ್ ಅಲಿಯಾಸ್ ವಿಜಯಕಾಂತ್, ದ್ರಾವಿಡ ಪಕ್ಷಗಳ ರಾಜಕೀಯಕ್ಕೆ ಪರ್ಯಾಯ ಇದೆ ಎಂದು ಸಾಧಿಸಿ ತೋರಿಸಿದವರು. ಅವರ ಪಕ್ಷವಾದ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಶೇ.8.38 ಮತ ಗಳಿಸಿತು(2006 ರಲ್ಲಿ). ವಿಜಯಕಾಂತ್ ವಿರುಧಾಚಲಂ ಕ್ಷೇತ್ರದಿಂದ ಆಯ್ಕೆಯಾದರು. 2009ರ ಲೋಕಸಭೆ ಚುನಾವಣೆಯಲ್ಲಿ ಶೇ.10.3 ಮತ ಗಳಿಕೆ. 2011ರ ವಿಧಾನಸಭೆ ಚುನಾವಣೆಯಲ್ಲಿ ಪತ್ನಿ ಪ್ರೇಮಲತಾ ಮತ್ತು ಭಾಮೈದ ಸುಧೀಶ್ ಒತ್ತಾಯದಿಂದ ಎಐಎಡಿಎಂಕೆ ಜೊತೆ ಸೇರಿದರು; ಶೇ.7.9 ಮತಗಳೊಂದಿಗೆ 29 ಸ್ಥಾನ ಗಳಿಸಿದರು. ಮೈತ್ರಿ ಮಾಡಿಕೊಂಡಿದ್ದರೂ ಆಡಳಿತ ಪಕ್ಷಕ್ಕೆ ಮಗ್ಗುಲು ಮುಳ್ಳಾಗಿದ್ದ ಅವರನ್ನು ಜಯಲಲಿತಾ ಹಣಿದರು; 7 ಶಾಸಕರು ಪಕ್ಷ ತೊರೆದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಶೇ.5.1 ಮತ ಹಾಗೂ 2 ಸ್ಥಾನ ಗಳಿಸಿದರು. 2016ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಸೇರ್ಪಡೆಯಾಗಿ, ಶೇ.2.4 ಮತ ಗಳಿಸಿದರು. ಚುನಾವಣೆಯಲ್ಲಿ ಡಿಎಂಕೆ ಸೋಲುಂಡಿತು. ಡಿಸೆಂಬರ್ 2023ರಲ್ಲಿ ಮರಣ ಹೊಂದಿದರು. ಪತ್ನಿ ಪ್ರೇಮಲತಾ ಅವರು ಫೆ.19, 2026ರಂದು ಎಸ್ಪಿಎ ಜೊತೆ ಕೈಜೋಡಿಸಿದ್ದಾರೆ. ಪ್ರತಿ ಚುನಾವಣೆ ಯಲ್ಲೂ ಮನಸೋಇಚ್ಛೆ ಪಕ್ಷ ಬದಲಾವಣೆಯಿಂದ ವಿಶ್ವಾಸಾರ್ಹತೆ ನಾಶವಾಗಿದೆ. ಎಂಡಿಎಂಕೆಯ ಸುವರ್ಣ ಯುಗ ಅಂತ್ಯಗೊಂಡಿದೆ.
ಎಐಎಡಿಎಂಕೆಯಿಂದ ಆರಂಭವಾದ ಒ.ಪನ್ನೀರ್ಸೆಲ್ವನ್ ರಾಜಕೀಯ ಪ್ರಯಾಣ, ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಿಂದ ಇನ್ನೊಂದು ಘಟ್ಟ ಮುಟ್ಟಿದೆ. 1991ರಲ್ಲಿ ಜಯಲಲಿತಾ ಮುಖ್ಯಮಂತ್ರಿ ಆದ ಬಳಿಕ ಪಕ್ಷ-ಸರ್ಕಾರದಲ್ಲಿ ವಿ.ಕೆ.ಶಶಿಕಲಾ ಅವರ ಪ್ರಭಾವ ಹೆಚ್ಚಿತು. ಡಿಸೆಂಬರ್ 5,2016ರಲ್ಲಿ ಜಯಲಲಿತಾ ಮರಣ ಹೊಂದಿದರು. ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಶಶಿಕಲಾ ಅವರ ಕನಸನ್ನು ಭಗ್ನಗೊಳಿಸಿದ್ದು ಸುಪ್ರೀಂ ಕೋರ್ಟಿನ ಫೆ.14, 2017ರ ಆದೇಶ; ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಸೆರೆವಾಸ ವಿಧಿಸಿತು. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆರೆಮನೆಯಿಂದ ಜನವರಿ 27, 2021ರಂದು ಹೊರಬಂದರು. ಅವರ ಪತನ ಫೆ.7, 2017ರಲ್ಲಿ ಪನ್ನೀರ್ಸೆಲ್ವನ್ ಬಂಡಾಯದಿಂದ ಆರಂಭವಾಯಿತು; ಮುಖ್ಯಮಂತ್ರಿ ಸ್ಥಾನಕ್ಕೆ ಶಶಿಕಲಾ ಆಯ್ಕೆಮಾಡಿದ್ದ ಎಡಪ್ಪಡಿ ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವನ್ ಬಣಗಳು ಒಗ್ಗೂಡಿದವು. ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ಟಿ.ಟಿ.ವಿ.ದಿನಕರನ್ ಅವರನ್ನು ಪಕ್ಷದಿಂದ ಹೊರಗೆ ಹಾಕಲಾಯಿತು. ಶಶಿಕಲಾ ಮಾರ್ಚ್ 3, 2021ರಲ್ಲಿ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದರು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಎಡಪ್ಪಡಿ ಪಳನಿಸ್ವಾಮಿ, ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ. ವಯ್ಯಾಪುರಿ ಗೋಪಾಲಸ್ವಾಮಿ ಅಲಿಯಾಸ್ ವೈಕೋ ನೇತೃತ್ವದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಚುಕ್ಕಾಣಿ ಈಗ ಪುತ್ರ ದುರೈ ವೈಕೋ ಕೈಯಲ್ಲಿದೆ. ಅವರು ತಿರುಚಿರಾಪಳ್ಳಿ ಕ್ಷೇತ್ರದ ಸಂಸದ. ಡಾ. ಎಸ್.ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಛಿ ವಣ್ಣಿಯಾರ್ ಸಮುದಾಯವನ್ನು ಆಧರಿಸಿದ ಪಕ್ಷ; ಪುತ್ರ ಅನ್ಬುಮಣಿ ರಾಮದಾಸ್ ಪಿಎಂಕೆಯ ಇನ್ನೊಂದು ತುಣುಕಿನ ಮುಖ್ಯಸ್ಥ. ಎನ್ಡಿಎ ಜೊತೆ ಇದ್ದಾರೆ. ಇವೆಲ್ಲವೂ ಸೀಮಿತ ಪ್ರಭಾವ ಇರುವ ಪಕ್ಷಗಳು.
ಬಿಜೆಪಿ ಏಕೆ ಸ್ವೀಕೃತವಲ್ಲ?: ತಮಿಳುನಾಡಿನ ಮೇಲೆ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಸ್ವಾಭಿಮಾನ ಚಳವಳಿ-ವಿಚಾರವಾದ, ಜಾತಿ ವಿರೋಧ, ಹೆಣ್ಣುಮಕ್ಕಳ ರಕ್ಷಣೆ-ಸಬಲೀಕರಣ ಪ್ರಯತ್ನಗಳು ಬೀರಿದ ಪರಿಣಾಮ ಅಚ್ಚಳಿಯದೆ ಉಳಿದುಕೊಂಡಿವೆ. ತಮಿಳರು ಭಕ್ತಿ ಚಳವಳಿ-ಸಾಹಿತ್ಯ, ಬೃಹತ್ ದೇವಾಲಯಗಳು ಮತ್ತು ಸಂಗಂ ಕಾವ್ಯದ ಸವಿಯುಂಡ ಧಾರ್ಮಿಕ ಪ್ರವೃತ್ತಿಯ ಜನ; ದ್ರಾವಿಡ ಚಳವಳಿಯ ಲಾಭ ಪಡೆದ ಹಲವು ರಾಜಕಾರಣಿಗಳು ಕೂಡ ವೈಯಕ್ತಿಕ ಜೀವನದಲ್ಲಿ ಧಾರ್ಮಿಕರು. ಹೀಗಿದ್ದರೂ ತಮಿಳರನ್ನು ರಾಜಕೀಯ ಹಿಂದುಗಳಾಗಿಸು ವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಭಕ್ತಿ-ಸ್ವಾಭಿಮಾನ ಚಳವಳಿಗಳು ಬ್ರಾಹ್ಮಣರ ಆಚರಣೆ-ಸಂಪ್ರದಾಯ ಮತ್ತು ಸಂಸ್ಕೃತವನ್ನು ಆಧರಿಸಿದ ಪೂಜಾ ವಿಧಾನಗಳನ್ನು ವಿರೋಧಿಸಿದ್ದವು. ತಮಿಳರು ಹಿಂದು ಎಂಬ ಏಕೀಕೃತ, ಪ್ರತ್ಯೇಕಗೊಂಡ ಗುಂಪಿನಲ್ಲಿ ಗುರುತಿಸಿಕೊಳ್ಳಲು ನಿರಾಕರಿಸುತ್ತಾರೆ. ಕಂಚೀಪುರದ ವರದರಾಜ ಪೆರುಮಾಳ್ ದೇವಾಲಯದಲ್ಲಿ ವೈಷ್ಣವರ ವಡಗಲೈ-ತೆಂಕಲೈ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದ್ದು ಬಣಗಳ ಅಸ್ಮಿತೆಯ ಆಂತರಿಕ ಕಲಹದ ನಿದರ್ಶನ. ಅಲ್ಲದೆ, ವೈಷ್ಣವರು ಮತ್ತು ಶೈವರ ನಡುವೆಯೂ ತೀವ್ರ ಭಿನ್ನಾಭಿಪ್ರಾಯವಿದೆ.
ದ್ರಾವಿಡ ಚಳವಳಿಯ ಬೇರು ಬ್ರಾಹ್ಮಣರು ಮತ್ತು ಕೃಷಿಯನ್ನು ಆಧರಿಸಿದ್ದ ವೆಲ್ಲಾಲ ಸಮುದಾಯದ ನಡುವಿನ ಚಾರಿತ್ರಿಕ ಸಂಘರ್ಷದಲ್ಲಿದೆ. ಶೈವ ಪಂಥಕ್ಕೆ ಸೇರಿದ ವೆಲ್ಲಾಲರು ದ್ರಾವಿಡ ಚಳವಳಿಗೆ ಬುನಾದಿ ಹಾಕಿದರು; ಸ್ವಾಭಿಮಾನ ಚಳವಳಿಯನ್ನು ಬೆಂಬಲಿಸಿದರು. ಆದರೆ, ಪೆರಿಯಾರ್ ತಮ್ಮ ʻಕುಡಿಯರಸುʼ ವಾರಪತ್ರಿಕೆಯಲ್ಲಿ 63 ಶೈವ ಸಂತರ ಜೀವನಚರಿತ್ರೆ ʻಪೆರಿಯ ಪುರಾಣಂʼನ್ನು ಗೇಲಿ ಮಾಡಿ ಸರಣಿ ಲೇಖನ ಪ್ರಕಟಿಸಿದಾಗ ವೆಲ್ಲಾಲರು ಸಿಟ್ಟಿಗೆದ್ದರು(ಮೂಲ: ದ್ರಾವಿಡ ಇಯಕ್ಕಂ ವೆಲ್ಲಾಲರಂ. ಲೇಖಕ-ಎ.ಆರ್. ವೆಂಕಟಾಚಲಪತಿ). ಆರಂಭದ ವರ್ಷಗಳಲ್ಲಿ ಡಿಎಂಕೆಯನ್ನು ʻದ್ರಾವಿಡ ಮುದಲಿಯಾರ್ ಕಳಗಂʼ ಎಂದು ಕರೆಯಲಾಗುತ್ತಿತ್ತು. ಸಾಮಾಜಿಕ ಶ್ರೇಣಿಯಲ್ಲಿ 2ನೇ ಸ್ಥಾನದಲ್ಲಿದ್ದ ಮೊದಲಿಯಾರ್ ಸಮುದಾಯದವರು ಪಕ್ಷ ದಲ್ಲಿಯೂ ತುಂಬಿಕೊಂಡಿದ್ದರು.
ರಾಜ್ಯದಲ್ಲಿ ಪಕ್ಷವನ್ನು ಚಿಗುರಿಸಲು ಬಿಜೆಪಿ ಸಾಕಷ್ಟು ಶ್ರಮಿಸಿದೆ. ಐಪಿಎಸ್ಗೆ 2019ರಲ್ಲಿ ರಾಜೀನಾಮೆ ನೀಡಿದ ಕುಪ್ಪುಸ್ವಾಮಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿತು. ಎಲ್. ಮುರುಗನ್ ಅವರಿಂದ ಜುಲೈ 2021ರಲ್ಲಿ ಅಧಿಕಾರ ಸ್ವೀಕರಿಸಿದ ಅಣ್ಣಾಮಲೈ, ವಿಧಾನಸಭೆ ಚುನಾವಣೆಯಲ್ಲಿ ಠುಸ್ ಪಟಾಕಿ ಆದರು. 2024ರ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಯಶಸ್ಸು ಸಿಗಲಿಲ್ಲ. ಕೊನೆಗೆ, ವೈನಾರ್ ನಾಗೇಂದ್ರ ಅವರಿಗೆ ಜಾಗ ಬಿಟ್ಟುಕೊಟ್ಟರು. ರಾಜ್ಯದಲ್ಲಿ ಎರಡು ದ್ರಾವಿಡ ಪಕ್ಷಗಳಿರುವುದು ಬಿಜೆಪಿಗೆ ತಡೆಯೊಡ್ಡಿದೆ. ಕೊಲ್ಲೂರು ಮೂ ಕಾಂಬಿಕೆಯ ಪರಮ ಭಕ್ತ ಎಂಜಿಆರ್ ಹಾಗೂ ಅಯೋಧ್ಯೆಗೆ ಇಟ್ಟಿಗೆ ರವಾನಿಸಿದ ಜೆ.ಜಯಲಲಿತಾ ಅವರ ಮೃದು ಹಿಂದುತ್ವದಿಂದ ಬಿಜೆಪಿ ಬೆಳೆಯಲು ಆಗಿಲ್ಲ. ಒಂದುವೇಳೆ ಎಂಜಿಆರ್ ಡಿಎಂಕೆಯಲ್ಲೇ ಉಳಿದಿದ್ದರೆ, ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿರುತ್ತಿತ್ತು. ಆಗ ಬಿಜೆಪಿ, ಕಾಂಗ್ರೆಸ್ನ್ನು ಸುಲಭವಾಗಿ ಸ್ಥಳಾಂತರಿಸಬಹುದಿತ್ತು. ದೇವಾಲಯಗಳಿಗೆ ಬ್ರಾಹ್ಮಣೇ ತರರನ್ನು ಅರ್ಚಕರಾಗಿ ನೇಮಿಸುವುದನ್ನು ಬಿಜೆಪಿ ವಿರೋಧಿಸಿತ್ತು. ಪ್ರಧಾನಿ ಸೆಂಗೋಲ್ನ್ನು ಸಂಸತ್ತಿನಲ್ಲಿ ಇರಿಸಿದರೂ, ಚುನಾವಣೆಯಲ್ಲಿ ಫಲ ನೀಡಲಿಲ್ಲ. ಹಾಗೆಂದ ತಕ್ಷಣ ಬಿಜೆಪಿ ಸುಮ್ಮನಿಲ್ಲ; ಇರುವುದೂ ಇಲ್ಲ. ಕೋಮು ಧ್ರುವೀಕರಣದ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ; ಮದುರೈ ಪಕ್ಕದ ತಿರುಪ್ಪರನ್ಕುಂದ್ರಂ ಬೆಟ್ಟದ ಮೇಲಿನ 14ನೇ ಶತಮಾನದ ದರ್ಗಾ ದಲ್ಲಿ ದೀಪ ಬೆಳಗುವ ಪ್ರಯತ್ನವನ್ನು 1994ರಲ್ಲಿ ಸಂಘ ಪರಿವಾರದ ಗುಂಪೊಂದು ಮಾಡಿತ್ತು. ಸಿಕ್ಕಂದರ್ ಬಾದೂಷಾ ಔಲಿಯಾ ದರ್ಗಾ ಹಿಂದು, ಮುಸ್ಲಿಂ ಹಾಗೂ ಜೈನ ಸಮು ದಾಯ ನಡೆದುಕೊಳ್ಳುವ ಸ್ಥಳ. ಇಲ್ಲಿ ಇತ್ತೀಚೆಗೆ ಮತ್ತೊಮ್ಮೆ ನಡೆದ ದೀಪ ಹಚ್ಚುವ ಪ್ರಯತ್ನವನ್ನು ಪೊಲೀಸರು ತಡೆದರು. ದರ್ಗಾದಲ್ಲಿ ಎರಡು ದಿನ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮುಂದೊಂದು ದಿನ ಸಂಘ ಪರಿವಾರ ಇಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚಲು ಪ್ರಯತ್ನಿಸ ಲಿದೆ.
ಒಕ್ಕೂಟ ಸರ್ಕಾರದ ಹೂಟ ತಮಿಳುನಾಡಿನಲ್ಲಿ ನಡೆಯಬಾರದು; ಪೆರಿಯಾರ್ ಜಾಡು, ವಿಚಾರವಾದ-ಸ್ವಾಭಿಮಾನ ಚಳವಳಿ ಹಾಗೂ ಕಟ್ಟರ್ ಭಾಷಾ ಪ್ರೇಮಿಗಳಾದ ತಮಿಳರು ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಅಲ್ಪಸಂಖ್ಯಾತರ ದ್ವೇಷ ಹಾಗೂ ಕೋಮುವಾದಕ್ಕೆ ಸಮರ್ಥವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆಶಿಸೋಣ.

