ರಸಗೊಬ್ಬರ, ಬಿತ್ತನೆ ಬೀಜ ಕೊರತೆ : ಕೃಷಿ ಸಂಕಷ್ಟದ ಸಣ್ಣ ತುಣುಕು

ರಾಜ್ಯದೆಲ್ಲೆಡೆ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೊಂದು ವಾರ್ಷಿಕ ಕಾರ್ಯಕ್ರಮದಂತೆ ಆಗಿಬಿಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಮೇ 30, 2008ರಂದು ಅಧಿಕಾರ ಸ್ವೀಕರಿಸಿತ್ತು. ಹಾವೇರಿಯ ಎಪಿಎಂಸಿ ಅಂಗಳದಲ್ಲಿ ಮುಂಗಾರು ಪೂರ್ವ ಬಿತ್ತನೆಗೆ ಸಬ್ಸಿಡಿ ರಸಗೊಬ್ಬರಗಳ ಕೊರತೆಯನ್ನು ಪ್ರತಿಭಟಿಸಿದ ರೈತರ ಮೇಲೆ ಪೊಲೀಸರು ಜೂನ್‌ 10 ರಂದು ಗುಂಡು ಹಾರಿಸಿದರು. ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನಟ್ಟಿ ಬಲಿಯಾಗಿ, 13 ಮಂದಿ ಗಾಯಗೊಂಡರು. ಸರ್ಕಾರ ವಿಚಾರಣೆಗೆ ನೇಮಿಸಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಕೆ.ಜಗನ್ನಾಥ ಶೆಟ್ಟಿ ನೇತೃತ್ವದ ಸಮಿತಿಯ ವರದಿ ಬೆಳಕು ಕಾಣಲಿಲ್ಲ. ರಸಗೊಬ್ಬರ-ಬಿತ್ತನೆ ಬೀಜಗಳ ಕೊರತೆ ಕೃಷಿ-ಕೃಷಿಕರು ಎದುರಿಸುತ್ತಿರುವ ಸಂಕಷ್ಟದ ಒಂದು ತುಣುಕು ಅಷ್ಟೆ. ಇದೊಂದು ವಿಷ ವೃತ್ತ; ನಿರಂತರ ಸುತ್ತುತ್ತಲೇ ಇರುತ್ತದೆ.

ದೇಶ ಜಗತ್ತಿನ 2ನೇ ಅತ್ಯಂತ ದೊಡ್ಡ ಆಹಾರ ಉತ್ಪಾದಕ; ರಸಗೊಬ್ಬರ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆಹಾರ ಉತ್ಪಾದನೆಯಲ್ಲಿ ಬಹುತೇಕ ಸ್ವಾವಲಂಬಿಯಾಗಿದೆ; ಆದರೆ, ರಸಗೊಬ್ಬರ ಹಾಗೂ ಅದರ ಕಚ್ಚಾ ವಸ್ತು ಗಳಿಗೆ ಆಮದು ಆಧರಿಸಿದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ) ಪ್ರಕಾರ, ದೇಶ 2ನೇ ಅತಿ ದೊಡ್ಡ ರಸಗೊಬ್ಬರ ಆಮದುದಾರ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಗೊಬ್ಬರ-ಮೂಲವಸ್ತು ಗಳ ಪೂರೈಕೆಗೆ ಧಕ್ಕೆಯಾಗಿದ್ದು, ತೀವ್ರ ಕೊರತೆ ಎದುರಿಸುತ್ತಿದೆ.

2024-25ರಲ್ಲಿ ದೇಶದಲ್ಲಿ 46.5 ದಶಲಕ್ಷ ಟನ್‌ ರಸಗೊಬ್ಬರ ಉತ್ಪಾದನೆಯಾಗಿತ್ತು; ಬೇಡಿಕೆ 64.9 ದಶಲಕ್ಷ ಟನ್. ಆಮದಿನಲ್ಲಿ ಸಿಂಹಪಾಲು ಯೂರಿಯಾಕ್ಕೆ(ಶೇ.67), ಡೈ ಅಮೋನಿಯಂ ಫಾಸ್ಪೇಟ್‌(ಡಿಎಪಿ) ಶೇ.20, ಮಾನೋ ಅಮೋನಿಯಂ ಫಾಸ್ಪೇಟ್‌ ಶೇ.9 ಹಾಗೂ ಇತರ ಗೊಬ್ಬರಗಳ ಪ್ರಮಾಣ ಶೇ.4. ಆಮದಿನ ಹೆಚ್ಚು ಪಾಲು ಗಲ್ಫ್‌ನಿಂದ(ಶೇ.70-ಒಮಾನ್‌, ಸೌದಿ ಅರೇಬಿಯ, ಕತಾರ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್)‌ ಮತ್ತು ಡಿಎಪಿಯ ಶೇ.40ರಷ್ಟು ಸೌದಿ ಅರೇಬಿಯದಿಂದ ಬರುತ್ತಿದೆ. ಎನ್‌ಪಿಕೆ(ಸಾರಜನಕ, ಪೊಟಾಷಿಯಂ, ರಂಜಕ) ಹೆಚ್ಚು ಬೇಡಿಕೆ ಇರುವ ಇನ್ನೊಂದು ಗೊಬ್ಬರ. ದೇಶದಲ್ಲಿ ವಾಣಿಜ್ಯಿಕವಾಗಿ ಲಾಭದಾಯಕವಾದ ಪೊಟಾ ಷ್‌ನ ನಿಕ್ಷೇಪಗಳು ಇಲ್ಲ. ರಸಗೊಬ್ಬರವಲ್ಲದೆ ಅದರ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳಿಗೂ ಗಲ್ಫ್‌ ಪ್ರಾಂತ್ಯವನ್ನು ಆಧರಿಸಬೇಕಿದೆ. ಯೂರಿಯಾ ತಯಾರಿಕೆಯಲ್ಲಿ ಬಳಸುವ ಸ್ವಾಭಾವಿಕ ಅನಿಲದ ಶೇ.85ರಷ್ಟು, ಶೇ.90-95ರಷ್ಟು ರಾಕ್‌ ಫಾಸ್ಪೇಟ್‌ ಮತ್ತು ಶೇ.50ಕ್ಕೂ ಅಧಿಕ ರಂಜಕಾಮ್ಲ ಆಮದಾಗುತ್ತಿದೆ. ಈ ಎಲ್ಲವೂ ಹೊರ್ಮುಜ್‌ ಜಲಸಂಧಿ ಮೂಲಕ ಬರುತ್ತಿದ್ದು, ಯುದ್ಧದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಆಹಾರ ಸುಭದ್ರತೆ ಮತ್ತು ರಸಗೊಬ್ಬರದ ಲಭ್ಯತೆ ಎರಡೂ ಆಘಾತಕ್ಕೆ ಸಿಲುಕಿದೆ ಎಂದು ಮಾರ್ಚ್‌ 2026ರ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಮಂಡಳಿ(ಐಸಿಆರ್‌ ಐಇಆರ್)‌ ಅಧ್ಯಯನ ಹೇಳಿದೆ. ಸ್ವಾಭಾವಿಕ ಅನಿಲ ಬಳಕೆ ನಿಯಂತ್ರಿಸಲು ಹಾಗೂ ಆದ್ಯತೆಯ ಕ್ಷೇತ್ರಗಳನ್ನು ಕಾಯ್ದುಕೊಳ್ಳಲು ಮಾರ್ಚ್‌ 2026ರಲ್ಲಿ ಸರ್ಕಾರ, ಎಸ್ಮಾ(ಅವಶ್ಯ ವಸ್ತುಗಳ ಕಾಯಿದೆ 1955) ಜಾರಿಗೊಳಿಸಿತು; ಪೆಟ್ರೋರಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಗಳಿಗೆ ಶೇ.70ರ ಮಿತಿ ಹೇರಿತು. ಆಗಿನಿಂದ ರಸಗೊಬ್ಬರ ಉತ್ಪಾದನೆ ಕುಸಿದಿದೆ ಮತ್ತು ಬೆಲೆ ಹೆಚ್ಚಿದೆ. ಪಂಜಾಬ್‌, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ರಸಗೊಬ್ಬರ ಬಳಕೆ ಅಧಿಕ. ಭತ್ತ, ಗೋಧಿ ಮತ್ತು ಕಬ್ಬು ಒಟ್ಟು ಯೂರಿ ಯಾದ 2/3 ಭಾಗ ಬಳಸುತ್ತವೆ.

ರಸಗೊಬ್ಬರ ಉತ್ಪಾದನೆ-ಆಮದು ಜಾಗತಿಕ ಪರಿಸ್ಥಿತಿಯನ್ನು ಅವಲಂಬಿಸಿದೆ. 2022ರಲ್ಲಿ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿದಾಗ, ಜಗತ್ತಿನೆಲ್ಲೆಡೆ ರಾತ್ರೋರಾತ್ರಿ ಗೊಬ್ಬರದ ಬೆಲೆ ದುಪ್ಪಟ್ಟಾಯಿತು. 2025ರಲ್ಲಿ ಚೀನಾ ಡಿಎಪಿ ಹಾಗೂ ಇನ್ನಿತರ ರಸಗೊಬ್ಬರಗಳ ರಫ್ತಿನ ಮೇಲೆ ನಿರ್ಬಂಧ ಹೇರಿತು; ಇದರಿಂದ ಯುರೋಪ್‌, ರಷ್ಯಾ ಹಾಗೂ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಕದ ತಟ್ಟಬೇಕಾಯಿತು. ಬೆರಳೆಣಿಕೆ ದೇಶಗಳ ಮೇಲಿನ ಅತಿ ಅವಲಂಬನೆಯನ್ನು ತಪ್ಪಿಸಲು ಪರ್ಯಾಯ ಮೂಲಗಳು ಹಾಗೂ ಉತ್ಪನ್ನಗಳ ವೈವಿಧ್ಯೀಕರಣ ಅಗತ್ಯವಿದೆ ಎಂದು ಐಸಿಆರ್‌ಐಇಆರ್ ಅಧ್ಯಯನ ಹೇಳುತ್ತದೆ. 1980ರ ದಶಕದಲ್ಲಿ ಅಮೆರಿಕ, ಕೆನಡಾದಿಂದ ದುಬಾರಿ ಬೆಲೆ ಯಲ್ಲಿ ರಸಗೊಬ್ಬರ ತರಿಸಿಕೊಳ್ಳಲಾಗುತ್ತಿತ್ತು; ಫಾಸ್ಪೇಟ್‌ ಗೊಬ್ಬರಕ್ಕೆ ಮೊರಾಕ್ಕೋ ಮತ್ತು ಜೋರ್ಡಾನ್‌ ಆಶ್ರಯಿಸಲಾಗಿತ್ತು. ಉದ್ಯಮ ವಿಸ್ತರಿಸಿದಂತೆ, ಸೌದಿ ಅರೇಬಿಯಾ, ರಷ್ಯಾ ಹಾಗೂ ಚೀನಾ ಉತ್ಪಾದನೆ ಆರಂಭಿಸಿದವು.
ಪೂರೈಕೆ ಸುಗಮವಾಯಿತು.

ಸಬ್ಸಿಡಿ ಸಮಸ್ಯೆ: 2024-25ರಲ್ಲಿ ಸರ್ಕಾರ 1.77 ಲಕ್ಷ ಕೋಟಿ ರೂ. ರಸಗೊಬ್ಬರ ಸಬ್ಸಿಡಿ ನೀಡಿದ್ದು, ಇದರಲ್ಲಿ ಶೇ.70 ಭಾಗ ಯೂರಿಯಾಕ್ಕೆ ಸಿಕ್ಕಿದೆ. ಈ ಭಾರಿ ಸಬ್ಸಿಡಿ ಅತಿಬಳಕೆಯನ್ನು ಉತ್ತೇಜಿಸಿದ್ದು, ಪರಿಸರಕ್ಕೆ ಹಾನಿ ಉಂ ಟಾಗುತ್ತಿದೆ. ಹೀಗಾಗಿ, ಯೂರಿಯಾ ಬೆಲೆ 45 ಕೆಜಿ ಚೀಲಕ್ಕೆ 245 ರೂ.ಗೆ ಹೆಚ್ಚಿಸಬೇಕೆಂದು 2025-26ರ ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿತ್ತು. ರಸಗೊಬ್ಬರಕ್ಕೆ ಪರ್ಯಾಯ ಎಂದು ಪರಿಚಯಿಸಿದ ಉತ್ಪನ್ನಗಳು ಯಶಸ್ವಿ ಯಾಗಿಲ್ಲ; 2021ರಲ್ಲಿ ಪರಿಚಯಿಸಿದ ನ್ಯಾನೋ ದ್ರವ ಯೂರಿಯಾ, ಇಳುವರಿ ಹೆಚ್ಚಳ, ವೆಚ್ಚ ಹಾಗೂ ಆಮದು ಕಡಿತಗೊಳಿಸುತ್ತದೆ ಎನ್ನಲಾಗಿತ್ತು. ಪಂಜಾಬ್‌ ಕೃಷಿ ವಿಶ್ವವಿದ್ಯಾನಿಲಯದ 2 ವರ್ಷಗಳ ಅಧ್ಯಯನದ ಪ್ರಕಾರ, ನ್ಯಾನೋ ಯೂರಿಯಾ ಬಳಕೆಯಿಂದ ಭತ್ತ ಮತ್ತು ಗೋಧಿಯ ಇಳುವರಿ ಕಡಿಮೆಯಾಗಿದೆ ಮತ್ತು ಧಾನ್ಯದಲ್ಲಿ ಸಾರಜನಕದ ಪ್ರಮಾಣ ಕುಸಿದಿದೆ. ಶ್ರೀಲಂಕಾ ಮೇ 2021ರಲ್ಲಿ ಸಾವಯವ ಕೃಷಿಗೆ ಸ್ಥಿತ್ಯಂತರ ಉದ್ದೇಶದಿಂದ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಏಕಾಏಕಿ ನಿಷೇಧಿಸಿತು. ಇಳುವರಿ ತೀವ್ರವಾಗಿ ಕುಸಿದು, ಸಂಕಷ್ಟ ಎದುರಾಯಿತು. 1.4 ಶತಕೋಟಿ ಜನಸಂಖ್ಯೆ ಹಾಗೂ ಶೇ.60ಕ್ಕೂ ಅಧಿಕ ರೈತರು ಇರುವ ನಮ್ಮ ದೇಶದಲ್ಲಿ ಇಂಥ ಪ್ರಯೋಗ ಕಷ್ಟಕರ. ದೇಶದ ಒಟ್ಟು ಕೃಷಿ ಭೂಮಿಯ ಶೇ.2.6ರಲ್ಲಿ ಅಂದರೆ, 5.9 ದಶಲಕ್ಷ ಹೆಕ್ಟೇರಿನಲ್ಲಿ ಸಾವಯವ ಕೃಷಿ ನಡೆಯುತ್ತಿದೆ. ಇದರಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನ ಶೇ.76 ಪಾಲು ಹೊಂದಿವೆ; ಒಡಿಷಾ, ಕರ್ನಾಟಕ ಮತ್ತು ಈಶಾನ್ಯ ಭಾರತದಲ್ಲಿ ಸಾವಯವದ ಹೆಜ್ಜೆ ಗುರುತು ಮೂಡುತ್ತಿದೆ.

ನಾಮ್‌ ಕೆ ವಾಸ್ತೆ ಉಪಕ್ರಮಗಳು: ಕೇಂದ್ರ ಸರ್ಕಾರ 2023ರಲ್ಲಿ ಆರಂಭಿಸಿದ ಪಿಎಂ-ಪ್ರಣಾಮ್(ಪ್ರೋಗ್ರಾಂ ಫಾರ್‌ ರಿಸ್ಟೊರೇಷನ್‌, ಅವೇರ್ನೆಸ್‌ ಜನರೇಷನ್‌, ನರಿಷ್ಮೆಂಟ್‌ ಆಂಡ್‌ ಅಮಿಲಿಯೋರೇಷನ್‌ ಆಫ್‌ ಮದರ್‌ ಅರ್ಥ್)‌ ಸಮತೋಲ ಪೌಷ್ಟಿಕಾಂಶ ಬಳಕೆಯನ್ನು ಉತ್ತೇಜಿಸುವ ಹಾಗೂ ರಸಗೊಬ್ಬರಗಳ ಬಳಕೆ ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮವು ರಸಗೊಬ್ಬರ ಬಳಕೆ ಕಡಿಮೆಗೊಳಿಸುವ ರಾಜ್ಯಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ. ಸಂಸದೀಯ ಸಮಿತಿ ಪ್ರಕಾರ, ಯೋಜನೆಯಡಿ ಯಾವುದೇ ಅನುದಾನ ನೀಡಿಲ್ಲ. ರಾಷ್ಟ್ರೀಯ ಸಾವಯವ ಮಿಷನ್(ಎನ್‌ಎಂಎನ್‌ಎಫ್)‌ ನವೆಂಬರ್‌ 23, 2024ರಲ್ಲಿ ಆರಂಭಗೊಂಡಿದ್ದು, 15,000 ಗುಚ್ಛ ಗಳ 1 ಕೋಟಿ ರೈತರಿಗೆ ನೆರವು, 7.5 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಕೃಷಿಯ ಗುರಿ ಇರಿಸಿಕೊಂಡಿದೆ. ಪರಂಪರಾಗತ ಕೃಷಿ ವಿಕಾಸ ಯೋಜನೆ(ಪಿಕೆವಿವೈ) ಇನ್ನೊಂದು ಉಪಕ್ರಮ. 2026-27ರ ಆಯವ್ಯಯದಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣಕ್ಕೆ 1,32,561 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಎನ್‌ಎಂಎನ್‌ಎಫ್‌ ಗೆ 750 ಕೋಟಿ ರೂ. ಮತ್ತು ಪಿಕೆಇವೈಗೆ 11,200 ಕೋಟಿ ರೂ. ಅನುದಾನ ನೀಡಲಾಗಿದೆ. ಸಾವಯವ ಕೃಷಿಕರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಸಹಕಾರ ಆರ್ಗ್ಯಾನಿಕ್ಸ್‌ ಲಿ.(ಎನ್‌ಸಿಒಎಲ್)‌ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಗ್ರೀನ್‌ ಹೈಡ್ರೋಜನ್‌ ಮಿಷನ್ 2023 ದೇಶವನ್ನು ಹಸಿರು ಜಲಜನಕ ಹಾಗೂ ಅಮೋನಿಯಾದ ಕೇಂದ್ರ ಆಗಿಸಬೇಕೆಂಬ ಗುರಿ ಹೊಂದಿದೆ.

ದಾರಿ ಇದೆ; ಆದರೆ, ಕಠಿಣ: ಜಾಗತಿಕ ಸಂಘರ್ಷಗಳಿಂದ ರಸಗೊಬ್ಬರ-ಇಂಧನ ಪೂರೈಕೆ ಸರಪಳಿ ಅಸ್ತವ್ಯಸ್ತವಾಗುತ್ತದೆ. ದೇಶ ರಸಗೊಬ್ಬರ/ಒಳಸುರಿಗಳಿಗೆ ಮಲೇಷಿಯಾ, ಇಂಡೋನೇಷ್ಯಾ, ವಿಯಟ್ನಾಂ ಮತ್ತು ಆಸ್ಟ್ರೇಲಿಯ ವನ್ನು ಅವಲಂಬಿಸಬಹುದು. ಆದರೆ, ಆಮದು ಮೂಲದ ಬದಲಾವಣೆಯಷ್ಟೇ ಸಾಕಾಗುವುದಿಲ್ಲ. ಆಫ್ರಿಕಾ, ಕೇಂದ್ರ ಏಷ್ಯಾ ಮತ್ತು ಲ್ಯಾಟಿನ್‌ ಅಮೆರಿಕದ ಉತ್ಪಾದಕರೊಟ್ಟಿಗೆ ಸಹಭಾಗಿತ್ವ, ಸಂಪನ್ಮೂಲ ಇರುವ ರಾಷ್ಟ್ರಗಳೊಟ್ಟಿಗೆ ಜಂಟಿ ಉತ್ಪಾದನೆ/ಪೂರೈಕೆಗೆ ದೀರ್ಘಕಾಲೀನ ಒಪ್ಪಂದ ಮಾಡಿಕೊಳ್ಳಬೇಕಿದೆ. ಮೊರಾಕ್ಕೋದಲ್ಲಿ ರಾಕ್‌ ಫಾಸ್ಪೇಟ್‌ನ ಒಟ್ಟು ನಿಕ್ಷೇಪದಲ್ಲಿ ಶೇ.70ರಷ್ಟು ಇದೆ. ಅಲ್ಲಿ ಹೂಡಿಕೆ ಮಾಡಬಹುದು. ಒಮಾನ್‌ನಲ್ಲಿ ಒಮಾನ್‌ ಇಂಡಿ ಯಾ ಫರ್ಟಿಲೈಸರ್‌ ಕಂಪನಿ(ಒಐಎಫ್‌ಎಂಸಿ) ರಸಗೊಬ್ಬರ ಉತ್ಪಾದಿಸುತ್ತಿದೆ. 2012ರಲ್ಲಿ ಪೆಟ್ರೋಲಿಯಂ ಮಂತ್ರಾಲಯವು ಹೊರದೇಶಗಳ ರಾಕ್‌ ಫಾಸ್ಪೇಟ್‌ ಮತ್ತು ಪೊಟಾಷ್‌ನ ನಿಕ್ಷೇಪಗಳಲ್ಲಿ ಹೂಡಿಕೆ ಮಾಡಲು ಶಾಶ್ವತ ನಿಧಿಯೊಂದನ್ನು ಸ್ಥಾಪಿಸುವ ಪ್ರಸ್ತಾವ ಮುಂದೊಡಿತ್ತು. ಆನಂತರ ಏನಾಯಿತೋ ಗೊತ್ತಿಲ್ಲ. ದೇಶದಲ್ಲಿ ಫಾಸ್ಪೇಟ್‌ನ್ನು ಡೈ ಅಮೋನಿಯಂ ಫಾಸ್ಪೇಟ್(ಡಿಎಪಿ) ರೂಪದಲ್ಲಿ ಬಳಸಲಾಗುತ್ತಿದೆ. ಬದಲಾಗಿ ಸಿಂಗಲ್‌ ಸೂಪರ್‌ ಫಾಸ್ಪೇಟ್‌ ಮತ್ತು ಅಮೋನಿಯಂ ಫಾಸ್ಪೇಟ್‌ ಬಳಸಿ, ಆಮದು ಕಡಿಮೆ ಮಾಡಬಹುದು. ದೇಶದಲ್ಲಿ ಲಭ್ಯವಿರುವ ಕಡಿಮೆ ಗುಣಮಟ್ಟದ ರಾಕ್‌ ಫಾಸ್ಪೇಟ್‌ನ್ನು ಕೂಡ ಉನ್ನತ ತಂತ್ರಜ್ಞಾನದಿಂದ ಸಂಸ್ಕರಿಸಬಹುದು.

ದೇಶದಲ್ಲಿರುವ ದನಗಳು ಪ್ರತಿದಿನ ಅಂದಾಜು 3 ದಶಲಕ್ಷ ಟನ್‌ ಸೆಗಣಿ ವಿಸರ್ಜಿಸುತ್ತವೆ. ಸ್ವಚ್ಛ ಭಾರತ್‌ ಮಿಷನ್‌ ಅಡಿ ಹಲವು ನಗರಗಳಲ್ಲಿ ಹಸಿ ಕಸವನ್ನು ಪ್ರತ್ಯೇಕಿಸಿ, ಗೊಬ್ಬರ ತಯಾರಿಸಲಾಗುತ್ತಿದೆ. ದೊಡ್ಡ ನಗರಗಳು ವರ್ಷವೊಂದಕ್ಕೆ ಉತ್ಪಾದಿಸುವ ತ್ಯಾಜ್ಯ 62 ದಶಲಕ್ಷ ಟನ್(ವ್ಯಕ್ತಿಯೊಬ್ಬ ಪ್ರತಿದಿನ ಅಂದಾಜು 0.3ರಿಂದ 0.6 ಕೆಜಿ ಕಸ); ಇದರಲ್ಲಿ ಅರ್ಧದಷ್ಟು ಸಾವಯವ ತ್ಯಾಜ್ಯವಾಗಿದ್ದು, 5.2 ದಶಲಕ್ಷ ಟನ್‌ ಕಾಂಪೋಸ್ಟ್‌ ತಯಾರಿಸ ಬಹುದು. ಆದರೆ, ಕೇವಲ 0.2 ದಶಲಕ್ಷ ಟನ್‌ ಕಾಂಪೋಸ್ಟ್‌ ಉತ್ಪಾದನೆಯಾಗುತ್ತಿದೆ. ಸ್ಥಾಪಿಸಿರುವ ಕಾಂಪೋಸ್ಟಿಂಗ್‌ ಘಟಕಗಳ ಒಟ್ಟು ಸಾಮರ್ಥ್ಯ 18.9 ದಶಲಕ್ಷ ಟನ್.‌ ಕಾಂಪೋಸ್ಟ್‌ ತಯಾರಿಕೆಗೆ ಉತ್ತಮ ತಂತ್ರಜ್ಞಾನ ಲಭ್ಯವಿದ್ದು, 4ರಿಂದ 8 ವಾರದೊಳಗೆ ಗುಣಮಟ್ಟದ ಗೊಬ್ಬರ ಸಿಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ತ್ಯಾಜ್ಯಗಳಾದ ಭತ್ತದ ಹುಲ್ಲು/ಹೊಟ್ಟು, ಕಬ್ಬಿನ ಕೂಳೆ-ರವದಿ, ಬಾಳೆ ಎಲೆ-ದಿಂಡು, ತರಕಾರಿ ತ್ಯಾಜ್ಯಗಳು ಹಾಗೂ ಗೋಧಿಯ ಹುಲ್ಲು ಅಪಾರ ಪ್ರಮಾಣದಲ್ಲಿ ಲಭ್ಯವಿದೆ. ಇವನ್ನು ಎಸೆಯಲಾಗುತ್ತಿದೆ ಇಲ್ಲವೇ ಸುಡಲಾಗುತ್ತಿದೆ. ರಾಷ್ಟ್ರೀಯ ಕಾಂಪೋಸ್ಟ್‌ ಮಿಷನ್‌ ಮೂಲಕ ಲಭ್ಯ ಸ್ಥಾವರಗಳ ಬಳಕೆ, ಎಲ್ಲ ದೊಡ್ಡ ನಗರಗಳಲ್ಲಿ ಘನ-ಹಸಿ ತ್ಯಾಜ್ಯ ಪ್ರತ್ಯೇಕಿಸುವಿಕೆ ಕಡ್ಡಾಯಗೊಳಿಸುವುದು, ಸೆಗಣಿಯ ರಫ್ತು ನಿಷೇಧ ಮತ್ತು ಕಾಂಪೋಸ್ಟ್‌ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಮೂಲಕ ರೈತರಿಗೆ ಪೂರಕ ಆದಾಯ ಲಭ್ಯವಾಗುವಂತೆ ಮಾಡಬಹುದು. ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಮತ್ತು ಆಮದಾಗುವ ಸಸ್ಯ ಪೋಷಕಾಂಶವಾದ ಸಾರಜನಕದ ಮರುಬಳಕೆ ಸಾಧ್ಯವಿಲ್ಲ; ಅದು ವಾತಾವರಣದಲ್ಲಿ ಲೀನವಾಗುತ್ತದೆ. ಇದಕ್ಕೆ ಪರ್ಯಾಯವೆಂದರೆ, ಮಣ್ಣಿಗೆ ಸಾರಜನಕ ವನ್ನು ಹಿಡಿದಿಡಬಲ್ಲ ಬ್ಯಾಕ್ಟೀರಿಯಾಗಳನ್ನು ಸೇರಿಸುವುದು ಮತ್ತು ಬೇರಿನಲ್ಲಿ ಗಂಟುಗಳಿರುವ ಬೆಳೆ ಬೆಳೆಯುವುದು. ಇವು ಸಾರಜನಕವನ್ನು ಗಾಳಿಯಿಂದ ಹೀರಿಕೊಳ್ಳುತ್ತವೆ. ಬೆಳೆ ವೈವಿಧ್ಯೀಕರಣ ಅತ್ಯಂತ ಮುಖ್ಯ. ಹಸಿರು ಗೊಬ್ಬರ ಬಳಕೆಯಲ್ಲದೆ, ದ್ವಿದಳ ಧಾನ್ಯ ಮತ್ತು ಸಾರಜನಕ ಹಿಡಿದಿಡುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ, ಖರೀದಿಸಬೇಕಿದೆ. ಇದರಿಂದ ರಸಗೊಬ್ಬರದ ಅವಲಂಬನೆ ಕಡಿಮೆಯಾಗುವುದಲ್ಲದೆ, ರವದಿ-ಹುಲ್ಲು ಸುಡುವಿಕೆ ಮತ್ತು ಎಲ್ಲೆಂದರಲ್ಲಿ ಎಸೆಯುವುದು ಕಡಿಮೆಯಾಗುತ್ತದೆ. ಜೈವಿಕ ಗೊಬ್ಬರ, ಸಾವಯವ ಗೊಬ್ಬರ, ಹಸಿರು ಅಮೋನಿಯಾ ಬಳಕೆ ಮೂಲಕ ಸ್ಥಿತ್ಯಂತರ ಸಾಧ್ಯವಿದೆ. ಒಳಸುರಿ, ತಂತ್ರಜ್ಞಾನ ಹಾಗೂ ಮೂಲಸೌಲಭ್ಯ ಲಭ್ಯವಿದೆ; ಬೇಕಿರುವುದು ಸಮಗ್ರ ಕಾರ್ಯನೀತಿ, ಇಚ್ಛಾಶಕ್ತಿ ಹಾಗೂ ಮಾರುಕಟ್ಟೆ ಬೆಂಬಲ.

ಬರಿ ಒಣ ಮಾತು: ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ ಎನ್ನುವ ಮಾತು ಕ್ಲೀಷೆ ಆಗಿಬಿಟ್ಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ವರದಿ 2024 ಪ್ರಕಾರ, ಕೃಷಿಗೆ ಸಂಬಂಧಿಸಿದ 10,546 ಮಂದಿ ಅಂದರೆ, ಗಂಟೆಗೆ ಒಬ್ಬರು ರೈತ/ಕೃಷಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಕೃಷಿ ಕಾರ್ಮಿಕರ ಪಾಲು ಶೇ.56. ಈ ಪ್ರವೃತ್ತಿ 2021ರಿಂದ ಮುಂದುವರಿದಿದೆ. ವರದಿ ಪ್ರಕಾರ, ಕೃಷಿ ಲಾಭದಾಯಕವಾಗಿಲ್ಲ ಮತ್ತು ಲಾಭದಾಯಕ ವಾಗಲು ಸರ್ಕಾರ ನೆರವಾಗುತ್ತಿಲ್ಲ. ಬಹುಪಾಲು ಕೃಷಿಕರು ಕೃಷಿ ಕಾರ್ಮಿಕರಾಗಿದ್ದು, ಕುಟುಂಬದ ಮಾಸಿಕ ಆದಾಯದಲ್ಲಿ 1/3 ಪಾಲು ಮಾತ್ರ ಕೃಷಿಯಿಂದ ಬರುತ್ತಿದೆ. ಇದರೊಟ್ಟಿಗೆ, ಈಗಾಗಲೇ ಒತ್ತಡದಲ್ಲಿರುವ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಕಾರ್ಮಿಕರು ಸೇರ್ಪಡೆ ಆಗುತ್ತಿದ್ದಾರೆ. ಇವರೆಲ್ಲರೂ ಅನೌಪಚಾರಿಕ ಕ್ಷೇತ್ರಗಳಲ್ಲಿದ್ದು, ನೆಲೆ ಕಳೆದುಕೊಂಡವರು. ಹಿಡುವಳಿ ಕ್ರಮೇಣ ಕುಸಿಯುತ್ತಿದೆ. ನಬಾರ್ಡ್‌ನ 2024ರ ದತ್ತಾಂಶದ ಪ್ರಕಾರ, ಅಕಾಲಿಕ ಮಳೆ, ಕೀಟ ಹಾವಳಿ, ಬರ-ಪ್ರವಾಹ ಇತ್ಯಾದಿಯಿಂದ ಶೇ.30 ಹಾಗೂ ಕೃಷಿ ಉತ್ಪನ್ನಗಳ ಬೆಲೆ ಏರಿಳಿತದಿಂದ ಶೇ.12 ರಷ್ಟು ರೈತ ಕುಟುಂಬಗಳು ನಷ್ಟಕ್ಕೀಡಾಗಿವೆ. ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಅಳಿದುಳಿದ ಉಳಿತಾಯವನ್ನು ಬರಿದು ಮಾಡಿಕೊಂಡಿವೆ ಇಲ್ಲವೇ ಅನೌಪಚಾರಿಕ ಮೂಲಗಳಿಂದ ಸಾಲ ಮಾಡಿವೆ. ಕೃಷಿ ಕುಟುಂಬದ ಮಾಸಿಕ ಆದಾಯ 1,951 ರೂ. ಮತ್ತು ಅಂದಾಜು ಸಾಲ 91,231 ರೂ.; ಕೃಷಿಯೇತರ ಕುಟುಂಬಗಳ ಸಾಲ 89,074 ರೂ. 2024ರಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ ನೇತೃತ್ವದ ಕೃಷಿ, ಪಶು ಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಸಂಸದೀಯ ಸ್ಥಾಯಿ ಸಮಿತಿ, ʼರೈತರು ಕೃಷಿ ಚಟುವಟಿಕೆಯಲ್ಲಿ ಹೂಡಿಕೆ ಮುಂದುವರಿಸುತ್ತಲೇ ಸಾಲವನ್ನು ಸುಸ್ಥಿರವಾಗಿ ನಿರ್ವಹಿಸಬಹುದೆಂದು ಖಚಿತಪಡಿಸಿ ಕೊಳ್ಳಲು, ದುಸ್ತರ ಸಾಲದ ವಿಷವರ್ತುಲದಲ್ಲಿ ಸಿಲುಕಿಕೊಳ್ಳದಂತೆ ಮತ್ತು ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳು ಸ್ಪಷ್ಟ ಪರಿಣಾಮ ಬೀರುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಸಾಧ್ಯವಿರುವ ಎಲ್ಲವನ್ನೂ ಮಾಡ ಬೇಕು,ʼ ಎಂದು ಹೇಳಿತ್ತು. ಇದು ಯಾರ ಕಿವಿಗೂ ಬೀಳಲಿಲ್ಲ.

ಏತನ್ಮಧ್ಯೆ ರೈತರು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ಚಪ್ಪಲಿ ಇರಿಸಿ, ಕಾಯುತ್ತಿದ್ದಾರೆ. ಸೂಪರ್‌ ಎಲ್‌ ನಿನೋ ಕಾಲಿರಿಸಿದ್ದು, ಮುಂಗಾರು ಆವೃತ್ತಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ. ರೈತರು ಇದನ್ನು ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಸರ್ಕಾರದ ʻರೈತರ ಆದಾಯ ದುಪ್ಪಟ್ಟುʼ ಎಂಬ ಹುಸಿ ಹೇಷಾರವದಲ್ಲಿ ರೈತರ ಅಳಲು ಯಾರಿಗೂ ಕೇಳಿಸುತ್ತಿಲ್ಲ.

 

Journalist,Translator,avid bibliophile

Leave a Reply

Your email address will not be published. Required fields are marked *

Back To Top