ರಾಜ್ಯದಲ್ಲಿ ಇತ್ತೀಚೆಗೆ ನಕಲಿ ಔಷಧಗಳ ಪತ್ತೆ ಭಾರಿ ಸುದ್ದಿಯಾಗಿತ್ತು. ಇದೇ ಹೊತ್ತಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ(ಎಫ್ಡಿಎ) 253 ಹೆಚ್ಚು ಮೌಲ್ಯದ ಔಷಧ/ಬಳಕೆ ವಸ್ತುಗಳ ಬೆಲೆ ಖರೀದಿಸಿದ್ದಕ್ಕಿಂತ 10 ರಿಂದ 50 ಪಟ್ಟು ಹೆಚ್ಚು ಇದ್ದಿದ್ದನ್ನು ಪತ್ತೆ ಹಚ್ಚಿತು. ಎಲ್ಲ ಔಷಧಗಳ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಲು ಸಾಧ್ಯವಾಗುವಂತೆ ಕಾರ್ಯನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಕ್ಟೋಬರ್ 12,2026ರಂದು ಸೂಚಿಸಿದೆ.
ದೇಶ ಔಷಧ ತಯಾರಿಕೆಯಲ್ಲಿ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ; ಔಷಧ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು(ಎಪಿಐ)ಗಳ ಉತ್ಪಾದಿಸುವ 55 ಕಂಪನಿಗಳಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಶೇ.8 ಪಾಲು ಹೊಂದಿದೆ. 3,000 ಔಷಧ ಕಂಪನಿ ಹಾಗೂ 10,500 ಔಷಧ ತಯಾರಿಕೆ ಘಟಕಗಳಿವೆ. ಒಟ್ಟು ಲಸಿಕೆಯಲ್ಲಿ ಅಂದಾಜು ಅರ್ಧದಷ್ಟನ್ನು ಉತ್ಪಾದಿಸುತ್ತದೆ. ಉದ್ಯಮದ ದೇಶಿ ಮಾರುಕಟ್ಟೆ ಮೌಲ್ಯ 5.75 ಲಕ್ಷ ಕೋಟಿ ರೂ.; ಇದು 2030ಕ್ಕೆ 12.48 ಲಕ್ಷ ಕೋಟಿ ರೂ.ಗೆ ಹೆಚ್ಚುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಜನೆರಿಕ್ ಔಷಧಗಳಲ್ಲಿ ದೇಶದ ಪಾಲು ಶೇ.20. 60 ವಿಭಾಗಳಲ್ಲಿ 60,000ಕ್ಕೂ ಅಧಿಕ ಜನೆರಿಕ್ ಔಷಧಗಳು ಉತ್ಪಾದನೆಯಾಗುತ್ತಿವೆ. 2021-22ರಲ್ಲಿ 191 ದೇಶಗಳಿಗೆ ಔಷಧ ರಫ್ತು ಮಾಡಿದ್ದು, ಒಟ್ಟು ಮೌಲ್ಯ 2.57 ಲಕ್ಷ ಕೋಟಿ ರೂ. ರಫ್ತಿನ ಮೌಲ್ಯ ಪರಿಗಣಿಸಿದರೆ ಜಾಗತಿಕವಾಗಿ 11ನೇ ಸ್ಥಾನದಲ್ಲಿದೆ. ಹೀಗಿದ್ದರೂ ಕ್ಷಯ, ಕ್ಯಾನ್ಸರ್, ಎಚ್ಐವಿ-ಏಡ್ಸ್ ಮತ್ತಿತರ ಮಾರಣಾಂತಿಕ ರೋಗಗಳಿಗೆ ಔಷಧದ ಕೊರತೆ ಇದೆ. ದುಬಾರಿ ಆರೋಗ್ಯ ಸೇವೆ/ಔಷಧದಿಂದ ಪ್ರತಿವರ್ಷ ಶೇ.2ರಷ್ಟು ಮಂದಿ ಬಡತನದ ಕೂಪಕ್ಕೆ ಬೀಳುತ್ತಿದ್ದಾರೆ.
ಹಲವು ಆಯಾಮಗಳ ಸಮಸ್ಯೆ: 1980ರ ಬಳಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸರ್ಕಾರದ ಬೆಂಬಲ ಕುಸಿಯಿತು; ಇದರಿಂದ ಖಾಸಗಿ/ಕಾರ್ಪೊರೇಟ್ ಆಸ್ಪತ್ರೆಗಳು ಬಲಗೊಂಡವು. ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶದ ಪ್ರಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಪ್ರಮಾಣ ಅಂದಾಜು ಶೇ.30. ಖಾಸಗೀಕರಣದಿಂದ ಜನರು ಆರೋಗ್ಯ ಸೇವೆಗಳಿಗೆ ಹೆಚ್ಚು ಹಣ ವೆಚ್ಚ ಮಾಡ ಬೇಕಾಗಿ ಬಂದಿತು; ಔಷಧಗಳಿಗೆ ಬೇಡಿಕೆ ಅಧಿಕಗೊಂಡು, ಉತ್ಪಾದನೆ ಕಂಪನಿಗಳಿಗೆ ಸರ್ಕಾರ ಪರವಾನಿಗಿ ನೀಡುತ್ತ ಹೋಯಿತು. ಆದರೆ, ಗುಣಮಟ್ಟ ಹಾಗೂ ಬೆಲೆ ನಿಯಂತ್ರಣಕ್ಕೆ ಕಠಿಣ ನಿಯಮ ರೂಪಿಸಲಿಲ್ಲ. 2012ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಔಷಧ ಬೆಲೆ ನಿಯಂತ್ರಣ ಆದೇಶ(ಡಿಪಿಸಿಒ)ದ ಮೂಲಕ ಶೇ. 12ರಷ್ಟು ಔಷಧಗಳನ್ನು ಬೆಲೆ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಈ ಅನುಸೂಚಿತ ಔಷಧಗಳನ್ನು ಎಂಆರ್ಪಿಗಿಂತ ಹೆಚ್ಚು ದರದಲ್ಲಿ ಮಾರುವಂತಿಲ್ಲ. 2016ರಲ್ಲಿ ಬೆಲೆ ನಿಯಂತ್ರಣವನ್ನು ಶೇ.11ರಷ್ಟು ಔಷಧಗಳಿಗೆ ಇಳಿಸಲಾಯಿತು. ಡಿಪಿಸಿಒಗೆ 2023ರಲ್ಲಿ ತಿದ್ದುಪಡಿ ತರಲಾಯಿತು. ಅವಶ್ಯ ಔಷಧಗಳ ರಾಷ್ಟ್ರೀಯ ಪಟ್ಟಿ(ಎನ್ಎಲ್ಇಎಂ)ಯಲ್ಲಿ ಶೇ.18ರಷ್ಟು ʻಅನುಸೂಚಿತʼ ಔಷಧಗಳಿವೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ(ಎನ್ಪಿಪಿಎ) ಇವುಗಳ ಬೆಲೆ ನಿಗದಿ ಪಡಿಸುತ್ತದೆ. 935 ಔಷಧಗಳು ಅನುಸೂಚಿ 1 ಪಟ್ಟಿಯಲ್ಲಿವೆ. ಎಂಆರ್ಪಿಗೆ ಮಿತಿಯಲ್ಲದೆ, ವಾರ್ಷಿಕ ಎಂಆರ್ಪಿ ಹೆಚ್ಚಳ ಶೇ.10 ಮೀರಬಾರದು. ʻಅತಿ ವಿಶಿಷ್ಟ ಸನ್ನಿವೇಶʼದಲ್ಲಿ ಮಾತ್ರ ಪ್ರಾಧಿಕಾರ ಮಧ್ಯಪ್ರವೇಶ ಮಾಡಬಹುದು. ಆದರೆ, ಅನುಸೂಚಿತವಲ್ಲದ ಔಷಧಗಳನ್ನು ಯಾವ ಬೆಲೆಗಾದರೂ ಮಾರಾಟ ಮಾಡಬಹುದು. ಹೆಚ್ಚಿನ ವೈದ್ಯ ಸಾಧನಗಳು ಹಾಗೂ ಬಳಕೆ ವಸ್ತುಗಳು ಬೆಲೆ ನಿಯಂತ್ರಣ ಆದೇಶದ ಹೊರಗೆ ಇವೆ.
ಗುಣಮಟ್ಟದ ಅಗತ್ಯ ಔಷಧಗಳು ಜನರಿಗೆ ಕೈಗೆಟಕುವ ದರದಲ್ಲಿ ಸಿಗಬೇಕು ಎಂದು ಬಹಳ ಹಿಂದೆಯೇ ಹಲವು ಪ್ರಯತ್ನ ನಡೆದಿತ್ತು. ಅಕ್ಟೋಬರ್ 1943ರಲ್ಲಿ ನೇಮಿಸಿದ ಸರ್ ಜೋಸೆಫ್ ವಿಲಿಯಂ ಭೋರೆ ಸಮಿತಿ 1946ರಲ್ಲಿ 4 ಸಂಪುಟಗಳ ವರದಿ ಸಲ್ಲಿಸಿತ್ತು. ದೇಶದ ಸಾರ್ವಜನಿಕ ಆರೋಗ್ಯ ಕಾರ್ಯನೀತಿಗೆ ಬುನಾದಿ ಹಾಕಿತು. ಜೂನ್ 1959ರಲ್ಲಿ ರಚಿಸಲಾದ ಡಾ. ಎ.ಲಕ್ಷ್ಮಣಸ್ವಾಮಿ ಮೊದಲಿಯಾರ್ ನೇತೃತ್ವದ ಸಮಿತಿ 1961-62ರಲ್ಲಿ ವರದಿ ನೀಡಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳ ಬಲವರ್ಧನೆ, ಐಎಎಸ್ನಂತೆ ಅಖಿಲ ಭಾರತ ಆರೋಗ್ಯ ಸೇವೆ(ಎಐ ಎಚ್ಎಸ್) ರಚನೆ ಸೇರಿದಂತೆ ಹಲವು ಶಿಫಾರಸು ಮಾಡಿತು. ಜೈ ಸುಖ್ಲಾಲ್ ಹಾಥಿ ಸಮಿತಿ ಫೆಬ್ರವರಿ 8,1974ರಲ್ಲಿ ರಚನೆಯಾಗಿ, 1975ರಲ್ಲಿ ವರದಿ ಸಲ್ಲಿಸಿತು. ಬಹುರಾಷ್ಟ್ರೀಯ ಕಂಪನಿಗಳ ಹೆಚ್ಚಳವನ್ನು ಉಲ್ಲೇಖಿಸಿದ ಸಮಿತಿ, ಅಗತ್ಯ ಔಷಧಗಳು ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕು ಎಂದು ಹೇಳಿತು. 13 ಪ್ರಮುಖ ಔಷಧಗಳನ್ನು ಗುರುತಿಸಿ, ದೇಶದ ಮೊದಲ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ(ಎನ್ಎಲ್ಇಎಂ)ಯ ಅಭಿವೃದ್ಧಿಗೆ ಕಾರಣವಾಯಿತು.
ಮಧ್ಯಸ್ಥಗಾರರ ಕೈವಾಡ: ಸುಪ್ರೀಂ ಕೋರ್ಟ್ ಅಕ್ಟೋಬರ್ 8, 2026ರಂದು ಔಷಧಗಳ ಬೆಲೆ ನಿಗದಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಪ್ರಕರಣದ ವಿಚಾರಣೆ ವೇಳೆ ಮುದ್ರಿತ ಎಂಆರ್ಪಿ ಮತ್ತು ಮಾರಾಟ ಬೆಲೆಯಲ್ಲಿನ ವ್ಯತ್ಯಾಸವನ್ನು ʻಕಗ್ಗೊಲೆʼ ಹಾಗೂ ಹಗಲು ದರೋಡೆʼ ಎಂದು ಖಂಡಿಸಿತು. ʻಜನಾರೋಗ್ಯದ ರಕ್ಷಣೆ ಹಾಗೂ ಔಷಧ ಕಂಪನಿಗಳ ಮಾರುಕಟ್ಟೆ ಆಚರಣೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಹಾಗೂ ಅನುಷ್ಠಾನಗೊಳಿಸಬಹುದಾದ ಚೌಕಟ್ಟೊಂದರ ಅಗತ್ಯವಿದೆ. ಸಂವಿಧಾನದ ವಿಧಿ 32 ಮತ್ತು 142ರಡಿ ಇಂಥ ಕ್ರಮ ಕೈಗೊಳ್ಳಲು ನಮಗೆ ಅಧಿಕಾರ ಇದೆ,ʼ ಎಂದು ಹೇಳಿತು. ಅಕ್ಟೋಬರ್ 12ರಂದು ವಿಚಾರಣೆ ವೇಳೆ, ʻಎಲ್ಲ ಔಷಧಗಳ ಲಾಭಾಂಶವನ್ನು ಮಾರಾಟ ದರದ ಶೇ.30ಕ್ಕೆ ಮಿತಿಗೊಳಿಸಲು ಏಕೆ ಸಾಧ್ಯವಿಲ್ಲ? ಸಲೈನ್ ಡ್ರಿಪ್ ಬೆಲೆ 11 ರೂ. ಆಗಿದ್ದರೂ, 270 ರೂ. ಬಿಲ್ ಮಾಡಲಾಗುತ್ತಿದೆ. ಎಲ್ಲ ವೆಚ್ಚವನ್ನೂ ಪರಿಗಣಿಸಿಯೇ ಎಂಆರ್ಪಿ ನಿಗದಿಗೊಳಿಸಲಾಗಿರುತ್ತದೆ. ಹೀಗಿರುವಾಗ, ವಾಸ್ತವ ವೆಚ್ಚಕ್ಕಿಂತ 400 ಪಟ್ಟು ದರ ನಿಗದಿಗೊಳಿಸುವ ಹಿಂದಿನ ತರ್ಕವೇನು? ಇದಕ್ಕೆ ನೀವು ಹೇಗೆ ಅವಕಾಶ ನೀಡಿದ್ದೀರಿ?,ʼ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿ ಸಿತು. ಕಂಪನಿಗಳ ವರ್ತನೆಯನ್ನು ಪರಿಶೀಲಿಸಲು ಮೂವರು ಸದಸ್ಯರ ಸಮಿತಿ ನೇಮಿಸುವುದಾಗಿ ಕೇಂದ್ರ ಹೇಳಿತು. ಸಮಿತಿ 2 ತಿಂಗಳೊಳಗೆ ವರದಿ ನೀಡಬೇಕು; ಅಕ್ಟೋಬರ್ 27ರಂದು ಈಸಂಬಂಧ ವಿವರಣೆ ನೀಡಬೇಕೆಂದು ಕೇಂದ್ರಕ್ಕೆ ಸೂಚಿಸಿತು.
ವಾಸ್ತವವೆಂದರೆ, ಆಸ್ಪತ್ರೆಗಳು ಔಷಧವನ್ನು ಖರೀದಿಸಿದ ಬೆಲೆ, ಮುದ್ರಿತ ಎಂಆರ್ಪಿ ಹಾಗೂ ರೋಗಿ ನೀಡುವ ಮೊತ್ತದ ನಡುವೆ ಅಗಾಧ ವ್ಯತ್ಯಾಸ ಇರುತ್ತದೆ. ಒಳರೋಗಿಗಳಿಗೆ ಬಳಕೆ ವಸ್ತುಗಳು ಹಾಗೂ ಔಷಧಗಳಿಗೆ ಅಧಿಕ ದರ ವಿಧಿಸುತ್ತವೆ. ಹೊರಗಿನಿಂದ ಔಷಧ ತರಲು ಅವಕಾಶ ನೀಡುವುದಿಲ್ಲ; ಒಂದುವೇಳೆ ಹೊರಗಿನಿಂದ ಔಷಧ ತಂದು ಸಮಸ್ಯೆಯಾದರೆ ತಾವು ಜವಾಬ್ದಾರಿಯಲ್ಲ ಎಂದು ಬೆದರಿಸುತ್ತವೆ. ಔಷಧ ಮಾರುಕಟ್ಟೆ ಅತ್ಯಂತ ಸ್ಪರ್ಧಾತ್ಮಕ ವಾಗಿದ್ದು, ಅದರ ಮೇಲಿನ ಒತ್ತಡ ಇದಕ್ಕೆ ಕಾರಣ. ಈ ಮಾರುಕಟ್ಟೆಯಲ್ಲಿ ಉತ್ಪಾದಕನಿಗೆ ರೋಗಿಯ ಸಂಪರ್ಕ ಇರುವುದಿಲ್ಲ ಮತ್ತು ಏನನ್ನು ಖರೀದಿಸಬೇಕು ಎಂಬುದನ್ನು ರೋಗಿ ನಿರ್ಧರಿಸುವುದಿಲ್ಲ. ಬಹುತೇಕ ಆಸ್ಪತ್ರೆಗಳು ತಮ್ಮದೇ ಫಾರ್ಮಸಿ ಹೊಂದಿವೆ. ಉತ್ಪಾದಕರು ಮಾರುಕಟ್ಟೆಯಲ್ಲಿ ಮೇಲುಗೈ ಹೊಂದಬೇಕು ಎಂದು ಆಸ್ಪತ್ರೆಗಳಿಗೆ ಭಾರಿ ರಿಯಾಯಿತಿ ನೀಡುತ್ತಾರೆ ಮತ್ತು ರಿಯಾಯಿತಿಗಳನ್ನು ಸರಿಹೊಂದಿಸಲು ಎಂಆರ್ಪಿ ಹೆಚ್ಚು ಇಡುತ್ತಾರೆ. ಆದರೆ, ಬೆಲೆ ಕಡಿತದ ಲಾಭ ರೋಗಿಗಳಿಗೆ ಸಿಗುವುದಿಲ್ಲ. ಇದು ಕೆಲವರಿಗೆ ಮಾತ್ರ ಲಾಭ ತರುವ ಹಾಗೂ ಹೆಚ್ಚಿನವರಿಗೆ ಟೋಪಿ ಹಾಕುವ ಉದ್ಯಮ.
ಕೋವಿಡ್ 19ರ ಬಳಿಕ ಮಹಾರಾಷ್ಟ್ರದಲ್ಲಿ ನಡೆಸಿದ ಅಧ್ಯಯನದಲ್ಲಿ ಆಸ್ಪತ್ರೆಗಳು 46 ವಿವಿಧ ಜೀವರಕ್ಷಕ ಔಷಧಗಳಿಗೆ ಶೇ.200-400 ರಷ್ಟು ಹೆಚ್ಚು ಬೆಲೆ ವಿಧಿಸಿರುವುದು ಹಾಗೂ ಐವಿ(ರಕ್ತನಾಳದಲ್ಲಿ ಸೇರಿಸುವಂಥವು) ಸೆಟ್ಗಳು ಮತ್ತು ಸಿರಿಂಜ್ಗಳ ಬೆಲೆ 29 ಪಟ್ಟು ಹೆಚ್ಚು ಇದ್ದುದು ಪತ್ತೆಯಾಯಿತು. ಉತ್ತರಪ್ರದೇಶದ 214 ಆಸ್ಪತ್ರೆಗಳಲ್ಲಿನ ಫಾರ್ಮಸಿಗಳಲ್ಲಿ 130 ಔಷಧಗಳಲ್ಲಿ 36ರ ಬೆಲೆ ಗರಿಷ್ಠ ಚಿಲ್ಲರೆ ಮಾರಾಟ ದರ(ಎಂಆರ್ಪಿ)ಕ್ಕಿಂತ 10 ಪಟ್ಟು ಹೆಚ್ಚು ಮತ್ತು 6.40 ರೂ. ಮೌಲ್ಯದ 3ವೇ ಸ್ಟಾಪ್ಕಾಕ್ಗೆ 163 ರೂ. ವಿಧಿಸಿದ್ದು ಪತ್ತೆಯಾಗಿತ್ತು(25 ಪಟ್ಟು ಅಧಿಕ).
ಕೆಲವು ಔಷಧಗಳಿಗೆ ಮಾತ್ರ ಬೆಲೆ ನಿಯಂತ್ರಣವನ್ನು ಪ್ರಶ್ನಿಸಿ ಡ್ರಗ್ ಆಕ್ಷನ್ ಫೋರಂ ಮತ್ತಿತರ ಸಂಘಸಂಸ್ಥೆಗಳು 2023ರಲ್ಲಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದವು. ಔಷಧದ ಬೆಲೆಗಳು ಉತ್ಪಾದನೆ ವೆಚ್ಚವನ್ನು ಆಧರಿಸಿ ನಿರ್ಧರಿಸಲ್ಪಡುವುದಿಲ್ಲ; ಬದಲಾಗಿ, ಶೇ.1ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಔಷಧಗಳನ್ನು ಗುರುತಿಸಿ, ಅವುಗಳ ಸರಾಸರಿ ಬೆಲೆ ಬಳಸಿ ಗರಿಷ್ಠ ಮಾರಾಟ ದರ ನಿಗದಿಪಡಿಸಲಾಗುತ್ತದೆ. ಬೆಲೆ ನಿಯಂತ್ರಣ ವ್ಯವಸ್ಥೆಯು ಬದಲಾಗುತ್ತಿರುವ ಮಾರುಕಟ್ಟೆಗೆ ಅನುಗುಣವಾಗಿ ವಿಕಾಸವಾಗುತ್ತಿಲ್ಲ. ಔಷಧ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸಿದ ಮತ್ತು 1990ರ ಆರ್ಥಿಕ ಸುಧಾರಣೆ ಬಳಿಕವೂ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಮುಂದಾಗಲಿಲ್ಲ; ಆಸ್ಪತ್ರೆಗಳು, ಫಾರ್ಮಸಿಗಳ ಸರಪಳಿಗಳಂಥ ಹೊಸ ಮಾರುಕಟ್ಟೆ ಶಕ್ತಿಗಳನ್ನು ಒಳಗೊಳ್ಳುವಲ್ಲಿ ವಿಫಲ ವಾಗಿದೆ. ಕೆಲವು ಆಯ್ದ ಔಷಧಗಳ ನಿಯಂತ್ರಣ ಸಮರ್ಪಕ ನೀತಿಯಲ್ಲ; ಏಕೆಂದರೆ, ಕಂಪನಿಗಳು ಅನುಸೂಚಿತ ಔಷಧಗಳನ್ನು ಬೇರೆ ಔಷಧದೊಟ್ಟಿಗೆ ಸೇರಿಸಿ ನಿಯಂತ್ರಣದಿಂದ ತಪ್ಪಿಸಿಕೊಳ್ಳುತ್ತವೆ.
ಆಸ್ಪತ್ರೆಗಳು ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತವೆ; ಔಷಧಗಳ ಸಮರ್ಪಕ ಶೇಖರಣೆ, ಬಳಕೆಗೆ ಮುನ್ನವೇ ಅವಧಿ ಮುಗಿದ ಔಷಧಗಳಿಂದ ಆಗುವ ನಷ್ಟ ಮತ್ತು ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ವಿರುವ ಔಷಧಗಳ ಸಂಗ್ರಹಕ್ಕೆ ತಗಲುವ ವೆಚ್ಚವನ್ನು ಪರಿಗಣಿಸಬೇಕು. ಇದಲ್ಲದೆ, ಫಾರ್ಮಸಿಸ್ಟ್ಗಳು, ಜೈವಿಕ ಎಂಜಿನಿಯರ್ಗಳು ಮತ್ತು ಔಷಧಗಳ ಸುರಕ್ಷಿತ ಸಂಗ್ರಹ-ಜಾಡು ಹಿಡಿಯಲು ಅಗತ್ಯ ವಿರುವ ವ್ಯವಸ್ಥೆಗೆ ವೆಚ್ಚ ಮಾಡಬೇಕಿದೆ. ಇದರಿಂದ ರೋಗಿಗೆ ಹೆಚ್ಚು ಬೆಲೆ ವಿಧಿಸಲಾಗುತ್ತದೆ ಎನ್ನುತ್ತವೆ. ಔಷಧ ನಿಯಂತ್ರಣ ಎನ್ನುವುದು ಬಹು ದೊಡ್ಡ ಮಿಥ್ಯೆ ಮತ್ತು ಕಣ್ಕಟ್ಟು. ಕೆಲವೇ ಕೆಲವು ವೈದ್ಯ ಕೀಯ ಸಾಧನಗಳು ಬೆಲೆ ನಿಯಂತ್ರಣ ಪಟ್ಟಿಯಲ್ಲಿವೆ. ವೈದ್ಯಕೀಯ ಸಾಧನಗಳು ಔಷಧಗಳಲ್ಲ; ಅವುಗಳ ಬೆಲೆ 5 ರೂ.ನಿಂದ ಹಲವು ಕೋಟಿ ರೂ. ಇರಬಹುದು. ಹೀಗಾಗಿ, ಇವುಗಳ ಬೆಲೆ ನಿಯಂತ್ರಣಕ್ಕೆ ಏಕರೂಪದ ಪ್ರತ್ಯೇಕ ರಾಷ್ಟ್ರೀಯ ಚೌಕಟ್ಟು ಅಗತ್ಯವಿದೆ.
ಕೇರಳ ತೋರಿದ ದಾರಿ: ಹಾಗಾದರೆ, ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಕಡಿವಾಣ ಸಾಧ್ಯವಿಲ್ಲವೇ? ಇದೆ. ಔಷಧ ಉದ್ಯಮದ ಲಾಭಬಡುಕತನ ಪ್ರವೃತ್ತಿಯನ್ನು ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್)-ಪೇಟೆಂಟ್ ಸಾಮ್ರಾಜ್ಯ ಪ್ರೋತ್ಸಾಹಿಸುತ್ತಿದೆ. ಆದರೆ, ಸರ್ಕಾರ ಸಾರ್ವಜನಿಕರ ಒಳಿತಿಗೆ ಅಗತ್ಯವಿರುವ ಔಷಧಗಳ ಪೇಟೆಂಟ್ಗಳನ್ನು ತಳ್ಳಿ ಹಾಕಿ, ಕಡ್ಡಾಯ ಪರವಾನಗಿ(ಕಂಪಲ್ಸರಿ ಲೈಸೆನ್ಸಿಂಗ್,ಸಿಎಲ್) ನೀಡಬಹುದು. ಆದರೆ, ಶ್ರೀಮಂತ ದೇಶಗಳಿಂದ ಪ್ರತೀಕಾರ ಕ್ರಮದ ಭೀತಿಯಿಂದ ಈ ಸೌಲಭ್ಯ ಬಳಸಿಕೊಳ್ಳುತ್ತಿಲ್ಲ. ಸರ್ಕಾರ 2012ರಲ್ಲಿ ಬೇಯರ್ ಫಾರ್ಮಾಸ್ಯುಟಿಕಲ್ಸ್ ಉತ್ಪನ್ನವಾದ ಕಿಡ್ನಿ ಕ್ಯಾನ್ಸರ್ ಔಷಧ ನೆಕ್ಸಾವರ್ನ್ನು ಉತ್ಪಾದಿಸಲು ದೇಶಿ ಕಂಪನಿ ನ್ಯಾಟ್ಕೋ ಫಾರ್ಮಾಕ್ಕೆ ಕಡ್ಡಾಯ ಪರವಾನಗಿ ನೀಡಿತು. ಇದು ಇಂಥ ಮೊದಲ ಮತ್ತು ಕೊನೆಯ ಪ್ರಯತ್ನ. ಇದರಿಂದ ಮಾಸಿಕ 2.8 ಲಕ್ಷ ರೂ. ಇದ್ದ ಚಿಕಿತ್ಸೆ ವೆಚ್ಚ 8,800 ರೂ.ಗೆ ಕಡಿಮೆಯಾಯಿತು. ಬೇಯರ್ ಭಾರತೀಯ ಪೇಟೆಂಟ್ ಕಚೇರಿ, ಬಾಂಬೆ ಹೈಕೋರ್ಟ್ ಅಲ್ಲದೆ, ಸುಪ್ರೀಂ ಕೋರ್ಟ್ ಗೆ ವಿಶೇಷ ರಜಾ ಅರ್ಜಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಈ ದಿಕ್ಸೂಚಿ ತೀರ್ಪು ನಮಗೆ ಪಥದರ್ಶಕ ಆಗಬೇಕಿತ್ತು. ಬದಲಾಗಿ ಎನ್ಡಿಎ ಸರ್ಕಾರ ಔಷಧ ಕಂಪನಿಗಳ ಒತ್ತಡಕ್ಕೆ ಮಣಿದು ಪೇಟೆಂಟ್ ಕಾಯಿದೆಗೆ ಹಲವು ಬದಲಾವಣೆ ತಂದಿತು.
ಆದರೆ, ಕೇರಳದ ನಿವೃತ್ತ ಬ್ಯಾಂಕ್ ಉದ್ಯೋಗಿ ಸರೋಜಂ ರಾಧಾಕೃಷ್ಣನ್ ಸುಮ್ಮನಿರಲಿಲ್ಲ. ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಜೂನ್ 2022ರಲ್ಲಿ ಕೇರಳ ಹೈಕೋರ್ಟಿನಲ್ಲಿ ದಾವೆ ಹೂಡಿ, ತಾವು ನೊವಾರ್ಟಿಸ್ ಉತ್ಪನ್ನ ರಿಬೋಕ್ಲಿಸಿಬ್ ಬಳಸಬೇಕಿದ್ದು, ಅದಕ್ಕೆ ಮಾಸಿಕ 78,000 ರೂ. ಅಗತ್ಯವಿದೆ. ನಿವೃತ್ತರಾಗಿರುವ ತಮಗೆ ಇದನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ, ಸರ್ಕಾರ ಪೇಟೆಂಟ್ ಕಾಯಿ ದೆಯ ವಿಧಿ 92 ಹಾಗೂ 100ರಡಿ ಜನೆರಿಕ್ ಔಷಧ ಉತ್ಪಾದನೆಗೆ ಅನುಮತಿ ನೀಡಬೇಕು ಎಂದು ಅಹವಾಲು ಸಲ್ಲಿಸಿದರು. ಅವರು ಮೃತಪಟ್ಟರೂ, ಪ್ರಕರಣ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿ ದ್ದರಿಂದ ನ್ಯಾ.ವಿ.ಜಿ.ಅರುಣ್ ಅವರು ವಿಚಾರಣೆ ಮುಂದುವರಿಸಿದರಲ್ಲದೆ, ಅಮಿಕಸ್ ಕ್ಯೂರಿಯನ್ನು ನೇಮಿಸಿದರು. ಆದರೆ, ಸ್ತನ ಕ್ಯಾನ್ಸರ್ ರಾಷ್ಟ್ರೀಯ ತುರ್ತು ಅಲ್ಲ ಎಂದು ಕೇಂದ್ರ ಸರ್ಕಾರ ಕಡ್ಡಾಯ ಪರವಾನಗಿಯನ್ನು ನಿರಾಕರಿಸಿತು. ವಾಸ್ತವ ಏನೆಂದರೆ, ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಅತಿ ಸಾಮಾನ್ಯ ಕ್ಯಾನ್ಸರ್ ಹಾಗೂ ಹೆಚ್ಚು ಸಾವಿಗೆ ಕಾರಣವಾಗುತ್ತದೆ. 2022ರಲ್ಲಿ ದೇಶದಲ್ಲಿ 1.9 ಲಕ್ಷ ಪ್ರಕರಣಗಳು ದಾಖಲಾಗಿದ್ದು, 98,337 ಮೃತಪಟ್ಟಿದ್ದರು. ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳಿಂದ ವಿಸ್ತೃತ ಪ್ರತಿಕ್ರಿಯೆ ಕೇಳಿತು; ವರದಿ ಸಲ್ಲಿಸಿದ ಬಳಿಕ ಅಂತಿಮ ವಿಚಾರಣೆ ಜನವರಿ 21,2023ರಂದು ನಡೆಯಬೇಕಿತ್ತು; ಆದರೆ, ನಡೆಯಲಿಲ್ಲ. ಉತ್ಪಾದಕರು ಕುಣಿಕೆಯಿಂದ ತಪ್ಪಿಸಿಕೊಂಡರು. ಬಳಿಕ ಸರ್ಕಾರ ಪೇಟೆಂಟ್ ಅವಧಿ ಮುಗಿದ ಪರ್ಯಾಯ ಔಷಧ ವೊಂದನ್ನು ಪತ್ತೆ ಹಚ್ಚಿತಾದರೂ, ಅದು ಸೂಕ್ತವಾದುದಲ್ಲ ಎಂದು ಅಮಿಕಸ್ ಕ್ಯೂರಿ ತೋರಿಸಿಕೊಟ್ಟರು. ವಿಳಂಬದಿಂದ ಬೇಸತ್ತ ಸ್ವಯಂ ಸೇವಾ ಸಂಸ್ಥೆ(ಅಕ್ಸೆಸ್ ಟು ಮೆಡಿಸಿನ್ ಆಂಡ್ ಟ್ರೀಟ್ಮೆಂಟ್) ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಜುಲೈ 10,2026ರಂದು ಪತ್ರ ಬರೆಯಿತು; ʻಇದು ಮಹಿಳೆಯರ ಘನತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯ. ಪ್ರಕರಣವನ್ನು 57 ಬಾರಿ ಪಟ್ಟಿ ಮಾಡಲಾಗಿದೆ,ʼ ಎಂದು ಹೇಳಿತು. ಪ್ರತಿಯನ್ನು ಸುಪ್ರೀಂ ಕೋರ್ಟಿಗೆ ರವಾನಿಸಲಾಯಿತು. ʻಪ್ರಕರಣ ಬೇಗ ಇತ್ಯರ್ಥಪಡಿಸಬೇಕು; ಔಷಧ ಲಭ್ಯತೆಗೆ ಸಂಬಂಧಿಸಿದ ಮುಖ್ಯ ಪ್ರಶ್ನೆಯನ್ನು ತಾನು ಆನಂತರ ಕೈಗೆತ್ತಿಕೊಳ್ಳುತ್ತೇನೆ,ʼ ಎಂದು ಸುಪ್ರೀಂ ಕೋರ್ಟ್ ಜುಲೈ 19, 2026ರಂದು ಹೇಳಿತು.
ಸರ್ಕಾರದ ಜವಾಬ್ದಾರಿ: ಉತ್ತಮ ಗುಣಮಟ್ಟದ, ಪರಿಣಾಮಕಾರಿ ಔಷಧಗಳನ್ನು ಕೈಗೆ ಎಟುಕಬಹುದಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ಆರೋಗ್ಯವನ್ನು ಮೂಲ ಭೂತ ಹಕ್ಕು ಎಂದು ಪರಿಗಣಿಸಿದ್ದರೂ, ಔಷಧಗಳ ಬೆಲೆಗಳು ತಾರ್ಕಿಕವಾಗಿಲ್ಲ; ಕಂಪನಿಗಳ ನಿರಂಕುಶ ಪ್ರವೃತ್ತಿಯಿಂದ ದುಬಾರಿಯಾಗಿವೆ. ಜಾಗತಿಕ ಪರಿಸ್ಥಿತಿ ಕೂಡ ಹೀನಾಯಕರವಾಗಿದೆ. ಕೆಳ ಹಾಗೂ ಮಧ್ಯಮ ಆದಾಯದ ದೇಶಗಳ 200 ಕೋಟಿ ಜನರಿಗೆ ಜೀವರಕ್ಷಕ ಔಷಧಗಳು ಲಭ್ಯವಾಗುತ್ತಿಲ್ಲ. ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಹಾಗೂ ನಿಯಂತ್ರಣ ವ್ಯವಸ್ಥೆಯ ವೈಫಲ್ಯದಿಂದ ಆಫ್ರಿಕ ಮತ್ತಿ ತರ ದೇಶಗಳಲ್ಲಿ ಜನೆರಿಕ್ ಔಷಧಗಳು ಕೂಡ ಲಭ್ಯವಾಗುತ್ತಿಲ್ಲ.
ಶೇ.82ಕ್ಕೂ ಅಧಿಕ ಔಷಧಗಳು ಬೆಲೆ ನಿಯಂತ್ರಣದ ಹೊರಗಿದ್ದು, ಎಲ್ಲ ಔಷಧ ಹಾಗೂ ವಿವಿಧ ಸಂಯೋಜನೆಗಳನ್ನು ಬೆಲೆ ನಿಯಂತ್ರಣಕ್ಕೆ ಅಳವಡಿಸಬೇಕು. 6,000 ದಿಂದ 6,300 ನಿಗದಿತ ಔಷಧ ಸಂಯೋಜನೆ(ಎಫ್ಡಿಸಿ, ಫಿಕ್ಸೆಡ್ ಡೋಸ್ ಕಾಂಬಿನೇಷನ್)ಗಳಲ್ಲದೆ, ಅಸಂಖ್ಯಾತ ಅನುಮತಿ ಪಡೆಯದ ಇಲ್ಲವೇ ಅತಾರ್ಕಿಕ ಸಂಯೋಜನೆಗಳಿವೆ. ಇಂಥ ಅತಾರ್ಕಿಕ/ಅನಗತ್ಯ ಸಂಯೋಜನೆಗಳನ್ನು ನಿಷೇಧಿಸಬೇಕು. ಆಸ್ಪತ್ರೆಗಳು ಔಷಧಗಳ ಖರೀದಿ ದರ ಮತ್ತು ರೋಗಿಗೆ ವಿಧಿಸಿದ ದರವನ್ನು ಬಿಲ್ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಇದರಿಂದ ಒಂದುವೇಳೆ ವ್ಯತ್ಯಾಸವಿದ್ದರೆ, ರೋಗಿಗಳು ಮತ್ತು ವಿಮಾ ಕಂಪನಿಗಳು ಪ್ರಶ್ನಿಸಲು ಸಾಧ್ಯವಾಗುತ್ತದೆ. ಔಷಧ ಬೆಲೆ ನಿಯಂತ್ರಣ ಆದೇಶದಲ್ಲಿ ವಿಭಾಗವಾರು ದರ ಮಿತಿ ಅಳವಡಿಸಿ, ತಾರ್ಕೀಕರಣಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಕೊರತೆಯಿಂದ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಆಧರಿಸಿದ್ದಾರೆ. ಆದ್ದರಿಂದ, ಸಾರ್ವಜನಿಕ ಆಸ್ಪತ್ರೆಗಳನ್ನು ಸಬಲಗೊಳಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಶಿಫಾರಸಿನಂತೆ ಹೆಚ್ಚು ಬೆಲೆಯ ಔಷಧಗಳಿಗೆ ಕಡಿಮೆ ಲಾಭಾಂಶ ನಿಗದಿಗೊಳಿಸಬೇಕು. ಬೆಲೆ ನಿಯಂತ್ರಣ ಯಶಸ್ವಿಯಾಗಬೇಕೆಂದರೆ, ಅನುಷ್ಠಾನ ಬಿಗಿಯಾಗಿರಬೇಕು.
ಇದೆಲ್ಲದರ ಜೊತೆಗೆ, ಬಹುರಾಷ್ಟ್ರೀಯ ಕಂಪನಿಗಳನ್ನು ಹಣಿಯಲು ರಾಜಕೀಯ ಇಚ್ಛಾಶಕ್ತಿ ಬೇಕಿದೆ. ಚೆಂಡು ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅಂಗಳದಲ್ಲಿದೆ.

