ಸಿಯಾಂಗ್‌ ಅಣೆಕಟ್ಟಿಗೆ ಆದಿವಾಸಿಗಳ ವಿರೋಧ

ಕಾಶ್ಮೀರ ದೇಶದ ಮುಕುಟಮಣಿಯಾದರೆ, ಅಷ್ಟ ಸಹೋದರಿ ರಾಜ್ಯಗಳು ಶ್ವಾಸಕೋಶವಿದ್ದಂತೆ. ಆದರೆ, ಈಶಾನ್ಯದ ಈ ಸಣ್ಣ ರಾಜ್ಯಗಳು ಅಭಿವೃದ್ಧಿ ಯೋಜನೆ ಮತ್ತು ಸಮುದಾಯಗಳ ನಡುವಿನ ಸಂಘರ್ಷದಿಂದ ಬಳಲಿ ಹೋಗಿವೆ. ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಯಾಂಗ್‌ ಅಣೆಕಟ್ಟು ಇಂಥ ಯೋಜನೆಗೆ ಇನ್ನೊಂದು ಸೇರ್ಪಡೆ. ಮಣಿಪುರ ನಿರಂತರ ಸಂಘರ್ಷದಿಂದ ಬಳಲಿದೆ. ಮೇ 3,2023ರಲ್ಲಿ ಆರಂಭ ಗೊಂಡ ಮೈತಿ ಹಾಗೂ ಕುಕಿ-ಜೋ ಸಮುದಾಯಗಳ ನಡುವಿನ ಸಂಘರ್ಷ 258 ಜನರನ್ನು ಬಲಿ ತೆಗೆದುಕೊಂಡಿತು(ನವೆಂಬರ್‌ 2024ರ ಮಾಹಿತಿ). ಬಳಿಕ, ಏಪ್ರಿಲ್‌ 7,2026ರಂದು ಟ್ರೊನ್ಗ್‌ಲಾಬಿಯಲ್ಲಿ ರಾಕೆಟ್‌ ದಾಳಿ ಯಿಂದ ಐದು ವರ್ಷದ ಬಾಲಕ ಹಾಗೂ ಐದು ತಿಂಗಳ ಬಾಲಕಿ ಮೃತಪಟ್ಟ ಬಳಿಕ ಸಂಘರ್ಷ ಮರುಕಳಿಸಿತು.

ಈಶಾನ್ಯ ರಾಜ್ಯ(ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಮಿಜೋರಾಂ, ಮಣಿಪುರ, ತ್ರಿಪುರ ಮತ್ತು ಸಿಕ್ಕಿಂ)ಗಳ ಒಟ್ಟು ವಿಸ್ತೀರ್ಣ 2,62 ಲಕ್ಷ ಚದರ ಕಿಮೀ; ಇದರಲ್ಲಿ ಸರಾಸರಿ ಶೇ.65 ರಷ್ಟು ಪ್ರದೇ ಶದಲ್ಲಿ ಅರಣ್ಯ ಇದೆ. ದೇಶದ ಒಟ್ಟು ಅರಣ್ಯದಲ್ಲಿ ಈ ರಾಜ್ಯಗಳ ಪಾಲು ಶೇ.25. ಅರುಣಾಚಲ ಪ್ರದೇಶದ ಒಟ್ಟು ವಿಸ್ತೀರ್ಣ 83,743 ಚದರ ಕಿಮೀ; ಶೇ.79ರಷ್ಟು ಅರಣ್ಯವಿದೆ. ಈ ಪ್ರಾಂತ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಅಪಾರ ಹಾನಿ ಮಾಡಿವೆ, ಮಾಡುತ್ತಿವೆ. ಈ ಯೋಜನೆಗಳ ಭಾರ ತಡೆದುಕೊಳ್ಳಬಲ್ಲ ಧಾರಣ ಶಕ್ತಿ ಇದೆಯೇ ಎಂಬ ಪ್ರಶ್ನೆಗೆ ಸರ್ಕಾರ ಕಿವುಡಾಗಿದೆ.

ಸಿಯಾಂಗ್‌ ಅಣೆಕಟ್ಟು: ಟಿಬೆಟ್‌ನಲ್ಲಿ ಯಾರ್ಲಂಗ್‌ ಸಾಂಗ್ಪೋ ಎಂದು ಕರೆಸಿಕೊಳ್ಳುವ ಸಿಯಾಂಗ್‌ ನದಿಯು ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ; ಬಾಂಗ್ಲಾದೇಶದಲ್ಲಿ ಜಮುನಾ ಎಂಬ ಹೆಸರು ಪಡೆದು, ಬಂಗಾಳ ಕೊಲ್ಲಿಯಲ್ಲಿ ಐಕ್ಯವಾಗುತ್ತದೆ. ಸಿಯಾಂಗ್‌ ಅಣೆಕಟ್ಟು ಯೋಜನೆಗೆ ದೀರ್ಘ ಇತಿಹಾಸವಿದೆ. ಸಿಯಾಂಗ್‌ ಕಣಿವೆಯಲ್ಲಿ 1982-83ರಲ್ಲೇ ಬ್ರಹ್ಮಪುತ್ರ ಮಂಡಳಿಯು 9,500 ಮೆಗಾವ್ಯಾಟ್‌ ಸಾಮರ್ಥ್ಯದ ಜಲವಿದ್ಯುತ್‌ ಯೋಜ ನೆಗೆ ಪ್ರಸ್ತಾವನೆ ಸಲ್ಲಿಸಿತ್ತು. 2008ರಲ್ಲಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಯಿತು. 2017ರಲ್ಲಿ ನೀತಿ ಆಯೋಗ ಯೋಜನೆಯನ್ನು ಪರಿಷ್ಕರಿಸಿ, ಮೇಲಣ ಸಿಯಾಂಗ್‌ ಬಹುಉದ್ದೇಶ ಯೋಜನೆ (ಎಸ್‌ಯು ಎಂಪಿ) ಎಂದು ನಾಮಕರಣ ಮಾಡಿತು. ವಿದ್ಯುತ್‌ ಉತ್ಪಾದನೆ ಗುರಿಯನ್ನು 10,000 ಮೆಗಾವ್ಯಾಟಿಗೆ ಹೆಚ್ಚಿಸಿತು. ಕೇಂದ್ರ ಸರ್ಕಾರ ಏಪ್ರಿಲ್‌ 2020ರಲ್ಲಿ ರಾಷ್ಟ್ರೀಯ ಜಲವಿದ್ಯುತ್‌ ನಿಗಮ(ಎನ್‌ಎಚ್‌ಪಿಸಿ)ಕ್ಕೆ ಕಾರ್ಯಸಾಧ್ಯತೆ ವರದಿ ಸಿದ್ಧಪಡಿಸುವಂತೆ ಸೂಚಿಸಿತು. ಪರಿಷ್ಕೃತ ಯೋಜನೆಯ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ 11,200 ಮೆಗಾವ್ಯಾಟ್ ಮತ್ತು ‌9.2 ಶತಕೋಟಿ ಘನ ಮೀಟರ್‌(ಬಿಸಿಎಂ) ನೀರು ಸಂಗ್ರಹಿಸಲಿದೆ. ಉದ್ದೇಶಿತ ಅಣೆಕಟ್ಟಿ ನಿಂದ 27 ಗ್ರಾಮಗಳು ಸಂಪೂರ್ಣ ಮುಳುಗಡೆ ಮತ್ತು 14 ಗ್ರಾಮಗಳು ಹಾನಿಗೀಡಾಗಲಿವೆ. 1.5 ಲಕ್ಷ ಜನ ಸ್ಥಳಾಂತರವಾಗಲಿದ್ದಾರೆ. ಯೋಜನೆ ವೆಚ್ಚ 1.3 ಲಕ್ಷ ಕೋಟಿ ರೂ. ಯೋಜನೆ ವ್ಯಾಪ್ತಿಯಲ್ಲಿ ಶೇ.82ರಷ್ಟು ಅರಣ್ಯ ವಿದೆ. ಅಣೆಕಟ್ಟು ವಿರೋಧಿಸಿ ಅದಿ ಸಮುದಾಯದ ಪರಮೋಚ್ಛ ಸಂಸ್ಥೆಯಾದ ಅದಿ ಬನೆ ಕೆಬಾಂಗ್‌ ಯುನೈಟೆಡ್(ಎಬಿಕೆ-ಯು), ಅದಿ ಸ್ಟೂಡೆಂಟ್ಸ್‌ ಯೂನಿಯನ್‌, ಸಿಯಾಂಗ್‌ ಇಂಡೀಜೀನಸ್‌ ಫಾರ್ಮರ್ಸ್‌ ಫೋರಂ (ಎಸ್‌ಐಎಫ್‌ಎಫ್) ಮತ್ತು ಎಸ್‌ಎಎವೈಎ(ಸಾಯಾ,ಎಸ್‌ಯುಎಂಪಿ ಭಾದಿತ ಪ್ರದೇಶಗಳ ಯುವಜನ ಸಂಘಟನೆ) ಹೋರಾಟ ನಡೆಸುತ್ತಿವೆ.

ದಂತಕತೆ ಪ್ರಕಾರ, ಅದಿ ಸಮುದಾಯಕ್ಕೆ ಸಿಯಾಂಗ್‌ ನದಿ ಲಡಾಖಿನಿಂದ ಅರುಣಾಚಲದ ಕಣಿವೆಗಳಿಗೆ ತೆರಳಲು ಮಾರ್ಗದರ್ಶನ ಮಾಡಿತು. ಸಮುದಾಯದ ನಾಗರಿಕತೆಯ ಚರಿತ್ರೆ ಆರಂಭವಾಗಿದ್ದು ರಿಗಾ ಗ್ರಾಮದಲ್ಲಿ. ಸಿಯಾಂಗ್‌ನ ನೀರು, ಫಲವತ್ತಾದ ಭೂಮಿಯಲ್ಲಿ ಭತ್ತ, ಕಿತ್ತಳೆ ಮತ್ತಿತರ ಬೆಳೆ ಬೆಳೆಯಲಾಯಿತು. ಬಳಿಕ ಜನರು ಬೇರೆ ಈಶಾನ್ಯ ರಾಜ್ಯಗಳಿಗೆ ವಲಸೆ ಹೋದರು. ಅವರ ಧರ್ಮ ದೊನ್ಯಿಪೋಲೋದಲ್ಲಿ ಬಳಕೆಯಾಗುವ ಎಲ್ಲ ಸ್ವಾಭಾವಿಕ ಉತ್ಪನ್ನಗಳಿಗೆ ಸಿಯಾಂಗ್‌ ನದಿಯೇ ಮೂಲ. ಅದಿ ಸಮುದಾಯವು ಸಿಯಾಂಗ್‌, ಮೇಲಣ ಸಿಯಾಂಗ್‌, ಪೂರ್ವ ಸಿಯಾಂಗ್‌, ಕೆಳಗಣ ದಿಬಾಂಗ್‌ ಕಣಿವೆ ಹಾಗೂ ಶಿಯೋಮಿ ಜಿಲ್ಲೆಗಳಲ್ಲಿ ನೆಲೆಸಿದೆ; ಅಂದಾಜು ಜನಸಂಖ್ಯೆ 3 ಲಕ್ಷ. ಅಣೆಕಟ್ಟಿನಿಂದ ಅದಿ ಸಂಸ್ಕೃತಿ ನಾಶವಾಗುತ್ತದೆ. 1960ರಲ್ಲಿ ಬಾಂಗ್ಲಾದಲ್ಲಿ ಅಣೆಕಟ್ಟು ಒಡೆದು ವಲಸೆ ಬಂದ ಚಕ್ಮಾ ಮತ್ತು ಹಜಾಂಗ್‌ ಸಮುದಾಯಗಳು ಇಂದಿಗೂ ಅರುಣಾಚಲ ಪ್ರದೇಶ ದಲ್ಲೇ ನೆಲೆಯೂರಿದ್ದಾರೆ. ತಮಗೂ ಹೀಗೆ ಆಗಬಹುದು ಎನ್ನುವುದು ಅದಿ ಸಮುದಾಯದ ಆತಂಕ. ಬಿಜೆಪಿ ಶಾಸಕರು-ಸಂಸದರು ಯಾವುದೇ ಬೆಲೆ ತೆತ್ತಾದರೂ ಅಣೆಕಟ್ಟು ನಿರ್ಮಿಸಿಯೇ ತೀರುತ್ತೇವೆ ಎಂದಿರುವುದು ಜನರನ್ನು ಕೆರಳಿಸಿದೆ. ವಿರೋಧ ಹೆಚ್ಚಿದಂತೆ ರಕ್ಷಣಾ ಪಡೆಗಳನ್ನು ಬಳಸಿ ಹತ್ತಿಕ್ಕುವಿಕೆಯೂ ತೀವ್ರಗೊಂಡಿದೆ.

ಪ್ರಬಲ ಪ್ರತಿರೋಧ: ಅಣೆಕಟ್ಟು ನಿರ್ಮಾಣಕ್ಕೆ ಮುನ್ನ ಪ್ರಾಥಮಿಕ ಕಾರ್ಯಸಾಧ್ಯತೆ ವರದಿ(ಪ್ರಿ ಫೀಸಿಬಲಿಟಿ ರಿಪೋರ್ಟ್‌, ಪಿಎಫ್‌ಆರ್) ಅಧ್ಯಯನ ನಡೆಸಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಉಗ್ಗೆಂಗ್‌, ಪರೋಂಗ್‌ ಮತ್ತು ಗೆಕೋ ಗ್ರಾಮಗಳನ್ನು ಆಯ್ಕೆಮಾಡಿಕೊಂಡಿದೆ. ಈ ಗ್ರಾಮಗಳಲ್ಲಿ ರಾಜ್ಯ ಸರ್ಕಾರ ಸುಳ್ಳು, ಬಲಪ್ರಯೋಗ ಹಾಗೂ ಬೆದರಿಕೆ ಒಡ್ಡುತ್ತಿದೆ ಎಂದು ಜನ ದೂರಿದ್ದಾರೆ. ಜೂನ್‌ 2026ರಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ ಮರಿಯಾಂಗ್-ಗೇಕು ಪರಿಶಿಷ್ಟ ವರ್ಗ ಕ್ಷೇತ್ರದ ಶಾಸಕ ಒನಿ ಪಯಾಂಗ್‌, ತಮ್ಮ ಮನೆಯಲ್ಲಿ ಕರೆದಿದ್ದ ಸಭೆಯಲ್ಲಿ ಪಿಎಫ್‌ಆರ್‌ ಅಧ್ಯಯನಕ್ಕೆ ಸಂಬಂಧಿಸಿದ ದಾಖಲೆಗೆ ಸಹಿ ಹಾಕುವಂತೆ ಪಾಲ್ಗೊಂಡಿದ್ದವರನ್ನು ಕೇಳಿದ್ದರು. ಗೇಕು ಗ್ರಾಮದ ಯಾರೂ ಸಮ್ಮತಿ ನೀಡಲಿಲ್ಲ. ʻವಿಶೇಷ ಪರಿಹಾರ ಪ್ಯಾಕೇಜ್‌ʼ ಆಮಿಷವೊಡ್ಡಿ ಸಹಿ ಪಡೆಯಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂಥವರ ಮನೆ ಹಾಗೂ ಶಾಸಕನ ಮನೆ ಮೇಲೆ ಜನ ದಾಳಿ ನಡೆಸಿದರು. ಹಾನಿಗೊಳಪಡುವ ಗ್ರಾಮಗಳ ಆಯ್ದ ಕುಟುಂಬಗಳ ಒಬ್ಬರು ಸದಸ್ಯರ ಸಹಿ ಪಡೆಯಲಾಗಿದೆ. ಸೆಪ್ಟೆಂಬರ್‌ 2025ರಿಂದ ಈ ರೀತಿ ಸಹಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಸಹಿ ಹಾಕದಿದ್ದರೆ ಸರ್ಕಾರದ ಯೋಜನೆಗಳ ಸವ ಲತ್ತುಗಳು ದೊರೆಯುವುದಿಲ್ಲ ಎಂದು ಬೆದರಿಸಲಾಗಿದೆ. ಈ ಕುರಿತ ಮಾಹಿತಿ ಕೇಳಿ ಎಸ್‌ಎಎವೈಎ ಕಾರ್ಯಕರ್ತರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗಳನ್ನು ಜಿಲ್ಲಾಧಿಕಾರ ತಳ್ಳಿಹಾಕಿದೆ. ಸಹಿ ಹಾಕಿದವರು ಅಣೆಕಟ್ಟಿನ ಪರ ಎಂದು ಜನರನ್ನು ವಿಭಜಿಸಲಾಗಿದೆ.

ಸೆಪ್ಟೆಂಬರ್‌ 30, 2026ರಂದು ಸಿಯಾಂಗ್‌ ಜಿಲ್ಲೆಯ ಉಗ್ಗೆಂಗ್‌ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಬಿಯು-ಕೆ ಹಾಗೂ ಅದಿ ಸ್ಟೂಡೆಂಟ್ಸ್‌ ಯೂನಿಯನ್‌ ನ 7 ಕಾರ್ಯಕರ್ತರನ್ನು ಅರುಣಾಚಲ ಪ್ರದೇಶ ಅಕ್ರಮ ಚಟುವಟಿಕೆಗಳು(ತಡೆ) ಕಾಯಿದೆ 2014ರಡಿ ಅಕ್ಟೋಬರ್‌ 10ರಂದು ಬಂಧಿಸಲಾಯಿತು. ಸಿಟ್ಟಿಗೆದ್ದ ಜನ ವಾಹನಗಳಿಗೆ ಬೆಂಕಿ ಹಚ್ಚಿದರು. ಶಾಸಕನ ಮೇಲೆ ಹಲ್ಲೆ ನಡೆದಿದ್ದರಿಂದ, ಐವರು ಶಾಸಕರಿಗೆ ರಕ್ಷಣೆ ಒದಗಿಸ ಲಾಯಿತು. ಶಿಷ್ಯವೇತನ ಪಡೆದು ಐರ್ಲೆಂಡಿನ ಡಬ್ಲಿನ್‌ಗೆ ತೆರಳುತ್ತಿದ್ದ ವಕೀಲೆ/ಕಾರ್ಯಕರ್ತೆ ಭಾನು ತಾಟಕ್‌ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್‌ 2025ರಲ್ಲಿ ತಡೆಯಲಾಯಿತು. ಎಸ್‌ಐಎಫ್‌ಎಫ್ ಕಾನೂ ನು ಸಲಹೆಗಾರ ಎಬೋ ಮಿಲಿ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ. ಮಿಲಿ ಅವರ ಹಾಗೂ ಸ್ಥಳೀಯ ಸುದ್ದಿ ಜಾಲತಾಣಗಳ ಮಾಧ್ಯಮ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ. ಅಕ್ಟೋಬರ್‌ 4ರಂದು ಉಗ್ಗೆಂಗ್‌ನಲ್ಲಿ ಪೊಲೀ ಸರು ಲಾಠಿ ಬೀಸಿದಾಗ, ಸಿಆರ್‌ಪಿಎಫ್‌ ಅಧಿಕಾರಿ ಸೇರಿದಂತೆ 54 ಮಂದಿ ಗಾಯಗೊಂಡರು. ಅಕ್ಟೋಬರ್‌ 9ರಂದು ಗೇಕು ಮತ್ತು ಆನಂತರ ರಿಗಾ ಗ್ರಾಮದ ಆರು ಕಾರ್ಯಕರ್ತರನ್ನು ಬಂಧಿಸಲಾಯಿತು. ಇವರಲ್ಲಿ ನಾಲ್ವ ರನ್ನು ನವೆಂಬರ್‌ 7ರಂದು ಸರ್ಕಾರ ಬಿಡುಗಡೆ ಮಾಡಿತು. ಅಕ್ಟೋಬರ್‌ 23ರಂದು ಪಸಿಘಾಟ್‌ನಲ್ಲಿ ಎಸ್‌ಎಎವೈಎ ಆಯೋಜಿಸಿದ್ದ ಐಕ್ಯತಾ ನಡಿಗೆ ಮೇಲೆ ಪೊಲೀಸರು ಲಾಠಿ ಬೀಸಿದರು; ಅಶ್ರುವಾಯು ಶೆಲ್‌ ಸಿಡಿಸಿದರು. ಪ್ರತಿಯಾಗಿ ಪ್ರತಿಭಟನಾಕಾರರು ರಾಷ್ಟ್ರೀಯ ಜಲವಿದ್ಯುತ್‌ ನಿಗಮದ ಆವರಣದಲ್ಲಿ ಬೆಂಕಿ ಹೊತ್ತಿಸಿದರು. ಎಬೋ ಮಿಲಿ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಸರ್ಕಾರ ಇನ್ನಷ್ಟು ಕೇಂದ್ರೀಯ ಪಡೆಗಳನ್ನು ನಿಯೋಜಿ ಸಿತು. ಪ್ರತಿಯಾಗಿ ಎಸ್‌ಐಎಫ್‌ಎಫ್‌ ಬಂದ್‌ಗೆ ಕರೆ ನೀಡಿತು. ನವೆಂಬರ್‌ 5ರಂದು ಮುಖ್ಯಮಂತ್ರಿ ಪೇಮಾ ಖಂಡು ಎಸ್‌ಐಎಫ್‌ಎಫ್‌ನ್ನು ಮಾತುಕತೆಗೆ ಆಹ್ವಾನಿಸಿದರು; ʻನಮ್ಮ ಕಡೆಗೆ ಬಂದೂಕು ಗುರಿಯಿಟ್ಟಿರುವಾಗ ಮಾತುಕತೆ ಸಾಧ್ಯವಿಲ್ಲ; ಎಲ್ಲ ಬಂಧಿತರನ್ನು ಬಿಡುಗಡೆ ಮಾಡಬೇಕು ಮತ್ತು ಸೇನೆಯನ್ನು ಹಿಂಪಡೆಯಬೇಕು. ಆನಂತರ ಮುಖ್ಯಮಂತ್ರಿ ಇಲ್ಲಿಗೆ ಬಂದರೆ ಮಾತುಕತೆ ನಡೆಸಬಹುದು. ನಾವು ಇಟಾನಗರಕ್ಕೆ ಬರುವುದಿಲ್ಲʼ ಎಂದು ಎಸ್‌ಐಎಫ್‌ಎಫ್‌ ಪ್ರತಿಕ್ರಿಯಿಸಿ, ಮಾತುಕತೆಯನ್ನು ಬಹಿಷ್ಕರಿಸಿತು. ಪ್ರತಿಭಟನೆ, ಬಂಧನದ ಸರಣಿ ಮುಂದುವರಿಯಲಿದೆ.

ಚೀನಾದ ಅಣೆಕಟ್ಟಿಗೆ ಪ್ರತಿಕ್ರಿಯೆ: ಚೀನಾ ದಕ್ಷಿಣ ಟಿಬೆಟ್‌ ಮತ್ತು ಅರುಣಾಚಲ ಪ್ರದೇಶದ ಗಡಿಭಾಗವಾದ ಮೆಡಾಂಗ್‌ನಲ್ಲಿ ನಿರ್ಮಿಸುತ್ತಿರುವ ಜಗತ್ತಿನ ಅತಿ ದೊಡ್ಡ ಅಣೆಕಟ್ಟಿನಿಂದ ಆಗಬಹುದಾದ ವಿಪರಿಣಾಮಗಳನ್ನು ತಡೆಯಲು ಸಿಯಾಂಗ್‌ ಅಣೆಕಟ್ಟು ಕಟ್ಟಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. 60,000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಹಾಗೂ 5.5 ಶತಕೋಟಿ ಘನ ಮೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಮೆಡಾಂಗ್‌ ಅಣೆಕಟ್ಟಿನ ನಿರ್ಮಾಣ 2025ರಲ್ಲಿ ಆರಂಭವಾಗಿದೆ. ಅಂದಾಜು 15.98 ಲಕ್ಷ ಕೋಟಿ ರೂ. ವೆಚ್ಚದ ಭಾರಿ ಯೋಜನೆ ಇದು. ಮೆಡಾಂಗ್‌ಗೆ ಹೋಲಿಸಿದರೆ, ಸಿಯಾಂಗ್‌ ಯೋಜನೆ ಸಣ್ಣದು. ಸಿಯಾಂಗ್‌ನ ಉಪನದಿಗಳಾದ ಸಿಯೋಮ್‌, ಯಮ್ನೆ, ಸಿಮಾಂಗ್‌ ಮತ್ತು ಯಾರ್ಗ್ಯಾಪ್ ನದಿಗಳಿಗೆ ಅಣೆಕಟ್ಟು ಕಟ್ಟುವ ಮೂಲಕ ದುಪ್ಪಟ್ಟು ವಿದ್ಯುತ್‌ ಉತ್ಪಾದನೆ ಸಾಧ್ಯವಿದೆ. ನಮ್ಮ ಗ್ರಾಮಗಳನ್ನು ಮುಳುಗಿಸುವ ಅಭಿವೃದ್ಧಿ ನಮಗೆ ಬೇಡ. ನಮ್ಮ ಭೂಮಿಗೆ ಹಾನಿಯುಂಟು ಮಾಡದ ಸಣ್ಣ ಅಣೆಕಟ್ಟುಗಳಿಗೆ ನಮ್ಮ ವಿರೋಧವಿಲ್ಲ ಎಂದು ಜನ ಹೇಳುತ್ತಾರೆ.

ಸರ್ಕಾರದ ಅಭಿವೃದ್ಧಿ ಹುಚ್ಚು ಸಿಯಾಂಗ್‌ಗೆ ಸೀಮಿತವಾಗಿಲ್ಲ. 3,097 ಮೆಗಾವ್ಯಾಟ್‌ ಸಾಮರ್ಥ್ಯದ ಎಟಾಲಿನ್‌ ಜಲವಿದ್ಯುತ್ ಯೋಜನೆ, 2,088 ಮೆಗಾವ್ಯಾಟ್‌ ಸಾಮರ್ಥ್ಯದ ದಿಬಾಂಗ್‌ ಬಹು ಉದ್ದೇಶದ ಯೋಜನೆ, 2,000 ಮೆಗಾವ್ಯಾಟ್‌ ಸಾಮರ್ಥ್ಯದ ಕೆಳ ಸುಬನ್‌ಸಿರಿ ಜಲವಿದ್ಯುತ್ ಯೋಜನೆ, 1,000 ಮೆಗಾವ್ಯಾಟ್‌ ಸಾಮರ್ಥ್ಯದ ನಾಯಿಂಗ್‌ ಜಲವಿದ್ಯುತ್ ಯೋಜನೆ ಸೇರಿದಂತೆ 13 ಭಾರಿ ಜಲ ಯೋಜನೆಗಳಿಗೆ ಒಪ್ಪಂದ ಮಾಡಿ ಕೊಳ್ಳಲಾಗಿದೆ. ಮುಂದಿನ 10 ವರ್ಷದಲ್ಲಿ 2 ಲಕ್ಷ ಕೋಟಿ ರೂ. ಹೂಡಿಕೆ ಆಗಲಿದ್ದು, ವಿದ್ಯುತ್‌ ಮಾರಾಟದಿಂದ ವಾರ್ಷಿಕ 3,500 ಕೋಟಿ ರೂ. ಆದಾಯ ಬರಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಇಷ್ಟು ಯೋಜನೆಗಳ ಭಾರವನ್ನು ರಾಜ್ಯ ತಡೆಯಬಲ್ಲದೇ?

ರಾಜ್ಯ ಭಾರಿ ಯೋಜನೆಗಳ ಜಾಲಕ್ಕೆ ಸಿಲುಕಲು ಬೇರೆಯದೇ ಕಾರಣ ಇದೆ ಎಂದು ಕಾರ್ಯಕರ್ತರು ದೂರುತ್ತಾರೆ. ಪೇಮಾ ಖಂಡು ಅವರ ತಂದೆ ದೋರ್ಜಿ ಖಂಡು ಮುಖ್ಯಮಂತ್ರಿ ಆಗಿದ್ದಾಗ 2007ರಲ್ಲಿ ಅಪೆಕ್ಸ್‌ ಬ್ಯಾಂಕ್‌ ಪುನಶ್ಚೇತನಕ್ಕೆ ಸರ್ಕಾರವು ರಾಷ್ಟ್ರೀಯ ಜಲ ವಿದ್ಯುತ್‌ ನಿಗಮ(ಎನ್‌ಎಚ್‌ಪಿಸಿ)ದಿಂದ ಸಾಲ ತೆಗೆದುಕೊಂಡಿದೆ. ದೋರ್ಜಿ ಖಂಡು ಸರ್ಕಾರ ರಾಜ್ಯದ ಜಲ ಸಂಪನ್ಮೂಲವನ್ನು ಜಲವಿದ್ಯುತ್‌ ಯೋಜನೆಗಳಾಗಿ ಪರಿವರ್ತಿಸಲು 143 ಒಪ್ಪಂದಗಳಿಗೆ ಸಹಿ ಹಾಕಿದೆ. ಇದರಲ್ಲಿ ಹೆಚ್ಚಿನವು ಕಾಗದದಲ್ಲಿ ಉಳಿದುಕೊಂಡಿವೆ. ಈ ಸಾಲ ತೀರಿಸಲು ಅಣೆಕಟ್ಟು ಯೋಜನೆಗಳನ್ನು ಎನ್‌ಎಚ್‌ಪಿಸಿಗೆ ಬಳುವಳಿಯಾಗಿ ನೀಡುತ್ತಿದೆ ಎಂದು ದೂರಲಾಗಿದೆ. ನಾಗಾ ಲ್ಯಾಂಡ್‌ಗೆ ಸಂವಿಧಾನದ ವಿಧಿ 371(ಎ) ಹಾಗೂ ಮಿಜೋರಾಂಗೆ 371(ಜಿ) ವಿಶೇಷಾಧಿಕಾರ ನೀಡಿದೆ. ಆದರೆ, ವಿಧಿ 371(ಎಚ್) ಅರುಣಾಚಲ ಪ್ರದೇಶದ ನಾಗರಿಕರ ಭೂಮಿ/ಸ್ವಾಭಾವಿಕ ಸಂಪನ್ಮೂಲದ ರಕ್ಷಣೆಗೆ ಸಾಂವಿ ಧಾನಿಕ ಹಕ್ಕುಗಳನ್ನು ಇಲ್ಲವೇ ಆದಿವಾಸಿ ಸಮುದಾಯಗಳ ಸಾಂಪ್ರದಾಯಿಕ ಕಾನೂನುಗಳಿಗೆ ವಿಶೇಷಾಧಿಕಾರ ನೀಡುವುದಿಲ್ಲ. ರಾಜ್ಯವನ್ನು 6ನೇ ಪರಿಶಿಷ್ಟಕ್ಕೆ ಸೇರಿಸಬೇಕೆಂಬ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ. ಈ ಲೋಪವನ್ನು ಬಳಸಿಕೊಂಡು ರಾಜ್ಯದ ಜಲ ಮತ್ತಿತರ ಸಂಪನ್ಮೂಲಗಳನ್ನು ದೋಚಲಾಗುತ್ತಿದೆ. ಚೀನಾದ ಭಾರಿ ಅಣೆಕಟ್ಟಿಗೆ ಅಂಥದ್ದೇ ಇನ್ನೊಂದು ಅಣೆಕಟ್ಟಿನಿಂದ ಪ್ರತಿಕ್ರಿಯಿಸುವುದು ಅತಾರ್ಕಿಕ. ಒಂದು ವೇಳೆ ಮೆಡಾಂಗ್‌ನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟರೆ, ಸಿಯಾಂಗ್‌ ಅದನ್ನು ತಡೆಯಲು ಸಾಧ್ಯವೇ ಇಲ್ಲ. ಮೆಡಾಂಗ್‌ ಅಣೆಕಟ್ಟಿನಿಂದ ಬ್ರಹ್ಮಪುತ್ರ ನದಿಯ ನೀರಿನ ಹರಿವು ತಡೆಯಲಾಗುತ್ತದೆ ಎನ್ನುವುದು ಭಾರತದ ಆತಂಕ. ಅದು ನಿಜ ಕೂಡ.

ಚೀನಾ-ಭಾರತ ನಡುವಿನ ನೀರಿನ ಹಂಚಿಕೆ ಬಹಳ ಕ್ಲಿಷ್ಟ ವಿವಾದ. ಚೀನಾ, ಭಾರತ, ಭೂತಾನ್‌ ಮತ್ತು ಬಾಂಗ್ಲಾದೇಶಗಳು ವಿಶ್ವ ಸಂಸ್ಥೆಯ ನೀರು ಹರಿಯುವಿಕೆಯ ಜನಸಂಚಾರರಹಿತ ಬಳಕೆ ಒಪ್ಪಂದಕ್ಕೆ ಸಹಿ ಹಾಕಿಲ್ಲ ಇಲ್ಲವೇ ಜಲಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದ ಮಾಡಿಕೊಂಡಿಲ್ಲ. ಭಾರತ ಮತ್ತು ಚೀನಾ ಲಡಾಖಿನಲ್ಲಿ ಸೇನೆಗಳು ಮುಖಾಮುಖಿ ಆಗದಂತೆ ಒಪ್ಪಂದ ಮಾಡಿ ಕೊಂಡಿದ್ದು, ನೀರು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವುದು ಸಾಧ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾದ ಪಾರಮ್ಯ ತಡೆಯಲು ಸಾಧ್ಯವಿಲ್ಲ.

ಈಶಾನ್ಯ ಭಾರತ ಪರಿಸರ ಸೂಕ್ಷ್ಮ ಪ್ರದೇಶ. ಸಿಯಾಂಗ್‌ ಅಣೆಕಟ್ಟಿಗೆ ಗುರುತಿಸಿದ ಪ್ರದೇಶ ಹಿಮಾಲಯದ ಸಂಭವನೀಯ ಭೂಕಂಪ ಪ್ರದೇಶದಲ್ಲಿದೆ. ಇಲ್ಲಿ ಭೂಮಿಯೊಳಗೆ ಆಗಾಗ ಭೂಕಂಪಗಳು ಸಂಭವಿಸುತ್ತಿರುತ್ತವೆ. ಹೀಗಾಗಿ ಈ ಅಣೆಕಟ್ಟು ಪರಿಸರ ಮತ್ತು ಜನರ ಉಳಿವಿಗೆ ಮಾರಕ. ಮೇಲಣ ಸಿಯಾಂಗ್‌ ಜಿಲ್ಲೆಯ ಗೆಕೋ ಗ್ರಾಮದಲ್ಲಿ ಅಣೆಕಟ್ಟು ನಿರ್ಮಾಣ ಬಹುತೇಕ ಖಾತ್ರಿಯಾಗಿದೆ. ಇದಕ್ಕಾಗಿ ಪ್ರಾಥಮಿಕ ಕಾರ್ಯಸಾಧ್ಯತೆ ವರದಿ (ಪಿಎಫ್‌ಆರ್)‌ ಸಿದ್ಧವಾಗು ತ್ತಿದೆ. ಸರ್ಕಾರಗಳು ಸಾಮ, ದಾನ, ದಂಡ, ಭೇದ ನೀತಿಯನ್ನು ನಿಷ್ಕರುಣೆಯಿಂದ ಬಳಸುತ್ತಿದ್ದು, ಕೈಗಾ, ನರ್ಮದಾ ಬಚಾವೋ ಮತ್ತಿತರ ಪರಿಸರ ಚಳವಳಿಗಳು ವಿನಾಶಕರ ಅಭಿವೃದ್ಧಿ ಯೋಜ ನೆಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿವೆ. ಇದು ಪರಿಸರ ದುರಂತಕ್ಕೆ ಕಾರಣವಾಗಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top