ಡೊಂಗ್ರಿಯಾ ಕೊಂಡ್ ಸಮುದಾಯದ ನಾಯಕ ಲಾಡಾ ಸಿಕಾಕಾ ಬಂಧನ, ಗಣಿಗಳು ಮತ್ತು ಖನಿಜಗಳು(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ 2026ಕ್ಕೆ ಸಂಸತ್ತಿನಲ್ಲಿ ತರಾತುರಿಯಲ್ಲಿ ಅಂಗೀಕಾರ ಹಾಗೂ ಸೆಪ್ಟೆಂಬರ್ 27ರಂದು ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಮಾಝಿ ಮತ್ತು ವೇದಾಂತ ಕಂಪನಿ ಮುಖ್ಯಸ್ಥ ಅನಿಲ್ ಅಗರ್ವಾಲ್ ಹಸ್ತಲಾಘವ-ಇವೆಲ್ಲವೂ ಸರಪಳಿಯ ಬಿಡಿ ಬಿಡಿ ಕೊಂಡಿಗಳು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ತಮ್ಮ ನೆಲದಲ್ಲಿ ಗಣಿಗಾರಿಕೆಯನ್ನು ವಿರೋಧಿಸುತ್ತಿರುವ ಬುಡಕಟ್ಟು ಜನಾಂಗದವರನ್ನು ಹಣಿಯುವ ಪ್ರಕ್ರಿಯೆಯ ಭಾಗ.
ಎಂಎಂಡಿಆರ್ ತಿದ್ದುಪಡಿ ಕಾಯಿದೆ 2026ನ್ನು ಆಗಸ್ಟ್ 12, 2026ರಂದು ಲೋಕಸಭೆಯಲ್ಲಿ 5 ನಿಮಿಷ ಹಾಗೂ ಮಾರನೇ ದಿನ ರಾಜ್ಯಸಭೆಯಲ್ಲಿ 50 ನಿಮಿಷದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ-ಕೋಲಾ ಹಲದ ನಡುವೆಯೇ ಅಂಗೀಕರಿಸಲಾಯಿತು. ಮಸೂದೆಯನ್ನು ಪರಿಶೀಲನೆಗೆ ಸಂಸದೀಯ ಸ್ಥಾಯಿ ಸಮಿತಿಗೆ ಕಳಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ತಳ್ಳಿಹಾಕಿತು. ಅನಿಯಂತ್ರಿತ ಗಣಿಗಾರಿಕೆ ಹಾಗೂ ರಾಜ್ಯಗಳು ವಿಧಿಸುವ ತೆರಿಗೆಯಲ್ಲಿ ಏಕರೂಪತೆ ಇಲ್ಲದ್ದರಿಂದ ನಷ್ಟವಾಗುತ್ತಿದೆ. ಖನಿಜಗಳ ಬೆಲೆ ಹೆಚ್ಚಳದಿಂದ ಉದ್ಯಮ ಹಾಗೂ ಗ್ರಾಹಕರಿಗೆ ಬರೆ ಬೀಳುತ್ತಿದೆ. ಮಸೂದೆಯು ಖನಿ ಜಗಳ ಮೇಲಿನ ತೆರಿಗೆಯನ್ನು ತಾರ್ಕಿಕ, ಸಮರೂಪಗೊಳಿಸುತ್ತದೆ ಎಂದು ತಿದ್ದುಪಡಿಯನ್ನು ಸರ್ಕಾರ ಸಮರ್ಥಿಸಿಕೊಂಡಿತು. ಆದರೆ, ನಿರ್ದಿಷ್ಟ ಉದ್ಯಮಿಗೆ ನೆರವಾಗಲು ತಿದ್ದುಪಡಿ ಮಸೂದೆಯನ್ನು ತರಲಾಗಿದೆ ಎಂದು ಪ್ರತಿಪಕ್ಷಗಳು ದೂರಿದವು.
ಏನು ತಿದ್ದುಪಡಿ?: ದೇಶದಲ್ಲಿ ಕಬ್ಬಿಣದ ಅದಿರು, ಬಾಕ್ಸೈಟ್, ಮ್ಯಾಂಗನೀಸ್, ಕ್ರೋಮೈಟ್, ತಾಮ್ರ, ಸತು, ಸೀಸ, ಸುಣ್ಣಕಲ್ಲು, ಲಿಗ್ನೈಟ್, ಚಿನ್ನದ ನಿಕ್ಷೇಪ ಇದ್ದು, ಬಹಳ ಮುಖ್ಯವಾದ ಖನಿಜ (ಲಿಥಿ ಯಂ, ಕೋಬಾಲ್ಟ್, ನಿಕ್ಕಲ್, ಗ್ರಾಫೈಟ್, ನಿಯೋಡೈನಿಯಂ, ಸಿಲಿಕಾನ್, ಜರ್ಮೇನಿಯಂ, ಗಾಲಿಯಂ ಇತ್ಯಾದಿ)ಗಳಿಗೆ ಆಮದನ್ನು ಅವಲಂಬಿಸಿದೆ. ಸುಪ್ರೀಂ ಕೋರ್ಟ್ 1989ರಲ್ಲಿ ʻರಾಯಧನ ಎನ್ನು ವುದು ತೆರಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ಗಣಿಗಾರಿಕೆ ಮೇಲೆ ಹೆಚ್ಚುವರಿ ಸುಂಕ ಇಲ್ಲವೇ ತೆರಿಗೆ ವಿಧಿಸುವ ಶಾಸನಾತ್ಮಕ ಸಮರ್ಥತೆ ಇಲ್ಲʼ ಎಂದು ತೀರ್ಪು ನೀಡಿತ್ತು. ಆದರೆ, 2024ರಲ್ಲಿ ಈ ತೀರ್ಪ ನ್ನು ಬದಲಿಸಿದ 9 ನ್ಯಾಯಾಧೀಶರ ಪೀಠವು ರಾಜ್ಯಗಳಿಗೆ ಖನಿಜ ಹಾಗೂ ಖನಿಜಭರಿತ ಭೂಮಿ ಮೇಲೆ ತೆರಿಗೆ ವಿಧಿಸುವ ಹಕ್ಕು ಇದೆ ಎಂದು ಹೇಳಿತು. ಏಪ್ರಿಲ್ 1,2005 ರಿಂದ ಬಾಕಿ ಸಂಗ್ರಹಿಸಲು ಅನುಮತಿ ನೀಡಿತು. ಒಕ್ಕೂಟ ತತ್ವಕ್ಕೆ ಪೂರಕವಾಗಿದ್ದ ಈ ತೀರ್ಪಿನಿಂದ ರಾಜ್ಯಗಳಿಗೆ ಆದಾಯ ಮೂಲವೊಂದು ದೊರಕಿತು. ಆದರೆ, 2026ರ ತಿದ್ದುಪಡಿ ಕಾಯಿದೆ ಮತ್ತೆ ಕೇಂದ್ರಕ್ಕೆ ಏಕಸ್ವಾಮ್ಯ ನೀಡಿದೆ.
2026ರ ತಿದ್ದುಪಡಿ ಮಸೂದೆಗೆ ಆಗಸ್ಟ್ 17, 2026ರಂದು ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಹೊಸ ಕಾಯಿದೆಯು, * ರಾಜ್ಯಗಳು ಖನಿಜದ ಹಕ್ಕುಗಳು ಹಾಗೂ ಖನಿಜಭರಿತ ಭೂಮಿ ಮೇಲೆ ಯಾವುದೇ ತೆರಿಗೆ, ಸುಂಕ ಇಲ್ಲವೇ ಇನ್ಯಾವುದೇ ರೀತಿಯ ಶುಲ್ಕವನ್ನು ವಿಧಿಸುವಂತಿಲ್ಲ * ಪ್ರಮಾಣ, ಗುಣಮಟ್ಟ, ಮೌಲ್ಯ, ರಾಯಧನ ಅಥವಾ ಇತರ ಆಧಾರಗಳ ಅನ್ವಯ ಸುಂಕ ವಿಧಿಸಲಾಗುತ್ತದೆ * ರಾಜ್ಯಗಳು ಕೇಂದ್ರದ ಶರತ್ತು ಇಲ್ಲವೇ ನಿರ್ಬಂಧಗಳನ್ನು ಅನುಸರಿಸಿ ತೆರಿಗೆ ವಿಧಿಸಬಹುದು * ರಾಜ್ಯಗಳು ಹೇರುವ ಇಂಥ ಸುಂಕದ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರಕ್ಕೆ ಇರಲಿದೆ * 2005ರಿಂದ ಬಾಕಿ ಉಳಿದ ತೆರಿಗೆಯನ್ನು ಸಂಗ್ರಹಿಸುವುದನ್ನು ನಿಷೇಧಿಸಿದೆ.
ರಾಜ್ಯಗಳಿಂದ ಪ್ರತಿರೋಧ: ದೇಶದ ಖನಿಜ ಸಂಪತ್ತಿನಲ್ಲಿ ಶೇ.44ರಷ್ಟು ಇರುವ ಒಡಿಷಾ ಹಾಗೂ ಸಾಕಷ್ಟು ಆದಾಯ ಕಳೆದುಕೊಳ್ಳುವ ಜಾರ್ಖಂಡದಲ್ಲಿ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು ನಡೆದವು. ಒಡಿಷಾ ವಾರ್ಷಿಕ ಅಂದಾಜು 12,000 ಕೋಟಿ ರೂ. ಆದಾಯ ಮತ್ತು 1 ಲಕ್ಷ ಕೋಟಿ ರೂ. ಬಾಕಿ ಮೊತ್ತವನ್ನು ಕಳೆದುಕೊಳ್ಳಲಿದೆ. ಜಾರ್ಖಂಡ ವಾರ್ಷಿಕ 11,000ದಿಂದ 13,000 ಕೋಟಿ ರೂ. ಆದಾಯ ಕಳೆದುಕೊಳ್ಳಲಿದೆ. ಒಡಿಷಾದಲ್ಲಿ ವಿಧಾನಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದು, ಪ್ರತಿಪಕ್ಷ ಬಿಜು ಜನತಾ ದಳ ಸೆ.28ರಂದು ವಿಧಾನಸೌಧದ ಎದುರು ಪ್ರತಿಭಟಿಸಿತು ಮತ್ತು ಮಾರನೇ ದಿನ ಇಂಡಿಯಾ ಒಕ್ಕೂಟ ಘೇರಾವೋ ನಡೆಸಿತು. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ಹೇಳಿದವು. ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಮಸೂದೆಯು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದ್ದು, ಖನಿಜ-ಭೂಮಿ ಮೇಲಿನ ರಾಜ್ಯದ ಹಕ್ಕುಗಳು ಹಾಗೂ ಮಾಲೀಕತ್ವವನ್ನು ಕಿತ್ತುಕೊಳ್ಳುತ್ತದೆ ಎಂದು ದೂರಿದ್ದಾರೆ. ಜಾರ್ಖಂಡದ ಮುಖ್ಯಮಂತ್ರಿ ಶಿಬು ಸೊರೆನ್, ತೆರಿಗೆ ಮತ್ತು ರಾಯಧನ ಸಂಗ್ರಹದ ಮೇಲಿನ ನಿರ್ಬಂಧಗಳಿಂದಾಗಿ ಅಭಿವೃದ್ಧಿ ಹಾಗೂ ಉಜನಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆ ಉಂಟಾಗಲಿದೆ ಎಂದು ಹೇಳಿದ್ದಾರೆ. ʻಮಸೂದೆ ಖನಿಜಗಳು ಹಾಗೂ ಖನಿಜಭರಿತ ಭೂಮಿ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸಲಿದೆ; ಇದು ಒಕ್ಕೂಟ ತತ್ವಕ್ಕೆ ವಿರುದ್ಧ ನಡೆ. ಮಸೂದೆಯನ್ನು ಮರುಪರಿಶೀಲಿಸಬೇಕು ಹಾಗೂ ರಾಜ್ಯಗಳೊಟ್ಟಿಗೆ ಚರ್ಚೆ ನಡೆಸಬೇಕುʼ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಆಗಸ್ಟ್ 18ರಂದು ಪ್ರಧಾನಿಗೆ 7 ಪುಟಗಳ ಪತ್ರ ಬರೆದಿದ್ದಾರೆ. ಜುಲೈ 2024ರ ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ರಾಜ್ಯ ಪ್ರತ್ಯೇಕ ಮಸೂದೆ ರೂಪಿಸಿತ್ತು. ವಾರ್ಷಿಕ ಆದಾಯ ನಷ್ಟವಲ್ಲದೆ, ಹಳೆ ಬಾಕಿ ವಸೂಲಿಗೆ ನಿಷೇಧ ಹೇರಿರುವುದರಿಂದ, 21,000 ಕೋಟಿ ರೂ.(ಉಳಿಕೆ ತೆರಿಗೆ 9,000 ಕೋಟಿ+ಪೂರ್ವಾ ನ್ವಯ ತೆರಿಗೆ ಬಾಕಿ 12,000 ಕೋಟಿ) ಖೋತಾ ಆಗಲಿದೆ. ರಾಜ್ಯ ದೇಶದ ಅತಿ ದೊಡ್ಡ ಕಬ್ಬಿಣದ ಅದಿರು ಉತ್ಪಾದಕನಾಗಿದ್ದು, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ಎಂಡಿಸಿ), ವಾರ್ಷಿಕ 13-14 ದಶಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದಿಸುತ್ತದೆ.
2014ರ ಬಳಿಕ ರಾಜ್ಯಗಳು ಕಲ್ಲಿದ್ದಲು ಸೇರಿದಂತೆ ಖನಿಜಗಳ ಉತ್ಪಾದನೆಯಿಂದ ವಾರ್ಷಿಕ 7 ಲಕ್ಷ ಕೋಟಿ ರೂ. ಸಂಗ್ರಹಿಸುತ್ತಿದ್ದವು. ಇದರಲ್ಲಿ ಶೇ.90 ರಷ್ಟು ಪಾಲು ಅವುಗಳಿಗೆ ಸಿಗುತ್ತಿತ್ತು. 2025- 26ರಲ್ಲಿ ಒಟ್ಟು ಒಟ್ಟು ಖನಿಜ ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು 1.14 ಲಕ್ಷ ಕೋಟಿ ರೂ. ಇತ್ತು. 2015ರ ಬಳಿಕ 1,200 ಗಣಿಗಳಿಂದ ರಾಜ್ಯಗಳು ಸ್ವೀಕರಿಸಿದ ರಾಯಧನ 2.32 ಲಕ್ಷ ಕೋಟಿ ರೂ. 2023-24ರಲ್ಲಿ ಗಣಿ ಆದಾಯದಲ್ಲಿ ಕರ್ನಾಟಕ ಶೇ.6, ಒಡಿಷಾ ಶೇ.60 ಮತ್ತು ಚತ್ತೀಸಗಢ ಶೇ. 12 ಪಾಲು ಹೊಂದಿದ್ದವು. ಕೇಂದ್ರ ಗಣಿ ಸಚಿವ ಜಿ.ಕಿಶನ್ ರೆಡ್ಡಿ, ಗಣಿ ಆದಾಯದಲ್ಲಿ ರಾಜ್ಯಗಳ ಪಾಲು 2014-15ರಲ್ಲಿದ್ದ ಶೇ. 65ರಿಂದ ಈಗ ಶೇ.85ಕ್ಕೆ ಮತ್ತು ಕಲ್ಲಿದ್ದಲು ಆದಾಯದಲ್ಲಿ ಪಾಲು ಶೇ.51ರಿಂದ ಶೇ.95ಕ್ಕೆ ಹೆಚ್ಚಿದೆ. ಒಟ್ಟು ಖನಿಜ ಆದಾಯದಲ್ಲಿ ಕೇಂದ್ರಕ್ಕೆ ಸಿಗುತ್ತಿರುವುದು ಶೇ.11 ಮಾತ್ರ. ತಿದ್ದುಪಡಿ ಮುಖ್ಯ ಖನಿಜಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ 49 ಅಪ್ರಧಾನ ಖನಿಜಗಳನ್ನು ರಾಜ್ಯಗಳಿಗೆ ಬಿಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಾಸ್ತವ ಏನೆಂದರೆ, ಮಸೂದೆ ಯು ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡಿದ್ದು, ಅವುಗಳ ಆದಾಯಕ್ಕೆ ಕನ್ನ ಹಾಕಿದೆ. ಸಂಸತ್ತಿನಲ್ಲಿ ಸಂಖ್ಯಾಬಲ ಇರುವುದರಿಂದ ಹಾಗೂ ಸುಗ್ರೀವಾಜ್ಞೆಗಳ ಮೂಲಕ ಮಸೂದೆಗಳನ್ನು ಹೇರಲಾಗುತ್ತಿದೆ. ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ.
ಗಣಿಗಾರಿಕೆ ಸುರಳೀತಗೊಳಿಸುವಿಕೆ ಪ್ರಯತ್ನಗಳು: ದುರಂತವೆಂದರೆ, ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಮಧ್ಯ ಭಾರತದಲ್ಲಿ ಖನಿಜ ಸಂಪನ್ಮೂಲ ಕ್ರೋಡೀಕೃತವಾಗಿದೆ. ಇದರಿಂದ, ಕಾಡುಗಳನ್ನು ಉದ್ಯಮಕ್ಕೆ ತೆರೆಯುವಿಕೆ ತೀವ್ರಗೊಂಡಿದೆ. 2020ರಲ್ಲಿ ಗಣಿಗಳ ವರ್ಗಾವಣೆ, ಸಂಯೋಜನೆಯನ್ನು ಸುಲಭಗೊಳಿಸಲಾಯಿತು. 2021ರಲ್ಲಿ ಖಾಸಗಿ ಸಂಸ್ಥೆಗಳಿಗೆ ಖನಿಜ ಶೋಧನೆಗೆ ಅವಕಾಶ ನೀಡಿ, ಶೋಧನಾ ಪರವಾನಿಗಿಯನ್ನು ಜಾರಿಗೊಳಿಸಲಾಯಿತು. 2023ರಲ್ಲಿ ಪ್ರಮುಖ ಖನಿಜಗಳು ಹಾಗೂ ದೇಶದ ಭದ್ರತೆ, ಸೈನ್ಯ ಕಾರ್ಯಾಚರಣೆ ಮತ್ತು ಉನ್ನತ ತಂತ್ರಜ್ಞಾನ ಸಂಸ್ಥೆಗಳಿಗೆ ಅಗತ್ಯವಾದ ಖನಿಜ(ಲಿಥಿಯಂ, ಕೋಬಾಲ್ಟ್, ಟಂಗ್ಸ್ಟನ್/ಟ್ಯಾಂಟಲಂ, ಜರ್ಮೇನಿಯಂ/ಗಾಲಿಯಂ, ರೇರ್ ಅರ್ಥ್ ಮೂಲಧಾತುಗಳು)ಗಳ ಹರಾಜು ಅಧಿಕಾರವನ್ನು ಕೇಂದ್ರಕ್ಕೆ ನೀಡಲಾಯಿತು. ಅದೇ ವರ್ಷ ಗಣಿಗಾರಿಕೆ ಭೋಗ್ಯಕ್ಕೆ ಹೆಚ್ಚುವರಿ ಖನಿಜಗಳನ್ನು ಸೇರ್ಪಡೆಗೊಳಿಸಲಾಯಿತು. 2025ರಲ್ಲಿ ಮುಚ್ಚಿದ ಗಣಿಗಳಿಂದ ಖನಿಜದ ಮಾರಾಟದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಯಿತು. ಆದರೆ, 2026 ರ ತಿದ್ದುಪಡಿ ವಿವಾದಾತ್ಮಕ ಮತ್ತು ಆದಿವಾಸಿಗಳ ಮೇಲಿನ ನೇರ ದಾಳಿ.
ವೇದಾಂತ ಈ ಹಿಂದೆಯೂ ಒಡಿಷಾದ ನಿಯಾಮಗಿರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಪ್ರಯತ್ನ ನಡೆಸಿತ್ತು. ನಿಯಾಮಗಿರಿಯ ಡೊಂಗ್ರಿಯ ಕೊಂಡ ಮತ್ತು ಮಾಝಿ ಕೊಂಡರು ನಿಯಾಮಗಿರಿ ಬೆಟ್ಟ ಹಾಗೂ ನಿಯಾಮ್ ರಾಜನನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಅಕ್ಟೋಬರ್ 2004ರಲ್ಲಿ ಒಡಿಷಾ ಗಣಿಗಾರಿಕೆ ಸಂಸ್ಥೆ(ಒಎಂಸಿ) ಹಾಗೂ ವೇದಾಂತ ರಿಸೋರ್ಸಸ್ನ ಅಂಗಸಂಸ್ಥೆಯಾದ ಸ್ಟರ್ಲೈಟ್ ಇಂಡಸ್ಟ್ರೀಸ್ ಒಪ್ಪಂದ ಮಾಡಿಕೊಂಡು, 70 ದಶಲಕ್ಷ ಟನ್ ಬಾಕ್ಸೈಟ್ ಗಣಿಗಾರಿಕೆಗೆ ಮುಂದಾಗಿದ್ದವು. ಇದರಿಂದ 1,660 ಎಕರೆ ಸಮೃದ್ಧ ಕಾಡು ನಾಶವಾಗುತ್ತಿತ್ತು. ಒಪ್ಪಂದದ ಬೆನ್ನ ಹಿಂದೆಯೇ ಪ್ರತಿ ಭಟನೆ ಆರಂಭವಾಯಿತು. ಸುಪ್ರೀಂ ಕೋರ್ಟ್ ಏಪ್ರಿಲ್ 18, 2013ರಂದು, ʻಆದಿವಾಸಿ ಸಮುದಾಯಗಳಿಗೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ. ಗ್ರಾಮಸಭೆಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಹಕ್ಕುಗಳಿಗೆ ಗಣಿಗಾರಿಕೆಯಿಂದ ಧಕ್ಕೆ ಆಗಲಿದೆಯೇ ಎಂಬುದನ್ನು ನಿರ್ಧರಿಸಬೇಕುʼ ಎಂದು ತೀರ್ಪು ನೀಡಿತು (ಒಎಂಸಿ ವಿ/ಎಸ್ ಪರಿಸರ ಮತ್ತು ಅರಣ್ಯ ಮಂತ್ರಾಲಯ). ಡೊಂಗ್ರಿಯಾ ಕೊಂಡ್ ಮಾತ್ರವಲ್ಲದೆ, ಕುಟಿಯಾ ಕೊಂಡ್, ದೇಸಿ ಕೊಂಡ್ ಮತ್ತು ಪಶುಪಾಲಕ ಸಮುದಾಯಗಳ ಸಾಂಸ್ಕೃತಿಕ-ಧಾರ್ಮಿಕ ಹಕ್ಕು ಗಳನ್ನು ಎತ್ತಿಹಿಡಿಯಿತು. 112 ಹಳ್ಳಿಗಳ ವ್ಯಾಪ್ತಿಯಲ್ಲಿನ ಎಲ್ಲ 12 ಗ್ರಾಮಸಭೆಗಳು ಜುಲೈ-ಆಗಸ್ಟ್ 2013ರ ನಡುವೆ ಜನಾಭಿಪ್ರಾಯ ಸಂಗ್ರಹ ಮಾಡಿ, ಗಣಿಗಾರಿಕೆ ವಿರುದ್ಧ ಮತ ಚಲಾಯಿಸಿದವು. ವೇದಾಂತ ಸಂಸ್ಕರಣೆ ಘಟಕ ಕಾರ್ಯ ಆರಂಭಿಸಿದರೂ, ಕಾಲ್ಕೀಳಬೇಕಾಯಿತು. ಹೋರಾಟದ ಮುಂದಾಳತ್ವ ವಹಿಸಿದ್ದ ಪ್ರಫುಲ್ಲ ಸಮಂತರ ಅವರಿಗೆ 2017ರಲ್ಲಿ ಪ್ರತಿಷ್ಠಿತ ಗೋಲ್ಡ್ಮನ್ ಪರಿಸರ ಪುರಸ್ಕಾರ ಸಂದಿತು.
ತಿದ್ದುಪಡಿ ಕಾಯಿದೆಯಿಂದ ಅವಕಾಶ: ಮರುಪ್ರವೇಶಕ್ಕೆ ಕಾಯುತ್ತಿದ್ದ ವೇದಾಂತಕ್ಕೆ 2026ರ ತಿದ್ದುಪಡಿ ಕಾಯಿದೆ ಅವಕಾಶ ಒದಗಿಸಿದೆ. ನಿಯಾಮಗಿರಿಯ 112 ಹಳ್ಳಿಗಳ ಒಕ್ಕೂಟ ʻನಿಯಾಮಗಿರಿ ಸುರಕ್ಷಾ ಸಮಿತಿ'(ಎನ್ಎಸ್ಎಸ್) ಮುಖಂಡ ಲಾಡಾ ಸಿಕಾಕಾ ಅವರನ್ನು ಸೆಪ್ಟೆಂಬರ್ 10ರಂದು ಬಂಧಿಸಲಾಯಿತು. ಇದರ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ಮತ್ತು ಅನಿಲ್ ಅಗರ್ವಾಲ್ ಭೇಟಿ ನಡೆಯಿತು. ಕಲಹಂಡಿ ಮತ್ತು ರಾಯಗಢ ಜಿಲ್ಲೆ ಗಳಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ನವೆಂಬರ್ ವೇಳೆಗೆ ಬಗೆಹರಿಯಬಹುದು ಎಂದು ಅಗರ್ವಾಲ್ ಸುಳಿವು ನೀಡಿದರು. ಆದರೆ, ಭಾರಿ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಆದಿವಾಸಿಗಳು ಕಲ್ಯಾಣಸಿಂಗ್ಪುರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ʻಲಾಡಾ ಸಿಕಾಕಾ ಅವರನ್ನು ಬಿಡುಗಡೆ ಮಾಡಿ’ ಮತ್ತು ʻವೇದಾಂತ, ವಾಪಸ್ ಹೋಗಿ!’ ಎಂದು ಘೋಷಣೆ ಕೂಗಿದರು. ಐದನೇ ಪರಿಶಿಷ್ಟದ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದ ಮೂಲವಾಸಿಗಳು ಭೂಮಿ, ಅರಣ್ಯ ಮತ್ತು ಸ್ವಯಂ ಆಡಳಿತದ ಹಕ್ಕು ಕೇಳುತ್ತಿದ್ದಾರೆ; ಭದ್ರತಾ ಪಡೆಗಳ ನೆರಳಿನಲ್ಲಿ ದೀರ್ಘಕಾಲದಿಂದ ಬದು ಕುತ್ತಿರುವ ಸಮುದಾಯಗಳ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದಂತಹ ಗಂಭೀರ ಆರೋಪ ಹೊರಿಸಲಾಗುತ್ತಿದೆ; ರಾಜಕೀಯ ಭಿನ್ನಾಭಿಪ್ರಾಯ ಮತ್ತು ಸಮುದಾಯದ ಹಕ್ಕುಗಳ ಕೋರಿಕೆ ಯನ್ನು ರಾಷ್ಟ್ರೀಯ ಭದ್ರತೆಗೆ ತಳಕು ಹಾಕಲಾಗುತ್ತಿದೆ. ಸುಪ್ರೀಂ ಕೋರ್ಟ್ನ 2013ರ ಐತಿಹಾಸಿಕ ತೀರ್ಪಿಗೆ ಮೊದಲು ಮತ್ತು ಆನಂತರ ಗಣಿಗಾರಿಕೆ ಸಂಸ್ಥೆಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಭೂಮಿ, ಅರಣ್ಯ-ಪರ್ವತ ಮತ್ತು ಆರಾಧ್ಯ ದೈವಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಜನಪರ ಚಳವಳಿಯನ್ನು ಅಪರಾಧೀಕರಣಗೊಳಿಸಲಾಗಿದೆ. ಲಾಡಾ ಸಿಕಾಕಾ ಅವರನ್ನು ಯುಎಪಿಎ(ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ)ಅಡಿ ಮಾವೋವಾದಿ ಸಂಘಟನೆಯ ಸದಸ್ಯ ಎಂದು ಹಣೆಪಟ್ಟಿ ಅಂಟಿಸಿ, ಬಂಧಿಸಲಾಗಿದೆ. 2013ರ ಬಳಿಕ ನಿಯಾಮಗಿರಿ ನಿರಂತರ ಕಣ್ಗಾವಲಿಗೆ ಒಳಪಟ್ಟಿದೆ. ಕೇಂದ್ರ ಗೃಹ ಸಚಿವಾಲಯ ತನ್ನ ವಾರ್ಷಿಕ ವರದಿಯಲ್ಲಿ ನಿಯಾಮಗಿರಿ ಸುರಕ್ಷಾ ಸಮಿತಿಯ ಚಟುವಟಿಕೆಗಳಿಗೆ ಮಾವೋವಾದಿಗಳು ʻಮಾರ್ಗದರ್ಶನ’ ಮಾಡುತ್ತಾರೆ ಎಂದು ಹೇಳಿದೆ. ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಕಾಕಾ ಮೇಲಿನ ಯುಎಪಿಎ ಆರೋಪ ಕೈಬಿಡಲಾಯಿತು. ಲಂಜೀಗಢ ಅಲ್ಯುಮಿನಾ ರಿಫೈನರಿ ವಿರುದ್ಧದ ಪ್ರತಿಭಟನೆ ವೇಳೆ ಲಾಠಿಚಾರ್ಜ್ ನಿಂದ ಒಬ್ಬ ಕಾರ್ಮಿಕ ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಘಟನೆ ಬಳಿಕ ಆಲ್ ಇಂಡಿಯಾ ಕೋಆರ್ಡಿನೇಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ಆರ್ಗನೈಸೇಶನ್ (ಸಿಆರ್ಡಿಒ) ಮತ್ತು ಒಡಿಶಾ ಮೂಲದ ಗಣತಾಂತ್ರಿಕ ಅಧಿಕಾರ ಸುರಕ್ಷಾ ಸಂಘಟನ್(ಜಿಎಎಸ್ಎಸ್)ನ 16 ಸದಸ್ಯರ ತಂಡ ಅಧ್ಯಯನ ನಡೆಸಿತು. ಜುಲೈ 2019ರ ತನ್ನ ವರದಿಯಲ್ಲಿ 2013ರ ನಂತರ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿದೆ ಎಂದು ಹೇಳಿದೆ. ಜನಪರ ಸಂಘಟನೆಗಳ ಒಕ್ಕೂಟವಾದ ಕನ್ಸರ್ನ್ಡ್ ಸಿಟಿಜನ್ಸ್ ಕಮಿಟಿ(ಸಿಸಿಸಿ), ʻಸಿಕಾಕಾ, ಲಿಂಗರಾಜ ಆಜಾದ್ ಮತ್ತು ಹಿರಾಮಲ್ ನಾಯಕ್ ಬಂಧನ ಅಥವಾ ಕಾಂತಮಲ್ ಮತ್ತು ತಲಾಂಪದಾರ್ ಗ್ರಾಮಗಳ ಮೇಲಿನ ದಿಗ್ಬಂಧನ ಪ್ರತ್ಯೇಕ ಅಥವಾ ಬಿಡಿ ಘಟನೆಗಳಲ್ಲ; ಬದಲಾಗಿ, ಒಡಿಶಾದಲ್ಲಿ ಹೇಗಾದರೂ ಸರಿ, ಗಣಿಗಾರಿಕೆ ಮತ್ತು ಕೈಗಾರಿಕೀಕರಣದ ಜಾರಿಗೆ ಕ್ರಿಮಿನಲ್ ನ್ಯಾಯವ್ಯವಸ್ಥೆಯನ್ನು ಬಳಸಲಾಗುತ್ತಿದೆʼ ಎಂದು ಹೇಳಿತು. ಇದು ನಿಜ ಕೂಡ; ಸರ್ಕಾರ ಪೂರ್ವ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಬಾಕ್ಸೈಟ್ ಗಣಿಗಳನ್ನು ಒಂದೊಂದಾಗಿ ಕಂಪನಿಗಳಿಗೆ ಗುತ್ತಿಗೆ ನೀಡುತ್ತಿದೆ; ನಂದಾಪುರ ಬ್ಲಾಕ್ನಲ್ಲಿರುವ ಬಾಲ್ದಾ ಬಾಕ್ಸೈಟ್ ಗಣಿಯನ್ನು ಅದಾನಿ, ನಾರಾಯಣಪಟ್ಟಣ ಬ್ಲಾಕ್ನಲ್ಲಿರುವ ಕರ್ನ್ಪೋಡಿ ಕೊಂಡ ಗಣಿ ಮತ್ತು ಥುವಾಮುಲ್ ರಾಂಪುರದ ಕಾರ್ಲಾಪಟ್ ಗಣಿಯನ್ನು ವೇದಾಂತ ಹಾಗೂ ಪಟ್ಟಂಗಿ ಸೆರುಬಂಧ ಗಣಿಯನ್ನು ನ್ಯಾಲ್ಕೋ(ನ್ಯಾಷನಲ್ ಅಲ್ಯುಮಿನಿಯಂ ಕಂಪನಿ)ಗೆ ನೀಡಲಾಗಿದೆ. ರಾಯಗಢ ಜಿಲ್ಲೆಯ ಕಾಶಿಪುರ-ಟಿಕ್ರಿ ಪ್ರದೇಶದಲ್ಲಿನ 4 ಬಾಕ್ಸೈಟ್ ಗಣಿಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಒಡಿಶಾದಲ್ಲಿ 1.10 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಅದಾನಿ ಯೋಜನೆಗೆ ಭಾರಿ ಉತ್ತೇಜನ ನೀಡಲಾಗುತ್ತಿದೆ.
ನಿಯಾಮಗಿರಿಯ ಜನ ಎರಡು ರೀತಿಯ ಹೋರಾಟ ನಡೆಸುತ್ತಿದ್ದಾರೆ; ಮೊದಲನೆಯದು, ಮಾವೋವಾದಿ ಕಾರ್ಯಕರ್ತ, ಮಾವೋವಾದಿಗಳ ಬಗ್ಗೆ ಸಹಾನುಭೂತಿ ಇರುವವರು ಅಥವಾ ನೆರವು ನೀಡುವವರು ಎಂಬ ಹಣೆಪಟ್ಟಿ ವಿರುದ್ಧ ಹೋರಾಟ; ಮತ್ತು ಎರಡನೆಯದಾಗಿ, ನಿಯಾಮಗಿರಿಗೆ ಬೆದರಿಕೆ ಒಡ್ಡಿರುವ ವೇದಾಂತ ಕಂಪನಿ ವಿರುದ್ಧ ಹೋರಾಟ. ಸ್ಥಳೀಯ ಸಮುದಾಯಗಳು, ವಿಶೇಷವಾಗಿ ದಲಿತ-ಆದಿವಾಸಿ ಗುಂಪುಗಳು, ತಮ್ಮ ನೆಲ, ಕಾಡು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿಕೊಳ್ಳಲು ಪ್ರತಿಭಟಿಸುತ್ತಿವೆ ಮತ್ತು ಅನೇಕ ಕಡೆ ಗಣಿಗಾರಿಕೆಯನ್ನು ತಡೆದಿವೆ. ಇದು ಸಿಆರ್ಪಿಎಫ್ ಹದ್ದುಗಣ್ಣು, ಅಕ್ರಮ ಸೆರೆವಾಸ ಅಥವಾ ಎಫ್ಐಆರ್ ಸರಣಿಗೆ ಸೀಮಿತವಾದ ವಿಷಯವಲ್ಲ; ಬದಲಾಗಿ, ಭೂಮಿ-ಜೀವನವಿಧಾನವನ್ನು ಕಳೆದುಕೊಳ್ಳುವ ಸಮುದಾಯವೊಂದರ ಪ್ರತಿರೋಧವು ರಾಜ್ಯದ ಅಧಿಕಾರವನ್ನು ಎದುರಿಸಿದಾಗ ಏನಾಗುತ್ತದೆ ಎಂಬುದರ ಕುರಿತ ಕಥೆ. ಜನ ಆಯ್ಕೆ ಮಾಡಿದ ಸರ್ಕಾರಗಳು ಜನಹಿತ ಮರೆತು, ಉದ್ಯಮಿಗಳ ಕಾಲುಹಾಸು ಆಗಿರುವ ಕಾಲಘಟ್ಟ ದಲ್ಲಿ ನಾವಿದ್ದೇವೆ.

