ತಿಮಿಂಗಿಲಗಳು ಬಲೆಯನ್ನೇ ಹರಿಯುತ್ತವೆ

ಅಮೆರಿಕದ ಮ್ಯಾಥ್ಯೂ ಆರಾನ್‌ ವ್ಯಾನ್‌ಡೈಕ್‌ ಮತ್ತು ಆರು ಮಂದಿ ಉಕ್ರೇನಿನ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಮಾರ್ಚ್‌ 2026ರಲ್ಲಿ ಬಂಧಿಸಿತ್ತು. ಅಕ್ರಮ ಚಟುವಟಿಕೆಗಳ(ತಡೆ) ಕಾಯಿದೆ(ಯುಎಪಿಎ)ಯಡಿ ಬಂಧಿಸಿದ್ದರೂ, ಸೆಪ್ಟೆಂಬರ್‌ 18 ರಂದು ಎಲ್ಲ 7 ಮಂದಿಗೆ ಜಾಮೀನು ದೊರೆತು ಸ್ವದೇಶಕ್ಕೆ ತೆರಳಿದರು. ಆದರೆ, ದೇಶದಲ್ಲಿ ಈ ಕಾಯಿದೆಯಡಿ ಬಂಧಿತರು ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ. ಆರ್ಥಿಕ ಅಪರಾಧಿಗಳು ಪರದೇಶಗಳಲ್ಲಿ ಸ್ವತಂತ್ರವಾಗಿ ಅಲೆದಾಡಿಕೊಂಡಿದ್ದರೆ, ಭಾರಿ ಸಾಲಗಾರರಿಗೆ ಬ್ಯಾಂಕುಗಳು ರೈಟ್‌ಆಫ್‌ ಗೌರವ ಸಲ್ಲಿಸುತ್ತಿವೆ.

ಮಾರ್ಚ್ 13 ರಂದು ಮ್ಯಾಥ್ಯೂ ಆರಾನ್‌ ವ್ಯಾನ್‌ಡೈಕ್‌ನನ್ನು ಕೋಲ್ಕತ್ತಾ ವಿಮಾನನಿಲ್ದಾಣ, ಉಕ್ರೇನಿಯನ್ ಪ್ರಜೆಗಳಾದ ಪೆಟ್ರೋ ಹರ್ಬಾ, ತಾರಸ್ ಸ್ಲಿವಿಯಾಕ್, ಇವಾನ್ ಸುಕ್ಮನೋವ್ಸ್ಕಿ ಅವರನ್ನು ಲಕ್ನೋ ವಿಮಾನ ನಿಲ್ದಾಣ ಹಾಗೂ ಮರಿಯನ್ ಸ್ಟೆಫಾಂಕಿವ್, ಮಕ್ಸಿಮ್ ಹೊಂಚಾರುಕ್ ಮತ್ತು ವಿಕ್ಟರ್ ಕಮಿನ್ಸ್ಕಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಮ್ಯಾನ್ಮಾರ್‌ನ ಸಶಸ್ತ್ರ ಗುಂಪುಗಳಿಗೆ ಡ್ರೋನ್‌ ಪೂರೈಕೆ ಮತ್ತು ಕದನ ತಂತ್ರಗಳನ್ನು ಕಲಿಸಲು ಅಕ್ರಮವಾಗಿ ಈಶಾನ್ಯ ಭಾರತಕ್ಕೆ ಪ್ರವೇಶಿಸಿದ್ದರು ಎಂದು ಭಾರತೀಯ ನ್ಯಾಯ ಸಂಹಿತೆ ಹಾಗೂ ಅಕ್ರಮ ಚಟುವಟಿಕೆಗಳ(ತಡೆ) ಕಾಯಿದೆ(ಯುಎಪಿಎ) ಅಡಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಬಂಧಿಸಿತು. ಕೇವಲ ಆರು ತಿಂಗಳೋಳಗೆ ಅವರಿಗೆ ಬಿಡುಗಡೆಯ ಭಾಗ್ಯ ಲಭಿಸಿ, ಸ್ವದೇಶಕ್ಕೆ ತೆರಳಲು ಅನುಮತಿ ಸಿಕ್ಕಿತು. ಇಂಥ ಭಾಗ್ಯ ಸ್ವದೇಶಿಯರಿಗೆ ಸಿಗುವುದು ಕಠಿಣ.

ಯುಎಪಿಎ ಕರಾಳ ಚರಿತ್ರೆ: ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಬೆದರಿಕೆ ಒಡ್ಡುವ ಕಾನೂನುಬಾಹಿರ ಸಂಘಟನೆಗಳು ಹಾಗೂ ಪ್ರತ್ಯೇಕತಾವಾದಿ ಚಳವಳಿಗಳನ್ನು ನಿಯಂತ್ರಿಸುವ ಉದ್ದೇಶ ದಿಂದ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರ 1967ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಜಾರಿಗೊಳಿಸಿತು. ರಾಷ್ಟ್ರೀಯ ಏಕೀಕರಣ ಮಂಡಳಿಯ ಶಿಫಾರಸುಗಳ ಮೇರೆಗೆ ವಾಕ್ ಸ್ವಾತಂತ್ರ್ಯ (ವಿಧಿ 19)ದ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಲು ಸಂಸತ್ತಿಗೆ ಅಧಿಕಾರ ನೀಡಲು ಸಂವಿಧಾನದ (ಹದಿನಾರನೇ ತಿದ್ದುಪಡಿ) ಕಾಯಿದೆ 1963 ಜಾರಿಗೊಂಡಿತು. 1967ರ ಕಾಯಿದೆ ಸಮಗ್ರವಾಗಿರಲಿಲ್ಲ ಎಂದು ಟಾಡಾ (1987–1995) ಮತ್ತು ಪೋಟಾ (2002–2004) ಕಾನೂನು ಜಾರಿಗೆ ತರಲಾಯಿತು. ಪೋಟಾ ರದ್ದುಗೊಳಿಸಿದ ಬಳಿಕ 2004ರ ಯುಎಪಿಎ ತಿದ್ದುಪಡಿ ಕಾಯಿದೆ ಅಂಗೀಕರಿಸಿ, ಭಯೋತ್ಪಾದಕ ಕೃತ್ಯಗಳನ್ನು ಯುಎಪಿಎ ವ್ಯಾಪ್ತಿಗೆ ತರಲು ಅಧ್ಯಾಯ 4ನ್ನು ಸೇರಿಸಲಾಯಿತು. 26/11ರ ಮುಂಬೈ ದಾಳಿ ನಂತರ ತಂದ 2008ರ ತಿದ್ದುಪಡಿಯು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಚನೆ ಮತ್ತು ಸೆಕ್ಷನ್ 43 ಡಿ (5) ಅಡಿ ಕಠಿಣ ಜಾಮೀನು ನಿಬಂಧನೆಗಳನ್ನು ಪರಿಚಯಿಸಿತು. ಈ ಸೆಕ್ಷನ್‌ಅಡಿ ದೋಷಾರೋಪ ಪಟ್ಟಿ ಮತ್ತು ಪ್ರಕರಣ ದಿನಚರಿ ಆಧರಿಸಿದ ಪ್ರಾಸಿಕ್ಯೂಷನ್ನಿನ ವಾದ ನಿಜ ಎಂದು ಅನ್ನಿಸಿದರೆ, ನ್ಯಾಯಾಲಯ ಜಾಮೀನು ನಿರಾಕರಿಸಬಹುದು. ದೋಷಾರೋಪ ಪಟ್ಟಿ ಸಲ್ಲಿಸಲು 180 ದಿನ ಸಮಯಾವಕಾಶ ಇರಲಿದೆ(ಅವಶ್ಯವೆನ್ನಿಸಿದಲ್ಲಿ ವಿಸ್ತರಿಸಬಹುದು). ಇಂಥ ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಸಾಕ್ಷ್ಯ, ಅಧಿಕ ಸಾಕ್ಷಿದಾರರು ಮತ್ತು ರಾಷ್ಟ್ರೀಯ ಸುರಕ್ಷತೆಯ ಅಂಶಗಳು ಇರುತ್ತವೆ. 2013ರಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ತಡೆ ಹಾಗೂ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್‌ಎಟಿಎಫ್)ಯ ಮಾರ್ಗಸೂಚಿಗಳಿಗೆ ಅನ್ವಯಿಸಲು ತಿದ್ದುಪಡಿ ಮಾಡಲಾಯಿತು. 2019ರ ತಿದ್ದುಪಡಿಯಿಂದ ಸಂಸ್ಥೆಗಳು ಮಾತ್ರವಲ್ಲದೆ ವ್ಯಕ್ತಿಗಳನ್ನು ಕೂಡ ಭಯೋತ್ಪಾದಕರು ಎಂದು ಹೆಸರಿಸುವ ಅಧಿಕಾರ, ಎನ್‌ಐಎಯ ವಶಪಡಿಸಿಕೊಳ್ಳುವ ಮತ್ತು ಶೋಧಿಸುವ ಅಧಿಕಾರದ ವಿಸ್ತರಣೆ ಆಯಿತು.

ವಿಶೇಷ ಎನ್‌ಐಎ ನ್ಯಾಯಾಲಯ ಇಲ್ಲವೇ ಸೆಷನ್ಸ್‌ ನ್ಯಾಯಾಲಯ ಇದ್ದರೂ, ಮೂಲಸೌಲಭ್ಯ ಹಾಗೂ ನ್ಯಾಯಾಧೀಶರ ಕೊರತೆ ಇದೆ. ಸಮಸ್ಯೆಯ ಕೇಂದ್ರದಲ್ಲಿರುವುದು-ಆಳವಾದ ರಾಚನಿಕ ಸಮಸ್ಯೆ: ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ, ವಿಚಾರಣೆ ಆರಂಭ ಮತ್ತು ಪೂರ್ಣಗೊಳಿಸುವಲ್ಲಿ ಅನಿರ್ದಿಷ್ಟ ಕಾಲ ವಿಳಂಬದಿಂದ ಆರೋಪಿಗಳು ದೀರ್ಘ ಸಮಯ ವಿಚಾರಣೆಪೂರ್ವ ಬಂಧನದಲ್ಲಿ ಇರು ತ್ತಾರೆ. ಯುಎಪಿಎ, ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಮತ್ತು ಬಿಎನ್‌ಎಸ್‌ಎಸ್(ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ)ಗಳು ಶೀಘ್ರ ವಿಚಾರಣೆ ನಡೆಸಬೇಕೆಂದು ಹೇಳುತ್ತವೆ; ವಾಸ್ತವ ಏನೆಂದರೆ, ಆರೋಪಪಟ್ಟಿ ಸಿದ್ಧಪಡಿಸಲು ಕೆಲವೊಮ್ಮೆ 5 ವರ್ಷ ಆಗುವುದೂ ಇದೆ. 2014-2022ರ ಅವಧಿಯಲ್ಲಿ ವರ್ಷವೊಂದಕ್ಕೆ ಸಾವಿರಾರು ಯುಎಪಿಎ ಪ್ರಕರಣಗಳು ದಾಖಲಾಗಿವೆ; ಅತಿ ಹೆಚ್ಚು 1,200-1,4 00. ಆದರೆ, ಬಂಧನಕ್ಕೆ ಹೋಲಿಸಿದರೆ, ಅಪರಾಧ ಸಾಬೀತು ಪ್ರಮಾಣ ಶೇ.1.5ರಿಂದ ಶೇ.6 ಇದೆ. 2019-23ರ ಅವಧಿಯಲ್ಲಿ ಬಂಧಿತರಾದ 10,440 ಜನರಲ್ಲಿ ಶಿಕ್ಷೆಯಾಗಿರುವುದು 335 ಮಂದಿಗೆ ಮಾತ್ರ; ಜಮ್ಮು-ಕಾಶ್ಮೀರದಲ್ಲಿ 3,662(23 ಮಂದಿಗೆ ಶಿಕ್ಷೆ) ಅತಿ ಹೆಚ್ಚು; ಉತ್ತರಪ್ರದೇಶಕ್ಕೆ ನಂತರ ಸ್ಥಾನ- 2,805(222 ಮಂದಿಗೆ ಶಿಕ್ಷೆ). ಕರ್ನಾಟಕದಲ್ಲಿ 2019ರಲ್ಲಿ 6, 2020ರಲ್ಲಿ 2, 2021ರಲ್ಲಿ ಶೂನ್ಯ, 2022ರಲ್ಲಿ 3 ಮತ್ತು 2023ರಲ್ಲಿ 10 ಮಂದಿಯನ್ನು ಬಂಧಿಸಿದ್ದು, ಇವರಲ್ಲಿ ಮೂವರಿಗೆ ಶಿಕ್ಷೆಯಾಗಿದೆ. ಉಮರ್‌ ಖಾಲೀದ್‌ ಮತ್ತು ಶರ್ಜೀಲ್‌ ಇಮಾಮ್‌ ಸೆಪ್ಟೆಂಬರ್‌ 2020ರಿಂದ ಜೈಲಿನಲ್ಲಿದ್ದಾರೆ. ಯುಎಪಿಎ ಕಾಂಗ್ರೆಸ್‌ ಸೃಷ್ಟಿ. ಆದರೆ, ಕಠೋರಗೊಳಿಸಿ ಖ್ಯಾತಿ ಎನ್ಡಿಎಗೆ ಸಲ್ಲುತ್ತದೆ.

ವಿದೇಶಿಯರನ್ನು ತಡೆಯದ ಕಾಯಿದೆ: ಮ್ಯಾಥ್ಯೂ ವ್ಯಾನ್‌ ಡೈಕ್‌ ಮತ್ತು ಆರು ಉಕ್ರೇನಿಯನ್ನರಿಗೆ ಜಾಮೀನು ನೀಡಲು ಕೊಟ್ಟ ಕಾರಣ-ಅವರು ಉಗ್ರಗಾಮಿಗಳಿಗೆ ನೆರವಾಗುತ್ತಿರಲಿಲ್ಲ; ಗಡಿಯಾಚೆಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಯುಎಪಿಎ ಸೆಕ್ಷನ್‌ 15ರ ಪ್ರಕಾರ, ʻಉಗ್ರಗಾಮಿ ಕೃತ್ಯʼ ಎಂದರೆ, ದೇಶದ ವಿರುದ್ಧ ಚಟುವಟಿಕೆ ಮಾತ್ರವಲ್ಲ; ದೇಶ ಹಾಗೂ ವಿದೇಶದಿಂದ ನಾಗರಿಕರಲ್ಲಿ ಆತಂಕ ಸೃಷ್ಟಿಸಲು ನಡೆಸಿದ ಕ್ರಿಯೆ. ಸೆಕ್ಷನ್‌ 15(ಸಿ) ಪ್ರಕಾರ ವಿದೇಶದಲ್ಲಿ ಸಾವು, ನೋವು ಇಲ್ಲವೇ ಹಾನಿ ಉಂಟುಮಾಡುವ, ಬೆದರಿಸುವ ಇಲ್ಲವೇ ವಿದೇಶಿ ಸರ್ಕಾರ ಅಥವಾ ಅಂತಾರಾಷ್ಟ್ರೀಯ ಸಂಸ್ಥೆ ಮೇಲೆ ಒತ್ತಡ ಹೇರುವ ಕ್ರಿಯೆ ಕೂಡ ಭಯೋತ್ಪಾದನೆ ಆಗಲಿದೆ. ಮ್ಯಾನ್ಮಾರ್‌ ಭಾರತದ ಮಿತ್ರ ರಾಷ್ಟ್ರ. ಜೂನ್‌ 3, 2026ರಂದು ಮ್ಯಾನ್ಮಾರ್‌ ಅಧ್ಯಕ್ಷ ಯು ಮಿನ್‌ ಆಂಗ್‌ ಭಾರತಕ್ಕೆ ಭೇಟಿ ನೀಡಿದ್ದರು. ಆದ್ದರಿಂದ, ಬರ್ಮಾ ವಿರುದ್ಧದ ಚಟುವಟಿಕೆಗಳು ಭಯೋತ್ಪಾದನೆ ಆಗಲಿವೆ. ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಿಂದ ಬಂಧಿತರಾದ ವ್ಯಕ್ತಿಯನ್ನು ವಲಸೆ ಮತ್ತು ವಿದೇಶಿ ಯರ ಕಾಯಿದೆ 2025 ರಡಿ ಏಕೆ ಶಿಕ್ಷಿಸಲಾಯಿತು? ಪ್ರಕರಣದಲ್ಲಿ ವ್ಯಾನ್‌ಡೈಕ್‌ ಬಿಡುಗಡೆಗೆ ಲಾಬಿ ನಡೆದಿತ್ತು. ಭಾರತದಲ್ಲಿ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್‌, ಅಮೆರಿಕದ ರಾಜ್ಯ ಕಾರ್ಯ ದರ್ಶಿ ಮಾರ್ಕೋ ರೂಬಿಯೋ ಅವರ ನವದೆಹಲಿ ಭೇಟಿ ವೇಳೆ(ಮೇ 5,2026) ವ್ಯಾನ್‌ಡೈಕ್‌ ಬಂಧನ ಕುರಿತು ಪ್ರಸ್ತಾಪಿಸಿದ್ದರು. ಆಗಸ್ಟ್‌ 30ರಂದು ವ್ಯಾನ್‌ಡೈಕ್‌ ಕುಟುಂಬ ಅಮೆರಿಕದ ಮಧ್ಯಪ್ರವೇಶ ಕ್ಕೆ ಆಗ್ರಹಿಸಿತು. ʻಅವರನ್ನು ಸೆರೆಮನೆಯಲ್ಲಿ ಒಂಟಿಯಾಗಿ ಇರಿಸಲಾಗಿದೆ; ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದೆ ಮತ್ತು ಕೈದಿಗಳ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆʼ ಎಂದು ದೂರಿತು. ಐಎನ್‌ ಎ ಸೆಪ್ಟೆಂಬರ್‌ 8ರಂದು ವಲಸೆ ಕಾನೂನಿನಡಿ ಪ್ರಕರಣ ದಾಖಲಿಸಿತು. ಸೆಪ್ಟೆಂಬರ್‌ 18-24ರ ಅವಧಿಯಲ್ಲಿ ವ್ಯಾನ್‌ಡೈಕ್‌ ಮತ್ತಿತರಿಗೆ ಶರತ್ತುಬದ್ಧ ಜಾಮೀನು ಸಿಕ್ಕಿತು; ಸ್ವದೇಶಕ್ಕೆ ಹೋಗಿಬರಲು ಒಂದು ತಿಂಗಳು ಅವಕಾಶ ನೀಡಲಾಯಿತು. 25ರಂದು ದೇಶ ತೊರೆದ ವ್ಯಾನ್‌ಡೈಕ್‌, ಮತ್ತೆ ವಾಪಸಾಗಲಿಲ್ಲ. ಬಿಜೆಪಿ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ಕಾಂಗ್ರೆಸ್‌ ದೂರಿದರೆ, ಆರೋಪ ರಾಜಕೀಯಪ್ರೇರಿ ತ ಎಂದು ಬಿಜೆಪಿ ಪ್ರತಿಕ್ರಿಯಿಸಿತು. ಆದರೆ, ಯುಎಪಿಎ ತನಿಖೆ ಮುಗಿದಿಲ್ಲ ಎಂದು ಎನ್‌ಐಎ ಹೇಳಿತು.

ಶೂನ್ಯ ಸಹಿಷ್ಣುತೆ ಎಂಬುದು ಭ್ರಮೆ: ದೇಶ ಹಿಂದಿನಿಂದಲೂ ಅಮೆರಿಕದ ಬಗ್ಗೆ ಮೃದುಧೋರಣೆ ಹೊಂದಿದೆ. ಬಹುತೇಕ ಎಲ್ಲ ಸರ್ಕಾರಗಳೂ ಅಮೆರಿಕದ ಸ್ನೇಹಕ್ಕಾಗಿ ಹಾತೊರೆದಿವೆ; ಕೆಲವೊಮ್ಮೆ ಬಗ್ಗಿದ್ದು, ಇನ್ನು ಕೆಲವೊಮ್ಮೆ ತೆವಳಿವೆ. ಉಗ್ರವಾದದ ಮೇಲೆ ಶೂನ್ಯ ಸಹಿಷ್ಣುತೆ(ಜೀರೋ ಟಾಲರೆನ್ಸ್) ಎನ್ನುತ್ತಲೇ ವಿದೇಶ, ವಿಶೇಷವಾಗಿ, ಅಮೆರಿಕದೊಡನೆ ಸಂಬಂಧ ಇರಿಸಿಕೊಳ್ಳಲು ಹೆಣಗಾಡುತ್ತಿದೆ. ಇದಕ್ಕೆ ಮೋದಿ ಸರ್ಕಾರ ಮಾತ್ರ ಹೊಣೆಯಲ್ಲ. 1984ರ ಭೋಪಾಲ್‌ ಅನಿಲ ದುರಂತದಿಂದ ಅಂಜುಬುರುಕುತನ ಆರಂಭವಾಯಿತು. ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಈ ದುರಂತದಲ್ಲಿ ಯೂನಿಯನ್‌ ಕಾರ್ಬೈಡ್‌ ಕಂಪನಿಯ ಮುಖ್ಯಾಧಿಕಾರಿ ವಾರೆನ್‌ ಆಂಡರ್‌ಸನ್‌ ಬಂಧಿಸಲಾಯಿತು. ಆದರೆ, ತಕ್ಷಣ ಜಾಮೀನು ನೀಡಿ ರಾಜ್ಯ ಸರ್ಕಾರದ ವಿಮಾನದಲ್ಲಿ ದೆಹಲಿಗೆ ಕಳಿಸಲಾಯಿತು. ಅಲ್ಲಿಂ ದ ಆತ ದೇಶ ಬಿಟ್ಟು ತೆರಳಿದ. ಆಂಡರ್‌ಸನ್‌ ಬಿಡುಗಡೆಗೆ ಅಮೆರಿಕ ಭಾರಿ ಒತ್ತಡ ಹೇರಿತ್ತು. ಅಲ್ಲಿಂದ ಅವರನ್ನು ಕರೆಸಿಕೊಳ್ಳುವ ಪ್ರಯತ್ನಗಳು ವಿಫಲವಾದವು; 2014ರಲ್ಲಿ ಅವರು ಮೃತಪಟ್ಟರು.

ಬೋಫೋರ್ಸ್‌ ಲಂಚ ಹಗರಣದ ಆರೋಪಿ, ಇಟಲಿಯ ಒಟ್ಟಾವಿಯೋ ಕ್ವಟ್ರೋಚಿ ಇಟಲಿಯ ವ್ಯಾಪಾರಿ. ಜುಲೈ 1993ರಲ್ಲಿ ದೇಶ ಬಿಟ್ಟು ಹೋದರು. ಮಲೇಷಿಯಾ ಹಾಗೂ ಅರ್ಜೆಂಟೀನಾದಿಂದ ಅವರನ್ನು ದೇಶಾಂತರಗೊಳಿಸುವ ಪ್ರಯತ್ನಗಳು ವಿಫಲವಾದವು. 2011ರಲ್ಲಿ ಅವರ ಮೇಲಿನ ಆರೋಪಗಳನ್ನು ಹಿಂಪಡೆಯಲಾಯಿತು; 2013ರಲ್ಲಿ ಮೃತಪಟ್ಟರು. ಬ್ರಿಟನ್‌ ಪ್ರಜೆ ಪೀಟರ್‌ ಬ್ಲೀಚ್‌ ಮತ್ತು ಅವರ ಲಾಟ್ವಿಯಾದ ಸಿಬ್ಬಂದಿ 1995ರಲ್ಲಿ ಪುರುಲಿಯಾದಲ್ಲಿ ಶಸ್ತ್ರಾಸ್ತ್ರಗಳನ್ನು ಇಳಿಸಿದ್ದರು. ಅವರನ್ನು ಬಂಧಿಸಿ, 2000ದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ರಷ್ಯಾ ಮತ್ತು ಲಾಟ್ವಿಯಾದ ಒತ್ತಡದಿಂದಾಗಿ, 2004ರಲ್ಲಿ ಬ್ಲೀಚ್‌ಗೆ ಕ್ಷಮಾದಾನ ಸಿಕ್ಕಿತು. ಪ್ರಕರಣದ ಹಿಂದಿನ ಮಿದುಳು ಕಿಮ್‌ ಡೇವಿಯನ್ನು ದೇಶಾಂತರಗೊಳಿಸಲು ಡೆನ್ಮಾರ್ಕ್‌ ನಿರಾಕರಿಸಿತು. ಎನ್ರಿಕಾ ಲೆಕ್ಸೀ ಪ್ರಕರಣದಲ್ಲಿ ಫೆಬ್ರವರಿ 25, 2012 ರಂದು ಮೀನುಗಾರರಾದ ಅಜೇಶ್‌ ಬಿಂಕಿ ಹಾಗೂ ಜೆಲೆಸ್ಟೀನ್‌ ವೆಲೆಂಟೈನ್‌ ಅವರನ್ನು ಇಟಲಿಯ ಮ್ಯಾಸಿಮಿಲಿಯಾನೋ ಲಟೋರ್‌ ಹಾಗೂ ಸಾಲ್ವಟೋರ್‌ ಗಿರೋನ್‌ ಹತ್ಯೆ ಮಾಡಿದರು. ಅಪರಾಧಿ ಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ರೋಮ್‌ ನ್ಯಾಯಾಲಯಕ್ಕೆ ಇದೆ ಎಂದು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ಹೇಳಿದರೂ, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

ಮೃದುಧೋರಣೆ ಉಗ್ರವಾದಿಗಳು ಇಲ್ಲವೇ ಶಸ್ತ್ರಾಸ್ತ್ರ ಸಜ್ಜಿತ ಗುಂಪುಗಳಿಗೆ ಮಾತ್ರ ಸೀಮಿತವಾಗಿಲ್ಲ; ಅಮೆರಿಕದ ಗೂಢಚಾರಿಕೆ ಚಟುವಟಿಕೆಗಳಿಗೆ ಹೆಚ್ಚು ಎನ್ನಬಹುದಾದ ಸಂಯಮ ತೋರಲಾಗಿದೆ. ನವೆಂಬರ್‌ 1993ರಲ್ಲಿ ನಿವೃತ್ತ ಮೇಜರ್‌ ಜನರಲ್‌ ಫ್ರಾಂಕ್‌ ಮಾರ್ಟಿನ್‌ ಹಾಗೂ ಅವರ ಸೋದರ ನಿವೃತ್ತ ಏರ್‌ ವೈಸ್‌ ಮಾರ್ಷಲ್‌ ಕೆನೆತ್‌ ಲಾರ್ಕಿನ್‌ರನ್ನು ಅಮೆರಿಕದ ಗೂಢಚಾರ ಸಂಸ್ಥೆ ಯೊಂದಕ್ಕೆ ಕೆಲಸ ಮಾಡಿದ ಆರೋಪದಲ್ಲಿ ಬಂಧಿಸಲಾಯಿತು. ಆರೋಪದ ಗುರುತ್ವ ಮತ್ತು ಇಬ್ಬರೂ ಸೇನಾಧಿಕಾರಿಗಳಾದ್ದರಿಂದ, ಜುಲೈ 1985ರಲ್ಲಿ 10 ವರ್ಷ ಶಿಕ್ಷೆಗೆ ಒಳಪಡಿಸಲಾಯಿತು. 4 ವರ್ಷ ಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸುಪ್ರೀಂ ಕೋರ್ಟ್‌ 2003ರಲ್ಲಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತಾದರೂ, ಅಷ್ಟರಲ್ಲಿ ಇಬ್ಬರೂ ದೇಶ ತೊರೆದಿದ್ದರು. ದೇಶದ ಹಿತಾಸಕ್ತಿ ಮೇಲೆ ತೀವ್ರ ಪರಿಣಾಮ ಬೀರಬಹುದಾದ ಪ್ರಕರಣಗಳಲ್ಲೂ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಇದಕ್ಕೆ ದಾವೂದ್‌ ಗಿಲಾನಿ ಉರುಫ್‌ ಡೇವಿಡ್‌ ಕೋಲ್ಮನ್‌ ಹೆಡ್ಲಿ ಪ್ರಕರಣ ನಿದರ್ಶನ. ಹೆಡ್ಲಿ 2008ರ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆತ ನಡೆಸಿದ್ದ ಸರ್ವೇಕ್ಷಣೆ ಹಾಗೂ ತೆಗೆದಿದ್ದ ವಿಡಿಯೋಗಳು ಉಗ್ರರಿಗೆ ನೆರವಾಗಿದ್ದವು. ಆನಂತರ ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇ ಜಿನ ಮೇಲೆ ದಾಳಿಗೆ ಇನ್ನೊಂದು ಸರ್ವೇಕ್ಷಣೆ ನಡೆಸಿದ್ದ. ಆತನನ್ನು ವಿಚಾರಣೆಗೆ ಕಳಿಸಿಕೊಡಲು ಅಮೆರಿಕ ನಿರಾಕರಿಸಿತು. ಬದಲಾಗಿ, ಮರಣದಂಡನೆ ವಿಧಿಸದಂತೆ ಚೌಕಾಸಿ ಮಾಡಿತು. 1980ರಲ್ಲಿ ಮದ್ರಾಸಿನಲ್ಲಿ ರಾ(ರಿಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್)‌ ನೇತೃತ್ವ ವಹಿಸಿದ್ದ ಕೆ.ವಿ.ಉನ್ನಿಕೃಷ್ಣನ್‌, ಎಲ್‌ಟಿಟಿಇ ಮತ್ತು ಶ್ರೀಲಂಕಾದ ಜೊತೆಗೆ ದೇಶದ ಒಪ್ಪಂದ ಕುರಿತು ಸಿಐಎಗೆ ಮಾಹಿತಿ ನೀಡುತ್ತಿದ್ದರು ಎಂಬ ದೂರು ಕೇಳಿಬಂದಿತ್ತು. ಉನ್ನತ ಐಬಿ ಅಧಿಕಾರಿ ರತನ್‌ ಸೆಹಗಾಲ್‌ ಸಿಐಎ ಅಧಿಕಾರಿಣಿಯೊಟ್ಟಿಗೆ ಅಕ್ರಮ ವ್ಯವಹಾರ ಇರಿಸಿಕೊಂಡಿದ್ದರು ಎಂಬ ಆರೋಪವಿತ್ತು. ಉನ್ನಿಕೃಷ್ಣನ್‌ ಹಾಗೂ ಸೆಹ ಗಾಲ್‌ ಅವರನ್ನು ವಜಾಗೊಳಿಸಲಾಯಿತೇ ಹೊರತು ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಿಲ್ಲ.

ಸಿಕ್ಕಿಬಿದ್ದವರು-ತಪ್ಪಿಸಿಕೊಂಡವರು: ಆರ್ಥಿಕ ಅಪರಾಧಗಳಲ್ಲೂ ಸರ್ಕಾರ ಇಂಥದ್ದೇ ಮೃದು ಧೋರಣೆ ತೋರಿದೆ. ಕೆಲವರನ್ನು ಬಂಧಿಸಿದ್ದರೆ, ಹೆಚ್ಚು ಮಂದಿ ತಪ್ಪಿಸಿಕೊಂಡಿದ್ದಾರೆ. 2018ರಲ್ಲಿ ಬ್ರಿಟಿಷ್‌ ಪ್ರಜೆ, ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಮಧ್ಯಸ್ಥಗಾರ ಕ್ರಿಶ್ಚಿಯನ್‌ ಮೈಖಲ್‌ನನ್ನು ದುಬೈಯಿಂದ ಕರೆತರಲಾಯಿತು. ಮುಂಬೈ ದಾಳಿಗೆ ಸಂಬಂಧಿಸಿದಂತೆ ತಹಾವುರ್‌ ರಾಣಾನನ್ನು 2025ರಲ್ಲಿ ಅಮೆ ರಿಕದಿಂದ ಕರೆತರಲಾಯಿತು. 2026ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಭಯ್‌ ರಾಣಾ ಹಾಗೂ ಇಕ್ಬಾಲ್‌ ಸಿಂಗ್‌ರನ್ನು ಪೋರ್ಚುಗಲ್‌ನಿಂದ ಕರೆತರಲಾಯಿತು. ಆದರೆ, ಸಾರ್ವಜನಿಕ ಬ್ಯಾಂಕ್‌ ಗಳಿಗೆ 58,802 ಕೋಟಿ ರೂ. ಟೋಪಿ ಹಾಕಿದ ವಿಜಯ್‌ ಮಲ್ಯ, ನೀರವ್‌ ಮೋದಿ, ಮೇಹುಲ್‌ ಚೊಕ್ಸಿ, ಲಲಿತ್‌ ಮೋದಿ, ಜತಿನ್‌ ಮೆಹ್ತಾ, ಸಂಜಯ್‌ ಭಂಡಾರಿ, ಹಜ್ರಾ ಇಕ್ಬಾಲ್‌ ಮೆಮೋನ್,‌ ನಿತಿನ್‌ ಜಯಂತಿಲಾಲ್‌ ಸಂದೇಸರ/ಚೇತನ್‌ ಕುಮಾರ್‌ ಸಂದೇಸರ, ಜಕೀರ್‌ ನಾಯಕ್‌, ಸೌರಭ್‌ ಚಂದ್ರಾರ್ಕರ್/ರವಿ ಉಪ್ಪಲ್‌ ಮತ್ತಿತರ 15 ಆರ್ಥಿಕ ಅಪರಾಧಿಗಳು ಹಾಗೂ 1993ರ ಮುಂಬೈ ಸ್ಪೋಟದ ಮಿದುಳು ದಾವೂದ್‌ ಇಬ್ರಾಹಿಂ ಹಾಗೂ ದೇಶದಲ್ಲಿ ಹಲವು ಭಯೋತ್ಪಾದನೆ ಕೃತ್ಯಗಳಿಗೆ ಕಾರಣರಾದ ಹಫೀಜ್‌ ಸಯೀದ್‌, ಮಸೂದ್‌ ಅಜರ್‌ ಮತ್ತಿತರರು ಸ್ವತಂತ್ರವಾಗಿ ತಿರುಗಾಡಿ ಕೊಂಡಿದ್ದಾರೆ. ಒಂದೇ ಏಟಿಗೆ ಜೀ ಸಂಸ್ಥಾಪಕ ಸುಭಾಷ್‌ ಚಂದ್ರನ ಸಾಲ 22,000 ಕೋಟಿ ರೂ. ಸರ್ಕಾರ ರೈಟ್‌ ಆಫ್‌(ಹೇರ್‌ ಕಟ್) ಮಾಡಿತು. 2014-15 ರಿಂದ 2022-23ರ ಅವಧಿಯಲ್ಲಿ ರೈಟ್‌ಆಫ್‌ ಆದ ಮೊತ್ತ 14.55 ಲಕ್ಷ ಕೋಟಿ ರೂ. ಅದೇ ಹೊತ್ತಿನಲ್ಲಿ ಜನಸಾಮಾನ್ಯರು ಒಂದು ಕಂತು ಪಾವತಿ ಮಾಡದೆ ಇದ್ದಲ್ಲಿ ನೋಟಿಸ್/ಸಂದೇಶಗಳು ಮುತ್ತಿಕೊಳ್ಳುತ್ತವೆ.

ಆರ್ಥಿಕ ಅಪರಾಧ, ಭಯೋತ್ಪಾದನೆ ಮತ್ತು ಗೂಢಚರ್ಯೆಗೆ ಸಂಬಂಧಿಸಿದಂತೆ ಕಾನೂನಿನ ಕಠಿಣ ಅನುಷ್ಠಾನ ಅಗತ್ಯವಿದೆ. ಆದರೆ, ಇಂಥ ಕ್ರಮಗಳು ವ್ಯಕ್ತಿಯ ಆರ್ಥಿಕ ಸ್ಥಿತಿ ಇಲ್ಲವೇ ಅವರ ರಾಷ್ಟ್ರೀ ಯತೆಯನ್ನು ಆಧರಿಸಿರಬಾರದು. ದೇಶ ಅಮೆರಿಕ ಭಾಗಿಯಾಗಿರುವ ಪ್ರಕರಣಗಳನ್ನು ನಾಜೂಕಾಗಿ ಪರಿಗಣಿಸುತ್ತಿದೆ; ಬೇರೆ ರಾಷ್ಟ್ರಗಳು ಅಪರಾಧಿಗಳಿಗೆ ತಮ್ಮ ನೆಲದಲ್ಲಿ ನೆಲೆಸಲು ಅವಕಾಶ ನೀಡಬಾರ ದು, ಉಗ್ರಗಾಮಿಗಳಿಗೆ ನೆರವಾಗುವವರನ್ನು ಶಿಕ್ಷಿಸಬೇಕು ಮತ್ತು ಗಡಿಯಾಚೆಯ ಭಯೋತ್ಪಾದನೆಯನ್ನು ತಿರಸ್ಕರಿಸಬೇಕು ಎಂದು ನಾವು ಒತ್ತಾಯಿಸುವುದು ಗೋಸುಂಬೆತನ ಆಗುತ್ತದೆ. ದೇಶದ ವಿದೇಶಾಂಗ ನೀತಿ ಅಸ್ಪಷ್ಟವಾಗಿದೆ; ಆಲಿಪ್ತ ಚಳವಳಿ ಮಕಾಡೆ ಆಗಿದೆ. ವಿದೇಶಾಂಗ ನೀತಿಯಲ್ಲಿ ವ್ಯಾವಹಾರಿಕತೆ ಅತ್ಯಗತ್ಯ; ಆದರೆ, ಕಾನೂನಿನ ಆಯ್ದ ಅನ್ವಯಿಸುವಿಕೆಯು ದೇಶದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ.

ಇಲ್ಲಿ ಸಣ್ಣ ಮೀನುಗಳು ಬಲೆಯಲ್ಲಿ ಸಿಲುಕಿ ಆಹಾರವಾಗುತ್ತವೆ; ತಿಮಿಂಗಿಲಗಳು ಬಲೆಯನ್ನೇ ಛಿದ್ರಗೊಳಿಸುತ್ತವೆ.

 

 

 

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top